ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ವಿವೇಕದ ಸಹಾಯದಿಂದ ನಿಮ್ಮ ಮಕ್ಕಳನ್ನು ಸಂರಕ್ಷಿಸುವ ವಿಧ

ದೈವಿಕ ವಿವೇಕದ ಸಹಾಯದಿಂದ ನಿಮ್ಮ ಮಕ್ಕಳನ್ನು ಸಂರಕ್ಷಿಸುವ ವಿಧ

ದೈವಿಕ ವಿವೇಕದ ಸಹಾಯದಿಂದ ನಿಮ್ಮ ಮಕ್ಕಳನ್ನು ಸಂರಕ್ಷಿಸುವ ವಿಧ

ಪ್ರತಿದಿನ ನಮ್ಮ ದೇಹಗಳು ಹೋರಾಟ ನಡೆಸುತ್ತವೆ. ಅವುಗಳು ಅನೇಕಾನೇಕ ಸೂಕ್ಷ್ಮಜೀವಾಣುಗಳು, ಪರೋಪಜೀವಿಗಳು ಮತ್ತು ವೈರಸ್‌ಗಳನ್ನು ಪ್ರತಿರೋಧಿಸಬೇಕಾಗಿರುತ್ತದೆ. ನಮ್ಮಲ್ಲಿ ಹೆಚ್ಚಿನವರು ರೋಗಾಣುಗಳ ಆಕ್ರಮಣಗಳ ವಿರುದ್ಧ ನಮ್ಮನ್ನು ಸಂರಕ್ಷಿಸುವ ಮತ್ತು ಅನೇಕ ರೀತಿಯ ಸೋಂಕು ರೋಗಗಳಿಗೆ ತುತ್ತಾಗುವುದರಿಂದ ನಮ್ಮನ್ನು ಕಾಪಾಡುವಂಥ ಸೋಂಕು ರಕ್ಷಾ ವ್ಯವಸ್ಥೆಯನ್ನು ವಂಶಪಾರಂಪರ್ಯವಾಗಿ ಪಡೆದಿರುವುದಕ್ಕಾಗಿ ಆಭಾರಿಗಳಾಗಿದ್ದಾರೆ.

ತದ್ರೀತಿಯಲ್ಲಿ, ಕ್ರೈಸ್ತರು ತಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ಕೆಡಿಸಬಲ್ಲ ಅಶಾಸ್ತ್ರೀಯ ಆಲೋಚನೆ ಮತ್ತು ಮೌಲ್ಯಗಳ ವಿರುದ್ಧ ಹಾಗೂ ಒತ್ತಡಗಳ ವಿರುದ್ಧ ಹೋರಾಡಬೇಕು. (2 ಕೊರಿಂಥ 11:⁠3) ನಮ್ಮ ಹೃದಮನಗಳ ಮೇಲಿನ ಈ ದೈನಂದಿನ ಆಕ್ರಮಣವನ್ನು ಪ್ರತಿರೋಧಿಸಲಿಕ್ಕಾಗಿ ನಾವು ಆಧ್ಯಾತ್ಮಿಕ ರಕ್ಷಣಾಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ.

ಇಂಥ ರಕ್ಷಣಾಸಾಮರ್ಥ್ಯಗಳು ನಮ್ಮ ಮಕ್ಕಳಿಗೆ ವಿಶೇಷವಾಗಿ ಅಗತ್ಯವಾಗಿವೆ, ಏಕೆಂದರೆ ಲೋಕದ ಮನೋಭಾವವನ್ನು ಎದುರಿಸಸಾಧ್ಯವಿರುವ ಆಧ್ಯಾತ್ಮಿಕ ರಕ್ಷಣಾಸಾಮರ್ಥ್ಯಗಳು ಅವರಿಗೆ ಹುಟ್ಟಿನಿಂದಲೇ ಬಂದಿರುವುದಿಲ್ಲ. (ಎಫೆಸ 2:⁠2) ಮಕ್ಕಳು ಬೆಳೆಯುತ್ತಾ ಬಂದಂತೆ ತಮ್ಮ ಸ್ವಂತ ರಕ್ಷಣಾಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಹೆತ್ತವರು ಅವರಿಗೆ ಸಹಾಯಮಾಡುವುದು ಅತ್ಯಾವಶ್ಯಕವಾದದ್ದಾಗಿದೆ. ಈ ರಕ್ಷಣಾಸಾಮರ್ಥ್ಯಗಳು ಯಾವುದರ ಮೇಲೆ ಅವಲಂಬಿತವಾಗಿವೆ? ಬೈಬಲ್‌ ವಿವರಿಸುವುದು: ‘ಯೆಹೋವನೇ ವಿವೇಕವನ್ನು ಕೊಡುವಾತನು, ಆತನೇ ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.’ (ಜ್ಞಾನೋಕ್ತಿ 2:6, 8) ದೈವಿಕ ವಿವೇಕವೇ ಯುವ ಜನರ ಮಾರ್ಗವನ್ನು ಕಾಪಾಡುವುದು; ಇದಿಲ್ಲದಿದ್ದರೆ ಅವರು ಹಾನಿಕರ ಸಹವಾಸಕ್ಕೆ, ಸಮವಯಸ್ಕರ ಒತ್ತಡಕ್ಕೆ ಅಥವಾ ಅಹಿತಕರವಾದ ಮನೋರಂಜನೆಗೆ ಬಲಿಬೀಳಬಹುದು. ಹಾಗಾದರೆ, ಹೆತ್ತವರು ಯೆಹೋವನ ಮಾರ್ಗದರ್ಶನವನ್ನು ಅನುಸರಿಸುತ್ತಾ ಮಕ್ಕಳಲ್ಲಿ ದೈವಿಕ ವಿವೇಕವನ್ನು ಹೇಗೆ ತುಂಬಿಸಸಾಧ್ಯವಿದೆ?

ಭಕ್ತಿವರ್ಧಕ ಸಹವಾಸವನ್ನು ಮಾಡಲು ಪ್ರಯತ್ನಿಸುವುದು

ಹದಿಪ್ರಾಯದವರು ಇತರ ಹದಿಪ್ರಾಯದವರೊಂದಿಗೆ ಸಮಯವನ್ನು ಕಳೆಯಲು ಬಯಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ ಕೇವಲ ಅನನುಭವಿಗಳಾಗಿರುವವರೊಂದಿಗೆ ಮಾತ್ರ ಸಹವಾಸಮಾಡುವುದು ದೈವಿಕ ವಿವೇಕವನ್ನು ಪಡೆದುಕೊಳ್ಳಲು ಮತ್ತು ಅದನ್ನು ಉಪಯೋಗಿಸಲು ಅವರಿಗೆ ಸಹಾಯಮಾಡುವುದಿಲ್ಲ. “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ” ಎಂದು ಜ್ಞಾನೋಕ್ತಿಯು ಎಚ್ಚರಿಕೆ ನೀಡುತ್ತದೆ. (ಜ್ಞಾನೋಕ್ತಿ 22:15) ಹಾಗಾದರೆ, ಸಹವಾಸದ ವಿಷಯದಲ್ಲಿ ದೈವಿಕ ವಿವೇಕವನ್ನು ಅನ್ವಯಿಸಿಕೊಳ್ಳುವಂತೆ ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಿದ್ದಾರೆ?

ಡಾನ್‌ * ಎಂಬ ಹೆಸರಿನ ಒಬ್ಬ ತಂದೆಯು ಹೇಳಿದ್ದು: “ನಮ್ಮ ಗಂಡುಮಕ್ಕಳು ತಮ್ಮ ಪ್ರಾಯದ ಸ್ನೇಹಿತರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರು, ಆದರೆ ಆ ರೀತಿಯಲ್ಲಿ ಹೆಚ್ಚಿನ ಸಮಯವನ್ನು ಅವರು ನಮ್ಮ ಮನೆಯಲ್ಲಿ ಮತ್ತು ನಮ್ಮ ಸಮಕ್ಷಮದಲ್ಲೇ ಕಳೆಯುತ್ತಿದ್ದರು. ಯಾವಾಗ ಬೇಕಾದರೂ ಅವರು ನಮ್ಮ ಮನೆಗೆ ಬರಬಹುದಿತ್ತು ಮತ್ತು ಅದು ಯಾವಾಗಲೂ ಯುವ ಜನರಿಂದ ತುಂಬಿರುತ್ತಿತ್ತು. ನಾವು ಅವರಿಗೆ ಊಟೋಪಚಾರ ಮಾಡುತ್ತಿದ್ದೆವು ಮತ್ತು ಅವರನ್ನು ಸ್ವಾಗತಿಸುತ್ತಿದ್ದೆವು. ನಮ್ಮ ಮಕ್ಕಳು ಸಂತೋಷವನ್ನು ಅನುಭವಿಸಸಾಧ್ಯವಿರುವಂಥ ಸುರಕ್ಷಿತ ವಾತಾವರಣವನ್ನು ಒದಗಿಸಿಕೊಡುವ ಬಯಕೆಯಿಂದಲೇ ನಮ್ಮ ಮನೆಯಲ್ಲಿ ಆ ಸದ್ದುಗದ್ದಲವನ್ನು ತಾಳಿಕೊಳ್ಳಲು ನಾವು ಸಿದ್ಧರಾಗಿದ್ದೆವು.”

ಬ್ರೈಅನ್‌ ಮತ್ತು ಮೇರೀ ಅವರಿಗೆ ಮೂವರು ಮಕ್ಕಳಿದ್ದಾರೆ. ಇವರಿಗೆ ತರಬೇತಿ ನೀಡುವುದು ಯಾವಾಗಲೂ ಸುಲಭದ ಕೆಲಸವಾಗಿರಲಿಲ್ಲ ಎಂಬುದನ್ನು ಅವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಅವರು ಹೀಗೆ ತಿಳಿಸುತ್ತಾರೆ: “ನಮ್ಮ ಸಭೆಯಲ್ಲಿ ನಮ್ಮ ಮಗಳಾದ ಜೇನ್‌ಳೊಂದಿಗೆ ಸಹವಾಸಮಾಡಲು, ತಮ್ಮ ಹದಿಪ್ರಾಯದ ಕೊನೆಯಲ್ಲಿರುವ ಯುವ ಜನರು ಕೆಲವರೇ ಇದ್ದರು. ಆದರೂ, ಅವಳಿಗೆ ಸೂಸನ್‌ ಎಂಬ ಹೆಸರಿನ ಒಬ್ಬ ಗೆಳತಿಯಿದ್ದಳು. ಅವಳು ತುಂಬ ಸ್ನೇಹಪರಳೂ ಹಸನ್ಮುಖಿಯೂ ಆಗಿದ್ದಳು. ಅವಳ ಹೆತ್ತವರು ನಮ್ಮಷ್ಟು ಕಟ್ಟುನಿಟ್ಟಿನವರಾಗಿರಲಿಲ್ಲ. ಸೂಸನ್‌ಗೆ ರಾತ್ರಿ ಬಹಳ ತಡವಾಗಿ ಮನೆಗೆ ಬರಲು, ಗಿಡ್ಡ ಸ್ಕರ್ಟ್‌ಗಳನ್ನು ಧರಿಸಲು, ಪ್ರಶ್ನಾರ್ಹ ಸಂಗೀತವನ್ನು ಆಲಿಸಲು ಮತ್ತು ಅನುಚಿತ ಚಲನಚಿತ್ರಗಳನ್ನು ನೋಡಲು ಅನುಮತಿಯಿತ್ತು, ಆದರೆ ಜೇನ್‌ಗೆ ಹೀಗೆಲ್ಲಾ ಅನುಮತಿಯಿರಲಿಲ್ಲ. ತುಂಬ ಸಮಯದ ವರೆಗೆ ಜೇನ್‌ ನಮ್ಮ ದೃಷ್ಟಿಕೋನದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಅಸಮರ್ಥಳಾಗಿದ್ದಳು. ಜೇನ್‌ಳ ಅಭಿಪ್ರಾಯದಲ್ಲಿ ಸೂಸನಳ ಹೆತ್ತವರು ಹೆಚ್ಚು ತಿಳಿವಳಿಕೆಯುಳ್ಳವರಾಗಿದ್ದರು, ಆದರೆ ನಮ್ಮನ್ನು ಅವಳು ತುಂಬ ಕಟ್ಟುನಿಟ್ಟಿನವರು ಎಂದು ಪರಿಗಣಿಸುತ್ತಿದ್ದಳು. ಸೂಸನಳು ಆಧ್ಯಾತ್ಮಿಕ ಸಮಸ್ಯೆಗಳಲ್ಲಿ ಸಿಕ್ಕಿಬಿದ್ದಾಗಲೇ, ನಮ್ಮ ದೃಢತೆಯು ಅವಳನ್ನು ವಾಸ್ತವದಲ್ಲಿ ಸಂರಕ್ಷಿಸಿತು ಎಂಬುದನ್ನು ಜೇನ್‌ ಮನಗಂಡಳು. ನಮ್ಮ ಮಗಳಿಗೆ ಯಾವುದು ಹಿತಕರವೆಂದು ನಾವು ನಂಬಿದೆವೋ ಆ ನಿಲುವಿನಲ್ಲಿ ನಾವು ಸ್ವಲ್ಪವೂ ವಿಚಲಿತರಾಗದಿದ್ದುದಕ್ಕಾಗಿ ನಾವು ತುಂಬ ಸಂತೋಷಿತರಾಗಿದ್ದೇವೆ.”

ಜೇನ್‌ಳಂತೆಯೇ ಅನೇಕ ಯುವ ಜನರು ಸಹವಾಸದ ವಿಷಯದಲ್ಲಿ ತಮ್ಮ ಹೆತ್ತವರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಎಷ್ಟು ವಿವೇಕಯುತ ಎಂಬುದನ್ನು ಮನಗಂಡಿದ್ದಾರೆ. “ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು ಜ್ಞಾನಿಗಳ ನಡುವೆ ನೆಲೆಗೊಳ್ಳುವನು” ಎಂದು ಜ್ಞಾನೋಕ್ತಿಯು ಹೇಳುತ್ತದೆ. (ಜ್ಞಾನೋಕ್ತಿ 15:31) ದೈವಿಕ ವಿವೇಕವು ಭಕ್ತಿವರ್ಧಕ ಸ್ನೇಹಿತರ ಸಹವಾಸವನ್ನು ಮಾಡುವಂತೆ ಯುವ ಜನರನ್ನು ಮುನ್ನಡಿಸುತ್ತದೆ.

ಇತರರಿಗೆ ಅನುಗುಣವಾಗಿ ವರ್ತಿಸುವ ಒತ್ತಡವನ್ನು ನಿಭಾಯಿಸುವುದು

ಸಹವಾಸಕ್ಕೆ ನಿಕಟವಾಗಿ ಸಂಬಂಧಿಸಿರುವ ಇನ್ನೊಂದು ವಿಚಾರವು ಸಮವಯಸ್ಕರ ಒತ್ತಡವೇ ಆಗಿದೆ. ಇತರರಿಗೆ ಅನುಗುಣವಾಗಿ ವರ್ತಿಸುವ ಒತ್ತಡವು ಸತತವಾಗಿ ನಮ್ಮ ಮಕ್ಕಳ ರಕ್ಷಣಾಸಾಮರ್ಥ್ಯಗಳ ಮೇಲೆ ಆಕ್ರಮಣಮಾಡುತ್ತದೆ. ಸಾಮಾನ್ಯವಾಗಿ ಯುವ ಜನರು ತಮ್ಮ ಪ್ರಾಯದವರ ಮೆಚ್ಚುಗೆಯನ್ನು ಪಡೆಯಲು ಪ್ರಯತ್ನಿಸುತ್ತಾರಾದ್ದರಿಂದ, ಲೋಕಕ್ಕೆ ಅಪೇಕ್ಷಣೀಯವಾಗಿರುವಂಥ ವಿಷಯಗಳನ್ನೇ ಮಾಡುವಂತೆ ಸಮವಯಸ್ಕರ ಒತ್ತಡವು ಅವರನ್ನು ಪ್ರಚೋದಿಸಸಾಧ್ಯವಿದೆ.​—⁠ಜ್ಞಾನೋಕ್ತಿ 29:⁠25.

“ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ” ಎಂದು ಬೈಬಲ್‌ ನಮಗೆ ನೆನಪು ಹುಟ್ಟಿಸುತ್ತದೆ. (1 ಯೋಹಾನ 2:17) ಆದುದರಿಂದ, ತಮ್ಮ ಮಕ್ಕಳು ಲೋಕದ ದೃಷ್ಟಿಕೋನಗಳಿಂದ ಅತಿಯಾಗಿ ಪ್ರಭಾವಿಸಲ್ಪಡುವಂತೆ ಹೆತ್ತವರು ಅನುಮತಿಸಬಾರದು. ಕ್ರೈಸ್ತರಿಗೆ ಸೂಕ್ತವಾಗಿರುವಂಥ ವಿಧದಲ್ಲಿ ತಮ್ಮ ಮಕ್ಕಳು ಆಲೋಚಿಸುವಂತೆ ಹೆತ್ತವರು ಹೇಗೆ ಸಹಾಯಮಾಡಸಾಧ್ಯವಿದೆ?

ರಿಚರ್ಡ್‌ ಹೇಳಿದ್ದು: “ನನ್ನ ಮಗಳು ಯಾವಾಗಲೂ ಬೇರೆ ಯುವ ಜನರು ಯಾವ ರೀತಿಯ ಬಟ್ಟೆಗಳನ್ನು ಧರಿಸುತ್ತಿದ್ದರೋ ಅಂಥದ್ದೇ ಬಟ್ಟೆಗಳನ್ನು ಧರಿಸಲು ಇಷ್ಟಪಟ್ಟಳು. ಆಗ ನಾವು ಅವಳ ಪ್ರತಿಯೊಂದು ಬೇಡಿಕೆಯ ಒಳಿತುಕೆಡಕುಗಳ ಕುರಿತು ಅವಳೊಂದಿಗೆ ತಾಳ್ಮೆಯಿಂದ ತರ್ಕಿಸಿದೆವು. ಕ್ರೈಸ್ತರಿಗೆ ಸ್ವೀಕಾರಾರ್ಹವಾಗಿ ಪರಿಗಣಿಸಲ್ಪಟ್ಟಿದ್ದ ಫ್ಯಾಷನ್‌ಗಳ ಬಗ್ಗೆಯೂ, ಕೆಲವು ವರ್ಷಗಳ ಹಿಂದೆ ಕೇಳಿಸಿಕೊಂಡಿದ್ದ ಸಲಹೆಯನ್ನು ನಾವು ಅನುಸರಿಸಿದೆವು. ಅದೇನೆಂದರೆ, ‘ವಿವೇಕಿಯಾದ ಒಬ್ಬ ವ್ಯಕ್ತಿಯು ಒಂದು ಹೊಸ ಫ್ಯಾಷನ್‌ ಅನ್ನು ಸ್ವೀಕರಿಸುವುದರಲ್ಲಿ ಪ್ರಥಮನಾಗಿರುವುದಿಲ್ಲ ಮತ್ತು ಅದನ್ನು ಬಿಟ್ಟುಬಿಡುವುದರಲ್ಲಿ ಕೊನೆಯವನಾಗಿರುವುದಿಲ್ಲ.’”

ಪೋಲಿನ್‌ ಎಂಬ ಹೆಸರಿನ ತಾಯಿಯು ಇನ್ನೊಂದು ವಿಧದಲ್ಲಿ ಸಮವಯಸ್ಕರ ಒತ್ತಡವನ್ನು ನಿಭಾಯಿಸಲು ಸಹಾಯಮಾಡಿದಳು. ಅವಳು ಜ್ಞಾಪಿಸಿಕೊಳ್ಳುವುದು: “ನನ್ನ ಮಕ್ಕಳ ಅಭಿರುಚಿಗಳಲ್ಲಿ ನಾನು ಆಸಕ್ತಿ ವಹಿಸಿದೆ ಮತ್ತು ಅವರೊಂದಿಗೆ ಮಾತಾಡಲಿಕ್ಕಾಗಿ ಕ್ರಮವಾಗಿ ಅವರ ಕೊಠಡಿಗಳಿಗೆ ಹೋಗುತ್ತಿದ್ದೆ. ಆ ದೀರ್ಘ ಸಂಭಾಷಣೆಗಳು, ನಾನು ಅವರ ವಿಚಾರಧಾರಣೆಗಳನ್ನು ರೂಪಿಸುವಂತೆ ಮತ್ತು ವಿಷಯಗಳನ್ನು ಬೇರೆ ದೃಷ್ಟಿಕೋನಗಳಿಂದ ನೋಡಲು ಅವರಿಗೆ ಸಹಾಯಮಾಡುವಂತೆ ನನ್ನನ್ನು ಶಕ್ತಗೊಳಿಸಿದವು.”

ಸಮವಯಸ್ಕರ ಒತ್ತಡವೇನೂ ನಿಂತುಹೋಗುವುದಿಲ್ಲ, ಆದುದರಿಂದ ಹೆತ್ತವರು ‘ವಿತರ್ಕಗಳನ್ನು ಕೆಡವಿಹಾಕುವ’ ಮತ್ತು ತಮ್ಮ ಮಕ್ಕಳು ತಮ್ಮ ಆಲೋಚನೆಗಳನ್ನು ‘ಕ್ರಿಸ್ತನಿಗೆ ವಿಧೇಯತೆಯಲ್ಲಿ ಸೆರೆಹಿಡಿಯುವಂತೆ’ ಸಹಾಯಮಾಡುವ ಸತತ ಹೋರಾಟವನ್ನು ಎದುರಿಸಬಹುದು. (2 ಕೊರಿಂಥ 10:5) ಆದರೆ ‘ಪ್ರಾರ್ಥನೆಯಲ್ಲಿ’ ನಿರತರಾಗಿರುವ ಮೂಲಕ, ಈ ಅತ್ಯಾವಶ್ಯಕ ಕೆಲಸವನ್ನು ಪೂರ್ಣಗೊಳಿಸಲು ಹೆತ್ತವರು ಮತ್ತು ಮಕ್ಕಳು ಹೆಚ್ಚು ಬಲಗೊಳಿಸಲ್ಪಡುವರು.​—⁠ರೋಮಾಪುರ 12:12; ಕೀರ್ತನೆ 65:⁠2.

ಮನೋರಂಜನೆಯ ಪ್ರಬಲ ಆಕರ್ಷಣೆ

ಹೆತ್ತವರು ನಿಭಾಯಿಸಲು ಕಷ್ಟಕರವಾಗಿ ಕಂಡುಕೊಳ್ಳಬಹುದಾದ ಮೂರನೆಯ ಪ್ರಭಾವವು ಮನೋರಂಜನೆಯೇ ಆಗಿದೆ. ಎಳೆಯರು ಆಟವಾಡಲು ತುಂಬ ಇಷ್ಟಪಡುವುದು ಸಹಜ. ಇದೇ ರೀತಿಯಲ್ಲಿ ದೊಡ್ಡ ಮಕ್ಕಳು ಸಹ ವಿನೋದಾವಳಿಯಲ್ಲಿ ಒಳಗೂಡಲು ಹಾತೊರೆಯುತ್ತಾರೆ. (2 ತಿಮೊಥೆಯ 2:22) ಆದರೆ ಈ ಬಯಕೆಯು ವಿವೇಕರಹಿತವಾದ ರೀತಿಯಲ್ಲಿ ತಣಿಸಲ್ಪಡುವಲ್ಲಿ, ಇದು ಅವರ ಆಧ್ಯಾತ್ಮಿಕ ರಕ್ಷಣಾಸಾಮರ್ಥ್ಯಗಳನ್ನು ದುರ್ಬಲಗೊಳಿಸಿಬಿಡಬಲ್ಲದು. ಅಪಾಯವು ಮುಖ್ಯವಾಗಿ ಎರಡು ವಿಧಗಳಲ್ಲಿ ಬರುತ್ತದೆ.

ಮೊದಲನೆಯದಾಗಿ, ಹೆಚ್ಚಿನ ಮನೋರಂಜನೆಯು ಲೋಕದ ಕೀಳು ನೈತಿಕ ಮಟ್ಟಗಳನ್ನು ಪ್ರತಿಬಿಂಬಿಸುತ್ತದೆ. (ಎಫೆಸ 4:​17-19) ಆದರೂ, ಲೌಕಿಕ ಮನೋರಂಜನೆಯು ರೋಮಾಂಚಕವಾದ ಹಾಗೂ ಆಕರ್ಷಕವಾದ ವಿಧದಲ್ಲಿ ಯಥಾವತ್ತಾಗಿ ಪ್ರಸ್ತುತಪಡಿಸಲ್ಪಡುತ್ತದೆ. ಇದು ಗಂಡಾಂತರಗಳನ್ನು ಗ್ರಹಿಸದಿರಬಹುದಾದ ಯುವ ಜನರಿಗೆ ನಿಜವಾದ ಅಪಾಯವನ್ನು ಒಡ್ಡುತ್ತದೆ.

ಎರಡನೆಯದಾಗಿ, ಮನೋರಂಜನೆಯಲ್ಲಿ ಕಳೆಯುವ ಸಮಯದ ಪ್ರಮಾಣವು ಸಹ ಸಮಸ್ಯೆಗಳನ್ನು ಉಂಟುಮಾಡಬಲ್ಲದು. ಕೆಲವರಿಗಾದರೋ ಮಜಾ ಮಾಡುವುದೇ ಜೀವನದಲ್ಲಿ ಅತ್ಯಂತ ಪ್ರಾಮುಖ್ಯವಾದ ವಿಷಯವಾಗಿಬಿಡುತ್ತದೆ ಮತ್ತು ಇದು ಅವರ ಅತಿ ಹೆಚ್ಚಿನ ಸಮಯವನ್ನೂ ಶಕ್ತಿಯನ್ನೂ ಕಬಳಿಸಿಬಿಡುತ್ತದೆ. “ಜೇನನ್ನು ಹೆಚ್ಚಾಗಿ ತಿನ್ನುವದು ಹಿತವಲ್ಲ” ಎಂದು ಜ್ಞಾನೋಕ್ತಿಯು ಎಚ್ಚರಿಸುತ್ತದೆ. (ಜ್ಞಾನೋಕ್ತಿ 25:27) ತದ್ರೀತಿಯಲ್ಲಿ, ಅತಿಯಾದ ಮನೋರಂಜನೆಯು ಆಧ್ಯಾತ್ಮಿಕ ಆಹಾರಕ್ಕಾಗಿರುವ ಹಸಿವನ್ನು ಸಾಯಿಸುತ್ತದೆ ಮತ್ತು ಮಾನಸಿಕ ಆಲಸ್ಯಕ್ಕೆ ನಡಿಸುತ್ತದೆ. (ಜ್ಞಾನೋಕ್ತಿ 21:17; 24:30-34) ಈ ಲೋಕವನ್ನು ಪೂರ್ಣವಾಗಿ ಅನುಭೋಗಿಸುವುದು, “ವಾಸ್ತವವಾದ ಜೀವನ”ವನ್ನು ಅಂದರೆ ದೇವರ ನೂತನ ಲೋಕದಲ್ಲಿ ನಿತ್ಯಜೀವವನ್ನು ಹೊಂದುವುದರಿಂದ ಯುವ ಜನರನ್ನು ತಡೆಯುವುದು. (1 ತಿಮೊಥೆಯ 6:​12, 18) ಹೆತ್ತವರು ಈ ಪಂಥಾಹ್ವಾನವನ್ನು ಹೇಗೆ ನಿಭಾಯಿಸಿದ್ದಾರೆ?

ಮೂವರು ಹೆಣ್ಣುಮಕ್ಕಳ ತಾಯಿಯಾಗಿರುವ ಮಾರೀ ಕಾರ್ಮನ್‌ ಹೇಳಿದ್ದು: “ನಮ್ಮ ಹೆಣ್ಣುಮಕ್ಕಳು ಹಿತಕರವಾದ ಮನೋರಂಜನೆಯಲ್ಲಿ ಒಳಗೂಡಬೇಕು ಮತ್ತು ಮನಃಪೂರ್ತಿ ಆನಂದಿಸಬೇಕು ಎಂಬುದು ನಮ್ಮ ಇಚ್ಛೆಯಾಗಿತ್ತು. ಆದುದರಿಂದ ನಾವು ಕ್ರಮವಾಗಿ ಕುಟುಂಬವಾಗಿ ಹೊರಗೆ ಸುತ್ತಾಡಲು ಹೋಗುತ್ತಿದ್ದೆವು, ಮತ್ತು ಅವರು ಸಭೆಯಲ್ಲಿನ ಸ್ನೇಹಿತರೊಂದಿಗೂ ಸಮಯವನ್ನು ಕಳೆಯುತ್ತಿದ್ದರು. ಆದರೆ ನಾವು ಮನೋರಂಜನೆಯ ವಿಷಯದಲ್ಲಿ ಸಮತೂಕ ನೋಟವನ್ನು ಕಾಪಾಡಿಕೊಂಡೆವು. ನಾವು ಇದನ್ನು ಊಟವಾದ ಬಳಿಕ ಕೊಡಲ್ಪಡುವ ಸಿಹಿತಿಂಡಿಗೆ ಹೋಲಿಸುತ್ತಿದ್ದೆವು​—⁠ಅದು ಸಿಹಿರುಚಿಗೆ ಅಷ್ಟೆ, ಆದರೆ ಅದೇ ಮುಖ್ಯವಾದ ಭೋಜನವಾಗಿರುವುದಿಲ್ಲ. ಅವರು ಮನೆಯಲ್ಲಿ, ಶಾಲೆಯಲ್ಲಿ ಮತ್ತು ಸಭೆಯಲ್ಲಿ ಒಳ್ಳೇ ಕೆಲಸಗಾರರಾಗಿರಲು ಕಲಿತರು.”

ಡಾನ್‌ ಮತ್ತು ರೂತ್‌ ಎಂಬವರು ಸಹ ಮನೋರಂಜನೆಯನ್ನು ಒದಗಿಸಲಿಕ್ಕಾಗಿ ನಿರ್ದಿಷ್ಟ ಪ್ರಯತ್ನವನ್ನು ಮಾಡುತ್ತಿದ್ದರು. ಅವರು ವಿವರಿಸಿದ್ದು: “ನಾವು ಶನಿವಾರವನ್ನು ‘ಕುಟುಂಬದ ದಿನ’ವಾಗಿ ಬದಿಗಿರಿಸುವ ರೂಢಿಯನ್ನು ಮಾಡಿಕೊಂಡೆವು. ಶನಿವಾರಗಳಂದು ಬೆಳಗ್ಗೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುತ್ತಿದ್ದೆವು, ಮಧ್ಯಾಹ್ನ ಈಜಾಡಲು ಹೋಗುತ್ತಿದ್ದೆವು ಮತ್ತು ಸಾಯಂಕಾಲ ವಿಶೇಷ ಊಟವನ್ನು ಮಾಡುತ್ತಿದ್ದೆವು.”

ಈ ಹೆತ್ತವರ ಹೇಳಿಕೆಗಳು, ಹಿತಕರವಾದ ಮನೋರಂಜನೆಯನ್ನು ಒದಗಿಸುವುದರಲ್ಲಿ ಮತ್ತು ಕ್ರೈಸ್ತನೊಬ್ಬನ ಜೀವಿತದಲ್ಲಿ ಅದಕ್ಕೆ ಸೂಕ್ತ ಸ್ಥಾನವನ್ನು ನೀಡುವುದರಲ್ಲಿ ಸಮತೂಕವನ್ನು ಕಾಪಾಡಿಕೊಳ್ಳುವುದರ ಮೌಲ್ಯವನ್ನು ತೋರಿಸುತ್ತವೆ.​—⁠ಪ್ರಸಂಗಿ 3:4; ಫಿಲಿಪ್ಪಿ 4:⁠5.

ಯೆಹೋವನಲ್ಲಿ ಭರವಸೆಯಿಡುವುದು

ಆಧ್ಯಾತ್ಮಿಕ ರಕ್ಷಣಾಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಅನೇಕ ವರ್ಷಗಳು ಹಿಡಿಯುತ್ತವೆ ಎಂಬುದಂತೂ ನಿಶ್ಚಯ. ದೈವಿಕ ವಿವೇಕವನ್ನು ಒದಗಿಸುವ ಹಾಗೂ ತಮ್ಮ ಸ್ವರ್ಗೀಯ ತಂದೆಯಲ್ಲಿ ಭರವಸೆಯನ್ನಿಡುವಂತೆ ಮಕ್ಕಳನ್ನು ಪ್ರಚೋದಿಸುವಂಥ ಯಾವುದೇ ಚಮತ್ಕಾರದ ಔಷಧವಿಲ್ಲ. ಬದಲಾಗಿ, ಹೆತ್ತವರು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಅವರನ್ನು ಸಾಕಿಸಲಹ”ಬೇಕಾಗಿದೆ. (ಎಫೆಸ 6:​4, NW) ಸತತವಾಗಿ ಮುಂದುವರಿಯುವ ಈ “ಮಾನಸಿಕ ಕ್ರಮಪಡಿಸುವಿಕೆ”ಯ ಅರ್ಥ, ಯೆಹೋವನು ವಿಷಯಗಳನ್ನು ಹೇಗೆ ವೀಕ್ಷಿಸುತ್ತಾನೋ ಅದೇ ರೀತಿಯಲ್ಲಿ ವೀಕ್ಷಿಸುವಂತೆ ಮಕ್ಕಳಿಗೆ ಸಹಾಯಮಾಡುವುದೇ ಆಗಿದೆ. ಹೆತ್ತವರು ಇದನ್ನು ಹೇಗೆ ಪೂರೈಸಬಲ್ಲರು?

ಕ್ರಮವಾದ ಕುಟುಂಬ ಬೈಬಲ್‌ ಅಧ್ಯಯನವು ಸಾಫಲ್ಯಕ್ಕೆ ಒಂದು ಕೀಲಿ ಕೈಯಾಗಿದೆ. ಅಧ್ಯಯನವು ಮಕ್ಕಳ ‘ಕಣ್ಣನ್ನು ತೆರೆಯುತ್ತದೆ ಮತ್ತು ಅವರು ದೇವರ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳವರು.’ (ಕೀರ್ತನೆ 119:18) ದ್ಯಾಗೊ ಎಂಬಾತನು ಕುಟುಂಬ ಅಧ್ಯಯನಕ್ಕೆ ಹೆಚ್ಚು ಗಮನಕೊಟ್ಟನು ಮತ್ತು ಮಕ್ಕಳು ಯೆಹೋವನಿಗೆ ಸಮೀಪವಾಗಲಿಕ್ಕಾಗಿ ಅವರಿಗೆ ಸಹಾಯಮಾಡಿದನು. ಅವನಂದದ್ದು: “ನಾನು ಅಧ್ಯಯನಕ್ಕಾಗಿ ಪೂರ್ಣ ತಯಾರಿಯನ್ನು ಮಾಡುತ್ತಿದ್ದೆ. ಶಾಸ್ತ್ರೀಯ ಪ್ರಕಾಶನಗಳಲ್ಲಿ ರಿಸರ್ಚ್‌ ಮಾಡುವ ಮೂಲಕ ನಾನು ಬೈಬಲಿನಲ್ಲಿ ಕಂಡುಬರುವ ವ್ಯಕ್ತಿಗಳು ಮಕ್ಕಳಿಗೆ ನೈಜ್ಯ ವ್ಯಕ್ತಿಗಳಾಗಿ ತೋರುವಂತೆ ಮಾಡಲು ಕಲಿತೆ. ಅವರ ಜೀವನಗಳು ಹಾಗೂ ನಂಬಿಗಸ್ತ ವ್ಯಕ್ತಿಗಳ ಜೀವನಗಳ ನಡುವಣ ಹೋಲಿಕೆಗಳನ್ನು ಕಂಡುಹಿಡಿಯುವಂತೆ ನಾನು ಅವರನ್ನು ಉತ್ತೇಜಿಸಿದೆ. ಇದು ನನ್ನ ಮಕ್ಕಳಿಗೆ, ಯಾವುದು ಯೆಹೋವನಿಗೆ ಸಂತೋಷವನ್ನು ಉಂಟುಮಾಡುತ್ತದೆ ಎಂಬ ವಿಷಯದಲ್ಲಿ ಸುವ್ಯಕ್ತ ಜ್ಞಾಪನವನ್ನು ನೀಡಿತು.”

ಮಕ್ಕಳು ಹೆಚ್ಚು ಮಾಮೂಲಿಯಾದ ಸನ್ನಿವೇಶಗಳಲ್ಲಿಯೂ ಪಾಠವನ್ನು ಕಲಿಯುತ್ತಾರೆ. ಮಕ್ಕಳು ‘ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ’ ಯೆಹೋವನ ಮರುಜ್ಞಾಪನಗಳ ಕುರಿತು ಅವರೊಂದಿಗೆ ಮಾತಾಡುವಂತೆ ಮೋಶೆಯು ಹೆತ್ತವರಿಗೆ ಬುದ್ಧಿಹೇಳಿದನು. (ಧರ್ಮೋಪದೇಶಕಾಂಡ 6:7) ಒಬ್ಬ ತಂದೆಯು ವಿವರಿಸಿದ್ದು: “ನನ್ನ ಮಗನು ಮನಸ್ಸು ಬಿಚ್ಚಿ ಮಾತಾಡಲು ಮತ್ತು ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ತುಂಬ ಕಷ್ಟಪಡುತ್ತಾನೆ. ನಾವು ವಾಕಿಂಗ್‌ಗೆ ಹೋಗುವಾಗ ಅಥವಾ ನಾವಿಬ್ಬರೂ ಒಟ್ಟಿಗೆ ಒಂದು ಕೆಲಸವನ್ನು ಮಾಡುವಾಗ ತನ್ನ ಭಾವನೆಗಳನ್ನು ತೋಡಿಕೊಳ್ಳಲಾರಂಭಿಸುತ್ತಾನೆ. ಈ ಸಂದರ್ಭಗಳಲ್ಲಿ ನಾವಿಬ್ಬರೂ ತುಂಬ ಮಾತಾಡುತ್ತೇವೆ ಮತ್ತು ಇದು ನಮಗಿಬ್ಬರಿಗೂ ಪ್ರಯೋಜನದಾಯಕವಾಗಿದೆ.”

ಹೆತ್ತವರು ಮಾಡುವ ಪ್ರಾರ್ಥನೆಗಳು ಸಹ ಅವರ ಮಕ್ಕಳ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತವೆ. ದೇವರ ಸಹಾಯವನ್ನು ಮತ್ತು ಕ್ಷಮೆಯನ್ನು ಯಾಚಿಸುತ್ತಾ ತಮ್ಮ ಹೆತ್ತವರು ದೀನಭಾವದಿಂದ ಆತನಿಗೆ ಪ್ರಾರ್ಥಿಸುವುದನ್ನು ಮಕ್ಕಳು ಕೇಳಿಸಿಕೊಳ್ಳುವಾಗ “ದೇವರು ಇದ್ದಾನೆ” ಎಂಬುದನ್ನು ‘ನಂಬುವಂತೆ’ ಅವರು ಪ್ರಚೋದಿಸಲ್ಪಡುತ್ತಾರೆ. (ಇಬ್ರಿಯ 11:⁠6) ಸಾಫಲ್ಯವನ್ನು ಪಡೆದಿರುವ ಅನೇಕ ಹೆತ್ತವರು ಕುಟುಂಬವಾಗಿ ಪ್ರಾರ್ಥಿಸುವುದರ ಪ್ರಮುಖತೆಯನ್ನು ಒತ್ತಿಹೇಳುತ್ತಾರೆ; ಈ ಪ್ರಾರ್ಥನೆಗಳಲ್ಲಿ ಶಾಲೆಗೆ ಸಂಬಂಧಪಟ್ಟ ಹಾಗೂ ತಮ್ಮ ಮಕ್ಕಳಿಗೆ ಚಿಂತೆಯನ್ನು ಉಂಟುಮಾಡುವಂಥ ಇನ್ನಿತರ ವಿಷಯಗಳೂ ಒಳಗೂಡಿರಸಾಧ್ಯವಿದೆ. ಪ್ರತಿ ದಿನ ಮಕ್ಕಳು ಶಾಲೆಗೆ ಹೋಗುವ ಮೊದಲು ತನ್ನ ಹೆಂಡತಿಯು ಅವರೊಂದಿಗೆ ಪ್ರಾರ್ಥಿಸುತ್ತಾಳೆ ಎಂದು ಒಬ್ಬ ತಂದೆಯು ಹೇಳಿದನು.​—⁠ಕೀರ್ತನೆ 62:8; 112:⁠7.

“ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ”

ಎಲ್ಲ ಹೆತ್ತವರೂ ತಪ್ಪುಗಳನ್ನು ಮಾಡುತ್ತಾರೆ ಮತ್ತು ಕೆಲವೊಂದು ಸನ್ನಿವೇಶಗಳನ್ನು ತಾವು ನಿರ್ವಹಿಸಿದ ವಿಧಗಳ ಬಗ್ಗೆ ಅವರಿಗೆ ವಿಷಾದವೂ ಇರಬಹುದು. ಆದರೂ, ಪ್ರಯತ್ನಿಸುತ್ತಾ ಇರುವಂತೆ, “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ” ಇರುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ.​—⁠ಗಲಾತ್ಯ 6:⁠9.

ಆದರೆ ಕೆಲವೊಮ್ಮೆ ಹೆತ್ತವರು ತಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳಲು ಅಶಕ್ತರಾದಾಗ, ಪ್ರಯತ್ನವನ್ನು ಬಿಟ್ಟುಬಿಡುವ ಅನಿಸಿಕೆ ಅವರಿಗಾಗಬಹುದು. ಯುವ ಜನತೆಯ ಮನೋಭಾವವೇ ಬೇರೆ ಮತ್ತು ಇವರೊಂದಿಗೆ ವ್ಯವಹರಿಸುವುದು ಕಷ್ಟ ಎಂಬ ತೀರ್ಮಾನಕ್ಕೆ ಬರುವುದು ತುಂಬ ಸುಲಭ. ಆದರೆ ವಾಸ್ತವದಲ್ಲಿ ಮುಂಚಿನ ಸಂತತಿಗಳವರಿಗೆ ಯಾವ ದೌರ್ಬಲ್ಯಗಳಿದ್ದವೋ ಆ ದೌರ್ಬಲ್ಯಗಳೇ ಇಂದಿನ ಮಕ್ಕಳಿಗೂ ಇವೆ, ಮತ್ತು ಇವರು ಅದೇ ರೀತಿಯ ಪ್ರಲೋಭನೆಗಳನ್ನೂ ಎದುರಿಸುತ್ತಾರೆ​—⁠ಆದರೆ ತಪ್ಪುಮಾಡಲಿಕ್ಕಾಗಿರುವ ಒತ್ತಡಗಳು ಮಾತ್ರ ಇಂದು ಹೆಚ್ಚಾಗಿರಬಹುದಷ್ಟೆ. ಆದುದರಿಂದ, ಒಬ್ಬ ತಂದೆಯು ತನ್ನ ಮಗನಿಗೆ ತಿದ್ದುಪಾಟನ್ನು ನೀಡಿದ ಬಳಿಕ, “ನಾನು ನಿನ್ನ ಪ್ರಾಯದವನಾಗಿದ್ದಾಗ ನನ್ನ ಹೃದಯವು ಏನನ್ನು ಮಾಡಲು ಬಯಸಿತೋ ಅದನ್ನೇ ನಿನ್ನ ಹೃದಯವೂ ಮಾಡಲು ಬಯಸುತ್ತಿದೆ ಅಷ್ಟೆ” ಎಂದು ದಯಾಭಾವದಿಂದ ಹೇಳುವ ಮೂಲಕ ತನ್ನ ಮಾತುಗಳನ್ನು ಮೃದುಗೊಳಿಸಿದನು. ಹೆತ್ತವರಿಗೆ ಕಂಪ್ಯೂಟರ್‌ಗಳ ಬಗ್ಗೆ ಏನೂ ಗೊತ್ತಿಲ್ಲದೇ ಇರಬಹುದು, ಆದರೆ ಅಪರಿಪೂರ್ಣ ಶಾರೀರಿಕ ಪ್ರವೃತ್ತಿಗಳ ಬಗ್ಗೆ ಅವರಿಗೆ ಎಲ್ಲವೂ ತಿಳಿದಿದೆ.​—⁠ಮತ್ತಾಯ 26:41; 2 ಕೊರಿಂಥ 2:⁠11.

ಕೆಲವು ಮಕ್ಕಳು ತಮ್ಮ ಹೆತ್ತವರ ಮಾರ್ಗದರ್ಶನಕ್ಕೆ ಪ್ರತಿಕ್ರಿಯೆ ತೋರಿಸಲು ಇಷ್ಟವಿಲ್ಲದವರಾಗಿರಬಹುದು ಮತ್ತು ತಮಗೆ ಕೊಡಲ್ಪಡುವ ಶಿಸ್ತಿನ ವಿರುದ್ಧ ದಂಗೆಯೇಳಲೂಬಹುದು. ಆದರೂ ಈ ವಿಷಯದಲ್ಲಿಯೂ ತಾಳ್ಮೆಯು ಅತ್ಯಗತ್ಯ. ಆರಂಭದಲ್ಲಿ ಅನೇಕ ಮಕ್ಕಳು ಪ್ರತಿರೋಧವನ್ನು ಅಥವಾ ಸ್ವಲ್ಪ ಕಾಲಾವಧಿಯ ವರೆಗೆ ಉದ್ಧಟತನವನ್ನು ತೋರಿಸಿರುವುದಾದರೂ, ಕಾಲಕ್ರಮೇಣ ಅವರು ಸಕಾರಾತ್ಮಕ ಪ್ರತಿವರ್ತನೆಯನ್ನು ತೋರಿಸಿದ್ದಾರೆ. (ಜ್ಞಾನೋಕ್ತಿ 22:6; 23:22-25) ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸೊಂದರಲ್ಲಿ ಈಗ ಸೇವೆಮಾಡುತ್ತಿರುವ ಮ್ಯಾಥ್ಯೂ ಎಂಬ ಕ್ರೈಸ್ತ ಯುವಕನು ಹೇಳಿದ್ದು: “ನಾನು ಹದಿಪ್ರಾಯದವನಾಗಿದ್ದಾಗ, ನನ್ನ ಹೆತ್ತವರ ನಿರ್ಬಂಧಗಳು ತುಂಬ ಅನುಚಿತವಾದವುಗಳು ಎಂದು ನೆನಸುತ್ತಿದ್ದೆ. ನನ್ನ ಸ್ನೇಹಿತರ ಹೆತ್ತವರು ಒಂದು ವಿಷಯಕ್ಕೆ ಅನುಮತಿ ನೀಡುತ್ತಿರುವಾಗ ನನ್ನ ಹೆತ್ತವರೇಕೆ ಅದನ್ನು ಅನುಮತಿಸಲಾರರು? ಎಂಬುದು ನನ್ನ ತರ್ಕವಾಗಿತ್ತು. ಮತ್ತು ಕೆಲವೊಮ್ಮೆ ಅವರು, ನನಗೆ ತುಂಬ ಪ್ರಿಯವಾಗಿದ್ದ ದೋಣಿನಡೆಸುವ ಚಟುವಟಿಕೆಗೆ ಅನುಮತಿಯನ್ನು ನೀಡದಿರುವ ಮೂಲಕ ನನ್ನನ್ನು ಶಿಕ್ಷಿಸುತ್ತಿದ್ದಾಗ ನಾನು ತುಂಬ ಕೋಪಗೊಳ್ಳುತ್ತಿದ್ದೆ. ಆದರೆ ಹಿನ್ನೋಟ ಬೀರುವಾಗ, ನನ್ನ ಹೆತ್ತವರು ನನಗೆ ಕೊಟ್ಟ ಶಿಸ್ತು ಪರಿಣಾಮಕಾರಿಯಾಗಿತ್ತು ಮತ್ತು ನನಗೆ ಅದರ ಅಗತ್ಯವೂ ಇತ್ತು ಎಂಬುದು ಮನವರಿಕೆಯಾಗಿದೆ. ನನಗೆ ಅಗತ್ಯವಿದ್ದ ಸಮಯದಲ್ಲೇ ಸೂಕ್ತವಾದ ಮಾರ್ಗದರ್ಶನವನ್ನು ಕೊಟ್ಟದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ.”

ಕೆಲವೊಮ್ಮೆ ನಮ್ಮ ಮಕ್ಕಳು ಅಸ್ವಸ್ಥಕರವಾದ ಆಧ್ಯಾತ್ಮಿಕ ಪರಿಸರದಲ್ಲಿ ಇರಬೇಕಾಗಬಹುದಾದರೂ, ಆಗಲೂ ಅವರು ಅತ್ಯುತ್ತಮ ಕ್ರೈಸ್ತರಾಗಿ ಬೆಳೆಯಸಾಧ್ಯವಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಬೈಬಲ್‌ ವಾಗ್ದಾನಿಸುವಂತೆ, ದೈವಿಕ ವಿವೇಕವು ಅವರಿಗೆ ಆಧ್ಯಾತ್ಮಿಕ ರಕ್ಷಣಾಸಾಮರ್ಥ್ಯಗಳನ್ನು ನೀಡಬಲ್ಲದು. “ಜ್ಞಾನವು [“ವಿವೇಕವು,” NW] ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು [“ವಿವೇಚನಾಶಕ್ತಿಯು,” NW] ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ . . . ತಪ್ಪಿಸಿಕೊಳ್ಳುವಿ.”​—⁠ಜ್ಞಾನೋಕ್ತಿ 2:10-12.

ಒಂದು ಮಗುವನ್ನು ಒಂಬತ್ತು ತಿಂಗಳುಗಳ ವರೆಗೆ ಗರ್ಭದಲ್ಲಿ ಹೊತ್ತುಕೊಳ್ಳುವುದೇನೂ ಸುಲಭದ ಕೆಲಸವಲ್ಲ. ಮತ್ತು ತದನಂತರದ 20 ವರ್ಷಗಳು ಸಂತೋಷದೊಂದಿಗೆ ಸ್ವಲ್ಪ ವೇದನೆಯನ್ನೂ ತರಬಹುದು. ಆದರೆ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಸುವ ಕಾರಣದಿಂದಲೇ ದೈವಿಕ ವಿವೇಕದಿಂದ ಅವರನ್ನು ಸಂರಕ್ಷಿಸಲು ತಮ್ಮಿಂದಾದಷ್ಟು ಮಟ್ಟಿಗೆ ಹೆಣಗಾಡುತ್ತಾರೆ. ವೃದ್ಧ ಅಪೊಸ್ತಲ ಯೋಹಾನನಿಗೆ ತನ್ನ ಆಧ್ಯಾತ್ಮಿಕ ಮಕ್ಕಳ ಬಗ್ಗೆ ಇದ್ದಂಥ ಅನಿಸಿಕೆಯೇ ಅವರಿಗೂ ಇದೆ: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.”​—⁠3 ಯೋಹಾನ 4.

[ಪಾದಟಿಪ್ಪಣಿ]

^ ಪ್ಯಾರ. 7 ಈ ಲೇಖನದಲ್ಲಿ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 24ರಲ್ಲಿರುವ ಚಿತ್ರ]

“ಯಾವಾಗ ಬೇಕಾದರೂ ಅವರು ನಮ್ಮ ಮನೆಗೆ ಬರಬಹುದಿತ್ತು ಮತ್ತು ಅದು ಯಾವಾಗಲೂ ಯುವ ಜನರಿಂದ ತುಂಬಿರುತ್ತಿತ್ತು”

[ಪುಟ 25ರಲ್ಲಿರುವ ಚಿತ್ರ]

ನಿಮ್ಮ ಮಕ್ಕಳ ಅಭಿರುಚಿಗಳಲ್ಲಿ ಆಸಕ್ತಿಯನ್ನು ತೋರಿಸಿರಿ

[ಪುಟ 26ರಲ್ಲಿರುವ ಚಿತ್ರಗಳು]

“ನಾನು ಅಧ್ಯಯನಕ್ಕಾಗಿ ಪೂರ್ಣ ತಯಾರಿಯನ್ನು ಮಾಡುತ್ತಿದ್ದೆ”