ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಮಾದರಿಯನ್ನು ಅನುಸರಿಸಿರಿ

ಯೇಸುವಿನ ಮಾದರಿಯನ್ನು ಅನುಸರಿಸಿರಿ

ಯೇಸುವಿನ ಮಾದರಿಯನ್ನು ಅನುಸರಿಸಿರಿ

“ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.”​—⁠ಯೋಹಾನ 13:⁠15.

1. ಯೇಸು ಕ್ರೈಸ್ತರಿಗೆ ಅನುಕರಿಸಲು ಯೋಗ್ಯವಾದ ಮಾದರಿಯಾಗಿದ್ದಾನೆ ಏಕೆ?

ಮಾನವಕುಲದ ಇತಿಹಾಸದಾದ್ಯಂತ ಒಬ್ಬನೇ ಒಬ್ಬ ವ್ಯಕ್ತಿಯು ತನ್ನ ಜೀವಮಾನಕಾಲದಲ್ಲೆಲ್ಲಾ ಪಾಪಮಾಡದೇ ಜೀವಿಸಿದನು. ಆ ವ್ಯಕ್ತಿ ಯೇಸುವೇ. ಯೇಸುವನ್ನು ಬಿಟ್ಟು “ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲ.” (1 ಅರಸುಗಳು 8:46; ರೋಮಾಪುರ 3:23) ಈ ಕಾರಣದಿಂದಾಗಿಯೇ ನಿಜ ಕ್ರೈಸ್ತರು ಯೇಸುವನ್ನು ತಾವು ಅನುಕರಿಸಲು ಯೋಗ್ಯವಾದ ಪರಿಪೂರ್ಣ ಮಾದರಿಯಾಗಿ ಪರಿಗಣಿಸುತ್ತಾರೆ. ವಾಸ್ತವದಲ್ಲಿ, ಸಾ.ಶ. 33ರ ನೈಸಾನ್‌ 14ರಂದು ಯೇಸುವಿನ ಮರಣಕ್ಕೆ ಸ್ವಲ್ಪ ಮುಂಚೆ, ಸ್ವತಃ ಅವನೇ ತನ್ನ ಹಿಂಬಾಲಕರಿಗೆ ತನ್ನನ್ನು ಅನುಕರಿಸುವಂತೆ ಹೇಳಿದನು. ಅವನಂದದ್ದು: “ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.” (ಯೋಹಾನ 13:15) ಯೇಸು ಆ ಕೊನೆಯ ರಾತ್ರಿಯಂದು, ಕ್ರೈಸ್ತರು ತನ್ನಂತಾಗಲು ಹೆಣಗಾಡಸಾಧ್ಯವಿರುವ ಅನೇಕ ಕ್ಷೇತ್ರಗಳನ್ನು ತಿಳಿಸಿದನು. ಈ ಲೇಖನದಲ್ಲಿ, ನಾವು ಆ ಕ್ಷೇತ್ರಗಳಲ್ಲಿ ಕೆಲವನ್ನು ಪರಿಗಣಿಸುವೆವು.

ದೀನಭಾವದ ಆವಶ್ಯಕತೆ

2, 3. ಯಾವ ವಿಧಗಳಲ್ಲಿ ಯೇಸು ದೀನಭಾವದ ವಿಷಯದಲ್ಲಿ ಪರಿಪೂರ್ಣ ಮಾದರಿಯಾಗಿದ್ದನು?

2 ತಾನು ಇಟ್ಟ ಮಾದರಿಯನ್ನು ಅನುಸರಿಸುವಂತೆ ಯೇಸು ತನ್ನ ಶಿಷ್ಯರನ್ನು ಉತ್ತೇಜಿಸುತ್ತಿದ್ದ ಸಂದರ್ಭದಲ್ಲಿ, ಅವನು ನಿರ್ದಿಷ್ಟವಾಗಿ ದೀನಭಾವದ ಕುರಿತು ಮಾತಾಡುತ್ತಿದ್ದನು. ಒಂದಕ್ಕಿಂತಲೂ ಹೆಚ್ಚು ಸಂದರ್ಭಗಳಲ್ಲಿ ಅವನು ತನ್ನ ಹಿಂಬಾಲಕರಿಗೆ ದೀನಭಾವದವರಾಗಿರುವಂತೆ ಬುದ್ಧಿಹೇಳಿದ್ದನು, ಮತ್ತು ನೈಸಾನ್‌ 14ರ ಆ ರಾತ್ರಿ ತನ್ನ ಅಪೊಸ್ತಲರ ಕಾಲುಗಳನ್ನು ತೊಳೆಯುವ ಮೂಲಕ ಅವನು ತನ್ನ ಸ್ವಂತ ದೀನಭಾವವನ್ನು ತೋರಿಸಿದನು. ತದನಂತರ ಯೇಸು ಹೇಳಿದ್ದು: “ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ.” (ಯೋಹಾನ 13:14) ಆ ಬಳಿಕ ಅವನು ತನ್ನ ಅಪೊಸ್ತಲರಿಗೆ ತಾನಿಟ್ಟಿರುವ ಮಾದರಿಯನ್ನು ಅನುಸರಿಸುವಂತೆ ಹೇಳಿದನು. ಅದು ದೀನಭಾವದ ವಿಷಯದಲ್ಲಿ ಎಷ್ಟು ಅತ್ಯುತ್ತಮ ಮಾದರಿಯಾಗಿತ್ತು!

3 ಯೇಸು ಭೂಮಿಗೆ ಬರುವುದಕ್ಕೆ ಮೊದಲು ‘ದೇವಸ್ವರೂಪನಾಗಿದ್ದನು’ ಎಂದು ಅಪೊಸ್ತಲ ಪೌಲನು ನಮಗೆ ತಿಳಿಸುತ್ತಾನೆ. ಆದರೂ ಅವನು ತನ್ನನ್ನು ಬರಿದು ಮಾಡಿಕೊಂಡು ಒಬ್ಬ ದೀನ ಮಾನವನಾದನು. ಅಷ್ಟುಮಾತ್ರವಲ್ಲದೆ, “ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ [“ಯಾತನಾ ಕಂಬದ,” NW] ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:6-8) ಇದರ ಕುರಿತು ತುಸು ಆಲೋಚಿಸಿರಿ. ಈ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿರುವ ಯೇಸು, ದೇವದೂತರಿಗಿಂತಲೂ ಕೆಳಗಿನ ಸ್ಥಾನಕ್ಕಿಳಿಯಲು, ಒಂದು ನಿಸ್ಸಹಾಯಕ ಹಸುಳೆಯಾಗಿ ಜನಿಸಲು, ಅಪರಿಪೂರ್ಣ ಹೆತ್ತವರ ಅಧೀನತೆಯಲ್ಲಿ ಬೆಳೆಯಲು, ಮತ್ತು ಕೊನೆಯದಾಗಿ ಒಬ್ಬ ತುಚ್ಛ ಅಪರಾಧಿಯೋಪಾದಿ ಸಾಯಲು ಒಪ್ಪಿಕೊಂಡನು. (ಕೊಲೊಸ್ಸೆ 1:15, 16; ಇಬ್ರಿಯ 2:6, 7) ಎಷ್ಟೊಂದು ಎದ್ದುಕಾಣುವ ದೀನಭಾವವಿದು! ಅಂಥ ‘ಮನಸ್ಸನ್ನು’ ಅನುಕರಿಸಲು ಹಾಗೂ “ದೀನಭಾವ”ವನ್ನು ಬೆಳೆಸಿಕೊಳ್ಳಲು ಸಾಧ್ಯವಿದೆಯೋ? (ಫಿಲಿಪ್ಪಿ 2:3-5) ಹೌದು, ಆದರೆ ಅದು ಸುಲಭವೇನಲ್ಲ.

4. ಯಾವ ವಿಷಯಗಳು ಮಾನವರಲ್ಲಿ ಅಹಂಕಾರವನ್ನು ಉಂಟುಮಾಡುತ್ತವೆ, ಆದರೆ ಅಹಂಕಾರವು ಏಕೆ ಅಪಾಯಕರವಾದದ್ದಾಗಿದೆ?

4 ದೀನಭಾವಕ್ಕೆ ವಿರುದ್ಧವಾಗಿರುವುದೇ ಅಹಂಕಾರವಾಗಿದೆ. (ಜ್ಞಾನೋಕ್ತಿ 6:​16-19) ಅಹಂಕಾರವೇ ಸೈತಾನನನ್ನು ಅವನತಿಗೆ ಮುನ್ನಡಿಸಿತು. (1 ತಿಮೊಥೆಯ 3:⁠6) ಇದು ಸುಲಭವಾಗಿಯೇ ಮಾನವ ಹೃದಯಗಳಲ್ಲಿ ಬೇರೂರುತ್ತದೆ ಮತ್ತು ಒಮ್ಮೆ ಅದು ಅಲ್ಲಿ ಸೇರಿತೆಂದರೆ ಅದನ್ನು ಕಿತ್ತೆಸೆಯುವುದು ತುಂಬ ಕಷ್ಟಕರ. ತಮ್ಮ ದೇಶ, ತಮ್ಮ ಜಾತಿ, ತಮ್ಮ ಆಸ್ತಿಪಾಸ್ತಿ, ತಮ್ಮ ಶಿಕ್ಷಣ, ತಮ್ಮ ಐಹಿಕ ಸಾಧನೆಗಳು, ತಮ್ಮ ಸಾಮಾಜಿಕ ಸ್ಥಾನಮಾನ, ತಮ್ಮ ಸೌಂದರ್ಯ, ತಮ್ಮ ಕ್ರೀಡಾ ಸಾಮರ್ಥ್ಯಗಳು ಹಾಗೂ ಇನ್ನೂ ಅನೇಕ ವಿಷಯಗಳ ಬಗ್ಗೆ ಜನರು ಅಹಂಕಾರಪಡುತ್ತಾರೆ. ಆದರೂ, ಇವುಗಳಲ್ಲಿ ಯಾವದೊಂದೂ ಯೆಹೋವನ ದೃಷ್ಟಿಯಲ್ಲಿ ಪ್ರಮುಖವಾಗಿಲ್ಲ. (1 ಕೊರಿಂಥ 4:⁠7) ಇದಲ್ಲದೆ ಈ ವಿಷಯಗಳು ನಮ್ಮಲ್ಲಿ ಅಹಂಕಾರವನ್ನು ಉಂಟುಮಾಡುವುದಾದರೆ, ಇವು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಘಾಸಿಗೊಳಿಸುತ್ತವೆ. “ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತುಹಿಡಿಯುತ್ತಾನೆ.”​—⁠ಕೀರ್ತನೆ 138:6; ಜ್ಞಾನೋಕ್ತಿ 8:⁠13.

ನಮ್ಮ ಸಹೋದರರ ನಡುವೆ ದೀನಭಾವ

5. ಹಿರಿಯರು ದೀನಭಾವದವರಾಗಿರುವುದು ಅತ್ಯಾವಶ್ಯಕವಾಗಿದೆ ಏಕೆ?

5 ಯೆಹೋವನ ಸೇವೆಗೆ ನಾವು ನೀಡುವ ಬೆಂಬಲ ಮತ್ತು ಅದರಲ್ಲಿನ ನಮ್ಮ ಸಾಧನೆಗಳು ಅಥವಾ ಸಭೆಯಲ್ಲಿ ನಮಗಿರುವ ಜವಾಬ್ದಾರಿಗಳು ಸಹ ನಮ್ಮಲ್ಲಿ ಅಹಂಕಾರವನ್ನು ಉಂಟುಮಾಡಬಾರದು. (1 ಪೂರ್ವಕಾಲವೃತ್ತಾಂತ 29:14; 1 ತಿಮೊಥೆಯ 6:17, 18) ವಾಸ್ತವಾಂಶವೇನೆಂದರೆ, ನಮಗೆ ಹೆಚ್ಚು ಜವಾಬ್ದಾರಿಗಳಿರುವುದಾದರೆ ನಾವು ಇನ್ನೂ ಹೆಚ್ಚು ದೀನಭಾವದವರಾಗಿರುವ ಅಗತ್ಯವಿದೆ. “ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ” ಎಂದು ಅಪೊಸ್ತಲ ಪೇತ್ರನು ಹಿರಿಯರನ್ನು ಉತ್ತೇಜಿಸಿದನು. (1 ಪೇತ್ರ 5:3) ಹಿರಿಯರು ಮುಖ್ಯಸ್ಥರಾಗಿ ಮತ್ತು ದೊರೆತನಮಾಡುವವರಾಗಿರಲು ಅಲ್ಲ, ಬದಲಾಗಿ ಸೇವಕರೂ ಆದರ್ಶಪ್ರಾಯರೂ ಆಗಿರುವಂತೆ ನೇಮಿಸಲ್ಪಟ್ಟಿದ್ದಾರೆ.​—⁠ಲೂಕ 22:24-26; 2 ಕೊರಿಂಥ 1:24.

6. ಕ್ರೈಸ್ತ ಜೀವಿತದ ಯಾವ ಕ್ಷೇತ್ರಗಳಲ್ಲಿ ನಮಗೆ ದೀನಭಾವದ ಆವಶ್ಯಕತೆಯಿದೆ?

6 ದೀನಭಾವವನ್ನು ತೋರಿಸುವ ಅಗತ್ಯವಿರುವುದು ಹಿರಿಯರಿಗೆ ಮಾತ್ರವೇ ಅಲ್ಲ. ವೃದ್ಧರಿಗೆ ಹೋಲಿಸುವಾಗ ತಮಗಿರುವ ಚುರುಕು ಬುದ್ಧಿ ಹಾಗೂ ದೃಢಕಾಯದ ವಿಷಯದಲ್ಲಿ ಹೆಮ್ಮೆಪಡುವ ಯೌವನಸ್ಥರಿಗೆ ಪೇತ್ರನು ಬರೆದುದು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:⁠5) ಹೌದು, ಕ್ರಿಸ್ತನಂಥ ದೀನಭಾವವು ಸರ್ವರಿಗೂ ಅತ್ಯಾವಶ್ಯಕ. ಸುವಾರ್ತೆಯನ್ನು ಸಾರಲು, ಅದರಲ್ಲೂ ವಿಶೇಷವಾಗಿ ತಾತ್ಸಾರ ಅಥವಾ ಕಡುದ್ವೇಷದ ಎದುರಿನಲ್ಲಿ ಇದನ್ನು ಮಾಡುವುದು ದೀನಭಾವವನ್ನು ಅಗತ್ಯಪಡಿಸುತ್ತದೆ. ಸಲಹೆಯನ್ನು ಸ್ವೀಕರಿಸಲು ಅಥವಾ ಶುಶ್ರೂಷೆಯಲ್ಲಿ ಅತ್ಯಧಿಕ ಮಟ್ಟಿಗೆ ಪಾಲ್ಗೊಳ್ಳಲಿಕ್ಕಾಗಿ ನಮ್ಮ ಜೀವನವನ್ನು ಸರಳೀಕರಿಸಲು ಸಹ ದೀನಭಾವದ ಅಗತ್ಯವಿದೆ. ಅಷ್ಟುಮಾತ್ರವಲ್ಲ, ಅಪಪ್ರಚಾರ, ಕಾನೂನುಬದ್ಧ ಆಕ್ರಮಣಗಳು ಅಥವಾ ಕ್ರೂರ ಹಿಂಸೆಯನ್ನು ತಾಳಿಕೊಳ್ಳುತ್ತಿರುವಾಗ ನಮಗೆ ದೀನಭಾವ ಹಾಗೂ ಧೈರ್ಯಭರಿತ ನಂಬಿಕೆಯು ಆವಶ್ಯಕವಾಗಿದೆ.​—⁠1 ಪೇತ್ರ 5:⁠6.

7, 8. ನಾವು ದೀನಭಾವವನ್ನು ಬೆಳೆಸಿಕೊಳ್ಳಸಾಧ್ಯವಿರುವ ಕೆಲವು ವಿಧಗಳು ಯಾವುವು?

7 ಒಬ್ಬ ವ್ಯಕ್ತಿಯು ಹೇಗೆ ಅಹಂಕಾರವನ್ನು ಮೆಟ್ಟಿನಿಲ್ಲಸಾಧ್ಯವಿದೆ ಮತ್ತು “ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿ”ಸುವ ರೀತಿಯಲ್ಲಿ ಹೇಗೆ ನಡೆದುಕೊಳ್ಳಸಾಧ್ಯವಿದೆ? (ಫಿಲಿಪ್ಪಿ 2:3) ಅವನ ಕಡೆಗೆ ಯೆಹೋವನಿಗಿರುವ ನೋಟವೇ ಅವನಿಗೂ ಇರಬೇಕು. ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಇಟ್ಟುಕೊಳ್ಳಬೇಕಾದ ನೋಟವನ್ನು ತಿಳಿಸುತ್ತಾ ಯೇಸು ಹೇಳಿದ್ದು: “ನೀವು ನಿಮಗೆ ಅಪ್ಪಣೆಯಾಗಿರುವದನ್ನೆಲ್ಲಾ ಮಾಡಿದ ಮೇಲೆ ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ ಅನ್ನಿರಿ.” (ಲೂಕ 17:10) ಯೇಸು ಏನನ್ನು ಮಾಡಿದನೋ ಅದಕ್ಕೆ ಹೋಲಿಸುವಾಗ ನಾವೇನು ಮಾಡಸಾಧ್ಯವೊ ಅದು ಏನೂ ಅಲ್ಲ ಎಂಬುದನ್ನು ಮರೆಯದಿರಿ. ಇಷ್ಟಾದರೂ ಯೇಸು ದೀನಭಾವದವನಾಗಿದ್ದನು.

8 ಇದಲ್ಲದೆ, ನಮ್ಮ ಕುರಿತು ಯೋಗ್ಯವಾದ ನೋಟವನ್ನು ಬೆಳೆಸಿಕೊಳ್ಳಲಿಕ್ಕಾಗಿ ನಾವು ಯೆಹೋವನ ಸಹಾಯವನ್ನು ಕೇಳಿಕೊಳ್ಳಸಾಧ್ಯವಿದೆ. ಕೀರ್ತನೆಗಾರನಂತೆಯೇ ನಾವು ಸಹ ಹೀಗೆ ಪ್ರಾರ್ಥಿಸಬಲ್ಲೆವು: “ಉತ್ಕೃಷ್ಟವಾದ ಜ್ಞಾನವಿವೇಕಗಳನ್ನು ನನಗೆ ಹೇಳಿಕೊಡು; ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ.” (ಕೀರ್ತನೆ 119:66) ಆಗ ಯೆಹೋವನು ಸ್ವತಃ ನಮ್ಮ ಬಗ್ಗೆ ನಾವು ಸಮಂಜಸವಾದ ಮತ್ತು ಸಮತೂಕವಾದ ನೋಟವನ್ನು ಬೆಳೆಸಿಕೊಳ್ಳಲು ಸಹಾಯಮಾಡುವನು ಮತ್ತು ನಮ್ಮ ದೀನ ಮನೋಭಾವಕ್ಕಾಗಿ ನಮ್ಮನ್ನು ಆಶೀರ್ವದಿಸುವನು. (ಜ್ಞಾನೋಕ್ತಿ 18:12) ಯೇಸು ಹೇಳಿದ್ದು: “ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”​—⁠ಮತ್ತಾಯ 23:⁠12.

ಒಳ್ಳೇದು ಮತ್ತು ಕೆಟ್ಟದ್ದರ ಕುರಿತಾದ ಯೋಗ್ಯ ನೋಟ

9. ಒಳ್ಳೇದು ಮತ್ತು ಕೆಟ್ಟದ್ದರ ವಿಷಯದಲ್ಲಿ ಯೇಸುವಿಗೆ ಯಾವ ನೋಟವಿತ್ತು?

9 ಯೇಸು 33 ವರ್ಷಗಳ ತನಕ ಅಪರಿಪೂರ್ಣ ಜನರ ನಡುವೆ ಜೀವಿಸಿದನಾದರೂ ‘ಪಾಪ’ರಹಿತನಾಗಿಯೇ ಉಳಿದನು. (ಇಬ್ರಿಯ 4:15) ವಾಸ್ತವದಲ್ಲಿ, ಈ ಮೆಸ್ಸೀಯನ ಕುರಿತು ಪ್ರವಾದಿಸುತ್ತಾ ಕೀರ್ತನೆಗಾರನು ಹೇಳಿದ್ದು: “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ.” (ಕೀರ್ತನೆ 45:7; ಇಬ್ರಿಯ 1:9) ಈ ವಿಷಯದಲ್ಲಿಯೂ ಕ್ರೈಸ್ತರು ಯೇಸುವನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಅವರಿಗೆ ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಎಂಬುದು ಗೊತ್ತಿದೆ ಮಾತ್ರವಲ್ಲ ಅವರು ಕೆಟ್ಟದ್ದನ್ನು ದ್ವೇಷಿಸುತ್ತಾರೆ ಹಾಗೂ ಒಳ್ಳೇದನ್ನು ಪ್ರೀತಿಸುತ್ತಾರೆ. (ಆಮೋಸ 5:15) ಇದು ಹುಟ್ಟಿನಿಂದಲೇ ಬಂದಿರುವ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ಹೋರಾಡುವಂತೆ ಅವರಿಗೆ ಸಹಾಯಮಾಡುತ್ತದೆ.​—⁠ಆದಿಕಾಂಡ 8:21; ರೋಮಾಪುರ 7:21-25.

10. ನಾವು ಪಶ್ಚಾತ್ತಾಪವಿಲ್ಲದೆ “ಕೆಟ್ಟದ್ದನ್ನು” ಮಾಡುತ್ತಾ ಮುಂದುವರಿಯುವುದಾದರೆ, ಯಾವ ಮನೋಭಾವವನ್ನು ತೋರಿಸುವವರಾಗಿದ್ದೇವೆ?

10 ನಿಕೋದೇಮನೆಂಬ ಫರಿಸಾಯನಿಗೆ ಯೇಸು ಹೇಳಿದ್ದು: “ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ; ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.” (ಯೋಹಾನ 3:20, 21) ಇದನ್ನು ಪರಿಗಣಿಸಿರಿ: ‘ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥ ನಿಜವಾದ ಬೆಳಕು’ ಯೇಸು ಎಂದು ಯೋಹಾನನು ಗುರುತಿಸಿದನು. (ಯೋಹಾನ 1:​9, 10) ಆದರೆ ಒಂದುವೇಳೆ ನಾವು “ಕೆಟ್ಟದ್ದನ್ನು,” ಅಂದರೆ ತಪ್ಪಾಗಿರುವ ಮತ್ತು ದೇವರಿಗೆ ಅಸ್ವೀಕರಣೀಯವಾದ ಕೆಲಸಗಳನ್ನು ಮಾಡುತ್ತಾ ಮುಂದುವರಿಯುವಲ್ಲಿ, ನಾವು ಆ ಬೆಳಕನ್ನು ದ್ವೇಷಿಸುವವರಾಗಿದ್ದೇವೆ ಎಂದು ಯೇಸು ಹೇಳಿದನು. ಯೇಸುವನ್ನು ಮತ್ತು ಅವನ ಮಟ್ಟಗಳನ್ನು ದ್ವೇಷಿಸುವುದನ್ನು ನೀವು ಕಲ್ಪಿಸಿಕೊಳ್ಳಸಾಧ್ಯವಿದೆಯೊ? ಆದರೂ, ಜನರು ಪಶ್ಚಾತ್ತಾಪವಿಲ್ಲದೆ ಪಾಪವನ್ನು ರೂಢಿಮಾಡಿಕೊಳ್ಳುವಾಗ ಅದನ್ನೇ ಮಾಡುತ್ತಿದ್ದಾರೆ. ತಾವು ಯೇಸುವನ್ನೂ ಅವನ ಮಟ್ಟಗಳನ್ನೂ ದ್ವೇಷಿಸುತ್ತಿದ್ದೇವೆ ಎಂದು ಅವರು ನೆನಸದಿರಬಹುದು, ಆದರೆ ಯೇಸು ಮಾತ್ರ ಹಾಗೆಯೇ ಪರಿಗಣಿಸುತ್ತಾನೆ ಎಂಬುದು ಸುಸ್ಪಷ್ಟ.

ಒಳ್ಳೇದು ಮತ್ತು ಕೆಟ್ಟದ್ದರ ಕುರಿತಾದ ಯೇಸುವಿನ ನೋಟವನ್ನು ಬೆಳೆಸಿಕೊಳ್ಳುವ ವಿಧ

11. ಒಳ್ಳೇದು ಮತ್ತು ಕೆಟ್ಟದ್ದರ ಕುರಿತಾದ ಯೇಸುವಿನ ನೋಟವನ್ನು ಬೆಳೆಸಿಕೊಳ್ಳಲು ನಮಗೆ ಯಾವುದು ಅತ್ಯಾವಶ್ಯಕವಾಗಿದೆ?

11 ಯೆಹೋವನ ದೃಷ್ಟಿಯಲ್ಲಿ ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಎಂಬುದರ ಕುರಿತಾದ ಸ್ಪಷ್ಟ ತಿಳಿವಳಿಕೆ ನಮಗೆ ಬೇಕಾಗಿದೆ. ಆ ತಿಳಿವಳಿಕೆಯನ್ನು ನಾವು ದೇವರ ವಾಕ್ಯವಾಗಿರುವ ಬೈಬಲಿನ ಅಧ್ಯಯನದಿಂದ ಮಾತ್ರ ಪಡೆದುಕೊಳ್ಳುತ್ತೇವೆ. ನಾವು ಈ ರೀತಿಯ ಅಧ್ಯಯನವನ್ನು ಮಾಡುತ್ತಿರುವಾಗ, ಕೀರ್ತನೆಗಾರನಂತೆಯೇ ಪ್ರಾರ್ಥಿಸುವ ಅಗತ್ಯವಿದೆ: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು.” (ಕೀರ್ತನೆ 25:4) ಆದರೂ ಸೈತಾನನು ಮೋಸಗಾರನಾಗಿದ್ದಾನೆ ಎಂಬುದನ್ನು ನೆನಪಿನಲ್ಲಿಡಿ. (2 ಕೊರಿಂಥ 11:14) ಅವನು ಕೆಟ್ಟದ್ದನ್ನು ಮರೆಮಾಚಿ, ಎಚ್ಚರಿಕೆಯಿಂದಿರದ ಕ್ರೈಸ್ತರಿಗೆ ಅದು ಸ್ವೀಕಾರಾರ್ಹವಾಗಿ ತೋರುವಂತೆ ಮಾಡಬಲ್ಲನು. ಆದುದರಿಂದ, ನಾವು ಏನನ್ನು ಕಲಿಯುತ್ತೇವೋ ಅದರ ಕುರಿತು ಗಾಢವಾಗಿ ಧ್ಯಾನಿಸಬೇಕಾಗಿದೆ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಸಲಹೆಗೆ ನಿಕಟವಾಗಿ ಲಕ್ಷ್ಯಕೊಡಬೇಕಾಗಿದೆ. (ಮತ್ತಾಯ 24:45-47) ಅಧ್ಯಯನ, ಪ್ರಾರ್ಥನೆ ಮತ್ತು ನಾವು ಕಲಿಯುವಂಥ ವಿಷಯಗಳ ಕುರಿತಾದ ಧ್ಯಾನವು, ನಾವು ಪ್ರೌಢತೆಗೇರುವಂತೆ ಹಾಗೂ “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವ”ರ ನಡುವೆ ಇರುವಂತೆ ಸಹಾಯಮಾಡುತ್ತದೆ. (ಇಬ್ರಿಯ 5:14) ಆಗ ನಾವು ಕೆಟ್ಟದ್ದನ್ನು ದ್ವೇಷಿಸಿ ಒಳ್ಳೇದನ್ನು ಪ್ರೀತಿಸುವ ಪ್ರವೃತ್ತಿಯುಳ್ಳವರಾಗಿರುವೆವು.

12. ಅಧರ್ಮದಿಂದ ದೂರವಿರುವಂತೆ ಯಾವ ಬೈಬಲ್‌ ಸಲಹೆಯು ನಮಗೆ ಸಹಾಯಮಾಡುತ್ತದೆ?

12 ಒಂದುವೇಳೆ ನಾವು ಕೆಟ್ಟದನ್ನು ದ್ವೇಷಿಸುತ್ತೇವಾದರೆ, ಕೆಟ್ಟ ವಿಷಯಗಳಿಗಾಗಿ ಆಸೆಯು ನಮ್ಮ ಹೃದಯಗಳಲ್ಲಿ ಬೆಳೆಯುವಂತೆ ನಾವು ಬಿಡುವುದಿಲ್ಲ. ಯೇಸು ಮರಣಪಟ್ಟು ಅನೇಕ ವರ್ಷಗಳು ಕಳೆದ ಬಳಿಕ ಅಪೊಸ್ತಲ ಯೋಹಾನನು ಬರೆದುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.”​—⁠1 ಯೋಹಾನ 2:15, 16.

13, 14. (ಎ) ಕ್ರೈಸ್ತರು ಲೋಕದಲ್ಲಿರುವವುಗಳನ್ನು ಪ್ರೀತಿಸುವುದು ಅಪಾಯಕರವಾದದ್ದಾಗಿದೆ ಏಕೆ? (ಬಿ) ಲೋಕದಲ್ಲಿರುವವುಗಳಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದರಿಂದ ನಾವು ಹೇಗೆ ದೂರವಿರಸಾಧ್ಯವಿದೆ?

13 ಲೋಕದಲ್ಲಿರುವುದೆಲ್ಲವೂ ಕೆಟ್ಟದ್ದೇನಲ್ಲ ಎಂದು ಕೆಲವರು ತರ್ಕಿಸಬಹುದು. ಇದು ನಿಜವಾಗಿರಬಹುದಾದರೂ, ಈ ಲೋಕವೂ ಅದರ ಆಕರ್ಷಣೆಗಳೂ ಯೆಹೋವನ ಸೇವೆಮಾಡುವುದರಿಂದ ನಮ್ಮನ್ನು ಸುಲಭವಾಗಿಯೇ ಅಪಕರ್ಷಿಸಬಲ್ಲವು. ಅಷ್ಟುಮಾತ್ರವಲ್ಲ ಲೋಕವು ನೀಡುವಂಥ ಯಾವುದೇ ವಿಷಯವು ನಾವು ದೇವರ ಸಮೀಪಕ್ಕೆ ಬರಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿಲ್ಲ. ಆದುದರಿಂದ ನಾವು ಲೋಕದಲ್ಲಿರುವವುಗಳನ್ನು, ಕೆಟ್ಟದ್ದಾಗಿರದಂಥ ವಿಷಯಗಳನ್ನು ಸಹ ಕ್ರಮೇಣ ಪ್ರೀತಿಸಲು ಆರಂಭಿಸುವಲ್ಲಿ ನಾವು ಅಪಾಯಕರ ಮಾರ್ಗದಲ್ಲಿ ಕಾಲಿರಿಸಿದ್ದೇವೆ. (1 ತಿಮೊಥೆಯ 6:​9, 10) ಇದಲ್ಲದೆ, ಲೋಕದಲ್ಲಿರುವ ಹೆಚ್ಚಿನದ್ದು ನಿಜವಾಗಿಯೂ ಕೆಟ್ಟದ್ದಾಗಿದೆ ಮತ್ತು ಅದು ನಮ್ಮನ್ನು ಭ್ರಷ್ಟಗೊಳಿಸಸಾಧ್ಯವಿದೆ. ನಾವು ಹಿಂಸಾಚಾರ, ಪ್ರಾಪಂಚಿಕತೆ ಅಥವಾ ಲೈಂಗಿಕ ಅನೈತಿಕತೆಗೆ ಪ್ರಮುಖತೆ ನೀಡುವಂಥ ಚಲನಚಿತ್ರಗಳನ್ನು ಇಲ್ಲವೆ ಟೆಲಿವಿಷನ್‌ ಕಾರ್ಯಕ್ರಮಗಳನ್ನು ನೋಡುವುದಾದರೆ, ಈ ವಿಚಾರಗಳು ನಮಗೆ ಸ್ವೀಕಾರಾರ್ಹವಾಗಬಹುದು ಮತ್ತು ಇವು ನಮ್ಮನ್ನು ಪ್ರಲೋಭನೆಗೂ ಒಳಪಡಿಸಬಹುದು. ಯಾರ ಮುಖ್ಯ ಅಭಿರುಚಿಯು ತಮ್ಮ ಜೀವನಶೈಲಿಯನ್ನು ಉತ್ತಮಗೊಳಿಸುವುದು ಅಥವಾ ವ್ಯಾಪಾರದ ಅವಕಾಶಗಳನ್ನು ವಿಸ್ತರಿಸುವುದೇ ಆಗಿದೆಯೋ ಅಂಥ ಜನರೊಂದಿಗೆ ನಾವು ಸಹವಾಸಿಸುವಲ್ಲಿ, ಈ ವಿಷಯಗಳು ನಮಗೂ ತುಂಬ ಪ್ರಮುಖವಾದ ವಿಷಯಗಳಾಗಿ ಪರಿಣಮಿಸಸಾಧ್ಯವಿದೆ.​—⁠ಮತ್ತಾಯ 6:24; 1 ಕೊರಿಂಥ 15:⁠33.

14 ಇನ್ನೊಂದು ಕಡೆಯಲ್ಲಿ, ನಾವು ಯೆಹೋವನ ವಾಕ್ಯದಲ್ಲಿ ಆನಂದವನ್ನು ಕಂಡುಕೊಳ್ಳುವಲ್ಲಿ, “ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು” ನಮಗೆ ಅಷ್ಟೊಂದು ಆಕರ್ಷಕವಾಗಿ ತೋರದಿರುವವು. ಜೊತೆಗೆ, ದೇವರ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವಂಥ ಜನರೊಂದಿಗೆ ನಾವು ಸಹವಾಸಿಸುವಲ್ಲಿ, ನಾವೂ ಅವರಂತಾಗುತ್ತಾ ಅವರು ಏನನ್ನು ಪ್ರೀತಿಸುತ್ತಾರೋ ಅದನ್ನು ಪ್ರೀತಿಸುವೆವು ಮತ್ತು ಅವರು ಯಾವುದರಿಂದ ದೂರವಿರುತ್ತಾರೋ ಅದರಿಂದ ದೂರವಿರುವೆವು.​—⁠ಕೀರ್ತನೆ 15:4; ಜ್ಞಾನೋಕ್ತಿ 13:⁠20.

15. ನೀತಿಯನ್ನು ಪ್ರೀತಿಸಿ ಅಧರ್ಮವನ್ನು ದ್ವೇಷಿಸುವುದು ಯೇಸುವನ್ನು ಬಲಪಡಿಸಿದಂತೆಯೇ ನಮ್ಮನ್ನು ಹೇಗೆ ಬಲಪಡಿಸುವುದು?

15 ಅಧರ್ಮವನ್ನು ದ್ವೇಷಿಸಿ ನೀತಿಯನ್ನು ಪ್ರೀತಿಸುವುದು, ‘ತನ್ನ ಮುಂದೆ ಇಡಲ್ಪಟ್ಟಿದ್ದ ಸಂತೋಷದ’ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಯೇಸುವಿಗೆ ಸಹಾಯಮಾಡಿತು. (ಇಬ್ರಿಯ 12:⁠2) ನಮ್ಮ ವಿಷಯದಲ್ಲಿಯೂ ಇದು ನಿಜವಾಗಿರಸಾಧ್ಯವಿದೆ. “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ” ಎಂದು ನಮಗೆ ಗೊತ್ತಿದೆ. ಈ ಲೋಕವು ನೀಡುವಂಥ ಯಾವುದೇ ಸುಖಭೋಗವು ತಾತ್ಕಾಲಿಕವಾದದ್ದಾಗಿದೆ. ಆದರೆ “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ಯೇಸು ದೇವರ ಚಿತ್ತವನ್ನು ಮಾಡಿದ್ದರಿಂದಲೇ ಮಾನವರು ನಿತ್ಯಜೀವವನ್ನು ಪಡೆದುಕೊಳ್ಳುವ ಮಾರ್ಗವನ್ನು ತೆರೆದನು. (1 ಯೋಹಾನ 5:13) ನಾವೆಲ್ಲರೂ ಅವನನ್ನು ಅನುಕರಿಸೋಣ ಮತ್ತು ಅವನ ಸಮಗ್ರತೆಯಿಂದ ಪ್ರಯೋಜನವನ್ನು ಪಡೆದುಕೊಳ್ಳೋಣ.

ಹಿಂಸೆಯನ್ನು ಎದುರಿಸುವುದು

16. ಪರಸ್ಪರ ಪ್ರೀತಿಸುವಂತೆ ಯೇಸು ತನ್ನ ಹಿಂಬಾಲಕರನ್ನು ಏಕೆ ಉತ್ತೇಜಿಸಿದನು?

16 ತನ್ನ ಶಿಷ್ಯರು ತನ್ನನ್ನು ಅನುಕರಿಸುವ ಇನ್ನೊಂದು ಕ್ಷೇತ್ರವನ್ನು ಸೂಚಿಸುತ್ತಾ ಯೇಸು ಹೇಳಿದ್ದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ.” (ಯೋಹಾನ 15:12, 13, 17) ಕ್ರೈಸ್ತರು ತಮ್ಮ ಸಹೋದರರನ್ನು ಏಕೆ ಪ್ರೀತಿಸುತ್ತಾರೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಈ ಸಂದರ್ಭದಲ್ಲಿ, ಯೇಸುವಿನ ಮನಸ್ಸಿನಲ್ಲಿ ಮುಖ್ಯವಾಗಿ ಕ್ರೈಸ್ತರು ಲೋಕದಿಂದ ಎದುರಿಸಲಿರುವ ದ್ವೇಷದ ಕುರಿತಾದ ವಿಚಾರವು ಇತ್ತು. ಅವನಂದದ್ದು: “ಲೋಕವು ನಿಮ್ಮ ಮೇಲೆ ದ್ವೇಷಮಾಡುವದಾದರೆ ಅದು ಮೊದಲು ನನ್ನ ಮೇಲೆ ದ್ವೇಷಮಾಡಿತೆಂದು ತಿಳುಕೊಳ್ಳಿರಿ. ದಣಿಗಿಂತ ಆಳು ದೊಡ್ಡವನಲ್ಲ . . . ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು.” (ಯೋಹಾನ 15:18, 20) ಹೌದು, ಹಿಂಸೆಯನ್ನು ಅನುಭವಿಸುವ ವಿಷಯದಲ್ಲಿಯೂ ಕ್ರೈಸ್ತರು ಯೇಸುವಿನಂತೆಯೇ ಇದ್ದಾರೆ. ಈ ದ್ವೇಷವನ್ನು ಎದುರಿಸಿ ನಿಲ್ಲಲಿಕ್ಕಾಗಿ ಅವರು ಒಂದು ಬಲವಾದ, ಪ್ರೀತಿಭರಿತ ಬಂಧವನ್ನು ಬೆಳೆಸಿಕೊಳ್ಳುವ ಆವಶ್ಯಕತೆಯಿದೆ.

17. ಲೋಕವು ನಿಜ ಕ್ರೈಸ್ತರನ್ನು ಏಕೆ ದ್ವೇಷಿಸುತ್ತದೆ?

17 ಲೋಕವು ಕ್ರೈಸ್ತರನ್ನು ಏಕೆ ದ್ವೇಷಿಸುತ್ತದೆ? ಯೇಸುವಿನಂತೆ ಅವರೂ “ಲೋಕದವರಲ್ಲ” ಇಲ್ಲವೆ ಲೋಕದ ಭಾಗವಾಗಿಲ್ಲದೇ ಇರುವುದರಿಂದಲೇ. (ಯೋಹಾನ 17:​14, 16) ಅವರು ಮಿಲಿಟರಿ ಹಾಗೂ ರಾಜಕೀಯ ವಿಷಯಗಳಲ್ಲಿ ತಟಸ್ಥರಾಗಿದ್ದಾರೆ, ಮತ್ತು ಜೀವದ ಪಾವಿತ್ರ್ಯವನ್ನು ಗೌರವಿಸುವ ಮೂಲಕ ಹಾಗೂ ಅತ್ಯುಚ್ಛ ನೈತಿಕ ಮಟ್ಟಗಳಿಗನುಸಾರ ಜೀವಿಸುವ ಮೂಲಕ ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸುತ್ತಾರೆ. (ಅ. ಕೃತ್ಯಗಳು 15:28, 29; 1 ಕೊರಿಂಥ 6:9-11) ಅವರ ಪ್ರಾಥಮಿಕ ಗುರಿಗಳು ಆಧ್ಯಾತ್ಮಿಕವಾದವುಗಳಾಗಿವೆ, ಪ್ರಾಪಂಚಿಕವಲ್ಲ. ಅವರು ಲೋಕದಲ್ಲಿ ಜೀವಿಸುತ್ತಾರಾದರೂ, ಪೌಲನು ಬರೆದಂತೆ ಅವರು ‘ಅದನ್ನು ಪರಿಪೂರ್ಣವಾಗಿ ಅನುಭೋಗಿಸುವುದಿಲ್ಲ.’ (1 ಕೊರಿಂಥ 7:31) ಯೆಹೋವನ ಸಾಕ್ಷಿಗಳ ಉಚ್ಚಮಟ್ಟಗಳ ವಿಷಯದಲ್ಲಿ ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂಬುದು ನಿಜ. ಆದರೆ ಶ್ಲಾಘನೆಯನ್ನು ಅಥವಾ ಅಂಗೀಕಾರವನ್ನು ಪಡೆಯುವ ಸಲುವಾಗಿ ಯೆಹೋವನ ಸಾಕ್ಷಿಗಳು ಯಾವುದೇ ರೀತಿಯಲ್ಲಿ ರಾಜಿಮಾಡಿಕೊಳ್ಳುವುದಿಲ್ಲ. ಇದರ ಫಲಿತಾಂಶವಾಗಿ, ಲೋಕದಲ್ಲಿರುವ ಅಧಿಕಾಂಶ ಜನರು ಅವರನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಅನೇಕರು ಅವರನ್ನು ದ್ವೇಷಿಸುತ್ತಾರೆ.

18, 19. ಯೇಸುವಿನ ಮಾದರಿಯನ್ನು ಅನುಸರಿಸುತ್ತಾ ಕ್ರೈಸ್ತರು ವಿರೋಧ ಹಾಗೂ ಹಿಂಸೆಯನ್ನು ಹೇಗೆ ಎದುರಿಸುತ್ತಾರೆ?

18 ಯೇಸು ಸೆರೆಹಿಡಿಯಲ್ಪಟ್ಟು ವಧಿಸಲ್ಪಟ್ಟಾಗ ಅವನ ಅಪೊಸ್ತಲರು ಲೋಕದ ತೀವ್ರ ದ್ವೇಷವನ್ನು ಕಣ್ಣಾರೆ ಕಂಡರು, ಮತ್ತು ಆ ದ್ವೇಷವನ್ನು ಯೇಸು ಹೇಗೆ ಎದುರಿಸಿದನು ಎಂಬುದನ್ನೂ ನೋಡಿದರು. ಗೆತ್ಸೇಮನೆ ತೋಟದಲ್ಲಿ ಯೇಸುವಿನ ಧಾರ್ಮಿಕ ವಿರೋಧಿಗಳು ಅವನನ್ನು ಸೆರೆಹಿಡಿಯಲಿಕ್ಕಾಗಿ ಬಂದರು. ಪೇತ್ರನು ಒಂದು ಕತ್ತಿಯ ಸಹಾಯದಿಂದ ಯೇಸುವನ್ನು ರಕ್ಷಿಸಲು ಪ್ರಯತ್ನಿಸಿದಾಗ, ಅವನು ಪೇತ್ರನಿಗೆ ಹೇಳಿದ್ದು: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಮತ್ತಾಯ 26:52; ಲೂಕ 22:50, 51) ಆರಂಭದ ಸಮಯಗಳಲ್ಲಿ ಇಸ್ರಾಯೇಲ್ಯರು ತಮ್ಮ ಶತ್ರುಗಳ ವಿರುದ್ಧ ಕತ್ತಿಗಳಿಂದ ಕಾದಾಡಿದರು. ಈಗಲಾದರೋ ವಿಷಯಗಳು ಭಿನ್ನವಾಗಿದ್ದವು. ದೇವರ ರಾಜ್ಯವು ಈ ‘ಲೋಕದ್ದಾಗಿರಲಿಲ್ಲ’ ಮತ್ತು ಸಂರಕ್ಷಿಸಲಿಕ್ಕಾಗಿ ಇದಕ್ಕೆ ಯಾವುದೇ ರಾಷ್ಟ್ರೀಯ ಗಡಿರೇಖೆಗಳಿರಲಿಲ್ಲ. (ಯೋಹಾನ 18:36) ಅತಿ ಬೇಗನೆ ಪೇತ್ರನು ಒಂದು ಆಧ್ಯಾತ್ಮಿಕ ರಾಷ್ಟ್ರದ ಭಾಗವಾಗಿ ಪರಿಣಮಿಸಲಿದ್ದನು; ಇದರ ಸದಸ್ಯರು ಸ್ವರ್ಗದಲ್ಲಿ ತಮ್ಮ ಪೌರತ್ವವನ್ನು ಪಡೆದುಕೊಳ್ಳಲಿದ್ದರು. (ಗಲಾತ್ಯ 6:16; ಫಿಲಿಪ್ಪಿ 3:20, 21) ಹೀಗಿರುವುದರಿಂದ, ಅಂದಿನಿಂದ ಯೇಸುವಿನಂತೆಯೇ ಅವನ ಹಿಂಬಾಲಕರು ಸಹ ನಿರ್ಭಯವಾಗಿ ಆದರೆ ಸಮಾಧಾನಚಿತ್ತದಿಂದ ದ್ವೇಷ ಮತ್ತು ಹಿಂಸೆಯನ್ನು ಎದುರಿಸಲಿದ್ದರು. ಇದರ ಫಲಿತಾಂಶಗಳನ್ನು ಅವರು ದೃಢವಿಶ್ವಾಸದಿಂದ ಯೆಹೋವನ ಹಸ್ತಗಳಲ್ಲಿ ಬಿಡಲಿದ್ದರು ಮತ್ತು ತಾಳಿಕೊಳ್ಳಲಿಕ್ಕಾಗಿರುವ ಬಲಕ್ಕಾಗಿ ಆತನ ಮೇಲೆ ಹೊಂದಿಕೊಳ್ಳಲಿದ್ದರು.​—⁠ಲೂಕ 22:⁠42.

19 ವರ್ಷಗಳಾನಂತರ ಪೇತ್ರನು ಬರೆದುದು: “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. . . . ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.” (1 ಪೇತ್ರ 2:21-23) ಯೇಸು ಎಚ್ಚರಿಕೆ ನೀಡಿದಂತೆಯೇ, ಕ್ರೈಸ್ತರು ಅನೇಕ ವರ್ಷಗಳಿಂದ ಕಠೋರ ಹಿಂಸೆಯನ್ನು ಅನುಭವಿಸಿದ್ದಾರೆ. ಪ್ರಥಮ ಶತಮಾನದಲ್ಲಿ ಮತ್ತು ನಮ್ಮ ಕಾಲದಲ್ಲಿಯೂ ಕ್ರೈಸ್ತರು ಯೇಸುವಿನ ಮಾದರಿಯನ್ನು ಅನುಸರಿಸಿದ್ದಾರೆ ಮತ್ತು ತಾವು ಶಾಂತಿಭರಿತ ಸಮಗ್ರತೆ ಪಾಲಕರಾಗಿದ್ದೇವೆ ಎಂಬುದನ್ನು ರುಜುಪಡಿಸುವ ಮೂಲಕ ನಂಬಿಗಸ್ತ ತಾಳ್ಮೆಯ ಅದ್ಭುತಕರವಾದ ದಾಖಲೆಯನ್ನೇ ಸ್ಥಾಪಿಸಿದ್ದಾರೆ. (ಪ್ರಕಟನೆ 2:​9, 10) ಇಂಥ ಪರಿಸ್ಥಿತಿಗಳು ಎದುರಾಗುವಾಗ, ವ್ಯಕ್ತಿಗತವಾಗಿ ನಾವೆಲ್ಲರೂ ಶಾಂತಿಭರಿತ ಸಮಗ್ರತೆ ಪಾಲಕರಾಗಿರೋಣ.​—⁠2 ತಿಮೊಥೆಯ 3:12.

“ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ”

20-22. ಯಾವ ವಿಧದಲ್ಲಿ ಕ್ರೈಸ್ತರು “ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿ”ಕೊಳ್ಳುತ್ತಾರೆ?

20 ಪೌಲನು ರೋಮ್‌ನಲ್ಲಿದ್ದ ಸಭೆಗೆ ಬರೆದುದು: “ದೇಹದ ಆಶೆಗಳನ್ನು ಪೂರೈಸುವದಕ್ಕಾಗಿ ಚಿಂತಿಸದೆ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.” (ರೋಮಾಪುರ 13:14) ಕ್ರೈಸ್ತರು ಒಂದು ವಸ್ತ್ರವೋ ಎಂಬಂತೆ ಯೇಸುವನ್ನು ಧರಿಸಿಕೊಳ್ಳುತ್ತಾರೆ. ಅವರು ಅಪರಿಪೂರ್ಣರಾಗಿದ್ದರೂ ಎಷ್ಟರ ಮಟ್ಟಿಗೆ ಅವನ ಗುಣಗಳನ್ನೂ ಕ್ರಿಯೆಗಳನ್ನೂ ಅನುಕರಿಸಲು ಪ್ರಯತ್ನಿಸುತ್ತಾರೆಂದರೆ, ತಮ್ಮ ಗುರುವಾದ ಯೇಸುವಿನ ಪ್ರತಿಬಿಂಬವಾಗುತ್ತಾರೆ.​—⁠1 ಥೆಸಲೊನೀಕ 1:⁠6.

21 ಯೇಸುವಿನ ಜೀವನದ ಕುರಿತು ಚಿರಪರಿಚಿತರಾಗಿ, ಅವನು ಹೇಗೆ ಜೀವಿಸಿದನೋ ಅದೇ ರೀತಿಯಲ್ಲಿ ನಾವು ಜೀವಿಸಲು ಹೆಣಗಾಡುವುದಾದರೆ, ನಾವು ಯಶಸ್ವಿಕರವಾದ ರೀತಿಯಲ್ಲಿ “ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿ”ಕೊಳ್ಳಸಾಧ್ಯವಿದೆ. ಅವನ ದೀನಭಾವವನ್ನು, ಅವನ ನೀತಿಗಾಗಿರುವ ಪ್ರೀತಿಯನ್ನು, ಅಧರ್ಮದ ಕಡೆಗಿನ ಅವನ ದ್ವೇಷವನ್ನು, ತನ್ನ ಸಹೋದರರಿಗಾಗಿದ್ದ ಅವನ ಪ್ರೀತಿಯನ್ನು, ಅವನು ಲೋಕದ ಭಾಗವಾಗಿಲ್ಲದೆ ಇದ್ದ ರೀತಿಯನ್ನು ಮತ್ತು ಅವನು ತಾಳ್ಮೆಯಿಂದ ಕಷ್ಟಾನುಭವವನ್ನು ತಾಳಿಕೊಂಡ ವಿಧವನ್ನು ನಾವು ಅನುಕರಿಸುತ್ತೇವೆ. ನಾವು ‘ದೇಹದ ಆಶೆಗಳನ್ನು ಪೂರೈಸಲಿಕ್ಕಾಗಿ ಚಿಂತಿಸುವುದಿಲ್ಲ’ ಅಂದರೆ ಐಹಿಕ ಗುರಿಗಳನ್ನು ಸಾಧಿಸುವುದು ಅಥವಾ ಶಾರೀರಿಕ ಬಯಕೆಗಳನ್ನು ತಣಿಸುವುದನ್ನೇ ನಮ್ಮ ಜೀವನದ ಮುಖ್ಯ ಉದ್ದೇಶವನ್ನಾಗಿ ಮಾಡಿಕೊಳ್ಳುವುದಿಲ್ಲ. ಅದಕ್ಕೆ ಬದಲಾಗಿ, ಒಂದು ನಿರ್ಣಯವನ್ನು ಮಾಡುವಾಗ ಅಥವಾ ಒಂದು ಸಮಸ್ಯೆಯನ್ನು ನಿರ್ವಹಿಸುವಾಗ ಹೀಗೆ ಕೇಳಿಕೊಳ್ಳುತ್ತೇವೆ: ‘ಈ ಸನ್ನಿವೇಶದಲ್ಲಿ ಯೇಸು ಏನು ಮಾಡುತ್ತಿದ್ದನು? ನಾನು ಏನು ಮಾಡುವಂತೆ ಅವನು ಬಯಸುತ್ತಾನೆ?’

22 ಅಂತಿಮವಾಗಿ, “ಸುವಾರ್ತೆಯನ್ನು ಸಾರಿಹೇಳು”ವುದರಲ್ಲಿ ನಮ್ಮನ್ನು ಕಾರ್ಯಮಗ್ನರಾಗಿ ಇರಿಸಿಕೊಳ್ಳುವ ಮೂಲಕ ನಾವು ಯೇಸುವನ್ನು ಅನುಕರಿಸುತ್ತೇವೆ. (ಮತ್ತಾಯ 4:23; 1 ಕೊರಿಂಥ 15:58) ಈ ವಿಧದಲ್ಲಿಯೂ ಕ್ರೈಸ್ತರು ಯೇಸುವಿಟ್ಟ ಮಾದರಿಯನ್ನು ಹಿಂಬಾಲಿಸುತ್ತಾರೆ, ಮತ್ತು ಅವರಿದನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಮುಂದಿನ ಲೇಖನವು ಚರ್ಚಿಸುವುದು.

ವಿವರಿಸಬಲ್ಲಿರೋ?

• ಒಬ್ಬ ಕ್ರೈಸ್ತನು ದೀನಭಾವದವನಾಗಿರುವುದು ಏಕೆ ಅತ್ಯಾವಶ್ಯಕವಾದದ್ದಾಗಿದೆ?

• ಒಳ್ಳೇದು ಮತ್ತು ಕೆಟ್ಟದ್ದರ ವಿಷಯದಲ್ಲಿ ನಾವು ಹೇಗೆ ಒಂದು ಯೋಗ್ಯ ನೋಟವನ್ನು ಬೆಳೆಸಿಕೊಳ್ಳಸಾಧ್ಯವಿದೆ?

• ವಿರೋಧ ಮತ್ತು ಹಿಂಸೆಯನ್ನು ಎದುರಿಸುವುದರಲ್ಲಿ ಕ್ರೈಸ್ತರು ಹೇಗೆ ಯೇಸುವನ್ನು ಅನುಕರಿಸುತ್ತಾರೆ?

• ಯಾವ ವಿಧದಲ್ಲಿ ಕ್ರೈಸ್ತರು “ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿ”ಕೊಳ್ಳುತ್ತಾರೆ?

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚಿತ್ರ]

ಯೇಸು ದೀನಭಾವದ ವಿಷಯದಲ್ಲಿ ಪರಿಪೂರ್ಣ ಮಾದರಿಯನ್ನಿಟ್ಟನು

[ಪುಟ 8ರಲ್ಲಿರುವ ಚಿತ್ರ]

ಸಾರುವಿಕೆಯನ್ನೂ ಸೇರಿಸಿ ಕ್ರೈಸ್ತ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ದೀನಭಾವವು ಅಗತ್ಯವಾಗಿದೆ

[ಪುಟ 9ರಲ್ಲಿರುವ ಚಿತ್ರ]

ಅಯೋಗ್ಯವಾದ ಮನೋರಂಜನೆಯು ಕ್ರೈಸ್ತರಿಗೆ ಸ್ವೀಕಾರಾರ್ಹವಾಗಿ ತೋರುವಂತೆ ಸೈತಾನನು ಮಾಡಬಲ್ಲನು

[ಪುಟ 10ರಲ್ಲಿರುವ ಚಿತ್ರ]

ನಮ್ಮ ಸಹೋದರರ ಪ್ರೀತಿಯು ವಿರೋಧದ ಎದುರಿನಲ್ಲಿ ನಮ್ಮನ್ನು ಬಲಪಡಿಸುವುದು