ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಅಪೊಸ್ತಲರ ಕೃತ್ಯಗಳು 7:59, 60ರಲ್ಲಿ ಸ್ತೆಫನನು ಮಾಡಿರುವ ಉದ್ಗಾರವು ಪ್ರಾರ್ಥನೆಗಳು ಯೇಸುವಿಗೆ ನಿರ್ದೇಶಿಸಲ್ಪಡಬೇಕು ಎಂಬುದನ್ನು ಸೂಚಿಸುತ್ತದೋ?
ಅಪೊಸ್ತಲರ ಕೃತ್ಯಗಳು 7:59, 60 ಹೇಳುವುದು: “ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು ಕರ್ತನ ಹೆಸರನ್ನು ಹೇಳಿ—ಯೇಸುಸ್ವಾಮಿಯೇ, ನನ್ನಾತ್ಮವನ್ನು ಸೇರಿಸಿಕೋ ಎಂದು ಪ್ರಾರ್ಥಿಸಿ”ದನು. ಈ ಮಾತುಗಳು ಕೆಲವರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಎಬ್ಬಿಸಿವೆ; ಏಕೆಂದರೆ ‘ಪ್ರಾರ್ಥನೆಯನ್ನು ಕೇಳುವವನು’ ಎಂದು ಬೈಬಲ್ ಯೆಹೋವನನ್ನು ಕರೆಯುತ್ತದೆ. (ಕೀರ್ತನೆ 65:2) ಸ್ತೆಫನನು ನಿಜಕ್ಕೂ ಯೇಸುವಿಗೆ ಪ್ರಾರ್ಥಿಸಿದನೋ? ಹಾಗಿರುವುದಾದರೆ ಯೇಸು ಯೆಹೋವನಿಗೆ ಸಮಾನನಾಗಿದ್ದಾನೆ ಎಂಬುದನ್ನು ಇದು ಸೂಚಿಸುತ್ತದೋ?
ಸ್ತೆಫನನು “ದೇವರ ಹೆಸರನ್ನು ಹೇಳಿ” ಎಂದು ಕಿಂಗ್ ಜೇಮ್ಸ್ ವರ್ಷನ್ ಹೇಳುತ್ತದೆ. ಆದುದರಿಂದ, ಅನೇಕರು ಬೈಬಲ್ ವಿಮರ್ಶಕನಾದ ಮ್ಯಾಥ್ಯು ಹೆನ್ರಿ ತಲಪಿದ ಅದೇ ತೀರ್ಮಾನಕ್ಕೆ ತಲಪುವುದೇಕೆಂಬುದು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದೆ; ಅವನು ಹೇಳಿದ್ದು: “ಸ್ತೆಫನನು ಇಲ್ಲಿ ಯೇಸುವಿಗೆ ಪ್ರಾರ್ಥಿಸುತ್ತಿದ್ದಾನೆ, ಮತ್ತು ನಾವು ಸಹ ಹಾಗೆಯೇ ಮಾಡಬೇಕು.” ಆದರೆ, ಈ ದೃಷ್ಟಿಕೋನ ಲೋಪವುಳ್ಳದ್ದಾಗಿದೆ. ಏಕೆ?
ಹೊಸ ಒಡಂಬಡಿಕೆಯ ಕುರಿತ ಬಾರ್ನ್ಸ್ರವರ ಟಿಪ್ಪಣಿಗಳು (ಇಂಗ್ಲಿಷ್) ಎಂಬ ಪುಸ್ತಕವು ಪ್ರಾಮಾಣಿಕವಾಗಿ ಹೀಗೆ ಒಪ್ಪಿಕೊಳ್ಳುತ್ತದೆ: “ದೇವರು ಎಂಬ ಪದವು ಮೂಲಪ್ರತಿಯಲ್ಲಿಲ್ಲ, ಆದುದರಿಂದ ಅದು ಭಾಷಾಂತರದಲ್ಲಿಯೂ ಇರಬಾರದಿತ್ತು. ಪ್ರಾಚೀನ [ಹಸ್ತಪ್ರತಿಗಳು] ಅಥವಾ ತರ್ಜುಮೆಗಳಲ್ಲಿ ಒಂದರಲ್ಲಿಯೂ ಅದು ಕಂಡುಬರುವುದಿಲ್ಲ.” ಆ ವಚನದಲ್ಲಿ “ದೇವರು” ಎಂಬ ಪದವು ಸೇರಿಸಲ್ಪಟ್ಟದ್ದು ಹೇಗೆ? ವಿದ್ವಾಂಸರಾದ ಆ್ಯಬೀಅಲ್ ಅಬಟ್ ಲಿವರ್ಮೊರ್ ಇದನ್ನು “ಭಾಷಾಂತರಕಾರರ ಪಂಥಾಭಿಮಾನಗಳ ಒಂದು ದೃಷ್ಟಾಂತ” ಎಂದು ಕರೆಯುತ್ತಾರೆ. ಆದುದರಿಂದ, ಹೆಚ್ಚಿನ ಆಧುನಿಕ ಭಾಷಾಂತರಗಳು ದೇವರಿಗೆ ಸೂಚಿಸಲಾಗಿರುವ ಈ ಸುಳ್ಳಾದ ಉಲ್ಲೇಖವನ್ನು ತೆಗೆದುಹಾಕುತ್ತವೆ.
ಹಾಗಿದ್ದರೂ, ಅನೇಕ ತರ್ಜುಮೆಗಳು ಸ್ತೆಫನನು ಯೇಸುವಿಗೆ ‘ಪ್ರಾರ್ಥಿಸಿದನು’ ಎಂದು ಹೇಳುತ್ತವೆ. ಮತ್ತು “ಮೊರೆಯಿಟ್ಟನು” ಎಂಬ ಪದಕ್ಕೆ “ಬಿನ್ನಹ; ಪ್ರಾರ್ಥನೆ” ಎಂಬ ಅರ್ಥವೂ ಇರಬಲ್ಲದು ಎಂದು ನೂತನ ಲೋಕ ಭಾಷಾಂತರ (ಇಂಗ್ಲಿಷ್)ದಲ್ಲಿ ಕೊಡಲ್ಪಟ್ಟಿರುವ ಪಾದಟಿಪ್ಪಣಿಯು ತೋರಿಸುತ್ತದೆ. ಇದು ಯೇಸುವು ಸರ್ವಶಕ್ತ ದೇವರಾಗಿದ್ದಾನೆ ಎಂದು ಸೂಚಿಸುವುದಿಲ್ಲವೋ? ಇಲ್ಲ. ಈ ಸನ್ನಿವೇಶದಲ್ಲಿ, ಮೂಲ ಗ್ರೀಕ್ ಪದವಾದ ಎಪಿಕಾಲೀಯೊ “ಕೇಳಿಕೊಳ್ಳು, ಬಿನ್ನೈಸು; . . . ಒಬ್ಬ ಅಧಿಕಾರಿಗೆ ಮನವಿ ಮಾಡು” ಎಂಬರ್ಥಗಳನ್ನು ಕೊಡುತ್ತದೆ ಎಂದು ಹಳೇ ಮತ್ತು ಹೊಸ ಒಡಂಬಡಿಕೆಗಳ ವೈನ್ರವರ ವಿವರಣಾತ್ಮಕ ಶಬ್ದಕೋಶ (ಇಂಗ್ಲಿಷ್)ವು ವಿವರಿಸುತ್ತದೆ. ಪೌಲನು, “ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ” ಎಂದು ಹೇಳಿದಾಗ ಇದೇ ಪದವನ್ನು ಉಪಯೋಗಿಸಿದನು. (ಅ. ಕೃತ್ಯಗಳು 25:11) ಆದುದರಿಂದ, ದ ನ್ಯೂ ಇಂಗ್ಲಿಷ್ ಬೈಬಲ್ ಸ್ತೆಫನನು ಯೇಸುವಿಗೆ “ಕೂಗಿಕೊಂಡನು” ಎಂದು ಸೂಕ್ತವಾಗಿಯೇ ತರ್ಜುಮೆಮಾಡುತ್ತದೆ.
ಇಂತಹ ಮನವಿಯನ್ನು ಮಾಡುವಂತೆ ಸ್ತೆಫನನನ್ನು ಪ್ರೇರಿಸಿದ್ದು ಯಾವುದು? ಅಪೊಸ್ತಲರ ಕೃತ್ಯಗಳು 7:55, 56ಕ್ಕನುಸಾರ ಸ್ತೆಫನನು “ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ” ಕಂಡನು ಎಂದು ಹೇಳುತ್ತದೆ. ಸಾಮಾನ್ಯವಾಗಿ, ಸ್ತೆಫನನು ತನ್ನ ಬೇಡಿಕೆಗಳನ್ನು ಯೆಹೋವನಿಗೆ ಯೇಸುವಿನ ನಾಮದಲ್ಲಿ ಅರ್ಪಿಸಿರಬಹುದು. ಆದರೆ ದರ್ಶನದಲ್ಲಿ ಪುನರುತ್ಥಿತ ಯೇಸುವನ್ನು ನೋಡಿದಾಗ, ತಾನು ನೇರವಾಗಿ ಯೇಸುವಿಗೆ ಮೊರೆಯಿಡಬಹುದು ಎಂದು ಸ್ತೆಫನನಿಗೆ ಅನಿಸಿದ್ದಿರಬಹುದು, ಮತ್ತು ಈ ಕಾರಣದಿಂದ ಅವನು, “ಯೇಸುಸ್ವಾಮಿಯೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಹೇಳಿದನು. ಮೃತರನ್ನು ಉಜ್ಜೀವಿಸುವ ಅಧಿಕಾರವು ಯೇಸುವಿಗೆ ಕೊಡಲ್ಪಟ್ಟಿದೆ ಎಂಬುದು ಸ್ತೆಫನನಿಗೆ ತಿಳಿದಿತ್ತು. (ಯೋಹಾನ 5:27-29) ಆದುದರಿಂದ, ಪರಲೋಕದಲ್ಲಿ ಅಮರ ಜೀವನಕ್ಕಾಗಿ ಯೇಸು ತನ್ನನ್ನು ಉಜ್ಜೀವಿಸುವ ದಿನದ ವರೆಗೆ ತನ್ನ ಆತ್ಮವನ್ನು, ಅಥವಾ ಜೀವಶಕ್ತಿಯನ್ನು ಸಂರಕ್ಷಿಸಬೇಕೆಂದು ಅವನಲ್ಲಿ ಕೇಳಿಕೊಂಡನು.
ಸ್ತೆಫನನ ಸಂಕ್ಷಿಪ್ತ ಅಭಿವ್ಯಕ್ತಿಯು ಯೇಸುವಿಗೆ ಪ್ರಾರ್ಥಿಸಬೇಕೆಂಬ ನಿದರ್ಶನವನ್ನು ಸ್ಥಾಪಿಸುತ್ತದೋ? ಖಂಡಿತವಾಗಿಯೂ ಇಲ್ಲ. ಒಂದು ವಿಷಯವೇನೆಂದರೆ, ಸ್ತೆಫನನು ಯೇಸುವು ಯೆಹೋವನಿಂದ ಪ್ರತ್ಯೇಕನಾಗಿದ್ದಾನೆಂದು ಸ್ಪಷ್ಟವಾಗಿ ತೋರಿಸಿದನು; ಏಕೆಂದರೆ ಯೇಸು ‘ದೇವರ ಬಲಗಡೆಯಲ್ಲಿ ನಿಂತಿರುವುದನ್ನು’ ಅವನು ಕಂಡನು ಎಂದು ವೃತ್ತಾಂತವು ಹೇಳುತ್ತದೆ. ಅಲ್ಲದೆ, ಇಂತಹ ಉಲ್ಲೇಖಗಳು ತೀರ ವಿರಳವಾಗಿದ್ದವು. ಹೀಗೆ ಯೇಸುವನ್ನು ನೇರವಾಗಿ ಉದ್ದೇಶಿಸಿ ಮಾಡಲ್ಪಟ್ಟಿರುವ ಅಭಿವ್ಯಕ್ತಿಯು ಕೇವಲ ಮತ್ತೊಂದು ಬಾರಿ ಮಾತ್ರ ಉಪಯೋಗಿಸಲ್ಪಟ್ಟಿದೆ. ಅಪೊಸ್ತಲ ಯೋಹಾನನು ಯೇಸುವನ್ನು ದರ್ಶನದಲ್ಲಿ ಕಂಡಾಗ ತದ್ರೀತಿಯಲ್ಲಿ ಅವನನ್ನು ನೇರವಾಗಿ ಉದ್ದೇಶಿಸಿ ಮಾತಾಡಿದನು.—ಪ್ರಕಟನೆ 22:16, 20.
ಇಂದು ಕ್ರೈಸ್ತರು ಯೋಗ್ಯವಾಗಿಯೇ ತಮ್ಮೆಲ್ಲಾ ಪ್ರಾರ್ಥನೆಗಳನ್ನು ಯೆಹೋವ ದೇವರಿಗೆ ನಿರ್ದೇಶಿಸುವುದಾದರೂ, ಯೇಸುವೇ “ಪುನರುತ್ಥಾನವೂ ಜೀವವೂ” ಆಗಿದ್ದಾನೆ ಎಂಬ ವಿಷಯದಲ್ಲಿ ಅವರಿಗೆ ಅಚಲವಾದ ನಂಬಿಕೆಯಿದೆ. (ಯೋಹಾನ 11:25) ಸ್ತೆಫನನ ವಿಷಯದಲ್ಲಿ ಸತ್ಯವಾಗಿದ್ದಂತೆ, ಯೇಸುವಿಗೆ ತನ್ನ ಹಿಂಬಾಲಕರನ್ನು ಮೃತಸ್ಥಿತಿಯಿಂದ ಎಬ್ಬಿಸುವ ಶಕ್ತಿಯಿದೆ ಎಂಬ ವಿಷಯದಲ್ಲಿನ ನಂಬಿಕೆಯು ಪರೀಕ್ಷೆಗಳ ಸಮಯದಲ್ಲಿ ನಮ್ಮನ್ನು ಬೆಂಬಲಿಸಿ ಪೋಷಿಸಬಲ್ಲದು.