ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಳ್ಳುವುದು’

‘ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಳ್ಳುವುದು’

‘ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಳ್ಳುವುದು’

“ಪರಲೋಕರಾಜ್ಯವು ಮನುಷ್ಯರು ಮುಂದೊತ್ತುವ ಗುರಿಯಾಗಿದೆ, ಮತ್ತು ಮುಂದೊತ್ತುವವರೇ ಅದನ್ನು ಸ್ವಾಧೀನಮಾಡಿಕೊಳ್ಳುತ್ತಾರೆ.”​—⁠ಮತ್ತಾಯ 11:⁠12, Nw.

ನೀವು ಒಂದು ವಸ್ತುವನ್ನು ಅತ್ಯಮೂಲ್ಯವೆಂದೆಣಿಸಿ, ನಿಮ್ಮ ಬಳಿ ಇರುವಂಥದ್ದೆಲ್ಲವನ್ನು ಕೊಟ್ಟು ಅದನ್ನು ನಿಮ್ಮದಾಗಿಸಿಕೊಳ್ಳಲಿಕ್ಕಾಗಿ ಪ್ರಯತ್ನಿಸಿದ್ದುಂಟೊ? ಹಣ, ಕೀರ್ತಿ, ಅಧಿಕಾರ ಅಥವಾ ಸ್ಥಾನಮಾನದಂಥ ಯಾವುದಾದರೊಂದು ಗುರಿಯನ್ನು ಬೆನ್ನಟ್ಟುವಾಗ ಅರ್ಪಣಾತ್ಮಕ ಮನೋಭಾವವನ್ನು ತೋರಿಸುವುದರ ಕುರಿತು ಜನರು ಮಾತಾಡುವುದಾದರೂ, ಒಬ್ಬ ವ್ಯಕ್ತಿಯು ತುಂಬ ಅಪೇಕ್ಷಣೀಯವಾದ ಏನನ್ನಾದರೂ ಕಂಡುಕೊಂಡು ಅದನ್ನು ಪಡೆದುಕೊಳ್ಳುವುದಕ್ಕೋಸ್ಕರ ಎಲ್ಲವನ್ನೂ ತೊರೆಯಲು ಮನಸ್ಸುಮಾಡುವುದು ತುಂಬ ಅಪರೂಪ. ಯೇಸು ಕ್ರಿಸ್ತನು ದೇವರ ರಾಜ್ಯದ ಕುರಿತಾಗಿ ತಿಳಿಸಿದ ಅನೇಕ ಆಲೋಚನಾಪ್ರೇರಕ ಸಾಮ್ಯಗಳಲ್ಲೊಂದರಲ್ಲಿ ಈ ಅಪರೂಪದ ಆದರೆ ತುಂಬ ಶ್ಲಾಘನೀಯವಾದ ಗುಣದ ಬಗ್ಗೆ ಮಾತಾಡಿದನು.

2 ಇದು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಮಾತ್ರ ಹೇಳಿದಂಥ ಒಂದು ಸಾಮ್ಯ ಅಥವಾ ದೃಷ್ಟಾಂತವಾಗಿತ್ತು. ಇದು ಬಹು ಬೆಲೆಯುಳ್ಳ ಒಂದು ಮುತ್ತಿನ ಕುರಿತಾದ ಸಾಮ್ಯವಾಗಿತ್ತು. ಯೇಸು ಹೇಳಿದ್ದು: “ಪರಲೋಕರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ [“ಹುಡುಕುತ್ತಾ ಪ್ರಯಾಣಿಸುವ,” NW] ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು [“ಒಡನೆಯೇ,” NW] ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.” (ಮತ್ತಾಯ 13:36, 45, 46) ಈ ದೃಷ್ಟಾಂತದಿಂದ ತನ್ನ ಕೇಳುಗರು ಯಾವ ಪಾಠವನ್ನು ಕಲಿಯುವಂತೆ ಯೇಸು ಬಯಸಿದನು? ಮತ್ತು ಯೇಸುವಿನ ಮಾತುಗಳಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?

ಮುತ್ತುಗಳ ಭಾರೀ ಮೌಲ್ಯ

3 ಪುರಾತನ ಕಾಲದಿಂದಲೂ ಮುತ್ತುಗಳು ಆಲಂಕಾರಿಕ ವಸ್ತುಗಳಾಗಿ ಪರಿಗಣಿಸಲ್ಪಡುತ್ತಿವೆ. ರೋಮನ್‌ ಲೇಖಕನಾದ ಪ್ಲಿನಿ ದ ಎಲ್ಡರ್‌ಗನುಸಾರ ಮುತ್ತುಗಳು “ತುಂಬ ಅಮೂಲ್ಯವಾದ ವಸ್ತುಗಳ ನಡುವೆ ಅತ್ಯುನ್ನತ ಸ್ಥಾನವನ್ನು” ಆಕ್ರಮಿಸಿದ್ದವು ಎಂದು ಒಂದು ಮೂಲವು ತಿಳಿಸುತ್ತದೆ. ಚಿನ್ನ, ಬೆಳ್ಳಿ ಅಥವಾ ಅನೇಕ ರತ್ನಮಣಿಗಳಿಗೆ ಅಸದೃಶವಾಗಿ, ಮುತ್ತುಗಳು ಸಜೀವ ಜೀವಿಗಳಿಂದ ಉತ್ಪಾದಿಸಲ್ಪಡುತ್ತವೆ. ಕೆಲವೊಂದು ಜಾತಿಯ ಸಿಂಪಿಗಳು (ಆಇಸ್ಟರ್ಸ್‌) ಉದ್ರೇಕಕಾರಿ ವಸ್ತುಗಳನ್ನು​—⁠ಉದಾಹರಣೆಗೆ, ಮರಳ ಕಣಗಳನ್ನು​—⁠ನೇಕರ್‌ ಎಂದು ಕರೆಯಲ್ಪಡುವಂಥ ಒಂದು ಸ್ರಾವದಿಂದ ಪದರ ಪದರವಾಗಿ ಆವರಿಸುವ ಮೂಲಕ, ಅವುಗಳನ್ನು ಥಳಥಳಿಸುವ ಮುತ್ತುಗಳನ್ನಾಗಿ ರೂಪಾಂತರಿಸಬಲ್ಲವು ಎಂಬುದು ಸುವಿದಿತ ಸಂಗತಿಯೇ. ಪುರಾತನ ಕಾಲದಲ್ಲಿ ಅತ್ಯುತ್ತಮವಾದ ಮುತ್ತುಗಳು ಮುಖ್ಯವಾಗಿ ಕೆಂಪು ಸಮುದ್ರ, ಪರ್ಷಿಯನ್‌ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಿಂದ ಅಂದರೆ ಇಸ್ರಾಯೇಲ್‌ ದೇಶದ ಹೊರಗಿನ ಬಹು ದೂರದ ಪ್ರದೇಶಗಳಿಂದ ಸಂಗ್ರಹಿಸಲ್ಪಡುತ್ತಿದ್ದವು. ಯೇಸು ‘ಉತ್ತಮವಾದ ಮುತ್ತುಗಳನ್ನು ಹುಡುಕುತ್ತಾ ಪ್ರಯಾಣಿಸುವ ವ್ಯಾಪಾರಸ್ಥನ’ ಕುರಿತು ಮಾತಾಡುವುದಕ್ಕೆ ಇದೇ ಕಾರಣವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ನಿಜವಾಗಿಯೂ ಅಮೂಲ್ಯವಾದ ಮುತ್ತುಗಳನ್ನು ಕಂಡುಕೊಳ್ಳಲಿಕ್ಕಾಗಿ ವ್ಯಕ್ತಿಯೊಬ್ಬನು ಬಹಳಷ್ಟು ಪ್ರಯತ್ನವನ್ನು ಮಾಡುವ ಅಗತ್ಯವಿತ್ತು.

4 ದೀರ್ಘಕಾಲದಿಂದಲೂ ಮುತ್ತುಗಳು ತುಂಬ ದುಬಾರಿ ವಸ್ತುಗಳಾಗಿರುವುದಾದರೂ, ಯೇಸುವಿನ ಸಾಮ್ಯದ ಅತಿ ಪ್ರಮುಖ ಅಂಶವು ಅವುಗಳ ಹಣಕಾಸಿನ ಮೌಲ್ಯವಾಗಿರಲಿಲ್ಲ ಎಂಬುದು ಸುವ್ಯಕ್ತ. ಈ ಸಾಮ್ಯದಲ್ಲಿ ಯೇಸು ದೇವರ ರಾಜ್ಯವನ್ನು ಕೇವಲ ಬಹು ಬೆಲೆಯುಳ್ಳ ಒಂದು ಮುತ್ತಿಗೆ ಹೋಲಿಸಲಿಲ್ಲ; ಅವನು “ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ” ಮತ್ತು ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡ ಬಳಿಕ ಪ್ರತಿಕ್ರಿಯಿಸಿದ ರೀತಿಯ ಕಡೆಗೆ ಗಮನಸೆಳೆದನು. ಒಬ್ಬ ಸಾಮಾನ್ಯ ಅಂಗಡಿಗಾರನಿಗೆ ಅಸದೃಶವಾಗಿ, ಮುತ್ತುಗಳನ್ನು ಹುಡುಕಲಿಕ್ಕಾಗಿ ಪ್ರಯಾಣಿಸುತ್ತಿದ್ದ ಒಬ್ಬ ವ್ಯಾಪಾರಿಯು ಅಥವಾ ವರ್ತಕನು ಆ ವೃತ್ತಿಯಲ್ಲಿ ನಿಪುಣನಾದವನಾಗಿದ್ದನು, ಮತ್ತು ಒಂದು ಮುತ್ತನ್ನು ಅಸಾಧಾರಣವಾದದ್ದಾಗಿ ಗುರುತಿಸುವಂಥ ಅದರ ಸೌಂದರ್ಯಕ್ಕೆ ಸಂಬಂಧಿಸಿದ ಗುಣಲಕ್ಷಣಗಳು ಹಾಗೂ ಮಾರ್ಮಿಕತೆಗಳನ್ನು ವಿವೇಚಿಸಿ ತಿಳಿದುಕೊಳ್ಳಲು ಬೇಕಾಗಿರುವಂಥ ಸೂಕ್ಷ್ಮ ದೃಷ್ಟಿ ಹಾಗೂ ಪರಿಜ್ಞಾನವುಳ್ಳವನಾಗಿದ್ದನು. ಒಂದು ಮುತ್ತನ್ನು ನೋಡಿದ ಕೂಡಲೆ ಅದು ನಿಜವಾದ ಮುತ್ತೋ ಅಲ್ಲವೋ ಎಂಬುದು ಅವನಿಗೆ ಗೊತ್ತಾಗುತ್ತಿತ್ತು ಮತ್ತು ಕಳಪೆ ಅಥವಾ ನಕಲಿ ಮುತ್ತಿನಿಂದ ಅವನೆಂದೂ ಮೋಸಹೋಗುತ್ತಿರಲಿಲ್ಲ.

5 ಈ ನಿರ್ದಿಷ್ಟ ವ್ಯಾಪಾರಸ್ಥನ ಇನ್ನೊಂದು ಗುಣವು ಹೆಚ್ಚು ಗಮನಾರ್ಹವಾದದ್ದಾಗಿದೆ. ಒಬ್ಬ ಸಾಮಾನ್ಯ ವ್ಯಾಪಾರಿಯು ಮೊದಲಾಗಿ ಮಾರುಕಟ್ಟೆಯಲ್ಲಿ ಆ ಮುತ್ತಿಗೆ ಯಾವ ಬೆಲೆಯಿದೆ ಎಂಬುದನ್ನು ಲೆಕ್ಕಹಾಕಬಹುದು. ಏಕೆಂದರೆ ಆ ಮುತ್ತಿನಿಂದ ಲಾಭಪಡೆಯಲಿಕ್ಕಾಗಿ ಈಗ ಎಷ್ಟು ಹಣವನ್ನು ಕೊಟ್ಟು ಅದನ್ನು ಖರೀದಿಸಸಾಧ್ಯವಿದೆ ಎಂಬುದನ್ನು ಅವನು ಆಗ ನಿರ್ಧರಿಸಬಲ್ಲನು. ಈ ಮುತ್ತನ್ನು ಆದಷ್ಟು ಬೇಗನೆ ಮಾರುವ ಆಲೋಚನೆಯಿಂದ, ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದೆಯೋ ಎಂಬುದನ್ನೂ ಅವನು ಪರಿಗಣಿಸಬಹುದು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವನು ಮುತ್ತನ್ನು ತನ್ನದಾಗಿ ಮಾಡಿಕೊಳ್ಳುವುದರ ಕುರಿತಾಗಿ ಅಲ್ಲ, ಬದಲಾಗಿ ತನ್ನ ಬಂಡವಾಳದಿಂದ ಸಾಧ್ಯವಾದಷ್ಟು ಬೇಗನೆ ಲಾಭವನ್ನು ಗಳಿಸುವ ವಿಷಯದಲ್ಲಿ ಹೆಚ್ಚು ಆಸಕ್ತನಾಗಿರುತ್ತಾನೆ. ಆದರೆ ಯೇಸುವಿನ ಸಾಮ್ಯದಲ್ಲಿನ ವ್ಯಾಪಾರಸ್ಥನು ಇಂಥವನಲ್ಲ. ಅವನ ಆಸಕ್ತಿಯು ಹಣಕಾಸು ಅಥವಾ ಭೌತಿಕ ಲಾಭವಾಗಿರಲಿಲ್ಲ. ವಾಸ್ತವದಲ್ಲಿ, ಅವನು ಏನನ್ನು ಹುಡುಕುತ್ತಿದ್ದನೋ ಅದನ್ನು ತನ್ನದಾಗಿ ಮಾಡಿಕೊಳ್ಳಲಿಕ್ಕಾಗಿ “ತನ್ನ ಬದುಕನ್ನೆಲ್ಲಾ” ಮಾರಲು ಅಂದರೆ ತನ್ನೆಲ್ಲಾ ವೈಯಕ್ತಿಕ ಸೊತ್ತುಗಳನ್ನು ಮತ್ತು ಆಸ್ತಿಪಾಸ್ತಿಯನ್ನು ಕೊಟ್ಟುಬಿಡಲು ಅವನು ಮನಃಪೂರ್ವಕವಾಗಿ ಸಿದ್ಧನಿದ್ದನು.

6 ಹೆಚ್ಚಿನ ವ್ಯಾಪಾರಿಗಳ ದೃಷ್ಟಿಯಲ್ಲಿ ಯೇಸುವಿನ ಸಾಮ್ಯದಲ್ಲಿ ತಿಳಿಸಲ್ಪಟ್ಟ ವ್ಯಕ್ತಿಯು ಏನು ಮಾಡಿದನೋ ಅದು ಅವಿವೇಕತನವಾಗಿರಬಹುದು. ಚುರುಕು ಬುದ್ಧಿಯ ವ್ಯಾಪಾರಸ್ಥನೊಬ್ಬನು ಇಂಥ ಒಂದು ಅಪಾಯಕರ ಸಾಹಸಕ್ಕೆ ಕೈಹಾಕುವ ಆಲೋಚನೆಯನ್ನೇ ಮಾಡುತ್ತಿರಲಿಲ್ಲ. ಆದರೆ ಯೇಸುವಿನ ಸಾಮ್ಯದಲ್ಲಿ ತಿಳಿಸಲ್ಪಟ್ಟಿರುವ ವ್ಯಾಪಾರಿಗೆ ಮೌಲ್ಯಗಳ ವಿಷಯದಲ್ಲಿ ಭಿನ್ನವಾದ ಮಟ್ಟವಿತ್ತು. ಅವನ ಪ್ರತಿಫಲವು ಯಾವುದೇ ಆರ್ಥಿಕ ಲಾಭವಲ್ಲ, ಬದಲಾಗಿ ಅಸಾಧಾರಣ ಮೌಲ್ಯದ ಒಂದು ವಸ್ತುವನ್ನು ತನ್ನದಾಗಿ ಮಾಡಿಕೊಳ್ಳುವುದರಲ್ಲಿನ ಆನಂದ ಹಾಗೂ ಸಂತೃಪ್ತಿಯಾಗಿತ್ತು. ಯೇಸು ಕೊಟ್ಟಂಥ ಸಮಾಂತರ ದೃಷ್ಟಾಂತವೊಂದರಲ್ಲಿ ಈ ಅಂಶವು ಸ್ಪಷ್ಟಪಡಿಸಲ್ಪಟ್ಟಿದೆ. ಅವನು ಹೇಳಿದ್ದು: “ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟದ್ರವ್ಯಕ್ಕೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಬಿಟ್ಟು ಅದರಿಂದಾದ ಸಂತೋಷದಿಂದ ತನ್ನ ಬದುಕನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.” (ಮತ್ತಾಯ 13:44) ಹೌದು, ಹೂಳಿಟ್ಟದ್ರವ್ಯ ಅಥವಾ ಒಂದು ನಿಧಿಯನ್ನು ಕಂಡುಕೊಂಡು ಅದನ್ನು ಸ್ವಂತದ್ದಾಗಿ ಮಾಡಿಕೊಳ್ಳುವುದರಿಂದ ಸಿಗುವ ಸಂತೋಷವು, ಒಬ್ಬ ಮನುಷ್ಯನು ತನ್ನ ಬಳಿಯಿದ್ದುದೆಲ್ಲವನ್ನೂ ಮಾರಿಬಿಡುವಷ್ಟರ ಮಟ್ಟಿಗೆ ಅವನನ್ನು ಪ್ರಚೋದಿಸುವಷ್ಟಾಗಿತ್ತು. ಇಂದು ಸಹ ಇಂಥ ವ್ಯಕ್ತಿಗಳು ಇದ್ದಾರೋ? ಇಂಥ ತ್ಯಾಗಕ್ಕೆ ಅರ್ಹವಾದಂಥ ನಿಧಿಯು ಇದೆಯೋ?

ಉಚ್ಚ ಮೌಲ್ಯವನ್ನು ಗಣ್ಯಮಾಡಿದವರು

7 ಈ ಸಾಮ್ಯದಲ್ಲಿ ಯೇಸು ಪರಲೋಕ ರಾಜ್ಯದ ಕುರಿತು ಮಾತಾಡುತ್ತಿದ್ದನು. ಸ್ವತಃ ಅವನೇ ರಾಜ್ಯದ ಉಚ್ಚ ಮೌಲ್ಯವನ್ನು ನಿಶ್ಚಯವಾಗಿಯೂ ಗ್ರಹಿಸಿದವನಾಗಿದ್ದನು. ಈ ವಾಸ್ತವಾಂಶಕ್ಕೆ ಸುವಾರ್ತಾ ವೃತ್ತಾಂತಗಳು ಪ್ರಬಲವಾದ ಸಾಕ್ಷ್ಯವನ್ನು ನೀಡುತ್ತವೆ. ಯೇಸು ಸಾ.ಶ. 29ರಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡ ಬಳಿಕ, “ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು.” ಮೂರೂವರೆ ವರ್ಷಗಳ ವರೆಗೆ ಅವನು ರಾಜ್ಯದ ಕುರಿತು ಜನರ ಸಮೂಹಗಳಿಗೆ ಬೋಧಿಸಿದನು. ಅವನು ಆ ದೇಶದಾದ್ಯಂತ ಪ್ರಯಾಣಿಸಿ, “ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು.”​—⁠ಮತ್ತಾಯ 4:17; ಲೂಕ 8:⁠1.

8 ದೇಶದಾದ್ಯಂತ, ಅಸ್ವಸ್ಥರನ್ನು ಗುಣಪಡಿಸುವುದು, ಹಸಿದವರಿಗೆ ಉಣಿಸುವುದು, ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸುವುದು ಮತ್ತು ಮೃತರನ್ನು ಪುನರುತ್ಥಾನಗೊಳಿಸುವುದನ್ನು ಸೇರಿಸಿ ಅನೇಕಾನೇಕ ಅದ್ಭುತಕಾರ್ಯಗಳನ್ನು ನಡಿಸುವ ಮೂಲಕವೂ ದೇವರ ರಾಜ್ಯವು ಏನನ್ನು ಸಾಧಿಸುವುದು ಎಂಬುದನ್ನು ಯೇಸು ತೋರ್ಪಡಿಸಿದನು. (ಮತ್ತಾಯ 14:14-21; ಮಾರ್ಕ 4:37-39; ಲೂಕ 7:11-17) ಕೊನೆಯದಾಗಿ, ಒಂದು ಯಾತನಾ ಕಂಬದ ಮೇಲೆ ಒಬ್ಬ ಹುತಾತ್ಮನೋಪಾದಿ ಸಾಯುವ ಮೂಲಕ ತನ್ನ ಜೀವವನ್ನು ತೆತ್ತು, ಯೇಸು ದೇವರಿಗೆ ಹಾಗೂ ರಾಜ್ಯಕ್ಕೆ ತನ್ನ ನಿಷ್ಠೆಯನ್ನು ರುಜುಪಡಿಸಿದನು. ಮುತ್ತುಗಳಿಗಾಗಿ ಹುಡುಕುತ್ತಾ ಪ್ರಯಾಣಿಸುತ್ತಿದ್ದ ಆ ವ್ಯಾಪಾರಸ್ಥನಂತೆ ಯೇಸು ‘ಬಹು ಬೆಲೆಯುಳ್ಳ ಒಂದು ಮುತ್ತಿಗಾಗಿ’ ತನ್ನ ಬಳಿಯಿದ್ದುದೆಲ್ಲವನ್ನೂ ಮನಃಪೂರ್ವಕವಾಗಿ ಕೊಟ್ಟುಬಿಟ್ಟನು; ಅವನು ರಾಜ್ಯಕ್ಕೋಸ್ಕರ ಜೀವಿಸಿದನು ಮತ್ತು ಅದಕ್ಕಾಗಿಯೇ ತನ್ನ ಪ್ರಾಣವನ್ನು ಅರ್ಪಿಸಿದನು.​—⁠ಯೋಹಾನ 18:37.

9 ಯೇಸು ರಾಜ್ಯದ ಮೇಲೆ ತನ್ನ ಸ್ವಂತ ಜೀವಿತವನ್ನು ಕೇಂದ್ರೀಕರಿಸಿದನು ಮಾತ್ರವಲ್ಲ ಹಿಂಬಾಲಕರ ಒಂದು ಚಿಕ್ಕ ಗುಂಪನ್ನೂ ಒಟ್ಟುಗೂಡಿಸಿದನು. ಅವರು ಸಹ ರಾಜ್ಯದ ಉಚ್ಚ ಮೌಲ್ಯವನ್ನು ಬಹಳವಾಗಿ ಗಣ್ಯಮಾಡಿದಂಥ ವ್ಯಕ್ತಿಗಳಾಗಿದ್ದರು. ಅವರಲ್ಲಿ ಮೂಲತಃ ಸ್ನಾನಿಕನಾದ ಯೋಹಾನನ ಒಬ್ಬ ಶಿಷ್ಯನಾಗಿದ್ದ ಅಂದ್ರೆಯನು ಇದ್ದನು. ಯೇಸುವೇ “ಯಜ್ಞಕ್ಕೆ ದೇವರು ನೇಮಿಸಿದ ಕುರಿ”ಯಾಗಿದ್ದಾನೆ ಎಂಬುದನ್ನು ಅವನಿಂದ ಕೇಳಿಸಿಕೊಂಡ ಬಳಿಕ ಅಂದ್ರೆಯನು ಮತ್ತು ಯೋಹಾನನ ಶಿಷ್ಯರಲ್ಲಿ ಇನ್ನೊಬ್ಬನು​—⁠ಇವನು ಬಹುಶಃ ಜೆಬೆದಾಯನ ಮಕ್ಕಳಲ್ಲಿ ಒಬ್ಬನಾಗಿದ್ದು ಯೋಹಾನನೆಂಬ ಹೆಸರುಳ್ಳವನು​—⁠ಆ ಕೂಡಲೆ ಯೇಸುವಿನ ಬಳಿಗೆ ಸೆಳೆಯಲ್ಪಟ್ಟರು ಮತ್ತು ವಿಶ್ವಾಸಿಗಳಾದರು. ಆದರೆ ವಿಷಯವು ಇಷ್ಟಕ್ಕೇ ಕೊನೆಗೊಳ್ಳಲ್ಲಿಲ್ಲ. ಒಡನೆಯೇ ಅಂದ್ರೆಯನು ತನ್ನ ಅಣ್ಣನಾದ ಸೀಮೋನನ ಬಳಿಗೆ ಹೋಗಿ ಹೇಳಿದ್ದು: “ಮೆಸ್ಸೀಯನು ನಮಗೆ ಸಿಕ್ಕಿದನು.” ತದನಂತರ ಸ್ವಲ್ಪದರಲ್ಲೇ ಸೀಮೋನನು (ಇವನು ಕೇಫ ಅಥವಾ ಪೇತ್ರನೆಂದು ಪ್ರಖ್ಯಾತನಾದನು) ಹಾಗೂ ಫಿಲಿಪ್ಪನು ಮತ್ತು ಅವನ ಸ್ನೇಹಿತನಾದ ನತಾನಯೇಲನು ಸಹ ಯೇಸುವನ್ನು ಮೆಸ್ಸೀಯನೆಂದು ಅಂಗೀಕರಿಸಿದರು. ವಾಸ್ತವದಲ್ಲಿ ನತಾನಯೇಲನು ಹೀಗೆ ಹೇಳುವಂತೆ ಪ್ರಚೋದಿಸಲ್ಪಟ್ಟನು: “ನೀನು ದೇವಕುಮಾರನು ಸರಿ; ನೀನೇ ಇಸ್ರಾಯೇಲಿನ ಅರಸನು.”​—⁠ಯೋಹಾನ 1:35-49.

ಕ್ರಿಯೆಗೈಯುವಂತೆ ಪ್ರಚೋದಿಸಲ್ಪಟ್ಟದ್ದು

10 ಮೆಸ್ಸೀಯನನ್ನು ಕಂಡುಕೊಂಡಾಗ ಅಂದ್ರೆಯ, ಪೇತ್ರ, ಯೋಹಾನ ಮತ್ತು ಇತರರಿಗಾದ ರೋಮಾಂಚನವನ್ನು, ಬಹು ಬಲೆಯುಳ್ಳ ಮುತ್ತನ್ನು ಕಂಡುಕೊಂಡಾಗ ಆ ವ್ಯಾಪಾರಸ್ಥನಿಗಾದ ರೋಮಾಂಚನಕ್ಕೆ ಹೋಲಿಸಬಹುದು. ಈಗ ಅವರು ಏನು ಮಾಡಲಿದ್ದರು? ಯೇಸುವಿನೊಂದಿಗಿನ ಈ ಪ್ರಥಮ ಭೇಟಿಯ ಬಳಿಕ ಅವರು ಏನು ಮಾಡಿದರು ಎಂಬುದರ ಕುರಿತು ಸುವಾರ್ತಾ ವೃತ್ತಾಂತಗಳು ನಮಗೆ ಹೆಚ್ಚನ್ನು ತಿಳಿಯಪಡಿಸುವುದಿಲ್ಲ. ಅವರಲ್ಲಿ ಹೆಚ್ಚಿನವರು ತಮ್ಮ ಸಾಮಾನ್ಯ ಜೀವನಮಾರ್ಗಕ್ಕೆ ಹಿಂದಿರುಗಿದರು ಎಂಬುದು ವ್ಯಕ್ತವಾಗುತ್ತದೆ. ಆದರೂ, ಸುಮಾರು ಆರು ತಿಂಗಳಿಂದ ಹಿಡಿದು ಸುಮಾರು ಒಂದು ವರ್ಷದ ಬಳಿಕ, ಗಲಿಲಾಯ ಸಮುದ್ರದ ಬಳಿ ಮೀನಿಗಾಗಿ ಬಲೆಬೀಸುತ್ತಿದ್ದ ಅಂದ್ರೆಯ, ಪೇತ್ರ, ಯೋಹಾನ ಮತ್ತು ಯೋಹಾನನ ಅಣ್ಣನಾದ ಯಾಕೋಬನನ್ನು ಪುನಃ ಒಮ್ಮೆ ಯೇಸು ಸಂಧಿಸುತ್ತಾನೆ. * ಅವರನ್ನು ನೋಡಿ ಯೇಸು, “ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳಿದನು. ಅವರ ಪ್ರತಿಕ್ರಿಯೆ ಏನಾಗಿತ್ತು? ಪೇತ್ರ ಮತ್ತು ಅಂದ್ರೆಯನ ಕುರಿತು ಮತ್ತಾಯನ ವೃತ್ತಾಂತವು ಹೇಳುವುದು: ‘ಅವನು ಹಾಗೆ ಹೇಳುತ್ತಲೇ ಅವರು ತಮ್ಮ ಬಲೆಗಳನ್ನು ಬಿಟ್ಟು ಅವನ ಹಿಂದೆ ಹೋದರು.’ ಯಾಕೋಬ ಮತ್ತು ಯೋಹಾನನ ಕುರಿತಾಗಿ ನಾವು ಓದುವುದು: “ಕೂಡಲೆ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು.” ಅವರು “ಎಲ್ಲವನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು” ಎಂದು ಲೂಕನ ವೃತ್ತಾಂತವು ಕೂಡಿಸುತ್ತದೆ.​—⁠ಮತ್ತಾಯ 4:18-22; ಲೂಕ 5:1-11.

11 ಶಿಷ್ಯರು ಒಡನೆಯೇ ತೋರಿಸಿದ ಪ್ರತಿಕ್ರಿಯೆಯು ದುಡುಕಿನ ನಿರ್ಧಾರವಾಗಿತ್ತೋ? ಖಂಡಿತವಾಗಿಯೂ ಇಲ್ಲ! ಅವರು ಯೇಸುವನ್ನು ಪ್ರಥಮ ಬಾರಿ ಸಂಪರ್ಕಿಸಿದ ಬಳಿಕ ತಮ್ಮ ಕುಟುಂಬದ ವೃತ್ತಿಯಾಗಿದ್ದ ಮೀನುಹಿಡಿಯುವ ವ್ಯಾಪಾರಕ್ಕೆ ಹಿಂದಿರುಗಿದರಾದರೂ, ಆ ಸಮಯದಲ್ಲಿ ಅವರು ಏನನ್ನು ನೋಡಿದ್ದರೋ ಮತ್ತು ಕೇಳಿಸಿಕೊಂಡಿದ್ದರೋ ಅದು ಅವರ ಹೃದಮನಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಈ ಮಧ್ಯೆ ಗತಿಸಿದ ಸುಮಾರು ಒಂದು ವರ್ಷವು ಇಂಥ ವಿಷಯಗಳ ಕುರಿತು ಗಹನವಾಗಿ ಆಲೋಚಿಸಲು ಅವರಿಗೆ ಸಾಕಷ್ಟು ಸಮಯವನ್ನು ನೀಡಿದ್ದಿರಬಹುದು. ಈಗ ಒಂದು ನಿರ್ಧಾರವನ್ನು ಮಾಡುವ ಸಮಯವು ಬಂದಿತ್ತು ಅಷ್ಟೆ. ಯೇಸು ವಿವರಿಸಿದಂತೆ, ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡದ್ದರಿಂದ ಬಹಳ ಪ್ರಚೋದಿತನಾದ ಆ ವ್ಯಾಪಾರಸ್ಥನು “ಒಡನೆಯೇ” (NW) ಆ ಮುತ್ತನ್ನು ಕೊಂಡುಕೊಳ್ಳಲಿಕ್ಕಾಗಿ ಹೇಗೆ ಕ್ರಿಯೆಗೈದನೋ ಅದೇ ರೀತಿಯಲ್ಲಿ ಈ ಶಿಷ್ಯರೂ ಕ್ರಿಯೆಗೈಯಲಿದ್ದರೋ? ಹೌದು, ಅವರು ಏನನ್ನು ನೋಡಿದ್ದರೋ ಮತ್ತು ಕೇಳಿಸಿಕೊಂಡಿದ್ದರೋ ಅದು ಅವರ ಹೃದಯವನ್ನು ಕಲಕಿತು. ಕ್ರಿಯೆಗೈಯುವ ಸಮಯವು ಬಂದಿದೆ ಎಂಬುದನ್ನು ಅವರು ಮನಗಂಡರು. ಹೀಗೆ, ವೃತ್ತಾಂತಗಳು ನಮಗೆ ತಿಳಿಸುವಂತೆ, ಯಾವುದೇ ಹಿಂಜರಿಕೆಯಿಲ್ಲದೆ ಅವರು ಎಲ್ಲವನ್ನೂ ತೊರೆದು ಯೇಸುವಿನ ಹಿಂಬಾಲಕರಾದರು.

12 ಸುವಾರ್ತಾ ವೃತ್ತಾಂತಗಳಲ್ಲಿ ತದನಂತರ ಉಲ್ಲೇಖಿಸಲ್ಪಟ್ಟಿರುವ ಇತರರಿಗೆ ಹೋಲಿಸುವಾಗ ಈ ನಂಬಿಗಸ್ತ ವ್ಯಕ್ತಿಗಳು ಎಷ್ಟು ಭಿನ್ನರಾಗಿದ್ದರು! ಯೇಸುವಿನಿಂದ ಅನೇಕರು ಗುಣಪಡಿಸಲ್ಪಟ್ಟರು ಮತ್ತು ಉಣಿಸಲ್ಪಟ್ಟರು, ಆದರೆ ತಮ್ಮ ಆವಶ್ಯಕತೆಯು ತೀರಿದ ಕೂಡಲೆ ಅವರು ತಮ್ಮದೇ ವ್ಯವಹಾರಗಳಲ್ಲಿ ಮುಳುಗಿಹೋದರು. (ಲೂಕ 17:17, 18; ಯೋಹಾನ 6:26) ಇನ್ನೂ ಕೆಲವರು, ತನ್ನ ಹಿಂಬಾಲಕರಾಗುವಂತೆ ಯೇಸು ಕೊಟ್ಟ ಆಮಂತ್ರಣವನ್ನು ನಿರಾಕರಿಸಿದರು. (ಲೂಕ 9:59-62) ಇದಕ್ಕೆ ತೀರ ವ್ಯತಿರಿಕ್ತವಾಗಿ, ನಂಬಿಗಸ್ತ ಜನರ ಕುರಿತು ಯೇಸು ಸಮಯಾನಂತರ ಹೇಳಿದ್ದು: “ಸ್ನಾನಿಕನಾದ ಯೋಹಾನನ ಕಾಲದಿಂದ ಈ ವರೆಗೂ ಪರಲೋಕರಾಜ್ಯವು ಮನುಷ್ಯರು ಮುಂದೊತ್ತುವ ಗುರಿಯಾಗಿದೆ, ಮತ್ತು ಮುಂದೊತ್ತುವವರೇ ಅದನ್ನು ಸ್ವಾಧೀನಮಾಡಿಕೊಳ್ಳುತ್ತಾರೆ.”​—⁠ಮತ್ತಾಯ 11:⁠12, NW.

13 “ಮುಂದೊತ್ತು” ಮತ್ತು ‘ಮುಂದೊತ್ತುವವರು’ ಎಂಬ ಪದಗಳ ಅರ್ಥವೇನು? ಈ ಪದಗಳು ಎಲ್ಲಿಂದ ತೆಗೆದುಕೊಳ್ಳಲ್ಪಟ್ಟಿವೆಯೋ ಆ ಗ್ರೀಕ್‌ ಕ್ರಿಯಾಪದದ ಕುರಿತು ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಹೀಗೆ ಹೇಳುತ್ತದೆ: “ಈ ಕ್ರಿಯಾಪದವು ಶ್ರಮದಾಯಕ ಪ್ರಯತ್ನವನ್ನು ಸೂಚಿಸುತ್ತದೆ.” ಮತ್ತು ಈ ವಚನದ ಕುರಿತು ಬೈಬಲ್‌ ವಿದ್ವಾಂಸರಾದ ಹೈನ್‌ರಿಕ್‌ ಮಯರ್‌ ಹೇಳುವುದು: “ಸನ್ನಿಹಿತವಾಗುತ್ತಿರುವ ಮೆಸ್ಸೀಯನ ರಾಜ್ಯದ ವಿಷಯದಲ್ಲಿದ್ದ ಆ ಅತ್ಯಾತುರ, ತಡೆಯಲಸಾಧ್ಯವಾದ ಹೆಣಗಾಟ ಹಾಗೂ ಹೋರಾಟವನ್ನು ಈ ರೀತಿಯಲ್ಲಿ ವರ್ಣಿಸಲಾಗಿದೆ . . . ರಾಜ್ಯದ ಸಂಬಂಧದಲ್ಲಿ ತೋರಿಸಲ್ಪಟ್ಟ ಆಸಕ್ತಿಯು (ಇನ್ನು ಮುಂದೆ ಶಾಂತವಾಗಿದ್ದು, ಕಾಯುತ್ತಾ ಇರುವುದರ ಬದಲಿಗೆ) ಇಷ್ಟೊಂದು ಹುರುಪಿನಿಂದ ಮತ್ತು ಚಟುವಟಿಕೆಯಿಂದ ಕೂಡಿತ್ತು.” ಬಹು ಬೆಲೆಯುಳ್ಳ ಮುತ್ತನ್ನು ಹುಡುಕಲು ಪ್ರಯಾಣಿಸುತ್ತಿದ್ದ ಆ ವ್ಯಾಪಾರಸ್ಥನಂತೆ, ಈ ಕೆಲವು ವ್ಯಕ್ತಿಗಳು ಯಾವುದು ನಿಜವಾಗಿಯೂ ಅಮೂಲ್ಯವಾದದ್ದಾಗಿದೆ ಎಂಬುದನ್ನು ಕೂಡಲೇ ಮನಗಂಡರು, ಮತ್ತು ಆ ರಾಜ್ಯಕ್ಕೋಸ್ಕರ ಸಿದ್ಧಮನಸ್ಸಿನಿಂದ ತಮ್ಮ ಬಳಿಯಿದ್ದುದನ್ನೆಲ್ಲಾ ತೊರೆದುಬಿಟ್ಟರು.​—⁠ಮತ್ತಾಯ 19:27, 28; ಫಿಲಿಪ್ಪಿ 3:⁠8.

ಇತರರೂ ಹುಡುಕಾಟದಲ್ಲಿ ಜೊತೆಗೂಡಿದರು

14 ಯೇಸು ತನ್ನ ಶುಶ್ರೂಷೆಯನ್ನು ಮುಂದುವರಿಸಿದಂತೆ, ರಾಜ್ಯವನ್ನು ಎಟುಕಿಸಿಕೊಳ್ಳುವಂತೆ ಇತರರಿಗೆ ತರಬೇತಿ ಹಾಗೂ ಸಹಾಯವನ್ನು ನೀಡಿದನು. ಮೊದಲಾಗಿ ಅವನು ತನ್ನ ಶಿಷ್ಯರಲ್ಲಿ 12 ಮಂದಿಯನ್ನು ಆರಿಸಿಕೊಂಡು, ಅವರನ್ನು ಅಪೊಸ್ತಲರಾಗಿ ಅಥವಾ ತನ್ನಿಂದ ಕಳುಹಿಸಲ್ಪಟ್ಟವರಾಗಿ ನೇಮಿಸಿದನು. ಅವರು ತಮ್ಮ ಶುಶ್ರೂಷೆಯನ್ನು ಹೇಗೆ ನಡೆಸಬೇಕು ಎಂಬ ವಿಷಯದಲ್ಲಿ ಯೇಸು ಸವಿವರವಾದ ಸೂಚನೆಗಳನ್ನು ನೀಡಿದನು ಮತ್ತು ಅವರ ಮುಂದಿರುವ ಪಂಥಾಹ್ವಾನಗಳು ಹಾಗೂ ಕಷ್ಟತೊಂದರೆಗಳ ಕುರಿತು ಎಚ್ಚರಿಕೆಗಳನ್ನೂ ನೀಡಿದನು. (ಮತ್ತಾಯ 10:1-42; ಲೂಕ 6:12-16) ಮುಂದಿನ ಎರಡು ವರ್ಷಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲಾವಧಿಯ ವರೆಗೆ ಅವರು ದೇಶದಾದ್ಯಂತ ಸಾರುವ ಕಾರ್ಯಾಚರಣೆಯಲ್ಲಿ ಯೇಸುವಿನೊಂದಿಗೆ ಜೊತೆಗೂಡಿದರು ಮತ್ತು ಆ ಸಮಯದಲ್ಲಿ ಅವರು ಅವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಂಡರು. ಅವನ ಮಾತುಗಳನ್ನು ಕೇಳಿಸಿಕೊಂಡರು, ಅವನ ಮಹತ್ಕಾರ್ಯಗಳನ್ನು ವೀಕ್ಷಿಸಿದರು ಮತ್ತು ಅವನ ವೈಯಕ್ತಿಕ ಮಾದರಿಯನ್ನು ಕಣ್ಣಾರೆ ಕಂಡರು. (ಮತ್ತಾಯ 13:​16, 17) ನಿಸ್ಸಂಶಯವಾಗಿಯೂ ಇದೆಲ್ಲವೂ ಅವರನ್ನು ಎಷ್ಟು ಆಳವಾಗಿ ಪ್ರಭಾವಿಸಿತೆಂದರೆ, ಮುತ್ತನ್ನು ಕಂಡುಕೊಳ್ಳಲಿಕ್ಕಾಗಿ ಪ್ರಯಾಣಿಸುತ್ತಿದ್ದ ಆ ವ್ಯಾಪಾರಸ್ಥನಂತೆ ಅವರು ರಾಜ್ಯದ ಬೆನ್ನಟ್ಟುವಿಕೆಯಲ್ಲಿ ಹುರುಪಿನಿಂದ ಮತ್ತು ಮನಃಪೂರ್ವಕವಾಗಿ ಮುಂದೆಸಾಗಿದರು.

15 ಹನ್ನೆರಡು ಮಂದಿ ಅಪೊಸ್ತಲರ ಜೊತೆಗೆ ಯೇಸು “ಇನ್ನೂ ಎಪ್ಪತ್ತು ಮಂದಿಯನ್ನು ನೇಮಿಸಿ ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದೂರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು.” ಮುಂದೆ ಅವರು ಅನುಭವಿಸಲಿಕ್ಕಿದ್ದ ಪರೀಕ್ಷೆಗಳು ಮತ್ತು ಕಷ್ಟಗಳನ್ನು ಸಹ ಅವನು ಅವರಿಗೆ ತಿಳಿಸಿದನು ಹಾಗೂ “ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದದೆ” ಎಂದು ಜನರಿಗೆ ಹೇಳುವಂತೆ ಅವರಿಗೆ ಉಪದೇಶಿಸಿದನು. (ಲೂಕ 10:​1-12) ಆ 70 ಮಂದಿ ಹಿಂದಿರುಗಿದಾಗ ತುಂಬ ಸಂತೋಷಗೊಂಡಿದ್ದರು ಮತ್ತು ಯೇಸುವಿಗೆ ಈ ವರದಿಯನ್ನು ಒಪ್ಪಿಸಿದರು: “ಸ್ವಾಮೀ, ದೆವ್ವಗಳು ಕೂಡಾ ನಿನ್ನ ಹೆಸರನ್ನು ಕೇಳಿ ನಮಗೆ ಅಧೀನವಾಗುತ್ತವೆ.” ಆದರೆ ಅವರಿಗೆ ಆಶ್ಚರ್ಯವಾಗುವಂತೆ, ರಾಜ್ಯಕ್ಕಾಗಿರುವ ಅವರ ಹುರುಪಿನ ಕಾರಣದಿಂದ ಭವಿಷ್ಯತ್ತಿನಲ್ಲಿ ಅವರಿಗೆ ಇನ್ನೂ ಹೆಚ್ಚಿನ ಸಂತೋಷವು ಕಾದಿರಿಸಲ್ಪಟ್ಟಿದೆ ಎಂದು ಯೇಸು ತಿಳಿಯಪಡಿಸಿದನು. ಅವನು ಅವರಿಗಂದದ್ದು: “ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ.”​—⁠ಲೂಕ 10:17, 20.

16 ಕೊನೆಯದಾಗಿ, ಸಾ.ಶ. 33ರ ನೈಸಾನ್‌ 14ರಂದು ಯೇಸು ತನ್ನ ಅಪೊಸ್ತಲರೊಂದಿಗೆ ಇದ್ದ ಅಂತಿಮ ರಾತ್ರಿಯಂದು, ಯಾವುದು ಕರ್ತನ ಸಂಧ್ಯಾ ಭೋಜನವೆಂದು ಪ್ರಸಿದ್ಧವಾಯಿತೋ ಆ ಆಚರಣೆಯನ್ನು ಆರಂಭಿಸಿದನು ಮತ್ತು ಆ ಘಟನೆಯನ್ನು ಆಚರಿಸುವಂತೆ ಅವರಿಗೆ ಆಜ್ಞೆನೀಡಿದನು. ಆ ಸಾಯಂಕಾಲ ಉಳಿದಿದ್ದ 11 ಮಂದಿಗೆ ಯೇಸು ಹೀಗೆ ಹೇಳಿದನು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.”​—⁠ಲೂಕ 22:19, 20, 28-30.

17 ಅಪೊಸ್ತಲರು ಯೇಸುವಿನಿಂದ ಈ ಮಾತುಗಳನ್ನು ಕೇಳಿಸಿಕೊಂಡಾಗ, ಅವರ ಹೃದಯಗಳಲ್ಲಿ ಎಷ್ಟು ಆನಂದ ಹಾಗೂ ಸಂತೃಪ್ತಿಯು ಉಂಟಾಗಿದ್ದಿರಬೇಕು! ಯಾವುದೇ ಮಾನವನು ಹೊಂದಸಾಧ್ಯವಿರುವವುಗಳಲ್ಲೇ ಅತ್ಯುಚ್ಛವಾದ ಘನತೆ ಹಾಗೂ ಸುಯೋಗವು ಅವರಿಗೆ ಕೊಡಲ್ಪಟ್ಟಿತ್ತು. (ಮತ್ತಾಯ 7:13, 14; 1 ಪೇತ್ರ 2:9) ಮುತ್ತನ್ನು ಹುಡುಕುತ್ತಾ ಪ್ರಯಾಣಿಸುತ್ತಿದ್ದ ಆ ವ್ಯಾಪಾರಸ್ಥನಂತೆ, ರಾಜ್ಯದ ಬೆನ್ನಟ್ಟುವಿಕೆಯಲ್ಲಿ ಯೇಸುವನ್ನು ಹಿಂಬಾಲಿಸಲಿಕ್ಕಾಗಿ ಅವರು ಬಹಳಷ್ಟನ್ನು ತ್ಯಾಗಮಾಡಿದ್ದರು. ಇಷ್ಟರ ತನಕ ಅವರು ಮಾಡಿದ್ದ ತ್ಯಾಗಗಳು ವ್ಯರ್ಥವಾಗಿರಲಿಲ್ಲ ಎಂಬ ಆಶ್ವಾಸನೆಯು ಈಗ ಅವರಿಗೆ ಕೊಡಲ್ಪಟ್ಟಿತು.

18 ರಾಜ್ಯದಿಂದ ಪ್ರಯೋಜನ ಪಡೆದುಕೊಳ್ಳಲಿದ್ದವರು ಆ ರಾತ್ರಿ ಯೇಸುವಿನೊಂದಿಗೆ ಇದ್ದ ಅಪೊಸ್ತಲರು ಮಾತ್ರವೇ ಆಗಿರಲಿಲ್ಲ. ಒಟ್ಟು 1,44,000 ಮಂದಿ ಮಹಿಮಾಭರಿತ ಸ್ವರ್ಗೀಯ ರಾಜ್ಯದಲ್ಲಿ ಯೇಸು ಕ್ರಿಸ್ತನೊಂದಿಗೆ ಜೊತೆ ಅರಸರಾಗಿ ರಾಜ್ಯದೊಡಂಬಡಿಕೆಯೊಳಗೆ ತೆಗೆದುಕೊಳ್ಳಲ್ಪಡುವುದು ಯೆಹೋವನ ಚಿತ್ತವಾಗಿತ್ತು. ಅಷ್ಟುಮಾತ್ರವಲ್ಲ, ಅಪೊಸ್ತಲ ಯೋಹಾನನು ದರ್ಶನದಲ್ಲಿ ‘ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತುಕೊಂಡು, ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ತಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ ಹೇಳುತ್ತಿರುವುದನ್ನು’ ಕಂಡನು. ಇವರು ರಾಜ್ಯದ ಭೂಪ್ರಜೆಗಳಾಗಿದ್ದಾರೆ. *​—⁠ಪ್ರಕಟನೆ 7:9, 10; 14:1, 4.

19 ಸ್ವರ್ಗಾರೋಹಣಕ್ಕೆ ಸ್ವಲ್ಪ ಮೊದಲು ಯೇಸು ತನ್ನ ನಂಬಿಗಸ್ತ ಹಿಂಬಾಲಕರಿಗೆ ಹೀಗೆ ಆಜ್ಞಾಪಿಸಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ [“ವಿಷಯಗಳ ವ್ಯವಸ್ಥೆಯ,” NW] ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 28:19, 20) ಹೀಗೆ, ಎಲ್ಲಾ ದೇಶಗಳ ಜನರು ಯೇಸು ಕ್ರಿಸ್ತನ ಶಿಷ್ಯರಾಗಲಿದ್ದರು. ಅತ್ಯುತ್ತಮವಾದ ಮುತ್ತಿನ ವಿಷಯದಲ್ಲಿ ಆ ವ್ಯಾಪಾರಸ್ಥನು ಮಾಡಿದಂತೆಯೇ ಇವರು ಸಹ ಸ್ವರ್ಗೀಯ ಬಹುಮಾನಕ್ಕಾಗಿ ಅಥವಾ ಐಹಿಕ ಬಹುಮಾನಕ್ಕಾಗಿ ರಾಜ್ಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲಿದ್ದರು.

20 ಶಿಷ್ಯರನ್ನಾಗಿ ಮಾಡುವ ಕೆಲಸವು “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ವರೆಗೂ ಮುಂದುವರಿಯಲಿತ್ತು ಎಂಬುದನ್ನು ಯೇಸುವಿನ ಮಾತುಗಳು ಸೂಚಿಸಿದವು. ಹಾಗಾದರೆ, ನಮ್ಮ ದಿನಗಳಲ್ಲಿಯೂ ಮುತ್ತನ್ನು ಹುಡುಕಲು ಪ್ರಯಾಣಿಸುತ್ತಿದ್ದ ಆ ವ್ಯಾಪಾರಸ್ಥನಂಥ ವ್ಯಕ್ತಿಗಳು, ದೇವರ ರಾಜ್ಯದ ಬೆನ್ನಟ್ಟುವಿಕೆಯಲ್ಲಿ ತಮ್ಮ ಬದುಕನ್ನೆಲ್ಲಾ ತ್ಯಾಗಮಾಡಲು ಮನಃಪೂರ್ವಕವಾಗಿ ಸಿದ್ಧರಾಗಿರುವ ವ್ಯಕ್ತಿಗಳು ಇದ್ದಾರೋ? ಮುಂದಿನ ಲೇಖನದಲ್ಲಿ ಈ ಪ್ರಶ್ನೆಯನ್ನು ಪರಿಗಣಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 15 ಜೆಬೆದಾಯನ ಮಗನಾದ ಯೋಹಾನನು ಯೇಸುವನ್ನು ಹಿಂಬಾಲಿಸಿದ್ದಿರಬಹುದು ಮತ್ತು ಅವರ ಪ್ರಥಮ ಭೇಟಿಯ ಬಳಿಕ ಯೇಸು ಮಾಡಿದಂಥ ಕೆಲವು ವಿಷಯಗಳನ್ನು ಕಣ್ಣಾರೆ ನೋಡಿದ್ದಿರಬಹುದು. ಇದು ಯೋಹಾನನು ತನ್ನ ಸುವಾರ್ತಾ ವೃತ್ತಾಂತದಲ್ಲಿ ಅವುಗಳನ್ನು ಸುಸ್ಪಷ್ಟವಾಗಿ ದಾಖಲಿಸುವಂತೆ ಮಾಡಿದ್ದಿರಬಹುದು. (ಯೋಹಾನ, 2-5ನೆಯ ಅಧ್ಯಾಯಗಳು) ಆದರೂ, ಯೇಸು ಅವನನ್ನು ಆಮಂತ್ರಿಸುವ ಮುಂಚೆ ಸ್ವಲ್ಪ ಕಾಲಾವಧಿಯ ವರೆಗೆ ಅವನು ತನ್ನ ಕುಟುಂಬದ ವೃತ್ತಿಯಾಗಿದ್ದ ಮೀನುಹಿಡಿಯುವ ವ್ಯಾಪಾರಕ್ಕೆ ಹಿಂದಿರುಗಿದನು.

^ ಪ್ಯಾರ. 24 ಹೆಚ್ಚಿನ ವಿವರಗಳಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 10ನೆಯ ಅಧ್ಯಾಯವನ್ನು ನೋಡಿರಿ.

ವಿವರಿಸಬಲ್ಲಿರೋ?

• ಮುತ್ತನ್ನು ಹುಡುಕಲು ಪ್ರಯಾಣಿಸುತ್ತಿದ್ದ ವ್ಯಾಪಾರಸ್ಥನ ಸಾಮ್ಯದ ಮುಖ್ಯ ಪಾಠವು ಏನಾಗಿದೆ?

• ರಾಜ್ಯದ ಉಚ್ಚ ಮೌಲ್ಯಕ್ಕಾಗಿರುವ ತನ್ನ ಆಳವಾದ ಗಣ್ಯತೆಯನ್ನು ಯೇಸು ಹೇಗೆ ತೋರಿಸಿದನು?

• ಯೇಸು ಕರೆಕೊಟ್ಟಾಗ ಅಂದ್ರೆಯ, ಪೇತ್ರ, ಯೋಹಾನ ಹಾಗೂ ಇನ್ನಿತರರು ಆ ಕೂಡಲೆ ಪ್ರತಿಕ್ರಿಯಿಸುವಂತೆ ಯಾವುದು ಅವರನ್ನು ಪ್ರಚೋದಿಸಿತು?

• ಎಲ್ಲಾ ದೇಶಗಳ ಜನರ ಮುಂದೆ ಯಾವ ಅದ್ಭುತಕರ ಸದವಕಾಶವು ಕಾದಿರಿಸಲ್ಪಟ್ಟಿದೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ರಾಜ್ಯದ ಕುರಿತಾಗಿ ಯೇಸು ತಿಳಿಸಿದ ಸಾಮ್ಯಗಳಲ್ಲೊಂದರಲ್ಲಿ ಅವನು ಯಾವ ಅಮೂಲ್ಯ ಗುಣವನ್ನು ಮುನ್‌ಚಿತ್ರಿಸಿದನು? (ಬಿ) ಬಹು ಬೆಲೆಯುಳ್ಳ ಮುತ್ತಿನ ಸಾಮ್ಯದಲ್ಲಿ ಯೇಸು ಏನು ಹೇಳಿದನು?

3. ಪುರಾತನ ಕಾಲದಲ್ಲಿ ಅತ್ಯುತ್ತಮ ಮುತ್ತುಗಳು ಅಷ್ಟೇಕೆ ಅಮೂಲ್ಯವಾಗಿದ್ದವು?

4. ಪ್ರಯಾಣಿಸುತ್ತಿದ್ದ ಒಬ್ಬ ವ್ಯಾಪಾರಸ್ಥನ ಕುರಿತಾದ ಯೇಸುವಿನ ಸಾಮ್ಯದ ಅತಿ ಪ್ರಮುಖ ಅಂಶವೇನಾಗಿದೆ?

5, 6. (ಎ) ಯೇಸುವಿನ ಸಾಮ್ಯದಲ್ಲಿನ ವ್ಯಾಪಾರಸ್ಥನ ವಿಷಯದಲ್ಲಿ ಯಾವುದು ವಿಶೇಷವಾಗಿ ಗಮನಾರ್ಹವಾದದ್ದಾಗಿದೆ? (ಬಿ) ಹೂಳಿಟ್ಟದ್ರವ್ಯದ ಕುರಿತಾದ ಸಾಮ್ಯವು, ಪ್ರಯಾಣಿಸುತ್ತಿದ್ದ ವ್ಯಾಪಾರಸ್ಥನ ಕುರಿತು ಏನನ್ನು ಬಯಲುಪಡಿಸುತ್ತದೆ?

7. ರಾಜ್ಯದ ಉಚ್ಚ ಮೌಲ್ಯವನ್ನು ಯೇಸು ಬಹಳವಾಗಿ ಗಣ್ಯಮಾಡಿದನೆಂಬುದನ್ನು ಅವನು ಹೇಗೆ ತೋರಿಸಿದನು?

8. ರಾಜ್ಯವು ಏನನ್ನು ಸಾಧಿಸುವುದು ಎಂಬುದನ್ನು ತೋರ್ಪಡಿಸಲಿಕ್ಕಾಗಿ ಯೇಸು ಏನು ಮಾಡಿದನು?

9. ಯೇಸುವಿನ ಆರಂಭದ ಶಿಷ್ಯರ ನಡುವೆ ಯಾವ ಅಪರೂಪದ ಗುಣವು ಕಂಡುಬಂತು?

10. ತನ್ನ ಶಿಷ್ಯರೊಂದಿಗಿನ ಪ್ರಥಮ ಭೇಟಿಯ ಬಳಿಕ ಸ್ವಲ್ಪ ಸಮಯಾನಂತರ ಯೇಸು ಬಂದು ಅವರನ್ನು ಕರೆದಾಗ ಅವರು ಹೇಗೆ ಪ್ರತಿಕ್ರಿಯಿಸಿದರು?

11. ಶಿಷ್ಯರು ಯೇಸುವಿನ ಕರೆಗೆ ಒಡನೆಯೇ ಪ್ರತಿಕ್ರಿಯಿಸಲು ಯಾವುದು ಸಂಭವನೀಯ ಕಾರಣವಾಗಿರಬಹುದು?

12, 13. (ಎ) ಯೇಸುವಿಗೆ ಕಿವಿಗೊಟ್ಟ ಅನೇಕರು ಹೇಗೆ ಪ್ರತಿಕ್ರಿಯಿಸಿದರು? (ಬಿ) ತನ್ನ ನಂಬಿಗಸ್ತ ಶಿಷ್ಯರ ಕುರಿತಾಗಿ ಯೇಸು ಏನು ಹೇಳಿದನು, ಮತ್ತು ಅವನ ಮಾತುಗಳ ಅರ್ಥವೇನು?

14. ರಾಜ್ಯಸಾರುವಿಕೆಯ ಕೆಲಸಕ್ಕಾಗಿ ಯೇಸು ತನ್ನ ಅಪೊಸ್ತಲರನ್ನು ಹೇಗೆ ಸಿದ್ಧಪಡಿಸಿದನು, ಮತ್ತು ಫಲಿತಾಂಶವೇನಾಗಿತ್ತು?

15. ತನ್ನ ಹಿಂಬಾಲಕರು ಸಂತೋಷಗೊಳ್ಳಲು ಯಾವುದು ನಿಜವಾದ ಕಾರಣವಾಗಿದೆ ಎಂದು ಯೇಸು ತಿಳಿಸಿದನು?

16, 17. (ಎ) ಯೇಸು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಕಳೆದ ಅಂತಿಮ ರಾತ್ರಿಯಂದು ಅವರಿಗೆ ಏನು ಹೇಳಿದನು? (ಬಿ) ಯೇಸುವಿನ ಮಾತುಗಳು ಅಪೊಸ್ತಲರಿಗೆ ಯಾವ ಆನಂದ ಹಾಗೂ ಆಶ್ವಾಸನೆಯನ್ನು ನೀಡಿದವು?

18. ಹನ್ನೊಂದು ಮಂದಿ ಅಪೊಸ್ತಲರಲ್ಲದೆ ಇನ್ನು ಯಾರು ಸಹ ಕಾಲಕ್ರಮೇಣ ರಾಜ್ಯದಿಂದ ಪ್ರಯೋಜನ ಪಡೆದುಕೊಳ್ಳುವರು?

19, 20. (ಎ) ಎಲ್ಲಾ ದೇಶಗಳ ಜನರಿಗೆ ಯಾವ ಸದವಕಾಶವು ತೆರೆದಿಡಲ್ಪಟ್ಟಿದೆ? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಯು ಪರಿಗಣಿಸಲ್ಪಡುವುದು?

[ಪುಟ 10ರಲ್ಲಿರುವ ಚಿತ್ರ]

‘ಅವರು ಎಲ್ಲವನ್ನೂ ಬಿಟ್ಟು ಅವನನ್ನು ಹಿಂಬಾಲಿಸಿದರು’

[ಪುಟ 12ರಲ್ಲಿರುವ ಚಿತ್ರ]

ಸ್ವರ್ಗಾರೋಹಣಕ್ಕೆ ಮುಂಚೆ ಯೇಸು ತನ್ನ ಹಿಂಬಾಲಕರಿಗೆ ಶಿಷ್ಯರನ್ನಾಗಿ ಮಾಡುವಂತೆ ಆಜ್ಞೆಯಿತ್ತನು