ಇಂದು ‘ಬಹು ಬೆಲೆಯುಳ್ಳ ಮುತ್ತನ್ನು’ ಬೆನ್ನಟ್ಟುವುದು
ಇಂದು ‘ಬಹು ಬೆಲೆಯುಳ್ಳ ಮುತ್ತನ್ನು’ ಬೆನ್ನಟ್ಟುವುದು
“ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ . . . ಸಾಕ್ಷಿಗಾಗಿ ಸಾರಲಾಗುವದು.” —ಮತ್ತಾಯ 24:14.
ಯೇಸು ಭೂಮಿಗೆ ಬಂದಾಗ, ದೇವರ ರಾಜ್ಯದ ಕುರಿತಾದ ವಿಷಯವು ಯೆಹೂದ್ಯರ ನಡುವೆ ತೀವ್ರಾಸಕ್ತಿಯ ಸಂಗತಿಯಾಗಿತ್ತು. (ಮತ್ತಾಯ 3:1, 2; 4:23-25; ಯೋಹಾನ 1:49) ಆದರೂ, ಆರಂಭದಲ್ಲಿ ಅವರಲ್ಲಿ ಹೆಚ್ಚಿನವರು ಆ ರಾಜ್ಯದ ವ್ಯಾಪ್ತಿಯನ್ನು ಹಾಗೂ ಅಧಿಕಾರವನ್ನು ಸಂಪೂರ್ಣವಾಗಿ ಗ್ರಹಿಸಲಿಲ್ಲ; ಅದು ಒಂದು ಸ್ವರ್ಗೀಯ ಸರಕಾರವಾಗಿರುವುದು ಎಂಬುದನ್ನೂ ಅವರು ಅರ್ಥಮಾಡಿಕೊಳ್ಳಲಿಲ್ಲ. (ಯೋಹಾನ 3:1-5) ಯೇಸುವಿನ ಹಿಂಬಾಲಕರಾಗಿ ಪರಿಣಮಿಸಿದವರಲ್ಲಿ ಕೆಲವರು ಸಹ ದೇವರ ರಾಜ್ಯವು ಏನಾಗಿದೆ ಅಥವಾ ಕ್ರಿಸ್ತನೊಂದಿಗೆ ಜೊತೆ ಅರಸರಾಗುವ ಆಶೀರ್ವಾದವನ್ನು ಪಡೆದುಕೊಳ್ಳಲು ತಾವೇನು ಮಾಡಬೇಕು ಎಂಬುದನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ.—ಮತ್ತಾಯ 20:20-22; ಲೂಕ 19:11; ಅ. ಕೃತ್ಯಗಳು 1:6.
2 ಕಾಲಕ್ರಮೇಣ ಯೇಸು ತಾಳ್ಮೆಯಿಂದ ತನ್ನ ಶಿಷ್ಯರಿಗೆ ಅನೇಕ ಪಾಠಗಳನ್ನು ಕಲಿಸಿದನು; ಇದರಲ್ಲಿ, ಹಿಂದಿನ ಲೇಖನದಲ್ಲಿ ಪರಿಗಣಿಸಲಾದ ಬಹು ಬೆಲೆಯುಳ್ಳ ಮುತ್ತಿನ ಕುರಿತಾದ ಸಾಮ್ಯವೂ ಒಳಗೂಡಿತ್ತು. ಈ ಸಾಮ್ಯದಲ್ಲಿ ಅವನು, ಸ್ವರ್ಗೀಯ ರಾಜ್ಯದ ಬೆನ್ನಟ್ಟುವಿಕೆಯಲ್ಲಿ ಅವರು ಸಾಕಷ್ಟು ಪರಿಶ್ರಮಿಸುವುದರ ಪ್ರಮುಖತೆಯನ್ನು ಸೂಚಿಸಿ ಮಾತಾಡಿದನು. (ಮತ್ತಾಯ 6:33; 13:45, 46; ಲೂಕ 13:23, 24) ಇದು ಅವರ ಹೃದಯಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದಿರಬೇಕು, ಏಕೆಂದರೆ ಸ್ವಲ್ಪ ಸಮಯದಲ್ಲೇ ಅವರು ರಾಜ್ಯದ ಸುವಾರ್ತೆಯ ಅವಿಶ್ರಾಂತ ಹಾಗೂ ಧೈರ್ಯಭರಿತ ಘೋಷಕರಾದರು ಮತ್ತು ಅಪೊಸ್ತಲರ ಕೃತ್ಯಗಳು ಪುಸ್ತಕವು ಇದಕ್ಕೆ ಹೇರಳವಾದ ಪುರಾವೆಯನ್ನು ಒದಗಿಸುತ್ತದೆ.—ಅ. ಕೃತ್ಯಗಳು 1:8; ಕೊಲೊಸ್ಸೆ 1:23.
ಮತ್ತಾಯ 24:3, 14; ಮಾರ್ಕ 13:10) ದುಸ್ಸಾಧ್ಯವಾದ ವಿಘ್ನಗಳು ಮತ್ತು ಪಂಥಾಹ್ವಾನಗಳು ಹಾಗೂ ಹಿಂಸೆಯ ಮಧ್ಯೆಯೂ ಈ ಬೃಹತ್ಕಾರ್ಯವು ಮುಂದುವರಿಸಲ್ಪಡಬೇಕು ಎಂದು ಸಹ ಅವನು ವಿವರಿಸಿದನು. ಆದರೂ ಅವನು ಈ ಆಶ್ವಾಸನೆಯನ್ನು ನೀಡಿದನು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:9-13) ಇದೆಲ್ಲವೂ, ಯೇಸುವಿನ ಸಾಮ್ಯದಲ್ಲಿ ಮುತ್ತನ್ನು ಹುಡುಕುತ್ತಾ ಪ್ರಯಾಣಿಸುತ್ತಿದ್ದ ವ್ಯಾಪಾರಸ್ಥನಿಂದ ತೋರಿಸಲ್ಪಟ್ಟ ಸ್ವತ್ಯಾಗ ಹಾಗೂ ಸಮರ್ಪಣಾ ಮನೋಭಾವವನ್ನು ಕೇಳಿಕೊಳ್ಳುತ್ತದೆ. ರಾಜ್ಯದ ಬೆನ್ನಟ್ಟುವಿಕೆಯಲ್ಲಿ ನಂಬಿಕೆ ಮತ್ತು ಹುರುಪನ್ನು ತೋರಿಸುವಂಥ ವ್ಯಕ್ತಿಗಳು ಇಂದು ಸಹ ಇದ್ದಾರೋ?
3 ಇಂದಿನ ಕುರಿತಾಗಿ ಏನು? ರಾಜ್ಯದ ಕೆಳಗೆ ಭೂಪರದೈಸಿನಲ್ಲಿರುವ ಆಶೀರ್ವಾದಗಳ ಕುರಿತು ಕೋಟಿಗಟ್ಟಲೆ ಜನರಿಗೆ ಸಾರಲಾಗಿದೆ. “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” (NW) ಕುರಿತಾದ ತನ್ನ ಪ್ರಮುಖ ಪ್ರವಾದನೆಯಲ್ಲಿ ಯೇಸು ನಿರ್ದಿಷ್ಟವಾಗಿ ಹೀಗೆ ಹೇಳಿದನು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಸತ್ಯವನ್ನು ಕಂಡುಕೊಳ್ಳುವುದರಿಂದ ಸಿಗುವ ಸಂತೋಷ
4 ಯೇಸುವಿನ ಸಾಮ್ಯದಲ್ಲಿ ತಿಳಿಸಲ್ಪಟ್ಟ ವ್ಯಾಪಾರಸ್ಥನು, ತಾನು ಕಂಡುಕೊಂಡದ್ದು ‘ಬಹು ಬೆಲೆಯುಳ್ಳ ಒಂದು ಮುತ್ತು’ ಎಂಬುದನ್ನು ಮನಗಂಡಾಗ ಬಹಳವಾಗಿ ಸಂತೋಷಿಸಿದನು. ಈ ಸಂತೋಷವು, ಆ ಮುತ್ತನ್ನು ಪಡೆದುಕೊಳ್ಳಲಿಕ್ಕಾಗಿ ತನ್ನಿಂದಾದುದೆಲ್ಲವನ್ನೂ ಮಾಡುವಂತೆ ಅವನನ್ನು ಪ್ರಚೋದಿಸಿತು. (ಇಬ್ರಿಯ 12:1) ತದ್ರೀತಿಯಲ್ಲಿ ಇಂದು, ದೇವರ ಮತ್ತು ಆತನ ರಾಜ್ಯದ ಕುರಿತಾದ ಸತ್ಯವು ಜನರನ್ನು ಆಕರ್ಷಿಸುತ್ತದೆ ಮತ್ತು ಪ್ರಚೋದಿಸುತ್ತದೆ. ಇದು ಸಹೋದರ ಎ. ಏಚ್. ಮ್ಯಾಕ್‌ಮಿಲನ್‌ರ ಹೇಳಿಕೆಗಳನ್ನು ನೆನಪಿಗೆ ತರುತ್ತದೆ. ಅವರು ದೇವರಿಗಾಗಿ ಮತ್ತು ಮಾನವಕುಲಕ್ಕಾಗಿರುವ ಆತನ ಉದ್ದೇಶದ ಕುರಿತಾಗಿ ತಾವು ಮಾಡಿದ ವೈಯಕ್ತಿಕ ಹುಡುಕಾಟದ ಕುರಿತು ಮುನ್ನಡೆಯುವ ನಂಬಿಕೆ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಬರೆದರು. ಅವರಂದದ್ದು: “ನಾನು ಏನನ್ನು ಕಂಡುಕೊಂಡಿದ್ದೇನೊ ಅದನ್ನೇ ಈಗಲೂ ಪ್ರತಿ ವರ್ಷ ಸಾವಿರಾರು ಮಂದಿ ಕಂಡುಕೊಳ್ಳುತ್ತಿದ್ದಾರೆ. ಮತ್ತು ಅವರು ನನ್ನಂಥ ಹಾಗೂ ನಿಮ್ಮಂಥ ಜನರೇ ಆಗಿದ್ದಾರೆ, ಏಕೆಂದರೆ ಅವರು ಎಲ್ಲಾ ದೇಶಗಳಿಂದ, ಜಾತಿಗಳಿಂದ, ಸಾಮಾಜಿಕ ಸನ್ನಿವೇಶಗಳಿಂದ ಬಂದವರಾಗಿದ್ದಾರೆ ಮತ್ತು ಬೇರೆ ಬೇರೆ ವಯೋಮಿತಿಯವರಾಗಿದ್ದಾರೆ. ಸತ್ಯವು ಯಾವುದೇ ಭೇದಭಾವವನ್ನು ಮಾಡುವುದಿಲ್ಲ. ಅದು ಎಲ್ಲಾ ರೀತಿಯ ವ್ಯಕ್ತಿಗಳನ್ನು ಆಕರ್ಷಿಸುತ್ತದೆ.”
5 ಈ ಮಾತುಗಳ ನಿಜಾಂಶವು, ಪ್ರತಿ ವರ್ಷವೂ ಪ್ರಾಮಾಣಿಕ ಹೃದಯದ ಲಕ್ಷಾಂತರ ಜನರು ಯೆಹೋವನಿಗೆ ತಮ್ಮ ಜೀವಿತವನ್ನು ಸಮರ್ಪಿಸಿಕೊಳ್ಳುವಂತೆ ಮತ್ತು ಆತನ ಚಿತ್ತವನ್ನು ಮಾಡುವಂತೆ ದೇವರ ರಾಜ್ಯದ ಸುವಾರ್ತೆಯಿಂದ ಪ್ರಚೋದಿಸಲ್ಪಡುತ್ತಿರುವುದನ್ನು ನೋಡುವಾಗ ಸುವ್ಯಕ್ತವಾಗುತ್ತದೆ. ಇಸವಿ 2003ರ ಸೆಪ್ಟೆಂಬರ್‌ನಿಂದ 2004ರ ಆಗಸ್ಟ್ ತನಕ ಮುಂದುವರಿದ 2004ರ ಸೇವಾ ವರ್ಷವು ಸಹ ಇದೇ ರೀತಿಯ ಫಲಿತಾಂಶಗಳನ್ನು ಪಡೆದಿದೆ. ಆ 12 ತಿಂಗಳುಗಳಲ್ಲಿ, 2,62,416 ಮಂದಿ ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸಾರ್ವಜನಿಕವಾಗಿ ಸಂಕೇತಿಸಿದರು. ಇದು, ದೇವರ ವಾಕ್ಯದ ಜೀವದಾಯಕ ಸತ್ಯವನ್ನು ಪಡೆದುಕೊಳ್ಳಲು ಎಲ್ಲಾ ಸಾಮಾಜಿಕ ಸನ್ನಿವೇಶಗಳಿಂದ ಮತ್ತು ಸಕಲಜನಾಂಗಕುಲಪ್ರಜೆಗಳಿಂದ ಬಂದಿರುವ ಜನರಿಗೆ ಸಹಾಯಮಾಡಲಿಕ್ಕಾಗಿ ಯೆಹೋವನ ಸಾಕ್ಷಿಗಳು ಸಾಪ್ತಾಹಿಕವಾಗಿ 60,85,387 ಮನೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತಿರುವ 235 ದೇಶಗಳಲ್ಲಿ ನಡೆಯಿತು.—ಪ್ರಕಟನೆ 7:9.
6 ಇದೆಲ್ಲವನ್ನೂ ಯಾವುದು ಸಾಧ್ಯಗೊಳಿಸಿತು? ನಿತ್ಯಜೀವಕ್ಕೆ ನೇಮಿಸಲ್ಪಟ್ಟವರನ್ನು ಯೆಹೋವನು ತನ್ನ ಕಡೆಗೆ ಸೆಳೆಯುತ್ತಾನೆ ಎಂಬುದರಲ್ಲಿ ಸಂದೇಹವೇ ಇಲ್ಲ. (ಯೋಹಾನ 6:65; ಅ. ಕೃತ್ಯಗಳು 13:48) ಆದರೂ, ರಾಜ್ಯದ ಬೆನ್ನಟ್ಟುವಿಕೆಯಲ್ಲಿ ತಮ್ಮನ್ನು ಪರಿಶ್ರಮಿಸಿಕೊಂಡಿರುವವರು ತೋರಿಸಿರುವ ನಿಸ್ವಾರ್ಥ ಮನೋಭಾವ ಹಾಗೂ ಅವಿಶ್ರಾಂತ ಪ್ರಯತ್ನಗಳನ್ನು ಕಡೆಗಣಿಸಬಾರದಾಗಿದೆ. ತಮ್ಮ 79ರ ಪ್ರಾಯದಲ್ಲಿ ಸಹೋದರ ಮ್ಯಾಕ್‌ಮಿಲನ್‌ರು ಬರೆದುದು: “ಅಸ್ವಸ್ಥವಾದ ಹಾಗೂ ನಶಿಸುತ್ತಿರುವ ಮಾನವಕುಲದ ಮುಂದೆ ಇಡಲ್ಪಟ್ಟಿರುವ ವಾಗ್ದಾನಗಳ ಕುರಿತು ನಾನು ಮೊದಲ ಬಾರಿಗೆ ಕೇಳಿಸಿಕೊಂಡಾಗಿನಿಂದಲೂ ಬೈಬಲಿನ ಆ ಸಂದೇಶವು ಯಾವ ವಿಷಯವನ್ನು ತಿಳಿಯಪಡಿಸಿದೆಯೋ ಅದರಲ್ಲಿನ ನನ್ನ ನಿರೀಕ್ಷೆಯು ಎಳ್ಳಷ್ಟೂ ಕಡಿಮೆಯಾಗಿಲ್ಲ. ಆ ಕ್ಷಣವೇ ನಾನು, ಬೈಬಲು ಏನನ್ನು ಕಲಿಸುತ್ತದೋ ಅದರ ಬಗ್ಗೆ ಹೆಚ್ಚನ್ನು ಕಂಡುಕೊಳ್ಳಲು ನಿರ್ಧರಿಸಿದೆ; ಏಕೆಂದರೆ ಸರ್ವಶಕ್ತ ದೇವರಾಗಿರುವ ಯೆಹೋವನ ಹಾಗೂ ಮಾನವಕುಲದ ಕಡೆಗಿನ ಆತನ ಒಳ್ಳೇ ಉದ್ದೇಶಗಳ ಕುರಿತಾದ ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ನನ್ನಂಥ ಇತರರಿಗೆ ನಾನು ಸಹಾಯಮಾಡಲು ಶಕ್ತನಾಗಬಹುದು ಎಂಬ ಕಾರಣಕ್ಕಾಗಿಯೇ.”
7 ಅಂಥ ಹುರುಪು ಇಂದು ಯೆಹೋವನ ಸೇವಕರ ನಡುವೆಯೂ ಕಂಡುಬರುತ್ತಿದೆ! ಉದಾಹರಣೆಗೆ, ಆಸ್ಟ್ರಿಯದ ವಿಯೆನ್ನದಲ್ಲಿರುವ ಡಾನ್ಯೇಲಾ ಎಂಬಾಕೆಯನ್ನು ಪರಿಗಣಿಸಿರಿ. ಅವಳು ಹೇಳಿದ್ದು: “ನಾನು ಚಿಕ್ಕವಳಾಗಿದ್ದಾಗಿನಿಂದಲೂ ದೇವರು ನನ್ನ ಆಪ್ತ ಮಿತ್ರನಾಗಿದ್ದಾನೆ. ನಾನು ಯಾವಾಗಲೂ ಆತನ ಹೆಸರೇನೆಂಬುದನ್ನು ತಿಳಿದುಕೊಳ್ಳಲು ಇಷ್ಟಪಡುತ್ತಿದ್ದೆ, ಏಕೆಂದರೆ ‘ದೇವರು’ ಎಂಬ ಪದವು ಆತನು ಒಬ್ಬ ವ್ಯಕ್ತಿಯೆಂಬದನ್ನು ಸ್ವೀಕರಿಸುವುದನ್ನು ಕಷ್ಟಕರವನ್ನಾಗಿ ಮಾಡುತ್ತಿತ್ತು. ಆದರೆ, ಇದಕ್ಕಾಗಿ ನಾನು 17 ವರ್ಷದವಳಾಗುವ ವರೆಗೆ ಕಾಯಬೇಕಾಯಿತು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳು ನನ್ನ ಮನೆಗೆ ಬಂದರು. ದೇವರ ಕುರಿತು ನಾನು ತಿಳಿದುಕೊಳ್ಳಲು ಬಯಸಿದ್ದನ್ನೆಲ್ಲಾ ಅವರು ವಿವರಿಸಿದರು. ಕೊನೆಗೂ ನಾನು ಸತ್ಯವನ್ನು ಕಂಡುಕೊಂಡೆ, ಮತ್ತು ಇದು ನಿಜವಾಗಿಯೂ ಅದ್ಭುತಕರ ಅನುಭವವಾಗಿತ್ತು! ನಾನೆಷ್ಟು ರೋಮಾಂಚಿತಳಾದೆನೆಂದರೆ ಪ್ರತಿಯೊಬ್ಬರಿಗೂ ಅದರ ಕುರಿತು ಸಾರಲು ಆರಂಭಿಸಿದೆ.” ಅವಳ ಹುರುಪಿನ ಚಟುವಟಿಕೆಯು ಸಹಪಾಠಿಗಳ ಅಪಹಾಸ್ಯಕ್ಕೀಡಾಯಿತು. ಡಾನ್ಯೇಲಾ ಮುಂದುವರಿಸುತ್ತಾ ಹೇಳಿದ್ದು: “ಆದರೂ, ನನ್ನ ದೃಷ್ಟಿಯಲ್ಲಿ ಇದು ಬೈಬಲ್ ಪ್ರವಾದನೆಯು ನೆರವೇರಿಕೆಯನ್ನು ಪಡೆಯುತ್ತಿದೆಯೋ ಎಂಬಂತಿತ್ತು. ಏಕೆಂದರೆ ತನ್ನ ಹಿಂಬಾಲಕರು ದ್ವೇಷಿಸಲ್ಪಡುವರು ಹಾಗೂ ತನ್ನ ಹೆಸರಿನ ನಿಮಿತ್ತ ಹಿಂಸಿಸಲ್ಪಡುವರು ಎಂದು ಯೇಸು ಹೇಳಿದ್ದಾನೆಂದು ನಾನು ಕಲಿತಿದ್ದೆ. ಆದುದರಿಂದಲೇ ನಾನು ಸಂತೋಷಗೊಂಡಿದ್ದೆ ಮತ್ತು ನನಗೆ ಆಶ್ಚರ್ಯವೂ ಆಗಿತ್ತು.” ಸಮಯಾನಂತರ ಡಾನ್ಯೇಲಾ ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಂಡಳು ಮತ್ತು ಮಿಷನೆರಿ ಸೇವೆಯ ಗುರಿಯನ್ನು ಬೆನ್ನಟ್ಟಲಾರಂಭಿಸಿದಳು. ಅವಳ ವಿವಾಹವಾದ ಬಳಿಕ ಡಾನ್ಯೇಲಾ ತನ್ನ ಪತಿ ಹೆಲ್‌ಮೂಟ್‌ರೊಂದಿಗೆ ವಿಯೆನ್ನದಲ್ಲಿರುವ ಆಫ್ರಿಕನ್, ಚೈನೀಸ್, ಫಿಲಿಪ್ಪಿನೊ ಹಾಗೂ ಇಂಡಿಯನ್ ಜನರ ನಡುವೆ ಸಾರುವ ಕೆಲಸವನ್ನು ಆರಂಭಿಸಿದಳು. ಈಗ ಡಾನ್ಯೇಲಾ ಮತ್ತು ಹೆಲ್‌ಮೂಟ್‌ರು ನೈರುತ್ಯ ಆಫ್ರಿಕದಲ್ಲಿ ಮಿಷನೆರಿಗಳಾಗಿ ಸೇವೆಮಾಡುತ್ತಿದ್ದಾರೆ.
ಅವರು ಪ್ರಯತ್ನವನ್ನು ನಿಲ್ಲಿಸುವುದಿಲ್ಲ
8 ಇಂದು ಯೆಹೋವನ ಜನರು ದೇವರಿಗಾಗಿರುವ ತಮ್ಮ ಪ್ರೀತಿ ಮತ್ತು ಆತನ ರಾಜ್ಯಕ್ಕಾಗಿರುವ ನಿಷ್ಠೆಯನ್ನು ತೋರಿಸುವಂಥ ವಿಧಗಳಲ್ಲಿ ಒಂದು ಮಿಷನೆರಿ ಸೇವೆಯಾಗಿದೆ ಎಂಬುದಂತೂ ನಿಜ. ಯೇಸುವಿನ ಸಾಮ್ಯದಲ್ಲಿನ ವ್ಯಾಪಾರಸ್ಥನಂತೆ, ಈ ಸೇವೆಯನ್ನು ಪ್ರವೇಶಿಸುವಂಥವರು ರಾಜ್ಯದ ನಿಮಿತ್ತವಾಗಿ ಬಹು ದೂರದ ಸ್ಥಳಗಳಿಗೆ ಪ್ರಯಾಣಿಸಲು ಮನಃಪೂರ್ವಕವಾಗಿ ಸಿದ್ಧರಾಗಿರುತ್ತಾರೆ. ಆದರೆ ಈ ಮಿಷನೆರಿಗಳು ರಾಜ್ಯದ ಸುವಾರ್ತೆಯನ್ನು ಕಂಡುಕೊಳ್ಳಲಿಕ್ಕಾಗಿ ಪ್ರಯಾಣಿಸುವುದಿಲ್ಲ; ಅವರು ಭೂಮಿಯ ಮೂಲೆಮೂಲೆಯಲ್ಲಿ ವಾಸಿಸುತ್ತಿರುವ ಜನರಿಗೆ ಸುವಾರ್ತೆಯನ್ನು ಕೊಂಡೊಯ್ಯುತ್ತಾರೆ, ಯೇಸು ಕ್ರಿಸ್ತನ ಶಿಷ್ಯರಾಗಲು ಅವರಿಗೆ ಬೋಧಿಸುತ್ತಾರೆ ಹಾಗೂ ಸಹಾಯಮಾಡುತ್ತಾರೆ. (ಮತ್ತಾಯ 28:19, 20) ಅನೇಕ ದೇಶಗಳಲ್ಲಿ ಅವರು ಅಸಾಧಾರಣವಾದ ಕಷ್ಟತೊಂದರೆಯನ್ನು ತಾಳಿಕೊಳ್ಳಬೇಕಾಗಿದೆ. ಆದರೆ ಅವರ ತಾಳ್ಮೆಗೆ ಬಹಳ ಪ್ರತಿಫಲ ಸಿಕ್ಕಿದೆ.
9 ಉದಾಹರಣೆಗೆ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್ನು ತೆಗೆದುಕೊಳ್ಳಿ. ಅಲ್ಲಿ ಕಳೆದ ವರ್ಷ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಿದ್ದವರ ಸಂಖ್ಯೆ 16,184 ಆಗಿದ್ದು, ಆ ದೇಶದಲ್ಲಿರುವ ರಾಜ್ಯ ಪ್ರಚಾರಕರ ಸಂಖ್ಯೆಗಿಂತ ಸುಮಾರು ಏಳು ಪಟ್ಟು ಹೆಚ್ಚಾಗಿತ್ತು. ಆ ದೇಶದ ಅನೇಕ ಭಾಗಗಳಲ್ಲಿ ವಿದ್ಯುತ್ ಸೌಲಭ್ಯವು ಇಲ್ಲದಿರುವುದರಿಂದ, ಸಾಮಾನ್ಯವಾಗಿ ಅಲ್ಲಿನ ಜನರು ಮನೆಯ ಹೊರಗೆ ಒಂದು ಮರದ ನೆರಳಿನಲ್ಲಿ ದೈನಂದಿನ ಕೆಲಸಕಾರ್ಯಗಳನ್ನು ಮಾಡುತ್ತಾರೆ. ಆದುದರಿಂದ ಮಿಷನೆರಿಗಳು ತಮ್ಮ ಸಾರುವ ಕೆಲಸವನ್ನು ಅದೇ ರೀತಿಯಲ್ಲಿ ಮಾಡುವುದು, ಅಂದರೆ ಮನೆಯ ಹೊರಗೆ ಮರದ ನೆರಳಿನಲ್ಲಿ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಸ್ವಾಭಾವಿಕವಾಗಿದೆ. ಮನೆಯಿಂದ ಹೊರಗೆ ಕುಳಿತುಕೊಳ್ಳುವುದು ಪ್ರಕಾಶಮಾನವಾದ ಬೆಳಕನ್ನು ನೀಡುತ್ತದೆ ಮತ್ತು ವಾತಾವರಣವು ತಂಪಾಗಿಯೂ ಇರುತ್ತದೆ ಮಾತ್ರವಲ್ಲ ಇದರಿಂದ ಇನ್ನೊಂದು ಪ್ರಯೋಜನವೂ ಇದೆ. ಜನರಿಗೆ ಬೈಬಲಿನ ವಿಷಯದಲ್ಲಿ ಗಣ್ಯತಾ ಮನೋಭಾವವಿದೆ ಮತ್ತು ಧಾರ್ಮಿಕ ವಿಷಯಗಳ ಕುರಿತು ಚರ್ಚಿಸುವುದು, ಬೇರೆ ಸಂಸ್ಕೃತಿಗಳಲ್ಲಿ ಕ್ರೀಡೆಗಳು ಮತ್ತು ಹವಾಮಾನದ ಕುರಿತಾಗಿ ಮಾತಾಡುವುದು ಎಷ್ಟು ಸರ್ವಸಾಮಾನ್ಯವಾಗಿರುತ್ತದೋ ಅಷ್ಟೇ ಸಾಮಾನ್ಯವಾದದ್ದಾಗಿದೆ. ಅನೇಕವೇಳೆ ದಾರಿಹೋಕರು ಏನು ಸಂಭವಿಸುತ್ತಿದೆ ಎಂದು ನೋಡಲು ಬರುತ್ತಾರೆ ಮತ್ತು ಆಮೇಲೆ ಅಧ್ಯಯನದಲ್ಲಿ ಜೊತೆಗೂಡುತ್ತಾರೆ.10 ಒಬ್ಬ ಮಿಷನೆರಿಯು ಮನೆಯ ಹೊರಗೆ ಒಂದು ಬೈಬಲ್ ಅಧ್ಯಯನವನ್ನು ಮಾಡುತ್ತಿದ್ದಾಗ, ಬೀದಿಯ ಆಚೆಬದಿಯಲ್ಲಿ ವಾಸಿಸುತ್ತಿದ್ದ ಯುವಕನೊಬ್ಬನು ಅಲ್ಲಿಗೆ ಬಂದು, ತನ್ನನ್ನು ಯಾರೂ ಭೇಟಿಮಾಡಿಲ್ಲದ ಕಾರಣ ಈ ಮಿಷನೆರಿಯು ತನ್ನ ಮನೆಗೆ ಬಂದು ತನ್ನೊಂದಿಗೂ ಬೈಬಲ್ ಅಧ್ಯಯನ ಮಾಡಬೇಕೆಂದು ಕೇಳಿಕೊಂಡನು. ಆ ಮಿಷನೆರಿಯು ಇದಕ್ಕೆ ಸಂತೋಷದಿಂದ ಒಪ್ಪಿಕೊಂಡನು ಮತ್ತು ಈಗ ಆ ಯುವಕನು ತೀವ್ರಗತಿಯಲ್ಲಿ ಪ್ರಗತಿಯನ್ನು ಮಾಡುತ್ತಿದ್ದಾನೆ. ಆ ದೇಶದಲ್ಲಿ ಪೊಲೀಸರು ಅನೇಕವೇಳೆ ರಸ್ತೆಯಲ್ಲಿ ಸಾಕ್ಷಿಗಳನ್ನು ನಿಲ್ಲಿಸುತ್ತಾರೆ, ಆದರೆ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಿಕ್ಕೆ ಅಥವಾ ದಂಡ ವಿಧಿಸಲಿಕ್ಕೆ ಅಲ್ಲ, ಬದಲಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರಚಲಿತ ಸಂಚಿಕೆಗಳು ಇವೆಯೋ ಎಂದು ಕೇಳಲಿಕ್ಕಾಗಿ ಅಥವಾ ತಾವು ವಿಶೇಷವಾಗಿ ಓದಿ ಆನಂದಿಸಿದಂಥ ಒಂದು ಲೇಖನದ ಬಗ್ಗೆ ಪ್ರಶಂಸೆ ನೀಡಲಿಕ್ಕಾಗಿಯೇ.
11 ಸುಮಾರು 40 ಅಥವಾ 50 ವರ್ಷಗಳ ಹಿಂದೆ ಮಿಷನೆರಿ ಸೇವೆಯನ್ನು ಆರಂಭಿಸಿದಂಥ ಅನೇಕರು ಇನ್ನೂ ಸಹ ಕ್ಷೇತ್ರದಲ್ಲಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿದ್ದಾರೆ. ನಮಗೆಲ್ಲರಿಗೂ ನಂಬಿಕೆ ಮತ್ತು ಪಟ್ಟುಹಿಡಿಯುವಿಕೆಯ ವಿಷಯದಲ್ಲಿ ಎಂಥ ಒಂದು ಮಾದರಿ! ಕಳೆದ 42 ವರ್ಷಗಳಿಂದ ಒಬ್ಬ ದಂಪತಿಯು ಮೂರು ಬೇರೆ ಬೇರೆ ದೇಶಗಳಲ್ಲಿ ಮಿಷನೆರಿಗಳಾಗಿ ಸೇವೆಮಾಡಿದ್ದಾರೆ. ಆ ಪತಿಯು ಹೇಳುವುದು: “ನಾವು ತುಂಬ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಉದಾಹರಣೆಗೆ, 35 ವರ್ಷಗಳ ವರೆಗೆ ನಾವು ಮಲೇರಿಯ ರೋಗದ ವಿರುದ್ಧ ಹೋರಾಟ ನಡೆಸಿದೆವು. ಆದರೂ, ಮಿಷನೆರಿಗಳಾಗಲು ಮಾಡಿದ ನಿರ್ಧಾರದ ಕುರಿತು ನಾವೆಂದೂ ವಿಷಾದಿಸಿಲ್ಲ.” ಪತ್ನಿಯು ಹೇಳಿದ್ದು: “ನಾವು ಯಾವಾಗಲೂ ಕೃತಜ್ಞತೆ ತೋರಿಸಬಹುದಾದಂಥ ಅನೇಕಾನೇಕ ಸಂಗತಿಗಳಿದ್ದವು. ಕ್ಷೇತ್ರ ಶುಶ್ರೂಷೆಯು ಬಹಳ ಆನಂದದಾಯಕವಾಗಿತ್ತು, ಮತ್ತು ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು ಸಹ ಸುಲಭವಾಗಿತ್ತು. ಬೈಬಲ್ ವಿದ್ಯಾರ್ಥಿಗಳು ಕೂಟಗಳಿಗೆ ಬರುವುದನ್ನು ಮತ್ತು ಪರಸ್ಪರ ಪರಿಚಯಮಾಡಿಕೊಳ್ಳುವುದನ್ನು ನೋಡುವಾಗ, ಇದು ಪ್ರತಿ ಸಲ ಒಂದು ಕೌಟುಂಬಿಕ ಸಮಾರಂಭವು ನಡೆಸಲ್ಪಡುತ್ತಿದೆಯೋ ಎಂಬಂತಿರುತ್ತಿತ್ತು.”
ಅವರು ‘ಎಲ್ಲವನ್ನು ನಷ್ಟವೆಂದೆಣಿಸುತ್ತಾರೆ’
12 ಮುತ್ತಿಗಾಗಿ ಹುಡುಕುತ್ತಾ ಪ್ರಯಾಣಿಸುತ್ತಿದ್ದ ವ್ಯಾಪಾರಿಯು ಬಹು ಬೆಲೆಯುಳ್ಳ ಮುತ್ತನ್ನು ಕಂಡುಕೊಂಡಾಗ, “ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.” (ಮತ್ತಾಯ 13:46) ಯಾವುದನ್ನು ಅಮೂಲ್ಯವಾಗಿ ಪರಿಗಣಿಸಬಹುದಾಗಿತ್ತೋ ಅದನ್ನು ತ್ಯಾಗಮಾಡುವ ಈ ಸಿದ್ಧಮನಸ್ಸು, ರಾಜ್ಯದ ಮೌಲ್ಯವನ್ನು ನಿಜವಾಗಿಯೂ ಗಣ್ಯಮಾಡುವುದರ ವಿಶೇಷ ಗುಣಲಕ್ಷಣವಾಗಿದೆ. ರಾಜ್ಯ ಮಹಿಮೆಯಲ್ಲಿ ಕ್ರಿಸ್ತನೊಂದಿಗೆ ಪಾಲ್ಗೊಳ್ಳಲಿದ್ದ ಅಪೊಸ್ತಲ ಪೌಲನು ಹೇಳಿದ್ದು: ‘ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ. ನನ್ನ ಉದ್ದೇಶವು ಕ್ರಿಸ್ತನನ್ನು ಸಂಪಾದಿಸಿಕೊಳ್ಳುವುದೇ ಆಗಿದೆ.’—ಫಿಲಿಪ್ಪಿ 3:8, 9.
13 ಅದೇ ರೀತಿಯಲ್ಲಿ, ರಾಜ್ಯದ ಆಶೀರ್ವಾದಗಳನ್ನು ಪಡೆದುಕೊಳ್ಳಲಿಕ್ಕಾಗಿ ತಮ್ಮ ಜೀವಿತಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲು ಅನೇಕರು ಇಂದು ಮನಃಪೂರ್ವಕವಾಗಿ ಸಿದ್ಧರಿದ್ದಾರೆ. ಉದಾಹರಣೆಗೆ, 2003ರ ಅಕ್ಟೋಬರ್ ತಿಂಗಳಿನಲ್ಲಿ, ಚೆಕ್ ರಿಪಬ್ಲಿಕ್‌ನ ಶಾಲೆಯೊಂದರ 60 ವರ್ಷ ಪ್ರಾಯದ ಮುಖ್ಯೋಪಾಧ್ಯಾಯರೊಬ್ಬರಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಬೈಬಲ್ ಅಧ್ಯಯನ ಸಹಾಯಕವು ಸಿಕ್ಕಿತು. ಅದನ್ನು ಓದಿದ ಬಳಿಕ ಅವರು ಕೂಡಲೆ ತಮ್ಮ ಕ್ಷೇತ್ರದಲ್ಲಿದ್ದ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿದರು ಮತ್ತು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಂಡರು. ಅವರು ಒಳ್ಳೇ ರೀತಿಯಲ್ಲಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿದರು ಮತ್ತು ಸ್ವಲ್ಪದರಲ್ಲೇ ಎಲ್ಲಾ ಕೂಟಗಳಿಗೆ ಹಾಜರಾಗತೊಡಗಿದರು. ಆದರೂ, ಮೇಯರ್ ಆಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ತದನಂತರ ಸೆನಟರ್ ಆಗಿ ಸ್ಪರ್ಧಿಸುವ ಅವರ ಯೋಜನೆಗಳ ಕುರಿತಾಗಿ ಏನು? ಅವರು ಜೀವಕ್ಕಾಗಿರುವ ಓಟದಲ್ಲಿ, ಒಬ್ಬ ರಾಜ್ಯ ಘೋಷಕರಾಗಿ ಬೇರೊಂದು ಬೆನ್ನಟ್ಟುವಿಕೆಯಲ್ಲಿ ತಮ್ಮ ಪ್ರಯತ್ನಗಳನ್ನು ವಿನಿಯೋಗಿಸುವ ಆಯ್ಕೆಯನ್ನು ಮಾಡಿದರು. ಅವರಂದದ್ದು: “ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಅನೇಕಾನೇಕ ಬೈಬಲ್ ಸಾಹಿತ್ಯವನ್ನು ವಿತರಿಸಲು ಶಕ್ತನಾದೆ.” ಇಸವಿ 2004ರ ಜುಲೈ ತಿಂಗಳಿನಲ್ಲಿ ನಡೆದ ಅಧಿವೇಶನವೊಂದರಲ್ಲಿ ಅವರು ನೀರಿನ ನಿಮಜ್ಜನದ ಮೂಲಕ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸಿದರು.
14 ಲೋಕದಾದ್ಯಂತ ಇರುವ ಲಕ್ಷಾಂತರ ಮಂದಿ ರಾಜ್ಯದ ಸುವಾರ್ತೆಗೆ ಇದೇ ರೀತಿಯ ಪ್ರತಿಕ್ರಿಯೆಯನ್ನು ತೋರಿಸಿದ್ದಾರೆ. ಅವರು ಈ ದುಷ್ಟ ಲೋಕದಿಂದ ಹೊರಗೆ ಬಂದಿದ್ದಾರೆ, ತಮ್ಮ ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿದ್ದಾರೆ, ತಮ್ಮ ಹಿಂದಣ ಸಹವಾಸಗಳನ್ನು ಬಿಟ್ಟುಬಿಟ್ಟಿದ್ದಾರೆ ಮತ್ತು ತಮ್ಮ ಲೌಕಿಕ ಬೆನ್ನಟ್ಟುವಿಕೆಗಳನ್ನು ಸಹ ಕೈಬಿಟ್ಟಿದ್ದಾರೆ. (ಯೋಹಾನ 15:19; ಎಫೆಸ 4:22-24; ಯಾಕೋಬ 4:4; 1 ಯೋಹಾನ 2:15-17) ಅವರು ಇದೆಲ್ಲವನ್ನೂ ಏಕೆ ಮಾಡಿದ್ದಾರೆ? ಏಕೆಂದರೆ ಸದ್ಯದ ವಿಷಯಗಳ ವ್ಯವಸ್ಥೆಯು ನೀಡಸಾಧ್ಯವಿರುವ ಯಾವುದೇ ವಿಷಯಕ್ಕಿಂತಲೂ ಅವರು ದೇವರ ರಾಜ್ಯದ ಆಶೀರ್ವಾದಗಳನ್ನು ಅತ್ಯಮೂಲ್ಯವಾಗಿ ಪರಿಗಣಿಸುತ್ತಾರೆ. ರಾಜ್ಯದ ಸುವಾರ್ತೆಯ ವಿಷಯದಲ್ಲಿ ನಿಮಗೂ ಇದೇ ರೀತಿಯ ಅನಿಸಿಕೆ ಇದೆಯೋ? ಯೆಹೋವನು ಏನನ್ನು ಕೇಳಿಕೊಳ್ಳುತ್ತಾನೋ ಅದಕ್ಕನುಸಾರ ನಿಮ್ಮ ಜೀವನಶೈಲಿಯನ್ನು, ಮೌಲ್ಯಗಳನ್ನು ಮತ್ತು ಗುರಿಗಳನ್ನು ಹೊಂದಿಸಿಕೊಳ್ಳಲು ಅಗತ್ಯವಿರುವ ಬದಲಾವಣೆಗಳನ್ನು ಮಾಡುವಂತೆ ನೀವು ಅದರಿಂದ ಪ್ರಚೋದಿಸಲ್ಪಟ್ಟಿದ್ದೀರೋ? ಹೀಗೆ ಮಾಡುವುದು ನಿಮಗೆ ಈಗ ಮತ್ತು ಭವಿಷ್ಯತ್ತಿನಲ್ಲಿ ಸಮೃದ್ಧ ಆಶೀರ್ವಾದಗಳನ್ನು ಫಲಿಸುವುದು.
ಕೊಯ್ಲಿನ ಕೆಲಸವು ಪರಮಾವಧಿಯನ್ನು ತಲಪುತ್ತಿದೆ
15 ಕೀರ್ತನೆಗಾರನು ಬರೆದುದು: “ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು.” ಸ್ವತಃ ತಮ್ಮನ್ನು ನೀಡಿಕೊಂಡಿರುವವರಲ್ಲಿ, ‘ಉದಯಕಾಲದ ಇಬ್ಬನಿಯಂತಿರುವ ಯುವಕ ಸೈನಿಕರು’ ಮತ್ತು ‘ಶುಭವಾರ್ತೆಯನ್ನು ಪ್ರಸಿದ್ಧಪಡಿಸುತ್ತಿರುವ ಸ್ತ್ರೀಯರ ದೊಡ್ಡ ಸಮೂಹವು’ ಒಳಗೂಡಿದೆ. (ಕೀರ್ತನೆ 68:11; 110:3) ಈ ಅಂತಿಮ ದಿನಗಳಲ್ಲಿ ಯೆಹೋವನ ಜನರು—ಸ್ತ್ರೀಪುರುಷರು, ಆಬಾಲವೃದ್ಧರು—ತೋರಿಸುತ್ತಿರುವ ಶ್ರದ್ಧಾಭಕ್ತಿ ಹಾಗೂ ಸ್ವತ್ಯಾಗದ ಮನೋಭಾವದ ಫಲಿತಾಂಶವೇನಾಗಿದೆ?
16 ಭಾರತದಲ್ಲಿರುವ ಒಬ್ಬ ಪಯನೀಯರಳು ಅಥವಾ ಪೂರ್ಣ ಸಮಯದ ರಾಜ್ಯ ಘೋಷಕಿಯು, ಈ ದೇಶದಲ್ಲಿರುವ 20 ಲಕ್ಷ ಕಿವುಡರು ರಾಜ್ಯದ ಕುರಿತು ತಿಳಿದುಕೊಳ್ಳುವಂತೆ ಹೇಗೆ ಸಹಾಯಮಾಡುವುದು ಎಂಬುದರ ಕುರಿತು ಚಿಂತಿತಳಾಗಿದ್ದಳು. (ಯೆಶಾಯ 35:5) ಆದುದರಿಂದ ಅವಳು ಸಂಜ್ಞಾ ಭಾಷೆಯನ್ನು ಕಲಿಸುವ ಶಾಲೆಗೆ ದಾಖಲಾಗಲು ನಿರ್ಧರಿಸಿದಳು. ಅಲ್ಲಿ ಅವಳು ಅನೇಕ ಮಂದಿ ಕಿವುಡರೊಂದಿಗೆ ರಾಜ್ಯದ ನಿರೀಕ್ಷೆಯನ್ನು ಹಂಚಿಕೊಳ್ಳಲು ಶಕ್ತಳಾದಳು ಮತ್ತು ಬೈಬಲ್ ಅಧ್ಯಯನ ಗುಂಪುಗಳು ಏರ್ಪಡಿಸಲ್ಪಟ್ಟವು. ಕೆಲವೇ ವಾರಗಳಲ್ಲಿ, ಹನ್ನೆರಡಕ್ಕಿಂತಲೂ ಹೆಚ್ಚು ಮಂದಿ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಬರಲಾರಂಭಿಸಿದರು. ಸಮಯಾನಂತರ, ಒಂದು ಮದುವೆಯ ಸಮಾರಂಭದಲ್ಲಿ ಈ ಪಯನೀಯರಳು ಕೊಲ್ಕತ್ತದಿಂದ ಬಂದಿದ್ದ ಒಬ್ಬ ಕಿವುಡ ಯೌವನಸ್ಥನನ್ನು ಭೇಟಿಯಾದಳು. ಅವನಿಗೆ ಅನೇಕ ಪ್ರಶ್ನೆಗಳಿದ್ದವು ಮತ್ತು ಯೆಹೋವನ ಕುರಿತು ಹೆಚ್ಚನ್ನು ತಿಳಿದುಕೊಳ್ಳುವುದರಲ್ಲಿ ಅವನು ತೀವ್ರಾಸಕ್ತಿಯನ್ನು ತೋರಿಸಿದನು. ಆದರೆ ಒಂದು ಸಮಸ್ಯೆಯಿತ್ತು. ಸ್ವಲ್ಪದರಲ್ಲೇ ಈ ಯೌವನಸ್ಥನು 1,600 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಕೊಲ್ಕತ್ತಕ್ಕೆ ಹಿಂದಿರುಗಿ, ಕಾಲೇಜ್ ಶಿಕ್ಷಣವನ್ನು ಆರಂಭಿಸಲಿದ್ದನು. ಮತ್ತು ಅಲ್ಲಿ ಸಂಜ್ಞಾ ಭಾಷೆಯನ್ನು ಅರಿತಿದ್ದ ಯಾವ ಸಾಕ್ಷಿಯೂ ಇರಲಿಲ್ಲ. ತನ್ನ ಬೈಬಲ್ ಅಧ್ಯಯನವನ್ನು ಮುಂದುವರಿಸಸಾಧ್ಯವಾಗುವಂತೆ, ತುಂಬ ಪ್ರಯತ್ನಪಟ್ಟು ಅವನು ತನ್ನ ತಂದೆಯ ಮನವೊಲಿಸಿ ಬೆಂಗಳೂರಿನಲ್ಲಿರುವ ಕಾಲೇಜಿಗೇ ಸೇರಿಕೊಳ್ಳಲು ಅನುಮತಿಯನ್ನು ಪಡೆದುಕೊಂಡನು. ಅವನು ಅತ್ಯುತ್ತಮ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿದನು ಮತ್ತು ಸುಮಾರು ಒಂದು ವರ್ಷದ ಬಳಿಕ ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡನು. ಅಷ್ಟುಮಾತ್ರವಲ್ಲ, ಅವನು ತನ್ನ ಬಾಲ್ಯದ ಸ್ನೇಹಿತನನ್ನೂ ಸೇರಿಸಿ ಅನೇಕ ಮಂದಿ ಕಿವುಡರೊಂದಿಗೆ ಬೈಬಲ್ ಅಧ್ಯಯನ ಮಾಡಿದನು. ಭಾರತದ ಬ್ರಾಂಚ್ ಆಫೀಸ್ ಕಿವುಡರಿಗೆ ಸಹಾಯಮಾಡಲಿಕ್ಕಾಗಿ ಪಯನೀಯರರು ಸಂಜ್ಞಾ ಭಾಷೆಯನ್ನು ಕಲಿಯುವಂತೆ ಈಗ ಏರ್ಪಾಡನ್ನು ಮಾಡುತ್ತಿದೆ.
17 ಈ ಪತ್ರಿಕೆಯ 19ರಿಂದ 22ನೆಯ ಪುಟಗಳಲ್ಲಿ, 2004ರ ಸೇವಾ ವರ್ಷದ ಯೆಹೋವನ ಸಾಕ್ಷಿಗಳ ಕ್ಷೇತ್ರ ಚಟುವಟಿಕೆಯ ಕುರಿತಾದ ಲೋಕವ್ಯಾಪಕ ವರದಿಯನ್ನು ನೀವು ಕಂಡುಕೊಳ್ಳುವಿರಿ. ಇದನ್ನು ಪರಿಶೀಲಿಸಲಿಕ್ಕಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಮತ್ತು ಭೂಮಿಯಾದ್ಯಂತ ಇರುವ ಯೆಹೋವನ ಜನರು ಇಂದು ‘ಬಹು ಬೆಲೆಯುಳ್ಳ ಮುತ್ತನ್ನು’ ಬೆನ್ನಟ್ಟುವುದರಲ್ಲಿ ಅತ್ಯಧಿಕ ಗಮನವನ್ನು ಕೇಂದ್ರೀಕರಿಸುತ್ತಿದ್ದಾರೆ ಎಂಬುದರ ಪುರಾವೆಯನ್ನು ಸ್ವತಃ ನೀವೇ ನೋಡಿರಿ.
‘ಮೊದಲು ರಾಜ್ಯಕ್ಕಾಗಿ ತವಕಪಡುತ್ತಾ ಇರಿ’
18 ಮುತ್ತನ್ನು ಹುಡುಕುತ್ತಾ ಪ್ರಯಾಣಿಸುತ್ತಿದ್ದ ವ್ಯಾಪಾರಸ್ಥನ ಕುರಿತಾದ ಯೇಸುವಿನ ಸಾಮ್ಯವನ್ನು ಪುನಃ ಪರಿಗಣಿಸುವಾಗ, ತನ್ನ ಬದುಕನ್ನೆಲ್ಲಾ ಮಾರಿದ ಬಳಿಕ ಆ ವ್ಯಾಪಾರಿಯು ತನ್ನ ಜೀವನೋಪಾಯಕ್ಕಾಗಿ ಏನು ಮಾಡಲಿದ್ದನು ಎಂಬುದರ ಕುರಿತು ಯೇಸು ಏನನ್ನೂ ಹೇಳಲಿಲ್ಲ ಎಂಬುದನ್ನು ನಾವು ಗಮನಿಸುತ್ತೇವೆ. ವಾಸ್ತವಿಕ ದೃಷ್ಟಿಕೋನದಿಂದ ಕೆಲವರು ಹೀಗೆ ಕೇಳಬಹುದು: ‘ಈಗ ಆ ವ್ಯಾಪಾರಿಯ ಬಳಿ ಯಾವುದೇ ಸಂಪನ್ಮೂಲಗಳು ಇಲ್ಲದಿರುವುದರಿಂದ, ಅವನು ಊಟ, ಬಟ್ಟೆ ಹಾಗೂ ವಸತಿಗಾಗಿ ಏನು ಮಾಡುವನು? ಆ ಬಹು ಬೆಲೆಯುಳ್ಳ ಮುತ್ತು ಅವನಿಗೆ ಯಾವ ಪ್ರಯೋಜನವನ್ನು ನೀಡಲಿದೆ?’ ಶಾರೀರಿಕ ದೃಷ್ಟಿಕೋನದಿಂದ ನೋಡುವಾಗ ಈ ಪ್ರಶ್ನೆಗಳು ಸಮಂಜಸವಾಗಿ ತೋರಬಹುದು. ಆದರೆ, ‘ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುತ್ತಾ ಇರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು’ ಎಂದು ಯೇಸು ತನ್ನ ಶಿಷ್ಯರನ್ನು ಉತ್ತೇಜಿಸಲಿಲ್ಲವೋ? (ಮತ್ತಾಯ 6:31-33) ಅವನ ಸಾಮ್ಯದ ಮುಖ್ಯ ಅಂಶವು, ದೇವರಿಗೆ ಪೂರ್ಣ ಮನಸ್ಸಿನ ಭಕ್ತಿಯನ್ನು ಹಾಗೂ ರಾಜ್ಯಕ್ಕಾಗಿ ಹುರುಪನ್ನು ತೋರಿಸಬೇಕೆಂಬುದೇ ಆಗಿತ್ತು. ಇದರಿಂದ ನಾವು ಯಾವುದೇ ಪಾಠವನ್ನು ಕಲಿಯಸಾಧ್ಯವಿದೆಯೋ?
19 ಅದ್ಭುತಕರವಾದ ಸುವಾರ್ತೆಯ ಕುರಿತು ನಾವು ಈಗಷ್ಟೇ ಕಲಿತಿರಲಿ ಅಥವಾ ಅನೇಕ ದಶಕಗಳಿಂದ ನಾವು ರಾಜ್ಯವನ್ನು ಬೆನ್ನಟ್ಟುತ್ತಾ ಅದರ ಆಶೀರ್ವಾದಗಳ ಕುರಿತು ಇತರರಿಗೆ ತಿಳಿಸುತ್ತಿರಲಿ, ರಾಜ್ಯವನ್ನು ನಮ್ಮ ಆಸಕ್ತಿಯ ಹಾಗೂ ಗಮನದ ಕೇಂದ್ರಬಿಂದುವಾಗಿ ಮಾಡಿಕೊಳ್ಳುವುದನ್ನು ನಾವು ಮುಂದುವರಿಸುತ್ತಿರಬೇಕು. ಇವು ಕಷ್ಟಕರ ಸಮಯಗಳಾಗಿವೆ, ಆದರೆ ನಾವೇನನ್ನು ಬೆನ್ನಟ್ಟುತ್ತಿದ್ದೇವೋ ಅದು ನಿಜವಾದದ್ದಾಗಿದೆ ಮತ್ತು ಅತುಲ್ಯವಾಗಿದೆ—ಆ ವ್ಯಾಪಾರಸ್ಥನು ಅಕಸ್ಮಾತ್ತಾಗಿ ಕಂಡುಕೊಂಡ ಮುತ್ತಿಗೆ ಸಮಾನವಾಗಿದೆ—ಎಂದು ನಂಬಲು ನಮಗೆ ಸದೃಢವಾದ ಕಾರಣಗಳಿವೆ. ಲೋಕದ ಘಟನೆಗಳು ಮತ್ತು ನೆರವೇರಿರುವ ಬೈಬಲ್ ಪ್ರವಾದನೆಗಳು, ನಾವು “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯಲ್ಲಿ ಜೀವಿಸುತ್ತಿದ್ದೇವೆ ಎಂಬುದಕ್ಕೆ ನಿಶ್ಚಿತ ಪುರಾವೆಯನ್ನು ನೀಡುತ್ತವೆ. (ಮತ್ತಾಯ 24:3, NW) ಮುತ್ತನ್ನು ಕಂಡುಕೊಳ್ಳಲಿಕ್ಕಾಗಿ ಪ್ರಯಾಣಿಸಿದ ಆ ವ್ಯಾಪಾರಸ್ಥನಂತೆ, ದೇವರ ರಾಜ್ಯಕ್ಕಾಗಿ ನಾವು ಪೂರ್ಣಹೃದಯದ ಹುರುಪನ್ನು ತೋರಿಸೋಣ ಮತ್ತು ಸುವಾರ್ತೆಯನ್ನು ಸಾರುವ ಸುಯೋಗದಲ್ಲಿ ಉಲ್ಲಾಸಿಸೋಣ.—ಕೀರ್ತನೆ 9:1, 2.
ನಿಮಗೆ ನೆನಪಿದೆಯೋ?
• ಅನೇಕ ವರ್ಷಗಳಿಂದ ಸತ್ಯಾರಾಧಕರ ನಡುವೆ ಆಗುತ್ತಿರುವ ಅಭಿವೃದ್ಧಿಗೆ ಯಾವುದು ನೆರವನ್ನಿತ್ತಿದೆ?
• ಮಿಷನೆರಿಗಳಾಗಿ ಸೇವೆಮಾಡುತ್ತಿರುವವರ ನಡುವೆ ಯಾವ ಮನೋಭಾವವು ಕಂಡುಬರುತ್ತದೆ?
• ರಾಜ್ಯದ ಸುವಾರ್ತೆಯ ನಿಮಿತ್ತ ವ್ಯಕ್ತಿಗಳು ಯಾವ ಬದಲಾವಣೆಗಳನ್ನು ಮಾಡಿದ್ದಾರೆ?
• ಬಹು ಬೆಲೆಯುಳ್ಳ ಮುತ್ತಿನ ಕುರಿತಾದ ಯೇಸುವಿನ ಸಾಮ್ಯದಿಂದ ನಾವು ಯಾವ ಪ್ರಾಮುಖ್ಯ ಪಾಠವನ್ನು ಕಲಿಯಸಾಧ್ಯವಿದೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಯೇಸುವಿನ ದಿನದಲ್ಲಿದ್ದ ಯೆಹೂದ್ಯರಿಗೆ ದೇವರ ರಾಜ್ಯದ ಕುರಿತು ಯಾವ ಅನಿಸಿಕೆಯಿತ್ತು? (ಬಿ) ರಾಜ್ಯದ ಕುರಿತು ಸೂಕ್ತವಾದ ತಿಳಿವಳಿಕೆಯನ್ನು ನೀಡಲು ಯೇಸು ಏನು ಮಾಡಿದನು, ಮತ್ತು ಯಾವ ಫಲಿತಾಂಶಗಳೊಂದಿಗೆ?
3. ನಮ್ಮ ಕಾಲದ ಸಂಬಂಧದಲ್ಲಿ, ರಾಜ್ಯದ ಕುರಿತಾಗಿ ಯೇಸು ಏನು ಹೇಳಿದನು?
4. ಇಂದು ರಾಜ್ಯ ಸತ್ಯವು ಜನರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?
5. ಇಸವಿ 2004ರ ಸೇವಾ ವರ್ಷದ ವರದಿಯಲ್ಲಿ ಯಾವ ಅತ್ಯುತ್ತಮ ಫಲಿತಾಂಶಗಳು ಕಂಡುಬರುತ್ತವೆ?
6. ಅನೇಕ ವರ್ಷಗಳಲ್ಲಿ ಆಗಿರುವ ಏಕಪ್ರಕಾರವಾದ ಅಭಿವೃದ್ಧಿಗೆ ಯಾವುದು ಕಾರಣವಾಗಿದೆ?
7. ಬೈಬಲ್ ಸತ್ಯವನ್ನು ಕಂಡುಕೊಳ್ಳುತ್ತಿರುವವರ ಸಂತೋಷ ಹಾಗೂ ಹುರುಪನ್ನು ಯಾವ ಅನುಭವವು ದೃಷ್ಟಾಂತಿಸುತ್ತದೆ?
8. ದೇವರಿಗಾಗಿರುವ ತಮ್ಮ ಪ್ರೀತಿ ಮತ್ತು ಆತನ ರಾಜ್ಯಕ್ಕಾಗಿರುವ ನಿಷ್ಠೆಯನ್ನು ಅನೇಕರು ತೋರಿಸಿರುವಂಥ ಒಂದು ಪ್ರತಿಫಲದಾಯಕ ವಿಧವು ಯಾವುದಾಗಿದೆ?
9, 10. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಂಥ ಬಹು ದೂರದ ಸ್ಥಳಗಳಲ್ಲಿ ಮಿಷನೆರಿಗಳು ಯಾವ ರೋಮಾಂಚಕ ಅನುಭವಗಳಲ್ಲಿ ಆನಂದಿಸುತ್ತಿದ್ದಾರೆ?
11. ಪರೀಕ್ಷೆಗಳ ಮಧ್ಯೆಯೂ ದೀರ್ಘಕಾಲದಿಂದ ಮಿಷನೆರಿಗಳಾಗಿ ಸೇವೆಮಾಡುತ್ತಿರುವವರಿಗೆ ತಮ್ಮ ಸೇವೆಯ ವಿಷಯದಲ್ಲಿ ಯಾವ ಅನಿಸಿಕೆಯಿದೆ?
12. ರಾಜ್ಯದ ಮೌಲ್ಯಕ್ಕಾಗಿರುವ ನಿಜ ಗಣ್ಯತೆಯು ಹೇಗೆ ವ್ಯಕ್ತಪಡಿಸಲ್ಪಟ್ಟಿದೆ?
13. ಚೆಕ್ ರಿಪಬ್ಲಿಕ್‌ನಲ್ಲಿರುವ ವ್ಯಕ್ತಿಯೊಬ್ಬರು ರಾಜ್ಯಕ್ಕಾಗಿರುವ ತಮ್ಮ ಪ್ರೀತಿಯನ್ನು ಹೇಗೆ ತೋರ್ಪಡಿಸಿದರು?
14. (ಎ) ರಾಜ್ಯದ ಸುವಾರ್ತೆಯು ಏನು ಮಾಡುವಂತೆ ಲಕ್ಷಾಂತರ ಮಂದಿಯನ್ನು ಪ್ರಚೋದಿಸಿದೆ? (ಬಿ) ನಮ್ಮಲ್ಲಿ ಪ್ರತಿಯೊಬ್ಬರೂ ಯಾವ ಆಲೋಚನಾಪ್ರೇರಕ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಸಾಧ್ಯವಿದೆ?
15. ಅಂತಿಮ ದಿನಗಳಲ್ಲಿ ದೇವಜನರು ಏನು ಮಾಡುವರೆಂದು ಪ್ರವಾದಿಸಲಾಗಿತ್ತು?
16. ರಾಜ್ಯದ ಕುರಿತು ಕಲಿಯುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ದೇವರ ಸೇವಕರು ಯಾವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆಯನ್ನು ಕೊಡಿರಿ.
17. ಈ ಪತ್ರಿಕೆಯ 19ರಿಂದ 22ನೆಯ ಪುಟಗಳಲ್ಲಿರುವ 2004ರ ಸೇವಾ ವರ್ಷದ ವರದಿಯಲ್ಲಿ ನೀವು ಯಾವುದನ್ನು ವಿಶೇಷವಾಗಿ ಉತ್ತೇಜನದಾಯಕವಾಗಿ ಕಂಡುಕೊಳ್ಳುತ್ತೀರಿ ಎಂಬುದನ್ನು ತಿಳಿಸಿರಿ.
18. ಮುತ್ತನ್ನು ಹುಡುಕುತ್ತಾ ಪ್ರಯಾಣಿಸುತ್ತಿದ್ದ ವ್ಯಾಪಾರಿಯ ಕುರಿತಾದ ಸಾಮ್ಯದಲ್ಲಿ ಯೇಸು ಯಾವ ಮಾಹಿತಿಯನ್ನು ಒಳಗೂಡಿಸಲಿಲ್ಲ, ಮತ್ತು ಏಕೆ?
19. ಬಹು ಬೆಲೆಯುಳ್ಳ ಮುತ್ತಿನ ಕುರಿತಾದ ಯೇಸುವಿನ ಸಾಮ್ಯದಿಂದ ಯಾವ ಪ್ರಾಮುಖ್ಯ ಪಾಠವನ್ನು ನಾವು ಕಲಿಯಸಾಧ್ಯವಿದೆ?
[ಪುಟ 19-22ರಲ್ಲಿರುವ ಚಾರ್ಟು]
ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 2004ನೇ ಇಸವಿಯ ಸೇವಾ ವರ್ಷದ ವರದಿ
(ಬೌಂಡ್ ವಾಲ್ಯುಮ್ ನೋಡಿ)
[ಪುಟ 14ರಲ್ಲಿರುವ ಚಿತ್ರ]
“ಸತ್ಯವು . . . ಎಲ್ಲಾ ರೀತಿಯ ವ್ಯಕ್ತಿಗಳನ್ನು ಆಕರ್ಷಿಸುತ್ತದೆ.”—ಎ. ಏಚ್. ಮ್ಯಾಕ್‌ಮಿಲನ್
[ಪುಟ 15ರಲ್ಲಿರುವ ಚಿತ್ರ]
ಡಾನ್ಯೇಲಾ ಮತ್ತು ಹೆಲ್‌ಮೂಟ್‌ರು ವಿಯೆನ್ನದ ವಿದೇಶೀ ಭಾಷಾ ಕ್ಷೇತ್ರದಲ್ಲಿ ಸಾರಿದರು
[ಪುಟ 16, 17ರಲ್ಲಿರುವ ಚಿತ್ರಗಳು]
ಪ್ರಯಾಣಿಸುತ್ತಿದ್ದ ಆ ವ್ಯಾಪಾರಸ್ಥನಂತೆ, ಇಂದು ಮಿಷನೆರಿಗಳು ಸಮೃದ್ಧ ಆಶೀರ್ವಾದಗಳನ್ನು ಪಡೆಯುತ್ತಾರೆ
[ಪುಟ 17ರಲ್ಲಿರುವ ಚಿತ್ರ]
“ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು”