ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ಮರಿಸಬೇಕಾದ ಒಂದು ಜನನ

ಸ್ಮರಿಸಬೇಕಾದ ಒಂದು ಜನನ

ಸ್ಮರಿಸಬೇಕಾದ ಒಂದು ಜನನ

‘ಈ ಹೊತ್ತು ನಿಮಗೋಸ್ಕರ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ.’​—⁠ಲೂಕ 2:11.

ಸುಮಾರು ಎರಡು ಸಾವಿರ ವರುಷಗಳ ಹಿಂದೆ, ಬೇತ್ಲೆಹೇಮಿನ ಒಬ್ಬ ಸ್ತ್ರೀ ಒಂದು ಗಂಡು ಮಗುವಿಗೆ ಜನ್ಮಕೊಟ್ಟಳು. ಸ್ಥಳಿಕ ನಿವಾಸಿಗಳಲ್ಲಿ ಕೊಂಚ ಮಂದಿ ಮಾತ್ರವೇ ಈ ಜನನದ ಮಹತ್ವವನ್ನು ಗ್ರಹಿಸಿದರು. ಆದರೆ ರಾತ್ರಿವೇಳೆ ಹೊಲದಲ್ಲಿ ತಮ್ಮ ಮಂದೆಯನ್ನು ಮೇಯಿಸುತ್ತಿದ್ದ ಕೆಲವು ಕುರುಬರು, ದೇವದೂತರ ಒಂದು ದೊಡ್ಡ ಗುಂಪನ್ನು ನೋಡಿದರು ಮತ್ತು ಆ ದೇವದೂತರು ಈ ರೀತಿಯಾಗಿ ಹಾಡುವುದನ್ನೂ ಕೇಳಿಸಿಕೊಂಡರು: “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ.”​—⁠ಲೂಕ 2:​8-14.

ಅನಂತರ ಆ ಕುರುಬರು, ದೇವದೂತರು ಸೂಚಿಸಿದಂತೆಯೇ ಮರಿಯಳನ್ನೂ ಅವಳ ಗಂಡನಾದ ಯೋಸೇಫನನ್ನೂ ಕೊಟ್ಟಿಗೆಯಲ್ಲಿ ಕಂಡುಕೊಂಡರು. ಮಗುವಿಗೆ ಯೇಸು ಎಂದು ಹೆಸರಿಟ್ಟಿದ್ದ ಮರಿಯಳು ಅವನನ್ನು ಗೋದಲಿಯಲ್ಲಿ, ಅಥವಾ ಕೊಟ್ಟಿಗೆಯಲ್ಲಿನ ಮೇವು ಹಾಕುವ ಗೋದಣಿಯಲ್ಲಿ ಮಲಗಿಸಿದ್ದಳು. (ಲೂಕ 1:​31; 2:12) ಈಗ, ಎರಡು ಸಾವಿರ ವರುಷಗಳ ಅನಂತರ, ಮಾನವಕುಲದ ಸುಮಾರು ಮೂರರಲ್ಲೊಂದು ಭಾಗ ಯೇಸು ಕ್ರಿಸ್ತನನ್ನು ಹಿಂಬಾಲಿಸುವುದಾಗಿ ಹೇಳಿಕೊಳ್ಳುತ್ತಿದೆ. ಅಷ್ಟುಮಾತ್ರವಲ್ಲದೆ, ಯೇಸು ಕ್ರಿಸ್ತನ ಜನನಕ್ಕೆ ಸಂಬಂಧಿಸಿದ ಘಟನೆಗಳು, ಬಹುಶಃ ಮಾನವ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಹೇಳಲ್ಪಟ್ಟಿರುವ ಕಥೆಗೆ ಆಧಾರವಾಗಿವೆ.

ಬಲವಾದ ಕ್ಯಾಥೊಲಿಕ್‌ ಸಾಂಪ್ರದಾಯದಿಂದ ತುಂಬಿದ ಮತ್ತು ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುವುದರಲ್ಲಿ ಹೆಸರುವಾಸಿಯಾಗಿರುವ ಸ್ಪೆಯಿನ್‌ ದೇಶವು, ಬೇತ್ಲೆಹೇಮಿನ ಆ ಅದ್ವಿತೀಯ ರಾತ್ರಿಯನ್ನು ಸ್ಮರಿಸುವ ಸಲುವಾಗಿ ಅನೇಕ ವಿಧಾನಗಳನ್ನು ವಿಕಸಿಸಿಕೊಂಡಿದೆ.

ಸ್ಪೆಯಿನ್‌ ದೇಶದ ಕ್ರಿಸ್ಮಸ್‌

ಹದಿಮೂರನೇ ಶತಮಾನದಿಂದ, ಸ್ಪೆಯಿನ್‌ ದೇಶದ ಆಚರಣೆಗಳಲ್ಲಿ ಯೇಸುವಿನ ಜನನದ ದೃಶ್ಯವನ್ನು ರಚಿಸುವುದು ಒಂದು ಅತಿ ಜನಪ್ರಿಯ ಅಂಶವಾಗಿರುತ್ತದೆ. ಅನೇಕ ಕುಟುಂಬಗಳು, ಯೇಸುವನ್ನು ಮಲಗಿಸಲಾಗಿದ್ದ ಗೋದಲಿಯನ್ನು ಹೋಲುವ ಒಂದು ಸಣ್ಣ ಗೋದಲಿಯನ್ನು ಮಾಡುತ್ತವೆ. ಕುರುಬರು, ಮೇಜೈ (ಅಥವಾ “ಮೂರು ರಾಜರು”), ಯೋಸೇಫ, ಮರಿಯ ಮತ್ತು ಯೇಸುವನ್ನು ಸೂಚಿಸುವ ಮಣ್ಣಿನ ಗೊಂಬೆಗಳನ್ನು ಇಡಲಾಗುತ್ತದೆ. ಕ್ರಿಸ್ಮಸ್‌ ಸಮಯಾವಧಿಯಲ್ಲಿ ಪುರಭವನಗಳ ಸಮೀಪದಲ್ಲಿ ಅನೇಕವೇಳೆ, ಹೆಚ್ಚುಕಡಿಮೆ ಸಹಜಗಾತ್ರದ ಗೊಂಬೆಗಳು ನಿಲ್ಲಿಸಲ್ಪಟ್ಟಿರುವ, ಯೇಸುವಿನ ಜನನದ ದೃಶ್ಯಗಳನ್ನು ರಚಿಸಲಾಗುತ್ತದೆ. ಈ ಪದ್ಧತಿಯನ್ನು ಇಟಲಿಯಲ್ಲಿ ಮೊದಲಾಗಿ ಅಸಿಸೀಯ ಫ್ರಾನ್ಸಿಸ್‌ ಎಂಬವನು ಸ್ಥಾಪಿಸಿದನು. ಯೇಸುವಿನ ಜನನದ ಕುರಿತಾದ ಸುವಾರ್ತಾ ವೃತ್ತಾಂತಗಳ ಕಡೆಗೆ ಜನರ ಗಮನವನ್ನು ಸೆಳೆಯುವುದೇ ಅವನ ಉದ್ದೇಶವಾಗಿತ್ತು. ಅನಂತರ, ಫ್ರಾನ್ಸಿಸ್ಕನ್‌ ಸನ್ಯಾಸಿಗಳು ಇದನ್ನು ಸ್ಪೆಯಿನ್‌ ಮತ್ತು ಇತರ ಅನೇಕ ದೇಶಗಳಲ್ಲಿ ಪ್ರಸಿದ್ಧಪಡಿಸಿದರು.

ಇತರ ದೇಶಗಳಲ್ಲಿ ಸ್ಯಾಂಟಾ ಕ್ಲಾಸ್‌ ಹೇಗೆ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತಾನೋ ಅಂತೆಯೇ ಸ್ಪೆಯಿನ್‌ ದೇಶದ ಕ್ರಿಸ್ಮಸ್‌ ಆಚರಣೆಗಳಲ್ಲಿ ಮೇಜೈಯರು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತಾರೆ. ಜನವರಿ 6ರ ಡೀಆ ಡೆ ರೇಇಸ್‌ (ರಾಜರುಗಳ ದಿನ)ದಂದು ಮೇಜೈಯರು ಸ್ಪೆಯಿನ್‌ನ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಾರೆಂದು ಹೇಳಲಾಗುತ್ತದೆ. ಇದನ್ನು, ನವಜಾತ ಯೇಸುವಿಗೆ ಮೇಜೈಯರು ಉಡುಗೊರೆಗಳನ್ನು ತಂದರು ಎಂಬ ಜನಪ್ರಿಯ ನಂಬಿಕೆಯ ಅನುಕರಣೆಯಲ್ಲಿ ಮಾಡಲಾಗುತ್ತದೆ. ಹಾಗಿದ್ದರೂ, ಯೇಸುವನ್ನು ಭೇಟಿಮಾಡಲು ಎಷ್ಟು ಮಂದಿ ಮೇಜೈಯರು ಬಂದರು ಎಂಬುದನ್ನು ಸುವಾರ್ತೆಗಳ ವೃತ್ತಾಂತವು ತಿಳಿಸುವುದಿಲ್ಲ. ಆದರೆ ಈ ವಿಷಯ ಕೇವಲ ಕೊಂಚವೇ ಮಂದಿಗೆ ತಿಳಿದಿದೆ. ಮೇಜೈಯರನ್ನು ರಾಜರುಗಳಾಗಿ ಅಲ್ಲ ಜೋಯಿಸರು ಎಂಬುದಾಗಿ ಹೆಚ್ಚು ನಿಷ್ಕೃಷ್ಟವಾಗಿ ಗುರುತಿಸಲಾಗಿದೆ. * ಅಷ್ಟುಮಾತ್ರವಲ್ಲದೆ, ಮೇಜೈಯರ ಭೇಟಿಯ ಅನಂತರ ಹೆರೋದ ರಾಜನು ಯೇಸುವನ್ನು ಕೊಲ್ಲಬೇಕೆಂಬ ತನ್ನ ಪ್ರಯತ್ನದಲ್ಲಿ, ಬೇತ್ಲೆಹೇಮಿನಲ್ಲಿದ್ದ “ಎರಡು ವರುಷದೊಳಗಿನ” ಎಲ್ಲಾ ಗಂಡು ಮಕ್ಕಳನ್ನು ಕೊಲ್ಲಿಸಿದನು. ಇದು ತಾನೇ, ಅವರ ಭೇಟಿಯು ಯೇಸು ಹುಟ್ಟಿದ ಕೂಡಲೆ ಅಲ್ಲ ಬದಲಾಗಿ ಸ್ವಲ್ಪ ಸಮಯದ ಅನಂತರ ಸಂಭವಿಸಿತು ಎಂಬುದನ್ನು ಸೂಚಿಸುತ್ತದೆ.​—⁠ಮತ್ತಾಯ 2:​11, 16.

ಹನ್ನೆರಡನೇ ಶತಮಾನದಿಂದ ಸ್ಪೆಯಿನ್‌ನ ಕೆಲವು ಪಟ್ಟಣಗಳು, ಯೇಸುವಿನ ಜನನದ ಕುರಿತಾದ ನಾಟಕ ಪ್ರದರ್ಶನಗಳನ್ನು ತೋರಿಸಿವೆ. ಇದರಲ್ಲಿ ಕುರುಬರು ಬೇತ್ಲೆಹೇಮಿಗೆ ಭೇಟಿನೀಡುವುದು ಮತ್ತು ಅನಂತರ ಮೇಜೈಯರು ಭೇಟಿನೀಡುವುದು ಮುಂತಾದ ವಿಷಯಗಳೂ ಪ್ರದರ್ಶಿಸಲ್ಪಡುತ್ತವೆ. ಇಂದು ಸ್ಪೆಯಿನ್‌ ದೇಶದ ಹೆಚ್ಚಿನ ನಗರಗಳಲ್ಲಿ, ಜನವರಿ 5ರಂದು ಕಾಬಾಲ್ಗಾಟಾ, ಅಥವಾ ಮೆರವಣಿಗೆಯನ್ನು ಏರ್ಪಡಿಸಲಾಗುತ್ತದೆ. ಆ ದಿನದಂದು, “ಮೂರು ರಾಜರು” ಶೃಂಗರಿಸಲ್ಪಟ್ಟ ಬಂಡಿಗಳಲ್ಲಿ ಕುಳಿತು ನಗರದ ಕೇಂದ್ರ ಸ್ಥಳದಲ್ಲಿ ವೀಕ್ಷಕರಿಗೆ ಮಿಠಾಯಿಗಳನ್ನು ಹಂಚುತ್ತಾ ಮೆರವಣಿಗೆ ಹೋಗುತ್ತಾರೆ. ಸಾಂಪ್ರದಾಯಿಕ ಕ್ರಿಸ್ಮಸ್‌ ಅಲಂಕಾರಗಳು ಮತ್ತು ವೀಯೇಸೀಕೋಸ್‌ (ಕ್ರಿಸ್ಮಸ್‌ ಹಾಡುಗಳು) ಈ ಹಬ್ಬದ ಸಂದರ್ಭಕ್ಕೆ ಕಳೆದುಂಬುತ್ತವೆ.

ಅಧಿಕಾಂಶ ಸ್ಪ್ಯಾನಿಷ್‌ ಕುಟುಂಬಗಳು ಕ್ರಿಸ್ಮಸ್‌ನ ಹಿಂದಿನ ದಿನದ (ಡಿಸೆಂಬರ್‌ 24ರ) ಸಂಜೆ ವಿಶೇಷ ಊಟವನ್ನು ಏರ್ಪಡಿಸುತ್ತವೆ. ಸಾಂಪ್ರದಾಯಿಕ ಊಟದಲ್ಲಿ ಟುರೊನ್‌ (ಬಾದಾಮ್‌ ಮತ್ತು ಜೇನುತುಪ್ಪದಿಂದ ಮಾಡಿದಂಥ ಸಿಹಿ ತಿಂಡಿ), ಮಾರ್ಜಿಪಾನ್‌, ಒಣಗಿಸಿರುವ ಹಣ್ಣುಹಂಪಲು, ಸುಟ್ಟ ಕುರಿಮರಿಯ ಮಾಂಸ, ಮತ್ತು ಸಮುದ್ರ ಆಹಾರ ಸೇರಿರುತ್ತವೆ. ಕುಟುಂಬ ಸದಸ್ಯರು​—⁠ದೂರದ ಸ್ಥಳಗಳಲ್ಲಿ ವಾಸಿಸುವವರು ಸಹ​—⁠ವಿಶೇಷ ಪ್ರಯತ್ನವನ್ನು ಮಾಡಿ ಈ ಸಂದರ್ಭಕ್ಕಾಗಿ ಒಟ್ಟುಸೇರುತ್ತಾರೆ. ಕುಟುಂಬವು ಜನವರಿ 6ರಂದು ಇನ್ನೊಂದು ಸಾಂಪ್ರದಾಯಿಕ ಊಟದ ಸಮಯದಲ್ಲಿ ರೊಸ್‌ಕೊನ್‌ ಡೆ ರಾಯಿಸ್‌ ಎಂಬ ರಿಂಗಿನಾಕಾರದ “ರಾಜರ” ಕೇಕ್‌ ಎಂಬುದಾಗಿ ಕರೆಯಲ್ಪಡುವ ಕೇಕನ್ನು ತಿನ್ನುತ್ತಾರೆ ಮತ್ತು ಆ ಕೇಕಿನಲ್ಲಿ ಸೊರ್‌ಪ್ರೇಸಾ (ಸಣ್ಣ ಗೊಂಬೆ)ವನ್ನು ಅಡಗಿಸಿಡಲಾಗಿರುತ್ತದೆ. ರೋಮನರ ಕಾಲದಲ್ಲಿ ಇದೇ ರೀತಿಯ ಪದ್ಧತಿಯಿತ್ತು ಮತ್ತು ಅಡಗಿಸಿಟ್ಟಿರುವ ಗೊಂಬೆಯು ಒಬ್ಬ ದಾಸನ ಕೇಕ್‌ ತುಂಡಿನಲ್ಲಿ ಸಿಕ್ಕಿದರೆ ಅವನಿಗೆ ಒಂದು ದಿನದ ಮಟ್ಟಿಗೆ “ರಾಜ”ನಾಗುವ ಅವಕಾಶ ದೊರಕುತ್ತಿತ್ತು.

“ವರುಷದ ಅತಿ ಸಂತೋಷಕರ ಮತ್ತು ಕಾರ್ಯಮಗ್ನ ಸಮಯ”

ಸ್ಥಳಿಕವಾಗಿ ಯಾವುದೇ ಪದ್ಧತಿಗಳು ಬೆಳೆದುಬಂದಿರಲಿ, ಕ್ರಿಸ್ಮಸ್‌ ಅಂತೂ ಈಗ ಲೋಕದ ಪ್ರಧಾನ ಹಬ್ಬವಾಗಿದೆ. ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ಕ್ರಿಸ್ಮಸ್‌ ಅನ್ನು “ಲೋಕದಾದ್ಯಂತ ಇರುವ ಕೋಟ್ಯಂತರ ಕ್ರೈಸ್ತರಿಗೆ ಮತ್ತು ಕೆಲವು ಕ್ರೈಸ್ತೇತರರಿಗೆ ವರುಷದ ಅತಿ ಸಂತೋಷಕರ ಮತ್ತು ಕಾರ್ಯಮಗ್ನ ಸಮಯ” ಎಂದು ವರ್ಣಿಸುತ್ತದೆ. ಈ ರೀತಿಯ ಆಚರಣೆಯು ಪ್ರಯೋಜನದಾಯಕ ಸಂಗತಿಯಾಗಿದೆಯೋ?

ಕ್ರಿಸ್ತನ ಜನನವು ಒಂದು ಐತಿಹಾಸಿಕ ಘಟನೆಯಾಗಿತ್ತು ಎಂಬುದು ನಿಜ. ‘ಮನುಷ್ಯರೊಳಗೆ ಸಮಾಧಾನದ’ ಮುನ್‌ಸೂಚಕವಾಗಿದೆ ಎಂದು ದೇವದೂತರು ಘೋಷಿಸಿದ ಸಂಗತಿ ತಾನೇ ಈ ಜನನದ ಮಹತ್ವಕ್ಕೆ ಸ್ಪಷ್ಟ ಪುರಾವೆಯನ್ನು ನೀಡುತ್ತದೆ.

ಹಾಗಿದ್ದರೂ, “ಕ್ರೈಸ್ತತ್ವದ ಆರಂಭದ ದಿನಗಳಲ್ಲಿ ಯೇಸುವಿನ ಜನನವನ್ನು ಒಂದು ಹಬ್ಬವಾಗಿ ಆಚರಿಸಲಾಗುತ್ತಿರಲಿಲ್ಲ,” ಎಂಬುದಾಗಿ ಸ್ಪ್ಯಾನಿಷ್‌ ಪತ್ರಕರ್ತ ಕ್ವಾನ್‌ ಆರ್ಯಾಸ್‌ ತಿಳಿಸುತ್ತಾನೆ. ಹಾಗಾದರೆ, ಕ್ರಿಸ್ಮಸ್‌ ಆಚರಣೆಯು ಎಲ್ಲಿಂದ ಆರಂಭವಾಯಿತು? ಯೇಸುವಿನ ಜನನ ಮತ್ತು ಜೀವನವನ್ನು ಸ್ಮರಿಸಿಕೊಳ್ಳಲು ಅತ್ಯುತ್ತಮವಾದ ವಿಧ ಯಾವುದು? ಮುಂದಿನ ಲೇಖನದಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವಿರಿ.

[ಪಾದಟಿಪ್ಪಣಿ]

^ ಪ್ಯಾರ. 8 ಲಾ ಸಾಗ್ರಾತಾ ಎಸ್‌ಕ್ರೀಟೂರಾ​—⁠ಟೆಕ್ಸ್‌ಟೋ ಈ ಕೋಮೆನ್ಟೇರ್ಯೋ ಪೋರ್‌ ಪ್ರೋಫೆಸೋರೆಸ್‌ ಡೆ ಲಾ ಕೊಮ್ಪೇನ್ಯೀಆ ಡೆ ಕೇಸ್ಯೂಸ್‌ (ಪವಿತ್ರ ಶಾಸ್ತ್ರ​—⁠ಯೇಸು ಸಂಘದ ಪ್ರೋಫೆಸರುಗಳಿಂದ ಗ್ರಂಥಪಾಠ ಮತ್ತು ವ್ಯಾಖ್ಯಾನ) ವಿವರಿಸುವುದೇನೆಂದರೆ, “ಪಾರಸಿಯರು, ಮೇದ್ಯರು, ಮತ್ತು ಕಸ್ದೀಯರಲ್ಲಿ ಮೇಜೈ ಎಂಬವರು ಪುರೋಹಿತವರ್ಗದವರನ್ನು ಸೂಚಿಸುತ್ತಾರೆ ಮತ್ತು ಅವರು ಇಂದ್ರಜಾಲವಿದ್ಯೆ, ಜೋತಿಷ್ಯಶಾಸ್ತ್ರ, ಹಾಗೂ ಮಾಟಮಂತ್ರಗಳಿಗೆ ಇಂಬುಕೊಡುತ್ತಿದ್ದರು.” ಹಾಗಿದ್ದರೂ ಮಧ್ಯಪೂರ್ವ ಯುಗಗಳಷ್ಟಕ್ಕೆ, ಯೇಸುವನ್ನು ಭೇಟಿಮಾಡಲು ಹೋದ ಮೇಜೈಯರನ್ನು ಸಂತರನ್ನಾಗಿ ಮಾಡಲಾಯಿತು ಮತ್ತು ಅವರಿಗೆ ಮೆಲ್ಕಿಯೊರ್‌, ಗಾಸ್‌ಪಾರ್‌, ಹಾಗೂ ಬಾಲ್ಟಾಜಾರ್‌ ಎಂಬ ಹೆಸರುಗಳು ಸಹ ಕೊಡಲ್ಪಟ್ಟವು. ಅವರ ಅವಶೇಷಗಳನ್ನು ಜರ್ಮನಿಯ ಕೊಲೋನ್‌ ನಗರದ ಕತೀಡ್ರಲ್‌ನಲ್ಲಿ ಇಡಲಾಗಿವೆಯೆಂದು ಹೇಳಲಾಗುತ್ತದೆ.