ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾನೆ

ಯೆಹೋವನು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾನೆ

ಯೆಹೋವನು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾನೆ

“ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು.”​—⁠ಕೀರ್ತನೆ 145:⁠17.

ಯಾರಾದರೊಬ್ಬರು ನಿಮ್ಮ ವಿಷಯದಲ್ಲಿ ತಪ್ಪಾದ ತೀರ್ಮಾನಕ್ಕೆ ಬಂದಿದ್ದಾರೋ, ಅಂದರೆ ಎಲ್ಲಾ ವಾಸ್ತವಾಂಶಗಳನ್ನು ಪರಿಗಣಿಸದೆ ಅವರು ನಿಮ್ಮ ಕ್ರಿಯೆಗಳು ಹಾಗೂ ಹೇತುಗಳ ವಿಷಯದಲ್ಲಿ ಸಂಶಯವನ್ನು ವ್ಯಕ್ತಪಡಿಸಿದ್ದಾರೋ? ಹಾಗಿರುವಲ್ಲಿ, ನಿಮ್ಮ ಮನಸ್ಸಿಗೆ ತುಂಬ ನೋವಾಗಿರಬಹುದು ಮತ್ತು ನಿಮಗೆ ಹೀಗೇಕೆ ಅನಿಸಿತೆಂಬುದು ಅರ್ಥಮಾಡಿಕೊಳ್ಳತಕ್ಕ ಸಂಗತಿಯೇ. ಇದರಿಂದ ನಾವು ಒಂದು ಪ್ರಾಮುಖ್ಯ ಪಾಠವನ್ನು ಕಲಿಯಸಾಧ್ಯವಿದೆ: ನಮಗೆ ಇಡೀ ಚಿತ್ರಣವು ಸರಿಯಾಗಿ ಗೊತ್ತಿಲ್ಲದಿರುವಾಗ, ದುಡುಕಿ ತಪ್ಪಾದ ತೀರ್ಮಾನವನ್ನು ಮಾಡುವುದರಿಂದ ದೂರವಿರುವುದು ವಿವೇಕಯುತವಾದದ್ದಾಗಿದೆ.

2 ಯೆಹೋವ ದೇವರ ವಿಷಯದಲ್ಲಿ ನಿರ್ಣಯಗಳನ್ನು ಮಾಡುವಾಗ, ನಾವು ಈ ಪಾಠವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೇದು. ಏಕೆ? ಏಕೆಂದರೆ ಮೊದಲ ನೋಟಕ್ಕೆ ಗೊಂದಲಮಯವಾಗಿ ತೋರಬಹುದಾದಂಥ ಕೆಲವು ಬೈಬಲ್‌ ವೃತ್ತಾಂತಗಳಿವೆ. ದೇವರ ಆರಾಧಕರಲ್ಲಿ ಕೆಲವರ ಕೃತ್ಯಗಳ ಕುರಿತಾದ ಅಥವಾ ಆತನ ಗತಕಾಲದ ತೀರ್ಪುಗಳ ಕುರಿತಾದ ಈ ವೃತ್ತಾಂತಗಳು, ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವಷ್ಟು ವಿವರಗಳನ್ನು ಒಳಗೂಡಿಸುವುದಿಲ್ಲ. ದುಃಖಕರವಾಗಿಯೇ, ಕೆಲವರು ಇಂಥ ವೃತ್ತಾಂತಗಳ ಬಗ್ಗೆ ಆಕ್ಷೇಪವೆತ್ತುತ್ತಾರೆ ಮತ್ತು ದೇವರು ನೀತಿವಂತನೂ ನ್ಯಾಯಬದ್ಧನೂ ಆಗಿದ್ದಾನೋ ಎಂದು ಸಹ ಪ್ರಶ್ನಿಸುತ್ತಾರೆ. ಆದರೆ, “ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು” ಎಂದು ಬೈಬಲ್‌ ನಮಗೆ ತಿಳಿಸುತ್ತದೆ. (ಕೀರ್ತನೆ 145:17) ಆತನು “ಕೆಟ್ಟದ್ದನ್ನು ನಡಿಸುವದೇ ಇಲ್ಲ” ಎಂದು ಸಹ ಆತನ ವಾಕ್ಯವು ಆಶ್ವಾಸನೆ ನೀಡುತ್ತದೆ. (ಯೋಬ 34:12; ಕೀರ್ತನೆ 37:28) ಹಾಗಾದರೆ, ತನ್ನ ಕುರಿತು ಇತರರು ತಪ್ಪಾದ ತೀರ್ಮಾನಕ್ಕೆ ಬರುವಾಗ ಆತನಿಗೆ ಹೇಗನಿಸುತ್ತದೆ ಎಂಬುದನ್ನು ತುಸು ಊಹಿಸಿಕೊಳ್ಳಿರಿ!

3 ನಾವು ಯೆಹೋವನ ನ್ಯಾಯತೀರ್ಪುಗಳನ್ನು ಏಕೆ ಅಂಗೀಕರಿಸಬೇಕು ಎಂಬುದಕ್ಕಿರುವ ಐದು ಕಾರಣಗಳನ್ನು ನಾವೀಗ ಪರಿಗಣಿಸೋಣ. ತದನಂತರ, ಆ ಕಾರಣಗಳನ್ನು ಮನಸ್ಸಿನಲ್ಲಿಟ್ಟವರಾಗಿ, ಕೆಲವರು ಅರ್ಥಮಾಡಿಕೊಳ್ಳಲು ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದಾದ ಎರಡು ಬೈಬಲ್‌ ವೃತ್ತಾಂತಗಳನ್ನು ನಾವು ಪರಿಶೀಲಿಸುವೆವು.

ಯೆಹೋವನ ನ್ಯಾಯತೀರ್ಪುಗಳನ್ನು ಏಕೆ ಅಂಗೀಕರಿಸಬೇಕು?

4 ಮೊದಲನೆಯದಾಗಿ, ಒಳಗೂಡಿರುವಂಥ ಎಲ್ಲಾ ವಾಸ್ತವಾಂಶಗಳು ಯೆಹೋವನಿಗೆ ಗೊತ್ತಿದೆ, ಆದರೆ ನಮಗೆ ಗೊತ್ತಿಲ್ಲದಿರುವುದರಿಂದ, ದೇವರ ಕೃತ್ಯಗಳನ್ನು ಪರಿಗಣಿಸುವಾಗ ನಾವು ವಿನಮ್ರ ಭಾವವನ್ನು ತೋರಿಸಬೇಕು. ದೃಷ್ಟಾಂತಕ್ಕಾಗಿ, ನಿಷ್ಪಕ್ಷಪಾತ ರೀತಿಯಲ್ಲಿ ನ್ಯಾಯತೀರಿಸುವವನೆಂಬ ಖ್ಯಾತಿಯಿರುವಂಥ ಒಬ್ಬ ನ್ಯಾಯಾಧಿಪತಿಯು ನ್ಯಾಯಾಲಯದ ಒಂದು ಮೊಕದ್ದಮೆಯಲ್ಲಿ ತೀರ್ಪನ್ನು ನೀಡಿದ್ದಾನೆ ಎಂದಿಟ್ಟುಕೊಳ್ಳಿ. ಆದರೆ ಎಲ್ಲಾ ವಾಸ್ತವಾಂಶಗಳನ್ನು ತಿಳಿದುಕೊಳ್ಳದೆ ಅಥವಾ ಒಳಗೂಡಿರುವಂಥ ನಿಯಮಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳದೆ ಯಾರಾದರೂ ನ್ಯಾಯಾಧಿಪತಿಯ ನಿರ್ಣಯವನ್ನು ಟೀಕಿಸುವುದಾದರೆ ನಿಮಗೆ ಅವರ ಕುರಿತು ಹೇಗನಿಸುವುದು? ಒಂದು ವಿಷಯದ ಕುರಿತು ಪೂರ್ಣ ಮಾಹಿತಿಯಿಲ್ಲದೆ ಯಾರಾದರೊಬ್ಬರು ತಪ್ಪು ತೀರ್ಮಾನಕ್ಕೆ ಬರುವುದು ಮೂರ್ಖತನವಾಗಿದೆ. (ಜ್ಞಾನೋಕ್ತಿ 18:13) ಹೀಗಿರುವಾಗ, ‘ಸರ್ವಲೋಕಕ್ಕೆ ನ್ಯಾಯತೀರಿಸುವವನನ್ನೇ’ ಮಾನವರು ಟೀಕಿಸುವುದು ಎಷ್ಟು ಹೆಚ್ಚು ಮೂರ್ಖತನವಾಗಿದೆ!​—⁠ಆದಿಕಾಂಡ 18:25.

5 ದೇವರ ನ್ಯಾಯತೀರ್ಪನ್ನು ಅಂಗೀಕರಿಸಲಿಕ್ಕಾಗಿರುವ ಎರಡನೆಯ ಕಾರಣವು, ಮಾನವರಿಗೆ ಅಸದೃಶವಾಗಿ ದೇವರು ಹೃದಯಗಳನ್ನು ಓದಬಲ್ಲನು. (1 ಸಮುವೇಲ 16:⁠7) ಆತನ ವಾಕ್ಯವು ಹೀಗೆ ತಿಳಿಸುತ್ತದೆ: “ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವನ್ನು ಪರೀಕ್ಷಿಸುವವನೂ ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.” (ಯೆರೆಮೀಯ 17:10) ಆದುದರಿಂದ, ಕೆಲವು ವ್ಯಕ್ತಿಗಳ ಮೇಲೆ ಬರಮಾಡಲ್ಪಟ್ಟ ದೇವರ ನ್ಯಾಯತೀರ್ಪುಗಳ ಕುರಿತಾದ ಬೈಬಲ್‌ ವೃತ್ತಾಂತಗಳನ್ನು ನಾವು ಓದುವಾಗ, ಸರ್ವವನ್ನೂ ವೀಕ್ಷಿಸುವ ಆತನ ಕಣ್ಣುಗಳು ಆತನ ವಾಕ್ಯದಲ್ಲಿ ದಾಖಲಿಸಲ್ಪಟ್ಟಿರದಂಥ ಗುಪ್ತವಾದ ಆಲೋಚನೆಗಳು, ಹೇತುಗಳು ಹಾಗೂ ಇಂಗಿತಗಳನ್ನು ಗಣನೆಗೆ ತೆಗೆದುಕೊಂಡವು ಎಂಬುದನ್ನು ನಾವೆಂದಿಗೂ ಮರೆಯದಿರೋಣ.​—⁠1 ಪೂರ್ವಕಾಲವೃತ್ತಾಂತ 28:⁠9.

6 ಯೆಹೋವನ ನ್ಯಾಯತೀರ್ಪನ್ನು ಅಂಗೀಕರಿಸಲಿಕ್ಕಾಗಿರುವ ಮೂರನೆಯ ಕಾರಣವನ್ನು ಗಮನಿಸಿರಿ: ಆತನು ವೈಯಕ್ತಿಕವಾಗಿ ಬಹಳಷ್ಟನ್ನು ತ್ಯಾಗಮಾಡಬೇಕಾಗಿರುವಾಗಲೂ ತನ್ನ ನೀತಿಭರಿತ ಮಟ್ಟಗಳಿಗೆ ಬಲವಾಗಿ ಅಂಟಿಕೊಳ್ಳುತ್ತಾನೆ. ಒಂದು ಉದಾಹರಣೆಯನ್ನು ಪರಿಗಣಿಸಿರಿ. ವಿಧೇಯ ಮಾನವಕುಲವನ್ನು ಪಾಪ ಮತ್ತು ಮರಣದಿಂದ ವಿಮೋಚಿಸಲಿಕ್ಕಾಗಿ ತನ್ನ ಪುತ್ರನನ್ನು ಈಡಾಗಿ ನೀಡುವ ಮೂಲಕ ಯೆಹೋವನು ತನ್ನ ನ್ಯಾಯಬದ್ಧ ಹಾಗೂ ನೀತಿಭರಿತ ಮಟ್ಟಗಳನ್ನು ಪಾಲಿಸಿದನು. (ರೋಮಾಪುರ 5:​18, 19) ಆದರೂ, ಯಾತನಾ ಕಂಬವೊಂದರ ಮೇಲೆ ತನ್ನ ಪ್ರಿಯ ಪುತ್ರನು ಕಷ್ಟಾನುಭವಿಸಿ ಸಾಯುತ್ತಿರುವುದನ್ನು ನೋಡುವುದು ಯೆಹೋವನಿಗೆ ಎಲ್ಲಕ್ಕಿಂತಲೂ ಹೆಚ್ಚು ನೋವನ್ನು ಉಂಟುಮಾಡಿದ್ದಿರಬೇಕು. ಇದು ದೇವರ ಕುರಿತು ನಮಗೆ ಏನನ್ನು ತಿಳಿಸುತ್ತದೆ? “ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆ” ಇಲ್ಲವೆ ಈಡಿನ ಕುರಿತು ಬೈಬಲ್‌ ಹೀಗೆ ತಿಳಿಸುತ್ತದೆ: ‘ದೇವರು ತನ್ನ ನೀತಿಯನ್ನು ಹೀಗೆ ತೋರಿಸಿದನು.’ (ರೋಮಾಪುರ 3:24-26) ರೋಮಾಪುರ 3:26ರ ಇನ್ನೊಂದು ಭಾಷಾಂತರವು ಹೀಗೆ ಓದಲ್ಪಡುತ್ತದೆ: “ದೇವರು ಮಾಡುವಂಥದ್ದು ಯಾವಾಗಲೂ ಸರಿಯಾಗಿರುತ್ತದೆ ಮತ್ತು ನ್ಯಾಯಬದ್ಧವಾಗಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ.” (ಪರಿಶುದ್ಧ ಬೈಬಲ್‌) ಹೌದು, ಈಡನ್ನು ಒದಗಿಸಲಿಕ್ಕಾಗಿ ಯೆಹೋವನು ಎಷ್ಟರ ಮಟ್ಟಿಗೆ ತ್ಯಾಗಮಾಡಲು ಸಿದ್ಧನಾಗಿದ್ದನೋ ಅದು, ಯಾವುದು ‘ಸರಿಯಾಗಿದೆಯೋ ಮತ್ತು ನ್ಯಾಯಬದ್ಧವಾಗಿದೆಯೋ’ ಅದಕ್ಕಾಗಿ ದೇವರು ಅತ್ಯುತ್ತಮ ಪರಿಗಣನೆಯನ್ನು ಕೊಡುತ್ತಾನೆ ಎಂಬುದನ್ನು ತೋರಿಸುತ್ತದೆ.

7 ಆದುದರಿಂದ, ದೇವರು ಸರಿಯಾದ ರೀತಿಯಲ್ಲಿ ಮತ್ತು ನ್ಯಾಯಬದ್ಧವಾಗಿ ಕ್ರಿಯೆಗೈದನೋ ಎಂಬ ಸಂಶಯವನ್ನು ಕೆಲವರಲ್ಲಿ ಮೂಡಿಸಬಹುದಾದ ಒಂದು ವಿಷಯವನ್ನು ನಾವು ಬೈಬಲಿನಲ್ಲಿ ಓದುವುದಾದರೆ, ಈ ವಿಷಯವನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ: ತನ್ನ ನೀತಿಯ ಹಾಗೂ ನ್ಯಾಯದ ಮಟ್ಟಗಳಿಗೆ ಯೆಹೋವನು ನಿಷ್ಠೆಯನ್ನು ತೋರಿಸುತ್ತಾನಾದ್ದರಿಂದ, ವೇದನಾಭರಿತ ಮರಣವನ್ನು ಅನುಭವಿಸುವುದರಿಂದ ತನ್ನ ಸ್ವಂತ ಮಗನನ್ನೂ ಆತನು ಉಳಿಸಿಕೊಳ್ಳಲಿಲ್ಲ. ಹೀಗಿರುವಾಗ, ಬೇರೆ ವಿಚಾರಗಳಲ್ಲಿ ಈ ಮಟ್ಟಗಳನ್ನು ಆತನು ಎಂದಾದರೂ ಉಲ್ಲಂಘಿಸುವನೋ? ಸತ್ಯಾಂಶವೇನೆಂದರೆ, ಯೆಹೋವನು ಎಂದೂ ತನ್ನ ನೀತಿಯ ಹಾಗೂ ನ್ಯಾಯದ ಮಟ್ಟಗಳನ್ನು ಉಲ್ಲಂಘಿಸುವುದೇ ಇಲ್ಲ. ಆದುದರಿಂದಲೇ, ಆತನು ಯಾವಾಗಲೂ ಸರಿಯಾದದ್ದನ್ನು ಮತ್ತು ನ್ಯಾಯಬದ್ಧವಾದದ್ದನ್ನೇ ಮಾಡುತ್ತಾನೆ ಎಂಬ ವಿಷಯದಲ್ಲಿ ನಿಶ್ಚಿತರಾಗಿರಲು ನಮಗೆ ಸಾಕಷ್ಟು ಕಾರಣವಿದೆ.​—⁠ಯೋಬ 37:⁠23.

8 ನಾವು ಯೆಹೋವನ ನ್ಯಾಯತೀರ್ಪುಗಳನ್ನು ಏಕೆ ಅಂಗೀಕರಿಸಬೇಕು ಎಂಬುದಕ್ಕಿರುವ ನಾಲ್ಕನೆಯ ಕಾರಣವನ್ನು ಪರಿಗಣಿಸಿರಿ: ಯೆಹೋವನು ಮಾನವರನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದ್ದಾನೆ. (ಆದಿಕಾಂಡ 1:27) ಆದುದರಿಂದ ಮಾನವರಿಗೆ ದೇವರ ಗುಣಗಳು ಕೊಡಲ್ಪಟ್ಟಿದ್ದು, ಇದರಲ್ಲಿ ನ್ಯಾಯ ಹಾಗೂ ನೀತಿಯ ಪರಿಜ್ಞಾನವೂ ಒಳಗೂಡಿದೆ. ನಮ್ಮ ನ್ಯಾಯ ಹಾಗೂ ನೀತಿಯ ಪರಿಜ್ಞಾನವು, ಯೆಹೋವನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಈ ಗುಣಗಳ ಕೊರತೆಯಿರಸಾಧ್ಯವಿದೆ ಎಂದು ನಾವು ಊಹಿಸಿಕೊಳ್ಳುವಂತೆ ಮಾಡಿರುವಲ್ಲಿ, ಇದು ಅಸಂಬದ್ಧವಾದ ಸಂಗತಿಯಾಗಿದೆ. ಒಂದು ನಿರ್ದಿಷ್ಟ ಬೈಬಲ್‌ ವೃತ್ತಾಂತದ ಬಗ್ಗೆ ನಮಗೆ ಗೊಂದಲಮಯ ಅನಿಸಿಕೆಯಾಗುವಲ್ಲಿ, ನಾವು ಪಾಪವನ್ನು ಬಾಧ್ಯತೆಯಾಗಿ ಪಡೆದಿರುವುದರಿಂದ ನ್ಯಾಯಬದ್ಧವಾದ ಹಾಗೂ ಸರಿಯಾದ ವಿಷಯಗಳ ಕುರಿತಾದ ನಮ್ಮ ಪರಿಜ್ಞಾನವು ಅಪರಿಪೂರ್ಣವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರ ಸ್ವರೂಪದಲ್ಲಿ ನಾವು ಉಂಟುಮಾಡಲ್ಪಟ್ಟಿದ್ದೇವೋ ಆ ಯೆಹೋವ ದೇವರು ನ್ಯಾಯ ಹಾಗೂ ನೀತಿಯಲ್ಲಿ ಪರಿಪೂರ್ಣನಾಗಿದ್ದಾನೆ. (ಧರ್ಮೋಪದೇಶಕಾಂಡ 32:4) ಮಾನವರು ದೇವರಿಗಿಂತಲೂ ಹೆಚ್ಚು ನ್ಯಾಯಬದ್ಧರು ಮತ್ತು ನೀತಿವಂತರು ಆಗಿರಸಾಧ್ಯವಿದೆ ಎಂದು ಊಹಿಸಿಕೊಳ್ಳುವುದು ಸಹ ವಿಚಾರಹೀನವಾದದ್ದಾಗಿದೆ!​—⁠ರೋಮಾಪುರ 3:4, 5; 9:⁠14.

9 ಯೆಹೋವನ ನ್ಯಾಯತೀರ್ಪುಗಳನ್ನು ಅಂಗೀಕರಿಸಲಿಕ್ಕಾಗಿರುವ ಐದನೆಯ ಕಾರಣವು, ಆತನು ‘ಭೂಲೋಕದಲ್ಲೆಲ್ಲಾ ಸರ್ವೋನ್ನತನು’ ಆಗಿರುವುದೇ. (ಕೀರ್ತನೆ 83:18) ಆದುದರಿಂದಲೇ ಆತನು ತನ್ನ ಕೃತ್ಯಗಳ ಕುರಿತು ಮಾನವರಿಗೆ ವಿವರಿಸುವ ಅಥವಾ ಸಮರ್ಥಿಸುವ ಹಂಗಿಗೆ ಒಳಪಟ್ಟಿಲ್ಲ. ಆತನು ದೊಡ್ಡ ಕುಂಬಾರನಾಗಿದ್ದಾನೆ ಮತ್ತು ನಾವು ಪಾತ್ರೆಗಳಾಗಿ ರೂಪಿಸಲ್ಪಟ್ಟಿರುವ ಜೇಡಿಮಣ್ಣಿನಂತಿದ್ದೇವೆ; ಈ ಕಾರಣದಿಂದಾಗಿಯೇ ಆತನು ನಮ್ಮ ವಿಷಯದಲ್ಲಿ ತನ್ನ ಇಷ್ಟಾನುಸಾರ ಕ್ರಿಯೆಗೈಯಶಕ್ತನಾಗಿದ್ದಾನೆ. (ರೋಮಾಪುರ 9:19-21) ಆತನ ಕೈಯಿಂದ ರೂಪಿಸಲ್ಪಟ್ಟಿರುವ ಮಣ್ಣಿನ ಪಾತ್ರೆಗಳಂತಿರುವ ನಾವು ಆತನ ನಿರ್ಣಯಗಳ ಅಥವಾ ಕೃತ್ಯಗಳ ವಿಷಯದಲ್ಲಿ ಪ್ರಶ್ನೆಯೆಬ್ಬಿಸಲು ಯಾವ ಹಕ್ಕಿದೆ? ಮಾನವಕುಲದೊಂದಿಗಿನ ದೇವರ ವ್ಯವಹಾರಗಳನ್ನು ಪೂರ್ವಜನಾದ ಯೋಬನು ಅಪಾರ್ಥಮಾಡಿಕೊಂಡಾಗ, ಯೆಹೋವನು ಅವನ ವಿಚಾರಧಾರೆಯನ್ನು ಸರಿಪಡಿಸುತ್ತಾ ಹೀಗೆ ಕೇಳಿದನು: “ಏನು! ನನ್ನ ನೀತಿಯನ್ನು ಖಂಡಿಸಿಬಿಡುವಿಯಾ? ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವಿಯೋ?” ತಾನು ತಿಳಿವಳಿಕೆಯಿಲ್ಲದೆ ಮಾತಾಡಿದೆನೆಂಬುದನ್ನು ಗ್ರಹಿಸಿದ ಯೋಬನು ತದನಂತರ ಪಶ್ಚಾತ್ತಾಪಪಟ್ಟನು. (ಯೋಬ 40:8; 42:6) ದೇವರಲ್ಲಿ ದೋಷವನ್ನು ಕಂಡುಹಿಡಿಯುವ ತಪ್ಪನ್ನು ನಾವೆಂದಿಗೂ ಮಾಡದಿರೋಣ!

10 ಯೆಹೋವನು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾನೆ ಎಂದು ನಂಬಲು ನಮಗೆ ಬಲವಾದ ಕಾರಣಗಳಿವೆ ಎಂಬುದು ಸುಸ್ಪಷ್ಟ. ಯೆಹೋವನ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿರುವ ಈ ತಳಪಾಯದೊಂದಿಗೆ, ಕೆಲವರು ಗೊಂದಲಮಯವಾಗಿ ಕಂಡುಕೊಳ್ಳಬಹುದಾದ ಎರಡು ಬೈಬಲ್‌ ವೃತ್ತಾಂತಗಳನ್ನು ನಾವು ಪರಿಶೀಲಿಸೋಣ. ಮೊದಲನೆಯ ವೃತ್ತಾಂತವು ದೇವರ ಆರಾಧಕರಲ್ಲೊಬ್ಬನ ಕೃತ್ಯಗಳ ಕುರಿತಾಗಿದೆ ಮತ್ತು ಇನ್ನೊಂದು ವೃತ್ತಾಂತವು ಸ್ವತಃ ದೇವರಿಂದ ವಿಧಿಸಲ್ಪಟ್ಟ ನ್ಯಾಯತೀರ್ಪಿನದ್ದಾಗಿದೆ.

ಕೋಪಗೊಂಡಿದ್ದ ಜನರ ಗುಂಪಿಗೆ ತನ್ನ ಹೆಣ್ಣುಮಕ್ಕಳನ್ನು ಒಪ್ಪಿಸಲು ಲೋಟನು ಏಕೆ ಸಿದ್ಧನಾಗಿದ್ದನು?

11 ಆದಿಕಾಂಡ 19ನೆಯ ಅಧ್ಯಾಯದಲ್ಲಿ, ಮಾನವ ರೂಪವನ್ನು ತಾಳಿದ ಇಬ್ಬರು ದೇವದೂತರನ್ನು ದೇವರು ಸೊದೋಮ್‌ ಪಟ್ಟಣಕ್ಕೆ ಕಳುಹಿಸಿದಾಗ ಏನು ಸಂಭವಿಸಿತೆಂಬುದರ ಕುರಿತಾದ ವೃತ್ತಾಂತವನ್ನು ನಾವು ಕಂಡುಕೊಳ್ಳುತ್ತೇವೆ. ಲೋಟನು ಆ ಸಂದರ್ಶಕರನ್ನು ತನ್ನ ಮನೆಯಲ್ಲಿಯೇ ತಂಗುವಂತೆ ಒತ್ತಾಯಿಸಿದನು. ಆದರೂ, ಆ ರಾತ್ರಿ ಸೊದೋಮ್‌ ಪಟ್ಟಣದ ಪುರುಷರ ಒಂದು ಸಮೂಹ ಲೋಟನ ಮನೆಯನ್ನು ಸುತ್ತುವರಿದು, ಅನೈತಿಕ ಉದ್ದೇಶಗಳಿಗಾಗಿ ಆ ಸಂದರ್ಶಕರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರುವಂತೆ ತಗಾದೆಮಾಡಿತು. ಲೋಟನು ಜನರ ಆ ಗುಂಪಿನೊಂದಿಗೆ ತರ್ಕಸಮ್ಮತವಾಗಿ ಮಾತಾಡಲು ಪ್ರಯತ್ನಿಸಿದನಾದರೂ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ತನ್ನ ಅತಿಥಿಗಳನ್ನು ಕಾಪಾಡುವ ಪ್ರಯತ್ನದಿಂದ ಲೋಟನು ಹೇಳಿದ್ದು: “ಅಣ್ಣಂದಿರೇ, ಈ ಪಾತಕವನ್ನು ಮಾಡಬೇಡಿರಿ. ಕೇಳಿರಿ, ನನಗೆ ಪುರುಷರನ್ನರಿಯದ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ; ಅವರನ್ನಾದರೂ ನಿಮಗೆ ತಂದು ಒಪ್ಪಿಸೇನು; ಮನಸ್ಸು ಬಂದಂತೆ ಮಾಡಬಹುದು; ಆದರೆ ಆ ಮನುಷ್ಯರು ನನ್ನ ಆಶ್ರಯಕ್ಕೆ ಬಂದವರು; ಅವರಿಗೆ ಏನೂ ಮಾಡಕೂಡದು.” ಜನರ ಗುಂಪು ಇದಕ್ಕೆ ಕಿವಿಗೊಡಲಿಲ್ಲ ಮತ್ತು ಅವರು ಮನೆಯ ಕದವನ್ನು ಒಡೆದುಬಿಡಬೇಕೆಂದಿದ್ದರು. ಅಂತಿಮವಾಗಿ, ದೇವದೂತ ಸಂದರ್ಶಕರು ಉನ್ಮತ್ತರಾಗಿದ್ದ ಆ ಜನರ ಕಣ್ಣುಗಳನ್ನು ಮೊಬ್ಬುಗೊಳಿಸಿದರು.​—⁠ಆದಿಕಾಂಡ 19:​1-11.

12 ಈ ವೃತ್ತಾಂತವು ಕೆಲವರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದೆ ಎಂಬುದು ಅರ್ಥಮಾಡಿಕೊಳ್ಳತಕ್ಕದ್ದೇ. ಅವರು ಹೀಗೆ ಆಲೋಚಿಸುತ್ತಾರೆ: ‘ಕಾಮುಕ ಜನರ ಗುಂಪಿಗೆ ತನ್ನ ಹೆಣ್ಣುಮಕ್ಕಳನ್ನು ಒಪ್ಪಿಸಿಕೊಡುವ ಬೇಡಿಕೆಯನ್ನು ಮುಂದಿಡುವ ಮೂಲಕ ಲೋಟನು ತನ್ನ ಅತಿಥಿಗಳನ್ನು ಕಾಪಾಡಲು ಪ್ರಯತ್ನಿಸಿದ್ದೇಕೆ? ಅವನು ತಪ್ಪಾದ ರೀತಿಯಲ್ಲಿ ಮತ್ತು ಹೇಡಿತನದಿಂದ ವರ್ತಿಸಿದನಲ್ಲವೋ?’ ಈ ವೃತ್ತಾಂತವನ್ನು ಪರಿಗಣಿಸುವಾಗ, ಲೋಟನನ್ನು “ನೀತಿವಂತ”ನೆಂದು ಕರೆಯುವಂತೆ ದೇವರು ಪೇತ್ರನನ್ನು ಪ್ರೇರೇಪಿಸಿದ್ದೇಕೆ? ಲೋಟನು ದೇವರ ಸಮ್ಮತಿಗನುಸಾರ ಕ್ರಿಯೆಗೈದನೋ? (2 ಪೇತ್ರ 2:7, 8) ನಾವು ತಪ್ಪು ತೀರ್ಮಾನಕ್ಕೆ ಬಾರದಿರಲಿಕ್ಕಾಗಿ ಈ ವಿಷಯದ ಕುರಿತು ತರ್ಕಬದ್ಧವಾಗಿ ಅವಲೋಕಿಸಿ ನೋಡೋಣ.

13 ಮೊದಲನೆಯದಾಗಿ, ಲೋಟನ ಕೃತ್ಯವನ್ನು ಸಮ್ಮತಿಸುವುದಕ್ಕೆ ಅಥವಾ ಖಂಡಿಸುವುದಕ್ಕೆ ಬದಲಾಗಿ ಬೈಬಲ್‌ ಕೇವಲ ಅಲ್ಲಿ ಏನು ಸಂಭವಿಸಿತು ಎಂಬುದನ್ನು ವರದಿಸುತ್ತದಷ್ಟೆ ಎಂಬುದನ್ನು ಗಮನಿಸತಕ್ಕದ್ದು. ಲೋಟನು ಏನು ಆಲೋಚಿಸುತ್ತಿದ್ದನು ಅಥವಾ ಅವನು ಆ ರೀತಿ ವರ್ತಿಸುವಂತೆ ಯಾವುದು ಅವನನ್ನು ಪ್ರಚೋದಿಸಿತು ಎಂಬುದನ್ನು ಸಹ ಬೈಬಲ್‌ ನಮಗೆ ತಿಳಿಸುವುದಿಲ್ಲ. ಅವನು ‘ನೀತಿವಂತರ ಪುನರುತ್ಥಾನದಲ್ಲಿ’ ಹಿಂದೆಬರುವಾಗ, ಈ ವಿಷಯದಲ್ಲಿ ಬಹುಶಃ ವಿವರಗಳನ್ನು ಕೊಡುವನು.​—⁠ಅ. ಕೃತ್ಯಗಳು 24:15.

14 ಲೋಟನು ಹೇಡಿಯಾಗಿರಲಿಲ್ಲ. ಅವನು ಕಷ್ಟಕರವಾದ ಒಂದು ಸನ್ನಿವೇಶದಲ್ಲಿ ಸಿಲುಕಿಕೊಂಡಿದ್ದನು. ಆ ಸಂದರ್ಶಕರು “ನನ್ನ ಆಶ್ರಯಕ್ಕೆ ಬಂದವರು” ಎಂದು ಹೇಳುವ ಮೂಲಕ ಲೋಟನು ಅವರಿಗೆ ಸಂರಕ್ಷಣೆಯನ್ನು ಹಾಗೂ ಆಶ್ರಯವನ್ನು ಒದಗಿಸುವ ಹಂಗು ತನಗಿದೆ ಎಂಬುದನ್ನು ಸೂಚಿಸಿದನು. ಆದರೆ ಇದು ಸುಲಭದ ಕೆಲಸವಾಗಿರಲಿಲ್ಲ. ಯೆಹೂದಿ ಇತಿಹಾಸಕಾರನಾದ ಜೋಸೀಫಸನು ವರದಿಸುವುದೇನೆಂದರೆ, ಸೊದೋಮ್‌ ಪಟ್ಟಣದವರು “ಜನರ ವಿಷಯದಲ್ಲಿ ನಿರ್ದಯಿಗಳಾಗಿದ್ದರು, ಮತ್ತು ದೇವರ ವಿಷಯದಲ್ಲಿ ಅನಾಚಾರಿಗಳಾಗಿದ್ದರು . . . ಅವರು ಅಪರಿಚಿತರನ್ನು ದ್ವೇಷಿಸುತ್ತಿದ್ದರು ಮತ್ತು ಪುರುಷ ಮೈಥುನ ರೂಢಿಗಳ ಮೂಲಕ ತಮ್ಮನ್ನು ದುರ್ವಿನಿಯೋಗಿಸಿಕೊಳ್ಳುತ್ತಿದ್ದರು.” ಆದರೂ ಲೋಟನು ಈ ದ್ವೇಷಭರಿತ ಜನರ ಗುಂಪಿಗೆ ಹೆದರಿ ಹಿಂಜರಿಯಲಿಲ್ಲ. ಬದಲಾಗಿ ಅವನು ಮನೆಯಿಂದ ಹೊರಗೆ ಹೋಗಿ, ಕೋಪಗೊಂಡಿದ್ದ ಆ ಜನರೊಂದಿಗೆ ತರ್ಕಬದ್ಧವಾಗಿ ಮಾತಾಡಲು ಪ್ರಯತ್ನಿಸಿದನು. ಅವನು ‘ತನ್ನ ಹಿಂದೆ ಕದವನ್ನೂ ಹಾಕಿದನು.’​—⁠ಆದಿಕಾಂಡ 19:⁠6.

15 ‘ಆದರೂ, ಆ ಸಮೂಹಕ್ಕೆ ತನ್ನ ಹೆಣ್ಣುಮಕ್ಕಳನ್ನು ಒಪ್ಪಿಸಲು ಲೋಟನು ಏಕೆ ಸಿದ್ಧನಾಗಿದ್ದನು?’ ಎಂದು ಕೆಲವರು ಕೇಳಬಹುದು. ಅವನ ಹೇತುಗಳು ಕೆಟ್ಟವುಗಳಾಗಿದ್ದವು ಎಂದು ಊಹಿಸಿಕೊಳ್ಳುವುದಕ್ಕೆ ಬದಲಾಗಿ, ಕೆಲವೊಂದು ಸಾಧ್ಯತೆಗಳನ್ನು ಪರಿಗಣಿಸಬಾರದೇಕೆ? ಎಲ್ಲಕ್ಕಿಂತಲೂ ಮುಖ್ಯವಾಗಿ, ಲೋಟನು ನಂಬಿಕೆಯಿಂದ ಕ್ರಿಯೆಗೈದಿರಬಹುದು. ಹೇಗೆ? ತನ್ನ ಸೋದರಮಾವನಾದ ಅಬ್ರಹಾಮನ ಪತ್ನಿಯಾದ ಸಾರಳನ್ನು ಯೆಹೋವನು ಹೇಗೆ ಸಂರಕ್ಷಿಸಿದನು ಎಂಬುದು ಲೋಟನಿಗೆ ತಿಳಿದಿತ್ತು ಎಂಬುದರಲ್ಲಿ ಸಂಶಯವಿಲ್ಲ. ಸಾರಳು ತುಂಬ ಸುಂದರಿಯಾಗಿದ್ದುದರಿಂದ, ಇತರರು ತನ್ನನ್ನು ಕೊಂದು ಅವಳನ್ನು ಕರೆದುಕೊಂಡು ಹೋದಾರು ಎಂಬ ಭಯದಿಂದಾಗಿ ಅಬ್ರಹಾಮನು ಅವಳಿಗೆ ತಾನು ಅವಳ ಅಣ್ಣನೆಂದು ಹೇಳುವಂತೆ ವಿನಂತಿಸಿಕೊಂಡನೆಂಬುದನ್ನು ನೆನಪಿಸಿಕೊಳ್ಳಿರಿ. * ತರುವಾಯ ಸಾರಳನ್ನು ಫರೋಹನ ಅರಮನೆಗೆ ಕರೆತರಲಾಯಿತು. ಆದರೂ, ಯೆಹೋವನು ಮಧ್ಯೆಪ್ರವೇಶಿಸಿ ಫರೋಹನು ಸಾರಳನ್ನು ಕೆಡಿಸದಂತೆ ನೋಡಿಕೊಂಡನು. (ಆದಿಕಾಂಡ 12:11-20) ತದ್ರೀತಿಯಲ್ಲಿ ತನ್ನ ಹೆಣ್ಣುಮಕ್ಕಳು ಸಹ ಸಂರಕ್ಷಿಸಲ್ಪಡಬಹುದು ಎಂದು ಲೋಟನು ನಂಬಿರುವ ಸಾಧ್ಯತೆಯಿದೆ. ಗಮನಾರ್ಹವಾಗಿಯೇ, ತನ್ನ ದೇವದೂತರ ಮೂಲಕ ಯೆಹೋವನು ಮಧ್ಯೆಪ್ರವೇಶಿಸಿದನು ಮತ್ತು ಆ ಯುವತಿಯರನ್ನು ಸುರಕ್ಷಿತವಾಗಿರಿಸಿದನು.

16 ಇನ್ನೊಂದು ಸಾಧ್ಯತೆಯನ್ನು ಪರಿಗಣಿಸಿರಿ. ಲೋಟನು ಆ ಜನರನ್ನು ಆಘಾತಗೊಳಿಸಲು ಅಥವಾ ಗಲಿಬಿಲಿಗೊಳಿಸಲು ಸಹ ಪ್ರಯತ್ನಿಸುತ್ತಿದ್ದಿರಬಹುದು. ಸೊದೋಮ್‌ ಪಟ್ಟಣದವರು ಸಲಿಂಗಕಾಮದಲ್ಲಿ ಆಸಕ್ತರಾಗಿದ್ದ ಕಾರಣ ಜನರ ಗುಂಪು ತನ್ನ ಹೆಣ್ಣುಮಕ್ಕಳನ್ನು ಬಯಸಲಿಕ್ಕಿಲ್ಲ ಎಂದು ಅವನು ನೆನಸಿದ್ದಿರಬಹುದು. (ಯೂದ 7) ಅಷ್ಟುಮಾತ್ರವಲ್ಲ, ಆ ಯುವತಿಯರಿಗೆ ಪಟ್ಟಣದ ಪುರುಷರೊಂದಿಗೆ ನಿಶ್ಚಿತಾರ್ಥವಾಗಿತ್ತು, ಆದುದರಿಂದ ಅವನ ಭಾವೀ ಅಳಿಯಂದಿರ ಸಂಬಂಧಿಕರು, ಸ್ನೇಹಿತರು ಅಥವಾ ವ್ಯಾಪಾರಿ ಒಡನಾಡಿಗಳು ಆ ಸಮೂಹದಲ್ಲಿದ್ದಿರಬಹುದು. (ಆದಿಕಾಂಡ 19:14) ಈ ಸಂಬಂಧಗಳ ಕಾರಣ ಆ ಸಮೂಹದಲ್ಲಿದ್ದ ಕೆಲವು ಪುರುಷರು ತನ್ನ ಹೆಣ್ಣುಮಕ್ಕಳ ಪಕ್ಷವಹಿಸಿ ಮಾತಾಡಸಾಧ್ಯವಿದೆ ಎಂದು ಲೋಟನು ನಿರೀಕ್ಷಿಸಿದ್ದಿರಬಹುದು. ಹೀಗೆ ವಿಭಾಗಿತಗೊಳ್ಳುವ ಒಂದು ಸಮೂಹವು ಅಷ್ಟೇನೂ ಅಪಾಯಕಾರಿಯಾಗಿ ಇರಸಾಧ್ಯವಿರಲಿಲ್ಲ. *

17 ಲೋಟನ ಆಲೋಚನೆ ಹಾಗೂ ಹೇತುಗಳು ಏನೇ ಆಗಿರಲಿ ನಾವು ಈ ವಿಷಯದಲ್ಲಿ ದೃಢನಿಶ್ಚಿತರಾಗಿರಸಾಧ್ಯವಿದೆ: ಯೆಹೋವನು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾನಾದ್ದರಿಂದ, ಲೋಟನನ್ನು “ನೀತಿವಂತ”ನಾಗಿ ಪರಿಗಣಿಸಲು ಆತನಿಗೆ ಸಕಾರಣವಿದ್ದಿರಲೇಬೇಕು. ಮತ್ತು ಸೊದೋಮ್‌ ಪಟ್ಟಣದ ಉನ್ಮತ್ತ ಜನರ ಸಮೂಹದ ಕೃತ್ಯಗಳನ್ನು ನಾವು ಪರಿಗಣಿಸುವಾಗ, ಆ ದುಷ್ಟ ಪಟ್ಟಣದ ನಿವಾಸಿಗಳ ಮೇಲೆ ನ್ಯಾಯತೀರ್ಪನ್ನು ಬರಮಾಡಲು ಯೆಹೋವನಿಗೆ ಸಮಂಜಸವಾದ ಕಾರಣವಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿರಸಾಧ್ಯವಿದೆಯೋ?​—⁠ಆದಿಕಾಂಡ 19:23-25.

ಯೆಹೋವನು ಉಜ್ಜನನ್ನು ಏಕೆ ಸಾಯಿಸಿದನು?

18 ಕೆಲವರಿಗೆ ಗೊಂದಲಮಯವಾಗಿ ಕಂಡುಬರಬಹುದಾದ ಇನ್ನೊಂದು ವೃತ್ತಾಂತವು, ದಾವೀದನು ಮಂಜೂಷವನ್ನು ಯೆರೂಸಲೇಮಿಗೆ ತರುವ ಪ್ರಯತ್ನವನ್ನು ಮಾಡಿದ್ದರ ಕುರಿತಾಗಿದೆ. ಮಂಜೂಷವು ಒಂದು ಬಂಡಿಯಲ್ಲಿ ಇಡಲ್ಪಟ್ಟಿತ್ತು, ಉಜ್ಜನೂ ಅವನ ಸಹೋದರನೂ ಆ ಬಂಡಿಯನ್ನು ಹೊಡೆಯುತ್ತಿದ್ದರು. ಬೈಬಲ್‌ ತಿಳಿಸುವುದು: “ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು. ಆಗ ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಈ ತಪ್ಪಿನ ಸಲವಾಗಿ ಅವನನ್ನು ಹತಮಾಡಿದನು; ಅವನು ಅಲ್ಲೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.” ಕೆಲವು ತಿಂಗಳುಗಳ ಬಳಿಕ, ದೇವರ ನಿರ್ದೇಶನದ ಮೇರೆಗೆ ಕೆಹಾತ್ಯ ಲೇವಿಯರ ಭುಜಗಳ ಮೇಲೆ ಮಂಜೂಷವನ್ನು ರವಾನಿಸುವ ಎರಡನೆಯ ಪ್ರಯತ್ನವು ಸಫಲವಾಯಿತು. (2 ಸಮುವೇಲ 6:6, 7; ಅರಣ್ಯಕಾಂಡ 4:15; 7:9; 1 ಪೂರ್ವಕಾಲವೃತ್ತಾಂತ 15:1-14) ‘ಯೆಹೋವನು ಅಷ್ಟು ಕಠೋರವಾಗಿ ವರ್ತಿಸಿದ್ದೇಕೆ? ಉಜ್ಜನು ಮಂಜೂಷವನ್ನು ಕಾಪಾಡಲು ಪ್ರಯತ್ನಿಸುತ್ತಿದ್ದನಷ್ಟೆ’ ಎಂದು ಕೆಲವರು ಕೇಳಬಹುದು. ನಾವು ತಪ್ಪು ತೀರ್ಮಾನಕ್ಕೆ ಬರುವ ಮುಂಚೆ, ಕೆಲವು ಸಹಾಯಕರ ವಿವರಣೆಗಳನ್ನು ಗಮನಿಸುವುದು ಒಳ್ಳೇದು.

19 ಅನ್ಯಾಯದಿಂದ ಕ್ರಿಯೆಗೈಯುವುದು ಯೆಹೋವನಿಗೆ ಅಸಾಧ್ಯ ಎಂಬುದನ್ನು ನಾವು ನೆನಪಿನಲ್ಲಿಡುವ ಅಗತ್ಯವಿದೆ. (ಯೋಬ 34:10) ಆತನು ಹಾಗೆ ಮಾಡುವುದು ಪ್ರೀತಿರಹಿತವಾದದ್ದಾಗಿರುವುದು, ಮತ್ತು “ದೇವರು ಪ್ರೀತಿಸ್ವರೂಪಿ” ಎಂಬುದನ್ನು ನಮ್ಮ ಬೈಬಲ್‌ ಅಧ್ಯಯನದಿಂದ ನಾವು ತಿಳಿದುಕೊಂಡಿದ್ದೇವೆ. (1 ಯೋಹಾನ 4:⁠8) ಇದಕ್ಕೆ ಕೂಡಿಸಿ, “ನೀತಿನ್ಯಾಯಗಳು [ದೇವರ] ಸಿಂಹಾಸನದ ಅಸ್ತಿವಾರ” ಎಂದು ಶಾಸ್ತ್ರವಚನಗಳು ನಮಗೆ ಹೇಳುತ್ತವೆ. (ಕೀರ್ತನೆ 89:14) ಹೀಗಿರುವಾಗ, ಯೆಹೋವನು ಎಂದಾದರೂ ಹೇಗೆ ಅನ್ಯಾಯದಿಂದ ಕ್ರಿಯೆಗೈಯಸಾಧ್ಯವಿದೆ? ಒಂದುವೇಳೆ ಆತನು ಹಾಗೆ ಮಾಡುವಲ್ಲಿ, ತನ್ನ ಪರಮಾಧಿಕಾರದ ತಳಪಾಯವನ್ನೇ ಆತನು ಶಿಥಿಲಗೊಳಿಸಿದಂತಿರುವುದು.

20 ಉಜ್ಜನು ಧರ್ಮಶಾಸ್ತ್ರವನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಂಡಿದ್ದಿರಬೇಕು ಎಂಬುದನ್ನು ಮನಸ್ಸಿನಲ್ಲಿಡಿ. ಮಂಜೂಷವು ಯೆಹೋವನ ಸಾನ್ನಿಧ್ಯವನ್ನು ಪ್ರತಿನಿಧಿಸುತ್ತಿತ್ತು. ಅನಧಿಕೃತ ವ್ಯಕ್ತಿಗಳು ಅದನ್ನು ಮುಟ್ಟಬಾರದು ಎಂದು ಧರ್ಮಶಾಸ್ತ್ರವು ಆಜ್ಞೆಯನ್ನು ವಿಧಿಸಿತ್ತು; ಈ ಆಜ್ಞೆಯನ್ನು ಉಲ್ಲಂಘಿಸುವವರಿಗೆ ಮರಣದಂಡನೆಯು ವಿಧಿಸಲ್ಪಡುವುದು ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿತ್ತು. (ಅರಣ್ಯಕಾಂಡ 4:18-20; 7:89) ಆದುದರಿಂದ, ಆ ಪವಿತ್ರ ಪೆಟ್ಟಿಗೆಯನ್ನು ರವಾನಿಸುವ ಕೆಲಸವನ್ನು ಹಗುರವಾಗಿ ಪರಿಗಣಿಸಬಾರದಿತ್ತು. ಉಜ್ಜನು (ಒಬ್ಬ ಯಾಜಕನಾಗಿರಲಿಲ್ಲವಾದರೂ) ಲೇವಿಯರಲ್ಲಿ ಒಬ್ಬನಾಗಿದ್ದನು ಎಂಬುದು ಸುವ್ಯಕ್ತ, ಆದುದರಿಂದ ಅವನು ಧರ್ಮಶಾಸ್ತ್ರದೊಂದಿಗೆ ಪರಿಚಿತನಾಗಿದ್ದಿರಬೇಕು. ಅಷ್ಟುಮಾತ್ರವಲ್ಲದೆ, ವರ್ಷಗಳ ಮುಂಚೆ ಸುರಕ್ಷಿತತೆಗಾಗಿ ಮಂಜೂಷವನ್ನು ಅವನ ತಂದೆಯ ಮನೆಗೆ ಸಾಗಿಸಲಾಗಿತ್ತು. (1 ಸಮುವೇಲ 6:20-7:1) ಅದು ಸುಮಾರು 70 ವರ್ಷಗಳ ವರೆಗೆ ಅಂದರೆ ದಾವೀದನು ಅದನ್ನು ಸ್ಥಳಾಂತರಿಸುವ ಆಯ್ಕೆಯನ್ನು ಮಾಡುವ ವರೆಗೆ ಅಲ್ಲಿಯೇ ಇತ್ತು. ಆದುದರಿಂದ, ಮಂಜೂಷದ ಕುರಿತಾದ ನಿಯಮಗಳು ಉಜ್ಜನಿಗೆ ಬಾಲ್ಯದಿಂದಲೂ ಗೊತ್ತಿರುವುದು ಸಂಭವನೀಯ.

21 ಈ ಮುಂಚೆ ತಿಳಿಸಲ್ಪಟ್ಟಂತೆ, ಯೆಹೋವನು ಹೃದಯಗಳನ್ನು ಓದಬಲ್ಲನು. ಆತನ ವಾಕ್ಯವು ಉಜ್ಜನ ಕೃತ್ಯವನ್ನು ‘ತಪ್ಪು’ ಎಂದು ಕರೆಯುತ್ತದಾದ್ದರಿಂದ, ಆ ವೃತ್ತಾಂತದಲ್ಲಿ ನಿರ್ದಿಷ್ಟವಾಗಿ ಬಯಲುಪಡಿಸಲ್ಪಟ್ಟಿರದಂಥ ಯಾವುದೋ ಸ್ವಾರ್ಥಪರ ಹೇತುವನ್ನು ಯೆಹೋವನು ನೋಡಿದ್ದಿರಬೇಕು. ಉಜ್ಜನು ದುರಹಂಕಾರವಿದ್ದ ವ್ಯಕ್ತಿಯಾಗಿದ್ದನೋ, ಹದ್ದುಮೀರಿ ನಡೆಯುವ ಪ್ರವೃತ್ತಿಯವನಾಗಿದ್ದನೋ? (ಜ್ಞಾನೋಕ್ತಿ 11:2) ತನ್ನ ಕುಟುಂಬವು ಖಾಸಗಿಯಾಗಿ ಸಂರಕ್ಷಿಸುತ್ತಿದ್ದ ಮಂಜೂಷವನ್ನು ಸಾರ್ವಜನಿಕವಾಗಿ ಬಂಡಿಯಲ್ಲಿ ಕೊಂಡೊಯ್ಯುವುದು ಅವನಲ್ಲಿ ಸ್ವಪ್ರಾಮುಖ್ಯತೆಯ ಮನೋಭಾವವನ್ನು ಕೆರಳಿಸಿತೋ? (ಜ್ಞಾನೋಕ್ತಿ 8:13) ತನ್ನ ಸಾನ್ನಿಧ್ಯವನ್ನು ಸಂಕೇತಿಸುವಂಥ ಪವಿತ್ರ ಪೆಟ್ಟಿಗೆಯು ಬೀಳದಂತೆ ತಡೆಹಿಡಿಯಲು ಯೆಹೋವನ ಕೈ ಮೋಟುಗೈಯಾಗಿತ್ತೆಂದು ನೆನಸುವಷ್ಟರ ಮಟ್ಟಿಗೆ ಉಜ್ಜನು ನಂಬಿಕೆಯ ಕೊರತೆಯುಳ್ಳವನಾಗಿದ್ದನೋ? ವಿಷಯವು ಏನೇ ಆಗಿರಲಿ, ಯೆಹೋವನು ಸರಿಯಾದುದನ್ನೇ ಮಾಡಿದನು ಎಂಬ ಖಾತ್ರಿ ನಮಗಿರಸಾಧ್ಯವಿದೆ. ಆತನು ಉಜ್ಜನ ಮನಸ್ಸಿನಲ್ಲಿದ್ದ ಯಾವುದೋ ವಿಚಾರವನ್ನು ಕಂಡಿದ್ದಿರಬಹುದು ಮತ್ತು ಇದು ಆ ಕೂಡಲೆ ನ್ಯಾಯತೀರ್ಪನ್ನು ವಿಧಿಸುವಂತೆ ಆತನನ್ನು ಪ್ರಚೋದಿಸಿದ್ದಿರಬಹುದು.​—⁠ಜ್ಞಾನೋಕ್ತಿ 21:⁠2.

ದೃಢವಿಶ್ವಾಸಕ್ಕೆ ಬಲವಾದ ಆಧಾರ

22 ದೇವರ ವಾಕ್ಯವು ಕೆಲವೊಮ್ಮೆ ನಿರ್ದಿಷ್ಟ ವಿವರಗಳನ್ನು ಒಳಗೂಡಿಸದೆ ಇರುವುದರಲ್ಲಿ ಯೆಹೋವನ ಅನುಪಮ ವಿವೇಕವನ್ನು ಕಾಣಸಾಧ್ಯವಿದೆ. ಹೀಗೆ ಯೆಹೋವನು, ನಾವು ಆತನಲ್ಲಿ ಭರವಸೆಯಿಡುತ್ತೇವೆ ಎಂಬುದನ್ನು ತೋರಿಸಲು ನಮಗೆ ಅವಕಾಶವನ್ನು ನೀಡುತ್ತಾನೆ. ಈಗ ನಾವು ಪರಿಗಣಿಸಿರುವ ವಿಷಯಗಳಿಂದ, ಯೆಹೋವನ ನ್ಯಾಯತೀರ್ಪುಗಳನ್ನು ಅಂಗೀಕರಿಸಲು ನಮಗೆ ಬಲವಾದ ಕಾರಣಗಳಿವೆ ಎಂಬುದು ಸ್ಪಷ್ಟವಾಗಿಲ್ಲವೋ? ಹೌದು, ನಾವು ಯಥಾರ್ಥ ಹೃದಯದಿಂದ ಮತ್ತು ತೆರೆದ ಮನಸ್ಸಿನಿಂದ ದೇವರ ವಾಕ್ಯದ ಅಧ್ಯಯನಮಾಡುವಾಗ, ಯೆಹೋವನು ಮಾಡುವುದೆಲ್ಲವೂ ಯಾವಾಗಲೂ ನ್ಯಾಯಬದ್ಧವಾಗಿರುತ್ತದೆ ಮತ್ತು ಸರಿಯಾದುದಾಗಿರುತ್ತದೆ ಎಂಬ ವಿಷಯದಲ್ಲಿ ದೃಢನಿಶ್ಚಿತರಾಗಿರಲು ಆತನ ಕುರಿತು ಬೇಕಾದಷ್ಟು ವಿಷಯವನ್ನು ಕಲಿಯುತ್ತೇವೆ. ಆದುದರಿಂದ, ಯಾವುದಾದರೊಂದು ಬೈಬಲ್‌ ವೃತ್ತಾಂತವು ನಮ್ಮಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದ್ದು, ನಾವು ಆ ಕೂಡಲೆ ಅವುಗಳಿಗೆ ಸುಸ್ಪಷ್ಟವಾದ ಉತ್ತರಗಳನ್ನು ಕಂಡುಕೊಳ್ಳಸಾಧ್ಯವಿಲ್ಲದಿರುವಲ್ಲಿ, ಯೆಹೋವನು ಸರಿಯಾದುದನ್ನೇ ಮಾಡಿದನು ಎಂಬ ಪೂರ್ಣ ದೃಢವಿಶ್ವಾಸವನ್ನು ನಾವು ಹೊಂದಿರೋಣ.

23 ಯೆಹೋವನ ಭಾವೀ ಕೃತ್ಯಗಳ ವಿಷಯದಲ್ಲಿಯೂ ನಾವು ತದ್ರೀತಿಯ ದೃಢವಿಶ್ವಾಸವನ್ನು ಹೊಂದಿರಸಾಧ್ಯವಿದೆ. ಹೀಗೆ, ಸಮೀಪಿಸುತ್ತಿರುವ ಮಹಾ ಸಂಕಟದಲ್ಲಿ ಆತನು ನ್ಯಾಯತೀರ್ಪನ್ನು ವಿಧಿಸಲು ಬರುವಾಗ, ಆತನು ‘ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವುದಿಲ್ಲ’ ಎಂಬ ಆಶ್ವಾಸನೆ ನಮಗಿರಸಾಧ್ಯವಿದೆ. (ಆದಿಕಾಂಡ 18:23) ನೀತಿ ಹಾಗೂ ನ್ಯಾಯಕ್ಕಾಗಿರುವ ಆತನ ಪ್ರೀತಿಯು, ಹೀಗೆ ಮಾಡುವಂತೆ ಆತನನ್ನು ಎಂದೂ ಅನುಮತಿಸುವುದಿಲ್ಲ. ಬರಲಿರುವ ಹೊಸ ಲೋಕದಲ್ಲಿ ಸಾಧ್ಯವಿರುವ ಅತ್ಯುತ್ತಮ ವಿಧದಲ್ಲಿ ಆತನು ನಮ್ಮ ಎಲ್ಲಾ ಆವಶ್ಯಕತೆಗಳನ್ನು ಪೂರೈಸುವನು ಎಂಬ ಪೂರ್ಣ ಖಾತ್ರಿಯೂ ನಮಗಿರಸಾಧ್ಯವಿದೆ.​—⁠ಕೀರ್ತನೆ 145:⁠16.

[ಪಾದಟಿಪ್ಪಣಿಗಳು]

^ ಪ್ಯಾರ. 19 ಅಬ್ರಹಾಮನ ಭಯವು ಸೂಕ್ತವಾದದ್ದಾಗಿತ್ತು, ಏಕೆಂದರೆ ಫರೋಹನೊಬ್ಬನು ಸುಂದರಿಯಾದ ಸ್ತ್ರೀಯೊಬ್ಬಳನ್ನು ಹಿಡಿದು ಅವಳ ಗಂಡನನ್ನು ಕೊಲ್ಲಲಿಕ್ಕಾಗಿ ಶಸ್ತ್ರಸಜ್ಜಿತರಾದ ಸೈನಿಕರನ್ನು ಕಳುಹಿಸಿದ್ದರ ಕುರಿತಾಗಿ ಒಂದು ಪುರಾತನ ಪಪೈರಸ್‌ ತಿಳಿಸುತ್ತದೆ.

^ ಪ್ಯಾರ. 20 ಹೆಚ್ಚಿನ ಮಾಹಿತಿಗಾಗಿ 1979, ಡಿಸೆಂಬರ್‌ 1ರ ಕಾವಲಿನಬುರುಜು (ಇಂಗ್ಲಿಷ್‌)ವಿನ ಪುಟ 31ನ್ನು ನೋಡಿ.

ಜ್ಞಾಪಿಸಿಕೊಳ್ಳಬಲ್ಲಿರೋ?

• ಯಾವ ಕಾರಣಗಳಿಗಾಗಿ ನಾವು ಯೆಹೋವನ ನ್ಯಾಯತೀರ್ಪುಗಳನ್ನು ಅಂಗೀಕರಿಸಬೇಕು?

• ಜನರ ಗುಂಪಿಗೆ ತನ್ನ ಹೆಣ್ಣುಮಕ್ಕಳನ್ನು ಒಪ್ಪಿಸಲು ಲೋಟನು ಸಿದ್ಧನಾಗಿದ್ದ ವಿಷಯದಲ್ಲಿ ತಪ್ಪು ತೀರ್ಮಾನಕ್ಕೆ ಬರುವುದರಿಂದ ದೂರವಿರಲು ಯಾವುದು ನಮಗೆ ಸಹಾಯಮಾಡಬಲ್ಲದು?

• ಯೆಹೋವನು ಉಜ್ಜನನ್ನು ಏಕೆ ಸಾಯಿಸಿದನು ಎಂಬುದನ್ನು ಅರ್ಥಮಾಡಿಕೊಳ್ಳಲು ಯಾವ ವಾಸ್ತವಾಂಶಗಳು ನಮಗೆ ಸಹಾಯಮಾಡಬಲ್ಲವು?

• ಯೆಹೋವನ ಭಾವೀ ಕೃತ್ಯಗಳ ವಿಷಯದಲ್ಲಿ ನಮಗೆ ಯಾವ ದೃಢವಿಶ್ವಾಸವಿರಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ಯಾರಾದರೊಬ್ಬರು ನಿಮ್ಮ ಕುರಿತು ತಪ್ಪಾದ ತೀರ್ಮಾನಕ್ಕೆ ಬರುವಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ, ಮತ್ತು ಇಂಥ ಒಂದು ಅನುಭವದಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

2, 3. ಪ್ರತಿಯೊಂದು ಪ್ರಶ್ನೆಗೆ ಉತ್ತರ ಸಿಗುವಷ್ಟು ವಿವರಗಳನ್ನು ಒಳಗೂಡಿರದಂಥ ಬೈಬಲ್‌ ವೃತ್ತಾಂತಗಳಿಗೆ ಕೆಲವರು ಹೇಗೆ ಪ್ರತಿಕ್ರಿಯಿಸುತ್ತಾರೆ, ಆದರೆ ಯೆಹೋವನ ಕುರಿತು ಬೈಬಲ್‌ ನಮಗೆ ಏನು ಹೇಳುತ್ತದೆ?

4. ದೇವರ ಕೃತ್ಯಗಳನ್ನು ಪರಿಗಣಿಸುವಾಗ ನಾವೇಕೆ ವಿನಮ್ರ ಭಾವವನ್ನು ತೋರಿಸಬೇಕು? ದೃಷ್ಟಾಂತಿಸಿರಿ.

5. ಕೆಲವು ವ್ಯಕ್ತಿಗಳ ಮೇಲೆ ಬರಮಾಡಲ್ಪಟ್ಟ ದೇವರ ನ್ಯಾಯತೀರ್ಪುಗಳ ಕುರಿತಾದ ಬೈಬಲ್‌ ವೃತ್ತಾಂತಗಳನ್ನು ನಾವು ಓದುವಾಗ ನಾವೇನನ್ನು ಮರೆಯಬಾರದು?

6, 7. (ಎ) ತಾನು ವೈಯಕ್ತಿಕವಾಗಿ ಬಹಳಷ್ಟನ್ನು ತ್ಯಾಗಮಾಡಬೇಕಾಗಿ ಬರುವಾಗಲೂ ತನ್ನ ನ್ಯಾಯಬದ್ಧ ಹಾಗೂ ನೀತಿಭರಿತ ಮಟ್ಟಗಳಿಗೆ ಬಲವಾಗಿ ಅಂಟಿಕೊಳ್ಳುತ್ತೇನೆಂಬುದನ್ನು ಯೆಹೋವನು ಹೇಗೆ ತೋರಿಸಿದ್ದಾನೆ? (ಬಿ) ದೇವರು ಸರಿಯಾದ ರೀತಿಯಲ್ಲಿ ಮತ್ತು ನ್ಯಾಯಬದ್ಧವಾಗಿ ಕ್ರಿಯೆಗೈದನೋ ಎಂಬ ಸಂಶಯವನ್ನು ನಮ್ಮಲ್ಲಿ ಮೂಡಿಸಬಹುದಾದ ಒಂದು ವಿಷಯವನ್ನು ನಾವು ಬೈಬಲಿನಲ್ಲಿ ಓದುವುದಾದರೆ, ನಾವು ಏನನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು?

8. ಯೆಹೋವನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನ್ಯಾಯ ಮತ್ತು ನೀತಿಯ ಕೊರತೆಯಿರಸಾಧ್ಯವಿದೆ ಎಂದು ಮಾನವರು ಊಹಿಸಿಕೊಳ್ಳುವುದು ಅಸಂಬದ್ಧವಾದ ಸಂಗತಿಯಾಗಿದೆ ಏಕೆ?

9, 10. ಯೆಹೋವನು ತನ್ನ ಕೃತ್ಯಗಳ ಕುರಿತು ಮಾನವರಿಗೆ ವಿವರಿಸುವ ಅಥವಾ ಸಮರ್ಥಿಸುವ ಹಂಗಿಗೆ ಒಳಪಟ್ಟಿಲ್ಲವೇಕೆ?

11, 12. (ಎ) ಮಾನವ ರೂಪವನ್ನು ತಾಳಿದ ಇಬ್ಬರು ದೇವದೂತರನ್ನು ದೇವರು ಸೊದೋಮ್‌ ಪಟ್ಟಣಕ್ಕೆ ಕಳುಹಿಸಿದಾಗ ಏನು ಸಂಭವಿಸಿತೆಂಬುದನ್ನು ತಿಳಿಸಿರಿ. (ಬಿ) ಈ ವೃತ್ತಾಂತವು ಕೆಲವರ ಮನಸ್ಸಿನಲ್ಲಿ ಯಾವ ಪ್ರಶ್ನೆಗಳನ್ನು ಎಬ್ಬಿಸಿದೆ?

13, 14. (ಎ) ಲೋಟನ ಕೃತ್ಯದ ಕುರಿತಾದ ಬೈಬಲ್‌ ವೃತ್ತಾಂತದ ಬಗ್ಗೆ ಏನನ್ನು ಗಮನಿಸತಕ್ಕದ್ದು? (ಬಿ) ಲೋಟನು ಹೇಡಿತನದಿಂದ ವರ್ತಿಸಲಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ?

15. ಲೋಟನು ನಂಬಿಕೆಯಿಂದ ಕ್ರಿಯೆಗೈದಿರಬಹುದು ಎಂದು ಹೇಳಸಾಧ್ಯವಿದೆ ಏಕೆ?

16, 17. (ಎ) ಯಾವ ವಿಧದಲ್ಲಿ ಲೋಟನು ಸೊದೋಮ್‌ನ ಜನರನ್ನು ಆಘಾತಗೊಳಿಸಲು ಅಥವಾ ಗಲಿಬಿಲಿಗೊಳಿಸಲು ಪ್ರಯತ್ನಿಸುತ್ತಿದ್ದಿರಬಹುದು? (ಬಿ) ಲೋಟನ ಆಲೋಚನೆಯು ಏನೇ ಆಗಿರಲಿ, ನಾವು ಯಾವ ವಿಷಯದಲ್ಲಿ ದೃಢನಿಶ್ಚಿತರಾಗಿರಸಾಧ್ಯವಿದೆ?

18. (ಎ) ದಾವೀದನು ಮಂಜೂಷವನ್ನು ಯೆರೂಸಲೇಮಿಗೆ ತರಲು ಪ್ರಯತ್ನಿಸಿದಾಗ ಏನು ಸಂಭವಿಸಿತು? (ಬಿ) ಈ ವೃತ್ತಾಂತವು ಯಾವ ಪ್ರಶ್ನೆಯನ್ನು ಎಬ್ಬಿಸುತ್ತದೆ?

19. ಯೆಹೋವನು ಅನ್ಯಾಯದಿಂದ ಕ್ರಿಯೆಗೈಯಸಾಧ್ಯವಿಲ್ಲವೇಕೆ?

20. ಯಾವ ಕಾರಣಗಳಿಂದಾಗಿ ಉಜ್ಜನಿಗೆ ಮಂಜೂಷದ ಕುರಿತಾದ ನಿಬಂಧನೆಗಳು ಗೊತ್ತಿರುವ ಸಾಧ್ಯತೆಯಿದೆ?

21. ಉಜ್ಜನ ವಿಷಯದಲ್ಲಿ, ಯೆಹೋವನು ಹೃದಯದ ಹೇತುಗಳನ್ನು ಪರೀಕ್ಷಿಸುತ್ತಾನೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?

22. ದೇವರ ವಾಕ್ಯವು ಕೆಲವೊಮ್ಮೆ ನಿರ್ದಿಷ್ಟ ವಿವರಗಳನ್ನು ಒಳಗೂಡಿಸದೆ ಇರುವುದರಲ್ಲಿ ಯೆಹೋವನ ವಿವೇಕವನ್ನು ಹೇಗೆ ಕಾಣಸಾಧ್ಯವಿದೆ?

23. ಯೆಹೋವನ ಭಾವೀ ಕೃತ್ಯಗಳ ವಿಷಯದಲ್ಲಿ ನಾವು ಯಾವ ದೃಢವಿಶ್ವಾಸವನ್ನು ಹೊಂದಿರಸಾಧ್ಯವಿದೆ?