ನೀವು ಯಾರಿಗೆ ಕಲಿಸುತ್ತಿದ್ದೀರೊ ಅವರಲ್ಲಿ ಸತ್ಯವು ಫಲಕೊಡುತ್ತಿದೆಯೇ?
ನೀವು ಯಾರಿಗೆ ಕಲಿಸುತ್ತಿದ್ದೀರೊ ಅವರಲ್ಲಿ ಸತ್ಯವು ಫಲಕೊಡುತ್ತಿದೆಯೇ?
ಇನ್ನು ಮುಂದೆ ತಾನೊಬ್ಬ ಯೆಹೋವನ ಸಾಕ್ಷಿಯೆಂದು ಗುರುತಿಸಲ್ಪಡಲು ಬಯಸುವುದಿಲ್ಲ ಎಂಬುದಾಗಿ ಯುವ ಪ್ರಾಯದ ಎರಿಕ್ ತಿಳಿಸಿದಾಗ ಅವನ ಹೆತ್ತವರು ಕಂಗಾಲಾದರು. ಈ ರೀತಿ ಸಂಭವಿಸಬಹುದೆಂಬ ಯಾವ ಸೂಚನೆಯನ್ನೂ ಅವರು ಅವನಲ್ಲಿ ಕಂಡಿರಲಿಲ್ಲ. ಸಣ್ಣವನಾಗಿದ್ದಾಗ ಎರಿಕ್ ಕುಟುಂಬ ಬೈಬಲ್ ಅಧ್ಯಯನದಲ್ಲಿ ಭಾಗವಹಿಸುತ್ತಿದ್ದನು, ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದನು ಮತ್ತು ಸಭೆಯೊಂದಿಗೆ ಸಾರುವ ಕೆಲಸದಲ್ಲಿಯೂ ಜೊತೆಗೂಡುತ್ತಿದ್ದನು. ಅವನು ಸತ್ಯದಲ್ಲಿದ್ದಂತೆ ತೋರುತ್ತಿತ್ತು. ಆದರೆ ಈಗ ಅವನು ಮನೆ ಬಿಟ್ಟು ಹೋದಾಗ, ಬೈಬಲ್ ಸತ್ಯವು ಅವನಲ್ಲಿರಲಿಲ್ಲ ಎಂಬುದನ್ನು ಅವನ ಹೆತ್ತವರು ಗ್ರಹಿಸಿಕೊಂಡರು. ಆ ಗ್ರಹಿಕೆಯು ಅವರಿಗೆ ಸಖೇದಾಶ್ಚರ್ಯವನ್ನು ಉಂಟುಮಾಡಿತು.
ಇತರರು, ತಮ್ಮ ಬೈಬಲ್ ವಿದ್ಯಾರ್ಥಿಗಳು ಅನಿರೀಕ್ಷಿತವಾಗಿ ಅಧ್ಯಯನವನ್ನು ನಿಲ್ಲಿಸಿಬಿಡುವಾಗ ಇದೇ ರೀತಿಯ ನಷ್ಟದ ಭಾವನೆಯನ್ನು ಅನುಭವಿಸಿದ್ದಾರೆ. ಇಂಥ ಸಮಯದಲ್ಲಿ, ವ್ಯಕ್ತಿಗಳು ಸ್ವತಃ ಹೀಗೆ ಕೇಳಿಕೊಳ್ಳುತ್ತಾರೆ: ‘ಈ ರೀತಿ ಸಂಭವಿಸಬಹುದೆಂದು ನಾನೇಕೆ ಮುನ್ನೋಡಲಿಲ್ಲ?’ ಆಧ್ಯಾತ್ಮಿಕ ವಿಪತ್ತು ಬಂದೆರಗುವ ಮುನ್ನವೇ, ನಾವು ಯಾರಿಗೆ ಕಲಿಸುತ್ತಿದ್ದೇವೊ ಅವರಲ್ಲಿ ಸತ್ಯವು ಫಲಕೊಡುತ್ತಿದೆಯೋ ಎಂಬುದನ್ನು ಕಂಡುಹಿಡಿಯಲು ಸಾಧ್ಯವೊ? ಸತ್ಯವು ನಮ್ಮಲ್ಲಿ ಮತ್ತು ನಾವು ಯಾರಿಗೆ ಕಲಿಸುತ್ತಿದ್ದೇವೊ ಅವರಲ್ಲಿ ಕಾರ್ಯವೆಸಗುತ್ತಿದೆ ಎಂದು ಹೇಗೆ ನಿಶ್ಚಯದಿಂದಿರಬಲ್ಲೆವು? ಯೇಸುವಿನ ಚಿರಪರಿಚಿತವಾದ ಬಿತ್ತುವವನ ಕುರಿತಾದ ಸಾಮ್ಯದಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಅವನು ಒಂದು ಸುಳಿವನ್ನು ಒದಗಿಸಿದ್ದಾನೆ.
ಸತ್ಯವು ಹೃದಯವನ್ನು ತಲಪಬೇಕು
ಯೇಸು ಹೇಳಿದ್ದು: “ಆ ಬೀಜವಂದರೆ ದೇವರ ವಾಕ್ಯ. ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ಒಳ್ಳೆಯ ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ; ಇವರೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವವರು.” (ಲೂಕ 8:11, 15) ಹಾಗಾದರೆ, ರಾಜ್ಯದ ಸತ್ಯವು ನಮ್ಮ ವಿದ್ಯಾರ್ಥಿಗಳಲ್ಲಿ ಯಾವುದೇ ಫಲವನ್ನು ಫಲಿಸಶಕ್ತವಾಗುವ ಮುನ್ನ ಅದು ಅವರ ಸಾಂಕೇತಿಕ ಹೃದಯದಲ್ಲಿ ಬೇರೂರಬೇಕಾಗಿದೆ. ಒಳ್ಳೆಯ ನೆಲದಲ್ಲಿ ಬಿದ್ದ ಉತ್ತಮ ಬೀಜದಂತೆ, ಒಮ್ಮೆ ದೈವಿಕ ಸತ್ಯವು ಒಳ್ಳೆಯ ಹೃದಯವನ್ನು ಸ್ಪರ್ಶಿಸಿದಾಗ ಅದು ಕೂಡಲೆ ಪ್ರತಿಸ್ಪಂದಿಸುತ್ತದೆ ಮತ್ತು ಫಲವನ್ನು ಫಲಿಸುತ್ತದೆ ಎಂದು ಯೇಸು ನಮಗೆ ಆಶ್ವಾಸನೆ ನೀಡುತ್ತಾನೆ. ಹಾಗಾದರೆ ನಾವು ಏನನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು?
ಕೇವಲ ಬಾಹ್ಯ ತೋರಿಕೆಯನ್ನು ಮಾತ್ರವಲ್ಲ ಹೃದಯದ ಗುಣಗಳನ್ನೂ ನಾವು ಗಮನಿಸಬೇಕು. ಕೇವಲ ಆರಾಧನಾ ಕ್ರಮವನ್ನು ಅನುಸರಿಸಿದ ಮಾತ್ರಕ್ಕೆ ಒಬ್ಬ ವ್ಯಕ್ತಿಯ ಹೃದಯದಲ್ಲಿ ಯಾವ ವಿಚಾರವಿದೆ ಎಂಬುದನ್ನು ತಿಳಿಯಸಾಧ್ಯವಿಲ್ಲ. (ಯೆರೆಮೀಯ 17:9, 10; ಮತ್ತಾಯ 15:7-9) ನಾವು ಇನ್ನೂ ಆಳಕ್ಕೆ ನೋಡಬೇಕಾಗಿದೆ. ವ್ಯಕ್ತಿಯ ಇಚ್ಛೆಗಳು, ಹೇತುಗಳು ಮತ್ತು ಆದ್ಯತೆಗಳಲ್ಲಿ ಬದಲಾವಣೆಯು ಕಂಡುಬರಬೇಕಾಗಿದೆ. ವ್ಯಕ್ತಿಯು ದೇವರ ಚಿತ್ತಕ್ಕೆ ಅನುಗುಣವಾದ ಹೊಸ ವ್ಯಕ್ತಿತ್ವವನ್ನು ಬೆಳೆಸಲಾರಂಭಿಸಬೇಕು. (ಎಫೆಸ 4:20-24) ಉದಾಹರಣೆಗೆ: ಥೆಸಲೊನೀಕದವರು ಸುವಾರ್ತೆಯನ್ನು ಕೇಳಿದಾಗ ಅದನ್ನು ಕೂಡಲೆ ದೇವರ ವಾಕ್ಯವೆಂದು ಅಂಗೀಕರಿಸಿದರು ಎಂದು ಪೌಲನು ತಿಳಿಸುತ್ತಾನೆ. ಆದರೆ ಅನಂತರ ಅವರು ತೋರಿಸಿದ ತಾಳ್ಮೆ, ವಿಶ್ವಾಸ ಮತ್ತು ಪ್ರೀತಿಯು ತಾನೇ ಅವರಲ್ಲಿ ಸತ್ಯವು “ಬಲವಾಗಿ ಕೆಲಸ ನಡಿಸುತ್ತದೆ” ಎಂಬುದನ್ನು ದೃಢೀಕರಿಸಿತು.—1 ಥೆಸಲೊನೀಕ 2:13, 14; 3:6.
ಎರಿಕ್‌ನ ಉದಾಹರಣೆಯು ತೋರಿಸುವಂತೆ ಒಬ್ಬ ವಿದ್ಯಾರ್ಥಿಯ ಹೃದಯದಲ್ಲಿ ಏನಿದೆ ಎಂಬುದು ಒಂದಲ್ಲ ಒಂದು ಸಮಯ ಅವನ ನಡತೆಯಿಂದ ಬಹಿರಂಗವಾಗುತ್ತದೆ. (ಮಾರ್ಕ 7:21, 22; ಯಾಕೋಬ 1:14, 15) ದುಃಖಕರವಾಗಿ, ಕೆಲವೊಂದು ಕೆಟ್ಟ ಗುಣಗಳು ವ್ಯಕ್ತಿಯ ಕೃತ್ಯಗಳಲ್ಲಿ ಸಂಪೂರ್ಣವಾಗಿ ತೋರಿಬರುವಷ್ಟರಲ್ಲಿ ಅದು ತೀರ ತಡವಾಗಿರುತ್ತದೆ. ಆದುದರಿಂದ, ಮುಂದಕ್ಕೆ ಆಧ್ಯಾತ್ಮಿಕ ಎಡವುಗಲ್ಲಾಗಿ ಪರಿಣಮಿಸಬಹುದಾದ ನಿರ್ದಿಷ್ಟ ಬಲಹೀನತೆಗಳನ್ನು ಮುಂಚಿತವಾಗಿಯೇ ಗುರುತಿಸಲು ಪ್ರಯತ್ನಿಸುವುದು ಒಂದು ಪಂಥಾಹ್ವಾನವಾಗಿದೆ. ಸಾಂಕೇತಿಕ ಹೃದಯವನ್ನು ನೋಡಲು ನಮಗೆ ಒಂದು ವಿಧಾನದ ಅಗತ್ಯವಿದೆ. ನಾವು ಅದನ್ನು ಹೇಗೆ ಮಾಡಸಾಧ್ಯವಿದೆ?
ಯೇಸುವಿನಿಂದ ಕಲಿಯಿರಿ
ಇತರರ ಹೃದಯವನ್ನು ಸರಿಯಾಗಿ ಓದುವ ಸಾಮರ್ಥ್ಯ ಯೇಸುವಿಗಿತ್ತೆಂಬುದು ನಿಜ. (ಮತ್ತಾಯ 12:25) ನಮ್ಮಲ್ಲಿ ಯಾರಿಗೂ ಇದನ್ನು ಮಾಡಸಾಧ್ಯವಿಲ್ಲ. ಹಾಗಿದ್ದರೂ, ನಾವು ಸಹ ವ್ಯಕ್ತಿಗಳ ಇಚ್ಛೆಗಳು, ಹೇತುಗಳು ಮತ್ತು ಆದ್ಯತೆಗಳನ್ನು ಗ್ರಹಿಸಬಲ್ಲೆವು ಎಂಬುದನ್ನು ಅವನು ತೋರಿಸಿಕೊಟ್ಟನು. ರೋಗಿಯ ಶಾರೀರಿಕ ಹೃದಯದಲ್ಲಿ ಯಾವ ತೊಂದರೆಯಿದೆ ಎಂಬುದನ್ನು ಕಂಡುಹಿಡಿಯಲು ಒಬ್ಬ ಅರ್ಹ ವೈದ್ಯನು ವಿವಿಧ ರೀತಿಯ ತಪಾಸಣಾ ವಿಧಾನಗಳನ್ನು ಉಪಯೋಗಿಸುವಂತೆ, ‘ಹೃದಯದ ಆಲೋಚನೆಗಳು ಉದ್ದೇಶಗಳು’ ಇನ್ನೂ ಸಾಮಾನ್ಯರ ಗಮನಕ್ಕೆ ಬಾರದಿರುವಾಗಲೇ ಅವುಗಳನ್ನು ‘ಹೊರಸೇದಿ’ ಬಹಿರಂಗಗೊಳಿಸಲು ಯೇಸು ದೇವರ ವಾಕ್ಯವನ್ನು ಉಪಯೋಗಿಸಿದನು.—ಜ್ಞಾನೋಕ್ತಿ 20:5; ಇಬ್ರಿಯ 4:12.
ಉದಾಹರಣೆಗೆ, ಒಂದು ಸಂದರ್ಭದಲ್ಲಿ ಯೇಸು, ಮುಂದಕ್ಕೆ ಎಡವುಗಲ್ಲಾಗಲಿದ್ದ ಒಂದು ಬಲಹೀನತೆಯ ಕುರಿತಾಗಿ ಎಚ್ಚರದಿಂದಿರುವಂತೆ ಪೇತ್ರನಿಗೆ ಸಹಾಯಮಾಡಿದನು. ಪೇತ್ರನು ತನ್ನನ್ನು ಪ್ರೀತಿಸುತ್ತಾನೆಂದು ಯೇಸುವಿಗೆ ತಿಳಿದಿತ್ತು. ವಾಸ್ತವದಲ್ಲಿ, ಯೇಸು ಪೇತ್ರನಿಗೆ ಈಗಾಗಲೇ “ರಾಜ್ಯದ ಬೀಗದ ಕೈಗಳನ್ನು” ಒಪ್ಪಿಸಿದ್ದನು. (ಮತ್ತಾಯ 16:13-19) ಹಾಗಿದ್ದರೂ, ಸೈತಾನನ ದೃಷ್ಟಿಯು ಅಪೊಸ್ತಲರ ಮೇಲಿತ್ತೆಂಬುದು ಸಹ ಯೇಸುವಿಗೆ ತಿಳಿದಿತ್ತು. ಮತ್ತು ಮುಂಬರುವ ದಿವಸಗಳಲ್ಲಿ, ರಾಜಿಮಾಡಿಕೊಳ್ಳುವಂತೆ ತೀವ್ರವಾದ ಒತ್ತಡವು ಅವರಿಗೆ ಬರಲಿತ್ತು. ತನ್ನ ಕೆಲವು ಶಿಷ್ಯರ ನಂಬಿಕೆಯಲ್ಲಿ ಬಲಹೀನತೆಯಿತ್ತೆಂದು ಯೇಸು ಗ್ರಹಿಸಿದನು. ಆದುದರಿಂದಲೇ, ಅವರು ಯಾವ ವಿಷಯದಲ್ಲಿ ಕೆಲಸಮಾಡಬೇಕೆಂಬುದನ್ನು ಹೇಳಲು ಅವನು ಹಿಂಜರಿಯಲಿಲ್ಲ. ಅವನು ಹೇಗೆ ಈ ವಿಷಯವನ್ನು ಆರಂಭಿಸಿದನೆಂಬುದನ್ನು ಗಮನಿಸಿರಿ.
ಮತ್ತಾಯ 16:21 ಹೇಳುವುದು: ‘ಅಂದಿನಿಂದ ಯೇಸು ಕ್ರಿಸ್ತನು ತಾನು ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಡಬೇಕೆಂದು ತನ್ನ ಶಿಷ್ಯರಿಗೆ ತಿಳಿಸುವದಕ್ಕೆ [“ತೋರಿಸುವುದಕ್ಕೆ,” NW] ಪ್ರಾರಂಭಮಾಡಿದನು.’ ತನಗೆ ಏನು ಸಂಭವಿಸಲಿದೆ ಎಂಬುದನ್ನು ಯೇಸು ಕೇವಲ ಹೇಳಿದ್ದು ಮಾತ್ರವಲ್ಲದೆ ಅದನ್ನು ತೋರಿಸಿದನು ಎಂಬುದನ್ನು ಗಮನಿಸಿರಿ. ಮೆಸ್ಸೀಯನು ಕಷ್ಟಗಳನ್ನನುಭವಿಸಿ ಸಾಯುವನು ಎಂಬುದನ್ನು ಸೂಚಿಸುವ ಕೀರ್ತನೆ 22:14-18 ಅಥವಾ ಯೆಶಾಯ 53:10-12 ರಂಥ ಬೈಬಲ್ ವಚನಗಳನ್ನು ಬಹುಶಃ ಅವನು ಉಪಯೋಗಿಸಿದನು. ಶಾಸ್ತ್ರವಚನಗಳನ್ನು ಓದುವ ಅಥವಾ ನೇರವಾಗಿ ಉಲ್ಲೇಖಿಸುವ ಮೂಲಕ, ಪೇತ್ರ ಮತ್ತು ಇತರರು ತಮ್ಮ ಹೃದಯಗಳಿಂದ ಪ್ರತಿಕ್ರಿಯಿಸುವಂತೆ ಯೇಸು ಸಂದರ್ಭವನ್ನು ನೀಡಿದನು. ಮುಂಬರಲಿದ್ದ ಹಿಂಸೆಯ ವಿಷಯದಲ್ಲಿ ಅವರು ಹೇಗೆ ಪ್ರತಿಕ್ರಿಯಿಸಿದರು?
ಆಶ್ಚರ್ಯಕರವಾಗಿ, ಧೈರ್ಯಶಾಲಿಯೂ ಹುರುಪುಳ್ಳವನೂ ಎಂಬುದಾಗಿ ತನ್ನನ್ನು ತೋರಿಸಿಕೊಡುತ್ತಿದ್ದ ಪೇತ್ರನು ಆ ಸಂದರ್ಭದಲ್ಲಿ ಆವೇಗಪರ ಪ್ರತಿಕ್ರಿಯೆಯ ಮೂಲಕ ತನ್ನ ಆಲೋಚನೆಯಲ್ಲಿದ್ದ ಗಂಭೀರವಾದ ಲೋಪವನ್ನು ಪ್ರದರ್ಶಿಸಿದನು. ಅವನಂದದ್ದು: “ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು.” ಪೇತ್ರನ ಆಲೋಚನೆ ತಪ್ಪಾಗಿತ್ತೆಂಬುದು ಸ್ಪಷ್ಟ. ಯೇಸು ಸೂಚಿಸಿದಂತೆ ಪೇತ್ರನ “ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ.” ಗುರುತರವಾದ ಪರಿಣಾಮಗಳಿಗೆ ನಡೆಸಬಲ್ಲ ಒಂದು ಗಂಭೀರವಾದ ದೋಷವು ಇದಾಗಿತ್ತು. ಯೇಸು ಏನು ಮಾಡಿದನು? ಪೇತ್ರನನ್ನು ಖಂಡಿಸಿದ ಬಳಿಕ, ಯೇಸು ಅವನಿಗೂ ಇತರ ಶಿಷ್ಯರಿಗೂ ಹೀಗೆ ಹೇಳಿದನು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು [“ಯಾತನಾ ಕಂಬವನ್ನು,” NW] ಹೊತ್ತುಕೊಂಡು ನನ್ನ ಹಿಂದೆ ಬರಲಿ.” ಕೀರ್ತನೆ 49:9 ಮತ್ತು 62:12ರಲ್ಲಿ ಕಂಡುಬರುವ ವಿಚಾರಕ್ಕೆ ಗಮನವನ್ನು ಸೆಳೆಯುತ್ತಾ, ಅವರ ನಿತ್ಯಜೀವದ ನಿರೀಕ್ಷೆಯು ರಕ್ಷಣೆಯನ್ನು ಒದಗಿಸಲು ಅಶಕ್ತರಾಗಿರುವ ಮನುಷ್ಯರ ಕೈಯಲ್ಲಿಲ್ಲ ಬದಲಾಗಿ ದೇವರ ಕೈಯಲ್ಲಿದೆ ಎಂಬುದನ್ನು ಅವನು ದೀನತೆಯಿಂದ ಅವರಿಗೆ ಜ್ಞಾಪಕಹುಟ್ಟಿಸಿದನು.—ಮತ್ತಾಯ 16:22-28.
ಅನಂತರ ಪೇತ್ರನು ತಾತ್ಕಾಲಿಕವಾಗಿ ಭಯಕ್ಕೆ ಒಳಗಾಗಿ ಯೇಸುವನ್ನು ಮೂರು ಬಾರಿ ಅಲ್ಲಗಳೆದನಾದರೂ, ಈ ಮೇಲಿನ ಚರ್ಚೆಯು ಮತ್ತು ಇನ್ನಿತರ ಚರ್ಚೆಗಳು ಅವನು ಶೀಘ್ರವೇ ಆಧ್ಯಾತ್ಮಿಕವಾಗಿ ಚೇತರಿಸಿಕೊಳ್ಳುವಂತೆ ಅವನನ್ನು ಸಜ್ಜುಗೊಳಿಸಲು ಖಂಡಿತವಾಗಿಯೂ ಸಹಾಯಮಾಡಿದವು. (ಯೋಹಾನ 21:15-19) ಕೇವಲ 50 ದಿವಸಗಳ ಅನಂತರ, ಯೆರೂಸಲೇಮಿನಲ್ಲಿ ಪೇತ್ರನು ಧೈರ್ಯದಿಂದ ಜನಸಮೂಹದ ಮುಂದೆ ನಿಂತು ಯೇಸುವಿನ ಪುನರುತ್ಥಾನದ ಕುರಿತು ಸಾಕ್ಷಿನೀಡಿದನು. ಹಿಂಬಾಲಿಸಿ ಬಂದ ವಾರಗಳು, ತಿಂಗಳುಗಳು ಮತ್ತು ವರುಷಗಳಲ್ಲಿ ಅವನು ಧೈರ್ಯದಿಂದ ಸತತವಾದ ಬಂಧನಗಳನ್ನೂ ಹೊಡೆತಗಳನ್ನೂ ಸೆರೆಮನೆವಾಸಗಳನ್ನೂ ಎದುರಿಸಿದನು. ಈ ರೀತಿಯಲ್ಲಿ ಧೀರ ಸಮಗ್ರತೆಗೆ ಒಂದು ಎದ್ದುಕಾಣುವ ಮಾದರಿಯನ್ನಿಟ್ಟನು.—ಅ. ಕೃತ್ಯಗಳು 2:14-36; 4:18-21; 5:29-32, 40-42; 12:3-5.
ಇದರಿಂದ ನಾವೇನನ್ನು ಕಲಿಯುತ್ತೇವೆ? ಪೇತ್ರನ ಹೃದಯದಲ್ಲಿದ್ದ ದೋಷವನ್ನು ಹೊರತೆಗೆದು ಬಯಲುಪಡಿಸಲು ಯೇಸು ಏನು ಮಾಡಿದನೆಂಬುದನ್ನು ನೀವು ನೋಡಬಲ್ಲಿರೋ? ಮೊದಲಾಗಿ, ಪೇತ್ರನ ಗಮನವನ್ನು ನಿರ್ದಿಷ್ಟ ವಿಷಯದ ಮೇಲೆ ಕೇಂದ್ರೀಕರಿಸಲು ಅವನು ಒಂದು ಸೂಕ್ತವಾದ ವಚನವನ್ನು ಆಯ್ಕೆಮಾಡಿದನು. ಅನಂತರ, ಪೇತ್ರನು ತನ್ನ ಹೃದಯದಿಂದ ಪ್ರತಿಕ್ರಿಯಿಸಲು ಅವನಿಗೆ ಸಂದರ್ಭವನ್ನು ನೀಡಿದನು. ಅಂತಿಮವಾಗಿ, ಪೇತ್ರನು ತನ್ನ ಆಲೋಚನೆಯನ್ನೂ ಭಾವನೆಗಳನ್ನೂ ಸರಿಪಡಿಸಿಕೊಳ್ಳಲು ಸಹಾಯಮಾಡುವ ಹೆಚ್ಚಿನ ಶಾಸ್ತ್ರೀಯ ಸಲಹೆಯನ್ನು ಒದಗಿಸಿದನು. ಈ ರೀತಿಯ ಕಲಿಸುವಿಕೆಯು ನನ್ನ ಸಾಮರ್ಥ್ಯಕ್ಕೆ ಮಿಗಿಲಾದದ್ದು ಎಂದು ನೀವು ಎಣಿಸಬಹುದು. ಆದರೆ, ತಯಾರಿ ಮತ್ತು ಯೆಹೋವನ ಮೇಲೆ
ಅವಲಂಬನೆಯು ನಮ್ಮಲ್ಲಿ ಪ್ರತಿಯೊಬ್ಬರೂ ಯೇಸುವಿನ ಮಾದರಿಯನ್ನು ಅನುಸರಿಸುವಂತೆ ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ತಿಳಿಯಲು ನಾವು ಎರಡು ಅನುಭವಗಳನ್ನು ಪರಿಗಣಿಸೋಣ.ಹೃದಯದಲ್ಲಿರುವ ವಿಚಾರವನ್ನು ಹೊರಗೆಳೆಯುವುದು
ಒಂದನೇ ಮತ್ತು ಎರಡನೇ ತರಗತಿಯಲ್ಲಿರುವ ತನ್ನ ಇಬ್ಬರು ಗಂಡು ಮಕ್ಕಳು ಅವರ ಶಿಕ್ಷಕಿಯ ಮೇಜಿನಿಂದ ಸಕ್ಕರೆಮಿಠಾಯಿಯನ್ನು ಕದ್ದ ಸಂಗತಿಯು ಒಬ್ಬ ಕ್ರೈಸ್ತ ತಂದೆಗೆ ತಿಳಿದುಬಂದಾಗ, ಅವನು ಅವರೊಂದಿಗೆ ಕುಳಿತು ತರ್ಕಬದ್ಧವಾಗಿ ಮಾತಾಡಿದನು. ಇದೊಂದು ಮಕ್ಕಳಾಟ ಎಂದು ಅಲ್ಪವಾಗಿ ಎಣಿಸಿ ಈ ವಿಷಯವನ್ನು ಬಿಟ್ಟುಬಿಡುವ ಬದಲು, “ಈ ಕೆಟ್ಟ ವಿಷಯವನ್ನು ಮಾಡುವಂತೆ ಅವರ ಹೃದಯವನ್ನು ಯಾವುದು ಪ್ರೇರೇಪಿಸಿತು ಎಂಬುದನ್ನು ನಾನು ತಿಳಿಯಪ್ರಯತ್ನಿಸಿದೆ” ಎಂಬುದಾಗಿ ತಂದೆಯು ತಿಳಿಸುತ್ತಾನೆ.
ಯೆಹೋಶುವ 7ನೇ ಅಧ್ಯಾಯದಲ್ಲಿ ದಾಖಲಿಸಿರುವಂತೆ, ಆಕಾನನಿಗೆ ಏನು ಸಂಭವಿಸಿತು ಎಂಬುದನ್ನು ಜ್ಞಾಪಿಸಿಕೊಳ್ಳುವಂತೆ ತಂದೆಯು ಹುಡುಗರಿಗೆ ತಿಳಿಸಿದನು. ಅವರಿಗೆ ಕೂಡಲೆ ತಂದೆಯು ಹೇಳಬಯಸಿದ ವಿಷಯವು ಅರ್ಥವಾಯಿತು ಮತ್ತು ಅವರು ತಮ್ಮ ತಪ್ಪನ್ನು ಒಪ್ಪಿಕೊಂಡರು. ಇದಕ್ಕಿಂತ ಮುಂಚೆಯೇ ಅವರ ಮನಸಾಕ್ಷಿಯು ಅವರನ್ನು ಚುಚ್ಚುತ್ತಿತ್ತು. ಎಫೆಸ 4:28 ನ್ನು ಓದುವಂತೆ ತಂದೆಯು ಅವರಿಗೆ ಹೇಳಿದನು. ಅದು ತಿಳಿಸುವುದು: “ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ . . . ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ ಅವನಿಂದಾಗುವದು.” ಸಕ್ಕರೆಮಿಠಾಯಿಯನ್ನು ಖರೀದಿಸಿ ಶಿಕ್ಷಕಿಗೆ ನೀಡುವುದರ ಮೂಲಕ ಮಕ್ಕಳು ಆ ನಷ್ಟವನ್ನು ಸರಿದೂಗಿಸುವಂತೆ ತಂದೆಯು ಮಾಡಿದನು. ಹೀಗೆ, ಅವರ ಹೃದಯದಲ್ಲಿ ಶಾಸ್ತ್ರೀಯ ಸಲಹೆಯನ್ನು ಅಚ್ಚೊತ್ತಿದನು.
“ನಮ್ಮ ಮಕ್ಕಳಲ್ಲಿ ಯಾವುದೇ ಕೆಟ್ಟ ಹೇತುಗಳನ್ನು ನಾವು ಕಂಡ ಕೂಡಲೆ ಅವುಗಳನ್ನು ಬೇರು ಸಮೇತ ಕಿತ್ತೆಸೆಯಲು ಪ್ರಯತ್ನಿಸಿದೆವು ಮತ್ತು ಅವರೊಂದಿಗೆ ತರ್ಕಿಸುವ ಮೂಲಕ ಅವುಗಳ ಸ್ಥಳದಲ್ಲಿ ಉತ್ತಮವೂ ಶುದ್ಧವೂ ಆದ ಹೇತುಗಳನ್ನು ಹಾಕಿದೆವು” ಎಂದು ತಂದೆಯು ತಿಳಿಸುತ್ತಾನೆ. ಈ ಹೆತ್ತವರು ತಮ್ಮ ಮಕ್ಕಳಿಗೆ ಕಲಿಸುವಾಗ, ಯೇಸುವನ್ನು ಅನುಕರಿಸುವ ಮೂಲಕ ಖಂಡಿತವಾಗಿಯೂ ಉತ್ತಮ ಫಲಿತಾಂಶಗಳನ್ನು ಸಮಯಾನಂತರ ಕಂಡುಕೊಂಡರು. ಕ್ರಮೇಣ ಅವರ ಇಬ್ಬರೂ ಮಕ್ಕಳು ಬ್ರೂಕ್ಲಿನ್ ಬೆತೆಲಿನ ಮುಖ್ಯ ಕಾರ್ಯಾಲಯದ ಸದಸ್ಯರಾಗಲು ಆಮಂತ್ರಿಸಲ್ಪಟ್ಟರು. ಒಬ್ಬನು ಇಂದಿನ ವರೆಗೂ, ಅಂದರೆ 25 ವರುಷಗಳ ಅನಂತರವು ಅಲ್ಲಿ ಸೇವೆಸಲ್ಲಿಸುತ್ತಿದ್ದಾನೆ.
ಇನ್ನೊಬ್ಬ ಕ್ರೈಸ್ತ ಸ್ತ್ರೀಯು ತನ್ನ ಬೈಬಲ್ ವಿದ್ಯಾರ್ಥಿನಿಗೆ ಹೇಗೆ ಸಹಾಯಮಾಡಲು ಶಕ್ತಳಾದಳು ಎಂಬುದನ್ನು ಪರಿಗಣಿಸಿರಿ. ವಿದ್ಯಾರ್ಥಿನಿಯು ಕೂಟಗಳಿಗೆ ಹಾಜರಾಗುತ್ತಿದ್ದಳು, ಶುಶ್ರೂಷೆಯಲ್ಲಿ ಭಾಗವಹಿಸುತ್ತಿದ್ದಳು ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಇಚ್ಛೆಯನ್ನು ಸಹ ಈಗಾಗಲೇ ವ್ಯಕ್ತಪಡಿಸಿದ್ದಳು. ಆದರೆ, ಅವಳು ಯೆಹೋವನಿಗಿಂತ ಹೆಚ್ಚಾಗಿ ಸ್ವತಃ ತನ್ನ ಮೇಲೆಯೇ ಅವಲಂಬಿಸಿರುವಂತೆ ಕಂಡುಬಂತು. “ಅವಿವಾಹಿತ ಸ್ತ್ರೀಯಾಗಿದ್ದ ಕಾರಣ ಅವಳು ವಿಪರೀತ ಸ್ವತಂತ್ರ ಮನೋಭಾವವನ್ನು ತೋರಿಸುತ್ತಿದ್ದಳು. ಆದರೆ ಇದನ್ನು ಅವಳು ಗ್ರಹಿಸಿರಲಿಲ್ಲ. ಇದು ಅವಳನ್ನು ಒಂದೇ ಶಾರೀರಿಕ ಕುಗ್ಗುವಿಕೆ ಅಥವಾ ಆಧ್ಯಾತ್ಮಿಕ ಬೀಳುವಿಕೆಯ ಕಡೆಗೆ ನಡೆಸುತ್ತಿದೆ ಎಂದು ನಾನು ಚಿಂತಿಸಿದೆ” ಎಂದು ಸಾಕ್ಷಿಯು ನೆನಪಿಸಿಕೊಳ್ಳುತ್ತಾಳೆ.
ಆದುದರಿಂದ, ಮತ್ತಾಯ 6:33 ರ ಬಗ್ಗೆ ವಿದ್ಯಾರ್ಥಿನಿಯೊಂದಿಗೆ ಚರ್ಚಿಸಲು ಸಾಕ್ಷಿಯು ಪ್ರಥಮ ಹೆಜ್ಜೆಯನ್ನು ತೆಗೆದುಕೊಂಡಳು. ತನ್ನ ಆದ್ಯತೆಗಳನ್ನು ಸರಿಹೊಂದಿಸಿ, ರಾಜ್ಯವನ್ನು ಪ್ರಥಮವಾಗಿಡುವಂತೆಯೂ ವಿಷಯಗಳನ್ನು ಉತ್ತಮವಾಗಿ ನೆರವೇರಿಸಲು ಯೆಹೋವನ ಮೇಲೆ ಹೊಂದಿಕೊಳ್ಳುವಂತೆಯೂ ವಿದ್ಯಾರ್ಥಿನಿಯನ್ನು ಉತ್ತೇಜಿಸಿದಳು. ಸಾಕ್ಷಿಯು ಮುಚ್ಚುಮರೆಯಿಲ್ಲದೆ ಅವಳನ್ನು ಹೀಗೆ ಕೇಳಿದಳು: “ಸ್ವಇಷ್ಟಕ್ಕನುಸಾರ ಜೀವಿಸುವುದು ಕೆಲವೊಮ್ಮೆ ನಿನಗೆ ಯೆಹೋವನ ಮೇಲೆಯೂ ಇತರರ ಮೇಲೆಯೂ ಅವಲಂಬಿಸುವುದನ್ನು ಕಷ್ಟಕರವನ್ನಾಗಿ ಮಾಡುತ್ತದೆಯೋ?” ಆ ವಿದ್ಯಾರ್ಥಿನಿಯು, ತಾನು ಪ್ರಾರ್ಥನೆ ಮಾಡುವುದನ್ನು ಸಹ ಹೆಚ್ಚುಕಡಿಮೆ ನಿಲ್ಲಿಸಿಯೇ ಬಿಟ್ಟಿದ್ದೇನೆ ಎಂದು ಒಪ್ಪಿಕೊಂಡಳು. ಅನಂತರ ಪ್ರಚಾರಕಳು, ಕೀರ್ತನೆ 55:22 ರಲ್ಲಿ ಕಂಡುಬರುವ ಬುದ್ಧಿವಾದವನ್ನು ಅನ್ವಯಿಸುವಂತೆ ಮತ್ತು “[ಯೆಹೋವನು] ನಿಮಗೋಸ್ಕರ ಚಿಂತಿಸುತ್ತಾನೆ” ಎಂದು 1 ಪೇತ್ರ 5:7 ಆಶ್ವಾಸನೆ ನೀಡುವ ಕಾರಣ ಅವಳ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕುವಂತೆ ಅವಳನ್ನು ಉತ್ತೇಜಿಸಿದಳು. ಆ ಮಾತುಗಳು ಅವಳ ಹೃದಯವನ್ನು ಸ್ಪರ್ಶಿಸಿದವು. ಸಾಕ್ಷಿಯು ತಿಳಿಸುವುದು, “ಅವಳು ಅತ್ತದ್ದನ್ನು ನಾನು ಕೇವಲ ಕೆಲವೇ ಬಾರಿ ನೋಡಿದ್ದೆ. ಅದರಲ್ಲಿ ಇದು ಒಂದು ಬಾರಿಯಾಗಿತ್ತು.”
ಸತ್ಯವು ನಿಮ್ಮಲ್ಲಿ ಕಾರ್ಯವೆಸಗುತ್ತಾ ಇರುವಂತೆ ಮಾಡಿರಿ
ನಾವು ಯಾರಿಗೆ ಕಲಿಸುತ್ತೇವೊ ಅವರು ಬೈಬಲ್ ಸತ್ಯಕ್ಕೆ ಪ್ರತಿಕ್ರಿಯಿಸುವುದನ್ನು ನೋಡುವುದು ತಾನೇ ಮಹಾ ಆನಂದವನ್ನು ತರುತ್ತದೆ. ಆದರೆ, ಇತರರಿಗೆ ಸಹಾಯಮಾಡಲು ನಾವು ಮಾಡುವ ಪ್ರಯತ್ನಗಳು ಯಶಸ್ವಿಯಾಗಬೇಕಾದರೆ, ನಾವು ಸ್ವತಃ ಉತ್ತಮ ಮಾದರಿಯನ್ನು ಇಡುವ ಅಗತ್ಯವಿದೆ. (ಯೂದ 22, 23) ನಾವೆಲ್ಲರೂ ‘ನಡುಗುವವರಾಗಿ ನಮ್ಮ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳುವ’ ಅಗತ್ಯವಿದೆ. (ಫಿಲಿಪ್ಪಿ 2:12) ಇದರಲ್ಲಿ, ಕ್ರಮವಾಗಿ ಶಾಸ್ತ್ರವಚನಗಳ ಬೆಳಕು ನಮ್ಮ ಸ್ವಂತ ಹೃದಯಗಳ ಮೇಲೆ ಪ್ರಕಾಶಿಸಿ, ಸರಿಪಡಿಸುವಿಕೆಯು ಬೇಕಾಗಿರುವಂಥ ಮನೋಭಾವಗಳು, ಇಚ್ಛೆಗಳು ಹಾಗೂ ಒಲವುಗಳನ್ನು ಹುಡುಕುವಂತೆ ಅನುಮತಿಸುವುದೂ ಸೇರಿದೆ.—2 ಪೇತ್ರ 1:19.
ಉದಾಹರಣೆಗೆ, ಇತ್ತೀಚೆಗೆ ಕ್ರೈಸ್ತ ಚಟುವಟಿಕೆಗಳಲ್ಲಿನ ನಿಮ್ಮ ಹುರುಪು ಕಡಿಮೆಯಾಗಿದೆಯೋ? ಒಂದುವೇಳೆ ಆಗಿರುವಲ್ಲಿ, ಏಕೆ? ಒಂದು ಕಾರಣ, ನೀವು ಹೆಚ್ಚಾಗಿ ನಿಮ್ಮ ಮೇಲೆ ಹೊಂದಿಕೊಂಡಿರುವುದೇ ಆಗಿರಬಹುದು. ಇದು ಸರಿಯಾದ ಕಾರಣವೆಂದು ನೀವು ಹೇಗೆ ಹೇಳಸಾಧ್ಯವಿದೆ? ಹಗ್ಗಾಯ 1:2-11 ನ್ನು ಓದಿ, ಮತ್ತು ಸ್ವದೇಶಕ್ಕೆ ಹಿಂದಿರುಗಿದ ಯೆಹೂದ್ಯರೊಂದಿಗೆ ಯೆಹೋವನು ತರ್ಕಿಸಿದಂಥ ರೀತಿಯನ್ನು ಪ್ರಾಮಾಣಿಕವಾಗಿ ಪರ್ಯಾಲೋಚಿಸಿ. ಅನಂತರ ಸ್ವತಃ ಹೀಗೆ ಕೇಳಿಕೊಳ್ಳಿ: ‘ನಾನು ಆರ್ಥಿಕ ಭದ್ರತೆ ಮತ್ತು ಭೌತಿಕ ಸೌಕರ್ಯಗಳ ಕುರಿತು ಅತಿಯಾಗಿ ಚಿಂತಿಸುತ್ತೇನೋ? ನಾನು ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆಯನ್ನು ನೀಡುವುದಾದರೆ ನನ್ನ ಕುಟುಂಬದ ಕುರಿತು ಯೆಹೋವನು ಕಾಳಜಿವಹಿಸುತ್ತಾನೆಂಬ ವಿಷಯದಲ್ಲಿ ನನಗೆ ನಿಜವಾಗಿಯೂ ಭರವಸೆಯಿದೆಯೋ? ಮೊದಲಾಗಿ ನಾನು ನನ್ನ ಬಗ್ಗೆ ನೋಡಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೋ?’ ನಿಮ್ಮ ಆಲೋಚನೆ ಅಥವಾ ಭಾವನೆಗಳಲ್ಲಿ ಯಾವುದೇ ಹೊಂದಾಣಿಕೆಯು ಅಗತ್ಯವಿದ್ದಲ್ಲಿ, ಅವುಗಳನ್ನು ಮಾಡಲು ಹಿಂಜರಿಯಬೇಡಿರಿ. ಮತ್ತಾಯ 6:25-33, ಲೂಕ 12:13-21, ಮತ್ತು 1 ತಿಮೊಥೆಯ 6:6-12 ರಂಥ ವಚನಗಳಲ್ಲಿ ಕಂಡುಬರುವ ಶಾಸ್ತ್ರೀಯ ಸಲಹೆಯು, ಭೌತಿಕ ಅಗತ್ಯಗಳ ಮತ್ತು ಸೊತ್ತುಗಳ ಕಡೆಗೆ ಸಮತೂಕದ ದೃಷ್ಟಿಕೋನವನ್ನು ಹೊಂದಿರಲು ಬೇಕಾದ ಸಹಾಯವನ್ನು ನೀಡುತ್ತದೆ. ಇದು ಯೆಹೋವನ ನಿರಂತರ ಆಶೀರ್ವಾದವನ್ನು ತರುತ್ತದೆ.—ಮಲಾಕಿಯ 3:10.
ಈ ರೀತಿಯ ಸ್ವಪರೀಕ್ಷೆಯು ಒಂದು ಗಂಭೀರವಾದ ವಿಚಾರವಾಗಿರಬಲ್ಲದು. ನಮ್ಮಲ್ಲಿರುವ ಒಂದು ನಿರ್ದಿಷ್ಟ ಬಲಹೀನತೆಯು ತೋರಿಸಲ್ಪಟ್ಟಾಗ ಅದನ್ನು ಒಪ್ಪಿಕೊಳ್ಳುವುದು ಭಾವನಾತ್ಮಕವಾಗಿ ಕಠಿನವಾದ ವಿಷಯವಾಗಿದೆ. ಹಾಗಿದ್ದರೂ, ನಿಮ್ಮ ಮಗುವಿಗೆ, ನಿಮ್ಮ ಬೈಬಲ್ ವಿದ್ಯಾರ್ಥಿಗೆ, ಅಥವಾ ಸ್ವತಃ ನಿಮಗೇ ಸಹಾಯಮಾಡಲು ನೀವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವಾಗ—ವಿಷಯವು ಎಷ್ಟೇ ವೈಯಕ್ತಿಕವಾಗಿರಲಿ ಅಥವಾ ಗಂಭೀರವಾಗಿರಲಿ—ನೀವು ಅವನ ಅಥವಾ ಸ್ವತಃ ನಿಮ್ಮ ಜೀವವನ್ನು ಉಳಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದ್ದೀರಿ.—ಗಲಾತ್ಯ 6:1.
ಆದರೆ, ಒಂದುವೇಳೆ ನಿಮ್ಮ ಪ್ರಯತ್ನಗಳು ಉತ್ತಮ ಫಲಗಳನ್ನು ಫಲಿಸದಂತೆ ತೋರುವಾಗ ಆಗೇನು? ತಕ್ಷಣವೇ ನಿಮ್ಮ ಪ್ರಯತ್ನವನ್ನು ಬಿಟ್ಟುಬಿಡಬೇಡಿ. ಒಂದು ಅಪರಿಪೂರ್ಣ ಹೃದಯವನ್ನು ಸರಿಪಡಿಸುವುದು ಸೂಕ್ಷ್ಮವಾದ, ಸಮಯವನ್ನು ತೆಗೆದುಕೊಳ್ಳುವ ಮತ್ತು ಕೆಲವೊಮ್ಮೆ ಪ್ರಯಾಸದಾಯಕ ಕೆಲಸವಾಗಿರಸಾಧ್ಯವಿದೆ. ಆದರೆ ಅದೇ ಸಮಯದಲ್ಲಿ ಅದು ಪ್ರತಿಫಲದಾಯಕವೂ ಆಗಿರಬಲ್ಲದು.
ಆರಂಭದಲ್ಲಿ ಉಲ್ಲೇಖಿಸಿದ ಯುವ ಪ್ರಾಯದ ಎರಿಕ್ ಕ್ರಮೇಣ ತನ್ನ ತಪ್ಪನ್ನು ಗ್ರಹಿಸಿಕೊಂಡು, ಪುನಃ ‘ಸತ್ಯದಲ್ಲಿ ನಡೆಯಲು’ ಆರಂಭಿಸಿದನು. (2 ಯೋಹಾನ 4) “ನಾನು ಏನನ್ನು ಕಳೆದುಕೊಂಡೆನೆಂಬುದನ್ನು ಗ್ರಹಿಸಿದ ಅನಂತರವೇ ನಾನು ಯೆಹೋವನ ಕಡೆಗೆ ಪುನಃ ಹಿಂದಿರುಗಿದೆ,” ಎಂದು ಅವನು ಹೇಳುತ್ತಾನೆ. ತನ್ನ ಹೆತ್ತವರ ಸಹಾಯದಿಂದ ಎರಿಕ್ ಈಗ ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದಾನೆ. ಅವನು ತನ್ನ ಹೃದಯವನ್ನು ಪರೀಕ್ಷಿಸಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಅವನ ಹೆತ್ತವರು ಮಾಡಿದ ಸತತ ಪ್ರಯತ್ನಗಳನ್ನು ಒಮ್ಮೆ ವಿರೋಧಿಸುತ್ತಿದ್ದರೂ, ಅವರೇನು ಮಾಡಿದರೋ ಅದಕ್ಕಾಗಿ ಅವನೀಗ ಆಭಾರಿಯಾಗಿದ್ದಾನೆ. “ನನ್ನ ಹೆತ್ತವರು ಶ್ಲಾಘನೆಗೆ ಅರ್ಹರು. ಅವರೆಂದೂ ನನ್ನನ್ನು ಪ್ರೀತಿಸುವುದನ್ನು ನಿಲ್ಲಿಸಲಿಲ್ಲ” ಎಂದು ಅವನು ಹೇಳುತ್ತಾನೆ.
ನಾವು ಯಾರಿಗೆ ಕಲಿಸುತ್ತೇವೊ ಅವರ ಹೃದಯದಲ್ಲಿ ದೇವರ ವಾಕ್ಯದ ಬೆಳಕು ಪ್ರಕಾಶಿಸುವಂತೆ ಮಾಡುವುದು ಉಪಕಾರದ ಅಥವಾ ಪ್ರೀತಿಪೂರ್ವಕ ದಯೆಯ ಅಭಿವ್ಯಕ್ತಿಯಾಗಿದೆ. (ಕೀರ್ತನೆ 141:5) ನಿಮ್ಮ ಮಕ್ಕಳಲ್ಲಿ ಮತ್ತು ನಿಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಹೊಸ ಕ್ರೈಸ್ತ ವ್ಯಕ್ತಿತ್ವವು ನಿಜವಾಗಿಯೂ ಬೇರೂರುತ್ತಿದೆಯೋ ಎಂಬುದನ್ನು ಕಂಡುಕೊಳ್ಳಲು ಅವರ ಹೃದಯವನ್ನು ಪರೀಕ್ಷಿಸುತ್ತಾ ಇರಿ. “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವ” ಮೂಲಕ ಸತ್ಯವು ಇತರರಲ್ಲಿ ಮತ್ತು ಸ್ವತಃ ನಿಮ್ಮಲ್ಲಿ ಕಾರ್ಯವೆಸಗುತ್ತಾ ಇರುವಂತೆ ಮಾಡಿರಿ.—2 ತಿಮೊಥೆಯ 2:15.
[ಪುಟ 29ರಲ್ಲಿರುವ ಚಿತ್ರ]
ಯೇಸುವಿನ ಮಾತುಗಳು ಪೇತ್ರನಲ್ಲಿದ್ದ ಬಲಹೀನತೆಯನ್ನು ಬಯಲುಗೊಳಿಸಿದವು
[ಪುಟ 31ರಲ್ಲಿರುವ ಚಿತ್ರ]
ಹೃದಯದಲ್ಲಿ ಏನಿದೆಯೊ ಅದನ್ನು ಹೊರಗೆಳೆಯಲು ಬೈಬಲನ್ನು ಉಪಯೋಗಿಸಿರಿ