ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯಾಯಸ್ಥಾಪಕರು ಪುಸ್ತಕದ ಮುಖ್ಯಾಂಶಗಳು

ನ್ಯಾಯಸ್ಥಾಪಕರು ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ನ್ಯಾಯಸ್ಥಾಪಕರು ಪುಸ್ತಕದ ಮುಖ್ಯಾಂಶಗಳು

ತನ್ನ ಸ್ವಂತ ಜನರು ತನ್ನನ್ನು ಧಿಕ್ಕರಿಸಿ ಸುಳ್ಳು ದೇವರುಗಳನ್ನು ಆರಾಧಿಸತೊಡಗುವಾಗ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ? ಅವರು ಪುನಃ ಪುನಃ ಆತನಿಗೆ ವಿಧೇಯರಾಗಲು ತಪ್ಪಿಹೋಗಿ, ಕೇವಲ ಕಷ್ಟದಲ್ಲಿದ್ದಾಗ ಮಾತ್ರ ಆತನ ಸಹಾಯಕ್ಕಾಗಿ ಮೊರೆಹೋಗುವಲ್ಲಿ ಆಗೇನು? ಇಂಥ ಸ್ಥಿತಿಯಲ್ಲೂ ಯೆಹೋವನು ಅವರಿಗೆ ರಕ್ಷಣಾ ಮಾರ್ಗವನ್ನು ಒದಗಿಸುವನೋ? ನ್ಯಾಯಸ್ಥಾಪಕರು ಪುಸ್ತಕವು ಈ ಪ್ರಶ್ನೆಗಳನ್ನು ಹಾಗೂ ಇತರ ಅತ್ಯಾವಶ್ಯಕ ಪ್ರಶ್ನೆಗಳನ್ನು ಉತ್ತರಿಸುತ್ತದೆ. ಸಾ.ಶ.ಪೂ. 1100ರ ಸುಮಾರಿಗೆ ಪ್ರವಾದಿಯಾದ ಸಮುವೇಲನಿಂದ ಪೂರ್ಣಗೊಳಿಸಲ್ಪಟ್ಟ ಈ ಪುಸ್ತಕವು, ಸುಮಾರು 330 ವರ್ಷಗಳಷ್ಟು ಕಾಲಾವಧಿಯಲ್ಲಿ ಅಂದರೆ ಯೆಹೋಶುವನ ಮರಣದ ಸಮಯದಿಂದ ಇಸ್ರಾಯೇಲಿನ ಮೊದಲ ಅರಸನ ಸಿಂಹಾಸನಾರೋಹಣದ ತನಕ ನಡೆದ ಘಟನೆಗಳನ್ನು ಆವರಿಸುತ್ತದೆ.

ದೇವರ ಪ್ರಬಲವಾದ ವಾಕ್ಯ ಅಥವಾ ಸಂದೇಶದ ಒಂದು ಭಾಗವಾಗಿರುವ ನ್ಯಾಯಸ್ಥಾಪಕರು ಪುಸ್ತಕವು ನಮಗೆ ಅಮೂಲ್ಯವಾದದ್ದಾಗಿದೆ. (ಇಬ್ರಿಯ 4:12) ಇದರಲ್ಲಿ ದಾಖಲಿಸಲ್ಪಟ್ಟಿರುವ ರೋಮಾಂಚಕ ವೃತ್ತಾಂತಗಳು ದೇವರ ವ್ಯಕ್ತಿತ್ವದ ಕುರಿತು ನಮಗೆ ಒಳನೋಟವನ್ನು ನೀಡುತ್ತವೆ. ಈ ವೃತ್ತಾಂತಗಳಿಂದ ನಾವು ಕಲಿಯುವ ಪಾಠಗಳು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತವೆ ಮತ್ತು ದೇವರ ವಾಗ್ದತ್ತ ನೂತನ ಲೋಕದಲ್ಲಿ “ನಿತ್ಯಜೀವವನ್ನು” ಗಟ್ಟಿಯಾಗಿ ಹಿಡಿದುಕೊಳ್ಳಲು ನಮಗೆ ಸಹಾಯಮಾಡುತ್ತವೆ. (1 ತಿಮೊಥೆಯ 6:12, 18; 2 ಪೇತ್ರ 3:13) ತನ್ನ ಜನರ ಪರವಾಗಿ ಯೆಹೋವನು ಮಾಡುವ ರಕ್ಷಣಾ ಕಾರ್ಯಗಳು, ತನ್ನ ಮಗನಾದ ಯೇಸು ಕ್ರಿಸ್ತನ ಮುಖಾಂತರ ಆತನು ಭವಿಷ್ಯತ್ತಿನಲ್ಲಿ ಮಾಡಲಿರುವ ಮಹಾನ್‌ ಬಿಡುಗಡೆಯ ಮುನ್ನೋಟವನ್ನು ಒದಗಿಸುತ್ತವೆ.

ನ್ಯಾಯಸ್ಥಾಪಕರ ಅಗತ್ಯವಿತ್ತೇಕೆ?

(ನ್ಯಾಯಸ್ಥಾಪಕರು 1:​1–3:6)

ಯೆಹೋಶುವನ ನೇತೃತ್ವದಲ್ಲಿ ಕಾನಾನ್‌ ದೇಶದ ಅರಸರನ್ನು ಸೋಲಿಸಿದ ಬಳಿಕ, ಇಸ್ರಾಯೇಲಿನ ಒಂದೊಂದು ಕುಲಗಳವರೂ ತಮ್ಮ ಪಾಲಿಗೆ ಬಂದ ಪ್ರದೇಶಗಳಿಗೆ ಹೋಗಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ಆದರೆ, ಇಸ್ರಾಯೇಲ್ಯರು ಆ ದೇಶದ ನಿವಾಸಿಗಳನ್ನು ಹೊರಡಿಸಿಬಿಡಲು ತಪ್ಪಿಹೋಗುತ್ತಾರೆ. ಈ ಅಪಜಯವು ಇಸ್ರಾಯೇಲ್ಯರಿಗೆ ನಿಜವಾದ ಪಾಶವಾಗಿ ಕಂಡುಬರುತ್ತದೆ.

ಯೆಹೋಶುವನ ದಿನಗಳ ಬಳಿಕ ಅಸ್ತಿತ್ವಕ್ಕೆ ಬಂದ ಸಂತತಿಯು ‘ಯೆಹೋವನನ್ನೂ ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿತಿರಲಿಲ್ಲ.’ (ನ್ಯಾಯಸ್ಥಾಪಕರು 2:10) ಅಷ್ಟುಮಾತ್ರವಲ್ಲ, ಜನರು ಕಾನಾನ್ಯರೊಂದಿಗೆ ಮದುವೆ ಸಂಬಂಧಗಳನ್ನು ಬೆಳೆಸಿಕೊಳ್ಳತೊಡಗುತ್ತಾರೆ. ಆದುದರಿಂದ ಯೆಹೋವನು ಇಸ್ರಾಯೇಲ್ಯರನ್ನು ಅವರ ವೈರಿಗಳ ಕೈಗೆ ಒಪ್ಪಿಸುತ್ತಾನೆ. ಆದರೂ, ವೈರಿಗಳ ದಬ್ಬಾಳಿಕೆಯು ವಿಪರೀತವಾದಾಗ ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ. ಈ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶವು ಬೇರೆ ಬೇರೆ ನ್ಯಾಯಸ್ಥಾಪಕರ ವೃತ್ತಾಂತಕ್ಕೆ ದಾರಿಮಾಡಿಕೊಡುತ್ತದೆ. ವೈರಿಗಳಿಂದ ತನ್ನ ಜನರನ್ನು ರಕ್ಷಿಸಲಿಕ್ಕಾಗಿ ಯೆಹೋವನು ಇವರನ್ನು ಕಳುಹಿಸುತ್ತಾನೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:​2, 4​—⁠ತಮ್ಮ ಪಾಲಿಗೆ ಬಂದ ಸ್ವಾಸ್ತ್ಯಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಥಮ ಕುಲವಾಗಿ ಯೆಹೂದ ಕುಲದವರು ಏಕೆ ನೇಮಿಸಲ್ಪಟ್ಟರು? ಸಾಮಾನ್ಯವಾಗಿ ಈ ಸುಯೋಗವು ಯಾಕೋಬನ ಚೊಚ್ಚಲಮಗನಾದ ರೂಬೇನನ ಕುಲಕ್ಕೆ ಹೋಗಲಿಕ್ಕಿತ್ತು. ಆದರೆ ಯಾಕೋಬನು ತನ್ನ ಮರಣಶಯ್ಯೆಯ ಪ್ರವಾದನೆಯಲ್ಲಿ, ರೂಬೇನನು ತನ್ನ ಚೊಚ್ಚಲತನದ ಹಕ್ಕನ್ನು ಕಳೆದುಕೊಂಡಿದ್ದರಿಂದ ಅವನು ಇನ್ನು ಪ್ರಮುಖನ ಸ್ಥಾನದಲ್ಲಿ ಇರಬಾರದೆಂದು ಮುಂತಿಳಿಸಿದನು. ಕ್ರೂರ ರೀತಿಯಲ್ಲಿ ವರ್ತಿಸಿದ್ದ ಸಿಮೆಯೋನನೂ ಲೇವಿಯೂ ಇಸ್ರಾಯೇಲ್ಯರಲ್ಲಿ ಚದರಿಸಲ್ಪಡಲಿದ್ದರು. (ಆದಿಕಾಂಡ 49:​3-5, 7) ಆದುದರಿಂದ, ಈ ಸುಯೋಗವನ್ನು ಪಡೆದುಕೊಳ್ಳುವ ಸಾಲಿನಲ್ಲಿದ್ದ ಮುಂದಿನ ಕುಲವು ಯಾಕೋಬನ ನಾಲ್ಕನೆಯ ಮಗನಾದ ಯೆಹೂದನದ್ದಾಗಿತ್ತು. ಯೆಹೂದ ಕುಲದವರೊಂದಿಗೆ ಹೋದ ಸಿಮೆಯೋನ್ಯರಿಗೂ, ಯೆಹೂದಕ್ಕೆ ಸಿಕ್ಕಿದ ದೊಡ್ಡ ಕ್ಷೇತ್ರದಾದ್ಯಂತ ಚದರಿದ್ದ ಚಿಕ್ಕಚಿಕ್ಕ ಸ್ಥಳಗಳಲ್ಲಿ ಪಾಲುಸಿಕ್ಕಿತು. *​—⁠ಯೆಹೋಶುವ 19:⁠9.

1:​6, 7​—⁠ಸೋಲಿಸಲ್ಪಟ್ಟ ಅರಸರ ಕೈಕಾಲುಗಳ ಹೆಬ್ಬೆರಳುಗಳು ಏಕೆ ಕತ್ತರಿಸಲ್ಪಟ್ಟವು? ತನ್ನ ಕೈಕಾಲುಗಳ ಹೆಬ್ಬೆರಳುಗಳನ್ನು ಕಳೆದುಕೊಂಡಿರುವ ಒಬ್ಬ ವ್ಯಕ್ತಿಯು ಮಿಲಿಟರಿ ಚಟುವಟಿಕೆಗೆ ಅಸಮರ್ಥನಾಗುತ್ತಿದ್ದನು ಎಂಬುದು ಸುವ್ಯಕ್ತ. ಕೈಯ ಹೆಬ್ಬೆರಳುಗಳಿಲ್ಲದೆ ಒಬ್ಬ ಸೈನಿಕನು ಹೇಗೆ ಒಂದು ಕತ್ತಿಯನ್ನೊ ಅಥವಾ ಬರ್ಜಿಯನ್ನೋ ಹಿಡಿಯಸಾಧ್ಯವಿತ್ತು? ಮತ್ತು ಕಾಲುಗಳ ಹೆಬ್ಬೆರಳುಗಳನ್ನು ಕಳೆದುಕೊಳ್ಳುವುದರ ಫಲಿತಾಂಶವಾಗಿ, ಒಬ್ಬನು ತನ್ನ ಸಮತೂಕವನ್ನು ಸರಿಯಾಗಿ ಕಾಪಾಡಿಕೊಳ್ಳಲು ಅಸಮರ್ಥನಾಗುತ್ತಿದ್ದನು.

ನಮಗಾಗಿರುವ ಪಾಠಗಳು:

2:​10-12. ‘ಯೆಹೋವನ ಉಪಕಾರಗಳಲ್ಲಿ ಒಂದನ್ನೂ ಮರೆಯದಿರಲಿಕ್ಕಾಗಿ’ ನಾವು ಕ್ರಮವಾದ ಬೈಬಲ್‌ ಅಧ್ಯಯನ ಕಾರ್ಯಕ್ರಮವನ್ನು ಹೊಂದಿರಬೇಕು. (ಕೀರ್ತನೆ 103:⁠2) ಹೆತ್ತವರು ತಮ್ಮ ಮಕ್ಕಳ ಹೃದಯಗಳೊಳಗೆ ದೇವರ ವಾಕ್ಯದ ಸತ್ಯಗಳನ್ನು ತುಂಬಿಸುವ ಆವಶ್ಯಕತೆಯಿದೆ.​—⁠ಧರ್ಮೋಪದೇಶಕಾಂಡ 6:​6-9.

2:​14, 21, 22. ಯೆಹೋವನು ಒಂದು ಉದ್ದೇಶಕ್ಕಾಗಿಯೇ ತನ್ನ ಅವಿಧೇಯ ಜನರಿಗೆ ಕೆಟ್ಟ ವಿಷಯಗಳು ಸಂಭವಿಸುವಂತೆ ಅನುಮತಿಸುತ್ತಾನೆ; ಅಂದರೆ ಅವರನ್ನು ಶಿಕ್ಷಿಸಲಿಕ್ಕಾಗಿ, ಅವರನ್ನು ಪರಿಷ್ಕರಿಸಲಿಕ್ಕಾಗಿ ಮತ್ತು ಅವರು ತನ್ನ ಬಳಿಗೆ ಹಿಂದಿರುಗುವಂತೆ ಪ್ರಚೋದಿಸಲಿಕ್ಕಾಗಿಯೇ.

ಯೆಹೋವನು ನ್ಯಾಯಸ್ಥಾಪಕರನ್ನು ಕಳುಹಿಸುತ್ತಾನೆ

(ನ್ಯಾಯಸ್ಥಾಪಕರು 3:​7–16:⁠31)

ನ್ಯಾಯಸ್ಥಾಪಕರ ಸಾಹಸಕಾರ್ಯಗಳ ರೋಮಾಂಚಕ ವೃತ್ತಾಂತವು, ಮೆಸಪೊಟೇಮಿಯದ ಅರಸನ ಕೆಳಗೆ ಇಸ್ರಾಯೇಲ್ಯರ ಎಂಟು ವರ್ಷಗಳ ಅಡಿಯಾಳುತನಕ್ಕೆ ಒತ್ನೀಯೇಲನು ಅಂತ್ಯವನ್ನು ತಂದ ವಿಷಯದೊಂದಿಗೆ ಆರಂಭಗೊಳ್ಳುತ್ತದೆ. ನ್ಯಾಯಸ್ಥಾಪಕನಾದ ಏಹೂದನು ಒಂದು ಧೈರ್ಯಭರಿತ ಸಂಚನ್ನು ಉಪಯೋಗಿಸಿ ಮೋವಾಬ್ಯರ ಅರಸನಾದ ಎಗ್ಲೋನನನ್ನು ಕೊಲ್ಲುತ್ತಾನೆ. ಧೀರನಾದ ಶಮ್ಗರನೊಬ್ಬನೇ ಎತ್ತಿನ ಮುಳ್ಳುಗೋಲನ್ನು ಉಪಯೋಗಿಸಿ 600 ಮಂದಿ ಫಿಲಿಷ್ಟಿಯರನ್ನು ಹತಮಾಡುತ್ತಾನೆ. ಇಸ್ರಾಯೇಲಿನಲ್ಲಿ ಪ್ರವಾದಿನಿಯಾಗಿದ್ದ ದೆಬೋರಳ ಉತ್ತೇಜನದಿಂದ ಮತ್ತು ಯೆಹೋವನ ಬೆಂಬಲದಿಂದ, ಬಾರಾಕನು ಹಾಗೂ ಕಡಿಮೆ ಶಸ್ತ್ರಸಜ್ಜಿತರಾಗಿದ್ದ ಅವನ ಹತ್ತು ಸಾವಿರ ಮಂದಿ ಸೈನಿಕರು ಸೀಸೆರನ ಪ್ರಬಲ ಸೈನ್ಯವನ್ನು ಗಲಿಬಿಲಿಗೊಳಿಸಿಬಿಡುತ್ತಾರೆ. ಯೆಹೋವನು ಗಿದ್ಯೋನನನ್ನು ನೇಮಿಸುತ್ತಾನೆ ಮತ್ತು ಅವನಿಗೂ ಅವನ 300 ಮಂದಿ ಜನರಿಗೂ ಮಿದ್ಯಾನ್ಯರ ವಿರುದ್ಧ ಜಯವನ್ನು ನೀಡುತ್ತಾನೆ.

ಯೆಪ್ತಾಹನ ಮೂಲಕ ಯೆಹೋವನು ಇಸ್ರಾಯೇಲ್ಯರನ್ನು ಅಮ್ಮೋನಿಯರಿಂದ ವಿಮೋಚಿಸುತ್ತಾನೆ. ಇಸ್ರಾಯೇಲ್‌ನಲ್ಲಿ ನ್ಯಾಯತೀರಿಸುತ್ತಿದ್ದ 12 ಮಂದಿ ಪುರುಷರಲ್ಲಿ ತೋಲ, ಯಾಯೀರ, ಇಬ್ಚಾನ, ಏಲೋನ ಮತ್ತು ಅಬ್ದೋನರೂ ಸೇರಿದ್ದಾರೆ. ನ್ಯಾಯಸ್ಥಾಪಕರ ಕಾಲಾವಧಿಯು, ಫಿಲಿಷ್ಟಿಯರ ವಿರುದ್ಧ ಹೋರಾಟ ನಡೆಸುವ ಸಂಸೋನನೊಂದಿಗೆ ಕೊನೆಗೊಳ್ಳುತ್ತದೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

4:​8​—⁠ಪ್ರವಾದಿನಿಯಾದ ದೆಬೋರಳು ತನ್ನ ಸಂಗಡ ಕದನರಂಗಕ್ಕೆ ಬರಬೇಕು ಎಂದು ಬಾರಾಕನು ಒತ್ತಾಯಿಸಿದ್ದೇಕೆ? ಸೀಸೆರನ ಸೈನ್ಯದ ವಿರುದ್ಧ ಒಬ್ಬನೇ ಮುನ್ನುಗ್ಗಲು ತಾನು ಸಾಕಷ್ಟು ಅರ್ಹನಲ್ಲ ಎಂಬ ಅನಿಸಿಕೆ ಅವನಿಗಾಯಿತು ಎಂಬುದು ಸುವ್ಯಕ್ತ. ಪ್ರವಾದಿನಿಯು ಜೊತೆಗಿರುವುದು, ತಮಗೆ ದೇವರ ಮಾರ್ಗದರ್ಶನವಿದೆ ಎಂಬ ಪುನರಾಶ್ವಾಸನೆಯನ್ನು ಅವನಿಗೂ ಅವನ ಜನರಿಗೂ ಕೊಡಸಾಧ್ಯವಿತ್ತು ಮತ್ತು ಅವರಲ್ಲಿ ವಿಶ್ವಾಸವನ್ನೂ ಮೂಡಿಸಲಿತ್ತು. ಆದುದರಿಂದ, ದೆಬೋರಳು ತನ್ನೊಂದಿಗೆ ಬರಬೇಕು ಎಂದು ಬಾರಾಕನು ಒತ್ತಾಯಿಸಿದ್ದು ಅವನ ದೌರ್ಬಲ್ಯದ ಸಂಕೇತವಲ್ಲ, ಬಲವಾದ ನಂಬಿಕೆಯ ಸಂಕೇತವಾಗಿದೆ.

5:​20​—⁠ನಕ್ಷತ್ರಗಳು ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದ್ದು ಹೇಗೆ? ಇದು ದೇವದೂತರ ಸಹಾಯವನ್ನು, ಸೀಸೆರನ ಜೋಯಿಸರಿಂದ ವಿಪತ್ತಿನ ಅಪಶಕುನವಾಗಿ ಪರಿಗಣಿಸಲ್ಪಟ್ಟ ಉಲ್ಕಾಶೇಷಗಳ ಬೀಳುವಿಕೆಯನ್ನು, ಅಥವಾ ಸೀಸೆರನ ವಿಷಯದಲ್ಲಿ ಜ್ಯೋತಿಶ್ಶಾಸ್ತ್ರದ ಭವಿಷ್ಯನುಡಿಗಳು ಸುಳ್ಳಾಗಿ ಪರಿಣಮಿಸಿದ್ದನ್ನು ಒಳಗೂಡಿತ್ತೋ ಇಲ್ಲವೋ ಎಂಬುದನ್ನು ಬೈಬಲ್‌ ತಿಳಿಸುವುದಿಲ್ಲ. ಆದರೂ, ಯಾವುದೋ ಒಂದು ರೀತಿಯ ದೈವಿಕ ಹಸ್ತಕ್ಷೇಪವು ಇದರಲ್ಲಿ ಒಳಗೂಡಿತ್ತು ಎಂಬುದರಲ್ಲಿ ಸಂಶಯವಿಲ್ಲ.

7:​1-3; 8:​10​—⁠ಶತ್ರುಗಳ 1,35,000 ಸೈನಿಕರಿಗೆ ಹೋಲಿಸುವಾಗ ಗಿದ್ಯೋನನ ಸಂಗಡ ಇದ್ದ 32,000 ಜನರು ಹೆಚ್ಚಾಗಿದ್ದಾರೆ ಎಂದು ಯೆಹೋವನು ಏಕೆ ಹೇಳಿದನು? ಏಕೆಂದರೆ ಯೆಹೋವನು ತಾನೇ ಗಿದ್ಯೋನನಿಗೆ ಮತ್ತು ಅವನ ಜನರಿಗೆ ವಿಜಯವನ್ನು ನೀಡಲಿದ್ದನು. ತಮ್ಮ ಸ್ವಂತ ಬಲದಿಂದಲೇ ತಾವು ಮಿದ್ಯಾನ್ಯರನ್ನು ಸೋಲಿಸಿದೆವು ಎಂದು ಅವರು ನೆನಸುವುದನ್ನು ದೇವರು ಇಷ್ಟಪಡಲಿಲ್ಲ.

11:​30, 31​—⁠ಯೆಪ್ತಾಹನು ಹರಕೆಯನ್ನು ಮಾಡುತ್ತಿದ್ದಾಗ, ಮಾನವ ಯಜ್ಞದ ಕುರಿತಾದ ವಿಷಯವು ಅವನ ಮನಸ್ಸಿನಲ್ಲಿತ್ತೋ? ಇಂಥ ಆಲೋಚನೆಯು ಯೆಪ್ತಾಹನ ಮನಸ್ಸಿನಲ್ಲಿರಸಾಧ್ಯವಿರಲಿಲ್ಲ, ಏಕೆಂದರೆ ಧರ್ಮಶಾಸ್ತ್ರವು ಹೀಗೆ ಆಜ್ಞಾಪಿಸಿತ್ತು: “ಮಕ್ಕಳನ್ನು ಆಹುತಿಕೊಡುವವರು . . . ಯಾರೂ ನಿಮ್ಮಲ್ಲಿ ಇರಬಾರದು.” (ಧರ್ಮೋಪದೇಶಕಾಂಡ 18:​10, 11) ಆದರೂ, ಯೆಪ್ತಾಹನ ಮನಸ್ಸಿನಲ್ಲಿ ಒಂದು ಪ್ರಾಣಿಯಲ್ಲ ಬದಲಾಗಿ ಒಬ್ಬ ವ್ಯಕ್ತಿಯ ಕುರಿತಾದ ವಿಚಾರವಿತ್ತು. ಏಕೆಂದರೆ ಯಜ್ಞಕ್ಕೆ ಸೂಕ್ತವಾದ ಪ್ರಾಣಿಗಳನ್ನು ಇಸ್ರಾಯೇಲ್ಯರ ಮನೆಗಳಲ್ಲಿ ಇಡದಿರುವುದು ಸಂಭವನೀಯವಾಗಿತ್ತು. ಮತ್ತು ಒಂದು ಪ್ರಾಣಿಯಜ್ಞವು ಒಂದು ವಿಶೇಷವಾದ ಉಡುಗೊರೆಯಾಗಿರಸಾಧ್ಯವಿರಲಿಲ್ಲ. ತನ್ನನ್ನು ಎದುರುಗೊಳ್ಳಲಿಕ್ಕಾಗಿ ಮನೆಯ ಬಾಗಲಿನಿಂದ ತನ್ನ ಮಗಳೇ ಮೊದಲು ಬರಬಹುದು ಎಂಬುದು ಯೆಪ್ತಾಹನಿಗೆ ತಿಳಿದಿತ್ತು. ಅವಳನ್ನು “ಸರ್ವಾಂಗಹೋಮವಾಗಿ” ಅರ್ಪಿಸಬೇಕಾಗಿತ್ತು, ಅಂದರೆ ಆಲಯದ ಸಂಬಂಧದಲ್ಲಿ ಯೆಹೋವನ ಅನನ್ಯ ಸೇವೆಗಾಗಿ ಅರ್ಪಿಸಲ್ಪಡಬೇಕಾಗಿತ್ತು.

ನಮಗಾಗಿರುವ ಪಾಠಗಳು:

3:​10. ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳಲ್ಲಿನ ಸಾಫಲ್ಯವು ಮಾನವ ವಿವೇಕದ ಮೇಲೆ ಅಲ್ಲ, ಬದಲಾಗಿ ಯೆಹೋವನ ಆತ್ಮದ ಮೇಲೆ ಹೊಂದಿಕೊಂಡಿದೆ.​—⁠ಕೀರ್ತನೆ 127:⁠1.

3:21. ಏಹೂದನು ತನ್ನ ಕತ್ತಿಯನ್ನು ಬಹಳ ನೈಪುಣ್ಯದಿಂದ ಹಾಗೂ ಧೈರ್ಯದಿಂದ ಉಪಯೋಗಿಸಿದನು. “ದೇವರ ವಾಕ್ಯವೆಂಬ ಕತ್ತಿಯನ್ನು” ಉಪಯೋಗಿಸುವುದರಲ್ಲಿ ನಾವು ಸಹ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಇದರ ಅರ್ಥ, ನಮ್ಮ ಶುಶ್ರೂಷೆಯಲ್ಲಿ ನಾವು ಶಾಸ್ತ್ರವಚನಗಳನ್ನು ಧೈರ್ಯದಿಂದ ಉಪಯೋಗಿಸಬೇಕು.​—⁠ಎಫೆಸ 6:17; 2 ತಿಮೊಥೆಯ 2:⁠15.

6:​11-15; 8:​1-3, 22, 23. ಗಿದ್ಯೋನನ ವಿನಯಶೀಲತೆಯು ನಮಗೆ ಮೂರು ಪ್ರಮುಖ ಪಾಠಗಳನ್ನು ಕಲಿಸುತ್ತದೆ: (1) ಒಂದು ಸೇವಾ ಸುಯೋಗವು ನಮಗೆ ಕೊಡಲ್ಪಡುವಾಗ, ಅದರಿಂದ ಸಿಗಬಹುದಾದ ಕೀರ್ತಿ ಅಥವಾ ಸ್ಥಾನಮಾನದ ಕುರಿತು ಆಲೋಚಿಸುವುದಕ್ಕೆ ಬದಲಾಗಿ ಅದು ತಂದೊಡ್ಡುವ ಜವಾಬ್ದಾರಿಯ ಕುರಿತು ನಾವು ಆಲೋಚಿಸಬೇಕಾಗಿದೆ. (2) ಜಗಳವಾಡುವ ಪ್ರವೃತ್ತಿಯಿರುವವರೊಂದಿಗೆ ವ್ಯವಹರಿಸುವಾಗ, ವಿನಯಶೀಲತೆಯನ್ನು ತೋರಿಸುವುದು ವಿವೇಕದ ಮಾರ್ಗವಾಗಿದೆ. (3) ವಿನಯಶೀಲತೆಯು ಸ್ಥಾನಕ್ಕಾಗಿ ಹಾತೊರೆಯುವುದರಿಂದ ನಮ್ಮನ್ನು ದೂರವಿರಿಸುತ್ತದೆ.

6:​17-22, 36-40. ನಾವು ಸಹ ಎಚ್ಚರಿಕೆಯಿಂದಿರಬೇಕು ಮತ್ತು “ಆತ್ಮದ ಎಲ್ಲಾ ನುಡಿಗಳನ್ನು ನಂಬ”ಬಾರದು. ಅದಕ್ಕೆ ಬದಲಾಗಿ ನಾವು “ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.” (1 ಯೋಹಾನ 4:1) ಒಬ್ಬ ಹೊಸ ಕ್ರೈಸ್ತ ಹಿರಿಯನು, ತಾನು ಕೊಡಲು ಬಯಸುವ ಸಲಹೆಯು ದೇವರ ವಾಕ್ಯದ ಮೇಲೆ ಬಲವಾಗಿ ಆಧಾರಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಹೆಚ್ಚು ಅನುಭವಸ್ಥರಾದ ಹಿರಿಯರನ್ನು ಸಂಪರ್ಕಿಸುವುದು ವಿವೇಕಯುತವಾದದ್ದಾಗಿದೆ.

6:​25-27. ತನ್ನ ವೈರಿಗಳಿಗೆ ಅನಗತ್ಯವಾಗಿ ಕೋಪವನ್ನೆಬ್ಬಿಸದಿರುವ ವಿಷಯದಲ್ಲಿ ಗಿದ್ಯೋನನು ವಿವೇಕವನ್ನು ಉಪಯೋಗಿಸಿದನು. ಸುವಾರ್ತೆಯನ್ನು ಸಾರುತ್ತಿರುವಾಗ ನಾವು ಸಹ ನಮ್ಮ ಮಾತಾಡುವ ಧಾಟಿಯಿಂದ ಇತರರಿಗೆ ಅನಗತ್ಯವಾಗಿ ಕೋಪವನ್ನೆಬ್ಬಿಸದಂತೆ ಜಾಗರೂಕರಾಗಿರಬೇಕು.

7:⁠6. ಯೆಹೋವನ ಸೇವೆಮಾಡುವ ವಿಷಯದಲ್ಲಿ ನಾವು ಗಿದ್ಯೋನನ 300 ಮಂದಿ ಸೈನಿಕರಂತಿರಬೇಕು, ಅಂದರೆ ಅವರಂತೆ ಜಾಗರುಕರೂ ಉತ್ಸುಕರೂ ಆಗಿರಬೇಕು.

9:​8-15. ಅಹಂಕಾರದಿಂದ ವರ್ತಿಸುವುದು ಮತ್ತು ಸ್ಥಾನಕ್ಕಾಗಿ ಅಥವಾ ಅಧಿಕಾರಕ್ಕಾಗಿ ಆಕಾಂಕ್ಷೆಯನ್ನು ಬೆಳೆಸಿಕೊಳ್ಳುವುದು ಎಷ್ಟು ಮೂರ್ಖತನವಾಗಿದೆ!

11:​35-37. ಯೆಪ್ತಾಹನ ಅತ್ಯುತ್ತಮ ಮಾದರಿಯು, ಅವನ ಮಗಳು ಬಲವಾದ ನಂಬಿಕೆಯನ್ನು ಮತ್ತು ಸ್ವತ್ಯಾಗದ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿತು ಎಂಬುದರಲ್ಲಿ ಸಂಶಯವೇ ಇಲ್ಲ. ಇಂದು ಹೆತ್ತವರು ತಮ್ಮ ಮಕ್ಕಳ ಮುಂದೆ ಇಂಥದ್ದೇ ಮಾದರಿಯನ್ನಿಡಬಲ್ಲರು.

11:40. ಯೆಹೋವನ ಸೇವೆಯಲ್ಲಿ ಸಿದ್ಧಮನಸ್ಸನ್ನು ತೋರಿಸುವಂಥ ಒಬ್ಬ ವ್ಯಕ್ತಿಯನ್ನು ಶ್ಲಾಘಿಸುವುದು ಆ ವ್ಯಕ್ತಿಯನ್ನು ಉತ್ತೇಜಿಸುತ್ತದೆ.

13:⁠8. ತಮ್ಮ ಮಕ್ಕಳಿಗೆ ಕಲಿಸುವಾಗ, ಹೆತ್ತವರು ಮಾರ್ಗದರ್ಶನಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು ಮತ್ತು ಆತನ ಮಾರ್ಗದರ್ಶನವನ್ನು ಅನುಸರಿಸಬೇಕು.​—⁠2 ತಿಮೊಥೆಯ 3:⁠16.

14:​16, 17; 16:16. ಅಳುವ ಮತ್ತು ಕಾಡಿಸುವ ಮೂಲಕ ಇತರರ ಮೇಲೆ ಒತ್ತಡವನ್ನು ಹಾಕುವುದು ಒಂದು ಸಂಬಂಧವನ್ನು ಹಾಳುಮಾಡಬಲ್ಲದು.​—⁠ಜ್ಞಾನೋಕ್ತಿ 19:13; 21:⁠19.

ಇಸ್ರಾಯೇಲಿನಲ್ಲಿನ ಇತರ ತಪ್ಪುಗಳು

(ನ್ಯಾಯಸ್ಥಾಪಕರು 17:​1–21:⁠25)

ನ್ಯಾಯಸ್ಥಾಪಕರು ಪುಸ್ತಕದ ಕೊನೆಯ ಭಾಗವು ಎರಡು ಪ್ರಮುಖ ವೃತ್ತಾಂತಗಳನ್ನು ಒಳಗೂಡಿದೆ. ಮೊದಲನೆಯದ್ದು ಮೀಕ ಎಂಬ ಹೆಸರಿನ ವ್ಯಕ್ತಿಯದ್ದಾಗಿದೆ. ಇವನು ತನ್ನ ಮನೆಯಲ್ಲಿ ಒಂದು ವಿಗ್ರಹವನ್ನು ಪ್ರತಿಷ್ಠಾಪಿಸಿ, ತನಗೋಸ್ಕರ ಯಾಜಕನಾಗಿ ಸೇವೆಮಾಡುವಂತೆ ಒಬ್ಬ ಲೇವಿಯನನ್ನು ಕೆಲಸಕ್ಕಿಟ್ಟುಕೊಳ್ಳುತ್ತಾನೆ. ಲಯಿಷ್‌ ಅಥವಾ ಲೆಷೆಮ್‌ ಪಟ್ಟಣಗಳನ್ನು ನಾಶಪಡಿಸಿದ ಬಳಿಕ ದಾನ್‌ ಕುಲದವರು ತಮ್ಮದೇ ಪಟ್ಟಣವನ್ನು ಕಟ್ಟುತ್ತಾರೆ ಮತ್ತು ಅದಕ್ಕೆ ದಾನ್‌ ಎಂದು ಹೆಸರಿಡುತ್ತಾರೆ. ಮೀಕನ ವಿಗ್ರಹವನ್ನೂ ಅವನ ಯಾಜಕನನ್ನೂ ಉಪಯೋಗಿಸಿ ಅವರು ದಾನ್‌ನಲ್ಲಿ ಇನ್ನೊಂದು ರೀತಿಯ ಆರಾಧನೆಯನ್ನು ಆರಂಭಿಸುತ್ತಾರೆ. ಆದರೆ ಯೆಹೋಶುವನ ಮರಣಕ್ಕೆ ಮುಂಚೆಯೇ ಲಯಿಷ್‌ ಪಟ್ಟಣವು ವಶಪಡಿಸಿಕೊಳ್ಳಲ್ಪಡುತ್ತದೆ.​—⁠ಯೆಹೋಶುವ 19:⁠47.

ಎರಡನೆಯ ಘಟನೆಯು ಯೆಹೋಶುವನ ಮರಣಾನಂತರ ಸ್ವಲ್ಪದರಲ್ಲೇ ಸಂಭವಿಸುತ್ತದೆ. ಗಿಬೆಯ ಎಂಬ ಬೆನ್ಯಾಮೀನ್‌ ಕುಲದ ಪಟ್ಟಣದ ಜನರಿಂದ ನಡೆಸಲ್ಪಟ್ಟ ಸಾಮೂಹಿಕ ಲೈಂಗಿಕ ದುಷ್ಕೃತ್ಯವು, ಇಡೀ ಬೆನ್ಯಾಮೀನ್‌ ಕುಲದ ಸಂಹಾರಕ್ಕೆ ಮುನ್ನಡಿಸುತ್ತದಾದರೂ, 600 ಮಂದಿ ಮಾತ್ರ ಪಾರಾಗಿ ಉಳಿಯುತ್ತಾರೆ. ಆದರೆ ಒಂದು ಪ್ರಾಯೋಗಿಕ ಏರ್ಪಾಡು ಅವರು ಹೆಂಡತಿಯರನ್ನು ಪಡೆದುಕೊಳ್ಳುವಂತೆ ಅನುಮತಿಸುತ್ತದೆ, ಮತ್ತು ದಾವೀದನ ಆಳ್ವಿಕೆಯಷ್ಟಕ್ಕೆ ಆ ಯುದ್ಧವೀರರ ಸಂಖ್ಯೆಯು ಸುಮಾರು 60,000ದಷ್ಟಾಗುತ್ತದೆ.​—⁠1 ಪೂರ್ವಕಾಲವೃತ್ತಾಂತ 7:6-11.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

17:6; 21:​25​—⁠“ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದ” ವಿಷಯವು, ಅರಾಜಕತೆಯನ್ನು ಉತ್ತೇಜಿಸಿತೋ? ಇಲ್ಲ, ಏಕೆಂದರೆ ಯೆಹೋವನು ತನ್ನ ಜನರನ್ನು ಮಾರ್ಗದರ್ಶಿಸಲಿಕ್ಕಾಗಿ ಸಾಕಷ್ಟು ಏರ್ಪಾಡುಗಳನ್ನು ಮಾಡಿದ್ದನು. ಆತನು ಅವರಿಗೆ ತನ್ನ ಮಾರ್ಗದಲ್ಲಿ ಶಿಕ್ಷಣವನ್ನು ನೀಡಲು ಧರ್ಮಶಾಸ್ತ್ರವನ್ನು ಮತ್ತು ಯಾಜಕತ್ವವನ್ನು ಒದಗಿಸಿದ್ದನು. ಊರೀಮ್‌ ಮತ್ತು ತುಮ್ಮೀಮ್‌ನ ಮುಖಾಂತರ ಮಹಾಯಾಜಕನು ಪ್ರಾಮುಖ್ಯ ವಿಷಯಗಳಲ್ಲಿ ದೇವರ ಸಲಹೆಯನ್ನು ಪಡೆಯಬಹುದಿತ್ತು. (ವಿಮೋಚನಕಾಂಡ 28:30) ಪ್ರತಿಯೊಂದು ನಗರದಲ್ಲಿಯೂ ಸದೃಢವಾದ ಸಲಹೆಯನ್ನು ಒದಗಿಸಲು ಸಮರ್ಥ ಹಿರೀಪುರುಷರಿದ್ದರು. ಒಬ್ಬ ಇಸ್ರಾಯೇಲ್ಯನು ಈ ಒದಗಿಸುವಿಕೆಗಳನ್ನು ಸದುಪಯೋಗಿಸಿಕೊಳ್ಳುವಾಗ, ಅವನ ಮನಸ್ಸಾಕ್ಷಿಗೆ ಸದೃಢವಾದ ಮಾರ್ಗದರ್ಶನವು ಸಿಗುತ್ತಿತ್ತು. ಈ ರೀತಿಯಲ್ಲಿ “ತನ್ನ ಮನಸ್ಸಿಗೆ ಬಂದಂತೆ” ಮಾಡುವುದರಿಂದ ಅವನಿಗೆ ಒಳಿತಾಗುತ್ತಿತ್ತು. ಇನ್ನೊಂದು ಕಡೆಯಲ್ಲಿ, ವ್ಯಕ್ತಿಯೊಬ್ಬನು ಧರ್ಮಶಾಸ್ತ್ರವನ್ನು ತಾತ್ಸಾರಮಾಡಿ, ನಡತೆ ಹಾಗೂ ಆರಾಧನೆಯ ವಿಷಯದಲ್ಲಿ ತನ್ನದೇ ನಿರ್ಣಯಗಳನ್ನು ಮಾಡುವಲ್ಲಿ, ಇದರ ಫಲಿತಾಂಶವು ಕೆಟ್ಟದಾಗಿರುತ್ತಿತ್ತು.

20:​17-48​—⁠ಬೆನ್ಯಾಮೀನ್‌ ಕುಲದವರು ಶಿಕ್ಷಾರ್ಹರಾಗಿದ್ದರೂ, ಇತರ ಕುಲಗಳವರು ಬೆನ್ಯಾಮೀನ್‌ ಕುಲದವರಿಂದ ಎರಡು ಬಾರಿ ಸೋಲನ್ನು ಅನುಭವಿಸುವಂತೆ ಯೆಹೋವನು ಏಕೆ ಅನುಮತಿಸಿದನು? ನಂಬಿಗಸ್ತ ಕುಲಗಳು ಆರಂಭದಲ್ಲಿ ಭಾರಿ ನಷ್ಟವನ್ನು ಅನುಭವಿಸುವಂತೆ ಅನುಮತಿಸುವ ಮೂಲಕ ಯೆಹೋವನು ಇಸ್ರಾಯೇಲಿನಿಂದ ಕೇಡನ್ನು ಬೇರುಸಮೇತ ತೆಗೆದುಹಾಕಲು ಅವುಗಳಿಗಿರುವ ದೃಢನಿರ್ಧಾರವನ್ನು ಪರೀಕ್ಷಿಸಿದನು.

ನಮಗಾಗಿರುವ ಪಾಠಗಳು:

19:​14, 15. ಗಿಬೆಯ ಅತಿಥಿಸತ್ಕಾರವನ್ನು ಮಾಡಲು ಮನಸ್ಸುಮಾಡದೆ ಇದ್ದದ್ದು ಗಂಭೀರವಾದ ನೈತಿಕ ಕೊರತೆಯನ್ನು ರುಜುಪಡಿಸಿತು. “ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ” ಎಂಬ ಬುದ್ಧಿವಾದವು ಕ್ರೈಸ್ತರಿಗೆ ಕೊಡಲ್ಪಟ್ಟಿದೆ.​—⁠ರೋಮಾಪುರ 12:⁠13.

ವಿಮೋಚನೆಯು ಮುಂದಿದೆ

ಅತಿ ಬೇಗನೆ, ಯೇಸು ಕ್ರಿಸ್ತನ ವಶದಲ್ಲಿರುವ ದೇವರ ರಾಜ್ಯವು ದುಷ್ಟ ಲೋಕವನ್ನು ನಾಶಮಾಡುವುದು ಮತ್ತು ಯಥಾರ್ಥರಾದ ಹಾಗೂ ನಿರ್ದೋಷಿಗಳಾದ ಜನರಿಗೆ ಮಹಾನ್‌ ವಿಮೋಚನೆಯನ್ನು ತರುವುದು. (ಜ್ಞಾನೋಕ್ತಿ 2:21, 22; ದಾನಿಯೇಲ 2:44) ‘ಆಗ ಯೆಹೋವನ ಎಲ್ಲಾ ಶತ್ರುಗಳೂ ನಾಶವಾಗುವರು; ಆತನ ಭಕ್ತರು ಪ್ರತಾಪದಿಂದ ಉದಯಿಸುವ ಸೂರ್ಯನಂತಿರುವರು.’ (ನ್ಯಾಯಸ್ಥಾಪಕರು 5:31) ನ್ಯಾಯಸ್ಥಾಪಕರು ಪುಸ್ತಕದಿಂದ ನಾವು ಕಲಿತಿರುವ ಪಾಠವನ್ನು ಅನ್ವಯಿಸಿಕೊಳ್ಳುವ ಮೂಲಕ ಯೆಹೋವನನ್ನು ಪ್ರೀತಿಸುವ ಜನರ ನಡುವೆ ಇರುವವರಾಗಿ ನಮ್ಮನ್ನು ರುಜುಪಡಿಸಿಕೊಳ್ಳೋಣ.

ನ್ಯಾಯಸ್ಥಾಪಕರ ವೃತ್ತಾಂತಗಳಲ್ಲಿ ಅನೇಕ ಬಾರಿ ತೋರಿಸಲ್ಪಟ್ಟಿರುವ ಮೂಲಭೂತ ಸತ್ಯವು ಹೀಗಿದೆ: ಯೆಹೋವನಿಗೆ ತೋರಿಸಲ್ಪಡುವ ವಿಧೇಯತೆಯು ಹೇರಳವಾದ ಆಶೀರ್ವಾದಗಳಿಗೆ ನಡಿಸುತ್ತದೆ, ಅವಿಧೇಯತೆಯು ವಿಪತ್ಕಾರಕ ಫಲಿತಾಂಶಗಳಿಗೆ ನಡಿಸುತ್ತದೆ. (ಧರ್ಮೋಪದೇಶಕಾಂಡ 11:26-28) ದೇವರು ನಮಗೆ ತಿಳಿಯಪಡಿಸಿರುವ ಆತನ ಚಿತ್ತಕ್ಕೆ “ಮನಃಪೂರ್ವಕವಾಗಿ ಅಧೀನ”ರಾಗುವುದು ಎಷ್ಟು ಅತ್ಯಾವಶ್ಯಕವಾದದ್ದಾಗಿದೆ!​—⁠ರೋಮಾಪುರ 6:17; 1 ಯೋಹಾನ 2:⁠17.

[ಪಾದಟಿಪ್ಪಣಿ]

^ ಪ್ಯಾರ. 10 ಇಸ್ರಾಯೇಲಿನಾದ್ಯಂತ ಚದರಿದ್ದ 48 ಪಟ್ಟಣಗಳನ್ನು ಬಿಟ್ಟು ಲೇವಿಕುಲದವರಿಗೆ ವಾಗ್ದತ್ತ ದೇಶದಲ್ಲಿ ಬೇರೆ ಯಾವ ಸ್ವಾಸ್ತ್ಯವೂ ಕೊಡಲ್ಪಡಲಿಲ್ಲ.

[ಪುಟ 25ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

‘ಯೆಹೋವನು ಅವರನ್ನು ಸೂರೆಮಾಡುವವರ ಕೈಯಿಂದ ತಪ್ಪಿಸುವದಕ್ಕೋಸ್ಕರ ನ್ಯಾಯಸ್ಥಾಪಕರನ್ನು ಕಳುಹಿಸುತ್ತಾನೆ.’​—⁠ನ್ಯಾಯಸ್ಥಾಪಕರು 2:⁠16

ನ್ಯಾಯಸ್ಥಾಪಕರು

1. ಒತ್ನೀಯೇಲ (ಮನಸ್ಸೆ ಕುಲ)

2. ಏಹೂದ (ಯೆಹೂದ ಕುಲ)

3. ಶಮ್ಗರ (ಯೆಹೂದ ಕುಲ)

4. ಬಾರಾಕ್‌ (ನಫ್ತಾಲಿ ಕುಲ)

5. ಗಿದ್ಯೋನ್‌ (ಇಸ್ಸಾಕಾರ್‌ ಕುಲ)

6. ತೋಲ (ಮನಸ್ಸೆ ಕುಲ)

7. ಯಾಯೀರ (ಮನಸ್ಸೆ ಕುಲ)

8. ಯೆಪ್ತಾಹ (ಗಾದ್‌ ಕುಲ)

9. ಇಬ್ಚಾನ (ಅಶೇರ್‌ ಕುಲ)

10. ಏಲೋನ (ಜೆಬುಲೂನ್‌ ಕುಲ)

11. ಅಬ್ದೋನ (ಎಫ್ರಾಯೀಮ್‌ ಕುಲ)

12. ಸಂಸೋನ (ಯೆಹೂದ ಕುಲ)

ದಾನ್‌

ಮನಸ್ಸೆ

ನಫ್ತಾಲಿ

ಅಶೇರ್‌

ಜೆಬುಲೂನ್‌

ಇಸ್ಸಾಕಾರ್‌

ಮನಸ್ಸೆ

ಗಾದ್‌

ಎಫ್ರಾಯೀಮ್‌

ದಾನ್‌

ಬೆನ್ಯಾಮೀನ್‌

ರೂಬೇನ್‌

ಯೆಹೂದ

[ಪುಟ 26ರಲ್ಲಿರುವ ಚಿತ್ರ]

ದೆಬೋರಳು ತನ್ನೊಂದಿಗೆ ಕದನರಂಗಕ್ಕೆ ಬರಲೇಬೇಕೆಂಬ ಬಾರಾಕನ ಒತ್ತಾಯದಿಂದ ನೀವು ಯಾವ ಪಾಠವನ್ನು ಕಲಿತಿರಿ?