ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಮೇಲಣ ಪ್ರೀತಿಯಿಂದ ಐಕ್ಯಗೊಳಿಸಲ್ಪಟ್ಟಿರುವುದು

ದೇವರ ಮೇಲಣ ಪ್ರೀತಿಯಿಂದ ಐಕ್ಯಗೊಳಿಸಲ್ಪಟ್ಟಿರುವುದು

ದೇವರ ಮೇಲಣ ಪ್ರೀತಿಯಿಂದ ಐಕ್ಯಗೊಳಿಸಲ್ಪಟ್ಟಿರುವುದು

ಕ್ರೈ ಸ್ತ ಸಭೆಯು ನಮ್ಮ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಾಗ, ಅದರಲ್ಲಿ ಎದ್ದುಕಾಣುತ್ತಿದ್ದ ಒಂದು ವೈಶಿಷ್ಟ್ಯವು ಅದರ ಐಕ್ಯತೆಯೇ ಆಗಿತ್ತು. ಇದು ಅದರ ಸದಸ್ಯರಲ್ಲಿದ್ದ ವೈವಿಧ್ಯತೆಯ ಹೊರತೂ ಸಾಧ್ಯವಾಯಿತು. ಸತ್ಯ ದೇವರ ಆರಾಧಕರಾಗಿದ್ದ ಅವರು ಏಷಿಯಾ, ಯೂರೋಪ್‌ ಮತ್ತು ಆಫ್ರಿಕದ ದೇಶಗಳವರಾಗಿದ್ದರು. ಅವರು ವಿಭಿನ್ನ ಹಿನ್ನೆಲೆಗಳಿಂದ ಬಂದವರಾಗಿದ್ದರು​—⁠ಅವರಲ್ಲಿ ಯಾಜಕರಿದ್ದರು, ಸೈನಿಕರಿದ್ದರು, ಆಳುಗಳಿದ್ದರು, ನಿರಾಶ್ರಿತರಿದ್ದರು, ಕಸಬಿನವರಿದ್ದರು, ಉದ್ಯೋಗಸ್ಥರಿದ್ದರು ಮತ್ತು ವ್ಯಾಪಾರಿಗಳಿದ್ದರು. ಕೆಲವರು ಯೆಹೂದ್ಯರಾಗಿದ್ದರು, ಮತ್ತಿತರರು ಅನ್ಯಜನಾಂಗದವರಾಗಿದ್ದರು. ಅನೇಕರು ಮುಂಚೆ ವ್ಯಭಿಚಾರಿಗಳಾಗಿದ್ದರು, ಸಲಿಂಗಕಾಮಿಗಳಾಗಿದ್ದರು, ಕುಡಿಕರಾಗಿದ್ದರು, ಕಳ್ಳರಾಗಿದ್ದರು, ಅಥವಾ ಸುಲುಕೊಳ್ಳುವವರಾಗಿದ್ದರು. ಹೀಗಿದ್ದರೂ, ಇವರು ಕ್ರೈಸ್ತರಾದಾಗ, ತಮ್ಮ ಕೆಟ್ಟ ಹವ್ಯಾಸಗಳನ್ನು ತೊರೆದುಬಿಟ್ಟು ನಂಬಿಕೆಯಲ್ಲಿ ನಿಕಟವಾಗಿ ಐಕ್ಯವಾದರು.

ಈ ಎಲ್ಲಾ ಜನರನ್ನು ಐಕಮತ್ಯದಲ್ಲಿ ತರಲು ಪ್ರಥಮ ಶತಮಾನದ ಕ್ರೈಸ್ತತ್ವಕ್ಕೆ ಹೇಗೆ ಸಾಧ್ಯವಾಯಿತು? ಅವರು ಪರಸ್ಪರರೊಂದಿಗೂ ಸಾಮಾನ್ಯ ಜನರೊಂದಿಗೂ ಏಕೆ ಸಮಾಧಾನದಿಂದಿದ್ದರು? ಅವರು ಪ್ರತಿಭಟನೆಗಳಲ್ಲಿ ಮತ್ತು ಸಂಘರ್ಷಗಳಲ್ಲಿ ಏಕೆ ಪಾಲ್ಗೊಳ್ಳಲಿಲ್ಲ? ಇಂದಿನ ಪ್ರಧಾನ ಧರ್ಮಗಳಿಗೆ ಹೋಲಿಸುವಾಗ ಆದಿಕ್ರೈಸ್ತತ್ವವು ಏಕೆ ತೀರ ಭಿನ್ನವಾಗಿತ್ತು?

ಸಭೆಯ ಸದಸ್ಯರನ್ನು ಹತ್ತಿರಕ್ಕೆ ತಂದದ್ದು ಯಾವುದು?

ಪ್ರಥಮ ಶತಮಾನದಲ್ಲಿ ಜೊತೆವಿಶ್ವಾಸಿಗಳನ್ನು ಐಕ್ಯಗೊಳಿಸಿದ ಪ್ರಪ್ರಧಾನ ವಿಷಯವು ದೇವರ ಮೇಲಣ ಪ್ರೀತಿಯಾಗಿತ್ತು. ಸತ್ಯ ದೇವರಾಗಿರುವ ಯೆಹೋವನನ್ನು ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ ಮತ್ತು ಪೂರ್ಣಬುದ್ಧಿಯಿಂದ ಪ್ರೀತಿಸಬೇಕಾದ ತಮ್ಮ ಪ್ರಧಾನ ಕರ್ತವ್ಯವನ್ನು ಆ ಕ್ರೈಸ್ತರು ಗ್ರಹಿಸಿಕೊಂಡರು. ಉದಾಹರಣೆಗೆ, ಯೆಹೂದ್ಯನಾಗಿದ್ದ ಅಪೊಸ್ತಲ ಪೇತ್ರನು ಸಾಮಾನ್ಯವಾಗಿ ಯಾರೊಂದಿಗೆ ನಿಕಟ ಸಹವಾಸವನ್ನು ಇಡುತ್ತಿರಲಿಲ್ಲವೋ ಅಂಥ ಒಬ್ಬ ಅನ್ಯದೇಶದವನ ಮನೆಗೆ ಭೇಟಿಕೊಡುವಂತೆ ಅವನಿಗೆ ಹೇಳಲಾಯಿತು. ಇದಕ್ಕೆ ವಿಧೇಯನಾಗುವಂತೆ ಪೇತ್ರನನ್ನು ಮುಖ್ಯವಾಗಿ ಪ್ರಚೋದಿಸಿದ್ದು ಯೆಹೋವನಿಗಾಗಿರುವ ಪ್ರೀತಿಯೇ. ಪೇತ್ರನೂ ಇತರ ಆದಿಕ್ರೈಸ್ತರೂ ದೇವರೊಂದಿಗೆ ಒಂದು ನಿಕಟ ಸಂಬಂಧದಲ್ಲಿ ಆನಂದಿಸಿದರು ಮತ್ತು ಇದು ಆತನ ವ್ಯಕ್ತಿತ್ವ ಹಾಗೂ ಇಷ್ಟಾನಿಷ್ಟಗಳ ಕುರಿತಾದ ನಿಷ್ಕೃಷ್ಟ ಜ್ಞಾನದ ಮೇಲೆ ಆಧರಿಸಿತ್ತು. ಸಕಾಲದಲ್ಲಿ ಆರಾಧಕರೆಲ್ಲರೂ, “ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು” ಎಂಬುದು ಅವರ ಕಡೆಗಿರುವ ಯೆಹೋವನ ಚಿತ್ತವಾಗಿದೆ ಎಂಬುದನ್ನು ಅರ್ಥಮಾಡಿಕೊಂಡರು.​—⁠1 ಕೊರಿಂಥ 1:10; ಮತ್ತಾಯ 22:37; ಅ. ಕೃತ್ಯಗಳು 10:1-35.

ವಿಶ್ವಾಸಿಗಳು ಯೇಸು ಕ್ರಿಸ್ತನಲ್ಲಿನ ನಂಬಿಕೆಯ ಕಾರಣ ಇನ್ನೂ ಹತ್ತಿರಕ್ಕೆ ಸೆಳೆಯಲ್ಪಟ್ಟರು. ಅವರು ಅವನ ಹೆಜ್ಜೆಯ ಜಾಡನ್ನು ನಿಕಟವಾಗಿ ಹಿಂಬಾಲಿಸಲು ಬಯಸಿದರು. ಅವನು ಅವರಿಗೆ ಆಜ್ಞಾಪಿಸಿದ್ದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು . . . ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:34, 35) ಇದು ಭಾವನಾತ್ಮಕ ಉದ್ವೇಗವಲ್ಲ ಬದಲಿಗೆ ಸ್ವತ್ಯಾಗದ ಪ್ರೀತಿಯಾಗಿರಬೇಕಿತ್ತು. ಇದರ ಫಲಿತಾಂಶ ಏನಾಗಿರುವುದು? ತನ್ನಲ್ಲಿ ನಂಬಿಕೆಯಿಡುವವರಿಗಾಗಿ ಯೇಸು ಹೀಗೆ ಪ್ರಾರ್ಥಿಸಿದನು: “ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ.”​—⁠ಯೋಹಾನ 17:20, 21; 1 ಪೇತ್ರ 2:21.

ಯೆಹೋವನು ತನ್ನ ಪವಿತ್ರಾತ್ಮವನ್ನು, ಅಥವಾ ಕ್ರಿಯಾಶೀಲ ಶಕ್ತಿಯನ್ನು ತನ್ನ ನಿಜ ಸೇವಕರ ಮೇಲೆ ಸುರಿಸಿದನು. ಈ ಆತ್ಮವು ಅವರ ಮಧ್ಯೆ ಐಕ್ಯತೆಗೆ ಇಂಬುಕೊಟ್ಟಿತು. ಇದು ಬೈಬಲ್‌ ಬೋಧನೆಗಳ ಅರ್ಥಗ್ರಹಿಕೆಯನ್ನು ದಯಪಾಲಿಸಿತು. ಈ ಅರ್ಥಗ್ರಹಿಕೆಯು ಎಲ್ಲಾ ಸಭೆಗಳಲ್ಲೂ ಅಂಗೀಕರಿಸಲ್ಪಟ್ಟಿತು. ಯೆಹೋವನ ಆರಾಧಕರೆಲ್ಲರೂ ಒಂದೇ ಸಂದೇಶವನ್ನು ಸಾರಿದರು​—⁠ಅದು, ಇಡೀ ಮಾನವಕುಲದ ಮೇಲೆ ಆಳಲಿಕ್ಕಿರುವ ಒಂದು ಸ್ವರ್ಗೀಯ ಸರಕಾರವಾದ ದೇವರ ಮೆಸ್ಸೀಯ ರಾಜ್ಯದ ಮೂಲಕ ಯೆಹೋವನ ನಾಮದ ಪವಿತ್ರೀಕರಣದ ಸಂದೇಶವೇ ಆಗಿತ್ತು. ಆದಿಕ್ರೈಸ್ತರು ‘ಲೋಕದವರಾಗಿಲ್ಲದಿರುವ’ ತಮ್ಮ ಕರ್ತವ್ಯವನ್ನು ಅರ್ಥಮಾಡಿಕೊಂಡರು. ಆದುದರಿಂದ, ಸಾರ್ವಜನಿಕ ಪ್ರತಿಭಟನೆಗಳು ಅಥವಾ ಮಿಲಿಟರಿ ಸಂಘರ್ಷಗಳು ತಲೆದೋರಿದಾಗೆಲ್ಲಾ ಕ್ರೈಸ್ತರು ತಟಸ್ಥರಾಗಿ ಉಳಿದರು. ಅವರು ಎಲ್ಲರೊಂದಿಗೂ ಸಮಾಧಾನವನ್ನು ಕಾಪಾಡಿಕೊಂಡು ಮುಂದುವರಿದರು.​—⁠ಯೋಹಾನ 14:26; 18:36; ಮತ್ತಾಯ 6:9, 10; ಅ. ಕೃತ್ಯಗಳು 2:1-4; ರೋಮಾಪುರ 12:17-21.

ಐಕ್ಯತೆಗೆ ಇಂಬುಕೊಡಬೇಕಾಗಿರುವ ತಮ್ಮ ಜವಾಬ್ದಾರಿಯನ್ನು ಎಲ್ಲಾ ವಿಶ್ವಾಸಿಗಳು ಸ್ವೀಕರಿಸಿದರು. ಹೇಗೆ? ತಮ್ಮ ನಡತೆಯು ಬೈಬಲಿಗೆ ಹೊಂದಿಕೆಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕವೇ. ಆದುದರಿಂದ, ಅಪೊಸ್ತಲ ಪೌಲನು ಕ್ರೈಸ್ತರಿಗೆ ಬರೆದದ್ದು: “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿ . . . ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.”​—⁠ಎಫೆಸ 4:22-32.

ಐಕ್ಯವು ಕಾಪಾಡಲ್ಪಟ್ಟದ್ದು

ಪ್ರಥಮ ಶತಮಾನದಲ್ಲಿದ್ದ ವಿಶ್ವಾಸಿಗಳು ಅಪರಿಪೂರ್ಣರಾಗಿದ್ದರು ನಿಜ, ಮತ್ತು ಅವರ ಐಕ್ಯಕ್ಕೆ ಸವಾಲೊಡ್ಡಿದ ಸನ್ನಿವೇಶಗಳು ಎದ್ದುಬಂದವು. ಉದಾಹರಣೆಗೆ, ಅಪೊಸ್ತಲರ ಕೃತ್ಯಗಳು 6:​1-6 ಗ್ರೀಕ್‌ ಭಾಷೆಯನ್ನಾಡುವ ಮತ್ತು ಇಬ್ರಿಯ ಭಾಷೆಯನ್ನಾಡುವ ಯೆಹೂದಿ ಕ್ರೈಸ್ತರ ಮಧ್ಯೆ ಒಂದು ಭಿನ್ನಾಭಿಪ್ರಾಯವು ತೋರಿಬಂದದ್ದರ ಕುರಿತು ಮಾತಾಡುತ್ತದೆ. ಗ್ರೀಕ್‌ ಭಾಷೆಯನ್ನಾಡುವವರಿಗೆ ತಮ್ಮನ್ನು ಪಕ್ಷಪಾತದಿಂದ ನಡೆಸಲಾಗುತ್ತಿದೆ ಎಂದು ತೋರಿತು. ಆದರೆ, ಈ ವಿಚಾರದ ಕುರಿತು ಅಪೊಸ್ತಲರಿಗೆ ತಿಳಿಸಲ್ಪಟ್ಟಾಗ, ಅವರು ಈ ವಿಷಯದ ಕುರಿತು ಕೂಡಲೆ ಕ್ರಿಯೆಗೈದು ನ್ಯಾಯಸಮ್ಮತವಾದ ರೀತಿಯಲ್ಲಿ ಅದನ್ನು ಬಗೆಹರಿಸಿದರು. ತದನಂತರ, ಸಿದ್ಧಾಂತದ ವಿಷಯದಲ್ಲಿ ಎದ್ದುಬಂದ ಒಂದು ಪ್ರಶ್ನೆಯು ಕ್ರೈಸ್ತ ಸಭೆಯಲ್ಲಿದ್ದ ಯೆಹೂದ್ಯೇತರರ ಕರ್ತವ್ಯಗಳ ಕುರಿತು ಒಂದು ವಿವಾದಕ್ಕೆ ನಡೆಸಿತು. ಬೈಬಲ್‌ ಮೂಲತತ್ತ್ವಗಳ ಮೇಲಾಧಾರಿಸಿದ ಒಂದು ನಿರ್ಣಯವು ಮಾಡಲ್ಪಟ್ಟಿತು ಮತ್ತು ಈ ನಿರ್ಣಯವನ್ನು ಐಕಮತ್ಯದಿಂದ ಸ್ವೀಕರಿಸಲಾಯಿತು.​—⁠ಅ. ಕೃತ್ಯಗಳು 15:1-29.

ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ ಭಿನ್ನಾಭಿಪ್ರಾಯಗಳು ತೋರಿಕೊಂಡಾಗ ಇವು ಜನಾಂಗೀಯ ವಿಭಜನೆಗಳಿಗೆ ಅಥವಾ ಮೊಂಡತನದ ಸಿದ್ಧಾಂತಿಕ ಅನೈಕ್ಯಕ್ಕೆ ನಡೆಸಲಿಲ್ಲ ಎಂಬುದನ್ನು ಈ ಉದಾಹರಣೆಗಳು ತೋರಿಸುತ್ತವೆ. ಅವು ಏಕೆ ಅನೈಕ್ಯತೆಗೆ ನಡೆಸಲಿಲ್ಲ? ಏಕೆಂದರೆ ಅವರನ್ನು ಐಕ್ಯಗೊಳಿಸಿದ ಅಂಶಗಳು​—⁠ಯೆಹೋವನಿಗಾಗಿರುವ ಪ್ರೀತಿ, ಯೇಸು ಕ್ರಿಸ್ತನಲ್ಲಿ ನಂಬಿಕೆ, ಪರಸ್ಪರರಿಗಾಗಿ ಸ್ವತ್ಯಾಗದ ಪ್ರೀತಿ, ಪವಿತ್ರಾತ್ಮದ ಮಾರ್ಗದರ್ಶನೆಯ ಸ್ವೀಕರಣೆ, ಬೈಬಲ್‌ ಬೋಧನೆಗಳ ಸಹಮತದ ಅರ್ಥಗ್ರಹಿಕೆ, ಮತ್ತು ತಮ್ಮ ನಡತೆಯನ್ನು ಬದಲಾಯಿಸಿಕೊಳ್ಳುವುದರಲ್ಲಿ ಸಿದ್ಧಮನಸ್ಸು ಎಂಬ ಈ ಅಂಶಗಳು ಆದಿಸಭೆಯನ್ನು ಐಕ್ಯವಾಗಿ ಮತ್ತು ಸಮಾಧಾನದಿಂದಿರಿಸಲು ಸಾಕಷ್ಟು ಶಕ್ತಿಶಾಲಿಯಾಗಿದ್ದವು.

ಆಧುನಿಕ ದಿನಗಳಲ್ಲಿ ಆರಾಧನೆಯಲ್ಲಿ ಐಕ್ಯತೆ

ಇಂದು ಸಹ ಅದೇ ರೀತಿಯಲ್ಲಿ ಐಕ್ಯತೆಯನ್ನು ತರಲು ಸಾಧ್ಯವಿದೆಯೋ? ಅದೇ ಅಂಶಗಳು ಒಂದೇ ನಂಬಿಕೆಯನ್ನು ಹೊಂದಿರುವ ವ್ಯಕ್ತಿಗಳನ್ನು ಒಟ್ಟುಗೂಡಿಸಲು ಮತ್ತು ಲೋಕದ ಎಲ್ಲಾ ಭಾಗಗಳಲ್ಲಿ ಜೀವಿಸುತ್ತಿರುವ ಎಲ್ಲಾ ಜಾತಿಯವರೊಂದಿಗೆ ಸಮಾಧಾನದಿಂದಿರಲು ಶಕ್ತರನ್ನಾಗಿ ಮಾಡಸಾಧ್ಯವಿದೆಯೋ? ಹೌದು, ಸಾಧ್ಯ! ಯೆಹೋವನ ಸಾಕ್ಷಿಗಳು 230ಕ್ಕಿಂತಲೂ ಹೆಚ್ಚಿನ ದೇಶದ್ವೀಪಗಳಲ್ಲಿ ಹರಡಿಕೊಂಡಿರುವ ಒಂದು ಲೋಕವ್ಯಾಪಕ ಸಹೋದರತ್ವದಲ್ಲಿ ಐಕ್ಯಗೊಳಿಸಲ್ಪಟ್ಟಿದ್ದಾರೆ. ಮತ್ತು ಇವರು, ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರನ್ನು ಐಕ್ಯಗೊಳಿಸಿದ ಅದೇ ಅಂಶಗಳಿಂದ ಐಕ್ಯಗೊಳಿಸಲ್ಪಟ್ಟಿದ್ದಾರೆ.

ಯೆಹೋವನ ಸಾಕ್ಷಿಗಳು ಅನುಭವಿಸುವ ಐಕ್ಯಕ್ಕೆ ಇಂಬುಕೊಡುವ ಪ್ರಪ್ರಧಾನ ವಿಷಯವು ಯೆಹೋವ ದೇವರಿಗೆ ಅವರು ತೋರಿಸುವ ಭಕ್ತಿಯಾಗಿದೆ. ಎಲ್ಲಾ ಸಂದರ್ಭಗಳಲ್ಲಿಯೂ ಅವರು ಆತನಿಗೆ ನಿಷ್ಠರಾಗಿ ಉಳಿಯಲು ಶ್ರಮಿಸುತ್ತಾರೆ ಎಂಬುದು ಇದರ ಅರ್ಥ. ಯೆಹೋವನ ಸಾಕ್ಷಿಗಳು ಯೇಸು ಕ್ರಿಸ್ತನಲ್ಲಿ ಮತ್ತು ಅವನ ಬೋಧನೆಗಳಲ್ಲಿ ಸಹ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ. ಈ ಕ್ರೈಸ್ತರು ಜೊತೆವಿಶ್ವಾಸಿಗಳಿಗಾಗಿ ಸ್ವತ್ಯಾಗದ ಪ್ರೀತಿಯನ್ನು ತೋರಿಸುತ್ತಾರೆ ಮತ್ತು ತಾವು ಸಕ್ರಿಯವಾಗಿರುವ ಎಲ್ಲಾ ದೇಶಗಳಲ್ಲಿ ದೇವರ ರಾಜ್ಯದ ಒಂದೇ ಸುವಾರ್ತೆಯನ್ನು ಸಾರುತ್ತಾರೆ. ಅವರು ಈ ರಾಜ್ಯದ ಕುರಿತು ಎಲ್ಲಾ ನಂಬಿಕೆಗಳ, ಜಾತಿಗಳ, ರಾಷ್ಟ್ರಗಳ ಮತ್ತು ಸಾಮಾಜಿಕ ಗುಂಪುಗಳ ಜನರೊಂದಿಗೆ ಮಾತಾಡಲು ಸಂತೋಷಿಸುತ್ತಾರೆ. ಯೆಹೋವನ ಸಾಕ್ಷಿಗಳು ಈ ಲೋಕದ ವ್ಯವಹಾರಗಳಲ್ಲಿ ತಟಸ್ಥರಾಗಿಯೂ ಉಳಿಯುತ್ತಾರೆ. ಇದು ಮಾನವಕುಲದ ಮಧ್ಯೆ ಇಷ್ಟು ವಿಭಾಜಕವಾಗಿರುವ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ವಾಣಿಜ್ಯದ ಒತ್ತಡಗಳನ್ನು ಪ್ರತಿರೋಧಿಸಲು ಅವರಿಗೆ ಸಹಾಯಮಾಡುತ್ತದೆ. ಸಾಕ್ಷಿಗಳೆಲ್ಲರೂ ಬೈಬಲ್‌ ಮಟ್ಟಗಳಿಗೆ ತಕ್ಕಂತೆ ತಮ್ಮನ್ನು ನಡೆಸಿಕೊಳ್ಳುವ ಮೂಲಕ ಐಕ್ಯತೆಗೆ ಇಂಬುಕೊಡಬೇಕಾಗಿರುವ ತಮ್ಮ ಕರ್ತವ್ಯವನ್ನು ಸ್ವೀಕರಿಸುತ್ತಾರೆ.

ಐಕ್ಯವು ಇತರರನ್ನು ಆಕರ್ಷಿಸುತ್ತದೆ

ಅನೇಕವೇಳೆ ಈ ಐಕ್ಯವು ಸಾಕ್ಷಿಗಳಲ್ಲದವರ ಆಸಕ್ತಿಯನ್ನು ಕೆರಳಿಸಿದೆ. ಉದಾಹರಣೆಗೆ, ಇಲ್ಸ * ಎಂಬವಳು ಜರ್ಮನಿಯ ಒಂದು ಕಾನ್ವೆಂಟ್‌ನಲ್ಲಿ ಒಮ್ಮೆ ಒಬ್ಬ ಕ್ಯಾಥೊಲಿಕ್‌ ಸಂನ್ಯಾಸಿನಿ ಆಗಿದ್ದಳು. ಅವಳನ್ನು ಯೆಹೋವನ ಸಾಕ್ಷಿಗಳ ಕಡೆಗೆ ಸೆಳೆದದ್ದು ಯಾವುದು? ಇಲ್ಸ ಹೇಳಿದ್ದು: “ನಾನು ಭೇಟಿಮಾಡಿರುವವರಲ್ಲಿ ಅವರೇ ಅತ್ಯುತ್ತಮ ಜನರು. ಅವರು ಯುದ್ಧಕ್ಕೆ ಹೋಗುವುದಿಲ್ಲ; ಯಾರಿಗೂ ಯಾವ ಹಾನಿಯನ್ನೂ ಮಾಡುವುದಿಲ್ಲ. ಅವರು ದೇವರ ರಾಜ್ಯದ ಕೆಳಗೆ ಪರದೈಸ್‌ ಭೂಮಿಯಲ್ಲಿ ಜನರು ಸಂತೋಷವಾಗಿ ಜೀವಿಸುವಂತೆ ಅವರಿಗೆ ಸಹಾಯಮಾಡಲು ಬಯಸುತ್ತಾರೆ.”

ಮತ್ತೊಂದು ಉದಾಹರಣೆಯು ಗುಂಟರ್‌ ಎಂಬವರದ್ದಾಗಿದೆ. ಇವರು ಒಬ್ಬ ಜರ್ಮನ್‌ ಸೈನಿಕರಾಗಿದ್ದರು. ಎರಡನೇ ಲೋಕ ಯುದ್ಧದ ಸಮಯದಲ್ಲಿ ಇವರನ್ನು ಫ್ರಾನ್ಸ್‌ಗೆ ಕಳುಹಿಸಲಾಗಿತ್ತು. ಒಂದು ದಿನ, ಗುಂಟರ್‌ ಅವರ ತಂಡದಲ್ಲಿದ್ದ ಸೈನಿಕರಿಗಾಗಿ ಒಬ್ಬ ಪ್ರಾಟೆಸ್ಟಂಟ್‌ ಪಾದ್ರಿಯು ಒಂದು ಧಾರ್ಮಿಕ ಆರಾಧನೆಯನ್ನು ನಡೆಸಿದನು. ಈ ಪಾದ್ರಿಯು ದೇವರ ಸಹಾಯ, ಸಂರಕ್ಷಣೆ ಮತ್ತು ವಿಜಯಕ್ಕಾಗಿ ಪ್ರಾರ್ಥಿಸಿದನು. ಈ ಧಾರ್ಮಿಕ ಆರಾಧನೆಯು ಕೊನೆಗೊಂಡ ಬಳಿಕ, ಕಾವಲುಗಾರನಾಗಿ ನೇಮಿಸಲ್ಪಟ್ಟಿದ್ದ ಗುಂಟರ್‌ ತನ್ನ ಕೆಲಸವನ್ನು ಆರಂಭಿಸಿದರು. ತನ್ನ ದುರ್ಬೀನಿನ ಮೂಲಕ, ಯುದ್ಧ ಸಾಲುಗಳ ಆಚೆ ಬದಿಯಲ್ಲಿದ್ದ ವಿರೋಧಿ ದಳದ ಸೈನಿಕರು ಕೂಡ ಒಬ್ಬ ಪಾದ್ರಿಯಿಂದ ನಡೆಸಲ್ಪಡುತ್ತಿರುವ ಧಾರ್ಮಿಕ ಆರಾಧನೆಗೆ ಕೂಡಿಬಂದಿರುವುದನ್ನು ಗುಂಟರ್‌ ಗಮನಿಸಿದರು. ಗುಂಟರ್‌ ಅನಂತರ ಹೇಳಿದ್ದು: “ಪ್ರಾಯಶಃ ಆ ಪಾದ್ರಿಯು ಸಹ ದೇವರ ಸಹಾಯ, ಸಂರಕ್ಷಣೆ ಮತ್ತು ವಿಜಯಕ್ಕಾಗಿ ಪ್ರಾರ್ಥಿಸಿರಬಹುದು. ಕ್ರೈಸ್ತ ಚರ್ಚುಗಳು ಒಂದೇ ಯುದ್ಧದ ವಿರುದ್ಧ ಪಕ್ಷಗಳಲ್ಲಿ ಹೇಗೆ ಇರಲು ಸಾಧ್ಯ ಎಂದು ನಾನು ಆಲೋಚಿಸಿದೆ.” ಈ ಅಭಿಪ್ರಾಯಗಳು ಗುಂಟರ್‌ ಮನದಾಳದಲ್ಲಿ ಬೇರೂರಿದವು. ಅನಂತರ ಗುಂಟರ್‌ಗೆ ಯುದ್ಧದಲ್ಲಿ ಭಾಗವಹಿಸದ ಯೆಹೋವನ ಸಾಕ್ಷಿಗಳ ಸಂಪರ್ಕವಾದಾಗ ಅವರು ಸಾಕ್ಷಿಗಳ ಲೋಕವ್ಯಾಪಕ ಸಹೋದರತ್ವದ ಭಾಗವಾದರು.

ಅಶೋಕ್‌ ಮತ್ತು ಫೀಮ ಒಂದು ಪ್ರಾಚ್ಯ ಧರ್ಮಕ್ಕೆ ಸೇರಿದವರಾಗಿದ್ದರು. ಅವರ ಮನೆಯಲ್ಲಿ ದೇವರಿಗಾಗಿ ಒಂದು ಆರಾಧನ ಮಂದಿರ ಸಹ ಇತ್ತು. ಒಂದು ಘೋರ ವ್ಯಾಧಿಯು ಅವರ ಕುಟುಂಬವನ್ನು ಬಾಧಿಸಿದಾಗ, ಅವರು ತಮ್ಮ ಧರ್ಮವನ್ನು ಮರುಪರಿಶೀಲಿಸಿದರು. ಯೆಹೋವನ ಸಾಕ್ಷಿಗಳೊಂದಿಗೆ ಅವರು ಮಾಡಿದ ಸಂಭಾಷಣೆಗಳಲ್ಲಿ, ಬೈಬಲಿನ ಬೋಧನೆಗಳಿಂದ ಮತ್ತು ಸಾಕ್ಷಿಗಳ ಮಧ್ಯೆ ಕಂಡುಬಂದ ಪ್ರೀತಿಯಿಂದ ಅಶೋಕ್‌ ಮತ್ತು ಫೀಮ ಪ್ರಭಾವಿತರಾದರು. ಈಗ ಅವರು ಯೆಹೋವನ ರಾಜ್ಯದ ಸುವಾರ್ತೆಯ ಹುರುಪುಳ್ಳ ಪ್ರಚಾರಕರಾಗಿದ್ದಾರೆ.

ಇಲ್ಸ, ಗುಂಟರ್‌, ಅಶೋಕ್‌ ಮತ್ತು ಫೀಮ ಯೆಹೋವನ ಸಾಕ್ಷಿಗಳೊಂದಿಗೆ ಒಂದು ಲೋಕವ್ಯಾಪಕ ಸಹೋದರತ್ವದಲ್ಲಿ ಐಕ್ಯಗೊಳಿಸಲ್ಪಟ್ಟಿದ್ದಾರೆ. ಇಂದು ಅವರನ್ನು ಆರಾಧನೆಯಲ್ಲಿ ಐಕ್ಯಗೊಳಿಸಿರುವ ಅದೇ ಅಂಶಗಳು ಶೀಘ್ರದಲ್ಲಿ ಇಡೀ ವಿಧೇಯ ಮಾನವಕುಲವನ್ನು ಐಕ್ಯಗೊಳಿಸುವವು ಎಂಬ ಬೈಬಲಿನ ವಾಗ್ದಾನದಲ್ಲಿ ಅವರು ನಂಬಿಕೆಯಿಡುತ್ತಾರೆ. ಆಗ, ಧರ್ಮದ ಹೆಸರಿನಲ್ಲಿ ಯಾವುದೇ ಘೋರ ಕೃತ್ಯಗಳು, ಅನೈಕ್ಯವು ಮತ್ತು ವಿಭಜನೆಯು ಇರದು. ಇಡೀ ಲೋಕವು ಸತ್ಯ ದೇವರಾಗಿರುವ ಯೆಹೋವನ ಆರಾಧನೆಯಲ್ಲಿ ಐಕ್ಯಗೊಳಿಸಲ್ಪಟ್ಟಿರುವುದು.​—⁠ಪ್ರಕಟನೆ 21:4, 5.

[ಪಾದಟಿಪ್ಪಣಿ]

^ ಪ್ಯಾರ. 16 ಈ ಲೇಖನದಲ್ಲಿ ಉಪಯೋಗಿಸಲ್ಪಟ್ಟಿರುವ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 4, 5ರಲ್ಲಿರುವ ಚಿತ್ರಗಳು]

ವಿವಿಧ ಹಿನ್ನೆಲೆಗಳಿಂದ ಬಂದವರಾಗಿದ್ದರೂ ಆದಿಕ್ರೈಸ್ತರು ಐಕ್ಯದಿಂದಿದ್ದರು