ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿನ್ನನ್ನು ಬಿಟ್ಟೀ ಹಿಡಿದರೆ’

‘ನಿನ್ನನ್ನು ಬಿಟ್ಟೀ ಹಿಡಿದರೆ’

‘ನಿನ್ನನ್ನು ಬಿಟ್ಟೀ ಹಿಡಿದರೆ’

“ಏಯ್‌ ನೀನು! ಆ ಕೆಲಸವನ್ನು ಈಗಲೇ ನಿಲ್ಲಿಸಿ, ಇಲ್ಲಿ ಬಂದು ನನ್ನ ಈ ಸಾಮಾನನ್ನು ಹೊತ್ತುಕೊಂಡು ಬಾ.” ಪ್ರಥಮ ಶತಮಾನದಲ್ಲಿ ರೋಮನ್‌ ಸೈನಿಕನೊಬ್ಬನು, ತುಂಬ ಕಾರ್ಯಮಗ್ನನಾಗಿದ್ದ ಯೆಹೂದ್ಯನೊಬ್ಬನಿಗೆ ಹಾಗನ್ನುತ್ತಿದ್ದರೆ ಅವನ ಪ್ರತಿಕ್ರಿಯೆ ಏನಾಗಿರುತ್ತಿತ್ತೆಂದು ನೆನಸುತ್ತೀರಿ? ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಶಿಫಾರಸ್ಸುಮಾಡಿದ್ದು: “ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀ ಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು.” (ಮತ್ತಾಯ 5:41) ಈ ಸಲಹೆಯನ್ನು ಯೇಸುವಿನ ಕೇಳುಗರು ಹೇಗೆ ಅರ್ಥಮಾಡಿಕೊಂಡರು? ಮತ್ತು ಇಂದು ನಮಗಾಗಿ ಅದು ಯಾವ ಅರ್ಥವನ್ನು ಹೊಂದಿರಬೇಕು?

ಉತ್ತರಗಳನ್ನು ಪಡೆಯಲಿಕ್ಕಾಗಿ, ಪ್ರಾಚೀನ ಕಾಲಗಳಲ್ಲಿದ್ದ ಕಡ್ಡಾಯ ಸೇವೆಯ ಬಗ್ಗೆ ನಾವು ತಿಳಿದುಕೊಳ್ಳಬೇಕು. ಆ ಪದ್ಧತಿಯು, ಯೇಸುವಿನ ದಿನಗಳಲ್ಲಿದ್ದ ಇಸ್ರಾಯೇಲ್‌ ನಿವಾಸಿಗಳಿಗೆ ಚಿರಪರಿಚಿತವಾಗಿತ್ತು.

ಕಡ್ಡಾಯ ಸೇವೆ

ಪೂರ್ವ ದೇಶಗಳ ಹತ್ತಿರದ ಪ್ರದೇಶಗಳಲ್ಲಿನ ಕಡ್ಡಾಯ ಸೇವೆಯ (ಇಲ್ಲವೆ, ಕಾರ್ವೇ) ಸಾಕ್ಷ್ಯವು, ಸಾ.ಶ.ಪೂ. 18ನೇ ಶತಮಾನದಷ್ಟು ಹಿಂದಿನದ್ದಾಗಿದೆ. ಆಲಾಲಾಖ್‌ ಎಂಬ ಪ್ರಾಚೀನ ಅರಾಮ್ಯ ಪಟ್ಟಣದಿಂದ ಸಿಕ್ಕಿರುವ ಆಡಳಿತ ಗ್ರಂಥಪಾಠಗಳು, ವೈಯಕ್ತಿಕ ಸೇವೆಗಾಗಿ ಸರಕಾರವು ಒತ್ತಾಯದಿಂದ ಸೇರಿಸಿದಂಥ ಕಾರ್ವೇ ತಂಡಗಳ ಬಗ್ಗೆ ಸೂಚಿಸುತ್ತವೆ. ಸಿರಿಯದ ಕರಾವಳಿಯಲ್ಲಿರುವ ಊಗಾರಿಟ್‌ನಲ್ಲಿ, ಬಾಡಿಗೆದಾರ ರೈತರು ಇದೇ ರೀತಿಯ ಕೆಲಸಗಳನ್ನು ಮಾಡಬೇಕಿತ್ತು. ರಾಜನು ಇದರಿಂದ ವಿಮುಕ್ತಿಯನ್ನು ಕೊಟ್ಟರೆ ಮಾತ್ರ ಅವರು ಆ ಕೆಲಸದಿಂದ ವಿನಾಯಿತಿ ಪಡೆಯುತ್ತಿದ್ದರು.

ಪರಾಜಯಗೊಂಡ ಇಲ್ಲವೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಜನರನ್ನು ಆಗಿಂದಾಗ್ಗೆ ಒತ್ತಾಯದ ದುಡಿಮೆಗೆ ಒಳಪಡಿಸಲಾಗುತ್ತಿತ್ತು ನಿಜ. ಐಗುಪ್ತದ ಅಧಿಕಾರಿಗಳು ಇಸ್ರಾಯೇಲ್ಯರು ಇಟ್ಟಿಗೆಗಳನ್ನು ತಯಾರಿಸಲಿಕ್ಕಾಗಿ ಗುಲಾಮಚಾಕರಿ ಮಾಡುವಂತೆ ಒತ್ತಾಯಿಸಿದರು. ತದನಂತರ ಇಸ್ರಾಯೇಲ್ಯರು ವಾಗ್ದತ್ತ ದೇಶದಲ್ಲಿನ ಕಾನಾನ್ಯ ನಿವಾಸಿಗಳನ್ನು ಗುಲಾಮಚಾಕರಿಗೆ ಒಳಪಡಿಸಿದರು ಮತ್ತು ತದ್ರೀತಿಯ ಪದ್ಧತಿಗಳನ್ನು ದಾವೀದ ಸೊಲೊಮೋನರು ಮುಂದುವರಿಸಿಕೊಂಡು ಹೋದರು.​—⁠ವಿಮೋಚನಕಾಂಡ 1:​13, 14; 2 ಸಮುವೇಲ 12:31; 1 ಅರಸುಗಳು 9:​20, 21.

ಇಸ್ರಾಯೇಲ್ಯರು ತಮಗೊಬ್ಬ ಅರಸನು ಬೇಕೆಂದು ಕೇಳಿದಾಗ, ಆ ರಾಜನ ಹಕ್ಕಿನ ಬೇಡಿಕೆ ಏನಾಗಿರುವುದೆಂಬುದನ್ನು ಸಮುವೇಲನು ವಿವರಿಸಿದನು. ಅವನು ತನ್ನ ಪ್ರಜೆಗಳನ್ನು ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಕೆಲಸಮಾಡಲು, ಭೂಮಿಯನ್ನು ಉಳುವವರೂ ಪೈರನ್ನು ಕೊಯ್ಯುವವರೂ ಆಗಿ ಕೆಲಸಮಾಡಲು, ಯುದ್ಧಶಸ್ತ್ರ ಮುಂತಾದವುಗಳನ್ನು ಮಾಡಲು ತೆಗೆದುಕೊಳ್ಳುವನು. (1 ಸಮುವೇಲ 8:​4-17) ಆದರೆ ಯೆಹೋವನಾಲಯದ ನಿರ್ಮಾಣದ ಸಮಯದಲ್ಲಿ ಸೊಲೊಮೋನನು ವಿದೇಶೀಯರನ್ನು ಒತ್ತಾಯದ ಗುಲಾಮಚಾಕರಿಗೆ ಒಳಪಡಿಸಿದರೂ, “ಇಸ್ರಾಯೇಲ್ಯರನ್ನು ಬಿಟ್ಟಿಹಿಡಿಯಲಿಲ್ಲ; ಅವರನ್ನು ಸೈನಿಕರನ್ನಾಗಿಯೂ ಪರಿವಾರದವರನ್ನಾಗಿಯೂ ಅಧಿಪತಿಗಳನ್ನಾಗಿಯೂ ಸರದಾರರನ್ನಾಗಿಯೂ ರಥಾಶ್ವ ಬಲಗಳ ನಾಯಕರನ್ನಾಗಿಯೂ ನೇಮಿಸಿಕೊಂಡನು.”​—⁠1 ಅರಸುಗಳು 9:⁠22.

ಕಟ್ಟಡನಿರ್ಮಾಣ ಕಾರ್ಯಯೋಜನೆಗಳಲ್ಲಿ ಬಳಸಲ್ಪಟ್ಟ ಇಸ್ರಾಯೇಲ್ಯರ ಕುರಿತಾಗಿ 1 ಅರಸುಗಳು 5:​13, 14 ಹೇಳುವುದು: “ಅರಸನಾದ ಸೊಲೊಮೋನನು ಎಲ್ಲಾ ಇಸ್ರಾಯೇಲ್ಯರಲ್ಲಿ ಮೂವತ್ತು ಸಾವಿರ ಮಂದಿಯನ್ನು ಬಿಟ್ಟಿ ಹಿಡಿದು ಅವರಲ್ಲಿ ತಿಂಗಳೊಂದಕ್ಕೆ ಹತ್ತುಸಾವಿರ ಮಂದಿಯಂತೆ ಲೆಬನೋನಿಗೆ ಕಳುಹಿಸುತ್ತಿದ್ದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದರೆ ಎರಡು ತಿಂಗಳು ಮನೆಯಲ್ಲಿರುತ್ತಿದ್ದರು.” ಒಬ್ಬ ವಿದ್ವಾಂಸನು ಹೇಳಿದ್ದು: “ಇಸ್ರಾಯೇಲ್ಯ ಮತ್ತು ಯೆಹೂದಿ ರಾಜರು ತಮ್ಮ ಕಟ್ಟಡನಿರ್ಮಾಣ ಚಟುವಟಿಕೆಗಳಿಗೆ ಹಾಗೂ ತಮ್ಮ ಸ್ವಾಧೀನದಲ್ಲಿದ್ದ ದೇಶಗಳಲ್ಲಿನ ಕೆಲಸಕ್ಕಾಗಿ ಸಂಬಳನೀಡದೆ ಚಾಕರಿಮಾಡಿಸಿಕೊಳ್ಳಲು ‘ಕಾರ್ವೇ’ಯನ್ನು ಉಪಯೋಗಿಸುತ್ತಿದ್ದರೆಂಬುದರಲ್ಲಿ ಸಂದೇಹವೇ ಇಲ್ಲ.”

ಸೊಲೊಮೋನನ ಆಳ್ವಿಕೆಯ ಕೆಳಗೆ ಹೊರೆಯು ತುಂಬ ಭಾರವಾಗಿತ್ತು. ಅದೆಷ್ಟು ಭಾರವಾಗಿತ್ತೆಂದರೆ, ಇಂಥ ಎಲ್ಲಾ ಹೊರೆಗಳನ್ನು ಹೆಚ್ಚಿಸುವೆ ಎಂದು ರೆಹಬ್ಬಾಮನು ಬೆದರಿಕೆಹಾಕಿದಾಗ, ಇಡೀ ಇಸ್ರಾಯೇಲ್‌ ಜನಾಂಗವು ದಂಗೆಯೆದ್ದು ಬಿಟ್ಟೀಕೆಲಸದವರ ಮೇಲ್ವಿಚಾರಕನಿಗೆ ಕಲ್ಲೆಸೆದರು. (1 ಅರಸುಗಳು 12:​12-18) ಹೀಗಿದ್ದರೂ ಆ ಕಾರ್ಯನೀತಿಯನ್ನು ರದ್ದುಗೊಳಿಸಲಾಗಲಿಲ್ಲ. ರೆಹಬ್ಬಾಮನ ಮೊಮ್ಮಗನಾದ ಆಸನು, ಮಿಚ್ಪೆ ಮತ್ತು ಗೆಬ ಎಂಬ ಪಟ್ಟಣಗಳನ್ನು ಕಟ್ಟಲು ಯೆಹೂದದ ಜನರಿಗೆ ಕರೆಕೊಟ್ಟಾಗ ಅವರಲ್ಲಿ ‘ಒಬ್ಬನನ್ನೂ ಬಿಡದೆ ಎಲ್ಲರನ್ನು ಕರಿಸಿದನು.’​—⁠1 ಅರಸುಗಳು 15:⁠22.

ರೋಮನ್‌ ಆಳಿಕೆಯ ಕೆಳಗೆ

ಪ್ರಥಮ ಶತಮಾನದ ಯೆಹೂದ್ಯರಿಗೆ ‘ಬಿಟ್ಟೀಹಿಡಿಯುವ’ ಸಂಗತಿಯು ಚಿರಪರಿಚಿತವಾಗಿತ್ತೆಂದು ಪರ್ವತ ಪ್ರಸಂಗವು ತೋರಿಸುತ್ತದೆ. ‘ಬಿಟ್ಟೀಹಿಡಿಯುವುದು’ ಎಂಬ ವಾಕ್ಸರಣಿಯು, ಅಗ್ಗಾರೀವೊ ಎಂಬ ಗ್ರೀಕ್‌ ಪದದ ಭಾಷಾಂತರವಾಗಿದೆ. ಈ ಪದವು ಮೂಲತಃ ಪರ್ಷಿಯದ ಸುದ್ದಿಮುಟ್ಟಿಸುವ ವೇಗದೂತರ ಚಟುವಟಿಕೆಗೆ ಸಂಬಂಧಿಸಿದ್ದಾಗಿದೆ. ಅವರಿಗೆ ಸಾರ್ವಜನಿಕ ಕೆಲಸವನ್ನು ತ್ವರಿತಗೊಳಿಸಲು ಬೇಕಾಗುವ ಮನುಷ್ಯರನ್ನು, ಕುದುರೆಗಳನ್ನು, ಹಡಗುಗಳನ್ನು ಅಥವಾ ಬೇರಾವುದನ್ನಾದರೂ ಒತ್ತಾಯದಿಂದ ತೆಗೆದುಕೊಂಡು ಬಳಸುವ ಅಧಿಕಾರವಿತ್ತು.

ಯೇಸುವಿನ ದಿನದಲ್ಲಿ ಇಸ್ರಾಯೇಲ್‌ ದೇಶವು ರೋಮನರ ಸ್ವಾಧೀನದಲ್ಲಿತ್ತು. ಮತ್ತು ಇವರೂ ಅದೇ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಪೌರಸ್ತ ಪ್ರಾಂತಗಳಲ್ಲಿ, ಸಾಮಾನ್ಯವಾದ ತೆರಿಗೆಗಳ ಜೊತೆಯಲ್ಲಿ, ಜನರಿಂದ ಕ್ರಮವಾಗಿ ಇಲ್ಲವೆ ಅಸಾಧಾರಣವಾದ ಸನ್ನಿವೇಶ ಏಳುವಾಗ ಕಡ್ಡಾಯದ ಕೆಲಸವನ್ನು ಮಾಡಿಸುವ ಸಾಧ್ಯತೆಯಿತ್ತು. ಇಂಥ ಕೆಲಸಗಳು ಖಂಡಿತವಾಗಿಯೂ ಜನರಿಗೆ ಅಪ್ರಿಯವಾಗಿದ್ದವು. ಅಷ್ಟುಮಾತ್ರವಲ್ಲದೆ ಪ್ರಾಣಿಗಳು, ಚಾಲಕರು ಇಲ್ಲವೆ ಬಂಡಿಗಳನ್ನು ರಾಜ್ಯ ಸಾರಿಗೆಗಾಗಿ ಅನಧಿಕೃತವಾಗಿ ವಶಪಡಿಸಿಕೊಳ್ಳುವುದು ಸರ್ವಸಾಮಾನ್ಯವಾಗಿತ್ತು. ಇತಿಹಾಸಕಾರನಾದ ಮೈಕಲ್‌ ರಸ್ಟಾಫ್‌ಟ್ಸಿಫ್‌ಗನುಸಾರ, “ಆ ಪದ್ಧತಿಯು ಎಷ್ಟು ಸಮಯದ ವರೆಗೆ ಮುಂದುವರಿಯುವುದೊ ಅಷ್ಟರ ತನಕ ಅದು ದುಷ್ಪರಿಣಾಮಗಳನ್ನು ಖಂಡಿತವಾಗಿಯೂ ತರಲಿತ್ತು.” ಆದುದರಿಂದ ಆಡಳಿತಗಾರರು “[ಆ ಪದ್ಧತಿಯನ್ನು] ಕಟ್ಟುಪಾಡಿಗೊಳಪಡಿಸಲು ಮತ್ತು ವ್ಯವಸ್ಥಿತಗೊಳಿಸಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ. . . . ಈ ವ್ಯವಸ್ಥೆಯಲ್ಲಿ, ಅಧಿಕಾರದ ಸ್ವೇಚ್ಛಾಪರ ಬಳಕೆ ಹಾಗೂ ದಬ್ಬಾಳಿಕೆಯನ್ನು ನಿಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ ಮುಖ್ಯಾಧಿಕಾರಿಗಳು ಒಂದರ ನಂತರ ಇನ್ನೊಂದು ಶಾಸನಗಳನ್ನು ಹೊರಡಿಸಿದರು . . . ಆದರೂ ಆ ಪದ್ಧತಿಯು ಹಾಗೆಯೇ ದಬ್ಬಾಳಿಕೆಯದ್ದಾಗಿ ಉಳಿಯಿತು.”

ಒಬ್ಬ ಗ್ರೀಕ್‌ ವಿದ್ವಾಂಸನು ಹೇಳಿದ್ದು: “ಸೈನ್ಯದ ಸಾಮಾನು ಸರಂಜಾಮನ್ನು ಇಂತಿಷ್ಟು ದೂರದ ವರೆಗೆ ಹೊರಲಿಕ್ಕಾಗಿ ಯಾರನ್ನೇ ಆಗಲಿ ಒತ್ತಾಯಿಸಸಾಧ್ಯವಿತ್ತು,” ಮತ್ತು “ಆಕ್ರಮಣಮಾಡಿರುವವರು, ಹೊರುವಂಥ ಯಾವುದೇ ಕೆಲಸವನ್ನು ಮಾಡುವಂತೆ ಯಾವುದೇ ವ್ಯಕ್ತಿಯನ್ನು ಬಲವಂತಪಡಿಸಸಾಧ್ಯವಿತ್ತು.” ಯೇಸುವಿನ ಯಾತನಾ ಕಂಬವನ್ನು ಹೊರಲು ರೋಮನ್‌ ಸೈನಿಕರು ‘ಬಿಟ್ಟೀಹಿಡಿದ’ ಕುರೇನೆಪಟ್ಟಣದ ಸೀಮೋನನನ್ನೂ ಹೀಗೆಯೇ ಒತ್ತಾಯಿಸಲಾಯಿತು.​—⁠ಮತ್ತಾಯ 27:⁠32.

ರಬ್ಬಿಗಳ ಗ್ರಂಥಪಾಠಗಳು ಸಹ ಈ ಅಪ್ರಿಯವಾದ ಪದ್ಧತಿಗೆ ಸೂಚಿಸುತ್ತವೆ. ಉದಾಹರಣೆಗೆ, ಒಬ್ಬ ರಬ್ಬಿಯನ್ನು, ಅರಮನೆಗೆ ಮರ್ಟಲ್‌ ಮರಗಳನ್ನು ರವಾನಿಸಲು ಬಿಟ್ಟೀಹಿಡಿಯಲಾಯಿತು. ಧಣಿಗಳಿಂದ ಕಾರ್ಮಿಕರನ್ನು ತೆಗೆದುಕೊಂಡು ಬೇರೆ ಕೆಲಸಗಳಿಗೆ ಹಾಕಸಾಧ್ಯವಿತ್ತು, ಆದರೆ ಧಣಿಗಳೇ ಅವರ ಸಂಬಳವನ್ನು ಕೊಡಬೇಕಿತ್ತು. ಭಾರಹೊರುವ ಪ್ರಾಣಿಗಳು ಇಲ್ಲವೆ ದನಎತ್ತುಗಳನ್ನು ಸಹ ವಶಪಡಿಸಿಕೊಳ್ಳಸಾಧ್ಯವಿತ್ತು. ಅವುಗಳನ್ನು ಎಂದೂ ಹಿಂದಿರುಗಿಸಲಾಗುತ್ತಿರಲಿಲ್ಲ, ಒಂದುವೇಳೆ ಹಿಂದಿರುಗಿಸಿದರೂ ಅವುಗಳು ಮುಂದೆ ಕೆಲಸಮಾಡುವ ಸ್ಥಿತಿಯಲ್ಲಿರುತ್ತಿರಲಿಲ್ಲ. ಆದುದರಿಂದ ವಶಪಡಿಸಿಕೊಳ್ಳುವುದನ್ನು, ಕಿತ್ತುಕೊಳ್ಳುವುದಕ್ಕೆ ಸಮಾನವಾಗಿ ಏಕೆ ಎಣಿಸಲಾಗುತ್ತಿತ್ತೆಂಬುದನ್ನು ನೀವು ನೋಡಬಹುದು. ಈ ಕಾರಣದಿಂದಲೇ ಒಂದು ಯೆಹೂದಿ ಗಾದೆಯು ಹೀಗನ್ನುತ್ತದೆ: “ಆಗಾರೀಯಾ ಮರಣಕ್ಕೆ ಸಮಾನ.” ಒಬ್ಬ ಇತಿಹಾಸಗಾರನು ಹೇಳುವುದು: “ಭಾರಹೊರಲು ಹೆಚ್ಚು ಉತ್ತಮವಾಗಿರುವ ಪ್ರಾಣಿಗಳ ಬದಲಿಗೆ, ಉಳಲಿಕ್ಕಾಗಿರುವ ಎತ್ತುಗಳನ್ನು ವಶಪಡಿಸಿಕೊಳ್ಳುವುದರಿಂದಾಗಿ ಒಂದು ಹಳ್ಳಿಯನ್ನು ಸಂಪೂರ್ಣವಾಗಿ ಭಗ್ನಗೊಳಿಸಸಾಧ್ಯವಿತ್ತು.”

ಇಂಥ ಸೇವೆಗಳು ಎಷ್ಟು ಅಪ್ರಿಯವಾಗಿದ್ದವೆಂಬುದನ್ನು ನೀವು ಊಹಿಸಬಲ್ಲಿರಿ. ವಿಶೇಷವಾಗಿ ಏಕೆಂದರೆ ಇವುಗಳನ್ನು ಅನೇಕವೇಳೆ ಅಹಂಕಾರ ಮತ್ತು ಅನ್ಯಾಯದಿಂದ ಮಾಡಿಸಲಾಗುತ್ತಿತ್ತು. ತಮ್ಮ ಮೇಲೆ ಆಳಿಕೆ ನಡೆಸುತ್ತಿದ್ದ ಅನ್ಯ ಜಾತಿಗಳ ಪ್ರಭುತ್ವಗಳ ವಿಷಯದಲ್ಲಿ ಯೆಹೂದ್ಯರಿಗೆ ಒಳಗೊಳಗೇ ದ್ವೇಷ ಕುದಿಯುತ್ತಿದ್ದುದರಿಂದ, ಇಂಥ ಕಷ್ಟಕರ ದುಡಿಮೆಗೆ ಒತ್ತಾಯಿಸಲ್ಪಡುವ ಅವಮಾನದ ಬಗ್ಗೆ ಅವರಿಗೆ ತೀವ್ರ ಅಸಮಾಧಾನವಿತ್ತು. ಸದ್ಯದಲ್ಲಿರುವ ಯಾವುದೇ ಕಾನೂನು ಒಬ್ಬ ಪ್ರಜೆಯನ್ನು ಎಷ್ಟರ ಮಟ್ಟಿಗೆ ಒಂದು ಹೊರೆಯನ್ನು ಹೊತ್ತುಕೊಂಡು ಹೋಗಲಿಕ್ಕಾಗಿ ಒತ್ತಾಯಿಸಬಹುದಿತ್ತು ಎಂಬುದನ್ನು ನಮಗೆ ತಿಳಿಸುವುದಿಲ್ಲ. ಆದರೆ ಯಾರೇ ಆಗಲಿ ಕಾನೂನು ಏನನ್ನು ಅವಶ್ಯಪಡಿಸುತ್ತಿತ್ತೊ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲು ಸಿದ್ಧರಿರುತ್ತಿರಲಿಲ್ಲವೆಂಬುದು ಸಂಭಾವ್ಯ.

ಆದರೆ ಯೇಸು, “ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀ ಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು” ಎಂದು ಹೇಳಿದಾಗ ಇದೇ ಪದ್ಧತಿಗೆ ಸೂಚಿಸಿದನು. (ಮತ್ತಾಯ 5:41) ಅದನ್ನು ಕೇಳಿದಾಗ, ಕೆಲವರು ಅವನು ನ್ಯಾಯಸಮ್ಮತನಲ್ಲವೆಂದು ನೆನಸಿರಬೇಕು. ಆದರೆ ಅವನ ಮಾತುಗಳ ಅರ್ಥವೇನಾಗಿತ್ತು?

ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಬೇಕು?

ಸರಳವಾಗಿ ಹೇಳುವುದಾದರೆ, ಯೇಸು ತನ್ನ ಕೇಳುಗರಿಗೆ ಹೇಳುತ್ತಿದ್ದ ಸಂಗತಿಯೇನೆಂದರೆ, ಒಬ್ಬ ಅಧಿಕಾರಿಯು ಅವರನ್ನು ಯಾವುದೇ ರೀತಿಯ ಯುಕ್ತವಾದ ಕೆಲಸಕ್ಕೆ ಒತ್ತಾಯಿಸುವಲ್ಲಿ ಅವರದನ್ನು ಸಿದ್ಧಮನಸ್ಸಿನಿಂದ ಮತ್ತು ಮನಸ್ಸಿನಲ್ಲಿ ಅಸಮಾಧಾನವಿಲ್ಲದೆ ಮಾಡಬೇಕೆಂದೇ. ಈ ರೀತಿಯಲ್ಲಿ ಅವರು “ಕೈಸರನದನ್ನು ಕೈಸರನಿಗೆ” ಕೊಡಬೇಕಿತ್ತು ಆದರೆ “ದೇವರದನ್ನು ದೇವರಿಗೆ” ಕೊಡುವ ತಮ್ಮ ಹಂಗನ್ನು ಅಲಕ್ಷಿಸಬಾರದಿತ್ತು.​—⁠ಮಾರ್ಕ 12:⁠17. *

ಅದಲ್ಲದೆ, ಅಪೊಸ್ತಲ ಪೌಲನು ಕ್ರೈಸ್ತರಿಗೆ ಹೀಗೆ ಬುದ್ಧಿವಾದ ಹೇಳಿದನು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು [“ಅನುಮತಿಸಲ್ಪಟ್ಟವರು,” NW]. ಆದದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮಕವನ್ನು ಎದುರಿಸುತ್ತಾನೆ . . . ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು; ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ.”​—⁠ರೋಮಾಪುರ 13:1-4.

ಈ ರೀತಿಯಲ್ಲಿ ಯೇಸು ಮತ್ತು ಪೌಲನು, ಒಬ್ಬ ರಾಜನಿಗೆ ಇಲ್ಲವೆ ಒಂದು ಸರಕಾರಕ್ಕೆ ಅದರ ಬೇಡಿಕೆಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆಯನ್ನು ವಿಧಿಸಲು ಹಕ್ಕಿದೆಯೆಂಬುದನ್ನು ಅಂಗೀಕರಿಸಿದರು. ಆದರೆ ಯಾವ ರೀತಿಯ ಶಿಕ್ಷೆ ಅದಾಗಿತ್ತು? ಒಂದನೇ ಹಾಗೂ ಎರಡನೇ ಶತಮಾನದ ಗ್ರೀಕ್‌ ತತ್ತ್ವಜ್ಞಾನಿ ಎಪಿಕ್ಟೀಟಸ್‌ ಇದಕ್ಕೆ ಒಂದು ಉತ್ತರವನ್ನು ಒದಗಿಸುತ್ತಾನೆ: “ಮುಂಗಾಣದಿದ್ದಂಥ ಒಂದು ಬೇಡಿಕೆಯನ್ನು ಮಾಡುತ್ತಾ ಒಬ್ಬ ಸೈನಿಕನು ನಿಮ್ಮ ಎಳೆಯ ಕತ್ತೆಯನ್ನು ತೆಗೆದುಕೊಂಡು ಹೋಗುವಲ್ಲಿ, ಅದನ್ನು ಬಿಟ್ಟುಕೊಡಿರಿ. ಪ್ರತಿರೋಧಿಸಬೇಡಿ, ಗುಣುಗುಟ್ಟಬೇಡಿ, ಇಲ್ಲದಿದ್ದಲ್ಲಿ ನಿಮಗೆ ಗುದ್ದುಗಳೂ ಸಿಗುವವು, ಜೊತೆಯಲ್ಲಿ ನೀವು ನಿಮ್ಮ ಕತ್ತೆಯನ್ನೂ ಕಳೆದುಕೊಳ್ಳುವಿರಿ.”

ಆದರೂ, ಪ್ರಾಚೀನ ಹಾಗೂ ಆಧುನಿಕ ಸಮಯಗಳಲ್ಲಿ ಕ್ರೈಸ್ತರಿಗೆ ಕೆಲವು ಸಂದರ್ಭಗಳಲ್ಲಿ ತಾವು ಸರಕಾರದ ಕೆಲವೊಂದು ಬೇಡಿಕೆಗಳನ್ನು ಪೂರೈಸಿ ಒಳ್ಳೇ ಮನಸ್ಸಾಕ್ಷಿಯನ್ನಿಡಲಾರೆವೆಂದು ಅನಿಸಿದೆ. ಇದರ ಫಲಿತಾಂಶಗಳು ಕೆಲವೊಮ್ಮೆ ಗಂಭೀರವಾದದ್ದಾಗಿವೆ. ಕೆಲವು ಕ್ರೈಸ್ತರಿಗೆ ಮರಣದಂಡನೆಯನ್ನೂ ಕೊಡಲಾಗಿದೆ. ಇತರರು, ತಾವು ಯಾವುದನ್ನು ತಟಸ್ಥವಲ್ಲದ ಚಟುವಟಿಕೆಗಳೆಂದು ಪರಿಗಣಿಸಿದರೊ ಅವುಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರಿಂದ ಅನೇಕ ವರ್ಷಗಳ ಕಾಲವನ್ನು ಸೆರೆಮನೆಯಲ್ಲಿ ಕಳೆದಿದ್ದಾರೆ. (ಯೆಶಾಯ 2:4; ಯೋಹಾನ 17:16; 18:36) ಇತರ ಸಂದರ್ಭಗಳಲ್ಲಿ, ಕ್ರೈಸ್ತರಿಗೆ ತಮ್ಮಿಂದ ಏನನ್ನು ಕೇಳಲಾಗಿದೆಯೊ ಅದನ್ನು ತಾವು ಮಾಡಬಲ್ಲೆವು ಎಂದು ಅನಿಸಿದೆ. ಉದಾಹರಣೆಗೆ, ಸಮುದಾಯಕ್ಕೆ ಉಪಯುಕ್ತಕರವಾಗಿರುವ ಸಾಮಾನ್ಯವಾದ ಮಿಲಿಟರಿಯೇತರ ಕೆಲಸವು ಸೇರಿರುವ ಪೌರ ಆಡಳಿತದ ಕೆಳಗೆ ಅಗತ್ಯವಿರುವ ಸೇವೆಗಳನ್ನು ಮಾಡಿ ಒಳ್ಳೇ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಬಲ್ಲೆವೆಂದು ಕೆಲವು ಕ್ರೈಸ್ತರಿಗನಿಸಿದೆ. ಈ ಕೆಲಸಗಳಲ್ಲಿ, ವೃದ್ಧರಿಗೆ ಇಲ್ಲವೆ ನಿಶ್ಶಕ್ತರಿಗೆ ನೆರವು ನೀಡುವುದು, ಅಗ್ನಿಶಾಮಕ ದಳದವರಾಗಿ ಕೆಲಸಮಾಡುವುದು, ಸಮುದ್ರತೀರಗಳನ್ನು ಶುಚಿಗೊಳಿಸುವುದು, ಉದ್ಯಾನಗಳಲ್ಲಿ, ಕಾಡುಗಳಲ್ಲಿ ಇಲ್ಲವೆ ಗ್ರಂಥಾಲಯಗಳಲ್ಲಿ ಕೆಲಸಮಾಡುವುದು ಇತ್ಯಾದಿ ಸೇರಿರಬಹುದು.

ಬೇರೆ ಬೇರೆ ದೇಶಗಳಲ್ಲಿ ಸನ್ನಿವೇಶಗಳು ಭಿನ್ನವಾಗಿರುವುದು ಸಹಜ. ಆದುದರಿಂದ, ಸರಕಾರದ ಬೇಡಿಕೆಗಳನ್ನು ಪಾಲಿಸಬೇಕೊ ಇಲ್ಲವೊ ಎಂಬುದನ್ನು ನಿರ್ಣಯಿಸಲಿಕ್ಕಾಗಿ ಪ್ರತಿಯೊಬ್ಬ ಕ್ರೈಸ್ತನು ತನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಸರಿಸಬೇಕು.

ಎರಡು ಮೈಲು ಹೋಗುವುದು

ಯುಕ್ತವಾದ ಬೇಡಿಕೆಗಳನ್ನು ಪೂರೈಸಲು ಸಿದ್ಧರಿರುವ ವಿಷಯದಲ್ಲಿ ಯೇಸು ಕಲಿಸಿದ ಮೂಲತತ್ತ್ವವು, ಕೇವಲ ಸರಕಾರೀ ಆವಶ್ಯಕತೆಗಳಿಗೆ ಮಾತ್ರವಲ್ಲ ಬದಲಾಗಿ ದೈನಂದಿನ ಮಾನವ ಸಂಬಂಧಗಳಿಗೂ ಅನ್ವಯಿಸುತ್ತದೆ. ದೃಷ್ಟಾಂತಕ್ಕಾಗಿ ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಯು, ನೀವು ಇಷ್ಟಪಡದಂಥ ಆದರೆ ದೇವರ ನಿಯಮವನ್ನು ಮೀರದಂಥ ಒಂದು ಕೆಲಸವನ್ನು ಮಾಡಲು ಹೇಳಬಹುದು. ನೀವು ಹೇಗೆ ಪ್ರತಿಕ್ರಿಯಿಸುವಿರಿ? ಸುಮ್ಮನೆ ನಿಮ್ಮ ಸಮಯ, ಶಕ್ತಿಗಳ ಮೇಲೆ ನ್ಯಾಯಸಮ್ಮತವಲ್ಲದ ಬೇಡಿಕೆಗಳನ್ನು ಮಾಡಲಾಗುತ್ತದೆಂದೆಣಿಸಿ ನೀವು ಕೋಪದಿಂದ ಪ್ರತಿಕ್ರಿಯಿಸಬಹುದು. ಇದರ ಫಲಿತಾಂಶ ಹಗೆಭಾವನೆಯಾಗಿರಬಹುದು. ಇನ್ನೊಂದು ಕಡೆಯಲ್ಲಿ, ನೀವು ಆ ಕೆಲಸವನ್ನು ಒಳಗೊಳಗೇ ಅಸಮಾಧಾನಪಟ್ಟು ಮಾಡುವುದಾದರೆ, ನಿಮ್ಮ ಆಂತರಿಕ ಶಾಂತಿಯನ್ನು ಕಳೆದುಕೊಳ್ಳಬಹುದು. ಇದಕ್ಕೆ ಪರಿಹಾರವೇನು? ಯೇಸು ಹೇಳಿದಂತೆ ಮಾಡಿ​—⁠ಎರಡು ಮೈಲು ಹೋಗಿ. ನಿಮ್ಮಿಂದ ಏನನ್ನು ಕೇಳಿಕೊಳ್ಳಲಾಗಿದೆಯೊ ಅದನ್ನು ಮಾತ್ರವಲ್ಲ ಬದಲಾಗಿ ಅದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿ. ಅದನ್ನು ಸಿದ್ಧಮನಸ್ಸಿನಿಂದ ಮಾಡಿ. ಆ ಮನೋಭಾವವಿರುವಲ್ಲಿ, ನಿಮ್ಮನ್ನು ದುರುಪಯೋಗಿಸಲಾಗುತ್ತಿದೆ ಎಂದು ನಿಮಗೆ ಅನಿಸಲಿಕ್ಕಿಲ್ಲ, ಅದೇ ಸಮಯದಲ್ಲಿ ನಿಮ್ಮ ಸ್ವಂತ ಕೃತ್ಯಗಳ ಮೇಲೆ ನೀವೇ ನಿಯಂತ್ರಣವನ್ನಿಟ್ಟುಕೊಳ್ಳಲು ಸ್ವತಂತ್ರರಾಗಿರುತ್ತೀರಿ.

“ಅನೇಕ ಜನರು ತಮ್ಮ ಇಡೀ ಜೀವನದಲ್ಲಿ, ತಾವು ಮಾಡುವಂತೆ ಒತ್ತಾಯಿಸಲ್ಪಡುವ ಕೆಲಸಗಳನ್ನು ಮಾತ್ರ ಮಾಡುತ್ತಾರೆ,” ಎಂದು ಒಬ್ಬ ಲೇಖಕನು ಹೇಳುತ್ತಾನೆ. “ಅವರಿಗೆ ಜೀವನವು ಒಂದು ಕಷ್ಟಕರವಾದ ಅನುಭವವಾಗಿರುತ್ತದೆ, ಮತ್ತು ಅವರು ಯಾವಾಗಲೂ ದಣಿದಿರುತ್ತಾರೆ. ಇತರರು ತಮ್ಮ ಕರ್ತವ್ಯಕ್ಕಿಂತ ಹೆಚ್ಚಿನದ್ದನ್ನು ಮಾಡುತ್ತಾರೆ ಮತ್ತು ಇತರರಿಗೆ ಸಹಾಯಮಾಡಲು ಸಿದ್ಧರಿರುತ್ತಾರೆ.” ಕಾರ್ಯತಃ ಅನೇಕ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿಯ ಮುಂದೆ ಈ ಆಯ್ಕೆ ಇರುತ್ತದೆ: ಒಂದೊ ಒತ್ತಾಯದಿಂದ ಕೇವಲ ಒಂದು ಮೈಲು ಹೋಗುವುದು ಅಥವಾ ಎರಡು ಮೈಲು ಹೋಗುವುದು. ಮೊದಲನೆಯ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ತನ್ನ ಹಕ್ಕುಗಳನ್ನು ಕೇಳುವುದರಲ್ಲಿ ಆಸಕ್ತನಾಗಿರಬಹುದು. ಆದರೆ ಎರಡನೆಯ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ಅತಿ ಪ್ರತಿಫಲದಾಯಕ ಅನುಭವಗಳನ್ನು ಹೊಂದಸಾಧ್ಯವಿದೆ. ನೀವು ಯಾವ ರೀತಿಯ ವ್ಯಕ್ತಿಯಾಗಿದ್ದೀರಿ? ಒಂದುವೇಳೆ ನೀವು ನಿಮ್ಮ ಚಟುವಟಿಕೆಗಳನ್ನು ತೀರಿಸಬೇಕಾದ ಋಣವಾಗಿ ಇಲ್ಲವೆ ಮಾಡಲೇಬೇಕಾದ ಸಂಗತಿಯಾಗಿ ಅಲ್ಲ ಬದಲಾಗಿ ನೀವು ಮಾಡಲಪೇಕ್ಷಿಸುವಂಥದ್ದಾಗಿ ದೃಷ್ಟಿಸುವಲ್ಲಿ ನೀವು ಬಹುಶಃ ಹೆಚ್ಚು ಸಂತೋಷಿತರೂ ಹೆಚ್ಚು ಪ್ರತಿಫಲಪಡೆಯುವವರೂ ಆಗಿರುವಿರಿ.

ಒಂದುವೇಳೆ ನೀವು ಅಧಿಕಾರದಲ್ಲಿರುವ ವ್ಯಕ್ತಿಯಾಗಿರುವಲ್ಲಿ ಆಗೇನು? ನೀವು ಇತರರಿಂದ ಕೇಳಿಕೊಳ್ಳುವಂಥ ಕೆಲಸವನ್ನು ಅವರು ಒಲ್ಲದ ಮನಸ್ಸಿನಿಂದ ಮಾಡುವಂತೆ ಒತ್ತಾಯಿಸಲಿಕ್ಕಾಗಿ ಅಧಿಕಾರವನ್ನು ಉಪಯೋಗಿಸುವುದು ಪ್ರೀತಿಪರವೂ ಅಲ್ಲ ಕ್ರಿಸ್ತೀಯವೂ ಅಲ್ಲ. “ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರನಡಿಸುತ್ತಾರೆ” ಎಂದು ಯೇಸು ಹೇಳಿದನು. ಆದರೆ ಇದು ಕ್ರೈಸ್ತ ರೀತಿಯಲ್ಲ. (ಮತ್ತಾಯ 20:25, 26) ಅಧಿಕಾರವನ್ನು ಬಲಾತ್ಕಾರದಿಂದ ಹೇರುವುದರಿಂದ ಕೆಲಸವನ್ನು ಮಾಡಿಸಬಹುದಾದರೂ, ದಯಾಪರ ಹಾಗೂ ಸೂಕ್ತವಾದ ಬೇಡಿಕೆಗಳಿಗೆ, ಗೌರವಪೂರ್ವಕವಾದ ಹಾಗೂ ಸಂತೋಷದಿಂದ ಕೂಡಿದ ಅನುಸರಣೆಯ ಪ್ರತಿಕ್ರಿಯೆ ದೊರಕುವಲ್ಲಿ ಪರಸ್ಪರರ ನಡುವಿನ ಸಂಬಂಧಗಳು ಎಷ್ಟು ಉತ್ತಮವಾಗಿರುವವು! ಹೌದು, ಒಂದು ಮೈಲಿಗಿಂತ ಎರಡು ಮೈಲು ಹೋಗಲು ನೀವು ಸಿದ್ಧರಾಗಿರುವಲ್ಲಿ, ಅದು ನಿಜವಾಗಿಯೂ ನಿಮ್ಮ ಜೀವನವನ್ನು ಸಂಪದ್ಯುಕ್ತಗೊಳಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 18 ಕ್ರೈಸ್ತರು ‘ಕೈಸರನದನ್ನು ಕೈಸರನಿಗೆ ಆದರೆ ದೇವರದನ್ನು ದೇವರಿಗೆ ಕೊಡ’ಬೇಕು ಎಂಬುದರ ಅರ್ಥವೇನೆಂಬ ವಿಷಯದ ಪೂರ್ಣ ಚರ್ಚೆಗಾಗಿ, ಕಾವಲಿನಬುರುಜು ಮೇ 1, 1996, ಪುಟ 15-20ನ್ನು ನೋಡಿರಿ.

[ಪುಟ 25ರಲ್ಲಿರುವ ಚೌಕ]

ಪ್ರಾಚೀನಕಾಲದಲ್ಲಿ ಕಡ್ಡಾಯ ದುಡಿಮೆಯ ದುರುಪಯೋಗ

ಕಡ್ಡಾಯ ದುಡಿಮೆಯನ್ನು, ಬಲವಂತವಾಗಿ ಜನರಿಂದ ಕೆಲಸಮಾಡಿಸಲಿಕ್ಕಾಗಿ ನೆಪವಾಗಿ ಉಪಯೋಗಿಸಲಾಗುತ್ತಿತ್ತು ಎಂಬುದನ್ನು, ಇಂಥ ದುರುಪಯೋಗಗಳಿಗೆ ಕಡಿವಾಣಹಾಕಲು ರಚಿಸಲ್ಪಟ್ಟ ಕಟ್ಟಳೆಗಳಿಂದ ತಿಳಿದುಬರುತ್ತದೆ. ಸಾ.ಶ.ಪೂ. 118ರಲ್ಲಿ ಐಗುಪ್ತದ ಟಾಲೆಮಿ ಯೂಅರ್‌ಜೆಟೀಸ್‌ ಹೊರಡಿಸಿದ್ದ ಅಪ್ಪಣೆಯೇನೆಂದರೆ, ತನ್ನ ಅಧಿಕಾರಿಗಳು “ದೇಶದ ನಿವಾಸಿಗಳನ್ನು ಯಾವುದೇ ಖಾಸಗಿ ಕೆಲಸಗಳಿಗಾಗಿ ಒತ್ತಾಯಮಾಡಬಾರದು, ಇಲ್ಲವೆ ತಮ್ಮ ಸ್ವಂತ ಉದ್ದೇಶಕ್ಕಾಗಿ ಅವರ ಜಾನುವಾರುಗಳನ್ನು ಕೇಳಿಕೊಳ್ಳಬಾರದು (ಅಗಾರೂಯಿನ್‌).” ಇದಕ್ಕೆ ಕೂಡಿಸುತ್ತಾ: “ಯಾರೂ . . . ಯಾವುದೇ ಕಾರಣಕ್ಕಾಗಿಯಾಗಲಿ ತನ್ನ ಸ್ವಂತ ಉಪಯೋಗಕ್ಕಾಗಿ ದೋಣಿಗಳನ್ನು ಕೇಳಿಕೊಳ್ಳಬಾರದು.” ಐಗುಪ್ತದ ಗ್ರೇಟ್‌ ಓಯೆಸಿಸ್‌ ಆಲಯದಲ್ಲಿ, ಸಾ.ಶ. 49ರ ತಾರೀಖಿನ ಒಂದು ಶಿಲಾಶಾಸನದಲ್ಲಿ ರೋಮಿನ ಆಡಳಿತ ಮುಖ್ಯಾಧಿಕಾರಿ ವರ್ಜಿಲೀಅಸ್‌ ಕಪಿಟೋ, ಸೈನಿಕರು ಕಾನೂನುವಿರುದ್ಧವಾದ ಕೇಳಿಕೆಗಳನ್ನು ಮಾಡಿದ್ದರೆಂದು ಒಪ್ಪಿಕೊಂಡನು, ಮತ್ತು “ಯಾರೂ . . . ಯಾವುದೇ ವಸ್ತುವನ್ನು ನನ್ನ ಲಿಖಿತ ಪರವಾನಗಿಯಿಲ್ಲದೆ ತೆಗೆದುಕೊಳ್ಳಬಾರದು ಇಲ್ಲವೆ ಕೇಳಿಕೊಳ್ಳಬಾರದು” ಎಂದು ದೃಢವಾಗಿ ಹೇಳಿದನು.

[ಪುಟ 24ರಲ್ಲಿರುವ ಚಿತ್ರ]

ಕುರೇನೆಪಟ್ಟಣದ ಸೀಮೋನನನ್ನು ಬಿಟ್ಟೀಹಿಡಿಯಲಾಯಿತು

[ಪುಟ 26ರಲ್ಲಿರುವ ಚಿತ್ರ]

ತಮ್ಮ ಕ್ರೈಸ್ತ ನಿಲುವನ್ನು ಕಾಪಾಡಿಕೊಂಡದ್ದಕ್ಕಾಗಿ ಅನೇಕ ಸಾಕ್ಷಿಗಳು ಸೆರೆವಾಸವನ್ನು ಅನುಭವಿಸಿದ್ದಾರೆ