ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧರ್ಮವು ಮಾನವಕುಲವನ್ನು ಐಕ್ಯಗೊಳಿಸಬಲ್ಲದು ಎಂಬುದನ್ನು ಅನೇಕರು ಸಂದೇಹಿಸಲು ಕಾರಣಗಳು

ಧರ್ಮವು ಮಾನವಕುಲವನ್ನು ಐಕ್ಯಗೊಳಿಸಬಲ್ಲದು ಎಂಬುದನ್ನು ಅನೇಕರು ಸಂದೇಹಿಸಲು ಕಾರಣಗಳು

ಧರ್ಮವು ಮಾನವಕುಲವನ್ನು ಐಕ್ಯಗೊಳಿಸಬಲ್ಲದು ಎಂಬುದನ್ನು ಅನೇಕರು ಸಂದೇಹಿಸಲು ಕಾರಣಗಳು

“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:⁠39) ನಡತೆಯ ಈ ಮೂಲಭೂತ ಕಟ್ಟಳೆಯ ಕುರಿತು ಅನೇಕ ಧರ್ಮಗಳು ಬಾಯಿ ತುಂಬ ಮಾತಾಡುವದುಂಟು. ನೆರೆಯವನನ್ನು ಪ್ರೀತಿಸುವಂತೆ ಈ ಧರ್ಮಗಳು ತಮ್ಮ ಸದಸ್ಯರಿಗೆ ಪರಿಣಾಮಕಾರಿಯಾಗಿ ಬೋಧಿಸಿರುವಲ್ಲಿ, ಅವುಗಳ ಹಿಂಡುಗಳು ಒಟ್ಟಿಗೆ ಐಕ್ಯದಿಂದಿರುತ್ತಿದ್ದವು. ಆದರೆ, ನೀವು ಇಂತಹ ಐಕ್ಯವನ್ನು ಕಂಡಿದ್ದೀರೋ? ಧರ್ಮಗಳು ಐಕ್ಯತೆಗೆ ಇಂಬುಕೊಡುವ ಶಕ್ತಿಯಾಗಿವೆಯೋ? ಇತ್ತೀಚೆಗೆ ಜರ್ಮನಿಯಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಯು ಹೀಗೆ ಪ್ರಶ್ನಿಸಿತು: “ಧರ್ಮಗಳು ಜನರನ್ನು ಐಕ್ಯಗೊಳಿಸುತ್ತವೋ, ಅಥವಾ ಅವು ಜನರನ್ನು ಬೇರ್ಪಡಿಸುವುದು ಹೆಚ್ಚು ಸಂಭಾವ್ಯವೋ?” ಪ್ರತಿಕ್ರಿಯಿಸಿದವರಲ್ಲಿ 22 ಪ್ರತಿಶತ ಮಂದಿ ಧರ್ಮಗಳು ಐಕ್ಯಗೊಳಿಸುತ್ತವೆ ಎಂದು ಹೇಳಿದರು, ಆದರೆ 52 ಪ್ರತಿಶತ ಮಂದಿಯು ಧರ್ಮಗಳು ವಿಭಜಿಸುತ್ತವೆ ಅಥವಾ ಬೇರ್ಪಡಿಸುತ್ತವೆ ಎಂದು ಅಭಿಪ್ರಯಿಸಿದರು. ಪ್ರಾಯಶಃ ನಿಮ್ಮ ದೇಶದಲ್ಲಿರುವ ಜನರಿಗೂ ಹೆಚ್ಚಾಗಿ ಹೀಗೆಯೇ ಅನಿಸಬಹುದು.

ಧರ್ಮವು ಮಾನವಕುಲವನ್ನು ಐಕ್ಯಗೊಳಿಸಬಲ್ಲದು ಎಂಬ ವಿಷಯದಲ್ಲಿ ಅನೇಕರಿಗೆ ಸ್ವಲ್ಪವೇ ಭರವಸೆಯಿರುವುದು ಏಕೆ? ಪ್ರಾಯಶಃ ಗತಕಾಲದಲ್ಲಿ ನಡೆದ ಘಟನೆಗಳ ಕುರಿತು ತಿಳಿದಿರುವುದರಿಂದ ಅವರಲ್ಲಿ ಈ ಭರವಸೆಯ ಕೊರತೆಯು ಉಂಟಾಗಿರಬಹುದು. ಜನರನ್ನು ಒಗ್ಗಟ್ಟಿನಲ್ಲಿ ತರುವ ಬದಲು, ಧರ್ಮವು ಅನೇಕವೇಳೆ ಅವರನ್ನು ಬೇರೆ ಬೇರೆ ಮಾಡಿದೆ. ಕೆಲವು ವಿದ್ಯಮಾನಗಳಲ್ಲಿ, ಅತಿ ಭೀತಿದಾಯಕವಾದ ಘೋರ ಕೃತ್ಯಗಳು ಧರ್ಮವೆಂಬ ಪರದೆಯ ಹಿಂದೆ ಮಾಡಲ್ಪಟ್ಟಿವೆ. ಕೇವಲ ಕಳೆದ 100 ವರ್ಷಗಳಲ್ಲಿ ಸಂಭವಿಸಿದ ವಿಷಯಗಳಿಂದ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.

ಧರ್ಮದ ಪ್ರಭಾವದಿಂದ

ಎರಡನೇ ಲೋಕ ಯುದ್ಧದ ಸಮಯದಲ್ಲಿ, ಬಾಲ್ಕನ್‌ನಲ್ಲಿದ್ದ ಕ್ರೊಏಷಿಯದ ರೋಮನ್‌ ಕ್ಯಾಥೊಲಿಕರು ಮತ್ತು ಸರ್ಬೀಯದ ಆರ್ತಡಾಕ್ಸರು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದರು. ತಮ್ಮ ನೆರೆಯವನನ್ನು ಪ್ರೀತಿಸುವಂತೆ ತನ್ನ ಹಿಂಬಾಲಕರಿಗೆ ಬೋಧಿಸಿದ ಆ ಯೇಸುವನ್ನೇ ತಾವು ಹಿಂಬಾಲಿಸುತ್ತೇವೆಂದು ಆ ಎರಡೂ ಗುಂಪಿನವರು ಹೇಳಿಕೊಳ್ಳುತ್ತಿದ್ದರು. ಆದರೆ, ಅವರ ಸಂಘರ್ಷವಾದರೋ ಒಬ್ಬ ಸಂಶೋಧಕನು ಹೇಳಿದಂತೆ, “ಇತಿಹಾಸವು ಕಂಡ ಅತಿ ಭೀಕರವಾದ ಸಾರ್ವಜನಿಕ ಹತ್ಯಾಕಾಂಡಗಳಲ್ಲಿ ಒಂದಾಗಿ” ಪರಿಣಮಿಸಿತು. ಮೃತಪಟ್ಟ ಪುರುಷರು, ಸ್ತ್ರೀಯರು ಮತ್ತು ಮಕ್ಕಳ ಸಂಖ್ಯೆಯು 5,00,000ವಾಗಿತ್ತು ಎಂಬುದನ್ನು ತಿಳಿದಾಗ ಲೋಕವೇ ದಿಗ್ಭ್ರಮೆಗೊಂಡಿತು.

ಇಸವಿ 1947ರಲ್ಲಿ ಭಾರತ ಉಪಖಂಡದಲ್ಲಿ 40 ಕೋಟಿ ಜನರು ವಾಸವಾಗಿದ್ದರು. ಇದು ಲೋಕದ ಜನಸಂಖ್ಯೆಯಲ್ಲಿ 20 ಪ್ರತಿಶತವಾಗಿತ್ತು. ಹೆಚ್ಚಿನವರು ಹಿಂದೂಗಳು, ಮುಸ್ಲಿಮರು ಹಾಗೂ ಸಿಖ್‌ ಮತದವರು ಆಗಿದ್ದರು. ಭಾರತವು ವಿಭಾಜಿಸಲ್ಪಟ್ಟಾಗ, ಪಾಕಿಸ್ತಾನ್‌ ಎಂಬ ಇಸ್ಲಾಮ್‌ ದೇಶವು ಹುಟ್ಟಿಕೊಂಡಿತು. ಆ ಸಮಯದಲ್ಲಿ, ಸರಣಿಯಾಗಿ ನಡೆದ ಅನೇಕ ಧಾರ್ಮಿಕ ಹತ್ಯಾಕಾಂಡಗಳಲ್ಲಿ ಎರಡೂ ದೇಶಗಳ ನೂರಾರು ಸಾವಿರ ಮಂದಿ ನಿರಾಶ್ರಿತರು ಸುಡಲ್ಪಟ್ಟರು, ಹೊಡೆಯಲ್ಪಟ್ಟರು, ಹಿಂಸಿಸಲ್ಪಟ್ಟರು ಮತ್ತು ಗುಂಡೇಟಿಗೆ ಗುರಿಯಾದರು.

ಈ ಉದಾಹರಣೆಗಳು ಸಾಲದೋ ಎಂಬಂತೆ, 21ನೆಯ ಶತಮಾನದ ಆಗಮನದೊಂದಿಗೆ ಭಯೋತ್ಪಾದನೆಯ ಬೆದರಿಕೆಯೂ ತಲೆದೋರಿತು. ಇಂದು, ಭಯೋತ್ಪಾದನೆಯು ಇಡೀ ಲೋಕವನ್ನು ಬೇಗುದಿಯಲ್ಲಿರಿಸಿದೆ, ಮತ್ತು ಅನೇಕ ಭಯೋತ್ಪಾದಕ ಗುಂಪುಗಳು ಧಾರ್ಮಿಕ ನಂಟನ್ನು ಹೊಂದಿರುವುದಾಗಿ ಹೇಳಿಕೊಳ್ಳುತ್ತವೆ. ಧರ್ಮವನ್ನು ಐಕ್ಯತೆಗೆ ಇಂಬುಕೊಡುವ ಮಾಧ್ಯಮವಾಗಿ ವೀಕ್ಷಿಸಲಾಗುವುದಿಲ್ಲ. ಬದಲಿಗೆ, ಇದನ್ನು ಹೆಚ್ಚಾಗಿ ಹಿಂಸಾಕೃತ್ಯ ಮತ್ತು ಅನೈಕ್ಯದೊಂದಿಗೆ ಸಂಬಂಧಿಸಿ ಮಾತಾಡಲಾಗುತ್ತದೆ. ಆದುದರಿಂದ, ಫೋಕಸ್‌ ಎಂಬ ಜರ್ಮನ್‌ ವಾರ್ತಾಪತ್ರಿಕೆಯು ಲೋಕದ ಪ್ರಧಾನ ಧರ್ಮಗಳನ್ನು​—⁠ಬೌದ್ಧಮತ, ಕ್ರೈಸ್ತಪ್ರಪಂಚ, ಕನ್‌ಫೂಷಿಯನಿಸಮ್‌, ಹಿಂದುತ್ವ, ಇಸ್ಲಾಮ್‌, ಯೆಹೂದಿಮತ, ಮತ್ತು ಟಾವೊಮತಗಳನ್ನು​—⁠ಸಿಡಿಮದ್ದಿಗೆ ಹೋಲಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಆಂತರಿಕ ತಿಕ್ಕಾಟಗಳು

ಕೆಲವು ಧರ್ಮಗಳು ಒಂದಕ್ಕೆ ವಿರುದ್ಧವಾಗಿ ಮತ್ತೊಂದು ಕದನಕ್ಕಿಳಿದಿರುವಾಗ, ಇತರ ಧರ್ಮಗಳು ಆಂತರಿಕ ತಿಕ್ಕಾಟಗಳಿಂದ ಪೀಡಿತವಾಗಿವೆ. ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಸಿದ್ಧಾಂತಗಳ ವಿಷಯದಲ್ಲಿ ಆಗುತ್ತಿರುವ ವಾದವಿವಾದಗಳ ದೆಸೆಯಿಂದ ಕ್ರೈಸ್ತಪ್ರಪಂಚದ ಚರ್ಚುಗಳು ವಿಭಾಗಗೊಳ್ಳುತ್ತಿವೆ. ಪಾದ್ರಿವರ್ಗ ಮತ್ತು ಜನಮಾನ್ಯ ವರ್ಗದವರಿಬ್ಬರೂ ಕೇಳುವಂಥ ವಿಷಯಗಳು: ಜನನ ನಿಯಂತ್ರಣ ಅನುಮತಿಸಲ್ಪಟ್ಟಿದೆಯೋ? ಗರ್ಭಪಾತದ ಕುರಿತೇನು? ಸ್ತ್ರೀಯರನ್ನು ಪಾದ್ರಿವರ್ಗದ ಸದಸ್ಯರನ್ನಾಗಿ ಸ್ವೀಕರಿಸಬಹುದೋ? ಸಲಿಂಗಕಾಮವನ್ನು ಚರ್ಚ್‌ ಹೇಗೆ ವೀಕ್ಷಿಸತಕ್ಕದ್ದು? ಒಂದು ಧರ್ಮವು ಯುದ್ಧವನ್ನು ಸಮರ್ಥಿಸಬೇಕೋ? ಈ ರೀತಿಯ ಅನೈಕ್ಯದ ಸಮ್ಮುಖದಲ್ಲಿ, ‘ಒಂದು ಧರ್ಮಕ್ಕೆ ತನ್ನ ಸ್ವಂತ ಸದಸ್ಯರನ್ನೇ ಐಕ್ಯಗೊಳಿಸಲು ಸಾಧ್ಯವಿಲ್ಲದಿರುವುದಾದರೆ ಇಡೀ ಮಾನವಕುಲವನ್ನು ಹೇಗೆ ಐಕ್ಯಗೊಳಿಸೀತು?’ ಎಂದು ಅನೇಕರು ಸೋಜಿಗಪಡುತ್ತಾರೆ.

ಒಟ್ಟಿನಲ್ಲಿ ಧರ್ಮವು ಐಕ್ಯತೆಗೆ ಇಂಬುಕೊಡುವ ಶಕ್ತಿಯಾಗಿರುವ ವಿಷಯದಲ್ಲಿ ವಿಫಲಗೊಂಡಿದೆ. ಆದರೆ ಎಲ್ಲಾ ಧರ್ಮಗಳೂ ವಿಭಜನೆಗಳಿಂದ ಗುರುತಿಸಲ್ಪಟ್ಟಿವೆಯೋ? ಇದಕ್ಕಿಂತ ವಿಭಿನ್ನವಾದ ಅಂದರೆ ಮಾನವಕುಲವನ್ನು ಐಕ್ಯಗೊಳಿಸಬಲ್ಲ ಧರ್ಮವೊಂದಿದೆಯೋ?

[ಪುಟ 3ರಲ್ಲಿರುವ ಚಿತ್ರ]

1947ರಲ್ಲಿ ಭಾರತದಲ್ಲಿ ಧಾರ್ಮಿಕ ಗುಂಪುಗಳ ಮಧ್ಯೆ ನಡೆದ ಸಂಘರ್ಷಣೆಯ ಸಂದರ್ಭದಲ್ಲಿ ಗಾಯಗೊಂಡಿರುವ ಪೊಲೀಸ್‌ ಪೇದೆಗಳು

[ಕೃಪೆ]

Photo by Keystone/Getty Images