ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವುದು

ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವುದು

ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವುದು

“ಯೆಹೋವನ ಮಾತೇನಂದರೆ​—⁠ನೀವು ನನ್ನ ಸಾಕ್ಷಿ.”​—⁠ಯೆಶಾಯ 43:⁠10.

ನೀವು ಒಂದು ರಾಜ್ಯ ಸಭಾಗೃಹದಲ್ಲಿರುವಾಗ, ನಿಮ್ಮ ಸುತ್ತಲಿರುವವರ ಕಡೆಗೆ ಸ್ವಲ್ಪ ಕಣ್ಣು ಹಾಯಿಸಿ. ಈ ಆರಾಧನಾ ಸ್ಥಳದಲ್ಲಿ ನೀವು ಯಾರನ್ನು ನೋಡುತ್ತೀರಿ? ಶಾಸ್ತ್ರೀಯ ವಿವೇಕವನ್ನು ತದೇಕಚಿತ್ತದಿಂದ ಹೀರಿಕೊಳ್ಳುತ್ತಿರುವ ಪ್ರಾಮಾಣಿಕ ಮನಸ್ಸಿನ ಯುವ ಜನರನ್ನು ನೀವು ನೋಡಬಹುದು. (ಕೀರ್ತನೆ 148:​12, 13) ಕುಟುಂಬ ಜೀವನವನ್ನು ಅವಹೇಳನ ಮಾಡುತ್ತಿರುವ ಒಂದು ಲೋಕದಲ್ಲಿ ಜೀವಿಸುತ್ತಿರುವುದಾದರೂ ದೇವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವ ಕುಟುಂಬದ ತಲೆಗಳನ್ನೂ ನೀವು ಬಹುಶಃ ಗಮನಿಸುವಿರಿ. ಪ್ರಿಯರಾದ ವೃದ್ಧ ವ್ಯಕ್ತಿಗಳೂ ನಿಮ್ಮ ದೃಷ್ಟಿಗೆ ಬೀಳಬಹುದು. ಅವರು ಇಳಿವಯಸ್ಸಿನ ವ್ಯಾಧಿಗಳ ಎದುರಿನಲ್ಲೂ ಯೆಹೋವನಿಗೆ ತಾವು ಮಾಡಿರುವ ಸಮರ್ಪಣೆಗೆ ತಕ್ಕಂತೆ ಸ್ಥಿರಚಿತ್ತದಿಂದ ಜೀವಿಸುತ್ತಿದ್ದಾರೆ. (ಜ್ಞಾನೋಕ್ತಿ 16:31) ಇವರೆಲ್ಲರೂ ಯೆಹೋವನನ್ನು ತುಂಬ ಪ್ರೀತಿಸುತ್ತಾರೆ. ಮತ್ತು ಇವರನ್ನು ತನ್ನೊಂದಿಗಿನ ಸಂಬಂಧದೊಳಗೆ ಸೆಳೆಯುವುದು ಸೂಕ್ತವೆಂದು ಆತನಿಗನಿಸಿತು. ದೇವಕುಮಾರನು ಈ ವಿಷಯವನ್ನು ಹೀಗನ್ನುತ್ತಾ ದೃಢೀಕರಿಸಿದನು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.”​—⁠ಯೋಹಾನ 6:37, 44, 65.

2 ಯೆಹೋವನ ಸಮ್ಮತಿ ಹಾಗೂ ಆಶೀರ್ವಾದವಿರುವ ಜನರ ಭಾಗವಾಗಿರಲು ನಾವು ಹರ್ಷಿಸುವುದಿಲ್ಲವೊ? ಆದರೂ, ಈ ‘ಕಡೇ ದಿವಸಗಳ ಕಠಿನಕಾಲಗಳಲ್ಲಿ’ ಕ್ರೈಸ್ತರಾಗಿರುವ ನಮ್ಮ ಗುರುತಿನ ಬಗ್ಗೆ ತೀಕ್ಷ್ಣವಾದ ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಒಂದು ಪಂಥಾಹ್ವಾನವೇ ಸರಿ. (2 ತಿಮೊಥೆಯ 3:⁠1) ಕ್ರೈಸ್ತ ಕುಟುಂಬಗಳಲ್ಲಿ ಬೆಳೆಯುತ್ತಿರುವ ಯುವ ಜನರ ವಿಷಯದಲ್ಲಂತೂ ಇದು ವಿಶೇಷವಾಗಿ ಸತ್ಯವಾಗಿದೆ. ಅಂಥ ಯುವಕರಲ್ಲೊಬ್ಬನು ಒಪ್ಪಿಕೊಂಡದ್ದು: “ನಾನು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದೇನಾದರೂ, ನನಗೆ ಸ್ಪಷ್ಟವಾದ ಆಧ್ಯಾತ್ಮಿಕ ಗುರಿಗಳಿರಲಿಲ್ಲ, ಮತ್ತು ಸತ್ಯವಾಗಿ ಹೇಳುತ್ತೇನೆ, ಯೆಹೋವನನ್ನು ಸೇವಿಸಬೇಕೆಂಬ ಯಾವುದೇ ವೈಯಕ್ತಿಕ ಆಸೆಯಿರಲಿಲ್ಲ.”

3 ಕೆಲವರಿಗಂತೂ ಯೆಹೋವನನ್ನು ಸೇವಿಸಬೇಕೆಂಬ ಪ್ರಾಮಾಣಿಕ ಆಸೆಯಿದ್ದರೂ, ಸಮಾನಸ್ಥರ ತೀಕ್ಷ್ಣ ಒತ್ತಡ, ಲೌಕಿಕ ಪ್ರಭಾವಗಳು ಮತ್ತು ಪಾಪಪೂರ್ಣ ಪ್ರವೃತ್ತಿಗಳಿಂದ ಅವರು ಅಪಕರ್ಷಿತರಾಗಬಹುದು. ನಮ್ಮ ಮೇಲೆ ಒತ್ತಡವು ಹಾಕಲ್ಪಡುವಾಗ, ಅದು ನಾವು ಕ್ರಮೇಣವಾಗಿ ನಮ್ಮ ಕ್ರೈಸ್ತ ಗುರುತನ್ನು ಕಳೆದುಕೊಳ್ಳುವಂತೆ ಮಾಡಬಹುದು. ಉದಾಹರಣೆಗಾಗಿ, ನಮ್ಮ ಈ ಆಧುನಿಕ ಜಗತ್ತಿನಲ್ಲಿ ಬೈಬಲಿನ ನೈತಿಕತೆಯ ಮಟ್ಟಗಳು ಹಳೇ ಶೈಲಿಯದ್ದು ಇಲ್ಲವೆ ಪ್ರಾಯೋಗಿಕವಲ್ಲವೆಂಬ ದೃಷ್ಟಿಕೋನ ಇಂದಿನ ಲೋಕದಲ್ಲಿ ಅನೇಕರಿಗಿದೆ. (1 ಪೇತ್ರ 4:⁠4) ದೇವರು ನಿರ್ದೇಶಿಸುವಂಥ ರೀತಿಯಲ್ಲಿ ಆತನನ್ನು ಆರಾಧಿಸುವುದು ಅತ್ಯಾವಶ್ಯಕವೇನಲ್ಲವೆಂದು ಕೆಲವರಿಗನಿಸುತ್ತದೆ. (ಯೋಹಾನ 4:24) ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ, ಲೋಕಕ್ಕೆ ಒಂದು ‘ಆತ್ಮ’ ಇಲ್ಲವೆ ಪ್ರಬಲವಾದ ಮನೋಭಾವ ಇರುವುದಾಗಿ ತಿಳಿಸುತ್ತಾನೆ. (ಎಫೆಸ 2:⁠2) ಆ ಆತ್ಮವು, ಯೆಹೋವನನ್ನು ಅರಿಯದ ಒಂದು ಸಮಾಜದ ಯೋಚನಾಲಹರಿಗೆ ಹೊಂದಿಕೊಳ್ಳುವಂತೆ ಜನರ ಮೇಲೆ ಒತ್ತಡವನ್ನು ಹಾಕುತ್ತದೆ.

4 ಆದರೆ ಯೆಹೋವನ ಸಮರ್ಪಿತ ಸೇವಕರಾದ ನಮಗೆ, ನಮ್ಮಲ್ಲಿ ಯಾರೇ ಆಗಲಿ, ಆಬಾಲವೃದ್ಧರೇ ಆಗಿರಲಿ, ನಮ್ಮ ಕ್ರೈಸ್ತ ಗುರುತನ್ನು ಕಳೆದುಕೊಳ್ಳುವುದು ಒಂದು ದುರಂತಕರ ಸಂಗತಿಯೆಂಬ ಅರಿವಿದೆ. ಕ್ರೈಸ್ತ ಗುರುತಿನ ಬಗ್ಗೆ ಸೂಕ್ತವಾದ ಪ್ರಜ್ಞೆಯು, ಯೆಹೋವನ ಮಟ್ಟಗಳ ಮೇಲೆ ಮತ್ತು ಆತನು ನಮ್ಮಿಂದ ನಿರೀಕ್ಷಿಸುವಂಥವುಗಳ ಮೇಲೆ ಮಾತ್ರ ಆಧರಿತವಾಗಿರಬಲ್ಲದು. ಇದು ನ್ಯಾಯಸಮ್ಮತ, ಏಕೆಂದರೆ ನಾವು ಆತನ ಸ್ವರೂಪದಲ್ಲೇ ಸೃಷ್ಟಿಸಲ್ಪಟ್ಟಿದ್ದೇವೆ. (ಆದಿಕಾಂಡ 1:26; ಮೀಕ 6:⁠8) ಕ್ರೈಸ್ತರಾಗಿರುವ ನಮ್ಮ ಸ್ಪಷ್ಟವಾದ ಗುರುತನ್ನು ಬೈಬಲು, ಎಲ್ಲರ ಕಣ್ಣಿಗೆ ಬೀಳುವಂಥ ಹೊರ ವಸ್ತ್ರಗಳಿಗೆ ಹೋಲಿಸುತ್ತದೆ. ನಮ್ಮ ಸಮಯಗಳ ಕುರಿತಾಗಿ ಯೇಸು ಎಚ್ಚರಿಸಿದ್ದು: “ಇಗೋ, ಕಳ್ಳನು ಬರುವಂತೆ ಬರುತ್ತೇನೆ; ತಾನು ನಿರ್ವಾಣನಾಗಿ ತಿರುಗಾಡಿ ಅವಮಾನಕ್ಕೆ ಗುರಿಯಾದೇನೆಂದು ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು.” * (ಪ್ರಕಟನೆ 16:15) ನಾವು ನಮ್ಮ ಕ್ರೈಸ್ತ ಗುಣಗಳನ್ನೂ ನಡತೆಯ ಮಟ್ಟಗಳನ್ನೂ ಕಳಚಿಹಾಕಿ, ಸೈತಾನನ ಲೋಕವು ನಮ್ಮನ್ನು ರೂಪಿಸುವಂತೆ ಬಿಡಲು ಬಯಸುವುದಿಲ್ಲ. ಹೀಗಾಗುವಲ್ಲಿ, ನಾವು ಈ “ವಸ್ತ್ರಗಳನ್ನು” ಕಳೆದುಕೊಂಡಂತಾಗುತ್ತದೆ. ಇಂಥ ಸನ್ನಿವೇಶವು ವಿಷಾದನೀಯ ಮತ್ತು ಲಜ್ಜಾಸ್ಪದವೂ ಆಗಿರುವುದು.

5 ಕ್ರೈಸ್ತ ಗುರುತಿನ ಕುರಿತಾದ ತೀಕ್ಷ್ಣವಾದ ಪ್ರಜ್ಞೆಯು, ಒಬ್ಬನ ಜೀವನವು ಯಾವ ದಿಕ್ಕಿನಲ್ಲಿ ಸಾಗುವುದೆಂಬುದರ ಮೇಲೆ ಮಹತ್ತರ ಪ್ರಭಾವವನ್ನು ಬೀರುತ್ತದೆ. ಹೇಗೆ? ಯೆಹೋವನ ಆರಾಧಕನೊಬ್ಬನು ತನ್ನ ಗುರುತಿನ ಕುರಿತಾಗಿ ಸ್ಪಷ್ಟವಾದ ಪ್ರಜ್ಞೆಯನ್ನು ಕಳೆದುಕೊಳ್ಳುವಲ್ಲಿ, ಯಾವುದೇ ಸುನಿರ್ಧರಿತ ದಿಕ್ಕು ಇಲ್ಲವೆ ಗುರಿಗಳಿಲ್ಲದೆ ಅವನು ದಿಕ್ಕುದೆಸೆಯಿಲ್ಲದವನಾಗುವನು. ಇಂಥ ಒಂದು ಅನಿರ್ಧರಿತ ಸ್ಥಿತಿಯ ವಿರುದ್ಧ ಬೈಬಲ್‌ ಪದೇಪದೇ ಎಚ್ಚರಿಸುತ್ತದೆ. ಶಿಷ್ಯನಾದ ಯಾಕೋಬನು ಎಚ್ಚರಿಸಿದ್ದು: “ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು. ಆ ಮನುಷ್ಯನು ತಾನು ಕರ್ತನಿಂದ ಏನಾದರೂ ಹೊಂದುವೆನೆಂದು ಭಾವಿಸದೆ ಇರಲಿ; ಅವನು ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ ಆಗಿದ್ದಾನೆ.”​—⁠ಯಾಕೋಬ 1:6-8; ಎಫೆಸ 4:14; ಇಬ್ರಿಯ 13:⁠9.

6 ನಮ್ಮ ಕ್ರೈಸ್ತ ಗುರುತನ್ನು ನಾವು ಹೇಗೆ ಕಾಪಾಡಿಕೊಳ್ಳಬಹುದು? ಪರಮೋನ್ನತನ ಆರಾಧಕರಾಗಿರಲು ನಮಗಿರುವ ಮಹಾ ಸುಯೋಗದ ಕುರಿತಾದ ಪ್ರಜ್ಞೆಯನ್ನು ಉತ್ತಮಗೊಳಿಸಲು ನಮಗೆ ಯಾವುದು ಸಹಾಯಮಾಡಬಲ್ಲದು? ಈ ಮುಂದಿನ ವಿಧಾನಗಳನ್ನು ದಯವಿಟ್ಟು ಪರಿಗಣಿಸಿರಿ.

ನಿಮ್ಮ ಕ್ರೈಸ್ತ ಗುರುತನ್ನು ದೃಢವಾಗಿ ಸ್ಥಾಪಿಸಿರಿ

7ಯೆಹೋವನೊಂದಿಗಿನ ನಿಮ್ಮ ಸಂಬಂಧವನ್ನು ನಿರಂತರವಾಗಿ ದೃಢೀಕರಿಸುತ್ತಾ ಇರಿ. ಒಬ್ಬ ಕ್ರೈಸ್ತನಿಗಿರುವ ಅತಿ ಅಮೂಲ್ಯವಾದ ಸ್ವತ್ತು, ದೇವರೊಂದಿಗಿನ ಅವನ ವೈಯಕ್ತಿಕ ಸಂಬಂಧವಾಗಿದೆ. (ಕೀರ್ತನೆ 25:14; ಜ್ಞಾನೋಕ್ತಿ 3:32) ನಮ್ಮ ಕ್ರೈಸ್ತ ಗುರುತಿನ ಬಗ್ಗೆ ನಮ್ಮಲ್ಲಿ ಸಂದೇಹಗಳು ಹುಟ್ಟುವಲ್ಲಿ, ಯೆಹೋವನೊಂದಿಗೆ ನಮಗಿರುವ ಸಂಬಂಧದ ಗುಣಮಟ್ಟ ಮತ್ತು ಗಾಢತೆಯನ್ನು ನಾವು ನಿಕಟವಾಗಿ ಪರಿಶೀಲಿಸತಕ್ಕದ್ದು. ಕೀರ್ತನೆಗಾರನು ಸೂಕ್ತವಾಗಿ ಬಿನ್ನೈಸಿದ್ದು: “ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು.” (ಕೀರ್ತನೆ 26:2) ಇಂಥ ಪರಿಶೀಲನೆಯು ಏಕೆ ಅತ್ಯಾವಶ್ಯಕ? ಏಕೆಂದರೆ ನಮ್ಮ ಸ್ವಂತ ಅತಿ ಗಾಢವಾದ ಹೇತುಗಳು ಮತ್ತು ಅಂತರಂಗದ ಪ್ರವೃತ್ತಿಗಳನ್ನು ಸ್ವತಃ ನಾವು ವಿಶ್ವಾಸಾರ್ಹವಾಗಿ ಅಳೆಯಲಾರೆವು. ಕೇವಲ ಯೆಹೋವನು ಮಾತ್ರ ನಮ್ಮ ಆಂತರಿಕ ವ್ಯಕ್ತಿಯನ್ನು, ಅಂದರೆ ನಮ್ಮ ಹೇತುಗಳು, ವಿಚಾರಗಳು ಮತ್ತು ಭಾವನೆಗಳನ್ನು ಗ್ರಹಿಸಬಲ್ಲನು.​—⁠ಯೆರೆಮೀಯ 17:​9, 10.

8 ಯೆಹೋವನು ನಮ್ಮನ್ನು ಪರೀಕ್ಷಿಸುವಂತೆ ಕೇಳಿಕೊಳ್ಳುವ ಮೂಲಕ, ಆತನು ನಮ್ಮನ್ನು ಪರಿಶೀಲಿಸುವಂತೆ ನಾವು ಆಮಂತ್ರಿಸುತ್ತಿದ್ದೇವೆ. ನಮ್ಮ ನಿಜವಾದ ಹೇತುಗಳನ್ನು ಮತ್ತು ಹೃದಯದ ಸ್ಥಿತಿಯನ್ನು ಬಯಲುಪಡಿಸುವ ಸನ್ನಿವೇಶಗಳು ಏಳುವಂತೆ ಆತನು ಅನುಮತಿಸಬಹುದು. (ಇಬ್ರಿಯ 4:​12, 13; ಯಾಕೋಬ 1:​22-25) ನಾವು ಅಂಥ ಪರೀಕ್ಷೆಗಳನ್ನು ಸ್ವಾಗತಿಸಬೇಕು ಏಕೆಂದರೆ ಅವು, ಯೆಹೋವನ ಕಡೆಗಿನ ನಮ್ಮ ನಿಷ್ಠೆಯ ಗಾಢತೆಯನ್ನು ಪ್ರದರ್ಶಿಸಲು ಅವಕಾಶವನ್ನು ಕೊಡುತ್ತವೆ. ನಾವು ‘ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ’ ಆಗಿದ್ದೇವೊ ಎಂಬುದನ್ನು ಅವು ತೋರಿಸಿಕೊಡಬಲ್ಲವು. (ಯಾಕೋಬ 1:2-4) ನಾವು ಪರೀಕ್ಷಿಸಲ್ಪಡುವ ಸಮಯದಲ್ಲೇ ನಾವು ಆಧ್ಯಾತ್ಮಿಕವಾಗಿ ಬೆಳೆಯಲೂ ಸಾಧ್ಯವಿದೆ.​—⁠ಎಫೆಸ 4:​22-24.

9ಬೈಬಲ್‌ ಸತ್ಯವನ್ನು ಸ್ವತಃ ನಿಮಗೇ ರುಜುಪಡಿಸಿಕೊಳ್ಳಿರಿ. ಯೆಹೋವನ ಸೇವಕರಾಗಿರುವ ನಮ್ಮ ಗುರುತಿನ ಕುರಿತಾದ ಪ್ರಜ್ಞೆಯು ಒಂದುವೇಳೆ ಶಾಸ್ತ್ರವಚನಗಳ ಜ್ಞಾನದ ಮೇಲೆ ಬಲವಾಗಿ ಆಧರಿಸಲ್ಪಟ್ಟಿರದಿದ್ದರೆ ದುರ್ಬಲವಾಗಬಲ್ಲದು. (ಫಿಲಿಪ್ಪಿ 1:​9, 10) ವೃದ್ಧರಾಗಿರಲಿ, ಯುವ ಪ್ರಾಯದವರಾಗಿರಲಿ, ಪ್ರತಿಯೊಬ್ಬ ಕ್ರೈಸ್ತನು ತಾನೇನು ನಂಬುತ್ತಿದ್ದೇನೊ ಅದು ನಿಜವಾಗಿಯೂ ಬೈಬಲಿನಲ್ಲಿರುವ ಸತ್ಯವಾಗಿದೆ ಎಂಬುದನ್ನು ಸ್ವತಃ ತನಗೇ ತೃಪ್ತಿಯಾಗುವ ವರೆಗೆ ರುಜುಪಡಿಸಿಕೊಳ್ಳಬೇಕಾಗಿದೆ. ಪೌಲನು ಜೊತೆ ವಿಶ್ವಾಸಿಗಳನ್ನು ಹೀಗೆ ಉತ್ತೇಜಿಸಿದನು: “ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:21) ದೇವಭಯವುಳ್ಳ ಕುಟುಂಬಗಳಿಗೆ ಸೇರಿದವರಾಗಿರುವ ಯುವ ಕ್ರೈಸ್ತರು, ತಮ್ಮ ಹೆತ್ತವರ ನಂಬಿಕೆಯಿಂದ ತಾವು ಸತ್ಕ್ರೈಸ್ತರಾಗಿ ಉಳಿಯಲಾರೆವು ಎಂಬುದನ್ನು ಗ್ರಹಿಸಲೇಬೇಕು. ಸೊಲೊಮೋನನ ತಂದೆಯಾದ ದಾವೀದನೇ ಅವನಿಗೆ, “ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು” ಎಂದು ಬುದ್ಧಿವಾದ ಕೊಟ್ಟನು. (1 ಪೂರ್ವಕಾಲವೃತ್ತಾಂತ 28:9) ತನ್ನ ತಂದೆಯು ಯೆಹೋವನಲ್ಲಿ ಹೇಗೆ ನಂಬಿಕೆಯನ್ನು ಕಟ್ಟುತ್ತಿದ್ದಾನೆಂಬುದನ್ನು ಬರೀ ಗಮನಿಸುವುದು ಯುವ ಸೊಲೊಮೋನನಿಗೆ ಸಾಕಾಗುತ್ತಿರಲಿಲ್ಲ. ಅವನು ಸ್ವತಃ ಯೆಹೋವನನ್ನು ಅರಿತುಕೊಳ್ಳಬೇಕಿತ್ತು, ಮತ್ತು ಅವನದನ್ನು ಮಾಡಿದನು. ಅವನು ದೇವರ ಬಳಿ ಹೀಗೆ ಯಾಚಿಸಿದನು: “ನಾನು ಈ ಜನರ ನಾಯಕನಾಗಿ ಹೋಗುತ್ತಾ ಬರುತ್ತಾ ಇರುವದಕ್ಕೋಸ್ಕರ ನನಗೆ ಜ್ಞಾನವಿವೇಕಗಳನ್ನು ಅನುಗ್ರಹಿಸಬೇಕು.”​—⁠2 ಪೂರ್ವಕಾಲವೃತ್ತಾಂತ 1:10.

10 ಬಲವಾದ ನಂಬಿಕೆಯು ಜ್ಞಾನದ ಮೇಲೆ ಕಟ್ಟಲ್ಪಟ್ಟಿದೆ. “ಸಾರಿದ” ಇಲ್ಲವೆ ಕೇಳಿರುವ “ವಾರ್ತೆಯು ನಂಬಿಕೆಗೆ ಆಧಾರ” ಎಂದು ಪೌಲನು ಹೇಳಿದನು. (ರೋಮಾಪುರ 10:17) ಅವನ ಈ ಮಾತುಗಳ ಅರ್ಥವೇನಾಗಿತ್ತು? ದೇವರ ವಾಕ್ಯದಿಂದ ಉಣ್ಣುವ ಮೂಲಕ ನಾವು ಯೆಹೋವನಲ್ಲಿ, ಆತನ ವಾಗ್ದಾನಗಳಲ್ಲಿ ಮತ್ತು ಆತನ ಸಂಘಟನೆಯಲ್ಲಿನ ನಮ್ಮ ನಂಬಿಕೆ ಹಾಗೂ ಭರವಸೆಯನ್ನು ಕಟ್ಟುತ್ತೇವೆಂಬುದು ಅವನ ಅರ್ಥವಾಗಿತ್ತು. ಬೈಬಲಿನ ಕುರಿತಾಗಿ ಪ್ರಾಮಾಣಿಕವಾದ ಪ್ರಶ್ನೆಗಳನ್ನು ಕೇಳುವುದು ಆಶ್ವಾಸನಾದಾಯಕ ಉತ್ತರಗಳಿಗೆ ನಡೆಸಬಲ್ಲವು. ಅಷ್ಟುಮಾತ್ರವಲ್ಲದೆ, ರೋಮಾಪುರ 12:2ರಲ್ಲಿ ನಾವು ಪೌಲನ ಈ ಬುದ್ಧಿವಾದವನ್ನು ಕಂಡುಕೊಳ್ಳುತ್ತೇವೆ: “ನೀವು ದೇವರ ಒಳ್ಳೆಯ, ಅಂಗೀಕಾರಾರ್ಹವಾದ ಮತ್ತು ಪರಿಪೂರ್ಣ ಚಿತ್ತವನ್ನು ನಿಮಗೆ ನೀವಾಗಿಯೇ ರುಜುಪಡಿಸಿಕೊಳ್ಳಿರಿ.” (NW) ನಾವಿದನ್ನು ಮಾಡುವುದಾದರೂ ಹೇಗೆ? ‘ಸತ್ಯದ ಜ್ಞಾನ’ವನ್ನು ಪಡೆಯುವ ಮೂಲಕವೇ. (ತೀತ 1:⁠1) ಯೆಹೋವನ ಆತ್ಮವು ಕಷ್ಟಕರವಾಗಿರುವ ವಿಷಯಗಳನ್ನೂ ಗ್ರಹಿಸುವಂತೆ ನಮಗೆ ಸಹಾಯಮಾಡಬಲ್ಲದು. (1 ಕೊರಿಂಥ 2:​11, 12) ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಮಗೆ ಸಮಸ್ಯೆಗಳಿರುವಾಗ ನಾವು ದೇವರ ಸಹಾಯಕ್ಕಾಗಿ ಪ್ರಾರ್ಥಿಸಬೇಕು. (ಕೀರ್ತನೆ 119:​10, 11, 27) ನಾವು ಆತನ ವಾಕ್ಯವನ್ನು ಅರ್ಥಮಾಡಿಕೊಳ್ಳಬೇಕು, ಅದನ್ನು ನಂಬಬೇಕು ಮತ್ತು ಅದಕ್ಕೆ ವಿಧೇಯರಾಗಬೇಕೆಂದು ಯೆಹೋವನು ಬಯಸುತ್ತಾನೆ. ಸರಿಯಾದ ಹೇತುವಿನೊಂದಿಗೆ ಕೇಳಲ್ಪಡುವ ಪ್ರಾಮಾಣಿಕ ಪ್ರಶ್ನೆಗಳನ್ನು ಆತನು ಸ್ವಾಗತಿಸುತ್ತಾನೆ.

ದೇವರನ್ನು ಮೆಚ್ಚಿಸಲು ದೃಢಸಂಕಲ್ಪದಿಂದಿರಿ

11ಮನುಷ್ಯನನ್ನಲ್ಲ ಬದಲಾಗಿ ದೇವರನ್ನು ಮೆಚ್ಚಿಸಲು ಪ್ರಯತ್ನಿಸಿರಿ. ಒಂದು ಗುಂಪಿಗೆ ಸೇರಿದವರಾಗಿರುವ ಮೂಲಕ ಸ್ವಲ್ಪ ಮಟ್ಟಿಗೆ ನಮ್ಮ ಗುರುತನ್ನು ಸ್ಥಾಪಿಸುವುದು ಸ್ವಾಭಾವಿಕವೇ ಸರಿ. ಎಲ್ಲರಿಗೂ ಸ್ನೇಹಿತರ ಅಗತ್ಯವಿದೆ ಮತ್ತು ಅಂಗೀಕರಿಸಲ್ಪಡುವುದು ನಮ್ಮಲ್ಲಿ ಹಿತವಾದ ಭಾವನೆಯನ್ನು ಮೂಡಿಸುತ್ತದೆ. ತರುಣಾವಸ್ಥೆಯಲ್ಲಿ ಹಾಗೂ ಜೀವನದಲ್ಲಿ ಮುಂದಕ್ಕೆ ಸಮಾನಸ್ಥರ ಒತ್ತಡವು ಪ್ರಬಲವಾಗಿರಬಲ್ಲದು. ಮತ್ತು ಇದು ಇತರರನ್ನು ಅನುಕರಿಸುವ ಇಲ್ಲವೆ ಮೆಚ್ಚಿಸುವ ವಿಪರೀತ ಆಸೆಯನ್ನು ಹುಟ್ಟಿಸಬಲ್ಲದು. ಆದರೆ ಸ್ನೇಹಿತರು ಮತ್ತು ಸಮಾನಸ್ಥರು ಯಾವಾಗಲೂ ನಮ್ಮ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡಿರುವುದಿಲ್ಲ. ಕೆಲವೊಮ್ಮೆ ಅವರಿಗೆ ತಾವು ಮಾಡುವ ತಪ್ಪುಕೆಲಸದಲ್ಲಿ ಜೊತೆ ಬೇಕಾಗಿರುತ್ತದೆ ಅಷ್ಟೇ. (ಜ್ಞಾನೋಕ್ತಿ 1:​11-19) ಒಬ್ಬ ಕ್ರೈಸ್ತನು ಸಮಾನಸ್ಥರ ನಕಾರಾತ್ಮಕ ಒತ್ತಡಕ್ಕೆ ಮಣಿಯುವಾಗ, ಅವನು ಸಾಮಾನ್ಯವಾಗಿ ತನ್ನ ಗುರುತನ್ನು ಮರೆಮಾಚಲು ಪ್ರಯತ್ನಿಸುತ್ತಾನೆ. (ಕೀರ್ತನೆ 26:⁠4) ‘ಇಹಲೋಕದ ನಡವಳಿಕೆಯನ್ನು ಅನುಸರಿಸದಿರಿ’ ಎಂದು ಅಪೊಸ್ತಲ ಪೌಲನು ಎಚ್ಚರಿಸಿದನು. (ರೋಮಾಪುರ 12:2) ಅವರೊಂದಿಗೆ ಒಳಗೂಡಲಿಕ್ಕಾಗಿ ಬರುವಂಥ ಯಾವುದೇ ಬಾಹ್ಯ ಒತ್ತಡದೊಂದಿಗೆ ಹೋರಾಡಲು ನಮಗೆ ಅಗತ್ಯವಿರುವ ಆಂತರಿಕ ಬಲವನ್ನು ಯೆಹೋವನು ಒದಗಿಸುತ್ತಾನೆ.​—⁠ಇಬ್ರಿಯ 13:⁠6.

12 ಬಾಹ್ಯ ಒತ್ತಡವು ನಮ್ಮ ಕ್ರೈಸ್ತ ಗುರುತಿನ ಪ್ರಜ್ಞೆಯನ್ನು ಹಾನಿಗೊಳಪಡಿಸುವ ಬೆದರಿಕೆಯನ್ನೊಡ್ಡುವಾಗ, ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೇದು. ಅದೇನೆಂದರೆ, ದೇವರ ಕಡೆಗಿನ ನಮ್ಮ ನಿಷ್ಠೆಯು, ಜನರ ಅಭಿಪ್ರಾಯ ಇಲ್ಲವೆ ಅಧಿಕಾಂಶ ಜನರ ಪ್ರವೃತ್ತಿಗಳಿಗಿಂತಲೂ ಹೆಚ್ಚು ಪ್ರಮುಖವಾಗಿದೆ. ವಿಮೋಚನಕಾಂಡ 23:2ರ ಮಾತುಗಳು ನಮ್ಮ ಸುರಕ್ಷೆಗಾಗಿರುವ ಮೂಲತತ್ತ್ವವಾಗಿ ಕಾರ್ಯನಡಿಸುತ್ತವೆ: “ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು.” ಜೊತೆ ಇಸ್ರಾಯೇಲ್ಯರಲ್ಲಿ ಅಧಿಕಾಂಶ ಮಂದಿ ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸುವ ಸಾಮರ್ಥ್ಯವುಳ್ಳವನು ಎಂಬುದರಲ್ಲಿ ಸಂದೇಹವನ್ನು ವ್ಯಕ್ತಪಡಿಸಿದಾಗ, ಕಾಲೇಬನು ಅಧಿಕಾಂಶ ಜನರ ಅಭಿಪ್ರಾಯವನ್ನು ಅನುಸರಿಸಲು ಕಡಾಖಂಡಿತವಾಗಿ ನಿರಾಕರಿಸಿದನು. ದೇವರ ವಾಗ್ದಾನಗಳು ಭರವಸಾರ್ಹವಾಗಿವೆಯೆಂಬ ನಿಶ್ಚಯ ಅವನಿಗಿತ್ತು, ಮತ್ತು ಅವನ ನಿಲುವಿಗಾಗಿ ಅವನಿಗೆ ಹೇರಳವಾದ ಪ್ರತಿಫಲ ದೊರಕಿತು. (ಅರಣ್ಯಕಾಂಡ 13:30; ಯೆಹೋಶುವ 14:​6-11) ನೀವು ಅದೇ ರೀತಿಯಲ್ಲಿ, ದೇವರೊಂದಿಗಿನ ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲಿಕ್ಕಾಗಿ ಜನಪ್ರಿಯ ಅಭಿಪ್ರಾಯದ ಒತ್ತಡವನ್ನು ಪ್ರತಿರೋಧಿಸಲು ಸಿದ್ಧರಿದ್ದೀರೊ?

13ನಿಮ್ಮ ಕ್ರೈಸ್ತ ಗುರುತು ಎಲ್ಲರಿಗೂ ತಿಳಿಯುವಂತೆ ಮಾಡಿ. ನಮ್ಮ ಕ್ರೈಸ್ತ ಗುರುತನ್ನು ಎತ್ತಿಹಿಡಿಯುವಾಗ, ನಾವೇ ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವುದು ಅತಿ ಉತ್ತಮವಾದ ರಕ್ಷಣೆಯಾಗಿರುತ್ತದೆ. ಎಜ್ರನ ದಿನಗಳಲ್ಲಿ, ನಂಬಿಗಸ್ತ ಇಸ್ರಾಯೇಲ್ಯರು ಯೆಹೋವನ ಚಿತ್ತವನ್ನು ಮಾಡುವುದಕ್ಕೆ ವಿರೋಧವನ್ನು ಎದುರಿಸಿದಾಗ ಅವರು ಹೇಳಿದ್ದು: “ನಾವು ಪರಲೋಕಭೂಲೋಕಗಳ ದೇವರ ಸೇವಕರು.” (ಎಜ್ರ 5:11) ದ್ವೇಷವುಳ್ಳ ಜನರ ಪ್ರತಿಕ್ರಿಯೆಗಳು ಮತ್ತು ಟೀಕೆಯಿಂದ ನಾವು ಬಾಧಿಸಲ್ಪಡುವಲ್ಲಿ, ನಾವು ಭಯದಿಂದ ನಿಶ್ಚೇಷ್ಟರಾಗಸಾಧ್ಯವಿದೆ. ಎಲ್ಲರನ್ನೂ ಮೆಚ್ಚಿಸಬೇಕೆಂಬ ನೀತಿಯು, ನಮ್ಮ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸುವುದು. ಆದುದರಿಂದ ಹೆದರಬೇಡಿ. ನೀವೊಬ್ಬ ಯೆಹೋವನ ಸಾಕ್ಷಿಯಾಗಿದ್ದೀರಿ ಎಂದು ಇತರರಿಗೆ ಸ್ಪಷ್ಟವಾಗಿ ತಿಳಿಯಪಡಿಸುವುದು ಯಾವಾಗಲೂ ಒಳ್ಳೇದೇ. ಗೌರವಭರಿತವಾಗಿ ಆದರೆ ಅದೇ ಸಮಯದಲ್ಲಿ ದೃಢವಾಗಿ ನೀವು ನಿಮ್ಮ ಮೌಲ್ಯಗಳನ್ನು, ನಂಬಿಕೆಗಳನ್ನು ಮತ್ತು ಕ್ರೈಸ್ತರಾಗಿ ನಿಮ್ಮ ಸ್ಥಾನವನ್ನು ಇತರರಿಗೆ ವಿವರಿಸಿಹೇಳಬಹುದು. ನೈತಿಕತೆಯ ವಿಷಯದಲ್ಲಿ ಯೆಹೋವನ ಉಚ್ಚ ಮಟ್ಟಗಳನ್ನು ಕಾಪಾಡಿಕೊಳ್ಳಲು ನೀವು ದೃಢಸಂಕಲ್ಪಮಾಡಿದ್ದೀರೆಂದು ಇತರರಿಗೆ ತಿಳಿಯಲಿ. ನಿಮ್ಮ ಕ್ರೈಸ್ತ ಸಮಗ್ರತೆಯು ರಾಜಿಮಾಡಿಕೊಳ್ಳಲಾಗದಂಥದ್ದು ಎಂಬುದನ್ನು ಸ್ಪಷ್ಟಪಡಿಸಿರಿ. ನಿಮ್ಮ ನೈತಿಕ ಮಟ್ಟಗಳ ಬಗ್ಗೆ ನಿಮಗೆ ಹೆಮ್ಮೆ ಇದೆಯೆಂದು ತೋರಿಸಿರಿ. (ಕೀರ್ತನೆ 64:10) ಸ್ಥಿರಚಿತ್ತದ ಕ್ರೈಸ್ತರಾಗಿ ಎದ್ದುನಿಲ್ಲುವುದು ನಿಮ್ಮನ್ನು ಬಲಪಡಿಸಬಲ್ಲದು, ಸಂರಕ್ಷಿಸಬಲ್ಲದು ಮತ್ತು ಯೆಹೋವನ ಹಾಗೂ ಆತನ ಜನರ ಬಗ್ಗೆ ವಿಚಾರಿಸುವಂತೆಯೂ ಕೆಲವರನ್ನು ಪ್ರಚೋದಿಸಬಲ್ಲದು.

14 ಹೌದು, ಕೆಲವರು ನಿಮ್ಮನ್ನು ಅಪಹಾಸ್ಯ ಮಾಡಬಹುದು ಇಲ್ಲವೆ ವಿರೋಧಿಸಬಹುದು. (ಯೂದ 18) ನಿಮ್ಮ ಮೌಲ್ಯಗಳ ಬಗ್ಗೆ ವಿವರಿಸಲು ನೀವು ಮಾಡುವ ಪ್ರಯತ್ನಗಳಿಗೆ ಇತರರು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸದಿರುವಾಗ ನಿರುತ್ತೇಜಿತರಾಗಬೇಡಿ. (ಯೆಹೆಜ್ಕೇಲ 3:​7, 8) ನೀವು ಎಷ್ಟೇ ದೃಢಸಂಕಲ್ಪದವರಾಗಿರಲಿ, ಯಾರಿಗೆ ಮನದಟ್ಟುಮಾಡಿಕೊಳ್ಳಲು ಆಸೆಯೇ ಇಲ್ಲವೊ ಅಂಥ ಜನರಿಗೆ ನೀವು ಎಂದೂ ವಿಷಯಗಳನ್ನು ಮನದಟ್ಟುಮಾಡಲಾರಿರಿ. ಫರೋಹನನ್ನು ನೆನಪಿಸಿಕೊಳ್ಳಿ. ಯಾವುದೇ ಪೀಡೆಯಾಗಲಿ, ಅದ್ಭುತವಾಗಲಿ, ತನ್ನ ಸ್ವಂತ ಜ್ಯೇಷ್ಠಪುತ್ರನ ಸಾವಿನಂಥ ವೈಯಕ್ತಿಕ ನಷ್ಟವು ಸಹ ಅವನಿಗೆ, ಮೋಶೆಯು ಯೆಹೋವನ ಪರವಾಗಿ ಮಾತಾಡುತ್ತಿದ್ದಾನೆ ಎಂಬುದನ್ನು ಮನಗಾಣಿಸಲು ಶಕ್ತವಾಗಲಿಲ್ಲ. ಆದುದರಿಂದ, ಮನುಷ್ಯನ ಭಯ ನಿಮ್ಮನ್ನು ನಿಶ್ಚೇಷ್ಟಗೊಳಿಸುವಂತೆ ಬಿಡಬೇಡಿ. ದೇವರಲ್ಲಿನ ಭರವಸೆ ಮತ್ತು ನಂಬಿಕೆ ನಾವು ಭಯವನ್ನು ಜಯಿಸುವಂತೆ ನಮಗೆ ಸಹಾಯಮಾಡಬಲ್ಲದು.​—⁠ಜ್ಞಾನೋಕ್ತಿ 3:​5, 6; 29:⁠25.

ಗತಕಾಲದಿಂದ ಕಲಿತು ಭವಿಷ್ಯಕ್ಕಾಗಿ ಕಟ್ಟಿರಿ

15ನಿಮ್ಮ ಆಧ್ಯಾತ್ಮಿಕ ಪರಂಪರೆಯನ್ನು ಅಮೂಲ್ಯವೆಂದೆಣಿಸಿರಿ. ದೇವರ ವಾಕ್ಯದ ಬೆಳಕಿನಲ್ಲಿ, ಕ್ರೈಸ್ತರು ತಮ್ಮ ಸಮೃದ್ಧ ಆಧ್ಯಾತ್ಮಿಕ ಪರಂಪರೆಯ ಕುರಿತು ಚಿಂತನಮಾಡುವುದರಿಂದ ಪ್ರಯೋಜನಪಡೆಯುವರು. ಈ ಆಸ್ತಿಯಲ್ಲಿ, ಯೆಹೋವನ ವಾಕ್ಯದ ಸತ್ಯ, ನಿತ್ಯಜೀವದ ನಿರೀಕ್ಷೆ ಮತ್ತು ಸುವಾರ್ತೆಯ ಘೋಷಕರಾಗಿ ದೇವರನ್ನು ಪ್ರತಿನಿಧಿಸುವ ಸನ್ಮಾನ ಸೇರಿರುತ್ತದೆ. ರಾಜ್ಯಸಾರುವಿಕೆಯ ಜೀವರಕ್ಷಕ ಕೆಲಸವು ನೇಮಿಸಲ್ಪಟ್ಟಿರುವ ಸುಯೋಗಭರಿತ ಜನರ ಸಮೂಹವಾಗಿರುವ ಆತನ ಸಾಕ್ಷಿಗಳ ನಡುವೆ ನಿಮ್ಮ ವ್ಯಕ್ತಿಗತ ಸ್ಥಾನವನ್ನು ನೀವು ನೋಡಶಕ್ತರೊ? ಅಲ್ಲದೆ, “ನೀವು ನನ್ನ ಸಾಕ್ಷಿ” ಎಂದು ದೃಢೀಕರಿಸಿ ಹೇಳುವವನು ಸ್ವತಃ ಯೆಹೋವನೇ ಎಂಬುದನ್ನು ನೆನಪಿಡಿರಿ.​—⁠ಯೆಶಾಯ 43:⁠10.

16 ನೀವು ನಿಮಗೇ ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು: ‘ಈ ಆಧ್ಯಾತ್ಮಿಕ ಪರಂಪರೆಯು ನನಗೆಷ್ಟು ಅಮೂಲ್ಯವಾಗಿದೆ? ದೇವರ ಚಿತ್ತವನ್ನು ಮಾಡುವುದಕ್ಕೆ ನನ್ನ ಜೀವನದಲ್ಲಿ ಅತಿ ಉನ್ನತ ಆದ್ಯತೆಯನ್ನು ಕೊಡುವಷ್ಟರ ಮಟ್ಟಿಗೆ ನಾನದನ್ನು ಅಮೂಲ್ಯವೆಂದೆಣಿಸುತ್ತೇನೊ? ಅದಕ್ಕಾಗಿ ನನಗಿರುವ ಗಣ್ಯತೆಯು, ನಾನದನ್ನು ಕಳೆದುಕೊಳ್ಳುವಂತೆ ನಡೆಸಬಹುದಾದ ಯಾವುದೇ ಪ್ರಲೋಭನೆಯನ್ನು ಪ್ರತಿರೋಧಿಸಲು ದೃಢಪಡಿಸುವಷ್ಟು ಬಲವಾಗಿದೆಯೊ?’ ನಮ್ಮ ಆಧ್ಯಾತ್ಮಿಕ ಪರಂಪರೆಯು, ಕೇವಲ ಯೆಹೋವನ ಸಂಘಟನೆಯೊಳಗೆ ಮಾತ್ರ ಆನಂದಿಸಸಾಧ್ಯವಿರುವ ಆಧ್ಯಾತ್ಮಿಕ ಭದ್ರತೆಯ ಗಾಢವಾದ ಪ್ರಜ್ಞೆಯನ್ನೂ ಮೂಡಿಸಬಲ್ಲದು. (ಕೀರ್ತನೆ 91:​1, 2) ಯೆಹೋವನ ಸಂಘಟನೆಯ ಆಧುನಿಕ ದಿನದ ಇತಿಹಾಸದಿಂದ ಗಮನಾರ್ಹ ಘಟನೆಗಳನ್ನು ಪುನರ್ವಿಮರ್ಶಿಸುವುದು, ಯಾವ ವ್ಯಕ್ತಿಯಾಗಲಿ ವಸ್ತುವಾಗಲಿ ಯೆಹೋವನ ಜನರನ್ನು ಭೂಮಿಯಿಂದ ಅಳಿಸಿಹಾಕಲಾಗದು ಎಂಬ ವಿಷಯವನ್ನು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಬಲ್ಲದು.​—⁠ಯೆಶಾಯ 54:17; ಯೆರೆಮೀಯ 1:⁠19.

17 ನಿಜ, ನಾವು ಕೇವಲ ನಮ್ಮ ಆಧ್ಯಾತ್ಮಿಕ ಪರಂಪರೆಯ ಮೇಲೆ ಹೊಂದಿಕೊಳ್ಳಲಾರೆವು. ನಮ್ಮಲ್ಲಿ ಪ್ರತಿಯೊಬ್ಬರು ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಫಿಲಿಪ್ಪಿಯಲ್ಲಿದ್ದ ಕ್ರೈಸ್ತರ ನಂಬಿಕೆಯನ್ನು ಕಟ್ಟಲು ಪೌಲನು ಕಷ್ಟಪಟ್ಟು ಕೆಲಸಮಾಡಿದ ಬಳಿಕ, ಅವನು ಅವರಿಗೆ ಬರೆದುದು: “ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ನನ್ನ ಮಾತನ್ನು ಯಾವಾಗಲೂ ಕೇಳಿದಂತೆ ಈಗಲೂ ಕೇಳಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.” (ಫಿಲಿಪ್ಪಿ 2:12) ನಮ್ಮ ರಕ್ಷಣೆಗಾಗಿ ನಾವು ಬೇರೊಬ್ಬರ ಮೇಲೆ ಅವಲಂಬಿಸಲಾರೆವು.

18ಕ್ರೈಸ್ತ ಚಟುವಟಿಕೆಗಳಲ್ಲಿ ನಿಮ್ಮನ್ನು ತಲ್ಲೀನರಾಗಿರಿಸಿರಿ. “ಕೆಲಸವು ವೈಯಕ್ತಿಕ ಗುರುತನ್ನು ರೂಪಿಸುತ್ತದೆ” ಎಂದು ಹೇಳಲಾಗಿದೆ. ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯನ್ನು ಸಾರುವ ಪ್ರಮುಖ ಕೆಲಸವನ್ನು ಮಾಡಲು ಇಂದು ಕ್ರೈಸ್ತರು ನೇಮಿಸಲ್ಪಟ್ಟಿದ್ದಾರೆ. ಪೌಲನು ಘೋಷಿಸಿದ್ದು: “ನಾನು ಅನ್ಯಜನರಿಗೆ ಅಪೊಸ್ತಲನಾಗಿರಲಾಗಿ ನನ್ನ ಉದ್ಯೋಗವನ್ನು ಗಣ್ಯತೆಗೆ ತರುತ್ತೇನೆ.” (ರೋಮಾಪುರ 11:13) ನಮ್ಮ ಸಾರುವ ಕೆಲಸವು ನಮ್ಮನ್ನು ಲೋಕದಿಂದ ಪ್ರತ್ಯೇಕಿಸುತ್ತದೆ, ಮತ್ತು ಅದರಲ್ಲಿನ ನಮ್ಮ ಪಾಲ್ಗೊಳ್ಳುವಿಕೆಯು ನಮ್ಮ ಕ್ರೈಸ್ತ ಗುರುತನ್ನು ವರ್ಧಿಸುತ್ತದೆ. ಕ್ರೈಸ್ತ ಕೂಟಗಳು, ಆರಾಧನಾ ಸ್ಥಳಗಳನ್ನು ಕಟ್ಟಲಿಕ್ಕಾಗಿರುವ ಕಾರ್ಯಯೋಜನೆಗಳು, ಅಗತ್ಯವಿರುವವರಿಗೆ ಸಹಾಯಮಾಡುವ ಪ್ರಯತ್ನಗಳು ಮುಂತಾದ ಇತರ ದೇವಪ್ರಭುತ್ವಾತ್ಮಕ ಚಟುವಟಿಕೆಯಲ್ಲಿ ತಲ್ಲೀನರಾಗುವುದು, ಕ್ರೈಸ್ತರೆಂಬ ನಮ್ಮ ಗುರುತಿನ ಪ್ರಜ್ಞೆಯನ್ನು ಹೆಚ್ಚು ಗಾಢಗೊಳಿಸಬಲ್ಲದು.​—⁠ಗಲಾತ್ಯ 6:​9, 10; ಇಬ್ರಿಯ 10:​23, 24.

ಸ್ಪಷ್ಟ ಗುರುತು, ನೈಜ ಆಶೀರ್ವಾದಗಳು

19 ನಾವು ಸತ್ಕ್ರೈಸ್ತರಾಗಿರುವುದರಿಂದ ಆನಂದಿಸುವ ಅನೇಕ ಪ್ರಯೋಜನಗಳು ಮತ್ತು ಲಾಭಗಳ ಕುರಿತು ಒಂದು ಕ್ಷಣ ಯೋಚಿಸಿ. ನಮಗೆ ಯೆಹೋವನಿಂದ ವೈಯಕ್ತಿಕವಾಗಿ ಅಂಗೀಕರಿಸಲ್ಪಡುವ ಸುಯೋಗವಿದೆ. ಪ್ರವಾದಿಯಾದ ಮಲಾಕಿಯನು ಹೇಳಿದ್ದು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” (ಮಲಾಕಿಯ 3:16) ದೇವರು ನಮ್ಮನ್ನು ಆತನ ಸ್ನೇಹಿತರನ್ನಾಗಿ ವೀಕ್ಷಿಸಸಾಧ್ಯವಿದೆ. (ಯಾಕೋಬ 2:23) ಬದುಕಿನ ಉದ್ದೇಶದ ಕುರಿತಾದ ಸ್ಪಷ್ಟವಾದ ಪ್ರಜ್ಞೆ, ಗಾಢವಾದ ಅರ್ಥ ಮತ್ತು ಹಿತಕರವೂ ಫಲದಾಯಕವೂ ಆದ ಗುರಿಗಳಿಂದ ನಮ್ಮ ಜೀವಿತವು ಅಲಂಕೃತವಾಗಿದೆ. ಮತ್ತು ನಮಗೆ ನಿತ್ಯ ಭವಿಷ್ಯದ ನಿರೀಕ್ಷೆಯು ಕೊಡಲ್ಪಟ್ಟಿದೆ.​—⁠ಕೀರ್ತನೆ 37:⁠9.

20 ನಿಮ್ಮ ನಿಜವಾದ ಗುರುತು ಮತ್ತು ಮೌಲ್ಯ ಏನಾಗಿದೆ ಎಂಬುದು, ನಿಮ್ಮ ಬಗ್ಗೆ ದೇವರು ಮಾಡುವ ಮಾಲ್ಯಮಾಪನದಿಂದಲೇ ಹೊರತು, ಇತರರು ನಿಮ್ಮ ಬಗ್ಗೆ ಏನು ನೆನಸುತ್ತಾರೊ ಅದರಿಂದ ನಿರ್ಧರಿಸಲ್ಪಡುವುದಿಲ್ಲ. ಇತರರು ನಮ್ಮನ್ನು ಲೋಪವುಳ್ಳ ಮಾನವ ಮಟ್ಟಗಳಿಗನುಸಾರ ತೀರ್ಪುಮಾಡಬಹುದು. ಆದರೆ ದೇವರ ಪ್ರೀತಿ ಮತ್ತು ವೈಯಕ್ತಿಕ ಆಸಕ್ತಿಯು ನಮ್ಮ ಮೌಲ್ಯಕ್ಕೆ​—⁠ನಾವು ಆತನಿಗೆ ಸೇರಿದವರೆಂಬ ಮೌಲ್ಯಕ್ಕೆ​—⁠ನಿಜವಾದ ಆಧಾರವನ್ನು ಕೊಡುತ್ತದೆ. (ಮತ್ತಾಯ 10:​29-31) ಅದಕ್ಕೆ ಪ್ರತಿಯಾಗಿ ದೇವರಿಗಾಗಿರುವ ನಮ್ಮ ಸ್ವಂತ ಪ್ರೀತಿಯು, ಅತಿ ಶ್ರೇಷ್ಠವಾದ ಗುರುತಿನ ಪ್ರಜ್ಞೆಯನ್ನು ಮತ್ತು ನಮ್ಮ ಜೀವನದಲ್ಲಿ ಸ್ಪಷ್ಟವಾದ ದಿಕ್ಕನ್ನು ಕೊಡಬಲ್ಲದು. “ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನೇ ದೇವರು ತಿಳುಕೊಳ್ಳುತ್ತಾನೆ.”​—⁠1 ಕೊರಿಂಥ 8:⁠3.

[ಪಾದಟಿಪ್ಪಣಿ]

^ ಪ್ಯಾರ. 6 ಈ ಮಾತುಗಳು, ಯೆರೂಸಲೇಮಿನಲ್ಲಿದ್ದ ಆಲಯ ದಿಬ್ಬದ ಅಧಿಕಾರಿಯ ಕರ್ತವ್ಯಗಳಿಗೆ ಪರೋಕ್ಷವಾಗಿ ಸೂಚಿಸುತ್ತಿರಬಹುದು. ರಾತ್ರಿಯ ಜಾವಗಳಲ್ಲಿ ಅವನು ಆಲಯದ ಮಧ್ಯದಿಂದ ಹಾದುಹೋಗಿ, ಲೇವ್ಯ ಕಾವಲುಗಾರರು ತಮ್ಮ ಸ್ಥಾನಗಳಲ್ಲಿ ಎಚ್ಚರವಿದ್ದಾರೊ ನಿದ್ರೆಹೋಗಿದ್ದಾರೊ ಎಂದು ನೋಡುತ್ತಿದ್ದನು. ನಿದ್ದೆಹೋಗಿರುವ ಒಬ್ಬ ಕಾವಲುಗಾರನನ್ನು ನೋಡುವಲ್ಲಿ ಅವನನ್ನು ಕೋಲಿನಿಂದ ಹೊಡೆಯಲಾಗುತ್ತಿತ್ತು, ಮತ್ತು ಅವಮಾನಕರ ಶಿಕ್ಷೆಯೋಪಾದಿ ಅವನ ಹೊರ ವಸ್ತ್ರಗಳನ್ನು ಸುಟ್ಟುಹಾಕಲಾಗುತ್ತಿತ್ತು.

ನಿಮಗೆ ಜ್ಞಾಪಕವಿದೆಯೊ?

• ಕ್ರೈಸ್ತರು ತಮ್ಮ ಆಧ್ಯಾತ್ಮಿಕ ಗುರುತನ್ನು ಕಾಪಾಡಿಕೊಳ್ಳುವುದು ಏಕೆ ಆವಶ್ಯಕವಾಗಿದೆ?

• ನಾವು ನಮ್ಮ ಕ್ರೈಸ್ತ ಗುರುತನ್ನು ಹೇಗೆ ದೃಢವಾಗಿ ಸ್ಥಾಪಿಸಬಲ್ಲೆವು?

• ಯಾರನ್ನು ಮೆಚ್ಚಿಸಬೇಕೆಂಬ ಸವಾಲು ನಮ್ಮ ಮುಂದಿರುವಾಗ ಯಾವ ಅಂಶಗಳು ನಾವು ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವಂತೆ ಸಹಾಯಮಾಡಬಲ್ಲವು?

• ನಮ್ಮ ಗುರುತಿನ ಕುರಿತಾದ ಬಲವಾದ ಪ್ರಜ್ಞೆಯು, ಕ್ರೈಸ್ತರಾದ ನಮ್ಮ ಭವಿಷ್ಯವನ್ನು ಹೇಗೆ ರೂಪಿಸಬಲ್ಲದು?

[ಅಧ್ಯಯನ ಪ್ರಶ್ನೆಗಳು]

1. ಯೆಹೋವನು ಯಾವ ರೀತಿಯ ಜನರನ್ನು ತನ್ನ ಕಡೆಗೆ ಸೆಳೆಯುತ್ತಾನೆ?

2, 3. ಕ್ರೈಸ್ತ ಗುರುತಿನ ಬಲವಾದ ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಏಕೆ ಪಂಥಾಹ್ವಾನಕಾರಿ ಆಗಿರಬಲ್ಲದು?

4. ಕ್ರೈಸ್ತರಾಗಿರುವ ನಮ್ಮ ಸ್ಪಷ್ಟವಾದ ಗುರುತನ್ನು ನಾವು ಕಾಪಾಡಿಕೊಳ್ಳುವ ಅಗತ್ಯವನ್ನು ಯೇಸು ಹೇಗೆ ಒತ್ತಿಹೇಳಿದನು?

5, 6. ಆಧ್ಯಾತ್ಮಿಕ ಸ್ಥಿರತೆಯು ಏಕೆ ಅತ್ಯಾವಶ್ಯಕ?

7. ಯೆಹೋವನು ನಮ್ಮನ್ನು ಪರೀಕ್ಷಿಸುವಂತೆ ಬೇಡಿಕೊಳ್ಳುವುದು ಏಕೆ ಪ್ರಯೋಜನದಾಯಕವಾಗಿದೆ?

8. (ಎ) ಯೆಹೋವನಿಂದ ಪರೀಕ್ಷಿಸಲ್ಪಡುವುದು ನಮಗೆ ಹೇಗೆ ಪ್ರಯೋಜನ ತರಬಲ್ಲದು? (ಬಿ) ಒಬ್ಬ ಕ್ರೈಸ್ತರಾಗಿ ನಿಮಗೆ ಹೇಗೆ ಪ್ರಗತಿಮಾಡಲು ಸಹಾಯಸಿಕ್ಕಿದೆ?

9. ಬೈಬಲ್‌ ಸತ್ಯವನ್ನು ನಮಗೆ ನಾವೇ ರುಜುಪಡಿಸಿಕೊಳ್ಳುವುದು ಆಯ್ಕೆಯ ಸಂಗತಿಯೊ? ವಿವರಿಸಿ.

10. ಸರಿಯಾದ ಹೇತುವಿನೊಂದಿಗೆ ಪ್ರಾಮಾಣಿಕ ಪ್ರಶ್ನೆಗಳನ್ನು ಕೇಳುವುದರಲ್ಲಿ ಏನೂ ತಪ್ಪಿಲ್ಲವೇಕೆ?

11. (ಎ) ಯಾವ ಸ್ವಾಭಾವಿಕ ಆಸೆಯು ನಮ್ಮನ್ನು ಪಾಶದಲ್ಲಿ ಸಿಕ್ಕಿಸಬಲ್ಲದು? (ಬಿ) ಸಮಾನಸ್ಥರ ಒತ್ತಡವನ್ನು ಎದುರಿಸಿನಿಲ್ಲಲು ನಾವು ಹೇಗೆ ಧೈರ್ಯವನ್ನು ಒಟ್ಟುಗೂಡಿಸಬಹುದು?

12. ದೇವರಲ್ಲಿನ ನಮ್ಮ ಭರವಸೆಯು ಒಳಗೂಡಿರುವಂಥ ಸಮಯದಲ್ಲಿ ದೃಢವಾಗಿ ನಿಲ್ಲಲು ಯಾವ ಮೂಲತತ್ತ್ವ ಮತ್ತು ಯಾವ ಮಾದರಿಯು ನಮ್ಮನ್ನು ಬಲಪಡಿಸಬಲ್ಲದು?

13. ನಾವು ಕ್ರೈಸ್ತರೆಂಬ ನಮ್ಮ ಗುರುತನ್ನು ಎಲ್ಲರಿಗೂ ತಿಳಿಯಪಡಿಸುವುದು ಏಕೆ ವಿವೇಕಪ್ರದವಾಗಿದೆ?

14. ಅಪಹಾಸ್ಯ ಇಲ್ಲವೆ ವಿರೋಧವು ನಮ್ಮನ್ನು ನಿರುತ್ತೇಜಿಸಬೇಕೊ? ವಿವರಿಸಿ.

15, 16. (ಎ) ನಮ್ಮ ಆಧ್ಯಾತ್ಮಿಕ ಪರಂಪರೆ ಅಂದರೇನು? (ಬಿ) ದೇವರ ವಾಕ್ಯದ ಬೆಳಕಿನಲ್ಲಿ ನಮ್ಮ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಯೋಚಿಸುವುದರಿಂದ ನಾವು ಹೇಗೆ ಪ್ರಯೋಜನಹೊಂದಬಲ್ಲೆವು?

17. ಬರೀ ನಮ್ಮ ಆಧ್ಯಾತ್ಮಿಕ ಪರಂಪರೆಯ ಮೇಲೆ ಅವಲಂಬಿಸುವುದಕ್ಕಿಂತಲೂ ಇನ್ನೂ ಹೆಚ್ಚಾದದ್ದೇನು ಅಗತ್ಯ?

18. ಕ್ರೈಸ್ತ ಚಟುವಟಿಕೆಗಳು ಕ್ರೈಸ್ತ ಗುರುತಿನ ನಮ್ಮ ಪ್ರಜ್ಞೆಯನ್ನು ಹೇಗೆ ವರ್ಧಿಸಬಲ್ಲವು?

19, 20. (ಎ) ಒಬ್ಬ ಕ್ರೈಸ್ತರಾಗಿರುವುದರಿಂದ ನೀವು ವೈಯಕ್ತಿಕವಾಗಿ ಯಾವ ಪ್ರಯೋಜನಗಳಲ್ಲಿ ಆನಂದಿಸಿದ್ದೀರಿ? (ಬಿ) ನಮ್ಮ ನಿಜ ಗುರುತಿಗೆ ಯಾವುದು ಆಧಾರವನ್ನು ಕೊಡುತ್ತದೆ?

[ಪುಟ 21ರಲ್ಲಿರುವ ಚಿತ್ರಗಳು]

ಕ್ರೈಸ್ತ ಚಟುವಟಿಕೆಗಳಲ್ಲಿ ನಮ್ಮನ್ನೇ ತೊಡಗಿಸಿಕೊಳ್ಳುವುದು ನಮ್ಮ ಕ್ರೈಸ್ತ ಗುರುತನ್ನು ವರ್ಧಿಸಬಲ್ಲದು