ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಜೀವವು ಎಷ್ಟು ಅಮೂಲ್ಯವಾಗಿದೆ?

ನಿಮ್ಮ ಜೀವವು ಎಷ್ಟು ಅಮೂಲ್ಯವಾಗಿದೆ?

ನಿಮ್ಮ ಜೀವವು ಎಷ್ಟು ಅಮೂಲ್ಯವಾಗಿದೆ?

ಮೊದಲನೇ ಲೋಕ ಯುದ್ಧದ ಸಮಯದಲ್ಲಿ ಯೂರೋಪಿನಲ್ಲಿ ಅಸಂಖ್ಯಾತ ಜೀವಗಳು ಬಲಿಯಾಗುತ್ತಿದ್ದಂತೆ, ಇನ್ನೊಂದು ಕಡೆ ದಕ್ಷಿಣ ಧ್ರುವ ಭೂಖಂಡದಲ್ಲಿ ಜೀವಗಳನ್ನು ಉಳಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿತ್ತು. ಆ್ಯಂಗ್ಲೋ-ಐರಿಷ್‌ ಪರಿಶೋಧಕರಾದ ಅರ್ನೆಸ್ಟ್‌ ಶ್ಯಾಕಲ್‌ಟನ್‌ ಮತ್ತು ಅವರ ಸಂಗಡಿಗರು, ಎನ್‌ಡ್ಯೂರೆನ್ಸ್‌ ಎಂಬ ಅವರ ಹಡಗು ಹಿಮಖಂಡಕ್ಕೆ ಬಡಿದು ಮುಳುಗಿದಾಗ ದುರಂತಕೀಡಾದರು. ಶ್ಯಾಕಲ್‌ಟನ್‌ ಹೇಗೊ ತನ್ನ ಸಂಗಡಿಗರನ್ನು ಕಾಪಾಡಿ, ತಕ್ಕಮಟ್ಟಿನ ಸುರಕ್ಷಿತ ಸ್ಥಳಕ್ಕೆ ಅಂದರೆ ದಕ್ಷಿಣ ಅಟ್ಲಾಂಟಿಕ್‌ ಸಾಗರದಲ್ಲಿರುವ ಎಲಿಫೆಂಟ್‌ ದ್ವೀಪಕ್ಕೆ ಕೊಂಡೊಯ್ದರು. ಆದರೆ ಅಲ್ಲಿಯೂ ಅವರು ವಿಪರೀತ ಅಪಾಯವನ್ನು ಎದುರಿಸಿದರು.

ತಾವು ಬದುಕಿ ಉಳಿಯಲು ತಮ್ಮ ಮುಂದಿರುವ ಏಕಮಾತ್ರ ಮಾರ್ಗವು, ದಕ್ಷಿಣ ಜಾರ್ಜಿಯದ ದ್ವೀಪದಲ್ಲಿರುವ ತಿಮಿಂಗಿಲ ಬೇಟೆಯ ಕೇಂದ್ರಕ್ಕೆ ಕೆಲವು ಪುರುಷರನ್ನು ಕಳುಹಿಸಿ ಸಹಾಯವನ್ನು ಪಡೆಯುವುದೇ ಆಗಿದೆ ಎಂಬುದನ್ನು ಶ್ಯಾಕಲ್‌ಟನ್‌ ಗ್ರಹಿಸಿದರು. ಆ ದ್ವೀಪವು 1,100 ಕಿಲೋಮೀಟರ್‌ ದೂರದಲ್ಲಿತ್ತು, ಮತ್ತು ಅವರ ಬಳಿ ಎನ್‌ಡ್ಯೂರೆನ್ಸ್‌ ಹಡಗಿನಿಂದ ನಾಶವಾಗದೆ ಉಳಿದ 7 ಮೀಟರ್‌ ಉದ್ದದ ಕೇವಲ ಒಂದು ರಕ್ಷಣಾದೋಣಿ ಮಾತ್ರ ಇತ್ತು. ಅವರ ಪ್ರತೀಕ್ಷೆಯು ನಿರಾಶಾದಾಯಕವಾಗಿತ್ತು.

ಹದಿನೇಳು ಭೀಕರ ದಿನಗಳ ಅನಂತರ ಅಂದರೆ ಇಸವಿ 1916ರ ಮೇ 10ರಂದು ಶ್ಯಾಕಲ್‌ಟನ್‌ ಮತ್ತು ಇತರ ಐದು ಮಂದಿ ದಕ್ಷಿಣ ಜಾರ್ಜಿಯವನ್ನು ತಲಪಿದರು. ಆದರೆ ಸಮುದ್ರದ ಭಯಾನಕ ಸ್ಥಿತಿಯಿಂದಾಗಿ ಅವರು ದ್ವೀಪದ ಇನ್ನೊಂದು ಬದಿಯನ್ನು ತಲಪಿದರು. ತಾವು ಸೇರಬೇಕಾದ ಸ್ಥಳವನ್ನು ತಲಪಲು ಅವರು ಅಲ್ಲಿಂದ 30 ಕಿಲೋಮೀಟರ್‌ ನಡೆಯಬೇಕಾಗಿತ್ತು. ನಕ್ಷೆಯಲ್ಲಿ ಗುರುತಿಸಿರದ, ಮಂಜಿನಿಂದ ಆವರಿಸಲ್ಪಟ್ಟಿದ್ದ ಬೆಟ್ಟಗಳನ್ನು ಹತ್ತಿ ಅವರು ತಮ್ಮ ಗಮ್ಯ ಸ್ಥಾನವನ್ನು ತಲಪಬೇಕಿತ್ತು. ಸೊನ್ನೆ ಡಿಗ್ರಿಗೂ ಕೆಳಗಿನ ಶೀತಲ ಹವೆಯಲ್ಲಿ ಮತ್ತು ಬೆಟ್ಟವನ್ನು ಹತ್ತಲು ಅಗತ್ಯವಿರುವ ಸರಿಯಾದ ಉಪಕರಣಗಳಿಲ್ಲದೆ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಎದುರಿಸಿ, ಶ್ಯಾಕಲ್‌ಟನ್‌ ಮತ್ತು ಅವರ ಸಂಗಡಿಗರು ತಮ್ಮ ಗಮ್ಯ ಸ್ಥಾನವನ್ನು ತಲಪಿದರು. ಮತ್ತು ಕೊನೆಗೂ ಅವರು ಎಲಿಫೆಂಟ್‌ ದ್ವೀಪದಲ್ಲಿದ್ದ ತನ್ನ ಎಲ್ಲಾ ಸಂಗಡಿಗರನ್ನು ಕಾಪಾಡಿದರು. ಶ್ಯಾಕಲ್‌ಟನ್‌ರವರು ಏಕೆ ಇಷ್ಟೊಂದು ಶ್ರಮವಹಿಸಿದರು? “ಅವರ ಒಂದೇ ಒಂದು ಗುರಿಯು, ತನ್ನ ಎಲ್ಲಾ ಸಂಗಡಿಗರನ್ನು ಜೀವಂತವಾಗಿ ಸುರಕ್ಷಿತ ಸ್ಥಳಕ್ಕೆ ದಾಟಿಸುವುದೇ ಆಗಿತ್ತು” ಎಂದು ಜೀವನಚರಿತ್ರೆಯ ಲೇಖಕರಾದ ರೋಲಂಡ್‌ ಹನ್ಟ್‌ಫೋರ್ಡ್‌ ತಿಳಿಸುತ್ತಾರೆ.

“ಅವುಗಳೊಳಗೆ ಒಂದೂ ಕಡಿಮೆಯಾಗದು”

“ಒಂದು ಬದಿಯಿಂದ ಇನ್ನೊಂದು ಬದಿಯ ವರೆಗೆ ಮೂವತ್ತು ಕಿಲೋಮೀಟರಿನ ಅಂತರವಿರುವ ಬರೀ ಬೋಳಾದ ಮತ್ತು ಯಾರೂ ಬರಸಾಧ್ಯವಿರದ ಬಂಡೆ ಹಾಗೂ ನೀರ್ಗಲ್ಲಿನ ಒಂದು ರಾಶಿಯ ಮೇಲೆ” ಸಂಪೂರ್ಣ ಹತಾಶೆಯ ಸ್ಥಿತಿಯಲ್ಲಿ ಗುಂಪಾಗಿ ಕುಳಿತು ಕಾಯುತ್ತಿದ್ದ ಶ್ಯಾಕಲ್‌ಟನ್‌ರ ಸಂಗಡಿಗರನ್ನು ಯಾವುದು ರಕ್ಷಿಸಿತು? ಅವರ ನಾಯಕನು ಅವರನ್ನು ಪಾರುಗೊಳಿಸುವನೆಂದು ಕೊಟ್ಟ ಮಾತನ್ನು ಖಂಡಿತವಾಗಿಯೂ ನೆರವೇರಿಸುವನೆಂಬ ವಿಷಯದಲ್ಲಿ ಅವರಿಗಿದ್ದ ಭರವಸೆಯೇ.

ಇಂದು ಮಾನವಕುಲವು, ಎಲಿಫೆಂಟ್‌ ದ್ವೀಪದಲ್ಲಿ ನಿರಾಶಾಜನಕ ಸ್ಥಿತಿಯಲ್ಲಿದ್ದ ಆ ಮನುಷ್ಯರಂತಿದೆ. ಅನೇಕರು ನಂಬಲಸಾಧ್ಯವಾದ ಪ್ರತಿಕೂಲ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ ಮತ್ತು ಕೇವಲ ಬದುಕಿ ಉಳಿಯಲಿಕ್ಕಾಗಿ ಹೆಣಗಾಡುತ್ತಿದ್ದಾರೆ. ಹಾಗಿದ್ದರೂ, ದೇವರು ದಬ್ಬಾಳಿಕೆ ಮತ್ತು ಕಷ್ಟಗಳಿಂದ “ಬಾಧೆಪಡುವವರನ್ನು . . . ರಕ್ಷಿಸುವನು” ಎಂಬ ವಿಷಯದಲ್ಲಿ ಅವರು ಸಂಪೂರ್ಣ ಭರವಸೆಯಿಂದಿರಸಾಧ್ಯವಿದೆ. (ಯೋಬ 36:15) ದೇವರು ಪ್ರತಿಯೊಬ್ಬರ ಜೀವವನ್ನು ಅಮೂಲ್ಯವೆಂದೆಣಿಸುತ್ತಾನೆ ಎಂಬ ಆಶ್ವಾಸನೆ ನಿಮಗಿರಲಿ. ಸೃಷ್ಟಿಕರ್ತನಾದ ಯೆಹೋವ ದೇವರು ಹೇಳುವುದು: “ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು.”​—⁠ಕೀರ್ತನೆ 50:15.

ಕೋಟ್ಯಂತರ ಜನರ ಮಧ್ಯದಲ್ಲಿರುವ ನಿಮ್ಮನ್ನು ವ್ಯಕ್ತಿಗತವಾಗಿ ಸೃಷ್ಟಿಕರ್ತನು ಅಮೂಲ್ಯರೆಂದು ಪರಿಗಣಿಸುತ್ತಾನೆ ಎಂಬುದನ್ನು ನಂಬಲು ನಿಮಗೆ ಕಷ್ಟವಾಗುತ್ತದೋ? ಹಾಗಿರುವಲ್ಲಿ, ಪ್ರವಾದಿಯಾದ ಯೆಶಾಯನು ನಮ್ಮ ಸುತ್ತಲಿರುವ ವಿಶಾಲವಾದ ವಿಶ್ವದಲ್ಲಿರುವ ನೂರಾರು ಕೋಟಿ ಗ್ಯಾಲಕ್ಸಿಗಳಲ್ಲಿರುವ ನೂರಾರು ಕೋಟಿ ನಕ್ಷತ್ರಗಳ ಕುರಿತು ಏನು ಹೇಳುತ್ತಾನೆಂದು ಗಮನಿಸಿರಿ. ನಾವು ಓದುವುದು: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.”​—⁠ಯೆಶಾಯ 40:26.

ಇದರ ಅರ್ಥವೇನೆಂಬುದನ್ನು ನೀವು ಗಣ್ಯಮಾಡುತ್ತೀರೋ? ನಮ್ಮ ಕ್ಷೀರಪಥ ಗ್ಯಾಲಕ್ಸಿಯಲ್ಲಿ​—⁠ಅದರಲ್ಲಿ ನಮ್ಮ ಸೌರವ್ಯೂಹವು ಕೇವಲ ಒಂದು ಭಾಗ​—⁠ಕಡಿಮೆಪಕ್ಷ 10,000 ಕೋಟಿ ನಕ್ಷತ್ರಗಳಿವೆ. ಈ ರೀತಿಯಲ್ಲಿ ಇನ್ನೂ ಎಷ್ಟು ಗ್ಯಾಲಕ್ಸಿಗಳಿವೆ? ಯಾರಿಗೂ ನಿರ್ದಿಷ್ಟವಾಗಿ ಎಷ್ಟಿದೆಯೆಂಬುದು ತಿಳಿದಿಲ್ಲ, ಆದರೆ 12,500 ಕೋಟಿಗಳಷ್ಟು ಗ್ಯಾಲಕ್ಸಿಗಳಿವೆಯೆಂದು ಅಂದಾಜುಮಾಡಲಾಗಿದೆ. ಹಾಗಾದರೆ, ಭಯಚಕಿತಗೊಳಿಸುವ ಸಂಖ್ಯೆಯಲ್ಲಿ ಎಷ್ಟೊಂದು ನಕ್ಷತ್ರಗಳಿರಬೇಕು! ಹಾಗಿದ್ದರೂ, ವಿಶ್ವದ ಸೃಷ್ಟಿಕರ್ತನಾದ ಯೆಹೋವನು ಪ್ರತಿಯೊಂದು ನಕ್ಷತ್ರವನ್ನು ಅದರ ಹೆಸರಿನಿಂದ ತಿಳಿದಿದ್ದಾನೆಂದು ಬೈಬಲ್‌ ಹೇಳುತ್ತದೆ.

“ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ”

‘ಆದರೆ ನೂರಾರು ಕೋಟಿ ನಕ್ಷತ್ರಗಳ​—⁠ಅಥವಾ ನೂರಾರು ಕೋಟಿ ಮನುಷ್ಯರ​—⁠ಹೆಸರನ್ನು ತಿಳಿದಿರುವುದು ತಾನೇ ಆತನು ಅವುಗಳ ಬಗ್ಗೆ ವೈಯಕ್ತಿಕವಾಗಿ ಕಾಳಜಿವಹಿಸುತ್ತಾನೆಂಬ ಅರ್ಥವನ್ನು ನೀಡಬೇಕೆಂದಿಲ್ಲ’ ಎಂಬುದಾಗಿ ಯಾರಾದರೂ ಆಕ್ಷೇಪವೆತ್ತಬಹುದು. ತಕ್ಕಮಟ್ಟಿನ ಜ್ಞಾಪಕಶಕ್ತಿಯಿರುವ ಕಂಪ್ಯೂಟರ್‌ ಸಹ ನೂರಾರು ಕೋಟಿ ಜನರ ಹೆಸರುಗಳನ್ನು ದಾಖಲಿಸಿಡಬಲ್ಲದು. ಆದರೆ ಅದರ ಅರ್ಥ ಕಂಪ್ಯೂಟರಿಗೆ ಅವರ ಕುರಿತು ಕಾಳಜಿ ಇದೆ ಎಂದು ಯಾರೂ ಹೇಳಸಾಧ್ಯವಿಲ್ಲ. ಹಾಗಿದ್ದರೂ ಬೈಬಲ್‌, ಯೆಹೋವ ದೇವರಿಗೆ ನೂರಾರು ಕೋಟಿ ಜನರ ಹೆಸರುಗಳು ತಿಳಿದಿವೆ ಎಂಬುದಾಗಿ ಮಾತ್ರವಲ್ಲ ಆತನು ಅವರ ಕುರಿತು ವ್ಯಕ್ತಿಪರವಾಗಿ ಕಾಳಜಿವಹಿಸುತ್ತಾನೆ ಎಂಬುದಾಗಿಯೂ ತಿಳಿಸುತ್ತದೆ. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎಂಬುದಾಗಿ ಅಪೊಸ್ತಲ ಪೇತ್ರನು ಬರೆದನು.​—⁠1 ಪೇತ್ರ 5:⁠7.

ಯೇಸು ಕ್ರಿಸ್ತನು ತಿಳಿಸಿದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಮತ್ತಾಯ 10:29-31) ಗುಬ್ಬಿಗಳಿಗೆ ಮತ್ತು ಮನುಷ್ಯರಿಗೆ ಏನು ಸಂಭವಿಸುತ್ತದೆಂದು ದೇವರಿಗೆ ತಿಳಿದಿದೆ ಎಂಬುದಾಗಿ ಮಾತ್ರ ಯೇಸು ಹೇಳಲಿಲ್ಲ ಎಂಬುದನ್ನು ಗಮನಿಸಿರಿ. ಅವನು ಹೇಳಿದ್ದು: “ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” ಏಕೆ ನೀವು ಅವುಗಳಿಗಿಂತ ಹೆಚ್ಚಿನವರು? ಏಕೆಂದರೆ, ನೀವು ‘ದೇವರ ಸ್ವರೂಪದಲ್ಲಿ’ ಅಂದರೆ ದೇವರ ಸ್ವಂತ ಉನ್ನತ ಗುಣಗಳನ್ನು ಪ್ರತಿಬಿಂಬಿಸುವ ನೈತಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಗುಣಗಳನ್ನು ಬೆಳೆಸಿಕೊಳ್ಳಲು ಹಾಗೂ ಪ್ರದರ್ಶಿಸಲು ಬೇಕಾಗಿರುವ ಸಾಮರ್ಥ್ಯದೊಂದಿಗೆ ಸೃಷ್ಟಿಸಲ್ಪಟ್ಟಿದ್ದೀರಿ.​—⁠ಆದಿಕಾಂಡ 1:​26, 27.

“ನಿಷ್ಣಾತ ಕ್ರಿಯೆಯ ಫಲವಾಗಿದೆ”

ಸೃಷ್ಟಿಕರ್ತನಿದ್ದಾನೆ ಎಂಬುದನ್ನು ಅಲ್ಲಗಳೆಯುವ ಜನರ ಪ್ರತಿಪಾದನೆಯಿಂದ ಮೋಸಹೋಗಬೇಡಿರಿ. ಅವರಿಗನುಸಾರ, ಕುರುಡಾದ ಮತ್ತು ವ್ಯಕ್ತಿಸ್ವರೂಪವಿಲ್ಲದ ನೈಸರ್ಗಿಕ ಶಕ್ತಿಯೇ ನಿಮ್ಮನ್ನು ರೂಪಿಸಿತು. ‘ದೇವರ ಸ್ವರೂಪದಲ್ಲಿ’ ಸೃಷ್ಟಿಸಲ್ಪಟ್ಟಿರುವ ಬದಲು ನೀವು ಈ ಭೂಮಿಯಲ್ಲಿರುವ ಇತರ ಎಲ್ಲಾ ಪ್ರಾಣಿಗಳಿಗಿಂತ​—⁠ಗುಬ್ಬಿಯನ್ನು ಸಹ ಸೇರಿಸಿ​—⁠ಸ್ವಲ್ಪವೂ ಭಿನ್ನರಲ್ಲ ಎಂದು ಅವರು ವಾದಿಸುತ್ತಾರೆ.

ಜೀವವು ಅಕಸ್ಮಾತ್ತಾಗಿ ಅಥವಾ ಕುರುಡು ಶಕ್ತಿಯಿಂದಾಗಿ ಬಂತೆಂದರೆ ನೀವು ನಿಜವಾಗಿಯೂ ನಂಬುತ್ತೀರೋ? ಅಣುಜೀವಿಶಾಸ್ತ್ರಜ್ಞರಾದ ಮಿಕಾಯೆಲ್‌ ಜೆ. ಬೀಹೀಗನುಸಾರ, ನಮ್ಮ ಜೀವವನ್ನು ನಿಗ್ರಹಿಸುತ್ತಿರುವ “ತತ್ತರಗೊಳಿಸುವಷ್ಟು ಜಟಿಲವಾದ ಜೀವರಾಸಾಯನಿಕ ವ್ಯವಸ್ಥೆಗಳು” ಈ ವಿಚಾರವು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲವೆಂದು ನಿರೂಪಿಸುತ್ತವೆ. ಜೀವರಾಸಾಯನದ ಮೂಲಕ ಕಂಡುಬರುವ ಪುರಾವೆಗಳು, “ಈ ಭೂಮಿಯಲ್ಲಿರುವ ಜೀವವು ತನ್ನ ಅತಿ ಆರಂಭದ ಮಟ್ಟದಲ್ಲಿಯೇ . . . ನಿಷ್ಣಾತ ಕ್ರಿಯೆಯ ಫಲವಾಗಿದೆ” ಎಂಬ ಅಲ್ಲಗಳೆಯಲಾಗದ ನಿರ್ಣಯಕ್ಕೆ ನಡೆಸುತ್ತದೆ.​—⁠ಡಾರ್ವಿನ್‌ನ ಕಪ್ಪುಪೆಟ್ಟಿಗೆ​—⁠ವಿಕಾಸವಾದಕ್ಕೆ ಜೀವರಾಸಾಯನಿಕ ಸವಾಲು (ಇಂಗ್ಲಿಷ್‌).

ಈ ಭೂಮಿಯ ಮೇಲಿರುವ ಎಲ್ಲಾ ಹಂತದ ಜೀವಗಳು ನಿಷ್ಣಾತ ಕ್ರಿಯೆಯ ಫಲವಾಗಿದೆ ಎಂಬುದಾಗಿ ಬೈಬಲ್‌ ಹೇಳುತ್ತದೆ. ಅಷ್ಟುಮಾತ್ರವಲ್ಲದೆ ಈ ನಿಷ್ಣಾತ ಕ್ರಿಯೆಯ ಮೂಲನು ವಿಶ್ವದ ಸೃಷ್ಟಿಕರ್ತನಾದ ಯೆಹೋವ ದೇವರೇ ಆಗಿದ್ದಾನೆ ಎಂಬುದಾಗಿಯೂ ಅದು ಹೇಳುತ್ತದೆ.​—⁠ಕೀರ್ತನೆ 36:9; ಪ್ರಕಟನೆ 4:11.

ನೋವು ಮತ್ತು ಕಷ್ಟಾನುಭವಗಳಿಂದ ತುಂಬಿದ ಈ ಲೋಕದಲ್ಲಿ ನಾವು ಅವೆಲ್ಲವನ್ನು ಸಹಿಸಿಕೊಳ್ಳಬೇಕೆಂಬುದು ನಿಜ. ಆದರೆ ಇದು, ಈ ಭೂಮಿಗೆ ಮತ್ತು ಅದರಲ್ಲಿರುವ ಎಲ್ಲಾ ಜೀವಿಗಳಿಗೆ ಒಬ್ಬ ಸೃಷ್ಟಿಕರ್ತನೂ ವಿನ್ಯಾಸಕನೂ ಇದ್ದಾನೆ ಎಂಬ ವಿಷಯವನ್ನು ನಂಬುವುದರಿಂದ ನಿಮ್ಮನ್ನು ತಡೆಯದಿರಲಿ. ಎರಡು ಮೂಲಭೂತ ಸತ್ಯಗಳನ್ನು ನಿಮ್ಮ ಮನಸ್ಸಿನಲ್ಲಿಡಿರಿ. ಒಂದು, ನಮ್ಮ ಸುತ್ತಲಿರುವ ಅಪರಿಪೂರ್ಣತೆಯನ್ನು ದೇವರು ವಿನ್ಯಾಸಿಸಲಿಲ್ಲ. ಇನ್ನೊಂದು, ಈ ಎಲ್ಲಾ ಅಪರಿಪೂರ್ಣತೆಯನ್ನು ತಾತ್ಕಾಲಿಕವಾಗಿ ಅನುಮತಿಸಿರಲು ನಮ್ಮ ಸೃಷ್ಟಿಕರ್ತನಿಗೆ ಸಕಾರಣವಿದೆ. ಈ ಪತ್ರಿಕೆಯು ಬಹಳಷ್ಟು ಬಾರಿ ಚರ್ಚಿಸಿರುವಂತೆ, ಮೊದಲ ಮಾನವರು ಯೆಹೋವ ದೇವರ ಪರಮಾಧಿಕಾರವನ್ನು ಧಿಕ್ಕರಿಸಿದಾಗ ಎಬ್ಬಿಸಲ್ಪಟ್ಟ ನೈತಿಕ ವಿವಾದವನ್ನು ನಿತ್ಯಕ್ಕಾಗಿ ಬಗೆಹರಿಸುವ ಸಲುವಾಗಿ ಆತನು ಈ ದುಷ್ಟ ವಿಷಯವು ಕೇವಲ ನಿರ್ದಿಷ್ಟ ಸಮಯದ ವರೆಗೆ ಇರುವಂತೆ ಅನುಮತಿಸಿದ್ದಾನೆ. *​—⁠ಆದಿಕಾಂಡ 3:​1-7; ಧರ್ಮೋಪದೇಶಕಾಂಡ 32:​4, 5; ಪ್ರಸಂಗಿ 7:29; 2 ಪೇತ್ರ 3:​8, 9.

‘ಅವನು ಮೊರೆಯಿಡುವ ಬಡವರನ್ನು ಉದ್ಧರಿಸುವನು’

ಇಂದು ಅನೇಕ ಜನರು ಅನುಭವಿಸುತ್ತಿರುವ ಕಷ್ಟಕರ ಪರಿಸ್ಥಿತಿಯ ಹೊರತಾಗಿಯೂ ಜೀವವೆಂಬುದು ಒಂದು ಅದ್ಭುತಕರ ಉಡುಗೊರೆಯಾಗಿದೆ ಎಂಬುದು ನಿಜ. ಮತ್ತು ಈ ಜೀವವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ನಮ್ಮಿಂದಾದುದೆಲ್ಲವನ್ನೂ ಮಾಡುತ್ತೇವೆ. ಆದರೆ ದೇವರು ವಾಗ್ದಾನಿಸಿರುವ ಭಾವೀ ಜೀವನವು, ಶ್ಯಾಕಲ್‌ಟನ್‌ರವರ ಜನರು ಎಲಿಫೆಂಟ್‌ ದ್ವೀಪದಲ್ಲಿ ಅನುಭವಿಸುತ್ತಿದ್ದಂಥ ಕಠಿನ ಮತ್ತು ನೋವುಭರಿತ ಪರಿಸ್ಥಿತಿಯಲ್ಲಿ ಬರೀ ಬದುಕಿ ಉಳಿಯಲು ಹೆಣಗಾಡುವಂಥ ಜೀವನವಲ್ಲ. ದೇವರು ತನ್ನ ಮಾನವ ಸೃಷ್ಟಿಗಾಗಿ ಆರಂಭದಲ್ಲಿಯೇ ವಾಗ್ದಾನಿಸಿದ್ದ ‘ವಾಸ್ತವವಾದ ಜೀವವನ್ನು [ನಾವು] ಹೊಂದಶಕ್ತರಾಗುವಂತೆ,’ ಇಂದು ನಾವು ಅನುಭವಿಸುತ್ತಿರುವ ನೋವು ಮತ್ತು ವ್ಯರ್ಥತೆಯಿಂದ ನಮ್ಮನ್ನು ಪಾರುಗೊಳಿಸುವುದೇ ದೇವರ ಉದ್ದೇಶವಾಗಿದೆ.​—⁠1 ತಿಮೊಥೆಯ 6:​18, 19.

ದೇವರು ಇದೆಲ್ಲದನ್ನು ಮಾಡುತ್ತಾನೆ, ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರೂ ಆತನ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದೇವೆ. ನಮ್ಮ ಆದಿ ಹೆತ್ತವರಾದ ಆದಾಮಹವ್ವರಿಂದ ನಾವು ಬಾಧ್ಯತೆಯಾಗಿ ಪಡೆದಿರುವ ಪಾಪ, ಅಪರಿಪೂರ್ಣತೆ ಮತ್ತು ಮರಣದಿಂದ ನಮ್ಮನ್ನು ಬಿಡಿಸಲು ಅಗತ್ಯವಿರುವ ಈಡನ್ನು ಒದಗಿಸಿಕೊಡುವ ಸಲುವಾಗಿ ಆತನು ತನ್ನ ಮಗನಾದ ಯೇಸು ಕ್ರಿಸ್ತನನ್ನು ನಮಗೆ ನೀಡಿದ್ದಾನೆ. (ಮತ್ತಾಯ 20:28) “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ . . . ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು” ಎಂದು ಯೇಸು ಕ್ರಿಸ್ತನು ಹೇಳಿದನು.​—⁠ಯೋಹಾನ 3:16.

ಯಾರ ಜೀವನವು ಈಗ ನೋವು ಮತ್ತು ದಬ್ಬಾಳಿಕೆಯಿಂದ ಬಾಧಿಸಲ್ಪಟ್ಟಿದೆಯೋ ಅಂಥವರಿಗಾಗಿ ದೇವರು ಏನು ಮಾಡಲಿದ್ದಾನೆ? ಆತನ ಮಗನ ಕುರಿತಾಗಿ ದೇವರ ಪ್ರೇರಿತ ವಾಕ್ಯವು ತಿಳಿಸುವುದು: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.” ಈ ಎಲ್ಲಾ ವಿಷಯಗಳನ್ನು ಅವನು ಏಕೆ ಮಾಡುತ್ತಾನೆ? ಏಕೆಂದರೆ, “ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”​—⁠ಕೀರ್ತನೆ 72:12-14.

ಶತಮಾನಗಳಿಂದ ಮಾನವಕುಲವು ಪಾಪ ಮತ್ತು ಅಪರಿಪೂರ್ಣತೆಯ ಭಾರವಾದ ಹೊರೆಯ ಅಡಿಯಲ್ಲಿ ಜಜ್ಜಲ್ಪಟ್ಟಿದೆ. ಅದು, ನೋವು ಮತ್ತು ಕಷ್ಟಾನುಭವಗಳಿಂದ “ನರಳುತ್ತಾ” ಇದೆ. ಈ ಸಂಕಷ್ಟಗಳಿಂದಾಗುವ ಯಾವುದೇ ಹಾನಿಯನ್ನು ತಾನು ಸರಿಪಡಿಸಬಲ್ಲೆನೆಂಬ ತಿಳಿವಳಿಕೆಯಿಂದಲೇ ದೇವರು ಈ ವಿಷಯವನ್ನು ಅನುಮತಿಸಿದ್ದಾನೆ. (ರೋಮಾಪುರ 8:​18-22) ಅತಿ ಬೇಗನೆ ಆತನು ತನ್ನ ಮಗನಾದ ಯೇಸು ಕ್ರಿಸ್ತನ ಕೈಕೆಳಗಿರುವ ರಾಜ್ಯ ಸರಕಾರದ ಮೂಲಕ “ಸಮಸ್ತವನ್ನು ಸರಿಮಾಡು”ವನು.​—⁠ಅ. ಕೃತ್ಯಗಳು 3:21; ಮತ್ತಾಯ 6:​9, 10.

ಇದರಲ್ಲಿ, ಹಿಂದೆ ಕಷ್ಟಾನುಭವಿಸಿ ಮೃತಪಟ್ಟ ಜನರ ಪುನರುತ್ಥಾನವೂ ಸೇರಿದೆ. ಅವರು ದೇವರ ಜ್ಞಾಪಕದಲ್ಲಿ ಸುರಕ್ಷಿತರಾಗಿದ್ದಾರೆ. (ಯೋಹಾನ 5:28, 29; ಅ. ಕೃತ್ಯಗಳು 24:15) ಬೇಗನೆ ಅವರು ಜೀವವನ್ನು “ಸಮೃದ್ಧಿಯಾಗಿ” ಹೊಂದಲಿದ್ದಾರೆ​—⁠ನೋವು ಮತ್ತು ಕಷ್ಟಾನುಭವಗಳಿಂದ ಮುಕ್ತವಾದ ಭೂಪರದೈಸಿನಲ್ಲಿ ಪರಿಪೂರ್ಣತೆಯನ್ನೂ ನಿತ್ಯಜೀವವನ್ನೂ ಪಡೆಯಲಿದ್ದಾರೆ. (ಯೋಹಾನ 10:10; ಪ್ರಕಟನೆ 21:3-5) ಬದುಕಿರುವ ಪ್ರತಿಯೊಬ್ಬರೂ ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಮತ್ತು “ದೇವರ ಸ್ವರೂಪದಲ್ಲಿ” ಮಾಡಲ್ಪಟ್ಟಿರುವವರನ್ನು ಗುರುತಿಸುವ ಅದ್ಭುತಕರವಾದ ಗುಣಗಳನ್ನು ಹಾಗೂ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಶಕ್ತರಾಗಿರುವರು.

ಯೆಹೋವನು ವಾಗ್ದಾನಿಸಿರುವ ಜೀವನದಲ್ಲಿ ಆನಂದಿಸಲು ನೀವು ಬದುಕಿರುವಿರೋ? ಅದು ನಿಮ್ಮ ಕೈಯಲ್ಲಿದೆ. ಈ ಎಲ್ಲಾ ಆಶೀರ್ವಾದಗಳನ್ನು ತರಲು ದೇವರು ಮಾಡಿರುವ ಏರ್ಪಾಡಿನಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಇದಕ್ಕಾಗಿ ನಿಮಗೆ ಸಹಾಯನೀಡಲು ಈ ಪತ್ರಿಕೆಯ ಪ್ರಕಾಶಕರು ಸಂತೋಷಿಸುತ್ತಾರೆ.

[ಪಾದಟಿಪ್ಪಣಿ]

^ ಪ್ಯಾರ. 17 ಈ ವಿಷಯದ ಕುರಿತಾದ ಸವಿವರವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿನ “ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?” ಎಂಬ 8ನೇ ಅಧ್ಯಾಯವನ್ನು ನೋಡಿರಿ.

[ಪುಟ 4, 5ರಲ್ಲಿರುವ ಚಿತ್ರ]

ಶ್ಯಾಕಲ್‌ಟನ್‌ ತಮ್ಮನ್ನು ಪಾರುಗೊಳಿಸುವನೆಂದು ಕೊಟ್ಟ ಮಾತನ್ನು ಖಂಡಿತವಾಗಿಯೂ ನೆರವೇರಿಸುವನೆಂಬ ಭರವಸೆಯು, ಹತಾಶೆಯ ಸ್ಥಿತಿಯಲ್ಲಿದ್ದ ಅವನ ಸಂಗಡಿಗರಿಗಿತ್ತು

[ಕೃಪೆ]

© CORBIS

[ಪುಟ 6ರಲ್ಲಿರುವ ಚಿತ್ರ]

“ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು”