ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರಿ ಮತ್ತು ತಪ್ಪು ನೀವು ಹೇಗೆ ನಿರ್ಧರಿಸಬೇಕು?

ಸರಿ ಮತ್ತು ತಪ್ಪು ನೀವು ಹೇಗೆ ನಿರ್ಧರಿಸಬೇಕು?

ಸರಿ ಮತ್ತು ತಪ್ಪು ನೀವು ಹೇಗೆ ನಿರ್ಧರಿಸಬೇಕು?

ಸರಿ ಮತ್ತು ತಪ್ಪಿನ ಮಟ್ಟಗಳನ್ನು ನಿರ್ಧರಿಸುವ ಅಧಿಕಾರ ಯಾರಿಗಿದೆ? ಆ ಪ್ರಶ್ನೆಯು ಮಾನವನ ಇತಿಹಾಸದ ಆರಂಭದಲ್ಲೇ ಎಬ್ಬಿಸಲ್ಪಟ್ಟಿತು. ಬೈಬಲಿನ ಆದಿಕಾಂಡ ಪುಸ್ತಕಕ್ಕನುಸಾರ, ಏದೆನ್‌ ತೋಟದಲ್ಲಿ ಬೆಳೆಯುತ್ತಿದ್ದ ಒಂದು ಮರವನ್ನು ದೇವರು, “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ವೃಕ್ಷ” ಎಂದು ಹೆಸರಿಸಿದನು. (ಆದಿಕಾಂಡ 2:9) ಈ ಮರದ ಹಣ್ಣನ್ನು ತಿನ್ನಬಾರದೆಂದು ದೇವರು ಮೊದಲ ಮಾನವ ದಂಪತಿಗೆ ಹೇಳಿದನು. ಆದರೂ, ದೇವರ ವೈರಿಯಾದ ಪಿಶಾಚನಾದ ಸೈತಾನನು, ಈ ಮರದ ಹಣ್ಣನ್ನು ತಿನ್ನುವುದಾದರೆ ಅವರ ಕಣ್ಣುಗಳು “ತೆರೆಯುವವು” ಮತ್ತು ಅವರು ‘ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವರು’ ಎಂದು ಸೂಚಿಸಿದನು.​—⁠ಆದಿಕಾಂಡ 2:16, 17; 3:1, 5; ಪ್ರಕಟನೆ 12:⁠9.

ಆದಾಮಹವ್ವರು ಈಗ ಒಂದು ನಿರ್ಧಾರವನ್ನು ಮಾಡಲಿಕ್ಕಿತ್ತು​—⁠ಒಳ್ಳೇದು ಮತ್ತು ಕೆಟ್ಟದ್ದರ ವಿಷಯದಲ್ಲಿ ತಾವು ದೇವರ ಮಟ್ಟಗಳನ್ನು ಸ್ವೀಕರಿಸಬೇಕೋ ಅಥವಾ ತಮ್ಮ ಸ್ವಂತ ಮಟ್ಟಗಳನ್ನು ಅನುಸರಿಸಬೇಕೋ? (ಆದಿಕಾಂಡ 3:6) ಅವರು ದೇವರಿಗೆ ಅವಿಧೇಯರಾಗಿ ಆ ಮರದ ಹಣ್ಣನ್ನು ತಿನ್ನುವ ಆಯ್ಕೆಯನ್ನು ಮಾಡಿದರು. ಈ ಸರಳ ಕೃತ್ಯ ಏನನ್ನು ಅರ್ಥೈಸಿತು? ದೇವರು ತಮಗೆ ಇಟ್ಟಿದ್ದ ಎಲ್ಲೆಗಳನ್ನು ಗೌರವಿಸಲು ನಿರಾಕರಿಸುವ ಮೂಲಕ, ಅವರೂ ಅವರ ಸಂತತಿಯೂ ಸರಿ ಮತ್ತು ತಪ್ಪಿನ ವಿಷಯದಲ್ಲಿ ತಮ್ಮ ಸ್ವಂತ ಮಟ್ಟಗಳನ್ನು ಇಡುವ ಮೂಲಕ ತಮ್ಮನ್ನೇ ಹೆಚ್ಚು ಉತ್ತಮವಾಗಿ ನಡೆಸಿಕೊಳ್ಳಬಲ್ಲರು ಎಂದು ಅವರು ಪ್ರತಿಪಾದಿಸಿದರು. ಈ ರೀತಿ ತಮ್ಮ ಸ್ವಂತ ಮಟ್ಟಗಳನ್ನಿಡುವ ಮೂಲಕ ದೇವರಂತೆ ವರ್ತಿಸಲು ಪ್ರಯತ್ನಿಸುವುದರಲ್ಲಿ ಮಾನವಕುಲವು ಎಷ್ಟು ಯಶಸ್ವಿಯನ್ನು ಕಂಡಿದೆ?

ಭಿನ್ನಭಿನ್ನವಾದ ಅಭಿಪ್ರಾಯಗಳು

ಶತಮಾನಗಳಾದ್ಯಂತ ಪ್ರಸಿದ್ಧ ಚಿಂತಕರ ಬೋಧನೆಗಳನ್ನು ಪುನರ್ವಿಮರ್ಶಿಸಿದ ಬಳಿಕ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ಈ ಹೇಳಿಕೆಯನ್ನು ಮಾಡಿತು: ಗ್ರೀಕ್‌ ತತ್ತ್ವಜ್ಞಾನಿ ಸಾಕ್ರಟೀಸ್‌ನ ಸಮಯದಿಂದ 20ನೇ ಶತಮಾನದ ವರೆಗೆ, “ಒಳ್ಳೇತನ ಮತ್ತು ಸರಿತಪ್ಪಿನ ಅರ್ಥವಿವರಣೆ ಏನಾಗಿರಬಹುದು ಎಂಬುದರ ಕುರಿತೇ ಪುನರಾವರ್ತಿತ ವಾದವಿವಾದಗಳು” ಮಾಡಲ್ಪಟ್ಟಿವೆ.

ಉದಾಹರಣೆಗೆ, ಸಾ.ಶ.ಪೂ. ಐದನೆಯ ಶತಮಾನದಲ್ಲಿ ಸಾಫಿಸ್ಟ್ಸ್‌ (ಕೂಟವಾದಿಗಳು) ಎಂದು ಕರೆಯಲ್ಪಟ್ಟಿದ್ದ ಗ್ರೀಕ್‌ ಬೋಧಕರ ಪ್ರಸಿದ್ಧ ಗುಂಪೊಂದಿತ್ತು. ಸರಿ ಮತ್ತು ತಪ್ಪಿನ ಮಟ್ಟಗಳನ್ನು ಬಹುತೇಕ ಮಂದಿಯ ಅಭಿಪ್ರಾಯದ ಮೇಲೆ ನಿರ್ಧರಿಸಲಾಗುತ್ತಿತ್ತು ಎಂದು ಅವರು ಬೋಧಿಸಿದರು. ಇಂತಹ ಒಬ್ಬ ಬೋಧಕನು ಹೇಳಿದ್ದು: “ಯಾವುದೆಲ್ಲಾ ವಿಷಯಗಳು ಒಂದು ಪಟ್ಟಣಕ್ಕೆ ನ್ಯಾಯವಾಗಿದೆ ಮತ್ತು ಸೂಕ್ತವಾಗಿದೆ ಎಂದು ಅನಿಸುತ್ತದೋ, ಅವೆಲ್ಲಾ ವಿಷಯಗಳು ಆ ಪಟ್ಟಣಕ್ಕೆ ನ್ಯಾಯವಾಗಿಯೂ ಸೂಕ್ತವಾಗಿಯೂ ಅವೆ.” ಈ ಮಟ್ಟಕ್ಕನುಸಾರ, ಮುಂಚಿನ ಲೇಖನದಲ್ಲಿ ತಿಳಿಸಲ್ಪಟ್ಟ ಜೋಡೀ ಆ ಹಣವನ್ನು ಇಟ್ಟುಕೊಳ್ಳಬೇಕಾಗಿತ್ತು, ಏಕೆಂದರೆ ಅವನ ಸಮುದಾಯದಲ್ಲಿನ ಅಥವಾ “ಪಟ್ಟಣ”ದಲ್ಲಿನ ಬಹುತೇಕ ಮಂದಿ ಅದನ್ನೇ ಮಾಡುವವರಾಗಿದ್ದರು.

ಇಮ್ಮಾನುವೆಲ್‌ ಕಾಂಟ್‌ ಎಂಬ 18ನೇ ಶತಮಾನದ ಪ್ರಸಿದ್ಧ ತತ್ತ್ವಜ್ಞಾನಿಯು ಸ್ವಲ್ಪ ಭಿನ್ನವಾದ ದೃಷ್ಟಿಕೋನವನ್ನು ವ್ಯಕ್ತಪಡಿಸಿದನು. ನೀತಿಸೂತ್ರಗಳ ಕುರಿತ ಸಂಚಿಕೆಗಳು (ಇಂಗ್ಲಿಷ್‌) ಎಂಬ ನಿಯತಕಾಲಿಕ ಹೇಳುವುದು: “ಇಮ್ಮಾನುವೆಲ್‌ ಕಾಂಟ್‌ ಮತ್ತು ಅವರಂತಿದ್ದ ಇತರರು, . . . ಒಬ್ಬನು ಅಥವಾ ಒಬ್ಬಳು ವೈಯಕ್ತಿಕವಾಗಿ ಮಾಡುವ ಆಯ್ಕೆಯ ಹಕ್ಕಿನ ಮೇಲೆ ಗಮನವನ್ನು ಕೇಂದ್ರೀಕರಿಸಿದರು.” ಕಾಂಟ್‌ನ ತತ್ತ್ವಕ್ಕನುಸಾರ, ಜೋಡೀ ಏನು ಮಾಡುವನೋ ಅದು ಎಷ್ಟರ ವರೆಗೆ ಇತರರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲವೋ ಅಷ್ಟರ ವರೆಗೆ ಅದು ಅವನ ಆಯ್ಕೆಗೆ ಬಿಡಲ್ಪಟ್ಟಿರುವ ಸಂಗತಿಯಾಗಿರುವುದು. ಬಹುಸಂಖ್ಯಾತರ ಅಭಿಪ್ರಾಯವು ತನ್ನ ಮಟ್ಟಗಳನ್ನು ನಿರ್ಧರಿಸುವಂತೆ ಅವನು ಅನುಮತಿಸಬಾರದಿತ್ತು.

ಹಾಗಾದರೆ ಜೋಡೀ ಈ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ತಾನೇ ನಿಭಾಯಿಸಿದನು? ಅವನು ಮೂರನೆಯ ಆಯ್ಕೆಯೊಂದನ್ನು ಮಾಡಿದನು. ಯಾರ ನೈತಿಕ ಮಟ್ಟಗಳನ್ನು ಕ್ರೈಸ್ತರು ಮತ್ತು ಅಕ್ರೈಸ್ತರು ಕೂಡ ಪ್ರಶಂಸಿಸಿದ್ದಾರೋ ಆ ಯೇಸು ಕ್ರಿಸ್ತನ ಬೋಧನೆಯನ್ನು ಅವನು ಅನ್ವಯಿಸಿದನು. ಯೇಸು ಬೋಧಿಸಿದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) 82,000 ಡಾಲರ್‌ಗಳನ್ನು ಜೋಡೀ ಆ ಸ್ತ್ರೀಗೆ ಕೊಟ್ಟಾಗ ಆಶ್ಚರ್ಯಚಕಿತಳಾದ ಅವಳು ಇದನ್ನು ಏಕೆ ಇಟ್ಟುಕೊಳ್ಳಲಿಲ್ಲ ಎಂದು ಅವನನ್ನು ಕೇಳಿದಳು. ಅವನು ತಾನೊಬ್ಬ ಯೆಹೋವನ ಸಾಕ್ಷಿಯಾಗಿದ್ದೇನೆಂದು ವಿವರಿಸಿದನು ಮತ್ತು “ಹಣವು ನನ್ನದಾಗಿರಲಿಲ್ಲ” ಎಂದು ಹೇಳಿದನು. ಬೈಬಲಿನಲ್ಲಿ ಮತ್ತಾಯ 19:18ರಲ್ಲಿರುವ “ಕದಿಯಬಾರದು” ಎಂದು ಯೇಸು ಹೇಳಿದ್ದ ಮಾತನ್ನು ಅವನು ಗಂಭೀರವಾಗಿ ತೆಗೆದುಕೊಂಡನು.

ಬಹುತೇಕ ಮಂದಿಯ ಅಭಿಪ್ರಾಯವು ವಿಶ್ವಾಸಾರ್ಹವಾದ ಮಾರ್ಗದರ್ಶಿಯೋ?

ಜೋಡೀ ಇಷ್ಟು ಪ್ರಾಮಾಣಿಕನಾಗಿದ್ದದ್ದಕ್ಕಾಗಿ ಕೆಲವರು ಅವನನ್ನು ಒಬ್ಬ ಮುಟ್ಠಾಳನೆಂದು ಹೇಳುವುದು ಸಂಭವನೀಯ. ಆದರೆ ಬಹುಸಂಖ್ಯಾತರ ಅಭಿಪ್ರಾಯವು ನಂಬಲರ್ಹವಾದ ಮಾರ್ಗದರ್ಶಿಯಲ್ಲ. ಉದಾಹರಣೆಗೆ, ನೀವು ಜೀವಿಸುತ್ತಿದ್ದ ಸಮುದಾಯದಲ್ಲಿ​—⁠ಪೂರ್ವದಲ್ಲಿ ಕೆಲವು ಸಮುದಾಯಗಳಲ್ಲಿದ್ದವರಿಗೆ ಅನಿಸುತ್ತಿದ್ದಂತೆ​—⁠ಮಕ್ಕಳನ್ನು ಆಹುತಿಕೊಡುವುದು ಸ್ವೀಕಾರಾರ್ಹವಾಗಿದೆ ಎಂದು ಬಹುತೇಕ ಮಂದಿ ನಂಬುತ್ತಿದ್ದ ಕಾರಣಮಾತ್ರಕ್ಕೆ, ಆ ಪದ್ಧತಿಯು ಸರಿಯಾಗಿಬಿಡುತ್ತಿತ್ತೋ? (2 ಅರಸುಗಳು 16:3) ಅಥವಾ ನರಭಕ್ಷಣೆಯನ್ನು ಸುಗುಣ ಕೃತ್ಯವೆಂದು ವೀಕ್ಷಿಸುವ ಸಮಾಜದಲ್ಲಿ ನೀವು ಜನಿಸಿರುತ್ತಿದ್ದಲ್ಲಿ ಆಗೇನು? ಮನುಷ್ಯನ ಮಾಂಸವನ್ನು ತಿನ್ನುವುದು ತಪ್ಪಲ್ಲವೆಂದು ಇದು ಅರ್ಥೈಸುತ್ತಿತ್ತೋ? ಒಂದು ಪದ್ಧತಿಯ ಜನಪ್ರಿಯತೆಯು ಅದನ್ನು ಸರಿ ಎಂದು ನಿರೂಪಿಸುವುದಿಲ್ಲ. ತುಂಬ ಕಾಲದ ಮುಂಚೆಯೇ, ಈ ಪಾಶದ ಕುರಿತು ಎಚ್ಚರಿಸುತ್ತಾ ಬೈಬಲ್‌ ಹೇಳಿದ್ದು: “ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು.”​—⁠ವಿಮೋಚನಕಾಂಡ 23:⁠2.

ಬಹುತೇಕ ಮಂದಿಯ ಅಭಿಪ್ರಾಯವನ್ನು ಸರಿ ಮತ್ತು ತಪ್ಪಿನ ಮಾರ್ಗದರ್ಶಿಯಾಗಿ ಸ್ವೀಕರಿಸುವ ವಿಷಯದಲ್ಲಿ ಎಚ್ಚರ ವಹಿಸಬೇಕಾದ ಮತ್ತೊಂದು ಕಾರಣವನ್ನು ಯೇಸು ಕ್ರಿಸ್ತನು ಗುರುತಿಸಿದನು. ಅವನು ಸೈತಾನನನ್ನು “ಇಹಲೋಕಾಧಿಪತಿ” ಎಂದು ಬಯಲುಪಡಿಸಿದನು. (ಯೋಹಾನ 14:30; ಲೂಕ 4:6) ಸೈತಾನನು “ಭೂಲೋಕದವರನ್ನೆಲ್ಲಾ” ಮರುಳುಗೊಳಿಸಲು ತನ್ನ ಸ್ಥಾನವನ್ನು ಉಪಯೋಗಿಸುತ್ತಾನೆ. (ಪ್ರಕಟನೆ 12:9) ಆದುದರಿಂದ, ನೀವು ಬಹುತೇಕ ಮಂದಿಯಿಂದ ಸ್ವೀಕರಿಸಲ್ಪಡುವ ಅಭಿಪ್ರಾಯದ ಮೇಲೆ ಸರಿ ಮತ್ತು ತಪ್ಪಿನ ನಿಮ್ಮ ಮಟ್ಟಗಳನ್ನು ಸಂಪೂರ್ಣವಾಗಿ ಅವಲಂಬಿಸುವುದಾದರೆ, ನೈತಿಕತೆಯ ವಿಷಯದಲ್ಲಿ ಸೈತಾನನ ದೃಷ್ಟಿಕೋನವನ್ನು ನೀವು ಸ್ವೀಕರಿಸುತ್ತಿರಬಹುದು ಮತ್ತು ಇದು ಗಂಡಾಂತರಕ್ಕೆ ನಡೆಸುವುದಂತೂ ಖಂಡಿತ.

ನೀವು ನಿಮ್ಮ ಸ್ವಂತ ತೀರ್ಮಾನದಲ್ಲಿ ಭರವಸೆಯಿಡಬಲ್ಲಿರೋ?

ಹಾಗಾದರೆ, ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಪ್ರತಿಯೊಬ್ಬನು ಸ್ವತಃ ನಿರ್ಧರಿಸಬೇಕೋ? ‘ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳಬೇಡ’ ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 3:5) ಏಕೆ? ಏಕೆಂದರೆ, ಎಲ್ಲಾ ಮಾನವರೂ ಒಂದು ಮೂಲಭೂತ ದೋಷವನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾರೆ ಮತ್ತು ಇದು ಅವರ ತೀರ್ಮಾನಶಕ್ತಿಯನ್ನು ವಕ್ರಗೊಳಿಸಸಾಧ್ಯವಿದೆ. ಆದಾಮಹವ್ವರು ದೇವರ ವಿರುದ್ಧ ದಂಗೆಯೆದ್ದಾಗ, ಸ್ವಾರ್ಥಿಯಾಗಿದ್ದ ಸೈತಾನನ ಮಟ್ಟಗಳನ್ನು ಅವರು ಸ್ವೀಕರಿಸಿದರು ಮತ್ತು ಅವನನ್ನು ತಮ್ಮ ಆಧ್ಯಾತ್ಮಿಕ ತಂದೆಯಾಗಿ ಆರಿಸಿಕೊಂಡರು. ಅನಂತರ ಅವರು ತಮ್ಮ ಸಂತತಿಗೆ ಒಂದು ಕೌಟುಂಬಿಕ ಸ್ವಭಾವವನ್ನು, ಅಂದರೆ ಸರಿಯಾದದ್ದನ್ನು ಗ್ರಹಿಸುವ ಸಾಮರ್ಥ್ಯವಿದ್ದರೂ ತಪ್ಪನ್ನು ಬೆನ್ನಟ್ಟುವ ಪ್ರವೃತ್ತಿಯಿರುವ ಒಂದು ವಂಚಕ ಹೃದಯವನ್ನು ದಾಟಿಸಿದರು.​—⁠ಆದಿಕಾಂಡ 6:5; ರೋಮಾಪುರ 5:12; 7:21-24.

ನೀತಿಸೂತ್ರಗಳನ್ನು ಚರ್ಚಿಸುತ್ತಾ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ಗಮನಿಸುವುದು: “ಜನರು ನೈತಿಕವಾಗಿ ಏನನ್ನು ಮಾಡಬೇಕು ಎಂಬುದನ್ನು ತಿಳಿದಿರುವುದಾದರೂ ತಮ್ಮ ಸ್ವಂತ ಅಭಿರುಚಿಗಳಿಗನುಸಾರ ನಡೆದುಕೊಳ್ಳುವುದು ಆಶ್ಚರ್ಯಕರವಾಗಿ ತೋರುವುದಿಲ್ಲ. ಇಂತಹ ಜನರಿಗೆ ಸರಿಯಾದದ್ದನ್ನು ಮಾಡಲಿಕ್ಕಾಗಿರುವ ಕಾರಣಗಳನ್ನು ಹೇಗೆ ಒದಗಿಸುವುದು ಎಂಬುದು ಪಾಶ್ಚಾತ್ಯ ನೀತಿಸೂತ್ರಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.” ಬೈಬಲು ಇದರ ಕುರಿತು ಸರಿಯಾಗಿಯೇ ಹೇಳುತ್ತದೆ: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ವಂಚಕನಾಗಿರುವ ಯಾರಲ್ಲಿಯಾದರೂ ನಾವು ಭರವಸವಿಟ್ಟೇವೋ?

ದೇವರಲ್ಲಿ ನಂಬಿಕೆಯಿಲ್ಲದವರಿಗೂ, ನೈತಿಕವಾಗಿ ಯೋಗ್ಯ ರೀತಿಯಲ್ಲಿ ವರ್ತಿಸುವ ಮತ್ತು ಪ್ರಾಯೋಗಿಕವಾದ ಹಾಗೂ ಗೌರವಾರ್ಹವಾದ ನೀತಿಸೂತ್ರ ಸಂಹಿತೆಗಳನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವಿದೆ ಎಂಬುದು ಒಪ್ಪತಕ್ಕ ಮಾತೇ. ಆದರೂ ಅನೇಕಾವರ್ತಿ, ಅವರ ಸಂಹಿತೆಗಳಲ್ಲಿ ತಳವೂರಿರುವ ಉದಾತ್ತ ಮೂಲತತ್ತ್ವಗಳು ಬೈಬಲಿನ ನೈತಿಕ ಮಟ್ಟಗಳನ್ನು ಕನ್ನಡಿಯಂತೆ ಪ್ರತಿಬಿಂಬಿಸುತ್ತವೆ. ಇಂತಹ ವ್ಯಕ್ತಿಗಳು ದೇವರ ಅಸ್ತಿತ್ವವನ್ನು ಅಲ್ಲಗಳೆಯಬಹುದಾದರೂ, ದೇವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಸ್ವಾಭಾವಿಕ ಸಾಮರ್ಥ್ಯ ಅವರಲ್ಲಿದೆ ಎಂಬುದನ್ನು ಅವರ ಆಚಾರವಿಚಾರಗಳು ಪ್ರದರ್ಶಿಸುತ್ತವೆ. ಬೈಬಲು ತಿಳಿಸುವ ಪ್ರಕಾರ ಮಾನವಜಾತಿಯು ಮೂಲಭೂತವಾಗಿ “ದೇವಸ್ವರೂಪದಲ್ಲಿ” ಸೃಷ್ಟಿಸಲ್ಪಟ್ಟಿತು ಎಂಬುದನ್ನು ಇದು ರುಜುಪಡಿಸುತ್ತದೆ. (ಆದಿಕಾಂಡ 1:27; ಅ. ಕೃತ್ಯಗಳು 17:26-28) ಅಪೊಸ್ತಲ ಪೌಲನು ಹೇಳುವುದು: “ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ.”​—⁠ರೋಮಾಪುರ 2:15.

ವಾಸ್ತವದಲ್ಲಿ, ಸರಿಯಾದದ್ದು ಯಾವುದೆಂಬುದನ್ನು ತಿಳಿದಿರುವುದು ಒಂದು ವಿಷಯವಾಗಿರುವಾಗ, ಅದನ್ನು ಮಾಡಲು ನೈತಿಕ ಶಕ್ತಿಯನ್ನು ಹೊಂದಿರುವುದು ಮತ್ತೊಂದು ವಿಷಯವಾಗಿದೆ. ಒಬ್ಬನು ಈ ಆವಶ್ಯಕ ನೈತಿಕ ಶಕ್ತಿಯನ್ನು ಹೇಗೆ ಪಡೆದುಕೊಳ್ಳಬಹುದು? ಕೃತ್ಯಗಳು ಹೃದಯದಿಂದ ಪ್ರಚೋದಿಸಲ್ಪಡುವ ಕಾರಣ, ಬೈಬಲಿನ ಗ್ರಂಥಕರ್ತನಾದ ಯೆಹೋವ ದೇವರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಒಬ್ಬ ವ್ಯಕ್ತಿಯು ಆ ಶಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವುದು.​—⁠ಕೀರ್ತನೆ 25:4, 5.

ಒಳ್ಳೇದನ್ನು ಮಾಡಲು ಶಕ್ತಿಯನ್ನು ಕಂಡುಕೊಳ್ಳುವುದು

ದೇವರನ್ನು ಪ್ರೀತಿಸುವುದರಲ್ಲಿ ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆಯು, ಆತನ ಆಜ್ಞೆಗಳು ಎಷ್ಟು ನ್ಯಾಯಸಮ್ಮತವಾಗಿವೆ ಮತ್ತು ಪ್ರಾಯೋಗಿಕವಾಗಿವೆ ಎಂಬುದನ್ನು ಕಂಡುಕೊಳ್ಳುವುದೇ ಆಗಿದೆ. “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ,” ಎಂದು ಅಪೊಸ್ತಲ ಯೋಹಾನನು ಹೇಳುತ್ತಾನೆ. (1 ಯೋಹಾನ 5:3) ಉದಾಹರಣೆಗೆ, ಯುವ ಜನರು ಮದ್ಯಪಾನೀಯಗಳನ್ನು ಸೇವಿಸಬೇಕೋ, ಅಮಲೌಷಧಗಳನ್ನು ತೆಗೆದುಕೊಳ್ಳಬೇಕೋ, ಅಥವಾ ವಿವಾಹಕ್ಕೆ ಮುಂಚಿನ ಲೈಂಗಿಕತೆಯಲ್ಲಿ ತೊಡಗಬೇಕೋ ಎಂಬ ವಿಚಾರಗಳಲ್ಲಿ ನಿರ್ಧಾರವನ್ನು ಮಾಡಲಿರುವಾಗ ಸರಿ ಯಾವುದು ತಪ್ಪು ಯಾವುದು ಎಂಬುದನ್ನು ವಿವೇಚಿಸಲು ಅವರಿಗೆ ಸಹಾಯಮಾಡುವ ಪ್ರಾಯೋಗಿಕ ಬುದ್ಧಿವಾದವು ಬೈಬಲಿನಲ್ಲಿ ಅಡಕವಾಗಿದೆ. ಭಿನ್ನಾಭಿಪ್ರಾಯಗಳನ್ನು ಹೇಗೆ ಬಗೆಹರಿಸುವುದು ಎಂಬುದನ್ನು ಗ್ರಹಿಸಿಕೊಳ್ಳುವಂತೆ ಬೈಬಲ್‌ ವಿವಾಹಿತ ದಂಪತಿಗಳಿಗೆ ಸಹಾಯಮಾಡಬಲ್ಲದು ಮತ್ತು ಹೆತ್ತವರಿಗೆ ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಮಾರ್ಗದರ್ಶಕ ಸೂತ್ರಗಳನ್ನು ಅದು ಒದಗಿಸಬಲ್ಲದು. * ಜನರು ಬೈಬಲಿನ ನೈತಿಕ ಮಟ್ಟಗಳನ್ನು ಅನ್ವಯಿಸುವುದಾದರೆ, ಅವರ ಸಾಮಾಜಿಕ, ಶೈಕ್ಷಣಿಕ, ಅಥವಾ ಸಾಂಸ್ಕೃತಿಕ ಹಿನ್ನೆಲೆ ಏನೇ ಆಗಿರಲಿ ಆಬಾಲವೃದ್ಧರೆನ್ನದೆ ಇದು ಎಲ್ಲರಿಗೂ ಪ್ರಯೋಜನವನ್ನು ತರಬಲ್ಲದು.

ಪೌಷ್ಟಿಕ ಆಹಾರವನ್ನು ಸೇವಿಸುವುದು ಹೇಗೆ ನಿಮಗೆ ಕೆಲಸಮಾಡಲು ಶಕ್ತಿಯನ್ನು ಕೊಡುತ್ತದೋ, ಹಾಗೆಯೇ ದೇವರ ವಾಕ್ಯವನ್ನು ಓದುವುದು ಆತನ ಮಟ್ಟಗಳಿಗನುಸಾರ ಜೀವಿಸಲು ನಿಮಗೆ ಶಕ್ತಿಯನ್ನು ಕೊಡುತ್ತದೆ. ದೇವರ ಮಾತುಗಳನ್ನು ಯೇಸು ಜೀವಪೋಷಕ ರೊಟ್ಟಿಗೆ ಹೋಲಿಸಿದನು. (ಮತ್ತಾಯ 4:4) ಅವನು ಹೀಗೆ ಸಹ ಹೇಳಿದನು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ದೇವರ ವಾಕ್ಯದಿಂದ ಯೇಸು ಸೇವಿಸಿದ ಆಧ್ಯಾತ್ಮಿಕ ಆಹಾರವು ಪ್ರಲೋಭನೆಗಳನ್ನು ಎದುರಿಸಲು ಮತ್ತು ವಿವೇಕಯುತ ನಿರ್ಧಾರಗಳನ್ನು ಮಾಡಲು ಅವನನ್ನು ಸಜ್ಜುಗೊಳಿಸುವುದರಲ್ಲಿ ಸಹಾಯಮಾಡಿತು.​—⁠ಲೂಕ 4:1-13.

ಆರಂಭದಲ್ಲಿ, ದೇವರ ವಾಕ್ಯದಿಂದ ನಿಮ್ಮ ಮನಸ್ಸನ್ನು ತುಂಬಿಸಿ ಆತನ ಮಟ್ಟಗಳನ್ನು ಜೀರ್ಣಿಸಿಕೊಳ್ಳುವುದು ನಿಮಗೆ ಕಷ್ಟಕರವಾಗಿ ತೋರಬಹುದು. ಆದರೆ ನೀವು ಚಿಕ್ಕವರಾಗಿದ್ದಾಗ, ನಿಮಗೆ ಆವಶ್ಯಕವಾಗಿದ್ದ ಆಹಾರದ ರುಚಿಯು ನಿಮಗೆ ಹಿಡಿಸಿರಲಿಕ್ಕಿಲ್ಲ ಎಂಬುದನ್ನು ಜ್ಞಾಪಿಸಿಕೊಳ್ಳಿ. ಆದರೆ ದೃಢಕಾಯರಾಗಿ ಬೆಳೆಯಲು ಇಂತಹ ಪೌಷ್ಟಿಕ ಆಹಾರಗಳನ್ನು ತಿಂದು ಆನಂದಿಸಲು ನೀವು ಕಲಿಯಬೇಕಾಗಿತ್ತು. ತದ್ರೀತಿಯಲ್ಲಿ, ದೇವರ ಮಟ್ಟಗಳಿಗಾಗಿ ರುಚಿಯನ್ನು ಬೆಳೆಸಿಕೊಳ್ಳಲು ನಿಮಗೆ ಸಮಯ ಹಿಡಿಯಬಹುದು. ನೀವು ಪಟ್ಟುಬಿಡದೆ ಇರುವಲ್ಲಿ, ನೀವು ಅವನ್ನು ಪ್ರೀತಿಸುವವರಾಗಿ ಬೆಳೆಯುವಿರಿ ಮತ್ತು ಆಧ್ಯಾತ್ಮಿಕವಾಗಿ ದೃಢಕಾಯರಾಗುವಿರಿ. (ಕೀರ್ತನೆ 34:8; 2 ತಿಮೊಥೆಯ 3:15-17) ನೀವು ಯೆಹೋವನಲ್ಲಿ ಭರವಸವಿಡಲು ಕಲಿತುಕೊಳ್ಳುವಿರಿ ಮತ್ತು ‘ಒಳ್ಳೆಯದನ್ನು ಮಾಡಲು’ ಪ್ರಚೋದಿಸಲ್ಪಡುವಿರಿ.​—⁠ಕೀರ್ತನೆ 37:⁠3.

ಜೋಡೀ ಎದುರಿಸಿದಂಥ ಪರಿಸ್ಥಿತಿಯನ್ನು ನೀವು ಎದುರಿಸಲಿಕ್ಕಿಲ್ಲ. ಆದರೂ, ಪ್ರತಿ ದಿನ ನೀವು ಚಿಕ್ಕದಾದ ಮತ್ತು ದೊಡ್ಡದಾದ ನೀತಿಸೂತ್ರಾಧಾರಿತ ನಿರ್ಧಾರಗಳನ್ನು ಮಾಡುತ್ತೀರಿ. ಆದುದರಿಂದ, ಬೈಬಲ್‌ ನಿಮ್ಮನ್ನು ಉತ್ತೇಜಿಸುತ್ತಾ ಅನ್ನುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಯೆಹೋವನಲ್ಲಿ ಭರವಸವಿಡಲು ಕಲಿತುಕೊಳ್ಳುವುದು, ನಿಮಗೆ ಈಗ ಪ್ರಯೋಜನವನ್ನು ತರುತ್ತದೆ ಮಾತ್ರವಲ್ಲ, ನಿತ್ಯಕಾಲ ಜೀವಿಸುವ ಸದವಕಾಶವನ್ನೂ ನಿಮ್ಮ ಮುಂದೆ ತೆರೆದಿಡುತ್ತದೆ; ಏಕೆಂದರೆ ಯೆಹೋವ ದೇವರಿಗೆ ತೋರಿಸುವ ವಿಧೇಯ ಜೀವನಮಾರ್ಗವು ಜೀವಕ್ಕೆ ನಡೆಸುತ್ತದೆ.​—⁠ಮತ್ತಾಯ 7:13, 14.

[ಪಾದಟಿಪ್ಪಣಿ]

^ ಪ್ಯಾರ. 18 ಇಂತಹ ಮತ್ತು ಇತರ ಪ್ರಾಮುಖ್ಯ ವಿಷಯಗಳ ಕುರಿತ ಬೈಬಲಿನಿಂದ ತೆಗೆಯಲ್ಪಟ್ಟ ಪ್ರಾಯೋಗಿಕ ಬುದ್ಧಿವಾದವನ್ನು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಮತ್ತು ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕಗಳಲ್ಲಿ ಕಂಡುಕೊಳ್ಳಬಹುದು.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಬಹುತೇಕ ಮಂದಿಯ ಅಭಿಪ್ರಾಯವು ಅದೃಶ್ಯ ಶಕ್ತಿಗಳಿಂದ ಪ್ರಭಾವಿಸಲ್ಪಟ್ಟದ್ದಾಗಿರಬಹುದು

[ಪುಟ 5ರಲ್ಲಿರುವ ಚಿತ್ರಗಳು]

ಇತಿಹಾಸದಾದ್ಯಂತ, ಚಿಂತಕರು ಸರಿ ಮತ್ತು ತಪ್ಪಿನ ವಿವಾದವನ್ನು ವಾದಿಸಿದ್ದಾರೆ

ಸಾಕ್ರಟೀಸ್‌

ಕಾಂಟ್‌

ಕನ್‌ಫ್ಯೂಷಿಯಸ್‌

[ಕೃಪೆ]

ಕಾಂಟ್‌: From the book The Historian’s History of the World; ಸಾಕ್ರಟೀಸ್‌: From the book A General History for Colleges and High Schools; ಕನ್‌ಫ್ಯೂಷಿಯಸ್‌: Sung Kyun Kwan University, Seoul, Korea

[ಪುಟ 7ರಲ್ಲಿರುವ ಚಿತ್ರಗಳು]

ಬೈಬಲು ನಮಗೆ ಸರಿ ಯಾವುದು ತಪ್ಪು ಯಾವುದು ಎಂಬುದನ್ನು ವಿವೇಚಿಸಲು ಸಹಾಯಮಾಡುವುದರೊಂದಿಗೆ ಸರಿಯಾದದ್ದನ್ನು ಮಾಡುವಂತೆಯೂ ನಮ್ಮನ್ನು ಉತ್ತೇಜಿಸುತ್ತದೆ