ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಅದೃಷ್ಟವನ್ನು ನೀವು ನಿಯಂತ್ರಿಸಬಲ್ಲಿರೊ?

ನಿಮ್ಮ ಅದೃಷ್ಟವನ್ನು ನೀವು ನಿಯಂತ್ರಿಸಬಲ್ಲಿರೊ?

ನಿಮ್ಮ ಅದೃಷ್ಟವನ್ನು ನೀವು ನಿಯಂತ್ರಿಸಬಲ್ಲಿರೊ?

ನಮ್ಮ ಅಂತಿಮ ಅದೃಷ್ಟವನ್ನು ಮುಂಚಿತವಾಗಿಯೇ ನಿರ್ಧರಿಸಲಾಗಿದೆಯೆ? ಜೀವನದಲ್ಲಿ ನಾವು ಮಾಡುವ ಆಯ್ಕೆಗಳು ನಮ್ಮ ಭವಿಷ್ಯತ್ತಿನ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲವೊ?

ಒಬ್ಬ ಮಾನವನು ತನ್ನ ಅದೃಷ್ಟವನ್ನು ನಿಯಂತ್ರಿಸಲು ಶಕ್ತನಾಗಿದ್ದಾನೆಂದಿಟ್ಟುಕೊಳ್ಳಿ. ಹೀಗಿರುವಾಗ, ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು ಅಥವಾ ನಿಗದಿತವಾದ ಜವಾಬ್ದಾರಿಯುತ ಸ್ಥಾನದಲ್ಲಿರಲು ಯಾವುದೇ ವ್ಯಕ್ತಿಯು ಮೊದಲೇ ನಿಶ್ಚಯಿಸಲ್ಪಟ್ಟಿರುತ್ತಾನೊ? ಮತ್ತು ಮಾನವರಿಗೆ ತಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವಿರುವಲ್ಲಿ, ಭೂಮಿಗಾಗಿರುವ ತನ್ನ ಚಿತ್ತವನ್ನು ದೇವರು ಹೇಗೆ ಪೂರೈಸಸಾಧ್ಯವಿದೆ? ಬೈಬಲ್‌ ಈ ಪ್ರಶ್ನೆಗಳಿಗೆ ಸಂತೃಪ್ತಿಕರವಾದ ಉತ್ತರಗಳನ್ನು ಒದಗಿಸುತ್ತದೆ.

ಪೂರ್ವಾದೃಷ್ಟ ಮತ್ತು ಇಚ್ಛಾಸ್ವಾತಂತ್ರ್ಯ—⁠ಎರಡೂ ವಿಚಾರಧಾರೆಗಳು ಸರಿಯಾಗಿರಲು ಸಾಧ್ಯವೊ?

ಯೆಹೋವ ದೇವರು ನಮ್ಮನ್ನು ಹೇಗೆ ಉಂಟುಮಾಡಿದನು ಎಂಬುದನ್ನು ಪರಿಗಣಿಸಿರಿ. “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; . . . ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು” ಎಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 1:27) ನಾವು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿರುವುದರಿಂದ, ಪ್ರೀತಿ, ನ್ಯಾಯ, ವಿವೇಕ ಮತ್ತು ಶಕ್ತಿಯಂಥ ಆತನ ಗುಣಗಳನ್ನು ಪ್ರತಿಬಿಂಬಿಸುವ ಸಾಮರ್ಥ್ಯ ನಮಗಿದೆ. ದೇವರು ನಮಗೆ ಇಚ್ಛಾಸ್ವಾತಂತ್ರ್ಯವನ್ನು ಅಥವಾ ಆಯ್ಕೆಮಾಡುವ ಸ್ವಾತಂತ್ರ್ಯವನ್ನು ಸಹ ಕೊಟ್ಟಿದ್ದಾನೆ. ಇದು ನಮ್ಮನ್ನು ಆತನ ಭೂಸೃಷ್ಟಿಜೀವಿಗಳಲ್ಲೇ ತೀರ ಭಿನ್ನರಾಗಿರುವಂತೆ ಮಾಡುತ್ತದೆ. ದೇವರ ನೈತಿಕ ಮಾರ್ಗದರ್ಶನವನ್ನು ನಾವು ಅನುಸರಿಸುವೆವೋ ಇಲ್ಲವೋ ಎಂಬ ಆಯ್ಕೆಯು ನಮಗೆ ಬಿಡಲ್ಪಟ್ಟದ್ದಾಗಿದೆ. ಆದುದರಿಂದಲೇ ಪ್ರವಾದಿಯಾದ ಮೋಶೆಯು ಹೀಗೆ ಹೇಳಸಾಧ್ಯವಿತ್ತು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ.”​—⁠ಧರ್ಮೋಪದೇಶಕಾಂಡ 30:19, 20.

ಆದರೂ, ಆಯ್ಕೆಮಾಡುವ ಸ್ವಾತಂತ್ರ್ಯದ ಕೊಡುಗೆಯು ಸಂಪೂರ್ಣ ಸ್ವಾತಂತ್ರ್ಯವನ್ನು ಅರ್ಥೈಸುವುದಿಲ್ಲ. ವಿಶ್ವದ ಸ್ಥಿರತೆ ಮತ್ತು ಶಾಂತಿಗಾಗಿ ದೇವರು ಸ್ಥಾಪಿಸಿರುವ ಭೌತಿಕ ಮತ್ತು ನೈತಿಕ ನಿಯಮಗಳಿಂದ ಇದು ನಮ್ಮನ್ನು ಸ್ವತಂತ್ರಗೊಳಿಸುವುದಿಲ್ಲ. ಈ ನಿಯಮಗಳು ನಮ್ಮ ಒಳಿತಿಗಾಗಿಯೇ ಸ್ಥಾಪಿಸಲ್ಪಟ್ಟವು, ಮತ್ತು ಇವುಗಳನ್ನು ಉಲ್ಲಂಘಿಸುವುದು ಗಂಭೀರವಾದ ಫಲಿತಾಂಶಗಳಿಗೆ ಮುನ್ನಡಿಸಸಾಧ್ಯವಿದೆ. ಒಂದುವೇಳೆ ನಾವು ಗುರುತ್ವಾಕರ್ಷಣೆಯ ನಿಯಮವನ್ನು ಅಲಕ್ಷಿಸಿ, ಎತ್ತರವಾದ ಕಟ್ಟಡದಿಂದ ಕೆಳಗೆ ಧುಮುಕುವ ಆಯ್ಕೆಯನ್ನು ಮಾಡುವಲ್ಲಿ ಏನು ಸಂಭವಿಸಸಾಧ್ಯವಿದೆ ಎಂಬುದರ ಕುರಿತು ತುಸು ಆಲೋಚಿಸಿರಿ!​—⁠ಗಲಾತ್ಯ 6:⁠7.

ನಮಗಿರುವ ಆಯ್ಕೆಯನ್ನು ಮಾಡುವ ಸ್ವಾತಂತ್ರ್ಯವು, ಇಂಥ ಸ್ವಾತಂತ್ರ್ಯವನ್ನು ಹೊಂದಿಲ್ಲದಿರುವಂಥ ಸೃಷ್ಟಿಜೀವಿಗಳಿಗೆ ಇಲ್ಲದಿರುವ ಕೆಲವು ಜವಾಬ್ದಾರಿಗಳನ್ನು ನಮ್ಮ ಮೇಲೆ ಹೊರಿಸುತ್ತದೆ. ಲೇಖಕರಾದ ಕಾರ್ಲಸ್‌ ಲಾಮಾಂಟ್‌ ಹೀಗೆ ಕೇಳುತ್ತಾರೆ: “ಮಾನವರ ಆಯ್ಕೆಗಳು ಮತ್ತು ಕ್ರಿಯೆಗಳು ಪೂರ್ವನಿರ್ಧರಿತವಾಗಿವೆ ಎಂಬ ವಿಚಾರವನ್ನು . . . ನಾವು ಸಮ್ಮತಿಸುವುದಾದರೆ, ನೈತಿಕ ಜವಾಬ್ದಾರಿ ಮಾನವರಿಗೆ ಸೇರಿದ್ದು ಎಂದು ನಾವು ಹೇಗೆ ಹೇಳಸಾಧ್ಯವಿದೆ ಮತ್ತು ತಪ್ಪುಗೈಯುವಿಕೆಗಾಗಿ ಅವರನ್ನು ಹೇಗೆ ಶಿಕ್ಷಿಸಸಾಧ್ಯವಿದೆ?” ಖಂಡಿತವಾಗಿಯೂ ನಾವು ಹೀಗೆ ಮಾಡಸಾಧ್ಯವಿಲ್ಲ. ಸಹಜಪ್ರವೃತ್ತಿಯಿಂದ ಪ್ರಚೋದಿತವಾದ ಪ್ರಾಣಿಗಳು ಏನೇ ಮಾಡಿದರೂ ಅವು ನೈತಿಕವಾಗಿ ಹೊಣೆಯಾಗಿವೆಯೆಂದು ಪರಿಗಣಿಸಲಾಗುವುದಿಲ್ಲ, ಅದೇ ರೀತಿಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವಂತೆ ಕಂಪ್ಯೂಟರ್‌ಗಳು ಪ್ರೋಗ್ರ್ಯಾಮ್‌ ಮಾಡಲ್ಪಟ್ಟಿರುವುದಾದರೂ ಅವು ಅದಕ್ಕೆ ಉತ್ತರವಾದಿಯಾಗಿಲ್ಲ. ಹೀಗಿರುವುದರಿಂದ, ಆಯ್ಕೆಮಾಡುವ ಸ್ವಾತಂತ್ರ್ಯವು ನಮ್ಮ ಮೇಲೆ ಭಾರವಾದ ಜವಾಬ್ದಾರಿಯನ್ನು ಹೊರಿಸುತ್ತದೆ ಮತ್ತು ನಮ್ಮ ಕ್ರಿಯೆಗಳಿಗೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತದೆ.

ನಾವು ಹುಟ್ಟುವುದಕ್ಕೆ ಮೊದಲೇ ಯೆಹೋವ ದೇವರು ನಾವು ಯಾವ ಮಾರ್ಗಕ್ರಮವನ್ನು ಹಿಡಿಯಬೇಕೆಂಬುದನ್ನು ನಿರ್ಧರಿಸಿದ್ದು, ತದನಂತರ ನಮ್ಮ ಕ್ರಿಯೆಗಳಿಗೆ ನಮ್ಮನ್ನು ಜವಾಬ್ದಾರರನ್ನಾಗಿ ಮಾಡುವುದಾದರೆ ಆತನೆಷ್ಟು ಪ್ರೀತಿರಹಿತನೂ ಅನ್ಯಾಯಿಯೂ ಆಗಿರುವನು! ಆತನು ಹೀಗೆ ಮಾಡುವುದಿಲ್ಲ, ಏಕೆಂದರೆ “ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ ಮತ್ತು “ಆತನು ನಡಿಸುವದೆಲ್ಲಾ ನ್ಯಾಯ.” (1 ಯೋಹಾನ 4:8; ಧರ್ಮೋಪದೇಶಕಾಂಡ 32:4) ಆತನು ನಮಗೆ ಆಯ್ಕೆಯನ್ನು ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿರುವುದರಿಂದ, ಪೂರ್ವಾದೃಷ್ಟವನ್ನು ನಂಬುವವರು ಪ್ರತಿಪಾದಿಸುವಂತೆ ‘ಆದಿಯಲ್ಲೇ ಯಾರನ್ನು ಉಳಿಸುವನು ಮತ್ತು ಯಾರನ್ನು ಅಳಿಸುವನು ಎಂಬುದನ್ನು ನಿರ್ಧರಿಸಲಿಲ್ಲ’ ಎಂಬುದು ಸುಸ್ಪಷ್ಟ. ಆಯ್ಕೆಮಾಡುವ ಸ್ವಾತಂತ್ರ್ಯವು ಪೂರ್ವಾದೃಷ್ಟದ ಕಲ್ಪನೆಯನ್ನು ತಳ್ಳಿಹಾಕುತ್ತದೆ.

ನಾವು ಮಾಡುವ ಆಯ್ಕೆಗಳು ನಮ್ಮ ಕಾರ್ಯಗಳ ಪರಿಣಾಮವನ್ನು ಬದಲಾಯಿಸುವವು ಎಂದು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. ಉದಾಹರಣೆಗೆ, ದೇವರು ತಪ್ಪಿತಸ್ಥರ ಬಳಿ ಹೀಗೆ ವಿನಂತಿಸುತ್ತಾನೆ: “ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗದಿಂದಲೂ ದುಷ್ಕೃತ್ಯಗಳಿಂದಲೂ ಹಿಂದಿರುಗಿರಿ, . . . ಹೀಗಾದರೆ ನಾನು ನಿಮಗೆ ಯಾವ ಕೇಡನ್ನೂ ಮಾಡೆನು.” (ಯೆರೆಮೀಯ 25:5, 6) ಒಂದುವೇಳೆ ದೇವರು ಪ್ರತಿಯೊಬ್ಬ ವ್ಯಕ್ತಿಯ ಅದೃಷ್ಟವನ್ನು ಈಗಾಗಲೇ ನಿರ್ಧರಿಸಿರುವಲ್ಲಿ, ಈ ವಿನಂತಿಯು ಅರ್ಥಹೀನವಾಗಿರುವುದು. ಅಷ್ಟುಮಾತ್ರವಲ್ಲ, ದೇವರ ವಾಕ್ಯವು ಹೇಳುವುದು: ‘ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ತಿರುಗಿದರೆ ದೇವರ ಸನ್ನಿಧಾನದಿಂದ ವಿಶ್ರಾಂತಿಕಾಲಗಳು ಒದಗಿಬರುವವು.’ (ಅ. ಕೃತ್ಯಗಳು 3:19) ಜನರು ತಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಲು ಏನನ್ನೂ ಮಾಡಸಾಧ್ಯವಿಲ್ಲ ಎಂಬುದು ಒಂದುವೇಳೆ ಯೆಹೋವನಿಗೆ ಮುಂಚಿತವಾಗಿಯೇ ತಿಳಿದಿರುತ್ತಿದ್ದಲ್ಲಿ, ಅವರು ಪಶ್ಚಾತ್ತಾಪಪಡುವಂತೆ ಮತ್ತು ತನ್ನ ಕಡೆಗೆ ತಿರುಗುವಂತೆ ಆತನು ಅವರಿಗೆ ಏಕೆ ಹೇಳುತ್ತಿದ್ದನು?

ಸ್ವರ್ಗದಲ್ಲಿ ಯೇಸು ಕ್ರಿಸ್ತನೊಂದಿಗೆ ರಾಜರಾಗಿ ಆಳಲಿಕ್ಕಾಗಿ ಆಮಂತ್ರಿಸಲ್ಪಟ್ಟಿರುವಂಥ ಕೆಲವರ ಕುರಿತು ಶಾಸ್ತ್ರವಚನಗಳು ಮಾತಾಡುತ್ತವೆ. (ಮತ್ತಾಯ 22:14; ಲೂಕ 12:32) ಆದರೆ, ಕಡೇ ವರೆಗೆ ತಾಳಿಕೊಳ್ಳದಿರುವಲ್ಲಿ ಅವರು ತಮ್ಮ ಸುಯೋಗವನ್ನು ಕಳೆದುಕೊಳ್ಳುವರು ಎಂದು ಬೈಬಲ್‌ ತಿಳಿಸುತ್ತದೆ. (ಪ್ರಕಟನೆ 2:10) ಅವರು ಆಯ್ಕೆಮಾಡಲ್ಪಡುವುದಿಲ್ಲ ಎಂಬುದನ್ನು ದೇವರು ಈಗಾಗಲೇ ನಿರ್ಧರಿಸಿರುವಲ್ಲಿ, ಆತನು ಅವರಿಗೆ ಅಂಥ ಆಮಂತ್ರಣವನ್ನು ಏಕೆ ನೀಡುತ್ತಿದ್ದನು? ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳಿಗೆ ಬರೆದ ಮಾತುಗಳನ್ನು ಸಹ ಪರಿಗಣಿಸಿರಿ. ಅವನು ಬರೆದುದು: “ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವು ಇರುವದಿಲ್ಲ.” (ಇಬ್ರಿಯ 10:26) ದೇವರು ಅವರ ಅದೃಷ್ಟವನ್ನು ಮುಂಚಿತವಾಗಿಯೇ ನಿಗದಿಪಡಿಸಿರುವಲ್ಲಿ, ಇಂಥ ಒಂದು ಎಚ್ಚರಿಕೆಯು ಮೌಲ್ಯರಹಿತವಾಗಿರುವುದು. ಆದರೆ ಕೆಲವರು, ಯೇಸು ಕ್ರಿಸ್ತನೊಂದಿಗೆ ಆಳಲಿಕ್ಕಾಗಿ ಕಡಿಮೆಪಕ್ಷ ಕೆಲವು ವ್ಯಕ್ತಿಗಳನ್ನು ದೇವರು ಮುಂಚಿತವಾಗಿಯೇ ಸಂಕಲ್ಪಮಾಡಿದ್ದಾನೆ ಎಂದು ಬೈಬಲ್‌ ಹೇಳುತ್ತದೆಂದು ಪ್ರತಿಪಾದಿಸುತ್ತಾರೆ.

ಮೊದಲೇ ಸಂಕಲ್ಪಮಾಡಿರುವುದು—⁠ವ್ಯಕ್ತಿಗಳನ್ನೊ ಅಥವಾ ಒಂದು ಗುಂಪನ್ನೊ?

ಅಪೊಸ್ತಲ ಪೌಲನು ಬರೆದುದು: “[ದೇವರು] ಪರಲೋಕದಲ್ಲಿನ ಸಕಲ ಆತ್ಮೀಯ ವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾನೆ. ಹೇಗಂದರೆ ನಾವು ಪ್ರೀತಿಯಲ್ಲಿ ನಡೆದು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು ನಮ್ಮನ್ನು ಜಗದುತ್ಪತ್ತಿಗೆ ಮುಂಚೆ ಕ್ರಿಸ್ತನಲ್ಲಿ ಆರಿಸಿಕೊಂಡನು. . . . ನಮ್ಮನ್ನು ಯೇಸು ಕ್ರಿಸ್ತನ ಮೂಲಕ ತನ್ನ ಪುತ್ರರನ್ನಾಗಿ ಸ್ವೀಕರಿಸುವದಕ್ಕೆ . . . ಮೊದಲೇ ಸಂಕಲ್ಪಮಾಡಿದ್ದನು.” (ಎಫೆಸ 1:3-5) ದೇವರು ಏನನ್ನು ಮೊದಲೇ ಸಂಕಲ್ಪಿಸಿದ್ದಾನೆ, ಮತ್ತು “ಜಗದುತ್ಪತ್ತಿಗೆ ಮುಂಚೆ” ಆರಿಸಿಕೊಳ್ಳಲ್ಪಡುವುದರ ಅರ್ಥವೇನು?

ಆ ವಚನಭಾಗವು, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲಿಕ್ಕಾಗಿ ದೇವರು ಪ್ರಥಮ ಮಾನವನಾದ ಆದಾಮನ ವಂಶದವರಲ್ಲಿ ಕೆಲವರನ್ನು ಆಯ್ಕೆಮಾಡಿದ್ದಾನೆ ಎಂದು ತಿಳಿಯಪಡಿಸುತ್ತದೆ. (ರೋಮಾಪುರ 8:14-17, 28-30; ಪ್ರಕಟನೆ 5:9, 10) ಆದರೂ, ನಿರ್ದಿಷ್ಟ ವ್ಯಕ್ತಿಗಳು ಜನಿಸುವ ಸಾವಿರಾರು ವರ್ಷಗಳ ಮುಂಚೆಯೇ ಅವರು ಈ ಸುಯೋಗವನ್ನು ಪಡೆದುಕೊಳ್ಳುವಂತೆ ಯೆಹೋವ ದೇವರು ಸಂಕಲ್ಪಿಸಿದ್ದಾನೆ ಎಂಬ ಕಲ್ಪನೆಯು, ಮಾನವರಿಗೆ ಆಯ್ಕೆಯ ಸ್ವಾತಂತ್ರ್ಯವು ಕೊಡಲ್ಪಟ್ಟಿದೆ ಎಂಬ ವಾಸ್ತವಾಂಶದೊಂದಿಗೆ ಸಂಘರ್ಷಿಸುತ್ತದೆ. ದೇವರು ಮುಂಚೆಯೇ ಸಂಕಲ್ಪಿಸಿದ್ದು ವ್ಯಕ್ತಿಗಳನ್ನಲ್ಲ, ಬದಲಾಗಿ ಒಂದು ಗುಂಪನ್ನು ಅಥವಾ ಜನರ ಒಂದು ಸಮೂಹವನ್ನೇ.

ಒಂದು ದೃಷ್ಟಾಂತವನ್ನು ಪರಿಗಣಿಸಿರಿ: ಒಂದು ಸರಕಾರವು ನಿರ್ದಿಷ್ಟ ನಿಯೋಗವನ್ನು ಆರಂಭಿಸಲು ನಿರ್ಧರಿಸುತ್ತದೆ ಎಂದಿಟ್ಟುಕೊಳ್ಳಿ. ಆ ನಿಯೋಗದ ಕಾರ್ಯಾಚರಣೆಗಳನ್ನೂ ಅದರ ಅಧಿಕಾರ ಸ್ಥಾನಗಳನ್ನೂ ಅದರ ಗಾತ್ರವನ್ನೂ ಸರಕಾರವು ಮುಂಚಿತವಾಗಿಯೇ ನಿಗದಿಪಡಿಸುತ್ತದೆ. ಈ ನಿಯೋಗವು ಸ್ಥಾಪಿಸಲ್ಪಟ್ಟ ಸ್ವಲ್ಪ ಕಾಲಾನಂತರ ಕಾರ್ಯಾಚರಣೆಯು ಆರಂಭಗೊಳ್ಳುತ್ತದೆ, ಮತ್ತು ಇದರ ಸದಸ್ಯರು, “ನಮ್ಮ ಕೆಲಸವೇನು ಎಂಬುದನ್ನು ಸರಕಾರವು ಅನೇಕ ವರ್ಷಗಳ ಹಿಂದೆಯೇ ನಿರ್ಧರಿಸಿದೆ. ಈಗ ನಾವು ನಮಗೆ ನೇಮಿಸಲ್ಪಟ್ಟಿರುವ ಕೆಲಸವನ್ನು ಆರಂಭಿಸುತ್ತೇವೆ” ಎಂಬ ಹೇಳಿಕೆಯನ್ನು ನೀಡುತ್ತಾರೆ. ಹೀಗಿರುವಾಗ, ಯಾರು ಈ ನಿಯೋಗದ ವ್ಯಕ್ತಿಗತ ಸದಸ್ಯರಾಗಿರುವರು ಎಂಬುದನ್ನು ಕೆಲವು ವರ್ಷಗಳ ಮುಂಚೆಯೇ ಸರಕಾರವು ನಿರ್ಧರಿಸಿಬಿಟ್ಟಿದೆ ಎಂಬ ತೀರ್ಮಾನಕ್ಕೆ ನೀವು ಬರುತ್ತೀರೋ? ಖಂಡಿತವಾಗಿಯೂ ಇಲ್ಲ. ತದ್ರೀತಿಯಲ್ಲಿ, ಆದಾಮನ ಪಾಪದ ಪರಿಣಾಮಗಳನ್ನು ಪರಿಹರಿಸಲಿಕ್ಕಾಗಿ ಒಂದು ವಿಶೇಷ ನಿಯೋಗವನ್ನು ಸ್ಥಾಪಿಸುವೆನು ಎಂದು ಯೆಹೋವನು ಮುಂಚಿತವಾಗಿಯೇ ನಿರ್ಧರಿಸಿದನು. ಮತ್ತು ಈ ನಿಯೋಗದಲ್ಲಿ ಕೆಲಸಮಾಡಲಿರುವ ಒಂದು ಜನವರ್ಗವನ್ನು ಆತನು ಮುಂದಾಗಿಯೇ ಸಂಕಲ್ಪಿಸಿದನೇ ಹೊರತು ಒಬ್ಬೊಬ್ಬ ವ್ಯಕ್ತಿಗಳನ್ನಲ್ಲ. ಅವರು ಸಮಯಾನಂತರ ಆಯ್ಕೆಮಾಡಲ್ಪಡಲಿದ್ದರು ಮತ್ತು ಅವರು ಅಂತಿಮವಾಗಿ ತಮ್ಮ ಸುಯೋಗಕ್ಕೆ ಸ್ವೀಕರಿಸಲ್ಪಡುವರೋ ಇಲ್ಲವೋ ಎಂಬುದನ್ನು ಅವರು ಜೀವನದಲ್ಲಿ ಮಾಡುವಂಥ ಆಯ್ಕೆಗಳು ಪ್ರಭಾವಿಸಲಿದ್ದವು.

ದೇವರು “ನಮ್ಮನ್ನು ಜಗದುತ್ಪತ್ತಿಗೆ ಮುಂಚೆ ಕ್ರಿಸ್ತನಲ್ಲಿ ಆರಿಸಿಕೊಂಡನು” ಎಂದು ಅಪೊಸ್ತಲ ಪೌಲನು ಹೇಳಿದಾಗ, ಅವನ ಮನಸ್ಸಿನಲ್ಲಿ ಏನಿತ್ತು? ಪೌಲನು ಇಲ್ಲಿ ಸೂಚಿಸುವ ಜಗತ್ತು, ದೇವರು ಆದಾಮಹವ್ವರನ್ನು ಸೃಷ್ಟಿಸಿದಾಗ ಯಾವ ಜಗತ್ತನ್ನು ಆರಂಭಿಸಿದನೋ ಅದಾಗಿರಲಿಲ್ಲ. ಆ ಜಗತ್ತು “ಬಹು ಒಳ್ಳೇದಾಗಿತ್ತು” ಮತ್ತು ಪಾಪ ಹಾಗೂ ಭ್ರಷ್ಟತೆಗಳಿಂದ ಸಂಪೂರ್ಣವಾಗಿ ವಿಮುಕ್ತವಾಗಿತ್ತು. (ಆದಿಕಾಂಡ 1:31) ಆ ಜಗತ್ತಿಗೆ ಪಾಪದಿಂದ “ಬಿಡುಗಡೆ”ಯ ಅಗತ್ಯವಿರಲಿಲ್ಲ.​—⁠ಎಫೆಸ 1:⁠7.

ಪೌಲನು ಸೂಚಿಸಿದ ನಿರ್ದಿಷ್ಟ ಜಗತ್ತು, ಏದೆನ್‌ ತೋಟದಲ್ಲಿ ಆದಾಮಹವ್ವರು ದಂಗೆಯೆದ್ದ ಬಳಿಕ ಅಸ್ತಿತ್ವಕ್ಕೆ ಬಂದ ಜಗತ್ತಾಗಿತ್ತು; ಅದು ಆರಂಭದಲ್ಲಿ ದೇವರಿಂದ ಉದ್ದೇಶಿಸಲ್ಪಟ್ಟ ಜಗತ್ತಿಗಿಂತ ತೀರ ಭಿನ್ನವಾದುದಾಗಿತ್ತು. ಅದು ಆದಾಮಹವ್ವರ ಮಕ್ಕಳೊಂದಿಗೆ ಆರಂಭಗೊಂಡ ಜಗತ್ತಾಗಿತ್ತು. ಆ ಜಗತ್ತು ದೇವರಿಂದ ವಿಮುಖಗೊಂಡಿದ್ದು, ಪಾಪ ಮತ್ತು ಭ್ರಷ್ಟತೆಗೆ ಒಳಗಾಗಿದ್ದ ಜನರಿಂದ ತುಂಬಿದ್ದಾಗಿತ್ತು. ಉದ್ದೇಶಪೂರ್ವಕವಾಗಿ ಪಾಪಮಾಡಿದ್ದ ಆದಾಮಹವ್ವರಿಗೆ ಅಸದೃಶವಾಗಿ, ಅದು ವಿಮೋಚನೆ ಪಡೆಯಸಾಧ್ಯವಿದ್ದ ಜನರಿಂದ ಕೂಡಿದ್ದ ಜಗತ್ತಾಗಿತ್ತು.​—⁠ರೋಮಾಪುರ 5:12; 8:18-21.

ಏದೆನಿನಲ್ಲಿನ ದಂಗೆಯಿಂದ ಉಂಟಾದ ಸನ್ನಿವೇಶವನ್ನು ಯೆಹೋವ ದೇವರು ಆ ಕೂಡಲೆ ಸರಿಪಡಿಸಲು ಶಕ್ತನಾದನು. ಆವಶ್ಯಕತೆಯು ಉಂಟಾದ ಕೂಡಲೆ ಆತನು ಒಂದು ವಿಶೇಷ ನಿಯೋಗವನ್ನು ಸಂಕಲ್ಪಿಸಿದನು. ಅದು ಯೇಸು ಕ್ರಿಸ್ತನಿಂದ ಆಳಲ್ಪಡುವ ಮೆಸ್ಸೀಯ ರಾಜ್ಯವೇ ಆಗಿತ್ತು. ಆದಾಮಸಂಬಂಧಿತ ಪಾಪದಿಂದ ಮಾನವಕುಲವನ್ನು ವಿಮೋಚಿಸಲಿಕ್ಕಾಗಿ ಆತನು ಈ ನಿಯೋಗವನ್ನು ಉಪಯೋಗಿಸಲಿದ್ದನು. (ಮತ್ತಾಯ 6:10) ವಿಮೋಚನೆ ಪಡೆಯಸಾಧ್ಯವಿದ್ದ ಮಾನವಕುಲದ “ಜಗದುತ್ಪತ್ತಿಗೆ ಮುಂಚೆ” ಅಂದರೆ ದಂಗೆಕೋರ ಆದಾಮಹವ್ವರು ಮಕ್ಕಳನ್ನು ಪಡೆಯುವುದಕ್ಕೆ ಮುಂಚೆ ದೇವರು ಇದನ್ನು ಮಾಡಿದನು.

ತಾವು ಮಾಡಲು ಬಯಸುವಂಥ ಕೆಲಸವನ್ನು ಪೂರೈಸಲು ಮಾನವರಿಗೆ ಸಾಮಾನ್ಯವಾಗಿ ಕ್ರಿಯೆಯನ್ನು ಯೋಜಿಸುವ ಅಗತ್ಯವಿರುತ್ತದೆ. ಆದರೆ ಪೂರ್ವಾದೃಷ್ಟವು, ದೇವರು ಇಡೀ ವಿಶ್ವಕ್ಕಾಗಿ ಸವಿಸ್ತಾರವಾದ ಯೋಜನೆಯನ್ನು ಮಾಡಿದ್ದಾನೆ ಮತ್ತು ಸರ್ವವೂ ಪೂರ್ವನಿರ್ಧರಿತವಾದದ್ದಾಗಿದೆ ಎಂಬ ಕಲ್ಪನೆಗೆ ಸಂಬಂಧಿಸಿದ್ದಾಗಿದೆ. ರಾಯ್‌ ವೆಥರ್‌ಫರ್ಡ್‌ ಬರೆಯುವುದು: “ಪ್ರತಿಯೊಂದು ಘಟನೆಯ ಸವಿಸ್ತಾರ ವಿವರಣೆಯಿಲ್ಲದ ಯಾವುದೇ ವಿಚಾರವು ದೇವರ ಪರಮಾಧಿಕಾರಕ್ಕೆ ಅಸಂಗತವಾದದ್ದಾಗಿದೆ ಎಂಬುದು ಅನೇಕ ತತ್ತ್ವಜ್ಞಾನಿಗಳ ಅನಿಸಿಕೆ.” ಹಾಗಾದರೆ ದೇವರು ನಿಜವಾಗಿಯೂ ಪ್ರತಿಯೊಂದು ಘಟನೆಯನ್ನು ಮುಂಚಿತವಾಗಿಯೇ ನಿರ್ದಿಷ್ಟವಾಗಿ ತಿಳಿಯಪಡಿಸುವ ಆವಶ್ಯಕತೆಯಿದೆಯೋ?

ಯೆಹೋವನು ಅಪಾರ ಶಕ್ತಿಯುಳ್ಳವನೂ ಅನುಪಮ ವಿವೇಕವುಳ್ಳವನೂ ಆಗಿರುವುದರಿಂದ, ತನ್ನ ಸೃಷ್ಟಿಜೀವಿಗಳು ತಮ್ಮ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸುವುದರಿಂದ ಉಂಟಾಗಬಹುದಾದ ಯಾವುದೇ ತುರ್ತುಪರಿಸ್ಥಿತಿಯನ್ನು ಅಥವಾ ಆಕಸ್ಮಿಕ ಘಟನೆಯನ್ನು ಯಶಸ್ವಿಕರವಾಗಿ ನಿಭಾಯಿಸುವ ಸಾಮರ್ಥ್ಯ ಆತನಿಗಿದೆ. (ಯೆಶಾಯ 40:25, 26; ರೋಮಾಪುರ 11:33) ಆತನು ಇದನ್ನು ಆ ಕೂಡಲೆ ಮತ್ತು ಯಾವುದೇ ವಿಸ್ತೃತ ಯೋಜನೆಯಿಲ್ಲದೆ ಮಾಡಬಲ್ಲನು. ಇತಿಮಿತಿಯಿಂದ ಕೂಡಿದ ಸಾಮರ್ಥ್ಯಗಳಿರುವ ಅಪರಿಪೂರ್ಣ ಮಾನವರಿಗೆ ಅಸದೃಶವಾಗಿ, ಸರ್ವಶಕ್ತನಾದ ದೇವರಿಗೆ ಭೂಮಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಅದೃಷ್ಟವನ್ನು ಮುಂಚಿತವಾಗಿಯೇ ನಿಗದಿಪಡಿಸುವಂಥ ಒಂದು ಸವಿಸ್ತಾರವಾದ, ಪೂರ್ವನಿಯೋಜಿತವಾದ ಯೋಜನೆಯ ಅಗತ್ಯವಿಲ್ಲ. (ಜ್ಞಾನೋಕ್ತಿ 19:21) ಅನೇಕ ಬೈಬಲ್‌ ಭಾಷಾಂತರಗಳಲ್ಲಿ ಎಫೆಸ 3:10ನೆಯ ವಚನವು, ದೇವರು ಒಂದು ನಿಗದಿತ ಯೋಜನೆಯನ್ನು ಹೊಂದಿರುವುದರ ಕುರಿತಾಗಿ ಅಲ್ಲ, ಬದಲಾಗಿ ‘ಅನಾದಿಕಾಲದ ಸಂಕಲ್ಪವನ್ನು’ ಹೊಂದಿರುವುದರ ಕುರಿತಾಗಿ ಮಾತಾಡುತ್ತದೆ.

ನಿಮ್ಮ ಭವಿಷ್ಯತ್ತಿನ ಮೇಲೆ ನೀವು ಪರಿಣಾಮ ಬೀರಬಲ್ಲ ವಿಧ

ಈ ಭೂಮಿಯ ಕಡೆಗೆ ದೇವರಿಗೆ ಒಂದು ಉದ್ದೇಶವಿದೆ ಮತ್ತು ಆ ಉದ್ದೇಶವು ಪೂರ್ವನಿಯೋಜಿತವಾಗಿದೆ. ಪ್ರಕಟನೆ 21:​3, 4 ಹೇಳುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಹೌದು, ಯೆಹೋವನು ಆರಂಭದಲ್ಲಿ ಉದ್ದೇಶಿಸಿದಂತೆಯೇ ಈ ಭೂಮಿಯು ಒಂದು ಪರದೈಸಾಗುವುದು. (ಆದಿಕಾಂಡ 1:​27, 28) ಈಗ ಪ್ರಶ್ನೆಯೇನೆಂದರೆ, ನೀವು ಅಲ್ಲಿರುವಿರೋ? ನೀವು ಈಗ ಮಾಡುವ ಆಯ್ಕೆಗಳ ಮೇಲೆ ಅದು ಹೊಂದಿಕೊಂಡಿದೆ. ಯೆಹೋವನು ನಿಮ್ಮ ಅದೃಷ್ಟವನ್ನು ಮುಂಚಿತವಾಗಿಯೇ ನಿಗದಿಸಿಟ್ಟಿಲ್ಲ.

ದೇವಕುಮಾರನಾಗಿರುವ ಯೇಸು ಕ್ರಿಸ್ತನ ಈಡು ಯಜ್ಞವು, ಅವನಲ್ಲಿ ನಂಬಿಕೆಯನ್ನಿಡುವ ಯಾರಿಗೇ ಆಗಲಿ ನಿತ್ಯಜೀವವನ್ನು ಪಡೆದುಕೊಳ್ಳುವ ಸಾಧ್ಯತೆಯನ್ನು ನೀಡುತ್ತದೆ. (ಯೋಹಾನ 3:16, 17; ಅ. ಕೃತ್ಯಗಳು 10:34, 35) ಬೈಬಲ್‌ ಹೇಳುವುದು: “ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ.” (ಯೋಹಾನ 3:36) ದೇವರ ಕುರಿತು, ಆತನ ಮಗನ ಕುರಿತು, ಮತ್ತು ಆತನ ಚಿತ್ತದ ಕುರಿತು ಬೈಬಲಿನಿಂದ ಕಲಿಯುವ ಮೂಲಕ ಹಾಗೂ ನೀವು ಕಲಿಯುವಂಥ ವಿಷಯಗಳನ್ನು ಅನ್ವಯಿಸಿಕೊಳ್ಳುವ ಮೂಲಕ ನೀವು ಜೀವವನ್ನು ಆಯ್ಕೆಮಾಡಸಾಧ್ಯವಿದೆ. ದೇವರ ವಾಕ್ಯದಲ್ಲಿ ದಾಖಲಿಸಲ್ಪಟ್ಟಿರುವ ನಿಜವಾದ ವಿವೇಕಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ವ್ಯಕ್ತಿಗೆ, ಅವನು “ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು” ಎಂಬ ಆಶ್ವಾಸನೆಯು ಕೊಡಲ್ಪಟ್ಟಿದೆ.​—⁠ಜ್ಞಾನೋಕ್ತಿ 1:20, 33.

[ಪುಟ 5ರಲ್ಲಿರುವ ಚಿತ್ರಗಳು]

ಪ್ರಾಣಿಗಳಿಗೆ ವ್ಯತಿರಿಕ್ತವಾಗಿ, ಮಾನವರು ತಮ್ಮ ಕೃತ್ಯಗಳಿಗೆ ನೈತಿಕವಾಗಿ ಹೊಣೆಗಾರರಾಗಿದ್ದಾರೆ

[ಕೃಪೆ]

ಗಿಡುಗ: ಚಿತ್ರ: Cortesía de GREFA