ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು ಅಪ್ರಸನ್ನಗೊಳಿಸುವ ಪದ್ಧತಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ

ದೇವರನ್ನು ಅಪ್ರಸನ್ನಗೊಳಿಸುವ ಪದ್ಧತಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ

ದೇವರನ್ನು ಅಪ್ರಸನ್ನಗೊಳಿಸುವ ಪದ್ಧತಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ

ಆಫ್ರಿಕದ ಸುಡು ಬಿಸಿಲಿನಲ್ಲಿ ಚಿಕ್ಕ ಅಂಗಳವೊಂದರಲ್ಲಿ ಶವಪೆಟ್ಟಿಗೆಯೊಂದು ತೆರೆದು ಇಡಲ್ಪಟ್ಟಿದೆ. ಶೋಕಿಸುತ್ತಿರುವವರು ತಮ್ಮ ದುಃಖವನ್ನು ವ್ಯಕ್ತಪಡಿಸಲು ಅದನ್ನು ದಾಟಿಹೋಗುತ್ತಿರುವಾಗ, ಒಬ್ಬ ಮುದುಕನು ತುಸು ಹೊತ್ತು ಅಲ್ಲೇ ನಿಲ್ಲುತ್ತಾನೆ. ದುಃಖದಿಂದ ತುಂಬಿದವನಾಗಿ, ಅವನು ಸತ್ತ ಮನುಷ್ಯನ ಮುಖದ ಹತ್ತಿರಕ್ಕೆ ಬಗ್ಗಿ ಹೀಗೆ ಮಾತಾಡಲು ಆರಂಭಿಸುತ್ತಾನೆ: “ನೀನು ಹೋಗುತ್ತಿದ್ದೀ ಅಂತ ಯಾಕೆ ನನಗೆ ಹೇಳಲಿಲ್ಲ? ನನ್ನನ್ನು ಹೀಗೇಕೆ ಬಿಟ್ಟುಹೋದೆ? ನೀನೀಗ ಹಿಂದಿರುಗಿರುವುದರಿಂದ, ನನಗೆ ಸಹಾಯಮಾಡುವುದನ್ನು ಮುಂದುವರಿಸುವಿಯಾ?”

ಆಫ್ರಿಕದ ಮತ್ತೊಂದು ಭಾಗದಲ್ಲಿ, ಒಂದು ಮಗು ಹುಟ್ಟುತ್ತದೆ. ಅದನ್ನು ನೋಡಲು ಯಾರಿಗೂ ಅನುಮತಿಯಿರುವುದಿಲ್ಲ. ಸ್ವಲ್ಪ ಸಮಯ ಗತಿಸಿದ ತರುವಾಯವೇ ಮಗುವನ್ನು ಬೇರೆಯವರು ನೋಡುವಂತೆ ಹೊರಗೆ ತರಲಾಗುತ್ತದೆ ಮತ್ತು ಆಗ ಸಾಂಪ್ರದಾಯಿಕವಾಗಿ ಒಂದು ಹೆಸರನ್ನು ಕೊಡಲಾಗುತ್ತದೆ.

ಕೆಲವು ಜನರಿಗೆ, ಮೃತ ವ್ಯಕ್ತಿಯೊಂದಿಗೆ ಮಾತಾಡುವುದು ಮತ್ತು ನವಜನಿತ ಶಿಶುವನ್ನು ಇತರರ ದೃಷ್ಟಿಯಿಂದ ಮರೆಯಾಗಿ ಇಡುವುದೆಲ್ಲವೂ ವಿಚಿತ್ರವಾಗಿ ತೋರಬಹುದು. ಆದರೂ, ಕೆಲವು ಸಂಸ್ಕೃತಿಗಳು ಮತ್ತು ಸಮಾಜಗಳಲ್ಲಿ, ಜನನ-ಮರಣದ ವಿಷಯದಲ್ಲಿ ಜನರು ನಡಕೊಳ್ಳುವ ರೀತಿ ಹಾಗೂ ಅವರಿಗಿರುವ ದೃಷ್ಟಿಕೋನಗಳು ಸತ್ತವರು ನಿಜಕ್ಕೂ ಸತ್ತಿರುವುದಿಲ್ಲ, ಬದಲಿಗೆ ಜೀವಂತರಾಗಿದ್ದಾರೆ ಹಾಗೂ ಪ್ರಜ್ಞೆಯುಳ್ಳವರಾಗಿದ್ದಾರೆ ಎಂಬ ಬಲವಾದ ನಂಬಿಕೆಯಿಂದ ಪ್ರಭಾವಿಸಲ್ಪಟ್ಟಿವೆ.

ಈ ನಂಬಿಕೆಯು ಎಷ್ಟು ಬಲವಾದದ್ದಾಗಿದೆ ಎಂದರೆ, ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಒಳಗೂಡಿಸುವ ಪದ್ಧತಿಗಳು ಮತ್ತು ಧಾರ್ಮಿಕ ಸಂಸ್ಕಾರಗಳಲ್ಲಿ ಇದು ಹೆಣೆಯಲ್ಪಟ್ಟಿದೆ. ಉದಾಹರಣೆಗೆ, ಜೀವನದಲ್ಲಿನ ಪ್ರಮುಖ ಹಂತಗಳು​—⁠ಜನನ, ಪ್ರೌಢಾವಸ್ಥೆ, ವಿವಾಹ, ಮಕ್ಕಳಹಡೆಯುವಿಕೆ, ಮತ್ತು ಮರಣದಂಥ ಹಂತಗಳು ಪೂರ್ವಜರ ಆತ್ಮ ಜಗತ್ತಿಗೆ ನಡೆಸುವ ಸ್ಥಿತ್ಯಂತರದ ಭಾಗವಾಗಿವೆ ಎಂದು ಲಕ್ಷಾಂತರ ಮಂದಿ ನಂಬುತ್ತಾರೆ. ಆ ಆತ್ಮ ಜಗತ್ತಿನಲ್ಲಿದ್ದುಕೊಂಡು, ಸತ್ತ ವ್ಯಕ್ತಿಯು ತಾನು ಬಿಟ್ಟುಬಂದವರ ಜೀವಿತಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಾನೆ ಮತ್ತು ಪುನರ್ಜನ್ಮದ ಮೂಲಕ ಅವನು ತನ್ನ ಜೀವನಚಕ್ರವನ್ನು ಮುಂದುವರಿಸಬಲ್ಲನು ಎಂದು ನಂಬಲಾಗುತ್ತದೆ.

ಈ ಚಕ್ರದ ಎಲ್ಲಾ ಹಂತಗಳಲ್ಲಿ ಸುಗಮವಾದ ಸ್ಥಿತ್ಯಂತರ ಹೊಂದುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಹಲವಾರು ಪದ್ಧತಿಗಳು ಮತ್ತು ಧಾರ್ಮಿಕ ಸಂಸ್ಕಾರಗಳು ಆಚರಿಸಲ್ಪಡುತ್ತವೆ. ಈ ಪದ್ಧತಿಗಳೆಲ್ಲವೂ, ಮರಣದ ಸಮಯದಲ್ಲಿ ನಮ್ಮಿಂದ ಏನೋ ಹೊರಗೆ ಹೋಗುತ್ತದೆ ಎಂಬ ನಂಬಿಕೆಯಿಂದ ಪ್ರಭಾವಿಸಲ್ಪಟ್ಟಿವೆ. ಈ ನಂಬಿಕೆಯೊಂದಿಗೆ ಸಂಬಂಧಪಟ್ಟಿರುವ ಯಾವುದೇ ಪದ್ಧತಿಗಳನ್ನು ಸತ್ಯ ಕ್ರೈಸ್ತರು ತ್ಯಜಿಸುತ್ತಾರೆ. ಏಕೆ?

ಸತ್ತವರ ಸ್ಥಿತಿ ಏನಾಗಿದೆ?

ಸತ್ತವರ ಸ್ಥಿತಿಯ ಕುರಿತು ವರ್ಣಿಸುವಾಗ ಬೈಬಲು ಸ್ಪಷ್ಟವಾದ ಮಾಹಿತಿಯನ್ನು ಕೊಡುತ್ತದೆ. ಅದು ಸರಳವಾಗಿ ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ಅವರು ಸತ್ತಾಗಲೇ ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದು ಹೋದವು; . . . ನೀನು ಸೇರಬೇಕಾದ ಪಾತಾಳದಲ್ಲಿ [ಸಮಾಧಿಯಲ್ಲಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 6, 10) ದೇವರ ಸತ್ಯ ಆರಾಧಕರು ಈ ಮೂಲಭೂತ ಬೈಬಲ್‌ ಸತ್ಯವನ್ನು ದೀರ್ಘಕಾಲದಿಂದ ತಮ್ಮದಾಗಿಸಿಕೊಂಡಿದ್ದಾರೆ. ಮಾನವನಲ್ಲಿರುವ ಯಾವ ಭಾಗವೂ ಅಮರವಾಗಿರುವುದಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಮತ್ತು ಸತ್ತವರ ಆತ್ಮಗಳು ಅಸ್ತಿತ್ವದಲ್ಲಿಲ್ಲ ಎಂಬುದನ್ನು ಅವರು ತಿಳಿದಿದ್ದಾರೆ. (ಕೀರ್ತನೆ 146:4) ಪುರಾತನ ಕಾಲಗಳಲ್ಲಿ ಯೆಹೋವನು ತನ್ನ ಜನರಿಗೆ, ಸತ್ತವರು ಪ್ರಜ್ಞೆಯುಳ್ಳವರು ಮತ್ತು ಅವರು ಜೀವಿತರ ಮೇಲೆ ಪ್ರಭಾವವನ್ನು ಬೀರಬಲ್ಲರು ಎಂಬ ನಂಬಿಕೆಗೆ ಸಂಬಂಧಿಸಿರುವ ಪದ್ಧತಿಗಳು ಅಥವಾ ಧಾರ್ಮಿಕ ಸಂಸ್ಕಾರಗಳಿಂದ ತಮ್ಮನ್ನು ಸಂಪೂರ್ಣವಾಗಿ ಬೇರ್ಪಡಿಸಿಕೊಳ್ಳುವಂತೆ ಕಡಾಖಂಡಿತವಾಗಿ ಆಜ್ಞಾಪಿಸಿದ್ದನು.​—⁠ಧರ್ಮೋಪದೇಶಕಾಂಡ 14:1; 18:9-13; ಯೆಶಾಯ 8:19, 20.

ಪ್ರಥಮ ಶತಮಾನದ ಕ್ರೈಸ್ತರು ಸಹ ತದ್ರೀತಿಯಲ್ಲೇ ಸುಳ್ಳು ಧಾರ್ಮಿಕ ಬೋಧನೆಗೆ ಸಂಬಂಧಿಸಿದ್ದ ಯಾವುದೇ ಸಾಂಪ್ರದಾಯಿಕ ಪದ್ಧತಿಗಳು ಅಥವಾ ಧಾರ್ಮಿಕ ಸಂಸ್ಕಾರಗಳಿಂದ ದೂರವಿದ್ದರು. (2 ಕೊರಿಂಥ 6:15-17) ಇಂದು, ಯೆಹೋವನ ಸಾಕ್ಷಿಗಳು ಸಹ, ಅವರು ಯಾವುದೇ ಜಾತಿ, ಕುಲ ಅಥವಾ ಹಿನ್ನೆಲೆಯಿಂದ ಬಂದಿರುವುದಾದರೂ ಮರಣ ಹೊಂದುವಾಗ ಮಾನವನಿಂದ ಏನೋ ಹೊರಗೆ ಹೋಗುತ್ತದೆ ಎಂಬ ಸುಳ್ಳು ಬೋಧನೆಗೆ ಸಂಬಂಧಪಟ್ಟಿರುವ ಯಾವುದೇ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ತ್ಯಜಿಸುತ್ತಾರೆ.

ಒಂದು ಪದ್ಧತಿಯನ್ನು ಆಚರಿಸಬೇಕೊ ಬಾರದೋ ಎಂಬುದನ್ನು ನಿರ್ಧರಿಸಲು ಕ್ರೈಸ್ತರಾದ ನಮ್ಮನ್ನು ಯಾವುದು ಮಾರ್ಗದರ್ಶಿಸಬಲ್ಲದು? ಆ ಪದ್ಧತಿಯು ಯಾವುದೇ ಅಶಾಸ್ತ್ರೀಯ ಬೋಧನೆಯೊಂದಿಗೆ, ಉದಾಹರಣೆಗೆ ಸತ್ತವರ ಆತ್ಮಗಳು ಜೀವದಿಂದಿರುವವರ ಜೀವನಗಳ ಮೇಲೆ ಪ್ರಭಾವವನ್ನು ಬೀರಬಲ್ಲವು ಎಂಬ ನಂಬಿಕೆಯಂತಹ ಬೋಧನೆಯೊಂದಿಗೆ ಸಂಬಂಧ ಹೊಂದಿರಬಹುದೋ ಎಂದು ನಾವು ಜಾಗರೂಕವಾಗಿ ಪರಿಗಣಿಸಬೇಕು. ಮಾತ್ರವಲ್ಲದೆ, ಇಂತಹ ಒಂದು ಪದ್ಧತಿಯಲ್ಲಿ ಅಥವಾ ಮತಾಚರಣೆಯಲ್ಲಿ ಭಾಗವಹಿಸುವುದು, ಯೆಹೋವನ ಸಾಕ್ಷಿಗಳು ಏನನ್ನು ನಂಬುತ್ತಾರೆ ಮತ್ತು ಬೋಧಿಸುತ್ತಾರೆ ಎಂಬುದನ್ನು ತಿಳಿದಿರುವವರನ್ನು ಎಡವಿಸಬಲ್ಲದೋ ಎಂಬುದನ್ನೂ ನಾವು ಪರಿಗಣಿಸಬೇಕಾಗಿದೆ. ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಗಮನಕೊಡಬೇಕಾದ ಎರಡು ಕ್ಷೇತ್ರಗಳನ್ನು ಪರಿಗಣಿಸೋಣ​—⁠ಒಂದು ಜನನ, ಮತ್ತೊಂದು ಮರಣ.

ಜನನ ಮತ್ತು ನಾಮಕರಣ ಸಮಾರಂಭಗಳು

ಶಿಶುಜನನದೊಂದಿಗೆ ಸಂಬಂಧಿಸಿರುವ ಅನೇಕ ಪದ್ಧತಿಗಳು ಯೋಗ್ಯವಾಗಿವೆ. ಆದರೂ, ಜನನವನ್ನು ಪೂರ್ವಜರ ಆತ್ಮಗಳ ಲೋಕದಿಂದ ಮಾನವ ಸಮಾಜದೊಳಕ್ಕೆ ಹೊಂದುವ ಸ್ಥಿತ್ಯಂತರ ಎಂದು ವೀಕ್ಷಿಸಲ್ಪಡುವ ಸ್ಥಳಗಳಲ್ಲಿ ಸತ್ಯ ಕ್ರೈಸ್ತರು ಸ್ವಲ್ಪ ಜಾಗ್ರತೆ ವಹಿಸಬೇಕು. ಉದಾಹರಣೆಗೆ, ಆಫ್ರಿಕದ ಕೆಲವು ಭಾಗಗಳಲ್ಲಿ, ಒಂದು ನವಜನಿತ ಶಿಶುವನ್ನು ಮನೆಯೊಳಗೆಯೇ ಇಡಲಾಗುತ್ತದೆ ಮತ್ತು ಅದು ಜನಿಸಿ ಕೆಲಕಾಲ ಕಳೆಯುವ ವರೆಗೆ ಅದಕ್ಕೆ ಒಂದು ಹೆಸರನ್ನು ಕೊಡಲಾಗುವುದಿಲ್ಲ. ಸ್ಥಳದಿಂದ ಸ್ಥಳಕ್ಕೆ ಈ ಕಾಯುವ ಸಮಯಾವಧಿಯು ಭಿನ್ನವಾಗಿರಬಹುದಾದರೂ, ಅದು ಶಿಶುವಿನ ನಾಮಕರಣ ಸಮಾರಂಭದೊಂದಿಗೆ ಕೊನೆಗೊಳ್ಳುತ್ತದೆ. ಈ ಸಮಾರಂಭದಲ್ಲಿ ಮಗುವನ್ನು ಮನೆಯಿಂದ ಹೊರಗೆ ತರಲಾಗುತ್ತದೆ ಮತ್ತು ವಿಧಿವತ್ತಾಗಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ನೋಡುವಂತೆ ಅನುಮತಿಸಲಾಗುತ್ತದೆ. ಈ ಸಮಯದಲ್ಲಿ, ಮಗುವಿನ ಹೆಸರನ್ನು ಅಧಿಕೃತವಾಗಿ ಕೂಡಿಬಂದವರೆಲ್ಲರಿಗೂ ಘೋಷಿಸಲಾಗುತ್ತದೆ.

ಈ ಪದ್ಧತಿಯ ವಿಶೇಷತೆಯ ಕುರಿತು ವಿವರಿಸುತ್ತಾ, ಘಾನ​—⁠ಅದರ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ತನ್ನ ಜೀವನದ ಮೊದಲ ಏಳು ದಿವಸಗಳಲ್ಲಿ, ಮಗು ಒಂದು ‘ಸಂದರ್ಶನ’ವನ್ನು ಮಾಡುತ್ತಿದೆ ಮತ್ತು ಆತ್ಮಗಳ ಲೋಕದಿಂದ ಭೌಮಿಕ ಜೀವಿತಕ್ಕೆ ಸ್ಥಿತ್ಯಂತರ ಹೊಂದುತ್ತಿದೆ ಎಂದು ಪರಿಗಣಿಸಲಾಗುತ್ತದೆ. . . . ಮಗುವನ್ನು ಹೆಚ್ಚಾಗಿ ಮನೆಯೊಳಗೆಯೇ ಇಡಲಾಗುತ್ತದೆ ಮತ್ತು ಕುಟುಂಬದ ಸದಸ್ಯರಲ್ಲದವರಿಗೆ ಅದನ್ನು ನೋಡಲು ಅನುಮತಿಯಿರುವುದಿಲ್ಲ.”

ಮಗುವನ್ನು ಸಾಂಪ್ರದಾಯಿಕವಾಗಿ ಹೆಸರಿಸುವ ಮೊದಲು ಕಾಯುವ ಸಮಯಾವಧಿಯು ಬಿಡಲ್ಪಡುವುದು ಏಕೆ? ಘಾನದ ಹಿನ್ನೆನಪುಗಳು (ಇಂಗ್ಲಿಷ್‌) ಎಂಬ ಪುಸ್ತಕವು ವಿವರಿಸುವುದು: “ಎಂಟನೆಯ ದಿನಕ್ಕೆ ಮುಂಚೆ, ಮಗುವನ್ನು ಒಂದು ಮಾನವಜೀವಿಯಾಗಿ ಎಣಿಸಲಾಗುವುದಿಲ್ಲ. ಅದು ಹೆಚ್ಚುಕಡಿಮೆ ತಾನು ಬಂದಿರುವ ಆತ್ಮ ಲೋಕಕ್ಕೆ ಸಂಬಂಧಿಸಿದ್ದಾಗಿರುತ್ತದೆ.” ಪುಸ್ತಕವು ಮುಂದುವರಿಸುವುದು: “ಅದಕ್ಕೆ ಕೊಡಲಾಗುವ ಹೆಸರೇ ಅದನ್ನು ಮಾನವೀಕರಿಸುತ್ತದೋ ಎಂಬಂತೆ, ತಮ್ಮ ಮಗು ಸತ್ತುಹೋಗಬಹುದೆಂಬ ಭಯವಿರುವ ಹೆತ್ತವರು ಸಾಮಾನ್ಯವಾಗಿ, ಅದು ಬದುಕುವುದೆಂದು ಅವರಿಗೆ ನಿಶ್ಚಿತವಾಗುವ ವರೆಗೆ ಅದಕ್ಕೆ ಹೆಸರು ಕೊಡುವುದನ್ನು ಮುಂದೂಡುವರು. . . . ಆದುದರಿಂದ ಸ್ಥಿತ್ಯಂತರದ ಈ ಧಾರ್ಮಿಕ ಸಂಸ್ಕಾರವನ್ನು​—⁠ಇದನ್ನು ಕೆಲವೊಮ್ಮೆ ಮಗುವಿನ ಸಾರ್ವಜನಿಕ ಪ್ರದರ್ಶನ ಎಂದು ಕರೆಯಲಾಗುತ್ತದೆ​—⁠ಮಗು ಮತ್ತು ಅದರ ಹೆತ್ತವರಿಗೆ ಅತಿ ಹೆಚ್ಚು ಪ್ರಾಮುಖ್ಯವಾದದ್ದಾಗಿ ಪರಿಗಣಿಸಲಾಗುತ್ತದೆ. ಈ ಮತಾಚರಣೆಯೇ ಮಗುವನ್ನು ಮಾನವರ ಸಂಘ ಅಥವಾ ಲೋಕದೊಳಗೆ ತರುತ್ತದೆ.”

ಇಂತಹ ಶಿಶು ನಾಮಕರಣ ಸಮಾರಂಭದಲ್ಲಿ ಸಾಮಾನ್ಯವಾಗಿ, ಕುಟುಂಬದಲ್ಲಿನ ಹಿರಿಯ ವ್ಯಕ್ತಿಯು ಅಧ್ಯಕ್ಷತೆ ವಹಿಸುತ್ತಾರೆ. ಈ ಸಂದರ್ಭದಲ್ಲಿ ಏನು ನಡೆಯುತ್ತದೆ ಎಂಬುದು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದಾದರೂ ಈ ಮತಾಚರಣೆಯಲ್ಲಿ ಹೆಚ್ಚಾಗಿ ತನಿ ಎರೆಯುವಿಕೆ, ಮಗುವಿನ ಸುರಕ್ಷಿತ ಆಗಮನಕ್ಕಾಗಿ ಪೂರ್ವಜರ ಆತ್ಮಗಳಿಗೆ ಗಣ್ಯತೆಯನ್ನು ವ್ಯಕ್ತಪಡಿಸಲು ಅರ್ಪಿಸಲ್ಪಡುವ ಪ್ರಾರ್ಥನೆಗಳು, ಮತ್ತು ಇತರ ಧಾರ್ಮಿಕ ಸಂಸ್ಕಾರಗಳು ಒಳಗೂಡಿರುತ್ತವೆ.

ಈ ಮತಾಚರಣೆಯಲ್ಲಿ ಮಗುವಿನ ಹೆಸರು ಘೋಷಿಸಲ್ಪಡುವ ಸಮಯವು ವಿಶೇಷ ಗಳಿಗೆಯಾಗಿರುತ್ತದೆ. ತಮ್ಮ ಸ್ವಂತ ಮಗುವನ್ನು ಹೆಸರಿಸುವ ಜವಾಬ್ದಾರಿ ಹೆತ್ತವರಿಗಿರುವುದಾದರೂ, ಆಯ್ಕೆಮಾಡಲ್ಪಟ್ಟಿರುವ ಹೆಸರಿನ ವಿಷಯದಲ್ಲಿ ಇತರ ಸಂಬಂಧಿಕರು ಅನೇಕವೇಳೆ ಬಲವಾದ ಪ್ರಭಾವವನ್ನು ಬೀರಬಲ್ಲರು. ಕೆಲವು ಹೆಸರುಗಳು ಸ್ಥಳಿಕ ಭಾಷೆಯಲ್ಲಿ ಸಾಂಕೇತಿಕ ಅರ್ಥವನ್ನು ಹೊಂದಿರಬಹುದು. ಅವು, “ಮರಳಿ ಬಂದವ,” “ತಾಯಿ ಎರಡನೇ ಬಾರಿ ಬಂದಿದ್ದಾಳೆ,” ಅಥವಾ “ತಂದೆ ಪುನಃ ಬಂದಿದ್ದಾನೆ” ಎಂಬ ಅರ್ಥವುಳ್ಳ ಹೆಸರುಗಳಾಗಿರುತ್ತವೆ. ಇತರ ಹೆಸರುಗಳು, ನವಜನಿತ ಶಿಶುವನ್ನು ಪುನಃ ಸತ್ತವರ ಲೋಕಕ್ಕೆ ಕೊಂಡೊಯ್ಯುವುದರಿಂದ ಪೂರ್ವಜರನ್ನು ನಿರುತ್ತೇಜಿಸುವಂಥ ಅರ್ಥವನ್ನು ಹೊಂದಿರುವಂತೆ ರೂಪಿಸಲ್ಪಡುತ್ತವೆ.

ವಾಸ್ತವದಲ್ಲಿ, ಒಂದು ಮಗು ಹುಟ್ಟಿದಾಗ ಅದರ ಕುರಿತು ಸಂತೋಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಮಗುವಿಗೆ ಬೇರೆ ಯಾರಾದರೊಬ್ಬರ ಹೆಸರನ್ನು ಕೊಡುವುದು ಮತ್ತು ಅದರ ಜನನದೊಂದಿಗೆ ಸಂಬಂಧಿಸಿದ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುವ ಹೆಸರನ್ನು ಕೊಡುವುದು ಸ್ವೀಕಾರಾರ್ಹವಾಗಿರುವ ಪದ್ಧತಿಗಳಾಗಿವೆ, ಮತ್ತು ಮಗುವಿಗೆ ಯಾವಾಗ ಹೆಸರನ್ನು ಕೊಡುವುದು ಎಂಬುದು ಒಂದು ವೈಯಕ್ತಿಕ ನಿರ್ಣಯವಾಗಿದೆ. * ಆದರೂ, ದೇವರನ್ನು ಮೆಚ್ಚಿಸಲು ಬಯಸುವ ಕ್ರೈಸ್ತರು, ನವಜನಿತ ಶಿಶು ಪೂರ್ವಜರ ಆತ್ಮ ಲೋಕದಿಂದ ಜೀವಿತರ ಲೋಕಕ್ಕೆ ಸ್ಥಿತ್ಯಂತರ ಹೊಂದುತ್ತಿರುವ ಒಂದು “ಸಂದರ್ಶಕ”ವಾಗಿದೆ ಎಂಬ ದೃಷ್ಟಿಕೋನಯನ್ನು ಸಮ್ಮತಿಸುವಂತೆ ತೋರುವ ಯಾವುದೇ ಪದ್ಧತಿಗಳು ಅಥವಾ ಸಮಾರಂಭಗಳನ್ನು ತ್ಯಜಿಸುವುದರ ಬಗ್ಗೆ ಜಾಗ್ರತೆ ವಹಿಸುವರು.

ಮಾತ್ರವಲ್ಲದೆ, ಸಮಾಜದಲ್ಲಿರುವ ಅನೇಕರು ನಾಮಕರಣ ಸಮಾರಂಭವನ್ನು ಸ್ಥಿತ್ಯಂತರದ ಮುಖ್ಯವಾದ ಸಂಸ್ಕಾರ ಎಂದು ವೀಕ್ಷಿಸುವಾಗ, ಕ್ರೈಸ್ತರು ಇತರರ ಮನಸ್ಸಾಕ್ಷಿಗಳ ಮೇಲೆ ಆಗುವ ಪರಿಣಾಮದ ಕುರಿತು ಪ್ರಜ್ಞೆಯುಳ್ಳವರಾಗಿರಬೇಕು ಮತ್ತು ಅವಿಶ್ವಾಸಿಗಳ ಮನಸ್ಸಿನಲ್ಲಿ ಯಾವ ಅಭಿಪ್ರಾಯವನ್ನು ಮೂಡಿಸಬಹುದು ಎಂಬುದನ್ನು ಪರಿಗಣಿಸಬೇಕು. ಉದಾಹರಣೆಗೆ, ಒಂದು ಕ್ರೈಸ್ತ ಕುಟುಂಬವು ಅವರ ನವಜನಿತ ಶಿಶುವನ್ನು ನಾಮಕರಣ ಸಮಾರಂಭದ ವರೆಗೆ ಇತರರ ದೃಷ್ಟಿಯಿಂದ ಮರೆಯಾಗಿ ಇಡುವುದಾದರೆ ಕೆಲವರು ಏನೆಂದು ತೀರ್ಮಾನಿಸಾರು? ಬೈಬಲ್‌ ಸತ್ಯವನ್ನು ಬೋಧಿಸುವವರು ಎಂಬ ಅವರ ಹೇಳಿಕೆಗೆ ಅಸಂಗತವಾಗಿರುವ ಹೆಸರುಗಳನ್ನು ಕೊಡುವುದಾದರೆ ಯಾವ ಅಭಿಪ್ರಾಯವು ಮೂಡಬಹುದು?

ಹೀಗಿರುವುದರಿಂದ, ತಮ್ಮ ಮಕ್ಕಳನ್ನು ಹೇಗೆ ಮತ್ತು ಯಾವಾಗ ಹೆಸರಿಸಬೇಕು ಎಂದು ನಿರ್ಣಯಿಸುವಾಗ, ಕ್ರೈಸ್ತರು ವಿಘ್ನಕರ ಇಲ್ಲವೆ ಎಡವಿಬೀಳಿಸುವವರಾಗಿ ಪರಿಣಮಿಸದೆ “ಎಲ್ಲವನ್ನೂ ದೇವರ ಘನತೆಗಾಗಿ” ಮಾಡಲು ಶ್ರಮಿಸುತ್ತಾರೆ. (1 ಕೊರಿಂಥ 10:31-33) ಅವರು, ಮೂಲತಃ ಸತ್ತವರನ್ನೇ ಘನಪಡಿಸಲಿಕ್ಕಾಗಿ ರೂಪಿಸಲ್ಪಟ್ಟಿರುವ “ಸಂಪ್ರದಾಯವನ್ನು ಹಿಡಿದು ನಡಿಸುವದಕ್ಕಾಗಿ ದೇವರ ಆಜ್ಞೆಯನ್ನು ವ್ಯರ್ಥ”ಮಾಡುವುದಿಲ್ಲ. ಅದಕ್ಕೆ ಬದಲಾಗಿ, ಜೀವಿಸುವ ದೇವರಾದ ಯೆಹೋವನಿಗೆ ಅವರು ಘನಮಾನಗಳನ್ನು ಸಲ್ಲಿಸುತ್ತಾರೆ.​—⁠ಮಾರ್ಕ 7:9, 13.

ಮರಣದಿಂದ ಜೀವಿತಕ್ಕೆ ಸಾಗುವುದು

ಜನನದಂತೆ ಮರಣವನ್ನು ಸಹ ಅನೇಕರು ಒಂದು ಸ್ಥಿತ್ಯಂತರವಾಗಿ ಪರಿಗಣಿಸುತ್ತಾರೆ; ಸಾಯುವವನು ದೃಶ್ಯ ಲೋಕದಿಂದ ಸತ್ತವರ ಆತ್ಮಗಳ ಅದೃಶ್ಯ ಲೋಕಕ್ಕೆ ಹೋಗುತ್ತಾನೆ ಎಂದವರು ನಂಬುತ್ತಾರೆ. ಒಬ್ಬ ವ್ಯಕ್ತಿ ಸತ್ತಾಗ ಕೆಲವು ನಿರ್ದಿಷ್ಟ ಶವಸಂಸ್ಕಾರ ಪದ್ಧತಿಗಳು ಮತ್ತು ಧಾರ್ಮಿಕ ಸಂಸ್ಕಾರಗಳನ್ನು ನಡೆಸದಿದ್ದಲ್ಲಿ, ಜೀವಿತರನ್ನು ಶಿಕ್ಷಿಸಲು ಅಥವಾ ಅವರಿಗೆ ಪ್ರತಿಫಲಕೊಡಲು ಶಕ್ತವಾಗಿವೆ ಎಂದು ನಂಬಲಾಗುವ ಪೂರ್ವಜರ ಆತ್ಮಗಳು ಕುಪಿತಗೊಳ್ಳುವವು ಎಂದು ಅನೇಕರು ನಂಬುತ್ತಾರೆ. ಈ ನಂಬಿಕೆಯು ಶವಸಂಸ್ಕಾರಗಳು ಏರ್ಪಡಿಸಲ್ಪಡುವ ಮತ್ತು ನಡೆಸಲ್ಪಡುವ ರೀತಿಯ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತದೆ.

ಸತ್ತವರನ್ನು ತೃಪ್ತಿಪಡಿಸಲಿಕ್ಕಾಗಿ ಮಾಡಲ್ಪಡುವ ಶವಸಂಸ್ಕಾರಗಳಲ್ಲಿ ಎಲ್ಲಾ ರೀತಿಯ ಭಾವಾವೇಶಗಳು ತೋರಿಸಲ್ಪಡುತ್ತವೆ. ಅಂದರೆ, ಶವದ ಸಮ್ಮುಖದಲ್ಲಿ ಉದ್ರೇಕಗೊಂಡು ಗೋಳಾಡುವುದು ಮತ್ತು ಕೂಗಿಕೊಳ್ಳುವುದರಿಂದ ಹಿಡಿದು ಹೆಣವನ್ನು ಹೂಳಿಟ್ಟ ಮೇಲೆ ಸಂತೋಷಕರ ಉತ್ಸವಗಳಲ್ಲಿ ಆನಂದಿಸುವುದರಂತಹ ಭಾವಾವೇಶಗಳು ತೋರಿಸಲ್ಪಡುತ್ತವೆ. ಇಂತಹ ಶವಸಂಸ್ಕಾರ ಆಚರಣೆಗಳಲ್ಲಿ ಹದ್ದುಮೀರಿದ ಔತಣ ಮಾಡುವಿಕೆ, ಕುಡಿಕತನ, ಮತ್ತು ಜೋರಾದ ಸಂಗೀತಕ್ಕೆ ಕುಣಿಯುವುದು ಸರ್ವಸಾಮಾನ್ಯವಾಗಿರುತ್ತದೆ. ಶವಸಂಸ್ಕಾರಗಳಿಗೆ ಎಷ್ಟು ಪ್ರಾಧಾನ್ಯವನ್ನು ಕೊಡಲಾಗುತ್ತದೆಂದರೆ, ಕಡುಬಡತನದಲ್ಲಿರುವ ಕುಟುಂಬಗಳು ಸಹ ಒಂದು “ಯೋಗ್ಯವಾದ ಶವಸಂಸ್ಕಾರ”ವನ್ನು ಮಾಡಲಿಕ್ಕಾಗಿ ಸಾಕಷ್ಟು ಹಣವನ್ನು ಕೂಡಿಸಲು ಶತಪ್ರಯತ್ನವನ್ನು ಮಾಡುತ್ತವೆ. ತಮ್ಮ ಮೇಲೆ ಸಾಲಸಂಕಷ್ಟಗಳನ್ನು ಬರಮಾಡಿಕೊಂಡಾದರೂ ಅವರಿದನ್ನು ಮಾಡುತ್ತಾರೆ.

ವರ್ಷಗಳಾದ್ಯಂತ, ಯೆಹೋವನ ಸಾಕ್ಷಿಗಳು ಅಶಾಸ್ತ್ರೀಯ ಶವಸಂಸ್ಕಾರ ಪದ್ಧತಿಗಳನ್ನು ಸಂಪೂರ್ಣವಾಗಿ ಬಯಲಿಗೆಳೆದಿದ್ದಾರೆ. * ಇಂತಹ ಪದ್ಧತಿಗಳಲ್ಲಿ, ಮರಣ ಹೊಂದುವಾಗ ಒಬ್ಬ ವ್ಯಕ್ತಿಯಿಂದ ಏನೋ ಹೊರಗೆ ಹೋಗುತ್ತದೆ ಎಂಬ ನಂಬಿಕೆಯ ಮೇಲೆ ಆಧರಿತವಾಗಿರುವ ಜಾಗರಣೆಗಳು, ತನಿ ಎರೆಯುವಿಕೆ, ಮೃತರೊಂದಿಗೆ ಮಾತಾಡುವುದು ಹಾಗೂ ಬೇಡಿಕೆಗಳನ್ನು ಮಾಡುವುದು, ಶವಸಂಸ್ಕಾರಕ ವಾರ್ಷಿಕೋತ್ಸವಗಳ ಸಾಂಪ್ರದಾಯಿಕ ಆಚರಣೆಗಳು, ಮತ್ತು ಇತರ ಪದ್ಧತಿಗಳು ಒಳಗೂಡಿವೆ. ಇಂತಹ ದೇವನಿಂದಕ ಪದ್ಧತಿಗಳು “ಅಶುದ್ಧ”ವಾಗಿವೆ, ಮತ್ತು ದೇವರ ಸತ್ಯ ವಾಕ್ಯದ ಮೇಲೆ ಆಧರಿತವಾಗಿರುವ ಬದಲಿಗೆ “ಮನುಷ್ಯರ ಸಂಪ್ರದಾಯಗಳ” ಮೇಲೆ ಆಧರಿಸಿರುವ “ಮೋಸವಾದ ನಿರರ್ಥಕ” ವಿಷಯಗಳಾಗಿವೆ.​—⁠ಯೆಶಾಯ 52:11; ಕೊಲೊಸ್ಸೆ 2:⁠8.

ರಾಜಿಮಾಡಿಕೊಳ್ಳುವಂತೆ ಬರುವ ಒತ್ತಡ

ಸಾಂಪ್ರದಾಯಿಕ ಪದ್ಧತಿಗಳನ್ನು ತ್ಯಜಿಸುವುದು ಕೆಲವರಿಗೆ ಪಂಥಾಹ್ವಾನದಾಯಕವಾಗಿ ಪರಿಣಮಿಸಿದೆ. ಅದರಲ್ಲೂ ಮೃತರನ್ನು ಸನ್ಮಾನಿಸುವುದನ್ನು ಅತಿ ಪ್ರಾಮುಖ್ಯವಾಗಿ ಪರಿಗಣಿಸಲಾಗುವಂಥ ದೇಶಗಳ ಕುರಿತು ಹೇಳಬೇಕಾಗಿಯೇ ಇಲ್ಲ. ಇಂತಹ ಪದ್ಧತಿಗಳನ್ನು ಆಚರಿಸದ ಕಾರಣ, ಯೆಹೋವನ ಸಾಕ್ಷಿಗಳನ್ನು ಸಂದೇಹದಿಂದ ನೋಡಲಾಗುತ್ತದೆ ಅಥವಾ ಅವರನ್ನು ಸಮಾಜವಿರೋಧಿಗಳು ಹಾಗೂ ಮೃತರನ್ನು ಅವಮಾನಿಸುವವರು ಎಂದು ಆಪಾದಿಸಲಾಗುತ್ತದೆ. ಟೀಕಾತ್ಮಕ ನುಡಿಗಳು ಮತ್ತು ಬಲವಾದ ಒತ್ತಡದಿಂದಾಗಿ ಕೆಲವು ಕ್ರೈಸ್ತರು, ಬೈಬಲ್‌ ಸತ್ಯದ ಸರಿಯಾದ ಅರ್ಥಗ್ರಹಿಕೆ ಇರುವುದಾದರೂ, ತಾವು ಭಿನ್ನರಾಗಿದ್ದೇವೆ ಎಂದು ತೋರಿಸಿಕೊಳ್ಳಲು ಅಂಜುತ್ತಾರೆ. (1 ಪೇತ್ರ 3:​14, 15ಎ) ಇತರರು, ಇಂತಹ ಪದ್ಧತಿಗಳು ತಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಸಂಪೂರ್ಣವಾಗಿ ತ್ಯಜಿಸಲಾಗುವುದಿಲ್ಲ ಎಂದು ನೆನಸುತ್ತಾರೆ. ಪದ್ಧತಿಗಳನ್ನು ಅನುಸರಿಸಲು ನಿರಾಕರಿಸುವುದು ದೇವಜನರ ವಿರುದ್ಧ ಸಮಾಜವು ಪೂರ್ವಗ್ರಹವನ್ನು ಹೊಂದುವಂತೆ ಪ್ರೇರಿಸಬಹುದು ಎಂದು ಇನ್ನಿತರರು ವಾದಿಸಿದ್ದಾರೆ.

ನಾವು ಇತರರ ಮನಸ್ಸನ್ನು ಅನಾವಶ್ಯಕವಾಗಿ ನೋಯಿಸಲು ಬಯಸುವುದಿಲ್ಲ. ಆದರೂ, ಸತ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳುವುದು ದೇವರಿಂದ ವಿಮುಖಗೊಂಡಿರುವ ಲೋಕದ ಅಸಮ್ಮತಿಯನ್ನು ತರುವುದು ಎಂದು ಬೈಬಲು ನಮಗೆ ಎಚ್ಚರಿಸುತ್ತದೆ. (ಯೋಹಾನ 15:18, 19; 2 ತಿಮೊಥೆಯ 3:12; 1 ಯೋಹಾನ 5:19) ಆಧ್ಯಾತ್ಮಿಕ ಕತ್ತಲೆಯಲ್ಲಿರುವವರಿಗಿಂತ ನಾವು ಭಿನ್ನರಾಗಿರಬೇಕು ಎಂಬುದನ್ನು ತಿಳಿದವರಾಗಿ ನಾವು ಈ ನಿಲುವನ್ನು ಸಿದ್ಧಮನಸ್ಸಿನಿಂದ ತೆಗೆದುಕೊಳ್ಳುತ್ತೇವೆ. (ಮಲಾಕಿಯ 3:18; ಗಲಾತ್ಯ 6:12) ದೇವರನ್ನು ಅಪ್ರಸನ್ನಗೊಳಿಸುವ ವಿಷಯವನ್ನು ಮಾಡಲು ಸೈತಾನನು ತಂದ ಶೋಧನೆಯನ್ನು ಯೇಸು ಪ್ರತಿರೋಧಿಸಿದಂತೆಯೇ, ದೇವರನ್ನು ಅಪ್ರಸನ್ನಗೊಳಿಸುವ ರೀತಿಯಲ್ಲಿ ವರ್ತಿಸಲು ಬರುವ ಒತ್ತಡವನ್ನು ನಾವು ಪ್ರತಿರೋಧಿಸುತ್ತೇವೆ. (ಮತ್ತಾಯ 4:3-7) ಮನುಷ್ಯನ ಭಯಕ್ಕೆ ಒಳಗಾಗುವ ಬದಲು, ಸತ್ಯ ಕ್ರೈಸ್ತರು ಪ್ರಧಾನವಾಗಿ ಯೆಹೋವ ದೇವರನ್ನು ಮೆಚ್ಚಿಸುವುದರ ಬಗ್ಗೆ ಮತ್ತು ಆತನನ್ನು ಸತ್ಯದ ದೇವರಾಗಿ ಗೌರವಿಸುವುದರ ಬಗ್ಗೆ ಚಿಂತಿತರಾಗಿದ್ದಾರೆ. ಅವರಿದನ್ನು, ಬೇರೆಯವರಿಂದ ಬರುವ ಒತ್ತಡಕ್ಕೆ ಮಣಿದು ಶುದ್ಧ ಆರಾಧನೆಗೆ ಸಂಬಂಧಿಸಿದ ಬೈಬಲ್‌ ಮಟ್ಟಗಳನ್ನು ರಾಜಿಮಾಡಿಕೊಳ್ಳದೆ ಇರುವ ಮೂಲಕ ಮಾಡುತ್ತಾರೆ.​—⁠ಜ್ಞಾನೋಕ್ತಿ 29:25; ಅ. ಕೃತ್ಯಗಳು 5:⁠29.

ಸತ್ತವರನ್ನು ವೀಕ್ಷಿಸುವ ವಿಧದಿಂದ ಯೆಹೋವನನ್ನು ಗೌರವಿಸುವುದು

ನಾವು ಪ್ರೀತಿಸುವ ಒಬ್ಬರು ಸಾಯುವುದಾದರೆ ನಾವು ಗಾಢವಾದ ಭಾವನಾತ್ಮಕ ನೋವು ಮತ್ತು ಶೋಕವನ್ನು ಅನುಭವಿಸುವುದು ಸಹಜವೇ. (ಯೋಹಾನ 11:33, 35) ಪ್ರಿಯ ವ್ಯಕ್ತಿಯೊಬ್ಬರ ನೆನಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರುವುದು ಮತ್ತು ಒಂದು ಗೌರವಪೂರ್ವಕ ಶವಸಂಸ್ಕಾರವನ್ನು ಒದಗಿಸುವುದು ನಮ್ಮ ಪ್ರೀತಿಯ ಸೂಕ್ತವಾದ ಮತ್ತು ಉಚಿತವಾದ ಅಭಿವ್ಯಕ್ತಿಗಳಾಗಿವೆ. ಆದರೂ, ಮರಣದ ಮಹಾ ದುಃಖವನ್ನು ತಾಳಿಕೊಳ್ಳುವ ಅದೇ ಸಮಯದಲ್ಲಿ ಯೆಹೋವನ ಸಾಕ್ಷಿಗಳು ದೇವರನ್ನು ಅಪ್ರಸನ್ನಗೊಳಿಸುವ ಯಾವುದೇ ಸಾಂಪ್ರದಾಯಿಕ ಆಚರಣೆಗಳಿಗೆ ಸೆಳೆಯಲ್ಪಡುವುದರ ಕುರಿತು ಎಚ್ಚರ ವಹಿಸುತ್ತಾರೆ. ಮೃತರ ವಿಷಯದಲ್ಲಿ ತುಂಬ ಭಯವಿರುವ ಸಂಸ್ಕೃತಿಗಳಲ್ಲಿ ಬೆಳೆಸಲ್ಪಟ್ಟವರಿಗೆ ಇದು ಸುಲಭದ ಸಂಗತಿಯಲ್ಲ. ನಮಗೆ ಆಪ್ತರಾಗಿದ್ದ ಒಬ್ಬರ ಮರಣದಿಂದಾಗಿ ಭಾವನಾತ್ಮಕವಾಗಿ ನೋವಿಗೊಳಗಾಗಿರುವಾಗ ನಮ್ಮ ಸಮತೋಲನವನ್ನು ಕಾಪಾಡಿಕೊಳ್ಳುವುದು ಒಂದು ಪಂಥಾಹ್ವಾನವಾಗಿರಬಲ್ಲದು. ಹೀಗಿರುವುದಾದರೂ, ನಂಬಿಗಸ್ತ ಕ್ರೈಸ್ತರು ‘ಸಕಲವಿಧವಾಗಿ ಸಂತೈಸುವ ದೇವರಾದ’ ಯೆಹೋವನಿಂದ ಬಲಪಡಿಸಲ್ಪಡುತ್ತಾರೆ, ಮತ್ತು ಜೊತೆವಿಶ್ವಾಸಿಗಳ ಪ್ರೀತಿಭರಿತ ಬೆಂಬಲದಿಂದ ಪ್ರಯೋಜನವನ್ನು ಪಡೆಯುತ್ತಾರೆ. (2 ಕೊರಿಂಥ 1:3, 4) ದೇವರ ಜ್ಞಾಪಕದಲ್ಲಿರುವ ಪ್ರಜ್ಞಾಹೀನರಾದ ಸತ್ತ ವ್ಯಕ್ತಿಗಳು ಒಂದು ದಿನ ಉಜ್ಜೀವಿಸಲ್ಪಡುವರು ಎಂಬುದರಲ್ಲಿ ಸತ್ಯ ಕ್ರೈಸ್ತರು ಇಟ್ಟಿರುವ ಬಲವಾದ ನಂಬಿಕೆಯು, ಪುನರುತ್ಥಾನದ ವಾಸ್ತವಿಕತೆಯನ್ನೇ ಅಲ್ಲಗಳೆಯುವ ಅಕ್ರೈಸ್ತ ಶವಸಂಸ್ಕಾರಕ ಪದ್ಧತಿಗಳಿಂದ ತಮ್ಮನ್ನು ಸಂಪೂರ್ಣವಾಗಿ ಬೇರ್ಪಡಿಸಿಕೊಳ್ಳಲು ಸಕಲ ಕಾರಣವನ್ನೂ ಕೊಡುತ್ತದೆ.

ಯೆಹೋವನು ನಮ್ಮನ್ನು “ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿ”ದ್ದಾನೆ ಎಂಬ ವಿಷಯವನ್ನು ತಿಳಿದು ನಾವು ಪುಳಕಿತರಾಗುವುದಿಲ್ಲವೇ? (1 ಪೇತ್ರ 2:9) ನಾವು ಜನನದ ಸಂತೋಷವನ್ನು ಅನುಭವಿಸುವಾಗ ಮತ್ತು ಮರಣದ ಶೋಕವನ್ನು ತಾಳಿಕೊಳ್ಳುವಾಗ, ಸರಿಯಾದದ್ದನ್ನು ಮಾಡಲು ನಮ್ಮಲ್ಲಿರುವ ತೀವ್ರ ಬಯಕೆ ಹಾಗೂ ಯೆಹೋವ ದೇವರಿಗಾಗಿರುವ ನಮ್ಮ ಗಾಢವಾದ ಪ್ರೀತಿಯು “ಬೆಳಕಿನವರಂತೆ ನಡೆ”ಯುತ್ತಾ ಇರಲು ನಮ್ಮನ್ನು ಸದಾ ಪ್ರೇರಿಸಲಿ. ದೇವರನ್ನು ಅಪ್ರಸನ್ನಗೊಳಿಸುವ ಅಕ್ರೈಸ್ತ ಪದ್ಧತಿಗಳಿಂದ ನಮ್ಮನ್ನು ಆಧ್ಯಾತ್ಮಿಕವಾಗಿ ಮಲಿನಗೊಳಿಸಿಕೊಳ್ಳಲು ನಾವೆಂದಿಗೂ ಅನುಮತಿಸದಿರೋಣ.​—⁠ಎಫೆಸ 5:⁠8.

[ಪಾದಟಿಪ್ಪಣಿಗಳು]

^ ಪ್ಯಾರ. 17 ಕೆಲವು ಸ್ಥಳಗಳಲ್ಲಿ, ಒಂದು ನವಜನಿತ ಶಿಶುವಿನ ಹೆಸರನ್ನು ನೋಂದಾಯಿಸಬೇಕು ಎಂದು ಕಾನೂನು ಅವಶ್ಯಪಡಿಸುತ್ತದೆ, ಮತ್ತು ಈ ಕಾರಣದಿಂದ ಮಗುವಿಗೆ ಒಂದು ನಿರ್ದಿಷ್ಟ ಸಮಯಾವಧಿಯೊಳಗೆ ಹೆಸರನ್ನು ಕೊಡುವಂತೆ ಅವಶ್ಯಪಡಿಸುತ್ತದೆ.

^ ಪ್ಯಾರ. 23 ದಯವಿಟ್ಟು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ ಸತ್ತವರ ಆತ್ಮಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ಮತ್ತು ನಿತ್ಯಜೀವಕ್ಕೆ ಹೋಗುವ ದಾರಿ​—⁠ನೀವು ಅದನ್ನು ಕಂಡುಕೊಂಡಿದ್ದೀರೊ? (ಇಂಗ್ಲಿಷ್‌) ಎಂಬ ಬ್ರೋಷರ್‌ಗಳನ್ನು ನೋಡಿರಿ.