“ಒಬ್ಬರಿಗೊಬ್ಬರು ಅತಿಥಿ ಸತ್ಕಾರಮಾಡಿರಿ”
“ಒಬ್ಬರಿಗೊಬ್ಬರು ಅತಿಥಿ ಸತ್ಕಾರಮಾಡಿರಿ”
ಪ್ರಥಮ ಶತಮಾನದಲ್ಲಿ ಒಬ್ಬ ಕ್ರೈಸ್ತಳಾಗಿದ್ದ ಫೊಯಿಬೆಗೆ ಒಂದು ಸಮಸ್ಯೆಯಿತ್ತು. ಅವಳು ಗ್ರೀಸ್‌ನ ಕೆಂಕ್ರೆಯಿಂದ ರೋಮ್‌ಗೆ ಪ್ರಯಾಣಿಸುತ್ತಿದ್ದಳು, ಆದರೆ ಆ ನಗರದಲ್ಲಿದ್ದ ಜೊತೆ ವಿಶ್ವಾಸಿಗಳಲ್ಲಿ ಯಾರ ಪರಿಚಯವೂ ಅವಳಿಗೆ ಇರಲಿಲ್ಲ. (ರೋಮಾಪುರ 16:1, 2) ಬೈಬಲ್ ಭಾಷಾಂತರಕಾರರಾದ ಎಡ್ಗರ್ ಗುಡ್‌ಸ್ಪೀಡರು ಹೇಳುವುದು: “[ಆ ದಿನಗಳ] ರೋಮನ್ ಜಗತ್ತು ತುಂಬ ಕೆಟ್ಟದಾಗಿತ್ತು ಮತ್ತು ಪಾಶವೀಯವಾಗಿತ್ತು, ಮತ್ತು ಪ್ರವಾಸಿ ತಂಗುದಾಣಗಳು ಒಬ್ಬ ಸಭ್ಯ ಸ್ತ್ರೀಗೆ ಯೋಗ್ಯವಾದ ಸ್ಥಳಗಳಾಗಿರಲಿಲ್ಲ.” ಹೀಗಿರುವಾಗ, ಫೊಯಿಬೆಯು ಎಲ್ಲಿ ತಂಗಲಿದ್ದಳು?
ಬೈಬಲ್ ಸಮಯಗಳಲ್ಲಿ ಜನರು ವ್ಯಾಪಕವಾಗಿ ಪ್ರಯಾಣಿಸುತ್ತಿದ್ದರು. ಯೂದಾಯ ಮತ್ತು ಗಲಿಲಾಯದಾದ್ಯಂತ ಸುವಾರ್ತೆಯನ್ನು ಸಾರಲಿಕ್ಕಾಗಿ ಯೇಸು ಕ್ರಿಸ್ತನೂ ಅವನ ಶಿಷ್ಯರೂ ತುಂಬ ಪ್ರಯಾಣಿಸಿದರು. ತದನಂತರ ಪೌಲನಂಥ ಕ್ರೈಸ್ತ ಮಿಷನೆರಿಗಳು, ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ರೋಮ್ ನಗರವನ್ನೂ ಸೇರಿಸಿ ಮೆಡಿಟರೇನಿಯನ್ ಸಮುದ್ರದ ಸುತ್ತಲಿನ ಬೇರೆ ಬೇರೆ ಕ್ಷೇತ್ರಗಳಿಗೆ ಸುವಾರ್ತೆಯ ಸಂದೇಶವನ್ನು ಕೊಂಡೊಯ್ಯುತ್ತಿದ್ದರು. ಹೀಗೆ ಪ್ರಥಮ ಶತಮಾನದ ಕ್ರೈಸ್ತರು ಯೆಹೂದಿ ಕ್ಷೇತ್ರದ ಒಳಗೆ ಅಥವಾ ಹೊರಗೆ ಪ್ರಯಾಣಿಸುತ್ತಿದ್ದಾಗ, ಅವರು ಎಲ್ಲಿ ಉಳಿದುಕೊಳ್ಳುತ್ತಿದ್ದರು? ವಸತಿ ಸೌಕರ್ಯಗಳನ್ನು ಕಂಡುಕೊಳ್ಳುವುದರಲ್ಲಿ ಅವರು ಯಾವೆಲ್ಲಾ ಕಷ್ಟಗಳನ್ನು ಎದುರಿಸಿದರು? ಅತಿಥಿಸತ್ಕಾರ ಮಾಡುವ ವಿಷಯದಲ್ಲಿ ನಾವು ಅವರಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ?
“ನಾನು ಈಹೊತ್ತು ನಿನ್ನ ಮನೆಯಲ್ಲಿ ಇಳುಕೊಳ್ಳಬೇಕು”
ಅತಿಥಿಸತ್ಕಾರವನ್ನು, “ಅತಿಥಿಗಳನ್ನು ಉದಾರಭಾವದಿಂದ ಹಾಗೂ ಹೃತ್ಪೂರ್ವಕವಾಗಿ ಸ್ವಾಗತಿಸುವುದು” ಎಂದು ಅರ್ಥನಿರೂಪಿಸಲಾಗುತ್ತದೆ ಮತ್ತು ಬಹಳ ಹಿಂದಿನಿಂದಲೂ ಇದು ಯೆಹೋವನ ಸತ್ಯಾರಾಧಕರ ವೈಶಿಷ್ಟ್ಯವಾಗಿದೆ. ಉದಾಹರಣೆಗೆ, ಅಬ್ರಹಾಮ, ಲೋಟ ಮತ್ತು ರೆಬೆಕ್ಕ ಅತಿಥಿಸತ್ಕಾರವನ್ನು ತೋರಿಸಿದರು. (ಆದಿಕಾಂಡ 18:1-8; 19:1-3; 24:17-20) ಪೂರ್ವಜನಾದ ಯೋಬನು ಅಪರಿಚಿತರ ಕಡೆಗಿನ ತನ್ನ ಮನೋಭಾವದ ಕುರಿತು ಹೇಳಿದ್ದು: “ಪರಸ್ಥಳದವನು ಬೈಲಿನಲ್ಲಿ ಇಳಿದು ಕೊಳ್ಳಲಿಲ್ಲವಲ್ಲಾ, ದಾರಿಗೆ ನನ್ನ ಮನೇಬಾಗಲುಗಳನ್ನು ತೆರೆದಿದ್ದೆನಷ್ಟೆ.”—ಯೋಬ 31:32.
ಪ್ರವಾಸಿಗಳು ತಮ್ಮ ಜೊತೆ ಇಸ್ರಾಯೇಲ್ಯರಿಂದ ಅತಿಥಿಸತ್ಕಾರವನ್ನು ಪಡೆಯಬೇಕಾದರೆ, ಪಟ್ಟಣದ ಸಾರ್ವಜನಿಕ ಚೌಕದಲ್ಲಿ ಕುಳಿತುಕೊಂಡು ಒಂದು ಆಮಂತ್ರಣಕ್ಕಾಗಿ ಕಾಯುವುದಷ್ಟೇ ಸಾಕಾಗಿರುತ್ತಿತ್ತು. (ನ್ಯಾಯಸ್ಥಾಪಕರು 19:15-21) ಆತಿಥ್ಯ ನೀಡುವವರು ಸಾಮಾನ್ಯವಾಗಿ ತಮ್ಮ ಅತಿಥಿಗಳ ಪಾದಗಳನ್ನು ತೊಳೆಯುತ್ತಿದ್ದರು ಮತ್ತು ಸಂದರ್ಶಕರಿಗೆ ಅನ್ನಪಾನೀಯಗಳನ್ನು ನೀಡುತ್ತಿದ್ದರು ಹಾಗೂ ಅವರ ಪ್ರಾಣಿಗಳಿಗೆ ಮೇವನ್ನು ಸಹ ಒದಗಿಸುತ್ತಿದ್ದರು. (ಆದಿಕಾಂಡ 18:4, 5; 19:2; 24:32, 33) ತಮಗೆ ಯಾರು ಆತಿಥ್ಯ ನೀಡುತ್ತಾರೋ ಅವರಿಗೆ ಹೊರೆಯಾಗಿರಲು ಬಯಸದಿರುವಂಥ ಪ್ರವಾಸಿಗಳು, ತಮಗೋಸ್ಕರ ರೊಟ್ಟಿ ಮತ್ತು ದ್ರಾಕ್ಷಾರಸವನ್ನೂ ತಮ್ಮ ಕತ್ತೆಗಳಿಗೋಸ್ಕರ ಹುಲ್ಲು ಹಾಗೂ ಮೇವನ್ನೂ ಕೊಂಡೊಯ್ಯುತ್ತಿದ್ದರು. ರಾತ್ರಿ ತಂಗಲಿಕ್ಕೋಸ್ಕರ ಕೇವಲ ಅವರಿಗೆ ವಸತಿಯ ಅಗತ್ಯವಿರುತ್ತಿತ್ತು.
ಯೇಸುವಿನ ಸಾರುವ ಪ್ರಯಾಣಗಳ ಸಮಯದಲ್ಲಿ ಅವನು ಎಲ್ಲಿ ವಸತಿ ಸೌಕರ್ಯವನ್ನು ಕಂಡುಕೊಳ್ಳುತ್ತಿದ್ದನು ಎಂಬುದನ್ನು ಬೈಬಲ್ ಅಪರೂಪವಾಗಿ ತಿಳಿಸುತ್ತದಾದರೂ, ಅವನು ಮತ್ತು ಅವನ ಶಿಷ್ಯರು ಎಲ್ಲಿಯಾದರೊಂದು ಕಡೆ ಮಲಗಬೇಕಾಗಿತ್ತು. (ಲೂಕ 9:58) ಯೆರಿಕೋವನ್ನು ಸಂದರ್ಶಿಸುತ್ತಿರುವಾಗ ಯೇಸು ಜಕ್ಕಾಯನಿಗೆ “ನಾನು ಈ ಹೊತ್ತು ನಿನ್ನ ಮನೆಯಲ್ಲಿ ಇಳುಕೊಳ್ಳಬೇಕು” ಎಂದು ಹೇಳಿದನು. ಜಕ್ಕಾಯನು ತನ್ನ ಅತಿಥಿಯನ್ನು “ಸಂತೋಷದಿಂದ” ಬರಮಾಡಿಕೊಂಡನು. (ಲೂಕ 19:5, 6) ಯೇಸು ಅನೇಕವೇಳೆ ಬೇಥಾನ್ಯದಲ್ಲಿದ್ದ ತನ್ನ ಮಿತ್ರರಾದ ಮಾರ್ಥ, ಮರಿಯ ಹಾಗೂ ಲಾಜರನ ಮನೆಯಲ್ಲಿ ಅತಿಥಿಯಾಗಿ ತಂಗಿದ್ದನು. (ಲೂಕ 10:38; ಯೋಹಾನ 11:1, 5, 18) ಕಪೆರ್ನೌಮಿನಲ್ಲಿ ಯೇಸು ಸೀಮೋನ ಪೇತ್ರನ ಮನೆಯಲ್ಲಿ ತಂಗಿದ್ದಿರಬಹುದು.—ಮಾರ್ಕ 1:21, 29-35.
ಮತ್ತಾಯ 10:9-11) ಯೋಗ್ಯಹೃದಯದ ಜನರು ತನ್ನ ಶಿಷ್ಯರನ್ನು ಸ್ವಾಗತಿಸುವರು, ಮತ್ತು ಆಹಾರ, ವಸತಿ, ಹಾಗೂ ಇತರ ಆವಶ್ಯಕತೆಗಳನ್ನು ಪೂರೈಸುವರು ಎಂಬುದು ಅವನಿಗೆ ಗೊತ್ತಿತ್ತು.
ಶುಶ್ರೂಷೆಯ ವಿಷಯದಲ್ಲಿ ಯೇಸು ತನ್ನ 12 ಮಂದಿ ಶಿಷ್ಯರಿಗೆ ಕೊಟ್ಟ ಉಪದೇಶವು, ಇಸ್ರಾಯೇಲಿನಲ್ಲಿ ಅವರು ಯಾವ ರೀತಿಯ ಸ್ವಾಗತವನ್ನು ನಿರೀಕ್ಷಿಸಸಾಧ್ಯವಿತ್ತು ಎಂಬುದರ ಕುರಿತು ಹೆಚ್ಚಿನದನ್ನು ತಿಳಿಯಪಡಿಸುತ್ತದೆ. ಯೇಸು ಅವರಿಗಂದದ್ದು: “ನಿಮ್ಮ ಹಮ್ಮೀಣಿಗಳಲ್ಲಿ ಹೊನ್ನು ಹಣ ದುಡ್ಡುಗಳನ್ನೂ ದಾರಿಗೆ ಹಸಿಬೆಯನ್ನೂ ಎರಡು ಅಂಗಿ ಕೆರ ಕೋಲು ಮೊದಲಾದವುಗಳನ್ನೂ ಸೌರಿಸಿಕೊಳ್ಳಬೇಡಿರಿ. ಆಳು ಅಂಬಲಿಗೆ ಯೋಗ್ಯನಷ್ಟೆ. ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆಮಾಡಿ ಮುಂದಕ್ಕೆ ಹೊರಡುವ ತನಕ ಅವರಲ್ಲೇ ಇರ್ರಿ.” (ಆದರೂ, ಸಂಚರಿಸುವ ಸೌವಾರ್ತಿಕರು ತಮ್ಮ ಆವಶ್ಯಕತೆಗಳನ್ನು ತಾವೇ ಪೂರೈಸಿಕೊಳ್ಳುವ ಹಾಗೂ ತಮ್ಮ ಖರ್ಚುವೆಚ್ಚಗಳನ್ನು ತಾವೇ ನೋಡಿಕೊಳ್ಳುವಂಥ ಸಮಯವು ಸಮೀಪಿಸುತ್ತಿತ್ತು. ತನ್ನ ಹಿಂಬಾಲಕರ ಕಡೆಗಿನ ಭಾವೀ ವಿರೋಧ ಹಾಗೂ ಇಸ್ರಾಯೇಲಿನ ಹೊರಗಿನ ಟೆರಿಟೊರಿಗಳಲ್ಲಿಯೂ ಸಾರುವ ಕೆಲಸದ ವಿಸ್ತರಣೆಯನ್ನು ಮನಸ್ಸಿನಲ್ಲಿಟ್ಟವನಾಗಿ ಯೇಸು ಹೇಳಿದ್ದು: “ಈಗಲಾದರೋ ಹಮ್ಮೀಣಿಯಿದ್ದವನು ಅದನ್ನು ತಕ್ಕೊಳ್ಳಲಿ, ಹಸಿಬೆಯಿದ್ದವನು ಅದನ್ನು ತಕ್ಕೊಳ್ಳಲಿ.” (ಲೂಕ 22:36) ಹೀಗೆ ಸುವಾರ್ತೆಯನ್ನು ಹಬ್ಬಿಸಲಿಕ್ಕಾಗಿ, ವ್ಯಾಪಕವಾಗಿ ಪ್ರಯಾಣಿಸುವುದು ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ತಂಗುವುದು ಅತ್ಯಗತ್ಯವಾದದ್ದಾಗಿತ್ತು.
“ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ”
ಪ್ರಥಮ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದಾದ್ಯಂತ ಸ್ವಲ್ಪಮಟ್ಟಿಗೆ ಅಸ್ತಿತ್ವದಲ್ಲಿದ್ದ ಯುದ್ಧರಹಿತ ಸ್ಥಿತಿ ಹಾಗೂ ಅತ್ಯಧಿಕ ಸಂಖ್ಯೆಯ ಸುಗಮವಾದ ರಸ್ತೆಗಳು, ಜನರು ಬಹಳಷ್ಟು ಪ್ರಯಾಣಗಳನ್ನು ಕೈಗೊಳ್ಳುವಂತೆ ಮಾಡಿದವು. * ಪ್ರಯಾಣಿಕರ ಅಪಾರ ಸಂಖ್ಯೆಯು, ಅನೇಕ ತಂಗುದಾಣಗಳ ಆವಶ್ಯಕತೆಯನ್ನು ಸಹ ಹೆಚ್ಚಿಸಿತು. ಮುಖ್ಯ ಹೆದ್ದಾರಿಗಳ ಉದ್ದಕ್ಕೂ ಸುಮಾರು ಒಂದು ದಿನದ ಪ್ರಯಾಣದ ಅಂತರದಲ್ಲಿ ತಂಗುದಾಣಗಳನ್ನು ನಿರ್ಮಿಸುವ ಮೂಲಕ ಈ ಬೇಡಿಕೆಯು ಪೂರೈಸಲ್ಪಟ್ಟಿತು. ಆದರೂ, ಗ್ರೀಕ್-ರೋಮನ್ ಸನ್ನಿವೇಶಗಳಲ್ಲಿ ಅಪೊಸ್ತಲರ ಕೃತ್ಯಗಳು ಪುಸ್ತಕ (ಇಂಗ್ಲಿಷ್)ವು ಹೇಳುವುದು: “ಇಂಥ ವಸತಿಸೌಕರ್ಯಗಳ ಬಗ್ಗೆ ಸಾಹಿತ್ಯದಲ್ಲಿ ಏನು ತಿಳಿಯಪಡಿಸಲ್ಪಟ್ಟಿದೆಯೋ ಅದು ತುಂಬ ಕರಾಳ ಚಿತ್ರಣವನ್ನು ನೀಡುತ್ತದೆ. ತುಂಬ ಶಿಥಿಲಗೊಂಡ ಹಾಗೂ ಗಲೀಜಾದ ವಸತಿಗೃಹಗಳು, ಪೀಠೋಪಕರಣಗಳ ಅನಸ್ತಿತ್ವ, ತಿಗಣೆಗಳು, ಕಳಪೆ ಆಹಾರಪಾನೀಯಗಳು, ವಿಶ್ವಾಸಹೀನ ಮಾಲೀಕರು ಹಾಗೂ ಸಿಬ್ಬಂದಿ, ಕೆಟ್ಟ ಹೆಸರಿನ ಗಿರಾಕಿಗಳು ಮತ್ತು ಸರ್ವಸಾಮಾನ್ಯ ಸಡಿಲು ನಡತೆಯು ಇತ್ತೆಂಬುದಕ್ಕೆ ಲಭ್ಯವಿರುವ ಸಾಹಿತ್ಯ ಹಾಗೂ ಪ್ರಾಕ್ತನಶೋಧನ ಶಾಸ್ತ್ರದ ಮೂಲಗಳು ಪುರಾವೆಯನ್ನು ನೀಡುತ್ತವೆ.” ನೈತಿಕ ವಿಷಯದಲ್ಲಿ ಯಥಾರ್ಥನಾಗಿರುವ ಪ್ರಯಾಣಿಕನಾದರೋ ಸಾಧ್ಯವಿರುವಾಗೆಲ್ಲ ಇಂಥ ತಂಗುದಾಣಗಳಲ್ಲಿ ಉಳಿಯುವುದರಿಂದ ದೂರವಿರುತ್ತಿದ್ದನು ಎಂಬುದು ಅರ್ಥಮಾಡಿಕೊಳ್ಳತಕ್ಕ ಸಂಗತಿಯೇ.
ಆದುದರಿಂದ, ಇತರರಿಗೆ ಅತಿಥಿಸತ್ಕಾರವನ್ನು ತೋರಿಸುವಂತೆ ಶಾಸ್ತ್ರವಚನಗಳು ಕ್ರೈಸ್ತರನ್ನು ಪುನಃ ಪುನಃ ಉತ್ತೇಜಿಸುವುದರಲ್ಲಿ ಆಶ್ಚರ್ಯವೇನಿಲ್ಲ. ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪೌಲನು ಹೀಗೆ ಪ್ರೋತ್ಸಾಹಿಸಿದನು: “ದೇವಜನರಿಗೆ ಕೊರತೆಬಂದಾಗ ಸಹಾಯ ಮಾಡಿರಿ. ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ.” (ರೋಮಾಪುರ 12:13) ಯೆಹೂದಿ ಕ್ರೈಸ್ತರಿಗೆ ಅವನು ಹೀಗೆ ಜ್ಞಾಪಕಹುಟ್ಟಿಸಿದನು: “ಅತಿಥಿಸತ್ಕಾರಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.” (ಇಬ್ರಿಯ 13:2) ಪೇತ್ರನು ತನ್ನ ಜೊತೆ ಆರಾಧಕರಿಗೆ ಹೀಗೆ ಬುದ್ಧಿಹೇಳಿದನು: “ಒಬ್ಬರಿಗೊಬ್ಬರು ಅತಿಥಿ ಸತ್ಕಾರಮಾಡಿರಿ.”—1 ಪೇತ್ರ 4:9.
ಆದರೂ, ಅತಿಥಿಸತ್ಕಾರವನ್ನು ಮಾಡುವುದು ಸೂಕ್ತವಲ್ಲದ ಸನ್ನಿವೇಶಗಳೂ ಅಸ್ತಿತ್ವದಲ್ಲಿದ್ದವು. “ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿಸಿ ಮುಂದಕ್ಕೆ” ಹೋಗುವವರೆಲ್ಲರ ಕುರಿತು ಅಪೊಸ್ತಲ ಯೋಹಾನನು ಹೇಳಿದ್ದು: “ಈ ಉಪದೇಶಕ್ಕೆ ಒಪ್ಪದಿರುವ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ, ಅವನಿಗೆ ಶುಭವಾಗಲಿ ಎಂದು ಹೇಳಬೇಡಿರಿ. ಅವನಿಗೆ ಶುಭವಾಗಲಿ ಎಂದು ಹೇಳುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.” (2 ಯೋಹಾನ 9-11) ಪಶ್ಚಾತ್ತಾಪವನ್ನು ತೋರಿಸದಿರುವಂಥ ಪಾಪಿಗಳ ವಿಷಯದಲ್ಲಿ ಪೌಲನು ಬರೆದುದು: “ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಬೈಯುವವನಾದರೂ ಕುಡಿಕನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟಮಾಡಲೂ ಬಾರದು.”—1 ಕೊರಿಂಥ 5:11.
ಮೋಸಗಾರರು ಹಾಗೂ ಇನ್ನಿತರರು ನಿಜ ಕ್ರೈಸ್ತರ ಅತಿಥಿಸತ್ಕಾರ ಗುಣವನ್ನು ದುರುಪಯೋಗಿಸಲು ಪ್ರಯತ್ನಿಸಿದ್ದಿರಬಹುದು. ದ ಡೇಡಾಹೀ ಅಥವಾ ಹನ್ನೆರಡು ಮಂದಿ ಅಪೊಸ್ತಲರ ಬೋಧನೆ (ಇಂಗ್ಲಿಷ್) ಎಂದು ಪ್ರಸಿದ್ಧಿ ಪಡೆದಿದ್ದ ಸಾ.ಶ. ಎರಡನೆಯ ಶತಮಾನದ ಕ್ರೈಸ್ತ ನಂಬಿಕೆಯ ಕುರಿತಾದ ಬೈಬಲೇತರ ದಾಖಲೆಪತ್ರವು ಶಿಫಾರಸ್ಸು ಮಾಡಿದ್ದೇನೆಂದರೆ, ಒಬ್ಬ ಸಂಚಾರಿ ಸೌವಾರ್ತಿಕನಿಗೆ “ಒಂದು ದಿನ ಅಥವಾ ಅಗತ್ಯ ಬೀಳುವಲ್ಲಿ ಎರಡು ದಿನ” ಅತಿಥಿಸತ್ಕಾರ ತೋರಿಸಲ್ಪಡಬೇಕು. ತದನಂತರ ಅವನು ಅಲ್ಲಿಂದ ಹೊರಡುವಾಗ, “ಕೇವಲ ಆಹಾರವನ್ನು ಹೊರತು ಬೇರೆ ಏನನ್ನೂ ಸ್ವೀಕರಿಸದಿರಲಿ . . . ಅವನು ಹಣವನ್ನು ಕೇಳಿಕೊಳ್ಳುವಲ್ಲಿ ಅವನೊಬ್ಬ ಸುಳ್ಳು ಪ್ರವಾದಿಯಾಗಿದ್ದಾನೆ.” ಆ ದಾಖಲೆಪತ್ರವು ಮುಂದುವರಿಸಿದ್ದು: “ಅವನು ನಿಮ್ಮ ಜೊತೆಯಲ್ಲೇ ಉಳಿದುಕೊಳ್ಳಲು ಇಷ್ಟಪಡುವುದಾದರೆ ಮತ್ತು ಅವನಿಗೆ ಯಾವುದೇ ಕೌಶಲವಿರುವುದಾದರೆ, ತನ್ನ ಆಹಾರವನ್ನು ಅವನೇ ಸಂಪಾದಿಸಿಕೊಳ್ಳಲಿ. ನಿಮಗೆ ಗೊತ್ತಿರುವ ಮೇರೆಗೆ ಅವನ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅವನ ಬಳಿ ಯಾವುದೇ ಕೌಶಲವಿಲ್ಲದಿರುವಲ್ಲಿ, ಅಂಥವನು ಕ್ರೈಸ್ತನಾಗಿರುವ ಮಾತ್ರಕ್ಕೆ ನಿಮ್ಮ ನಡುವೆ ಸೋಮಾರಿಯಾಗಿ ಜೀವಿಸದಿರಲಿ. ಆದರೆ
ಅವನು ತನ್ನ ಹೊಟ್ಟೆಯನ್ನು ತಾನೇ ತುಂಬಿಸಿಕೊಳ್ಳದಿರುವಲ್ಲಿ, ಅಂಥವನು ಕ್ರೈಸ್ತತ್ವವನ್ನು ಸ್ವಾರ್ಥಲಾಭಕ್ಕಾಗಿ ಉಪಯೋಗಿಸುತ್ತಿದ್ದಾನೆ; ಅಂಥವನ ವಿಷಯದಲ್ಲಿ ಎಚ್ಚರಿಕೆಯಿಂದಿರಿ.”ಅಪೊಸ್ತಲ ಪೌಲನು ಕೆಲವೊಂದು ಪಟ್ಟಣಗಳಲ್ಲಿ ದೀರ್ಘಕಾಲ ತಂಗಿರುವಾಗ, ತನಗೆ ಆತಿಥ್ಯ ನೀಡುತ್ತಿರುವವರ ಮೇಲೆ ತನ್ನ ಖರ್ಚುವೆಚ್ಚಗಳ ಹೊರೆಯನ್ನು ಹೊರಿಸದಿರುವ ವಿಷಯದಲ್ಲಿ ತುಂಬ ಜಾಗರೂಕನಾಗಿದ್ದನು. ತನ್ನನ್ನು ಬೆಂಬಲಿಸಿಕೊಳ್ಳಲಿಕ್ಕಾಗಿ ಅವನು ಗುಡಾರಮಾಡುವವನಾಗಿ ಕೆಲಸಮಾಡುತ್ತಿದ್ದನು. (ಅ. ಕೃತ್ಯಗಳು 18:1-3; 2 ಥೆಸಲೊನೀಕ 3:7-12) ತಮ್ಮ ನಡುವೆ ಇದ್ದ ಅರ್ಹ ಪ್ರವಾಸಿಗರಿಗೆ ಸಹಾಯಮಾಡಲಿಕ್ಕಾಗಿ ಆರಂಭದ ಕ್ರೈಸ್ತರು ಶಿಫಾರಸ್ಸು ಪತ್ರಗಳನ್ನು ಉಪಯೋಗಿಸುತ್ತಿದ್ದರು ಎಂಬುದು ಸುವ್ಯಕ್ತ. ಪೌಲನು ಫೊಯಿಬೆಯನ್ನು ಇದೇ ರೀತಿ ಪರಿಚಯಿಸಿದನು. ಅವನು ಬರೆದುದು: “ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಫೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. . . . ನೀವು ಆಕೆಯನ್ನು ಕರ್ತನ ಶಿಷ್ಯಳೆಂದು ದೇವಜನರಿಗೆ ತಕ್ಕ ಹಾಗೆ ಸೇರಿಸಿಕೊಂಡು ಸಹಾಯವು ಯಾವ ವಿಷಯದಲ್ಲಿ ಬೇಕಾಗಿದ್ದರೂ ಸಹಾಯವನ್ನು ಮಾಡಿರಿ.”—ರೋಮಾಪುರ 16:1, 2.
ಅತಿಥಿಸತ್ಕಾರಮಾಡುವವರು ಆಗಿರುವುದರಿಂದ ಆಶೀರ್ವಾದಗಳು
ಪ್ರಥಮ ಶತಮಾನದ ಕ್ರೈಸ್ತ ಮಿಷನೆರಿಗಳು ತಮ್ಮೆಲ್ಲಾ ಆವಶ್ಯಕತೆಗಳಿಗಾಗಿ ಯೆಹೋವನ ಮೇಲೆ ಅವಲಂಬಿಸಿದ್ದರು. ಆದರೆ ಅವರು ಜೊತೆ ವಿಶ್ವಾಸಿಗಳ ಅತಿಥಿಸತ್ಕಾರದಿಂದ ಪ್ರಯೋಜನ ಹೊಂದಸಾಧ್ಯವಿತ್ತೋ? ಲುದ್ಯಳು ಪೌಲನಿಗೂ ಇನ್ನಿತರರಿಗೂ ತನ್ನ ಮನೆಯಲ್ಲಿ ವಸತಿಯನ್ನು ಒದಗಿಸಿದಳು. ಅಪೊಸ್ತಲನು ಕೊರಿಂಥದಲ್ಲಿ ಅಕ್ವಿಲ ಮತ್ತು ಪ್ರಿಸ್ಕಲ್ಲರೊಂದಿಗೆ ತಂಗಿದನು. ಫಿಲಿಪ್ಪಿಯಲ್ಲಿದ್ದ ಸೆರೆಯ ಯಜಮಾನನು ಪೌಲಸೀಲರನ್ನು ತನ್ನ ಮನೆಗೆ ಕರಕೊಂಡುಹೋಗಿ ಊಟಮಾಡಿಸಿದನು. ಥೆಸಲೊನೀಕದಲ್ಲಿ ಯಾಸೋನನು, ಕೈಸರೈಯದಲ್ಲಿ ಫಿಲಿಪ್ಪನು ಮತ್ತು ಯೆರೂಸಲೇಮಿನಿಂದ ಕೈಸರೈಯಕ್ಕೆ ಹೋಗುವ ಮಾರ್ಗದಲ್ಲಿ ಮ್ನಾಸೋನನು ಪೌಲನಿಗೆ ಅತಿಥಿಸತ್ಕಾರವನ್ನು ತೋರಿಸಿದರು. ರೋಮ್‌ನ ಪ್ರಯಾಣಮಾರ್ಗದಲ್ಲಿ ಪೊತಿಯೋಲದ ಸಹೋದರರು ಅವನನ್ನು ನೋಡಿಕೊಂಡರು. ಪೌಲನನ್ನು ಅತಿಥಿಯಾಗಿ ಸ್ವೀಕರಿಸಿದಂಥ ಆ ಆತಿಥೇಯರಿಗೆ ಇವು ಆಧ್ಯಾತ್ಮಿಕವಾಗಿ ಎಷ್ಟು ಪ್ರತಿಫಲದಾಯಕ ಸಂದರ್ಭಗಳಾಗಿದ್ದಿರಬೇಕು!—ಅ. ಕೃತ್ಯಗಳು 16:33, 34; 17:7; 18:1-3; 21:8, 16; 28:13, 14.
ಫ್ರೆಡ್‌ರಿಕ್ ಎಫ್. ಬ್ರೂಸ್ ಎಂಬ ವಿದ್ವಾಂಸರು ಹೀಗೆ ತಿಳಿಸುತ್ತಾರೆ: “ಇಷ್ಟರ ಮಟ್ಟಿಗೆ ಸಹಾಯಮಾಡಿದ ಈ ಸ್ನೇಹಿತರಿಗೆ ಮತ್ತು ಜೊತೆ ಕೆಲಸಗಾರರಿಗೆ, ಆತಿಥೇಯರಿಗೆ ಮತ್ತು ಆತಿಥ್ಯಕಾರಿಣಿಯರಿಗೆ, ಪೌಲನ ಕಡೆಗಿನ ಪ್ರೀತಿ ಹಾಗೂ ಅವನು ಯಾರ ಸೇವೆಯನ್ನು ಮಾಡುತ್ತಿದ್ದನೋ ಆ ಧಣಿಯ ಕಡೆಗಿನ ಪ್ರೀತಿಯನ್ನು ಬಿಟ್ಟು ಬೇರೆ ಯಾವ ಹೇತುವೂ ಇರಲಿಲ್ಲ. ಪೌಲನ ಸೇವೆಮಾಡುವ ಮೂಲಕ ತಮ್ಮ ಧಣಿಗೆ ಸೇವೆಯನ್ನು ಸಲ್ಲಿಸುತ್ತಿದ್ದೇವೆ ಎಂಬುದು ಅವರಿಗೆ ತಿಳಿದಿತ್ತು.” ಅತಿಥಿಸತ್ಕಾರ ಮಾಡುವವರಾಗಿರಲು ಇದು ಒಂದು ಅತ್ಯುತ್ತಮ ಹೇತುವಾಗಿದೆ.
ಅತಿಥಿಸತ್ಕಾರವನ್ನು ತೋರಿಸುವ ಆವಶ್ಯಕತೆಯು ಈಗಲೂ ಇದೆ. ಯೆಹೋವನ ಸಾಕ್ಷಿಗಳ ಸಾವಿರಾರು ಮಂದಿ ಸಂಚರಣ ಪ್ರತಿನಿಧಿಗಳು ತಮ್ಮ ಜೊತೆ ವಿಶ್ವಾಸಿಗಳಿಂದ ಅತಿಥಿಸತ್ಕಾರವನ್ನು ಸ್ವೀಕರಿಸುತ್ತಾರೆ. ಕೆಲವು ರಾಜ್ಯ ಘೋಷಕರು, ಸುವಾರ್ತೆಯು ತಲಪಿರದಂಥ ಸ್ಥಳಗಳಿಗೆ ಸಾರಲಿಕ್ಕಾಗಿ ಹೋಗಲು ತಮ್ಮ ಸ್ವಂತ ಹಣವನ್ನು ವಿನಿಯೋಗಿಸುತ್ತಾರೆ. ನಮ್ಮ ಮನೆಗಳು ಎಷ್ಟೇ ಸಾಧಾರಣವಾಗಿರಲಿ, ಇಂಥ ರಾಜ್ಯ ಘೋಷಕರಿಗಾಗಿ ಅವುಗಳನ್ನು ತೆರೆದಿಡುವುದು ಮಹತ್ತರ ಆಶೀರ್ವಾದಗಳನ್ನು ಫಲಿಸುತ್ತದೆ. ಸರಳವಾದ ಒಂದು ಊಟವನ್ನು ಒಳಗೂಡಿರಬಹುದಾದ ಮನಃಪೂರ್ವಕ ಅತಿಥಿಸತ್ಕಾರವು, “ಪರಸ್ಪರ ಉತ್ತೇಜನದ ವಿನಿಮಯಕ್ಕೆ” (NW) ಹಾಗೂ ನಮ್ಮ ಸಹೋದರರಿಗಾಗಿ ಮತ್ತು ನಮ್ಮ ದೇವರಿಗಾಗಿ ಪ್ರೀತಿಯನ್ನು ತೋರಿಸಲಿಕ್ಕೆ ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತದೆ. (ರೋಮಾಪುರ 1:11, 12) ಇಂಥ ಸಂದರ್ಭಗಳು ಆತಿಥೇಯರಿಗೆ ವಿಶೇಷವಾಗಿ ಪ್ರತಿಫಲದಾಯಕವಾಗಿವೆ, ಏಕೆಂದರೆ ‘ತೆಗೆದುಕೊಳ್ಳುವದಕ್ಕಿಂತ ಕೊಡುವುದರಲ್ಲೇ ಹೆಚ್ಚಿನ ಭಾಗ್ಯವಿದೆ’ ಅಥವಾ ಸಂತೋಷವಿದೆ.—ಅ. ಕೃತ್ಯಗಳು 20:35.
[ಪಾದಟಿಪ್ಪಣಿ]
^ ಪ್ಯಾರ. 11 ಸಾ.ಶ. 100ರಷ್ಟಕ್ಕೆ, ಸುಮಾರು 80,000 ಕಿಲೊಮೀಟರುಗಳಷ್ಟು ಉದ್ದದ ರೋಮನ್ ರಸ್ತೆಗಳು ಇದ್ದವು ಎಂದು ಅಂದಾಜುಮಾಡಲಾಗಿದೆ.
[ಪುಟ 23ರಲ್ಲಿರುವ ಚಿತ್ರ]
ಕ್ರೈಸ್ತರು ‘ಅತಿಥಿಸತ್ಕಾರವನ್ನು ಅಭ್ಯಾಸಿಸುತ್ತಾರೆ’