ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸಂಸೋನನು ತಾನು ಹತಿಸಿದಂಥ ಜನರ ಶವಗಳನ್ನು ಮುಟ್ಟಿದರೂ ಒಬ್ಬ ನಾಜೀರನಾಗಿಯೇ ಹೇಗೆ ಉಳಿಯಸಾಧ್ಯವಿತ್ತು?

ಪುರಾತನ ಇಸ್ರಾಯೇಲಿನಲ್ಲಿ ಒಬ್ಬ ವ್ಯಕ್ತಿಯು ಸ್ವಇಷ್ಟದಿಂದ ಹರಕೆಯನ್ನು ಮಾಡಿ, ನಿರ್ದಿಷ್ಟ ಕಾಲಾವಧಿಯ ವರೆಗೆ ನಾಜೀರನಾಗಿರಸಾಧ್ಯವಿತ್ತು. * ಈ ಹರಕೆಯನ್ನು ಮಾಡುವಂಥ ವ್ಯಕ್ತಿಯ ಮೇಲಿದ್ದ ನಿರ್ಬಂಧಗಳಲ್ಲಿ ಒಂದು ಹೀಗಿತ್ತು: “ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳೆಲ್ಲಾ ಯಾವ ಶವವನ್ನೂ ಮುಟ್ಟಬಾರದು. ತಾಯಿ, ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ ಇವರಲ್ಲಿ ಯಾರು ಸತ್ತರೂ ಅವರ ನಿಮಿತ್ತ ಅವನು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು.” ಯಾವನಾದರೂ ‘ಅಕಸ್ಮಾತ್ತಾಗಿ ಅವನ ಬಳಿಯಲ್ಲೇ ಸತ್ತರೆ’ ಆಗೇನು? ಈ ರೀತಿಯಲ್ಲಿ ಆಕಸ್ಮಿಕವಾಗಿ ಶವವನ್ನು ಮುಟ್ಟುವುದು ಅವನ ನಾಜೀರತನವನ್ನು ಅಪವಿತ್ರಗೊಳಿಸುವುದು. ಹೀಗೆ, ‘ಕಳೆದುಹೋದ ದಿನಗಳು ವ್ಯರ್ಥವಾಗುತ್ತವೆ’ ಎಂದು ತಿಳಿಸಲಾಗಿತ್ತು. ಅವನು ಶುದ್ಧೀಕರಣ ವಿಧಿಯನ್ನು ಪಾಲಿಸುವ ಅಗತ್ಯವಿತ್ತು ಹಾಗೂ ಪುನಃ ನಾಜೀರವ್ರತವನ್ನು ಮೊದಲಿನಿಂದ ಆರಂಭಿಸಬೇಕಾಗಿತ್ತು.​—⁠ಅರಣ್ಯಕಾಂಡ 6:​6-12.

ಸಂಸೋನನಾದರೋ ತೀರ ಭಿನ್ನ ಅರ್ಥದಲ್ಲಿ ನಾಜೀರನಾಗಿದ್ದನು. ಸಂಸೋನನ ಜನನಕ್ಕೆ ಮುಂಚೆಯೇ ಯೆಹೋವನ ದೂತನು ಅವನ ತಾಯಿಗೆ ಹೀಗೆ ತಿಳಿಸಿದನು: “ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು; ಅವನು ಹುಟ್ಟಿದಂದಿನಿಂದ ದೇವರಿಗೆ ಪ್ರತಿಷ್ಠಿತನಾಗಿರುವನು; ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವದಕ್ಕೆ ಪ್ರಾರಂಭಿಸುವನು ಅಂದನು.” (ನ್ಯಾಯಸ್ಥಾಪಕರು 13:5) ಸಂಸೋನನು ನಾಜೀರತನದ ಹರಕೆಯನ್ನು ಮಾಡಿಕೊಳ್ಳಲಿಲ್ಲ. ದೈವಿಕ ನೇಮಕದಿಂದಲೇ ಅವನು ಒಬ್ಬ ನಾಜೀರನಾಗಿದ್ದನು, ಮತ್ತು ಅವನ ಜೀವಮಾನದಾದ್ಯಂತ ಅವನು ನಾಜೀರನಾಗಿರಲಿದ್ದನು. ಶವವನ್ನು ಮುಟ್ಟಬಾರದು ಎಂಬ ನಿರ್ಬಂಧವು ಇವನ ವಿಷಯದಲ್ಲಿ ಅನ್ವಯವಾಗುತ್ತಿರಲಿಲ್ಲ. ಒಂದುವೇಳೆ ಇದು ಅವನಿಗೆ ಅನ್ವಯವಾಗುತ್ತಿದ್ದಲ್ಲಿ, ಅವನು ಒಂದು ಶವವನ್ನು ಆಕಸ್ಮಿಕವಾಗಿ ಮುಟ್ಟಿದ ಬಳಿಕ, ಅವನ ಜನನದ ಸಮಯದಲ್ಲೇ ಆರಂಭಗೊಂಡ ಜೀವಮಾನದಾದ್ಯಂತದ ನಾಜೀರತನವನ್ನು ಹೇಗೆ ತಾನೇ ಪುನಃ ಆರಂಭಿಸಸಾಧ್ಯವಿತ್ತು? ಆದುದರಿಂದ, ಜೀವಮಾನದಾದ್ಯಂತ ನಾಜೀರರಾಗಿ ಇರಲಿದ್ದವರ ಆವಶ್ಯಕತೆಗಳು ಯಾರು ಸ್ವಇಷ್ಟದಿಂದ ನಾಜೀರರಾಗುತ್ತಿದ್ದರೋ ಅವರ ಆವಶ್ಯಕತೆಗಳಿಗಿಂತ ಭಿನ್ನವಾಗಿದ್ದವು ಎಂಬುದು ಸುವ್ಯಕ್ತ.

ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಜೀವಮಾನದಾದ್ಯಂತ ನಾಜೀರರಾಗಿದ್ದ ಮೂವರಿಗೆ, ಅಂದರೆ ಸಂಸೋನ, ಸಮುವೇಲ ಮತ್ತು ಸ್ನಾನಿಕನಾದ ಯೋಹಾನನಿಗೆ ಯೆಹೋವನು ಕೊಟ್ಟ ಆಜ್ಞೆಗಳನ್ನು ಪರಿಗಣಿಸಿರಿ. ಈ ಮುಂಚೆ ಗಮನಿಸಿದಂತೆ, ತನ್ನ ತಲೆಯ ಕೂದಲನ್ನು ಕ್ಷೌರಮಾಡಿಸಿಕೊಳ್ಳಬಾರದೆಂಬ ಆಜ್ಞೆಯು ಸಂಸೋನನಿಗೆ ಕೊಡಲ್ಪಟ್ಟಿತ್ತು. ಹನ್ನಳು ತನಗೆ ಹುಟ್ಟಲಿದ್ದ ಮಗುವಿನ ಕುರಿತು ಅಂದರೆ ಸಮುವೇಲನ ಕುರಿತು ಈ ಹರಕೆಮಾಡಿದಳು: “ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಬರಗೊಡುವದಿಲ್ಲ.” (1 ಸಮುವೇಲ 1:11) ಸ್ನಾನಿಕನಾದ ಯೋಹಾನನ ವಿಷಯದಲ್ಲಿ ಯೆಹೋವನ ದೇವದೂತನು ಹೇಳಿದ್ದು: “ಅವನು . . . ದ್ರಾಕ್ಷಾರಸವನ್ನಾಗಲಿ ಯಾವ ಮದ್ಯವನ್ನಾಗಲಿ ಕುಡಿಯದವನಾಗಿರುವನು.” (ಲೂಕ 1:15) ಅಷ್ಟುಮಾತ್ರವಲ್ಲ, “ಯೋಹಾನನಿಗೆ ಒಂಟೇಕೂದಲಿನ ಹೊದಿಕೆಯೂ ಸೊಂಟದಲ್ಲಿ ತೊಗಲಿನ ನಡುಕಟ್ಟೂ ಇದ್ದವು. ಅವನಿಗೆ ಮಿಡಿತೆ ಮತ್ತು ಕಾಡಜೇನು ಆಹಾರವಾಗಿದ್ದವು.” (ಮತ್ತಾಯ 3:4) ಈ ಮೂವರಲ್ಲಿ ಯಾರಿಗೂ ಶವವನ್ನು ಮುಟ್ಟಬಾರದು ಎಂಬ ಆಜ್ಞೆಯು ಕೊಡಲ್ಪಟ್ಟಿರಲಿಲ್ಲ.

ಸಂಸೋನನು ಒಬ್ಬ ನಾಜೀರನಾಗಿದ್ದರೂ, ಕೊಳ್ಳೆಹೊಡೆಯುತ್ತಿದ್ದ ಜನರಿಂದ ಇಸ್ರಾಯೇಲ್ಯರನ್ನು ಸಂರಕ್ಷಿಸಲಿಕ್ಕಾಗಿ ಯೆಹೋವನು ಎಬ್ಬಿಸಿದಂಥ ನ್ಯಾಯಸ್ಥಾಪಕರಲ್ಲಿ ಇವನೂ ಒಬ್ಬನಾಗಿದ್ದನು. (ನ್ಯಾಯಸ್ಥಾಪಕರು 2:16) ಮತ್ತು ಈ ನೇಮಕವನ್ನು ಪೂರೈಸುತ್ತಿರುವಾಗ ಅವನು ಮೃತ ದೇಹಗಳನ್ನು ಮುಟ್ಟಿದನು. ಒಂದು ಸಂದರ್ಭದಲ್ಲಿ ಸಂಸೋನನು 30 ಮಂದಿ ಫಿಲಿಷ್ಟಿಯರನ್ನು ಹೊಡೆದು ಅವರ ವಸ್ತ್ರಗಳನ್ನು ಸುಲುಕೊಂಡನು. ತದನಂತರ ವೈರಿಗಳನ್ನು ಸದೆಬಡಿಯುತ್ತಾ, “ಅವರ ತೊಡೆ ಸೊಂಟಗಳನ್ನು ಮುರಿದು”ಹಾಕಿದನು. ಅವನು ಒಂದು ಕತ್ತೆಯ ಹಸಿ ದವಡೇ ಎಲುಬನ್ನು ತೆಗೆದುಕೊಂಡು ಅದರಿಂದ ಸಾವಿರ ಜನರನ್ನೂ ಹತಿಸಿದನು. (ನ್ಯಾಯಸ್ಥಾಪಕರು 14:19; 15:8, 15) ಸಂಸೋನನು ಯೆಹೋವನ ಅನುಗ್ರಹ ಹಾಗೂ ಬೆಂಬಲದ ಸಹಾಯದಿಂದ ಇದನ್ನೆಲ್ಲ ಮಾಡಿದನು. ಶಾಸ್ತ್ರವಚನಗಳು ಅವನನ್ನು ಆದರ್ಶಪ್ರಾಯ ನಂಬಿಕೆಯುಳ್ಳ ಪುರುಷನಾಗಿ ಸಂಬೋಧಿಸುತ್ತವೆ.​—⁠ಇಬ್ರಿಯ 11:32; 12:⁠1.

ಸಂಸೋನನು ಒಂದು ಸಿಂಹವನ್ನು “ಹೋತಮರಿಯನ್ನೋ ಎಂಬಂತೆ ಸೀಳಿಬಿಟ್ಟನು” ಎಂಬ ಹೇಳಿಕೆಯು, ಆಡಿನ ಮರಿಗಳನ್ನು ಸೀಳುವುದು ಅವನ ದಿನಗಳಲ್ಲಿ ಸರ್ವಸಾಮಾನ್ಯ ರೂಢಿಯಾಗಿತ್ತು ಎಂಬುದನ್ನು ಸೂಚಿಸುತ್ತದೋ?

ಇಸ್ರಾಯೇಲಿನ ನ್ಯಾಯಸ್ಥಾಪಕರ ಸಮಯದಲ್ಲಿ ಜನರು ಆಡಿನ ಮರಿಗಳನ್ನು ಸೀಳುವುದು ಸರ್ವಸಾಮಾನ್ಯವಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ನ್ಯಾಯಸ್ಥಾಪಕರು 14:6 ಹೇಳುವುದು: “ಅವನ ಕೈಯಲ್ಲಿ ಏನೂ ಇಲ್ಲದಿದ್ದರೂ ಯೆಹೋವನ ಆತ್ಮವು ಅವನ ಮೇಲೆ ಫಕ್ಕನೆ ಬಂದದರಿಂದ ಆ ಸಿಂಹವನ್ನು ಹೋತಮರಿಯನ್ನೋ ಎಂಬಂತೆ ಸೀಳಿಬಿಟ್ಟನು.” ಈ ಹೇಳಿಕೆಯು ಒಂದು ರೂಪಕಾಲಂಕಾರವಾಗಿರುವುದು ಸಂಭವನೀಯ.

‘ಅದನ್ನು ಸೀಳಿಬಿಟ್ಟನು’ ಎಂಬ ಅಭಿವ್ಯಕ್ತಿಗೆ ಎರಡು ಅರ್ಥಗಳು ಇರಸಾಧ್ಯವಿದೆ. ಒಂದೋ ಸಂಸೋನನು ಸಿಂಹದ ದವಡೆಗಳನ್ನು ಸೀಳಿಬಿಟ್ಟಿರಬಹುದು ಇಲ್ಲವೆ ಸಿಂಹದ ಅವಯವಗಳನ್ನು ಒಂದೊಂದಾಗಿ ತುಂಡುಮಾಡಿರಬಹುದು. ಈ ಅಭಿವ್ಯಕ್ತಿಯು ಒಂದು ಸಿಂಹದ ದವಡೆಗಳನ್ನು ಸೀಳುವ ಅರ್ಥವುಳ್ಳದ್ದಾಗಿರುವಲ್ಲಿ, ಒಂದು ಆಡಿನ ಮರಿಗೆ ಇದೇ ಸ್ಥಿತಿಯನ್ನು ತರುವುದು ಮಾನವ ಶಕ್ತಿಗೆ ನಿಲುಕುವಂಥದ್ದಾಗಿದೆ ಎಂಬುದು ಗ್ರಾಹ್ಯವೇ. ಈ ಘಟನೆಯಲ್ಲಿ, ಸಂಸೋನನು ಬರಿಗೈಯಿಂದ ಸಿಂಹವನ್ನು ಜಯಿಸಿದ್ದು, ಯಾವುದೇ ಸಹಾಯವಿಲ್ಲದೆ ಒಂದು ಹೋತಮರಿಯನ್ನು ಜಯಿಸುವಷ್ಟೇ ಸುಲಭವಾದದ್ದಾಗಿತ್ತು ಎಂಬುದನ್ನು ಈ ಹೋಲಿಕೆಯು ದೃಷ್ಟಾಂತಿಸುತ್ತದೆ. ಆದರೆ, ಸಂಸೋನನು ಸಿಂಹದ ಅವಯವಗಳನ್ನು ಒಂದೊಂದಾಗಿ ತುಂಡರಿಸುವ ಮೂಲಕ ಅದನ್ನು ಕೊಂದಿರುವಲ್ಲಿ ಆಗೇನು? ಹೀಗಿರುವಲ್ಲಿ, ಆ ಹೇಳಿಕೆಯನ್ನು ಒಂದು ರೂಪಕಾಲಂಕಾರವಾಗಿ ಮಾತ್ರವೇ ಪರಿಗಣಿಸತಕ್ಕದ್ದು. ಈ ರೂಪಕಾಲಂಕಾರವು ಯಾವ ಅಂಶವನ್ನು ತಿಳಿಸುತ್ತದೆಂದರೆ, ಅಸಾಧಾರಣವಾದ ಶಾರೀರಿಕ ಬಲವನ್ನು ಅಗತ್ಯಪಡಿಸುವಂಥ ಒಂದು ಕೆಲಸವನ್ನು ನಿರ್ವಹಿಸಲು ಸಂಸೋನನಿಗೆ ಶಕ್ತಿನೀಡಿದ್ದು ಯೆಹೋವನ ಆತ್ಮವೇ. ವಿಷಯವು ಏನೇ ಇರಲಿ, ನ್ಯಾಯಸ್ಥಾಪಕರು 14:6ರಲ್ಲಿ ಕೊಡಲ್ಪಟ್ಟಿರುವ ಹೋಲಿಕೆಯು, ಯೆಹೋವನ ಸಹಾಯದಿಂದ ಸಂಸೋನನಿಗೆ ತುಂಬ ಪ್ರಬಲವಾಗಿದ್ದ ಒಂದು ಸಿಂಹವು, ಸಾಮಾನ್ಯ ಬಲವುಳ್ಳ ಒಬ್ಬ ವ್ಯಕ್ತಿಗೆ ಹೋತಮರಿಯು ಹೇಗೋ ಅಷ್ಟೇ ಕಡಿಮೆ ಭೀಕರವಾದುದಾಗಿ ಕಂಡುಬಂತು ಎಂಬುದನ್ನು ದೃಷ್ಟಾಂತಿಸುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 3 ನಾಜೀರತನಕ್ಕಾಗಿರುವ ಕಾಲಾವಧಿಯು ಹರಕೆಯನ್ನು ಮಾಡಿಕೊಳ್ಳುವ ವ್ಯಕ್ತಿಯ ವೈಯಕ್ತಿಕ ನಿರ್ಧಾರವಾಗಿತ್ತು. ಆದರೂ, ಯೆಹೂದಿ ಸಂಪ್ರದಾಯಕ್ಕನುಸಾರ ಕಡಿಮೆಯೆಂದರೆ 30 ದಿನಗಳಾದರೂ ಅವರು ಹರಕೆಯನ್ನು ಪೂರೈಸಬೇಕಾಗಿತ್ತು. ಮೂವತ್ತು ದಿನಗಳಿಗಿಂತ ಕಡಿಮೆ ದಿವಸಗಳ ಹರಕೆಯನ್ನು ಮಾಡಿಕೊಳ್ಳುವುದು ಅಷ್ಟೇನೂ ವಿಶೇಷವಾದದ್ದಾಗಿ ಪರಿಗಣಿಸಲ್ಪಡುತ್ತಿರಲಿಲ್ಲ.