ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಭವಿಷ್ಯತ್ತನ್ನು ಯಾವುದು ನಿಯಂತ್ರಿಸುತ್ತದೆ?

ನಿಮ್ಮ ಭವಿಷ್ಯತ್ತನ್ನು ಯಾವುದು ನಿಯಂತ್ರಿಸುತ್ತದೆ?

ನಿಮ್ಮ ಭವಿಷ್ಯತ್ತನ್ನು ಯಾವುದು ನಿಯಂತ್ರಿಸುತ್ತದೆ?

“ಒಂದು ಪ್ರಾಣಿಯು ಹೇಗೆ ತನ್ನ ಅದೃಷ್ಟವನ್ನು ನಿಯಂತ್ರಿಸಲಾರದೋ ಅದೇ ರೀತಿಯಲ್ಲಿ ಮಾನವರು ಸಹ ತಮ್ಮ ಅದೃಷ್ಟವನ್ನು ನಿಯಂತ್ರಿಸಲಾರರು” ಎಂದು ವಿಕಾಸವಾದಿಯಾದ ಜಾನ್‌ ಗ್ರೇ ಬರೆಯುತ್ತಾರೆ. ಯೆಹೂದಿಮತಕ್ಕೆ ಒಬ್ಬ ಬುದ್ಧಿವಂತ ವ್ಯಕ್ತಿಯ ಕೈಪಿಡಿ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಲೇಖಕರಾದ ಶ್ಮೂಲೀ ಬೋಟೆಆಕ್‌ ಇದಕ್ಕೆ ತದ್ವಿರುದ್ಧವಾದ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತಾರೆ. ಅವರು ಹೇಳುವುದು: “ಮನುಷ್ಯನು ಪ್ರಾಣಿಯಲ್ಲ, ಆದುದರಿಂದಲೇ ಅವನು ಯಾವಾಗಲೂ ತನ್ನ ಅದೃಷ್ಟದ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ.”

ಅನೇಕರು ಜಾನ್‌ ಗ್ರೇ ಅವರ ಮಾತುಗಳನ್ನೇ ಅನುಮೋದಿಸುತ್ತಾರೆ ಮತ್ತು ನಿಸರ್ಗದ ಅನಿಯಂತ್ರಿತ ಶಕ್ತಿಯು ಮಾನವ ಕುಟುಂಬದ ಅದೃಷ್ಟವನ್ನು ನಿಯಂತ್ರಿಸುತ್ತದೆ ಎಂದು ನಂಬುತ್ತಾರೆ. ಇನ್ನಿತರರಾದರೋ, ಮನುಷ್ಯನು ದೇವರಿಂದ ಸೃಷ್ಟಿಸಲ್ಪಟ್ಟಿದ್ದು, ತನ್ನ ಸ್ವಂತ ಭವಿಷ್ಯತ್ತನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಆತನಿಂದ ಪಡೆದುಕೊಂಡಿದ್ದಾನೆ ಎಂದು ನೆನಸುತ್ತಾರೆ.

ತಮ್ಮ ಭವಿಷ್ಯತ್ತು ಪ್ರಬಲ ಮಾನವ ಶಕ್ತಿಗಳಿಂದ ನಿಯಂತ್ರಿಸಲ್ಪಟ್ಟಿದೆ ಎಂದು ಕೆಲವರು ನೆನಸುತ್ತಾರೆ. ರಾಯ್‌ ವೆಥರ್‌ಫರ್ಡ್‌ ಎಂಬ ಲೇಖಕರಿಗನುಸಾರ, “ಲೋಕದಲ್ಲಿರುವ ಅಧಿಕಾಂಶ ಜನರಿಗೆ, ಮತ್ತು ಇತಿಹಾಸದಲ್ಲಿ ವಿಶೇಷವಾಗಿ ಸ್ತ್ರೀಯರಲ್ಲಿ ಅಧಿಕಾಂಶ ಮಂದಿಗೆ, ಮಾನವ ದಬ್ಬಾಳಿಕೆ ಹಾಗೂ ಶೋಷಣೆಯ ಸುಸ್ಪಷ್ಟವಾದ ಕಾರಣಗಳಿಂದಾಗಿ ತಮ್ಮ ಸ್ವಂತ ಜೀವಿತಗಳ ಮೇಲೆ ಯಾವುದೇ ಅಧಿಕಾರ ಅಥವಾ ನಿಯಂತ್ರಣವಿಲ್ಲ.” (ನಿಯಂತ್ರಣವಾದದ ಸೂಚ್ಯಾರ್ಥಗಳು [ಇಂಗ್ಲಿಷ್‌]) ಸ್ಪರ್ಧಾತ್ಮಕವಾದ ರಾಜಕೀಯ ಅಥವಾ ಮಿಲಿಟರಿ ಶಕ್ತಿಗಳಿಂದ ಒಂದು ಸಂತೋಷಭರಿತ ಭವಿಷ್ಯತ್ತಿನ ಕುರಿತಾದ ತಮ್ಮ ಕನಸುಗಳು ನುಚ್ಚುನೂರಾಗಿರುವುದನ್ನು ಅನೇಕರು ಕಣ್ಣಾರೆ ನೋಡಿದ್ದಾರೆ.

ಇತಿಹಾಸದಾದ್ಯಂತ ಇನ್ನೂ ಅನೇಕರು, ನಿಸರ್ಗಾತೀತ ಶಕ್ತಿಗಳು ತಮ್ಮ ಅದೃಷ್ಟವನ್ನು ನಿಯಂತ್ರಿಸಿವೆ ಎಂದು ನೆನಸಿದ್ದರಿಂದ ತಾವು ನಿಸ್ಸಹಾಯಕರು ಎಂಬ ಭಾವನೆಯನ್ನು ಅನುಭವಿಸಿದ್ದಾರೆ. ಬೋಟೆಆಕ್‌ ಹೇಳುವುದು: “ಮನುಷ್ಯನು ಪೂರ್ವನಿರ್ಧರಿತ ಅದೃಷ್ಟದಿಂದ ತಪ್ಪಿಸಿಕೊಳ್ಳಲು ಅಸಮರ್ಥನಾಗಿರುವ ಕಾರಣ ಎಲ್ಲ ರೀತಿಯ ನಿರೀಕ್ಷೆಯೂ ವ್ಯರ್ಥ ಎಂಬ ಕಲ್ಪನೆಯು ಪುರಾತನ ಗ್ರೀಕರ ಮನಸ್ಸನ್ನು ಆಕ್ರಮಿಸಿತ್ತು.” ಪ್ರತಿಯೊಬ್ಬ ವ್ಯಕ್ತಿಯ ಅದೃಷ್ಟವು ಚಂಚಲ ಮನಸ್ಸಿನ ದೇವತೆಗಳಿಂದ ನಿರ್ಧರಿಸಲ್ಪಟ್ಟಿದೆಯೆಂದು ಅವರು ನೆನಸಿದರು. ಈ ದೇವತೆಗಳು, ಒಬ್ಬ ವ್ಯಕ್ತಿಯು ಯಾವಾಗ ಸಾಯುವನು ಮತ್ತು ಅವನ ಜೀವಮಾನದಾದ್ಯಂತ ಅವನು ಎಷ್ಟು ಸಂಕಟ ಹಾಗೂ ನೋವನ್ನು ತಾಳಿಕೊಳ್ಳಬೇಕಾಗುವುದು ಎಂಬುದನ್ನು ನಿರ್ಧರಿಸುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು.

ಒಬ್ಬ ವ್ಯಕ್ತಿಯ ಅದೃಷ್ಟವು ಅತಿಮಾನುಷ ಶಕ್ತಿಯಿಂದ ನಿಯಂತ್ರಿಸಲ್ಪಡುತ್ತದೆ ಎಂಬ ನಂಬಿಕೆಯು ಇಂದು ಸರ್ವಸಾಮಾನ್ಯವಾಗಿದೆ. ಉದಾಹರಣೆಗೆ, ಅನೇಕರು ಕಿಸ್ಮತ್‌ ಅಥವಾ ವಿಧಿಯಲ್ಲಿ ನಂಬಿಕೆಯಿಡುತ್ತಾರೆ. ದೇವರು ಎಲ್ಲ ಮಾನವರ ಕೃತ್ಯಗಳ ಪ್ರತಿಫಲವನ್ನು ಮತ್ತು ಒಬ್ಬನ ಮರಣದ ಸಮಯವನ್ನು ಮುಂಚಿತವಾಗಿಯೇ ನಿರ್ಧರಿಸಿದ್ದಾನೆ ಎಂದು ಅವರು ಹೇಳುತ್ತಾರೆ. ಪೂರ್ವಾದೃಷ್ಟದ ಸಿದ್ಧಾಂತವು ಸಹ ಇದೆ; ಸರ್ವಶಕ್ತನಾದ ದೇವರಿಂದ “ಪ್ರತಿಯೊಬ್ಬ ಮಾನವ ವ್ಯಕ್ತಿಯ ಅಂತಿಮ ಉಳಿವು ಅಥವಾ ಅಳಿವು ಮುಂಚಿತವಾಗಿಯೇ ಸಂಕಲ್ಪಿಸಲ್ಪಟ್ಟಿದೆ” ಎಂಬ ದೃಷ್ಟಿಕೋನವನ್ನು ಇದು ಉತ್ತೇಜಿಸುತ್ತದೆ. ಕ್ರೈಸ್ತರೆಂದು ಹೇಳಿಕೊಳ್ಳುವವರಲ್ಲಿ ಅನೇಕರು ಈ ಬೋಧನೆಗೆ ಅಂಟಿಕೊಂಡಿರುತ್ತಾರೆ.

ನಿಮ್ಮ ಅಭಿಪ್ರಾಯವೇನು? ನಿಮ್ಮ ನಿಯಂತ್ರಣಕ್ಕೆ ನಿಲುಕದ ಶಕ್ತಿಗಳಿಂದ ನಿಮ್ಮ ಅದೃಷ್ಟವು ಈಗಾಗಲೇ ಖಚಿತವಾಗಿ ನಿರ್ಧರಿಸಲ್ಪಟ್ಟಿದೆಯೋ? ಅಥವಾ “ಕೆಲವೊಮ್ಮೆ ಮನುಷ್ಯರು ತಮ್ಮ ಅದೃಷ್ಟವನ್ನು ನಿಯಂತ್ರಿಸಬಲ್ಲರು” ಎಂದು ಬರೆದಂಥ ಇಂಗ್ಲಿಷ್‌ ನಾಟಕಕಾರ ವಿಲಿಯಮ್‌ ಶೇಕ್ಸ್‌ಪಿಯರ್‌ನ ಮಾತುಗಳಲ್ಲಿ ಏನಾದರೂ ನಿಜಾಂಶವಿದೆಯೆ? ಈ ವಿಷಯದಲ್ಲಿ ಬೈಬಲ್‌ ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿರಿ.