ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅದ್ಭುತಗಳು ವಾಸ್ತವಿಕವೊ ಅಥವಾ ಕಾಲ್ಪನಿಕವೊ?

ಅದ್ಭುತಗಳು ವಾಸ್ತವಿಕವೊ ಅಥವಾ ಕಾಲ್ಪನಿಕವೊ?

ಅದ್ಭುತಗಳು ವಾಸ್ತವಿಕವೊ ಅಥವಾ ಕಾಲ್ಪನಿಕವೊ?

ಒಂದು ಕಾರಿನ ಮೇಲೆ ಅಂಟಿಸಿದ್ದ ಭಿತ್ತಿಪತ್ರ ಒಬ್ಬ ವ್ಯಕ್ತಿಯ ಗಮನವನ್ನು ತಟ್ಟನೆ ಸೆಳೆಯಿತು. ಆ ಭಿತ್ತಿಪತ್ರದಲ್ಲಿ, “ಅದ್ಭುತಗಳು ಸಂಭವಿಸುತ್ತವೆ​—⁠ಬೇಕಾದರೆ ದೇವದೂತರನ್ನೇ ಕೇಳಿ ನೋಡಿ” ಎಂಬುದಾಗಿ ಬರೆದಿತ್ತು. ಅವನೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದರೂ ಇದರ ಅರ್ಥವೇನಾಗಿದೆಯೆಂಬುದು ಅವನಿಗೆ ತಿಳಿಯಲಿಲ್ಲ. ಚಾಲಕನು ಅದ್ಭುತಗಳನ್ನು ನಂಬುತ್ತಾನೆಂಬುದನ್ನು ಈ ಭಿತ್ತಿಪತ್ರವು ಅರ್ಥೈಸುತ್ತದೊ? ಅಥವಾ ಇದು, ಅದ್ಭುತಗಳು ಮತ್ತು ದೇವದೂತರ ಮೇಲಿನ ನಂಬಿಕೆಯ ಕೊರತೆಯನ್ನು ಸೂಚಿಸುವ ವ್ಯಂಗ್ಯವಾದ ಹೇಳಿಕೆಯೊ?

ಜರ್ಮನ್‌ ಬರಹಗಾರನಾದ ಮಾನ್‌ಫ್ರೇಟ್‌ ಬಾರ್ಟಲ್‌ ಏನು ಹೇಳಿದನೊ ಆ ವಿಚಾರವು ನಿಮ್ಮ ಆಸಕ್ತಿಯನ್ನು ಕೆರಳಿಸಬಹುದು. ಅವನಂದದ್ದು: “ಅದ್ಭುತ ಎಂಬ ಪದವು ಓದುಗರನ್ನು ಕೂಡಲೆ ವಿರುದ್ಧ ಅಭಿಪ್ರಾಯಗಳಿರುವ ಎರಡು ಗುಂಪುಗಳಾಗಿ ವಿಭಾಗಿಸುವ ಪದವಾಗಿದೆ.” ಯಾರು ಅದ್ಭುತಗಳಲ್ಲಿ ನಂಬಿಕೆಯಿಡುತ್ತಾರೋ ಅವರು, ಅವುಗಳು ಸಂಭವಿಸುತ್ತವೆ ಮತ್ತು ಬಹುಶಃ ಆಗಾಗ ಸಂಭವಿಸುತ್ತವೆ ಎಂದು ನಂಬುತ್ತಾರೆ. * ಉದಾಹರಣೆಗೆ, ಕಳೆದ ಕೆಲವು ವರುಷಗಳಿಂದ ಗ್ರೀಸ್‌ನಲ್ಲಿ, ತಿಂಗಳಿಗೊಮ್ಮೆ ಅದ್ಭುತಗಳು ಸಂಭವಿಸುತ್ತಿವೆ ಎಂದು ಅವುಗಳಲ್ಲಿ ನಂಬಿಕೆಯಿಡುವವರು ಹೇಳಿಕೊಳ್ಳುವುದಾಗಿ ವರದಿಸಲಾಗಿದೆ. ಇದು, ಗ್ರೀಕ್‌ ಆರ್ತಡಾಕ್ಸ್‌ ಚರ್ಚ್‌ನ ಬಿಷಪರು ಎಚ್ಚರಿಕೆಯ ಈ ಮಾತುಗಳನ್ನು ತಿಳಿಸುವಂತೆ ನಡೆಸಿತು: “ದೇವರು, ಮರಿಯಳು, ಮತ್ತು ಸಂತರನ್ನು ಮಾನವೀಕರಿಸುವ ಪ್ರವೃತ್ತಿ ವಿಶ್ವಾಸಿಗಳಿಗಿದೆ. ಆದರೆ ಅವರು ಈ ವಿಚಾರಗಳಲ್ಲಿ ಅತಿರೇಕಕ್ಕೆ ಹೋಗಬಾರದು.”

ಇತರ ಕೆಲವು ದೇಶಗಳಲ್ಲಿ ಅದ್ಭುತಗಳಲ್ಲಿನ ನಂಬಿಕೆಯು ಅಷ್ಟೇನು ವ್ಯಾಪಕವಾಗಿಲ್ಲ. 2002ರಲ್ಲಿ ಜರ್ಮನಿಯಲ್ಲಿ ಪ್ರಕಟಿಸಲ್ಪಟ್ಟ ಆಲ್ಲೆನ್ಸ್‌ಬಾಕ್‌ ಸಮೀಕ್ಷೆಗನುಸಾರ, ಜರ್ಮನಿಯ ನಿವಾಸಿಗಳಲ್ಲಿ 71 ಪ್ರತಿಶತ ಮಂದಿ ಅದ್ಭುತಗಳು ವಾಸ್ತವಿಕವಾಗಿವೆ ಎಂದು ನಂಬುವುದಿಲ್ಲ, ಬದಲಾಗಿ ಕಾಲ್ಪನಿಕವಾಗಿವೆ ಎಂದು ಪರಿಗಣಿಸುತ್ತಾರೆ. ಅಂದರೆ, ಮೂರರಲ್ಲಿ ಒಂದಂಶಕ್ಕಿಂತ ಕಡಿಮೆ ಮಂದಿ ಅದ್ಭುತಗಳಲ್ಲಿ ವಿಶ್ವಾಸವಿಟ್ಟಿರುತ್ತಾರೆ. ಇವರಲ್ಲಿ ಮೂರು ಸ್ತ್ರೀಯರು ತಾವು ಕನ್ಯೆ ಮರಿಯಳಿಂದ ಸಂದೇಶವನ್ನು ಪಡೆದುಕೊಂಡಿರುವುದಾಗಿ ಹೇಳಿಕೊಳ್ಳುತ್ತಾರೆ. ಇವರಿಗೆ ಮರಿಯಳು ದೇವದೂತರೊಂದಿಗೂ ಒಂದು ಪಾರಿವಾಳದೊಂದಿಗೂ ಕಾಣಿಸಿಕೊಂಡಳೆಂದು ತಿಳಿಸಲ್ಪಟ್ಟ ಕೆಲವು ತಿಂಗಳುಗಳ ಅನಂತರ, ವೆಸ್ಟ್‌ಫಾಲನ್‌ಪೋಸ್ಟ್‌ ಎಂಬ ಜರ್ಮನ್‌ ವಾರ್ತಾಪತ್ರಿಕೆಯು ವರದಿಸಿದ್ದು: “ಇಂದಿನ ವರೆಗೆ ಸುಮಾರು 50,000 ಮಂದಿ ಯಾತ್ರಿಕರು, ವಾಸಿಮಾಡುವಿಕೆಯನ್ನು ಬಯಸುವ ಜನರು ಮತ್ತು ಕುತೂಹಲಗೊಂಡ ಜನರು ಸಹ ಈ ಸ್ತ್ರೀಯರಿಂದ ನೋಡಲ್ಪಟ್ಟ ದರ್ಶನದಲ್ಲಿ ಗಾಢ ಆಸಕ್ತಿಯನ್ನು ತೋರಿಸಿದ್ದಾರೆ.” ಅಷ್ಟುಮಾತ್ರವಲ್ಲದೆ, ಮರಿಯಳು ಪುನಃ ಕಾಣಿಸಿಕೊಳ್ಳುವಲ್ಲಿ ಅವಳನ್ನು ನೋಡಬೇಕೆಂದು ಈ ಹಳ್ಳಿಗೆ 10,000 ಮಂದಿ ಬರಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ಇದೇ ರೀತಿಯಲ್ಲಿ, ಇಸವಿ 1858ರಲ್ಲಿ ಫ್ರಾನ್ಸಿನ ಲೂರ್ಡ್‌ನಲ್ಲೂ 1917ರಲ್ಲಿ ಪೋರ್ಚುಗಲ್‌ನ ಫಾತಿಮದಲ್ಲೂ ಕನ್ಯೆ ಮರಿಯಳು ಕಾಣಿಸಿಕೊಂಡಳೆಂದು ಹೇಳಲಾಗಿದೆ.

ಕ್ರೈಸ್ತೇತರ ಧರ್ಮಗಳ ಕುರಿತಾಗಿ ಏನು?

ಅದ್ಭುತಗಳಲ್ಲಿನ ನಂಬಿಕೆಯು ಹೆಚ್ಚುಕಡಿಮೆ ಎಲ್ಲಾ ಧರ್ಮಗಳಲ್ಲಿಯೂ ಕಂಡುಬರುತ್ತದೆ. ಬೌದ್ಧಮತ, ಕ್ರೈಸ್ತಮತ ಮತ್ತು ಇಸ್ಲಾಮ್‌ ಧರ್ಮದ ಸ್ಥಾಪಕರು ಅದ್ಭುತಗಳ ಕುರಿತು ಭಿನ್ನ ಭಿನ್ನವಾದ ದೃಷ್ಟಿಕೋನಗಳನ್ನು ಹೊಂದಿದ್ದರು ಎಂದು ಎನ್‌ಸೈಕ್ಲಪೀಡೀಯ ಆಫ್‌ ರಿಲಿಜನ್‌ ವಿವರಿಸುತ್ತದೆ, ಆದರೆ ಅದು ತಿಳಿಸುವುದು: “ಈ ಧರ್ಮಗಳ ತರುವಾಯದ ಇತಿಹಾಸವು ತೋರಿಸುವಂತೆ, ಅದ್ಭುತಗಳು ಮತ್ತು ಅದ್ಭುತ ಕಥೆಗಳು ಮಾನವನ ಧಾರ್ಮಿಕ ಜೀವನದ ಒಂದು ಅವಿಭಾಜ್ಯ ಅಂಗವಾಗಿತ್ತು.” ಈ ಪರಾಮರ್ಶೆ ಕೃತಿಯು, “ಬುದ್ಧನು ತಾನೇ ಕೆಲವೊಮ್ಮೆ ಅದ್ಭುತಗಳನ್ನು ಮಾಡುವಂತೆ ನಡೆಸಲ್ಪಟ್ಟನು” ಎಂದು ಹೇಳುತ್ತದೆ. ಅನಂತರ “ಬೌದ್ಧಮತವು ಚೀನ ದೇಶಕ್ಕೆ ಸ್ಥಳಾಂತರವಾದಾಗ, ಅದರ ಮಿಶನೆರಿಗಳು ಅನೇಕವೇಳೆ ತಮ್ಮ ಅದ್ಭುತ ಶಕ್ತಿಗಳ ಪ್ರದರ್ಶನವನ್ನು ಮಾಡಿದರು.”

ಅಂಥ ಅನೇಕ ಸಂಭಾವ್ಯ ಅದ್ಭುತಗಳನ್ನು ಸೂಚಿಸುತ್ತಾ ಎನ್‌ಸೈಕ್ಲಪೀಡೀಯ ಹೀಗೆ ಮುಕ್ತಾಯಗೊಳಿಸುತ್ತದೆ: “ಧಾರ್ಮಿಕ ಜೀವನಚರಿತ್ರೆಕಾರರಿಂದ ತಿಳಿಸಲ್ಪಟ್ಟಿರುವ ಅದ್ಭುತ ಕಥೆಗಳಲ್ಲಿ ಪ್ರತಿಯೊಂದನ್ನು ಒಬ್ಬ ವ್ಯಕ್ತಿಯು ಸ್ವೀಕರಿಸಲು ತಯಾರಿರಲಿಕ್ಕಿಲ್ಲ, ಆದರೆ ಅದ್ಭುತ ಶಕ್ತಿಗಳನ್ನು ತನ್ನ ಹುರುಪುಳ್ಳ ಅನುಯಾಯಿಗಳಿಗೆ ಕೊಡಶಕ್ತನಾಗಿದ್ದ ಬುದ್ಧನನ್ನು ಘನಪಡಿಸುವ ಒಳ್ಳೇ ಉದ್ದೇಶದಿಂದ ಇವುಗಳನ್ನು ಕಲ್ಪಿಸಲಾಗಿತ್ತು.” ಇದೇ ಪ್ರಮಾಣಗ್ರಂಥವು ಇಸ್ಲಾಮ್‌ ಧರ್ಮದ ಬಗ್ಗೆ ಹೇಳುವುದು: “ಇಸ್ಲಾಮ್‌ ಧರ್ಮದ ಅಧಿಕಾಂಶ ಜನರು ಅದ್ಭುತಗಳಲ್ಲಿ ನಂಬಿಕೆ ಇಡುವುದನ್ನು ಮುಂದುವರಿಸಿದ್ದಾರೆ. ಸಾಂಪ್ರದಾಯಿಕ ಪುಸ್ತಕಗಳಲ್ಲಿ (ಹಡೀತ್‌ಗಳಲ್ಲಿ) ಅನೇಕ ಸಂದರ್ಭಗಳಲ್ಲಿ ಮಹಮ್ಮದ್‌ನನ್ನು ಸಾರ್ವಜನಿಕ ಸ್ಥಳಗಳಲ್ಲಿ ಅದ್ಭುತಗಳನ್ನು ಮಾಡುತ್ತಿರುವವನಾಗಿ ಚಿತ್ರಿಸಲಾಗಿದೆ. . . . ಸಂತರ ಮರಣಾನಂತರ ಅವರು ತಮ್ಮ ಸ್ವಂತ ಸಮಾಧಿಯಿಂದ ನಂಬಿಗಸ್ತರ ಪರವಾಗಿ ಅದ್ಭುತಗಳನ್ನು ಮಾಡುತ್ತಾರೆಂಬುದಾಗಿ ನಂಬಲಾಗಿದೆ ಮತ್ತು ತಮಗೆ ಸಹಾಯಮಾಡುವಂತೆ ಜನರು ಅವರನ್ನು ಕೇಳಿಕೊಳ್ಳುತ್ತಾರೆ.”

ಕ್ರೈಸ್ತತ್ವದಲ್ಲಿ ನಡೆಯುವ ಅದ್ಭುತಗಳ ಕುರಿತಾಗಿ ಏನು?

ಕ್ರೈಸ್ತತ್ವವನ್ನು ಸ್ವೀಕರಿಸಿರುವ ಅನೇಕರು ತಮ್ಮ ಅಭಿಪ್ರಾಯಗಳಲ್ಲಿ ವಿಭಜಿತರಾಗಿದ್ದಾರೆ. ಯೇಸು ಕ್ರಿಸ್ತನಿಂದ ಅಥವಾ ಕ್ರೈಸ್ತಪೂರ್ವದಲ್ಲಿದ್ದ ದೇವರ ಸೇವಕರಿಂದ ನಡೆಸಲ್ಪಟ್ಟ ಅದ್ಭುತಗಳ ಕುರಿತಾಗಿರುವ ಬೈಬಲ್‌ ದಾಖಲೆಯನ್ನು ಕೆಲವರು ವಾಸ್ತವಿಕವಾದದ್ದೆಂದು ಸ್ವೀಕರಿಸುತ್ತಾರೆ. ಆದರೆ, ಅನೇಕರು ಪ್ರಾಟೆಸ್ಟಂಟ್‌ ಸುಧಾರಕ ಮಾರ್ಟಿನ್‌ ಲೂಥರ್‌ನೊಂದಿಗೆ ಸಹಮತದಲ್ಲಿದ್ದಾರೆ. ಅವನ ಕುರಿತು ದಿ ಎನ್‌ಸೈಕ್ಲಪೀಡೀಯ ಆಫ್‌ ರಿಲಿಜನ್‌ ತಿಳಿಸುವುದು: “ಅದ್ಭುತಗಳ ವರುಷಗಳು ದಾಟಿಹೋದವು. ಇನ್ನೆಂದೂ ಅವುಗಳು ಸಂಭವಿಸುವವೆಂದು ಎದುರುನೋಡಬಾರದು ಎಂಬುದಾಗಿ ಲೂಥರ್‌ ಮತ್ತು ಕ್ಯಾಲ್ವಿನ್‌ ಇಬ್ಬರೂ ಬರೆದರು.” ಕ್ಯಾಥೊಲಿಕ್‌ ಧರ್ಮವು ಅದ್ಭುತಗಳು “ಹೇಗೆ ಸಂಭವಿಸುತ್ತವೆ ಎಂಬುದನ್ನು ವಿವರಿಸಲು ಪ್ರಯತ್ನಿಸದೆಯೇ” ಅದರಲ್ಲಿನ ತನ್ನ ನಂಬಿಕೆಯನ್ನು ಮುಂದುವರಿಸಿತು ಎಂದು ಈ ಪರಾಮರ್ಶೆ ಕೃತಿಯು ಹೇಳುತ್ತದೆ. ಹಾಗಿದ್ದರೂ, “ಕ್ರೈಸ್ತತ್ವವನ್ನು ಅನುಕರಿಸುವುದು ಮುಖ್ಯವಾಗಿ ನೈತಿಕ ವಿಷಯಕ್ಕೆ ಸಂಬಂಧಿಸಿದಂಥದ್ದಾಗಿದೆ ಮತ್ತು ದೇವರಾಗಲಿ ಆಧ್ಯಾತ್ಮಿಕ ಜಗತ್ತಾಗಲಿ ಮಾನವ ಜೀವಿತವನ್ನು ಯಾವುದೇ ರೀತಿಯಲ್ಲಿ ಪ್ರಭಾವಿಸಶಕ್ತವಾಗಿಲ್ಲ ಎಂದು ತಿಳಿವಳಿಕಸ್ಥ ಪ್ರಾಟೆಸ್ಟಂಟ್‌ ಸಮುದಾಯದವರು ನಂಬತೊಡಗಿದರು.”

ಕೆಲವು ಪಾದ್ರಿಗಳನ್ನು ಸೇರಿಸಿ ಕ್ರೈಸ್ತರೆಂದು ಹೇಳಿಕೊಳ್ಳುವ ಇತರರು, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಅದ್ಭುತಗಳು ನಿಜವಾದವುಗಳೊ ಎಂದು ಸಂಶಯಿಸುತ್ತಾರೆ. ಉದಾಹರಣೆಗೆ, ವಿಮೋಚನಕಾಂಡ 3:​1-5ರಲ್ಲಿ ದಾಖಲಿಸಲ್ಪಟ್ಟಿರುವ ಉರಿಯುತ್ತಿರುವ ಪೊದೆಯ ಕುರಿತಾದ ವೃತ್ತಾಂತವನ್ನು ತೆಗೆದುಕೊಳ್ಳಿ. ಇದೊಂದು ನಿಜವಾದ ಅದ್ಭುತ ಘಟನೆಯೆಂದು ಅನೇಕ ಜರ್ಮನ್‌ ದೇವತಾಶಾಸ್ತ್ರಜ್ಞರು ಒಪ್ಪುವುದಿಲ್ಲ ಎಂದು ಬೈಬಲ್‌ ನಿಜವಾಗಿಯು ಏನು ಹೇಳುತ್ತದೆ (ಇಂಗ್ಲಿಷ್‌) ಎಂಬ ಪುಸ್ತಕವು ವಿವರಿಸುತ್ತದೆ. ಇದಕ್ಕೆ ಬದಲಾಗಿ ಅವರದನ್ನು, “ಮೋಶೆಯ ಆಂತರಿಕ ಹೋರಾಟ ಅಂದರೆ ಅವನ ಮನಸ್ಸಾಕ್ಷಿಗೆ ಆಗುತ್ತಿರುವ ಚುಚ್ಚುವ ಮತ್ತು ತೀಕ್ಷ್ಣ ನೋವಿನ ಅನಿಸಿಕೆ” ಎಂಬುದಾಗಿ ವಿವರಿಸುತ್ತಾರೆ. ಪುಸ್ತಕವು ಕೂಡಿಸುವುದು: “ಜ್ವಾಲೆಗಳನ್ನು, ದೈವಿಕ ಸಾನ್ನಿಧ್ಯವೆಂಬ ಸೂರ್ಯಕಿರಣದಲ್ಲಿ ಕೂಡಲೆ ಅರಳುವ ಹೂವುಗಳು ಎಂಬುದಾಗಿಯೂ ವೀಕ್ಷಿಸಬಹುದು [ಅರ್ಥಮಾಡಿಕೊಳ್ಳಬಹುದು].”

ಈ ಎಲ್ಲಾ ವಿವರಣೆಗಳು ನಿಮ್ಮನ್ನು ನಿಜವಾಗಿಯೂ ಸಂತೃಪ್ತಿಗೊಳಿಸುವುದಿಲ್ಲ ಎಂಬುದನ್ನು ನೀವು ಕಂಡುಕೊಳ್ಳಬಹುದು. ಹಾಗಾದರೆ, ನೀವು ಏನನ್ನು ನಂಬಬೇಕು? ಅದ್ಭುತಗಳು ಎಂದಾದರೂ ಸಂಭವಿಸಿವೆ ಎಂಬುದನ್ನು ನಂಬುವುದು ಉಚಿತವೊ? ಆಧುನಿಕ ದಿನದ ಅದ್ಭುತಗಳ ಕುರಿತಾಗಿ ಏನು? ದೇವದೂತರನ್ನು ಕೇಳಿ ತಿಳಿದುಕೊಳ್ಳಲು ನಾವು ಅಶಕ್ತರಾಗಿರುವ ಕಾರಣ ನಾವು ಯಾರನ್ನು ಕೇಳಬಲ್ಲೆವು?

ಬೈಬಲಿನ ದೃಷ್ಟಿಕೋನ

ಗತಕಾಲಗಳಲ್ಲಿ, ಮಾನವನ ದೃಷ್ಟಿಯಲ್ಲಿ ಅಸಾಧ್ಯವಾದ ಕೃತ್ಯಗಳನ್ನು ಕೆಲವೊಮ್ಮೆ ದೇವರು ಮಾಡಿದ್ದಾನೆ ಎಂಬುದಾಗಿ ಬೈಬಲ್‌ ವರದಿಸುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯಸಾಧ್ಯವಿಲ್ಲ. ಆತನ ಕುರಿತಾಗಿ ನಾವು ಓದುವುದು: ‘ನೀನು ಮಹತ್ಕಾರ್ಯಗಳನ್ನೂ ಉತ್ಪಾತಗಳನ್ನೂ [“ಅದ್ಭುತಗಳನ್ನೂ,” NW] ನಡಿಸಿ ಭುಜಪರಾಕ್ರಮವನ್ನು ತೋರಿಸಿ ಶಿಕ್ಷಾಹಸ್ತವನ್ನು ಎತ್ತಿ ಮಹಾ ಭೀತಿಯನ್ನುಂಟುಮಾಡಿ ನಿನ್ನ ಜನರಾದ ಇಸ್ರಾಯೇಲ್ಯರನ್ನು ಐಗುಪ್ತದೇಶದೊಳಗಿಂದ ಬರಮಾಡಿದೆ.’ (ಯೆರೆಮೀಯ 32:21) ಚೊಚ್ಚಲ ಗಂಡುಮಕ್ಕಳ ಮರಣವನ್ನೂ ಸೇರಿಸಿ ದೈವಿಕವಾಗಿ ಕಳುಹಿಸಲ್ಪಟ್ಟಂಥ ಹತ್ತು ಬಾಧೆಗಳ ಮೂಲಕ ಆಗಿನ ಅತಿ ಪರಾಕ್ರಮಶಾಲಿ ಜನಾಂಗದ ಸೊಕ್ಕಡಗಿಸಲ್ಪಟ್ಟ ವಿಷಯದ ಕುರಿತು ಆಲೋಚಿಸಿರಿ. ಅವು ನಿಜವಾಗಿಯೂ ಅದ್ಭುತಗಳೇ!​—⁠ವಿಮೋಚನಕಾಂಡ, 7ರಿಂದ 14ನೇ ಅಧ್ಯಾಯಗಳು.

ಶತಮಾನಗಳ ಅನಂತರ, ನಾಲ್ಕು ಸುವಾರ್ತಾ ಪುಸ್ತಕಗಳ ಬರಹಗಾರರು ಯೇಸು ನಡಿಸಿದ ಸುಮಾರು 35 ಅದ್ಭುತಗಳನ್ನು ದಾಖಲಿಸಿದ್ದಾರೆ. ವಾಸ್ತವದಲ್ಲಿ, ಅವರ ಮಾತುಗಳಿಗನುಸಾರ ಅವರು ದಾಖಲಿಸಿರುವ ಅದ್ಭುತಗಳಿಗಿಂತಲೂ ಇನ್ನಷ್ಟು ಹೆಚ್ಚಿನ ಅದ್ಭುತಗಳನ್ನು ಯೇಸು ನಡೆಸಿದ್ದಾನೆ. ದಾಖಲಿಸಲ್ಪಟ್ಟಿರುವ ಈ ಎಲ್ಲಾ ವರದಿಗಳು ವಾಸ್ತವಿಕವೊ ಅಥವಾ ಕಾಲ್ಪನಿಕವೊ? *​—⁠ಮತ್ತಾಯ 9:35; ಲೂಕ 9:11.

ಬೈಬಲ್‌ ವಾದಿಸುವಂತೆ ಒಂದುವೇಳೆ ಅದು ದೇವರ ಸತ್ಯ ವಾಕ್ಯವಾಗಿರುವಲ್ಲಿ, ಅದರಲ್ಲಿ ತಿಳಿಸಲ್ಪಟ್ಟಿರುವ ಅದ್ಭುತಗಳನ್ನು ನೀವು ನಂಬಲು ನಿಮಗೆ ಸಕಾರಣವಿದೆ. ಅದ್ಭುತಕರವಾದ ವಾಸಿಮಾಡುವಿಕೆ, ಪುನರುತ್ಥಾನ, ಮತ್ತು ಇನ್ನಿತರ ಸಂಗತಿಗಳು ಗತಕಾಲಗಳಲ್ಲಿ ಸಂಭವಿಸಿದವು ಎಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. ಅದೇ ಸಮಯದಲ್ಲಿ, ಅಂಥ ಅದ್ಭುತಗಳು ಈಗ ಸಂಭವಿಸುವುದಿಲ್ಲ ಎಂಬುದನ್ನು ಸಹ ಬೈಬಲ್‌ ಅಷ್ಟೇ ಸ್ಪಷ್ಟವಾಗಿ ತಿಳಿಸುತ್ತದೆ. (“ಗತಕಾಲಗಳಲ್ಲಿ ಸಂಭವಿಸಿದಂತೆ ಈಗ ಅದ್ಭುತಗಳು ಸಂಭವಿಸದಿರಲು ಕಾರಣ” ಎಂಬ ನಾಲ್ಕನೇ ಪುಟದಲ್ಲಿರುವ ಚೌಕವನ್ನು ನೋಡಿ.) ಹಾಗಾದರೆ, ಬೈಬಲನ್ನು ಸತ್ಯವೆಂದು ನಂಬುವವರು ಆಧುನಿಕ ದಿನಗಳಲ್ಲಿ ಸಂಭವಿಸುವ ಅದ್ಭುತಗಳನ್ನು ನಂಬುವುದಿಲ್ಲ ಎಂದು ಇದರ ಅರ್ಥವೊ? ಉತ್ತರಕ್ಕಾಗಿ ಮುಂದಿನ ಲೇಖನವನ್ನು ನೋಡಿರಿ.

[ಪಾದಟಿಪ್ಪಣಿಗಳು]

^ ಪ್ಯಾರ. 3 ಈ ಲೇಖನದಲ್ಲಿ ಉಪಯೋಗಿಸಲಾಗಿರುವ “ಅದ್ಭುತಗಳು” ಎಂಬ ಪದವನ್ನು ಒಂದು ಬೈಬಲ್‌ ನಿಘಂಟು ಹೀಗೆ ಅರ್ಥನಿರೂಪಿಸುತ್ತದೆ: “ಭೌತಿಕ ಲೋಕದಲ್ಲಿ, ಎಲ್ಲಾ ಜ್ಞಾತ ಮತ್ತು ನೈಸರ್ಗಿಕ ಶಕ್ತಿಗಳನ್ನು ಮೀರಿ ನಡೆಯುವ ಕಾರ್ಯ. ಹಾಗೂ ಈ ಕಾರಣದಿಂದ ಇವು ಅತಿಮಾನುಷ ಶಕ್ತಿಯಿಂದ ಮಾಡಲ್ಪಡುವ ವಿಷಯಗಳಾಗಿವೆ ಎಂದು ತಿಳಿಸಲಾಗಿದೆ.”

^ ಪ್ಯಾರ. 14 ಬೈಬಲ್‌ ಭರವಸೆಗೆ ಯೋಗ್ಯವಾಗಿದೆ ಎಂಬುದನ್ನು ರುಜುಪಡಿಸುವ ಪುರಾವೆಗಳನ್ನು ನೀವು ಪರಿಗಣಿಸಸಾಧ್ಯವಿದೆ. ಅಂಥ ಪುರಾವೆಗಳನ್ನು, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಬೈಬಲ್‌​—⁠ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ನೀವು ಕಂಡುಕೊಳ್ಳಬಲ್ಲಿರಿ.

[ಪುಟ 4ರಲ್ಲಿರುವ ಚೌಕ]

ಗತಕಾಲಗಳಲ್ಲಿ ಸಂಭವಿಸಿದಂತೆ ಈಗ ಅದ್ಭುತಗಳು ಸಂಭವಿಸದಿರಲು ಕಾರಣ

ಬೈಬಲಿನಲ್ಲಿ ವಿವಿಧ ರೀತಿಯ ಅದ್ಭುತಗಳ ಕುರಿತು ಉಲ್ಲೇಖಿಸಲಾಗಿದೆ. (ವಿಮೋಚನಕಾಂಡ 7:19-21; 1 ಅರಸುಗಳು 17:1-7; 18:22-38; 2 ಅರಸುಗಳು 5:1-14; ಮತ್ತಾಯ 8:24-27; ಲೂಕ 17:11-19; ಯೋಹಾನ 2:1-11; 9:1-7) ಈ ಅದ್ಭುತಗಳಲ್ಲಿ ಕೆಲವು ಯೇಸುವೇ ಮೆಸ್ಸೀಯನು ಎಂಬುದನ್ನು ಗುರುತಿಸಲು ಸಹಾಯಮಾಡಿದವು ಮತ್ತು ಅವನಿಗೆ ದೇವರ ಬೆಂಬಲವಿತ್ತೆಂಬುದನ್ನು ಸಹ ರುಜುಪಡಿಸಿದವು. ತಮಗೆ ಅದ್ಭುತಕರವಾದ ವರಗಳಿವೆ ಎಂಬುದನ್ನು ಯೇಸುವಿನ ಆರಂಭದ ಹಿಂಬಾಲಕರು ತೋರಿಸಿಕೊಟ್ಟರು. ಉದಾಹರಣೆಗೆ, ಅವರು ವಿವಿಧ ಭಾಷೆಗಳಲ್ಲಿ ಮಾತಾಡಿದರು ಮತ್ತು ಪ್ರೇರಿತ ಮಾತುಗಳನ್ನು ಗ್ರಹಿಸಿಕೊಂಡರು. (ಅ. ಕೃತ್ಯಗಳು 2:5-12; 1 ಕೊರಿಂಥ 12:28-31) ಕ್ರೈಸ್ತ ಸಭೆಯು ಆರಂಭದ ಹಂತದಲ್ಲಿದ್ದಾಗ ಇಂಥ ಅದ್ಭುತಕರವಾದ ವರಗಳು ಉಪಯುಕ್ತವಾಗಿದ್ದವು. ಏಕೆ?

ಒಂದು ಕಾರಣವು, ಶಾಸ್ತ್ರವಚನಗಳ ಪ್ರತಿಗಳು ಆಗ ಕಡಿಮೆಯಾಗಿದ್ದವು. ಸಾಮಾನ್ಯವಾಗಿ, ಹಣವಂತರು ಮಾತ್ರ ಯಾವುದೇ ರೀತಿಯ ಸುರುಳಿ ಅಥವಾ ಪುಸ್ತಕಗಳನ್ನು ಹೊಂದಿದ್ದರು. ಕ್ರೈಸ್ತೇತರ ದೇಶಗಳಲ್ಲಿ, ಬೈಬಲಿನ ಅಥವಾ ಅದರ ಗ್ರಂಥಕರ್ತನಾದ ಯೆಹೋವನ ಕುರಿತಾಗಿ ಯಾವುದೇ ಜ್ಞಾನವಿರಲಿಲ್ಲ. ಕ್ರೈಸ್ತ ಬೋಧನೆಯನ್ನು ಬಾಯಿಮಾತಿನಿಂದ ತಿಳಿಸಬೇಕಿತ್ತು. ಆದುದರಿಂದ, ಕ್ರೈಸ್ತ ಸಭೆಯನ್ನು ದೇವರು ಉಪಯೋಗಿಸುತ್ತಿದ್ದಾನೆ ಎಂಬುದನ್ನು ತೋರಿಸಿಕೊಡಲು ಅದ್ಭುತಕರವಾದ ವರಗಳು ಉಪಯುಕ್ತವಾಗಿದ್ದವು.

ಆದರೆ, ಒಮ್ಮೆ ಈ ವರಗಳ ಅಗತ್ಯ ಇನ್ನಿಲ್ಲವೆಂದು ತೋರಿದಾಗ ಅದು ಇಲ್ಲದೆ ಹೋಗಲಿದೆ ಎಂಬುದನ್ನು ಪೌಲನು ವಿವರಿಸಿದನು. “ಪ್ರವಾದನೆಗಳಾದರೋ ಇಲ್ಲದಂತಾಗುವವು; ವಾಣಿಗಳೋ ನಿಂತುಹೋಗುವವು; ವಿದ್ಯೆಯೋ ಇಲ್ಲದಂತಾಗುವದು. ಅಪೂರ್ಣವಾಗಿ ತಿಳುಕೊಳ್ಳುತ್ತೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ. ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವದು.”​—⁠1 ಕೊರಿಂಥ 13:8-10.

ಇಂದು ಜನರು ಬೈಬಲನ್ನು ಪಡೆದುಕೊಳ್ಳಬಲ್ಲರು. ಅಷ್ಟುಮಾತ್ರವಲ್ಲದೆ, ಕಾನ್‌ಕಾರ್ಡೆನ್ಸ್‌ಗಳು ಮತ್ತು ಎನ್‌ಸೈಕ್ಲಪೀಡೀಯಗಳು ಇವೆ. ಇದಕ್ಕೆ ಕೂಡಿಕೆಯಾಗಿ, ತರಬೇತಿಹೊಂದಿದ 60 ಲಕ್ಷಕ್ಕಿಂತಲೂ ಹೆಚ್ಚಿನ ಕ್ರೈಸ್ತರು ಬೈಬಲಿನ ಮೂಲಕ ದೈವಿಕ ಜ್ಞಾನವನ್ನು ಪಡೆದುಕೊಳ್ಳುವಂತೆ ಇತರರಿಗೆ ಸಹಾಯಮಾಡುತ್ತಿದ್ದಾರೆ. ಆದುದರಿಂದ, ಯೇಸು ಕ್ರಿಸ್ತನು ದೇವರಿಂದ ನೇಮಿಸಲ್ಪಟ್ಟ ರಕ್ಷಕನು ಎಂಬುದನ್ನು ಅಥವಾ ಯೆಹೋವನು ತನ್ನ ಸೇವಕರನ್ನು ಬೆಂಬಲಿಸುತ್ತಿದ್ದಾನೆ ಎಂಬುದನ್ನು ರುಜುಪಡಿಸಲು ಇಂದು ಅದ್ಭುತಗಳ ಅಗತ್ಯವಿರುವುದಿಲ್ಲ.