ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಪುನರುತ್ಥಿತ ಯೇಸುವು ತೋಮನು ತನ್ನನ್ನು ಮುಟ್ಟುವಂತೆ ಕರೆಕೊಟ್ಟನಾದರೂ, ಅದಕ್ಕೆ ಮುಂಚೆ ತನ್ನನ್ನು ಮುಟ್ಟುವುದರಿಂದ ಮಗ್ದಲದ ಮರಿಯಳನ್ನು ಏಕೆ ತಡೆದನು?

ಬೈಬಲಿನ ಕೆಲವು ಹಳೇ ಭಾಷಾಂತರಗಳು, ತನ್ನನ್ನು ಮುಟ್ಟಬೇಡ ಎಂದು ಯೇಸು ಮಗ್ದಲದ ಮರಿಯಳಿಗೆ ಹೇಳಿದನೆಂಬ ಅರ್ಥವನ್ನು ಕೊಡುತ್ತವೆ. ಉದಾಹರಣೆಗೆ, ಕಿಂಗ್‌ ಜೇಮ್ಸ್‌ ವರ್ಷನ್‌ ಯೇಸುವಿನ ಮಾತುಗಳನ್ನು ಹೀಗೆ ತರ್ಜುಮೆಮಾಡಿದೆ: “ನನ್ನನ್ನು ಮುಟ್ಟಬೇಡ; ಏಕೆಂದರೆ ನಾನಿನ್ನೂ ತಂದೆಯ ಬಳಿಗೆ ಏರಿಹೋಗಿಲ್ಲ.” (ಯೋಹಾನ 20:17) ಆದರೆ ಸಾಮಾನ್ಯವಾಗಿ “ಮುಟ್ಟು” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಮೂಲ ಗ್ರೀಕ್‌ ಕ್ರಿಯಾಪದವು, “ಅಂಟಿಕೊಂಡಿರು, ಭದ್ರವಾಗಿ ಹಿಡಿದುಕೊ, ಗಟ್ಟಿಯಾಗಿ ಹಿಡಿ, ಬಿಗಿಯಾಗಿ ಹಿಡಿ” ಎಂಬರ್ಥವನ್ನೂ ಕೊಡುತ್ತದೆ. ತರ್ಕಬದ್ಧವಾಗಿಯೇ, ಮಗ್ದಲದ ಮರಿಯಳು ತನ್ನನ್ನು ಮುಟ್ಟುವುದನ್ನು ಯೇಸು ಆಕ್ಷೇಪಿಸಲಿಲ್ಲ, ಏಕೆಂದರೆ ಅವನು ಸಮಾಧಿಯ ಬಳಿಯಿದ್ದ ಇತರ ಸ್ತ್ರೀಯರು ತನ್ನ ‘ಪಾದಗಳನ್ನು ಹಿಡಿಯುವಂತೆ’ ಬಿಟ್ಟನು.​—⁠ಮತ್ತಾಯ 28:⁠9.

ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ (ಇಂಗ್ಲಿಷ್‌), ದ ನ್ಯೂ ಜೆರೂಸಲೇಮ್‌ ಬೈಬಲ್‌ ಮತ್ತು ದ ನ್ಯೂ ಇಂಗ್ಲಿಷ್‌ ಬೈಬಲ್‌ನಂಥ ಆಧುನಿಕ ಭಾಷೆಯ ಅನೇಕ ಭಾಷಾಂತರಗಳು, ಯೇಸುವಿನ ಮಾತುಗಳನ್ನು “ನನಗೆ ಅಂಟಿಕೊಳ್ಳುವುದನ್ನು ನಿಲ್ಲಿಸು” ಎಂದು ತರ್ಜುಮೆಮಾಡುವ ಮೂಲಕ ಅವುಗಳ ನಿಜಾರ್ಥವನ್ನು ಗ್ರಹಿಸಲು ನಮಗೆ ಸಹಾಯಮಾಡುತ್ತವೆ. ಒಬ್ಬ ನಿಕಟ ಸಹವಾಸಿಯಾಗಿದ್ದ ಮಗ್ದಲದ ಮರಿಯಳಿಗೆ ಯೇಸು ಹೀಗೇಕೆ ಹೇಳಿದನು?​—⁠ಲೂಕ 8:​1-3.

ಯೇಸು ಇನ್ನೇನು ತಮ್ಮನ್ನು ಬಿಟ್ಟುಹೋಗಲಿದ್ದಾನೆ ಮತ್ತು ಸ್ವರ್ಗಾರೋಹಣ ಮಾಡಲಿದ್ದಾನೆ ಎಂದು ಮಗ್ದಲದ ಮರಿಯಳು ಭಯಪಟ್ಟಿರುವುದು ಸಂಭವನೀಯ. ತನ್ನ ಕರ್ತನೊಂದಿಗಿರಬೇಕೆಂಬ ಕಟ್ಟಾಸೆಯಿಂದ ಪ್ರಚೋದಿತಳಾದ ಅವಳು ಯೇಸುವನ್ನು ಹೋಗಲು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಇಷ್ಟು ಬೇಗ ಅವರನ್ನು ಬಿಟ್ಟುಹೋಗುವುದಿಲ್ಲ ಎಂಬ ಆಶ್ವಾಸನೆಯನ್ನು ಮರಿಯಳಿಗೆ ಕೊಡಲಿಕ್ಕಾಗಿ ಯೇಸು, ತನಗೆ ಅಂಟಿಕೊಳ್ಳುವುದಕ್ಕೆ ಬದಲಾಗಿ ಶಿಷ್ಯರ ಬಳಿಗೆ ಹೋಗಿ ತನ್ನ ಪುನರುತ್ಥಾನದ ಸುದ್ದಿಯನ್ನು ತಿಳಿಸುವಂತೆ ಅವಳಿಗೆ ಉಪದೇಶಿಸಿದನು.​—⁠ಯೋಹಾನ 20:17.

ಯೇಸು ಮತ್ತು ತೋಮನ ಸಂಭಾಷಣೆಯಾದರೋ ಭಿನ್ನ ರೀತಿಯದ್ದಾಗಿತ್ತು. ಯೇಸು ಕೆಲವು ಶಿಷ್ಯರಿಗೆ ಕಾಣಿಸಿಕೊಂಡಾಗ, ತೋಮನು ಅವರ ಸಂಗಡ ಇರಲಿಲ್ಲ. ಅನಂತರ, ಯೇಸುವಿನ ಪುನರುತ್ಥಾನದ ವಿಷಯದಲ್ಲಿ ತೋಮನು ತನ್ನ ಸಂಶಯಗಳನ್ನು ವ್ಯಕ್ತಪಡಿಸಿದನು ಮತ್ತು ಯೇಸುವಿನ ಮೊಳೆಯ ಘಾಯಗಳನ್ನು ನೋಡಿ, ಅವನ ಪಕ್ಕೆಯಲ್ಲಿ ತನ್ನ ಕೈಯನ್ನು ಹಾಕಿದ ಹೊರತು ತಾನಿದನ್ನು ನಂಬುವುದಿಲ್ಲ ಎಂದು ಹೇಳಿದನು. ಎಂಟು ದಿನಗಳ ತರುವಾಯ ಯೇಸು ಪುನಃ ತನ್ನ ಶಿಷ್ಯರಿಗೆ ಕಾಣಿಸಿಕೊಂಡನು. ಈ ಸಲ ತೋಮನು ಅಲ್ಲಿ ಹಾಜರಿದ್ದನು, ಮತ್ತು ತನ್ನ ಘಾಯಗಳನ್ನು ಮುಟ್ಟಿನೋಡುವಂತೆ ಯೇಸು ಅವನಿಗೆ ಹೇಳಿದನು.​—⁠ಯೋಹಾನ 20:​24-27.

ಹೀಗೆ, ಮಗ್ದಲದ ಮರಿಯಳ ವಿಷಯದಲ್ಲಾದರೋ, ಹೋಗುವುದರಿಂದ ತನ್ನನ್ನು ತಡೆಯುತ್ತಿದ್ದ ತಪ್ಪಾದ ಬಯಕೆಯೊಂದಿಗೆ ಯೇಸು ವ್ಯವಹರಿಸುತ್ತಿದ್ದನು; ತೋಮನ ವಿಷಯದಲ್ಲಾದರೋ, ಸಂಶಯಗಳಿದ್ದ ಒಬ್ಬ ವ್ಯಕ್ತಿಗೆ ಯೇಸು ಸಹಾಯಮಾಡುತ್ತಿದ್ದನು. ಎರಡೂ ಘಟನೆಗಳಲ್ಲಿ ಯೇಸು ತೋರಿಸಿದ ವರ್ತನೆಗಳಿಗೆ ಅವನಲ್ಲಿ ಸಕಾರಣಗಳಿದ್ದವು.