ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತರೇ, ನೀವು ಯಾರಾಗಿದ್ದೀರೊ ಅದಕ್ಕಾಗಿ ಹೆಮ್ಮೆಪಡಿರಿ!

ಕ್ರೈಸ್ತರೇ, ನೀವು ಯಾರಾಗಿದ್ದೀರೊ ಅದಕ್ಕಾಗಿ ಹೆಮ್ಮೆಪಡಿರಿ!

ಕ್ರೈಸ್ತರೇ, ನೀವು ಯಾರಾಗಿದ್ದೀರೊ ಅದಕ್ಕಾಗಿ ಹೆಮ್ಮೆಪಡಿರಿ!

“ಹೆಚ್ಚಳಪಡುವವನು ಕರ್ತ[“ಯೆಹೋವ,” Nw]ನಲ್ಲಿಯೇ ಹೆಚ್ಚಳಪಡಲಿ.”​—⁠1 ಕೊರಿಂಥ 1:⁠31.

“ನಿರಾಸಕ್ತಾಸ್ತಿಕವಾದ.” ಈ ಪದವನ್ನು, ಧಾರ್ಮಿಕ ಸ್ಥಿತಿಗತಿಯ ಕುರಿತಾದ ವ್ಯಾಖ್ಯಾನಗಾರರೊಬ್ಬರು, ಅನೇಕ ಜನರಿಗೆ ತಮ್ಮ ಧರ್ಮದ ಕಡೆಗಿರುವ ಮನೋಭಾವವನ್ನು ವರ್ಣಿಸಲಿಕ್ಕಾಗಿ ಉಪಯೋಗಿಸಿದರು. ಅವರು ವಿವರಿಸಿದ್ದು: “ಆಧುನಿಕ ಧರ್ಮಗಳಲ್ಲಿನ ಅತ್ಯಂತ ಮಹತ್ತರವಾದ ವಿಕಸನವು ಒಂದು ಧರ್ಮವೇ ಅಲ್ಲ. ಅದೊಂದು ಮನೋಭಾವವಾಗಿದ್ದು, ಅದನ್ನು ‘ನಿರಾಸಕ್ತಾಸ್ತಿಕವಾದ’ ಎಂದು ಕರೆಯುವುದೇ ಸೂಕ್ತ.” ನಿರಾಸಕ್ತಾಸ್ತಿಕವಾದವು, “ಒಬ್ಬನ ಸ್ವಂತ ಧರ್ಮದ ಬಗ್ಗೆ ವಿಶೇಷ ಚಿಂತೆವಹಿಸಲು ಮನಸ್ಸಿಲ್ಲದಿರುವಿಕೆ” ಆಗಿದೆ ಎಂದು ಅವರು ಸವಿಸ್ತಾರವಾಗಿ ಅರ್ಥನಿರೂಪಿಸಿದರು. ಅನೇಕ ಜನರು “ದೇವರಲ್ಲಿ ನಂಬುತ್ತಾರೆ . . . ; ಆದರೆ ಆತನ ಬಗ್ಗೆ ಅಷ್ಟೇನೂ ಯೋಚಿಸುವುದಿಲ್ಲ” ಎಂದು ಅವರು ಹೇಳಿದರು.

2 ನಿರಾಸಕ್ತಿಯ ಕಡೆಗಿನ ಈ ಓಲುವಿಕೆಯು, ಬೈಬಲ್‌ ವಿದ್ಯಾರ್ಥಿಗಳಲ್ಲಿ ಅಚ್ಚರಿಯನ್ನು ಮೂಡಿಸುವುದಿಲ್ಲ. (ಲೂಕ 18:⁠8) ಒಟ್ಟಿನಲ್ಲಿ ಧರ್ಮದ ಕಡೆಗಿನ ಇಂಥ ಅನಾಸಕ್ತಿಯು ನಿರೀಕ್ಷಿಸತಕ್ಕದ್ದೇ. ಏಕೆಂದರೆ ಸುಳ್ಳು ಧರ್ಮವು ಮಾನವಕುಲವನ್ನು ಬಹಳಷ್ಟು ದೀರ್ಘ ಸಮಯದಿಂದ ತಪ್ಪುದಾರಿಯಲ್ಲಿ ನಡೆಸಿದೆ ಮತ್ತು ನಿರಾಶೆಗೊಳಿಸಿದೆ. (ಪ್ರಕಟನೆ 17:​15, 16) ಆದರೆ ಅರೆಮನಸ್ಸು ಹಾಗೂ ಹುರುಪಿನ ಕೊರತೆಯ ಈ ಸರ್ವವ್ಯಾಪಿ ಆತ್ಮವು ನಿಜ ಕ್ರೈಸ್ತರಿಗೆ ಒಂದು ಅಪಾಯವನ್ನು ಮುಂದಿಡುತ್ತದೆ. ನಮ್ಮ ನಂಬಿಕೆಯ ವಿಷಯದಲ್ಲಿ ನಾವು ನಿರಾಸಕ್ತರಾಗುವುದಾದರೆ ಮತ್ತು ದೇವರನ್ನು ಸೇವಿಸಲಿಕ್ಕಾಗಿರುವ ಹಾಗೂ ಬೈಬಲ್‌ ಸತ್ಯಕ್ಕಾಗಿರುವ ನಮ್ಮ ಹುರುಪನ್ನು ಕಳೆದುಕೊಳ್ಳುವುದಾದರೆ ನಮಗೆ ದುಃಖಕರ ಪರಿಣಾಮಗಳು ಒದಗಿಬರುವವು. ಲವೊದಿಕೀಯದಲ್ಲಿ ಜೀವಿಸುತ್ತಿದ್ದ ಪ್ರಥಮ ಶತಮಾನದ ಕ್ರೈಸ್ತರಿಗೆ ಎಚ್ಚರಿಕೆಯನ್ನು ನೀಡುವಾಗ ಇಂಥ ಉಗುರುಬೆಚ್ಚಗಿನ ಸ್ಥಿತಿಯ ವಿರುದ್ಧ ಯೇಸು ಎಚ್ಚರಿಸಿದನು: “ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ; ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದರೆ ಒಳ್ಳೇದಾಗಿತ್ತು. ನೀನು . . . ಉಗುರುಬೆಚ್ಚ”ಗಿದ್ದೀ.​—⁠ಪ್ರಕಟನೆ 3:15-18.

ನಾವು ಯಾರು ಎಂಬುದನ್ನು ಪರಿಗ್ರಹಿಸುವುದು

3 ಆಧ್ಯಾತ್ಮಿಕ ನಿರಾಸಕ್ತಿಯ ವಿರುದ್ಧ ಹೋರಾಡಲು, ಕ್ರೈಸ್ತರಿಗೆ ತಾವು ಯಾರಾಗಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟವಾದ ನೋಟವಿರಬೇಕು ಮತ್ತು ತಮ್ಮ ವಿಶಿಷ್ಟವಾದ ಗುರುತಿನ ಬಗ್ಗೆ ಅವರು ಸಮಂಜಸವಾಗಿಯೇ ಹೆಮ್ಮೆಪಡಬೇಕು. ನಾವು ಯೆಹೋವನ ಸೇವಕರು ಮತ್ತು ಕ್ರಿಸ್ತನ ಶಿಷ್ಯರಾಗಿರುವುದರಿಂದ, ನಾವು ಯಾರು ಎಂಬುದರ ಬಗ್ಗೆ ಬೈಬಲಿನಲ್ಲಿ ವರ್ಣನೆಗಳನ್ನು ಕಂಡುಕೊಳ್ಳಬಹುದು. ನಾವು ಇತರರೊಂದಿಗೆ ‘ಸುವಾರ್ತೆಯನ್ನು’ ಸಕ್ರಿಯವಾಗಿ ಸಾರುತ್ತಿರುವಾಗ ಯೆಹೋವನ ‘ಸಾಕ್ಷಿಗಳು,’ “ದೇವರ ಜೊತೆಕೆಲಸದವರು” ಆಗಿದ್ದೇವೆ. (ಯೆಶಾಯ 43:10; 1 ಕೊರಿಂಥ 3:9; ಮತ್ತಾಯ 24:14) ನಾವು “ಒಬ್ಬರನ್ನೊಬ್ಬರು” ಪ್ರೀತಿಸುವ ಜನರಾಗಿದ್ದೇವೆ. (ಯೋಹಾನ 13:34) ಸತ್ಯ ಕ್ರೈಸ್ತರು, ತಮ್ಮ ‘ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದ’ ವ್ಯಕ್ತಿಗಳಾಗಿದ್ದಾರೆ. (ಇಬ್ರಿಯ 5:14) ನಾವು “ಲೋಕದೊಳಗೆ ಹೊಳೆಯುವ ಜ್ಯೋತಿರ್ಮಂಡಲ”ಗಳಾಗಿದ್ದೇವೆ. (ಫಿಲಿಪ್ಪಿ 2:16) ‘[ನಮ್ಮ] ನಡವಳಿಕೆಯನ್ನು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿ’ಟ್ಟುಕೊಳ್ಳಲು ನಾವು ಪ್ರಯತ್ನಿಸುತ್ತೇವೆ.​—⁠1 ಪೇತ್ರ 2:12; 2 ಪೇತ್ರ 3:​11, 14.

4 ಯೆಹೋವನ ಸತ್ಯಾರಾಧಕರಿಗೆ, ತಾವು ಏನು ಆಗಿಲ್ಲವೆಂಬುದೂ ತಿಳಿದಿದೆ. ಅವರ ನಾಯಕನಾದ ಯೇಸು ಕ್ರಿಸ್ತನು ಹೇಗೆ ಲೋಕದ ಭಾಗವಾಗಿರಲಿಲ್ಲವೊ ಅದೇ ರೀತಿಯಲ್ಲಿ ಅವರು ಸಹ “ಲೋಕದವರಲ್ಲ” ಅಥವಾ ಲೋಕದ ಭಾಗವಾಗಿಲ್ಲ. (ಯೋಹಾನ 17:16) ಅವರು, ‘ಮನಸ್ಸು ಮೊಬ್ಬಾಗಿ ಹೋಗಿರುವ ಮತ್ತು ದೇವರಿಂದಾಗುವ ಜೀವಕ್ಕೆ ಅನ್ಯರಾಗಿರುವ’ ‘ಜನಾಂಗಗಳಿಂದ’ (NW) ಪ್ರತ್ಯೇಕರಾಗಿ ಉಳಿಯುತ್ತಾರೆ. (ಎಫೆಸ 4:​17, 18) ಇದರಿಂದಾಗಿ ಯೇಸುವಿನ ಹಿಂಬಾಲಕರು ‘ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ ಇಹಲೋಕದಲ್ಲಿ ಸ್ವಸ್ಥ ಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕುತ್ತಾರೆ.’​—⁠ತೀತ 2:⁠12.

5 ನಮ್ಮ ಗುರುತು ಹಾಗೂ ವಿಶ್ವದ ಪರಮಾಧಿಕಾರಿ ಪ್ರಭುವಿನೊಂದಿಗಿನ ನಮ್ಮ ಸಂಬಂಧದ ಕುರಿತಾದ ಸ್ಪಷ್ಟ ನೋಟವು, ನಾವು ‘ಯೆಹೋವನಲ್ಲಿಯೇ ಹೆಚ್ಚಳಪಡುವಂತೆ’ ಪ್ರಚೋದಿಸುತ್ತದೆ. (1 ಕೊರಿಂಥ 1:​31) ಇದು ಯಾವ ರೀತಿಯ ಹೆಚ್ಚಳಪಡುವಿಕೆ ಆಗಿದೆ? ಸತ್ಕ್ರೈಸ್ತರಾಗಿ ನಾವು, ಯೆಹೋವನು ನಮ್ಮ ದೇವರಾಗಿರುವುದಕ್ಕಾಗಿ ಹೆಮ್ಮೆಪಡುತ್ತೇವೆ. ನಾವು ಈ ಬುದ್ಧಿವಾದವನ್ನು ಪಾಲಿಸುತ್ತೇವೆ: “ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ ಎಂಬದಕ್ಕೇ ಹೆಚ್ಚಳಪಡಲಿ.” (ಯೆರೆಮೀಯ 9:24) ದೇವರನ್ನು ತಿಳಿದುಕೊಳ್ಳುವ ಮತ್ತು ಇತರರಿಗೆ ನೆರವು ನೀಡಲು ಆತನಿಂದ ಉಪಯೋಗಿಸಲ್ಪಡುವ ಸುಯೋಗದ ಕುರಿತು ನಾವು ‘ಹೆಚ್ಚಳಪಡುತ್ತೇವೆ.’

ಪಂಥಾಹ್ವಾನ

6 ಕ್ರೈಸ್ತರೆಂಬ ನಮ್ಮ ವಿಶಿಷ್ಟ ಗುರುತಿನ ಬಗ್ಗೆ ತೀಕ್ಷ್ಣವಾದ ಗ್ರಹಿಕೆಯನ್ನು ಕಾಪಾಡಿಕೊಳ್ಳುವುದು ಯಾವಾಗಲೂ ಸುಲಭವಲ್ಲ. ಕ್ರೈಸ್ತನಾಗಿ ಬೆಳೆಸಲ್ಪಟ್ಟ ಯುವಕನೊಬ್ಬನು, ತಾನು ಸ್ವಲ್ಪ ಸಮಯ ಆಧ್ಯಾತ್ಮಿಕ ಬಲಹೀನತೆಯ ಸ್ಥಿತಿಯನ್ನು ಅನುಭವಿಸಿದ್ದನ್ನು ಜ್ಞಾಪಿಸಿಕೊಳ್ಳುತ್ತಾನೆ: “ನಾನೊಬ್ಬ ಯೆಹೋವನ ಸಾಕ್ಷಿಯಾಗಿರಲು ಕಾರಣವೇನೆಂಬುದು ನನಗೇ ತಿಳಿದಿಲ್ಲವೆಂದು ನನಗೆ ಕೆಲವೊಮ್ಮೆ ಅನಿಸಿತು. ಚಿಕ್ಕಂದಿನಿಂದಲೇ ನಾನು ಸತ್ಯದಲ್ಲಿದ್ದೆ. ಬೇರೆಲ್ಲ ಧರ್ಮಗಳಂತೆಯೇ ಇದು ಸಹ ಒಂದು ಸ್ಥಾಪಿತ, ಅಂಗೀಕೃತ ಧರ್ಮವಾಗಿದೆ ಅಷ್ಟೇ ಎಂದು ನನಗೆ ಕೆಲವೊಮ್ಮೆ ಅನಿಸುತ್ತಿತ್ತು.” ಇನ್ನಿತರರು, ತಮ್ಮ ಗುರುತನ್ನು ಮನೋರಂಜನಾ ಜಗತ್ತು, ಸಮೂಹ ವಾರ್ತಾಮಾಧ್ಯಮ, ಮತ್ತು ಜೀವನದ ಬಗ್ಗೆ ಪ್ರಚಲಿತವಾಗಿರುವ ಅದೈವಿಕ ಹೊರನೋಟವು ಪ್ರಭಾವಿಸುವಂತೆ ಅನುಮತಿಸಿರಬಹುದು. (ಎಫೆಸ 2:​2, 3) ಕೆಲವು ಕ್ರೈಸ್ತರು ಆಗಿಂದಾಗ್ಗೆ, ಅವರು ತಮ್ಮ ಬಗ್ಗೆಯೇ ಸಂದೇಹಪಟ್ಟುಕೊಳ್ಳುವ ಅವಧಿಗಳನ್ನು ಮತ್ತು ತಮ್ಮ ಮೌಲ್ಯಗಳು ಹಾಗೂ ಗುರಿಗಳ ಪುನರ್ವಿಮರ್ಶೆ ಮಾಡುವ ಅವಧಿಗಳನ್ನು ಅನುಭವಿಸಬಹುದು.

7 ಆಗಿಂದಾಗ್ಗೆ ಜಾಗರೂಕವಾದ ಸ್ವಪರಿಶೀಲನೆ ಮಾಡುವುದು ತಪ್ಪಾಗಿದೆಯೊ? ಇಲ್ಲ. ಕ್ರೈಸ್ತರು ತಮ್ಮನ್ನೇ ಪರಿಶೀಲಿಸಿಕೊಳ್ಳುತ್ತಾ ಇರುವಂತೆ ಅಪೊಸ್ತಲ ಪೌಲನು ಉತ್ತೇಜಿಸಿದನೆಂಬುದನ್ನು ನೀವು ಜ್ಞಾಪಿಸಿಕೊಳ್ಳಬಹುದು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ.” (2 ಕೊರಿಂಥ 13:5) ಈ ಅಪೊಸ್ತಲನು ಇಲ್ಲಿ, ವಿಕಸಿಸಿರಬಹುದಾದ ಯಾವುದೇ ಆಧ್ಯಾತ್ಮಿಕ ಬಲಹೀನತೆಗಳನ್ನು ಪತ್ತೆಹಚ್ಚಿ, ಅವುಗಳನ್ನು ತಿದ್ದಲು ಆವಶ್ಯಕವಾದ ಹೆಜ್ಜೆಗಳನ್ನು ತೆಗೆದುಕೊಳ್ಳುವ ಗುರಿಯೊಂದಿಗೆ ಸಹಾಯಕಾರಿಯಾದ ಸಮತೋಲನದ ಪ್ರಯತ್ನವನ್ನು ಮಾಡುವಂತೆ ಪ್ರೋತ್ಸಾಹಿಸುತ್ತಿದ್ದನು. ಕ್ರೈಸ್ತನೊಬ್ಬನು ತಾನು ನಂಬಿಕೆಯಲ್ಲಿ ಇದ್ದೇನೊ ಇಲ್ಲವೊ ಎಂದು ಪರೀಕ್ಷಿಸುವಾಗ, ತನ್ನ ಮಾತು ಹಾಗೂ ಕೃತಿಯು ತಾನೇನನ್ನು ನಂಬುತ್ತಿದ್ದೇನೆಂದು ಹೇಳಿಕೊಳ್ಳುತ್ತಾನೊ ಅದರೊಂದಿಗೆ ಹೊಂದಿಕೆಯಲ್ಲಿದೆಯೊ ಎಂಬುದನ್ನು ಗೊತ್ತುಮಾಡಬೇಕು. ಆದರೆ ಒಂದುವೇಳೆ ಸ್ವಪರೀಕ್ಷೆಯು ತಪ್ಪಾಗಿ ನಿರ್ದೇಶಿಸಲ್ಪಡುವಲ್ಲಿ, ಅಂದರೆ ಯೆಹೋವನೊಂದಿಗೆ ಇಲ್ಲವೆ ಕ್ರೈಸ್ತ ಸಭೆಯೊಂದಿಗಿನ ನಮ್ಮ ಸಂಬಂಧದ ಹೊರಗೆ ನಮ್ಮ ಸ್ವಂತ ‘ಗುರುತನ್ನು’ ಕಂಡುಹಿಡಿಯಲು ಅಥವಾ ಉತ್ತರಗಳಿಗಾಗಿ ಹುಡುಕುವಂತೆ ನಮ್ಮನ್ನು ಪ್ರಚೋದಿಸುವಲ್ಲಿ ಅಂಥ ಸ್ವಪರೀಕ್ಷೆಯು ವ್ಯರ್ಥವಾಗಿರುವುದು ಮತ್ತು ಆಧ್ಯಾತ್ಮಿಕವಾಗಿ ಮಾರಕವೂ ಆಗಿರಬಲ್ಲದು. * ನಾವು ‘ಕ್ರಿಸ್ತನಂಬಿಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟಪಟ್ಟವರಂತೆ’ ಆಗಲು ಎಂದೂ ಬಯಸೆವು!​—⁠1 ತಿಮೊಥೆಯ 1:⁠19.

ನಮಗೆ ಪಂಥಾಹ್ವಾನಗಳಿಂದ ವಿನಾಯಿತಿಯಿಲ್ಲ

8 ಆಗಾಗ್ಗೆ ತಮ್ಮ ಬಗ್ಗೆಯೇ ಸಂಹೇಹಪಡುವ ಕ್ರೈಸ್ತರು ತಾವು ಸೋತಿದ್ದೇವೆಂದು ಭಾವಿಸಬೇಕೊ? ಖಂಡಿತವಾಗಿಯೂ ಇಲ್ಲ! ವಾಸ್ತವದಲ್ಲಿ ಅಂಥ ಅನಿಸಿಕೆಗಳು ಹೊಸದೇನಲ್ಲವೆಂದು ತಿಳಿಯುವುದರಿಂದ ಅವರು ಸಾಂತ್ವನವನ್ನು ಪಡೆದುಕೊಳ್ಳಬಲ್ಲರು. ಗತಕಾಲದಲ್ಲಿ ದೇವರ ನಂಬಿಗಸ್ತ ಸಾಕ್ಷಿಗಳಿಗೂ ಇಂಥ ಅನಿಸಿಕೆಗಳಿದ್ದವು. ಅಸಾಧಾರಣವಾದ ನಂಬಿಕೆ, ನಿಷ್ಠೆ ಮತ್ತು ಭಕ್ತಿಯನ್ನು ಪ್ರದರ್ಶಿಸಿದ ಮೋಶೆಯ ಉದಾಹರಣೆಯನ್ನು ತೆಗೆದುಕೊಳ್ಳಿ. ಬೆಟ್ಟದಷ್ಟು ದೊಡ್ಡದಾಗಿ ತೋರುತ್ತಿದ್ದ ಒಂದು ಕೆಲಸವು ನೇಮಿಸಲ್ಪಟ್ಟಾಗ, ಮೋಶೆ ಅಳುಕುತ್ತಾ ಕೇಳಿದ್ದು: “ನಾನು ಎಷ್ಟರವನು?” (ವಿಮೋಚನಕಾಂಡ 3:11) ‘ನಾನು ಏನೂ ಅಲ್ಲ!’ ಇಲ್ಲವೆ ‘ನಾನು ಸಮರ್ಥನಲ್ಲ’ ಎಂಬ ಉತ್ತರ ಅವನ ಮನಸ್ಸಿನಲ್ಲಿದ್ದಿರಬಹುದೆಂದು ತೋರುತ್ತದೆ. ಅವನ ಹಿನ್ನೆಲೆಯ ಈ ಹಲವಾರು ಅಂಶಗಳು ಸಹ ಅವನಲ್ಲಿ ಅಯೋಗ್ಯನೆಂಬ ಭಾವನೆಯನ್ನು ಹುಟ್ಟಿಸಿರಬಹುದು: ಅವನು ಗುಲಾಮರಾಗಿದ್ದ ಒಂದು ಜನಾಂಗಕ್ಕೆ ಸೇರಿದವನಾಗಿದ್ದನು. ಅವನು ಇಸ್ರಾಯೇಲ್ಯರಿಂದ ತಿರಸ್ಕರಿಸಲ್ಪಟ್ಟಿದ್ದನು. ಅವನು ವಾಕ್ಚಾತುರ್ಯವಿಲ್ಲದವನಾಗಿದ್ದನು. (ವಿಮೋಚನಕಾಂಡ 1:​13, 14; 2:​11-14; 4:⁠10) ಅವನೊಬ್ಬ ಕುರುಬನಾಗಿದ್ದನು, ಮತ್ತು ಈ ಕಸಬನ್ನು ಐಗುಪ್ತದವರು ಹೇಸುತ್ತಿದ್ದರು. (ಆದಿಕಾಂಡ 46:34) ಆದುದರಿಂದ ದಾಸತ್ವದಲ್ಲಿದ್ದ ದೇವಜನರ ವಿಮೋಚಕನಾಗಲು ತಾನು ತಕ್ಕವನಲ್ಲವೆಂದು ಅವನು ಭಾವಿಸಿದ್ದರಲ್ಲಿ ಆಶ್ಚರ್ಯವಿಲ್ಲ!

9 ಯೆಹೋವನು ಮೋಶೆಗೆ ಪ್ರಬಲವಾದ ಎರಡು ವಾಗ್ದಾನಗಳನ್ನು ಮಾಡುವ ಮೂಲಕ ಆಶ್ವಾಸನೆಯನ್ನು ನೀಡಿದನು: “ನಾನೇ ನಿನ್ನ ಸಂಗಡ ಇರುವೆನು; ಮತ್ತು ನೀನು ನನ್ನ ಜನರನ್ನು ಐಗುಪ್ತದೇಶದಿಂದ ಹೊರಗೆ ತಂದಾಗ ನೀವು ಈ ಬೆಟ್ಟದಲ್ಲೇ ದೇವರನ್ನು ಆರಾಧಿಸುವಿರಿ; ನಿನ್ನನ್ನು ಕಳುಹಿಸಿದವನು ನಾನೇ ಎಂಬದಕ್ಕೆ ಇದೇ ನಿನಗೆ ಗುರುತಾಗಿರುವದು.” (ವಿಮೋಚನಕಾಂಡ 3:12) ದೇವರು, ಹಿಂಜರಿಯುತ್ತಿದ್ದ ತನ್ನ ಸೇವಕನಿಗೆ, ತಾನು ಸದಾ ಅವನೊಂದಿಗೆ ಇರುವೆನೆಂದು ಹೇಳುತ್ತಿದ್ದನು. ಇದಕ್ಕೆ ಕೂಡಿಸುತ್ತಾ, ಯೆಹೋವನು ತಾನು ತಪ್ಪದೇ ತನ್ನ ಜನರನ್ನು ವಿಮೋಚಿಸುವೆನೆಂದು ಸೂಚಿಸುತ್ತಿದ್ದನು. ಶತಮಾನಗಳಾದ್ಯಂತ ದೇವರು ಅದೇ ರೀತಿಯಲ್ಲಿ ಬೆಂಬಲದ ವಾಗ್ದಾನಗಳನ್ನು ಕೊಟ್ಟಿದ್ದಾನೆ. ದೃಷ್ಟಾಂತಕ್ಕಾಗಿ, ಇನ್ನೇನು ಸ್ವಲ್ಪದರಲ್ಲೇ ವಾಗ್ದತ್ತ ದೇಶವನ್ನು ಪ್ರವೇಶಿಸಲಿದ್ದ ಇಸ್ರಾಯೇಲ್‌ ಜನಾಂಗಕ್ಕೆ ಆತನು ಮೋಶೆಯ ಮುಖಾಂತರ ಹೇಳಿದ್ದು: “ನೀವು ಶೂರರಾಗಿ ಧೈರ್ಯದಿಂದಿರ್ರಿ; . . . ನಿಮ್ಮ ದೇವರಾದ ಯೆಹೋವನೇ ನಿಮ್ಮ ಸಂಗಡ ಇರುತ್ತಾನಲ್ಲಾ; ಆತನು ನಿಮ್ಮನ್ನು ಕೈಬಿಡುವದಿಲ್ಲ, ಅಪಜಯಕ್ಕೆ ಗುರಿಪಡಿಸುವದೇ ಇಲ್ಲ.” (ಧರ್ಮೋಪದೇಶಕಾಂಡ 31:6) ಯೆಹೋವನು ಯೆಹೋಶುವನಿಗೂ ಈ ಆಶ್ವಾಸನೆಯನ್ನು ಕೊಟ್ಟನು: “ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು; ನಾನು . . . ನಿನ್ನ ಸಂಗಡಲೂ ಇರುವೆನು. ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ.” (ಯೆಹೋಶುವ 1:​5, 6) ಮತ್ತು ಆತನು ಕ್ರೈಸ್ತರಿಗೆ ಹೀಗೆಂದು ವಾಗ್ದಾನಿಸುತ್ತಾನೆ: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:5) ಇಂಥ ಬಲವಾದ ಬೆಂಬಲವಿರುವುದು, ನಾವು ಕ್ರೈಸ್ತರಾಗಿರುವುದಕ್ಕೆ ಹೆಮ್ಮೆಪಡುವಂತೆ ಮಾಡತಕ್ಕದ್ದು!

10 ಮೋಶೆಯ ಬಳಿಕ ಸುಮಾರು 500 ವರ್ಷಗಳು ಕಳೆದ ಅನಂತರ, ಆಸಾಫನೆಂಬ ಹೆಸರಿನ ಒಬ್ಬ ನಂಬಿಗಸ್ತ ಲೇವ್ಯನು, ಒಂದು ಯಥಾರ್ಥವಾದ ಮಾರ್ಗಕ್ರಮವನ್ನು ಬೆನ್ನಟ್ಟುವುದರ ಪ್ರಯೋಜನವೇನೆಂಬುದರ ಕುರಿತಾಗಿ ತನಗಿದ್ದ ಸಂದೇಹಗಳನ್ನು ಮುಚ್ಚುಮರೆಯಿಲ್ಲದೆ ಬರೆದನು. ಪ್ರಲೋಭನೆಗಳು ಮತ್ತು ಸಂಕಷ್ಟಗಳ ಮಧ್ಯೆಯೂ ಆಸಾಫನು ದೇವರ ಸೇವೆಮಾಡಲು ಹೆಣಗಾಡುತ್ತಿದ್ದಾಗ, ದೇವರನ್ನು ತೆಗಳುತ್ತಿದ್ದ ಕೆಲವರು, ಹೆಚ್ಚು ಬಲಶಾಲಿಗಳೂ ಐಶ್ವರ್ಯವಂತರೂ ಆಗುವುದನ್ನು ಅವನು ನೋಡಿದನು. ಇದು ಆಸಾಫನನ್ನು ಹೇಗೆ ಬಾಧಿಸಿತು? ಅವನು ಒಪ್ಪಿಕೊಂಡದ್ದು: “ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು. ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.” ಯೆಹೋವನ ಆರಾಧಕನಾಗಿರುವುದರ ಪ್ರಯೋಜನವೇನೆಂಬ ಶಂಕೆ ಅವನಲ್ಲಿ ಹುಟ್ಟಿತು. “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ. ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ” ಎಂದು ಆಸಾಫನು ನೆನಸಿದನು.​—⁠ಕೀರ್ತನೆ 73:2, 3, 13, 14.

11 ಮನಶ್ಶಾಂತಿಗೆಡಿಸುವ ಈ ಭಾವನೆಗಳನ್ನು ಆಸಾಫನು ಹೇಗೆ ನಿಭಾಯಿಸಿದನು? ತನಗಂಥ ಭಾವನೆಗಳಿರುವುದನ್ನು ಅಲ್ಲಗಳೆದನೊ? ಇಲ್ಲ. ನಾವು 73ನೆಯ ಕೀರ್ತನೆಯಲ್ಲಿ ನೋಡುವಂತೆ ಅವನು ಅವುಗಳನ್ನು ದೇವರಿಗೆ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿದನು. ಆದರೆ ಆಸಾಫನು ತನ್ನ ಮನೋಭಾವದಲ್ಲಿ ಬದಲಾವಣೆಯನ್ನು ಮಾಡಿಕೊಂಡದ್ದು ಅವನು ಆಲಯಕ್ಕೆ ಬಂದಾಗಲೇ. ಅವನು ಅಲ್ಲಿದ್ದಾಗ, ದೇವರಿಗೆ ಭಕ್ತಿಯನ್ನು ತೋರಿಸುವುದೇ ಯಾವಾಗಲೂ ಅತ್ಯುತ್ತಮವಾದ ಮಾರ್ಗಕ್ರಮವಾಗಿದೆ ಎಂಬುದನ್ನು ಮನಗಂಡನು. ಅವನ ಆಧ್ಯಾತ್ಮಿಕ ಗಣ್ಯತೆಯು ನವೀಕರಿಸಲ್ಪಟ್ಟಿರಲಾಗಿ, ಯೆಹೋವನು ಕೆಟ್ಟತನವನ್ನು ದ್ವೇಷಿಸುತ್ತಾನೆ ಮತ್ತು ತಕ್ಕ ಸಮಯದಲ್ಲಿ ದುಷ್ಟರು ಶಿಕ್ಷಿಸಲ್ಪಡುವರೆಂಬುದು ಅವನಿಗೆ ಅರ್ಥವಾಯಿತು. (ಕೀರ್ತನೆ 73:​17-19) ಈ ತಿದ್ದಲ್ಪಟ್ಟ ಮನೋಭಾವದೊಂದಿಗೆ, ಆಸಾಫನು ಯೆಹೋವನ ಸೇವಕನಾಗಿ ತನಗಿರುವ ಸುಯೋಗಭರಿತ ಗುರುತಿನ ಪ್ರಜ್ಞೆಯನ್ನು ಬಲಪಡಿಸಿದನು. ಅವನು ದೇವರಿಗಂದದ್ದು: “ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.” (ಕೀರ್ತನೆ 73:23, 24) ಆಸಾಫನು ಪುನಃ ಒಮ್ಮೆ ತನ್ನ ದೇವರ ಬಗ್ಗೆ ಹೆಮ್ಮೆಪಡಲಾರಂಭಿಸಿದನು.​—⁠ಕೀರ್ತನೆ 34:⁠2.

ಗುರುತಿನ ಬಗ್ಗೆ ತೀಕ್ಷ್ಣವಾದ ಪ್ರಜ್ಞೆಯಿದ್ದವರು

12 ನಮ್ಮ ಕ್ರೈಸ್ತ ಗುರುತಿನ ಪ್ರಜ್ಞೆಯನ್ನು ಬಲಪಡಿಸುವ ಒಂದು ವಿಧವು, ಕಷ್ಟಸಂಕಟಗಳ ಮಧ್ಯದಲ್ಲೂ ದೇವರೊಂದಿಗಿನ ತಮ್ಮ ಸಂಬಂಧದ ಕುರಿತು ನಿಜವಾಗಿಯೂ ಹೆಮ್ಮೆಪಟ್ಟ ನಿಷ್ಠಾವಂತ ಆರಾಧಕರ ನಂಬಿಕೆಯನ್ನು ಪರಿಶೀಲಿಸಿ ಅನುಕರಿಸುವುದೇ ಆಗಿದೆ. ಯಾಕೋಬನ ಮಗನಾದ ಯೋಸೇಫನನ್ನು ತೆಗೆದುಕೊಳ್ಳಿ. ಎಳೆಯ ಪ್ರಾಯದಲ್ಲಿ ಅವನನ್ನು ಮೋಸದಿಂದ ದಾಸನಾಗಿ ಮಾರಲಾಯಿತು ಮತ್ತು ತನ್ನ ದೇವಭಯವುಳ್ಳ ತಂದೆಯಿಂದ ಹಾಗೂ ತನ್ನ ಮನೆಯಲ್ಲಿನ ಬೆಚ್ಚಗಿನ, ಆಸರೆನೀಡುವಂಥ ವಾತಾವರಣದಿಂದಲೂ ಅವನನ್ನು ನೂರಾರು ಕಿಲೊಮೀಟರ್‌ ದೂರದಲ್ಲಿದ್ದ ಐಗುಪ್ತಕ್ಕೆ ಕೊಂಡೊಯ್ಯಲಾಯಿತು. ಐಗುಪ್ತದಲ್ಲಿದ್ದಾಗ, ಯೋಸೇಫನಿಗೆ ದೈವಿಕ ಬುದ್ಧಿವಾದವನ್ನು ಕೊಡಬಹುದಾದ ಯಾವ ವ್ಯಕ್ತಿಯೂ ಇರಲಿಲ್ಲ, ಮತ್ತು ತನ್ನ ನೈತಿಕ ಸೂತ್ರಗಳನ್ನೂ ದೇವರ ಮೇಲಿನ ಹೊಂದಿಕೊಳ್ಳುವಿಕೆಯನ್ನೂ ಪರೀಕ್ಷೆಗೊಡ್ಡಿದಂಥ ಕಷ್ಟಕರ ಸನ್ನಿವೇಶಗಳು ಅವನಿಗೆ ಎದುರಾದವು. ಹಾಗಿದ್ದರೂ, ದೇವರ ಒಬ್ಬ ಸೇವಕನಾಗಿ ತನ್ನ ಗುರುತಿನ ತೀಕ್ಷ್ಣವಾದ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಅವನು ಪ್ರಜ್ಞಾಪೂರ್ವಕವಾದ ಪ್ರಯತ್ನವನ್ನು ಮಾಡಿದನೆಂಬುದು ಸ್ಪಷ್ಟ, ಮತ್ತು ಅವನಿಗೆ ಯಾವುದು ಸರಿಯೆಂದು ತಿಳಿದಿತ್ತೊ ಅದಕ್ಕೆ ನಂಬಿಗಸ್ತನಾಗಿ ಉಳಿದನು. ಪ್ರತಿಕೂಲವಾದ ಪರಿಸರದಲ್ಲೂ ಅವನು ಯೆಹೋವನ ಆರಾಧಕನಾಗಿರಲು ಹೆಮ್ಮೆಪಟ್ಟನು, ಮತ್ತು ತನಗೆ ಹೇಗನಿಸುತ್ತದೆಂಬುದನ್ನು ವ್ಯಕ್ತಪಡಿಸಲು ಹಿಂದೆಮುಂದೆ ನೋಡಲಿಲ್ಲ.​—⁠ಆದಿಕಾಂಡ 39:​7-10.

13 ಎಂಟು ಶತಮಾನಗಳ ಬಳಿಕ, ಬಂದಿಯಾಗಿದ್ದ ಇಸ್ರಾಯೇಲ್ಯ ಹುಡುಗಿಯೊಬ್ಬಳು ಆರಾಮ್ಯರ ಸೇನಾಪತಿಯಾದ ನಾಮಾನನ ದಾಸಿಯಾದಾಗ ತಾನು ಯೆಹೋವನ ಆರಾಧಕಳೆಂಬ ತನ್ನ ಗುರುತನ್ನು ಮರೆತುಬಿಡಲಿಲ್ಲ. ಒಂದು ಸಂದರ್ಭ ಸಿಕ್ಕಿದಾಗ ಅವಳು ಎಲೀಷನು ಸತ್ಯ ದೇವರ ಪ್ರವಾದಿಯೆಂಬುದನ್ನು ಗುರುತಿಸುವುದರ ಮೂಲಕ ಯೆಹೋವನ ಬಗ್ಗೆ ಒಂದು ಉತ್ತಮ ಸಾಕ್ಷಿಯನ್ನು ಕೊಟ್ಟಳು. (2 ಅರಸುಗಳು 5:​1-19) ಇದಾಗಿ ಹಲವಾರು ವರ್ಷಗಳು ಕಳೆದ ಬಳಿಕ, ಯುವರಾಜನಾದ ಯೋಷೀಯನು, ಭ್ರಷ್ಟಾಚಾರತುಂಬಿದ ವಾತಾವರಣದಲ್ಲಿದ್ದರೂ ದೀರ್ಘಾವಧಿಯ ಧಾರ್ಮಿಕ ಸುಧಾರಣೆಗಳನ್ನು ಜಾರಿಗೆ ತಂದನು, ದೇವರ ಆಲಯವನ್ನು ದುರಸ್ತುಮಾಡಿದನು ಮತ್ತು ಆ ಜನಾಂಗವನ್ನು ಪುನಃ ಯೆಹೋವನ ಬಳಿ ನಡಿಸಿದನು. ಅವನು ತನ್ನ ನಂಬಿಕೆ ಹಾಗೂ ಆರಾಧನೆಯ ಬಗ್ಗೆ ಹೆಮ್ಮೆಪಟ್ಟುಕೊಂಡನು. (2 ಪೂರ್ವಕಾಲವೃತ್ತಾಂತ, ಅಧ್ಯಾಯಗಳು 34, 35) ಬಾಬೆಲಿನಲ್ಲಿದ್ದ ದಾನಿಯೇಲ ಹಾಗೂ ಅವನ ಮೂರು ಮಂದಿ ಇಬ್ರಿಯ ಸಂಗಡಿಗರು, ತಾವು ಯೆಹೋವನ ಸೇವಕರಾಗಿದ್ದೇವೆಂಬ ತಮ್ಮ ಗುರುತನ್ನು ಎಂದಿಗೂ ಮರೆತುಬಿಡಲಿಲ್ಲ. ಒತ್ತಡ ಹಾಗೂ ಪ್ರಲೋಭನೆಯ ಕೆಳಗೂ ಅವರು ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡರು. ಅವರು ಯೆಹೋವನ ಸೇವಕರಾಗಿರಲು ಹೆಮ್ಮೆಪಟ್ಟರೆಂಬುದು ಸುಸ್ಪಷ್ಟ.​—⁠ದಾನಿಯೇಲ 1:​8-20.

ನಿಮ್ಮ ಕ್ರೈಸ್ತ ಗುರುತಿನ ಬಗ್ಗೆ ಹೆಮ್ಮೆಪಡಿರಿ

14 ದೇವರ ಈ ಸೇವಕರು ಯಶಸ್ವಿಗಳಾಗಲು ಕಾರಣವೇನೆಂದರೆ, ದೇವರ ಮುಂದೆ ಅವರಿಗಿರುವ ನಿಲುವಿನ ಬಗ್ಗೆ ಅವರು ಹಿತಕರವಾದ ರೀತಿಯ ಹೆಮ್ಮೆಯ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದರು. ಇಂದು ನಮ್ಮ ಕುರಿತಾಗಿ ಏನು? ನಮ್ಮ ಕ್ರೈಸ್ತ ಗುರುತಿನ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದರಲ್ಲಿ ಏನೆಲ್ಲಾ ಒಳಗೂಡಿದೆ?

15 ಪ್ರಧಾನವಾಗಿ ಇದರಲ್ಲಿ, ಯೆಹೋವನ ನಾಮಧಾರಿ ಜನರಲ್ಲಿ ಒಬ್ಬರಾಗಿದ್ದು, ಆತನ ಆಶೀರ್ವಾದ ಮತ್ತು ಅನುಗ್ರಹವನ್ನು ಹೊಂದಿರುವುದಕ್ಕಾಗಿ ಗಾಢವಾದ ಗಣ್ಯತೆಯು ಸೇರಿದೆ. ತನಗೆ ಸೇರಿದವರಾರು ಎಂಬುದರ ಬಗ್ಗೆ ದೇವರಿಗೆ ಯಾವುದೇ ಸಂದೇಹವಿಲ್ಲ. ಗಣನೀಯ ಪ್ರಮಾಣದ ಧಾರ್ಮಿಕ ಗಲಿಬಿಲಿಯಿದ್ದ ಶಕದಲ್ಲಿ ಜೀವಿಸಿದ ಅಪೊಸ್ತಲ ಪೌಲನು ಬರೆದುದು: “ತನ್ನವರು ಯಾರಾರೆಂಬದನ್ನು ಕರ್ತನು [“ಯೆಹೋವನು,” NW] ತಿಳಿದಿದ್ದಾನೆ.” (2 ತಿಮೊಥೆಯ 2:19; ಅರಣ್ಯಕಾಂಡ 16:​4, 5) ‘ತನ್ನವರ’ ಬಗ್ಗೆ ಯೆಹೋವನು ಹೆಮ್ಮೆಪಡುತ್ತಾನೆ. ಆತನು ಘೋಷಿಸುವುದು: “ನಿಮ್ಮನ್ನು ತಾಕುವವನು [ನನ್ನ] ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ.” (ಜೆಕರ್ಯ 2:8) ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆಂಬುದು ಸ್ಪಷ್ಟ. ಇದರಂತೆ, ಆತನೊಂದಿಗಿನ ನಮ್ಮ ಸಂಬಂಧವೂ ಆತನಿಗಾಗಿ ಗಾಢವಾದ ಪ್ರೀತಿಯ ಮೇಲೆ ಆಧಾರಿತವಾಗಿರಬೇಕು. ಪೌಲನು ಹೇಳಿದ್ದು: “ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನೇ ದೇವರು ತಿಳುಕೊಳ್ಳುತ್ತಾನೆ.”​—⁠1 ಕೊರಿಂಥ 8:​3.

16 ಯೆಹೋವನ ಸಾಕ್ಷಿಗಳಾಗಿ ಬೆಳೆಸಲ್ಪಟ್ಟಿರುವ ಯುವ ಜನರು ತಮ್ಮ ಕ್ರೈಸ್ತ ಗುರುತು ದೇವರೊಂದಿಗಿನ ಒಂದು ವೈಯಕ್ತಿಕ ಸಂಬಂಧದ ಮೇಲಾಧರಿತವಾಗಿದ್ದು ಹೆಚ್ಚೆಚ್ಚು ಬಲವಾಗುತ್ತಾ ಇದೆಯೊ ಎಂಬುದನ್ನು ಪರಿಶೀಲಿಸತಕ್ಕದ್ದು. ಅವರು ತಮ್ಮ ಹೆತ್ತವರ ನಂಬಿಕೆಯ ಮೇಲೆ ಅವಲಂಬಿಸಲಾರರು. ದೇವರ ಪ್ರತಿಯೊಬ್ಬ ಸೇವಕನ ಬಗ್ಗೆ ಪೌಲನು ಬರೆದುದು: “ಅವನು ತನ್ನ ಸ್ವಂತ ಯಜಮಾನನಿಗೆ ಒಂದೋ ನಿಲ್ಲುತ್ತಾನೆ ಇಲ್ಲವೆ ಬೀಳುತ್ತಾನೆ” (NW). ಈ ಕಾರಣದಿಂದಲೇ, ಪೌಲನು ಮುಂದುವರಿಸಿ ಹೇಳಿದ್ದು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.” (ರೋಮಾಪುರ 14:4, 12) ಯೆಹೋವನನ್ನು ಆರಾಧಿಸುವ ವಿಷಯದಲ್ಲಿ ಕುಟುಂಬದ ಪರಂಪರೆಯನ್ನು ಅರೆಮನಸ್ಸಿನಿಂದ ಮುಂದುವರಿಸಿಕೊಂಡು ಹೋಗುವುದು, ಯೆಹೋವನೊಂದಿಗೆ ಒಂದು ಆಪ್ತವಾದ ದೀರ್ಘಕಾಲದ ಸಂಬಂಧವನ್ನು ಪೋಷಿಸಲಾರದು ಎಂಬುದು ಸುವ್ಯಕ್ತ.

17 ಇತಿಹಾಸದಾದ್ಯಂತ ಯೆಹೋವನ ಸಾಕ್ಷಿಗಳ ಒಂದು ಉದ್ದವಾದ ಶ್ರೇಣಿ ಇದ್ದಿರುತ್ತದೆ. ಅದು ಸುಮಾರು 60 ಶತಮಾನಗಳ ಹಿಂದೆ ಇದ್ದ ನಂಬಿಗಸ್ತನಾದ ಹೇಬೆಲನಿಂದ ಹಿಡಿದು ಆಧುನಿಕ ಕಾಲದಲ್ಲಿರುವ ಸಾಕ್ಷಿಗಳ ‘ಮಹಾ ಸಮೂಹದ’ ವರೆಗೆ, ಮತ್ತು ಮುಂದಕ್ಕೆ ಅಂತ್ಯವಿಲ್ಲದ ಭವಿಷ್ಯತ್ತಿನಲ್ಲಿ ಆನಂದಿಸಲಿರುವ ಯೆಹೋವನ ಆರಾಧಕರ ಗುಂಪುಗಳ ವರೆಗೆ ವಿಸ್ತರಿಸುವುದು. (ಪ್ರಕಟನೆ 7:9; ಇಬ್ರಿಯ 11:⁠4) ನಂಬಿಗಸ್ತ ಆರಾಧಕರ ಈ ಉದ್ದ ಶ್ರೇಣಿಯಲ್ಲಿ ನಾವು ತೀರ ಇತ್ತೀಚಿನವರಾಗಿದ್ದೇವೆ. ನಮಗಿರುವ ಆಧ್ಯಾತ್ಮಿಕ ಪರಂಪರೆಯು ಎಷ್ಟು ಸಮೃದ್ಧವಾದದ್ದು!

18 ನಮ್ಮ ಕ್ರೈಸ್ತ ಗುರುತಿನಲ್ಲಿ, ನಮ್ಮನ್ನು ಕ್ರೈಸ್ತರಾಗಿ ಗುರುತಿಸುವಂಥ ಮೌಲ್ಯಗಳು, ಗುಣಗಳು, ಮಟ್ಟಗಳು ಮತ್ತು ಗುಣಲಕ್ಷಣಗಳು ಸಹ ಸೇರಿವೆ. ಅದೇ “ಮಾರ್ಗ” ಆಗಿದೆ, ಹೌದು ಜೀವಕ್ಕೆ ನಡೆಸುವ ಹಾಗೂ ದೇವರನ್ನು ಸಂತೋಷಪಡಿಸುವಂಥ ಏಕಮಾತ್ರ ಯಶಸ್ವಿ ಮಾರ್ಗ ಅದಾಗಿದೆ. (ಅ. ಕೃತ್ಯಗಳು 9:2; ಎಫೆಸ 4:​22-24) ಕ್ರೈಸ್ತರೇ ‘ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ!’ (1 ಥೆಸಲೊನೀಕ 5:21) ಕ್ರೈಸ್ತತ್ವ ಮತ್ತು ದೇವರಿಂದ ದೂರಸರಿದಿರುವ ಜಗತ್ತಿನ ನಡುವಣ ಅಪಾರ ವ್ಯತ್ಯಾಸದ ಬಗ್ಗೆ ನಮಗೆ ಸ್ಪಷ್ಟವಾದ ತಿಳಿವಳಿಕೆಯಿದೆ. ಸತ್ಯಾರಾಧನೆ ಮತ್ತು ಸುಳ್ಳಾರಾಧನೆಯ ನಡುವೆ ಯೆಹೋವನು ಸ್ಪಷ್ಟವಾದ ವ್ಯತ್ಯಾಸವನ್ನು ಮಾಡಿದ್ದಾನೆ. ತನ್ನ ಪ್ರವಾದಿ ಮಲಾಕಿಯನ ಮೂಲಕ ಆತನು ಘೋಷಿಸಿದ್ದು: “ಆಗ ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ.”​—⁠ಮಲಾಕಿಯ 3:⁠18.

19 ಈ ಗಲಿಬಿಲಿಭರಿತ ಲೋಕದಲ್ಲಿ ಯೆಹೋವನಲ್ಲಿ ಹೆಚ್ಚಳಪಡುವುದು ಇಷ್ಟೊಂದು ಪ್ರಾಮುಖ್ಯವಾಗಿರುವುದರಿಂದ, ನಮ್ಮ ದೇವರ ಬಗ್ಗೆ ಹಿತಕರವಾದ ಹೆಮ್ಮೆಯನ್ನು ಮತ್ತು ನಮ್ಮ ಕ್ರೈಸ್ತ ಗುರುತಿನ ಬಗ್ಗೆ ಬಲವಾದ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯಮಾಡಬಲ್ಲದು? ಸಹಾಯಕಾರಿ ಸಲಹೆಗಳು ಮುಂದಿನ ಲೇಖನದಲ್ಲಿ ಇವೆ. ಇವುಗಳನ್ನು ಪರಿಗಣಿಸುವಾಗ, ಈ ಒಂದು ಸಂಗತಿಯ ಬಗ್ಗೆ ನೀವು ನಿಶ್ಚಯದಿಂದಿರಬಲ್ಲಿರಿ: ಸತ್ಯ ಕ್ರೈಸ್ತರು ಎಂದಿಗೂ “ನಿರಾಸಕ್ತಾಸ್ತಿಕವಾದ”ಕ್ಕೆ ಬಲಿಯಾಗದಿರುವರು.

[ಪಾದಟಿಪ್ಪಣಿ]

^ ಪ್ಯಾರ. 11 ಇಲ್ಲಿ ಕೇವಲ ನಮ್ಮ ಆಧ್ಯಾತ್ಮಿಕ ಗುರುತಿನ ಬಗ್ಗೆ ಮಾತಾಡಲಾಗುತ್ತಿದೆ. ಕೆಲವರಿಗೆ, ಮಾನಸಿಕ ಆರೋಗ್ಯದಲ್ಲಿನ ಸಮಸ್ಯೆಗಳಿಂದಾಗಿ ವೃತ್ತಿಪರ ಚಿಕಿತ್ಸೆಯನ್ನು ಪಡೆಯುವುದು ಆವಶ್ಯಕವಾಗಿರಬಹುದು.

ಜ್ಞಾಪಿಸಿಕೊಳ್ಳಬಲ್ಲಿರೊ?

• ಕ್ರೈಸ್ತರು ಹೇಗೆ ‘ಯೆಹೋವನಲ್ಲಿ ಹೆಚ್ಚಳಪಡ’ಸಾಧ್ಯವಿದೆ?

• ಮೋಶೆ ಹಾಗೂ ಆಸಾಫನ ಉದಾಹರಣೆಗಳಿಂದ ನೀವೇನನ್ನು ಕಲಿತಿದ್ದೀರಿ?

• ಯಾವ ಬೈಬಲ್‌ ಪಾತ್ರಧಾರಿಗಳು, ತಾವು ದೇವರಿಗೆ ಸಲ್ಲಿಸಿದ ಸೇವೆಯಲ್ಲಿ ಹೆಮ್ಮೆಪಟ್ಟುಕೊಂಡರು?

• ನಮ್ಮ ಕ್ರೈಸ್ತ ಗುರುತಿನ ಕುರಿತು ಹೆಚ್ಚಳಪಡುವುದರಲ್ಲಿ ಏನೆಲ್ಲಾ ಸೇರಿದೆ?

[ಅಧ್ಯಯನ ಪ್ರಶ್ನೆಗಳು]

1. ಧರ್ಮದ ಕಡೆಗಿನ ಜನರ ಮನೋಭಾವದಲ್ಲಿ ಯಾವ ಪ್ರವೃತ್ತಿಯು ವ್ಯಕ್ತವಾಗುತ್ತದೆ?

2. (ಎ) ಜನರು ಆಧ್ಯಾತ್ಮಿಕವಾಗಿ ನಿರಾಸಕ್ತರಾಗಿರುವುದು ಏಕೆ ಆಶ್ಚರ್ಯಕರವಲ್ಲ? (ಬಿ) ನಿರಾಸಕ್ತಿಯು ನಿಜ ಕ್ರೈಸ್ತರಿಗೆ ಯಾವ ಅಪಾಯವನ್ನೊಡ್ಡುತ್ತದೆ?

3. ಕ್ರೈಸ್ತರು ತಮ್ಮ ಗುರುತಿನ ಯಾವ ಅಂಶಗಳ ಬಗ್ಗೆ ಹೆಮ್ಮೆಪಡಸಾಧ್ಯವಿದೆ?

4. ಯೆಹೋವನ ಆರಾಧಕನೊಬ್ಬನು ತಾನು ಏನು ಆಗಿರುವುದಿಲ್ಲ ಎಂಬುದನ್ನು ಹೇಗೆ ನಿರ್ಧರಿಸಬಲ್ಲನು?

5. ‘ಯೆಹೋವನಲ್ಲಿಯೇ ಹೆಚ್ಚಳಪಡು’ವಂತೆ ಕೊಡಲ್ಪಟ್ಟಿರುವ ಬುದ್ಧಿವಾದದ ಅರ್ಥವೇನು?

6. ತಮ್ಮ ಕ್ರೈಸ್ತ ಗುರುತಿನ ಬಗ್ಗೆ ತೀಕ್ಷ್ಣವಾದ ಗ್ರಹಿಕೆಯನ್ನು ಕಾಪಾಡಿಕೊಳ್ಳುವುದು ಕೆಲವರಿಗೆ ಒಂದು ಪಂಥಾಹ್ವಾನವಾಗಿರುವುದು ಏಕೆ?

7. (ಎ) ದೇವರ ಸೇವಕರಿಗೆ ಯಾವ ವಿಧದ ಸ್ವಪರಿಶೀಲನೆಯು ತಕ್ಕದ್ದಾಗಿದೆ? (ಬಿ) ಅಪಾಯವಿರುವುದು ಎಲ್ಲಿ?

8, 9. (ಎ) ಮೋಶೆಗೆ ತನ್ನ ಬಗ್ಗೆಯೇ ಇದ್ದ ಸಂದೇಹದ ಅನಿಸಿಕೆಗಳನ್ನು ಅವನು ಹೇಗೆ ವ್ಯಕ್ತಪಡಿಸಿದನು? (ಬಿ) ಮೋಶೆಗೆ ತನ್ನ ಇತಿಮಿತಿಗಳ ಕುರಿತಿದ್ದ ಭಾವನೆಗಳಿಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? (ಸಿ) ಯೆಹೋವನ ಪುನರಾಶ್ವಾಸನೆಗಳು ನಿಮ್ಮ ಮೇಲೆ ಹೇಗೆ ಪ್ರಭಾವಬೀರಿವೆ?

10, 11. ಯೆಹೋವನಿಗೆ ತಾನು ಸಲ್ಲಿಸುವ ಸೇವೆಯ ಮೌಲ್ಯದ ಕಡೆಗೆ ಸರಿಯಾದ ಮನೋಭಾವವನ್ನು ಕಾಪಾಡಿಕೊಳ್ಳಲು ಲೇವ್ಯನಾದ ಆಸಾಫನಿಗೆ ಹೇಗೆ ಸಹಾಯ ದೊರಕಿತು?

12, 13. ದೇವರೊಂದಿಗಿನ ತಮ್ಮ ಸಂಬಂಧದ ಕುರಿತು ಹೆಮ್ಮೆಪಟ್ಟ ಬೈಬಲ್‌ ಪಾತ್ರಧಾರಿಗಳ ಉದಾಹರಣೆಗಳನ್ನು ಕೊಡಿರಿ.

14, 15. ನಮ್ಮ ಕ್ರೈಸ್ತ ಗುರುತಿನ ಬಗ್ಗೆ ಹೆಚ್ಚಳಪಡುವುದರಲ್ಲಿ ಏನು ಒಳಗೂಡಿದೆ?

16, 17. ಆಬಾಲವೃದ್ಧ ಕ್ರೈಸ್ತರೆಲ್ಲರೂ, ತಮ್ಮ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಏಕೆ ಹೆಮ್ಮೆಪಟ್ಟುಕೊಳ್ಳಬಹುದು?

18. ನಮ್ಮ ಮೌಲ್ಯಗಳು ಮತ್ತು ಮಟ್ಟಗಳು ನಮ್ಮನ್ನು ಲೋಕದಿಂದ ಹೇಗೆ ಪ್ರತ್ಯೇಕವಾಗಿರಿಸುತ್ತವೆ?

19. ಸತ್ಯ ಕ್ರೈಸ್ತರು ಎಂದಿಗೂ ಏನಾಗದಿರುವರು?

[ಪುಟ 14ರಲ್ಲಿರುವ ಚಿತ್ರ]

ಮೋಶೆಗೆ ಸ್ವಲ್ಪ ಸಮಯದ ವರೆಗೆ ತನ್ನ ಬಗ್ಗೆಯೇ ಸಂದೇಹಗಳಿದ್ದವು

[ಪುಟ 15ರಲ್ಲಿರುವ ಚಿತ್ರಗಳು]

ಯೆಹೋವನ ಅನೇಕ ಪ್ರಾಚೀನ ಸೇವಕರು ತಮ್ಮ ವಿಶಿಷ್ಟ ಗುರುತಿನ ಬಗ್ಗೆ ಹೆಮ್ಮೆಪಟ್ಟುಕೊಂಡರು