ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋಶುವ ಪುಸ್ತಕದ ಮುಖ್ಯಾಂಶಗಳು

ಯೆಹೋಶುವ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಯೆಹೋಶುವ ಪುಸ್ತಕದ ಮುಖ್ಯಾಂಶಗಳು

ಇಸ್ರಾಯೇಲ್ಯರು ಸಾ.ಶ.ಪೂ. 1473ರ ಸುಮಾರಿಗೆ ಮೋವಾಬ್ಯರ ಬೈಲಿನಲ್ಲಿ ಪಾಳೆಯಹೂಡಿದ್ದಾಗ, “ನೀವು ಇನ್ನು ಮೂರು ದಿವಸಗಳಲ್ಲಿ ಈ ಯೊರ್ದನ್‌ ಹೊಳೆಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶವನ್ನು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗಬೇಕು. ಆದದರಿಂದ ನಿಮಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ” ಎಂಬ ಮಾತುಗಳನ್ನು ಕೇಳಿಸಿಕೊಳ್ಳುವುದು ಅವರನ್ನು ನಿಜವಾಗಿಯೂ ಪುಳಕಿತಗೊಳಿಸಿದ್ದಿರಬೇಕು. (ಯೆಹೋಶುವ 1:11) ಅವರ 40 ವರ್ಷಗಳ ಅರಣ್ಯವಾಸವು ಇನ್ನೇನು ಕೊನೆಗೊಳ್ಳಲಿಕ್ಕಿತ್ತು.

ಎರಡು ದಶಕಗಳಿಗಿಂತಲೂ ಹೆಚ್ಚು ಕಾಲಾವಧಿಯ ಬಳಿಕ, ನಾಯಕನಾದ ಯೆಹೋಶುವನು ಕಾನಾನ್‌ ದೇಶದ ಮಧ್ಯಭಾಗದಲ್ಲಿ ನಿಂತುಕೊಂಡು, ಇಸ್ರಾಯೇಲಿನ ಹಿರಿಯರ ಮುಂದೆ ಹೀಗೆ ಪ್ರಕಟಿಸಿದನು: “ನಾನು ಯೊರ್ದನಿನಿಂದ ಪಶ್ಚಿಮ ಮಹಾಸಾಗರದ ವರೆಗೂ ಇರುವ ಜನಾಂಗಗಳಲ್ಲಿ ಸಂಹೃತರಾದವರ ಮತ್ತು ಉಳಿದಿರುವವರ ದೇಶವನ್ನು ನಿಮಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ. ನಿಮ್ಮ ದೇವರಾದ ಯೆಹೋವನು ತಾನೇ ಅವರನ್ನು ನಿಮ್ಮ ಕಣ್ಣುಮುಂದೆ ಹೊರಡಿಸಿಬಿಡುವನು [“ಹೊರಡಿಸಿಬಿಟ್ಟನು,” NW]. ಆತನ ವಾಗ್ದಾನದಂತೆ ಅವರ ದೇಶವನ್ನು ನೀವು ಸ್ವತಂತ್ರಿಸಿಕೊಳ್ಳುವಿರಿ [“ಸ್ವತಂತ್ರಿಸಿಕೊಂಡಿರಿ,” NW].”​—⁠ಯೆಹೋಶುವ 23:4, 5.

ಸಾ.ಶ.ಪೂ. 1450ರಲ್ಲಿ ಯೆಹೋಶುವನಿಂದ ಬರೆಯಲ್ಪಟ್ಟ ಯೆಹೋಶುವ ಪುಸ್ತಕವು, ಆ 22 ವರ್ಷಗಳಲ್ಲಿ ಏನು ಸಂಭವಿಸಿತೋ ಅದರ ರೋಮಾಂಚಕವಾದ ಐತಿಹಾಸಿಕ ವೃತ್ತಾಂತವಾಗಿದೆ. ನಾವು ವಾಗ್ದತ್ತ ನೂತನ ಲೋಕದ ಹೊಸ್ತಿಲಿನಲ್ಲಿ ನಿಂತಿರುವುದರಿಂದ, ನಮ್ಮ ಸನ್ನಿವೇಶವು ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧರಾಗಿದ್ದ ಇಸ್ರಾಯೇಲ್ಯರ ಸನ್ನಿವೇಶಕ್ಕೆ ತುಲನಾತ್ಮಕವಾಗಿದೆ. ಆದುದರಿಂದ, ನಾವು ತೀವ್ರಾಸಕ್ತಿಯಿಂದ ಯೆಹೋಶುವ ಪುಸ್ತಕವನ್ನು ಪರಿಗಣಿಸೋಣ.​—⁠ಇಬ್ರಿಯ 4:12.

“ಯೆರಿಕೋವಿನ ಬೈಲಿ”ಗೆ

(ಯೆಹೋಶುವ 1:​1–5:15)

“ನನ್ನ ಸೇವಕನಾದ ಮೋಶೆ ಸತ್ತನು; ನೀನು ಈಗ ಎದ್ದು ಸಮಸ್ತ ಪ್ರಜಾಸಹಿತವಾಗಿ ಈ ಯೊರ್ದನ್‌ ಹೊಳೆಯನ್ನು ದಾಟಿ ನಾನು ಇಸ್ರಾಯೇಲ್ಯರಿಗೆ ಕೊಡುವ ದೇಶಕ್ಕೆ ಹೋಗು” ಎಂದು ಯೆಹೋವನು ಯೆಹೋಶುವನಿಗೆ ಹೇಳಿದಾಗ, ಒಂದು ಜವಾಬ್ದಾರಿಯುತ ನೇಮಕವು ಅವನಿಗೆ ಕೊಡಲ್ಪಟ್ಟಿತು. (ಯೆಹೋಶುವ 1:⁠2) ಕೆಲವಾರು ಲಕ್ಷ ಸಂಖ್ಯೆಯಲ್ಲಿದ್ದ ಒಂದು ಜನಾಂಗವನ್ನು ವಾಗ್ದತ್ತ ದೇಶಕ್ಕೆ ನಡಿಸುವುದು ಯೆಹೋಶುವನ ನೇಮಕವಾಗಿತ್ತು. ಇದಕ್ಕೆ ಸಿದ್ಧತೆಯಲ್ಲಿ, ಪ್ರಥಮವಾಗಿ ಯೆರಿಕೋ ಪಟ್ಟಣವನ್ನು ವಶಪಡಿಸಿಕೊಳ್ಳಬೇಕಾಗಿತ್ತು. ಆದುದರಿಂದ ಅವನು ಇಬ್ಬರು ಗೂಢಚಾರರನ್ನು ಆ ಪಟ್ಟಣಕ್ಕೆ ಕಳುಹಿಸಿದನು. ಆ ಪಟ್ಟಣದಲ್ಲಿ ರಾಹಾಬಳೆಂಬ ಸೂಳೆಯು ವಾಸಿಸುತ್ತಿದ್ದಳು ಮತ್ತು ಯೆಹೋವನು ತನ್ನ ಜನರ ಪರವಾಗಿ ನಡಿಸಿದ್ದ ಮಹತ್ಕಾರ್ಯಗಳ ಕುರಿತು ಅವಳು ಕೇಳಿಸಿಕೊಂಡಿದ್ದಳು. ಅವಳು ಗೂಢಚಾರರನ್ನು ಕಾಪಾಡಿದಳು ಮತ್ತು ಇದಕ್ಕೆ ಪ್ರತಿಯಾಗಿ ತನ್ನನ್ನು ರಕ್ಷಿಸುವಂತೆ ಅವರಿಂದ ಪ್ರಮಾಣಮಾಡಿಸಿಕೊಂಡಳು.

ಗೂಢಚಾರರು ಹಿಂದಿರುಗಿದ ಬಳಿಕ, ಯೆಹೋಶುವನೂ ಇಸ್ರಾಯೇಲ್ಯರೂ ತಮ್ಮ ಪ್ರಯಾಣವನ್ನು ಮುಂದುವರಿಸಿ ಯೊರ್ದನ್‌ ಹೊಳೆಯನ್ನು ದಾಟಲು ಸಿದ್ಧರಾಗಿದ್ದಾರೆ. ಆ ಹೊಳೆಯು ದಡಮೀರಿ ಹರಿಯುತ್ತಿತ್ತಾದರೂ ಇದು ಅವರಿಗೆ ಒಂದು ಅಡಚಣೆಯಾಗಿರಲಿಲ್ಲ. ಏಕೆಂದರೆ, ಮೇಲಣಿಂದ ಬರುವ ನೀರು ಬಹುದೂರದಲ್ಲಿ ಒಂದು ಅಣೆಕಟ್ಟಿನ ಹಾಗೆ ನಿಲ್ಲುವಂತೆಯೂ ಕೆಳಗಣ ನೀರು ಲವಣ ಸಮುದ್ರಕ್ಕೆ ಹರಿದುಹೋಗುವಂತೆಯೂ ಯೆಹೋವನು ಮಾಡುತ್ತಾನೆ. ಯೊರ್ದನ್‌ ಹೊಳೆಯನ್ನು ದಾಟಿದ ಬಳಿಕ ಇಸ್ರಾಯೇಲ್ಯರು ಯೆರಿಕೋವಿನ ಬಳಿ ಗಿಲ್ಗಾಲಿನಲ್ಲಿ ಇಳುಕೊಳ್ಳುತ್ತಾರೆ. ನಾಲ್ಕು ದಿನಗಳ ಬಳಿಕ ಅಂದರೆ ಮೊದಲನೆಯ ತಿಂಗಳಿನ 14ನೆಯ ದಿನ ಸಾಯಂಕಾಲ ಅವರು ಯೆರಿಕೋವಿನ ಬೈಲಿನಲ್ಲಿ ಪಸ್ಕಹಬ್ಬವನ್ನು ಆಚರಿಸುತ್ತಾರೆ. (ಯೆಹೋಶುವ 5:10) ಮರುದಿನ ಅವರು ಆ ದೇಶದ ಹುಟ್ಟುವಳಿಯನ್ನು ಊಟಮಾಡಲು ಆರಂಭಿಸುತ್ತಾರೆ ಮತ್ತು ಆಗ ಮನ್ನದ ಒದಗಿಸುವಿಕೆಯು ನಿಂತುಹೋಗುತ್ತದೆ. ಈ ಸಮಯದಲ್ಲಿ ಯೆಹೋಶುವನು ಅರಣ್ಯದಲ್ಲಿ ಹುಟ್ಟಿದ್ದ ಎಲ್ಲಾ ಗಂಡುಮಕ್ಕಳಿಗೆ ಸುನ್ನತಿಮಾಡಿಸುತ್ತಾನೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

2:​4, 5​—⁠ಗೂಢಚಾರರನ್ನು ಹುಡುಕಿಕೊಂಡು ಬಂದ ಅರಸನ ಆಳುಗಳಿಗೆ ರಾಹಾಬಳು ತಪ್ಪು ಮಾಹಿತಿಯನ್ನು ಕೊಟ್ಟದ್ದೇಕೆ? ರಾಹಾಬಳು ತನ್ನ ಜೀವವನ್ನು ಅಪಾಯಕ್ಕೊಡ್ಡಿ ಆ ಗೂಢಚಾರರನ್ನು ಕಾಪಾಡಿದಳು, ಏಕೆಂದರೆ ಅವಳು ಯೆಹೋವನಲ್ಲಿ ನಂಬಿಕೆಯನ್ನು ಬೆಳೆಸಿಕೊಂಡಿದ್ದಳು. ಆದುದರಿಂದ, ದೇವಜನರಿಗೆ ತೊಂದರೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದ ಪುರುಷರಿಗೆ ಗೂಢಚಾರರ ಆಗುಹೋಗುಗಳ ಕುರಿತಾದ ಮಾಹಿತಿಯನ್ನು ತಿಳಿಯಪಡಿಸುವ ಹಂಗಿಗೆ ಅವಳು ಒಳಗಾಗಿಲ್ಲ. (ಮತ್ತಾಯ 7:6; 21:23-27; ಯೋಹಾನ 7:3-10) ವಾಸ್ತವದಲ್ಲಿ, ರಾಹಾಬಳು ಅರಸನ ಗುಪ್ತದೂತರನ್ನು ತಪ್ಪಾಗಿ ಮಾರ್ಗದರ್ಶಿಸುವ ಕೃತ್ಯವನ್ನೂ ಒಳಗೊಂಡು ಇನ್ನಿತರ ‘ಕ್ರಿಯೆಗಳಿಂದ ನೀತಿವಂತಳೆಂದು ನಿರ್ಣಯಿಸಲ್ಪಟ್ಟಳು.’​—⁠ಯಾಕೋಬ 2:​24-26.

5:​14, 15​—⁠“ಯೆಹೋವನ ಸೇನಾಪತಿಯು” ಯಾರು? ವಾಗ್ದತ್ತ ದೇಶದ ವಶಪಡಿಸಿಕೊಳ್ಳುವಿಕೆಯು ಆರಂಭವಾದಾಗ ಯೆಹೋಶುವನನ್ನು ಬಲಪಡಿಸಲು ಬಂದ ಸೇನಾಪತಿಯು, “ವಾಕ್ಯ” ಅಂದರೆ ತನ್ನ ಮಾನವಪೂರ್ವ ಅಸ್ತಿತ್ವದಲ್ಲಿದ್ದ ಯೇಸು ಕ್ರಿಸ್ತನೇ ಆಗಿದ್ದನೆಂಬುದು ಸಂಭವನೀಯ. (ಯೋಹಾನ 1:1; ದಾನಿಯೇಲ 10:13) ಇಂದು ದೇವಜನರು ಆಧ್ಯಾತ್ಮಿಕ ಯುದ್ಧದಲ್ಲಿ ಭಾಗವಹಿಸುವಾಗ ಮಹಿಮಾಯುತ ಯೇಸು ಕ್ರಿಸ್ತನು ಅವರೊಂದಿಗಿದ್ದಾನೆ ಎಂಬ ಆಶ್ವಾಸನೆಯನ್ನು ನಾವು ಹೊಂದಿರುವುದು ಎಷ್ಟು ಬಲದಾಯಕವಾದದ್ದಾಗಿದೆ!

ನಮಗಾಗಿರುವ ಪಾಠಗಳು:

1:​7-9. ಪ್ರತಿದಿನವೂ ಬೈಬಲನ್ನು ಓದುವುದು, ಅದು ಏನು ಹೇಳುತ್ತದೋ ಅದರ ಕುರಿತು ಕ್ರಮವಾಗಿ ಧ್ಯಾನಿಸುವುದು, ಮತ್ತು ನಾವು ಕಲಿಯುವಂಥ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಆಧ್ಯಾತ್ಮಿಕ ಪ್ರಯತ್ನಗಳಲ್ಲಿ ಸಾಫಲ್ಯವನ್ನು ಪಡೆಯಲು ಅತ್ಯಗತ್ಯವಾಗಿದೆ.

1:11. ಆಹಾರ ಮತ್ತು ಇನ್ನಿತರ ಆವಶ್ಯಕ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳುವಂತೆಯೂ ದೇವರು ಅವುಗಳನ್ನು ಒದಗಿಸುವಂತೆ ಸೋಮಾರಿತನದಿಂದ ಕಾಯುತ್ತಾ ಕುಳಿತುಕೊಳ್ಳದಿರುವಂತೆಯೂ ಯೆಹೋಶುವನು ಜನರಿಗೆ ತಿಳಿಸುತ್ತಾನೆ. ಜೀವನಾವಶ್ಯಕತೆಗಳ ಕುರಿತು ಚಿಂತಿಸುವುದನ್ನು ನಿಲ್ಲಿಸುವಂತೆ ಯೇಸು ಕೊಟ್ಟ ಬುದ್ಧಿವಾದ ಮತ್ತು “ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು” ಎಂದು ಅವನು ಮಾಡಿದ ವಾಗ್ದಾನವು, ನಮ್ಮ ಬೆಂಬಲಕ್ಕಾಗಿ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿಲ್ಲ ಎಂಬುದನ್ನು ಅರ್ಥೈಸುವುದಿಲ್ಲ.​—⁠ಮತ್ತಾಯ 6:​25, 33.

2:​4-13. ಯೆಹೋವನ ಮಹತ್ಕಾರ್ಯಗಳ ಕುರಿತು ಕೇಳಿಸಿಕೊಂಡು, ಅದು ಸಂದಿಗ್ಧಮಯ ಸಮಯವಾಗಿತ್ತು ಎಂಬುದನ್ನು ಮನಗಂಡ ಬಳಿಕ ರಾಹಾಬಳು ಆತನ ಆರಾಧಕರ ಪಕ್ಷವನ್ನು ವಹಿಸುವ ನಿರ್ಧಾರವನ್ನು ಮಾಡಿದಳು. ಒಂದುವೇಳೆ ನೀವು ಸ್ವಲ್ಪ ಕಾಲಾವಧಿಯಿಂದ ಬೈಬಲ್‌ ಅಧ್ಯಯನಮಾಡುತ್ತಿದ್ದು, ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂಬುದನ್ನು ಮನಗಾಣುವಲ್ಲಿ, ನೀವು ಕೂಡ ದೇವರ ಸೇವೆಮಾಡುವ ನಿರ್ಧಾರವನ್ನು ಮಾಡಬಾರದೋ?​—⁠2 ತಿಮೊಥೆಯ 3:⁠1.

3:15. ಯೆರಿಕೋವಿಗೆ ಕಳುಹಿಸಲ್ಪಟ್ಟ ಗೂಢಚಾರರ ವರದಿಯು ಅನುಕೂಲಕರವಾಗಿದ್ದುದರಿಂದ, ಯೊರ್ದನ್‌ ಹೊಳೆಯ ನೀರು ಇಳಿಮುಖವಾಗುವ ತನಕ ಕಾಯುವುದಕ್ಕೆ ಬದಲಾಗಿ ಯೆಹೋಶುವನು ಆ ಕೂಡಲೆ ಕ್ರಿಯೆಗೈದನು. ಸತ್ಯಾರಾಧನೆಯನ್ನು ಒಳಗೂಡಿರುವ ಕೃತ್ಯಗಳ ವಿಷಯದಲ್ಲಿ ನಾವು, ಪರಿಸ್ಥಿತಿಗಳು ಹೆಚ್ಚು ಸೂಕ್ತವಾಗಿ ಕಂಡುಬರುವ ತನಕ ವಿಳಂಬಿಸುವುದಕ್ಕೆ ಬದಲಾಗಿ ಧೈರ್ಯದಿಂದ ಕ್ರಿಯೆಗೈಯಬೇಕು.

4:​4-8, 20-24. ಯೊರ್ದನ್‌ ಹೊಳೆಯ ಮಧ್ಯಭಾಗದಿಂದ ತರಲ್ಪಟ್ಟಿದ್ದ 12 ಕಲ್ಲುಗಳು ಇಸ್ರಾಯೇಲ್ಯರಿಗೆ ಜ್ಞಾಪಕಾರ್ಥವಾಗಿ ಕಾರ್ಯನಡಿಸಲಿದ್ದವು. ತನ್ನ ಶತ್ರುಗಳ ಕೈಯಿಂದ ತನ್ನ ಆಧುನಿಕ ದಿನದ ಜನರನ್ನು ವಿಮೋಚಿಸಲಿಕ್ಕಾಗಿ ಯೆಹೋವನ ಮಾಡುವ ಕೃತ್ಯಗಳು ಸಹ, ಆತನು ಅವರೊಂದಿಗಿದ್ದಾನೆ ಎಂಬುದಕ್ಕೆ ಜ್ಞಾಪಕಾರ್ಥವಾಗಿರುವವು.

ಸ್ವಾಧೀನಪಡಿಸಿಕೊಳ್ಳುವಿಕೆಯು ಮುಂದುವರಿದದ್ದು (ಯೆಹೋಶುವ 6:​1–12:24)

ಯೆರಿಕೋ ಪಟ್ಟಣದ ‘ಬಾಗಲುಗಳು ಭದ್ರವಾಗಿ ಮುಚ್ಚಲ್ಪಟ್ಟಿವೆ. ಯಾರೂ ಒಳಗೆ ಹೋಗುತ್ತಿಲ್ಲ, ಹೊರಗೆ ಬರುತ್ತಿಲ್ಲ.’ (ಯೆಹೋಶುವ 6:⁠1) ಹಾಗಾದರೆ ಈ ಪಟ್ಟಣವು ಹೇಗೆ ವಶಪಡಿಸಿಕೊಳ್ಳಲ್ಪಡುತ್ತದೆ? ಯೆಹೋವನು ಯೆಹೋಶುವನಿಗೆ ಹಂಚಿಕೆಯ ವಿವರಗಳನ್ನು ನೀಡಿದನು. ಸ್ವಲ್ಪದರಲ್ಲೇ ಪಟ್ಟಣದ ಗೋಡೆಗಳು ಕುಸಿದುಬಿದ್ದವು ಮತ್ತು ಪಟ್ಟಣವು ವಿನಾಶಗೊಂಡಿತು. ರಾಹಾಬಳು ಮತ್ತು ಅವಳ ಮನೆವಾರ್ತೆಯವರು ಮಾತ್ರ ರಕ್ಷಿಸಲ್ಪಟ್ಟರು.

ತದನಂತರ ಆಯಿ ಎಂಬ ಶ್ರೇಷ್ಠ ಪಟ್ಟಣವನ್ನು ಸ್ವಾಧೀನಪಡಿಸಿಕೊಳ್ಳಲಿಕ್ಕಿತ್ತು. ಆ ಪಟ್ಟಣದಲ್ಲಿ ಕೆಲವೇ ನಿವಾಸಿಗಳಿರುವುದರಿಂದ ಅದನ್ನು ಕೆಡವಲು ಹೆಚ್ಚು ಜನರ ಆವಶ್ಯಕತೆಯಿಲ್ಲ ಎಂದು ಅಲ್ಲಿಗೆ ಕಳುಹಿಸಲ್ಪಟ್ಟಿದ್ದ ಗೂಢಚಾರರು ವರದಿಸಿದರು. ಆ ಬಳಿಕ ಆಯಿ ಪಟ್ಟಣಕ್ಕೆ ಮುತ್ತಿಗೆ ಹಾಕಲಿಕ್ಕಾಗಿ ಸುಮಾರು 3,000 ಸೈನಿಕರು ಕಳುಹಿಸಲ್ಪಟ್ಟರೂ, ಆಯಿ ಪಟ್ಟಣದ ಜನರ ಎದುರಿನಿಂದ ಇವರು ಓಡಿಬರಬೇಕಾಯಿತು. ಕಾರಣವೇನು? ಯೆಹೋವನು ಇಸ್ರಾಯೇಲ್ಯರೊಂದಿಗಿರಲಿಲ್ಲ. ಯೆರಿಕೋವಿನ ಮೇಲೆ ದಾಳಿಮಾಡುತ್ತಿರುವಾಗ ಯೆಹೂದ ಕುಲದವನಾದ ಆಕಾನನು ಪಾಪಭರಿತ ಕೃತ್ಯವನ್ನು ಗೈದನು. ಈ ಸಂಗತಿಯನ್ನು ಸರಿಪಡಿಸಿದ ಬಳಿಕ ಯೆಹೋಶುವನು ಆಯಿಯ ಮೇಲೆ ಆಕ್ರಮಣವೆಸಗಿದನು. ಈ ಮೊದಲು ಇಸ್ರಾಯೇಲ್ಯರನ್ನು ಸೋಲಿಸಿದ ಆಯಿ ಪಟ್ಟಣದ ಅರಸನು ಅವರೊಂದಿಗೆ ಕಾದಾಡಲು ಅತ್ಯಾತುರನಾಗಿದ್ದನು. ಆದರೆ ಯೆಹೋಶುವನು ಒಂದು ತಂತ್ರವನ್ನು ಉಪಯೋಗಿಸಿ, ಆಯಿ ಪಟ್ಟಣದವರ ಅತಿಯಾದ ಆತ್ಮವಿಶ್ವಾಸವನ್ನು ಗೆದ್ದನು ಮತ್ತು ಆ ಪಟ್ಟಣವನ್ನು ವಶಪಡಿಸಿಕೊಂಡನು.

ಗಿಬ್ಯೋನ್‌ ಪಟ್ಟಣವು ‘ಒಂದು ಶ್ರೇಷ್ಠ ಪಟ್ಟಣವಾಗಿದ್ದು, ಅಲ್ಲಿನ ಜನರೆಲ್ಲರೂ ಯುದ್ಧವೀರರಾಗಿದ್ದರು.’ (ಯೆಹೋಶುವ 10:⁠2) ಆದರೂ, ಯೆರಿಕೋ ಮತ್ತು ಆಯಿ ಪಟ್ಟಣಗಳ ವಿರುದ್ಧ ಇಸ್ರಾಯೇಲ್ಯರು ಪಡೆದ ಜಯದ ಕುರಿತು ಗಿಬ್ಯೋನ್ಯರು ಕೇಳಿಸಿಕೊಂಡ ಬಳಿಕ, ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳಲಿಕ್ಕಾಗಿ ಯೆಹೋಶುವನೊಂದಿಗೆ ಯುಕ್ತಿಯಿಂದ ಕ್ರಿಯೆಗೈದರು. ಇದನ್ನು ಅರಿತ ಸುತ್ತಣ ಜನಾಂಗಗಳು ಈ ಪಕ್ಷಾಂತರವನ್ನು ಒಂದು ಬೆದರಿಕೆಯಾಗಿ ಪರಿಗಣಿಸಿದವು. ಆ ಜನಾಂಗಗಳ ಐದು ಮಂದಿ ಅರಸರು ಒಂದು ಮೈತ್ರಿಕೂಟವನ್ನು ರಚಿಸಿ ಗಿಬ್ಯೋನ್ಯರ ಮೇಲೆ ಆಕ್ರಮಣಮಾಡಿದರು. ಆಗ ಇಸ್ರಾಯೇಲ್ಯರು ಗಿಬ್ಯೋನ್ಯರನ್ನು ಕಾಪಾಡಿದರು ಮತ್ತು ಆಕ್ರಮಣಮಾಡಿದ ಜನಾಂಗಗಳನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟರು. ಯೆಹೋಶುವನ ಮುಂದಾಳುತ್ವದ ಕೆಳಗೆ ಇಸ್ರಾಯೇಲ್ಯರು, ದಕ್ಷಿಣ ಹಾಗೂ ಪಶ್ಚಿಮದಲ್ಲಿ ಇನ್ನೂ ಕೆಲವು ಪಟ್ಟಣಗಳನ್ನು ಸ್ವಾಧೀನಪಡಿಸಿಕೊಂಡರು ಮತ್ತು ಉತ್ತರದಲ್ಲಿ ಕೆಲವು ಮಂದಿ ಅರಸರ ಒಕ್ಕೂಟವನ್ನು ಪರಾಜಯಗೊಳಿಸಿದರು. ಯೊರ್ದನ್‌ ಹೊಳೆಯ ಪಶ್ಚಿಮದಲ್ಲಿ ಸೋಲಿಸಲ್ಪಟ್ಟ ಅರಸರ ಒಟ್ಟು ಸಂಖ್ಯೆ 31 ಆಗಿತ್ತು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

10:​13​—⁠ಇಂಥ ಚಮತ್ಕಾರವು ಹೇಗೆ ಸಾಧ್ಯವಾಯಿತು? ಭೂಪರಲೋಕಗಳ ಸೃಷ್ಟಿಕರ್ತನಾಗಿರುವ “ಯೆಹೋವನಿಗೆ ಅಸಾಧ್ಯವಾದದ್ದುಂಟೋ?” (ಆದಿಕಾಂಡ 18:14) ತನಗೆ ಇಷ್ಟಬಂದಲ್ಲಿ, ಭೂಮಿಯಿಂದ ವೀಕ್ಷಿಸುವವರಿಗೆ ಸೂರ್ಯಚಂದ್ರರು ನಿಶ್ಚಲರಾಗಿ ಕಂಡುಬರಸಾಧ್ಯವಾಗುವಂತೆ ಭೂಮಿಯ ಚಲನೆಯನ್ನು ಯೆಹೋವನು ನಿಯಂತ್ರಿಸಬಲ್ಲನು. ಅಥವಾ ಭೂಮಿಯ ಮತ್ತು ಚಂದ್ರನ ಚಲನೆಯು ಎಂದಿನಂತೆ ಮುಂದುವರಿಸುವ ಹಾಗೆ ಅನುಮತಿಸಿ, ಅದೇ ಸಮಯದಲ್ಲಿ ಸೂರ್ಯ ಮತ್ತು ಚಂದ್ರರ ಬೆಳಕು ಪ್ರಕಾಶಿಸುತ್ತಾ ಇರುವಂತೆ ಬೆಳಕಿನ ಮೂಲಗಳ ಕಿರಣಗಳನ್ನು ಆತನು ವಕ್ರೀಕರಿಸಬಲ್ಲನು. ವಿಷಯವು ಏನೇ ಇರಲಿ, ಮಾನವ ಇತಿಹಾಸದಲ್ಲಿ “ಬೇರೆ ಯಾವ ದಿವಸವೂ ಈ ದಿವಸದಷ್ಟು ಮಹತ್ವಭರಿತವಾಗಿ” ಕಂಡುಬಂದಿಲ್ಲ.​—⁠ಯೆಹೋಶುವ 10:​14, NW.

10:​13​—⁠ಯಾಷಾರ್‌ಗ್ರಂಥ ಏನಾಗಿದೆ? ಇಸ್ರಾಯೇಲಿನ ಅರಸನಾದ ಸೌಲ ಮತ್ತು ಅವನ ಮಗನಾದ ಯೋನಾತಾನರ ಕುರಿತಾದ ಶೋಕಗೀತೆಯಾಗಿದ್ದ ‘ಬಿಲ್ಲು’ ಎಂದು ಕರೆಯಲ್ಪಡುವ ಒಂದು ಕವಿತೆಯನ್ನು ಸೂಚಿಸುತ್ತಾ 2 ಸಮುವೇಲ 1:​17, 18ರಲ್ಲಿ ಈ ಗ್ರಂಥದ ಬಗ್ಗೆ ಪುನಃ ಉಲ್ಲೇಖಿಸಲಾಗಿದೆ. ಈ ಗ್ರಂಥವು ಐತಿಹಾಸಿಕ ವಿಷಯಗಳ ಕುರಿತಾದ ಗೀತೆಗಳು ಹಾಗೂ ಕವಿತೆಗಳ ಒಂದು ಸಂಗ್ರಹವಾಗಿದ್ದಿರಬಹುದು ಮತ್ತು ಇಬ್ರಿಯರ ನಡುವೆ ಬಹಳಷ್ಟು ಪ್ರಸಿದ್ಧಿಪಡೆದಿದ್ದಿರಬಹುದು.

ನಮಗಾಗಿರುವ ಪಾಠಗಳು:

6:26; 9:​22, 23. ಯೆರಿಕೋವಿನ ವಿನಾಶದ ಸಮಯದಲ್ಲಿ ಯೆಹೋಶುವನು ನುಡಿದ ಶಾಪದ ಮಾತುಗಳು ಸುಮಾರು 500 ವರ್ಷಗಳ ಬಳಿಕ ನೆರವೇರಿದವು. (1 ಅರಸುಗಳು 16:34) ತನ್ನ ಮೊಮ್ಮಗನಾದ ಕಾನಾನನಿಗೆ ನೋಹನು ನುಡಿದ ಶಾಪದ ಮಾತುಗಳು, ಗಿಬ್ಯೋನ್ಯರು ಕೆಲಸದಾಳುಗಳಾಗಿ ಕಾರ್ಯನಡಿಸಿದಾಗ ನೆರವೇರಿಕೆಯನ್ನು ಪಡೆದವು. (ಆದಿಕಾಂಡ 9:​25, 26) ಯೆಹೋವನ ಮಾತು ಯಾವಾಗಲೂ ಸತ್ಯವಾಗುತ್ತದೆ.

7:​20-25. ಆಕಾನನ ಕಳ್ಳತನವು ಯಾರಿಗೂ ಹಾನಿಯನ್ನು ಉಂಟುಮಾಡಲಿಲ್ಲ ಎಂದು ತರ್ಕಿಸುತ್ತಾ ಕೆಲವರು ಅವನ ತಪ್ಪನ್ನು ತೀರ ಚಿಕ್ಕ ಅಪರಾಧವೆಂದು ಕಡೆಗಣಿಸಿಬಿಡಬಹುದು. ಅಂಥವರು ಬೈಬಲ್‌ ನಿಯಮದ ವಿರುದ್ಧ ಮಾಡಲ್ಪಡುವ ಚಿಕ್ಕಪುಟ್ಟ ಕಳ್ಳತನಗಳನ್ನು ಹಾಗೂ ಸಣ್ಣಪುಟ್ಟ ತಪ್ಪುಗಳನ್ನು ಸಹ ಕ್ಷುಲ್ಲಕವಾಗಿ ಪರಿಗಣಿಸಬಹುದು. ಆದರೆ, ಕಾನೂನುವಿರುದ್ಧವಾದ ಅಥವಾ ಅನೈತಿಕ ಕೃತ್ಯಗಳ ಕಡೆಗಿನ ಒತ್ತಡಗಳನ್ನು ಪ್ರತಿರೋಧಿಸುವ ವಿಷಯದಲ್ಲಿ ನಾವು ಯೆಹೋಶುವನಂತೆ ದೃಢಸಂಕಲ್ಪವುಳ್ಳವರಾಗಿರಬೇಕು.

9:​15, 26, 27. ನಾವು ಮಾಡಿಕೊಳ್ಳುವ ಒಪ್ಪಂದಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಮ್ಮ ಮಾತಿಗನುಸಾರ ನಡೆಯಬೇಕು.

ಯೆಹೋಶುವನು ತನ್ನ ಕೊನೆಯ ಮಹತ್ವಭರಿತ ಕೆಲಸವನ್ನು ನಿರ್ವಹಿಸುತ್ತಾನೆ (ಯೆಹೋಶುವ 13:​1–24:33)

ಆಗ 90 ವರ್ಷದ ದಿನತುಂಬಿದ ಮುದುಕನಾಗಿದ್ದ ಯೆಹೋಶುವನು ಕಾನಾನ್‌ ದೇಶವನ್ನು ಹಂಚಿಕೊಡಲು ಆರಂಭಿಸುತ್ತಾನೆ. ನಿಜವಾಗಿಯೂ ಇದೊಂದು ದೊಡ್ಡ ಕೆಲಸವಾಗಿತ್ತು! ರೂಬೇನ್ಯರೂ ಗಾದ್ಯರೂ ಮತ್ತು ಮನಸ್ಸೆ ಕುಲದ ಅರ್ಧ ಜನರು ಯೊರ್ದನ್‌ನ ಪೂರ್ವಕ್ಕಿರುವ ಸ್ವಾಸ್ತ್ಯವನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಈಗ ಚೀಟುಹಾಕುವ ಮೂಲಕ ಉಳಿದ ಕುಲದವರಿಗೆ ಪಶ್ಚಿಮ ದಿಕ್ಕಿನಲ್ಲಿ ಸ್ವಾಸ್ತ್ಯವು ಹಂಚಿಕೊಡಲ್ಪಡಲಿಕ್ಕಿದೆ.

ಎಫ್ರಾಯೀಮ್ಯರ ಕ್ಷೇತ್ರದಲ್ಲಿರುವ ಶಿಲೋವಿನಲ್ಲಿ ದೇವದರ್ಶನದ ಗುಡಾರವು ಸ್ಥಾಪಿಸಲ್ಪಟ್ಟಿದೆ. ಕಾಲೇಬನಿಗೆ ಹೆಬ್ರೋನ್‌ ಪಟ್ಟಣವೂ ಯೆಹೋಶುವನಿಗೆ ತಿಮ್ನತ್‌ಸೆರಹ ಪಟ್ಟಣವೂ ಸಿಕ್ಕಿದೆ. ಆರು ಆಶ್ರಯನಗರಗಳನ್ನೂ ಸೇರಿಸಿ 48 ಪಟ್ಟಣಗಳು ಲೇವಿಕುಲದವರಿಗೆ ಕೊಡಲ್ಪಟ್ಟಿವೆ. ರೂಬೇನ್ಯರೂ ಗಾದ್ಯರೂ ಮತ್ತು ಮನಸ್ಸೆ ಕುಲದ ಅರ್ಧ ಜನರ ಯುದ್ಧವೀರರು ಯೊರ್ದನ್‌ ಹೊಳೆಯ ಪೂರ್ವದಲ್ಲಿದ್ದ ತಮ್ಮ ಸ್ವಾಸ್ತ್ಯಕ್ಕೆ ಹಿಂದಿರುಗಿದಾಗ, ಅಲ್ಲಿ ಒಂದು “ಮಹಾವೇದಿಯನ್ನು” ಕಟ್ಟುತ್ತಾರೆ. (ಯೆಹೋಶುವ 22:10) ಯೊರ್ದನ್‌ ಹೊಳೆಯ ಪಶ್ಚಿಮದಲ್ಲಿದ್ದ ಕುಲಗಳವರು ಇದನ್ನು ಒಂದು ಧರ್ಮಭ್ರಷ್ಟ ಕೃತ್ಯವಾಗಿ ಪರಿಗಣಿಸುತ್ತಾರೆ, ಮತ್ತು ಕುಲಗಳ ನಡುವಣ ಹೋರಾಟವು ಆರಂಭವಾಗುತ್ತದೋ ಎಂಬಂತೆ ತೋರುತ್ತದೆ, ಆದರೆ ಒಳ್ಳೇ ಮಾತುಸಂಪರ್ಕದ ಮೂಲಕ ರಕ್ತಪಾತವು ತಪ್ಪಿಸಲ್ಪಡುತ್ತದೆ.

ಯೆಹೋಶುವನು ತಿಮ್ನತ್‌ಸೆರಹದಲ್ಲಿ ಸ್ವಲ್ಪಕಾಲ ವಾಸಿಸಿದ ಬಳಿಕ, ಇಸ್ರಾಯೇಲ್ಯರ ಹಿರಿಯರು, ಪ್ರಭುಗಳು, ನ್ಯಾಯಾಧಿಪತಿಗಳು ಮತ್ತು ಅಧಿಕಾರಿಗಳನ್ನು ತನ್ನ ಬಳಿಗೆ ಕರೆಸಿ, ಧೈರ್ಯದಿಂದಿರುವಂತೆ ಹಾಗೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಂತೆ ಅವರನ್ನು ಉತ್ತೇಜಿಸುತ್ತಾನೆ. ತದನಂತರ ಯೆಹೋಶುವನು ಇಸ್ರಾಯೇಲ್ಯರ ಎಲ್ಲಾ ಕುಲದವರನ್ನು ಶೆಕೆಮಿನಲ್ಲಿ ಕೂಟಕ್ಕೆ ಕರೆಸುತ್ತಾನೆ. ಅಲ್ಲಿ ಅವನು ಅಬ್ರಹಾಮನ ಕಾಲದಿಂದಲೂ ಯೆಹೋವನು ಅವರೊಂದಿಗೆ ನಡೆಸಿದ ವ್ಯವಹಾರಗಳನ್ನು ಪುನರ್ವಿಮರ್ಶಿಸುತ್ತಾನೆ, ಮತ್ತು “ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರ್ರಿ; ಆತನನ್ನು ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ಸೇವಿಸಿರಿ” ಎಂದು ಪುನಃ ಅವರಿಗೆ ಬುದ್ಧಿಹೇಳುತ್ತಾನೆ. ಆಗ ಜನರು ಹೀಗೆ ಪ್ರತಿಕ್ರಿಯಿಸುವಂತೆ ಪ್ರಚೋದಿಸಲ್ಪಡುತ್ತಾರೆ: “ನಮ್ಮ ದೇವರಾದ ಯೆಹೋವನನ್ನೇ ಸೇವಿಸುತ್ತಾ ಆತನ ಮಾತನ್ನು ಕೇಳುವೆವು.” (ಯೆಹೋಶುವ 24:14, 15, 24) ಈ ಎಲ್ಲಾ ಘಟನೆಗಳು ನಡೆದ ಬಳಿಕ, 110ರ ಪ್ರಾಯದಲ್ಲಿ ಯೆಹೋಶುವನು ಮರಣಹೊಂದುತ್ತಾನೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

13:1​—⁠ಇದು ಯೆಹೋಶುವ 11:23ರಲ್ಲಿ ಏನು ತಿಳಿಸಲ್ಪಟ್ಟಿದೆಯೋ ಅದಕ್ಕೆ ತದ್ವಿರುದ್ಧವಾಗಿಲ್ಲವೋ? ಇಲ್ಲ. ಏಕೆಂದರೆ ವಾಗ್ದತ್ತ ದೇಶದ ಸ್ವಾಧೀನಪಡಿಸಿಕೊಳ್ಳುವಿಕೆಯು ಎರಡು ಅಂಶಗಳನ್ನು ಒಳಗೂಡಿತ್ತು: ಮೊದಲನೆಯದ್ದು, ಕಾನಾನ್‌ ದೇಶದ 31 ಮಂದಿ ಅರಸರನ್ನು ಸೋಲಿಸಿ, ಕಾನಾನ್ಯರ ಬಲವನ್ನು ಶಿಥಿಲಗೊಳಿಸುವ ಜನಾಂಗೀಯ ಯುದ್ಧವನ್ನು ಒಳಗೂಡಿತ್ತು; ಮತ್ತು ಎರಡನೆಯದ್ದು, ಕುಲಸಂಬಂಧವಾದ ಹಾಗೂ ವ್ಯಕ್ತಿಗತವಾದ ಕೃತ್ಯಗಳ ಮೂಲಕ ಆ ದೇಶವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವುದಾಗಿತ್ತು. (ಯೆಹೋಶುವ 17:14-18; 18:3) ಇಸ್ರಾಯೇಲ್ಯರು ತಮ್ಮ ಮಧ್ಯದಿಂದ ಕಾನಾನ್ಯರನ್ನು ಸಂಪೂರ್ಣವಾಗಿ ಹೊರಡಿಸಲು ಅಸಫಲರಾದರೂ, ಅವರೊಂದಿಗೆ ಉಳಿದ ಕಾನಾನ್ಯರು ಇಸ್ರಾಯೇಲಿನ ಭದ್ರತೆಗೆ ಯಾವುದೇ ರೀತಿಯಲ್ಲಿ ಬೆದರಿಕೆಯನ್ನೊಡ್ಡಲಿಲ್ಲ. (ಯೆಹೋಶುವ 16:10; 17:12) ಯೆಹೋಶುವ 21:44 ಹೇಳುವುದು: “ಯೆಹೋವನು . . . ಅವರಿಗೆ ಎಲ್ಲಾ ಕಡೆಯಲ್ಲಿಯೂ ಸಮಾಧಾನಕೊಟ್ಟನು.”

24:⁠2​—⁠ಅಬ್ರಹಾಮನ ತಂದೆಯಾದ ತೆರಹನು ವಿಗ್ರಹಾರಾಧಕನಾಗಿದ್ದನೊ? ಆರಂಭದಲ್ಲಿ ತೆರಹನು ಯೆಹೋವ ದೇವರ ಆರಾಧಕನಾಗಿರಲಿಲ್ಲ. ಆಗ ಅವನು ಊರ್‌ ಪಟ್ಟಣದಲ್ಲಿ ಜನಪ್ರಿಯತೆಯನ್ನು ಪಡೆದಿದ್ದ ಸಿನ್‌ ಎಂಬ ಚಂದ್ರದೇವನನ್ನು ಆರಾಧಿಸಿದ್ದಿರಬಹುದು. ಯೆಹೂದಿ ಸಂಪ್ರದಾಯಕ್ಕನುಸಾರ, ತೆರಹನು ವಿಗ್ರಹಗಳನ್ನು ಮಾಡುವವನಾಗಿದ್ದಿರಬಹುದು. ಆದರೂ, ದೇವರ ಆಜ್ಞೆಗನುಸಾರ ಅಬ್ರಹಾಮನು ಊರ್‌ ಪಟ್ಟಣವನ್ನು ಬಿಟ್ಟುಹೋದಾಗ, ತೆರಹನು ಸಹ ಅವನೊಂದಿಗೆ ಖಾರಾನ್‌ ಪಟ್ಟಣಕ್ಕೆ ಹೋದನು.​—⁠ಆದಿಕಾಂಡ 11:31.

ನಮಗಾಗಿರುವ ಪಾಠಗಳು:

14:​10-13. ಕಾಲೇಬನು 85 ವರ್ಷದವನಾಗಿದ್ದರೂ, ಹೆಬ್ರೋನ್‌ ಸೀಮೆಯಿಂದ ಜನರನ್ನು ಹೊರಗಟ್ಟುವ ಕಷ್ಟಕರ ನೇಮಕವನ್ನು ಕೇಳಿಕೊಂಡನು. ಆ ಕ್ಷೇತ್ರದಲ್ಲಿ ಅಸಾಮಾನ್ಯ ಗಾತ್ರದ ಉನ್ನತ ಪುರುಷ (ಅನಾಕಿಮ)ರು ವಾಸಿಸುತ್ತಿದ್ದರು. ಯೆಹೋವನ ಸಹಾಯದಿಂದ ಅನುಭವಸ್ಥ ಯುದ್ಧವೀರರು ಈ ಕೆಲಸದಲ್ಲಿ ಸಫಲರಾದರು ಮತ್ತು ಹೆಬ್ರೋನ್‌ ಪಟ್ಟಣವು ಒಂದು ಆಶ್ರಯನಗರವಾಗಿ ಪರಿಣಮಿಸಿತು. (ಯೆಹೋಶುವ 15:13-19; 21:11-13) ಕಷ್ಟಕರವಾದ ದೇವಪ್ರಭುತ್ವಾತ್ಮಕ ನೇಮಕಗಳನ್ನು ಸ್ವೀಕರಿಸಲು ಹಿಂಜರಿಯದಿರುವಂತೆ ಕಾಲೇಬನ ಉದಾಹರಣೆಯು ನಮ್ಮನ್ನು ಉತ್ತೇಜಿಸುತ್ತದೆ.

22:​9-12, 21-33. ಇತರರ ಹೇತುಗಳನ್ನು ತಪ್ಪಾಗಿ ನಿರ್ಧರಿಸುವುದರಿಂದ ದೂರವಿರುವ ವಿಷಯದಲ್ಲಿ ನಾವು ಜಾಗರೂಕರಾಗಿರಬೇಕು.

‘ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಿಲ್ಲ’

ಯೆಹೋಶುವನು ದಿನತುಂಬಿದ ಮುದುಕನಾಗಿದ್ದಾಗ, ಇಸ್ರಾಯೇಲಿನ ಜವಾಬ್ದಾರಿಯುತ ಪುರುಷರಿಗೆ ಹೀಗೆ ಹೇಳಿದನು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವು.” (ಯೆಹೋಶುವ 23:14) ಯೆಹೋಶುವನ ಕುರಿತಾದ ಐತಿಹಾಸಿಕ ವೃತ್ತಾಂತವು ಇದನ್ನು ಎಷ್ಟು ವಿಶದವಾಗಿ ಸ್ಪಷ್ಟಪಡಿಸುತ್ತದೆ!

ಅಪೊಸ್ತಲ ಪೌಲನು ಬರೆದುದು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:⁠4) ದೇವರ ವಾಗ್ದಾನಗಳಲ್ಲಿನ ನಮ್ಮ ನಿರೀಕ್ಷೆಯು ಅಸಮರ್ಪಕವಾದದ್ದೇನಲ್ಲ ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. ಒಂದು ವಾಗ್ದಾನವೂ ವಿಫಲವಾಗುವುದಿಲ್ಲ; ಅವೆಲ್ಲವೂ ತಪ್ಪದೆ ನೆರವೇರುವವು.

[ಪುಟ 10ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಯೆಹೋಶುವನ ನಾಯಕತ್ವದ ಕೆಳಗೆ ಕಾನಾನ್‌ ದೇಶವು ಸ್ವಾಧೀನಪಡಿಸಿಕೊಳ್ಳಲ್ಪಟ್ಟಿತು

ಬಾಷಾನ್‌

ಗಿಲ್ಯಾದ್‌

ಅರಾದ್‌

ದಕ್ಷಿಣಪ್ರಾಂತ

ಯೊರ್ದನ್‌ ಹೊಳೆ

ಲವಣ ಸಮುದ್ರ

ಯಬ್ಬೋಕ್‌ ತೊ.ಕ.

ಆರ್ನೋನ್‌ ತೊ.ಕ.

ಹಾಚೋರ್‌

ಮಾದೋನ್‌

ಲಷ್ಷಾರೋನ್‌

ಶಿಮ್ರೋನ್‌

ಯೊಕ್ನೆಯಾಮ್‌

ದೋರ್‌

ಮೆಗಿದ್ದೋ

ಕೆದೆಷ್‌

ತಾನಾಕ್‌

ಹೇಫೆರ್‌

ತಿರ್ಚ

ಬೇತೇಲ್‌

ಆಯಿ

ಗಿಲ್ಗಾಲ್‌

ಯೆರಿಕೋ

ಗೆಜೆರ್‌

ಯೆರೂಸಲೇಮ್‌

ಮಕ್ಕೇದ

ಯರ್ಮೂತ್‌

ಅದುಲ್ಲಾಮ್‌

ಲಿಬ್ನ

ಲಾಕೀಷ್‌

ಎಗ್ಲೋನ್‌

ಹೆಬ್ರೋನ್‌

ದೆಬೀರ್‌

ತಗ್ಗಾದ ಪ್ರದೇಶ

ಅಫೇಕ್‌

ತಪ್ಪೂಹ

[ಪುಟ 9ರಲ್ಲಿರುವ ಚಿತ್ರ]

ಸೂಳೆಯಾಗಿದ್ದ ರಾಹಾಬಳು ನೀತಿವಂತಳೆಂದು ಪರಿಗಣಿಸಲ್ಪಟ್ಟದ್ದೇಕೆಂದು ನಿಮಗೆ ಗೊತ್ತಿದೆಯೋ?

[ಪುಟ 10ರಲ್ಲಿರುವ ಚಿತ್ರ]

‘ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ ಮತ್ತು ಆತನನ್ನು ಸೇವಿಸುವಂತೆ’ ಯೆಹೋಶುವನು ಇಸ್ರಾಯೇಲ್ಯರಿಗೆ ಬುದ್ಧಿಹೇಳಿದನು

[ಪುಟ 12ರಲ್ಲಿರುವ ಚಿತ್ರ]

ಆಕಾನನ ಕಳ್ಳತನವು ಒಂದು ಚಿಕ್ಕ ತಪ್ಪಾಗಿರಲಿಲ್ಲ; ಅದು ಗಂಭೀರವಾದ ಪರಿಣಾಮಗಳಿಗೆ ನಡಿಸಿತು

[ಪುಟ 12ರಲ್ಲಿರುವ ಚಿತ್ರ]

‘ನಂಬಿಕೆಯ ಕಾರಣದಿಂದಲೇ ಯೆರಿಕೋ ಪಟ್ಟಣದ ಗೋಡೆಗಳು ಬಿದ್ದವು.’​—⁠ಇಬ್ರಿಯ 11:30