ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಕ್ರಿಸ್ತನನ್ನು ಹೇಗೆ ಸ್ಮರಿಸಬೇಕು?

ಯೇಸು ಕ್ರಿಸ್ತನನ್ನು ಹೇಗೆ ಸ್ಮರಿಸಬೇಕು?

ಯೇಸು ಕ್ರಿಸ್ತನನ್ನು ಹೇಗೆ ಸ್ಮರಿಸಬೇಕು?

ಯೇಸು ಕ್ರಿಸ್ತನು, “ಜೀವಿಸಿರುವವರಲ್ಲೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದನು ಎಂಬುದು ನಿಶ್ಚಯ.”​—⁠“ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ.”

ಮಹಾನ್‌ ಪುರುಷರನ್ನು ಸಾಮಾನ್ಯವಾಗಿ ಅವರೇನು ಸಾಧಿಸಿದ್ದಾರೋ ಅದಕ್ಕಾಗಿ ಸ್ಮರಿಸಲಾಗುತ್ತದೆ. ಹೀಗಿರುವಾಗ, ಯೇಸುವನ್ನು ಅನೇಕರು ಅವನ ಕೃತ್ಯಗಳಿಗಾಗಿಯಲ್ಲ ಬದಲಾಗಿ ಅವನ ಜನನಕ್ಕಾಗಿ ಏಕೆ ಸ್ಮರಿಸುತ್ತಾರೆ? ಕ್ರೈಸ್ತಪ್ರಪಂಚದಾದ್ಯಂತ, ಹೆಚ್ಚಿನ ಜನರು ಅವನ ಜನನಕ್ಕೆ ಸಂಬಂಧಿಸಿದ ಘಟನೆಗಳನ್ನು ಸ್ಮರಿಸಬಲ್ಲರು. ಆದರೆ ಎಷ್ಟು ಮಂದಿ, ಪರ್ವತ ಪ್ರಸಂಗದಲ್ಲಿ ಕಂಡುಬರುವ ಅವನ ಅತ್ಯುತ್ತಮ ಬೋಧನೆಯನ್ನು ಜ್ಞಾಪಿಸಿಕೊಂಡು ಅದನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ?

ಯೇಸುವಿನ ಜನನವು ಒಂದು ಗಮನಾರ್ಹ ಸಂಗತಿಯಾಗಿತ್ತೆಂಬುದು ನಿಜ. ಆದರೆ, ಅವನ ಆರಂಭದ ಶಿಷ್ಯರು ಅವನೇನು ಮಾಡಿದನೋ ಮತ್ತು ಅವನೇನು ಕಲಿಸಿದನೋ ಅದಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡಿದರು. ಕ್ರಿಸ್ತನು ಒಬ್ಬ ಪ್ರೌಢ ಪುರುಷನಾಗಿ ನಡೆಸಿದ ಜೀವನವನ್ನು ಮರೆಮಾಚುವಷ್ಟರ ಮಟ್ಟಿಗೆ ಅವನ ಜನನವು ಮಹತ್ವವನ್ನು ಹೊಂದಬೇಕೆಂದು ದೇವರು ಖಂಡಿತವಾಗಿಯೂ ಬಯಸಲಿಲ್ಲ. ಹಾಗಿದ್ದರೂ, ಕ್ರಿಸ್ಮಸ್‌ ಹಬ್ಬವು ಜನರು ಕ್ರಿಸ್ತನ ಜನನದ ಕುರಿತಾದ ಪುರಾಣ ಕಥೆಗಳಲ್ಲೇ ಮುಳುಗಿದ್ದು, ಅವನು ನಿಜವಾಗಿಯೂ ಏನಾಗಿದ್ದಾನೋ ಆ ವಿಷಯವನ್ನು ಮರೆಮಾಚುವುದರಲ್ಲಿ ಯಶಸ್ವಿಯಾಗಿದೆ.

ಕ್ರಿಸ್ಮಸ್‌ ಆಚರಿಸುವ ವಿಧಾನದ ಕುರಿತಾಗಿ ಮನಕಲಕುವ ಒಂದು ಪ್ರಶ್ನೆಯು ಏಳುತ್ತದೆ. ಒಂದುವೇಳೆ ಯೇಸು ಇಂದು ಭೂಮಿಗೆ ಹಿಂದಿರುಗಿ ಬರುವುದಾದರೆ, ಕ್ರಿಸ್ಮಸ್‌ ಹಬ್ಬವನ್ನು ಒಂದು ಮುಚ್ಚುಮರೆಯಿಲ್ಲದ ವ್ಯಾಪಾರ ವಹಿವಾಟಾಗಿ ಮಾಡಿರುವುದನ್ನು ಗಮನಿಸುವಾಗ ಅವನಿಗೆ ಹೇಗನಿಸಬಹುದು? ಎರಡು ಸಾವಿರ ವರುಷಗಳ ಹಿಂದೆ, ಯೇಸು ಯೆರೂಸಲೇಮ್‌ ದೇವಾಲಯವನ್ನು ಭೇಟಿಮಾಡಿದಾಗ, ಅಲ್ಲಿ ಒಂದು ಯೆಹೂದಿ ಧಾರ್ಮಿಕ ಹಬ್ಬವನ್ನು ಹಣಮಾಡುವ ಅವಕಾಶವಾಗಿ ಉಪಯೋಗಿಸುತ್ತಿದ್ದ ಚಿನಿವಾರರನ್ನು ಮತ್ತು ಮಾರುವವರನ್ನು ಕಂಡು ಅವನು ಅತಿಯಾಗಿ ಕ್ರೋಧಿತನಾದನು. “ಇವುಗಳನ್ನು ಇಲ್ಲಿಂದ ತಕ್ಕೊಂಡುಹೋಗಿರಿ; ನನ್ನ ತಂದೆಯ ಮನೆಯನ್ನು ಸಂತೆ ಮಾಡಬೇಡಿರಿ” ಎಂದು ಅವನು ಗದರಿಸಿದನು. (ಯೋಹಾನ 2:​13-16) ವಾಣಿಜ್ಯ ಮತ್ತು ಧರ್ಮವನ್ನು ಒಂದುಗೂಡಿಸುವುದನ್ನು ಯೇಸು ಒಪ್ಪಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಕ್ರಿಸ್ಮಸ್‌ ಹಬ್ಬವೆಂಬುದು ಈಗ ಒಂದು ದೊಡ್ಡ ವ್ಯಾಪಾರವಾಗುತ್ತಾ ಬರುವುದನ್ನು ನೋಡಿ ಸ್ಪೆಯಿನ್‌ನಲ್ಲಿರುವ ಅನೇಕ ಯಥಾರ್ಥ ಕ್ಯಾಥೊಲಿಕರು ಚಿಂತೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ, ಅನೇಕ ಕ್ರಿಸ್ಮಸ್‌ ಆಚಾರಗಳ ಮೂಲವನ್ನು ಗಮನಿಸುವಾಗ, ಅದೊಂದು ವಾಣಿಜ್ಯ ವ್ಯವಹಾರವಾಗುತ್ತಾ ಹೋಗುವುದು ಆಶ್ಚರ್ಯದ ಸಂಗತಿಯೇನಲ್ಲ. ಪತ್ರಕರ್ತ ಹ್ವಾನ್‌ ಆರ್ಯಾಸ್‌ ತಿಳಿಸುವುದು: “ಕ್ರಿಸ್ಮಸ್‌ ಹಬ್ಬವು ‘ವಿಧರ್ಮೀಕರಿಸಲ್ಪಟ್ಟಿದೆ’ ಮತ್ತು ಹೆಚ್ಚಿನ ಜನರು ಧರ್ಮಕ್ಕೆ ಬದಲಾಗಿ ಮೋಜುಮಾಡುವುದು ಹಾಗೂ ವಸ್ತುಗಳನ್ನು ಕೊಳ್ಳುವುದು ಮುಂತಾದ ವಿಷಯದಲ್ಲಿ ಮುಳುಗಿರುತ್ತಾರೆ ಎಂಬುದಾಗಿ ಠೀಕೆಮಾಡುವ ಕೆಲವು ಕ್ರೈಸ್ತರಿಗೆ ಸಾಮಾನ್ಯವಾಗಿ ತಿಳಿಯದೆ ಇರುವ ಸಂಗತಿಯೇನೆಂದರೆ ಕ್ರಿಸ್ತನ ಜನನಕ್ಕೆ ಸಂಬಂಧಿಸಿದ ಆಚರಣೆಯು . . . ಆರಂಭಗೊಂಡಾಗಲೇ ರೋಮನರ ವಿಧರ್ಮಿ ಹಬ್ಬವಾದ ಸೂರ್ಯದೇವನ ಹಬ್ಬದ ಅನೇಕ ಅಂಶಗಳು ಅದರಲ್ಲಿ ಒಳಗೂಡಿಸಲ್ಪಟ್ಟಿತ್ತು.”​—⁠ಎಲ್‌ ಪಾಯೀಸ್‌, ಡಿಸೆಂಬರ್‌ 24, 2001.

ಇತ್ತೀಚಿನ ವರುಷಗಳಲ್ಲಿ, ಸ್ಪೆಯಿನ್‌ನ ಅನೇಕ ಪತ್ರಕರ್ತರು ಮತ್ತು ವಿಶ್ವಕೋಶಗಳು ಸಾಂಪ್ರದಾಯಿಕ ಕ್ರಿಸ್ಮಸ್‌ ಹಬ್ಬದ ವಿಧರ್ಮಿ ಮೂಲಗಳ ಕುರಿತು ಮತ್ತು ಅವುಗಳ ವಾಣಿಜ್ಯ ವ್ಯವಹಾರದ ಕುರಿತು ಹೇಳಿಕೆ ನೀಡಿವೆ. ಕ್ರಿಸ್ಮಸ್‌ ಆಚರಣೆಗಳ ತಾರೀಖಿನ ಕುರಿತು, ಎನ್‌ಸೀಕ್ಲಪೇಡ್ಯಾ ಡೆ ಲಾ ರಾಲೀಕ್‌ಒನ್‌ ಕಾಟೋಲೀಕಾ ಮುಚ್ಚುಮರೆಯಿಲ್ಲದೆ ಹೇಳುವುದು: “ಕ್ರಿಸ್ಮಸ್‌ ಹಬ್ಬಕ್ಕೆ ಈ ತಾರೀಖನ್ನು ನೀಡಲು ರೋಮನ್‌ ಚರ್ಚ್‌ ನಿರ್ಧರಿಸಲು ಕಾರಣ, ವಿಧರ್ಮಿಯರ ಹಬ್ಬಗಳ ಸ್ಥಳದಲ್ಲಿ ಕ್ರೈಸ್ತ ಹಬ್ಬಗಳನ್ನು ಸ್ಥಾನಭರ್ತಿಮಾಡುವ ಅದರ ಪದ್ಧತಿಯೇ ಎಂದು ತೋರುತ್ತದೆ. . . . ನಮಗೆ ತಿಳಿದಿರುವಂತೆ ಆ ಸಮಯದಲ್ಲಿ ರೋಮಿನಲ್ಲಿ ವಿಧರ್ಮಿಗಳು, ಡಿಸೆಂಬರ್‌ 25ನ್ನು ನಾಟಾಲೀಸ್‌ ಇನ್ವಿಕ್ಟೀ ಅಂದರೆ ‘ಅಜೇಯ ಸೂರ್ಯನ’ ಜನ್ಮದಿನವಾಗಿ ಆಚರಿಸುತ್ತಿದ್ದರು.”

ಅದೇ ರೀತಿಯಾಗಿ ಎನ್‌ಸೀಕ್ಲೋಪೇಡ್ಯಾ ಈಸ್ಪಾನೀಕಾ ತಿಳಿಸುವುದು: “ಕ್ರಿಸ್ಮಸ್‌ ಆಚರಣೆಗಾಗಿ ಡಿಸೆಂಬರ್‌ 25ನೇ ತಾರೀಖನ್ನು ಆಯ್ಕೆಮಾಡಿದ್ದು ಯೇಸುವಿನ ಜನ್ಮದಿನದ ಕುರಿತಾದ ಸರಿಯಾದ ಲೆಕ್ಕಾಚಾರದ ಮೇಲಾಧಾರಿತವಾಗಿ ಅಲ್ಲ, ಬದಲಾಗಿ ರೋಮಿನಲ್ಲಿ ಆಚರಿಸಲಾಗುತ್ತಿದ್ದ ಮಕರ ಸಂಕ್ರಾಂತಿಯ ಹಬ್ಬಗಳ ಕ್ರೈಸ್ತೀಕರಣದ ಮೇಲಾಧಾರಿತವಾಗಿದೆ.” ಚಳಿಗಾಲದ ಬಾನಿನಲ್ಲಿ ಸೂರ್ಯನ ಉದಯಿಸುವಿಕೆಯನ್ನು ರೋಮನರು ಹೇಗೆ ಆಚರಿಸುತ್ತಿದ್ದರು? ಉಣ್ಣುವ, ಮೋಜುಮಾಡುವ, ಮತ್ತು ಉಡುಗೊರೆಗಳನ್ನು ನೀಡುವ ಮೂಲಕವೇ. ಈ ಆಚರಣೆಗಳನ್ನು ತೆಗೆದುಹಾಕಲು ಚರ್ಚ್‌ ಅಧಿಕಾರಿಗಳು ಹಿಂಜರಿಯುತ್ತಿದ್ದ ಕಾರಣ, ಅದನ್ನು ಸೂರ್ಯದೇವನ ಜನ್ಮದಿನದ ಬದಲಾಗಿ ಯೇಸುವಿನ ಜನ್ಮದಿನ ಎಂಬುದಾಗಿ ಕರೆದು ಅದರ ‘ಕ್ರೈಸ್ತೀಕರಣಮಾಡಿದರು.’

ಆರಂಭದಲ್ಲಿ, ಅಂದರೆ ನಾಲ್ಕನೇ ಮತ್ತು ಐದನೇ ಶತಮಾನಗಳಲ್ಲಿ ಸೂರ್ಯದೇವನ ಆರಾಧನೆ ಮತ್ತು ಪದ್ಧತಿಗಳನ್ನು ಬಿಡುವುದು ಸುಲಭವಾಗಿರಲಿಲ್ಲ. ಆದುದರಿಂದಲೇ, ವಿಧರ್ಮಿಯರು ಸೂರ್ಯದೇವನನ್ನು ಸನ್ಮಾನಿಸುತ್ತಿದ್ದ ರೀತಿಯಲ್ಲಿ ಡಿಸೆಂಬರ್‌ 25ನ್ನು ಆಚರಿಸದಂತೆ ಜೊತೆವಿಶ್ವಾಸಿಗಳನ್ನು ಎಚ್ಚರಿಸುವ ಅಗತ್ಯವನ್ನು ಕ್ಯಾಥೊಲಿಕ್‌ “ಸಂತ” ಆಗಸ್ಟಿನ್‌ (ಸಾ.ಶ. 354-430) ಕಂಡುಕೊಂಡನು. ಇಂದು ಸಹ, ಕ್ರಿಸ್ಮಸ್‌ ಆಚರಣೆಗಳಲ್ಲಿ ಪುರಾತನ ರೋಮನರ ಸೂರ್ಯದೇವನ ಆರಾಧನೆಗೆ ಸಂಬಂಧಿಸಿದ ಪದ್ಧತಿಗಳ ಅತಿಯಾದ ಪ್ರಭಾವವನ್ನು ಕಾಣಸಾಧ್ಯವಿದೆ.

ಮೋಜುಮಾಡಲು ಮತ್ತು ವಸ್ತುಗಳ ಕೊಳ್ಳುವಿಕೆಗೆ ಆದರ್ಶವಾದ ಹಬ್ಬ

ಮೋಜುಮಾಡಲು ಮತ್ತು ವಸ್ತುಗಳನ್ನು ಕೊಂಡುಕೊಳ್ಳಲು ಕ್ರಿಸ್ಮಸ್‌ ಅನ್ನು ಒಂದು ಅತಿ ಜನಪ್ರಿಯ ಹಾಗೂ ಅಂತಾರಾಷ್ಟ್ರೀಯ ಆಚರಣೆಯನ್ನಾಗಿ ಮಾಡುವುದರಲ್ಲಿ ಶತಮಾನಗಳಿಂದ ಅನೇಕ ಅಂಶಗಳು ಪ್ರಾಮುಖ್ಯ ಪಾತ್ರವನ್ನು ವಹಿಸಿವೆ. ಅಷ್ಟುಮಾತ್ರವಲ್ಲದೆ, ಚಳಿಗಾಲದ ಇತರ ಹಬ್ಬಗಳ​—⁠ಮುಖ್ಯವಾಗಿ ಉತ್ತರ ಯೂರೋಪಿನಲ್ಲಿ ಆಚರಿಸಲ್ಪಡುವಂಥವುಗಳ​—⁠ಪದ್ಧತಿಗಳು ರೋಮಿನಲ್ಲಿ ಆರಂಭಗೊಂಡ ಆಚರಣೆಯಲ್ಲಿ ಕ್ರಮೇಣವಾಗಿ ಸೇರಿಸಲ್ಪಟ್ಟವು. * ಮತ್ತು 20ನೇ ಶತಮಾನದಲ್ಲಿ, ಯಾವ ಪದ್ಧತಿಯಿಂದ ಭಾರೀ ಪ್ರಮಾಣದ ಲಾಭಗಳನ್ನು ಗಳಿಸಸಾಧ್ಯವಿತ್ತೊ ಅಂಥ ಯಾವುದೇ ಪದ್ಧತಿಯನ್ನು ಮಾರಾಟಗಾರರು ಮತ್ತು ವ್ಯಾಪಾರ ಪ್ರವೀಣರು ಅತಿ ಹುರುಪಿನಿಂದ ಬೆಂಬಲಿಸಿದರು.

ಇದರ ಪರಿಣಾಮವೇನಾಗಿದೆ? ಕ್ರಿಸ್ತನ ಜನನದ ಮಹತ್ವಾರ್ಥಕ್ಕಿಂತ ಅವನ ಜನನದ ಆಚರಣೆಯೇ ಅತಿ ಪ್ರಾಮುಖ್ಯವಾಗಿಬಿಟ್ಟಿದೆ. ಅನೇಕ ಸಂದರ್ಭಗಳಲ್ಲಿ, ಸಾಂಪ್ರದಾಯಿಕ ಕ್ರಿಸ್ಮಸ್‌ ಆಚರಣೆಯಲ್ಲಿ ಕ್ರಿಸ್ತನ ಹೆಸರು ಸಹ ಹೆಚ್ಚುಕಡಿಮೆ ಕಣ್ಮರೆಯಾಗಿದೆ. “[ಕ್ರಿಸ್ಮಸ್‌] ಒಂದು ಜಾಗತಿಕ, ಕೌಟುಂಬಿಕ ಹಬ್ಬವಾಗಿದೆ, ಮತ್ತು ಪ್ರತಿಯೊಬ್ಬರೂ ಅವರಿಗೆ ಇಷ್ಟಬಂದ ರೀತಿಯಲ್ಲಿ ಅದನ್ನು ಆಚರಿಸುತ್ತಾರೆ,” ಎಂಬುದಾಗಿ ಸ್ಪ್ಯಾನಿಷ್‌ ವಾರ್ತಾಪತ್ರಿಕೆ ಎಲ್‌ ಪಾಈಸ್‌ ತಿಳಿಸುತ್ತದೆ.

ಈ ಹೇಳಿಕೆಯು, ಸ್ಪೆಯಿನ್‌ನಲ್ಲಿ ಮತ್ತು ಲೋಕಾದ್ಯಂತ ಇರುವ ಇತರ ಅನೇಕ ದೇಶಗಳಲ್ಲಿ ಬೆಳೆಯುತ್ತಿರುವ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಕ್ರಿಸ್ಮಸ್‌ ಆಚರಣೆಯು ಅತಿ ಹೆಚ್ಚು ದುಬಾರಿಯದ್ದಾಗಿ ಪರಿಣಮಿಸುತ್ತಾ ಹೋದಂತೆ, ಕ್ರಿಸ್ತನ ಕುರಿತಾದ ಜ್ಞಾನವು ಅಳಿದುಹೋಗುತ್ತಾ ಇದೆ. ವಾಸ್ತವದಲ್ಲಿ, ಕ್ರಿಸ್ಮಸ್‌ ಹಬ್ಬದ ಪದ್ಧತಿಗಳು ಆರಂಭದಲ್ಲಿ ರೋಮನರ ಸಮಯದಲ್ಲಿ ಹೇಗಿತ್ತೋ ಅದೇ ಸ್ಥಿತಿಯನ್ನು ತಲಪುತ್ತಾ ಇದೆ​—⁠ಮೊಜುಮಾಡುವಿಕೆ, ಭರ್ಜರಿ ಔತಣ ಮತ್ತು ಉಡುಗೊರೆಗಳ ವಿನಿಮಯ ಇವೇ ಅದರಲ್ಲಿ ತುಂಬಿಕೊಂಡಿವೆ.

ಒಂದು ಮಗು ನಮಗಾಗಿ ಹುಟ್ಟಿದೆ

ಸಾಂಪ್ರದಾಯಿಕ ಕ್ರಿಸ್ಮಸ್‌ಗೆ ವಾಸ್ತವದಲ್ಲಿ ಕ್ರಿಸ್ತನೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೆ, ನಿಜ ಕ್ರೈಸ್ತರು ಕ್ರಿಸ್ತನ ಜನನ ಮತ್ತು ಜೀವನವನ್ನು ಹೇಗೆ ಸ್ಮರಿಸಬೇಕು? ಯೇಸುವಿನ ಜನನಕ್ಕೆ ಏಳು ಶತಮಾನಗಳ ಹಿಂದೆ ಯೆಶಾಯನು ಅವನ ಕುರಿತಾಗಿ ಪ್ರವಾದಿಸಿದ್ದು: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು.” (ಯೆಶಾಯ 9:⁠6) ಯೇಸುವಿನ ಜನನ ಮತ್ತು ಮುಂದಕ್ಕೆ ಅವನು ವಹಿಸಲಿದ್ದ ಪಾತ್ರ ಅತಿ ಪ್ರಾಮುಖ್ಯವಾಗಿತ್ತೆಂದು ಯೆಶಾಯನು ಸೂಚಿಸಿದ್ದೇಕೆ? ಏಕೆಂದರೆ ಯೇಸು ಒಬ್ಬ ಪರಾಕ್ರಮಿಯಾದ ಅಧಿಪತಿಯಾಗಲಿದ್ದನು. ಅವನು ಸಮಾಧಾನದ ಪ್ರಭು ಎಂಬುದಾಗಿ ಕರೆಯಲ್ಪಡಲಿದ್ದನು ಮತ್ತು ಸಮಾಧಾನಕ್ಕಾಗಲಿ ಅವನ ಆಳ್ವಿಕೆಗಾಗಲಿ ಅಂತ್ಯವಿಲ್ಲದಿರುವುದು. ಅಷ್ಟುಮಾತ್ರವಲ್ಲದೆ, ಯೇಸುವಿನ ರಾಜ್ಯಾಡಳಿತವು “ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ” ಸ್ಥಿರವಾಗಿರಲಿಕ್ಕಿತ್ತು.​—⁠ಯೆಶಾಯ 9:⁠7.

ಗಬ್ರಿಯೇಲ ದೇವದೂತನು ಮುಂದಕ್ಕೆ ಸಂಭವಿಸಲಿದ್ದ ಯೇಸುವಿನ ಜನನವನ್ನು ಮರಿಯಳಿಗೆ ಘೋಷಿಸಿದಾಗ ಯೆಶಾಯನ ಪ್ರವಾದನೆಯನ್ನು ಪ್ರತಿಧ್ವನಿಸಿದನು. ಅವನು ಮುನ್‌ತಿಳಿಸಿದ್ದು: “ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ [ಯೆಹೋವನು] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:​32, 33) ಯೇಸುವಿನ ಜನನದ ಪ್ರಧಾನ ಮಹತ್ವವು, ದೇವರ ರಾಜ್ಯದ ನೇಮಿತ ರಾಜನಾಗಿ ಅವನು ಮಾಡಲಿದ್ದ ಕೆಲಸದೊಂದಿಗೆ ಸಂಬಂಧಿಸಿತ್ತೆಂಬುದು ಸ್ಪಷ್ಟ. ಕ್ರಿಸ್ತನ ಆಳ್ವಿಕೆಯು, ನಿಮ್ಮನ್ನು ಮತ್ತು ನಿಮ್ಮ ಪ್ರಿಯ ಜನರನ್ನು ಸೇರಿಸಿ ಎಲ್ಲರಿಗೂ ಪ್ರಯೋಜನವನ್ನು ತರಬಲ್ಲದು. ವಾಸ್ತವದಲ್ಲಿ, ಅವನ ಜನನವು “ಭೂಲೋಕದಲ್ಲಿ [ದೇವರ] ಮೆಚ್ಚಿಗೆಯನ್ನು ಪಡೆದಿರುವ ಜನರಿಗೆ ಶಾಂತಿಯನ್ನು” ತರುತ್ತದೆಂದು ದೇವದೂತರು ಸೂಚಿಸಿದ್ದರು.​—⁠ಲೂಕ 2:​14, ಟುಡೇಸ್‌ ಇಂಗ್ಲಿಷ್‌ ವರ್ಷನ್‌.

ಶಾಂತಿ ಮತ್ತು ನ್ಯಾಯಭರಿತವಾದ ಲೋಕದಲ್ಲಿ ಜೀವಿಸಲು ಯಾರು ತಾನೇ ಬಯಸುವುದಿಲ್ಲ? ಆದರೆ ಕ್ರಿಸ್ತನ ಆಳ್ವಿಕೆಯು ತರುವಂಥ ಶಾಂತಿಯನ್ನು ಆನಂದಿಸಬೇಕಾದರೆ, ನಾವು ದೇವರನ್ನು ಮೆಚ್ಚಿಸಿ ಆತನೊಂದಿಗೆ ಒಂದು ಉತ್ತಮ ಸಂಬಂಧವನ್ನು ಹೊಂದಿರುವ ಅಗತ್ಯವಿದೆ. ಅಂಥ ಸಂಬಂಧವನ್ನು ಬೆಳೆಸಿಕೊಳ್ಳಲು ಪ್ರಥಮ ಹೆಜ್ಜೆಯು ದೇವರ ಮತ್ತು ಕ್ರಿಸ್ತನ ಕುರಿತಾಗಿ ಕಲಿಯುವುದೇ ಆಗಿದೆ ಎಂದು ಯೇಸು ಹೇಳಿದನು. ಅವನು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”​—⁠ಯೋಹಾನ 17:⁠3.

ಒಮ್ಮೆ ನಾವು ಯೇಸುವಿನ ಕುರಿತು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡ ಬಳಿಕ, ಅವನನ್ನು ನಾವು ಹೇಗೆ ಸ್ಮರಿಸಬೇಕೆಂದು ಅವನು ಬಯಸುತ್ತಾನೆಂಬುದರ ಕುರಿತು ಸೋಜಿಗಪಡುವ ಅಗತ್ಯವಿರುವುದಿಲ್ಲ. ಒಂದು ವಿಧರ್ಮಿ ಹಬ್ಬದ ತಾರೀಖಿನಂದೇ ತಿನ್ನುವ, ಕುಡಿಯುವ, ಮತ್ತು ಉಡುಗೊರೆಗಳನ್ನು ವಿನಿಮಯಮಾಡುವ ಮೂಲಕ ನಾವು ಅವನನ್ನು ಸ್ಮರಿಸಬೇಕೆಂದು ಅವನು ಬಯಸುತ್ತಾನೋ? ಅದು ಅಸಂಭವನೀಯವಾಗಿ ತೋರುತ್ತದೆ. ಅವನೇನು ಬಯಸುತ್ತಾನೆಂಬುದನ್ನು ಯೇಸು ತಾನು ಸಾಯುವ ಮುಂಚಿನ ರಾತ್ರಿಯಂದು ತನ್ನ ಶಿಷ್ಯರಿಗೆ ತಿಳಿಸಿದನು. ‘ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು; ನಾನೂ ಅವನನ್ನು ಪ್ರೀತಿಸುವೆನು.’​—⁠ಯೋಹಾನ 14:21.

ಯೆಹೋವನ ಸಾಕ್ಷಿಗಳು ಪವಿತ್ರ ಶಾಸ್ತ್ರಗಳ ಆಳವಾದ ಅಧ್ಯಯನವನ್ನು ಮಾಡಿದ್ದಾರೆ ಮತ್ತು ಇದು ಅವರಿಗೆ ದೇವರ ಹಾಗೂ ಯೇಸುವಿನ ಆಜ್ಞೆಗಳೇನಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಿದೆ. ಆದುದರಿಂದ, ಯೇಸುವನ್ನು ಯಾವ ರೀತಿಯಲ್ಲಿ ಸ್ಮರಿಸಬೇಕಾಗಿದೆಯೊ ಅದೇ ರೀತಿಯಲ್ಲಿ ಅವನನ್ನು ಸ್ಮರಿಸಲು ನೀವು ಶಕ್ತರಾಗುವಂತೆ ಆ ಪ್ರಾಮುಖ್ಯ ಆಜ್ಞೆಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ನಿಮಗೆ ಬೇಕಾಗಿರುವ ಸಹಾಯವನ್ನು ನೀಡಲು ಅವರು ಸಂತೋಷಿಸುತ್ತಾರೆ.

[ಪಾದಟಿಪ್ಪಣಿ]

^ ಪ್ಯಾರ. 11 ಇದರ ಎರಡು ಎದ್ದುಕಾಣುವ ಉದಾಹರಣೆಗಳು, ಕ್ರಿಸ್ಮಸ್‌ ಮರ ಮತ್ತು ಸ್ಯಾಂಟಾ ಕ್ಲಾಸ್‌ನ ಆಕೃತಿಯಾಗಿದೆ.

[ಪುಟ 6, 7ರಲ್ಲಿರುವ ಚೌಕ/ಚಿತ್ರಗಳು]

ಔತಣಕೂಟಗಳನ್ನು ಮತ್ತು ಉಡುಗೊರೆ ಕೊಡುವುದನ್ನು ಬೈಬಲ್‌ ನಿರುತ್ತೇಜಿಸುತ್ತದೋ?

ಉಡುಗೊರೆಗಳನ್ನು ಕೊಡುವುದು

ಉಡುಗೊರೆಗಳನ್ನು ನೀಡುವ ವಿಷಯವನ್ನು ಬೈಬಲ್‌ ಸಮ್ಮತಿಸುತ್ತದೆ. ಯೆಹೋವನು ತಾನೇ ‘ಎಲ್ಲಾ ಒಳ್ಳೇ ದಾನಗಳ [ಅಥವಾ ಉಡುಗೊರೆಗಳ] ಮತ್ತು ಕುಂದಿಲ್ಲದ ಎಲ್ಲಾ ವರಗಳ’ ದಾತನು ಎಂದು ಕರೆಯಲ್ಪಟ್ಟಿದ್ದಾನೆ. (ಯಾಕೋಬ 1:17) ಒಳ್ಳೇ ಹೆತ್ತವರು ತಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಅಥವಾ ಉಡುಗೊರೆಗಳನ್ನು ನೀಡುವರೆಂದು ಯೇಸು ಸೂಚಿಸಿದನು. (ಲೂಕ 11:​11-13) ಯೋಬನು ಆರೋಗ್ಯವಂತನಾದ ಬಳಿಕ ಅವನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಅವನಿಗೆ ಉಡುಗೊರೆಗಳನ್ನು ನೀಡಿದರು. (ಯೋಬ 42:11) ಆದರೆ ಈ ಯಾವುದೇ ಕೊಡುವಿಕೆಗೆ ವಿಶೇಷ ಔತಣ ದಿನಗಳ ಅಗತ್ಯವಿರಲಿಲ್ಲ. ಅಂಥ ಕೊಡುವಿಕೆಯು ಹೃದಯದಿಂದ ಪ್ರೇರೇಪಿಸಲ್ಪಟ್ಟಂಥವುಗಳಾಗಿದ್ದವು.​—⁠2 ಕೊರಿಂಥ 9:⁠7.

ಕೌಟುಂಬಿಕ ಒಕ್ಕೂಟಗಳು

ಕುಟುಂಬ ಸದಸ್ಯರು ಮುಖ್ಯವಾಗಿ ಒಂದೇ ಮನೆಯಲ್ಲಿ ಜೀವಿಸುತ್ತಿಲ್ಲದಿರುವಾಗ, ಕೌಟುಂಬಿಕ ಒಕ್ಕೂಟಗಳು ಅವರನ್ನು ಐಕ್ಯಗೊಳಿಸಲು ಬಹಳಷ್ಟನ್ನು ಮಾಡಬಲ್ಲವು. ಯೇಸು ಮತ್ತು ಅವನ ಶಿಷ್ಯರು ಕಾನಾ ಊರಿನಲ್ಲಿ ನಡೆದ ಒಂದು ಮದುವೆ ಸಮಾರಂಭಕ್ಕೆ ಹಾಜರಾದರು. ಮತ್ತು ಇದು ನಿಸ್ಸಂಶಯವಾಗಿಯೂ ಕುಟುಂಬ ಮತ್ತು ಸ್ನೇಹಿತರ ಒಂದು ದೊಡ್ಡ ಒಕ್ಕೂಟವಾಗಿತ್ತು. (ಯೋಹಾನ 2:​1-10) ಮತ್ತು ಪೋಲಿಹೋಗಿದ್ದ ಮಗನ ಕುರಿತಾದ ಯೇಸುವಿನ ಸಾಮ್ಯದಲ್ಲಿ, ಆ ಮಗನು ಹಿಂದಿರುಗಿದಾಗ ಅವನ ತಂದೆಯು ಇಡೀ ಕುಟುಂಬದೊಂದಿಗೆ ಒಂದು ದೊಡ್ಡ ಔತಣಮಾಡಿ ಸಂಭ್ರಮಪಟ್ಟನು ಮತ್ತು ಅಲ್ಲಿ ವಾದ್ಯನರ್ತನಗಳೂ ಇದ್ದವು.​—⁠ಲೂಕ 15:​21-25.

ಒಳ್ಳೇ ಊಟವನ್ನು ಆನಂದಿಸುವುದು

ದೇವರ ಸೇವಕರು ತಮ್ಮ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ, ಅಥವಾ ಜೊತೆ ಆರಾಧಕರೊಂದಿಗೆ ಸ್ವಾದಿಷ್ಟವಾದ ಆಹಾರವನ್ನು ಆನಂದಿಸುವುದರ ಕುರಿತಾಗಿ ಬೈಬಲ್‌ ಆಗಿಂದಾಗ್ಗೆ ತಿಳಿಸುತ್ತದೆ. ಮೂವರು ದೇವದೂತರು ಅಬ್ರಹಾಮನನ್ನು ಭೇಟಿಮಾಡಿದಾಗ, ಅವನು ಅವರಿಗಾಗಿ ಒಂದು ಔತಣವನ್ನು ಮಾಡಿದನು ಮತ್ತು ಆ ಔತಣದಲ್ಲಿ ಮಾಂಸ, ಹಾಲು, ಮೊಸರು, ಮತ್ತು ರೊಟ್ಟಿಗಳು ಇದ್ದವು. (ಆದಿಕಾಂಡ 18:​6-8) ‘ಅನ್ನಪಾನಗಳನ್ನು ತೆಗೆದುಕೊಂಡು ಸುಖವನ್ನನುಭವಿಸುವುದು’ ದೇವರಿಂದ ಬಂದಿರುವ ಉಡುಗೊರೆಯೆಂದು ಸೊಲೊಮೋನನು ವರ್ಣಿಸಿದನು.​—⁠ಪ್ರಸಂಗಿ 3:13; 8:15.

ಆದುದರಿಂದ, ನಾವು ನಮ್ಮ ಬಂಧುಬಳಗದವರೊಂದಿಗೆ ಉತ್ತಮ ಆಹಾರವನ್ನು ಆನಂದಿಸಬೇಕೆಂದು ದೇವರು ಬಯಸುತ್ತಾನೆ ಮತ್ತು ಉಡುಗೊರೆಗಳನ್ನು ಕೊಡುವುದನ್ನು ಆತನು ಸಮ್ಮತಿಸುತ್ತಾನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವರುಷದಾದ್ಯಂತ ಯಾವುದೇ ಸಮಯದಲ್ಲಿ ಇದನ್ನು ಮಾಡಲು ನಮಗೆ ಬೇಕಾದಷ್ಟು ಅವಕಾಶಗಳಿರುತ್ತವೆ.