‘ನನಗೆ ದೊರೆತ ತರಬೇತಿಗಾಗಿ ಸಂತೋಷಿಸುತ್ತೇನೆ’
‘ನನಗೆ ದೊರೆತ ತರಬೇತಿಗಾಗಿ ಸಂತೋಷಿಸುತ್ತೇನೆ’
ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಯುವ ಕಾಜುನಾಳನ್ನು ಅವಳ ಅಧ್ಯಾಪಕಿಯು ಕೇಳಿಕೊಂಡಾಗ ಅವಳು ದಂಗಾದಳು. ಜಪಾನಿನ ಉತ್ತರಭಾಗದಲ್ಲಿರುವ ದೊಡ್ಡ ದ್ವೀಪವಾದ ಹೋಕೇಡೊದಲ್ಲಿರುವ ಎಲ್ಲಾ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿತ್ತು. ಆದರೆ, ಈ ಮುಂಚೆ ಕಾಜುನಾಳ ಶಾಲೆಯು ಯಾವುದೇ ವಿದ್ಯಾರ್ಥಿಯನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿರಲಿಲ್ಲ. ಸ್ಪರ್ಧೆಯ ದಿನದಂದು ಕಾಜುನಾಳು ತುಂಬ ಗಾಬರಿಗೊಂಡಿದ್ದಳು, ಏಕೆಂದರೆ ಅವಳು ಸುಮಾರು 50 ಮಂದಿ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕಿತ್ತು. ಅಷ್ಟುಮಾತ್ರವಲ್ಲದೆ, ಇಂಗ್ಲಿಷ್ ಮಾತೃಭಾಷೆಯ ಇಬ್ಬರು ನ್ಯಾಯಾಧೀಶರನ್ನು ನೋಡಿದಾಗ ಅವಳು ಇನ್ನೂ ಹೆಚ್ಚು ಗಾಬರಿಗೊಂಡಳು.
ವಿಜಯಿಗಳ ಹೆಸರುಗಳನ್ನು ಘೋಷಿಸುವ ಸಮಯ ಬಂದಾಗ, ಮೊದಲಾಗಿ ಕೊನೆಯ ಬಹುಮಾನವನ್ನು ಗಳಿಸಿದವರ ಹೆಸರು ಕರೆಯಲ್ಪಟ್ಟಿತು. ಅಂತಿಮವಾಗಿ ಕಾಜುನಾಳ ಹೆಸರು ಕರೆಯಲ್ಪಟ್ಟಾಗ, ಅವಳು ಮೂಕವಿಸ್ಮಿತಳಾದಳು. ಅವಳು ಮತ್ತು ಅವಳ ಪಕ್ಕದಲ್ಲಿಯೇ ಕುಳಿತಿದ್ದ ಅವಳ ಅಧ್ಯಾಪಕಿ ಒಬ್ಬರನ್ನೊಬ್ಬರು ಆಶ್ಚರ್ಯದಿಂದ ದಿಟ್ಟಿಸಿನೋಡಿದರು. ಬೆಚ್ಚಿಬಿದ್ದಿರುವ ಆ ಸ್ಥಿತಿಯಲ್ಲಿಯೇ ಕಾಜುನಾಳು ವೇದಿಕೆಗೆ ಹೋಗಿ ಪ್ರಥಮ ಬಹುಮಾನಕ್ಕಾಗಿ ತನ್ನ ಪಾರಿತೋಷಕವನ್ನು ಸ್ವೀಕರಿಸಿದಳು!
ಸಂತೋಷಭರಿತಳಾಗಿ ಕಾಜುನಾಳು ವಿವರಿಸಿದ್ದು: “ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೂಲಕ ಯೆಹೋವನ ಸಂಘಟನೆಯು ನೀಡುವ ತರಬೇತಿಯಿಂದಲೇ ಇದು ಸಾಧ್ಯವಾಯಿತು. ನನಗೆ ದೊರೆತ ಈ ತರಬೇತಿಗಾಗಿ ಬಹಳ ಸಂತೋಷಿಸುತ್ತೇನೆ.” ಕಾಜುನಾಳು ಸಣ್ಣವಳಾಗಿದ್ದಾಗಿನಿಂದ ಭಾಗವಹಿಸುತ್ತಿರುವ ಆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ಯೆಹೋವನ ಸಾಕ್ಷಿಗಳ ಸಭಾ ಕೂಟಗಳಲ್ಲಿ ಒಂದಾಗಿದೆ. ಸ್ಪರ್ಧೆಗೆ ತಯಾರಿಮಾಡುವಾಗ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಕಲಿಸಲ್ಪಟ್ಟ ವಿಷಯಗಳಾದ ಮೈಕ್ರೊಫೋನನ್ನು ಉಪಯೋಗಿಸುವ ವಿಧ, ಹಾರ್ದಿಕತೆ ಮತ್ತು ಭಾವಪೂರ್ಣತೆಯಿಂದ ಮಾತನಾಡುವುದು, ಭಾವಾಭಿನಯಗಳನ್ನು ಉಪಯೋಗಿಸುವದು, ಸಭಾ ಸಂಪರ್ಕ, ಮತ್ತು ಇತರ ವಿಷಯಗಳಿಗೆ ಕಾಜುನಾಳು ವಿಶೇಷ ಗಮನವನ್ನು ಕೊಟ್ಟಿದ್ದಳು.
ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಪ್ರತಿವಾರವೂ ನಡೆಸಲ್ಪಡುವ ಈ ಶಾಲೆಯನ್ನು ಬಂದು ನೋಡುವಂತೆ ನಾವು ನೀಡುವ ಆಮಂತ್ರಣವನ್ನು ದಯವಿಟ್ಟು ಸ್ವೀಕರಿಸಿರಿ. ಆಬಾಲವೃದ್ಧರೆಲ್ಲರೂ ಈ ಶಾಲೆಯಿಂದ ಹೇಗೆ ಪ್ರಯೋಜನವನ್ನು ಪಡೆಯುತ್ತಿದ್ದಾರೆಂಬುದನ್ನು ಸ್ವತಃ ನೋಡಿರಿ. ಈ ಕೂಟವು ಸಾರ್ವಜನಿಕರಿಗೆ ತೆರೆದಿದೆ. ನಿಮ್ಮ ಮನೆಗೆ ಸಮೀಪದಲ್ಲಿರುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ದಯಮಾಡಿ ಸಂಪರ್ಕಿಸಿರಿ.