ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನು ಪ್ರವಾದನೆಯ ಕೇಂದ್ರಬಿಂದು

ಕ್ರಿಸ್ತನು ಪ್ರವಾದನೆಯ ಕೇಂದ್ರಬಿಂದು

ಕ್ರಿಸ್ತನು ಪ್ರವಾದನೆಯ ಕೇಂದ್ರಬಿಂದು

“ಯೇಸುವಿಗೆ ಸಾಕ್ಷಿಯನ್ನು ಒದಗಿಸುವುದೇ ಪ್ರವಾದಿಸುವುದನ್ನು ಪ್ರೇರಿಸುತ್ತದೆ.”​—⁠ಪ್ರಕಟನೆ 19:⁠10, Nw.

ಅದು ಸಾಮಾನ್ಯ ಶಕ 29ನೆಯ ಇಸವಿಯಾಗಿದೆ. ಇಸ್ರಾಯೇಲಿನ ನಿವಾಸಿಗಳು ವಾಗ್ದತ್ತ ಮೆಸ್ಸೀಯನ ಕುರಿತು ಸಂಭ್ರಮದಿಂದ ಮಾತಾಡಿಕೊಳ್ಳುತ್ತಿದ್ದಾರೆ. ಸ್ನಾನಿಕನಾದ ಯೋಹಾನನ ಶುಶ್ರೂಷೆಯು ಮೆಸ್ಸೀಯನ ನಿರೀಕ್ಷಣೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. (ಲೂಕ 3:15) ತಾನು ಕ್ರಿಸ್ತನಲ್ಲ ಎಂದು ಯೋಹಾನನು ಎಲ್ಲರ ಮುಂದೆ ಹೇಳುತ್ತಾನೆ. ನಜರೇತಿನ ಯೇಸುವನ್ನು ಸೂಚಿಸುತ್ತಾ ಅವನು ಹೀಗೆ ಹೇಳುತ್ತಾನೆ: “ನಾನು . . . ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ.” (ಯೋಹಾನ 1:20, 34) ಅನಂತರ ಸ್ವಲ್ಪದರಲ್ಲೇ ಯೇಸುವಿನ ಬೋಧನೆಗೆ ಕಿವಿಗೊಡಲು ಮತ್ತು ಅವನಿಂದ ಗುಣಪಡಿಸಿಕೊಳ್ಳಲು ಜನರ ಗುಂಪುಗಳು ಅವನನ್ನು ಹಿಂಬಾಲಿಸುತ್ತವೆ.

2 ತದನಂತರದ ತಿಂಗಳುಗಳಲ್ಲಿ ಯೆಹೋವನು ತನ್ನ ಕುಮಾರನ ವಿಷಯದಲ್ಲಿ ಹೇರಳವಾದ ಪುರಾವೆಯನ್ನು ಒದಗಿಸುತ್ತಾನೆ. ಶಾಸ್ತ್ರವಚನಗಳ ಅಧ್ಯಯನಮಾಡಿರುವವರಿಗೆ ಹಾಗೂ ಯೇಸುವಿನ ಕಾರ್ಯಗಳನ್ನು ಗಮನಿಸುವವರಿಗೆ ಅವನಲ್ಲಿ ನಂಬಿಕೆಯಿಡಲು ಬಲವಾದ ಆಧಾರವಿದೆ. ಆದರೂ, ದೇವರ ಒಡಂಬಡಿಕೆಯ ಜನರಲ್ಲಿ ಹೆಚ್ಚಿನವರು ನಂಬಿಕೆಯ ಕೊರತೆಯನ್ನು ತೋರಿಸುತ್ತಾರೆ. ತೀರ ಕೊಂಚ ಮಂದಿ ಮಾತ್ರ ಯೇಸುವೇ ದೇವಕುಮಾರನಾದ ಕ್ರಿಸ್ತನೆಂದು ಅಂಗೀಕರಿಸುತ್ತಾರೆ. (ಯೋಹಾನ 6:60-69) ಆ ಸಮಯದಲ್ಲಿ ನೀವು ಜೀವಿಸುತ್ತಿದ್ದಲ್ಲಿ ಏನು ಮಾಡುತ್ತಿದ್ದಿರಿ? ನೀವು ಯೇಸುವನ್ನು ಮೆಸ್ಸೀಯನಾಗಿ ಅಂಗೀಕರಿಸುವಂತೆ ಮತ್ತು ಅವನ ನಂಬಿಗಸ್ತ ಹಿಂಬಾಲಕರಾಗುವಂತೆ ಪ್ರಚೋದಿಸಲ್ಪಡುತ್ತಿದ್ದಿರೊ? ಸಬ್ಬತ್‌ ನಿಯಮವನ್ನು ಉಲ್ಲಂಘಿಸಿರುವುದಾಗಿ ಯೇಸುವನ್ನು ದೂಷಿಸಿದಾಗ ಅವನೇ ತನ್ನ ಗುರುತಿನ ಕುರಿತು ಕೊಡುವಂಥ ಪುರಾವೆಯನ್ನು ಪರಿಗಣಿಸಿರಿ, ಮತ್ತು ಅವನು ತನ್ನ ನಿಷ್ಠಾವಂತ ಶಿಷ್ಯರ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಕೊಡುವ ಎರಡು ರುಜುವಾತುಗಳನ್ನು ಸಹ ಗಮನಿಸಿರಿ.

ಯೇಸು ತಾನೇ ಪುರಾವೆ ನೀಡುತ್ತಾನೆ

3 ಇದು ಸಾ.ಶ. 31ರ ಪಂಚಾಶತ್ತಮದ ಸಮಯ. ಯೇಸು ಯೆರೂಸಲೇಮಿನಲ್ಲಿದ್ದಾನೆ. ಮತ್ತು ಅವನು ಸುಮಾರು 38 ವರ್ಷಗಳಿಂದ ಅಸ್ವಸ್ಥನಾಗಿದ್ದ ಒಬ್ಬ ವ್ಯಕ್ತಿಯನ್ನು ಆಗಷ್ಟೇ ವಾಸಿಮಾಡಿದ್ದನು. ಆದರೂ, ಸಬ್ಬತ್ತಿನ ದಿನದಂದು ವಾಸಿಮಾಡಿದ್ದಕ್ಕಾಗಿ ಯೆಹೂದ್ಯರು ಯೇಸುವನ್ನು ಹಿಂಸಿಸುತ್ತಾರೆ. ಅವನ ಮೇಲೆ ದೇವದೂಷಣೆಯ ಆರೋಪವನ್ನೂ ಹೊರಿಸುತ್ತಾರೆ ಮತ್ತು ದೇವರನ್ನು ಯೇಸು ತನ್ನ ತಂದೆಯೆಂದು ಕರೆಯುತ್ತಾನಾದ ಕಾರಣ ಅವನನ್ನು ಕೊಲ್ಲಲು ಹೊಂಚುಹಾಕುತ್ತಿದ್ದಾರೆ. (ಯೋಹಾನ 5:1-9, 16-18) ತನ್ನ ಪರವಾಗಿ ಯೇಸು ನೀಡುವಂಥ ಸಮರ್ಥನೆಯು, ಅವನು ನಿಜವಾಗಿಯೂ ಯಾರಾಗಿದ್ದಾನೆ ಎಂಬುದರ ಕುರಿತು ಪ್ರಾಮಾಣಿಕ ಹೃದಯದ ಯಾವುದೇ ಯೆಹೂದ್ಯನು ಮನಗಾಣಸಾಧ್ಯವಿರುವಂಥ ಮೂರು ತರ್ಕಸರಣಿಗಳನ್ನು ಪ್ರಸ್ತುತಪಡಿಸುತ್ತದೆ.

4 ಮೊದಲನೆಯದಾಗಿ, ತನ್ನ ಮುನ್ಸೂಚಕನಾಗಿದ್ದ ಸ್ನಾನಿಕನಾದ ಯೋಹಾನನ ಸಾಕ್ಷ್ಯವನ್ನು ಸೂಚಿಸುತ್ತಾ ಯೇಸು ಹೇಳುವುದು: “ನೀವು ಯೋಹಾನನ ಬಳಿಯಲ್ಲಿ ಕೇಳಿಕೊಂಡು ಬರುವದಕ್ಕೆ ಕಳುಹಿಸಿದಿರಿ; ಅವನು ಸತ್ಯಕ್ಕೆ ಸಾಕ್ಷಿ ಹೇಳಿದನು. ಯೋಹಾನನು ಉರಿಯುವ ದೀಪದೋಪಾದಿಯಲ್ಲಿ ಪ್ರಕಾಶಿಸಿದನು. ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪಕಾಲ ವಿನೋದಗೊಳ್ಳುವದಕ್ಕೆ ಮನಸ್ಸುಮಾಡಿದಿರಿ.”​—⁠ಯೋಹಾನ 5:33, 35.

5 ಸ್ನಾನಿಕನಾದ ಯೋಹಾನನು ಯಾವ ಅರ್ಥದಲ್ಲಿ “ಉರಿಯುವ ದೀಪದೋಪಾದಿಯಲ್ಲಿ ಪ್ರಕಾಶಿಸಿ”ದನೆಂದರೆ, ಹೆರೋದನಿಂದ ಅನ್ಯಾಯವಾಗಿ ಸೆರೆಯಲ್ಲಿ ಹಾಕಲ್ಪಡುವುದಕ್ಕೆ ಮುಂಚೆ ಮೆಸ್ಸೀಯನಿಗಾಗಿ ಮಾರ್ಗವನ್ನು ಸಿದ್ಧಪಡಿಸುವ ತನ್ನ ದೈವಿಕ ನೇಮಕವನ್ನು ಪೂರೈಸುವುದರ ಮೂಲಕವೇ. ಯೋಹಾನನು ಹೇಳಿದ್ದು: “[ಮೆಸ್ಸೀಯನನ್ನು] ಇಸ್ರಾಯೇಲ್ಯರಿಗೆ ತಿಳಿಯಪಡಿಸುವದಕ್ಕೋಸ್ಕರವೇ ನಾನು ನೀರಿನ ಸ್ನಾನವನ್ನು ಮಾಡಿಸುವವನಾಗಿ ಬಂದೆನು . . . ದೇವರಾತ್ಮವು ಪಾರಿವಾಳದಂತೆ ಆಕಾಶದಿಂದ ಇಳಿಯುವದನ್ನು ನೋಡಿದೆನು. ಅದು ಆತನ ಮೇಲೆ ನೆಲೆಗೊಂಡಿತು. ನನಗೂ ಆತನ ಗುರುತಿರಲಿಲ್ಲ; ಆದರೆ ನೀರಿನ ಸ್ನಾನವನ್ನು ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನು​—⁠ಯಾವನ ಮೇಲೆ ಆತ್ಮವು ಇಳಿದುಬಂದು ಇರುವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮದ ಸ್ನಾನವನ್ನು ಕೊಡುವವನು ಎಂದು ತಾನೇ ನನಗೆ ಹೇಳಿದನು. ನಾನು ಅದನ್ನು ನೋಡಿ ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ.” * (ಯೋಹಾನ 1:26-37) ಯೋಹಾನನು ಯೇಸುವನ್ನು ದೇವಕುಮಾರನೆಂದು, ವಾಗ್ದತ್ತ ಮೆಸ್ಸೀಯನೆಂದು ಖಚಿತವಾಗಿ ಗುರುತಿಸಿದನು. ಯೋಹಾನನು ಕೊಟ್ಟ ಸಾಕ್ಷಿಯು ಎಷ್ಟು ಮನಗಾಣಿಸುವಂಥದ್ದಾಗಿತ್ತೆಂದರೆ, ಅವನು ಮರಣಪಟ್ಟು ಸುಮಾರು ಎಂಟು ತಿಂಗಳುಗಳ ಬಳಿಕ ಪ್ರಾಮಾಣಿಕ ಹೃದಯದ ಅನೇಕ ಯೆಹೂದ್ಯರು “ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ನಿಜವಾಗಿತ್ತು” ಎಂದು ಒಪ್ಪಿಕೊಂಡರು.​—⁠ಯೋಹಾನ 10:41, 42.

6 ತದನಂತರ, ಮೆಸ್ಸೀಯನಾಗಿ ತನ್ನ ಹಕ್ಕುಗಳನ್ನು ಸಮರ್ಥಿಸಲಿಕ್ಕಾಗಿ ಯೇಸು ಇನ್ನೊಂದು ತರ್ಕಸರಣಿಯನ್ನು ಉಪಯೋಗಿಸುತ್ತಾನೆ. ದೇವರ ಬೆಂಬಲದ ಪುರಾವೆಯಾಗಿ ಅವನು ತನ್ನ ಒಳ್ಳೇ ಕೆಲಸಗಳ ಕಡೆಗೆ ಗಮನವನ್ನು ಸೆಳೆಯುತ್ತಾನೆ. ಅವನು ಹೇಳುವುದು: “ನನಗಂತೂ ಯೋಹಾನನ ಸಾಕ್ಷಿಗಿಂತ ಹೆಚ್ಚಿನ ಸಾಕ್ಷಿ ಉಂಟು; ಹೇಗಂದರೆ ಪೂರೈಸುವದಕ್ಕೆ ತಂದೆ ನನಗೆ ಕೊಟ್ಟಿರುವ ಕೆಲಸಗಳು, ಅಂದರೆ ನಾನು ಮಾಡುವ ಕೆಲಸಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟನೆಂಬದಾಗಿ ನನ್ನ ವಿಷಯದಲ್ಲಿ ಸಾಕ್ಷಿಕೊಡುತ್ತವೆ.” (ಯೋಹಾನ 5:36) ಯೇಸುವಿನ ವೈರಿಗಳು ಸಹ ಅನೇಕಾನೇಕ ಅದ್ಭುತಕಾರ್ಯಗಳನ್ನು ಒಳಗೂಡಿದ್ದ ಈ ಪುರಾವೆಯನ್ನು ಅಲ್ಲಗಳೆಯಸಾಧ್ಯವಿರಲಿಲ್ಲ. ಸಮಯಾನಂತರ ಕೆಲವರು “ನಾವು ಮಾಡುವದು ಇದೇನು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ” ಎಂದು ಹೇಳಿಕೊಳ್ಳುತ್ತಾರೆ. (ಯೋಹಾನ 11:47) ಆದರೂ ಕೆಲವರು ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸಿ, “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕಕಾರ್ಯಗಳನ್ನು ಮಾಡಾನೋ” ಎಂದು ಕೇಳಿದರು. (ಯೋಹಾನ 7:31) ತಂದೆಯ ಗುಣಗಳನ್ನು ಮಗನಲ್ಲಿ ಕಂಡುಕೊಳ್ಳುವ ಅತ್ಯುತ್ತಮ ಸಂದರ್ಭವು ಯೇಸುವಿನ ಕೇಳುಗರಿಗಿತ್ತು.​—⁠ಯೋಹಾನ 14:⁠9.

7 ಕೊನೆಯದಾಗಿ ನಿರಾಕರಿಸಲಸಾಧ್ಯವಾದ ರುಜುವಾತಿನ ಕಡೆಗೆ ಯೇಸು ಜನರ ಗಮನವನ್ನು ಸೆಳೆಯುತ್ತಾನೆ. ಅವನು ಹೇಳುವುದು: ‘ಶಾಸ್ತ್ರಗಳು ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ. ಆದದರಿಂದ ನೀವು ಮೋಶೆಯ ಮಾತನ್ನು ನಂಬುವವರಾಗಿದ್ದರೆ ನನ್ನ ಮಾತನ್ನೂ ನಂಬುತ್ತಿದ್ದಿರಿ. ಅವನು ನನ್ನ ವಿಷಯವಾಗಿ ಬರೆದನು.’ (ಯೋಹಾನ 5:39, 46) ಕ್ರಿಸ್ತನ ಕುರಿತು ಬರೆದಂಥ ಕ್ರೈಸ್ತಪೂರ್ವ ಸಾಕ್ಷಿಗಳಲ್ಲಿ ಮೋಶೆಯು ಕೇವಲ ಒಬ್ಬನಾಗಿದ್ದನು ಎಂಬುದಂತೂ ನಿಶ್ಚಯ. ಅವರ ಬರಹಗಳಲ್ಲಿ ನೂರಾರು ಪ್ರವಾದನೆಗಳು ಮತ್ತು ಸವಿವರವಾದ ವಂಶಾವಳಿ ಕಥನಗಳು ಒಳಗೂಡಿದ್ದು, ಇವೆಲ್ಲವೂ ಮೆಸ್ಸೀಯನನ್ನು ಗುರುತಿಸಲು ಸಹಾಯಮಾಡಿದವು. (ಲೂಕ 3:23-38; 24:44-46; ಅ. ಕೃತ್ಯಗಳು 10:43) ಮೋಶೆಯ ಧರ್ಮಶಾಸ್ತ್ರದ ಕುರಿತಾಗಿ ಏನು? “ಧರ್ಮಶಾಸ್ತ್ರವು ನಮ್ಮನ್ನು ಕಾಯುವ ಆಳಿನಂತಾಗಿದೆ” ಎಂದು ಅಪೊಸ್ತಲ ಪೌಲನು ಬರೆದನು. (ಗಲಾತ್ಯ 3:24) ಹೌದು, “ಯೇಸುವಿಗೆ ಸಾಕ್ಷಿಯನ್ನು ಒದಗಿಸುವುದೇ ಪ್ರವಾದಿಸುವುದನ್ನು ಪ್ರೇರಿಸುತ್ತದೆ [ಅಥವಾ, ಪ್ರವಾದನೆಯ ಪೂರ್ಣ ಉದ್ದೇಶ, ಇಂಗಿತ ಮತ್ತು ಆಶಯವಾಗಿದೆ].”​—⁠ಪ್ರಕಟನೆ 19:⁠10, NW.

8 ಯೋಹಾನನ ಸುಸ್ಪಷ್ಟ ಸಾಕ್ಷಿ, ಯೇಸುವಿನ ಅದ್ಭುತಕಾರ್ಯಗಳು ಮತ್ತು ದೈವಿಕ ಗುಣಗಳು ಹಾಗೂ ಶಾಸ್ತ್ರಗಳ ಹೇರಳವಾದ ಸಾಕ್ಷ್ಯ​—⁠ಈ ಎಲ್ಲ ಪುರಾವೆಯು ಯೇಸುವೇ ಮೆಸ್ಸೀಯನೆಂಬುದನ್ನು ನಿಮಗೆ ಮನದಟ್ಟುಮಾಡುವುದಿಲ್ಲವೋ? ದೇವರಿಗಾಗಿ ಮತ್ತು ಆತನ ವಾಕ್ಯಕ್ಕಾಗಿ ನಿಜವಾದ ಪ್ರೀತಿಯಿದ್ದ ಪ್ರತಿಯೊಬ್ಬರೂ ಇದನ್ನು ಸುಲಭವಾಗಿಯೇ ಅರ್ಥಮಾಡಿಕೊಳ್ಳಸಾಧ್ಯವಿತ್ತು ಹಾಗೂ ವಾಗ್ದತ್ತ ಮೆಸ್ಸೀಯನಾಗಿರುವ ಯೇಸುವಿನಲ್ಲಿ ನಂಬಿಕೆಯಿಡಸಾಧ್ಯವಿತ್ತು. ಆದರೆ ಇಸ್ರಾಯೇಲಿನ ನಿವಾಸಿಗಳಲ್ಲಿ ಇಂಥ ಪ್ರೀತಿಯ ಕೊರತೆಯಿತ್ತು. ಯೇಸು ತನ್ನ ವಿರೋಧಿಗಳಿಗೆ “ದೇವರಲ್ಲಿ ನಿಮಗೆ ಪ್ರೀತಿಯಿಲ್ಲವೆಂದು ನನಗೆ ತಿಳಿದದೆ” ಎಂದು ಹೇಳಿದನು. (ಯೋಹಾನ 5:42) “ದೇವರಿಂದ ಬರುವಂಥ ಮಾನವನ್ನು ಅಪೇಕ್ಷಿ”ಸುವುದಕ್ಕೆ ಬದಲಾಗಿ ಅವರು “ಒಬ್ಬರಿಂದೊಬ್ಬರು ಮಾನವನ್ನು ಅಂಗೀಕರಿಸು”ವವರಾಗಿದ್ದರು. ಆದುದರಿಂದ, ತನ್ನ ತಂದೆಯಂತೆಯೇ ಇಂಥ ವಿಚಾರಧಾರೆಯನ್ನು ಹೇಸುತ್ತಿದ್ದ ಯೇಸುವಿನ ಮಾತುಗಳನ್ನು ಅವರು ತಳ್ಳಿಹಾಕಿದ್ದರಲ್ಲಿ ಆಶ್ಚರ್ಯವೇನಿಲ್ಲ.​—⁠ಯೋಹಾನ 5:43, 44; ಅ. ಕೃತ್ಯಗಳು 12:21-23.

ಒಂದು ಪ್ರವಾದನಾ ದರ್ಶನದಿಂದ ನಂಬಿಕೆಯು ಬಲಪಡಿಸಲ್ಪಟ್ಟದ್ದು

9 ತಾನೇ ಮೆಸ್ಸೀಯನು ಎಂಬುದರ ಕುರಿತು ಮೇಲೆ ತಿಳಿಸಲ್ಪಟ್ಟಿರುವ ಪುರಾವೆಯನ್ನು ಯೇಸು ಕೊಟ್ಟು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲವು ಸಂದಿದೆ. ಮತ್ತು ಸಾ.ಶ. 32ರ ಪಸ್ಕಹಬ್ಬದ ಕಾಲಾವಧಿಯು ಮುಗಿದಿದೆ. ಅವನಲ್ಲಿ ನಂಬಿಕೆಯಿಟ್ಟಂಥ ಅನೇಕರು ಅವನನ್ನು ಹಿಂಬಾಲಿಸುವುದನ್ನು ನಿಲ್ಲಿಸಿದ್ದಾರೆ; ಹಿಂಸೆ, ಪ್ರಾಪಂಚಿಕತೆ ಅಥವಾ ಜೀವನದ ಚಿಂತೆಗಳೇ ಇದಕ್ಕೆ ಕಾರಣವಾಗಿರಬಹುದು. ತನ್ನನ್ನು ಅರಸನಾಗಿ ಮಾಡಲಿಕ್ಕಾಗಿರುವ ಜನರ ಪ್ರಯತ್ನಗಳನ್ನು ಯೇಸು ತಳ್ಳಿಹಾಕಿದ ಕಾರಣ ಇನ್ನಿತರರು ಕಸಿವಿಸಿಗೊಳಗಾಗಿದ್ದಾರೆ ಅಥವಾ ನಿರಾಶೆಗೊಂಡಿದ್ದಾರೆ. ಯೆಹೂದಿ ಧಾರ್ಮಿಕ ಮುಖಂಡರಿಂದ ಸವಾಲನ್ನು ಎದುರಿಸಿದಾಗ, ಆತ್ಮಸ್ತುತಿಯನ್ನು ತರುವಂಥ ಒಂದು ಸೂಚಕಕಾರ್ಯವನ್ನು ಆಕಾಶದಲ್ಲಿ ನಡೆಸಲು ಯೇಸು ನಿರಾಕರಿಸಿದನು. (ಮತ್ತಾಯ 12:​38, 39) ಈ ನಿರಾಕರಣೆಯು ಕೆಲವರ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡಿರಬಹುದು. ಅಷ್ಟುಮಾತ್ರವಲ್ಲ, ತನ್ನ ಶಿಷ್ಯರು ಗ್ರಹಿಸಲು ತುಂಬ ಕಷ್ಟಕರವಾಗಿ ಕಂಡುಕೊಳ್ಳುವಂಥ ಒಂದು ವಿಷಯವನ್ನು ಯೇಸು ಅವರಿಗೆ ತಿಳಿಸಲಾರಂಭಿಸಿದ್ದಾನೆ. ಅದು ‘ತಾನು ಯೆರೂಸಲೇಮಿಗೆ ಹೋಗಿ ಅಲ್ಲಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಡುವ’ ಸಂಗತಿಯಾಗಿದೆ.​—⁠ಮತ್ತಾಯ 16:21-23.

10 ಇನ್ನು ಒಂಬತ್ತರಿಂದ ಹತ್ತು ತಿಂಗಳುಗಳಲ್ಲಿ, ಯೇಸು “ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ” ಬರಲಿದೆ. (ಯೋಹಾನ 13:⁠1) ತನ್ನ ನಿಷ್ಠಾವಂತ ಶಿಷ್ಯರ ಕುರಿತು ಬಹಳವಾಗಿ ಚಿಂತಿತನಾಗಿರುವ ಯೇಸು, ಅಪನಂಬಿಗಸ್ತ ಯೆಹೂದ್ಯರ ಮುಂದೆ ಏನನ್ನು ಮಾಡಲು ನಿರಾಕರಿಸಿದನೋ ಅದನ್ನು ಅಂದರೆ ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ಮಾಡುವ ವಾಗ್ದಾನವನ್ನು ಮಾಡುತ್ತಾನೆ. ಯೇಸು ಹೇಳುವುದು: “ನಿಮಗೆ ನಿಜವಾಗಿ ಹೇಳುತ್ತೇನೆ, ಇಲ್ಲಿ ನಿಂತವರೊಳಗೆ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವ ತನಕ ಮರಣಹೊಂದುವದಿಲ್ಲ.” (ಮತ್ತಾಯ 16:28) ತನ್ನ ಶಿಷ್ಯರಲ್ಲಿ ನಿರ್ದಿಷ್ಟವಾಗಿ ಕೆಲವರು 1914ರಲ್ಲಿ ಮೆಸ್ಸೀಯ ರಾಜ್ಯವು ಸ್ಥಾಪಿತವಾಗುವ ತನಕ ಬದುಕುವರು ಎಂದು ಯೇಸು ಹೇಳುತ್ತಿಲ್ಲ ಎಂಬುದು ಸುಸ್ಪಷ್ಟ. ಈ ಸಂದರ್ಭದಲ್ಲಿ ಯೇಸುವಿನ ಮನಸ್ಸಿನಲ್ಲಿದ್ದ ವಿಚಾರವು, ತನ್ನ ಅತಿ ಆಪ್ತ ಶಿಷ್ಯರಲ್ಲಿ ಮೂವರಿಗೆ ರಾಜ್ಯಾಧಿಕಾರದಲ್ಲಿನ ತನ್ನ ಮಹಿಮೆಯ ಪ್ರೇಕ್ಷಣೀಯ ಮುನ್ನೋಟವನ್ನು ಕೊಡುವುದೇ ಆಗಿತ್ತು. ಈ ದರ್ಶನವು ರೂಪಾಂತರವೆಂದು ಕರೆಯಲ್ಪಡುತ್ತದೆ.

11 ಆರು ದಿನಗಳ ಬಳಿಕ, ಯೇಸುವು ಪೇತ್ರನನ್ನೂ ಯಾಕೋಬನನ್ನೂ ಯೋಹಾನನ್ನೂ ಕರೆದುಕೊಂಡು ಎತ್ತರವಾದ ಬೆಟ್ಟಕ್ಕೆ, ಬಹುಶಃ ಹೆರ್ಮೋನ್‌ ಪರ್ವತದ ಒಂದು ದಿಬ್ಬಕ್ಕೆ ಹೋಗುತ್ತಾನೆ. ಅಲ್ಲಿ “ಅವರ ಕಣ್ಣ ಮುಂದೆ [ಯೇಸುವಿನ] ರೂಪ ಬೇರೆಯಾಯಿತು; ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು; ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು.” ಪ್ರವಾದಿಗಳಾದ ಮೋಶೆಯೂ ಎಲೀಯನೂ ಯೇಸುವಿನೊಂದಿಗೆ ಮಾತಾಡುತ್ತಾ ಇರುವುದು ಅವರಿಗೆ ಕಾಣಿಸಿತು. ಈ ಭಯಭಕ್ತಿಪ್ರೇರಕ ಘಟನೆಯು ರಾತ್ರಿ ವೇಳೆಯಲ್ಲಿ ಸಂಭವಿಸಿರಬಹುದಾದ್ದರಿಂದ ಇದು ವಿಶೇಷವಾಗಿ ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ಇದ್ದಿರಬೇಕು. ವಾಸ್ತವದಲ್ಲಿ, ಈ ಘಟನೆಯು ಎಷ್ಟು ನಿಜವಾಗಿ ಕಂಡುಬಂದಿತೆಂದರೆ, ಪೇತ್ರನು ಯೇಸುವಿಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು ಹೀಗೆ ಮೂರು ಪರ್ಣಶಾಲೆಗಳನ್ನು ಕಟ್ಟಲು ಮುಂದೆಬಂದನು. ಪೇತ್ರನು ಇನ್ನೂ ಮಾತಾಡುತ್ತಿರುವಾಗಲೇ ಕಾಂತಿಯುಳ್ಳ ಮೋಡವೊಂದು ಅವರ ಮೇಲೆ ಕವಿಯುತ್ತದೆ ಮತ್ತು ಮೋಡದೊಳಗಿಂದ ಒಂದು ವಾಣಿಯು ಹೀಗೆ ಹೇಳುತ್ತದೆ: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.”​—⁠ಮತ್ತಾಯ 17:1-6.

12 ಅದಕ್ಕೆ ತುಸು ಮುಂಚೆಯಷ್ಟೇ, ಯೇಸುವೇ “ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು” ಎಂಬುದಕ್ಕೆ ಪೇತ್ರನು ಪುರಾವೆ ನೀಡಿದ್ದನು ಎಂಬುದು ನಿಜ. (ಮತ್ತಾಯ 16:16) ಆದರೆ ಸ್ವತಃ ದೇವರೇ ಈ ಪುರಾವೆಯನ್ನು ನೀಡುವುದನ್ನು, ತನ್ನ ಅಭಿಷಿಕ್ತ ಪುತ್ರನ ಗುರುತನ್ನು ಹಾಗೂ ಪಾತ್ರವನ್ನು ದೃಢಪಡಿಸುತ್ತಿರುವುದನ್ನು ಕೇಳಿಸಿಕೊಳ್ಳುವುದನ್ನು ತುಸು ಊಹಿಸಿಕೊಳ್ಳಿರಿ! ಪೇತ್ರನಿಗೆ, ಯಾಕೋಬನಿಗೆ ಮತ್ತು ಯೋಹಾನನಿಗೆ ರೂಪಾಂತರದ ದರ್ಶನವು ಎಷ್ಟು ನಂಬಿಕೆವರ್ಧಕ ಅನುಭವವಾಗಿದೆ! ಹೀಗೆ ಅವರ ನಂಬಿಕೆಯು ಬಹಳವಾಗಿ ಬಲಪಡಿಸಲ್ಪಟ್ಟದ್ದರಿಂದ, ಮುಂದೆ ಏನು ಕಾದಿದೆಯೋ ಅದಕ್ಕಾಗಿ ಮತ್ತು ಭಾವೀ ಸಭೆಯಲ್ಲಿ ಅವರು ನಿರ್ವಹಿಸಲಿರುವ ಪ್ರಮುಖ ಪಾತ್ರಕ್ಕಾಗಿ ಈಗ ಅವರು ಹೆಚ್ಚು ಸನ್ನದ್ಧರಾಗಿದ್ದಾರೆ.

13 ರೂಪಾಂತರದ ದರ್ಶನವು ಶಿಷ್ಯರ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿತು. ಸುಮಾರು 30 ವರ್ಷಗಳ ಬಳಿಕ ಪೇತ್ರನು ಬರೆಯುವುದು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ಮೆಚ್ಚಿದ್ದೇನೆ ಎಂಬಂಥ ವಾಣಿಯು ಸರ್ವೋತ್ಕೃಷ್ಟಪ್ರಭಾವದಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಘನಮಾನಗಳನ್ನು ಹೊಂದಿದನಲ್ಲವೇ. ನಾವು ಪರಿಶುದ್ಧಪರ್ವತದ ಮೇಲೆ ಆತನ ಸಂಗಡ ಇದ್ದಾಗ ಆಕಾಶದಿಂದ ಬಂದ ಆ ವಾಣಿಯನ್ನು ನಾವೇ ಕೇಳಿದೆವು.” (2 ಪೇತ್ರ 1:17, 18) ಯೋಹಾನನು ಸಹ ಈ ಘಟನೆಯಿಂದ ಬಹಳಷ್ಟು ಪ್ರಭಾವಿತನಾಗಿದ್ದಾನೆ. ಈ ಘಟನೆಯು ಸಂಭವಿಸಿ 60ಕ್ಕಿಂತಲೂ ಹೆಚ್ಚು ವರ್ಷಗಳು ಕಳೆದ ಬಳಿಕ ಅವನು ಅದನ್ನು ಸೂಚಿಸುತ್ತಾ ಈ ಮಾತುಗಳನ್ನಾಡಿದನು: “ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ.” (ಯೋಹಾನ 1:14) ಆದರೂ, ಯೇಸುವಿನ ಹಿಂಬಾಲಕರಿಗೆ ಕೊಡಲ್ಪಟ್ಟ ದರ್ಶನಗಳಲ್ಲಿ ರೂಪಾಂತರವು ಕಟ್ಟಕಡೆಯದ್ದಾಗಿರಲಿಲ್ಲ.

ದೇವರ ನಿಷ್ಠಾವಂತರಿಗೆ ಇನ್ನೂ ಹೆಚ್ಚಿನ ಜ್ಞಾನೋದಯ

14 ತನ್ನ ಪುನರುತ್ಥಾನದ ಬಳಿಕ ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಾನೆ. ಅಲ್ಲಿ ಅವನು ಪೇತ್ರನಿಗೆ ಹೇಳುವುದು: “ನಾನು ಬರುವ ತನಕ ಇವನು [ಯೋಹಾನನು] ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” (ಯೋಹಾನ 21:1, 20-22, 24) ಅಪೊಸ್ತಲ ಯೋಹಾನನು ಇತರ ಅಪೊಸ್ತಲರಿಗಿಂತಲೂ ಹೆಚ್ಚು ಕಾಲ ಬದುಕುತ್ತಾನೆ ಎಂಬುದನ್ನು ಈ ಮಾತುಗಳು ಸೂಚಿಸುತ್ತವೋ? ಹೌದು ಎಂಬುದು ಸುವ್ಯಕ್ತ, ಏಕೆಂದರೆ ಅವನು ಇನ್ನೂ ಸುಮಾರು 70 ವರ್ಷಕಾಲ ಬದುಕಿದನು ಮತ್ತು ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡಿದನು. ಆದರೆ ಯೇಸುವಿನ ಹೇಳಿಕೆಯಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿದೆ.

15 “ನಾನು ಬರುವ ತನಕ” ಎಂಬ ಅಭಿವ್ಯಕ್ತಿಯು, ‘ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವುದಕ್ಕೆ’ ಯೇಸು ಸೂಚಿಸಿ ಮಾತಾಡಿದ್ದನ್ನು ನಮ್ಮ ನೆನಪಿಗೆ ತರುತ್ತದೆ. (ಮತ್ತಾಯ 16:28) ಸಮಯಾನಂತರ ರಾಜ್ಯಾಧಿಕಾರದಲ್ಲಿ ಯೇಸು ಬರುವುದರ ಕುರಿತಾದ ಒಂದು ಪ್ರವಾದನಾ ದರ್ಶನವು ಯೋಹಾನನಿಗೆ ಕೊಡಲ್ಪಡುವ ಅರ್ಥದಲ್ಲಿ ಅವನು ಯೇಸು ಬರುವ ತನಕ ಉಳಿಯಲಿದ್ದನು. ತನ್ನ ಜೀವನಾವಧಿಯ ಅಂತ್ಯದಲ್ಲಿ ಯೋಹಾನನು ಪತ್ಮೋಸ್‌ ದ್ವೀಪದಲ್ಲಿ ಬಂಧಿವಾಸದಲ್ಲಿದ್ದಾಗ, “ಕರ್ತನ ದಿನದಲ್ಲಿ” ಸಂಭವಿಸಲಿಕ್ಕಿರುವ ಘಟನೆಗಳ ಪ್ರಕಟನೆಯನ್ನೂ ಅದ್ಭುತಕರವಾದ ಪ್ರವಾದನಾ ಸೂಚನೆಗಳನ್ನೂ ಪಡೆದುಕೊಳ್ಳುತ್ತಾನೆ. ಈ ನಯನಮನೋಹರ ದರ್ಶನಗಳಿಂದ ಯೋಹಾನನು ಎಷ್ಟರ ಮಟ್ಟಿಗೆ ಪ್ರಭಾವಿಸಲ್ಪಡುತ್ತಾನೆಂದರೆ, “ನಿಜವಾಗಿ ಬೇಗ ಬರುತ್ತೇನೆ” ಎಂದು ಯೇಸು ಹೇಳಿದಾಗ, “ಹಾಗೆಯೇ ಆಗಲಿ; ಕರ್ತನಾದ ಯೇಸುವೇ ಬಾ” ಎಂದು ಅವನು ಉದ್ಗರಿಸುತ್ತಾನೆ.​—⁠ಪ್ರಕಟನೆ 1:​1, 10; 22:⁠20.

16 ಪ್ರಥಮ ಶತಮಾನದಲ್ಲಿ ಜೀವಿಸುತ್ತಿದ್ದ ಪ್ರಾಮಾಣಿಕ ಹೃದಯದ ಜನರು ಯೇಸುವನ್ನು ಮೆಸ್ಸೀಯನಾಗಿ ಅಂಗೀಕರಿಸಿದರು ಮತ್ತು ಅವನಲ್ಲಿ ನಂಬಿಕೆಯಿಟ್ಟರು. ಯಾರು ವಿಶ್ವಾಸಿಗಳಾಗಿ ಪರಿಣಮಿಸಿದರೋ ಅಂಥ ವ್ಯಕ್ತಿಗಳ ಸುತ್ತಲೂ ಇದ್ದ ಜನರಲ್ಲಿ ಕಂಡುಬರುತ್ತಿದ್ದ ನಂಬಿಕೆಯ ಕೊರತೆ, ಆ ವಿಶ್ವಾಸಿಗಳು ಮಾಡಬೇಕಾಗಿರುವ ಕೆಲಸ ಮತ್ತು ಅವರ ಮುಂದಿರುವ ಪರೀಕ್ಷೆಗಳನ್ನು ಪರಿಗಣಿಸುವಾಗ, ಅವರು ತಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವ ಅಗತ್ಯವಿತ್ತು. ಯೇಸುವು ತಾನೇ ಮೆಸ್ಸೀಯನು ಎಂಬ ವಿಷಯದಲ್ಲಿ ಸಾಕಷ್ಟು ರುಜುವಾತನ್ನು ನೀಡಿದ್ದಾನೆ ಮತ್ತು ತನ್ನ ನಿಷ್ಠಾವಂತ ಹಿಂಬಾಲಕರ ಪ್ರೋತ್ಸಾಹಕ್ಕಾಗಿ ಜ್ಞಾನೋದಯವನ್ನು ಉಂಟುಮಾಡುವಂಥ ಪ್ರವಾದನಾ ದರ್ಶನಗಳನ್ನು ಒದಗಿಸಿದ್ದಾನೆ. ಇಂದು ನಾವು “ಕರ್ತನ ದಿನದಲ್ಲಿ” ಬಹಳ ದೂರ ಸಾಗಿದ್ದೇವೆ. ಅತಿ ಬೇಗನೆ, ಕ್ರಿಸ್ತನು ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುವನು ಮತ್ತು ದೇವಜನರನ್ನು ಬಿಡುಗಡೆಮಾಡುವನು. ನಮ್ಮ ಆಧ್ಯಾತ್ಮಿಕ ಹಿತಕ್ಷೇಮಕ್ಕಾಗಿ ಯೆಹೋವನು ಮಾಡಿರುವ ಎಲ್ಲ ಒದಗಿಸುವಿಕೆಗಳನ್ನು ಪೂರ್ಣ ರೀತಿಯಲ್ಲಿ ಸದುಪಯೋಗಿಸುವ ಮೂಲಕ ನಾವು ಸಹ ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಬೇಕು.

ಅಂಧಕಾರ ಮತ್ತು ಸಂಕಟದಿಂದ ಸಂರಕ್ಷಿಸಲ್ಪಟ್ಟದ್ದು

17 ಯೇಸುವಿನ ಮರಣಾನಂತರ, “ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು” ಎಂಬ ಅವನ ಆಜ್ಞೆಗೆ ಶಿಷ್ಯರು ಧೈರ್ಯದಿಂದ ವಿಧೇಯರಾದರು. (ಅ. ಕೃತ್ಯಗಳು 1:8) ತೀವ್ರವಾದ ಹಿಂಸಾವಧಿಗಳ ಮಧ್ಯೆಯೂ ಯೆಹೋವನು ಹೊಸದಾಗಿ ಸ್ಥಾಪಿತವಾಗಿದ್ದ ಕ್ರೈಸ್ತ ಸಭೆಯನ್ನು ಆಧ್ಯಾತ್ಮಿಕ ಜ್ಞಾನೋದಯದಿಂದ ಮತ್ತು ಅನೇಕ ಹೊಸ ಶಿಷ್ಯರಿಂದ ಆಶೀರ್ವದಿಸಿದನು.​—⁠ಅ. ಕೃತ್ಯಗಳು 2:47; 4:1-31; 8:1-8.

18 ಇನ್ನೊಂದು ಕಡೆಯಲ್ಲಿ, ಯಾರು ಸುವಾರ್ತೆಯನ್ನು ವಿರೋಧಿಸುತ್ತಾರೋ ಅಂಥವರ ಪ್ರತೀಕ್ಷೆಗಳು ಕ್ರಮೇಣ ಕೆಟ್ಟವುಗಳಾಗುತ್ತಾ ಹೋಗುತ್ತವೆ. “ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು” ಎಂದು ಜ್ಞಾನೋಕ್ತಿ 4:19 ತಿಳಿಸುತ್ತದೆ. ಸಾ.ಶ. 66ರಲ್ಲಿ ರೋಮನ್‌ ಸೈನ್ಯಗಳು ಯೆರೂಸಲೇಮನ್ನು ಮುತ್ತಿಗೆಹಾಕಿದಾಗ ಆ ‘ಕತ್ತಲೆಯು’ ಇನ್ನಷ್ಟು ಹೆಚ್ಚಿತು. ಯಾವುದೋ ಅವ್ಯಕ್ತ ಕಾರಣಕ್ಕಾಗಿ ತಾತ್ಕಾಲಿಕವಾಗಿ ಮುತ್ತಿಗೆಯನ್ನು ಹಿಂದೆಗೆದುಕೊಂಡ ರೋಮನ್‌ ಸೈನಿಕರು ಸಾ.ಶ. 70ರಲ್ಲಿ ಹಿಂದಿರುಗಿ ಬಂದರು ಮತ್ತು ಈ ಸಲ ಇಡೀ ಪಟ್ಟಣವನ್ನೇ ಧ್ವಂಸಗೊಳಿಸಿದರು. ಯೆಹೂದಿ ಇತಿಹಾಸಕಾರನಾದ ಜೋಸೀಫಸನಿಗನುಸಾರ, ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಹತರಾದರು. ಆದರೆ, ನಂಬಿಗಸ್ತ ಕ್ರೈಸ್ತರು ತಪ್ಪಿಸಿಕೊಂಡರು. ಏಕೆ? ಏಕೆಂದರೆ ಮೊದಲ ಮುತ್ತಿಗೆಯು ಹಿಂದೆಗೆಯಲ್ಪಟ್ಟಾಗ, ಪಲಾಯನಗೈಯುವಂತೆ ಯೇಸು ಕೊಟ್ಟ ಆಜ್ಞೆಗೆ ಅವರು ವಿಧೇಯರಾದರು.​—⁠ಲೂಕ 21:​20-22.

19 ನಮ್ಮ ಸನ್ನಿವೇಶವೂ ತದ್ರೀತಿಯಲ್ಲಿದೆ. ಬರಲಿರುವ ಮಹಾ ಸಂಕಟವು ಸೈತಾನನ ಇಡೀ ದುಷ್ಟ ವ್ಯವಸ್ಥೆಯ ಅಂತ್ಯವನ್ನು ಸೂಚಿಸುವುದು. ಆದರೆ ದೇವಜನರು ಭಯಪಡುವ ಅಗತ್ಯವಿಲ್ಲ, ಏಕೆಂದರೆ ಯೇಸು ವಾಗ್ದಾನಿಸಿದ್ದು: “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 28:20) ತನ್ನ ಆರಂಭದ ಶಿಷ್ಯರ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಹಾಗೂ ಮುಂದೆ ಏನು ಕಾದಿದೆಯೋ ಅದಕ್ಕಾಗಿ ಅವರನ್ನು ಸಿದ್ಧಪಡಿಸಲಿಕ್ಕಾಗಿ ಯೇಸು, ಮೆಸ್ಸೀಯ ಅರಸನಾಗಿರುವ ತನ್ನ ಸ್ವರ್ಗೀಯ ಮಹಿಮೆಯ ಮುನ್ನೋಟವನ್ನು ಅವರಿಗೆ ನೀಡಿದನು. ಇಂದಿನ ಕುರಿತಾಗಿ ಏನು? ಇಸವಿ 1914ರಲ್ಲಿ ಆ ಮುನ್ನೋಟವು ವಾಸ್ತವಿಕತೆಯಾಗಿ ಪರಿಣಮಿಸಿತು. ಮತ್ತು ಇದು ದೇವಜನರಿಗೆ ನಂಬಿಕೆಯನ್ನು ಬಲಪಡಿಸುವ ಎಂಥ ವಾಸ್ತವಿಕತೆಯಾಗಿದೆ! ಇದು ಅದ್ಭುತಕರವಾದ ಒಂದು ಭವಿಷ್ಯತ್ತಿನ ವಾಗ್ದಾನವನ್ನು ನೀಡುತ್ತದೆ, ಮತ್ತು ಈ ವಾಸ್ತವಿಕತೆಯ ವಿಷಯದಲ್ಲಿ ಯೆಹೋವನ ಸೇವಕರಿಗೆ ಪ್ರಗತಿಪರ ರೀತಿಯಲ್ಲಿ ಒಳನೋಟವು ಒದಗಿಸಲ್ಪಡುತ್ತಾ ಇದೆ. ಅಂಧಕಾರದತ್ತ ಮುನ್ನುಗ್ಗುತ್ತಿರುವ ಇಂದಿನ ಲೋಕದ ಮಧ್ಯದಲ್ಲಿ, “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.”​—⁠ಜ್ಞಾನೋಕ್ತಿ 4:⁠18.

20 ಇಸವಿ 1914ಕಕ್ಕೆ ಮೊದಲೇ, ಅಭಿಷಿಕ್ತ ಕ್ರೈಸ್ತರ ಒಂದು ಚಿಕ್ಕ ಗುಂಪು ಕರ್ತನ ಹಿಂದಿರುಗುವಿಕೆಯ ಕುರಿತಾದ ಪ್ರಮುಖ ಸತ್ಯಗಳನ್ನು ಗ್ರಹಿಸಲಾರಂಭಿಸಿತು. ಉದಾಹರಣೆಗೆ, ಸಾ.ಶ. 33ರಲ್ಲಿ ಯೇಸು ಸ್ವರ್ಗಕ್ಕೇರಿಹೋಗುತ್ತಿದ್ದಾಗ ಶಿಷ್ಯರಿಗೆ ಕಾಣಿಸಿಕೊಂಡ ಇಬ್ಬರು ದೇವದೂತರಿಂದ ಸೂಚಿಸಲ್ಪಟ್ಟಂತೆ, ಕರ್ತನ ಹಿಂದಿರುಗುವಿಕೆಯು ಅದೃಶ್ಯವಾಗಿರುವುದು ಎಂಬುದನ್ನು ಅವರು ವಿವೇಚಿಸಿ ತಿಳಿದುಕೊಂಡರು. ಮೋಡವು ಕವಿದುಕೊಂಡು ಯೇಸು ತನ್ನ ಶಿಷ್ಯರ ಕಣ್ಣಿಗೆ ಮರೆಯಾದಾಗ ದೇವದೂತರು ಹೇಳಿದ್ದು: “ನಿಮ್ಮ ಬಳಿಯಿಂದ ಆಕಾಶದೊಳಕ್ಕೆ ಸೇರಿಸಲ್ಪಟ್ಟಿರುವ ಈ ಯೇಸು ಯಾವ ರೀತಿಯಲ್ಲಿ ಆಕಾಶದೊಳಕ್ಕೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ ಬರುವನು.”​—⁠ಅ. ಕೃತ್ಯಗಳು 1:9-11.

21 ಯೇಸುವಿನ ನಿರ್ಗಮನವನ್ನು ಅವನ ನಿಷ್ಠಾವಂತ ಹಿಂಬಾಲಕರು ಮಾತ್ರ ನೋಡಶಕ್ತರಾದರು. ರೂಪಾಂತರದ ದರ್ಶನದಂತೆಯೇ ಈ ಘಟನೆಯೂ ಸಾರ್ವಜನಿಕರ ಕಣ್ಣಿಗೆ ಬೀಳುವಂಥ ರೀತಿಯಲ್ಲಿ ನಡೆಯಲಿಲ್ಲ; ಏನು ಸಂಭವಿಸಿತ್ತೆಂಬುದರ ಬಗ್ಗೆ ಸಾಮಾನ್ಯ ಜಗತ್ತಿಗೆ ಅರಿವೇ ಇರಲಿಲ್ಲ. ಕ್ರಿಸ್ತನು ತನ್ನ ರಾಜ್ಯಾಧಿಕಾರದಲ್ಲಿ ಹಿಂದಿರುಗುವಾಗ ಇದೇ ರೀತಿ ಸಂಭವಿಸುವುದು. (ಯೋಹಾನ 14:19) ಅವನ ನಂಬಿಗಸ್ತ ಅಭಿಷಿಕ್ತ ಶಿಷ್ಯರು ಮಾತ್ರ ಅವನ ರಾಜವೈಭವದ ಸಾನ್ನಿಧ್ಯವನ್ನು ಮನಗಾಣುವರು. ಮುಂದಿನ ಲೇಖನದಲ್ಲಿ, ಈ ಒಳನೋಟವು ಅವರ ಮೇಲೆ ಹೇಗೆ ಗಾಢವಾದ ಪರಿಣಾಮವನ್ನು ಬೀರುವುದು ಮತ್ತು ಯೇಸುವಿನ ಭೂಪ್ರಜೆಗಳಾಗುವವರನ್ನು ಒಟ್ಟುಗೂಡಿಸುವುದರಲ್ಲಿ ಪರಮಾವಧಿಗೇರಿಸಲ್ಪಡುವುದು ಎಂಬುದನ್ನು ನಾವು ನೋಡುವೆವು.​—⁠ಪ್ರಕಟನೆ 7:​9, 14.

[ಪಾದಟಿಪ್ಪಣಿ]

^ ಪ್ಯಾರ. 8 ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಯೋಹಾನನು ಮಾತ್ರ ದೇವರ ಧ್ವನಿಯನ್ನು ಕೇಳಿಸಿಕೊಂಡಿದ್ದನು ಎಂಬುದು ಸುವ್ಯಕ್ತ. ಯೇಸು ಯಾರನ್ನು ಸಂಬೋಧಿಸಿ ಮಾತಾಡುತ್ತಿದ್ದಾನೋ ಆ ಯೆಹೂದ್ಯರು “ಎಂದಾದರೂ [ದೇವರ] ಧ್ವನಿಯನ್ನು ಕೇಳಿದ್ದೂ ಇಲ್ಲ, ಆತನ ರೂಪವನ್ನು ನೋಡಿದ್ದೂ ಇಲ್ಲ.”​—⁠ಯೋಹಾನ 5:⁠37.

ಜ್ಞಾಪಿಸಿಕೊಳ್ಳಬಲ್ಲಿರೋ?

• ಸಬ್ಬತ್‌ ನಿಯಮವನ್ನು ಉಲ್ಲಂಘಿಸಿದವನು ಹಾಗೂ ದೇವದೂಷಕನು ಎಂದು ಯೇಸುವಿನ ಮೇಲೆ ಆರೋಪ ಹೊರಿಸಿದಾಗ, ತಾನೇ ಮೆಸ್ಸೀಯನೆಂಬುದನ್ನು ತೋರಿಸಲು ಅವನು ಯಾವ ಪುರಾವೆಯನ್ನು ನೀಡಿದನು?

• ಯೇಸುವಿನ ಆರಂಭದ ಶಿಷ್ಯರು ರೂಪಾಂತರದ ದರ್ಶನದಿಂದ ಹೇಗೆ ಪ್ರಯೋಜನವನ್ನು ಪಡೆದರು?

• ತಾನು ಬರುವ ತನಕ ಯೋಹಾನನು ಇರುವನು ಎಂದು ಯೇಸು ಹೇಳಿದಾಗ, ಅವನ ಮಾತುಗಳ ಅರ್ಥವೇನಾಗಿತ್ತು?

• ಇಸವಿ 1914ರಲ್ಲಿ ಯಾವ ಮುನ್ನೋಟವು ವಾಸ್ತವಿಕತೆಯಾಗಿ ಪರಿಣಮಿಸಿತು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಸಾಮಾನ್ಯ ಶಕ 29ರಿಂದ ಆರಂಭಿಸಿ, ಇಸ್ರಾಯೇಲಿನ ನಿವಾಸಿಗಳು ಯಾವ ನಿರ್ಣಯವನ್ನು ಎದುರಿಸಿದರು? (ಬಿ) ಈ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

3. ತಾನು ಯಾರಾಗಿದ್ದೇನೆ ಎಂಬ ವಿಷಯದಲ್ಲಿ ಪುರಾವೆಯನ್ನು ನೀಡುವಂತೆ ಯಾವ ಸನ್ನಿವೇಶಗಳು ಯೇಸುವನ್ನು ಮುನ್ನಡಿಸಿದವು?

4, 5. ಯೋಹಾನನ ಶುಶ್ರೂಷೆಯ ಉದ್ದೇಶವೇನಾಗಿತ್ತು, ಮತ್ತು ಅವನು ಅದನ್ನು ಎಷ್ಟು ಸಮರ್ಪಕವಾಗಿ ಪೂರೈಸಿದನು?

6. ಯೇಸುವಿಗೆ ದೇವರ ಬೆಂಬಲವಿತ್ತು ಎಂಬುದನ್ನು ಅವನ ಕೆಲಸಗಳು ಜನರಿಗೆ ಮನಗಾಣಿಸಬೇಕಿತ್ತು ಏಕೆ?

7. ಹೀಬ್ರು ಶಾಸ್ತ್ರವಚನಗಳು ಯೇಸುವಿನ ಬಗ್ಗೆ ಹೇಗೆ ಸಾಕ್ಷಿಯನ್ನು ಕೊಡುತ್ತವೆ?

8. ಅನೇಕ ಯೆಹೂದ್ಯರು ಮೆಸ್ಸೀಯನಲ್ಲಿ ಏಕೆ ನಂಬಿಕೆಯಿಡಲಿಲ್ಲ?

9, 10. (ಎ) ಯೇಸುವಿನ ಶಿಷ್ಯರಿಗೆ ತೋರಿಸಲ್ಪಟ್ಟ ಸೂಚಕಕಾರ್ಯವು ಸಮಯೋಚಿತವಾಗಿತ್ತೇಕೆ? (ಬಿ) ಯೇಸು ತನ್ನ ಶಿಷ್ಯರಿಗೆ ಯಾವ ಗಮನಾರ್ಹ ವಾಗ್ದಾನವನ್ನು ಮಾಡಿದನು?

11. ರೂಪಾಂತರದ ದರ್ಶನವನ್ನು ವರ್ಣಿಸಿರಿ.

12, 13. ರೂಪಾಂತರದ ದರ್ಶನವು ಯೇಸುವಿನ ಶಿಷ್ಯರ ಮೇಲೆ ಯಾವ ಪ್ರಭಾವವನ್ನು ಬೀರಿತು, ಮತ್ತು ಏಕೆ?

14, 15. ಅಪೊಸ್ತಲ ಯೋಹಾನನು ಯಾವ ಅರ್ಥದಲ್ಲಿ ಯೇಸು ಬರುವ ತನಕ ಇರಲಿದ್ದನು?

16. ನಮ್ಮ ನಂಬಿಕೆಯನ್ನು ನಾವು ಬಲಪಡಿಸಿಕೊಳ್ಳುತ್ತಾ ಇರುವುದು ಏಕೆ ಪ್ರಾಮುಖ್ಯವಾಗಿದೆ?

17, 18. ಪ್ರಥಮ ಶತಮಾನದಲ್ಲಿ ಯೇಸುವಿನ ಹಿಂಬಾಲಕರು ಮತ್ತು ದೇವರ ಉದ್ದೇಶವನ್ನು ವಿರೋಧಿಸುತ್ತಿದ್ದವರ ನಡುವೆ ಯಾವ ಭಿನ್ನತೆಯು ಅಸ್ತಿತ್ವದಲ್ಲಿತ್ತು, ಮತ್ತು ಪ್ರತಿಯೊಂದು ಗುಂಪಿಗೂ ಯಾವ ಪರಿಣಾಮವುಂಟಾಯಿತು?

19, 20. (ಎ) ಸದ್ಯದ ವ್ಯವಸ್ಥೆಯು ತನ್ನ ಅಂತ್ಯವನ್ನು ಸಮೀಪಿಸುತ್ತಿರುವಾಗ, ದೇವಜನರಿಗೆ ಭಯಪಡಲು ಯಾವುದೇ ಕಾರಣವಿಲ್ಲವೇಕೆ? (ಬಿ) ಇಸವಿ 1914ಕಕ್ಕೆ ಮುಂಚಿನ ದಶಕಗಳಲ್ಲಿ ಯೆಹೋವನು ತನ್ನ ಜನರಿಗೆ ಯಾವ ಗಮನಾರ್ಹ ಒಳನೋಟವನ್ನು ನೀಡಿದನು?

21. ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

[ಪುಟ 10ರಲ್ಲಿರುವ ಚಿತ್ರಗಳು]

ತಾನೇ ಮೆಸ್ಸೀಯನೆಂಬುದಕ್ಕೆ ಯೇಸು ರುಜುವಾತನ್ನು ಕೊಟ್ಟನು

[ಪುಟ 12ರಲ್ಲಿರುವ ಚಿತ್ರ]

ರೂಪಾಂತರದ ದರ್ಶನವು ನಂಬಿಕೆಯನ್ನು ಬಲಪಡಿಸುವಂಥದ್ದಾಗಿತ್ತು

[ಪುಟ 13ರಲ್ಲಿರುವ ಚಿತ್ರ]

ಯೇಸು ‘ಬರುವ’ ತನಕ ಯೋಹಾನನು ಇರಲಿದ್ದನು