ನಾವು ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡಲು ಕಲಿತೆವು
ಜೀವನ ಕಥೆ
ನಾವು ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡಲು ಕಲಿತೆವು
ನಾಟಲೀ ಹಾಲ್ಟಾರ್ಫ್ ಅವರು ಹೇಳಿದಂತೆ
ಅದು 1945ರ ಜೂನ್ ತಿಂಗಳಾಗಿತ್ತು. ಆ ತಿಂಗಳಿನಲ್ಲಿ ಒಂದು ದಿನ, ಬಿಳಿಚಿಕೊಂಡಿರುವ ಒಬ್ಬ ವ್ಯಕ್ತಿಯು ನಮ್ಮ ಮನೆಯ ಮುಂಬಾಗಿಲಿನ ಬಳಿ ಬಂದು ತಾಳ್ಮೆಯಿಂದ ನಿಂತುಕೊಂಡನು. ನನ್ನ ಕಿರಿಯ ಮಗಳಾದ ರೂತ್ ಬೆಚ್ಚಿಬಿದ್ದು “ಮಮಾ, ಬಾಗಿಲ ಬಳಿ ಯಾರೋ ನಿಂತಿದ್ದಾರೆ!” ಎಂದು ಕೂಗಿಕೊಂಡಳು. ಆದರೆ ಆ ವ್ಯಕ್ತಿ ಒಬ್ಬ ಅಪರಿಚಿತನಲ್ಲ ಅವಳ ತಂದೆಯೇ ಆಗಿದ್ದರು, ಅಂದರೆ ನನ್ನ ಪ್ರಿಯ ಗಂಡನಾದ ಫರ್ಡಿನಾಂಡ್ ಆಗಿದ್ದರು ಎಂಬುದು ರೂತಳಿಗೆ ತಿಳಿದಿರಲಿಲ್ಲ. ಎರಡು ವರ್ಷಗಳಿಗೆ ಹಿಂದೆ, ರೂತ್ ಹುಟ್ಟಿ ಕೇವಲ ಮೂರು ದಿವಸಗಳ ಬಳಿಕ, ಮನೆಯಿಂದ ಹೊರಟ ಫರ್ಡಿನಾಂಡ್ ದಸ್ತಗಿರಿಮಾಡಲ್ಪಟ್ಟು ಒಂದು ನಾಸಿ ಕೂಟಶಿಬಿರದಲ್ಲಿ ಹಾಕಲ್ಪಟ್ಟರು. ಆದರೆ ಕೊನೆಗೆ ರೂತ್ ತನ್ನ ತಂದೆಯನ್ನು ಸಂಧಿಸುವಂತಾಯಿತು, ಮತ್ತು ನಮ್ಮ ಕುಟುಂಬವು ಪುನಃ ಐಕ್ಯವಾಯಿತು. ನನಗೂ ನನ್ನ ಗಂಡನಿಗೂ ಮಾತಾಡಲು ಎಷ್ಟೋ ವಿಷಯಗಳಿದ್ದವು!
ಫರ್ಡಿನಾಂಡ್ 1909ರಲ್ಲಿ ಜರ್ಮನಿಯ ಕೇಅಲ್ ಎಂಬ ಪಟ್ಟಣದಲ್ಲಿ ಜನಿಸಿದರು, ಮತ್ತು ನಾನು ಸಹ ಜರ್ಮನಿಯ ಡ್ರೆಸ್ಡನ್ ಎಂಬ ಪಟ್ಟಣದಲ್ಲಿ 1907ರಲ್ಲಿ ಹುಟ್ಟಿದೆ. ನಾನು 12 ವರ್ಷದವಳಾಗಿದ್ದಾಗ, ನಮ್ಮ ಕುಟುಂಬವನ್ನು ಬೈಬಲ್ ವಿದ್ಯಾರ್ಥಿಗಳು ಪ್ರಪ್ರಥಮ ಬಾರಿಗೆ ಭೇಟಿಮಾಡಿದರು—ಯೆಹೋವನ ಸಾಕ್ಷಿಗಳನ್ನು ಆಗ ಬೈಬಲ್ ವಿದ್ಯಾರ್ಥಿಗಳೆಂದು ಕರೆಯಲಾಗುತ್ತಿತ್ತು. ನಾನು 19ನೇ ವರ್ಷ ಪ್ರಾಯದಲ್ಲಿ ಈವಾಂಜಲಿಕಲ್ ಚರ್ಚನ್ನು ಬಿಟ್ಟು, ಯೆಹೋವನಿಗೆ ನನ್ನ ಜೀವನವನ್ನು ಸಮರ್ಪಿಸಿಕೊಂಡೆ.
ಅಷ್ಟರಲ್ಲಿ, ಫರ್ಡಿನಾಂಡ್ ನಾವಿಕರ ವಿಶ್ವವಿದ್ಯಾನಿಲಯದಿಂದ ಪದವಿಪ್ರಾಪ್ತಿ ಪಡೆದುಕೊಂಡಿದ್ದರು ಮತ್ತು ಒಬ್ಬ ನಾವಿಕನಾಗಿ ಕೆಲಸಮಾಡತೊಡಗಿದರು. ತನ್ನ ಸಮುದ್ರಯಾನಗಳ ಸಮಯದಲ್ಲಿ, ಒಬ್ಬ ಸೃಷ್ಟಿಕರ್ತನ ಅಸ್ತಿತ್ವದ ಕುರಿತಾದ ಪ್ರಶ್ನೆಗಳ ಬಗ್ಗೆ ಅವರು ಯೋಚಿಸುತ್ತಿದ್ದರು. ಒಮ್ಮೆ ಸಮುದ್ರಯಾನವನ್ನು ಮುಗಿಸಿಕೊಂಡು ಜರ್ಮನಿಗೆ ಹಿಂದಿರುಗಿದಾಗ, ಫರ್ಡಿನಾಂಡ್ ಬೈಬಲ್ ವಿದ್ಯಾರ್ಥಿಯಾಗಿದ್ದ ತನ್ನ ಅಣ್ಣನನ್ನು ಭೇಟಿಮಾಡಿದರು. ಆ ಭೇಟಿಯೇ, ತನ್ನನ್ನು ಕಾಡಿಸುತ್ತಿದ್ದ ಪ್ರಶ್ನೆಗಳಿಗೆ ಬೈಬಲಿನಲ್ಲಿ ಉತ್ತರಗಳಿವೆ ಎಂದು ಅವರಿಗೆ ಖಾತ್ರಿಪಡಿಸಿತು. ಅವರು ಲೂತರನ್ ಚರ್ಚನ್ನು ತೊರೆದರು, ಮತ್ತು ಒಬ್ಬ ನಾವಿಕನಾಗಿ ಕೆಲಸಮಾಡುವುದನ್ನೂ ಬಿಟ್ಟುಬಿಡಲು ತೀರ್ಮಾನಿಸಿದರು.
ಸಾರುವ ಕೆಲಸದಲ್ಲಿ ಅವರು ಪ್ರಥಮ ಬಾರಿ ಪಾಲ್ಗೊಂಡಾಗ, ತನ್ನ ಉಳಿದ ಜೀವಮಾನವನ್ನೆಲ್ಲಾ ಈ ಕೆಲಸದಲ್ಲೇ ವ್ಯಯಿಸಬೇಕೆಂಬ ತೀವ್ರ ಆಶೆಯು ಅವರಲ್ಲಿ ಅಂಕುರಿಸಿತು. ಆ ರಾತ್ರಿಯೇ ಫರ್ಡಿನಾಂಡ್ ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡರು. ಮತ್ತು 1931ರ ಆಗಸ್ಟ್ ತಿಂಗಳಿನಲ್ಲಿ ಅವರು ದೀಕ್ಷಾಸ್ನಾನವನ್ನು ಪಡೆದುಕೊಂಡರು.ಒಬ್ಬ ನಾವಿಕನಾಗಿಯೂ ಪ್ರಚಾರಕನಾಗಿಯೂ ಕೆಲಸಮಾಡುವುದು
ಇಸವಿ 1931ರ ನವೆಂಬರ್ ತಿಂಗಳಿನಲ್ಲಿ, ಫರ್ಡಿನಾಂಡ್ ನೆದರ್ಲೆಂಡ್ಸ್‌ನಲ್ಲಿ ಸಾರುವ ಕೆಲಸಕ್ಕೆ ಸಹಾಯಮಾಡಲಿಕ್ಕಾಗಿ ಅಲ್ಲಿಗೆ ಹೋಗಲು ರೈಲು ಹತ್ತಿದರು. ಅವರು ಆ ದೇಶದಲ್ಲಿನ ಕೆಲಸವನ್ನು ಸಂಘಟಿಸುತ್ತಿದ್ದ ಸಹೋದರನಿಗೆ ತಾನೊಬ್ಬ ನಾವಿಕನಾಗಿದ್ದೆ ಎಂದು ಹೇಳಿದಾಗ, “ನಾವು ಹುಡುಕುತ್ತಿದ್ದದ್ದು ನಿಮ್ಮಂಥ ಒಬ್ಬ ವ್ಯಕ್ತಿಗಾಗಿಯೇ!” ಎಂದು ಅವನು ಹೇಳಿದನು. ದೇಶದ ಉತ್ತರ ಭಾಗದಲ್ಲಿ ಜಲಮಾರ್ಗಗಳ ಬದಿಯಲ್ಲಿ ಜೀವಿಸುತ್ತಿದ್ದ ಜನರಿಗೆ ಪಯನೀಯರರ (ಪೂರ್ಣ ಸಮಯದ ಶುಶ್ರೂಷಕರ) ಒಂದು ಗುಂಪು ಸಾರಲಾಗುವಂತೆ ಸಹೋದರರು ಒಂದು ದೋಣಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಆ ದೋಣಿಯಲ್ಲಿ ಐದು ಮಂದಿ ಸಿಬ್ಬಂದಿಯಿದ್ದರು, ಆದರೆ ಅವರಲ್ಲಿ ಒಬ್ಬರಿಗೂ ಅದನ್ನು ನಡೆಸುವುದು ಹೇಗೆಂಬುದು ತಿಳಿದಿರಲಿಲ್ಲ. ಆದ್ದರಿಂದ ಫರ್ಡಿನಾಂಡ್ ಅದರ ನೌಕಾಧಿಪತಿಯಾದರು.
ಆರು ತಿಂಗಳುಗಳ ಅನಂತರ, ನೆದರ್ಲೆಂಡ್ಸ್‌ನ ದಕ್ಷಿಣ ಭಾಗದಲ್ಲಿರುವ ಟಿಲ್‌ಬರ್ಗ್‌ನಲ್ಲಿ ಒಬ್ಬ ಪಯನೀಯರರಾಗಿ ಸೇವೆಸಲ್ಲಿಸುವಂತೆ ಫರ್ಡಿನಾಂಡ್‌ರವರನ್ನು ಕೇಳಿಕೊಳ್ಳಲಾಯಿತು. ಸುಮಾರು ಆ ಸಮಯದಷ್ಟಕ್ಕೆ ನಾನು ಸಹ ಟಿಲ್‌ಬರ್ಗ್‌ನಲ್ಲಿ ಒಬ್ಬ ಪಯನೀಯರಳಾಗಿ ಸೇವೆಸಲ್ಲಿಸಲು ಅಲ್ಲಿ ಆಗಮಿಸಿದೆ ಮತ್ತು ಅಲ್ಲಿ ಫರ್ಡಿನಾಂಡರ ಪರಿಚಯವಾಯಿತು. ಆದರೆ ಕೂಡಲೆ ದೇಶದ ಉತ್ತರ ಭಾಗದಲ್ಲಿರುವ ಗ್ರೋನಿಂಗನ್‌ಗೆ ಸ್ಥಳಾಂತರಿಸುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು. ಅಲ್ಲಿ 1932ರ ಅಕ್ಟೋಬರ್ ತಿಂಗಳಿನಲ್ಲಿ ನಮ್ಮ ವಿವಾಹವಾಯಿತು ಮತ್ತು ಹಲವಾರು ಪಯನೀಯರರಿಂದ ಉಪಯೋಗಿಸಲ್ಪಡುವ ಒಂದು ಮನೆಯಲ್ಲಿ ನಾವು ನಮ್ಮ ಮಧುಚಂದ್ರವನ್ನು ಕಳೆದೆವು ಮತ್ತು ಅದೇ ಸಮಯದಲ್ಲಿ ಪಯನೀಯರ್ ಕೆಲಸವನ್ನೂ ಮಾಡಿದೆವು!
ಇಸವಿ 1935ರಲ್ಲಿ ನಮ್ಮ ಮಗಳು, ಎಸ್ತರ್ ಹುಟ್ಟಿದಳು. ನಮ್ಮ ವರಮಾನವು ಸ್ವಲ್ಪವಾಗಿದ್ದರೂ, ನಾವು ಪಯನೀಯರ್ ಸೇವೆಯನ್ನು ಬಿಟ್ಟುಬಿಡಬಾರದೆಂಬ ದೃಢನಿರ್ಧಾರವನ್ನು ಮಾಡಿದ್ದೆವು. ನಾವು ಒಂದು ಹಳ್ಳಿಗೆ ಸ್ಥಳಾಂತರಿಸಿ, ಅಲ್ಲಿದ್ದ ಒಂದು ಚಿಕ್ಕ ಮನೆಯಲ್ಲಿ ಜೀವಿಸಿದೆವು. ನಾನು ಮನೆಯಲ್ಲಿ ಮಗುವನ್ನು ನೋಡಿಕೊಳ್ಳುತ್ತಿದ್ದಾಗ, ನನ್ನ ಗಂಡ ಇಡೀ ದಿನ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಮರುದಿನ ಅವರು ಮಗುವನ್ನು ನೋಡಿಕೊಳ್ಳುತ್ತಿದ್ದಾಗ ನಾನು ಸೇವೆಯಲ್ಲಿ ಇಡೀ ದಿನವನ್ನು ಕಳೆಯುತ್ತಿದ್ದೆ. ಎಸ್ತರ್ ನಮ್ಮೊಂದಿಗೆ ಶುಶ್ರೂಷೆಗೆ ಬರುವಷ್ಟು ದೊಡ್ಡವಳಾಗುವ ವರೆಗೂ ಹೀಗೆ ಮಾಡಬೇಕಾಯಿತು.
ಸ್ವಲ್ಪ ಸಮಯ ಗತಿಸುತ್ತಲೇ, ಯೂರೋಪಿನ ರಾಜಕೀಯ ಪರಿಸ್ಥಿತಿಯು ಕೇಡುಸೂಚಕವಾಗಿ ಪರಿಣಮಿಸಿತು. ಜರ್ಮನಿಯಲ್ಲಿ ಸಾಕ್ಷಿಗಳು ಹಿಂಸಿಸಲ್ಪಡುತ್ತಿರುವುದರ ಕುರಿತು ನಾವು ಕೇಳಿಸಿಕೊಂಡೆವು, ಮತ್ತು ನಾವು ಸಹ ಹಿಂಸೆಯನ್ನು ಅನುಭವಿಸುವ ಕಾಲ ತುಂಬ ದೂರವೇನಿಲ್ಲ ಎಂಬುದನ್ನು ಮನಗಂಡೆವು. ತೀವ್ರ ಹಿಂಸೆಯ ಎದುರಿನಲ್ಲಿ ನಾವು ಹೇಗೆ ತಾಳಿಕೊಳ್ಳುವೆವು ಎಂಬುದರ ಕುರಿತು ನಾವು ಆಲೋಚಿಸಿದೆವು. ಡಚ್ ಅಧಿಕಾರಿಗಳು 1938ರಲ್ಲಿ, ವಿದೇಶೀಯರು ಧಾರ್ಮಿಕ ಪ್ರಕಾಶನಗಳನ್ನು ವಿತರಿಸುವ ಮೂಲಕ ಕಾಲ್ಪೊರ್ಟರ್ ಕೆಲಸವನ್ನು ಮಾಡುವುದನ್ನು ನಿಷೇಧಿಸುವ ಆಜ್ಞೆಯನ್ನು ಹೊರಡಿಸಿದರು. ನಾವು ನಮ್ಮ ಶುಶ್ರೂಷೆಯಲ್ಲಿ ಮುಂದುವರಿಯಲು ಸಾಧ್ಯವಾಗುವಂತೆ, ನಮ್ಮ ಕೆಲಸದಲ್ಲಿ ಆಸಕ್ತಿಯನ್ನು ತೋರಿಸಿದ್ದ ವ್ಯಕ್ತಿಗಳ ಹೆಸರುಗಳನ್ನು ಡಚ್ ಸಾಕ್ಷಿಗಳು ನಮಗೆ ಕೊಟ್ಟರು, ಮತ್ತು ಅವರಲ್ಲಿ ಕೆಲವರೊಂದಿಗೆ ಬೈಬಲನ್ನು ಅಧ್ಯಯನಮಾಡಲು ನಮಗೆ ಸಾಧ್ಯವಾಯಿತು.
ಆ ಸಮಯದಷ್ಟಕ್ಕೆ ಯೆಹೋವನ ಸಾಕ್ಷಿಗಳ ಒಂದು ಅಧಿವೇಶನವು ಯೋಜಿಸಲ್ಪಟ್ಟಿತು. ಆ ಅಧಿವೇಶನದ ಸ್ಥಳಕ್ಕೆ ಪ್ರಯಾಣಿಸಲಿಕ್ಕಾಗಿ ಟ್ರೇನ್ ಟಿಕೆಟ್‌ಗಳನ್ನು ಪಡೆದುಕೊಳ್ಳಲು ನಮ್ಮಲ್ಲಿ ಹಣ ಇಲ್ಲದಿದ್ದರೂ ಅಧಿವೇಶನಕ್ಕೆ ಹಾಜರಾಗುವ ತೀವ್ರ ಅಭಿಲಾಷೆಯು ನಮಗಿತ್ತು. ಆದುದರಿಂದ ನಾವು ಮೂರು ದಿನದ ಬೈಸಿಕಲ್ ಪ್ರಯಾಣವನ್ನು ಆರಂಭಿಸಿದೆವು. ಸೈಕಲಿನ ಹ್ಯಾಂಡಲ್‌ಬಾರಲ್ಲಿ ಅಳವಡಿಸಲ್ಪಟ್ಟ ಸೀಟ್‌ನಲ್ಲಿ ಎಸ್ತರಳನ್ನು ಕೂರಿಸಿದೆವು. ನಮ್ಮ ಪ್ರಯಾಣಮಾರ್ಗದಲ್ಲಿ ಜೀವಿಸುತ್ತಿದ್ದ ಸಾಕ್ಷಿಗಳ ಮನೆಗಳಲ್ಲಿ ನಾವು ರಾತ್ರಿಗಳನ್ನು ಕಳೆದೆವು. ನಾವು ನಮ್ಮ ಪ್ರಥಮ ರಾಷ್ಟ್ರೀಯ ಅಧಿವೇಶನದಲ್ಲಿ ಹಾಜರಿರಲು ಎಷ್ಟು ಸಂತೋಷಿಸಿದೆವು! ಮುಂದೆ ಬರಲಿದ್ದ ಪರೀಕ್ಷೆಗಳನ್ನು ಕೀರ್ತನೆ 31:6ರ ಮಾತುಗಳು ನಮ್ಮ ಧ್ಯೇಯಮಂತ್ರವಾಯಿತು: “ನಾನಾದರೋ ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.”
ತಾಳಿಕೊಳ್ಳಲು ಆ ಕಾರ್ಯಕ್ರಮವು ನಮ್ಮನ್ನು ಬಲಪಡಿಸಿತು. ಎಲ್ಲಕ್ಕಿಂತಲೂ ಮಿಗಿಲಾಗಿ, ದೇವರಲ್ಲಿ ಭರವಸವಿಡುವಂತೆ ನಮಗೆ ಮರುಜ್ಞಾಪಿಸಲಾಯಿತು.ನಾಸಿಗಳ ಬೇಟೆಗೆ ಗುರಿಯಾದದ್ದು
ನೆದರ್ಲೆಂಡ್ಸ್ 1940ರ ಮೇ ತಿಂಗಳಿನಲ್ಲಿ ನಾಸಿಗಳ ಕೈವಶವಾಯಿತು. ಅದರ ಬಳಿಕ ಶೀಘ್ರದಲ್ಲೇ ಗೆಸ್ಟಪೊ ಅಥವಾ ರಹಸ್ಯ ಪೊಲೀಸ್ ನಮಗೆ ಒಂದು ಅನಿರೀಕ್ಷಿತ ಭೇಟಿಯನ್ನು ಕೊಟ್ಟಿತು. ಆಗ ನಾವು ಬೈಬಲ್ ಸಾಹಿತ್ಯದ ಒಂದು ಸರಬರಾಜನ್ನು ವರ್ಗೀಕರಿಸುತ್ತಿದ್ದೆವು. ಫರ್ಡಿನಾಂಡರನ್ನು ಗೆಸ್ಟಪೊ ಕೇಂದ್ರ ಸ್ಥಾನಕ್ಕೆ ಕರೆದೊಯ್ಯಲಾಯಿತು. ನಾನು ಮತ್ತು ಎಸ್ತರ್ ಕ್ರಮವಾಗಿ ಫರ್ಡಿನಾಂಡ್‌ಗೆ ಭೇಟಿಕೊಡುತ್ತಿದ್ದೆವು, ಮತ್ತು ಕೆಲವೊಮ್ಮೆ ನಮ್ಮ ಕಣ್ಣ ಮುಂದೆಯೇ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿತ್ತು ಹಾಗೂ ಹೊಡೆಯಲಾಗುತ್ತಿತ್ತು. ಡಿಸೆಂಬರ್ ತಿಂಗಳಿನಲ್ಲಿ, ಫರ್ಡಿನಾಂಡನ್ನು ಇದ್ದಕ್ಕಿದ್ದ ಹಾಗೆ ಬಿಡುಗಡೆ ಮಾಡಲಾಯಿತು, ಆದರೆ ಅವರ ಸ್ವಾತಂತ್ರ್ಯವು ಹೆಚ್ಚು ಕಾಲ ಉಳಿಯಲಿಲ್ಲ. ಒಂದು ದಿನ ಸಾಯಂಕಾಲ ನಾವು ಮನೆಗೆ ಹಿಂದಿರುಗುತ್ತಿದ್ದಾಗ, ಮನೆಯ ಹತ್ತಿರ ಒಂದು ಗೆಸ್ಟಪೊ ಕಾರ್ ನಿಂತಿರುವುದನ್ನು ಕಂಡೆವು. ನಾನು ಎಸ್ತರ್‌ಳೊಂದಿಗೆ ಮನೆಯನ್ನು ಪ್ರವೇಶಿಸುವ ಸಮಯದಲ್ಲಿ, ಫರ್ಡಿನಾಂಡ್‌ಗೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಗೆಸ್ಟಪೊ ನಮಗಾಗಿ ಕಾಯುತ್ತಿದ್ದರು. ಅವರು ಫರ್ಡಿನಾಂಡ್‌ಗಾಗಿ ಹುಡುಕುತ್ತಾ ಬಂದಿದ್ದರು. ಅದೇ ರಾತ್ರಿಯಂದು, ಗೆಸ್ಟಪೊ ಹೊರಟುಹೋದ ಅನಂತರ, ಡಚ್ ಪೊಲೀಸರು ಬಂದು ನನ್ನನ್ನು ವಿಚಾರಣೆ ಮಾಡಲಿಕ್ಕಾಗಿ ಕರೆದೊಯ್ದರು. ಮರುದಿನ ನಾನು ಮತ್ತು ಎಸ್ತರ್, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡಿದ್ದ ನೊರ್‌ಡರ್ ಸಾಕ್ಷಿ ದಂಪತಿಯ ಮನೆಯಲ್ಲಿ ಅಡಗಿಕೊಂಡೆವು ಮತ್ತು ಅವರು ನಮಗೆ ಆಶ್ರಯವನ್ನು ನೀಡಿ ಕಾಪಾಡಿದರು.
ಇಸವಿ 1941ರ ಜನವರಿ ತಿಂಗಳಿನ ಕೊನೆಯಲ್ಲಿ ಒಂದು ದೋಣಿಮನೆಯಲ್ಲಿ ಜೀವಿಸುತ್ತಿದ್ದ ಪಯನೀಯರ್ ದಂಪತಿಯನ್ನು ದಸ್ತಗಿರಿಮಾಡಲಾಯಿತು. ಮರುದಿನ ಆ ದಂಪತಿಯ ಕೆಲವು ವಸ್ತುಗಳನ್ನು ತೆಗೆದುಕೊಂಡು ಬರಲಿಕ್ಕಾಗಿ ಒಬ್ಬ ಸರ್ಕಿಟ್ ಮೇಲ್ವಿಚಾರಕ (ಸಂಚರಣ ಶುಶ್ರೂಷಕ) ಮತ್ತು ನನ್ನ ಗಂಡ ಹೋದಾಗ ಗೆಸ್ಟಪೊವಿನ ಒಡನಾಡಿಗಳು ಅವರ ಮೇಲೆ ದಿಢೀರ್ ದಾಳಿಯನ್ನು ಮಾಡಿದರು. ಫರ್ಡಿನಾಂಡ್ ಹೇಗೊ ಅವರ ಕೈಯಿಂದ ತಪ್ಪಿಸಿಕೊಂಡು, ತನ್ನ ಬೈಕ್‌ನಲ್ಲಿ ಪರಾರಿಯಾಗಲು ಸಾಧ್ಯವಾಯಿತು. ಸರ್ಕಿಟ್ ಮೇಲ್ವಿಚಾರಕನನ್ನಾದರೋ ಸೆರೆಗೆ ಕೊಂಡೊಯ್ಯಲಾಯಿತು.
ಜವಾಬ್ದಾರಿಯುತ ಸಹೋದರರು ಸರ್ಕಿಟ್ ಮೇಲ್ವಿಚಾರಕನ ಸ್ಥಾನವನ್ನು ತೆಗೆದುಕೊಳ್ಳುವಂತೆ ಫರ್ಡಿನಾಂಡ್‌ಗೆ ಕೇಳಿದರು. ಇದರಿಂದ ಅವರಿಗೆ ತಿಂಗಳಿನಲ್ಲಿ ಮೂರು ದಿನ ಮಾತ್ರ ಮನೆಯಲ್ಲಿರಲು ಸಾಧ್ಯವಾಗುವುದು. ಇದು ನಮಗೆ ಒಂದು ಹೊಸ ಪಂಥಾಹ್ವಾನವಾಗಿತ್ತು, ಆದರೆ ನಾನು ಪಯನೀಯರ್ ಸೇವೆಯಲ್ಲಿ ಮುಂದುವರಿದೆ. ಗೆಸ್ಟಪೊ, ಸಾಕ್ಷಿಗಳಿಗಾಗಿರುವ ತಮ್ಮ ಹುಡುಕಾಟವನ್ನು ತೀವ್ರಗೊಳಿಸಿದ್ದರು, ಮತ್ತು ಈ ಕಾರಣದಿಂದಾಗಿ ನಾವು ಒಂದು ಕಡೆ ಉಳಿಯುವಂತಿರಲಿಲ್ಲ. 1942ರಲ್ಲಿ ನಾವು ಮೂರು ಬಾರಿ ಸ್ಥಳಾಂತರಿಸಿದೆವು. ಕೊನೆಗೆ, ರಾಟರ್‌ಡ್ಯಾಮ್‌ನ ಪಟ್ಟಣವೊಂದಕ್ಕೆ ಬಂದು ತಲಪಿದೆವು. ಇದು ಫರ್ಡಿನಾಂಡ್ ಗುಪ್ತವಾಗಿ ತನ್ನ ಶುಶ್ರೂಷೆಯನ್ನು ನಡೆಸುತ್ತಿದ್ದ ಕ್ಷೇತ್ರದಿಂದ ತೀರ ದೂರದಲ್ಲಿತ್ತು. ಆ ಸಮಯದಲ್ಲಿ ನಮ್ಮ ಎರಡನೇ ಮಗು ಇನ್ನೇನು ಜನಿಸಲಿಕ್ಕಿತ್ತು. ಕಂಪ್ ಕುಟುಂಬದವರು ನಮ್ಮನ್ನು ದಯೆಯಿಂದ ತಮ್ಮ ಮನೆಯೊಳಗೆ ಸೇರಿಸಿಕೊಂಡರು. ಇವರ ಇಬ್ಬರು ಗಂಡುಮಕ್ಕಳು ಆಗತಾನೇ ಕೂಟಶಿಬಿರಗಳಿಗೆ ಗಡೀಪಾರು ಮಾಡಲ್ಪಟ್ಟಿದ್ದರು.
ಗೆಸ್ಟಪೊ ನಮ್ಮನ್ನು ನೆರಳಿನಂತೆ ಹಿಂಬಾಲಿಸಿದರು
ನಮ್ಮ ಎರಡನೇ ಮಗು, ರೂತ್ 1943ರ ಜುಲೈ ತಿಂಗಳಿನಲ್ಲಿ ಜನಿಸಿದಳು. ರೂತ್ ಜನಿಸಿದ ಅನಂತರ ಫರ್ಡಿನಾಂಡ್‌ಗೆ ನಮ್ಮೊಂದಿಗೆ ಮೂರು ದಿವಸ ಮಾತ್ರ ಉಳಿಯಲು ಸಾಧ್ಯವಾಯಿತು. ತದನಂತರ ಅವರು ಹೊರಡಬೇಕಾಯಿತು ಮತ್ತು ಅದರ ತರುವಾಯ ನಾವು ಅವರನ್ನು ಭೇಟಿಯಾದದ್ದು ತುಂಬ ಸಮಯದ ನಂತರವೇ. ಮೂರು ವಾರಗಳ ಬಳಿಕ, ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ಫರ್ಡಿನಾಂಡ್‌ರನ್ನು ಬಂಧಿಸಲಾಯಿತು. ಅವರನ್ನು ಗೆಸ್ಟಪೊ ಠಾಣೆಗೆ ಕೊಂಡೊಯ್ಯಲಾಯಿತು, ಮತ್ತು ಅಲ್ಲಿ ಅವರ ಗುರುತು ದೃಢೀಕರಿಸಲ್ಪಟ್ಟಿತು. ನಮ್ಮ ಸಾರುವ ಚಟುವಟಿಕೆಗಳ ಕುರಿತು ಮಾಹಿತಿಯನ್ನು ಕೊಡುವಂತೆ ಅವರನ್ನು ಒತ್ತಾಯಿಸುವ ಪ್ರಯತ್ನದಲ್ಲಿ ಗೆಸ್ಟಪೊ ಫರ್ಡಿನಾಂಡನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಆದರೆ ಫರ್ಡಿನಾಂಡ್, ತಾನು ಒಬ್ಬ ಯೆಹೋವನ ಸಾಕ್ಷಿ ಮತ್ತು ತಾನು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಲ್ಲವೆಂದು ಮಾತ್ರ ಹೇಳುತ್ತಾ, ಬೇರಾವುದೇ ವಿಷಯದ ಬಗ್ಗೆ ಬಾಯಿಬಿಡಲಿಲ್ಲ. ಒಬ್ಬ ಜರ್ಮನ್ ಪ್ರಜೆಯಾಗಿದ್ದ ಫರ್ಡಿನಾಂಡ್ ಮಿಲಿಟರಿ ಸೇವೆಗೆ ತನ್ನನ್ನು ನೋಂದಾಯಿಸಿಕೊಳ್ಳಲಿಲ್ಲ ಎಂಬ ವಿಷಯದಲ್ಲಿ ಗೆಸ್ಟಪೊ ಅಧಿಕಾರಿಗಳು ಕ್ರೋಧಿತರಾಗಿದ್ದರು, ಮತ್ತು ಅವರನ್ನು ಒಬ್ಬ ದೇಶದ್ರೋಹಿಯಾಗಿ ಹತಿಸಿಬಿಡುವ ಬೆದರಿಕೆಹಾಕಿದರು.
ಮುಂದಿನ ಐದು ತಿಂಗಳುಗಳಿಗೆ ಫರ್ಡಿನಾಂಡರನ್ನು ಒಂದು ಸೆರೆ ಕೋಣೆಯಲ್ಲಿ ಹಾಕಲಾಯಿತು. ಅಲ್ಲಿ ಅವರು ಗುಂಡಿಕ್ಕಿ ಸಾಯಿಸಲ್ಪಡುವ ಬೆದರಿಕೆಗಳನ್ನು ನಿರಂತರವಾಗಿ ತಾಳಿಕೊಳ್ಳಬೇಕಾಯಿತು. ಆದರೂ ಯೆಹೋವನ ಕಡೆಗಿನ ನಿಷ್ಠೆಯನ್ನು ಅವರು ಬಿಟ್ಟುಕೊಡಲಿಲ್ಲ. ಆಧ್ಯಾತ್ಮಿಕವಾಗಿ ಬಲಶಾಲಿಯಾಗಿ ಉಳಿಯಲು ಅವರಿಗೆ ಯಾವುದು ಸಹಾಯಮಾಡಿತು? ದೇವರ ವಾಕ್ಯವಾದ ಬೈಬಲ್. ವಾಸ್ತವದಲ್ಲಿ, ಒಬ್ಬ ಸಾಕ್ಷಿಯಾಗಿ, ಫರ್ಡಿನಾಂಡ್‌ಗೆ ಒಂದು ಬೈಬಲನ್ನು ಹೊಂದಿರುವ ಅನುಮತಿ ಇರಲಿಲ್ಲ. ಆದರೆ ಇತರ ಸೆರೆವಾಸಿಗಳು ಒಂದು ಬೈಬಲಿಗಾಗಿ ವಿನಂತಿಸಿಕೊಳ್ಳಬಹುದಿತ್ತು. ಆದುದರಿಂದ, ತನ್ನ ಜೊತೆ ಸೆರೆವಾಸಿಯ ಕುಟುಂಬದವರು ಅವನಿಗೆ ಒಂದು ಬೈಬಲನ್ನು ಕಳುಹಿಸಿಕೊಡುವಂತೆ ಅವನನ್ನು ಒಡಂಬಡಿಸುವುದರಲ್ಲಿ ಫರ್ಡಿನಾಂಡ್ ಯಶಸ್ವಿಯಾದರು, ಮತ್ತು ಆ ಮನುಷ್ಯನು ಹಾಗೆಯೇ ವಿನಂತಿಸಿದನು. ವರ್ಷಗಳಾನಂತರ, ಈ ಘಟನೆಯ ಕುರಿತು ಫರ್ಡಿನಾಂಡ್ ಮಾತಾಡಿದಾಗೆಲ್ಲಾ ಅವರ ಕಣ್ಣುಗಳು ಕಂಗೊಳಿಸುತ್ತಿದ್ದವು ಮತ್ತು “ಆ ಬೈಬಲು ನನಗೆ ಎಷ್ಟು ಸಾಂತ್ವನವನ್ನು ಕೊಟ್ಟಿತು!” ಎಂದು ಅವರು ಹೇಳುತ್ತಿದ್ದರು.
ಇಸವಿ 1944ರ ಜನವರಿ ತಿಂಗಳಿನ ಆರಂಭದಲ್ಲಿ, ಇದ್ದಕ್ಕಿದ್ದಹಾಗೆ
ಫರ್ಡಿನಾಂಡನ್ನು ನೆದರ್ಲೆಂಡ್ಸ್‌ನಲ್ಲಿರುವ ವಕ್ಟ್ ಎಂಬಲ್ಲಿನ ಕೂಟಶಿಬಿರಕ್ಕೆ ಕೊಂಡೊಯ್ಯಲಾಯಿತು. ಅನಿರೀಕ್ಷಿತವಾಗಿ, ಈ ಸ್ಥಳಾಂತರವು ಅವರಿಗೆ ಒಂದು ಆಶೀರ್ವಾದವಾಗಿ ಪರಿಣಮಿಸಿತು. ಏಕೆಂದರೆ ಅಲ್ಲಿ ಅವರಿಗೆ ಇತರ 46 ಸಾಕ್ಷಿಗಳನ್ನು ಭೇಟಿಮಾಡುವ ಸಂದರ್ಭ ಸಿಕ್ಕಿತು. ಅವರ ಸ್ಥಳಬದಲಾವಣೆಯ ಕುರಿತು ನಾನು ತಿಳಿದುಕೊಂಡಾಗ, ಅವರಿನ್ನೂ ಬದುಕಿದ್ದಾರೆ ಎಂಬುದರ ಕುರಿತು ನನಗೆ ತುಂಬ ಸಂತೋಷವಾಯಿತು!ಕೂಟಶಿಬಿರದಲ್ಲಿ ಎಡೆಬಿಡದೆ ಸಾರುವುದು
ಕೂಟಶಿಬಿರದಲ್ಲಿ ಜೀವನವು ತುಂಬ ಕಷ್ಟಕರವಾಗಿತ್ತು. ಗಂಭೀರವಾದ ನ್ಯೂನಪೋಷಣೆ, ಬೆಚ್ಚಗಿನ ಬಟ್ಟೆಗಳ ಕೊರತೆ ಮತ್ತು ತೀವ್ರವಾದ ಶೀತವು ಪ್ರತಿನಿತ್ಯದ ಸಂಗತಿಯಾಗಿತ್ತು. ಈ ಕಾರಣದಿಂದ ಫರ್ಡಿನಾಂಡ್‌ರು ಗಂಭೀರ ರೀತಿಯಲ್ಲಿ ಗಂಟಲ ಗ್ರಂಥಿಯ ಉರಿಯೂತದಿಂದ ಬಾಧಿಸಲ್ಪಟ್ಟರು. ಹೊರಗೆ ತಣ್ಣನೆಯ ಹವಾಮಾನದಲ್ಲಿ ದೀರ್ಘಕಾಲದ ಹಾಜರಿ ಕೂಗು ಮಾಡಲ್ಪಟ್ಟ ಅನಂತರ, ಅವರು ರೋಗಿಗಳ ಕೊಠಡಿಯಲ್ಲಿ ದಾಖಲಾಗಲು ಹೋದರು. 104 ಡಿಗ್ರೀ ಅಥವಾ ಅದಕ್ಕಿಂತಲೂ ಹೆಚ್ಚು ಡಿಗ್ರೀ ಜ್ವರವಿದ್ದವರನ್ನು ಮಾತ್ರ ಅಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು. ಆದರೆ ಫರ್ಡಿನಾಂಡ್ ಅಲ್ಲಿ ಉಳಿಯುವಂತೆ ಅನುಮತಿಸಲ್ಪಡಲಿಲ್ಲ, ಏಕೆಂದರೆ ಅವರ ಶರೀರದ ಉಷ್ಣತೆಯು ಕೇವಲ 102 ಡಿಗ್ರೀ ಆಗಿತ್ತು! ಅವರನ್ನು ಪುನಃ ಕೆಲಸಕ್ಕೆ ಹೋಗುವಂತೆ ಹೇಳಲಾಯಿತು. ಆದರೆ ಕರುಣಾಭರಿತರಾದ ಜೊತೆ ಸೆರೆವಾಸಿಗಳು, ಅವರನ್ನು ಆಗಿಂದಾಗ್ಗೆ ಸ್ವಲ್ಪ ಸಮಯಕ್ಕೆ ಒಂದು ಬೆಚ್ಚಗಿನ ಸ್ಥಳದಲ್ಲಿ ಬಚ್ಚಿಡುವ ಮೂಲಕ ಅವರಿಗೆ ನೆರವನ್ನು ನೀಡಿದರು. ಹವಾಮಾನವು ಬೆಚ್ಚಗಾದಾಗ ಹೆಚ್ಚಿನ ಉಪಶಮನವು ಸಿಕ್ಕಿತು. ಮಾತ್ರವಲ್ಲದೆ, ಕೆಲವು ಸಹೋದರರು ಊಟದ ಪೊಟ್ಟಣಗಳನ್ನು ಪಡೆದುಕೊಂಡಾಗ ಅದರಲ್ಲಿರುವ ಆಹಾರವನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದರು. ಹೀಗೆ ಫರ್ಡಿನಾಂಡ್‌ಗೆ ಸ್ವಲ್ಪ ಚೇತರಿಸಿಕೊಳ್ಳಲು ಸಾಧ್ಯವಾಯಿತು.
ನನ್ನ ಗಂಡನು ಬಂಧಿಸಲ್ಪಡುವ ಮುನ್ನ, ಸಾರುವಿಕೆಯು ಅವರ ಜೀವನ ರೀತಿಯಾಗಿತ್ತು, ಮತ್ತು ಕೂಟಶಿಬಿರದ ಒಳಗೆ ಅವರು ತಮ್ಮ ನಂಬಿಕೆಗಳ ಬಗ್ಗೆ ಇತರರಿಗೆ ತಿಳಿಸುವುದನ್ನು ಮುಂದುವರಿಸಿದರು. ಶಿಬಿರದ ಅಧಿಕಾರಿಗಳು ಫರ್ಡಿನಾಂಡ್ ಹೊತ್ತಿದ್ದ ಕೆನ್ನೀಲಿ ತ್ರಿಕೋನದ—ಇದು ಸೆರೆವಾಸಿಯನ್ನು ಒಬ್ಬ ಸಾಕ್ಷಿಯನ್ನಾಗಿ ಗುರುತಿಸುತ್ತಿತ್ತು—ವಿಷಯದಲ್ಲಿ ಅವರನ್ನು ಅನೇಕವೇಳೆ ಹೀಯಾಳಿಸಿ ಮಾತಾಡುತ್ತಿದ್ದರು. ಆದರೆ ಈ ರೀತಿಯ ಅಣಕಿಸುವ ನುಡಿಗಳನ್ನು ಫರ್ಡಿನಾಂಡ್ ಅವರೊಂದಿಗೆ ಒಂದು ಸಂಭಾಷಣೆಯನ್ನು ಆರಂಭಿಸುವ ಸಂದರ್ಭಗಳಾಗಿ ವೀಕ್ಷಿಸುತ್ತಿದ್ದರು. ಪ್ರಥಮವಾಗಿ, ಸಹೋದರರಿಗೆ ಹೆಚ್ಚಾಗಿ ಸಾಕ್ಷಿಗಳನ್ನು ಹೊಂದಿದ್ದ ಬ್ಯಾರಕ್‌ಗಳಲ್ಲಿ ಮಾತ್ರ ಸಾರಲು ಸಾಧ್ಯವಿತ್ತು. ‘ನಾವು ಹೆಚ್ಚು ಸೆರೆವಾಸಿಗಳನ್ನು ಹೇಗೆ ಸಂಪರ್ಕಿಸಬಲ್ಲೆವು?’ ಎಂದು ಸಹೋದರರು ತಮ್ಮನ್ನೇ ಕೇಳಿಕೊಂಡರು. ಶಿಬಿರ ಅಧಿಕಾರಿಗಳು ಅವರಿಗರಿಯದೆಯೇ ಒಂದು ಪರಿಹಾರವನ್ನು ಒದಗಿಸಿದರು. ಅದು ಹೇಗೆ?
ಸಹೋದರರ ಬಳಿ ಬೈಬಲ್ ಸಾಹಿತ್ಯದ ಮತ್ತು 12 ಬೈಬಲ್‌ಗಳ ರಹಸ್ಯ ಸರಬರಾಯಿ ಇತ್ತು. ಒಂದು ದಿನ ಕಾವಲುಗಾರರು ಕೆಲವು ಪ್ರಕಾಶನಗಳನ್ನು ಕಂಡುಕೊಂಡರು, ಆದರೆ ಅದು ಯಾರಿಗೆ ಸೇರಿದ್ದಾಗಿದೆ ಎಂಬುದನ್ನು ಅವರಿಂದ ಕಂಡುಹಿಡಿಯಲಾಗಲಿಲ್ಲ. ಆದುದರಿಂದ, ಸಾಕ್ಷಿಗಳ ಒಗ್ಗಟ್ಟನ್ನು ಮುರಿಯಬೇಕು ಎಂದು ಶಿಬಿರದ ಅಧಿಕಾರಿಗಳು ತೀರ್ಮಾನಿಸಿದರು. ಒಂದು ಶಿಕ್ಷೆಯೋಪಾದಿ ಎಲ್ಲಾ ಸಹೋದರರನ್ನು ಸಾಕ್ಷ್ಯೇತರ ಸೆರೆವಾಸಿಗಳಿಂದ ತುಂಬಿಸಲ್ಪಟ್ಟಿದ್ದ ಬ್ಯಾರಕ್‌ಗಳಿಗೆ ಸ್ಥಳಾಂತರಿಸಲಾಯಿತು. ಮಾತ್ರವಲ್ಲದೆ, ಊಟ ಮಾಡುವಾಗ ಸಹೋದರರು ಸಾಕ್ಷ್ಯೇತರರ ಪಕ್ಕದಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಈ ಏರ್ಪಾಡು ಒಂದು ಆಶೀರ್ವಾದವಾಗಿ ಪರಿಣಮಿಸಿತು. ಸಹೋದರರು ಏನು ಮಾಡಬೇಕೆಂದು ಬಯಸಿದ್ದರೋ ಅದನ್ನೇ, ಅಂದರೆ ಸಾಧ್ಯವಿರುವಷ್ಟು ಹೆಚ್ಚು ಜೊತೆ ಸೆರೆವಾಸಿಗಳಿಗೆ ಅವರೀಗ ಸಾರಬಹುದಾಗಿತ್ತು.
ಏಕಾಂಗಿಯಾಗಿ ಇಬ್ಬರು ಹುಡುಗಿಯರನ್ನು ಬೆಳೆಸುವುದು
ಏತನ್ಮಧ್ಯೆ, ನಾನು ಮತ್ತು ನನ್ನ ಇಬ್ಬರು ಹೆಣ್ಣುಮಕ್ಕಳು ರಾಟರ್‌ಡ್ಯಾಮ್‌ನಲ್ಲೇ ಜೀವಿಸುತ್ತಿದ್ದೆವು. 1943/44ರ ಶೀತಕಾಲವು ತುಂಬ ಕಠಿನವಾಗಿತ್ತು. ನಮ್ಮ ಮನೆಯ ಹಿಂದೆ ವಿಮಾನವನ್ನು ಹೊಡೆದು ಬೀಳಿಸುವ ಫಿರಂಗಿಗಳನ್ನು ಹೊಂದಿರುವ ಯೂನಿಟ್ ಒಂದಿತ್ತು. ಇದನ್ನು ಜರ್ಮನ್ ಸೈನಿಕರು ನಿರ್ವಹಿಸುತ್ತಿದ್ದರು. ನಮ್ಮ ಮುಂದೆ, ಸಿಡಿಗುಂಡುಗಳನ್ನೆಸೆಯುವ ಮೈತ್ರಿಪಡೆಗಳ ವಿಮಾನಗಳ ಪ್ರಧಾನ ಗುರಿಯಾಗಿದ್ದ ವಾಲ್ ಹಾರ್ಬರ್ ಇತ್ತು. ಅಡಗಿಕೊಳ್ಳಲು ಅದು ಸುಭದ್ರ ಸ್ಥಳವಾಗಿರಲಿಲ್ಲ ನಿಜ. ಮಾತ್ರವಲ್ಲದೆ, ಆಹಾರದ ಅಭಾವವೂ ಇತ್ತು. ಎಂದಿಗಿಂತಲೂ ಹೆಚ್ಚಾಗಿ, ನಾವು ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡಲು ಕಲಿತೆವು.—ಜ್ಞಾನೋಕ್ತಿ 3:5, 6.
ಎಂಟು ವರ್ಷ ಪ್ರಾಯದ ಎಸ್ತರ್, ಅಗತ್ಯದಲ್ಲಿರುವವರಿಗೆ ಸೀಮಿತ ಆಹಾರಪಾನೀಯಗಳು ಕೊಡಲ್ಪಡುವ ಸ್ಥಳದಲ್ಲಿ ಅವನ್ನು ಪಡೆದುಕೊಳ್ಳಲಿಕ್ಕಾಗಿ ಸಾಲಿನಲ್ಲಿ ನಿಂತುಕೊಳ್ಳುವ ಮೂಲಕ ನಮ್ಮ ಚಿಕ್ಕ ಕುಟುಂಬಕ್ಕೆ ನೆರವನ್ನು ನೀಡಿದಳು. ಆದರೂ, ಆಹಾರವನ್ನು ತೆಗೆದುಕೊಳ್ಳಲು ಅವಳ ಬಾರಿ ಬಂದಾಗ ಅನೇಕಸಲ ಎಲ್ಲವೂ ಮುಗಿದುಹೋಗಿರುತ್ತಿತ್ತು. ಆಹಾರಕ್ಕಾಗಿ ಹುಡುಕುತ್ತಾ ಹೊರಟಿದ್ದ ಒಂದು ಸಂದರ್ಭದಲ್ಲಿ ಅವಳು ಶಸ್ತ್ರಸಜ್ಜಿತ ವಿಮಾನಗಳು ಮಾಡಿದ ದಾಳಿಯ ಮಧ್ಯದಲ್ಲಿ ಸಿಕ್ಕಿಕೊಂಡಳು. ಆ ವಿಸ್ಫೋಟಗಳ ಶಬ್ದವು ನನ್ನ ಕಿವಿಗೆ ಬಿದ್ದಾಗ ನಾನು ದಿಗಿಲುಗೊಂಡೆ, ಆದರೆ ಎಸ್ತರ್ ಯಾವುದೇ ಹಾನಿಗೊಳಗಾಗದೆ ಹಿಂದಿರುಗಿದಾಗ ನನ್ನ ಕಳವಳವು ಶೀಘ್ರವೇ ಆನಂದ ಬಾಷ್ಪವಾಗಿ ತಿರುಗಿತು ಮತ್ತು ಅವಳ ಕೈಯಲ್ಲಿ ಕೆಲವು ಸಕ್ಕರೆ ಬೀಟುಗಳು ಸಹ ಇದ್ದವು. “ಏನಾಯಿತು?” ಎಂಬುದು ನನ್ನ ಮೊದಲ ಮಾತಾಗಿತ್ತು. ಅವಳು ಶಾಂತಭಾವದಿಂದ ಉತ್ತರಕೊಟ್ಟದ್ದು: “ಬಾಂಬುಗಳು ಬೀಳಲಾರಂಭಿಸಿದಾಗ, ಅಪ್ಪ ಏನು ಹೇಳಿದ್ದರೋ ಅದನ್ನೇ ಮಾಡಿದೆ: ‘ನೆಲದ ಮೇಲೆ ಮುಖ ಕೆಳಗಾಗಿ ಬೀಳಬೇಕು, ಹಾಗೆಯೇ ಇದ್ದು ಪ್ರಾರ್ಥಿಸಬೇಕು.’ ನಾನು ಅದನ್ನೇ ಮಾಡಿದೆ, ಅದಕ್ಕೆ ನನಗೆ ಏನೂ ಆಗಲಿಲ್ಲ!”
ನನ್ನ ಉಚ್ಚಾರಣೆಯು ಜರ್ಮನ್ ಶೈಲಿಯದ್ದಾಗಿದ್ದರಿಂದ ಆ ಸಮಯದಲ್ಲಿ ಸಾಧ್ಯವಿದ್ದ ಅಲ್ಪಸ್ವಲ್ಪ ಖರೀದಿಗಳನ್ನು ಎಸ್ತರಳು ಮಾಡುವುದು ಹೆಚ್ಚು ಸುರಕ್ಷಿತವಾಗಿತ್ತು. ಇದು ಜರ್ಮನ್ ಸೈನಿಕರ ಗಮನಕ್ಕೆ ಬಾರದೆ ಇರಲಿಲ್ಲ, ಮತ್ತು ಅವರು ಎಸ್ತರಳನ್ನು ಪ್ರಶ್ನಿಸಲು ಆರಂಭಿಸಿದರು. ಆದರೆ ಅವಳು ಯಾವುದೇ ರಹಸ್ಯವನ್ನು ಬಿಟ್ಟುಕೊಡಲಿಲ್ಲ. ಮನೆಯಲ್ಲಿ ನಾನು ಎಸ್ತರ್‌ಗೆ ಬೈಬಲ್ ಶಿಕ್ಷಣವನ್ನು ಒದಗಿಸಿದೆ,
ಮತ್ತು ಅವಳು ಶಾಲೆಗೆ ಹೋಗಲು ಸಾಧ್ಯವಿಲ್ಲದ್ದರಿಂದ ನಾನು ಅವಳಿಗೆ ಓದುಬರಹ ಹಾಗೂ ಇತರ ಕೌಶಲಗಳನ್ನು ಕಲಿಸಿದೆ.ಎಸ್ತರ್ ನನಗೆ ಶುಶ್ರೂಷೆಯಲ್ಲಿಯೂ ಸಹಾಯವನ್ನು ನೀಡಿದಳು. ನಾನು ಯಾರೊಂದಿಗಾದರೂ ಬೈಬಲನ್ನು ಅಧ್ಯಯನ ಮಾಡಲು ಹೊರಡುವ ಮೊದಲು, ಎಸ್ತರ್ ನನಗಿಂತ ಮುಂಚೆ ಹೋಗಿ ಯಾರಾದರೂ ನಮ್ಮನ್ನು ಗಮನಿಸುತ್ತಿದ್ದಾರೆಯೇ ಎಂದು ಪರೀಕ್ಷಿಸುತ್ತಿದ್ದಳು. ನಾನು ಬೈಬಲ್ ವಿದ್ಯಾರ್ಥಿಯೊಂದಿಗೆ ಮಾತಾಡಿಕೊಂಡಿದ್ದ ಚಿಹ್ನೆಗಳು ಸರಿಯಾದ ಸ್ಥಳದಲ್ಲಿವೆಯೋ ಎಂಬುದನ್ನು ಅವಳು ನೋಡುತ್ತಿದ್ದಳು. ಉದಾಹರಣೆಗೆ, ನಾನು ಭೇಟಿಮಾಡಲಿಕ್ಕಿದ್ದ ವ್ಯಕ್ತಿ ಕಿಟಕಿಯ ತಳದ ಮೇಲೆ ಒಂದು ನಿರ್ದಿಷ್ಟ ಸ್ಥಾನದಲ್ಲಿ ಹೂಕುಂಡವನ್ನು ಇಡುತ್ತಿದ್ದರು ಮತ್ತು ಇದು ನಾನು ಒಳಗೆ ಬರಬಹುದು ಎಂದು ಸೂಚಿಸುವುದಾಗಿತ್ತು. ಬೈಬಲ್ ಅಧ್ಯಯನವು ನಡೆಸಲ್ಪಡುತ್ತಿದ್ದ ಸಮಯದಲ್ಲಿ, ಎಸ್ತರ್ ಹೊರಗೆ ಇದ್ದು ಪುಟಾಣಿ ರೂತಳನ್ನು ಮಕ್ಕಳ ತಳ್ಳುಬಂಡಿಯಲ್ಲಿಟ್ಟು ಅದನ್ನು ತಳ್ಳುತ್ತಾ ಬೀದಿಯ ಉದ್ದಕ್ಕೂ ನಡೆದಾಡಿಕೊಂಡು ಅಪಾಯದ ಸೂಚನೆಗಳಿಗಾಗಿ ನೋಡುತ್ತಿರುತ್ತಿದ್ದಳು.
ಸಾಚ್‌ಸನ್‌ಹಾಸನ್‌ಗೆ
ಫರ್ಡಿನಾಂಡ್‌ರ ಸ್ಥಿತಿ ಹೇಗಿತ್ತು? 1944ರ ಸೆಪ್ಟೆಂಬರ್ ತಿಂಗಳಿನಲ್ಲಿ, ಅವರನ್ನು ಮತ್ತು ಇತರ ಅನೇಕ ಮಂದಿಯನ್ನು ಒಂದು ರೈಲ್ವೇ ಸ್ಟೇಷನ್‌ಗೆ ನಡೆದು ತರಲಾಯಿತು ಮತ್ತು ಅಲ್ಲಿ ಕಾಯುತ್ತಿದ್ದ ಸಾಮಾನು ಸರಂಜಾಮು ಸಾಗಿಸುವ ಮುಚ್ಚಿದ ರೈಲ್ವೇ ವೇಗನ್ (ಬಾಕ್ಸ್‌ಕಾರ್)ಗಳಲ್ಲಿ ಗುಂಪುಗುಂಪಾಗಿ 80 ಸೆರೆವಾಸಿಗಳನ್ನು ತುರುಕಿಸಲಾಯಿತು. ಪ್ರತಿಯೊಂದು ವೇಗನ್‌ನಲ್ಲಿ ಎರಡು ಬಕೆಟ್‌ಗಳು ಇದ್ದವು, ಅದರಲ್ಲಿ ಒಂದನ್ನು ಶೌಚಾಲಯವಾಗಿ ಉಪಯೋಗಿಸಬೇಕಿತ್ತು, ಮತ್ತೊಂದನ್ನು ಕುಡಿಯುವ ನೀರಿಗಾಗಿ ಉಪಯೋಗಿಸಬೇಕಿತ್ತು. ಆ ಪ್ರಯಾಣವು ಮೂರು ದಿನ ಮೂರು ರಾತ್ರಿಯದ್ದಾಗಿತ್ತು, ಮತ್ತು ಅದರಲ್ಲಿ ನಿಂತುಕೊಳ್ಳುವಷ್ಟೇ ಸ್ಥಳವಿತ್ತು! ಅದರಲ್ಲಿ ವಾಯುಸಂಚಾರಕ್ಕಾಗಿ ಯಾವುದೇ ವ್ಯವಸ್ಥೆಯಿರಲಿಲ್ಲ. ಆ ಬಾಕ್ಸ್‌ಕಾರ್‌ಗಳಲ್ಲಿ ಅಲ್ಲಲ್ಲಿ ಚಿಕ್ಕಚಿಕ್ಕ ರಂಧ್ರಗಳು ಮಾತ್ರ ಇದ್ದವು. ಅವರು ತಾಳಿಕೊಳ್ಳಬೇಕಾಗಿದ್ದ ಉಷ್ಣತೆ, ಹಸಿವೆ, ದಾಹ ಮತ್ತು ಆ ದುರ್ವಾಸನೆಯನ್ನು ವಿವರಿಸಲಾಗದು.
ರೈಲು ಕುಪ್ರಸಿದ್ಧವಾಗಿದ್ದ ಸಾಚ್‌ಸನ್‌ಹಾಸನ್ ಕೂಟಶಿಬಿರದ ಬಳಿ ಬಂದು ನಿಧಾನವಾಗಿ ನಿಂತಿತು. ಸೆರೆವಾಸಿಗಳ ಬಳಿಯಲ್ಲಿದ್ದ ಯಾವುದೇ ವಸ್ತುವನ್ನು ತೆಗೆದುಕೊಳ್ಳಲಾಯಿತು—ಸಾಕ್ಷಿಗಳು ತಮ್ಮ ಪ್ರಯಾಣದ ಸಮಯದಲ್ಲಿ ತಮ್ಮೊಂದಿಗೆ ಕೊಂಡೊಯ್ದಿದ್ದ 12 ಚಿಕ್ಕ ಬೈಬಲ್‌ಗಳು ಮಾತ್ರ ಅವರೊಂದಿಗೆ ಉಳಿದವು!
ಫರ್ಡಿನಾಂಡ್ ಮತ್ತು ಇತರ ಎಂಟು ಸಹೋದರರನ್ನು ರಾಟನೊವಿನಲ್ಲಿರುವ ಸಾಚ್‌ಸನ್‌ಹಾಸನ್‌ನಿಂದ ನಿಯಂತ್ರಿಸಲ್ಪಟ್ಟ ಒಂದು ಶಿಬಿರಕ್ಕೆ ಕಳುಹಿಸಲಾಯಿತು ಮತ್ತು ಅಲ್ಲಿ ಅವರು ಯುದ್ಧೋಪಕರಣ ತಯಾರಿಕೆಯಲ್ಲಿ ಕೆಲಸಮಾಡಬೇಕಿತ್ತು. ಅವರನ್ನು ಕೊಂದುಹಾಕುವ ಬೆದರಿಕೆಗಳು ಅನೇಕಬಾರಿ ಮಾಡಲ್ಪಟ್ಟವಾದರೂ ಸಹೋದರರು ಆ ರೀತಿಯ ಕೆಲಸವನ್ನು ಮಾಡಲು ನಿರಾಕರಿಸಿದರು. ದೃಢರಾಗಿ ಉಳಿಯುವಂತೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲಿಕ್ಕಾಗಿ, ಪ್ರತಿದಿನ ಬೆಳಗ್ಗೆ ಅವರು ಕೀರ್ತನೆ 18:2ರಂತಹ ಒಂದು ಬೈಬಲ್ ವಚನವನ್ನು ಚರ್ಚಿಸುತ್ತಿದ್ದರು, ಮತ್ತು ಇಡೀ ದಿನ ಅದರ ಕುರಿತು ಧ್ಯಾನಿಸುವಂತೆ ಇದು ಸಹಾಯಮಾಡಿತು. ಆಧ್ಯಾತ್ಮಿಕ ವಿಚಾರಗಳ ಕುರಿತು ಧ್ಯಾನಿಸುವಂತೆ ಇದು ಅವರಿಗೆ ಸಹಾಯಮಾಡಿತು.
ಅಂತಿಮವಾಗಿ, ಫಿರಂಗಿಗಳ ಭೋರ್ಗರೆತವು ಮಿತ್ರಪಡೆಗಳು ಮತ್ತು ರಷ್ಯದ ಸೈನಿಕ ದಳಗಳ ಸಮೀಪಿಸುವಿಕೆಯನ್ನು ಪ್ರಕಟಿಸಿತು. ಫರ್ಡಿನಾಂಡ್ ಮತ್ತು ಅವರ ಸಂಗಡಿಗರಿದ್ದ ಶಿಬಿರಕ್ಕೆ ಪ್ರಥಮವಾಗಿ ರಷ್ಯನರು ಬಂದರು. ಅವರು ಸೆರೆವಾಸಿಗಳಿಗೆ ಸ್ವಲ್ಪ ಆಹಾರವನ್ನು ಕೊಟ್ಟರು ಮತ್ತು ಶಿಬಿರವನ್ನು ಬಿಟ್ಟುಹೋಗುವಂತೆ ಆಜ್ಞೆಯಿತ್ತರು. 1945ರ ಏಪ್ರಿಲ್‌ನ ಅಂತ್ಯಕ್ಕೆ, ರಷ್ಯನ್ ಸೈನ್ಯವು ಅವರನ್ನು ಮನೆಗೆ ಹಿಂದಿರುಗುವಂತೆ ಅನುಮತಿಸಿತು.
ಕೊನೆಗೆ ಒಂದು ಕುಟುಂಬವಾಗಿ ಐಕ್ಯಗೊಂಡದ್ದು
ಜೂನ್ 15ರಂದು ಫರ್ಡಿನಾಂಡ್ ನೆದರ್ಲೆಂಡ್ಸ್‌ಗೆ ಆಗಮಿಸಿದರು. ಗ್ರೋನಿಂಗನ್‌ನಲ್ಲಿದ್ದ ಸಹೋದರರು ಅವರಿಗೆ ಹಾರ್ದಿಕ ಸ್ವಾಗತವನ್ನು ಕೊಟ್ಟರು. ನಾವು ಜೀವಂತವಾಗಿದ್ದೇವೆ ಮತ್ತು ದೇಶದಲ್ಲಿ ಎಲ್ಲೋ ಜೀವಿಸುತ್ತಿದ್ದೇವೆ ಎಂದು ಶೀಘ್ರವೇ ಅವರಿಗೆ ತಿಳಿದುಬಂತು, ಮತ್ತು ನಮಗೆ ಅವರು ಹಿಂದಿರುಗಿದ್ದಾರೆ ಎಂಬ ಸುದ್ದಿ ಮುಟ್ಟಿತು. ಅವರ ಬರೋಣಕ್ಕಾಗಿ ಕಾಯುವುದು ಯುಗಗಳಂತೆ ತೋರುತ್ತಿತ್ತು. ಆದರೆ ಕೊನೆಗೆ, ಒಂದು ದಿನ ಪುಟಾಣಿ ರೂತ್, “ಮಮಾ, ಬಾಗಿಲ ಬಳಿ ಯಾರೋ ನಿಂತಿದ್ದಾರೆ!” ಎಂದು ಕೂಗಿಕೊಂಡಳು. ಅವರು ನನ್ನ ಪ್ರೀತಿಯ ಗಂಡ ಮತ್ತು ನನ್ನ ಮಕ್ಕಳ ತಂದೆಯಾಗಿದ್ದರು!
ನಾವು ಒಂದು ಸಾಮಾನ್ಯ ಕುಟುಂಬವಾಗಿ ಕಾರ್ಯವೆಸಗುವ ಮೊದಲು ಬಗೆಹರಿಸಲು ಅನೇಕಾನೇಕ ಸಮಸ್ಯೆಗಳಿದ್ದವು. ನಮಗೆ ಉಳಿಯಲು ಒಂದು ಸ್ಥಳವಿರಲಿಲ್ಲ, ಮತ್ತು ಒಂದು ದೊಡ್ಡ ಸಮಸ್ಯೆಯು ಕಾಯಂ ನಿವಾಸಿಗಳಾಗಿ ನಮ್ಮ ಅಂತಸ್ತನ್ನು ಪುನಃ ಪಡೆದುಕೊಳ್ಳುವುದಾಗಿತ್ತು.
ನಾವು ಜರ್ಮನರಾಗಿದ್ದರಿಂದ, ಅನೇಕ ವರ್ಷಗಳ ವರೆಗೆ ಡಚ್ ಅಧಿಕಾರಿಗಳು ನಮ್ಮನ್ನು ಸಮಾಜಬಾಹಿರ ವ್ಯಕ್ತಿಗಳಂತೆ ಪರಿಗಣಿಸಿದರು. ಹೇಗೂ ಕೊನೆಗೆ ಸಮಸ್ಯೆಗಳು ಪರಿಹರಿಸಲ್ಪಟ್ಟು ನಾವು ಅತಿ ಹಂಬಲದಿಂದ ಎದುರುನೋಡುತ್ತಿದ್ದ ಜೀವನ, ಹೌದು ಯೆಹೋವನನ್ನು ಒಂದು ಕುಟುಂಬವಾಗಿ ಸೇವಿಸುವ ಜೀವನವನ್ನು ಆರಂಭಿಸಿದೆವು.“ಯೆಹೋವನಲ್ಲಿ ಭರವಸವಿಟ್ಟಿದ್ದೇನೆ”
ನಂತರದ ವರ್ಷಗಳಲ್ಲಿ, ನಮ್ಮ ಹಾಗೆ ಆ ಸಂಕಷ್ಟಕರ ದಿನಗಳಲ್ಲಿ ಜೀವಿಸಿದ್ದ ನಮ್ಮ ಸ್ನೇಹಿತರೊಂದಿಗೆ ನಾನು ಮತ್ತು ಫರ್ಡಿನಾಂಡ್ ಕೂಡಿಬಂದಾಗೆಲ್ಲಾ, ಆ ಕಷ್ಟಕರ ಸಮಯಗಳಲ್ಲಿ ಯೆಹೋವನು ಕೊಟ್ಟ ಪ್ರೀತಿಪೂರ್ವಕ ಮಾರ್ಗದರ್ಶನವನ್ನು ಜ್ಞಾಪಿಸಿಕೊಳ್ಳುತ್ತಿದ್ದೆವು. (ಕೀರ್ತನೆ 7:1) ಹಲವಾರು ವರ್ಷಗಳಿಗೆ ರಾಜ್ಯದ ಅಭಿರುಚಿಗಳನ್ನು ವರ್ಧಿಸುವುದರಲ್ಲಿ ಭಾಗವಹಿಸುವಂತೆ ಯೆಹೋವನು ನಮ್ಮನ್ನು ಅನುಮತಿಸಿದ್ದಕ್ಕಾಗಿ ನಾವು ಸಂತೋಷಿಸಿದೆವು. ಮತ್ತು ನಾವು ನಮ್ಮ ಯುವಪ್ರಾಯವನ್ನು ಯೆಹೋವನ ಪವಿತ್ರ ಸೇವೆಯಲ್ಲಿ ಕಳೆದೆವು ಎಂಬ ವಿಚಾರವು ಕೂಡ ನಮಗೆ ಹೆಚ್ಚು ಸಂತೋಷವನ್ನು ತರುತ್ತದೆ ಎಂದು ಅನೇಕ ಸಲ ಹೇಳಿಕೊಂಡಿದ್ದೇವೆ.—ಪ್ರಸಂಗಿ 12:1.
ನಾಸಿ ಹಿಂಸೆಯ ಕಾಲಾವಧಿಯು ಮುಗಿದ ನಂತರ, ನಾನು ಮತ್ತು ಫರ್ಡಿನಾಂಡ್ ಯೆಹೋವನನ್ನು ಒಟ್ಟಿಗೆ 50ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಸೇವಿಸಿದೆವು. ಅನಂತರ 1995ರ ಡಿಸೆಂಬರ್ 20ರಂದು ಅವರು ತಮ್ಮ ಭೂಜೀವಿತವನ್ನು ಮುಗಿಸಿದರು. ನಾನಗೀಗ 98 ವರ್ಷ ಪ್ರಾಯವಾಗಲಿದೆ. ಆ ಕಷ್ಟಕರ ವರ್ಷಗಳಲ್ಲಿ ನಮ್ಮ ಮಕ್ಕಳು ನಮಗೆ ಅಷ್ಟು ಬೆಂಬಲವನ್ನು ಕೊಟ್ಟದ್ದಕ್ಕಾಗಿ ಮತ್ತು ಯೆಹೋವನ ನಾಮ ಮಹಿಮೆಗೆ ಈಗಲೂ ನನ್ನಿಂದಾದದ್ದನ್ನು ಮಾಡಲು ಸಾಧ್ಯವಿರುವುದಕ್ಕಾಗಿ ನಾನು ಪ್ರತಿನಿತ್ಯ ಆತನಿಗೆ ಉಪಕಾರ ಸಲ್ಲಿಸುತ್ತೇನೆ. ಯೆಹೋವನು ನನಗೋಸ್ಕರ ಮಾಡಿರುವ ಎಲ್ಲದಕ್ಕಾಗಿಯೂ ನಾನು ಆತನಿಗೆ ಕೃತಜ್ಞಳಾಗಿದ್ದೇನೆ, ಮತ್ತು ನನ್ನ ಈ ಧ್ಯೇಯಮಂತ್ರಕ್ಕನುಸಾರ ಕೊನೆಯ ವರೆಗೂ ಜೀವಿಸಬೇಕೆಂಬುದು ನನ್ನ ಮನದಿಚ್ಛೆಯಾಗಿದೆ: “ನಾನಾದರೋ ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.”—ಕೀರ್ತನೆ 31:6.
[ಪುಟ 19ರಲ್ಲಿರುವ ಚಿತ್ರ]
1932ರ ಅಕ್ಟೋಬರ್ ತಿಂಗಳಿನಲ್ಲಿ ಫರ್ಡಿನಾಂಡ್‌ರೊಂದಿಗೆ
[ಪುಟ 19ರಲ್ಲಿರುವ ಚಿತ್ರ]
ಸೌವಾರ್ತಿಕ ದೋಣಿಯಾದ “ಆ್ಯಲ್ಮೀನಾ” ಮತ್ತು ಅದರ ಸಿಬ್ಬಂದಿ
[ಪುಟ 22ರಲ್ಲಿರುವ ಚಿತ್ರ]
ಫರ್ಡಿನಾಂಡ್ ಮತ್ತು ಮಕ್ಕಳೊಂದಿಗೆ