ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ನೋಡಿರುವಂಥ ಅದ್ಭುತಗಳು!

ನೀವು ನೋಡಿರುವಂಥ ಅದ್ಭುತಗಳು!

ನೀವು ನೋಡಿರುವಂಥ ಅದ್ಭುತಗಳು!

“ಅದ್ಭುತ” ಎಂಬ ಪದಕ್ಕಿರುವ ಎರಡನೇ ಅರ್ಥವು, “ಅತಿ ಎದ್ದುಕಾಣುವ ಅಥವಾ ಅಸಾಮಾನ್ಯವಾದ ಘಟನೆ, ಸಂಗತಿ ಇಲ್ಲವೆ ಸಾಧನೆ” ಎಂದಾಗಿದೆ. ನಾವೆಲ್ಲರೂ ಇಂಥ ರೀತಿಯ ಅದ್ಭುತವನ್ನು ನೋಡಿದ್ದೇವೆ. ಇದರಲ್ಲಿ ದೇವರ ಹಸ್ತಕ್ಷೇಪವಿಲ್ಲ.

ಪ್ರಕೃತಿಯ ಭೌತಿಕ ನಿಯಮಗಳ ಕುರಿತು ಮಾನವರು ಹೆಚ್ಚೆಚ್ಚು ಜ್ಞಾನವನ್ನು ಪಡೆದುಕೊಂಡಿರುವ ಕಾರಣ, ಹಿಂದೊಮ್ಮೆ ಯಾವುದನ್ನು ಸಾಧಿಸಲು ಅಸಾಧ್ಯವಾಗಿತ್ತೊ ಅಂಥ ವಿಷಯಗಳನ್ನು ಈಗ ಅವರು ಸಾಧಿಸಬಲ್ಲರು. ಉದಾಹರಣೆಗೆ, ನೂರಾರು ವರುಷಗಳ ಹಿಂದೆ ಕಂಪ್ಯೂಟರ್‌, ಟೆಲಿವಿಷನ್‌, ಬಾಹ್ಯಾಕಾಶ ತಂತ್ರಜ್ಞಾನ, ಮತ್ತು ಇದೇ ರೀತಿಯ ಇನ್ನಿತರ ಆಧುನಿಕ ದಿನದ ಬೆಳವಣಿಗೆಗಳನ್ನು ಅಸಾಧ್ಯವೆಂದು ಎಣಿಸಲಾಗುತ್ತಿತ್ತು. ಆದರೆ ಈಗ ಅವು ಎಲ್ಲೆಡೆಯೂ ಕಂಡುಬರುತ್ತವೆ.

ದೇವರ ಸೃಷ್ಟಿಯಲ್ಲಿ ಕಂಡುಬರುವ ವೈಜ್ಞಾನಿಕ ಅದ್ಭುತಗಳ ಕುರಿತು ತಮಗೆ ಭಾಗಶಃ ಮಾತ್ರ ತಿಳಿದಿದೆ ಎಂಬುದನ್ನು ಅಂಗೀಕರಿಸುವ ಕೆಲವು ವಿಜ್ಞಾನಿಗಳು, ಯಾವುದೇ ವಿಷಯವು ಮುಂದೆ ಸಂಭವಿಸದೆಂದು ಖಚಿತವಾಗಿ ಹೇಳಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಹೆಚ್ಚೆಂದರೆ ಅದು ಸಂಭವಿಸದಿರಬಹುದು ಎಂದು ಮಾತ್ರ ಹೇಳಲು ಅವರು ಸಿದ್ಧರಿದ್ದಾರೆ. ಹೀಗೆ ಅವರು ಭವಿಷ್ಯತ್ತಿನಲ್ಲಾಗುವ “ಅದ್ಭುತಗಳಿಗೆ” ದ್ವಾರವನ್ನು ತೆರೆದಿಡುತ್ತಾರೆ.

ಒಂದುವೇಳೆ ನಾವು “ಅದ್ಭುತ” ಎಂಬ ಪದದ ಮೊದಲ ಅರ್ಥವನ್ನು ಉಪಯೋಗಿಸುವುದಾದರೂ ಅಂದರೆ “ಅತಿಮಾನುಷ ಶಕ್ತಿಯಿಂದ ಮಾಡಲ್ಪಡುವ” ವಿಷಯಗಳಿಗೆ ಸೂಚಿಸುವುದಾದರೂ, ನಾವೆಲ್ಲರೂ ಅದ್ಭುತಗಳನ್ನು ನೋಡಿದ್ದೇವೆ ಎಂದು ಹೇಳಬಲ್ಲೆವು. ಉದಾಹರಣೆಗೆ, ನಾವು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ನೋಡುತ್ತೇವೆ. ಇವೆಲ್ಲವೂ “ಅತಿಮಾನುಷ ಶಕ್ತಿಯಿಂದ” ಅಂದರೆ ಸ್ವತಃ ಸೃಷ್ಟಿಕರ್ತನಿಂದ ಮಾಡಲ್ಪಟ್ಟ ವಿಷಯಗಳಾಗಿವೆ. ಇದಲ್ಲದೆ, ಮಾನವ ದೇಹ, ಮಿದುಳು, ಅಥವಾ ಮಾನವ ಭ್ರೂಣವು ಹೇಗೆ ಕ್ರಿಯೆಗೈಯುತ್ತದೆ ಎಂಬುದನ್ನು ಯಾರು ತಾನೇ ಸಂಪೂರ್ಣವಾಗಿ ವಿವರಿಸಬಲ್ಲರು? ದೇಹ ಯಂತ್ರ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುವುದು: “ಕೇಂದ್ರ ನರವ್ಯೂಹದಿಂದ ನಿಯಂತ್ರಿಸಲ್ಪಡುವ ಮತ್ತು ಸಂಘಟಿಸಲ್ಪಡುವ ಮಾನವ ದೇಹವು, ಒಂದು ಜಟಿಲ ಸಂವೇದನಾ ಉಪಕರಣ, ಸ್ವನಿಯಂತ್ರಿತ ಮೊಬೈಲ್‌ ಇಂಜಿನ್‌, ಸ್ವಪುನರುತ್ಪಾದಕ ಕಂಪ್ಯೂಟರ್‌ ಆಗಿದೆ. ಇದು ಒಂದು ಅದ್ಭುತಕರವಾದ ಮತ್ತು ಅನೇಕ ವಿಧಗಳಲ್ಲಿ ರಹಸ್ಯಗರ್ಭಿತವಾದ ಸೃಷ್ಟಿಯಾಗಿದೆ.” ನಿಜವಾಗಿಯೂ, “ಮಾನವ ದೇಹವನ್ನು” ಸೃಷ್ಟಿಸಿದ ದೇವರು ನಮ್ಮನ್ನು ಇಂದಿನ ವರೆಗೂ ಆಶ್ಚರ್ಯಚಕಿತರನ್ನಾಗಿ ಮಾಡುವ ಒಂದು ಅದ್ಭುತವನ್ನು ಮಾಡಿದ್ದಾನೆ. ನೀವು ನೋಡಿರುವ ಇನ್ನೂ ಅನೇಕ ರೀತಿಯ ಅದ್ಭುತಗಳಿವೆ. ಆದರೆ, ಒಂದುವೇಳೆ ನೀವು ಈ ವರೆಗೆ ಅದನ್ನು ಆಲೋಚಿಸಿರಲಿಕ್ಕಿಲ್ಲ.

ಒಂದು ಪುಸ್ತಕವು ಅದ್ಭುತವಾಗಿರಬಲ್ಲದೊ?

ಬೈಬಲಿನಷ್ಟು ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಪುಸ್ತಕವು ಬೇರೊಂದಿಲ್ಲ. ಇದೂ ಒಂದು ಅದ್ಭುತವೆಂದು ನಿಮಗೆ ಅನಿಸುವುದಿಲ್ಲವೊ? ಇದು ಅಸ್ತಿತ್ವದಲ್ಲಿರಲು ‘ಅತಿಮಾನಷ ಶಕ್ತಿಯೇ’ ಕಾರಣವೆಂದು ನಾವು ಹೇಳಬಲ್ಲೆವೊ? ಬೈಬಲ್‌ ಮಾನವರಿಂದ ಬರೆಯಲ್ಪಟ್ಟ ಪುಸ್ತಕವೆಂಬುದು ನಿಜ. ಆದರೆ, ಅವರು ತಮ್ಮ ಸ್ವಂತ ಆಲೋಚನೆಯನ್ನಲ್ಲ ಬದಲಾಗಿ ದೇವರ ಆಲೋಚನೆಯನ್ನೇ ಬರೆದರು. (2 ಸಮುವೇಲ 23:1, 2; 2 ಪೇತ್ರ 1:20, 21) ಇದರ ಕುರಿತು ಆಲೋಚಿಸಿರಿ; ಈ ಪುಸ್ತಕವು 1,600 ಕ್ಕಿಂತಲೂ ಹೆಚ್ಚು ವರುಷಗಳ ಅವಧಿಯಲ್ಲಿ ಜೀವಿಸಿದ ಸುಮಾರು 40 ವ್ಯಕ್ತಿಗಳಿಂದ ಬರೆಯಲ್ಪಟ್ಟಿತು. ಅವರು ಕುರುಬರು, ಮಿಲಿಟರಿ ಪುರುಷರು, ಮೀನು ಹಿಡಿಯುವವರು, ಸಮಾಜ ಸೇವಕರು, ವೈದ್ಯರು, ಯಾಜಕರು ಮತ್ತು ರಾಜರು ಮುಂತಾದ ವಿವಿಧ ಹಿನ್ನೆಲೆಯಿಂದ ಬಂದವರಾಗಿದ್ದರು. ಹಾಗಿದ್ದರೂ, ಅವರೆಲ್ಲರು ಸತ್ಯವೂ ನಿಷ್ಕೃಷ್ಟವೂ ಆದ ಒಂದೇ ರೀತಿಯ ನಿರೀಕ್ಷಾ ಸಂದೇಶವನ್ನು ತಿಳಿಸಶಕ್ತರಾದರು.

ಜಾಗರೂಕ ಅಧ್ಯಯನದ ಆಧಾರದ ಮೇಲೆ ಯೆಹೋವನ ಸಾಕ್ಷಿಗಳು ಬೈಬಲನ್ನು, ಅಪೊಸ್ತಲ ಪೌಲನು ಬರೆದಂತೆ “ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ” ಸ್ವೀಕರಿಸುತ್ತಾರೆ. (1 ಥೆಸಲೊನೀಕ 2:13) ಬೈಬಲಿನಲ್ಲಿ ಕಂಡುಬರುವ ವಿರೋಧೋಕ್ತಿಗಳು ಎಂಬುದಾಗಿ ಹೇಳಲಾಗುವ ವಿಷಯಗಳು ಅದರ ಮುಖ್ಯ ಸಂದೇಶದೊಂದಿಗೆ ಹೇಗೆ ಸಹಮತಿಸಸಾಧ್ಯವಿದೆ ಎಂಬುದನ್ನು ಅನೇಕ ವರುಷಗಳಿಂದ ಅವರ ಸಾಹಿತ್ಯಗಳು ವಿವರಿಸುತ್ತಾ ಬಂದಿವೆ. ಈ ಆಂತರಿಕ ಸಾಮರಸ್ಯವು ತಾನೇ ದೈವಿಕ ಕರ್ತೃತ್ವವನ್ನು ರುಜುಪಡಿಸುತ್ತದೆ. *

ಬೈಬಲನ್ನು ನಾಶಮಾಡಲು ಮಾಡಿರುವಷ್ಟು ಸತತ ಪ್ರಯತ್ನಗಳಿಗೆ ಇನ್ನಾವುದೇ ಪುಸ್ತಕವು ಗುರಿಯಾಗಿರುವುದಿಲ್ಲ. ಹಾಗಿದ್ದರೂ, ಅದು ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಕಡಿಮೆಪಕ್ಷ ಭಾಗಶಃ 2,000ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. ಈ ಗ್ರಂಥದ ಮತ್ತು ಅದರ ಗ್ರಂಥಪಾಠದ ಪ್ರಾಮಾಣಿಕತೆಯ ಸಂರಕ್ಷಣೆಯು, ಇದರಲ್ಲಿ ದೈವಿಕ ಹಸ್ತಕ್ಷೇಪವಿದೆ ಎಂಬುದನ್ನು ರುಜುಪಡಿಸುತ್ತದೆ. ಬೈಬಲ್‌ ನಿಜವಾಗಿಯೂ ಒಂದು ಅದ್ಭುತವೇ ಸರಿ!

‘ಸಜೀವವಾದ ಮತ್ತು ಕಾರ್ಯಸಾಧಕವಾದ’ ಒಂದು ಅದ್ಭುತ

ಅದ್ಭುತಕರವಾದ ವಾಸಿಮಾಡುವಿಕೆ ಮತ್ತು ಪುನರುತ್ಥಾನವೇ ಮುಂತಾದ ಗತಕಾಲಗಳಲ್ಲಿ ಸಂಭವಿಸುತ್ತಿದ್ದ ಅದ್ಭುತಗಳು ಈಗ ಸಂಭವಿಸುವುದಿಲ್ಲ. ಆದರೆ, ಮುಂದೆ ಬರಲಿರುವ ದೇವರ ನೂತನ ಲೋಕದಲ್ಲಿ ಅಂಥ ಅದ್ಭುತಗಳು ಪುನಃ ಒಮ್ಮೆ ಸಂಭವಿಸಲಿವೆ ಮತ್ತು ಈ ಬಾರಿ ಲೋಕವ್ಯಾಪಕವಾಗಿ ಸಂಭವಿಸಲಿವೆ ಎಂದು ಭರವಸೆಯಿಡಲು ನಮಗೆ ಸಕಾರಣವಿದೆ. ಅವು ನಮಗೆ ಶಾಶ್ವತ ಉಪಶಮನವನ್ನು ತರುವವು ಮತ್ತು ಆ ಉಪಶಮನವು ನಮ್ಮ ಈಗಿನ ಗ್ರಹಣಸಾಮರ್ಥ್ಯವನ್ನು ಮೀರಿಹೋಗುವುದು.

ಅದ್ಭುತಕರವಾಗಿ ಒದಗಿಸಲ್ಪಟ್ಟಿರುವ ಬೈಬಲ್‌ ಇಂದು ಸಹ ಜನರು ತಮ್ಮ ವ್ಯಕ್ತಿತ್ವಗಳನ್ನು ಉತ್ತಮಗೊಳಿಸುವಂತೆ ಪ್ರಚೋದಿಸುವ ಮೂಲಕ ಅದ್ಭುತಗಳನ್ನು ನಡೆಸುತ್ತಿದೆ. (8ನೇ ಪುಟದಲ್ಲಿ, “ದೇವರ ವಾಕ್ಯದ ಶಕ್ತಿ” ಎಂಬ ಚೌಕದಲ್ಲಿರುವ ಅನುಭವವನ್ನು ನೋಡಿ.) ಇಬ್ರಿಯ 4:12 ತಿಳಿಸುವುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” ಹೌದು, ಲೋಕವ್ಯಾಪಕವಾಗಿರುವ 60 ಲಕ್ಷಕ್ಕಿಂತಲೂ ಹೆಚ್ಚಿನ ಜನರ ಜೀವಿತಗಳನ್ನು ಬದಲಾಯಿಸಲು ಬೈಬಲ್‌ ಶಕ್ತವಾಗಿದೆ. ಈಗ ಅದು ಅವರ ಜೀವಿತವನ್ನು ಉದ್ದೇಶದಿಂದ ತುಂಬಿಸಿ, ಭವಿಷ್ಯತ್ತಿಗಾಗಿ ಅವರಿಗೆ ಒಂದು ಅದ್ಭುತಕರ ನಿರೀಕ್ಷೆಯನ್ನು ನೀಡಿದೆ.

ನಿಮ್ಮ ಜೀವನದಲ್ಲಿಯೂ ಬೈಬಲ್‌ ಒಂದು ಅದ್ಭುತವನ್ನು ನಡೆಸುವಂತೆ ಏಕೆ ಅನುಮತಿಸಬಾರದು?

[ಪಾದಟಿಪ್ಪಣಿ]

^ ಪ್ಯಾರ. 8 ವಿರೋಧೋಕ್ತಿಗಳು ಎಂಬುದಾಗಿ ಹೇಳಲಾಗುವ ಹೆಚ್ಚಿನ ವಿಷಯಗಳು ಹೇಗೆ ಬೈಬಲಿನೊಂದಿಗೆ ಸಹಮತದಲ್ಲಿವೆ ಎಂಬುದನ್ನು ಪರಿಶೋಧಿಸಲು ನೀವು ಇಚ್ಛಿಸುವುದಾದರೆ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಬೈಬಲ್‌​—⁠ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌) ಎಂಬ ಪುಸ್ತಕದ 7ನೇ ಅಧ್ಯಾಯದಲ್ಲಿ ಅನೇಕಾನೇಕ ಉದಾಹರಣೆಗಳು ಪರಿಗಣಿಸಲ್ಪಟ್ಟಿವೆ.

[ಪುಟ 7ರಲ್ಲಿರುವ ಚೌಕ/ಚಿತ್ರ]

ಸತ್ತಿದ್ದನೊ ಅಥವಾ ಇನ್ನೂ ಜೀವಂತವಿದ್ದನೊ?

ಯೋಹಾನ 19:​33, 34ಕ್ಕನುಸಾರ, “ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ [ಯೇಸುವಿನ] ಪಕ್ಕೆಯನ್ನು ತಿವಿದನು; ತಿವಿದ ಕೂಡಲೆ ರಕ್ತವೂ ನೀರೂ ಹೊರಟಿತು.” ಈ ಸಮಯಕ್ಕೆ ಮೊದಲೇ ಯೇಸು ಸತ್ತಿದ್ದನು. ಹಾಗಿದ್ದರೂ, ಕೆಲವು ಭಾಷಾಂತರಗಳು ಮತ್ತಾಯ 27:​49, 50ರಲ್ಲಿ, ಇದು ಸಂಭವಿಸುವಾಗ ಯೇಸು ಜೀವಂತವಾಗಿದ್ದನು ಎಂಬುದಾಗಿ ಸೂಚಿಸುತ್ತವೆ. ಈ ವ್ಯತ್ಯಾಸವೇಕೆ?

ಮೋಶೆಯ ಧರ್ಮಶಾಸ್ತ್ರವು ಅಪರಾಧಿಯನ್ನು ಇಡೀ ರಾತ್ರಿ ವಧಾ ಸ್ತಂಭದಲ್ಲಿ ತೂಗುಹಾಕಲ್ಪಟ್ಟಿರುವಂತೆ ಬಿಡುವುದನ್ನು ನಿಷೇಧಿಸಿತ್ತು. (ಧರ್ಮೋಪದೇಶಕಾಂಡ 21:​22, 23) ಆದುದರಿಂದ ಯೇಸುವಿನ ದಿನಗಳಲ್ಲಿ, ಶೂಲಕ್ಕೇರಿಸಲ್ಪಟ್ಟ ಅಪರಾಧಿಯು ಸಂಜೆಯ ವರೆಗೆ ಜೀವಂತನಾಗಿದ್ದರೆ ಅವನ ಕಾಲುಗಳನ್ನು ಮುರಿದು, ಅವನು ಬೇಗ ಸಾಯುವಂತೆ ಮಾಡಲಾಗುತ್ತಿತ್ತು. ಈ ರೀತಿಯಲ್ಲಿ ಅವನು ಸರಿಯಾಗಿ ಉಸಿರಾಡಸಾಧ್ಯವಾಗುವಂತೆ ತನ್ನನ್ನು ನೇರವಾಗಿಟ್ಟುಕೊಳ್ಳಲು ಅಶಕ್ತನಾಗುತ್ತಿದ್ದನು. ಯೇಸುವಿನೊಂದಿಗೆ ಶೂಲಕ್ಕೇರಿಸಲ್ಪಟ್ಟ ಇಬ್ಬರೂ ದುಷ್ಕರ್ಮಿಗಳ ಕಾಲುಗಳನ್ನು ಸಿಪಾಯಿಗಳು ಮುರಿದರು, ಆದರೆ ಯೇಸುವಿನ ಕಾಲುಗಳನ್ನು ಮುರಿಯಲಿಲ್ಲ ಎಂಬ ವಾಸ್ತವಾಂಶ ತಾನೇ ಅವನು ಸತ್ತಿದ್ದನೆಂದು ಅವರು ತಿಳಿದಿದ್ದರು ಎಂಬುದನ್ನು ಸೂಚಿಸುತ್ತದೆ. ಆದರೂ ಯಾವುದೇ ಸಂಶಯವು ಉಳಿಯಬಾರದೆಂಬ ಮತ್ತು ಮುಂದಕ್ಕೆ ಅವನು ಪುನರುತ್ಥಾನಗೊಂಡನೆಂದು ಜನರು ಸುಳ್ಳಾಗಿ ಹೇಳಬಹುದಾದ ವಿಷಯಕ್ಕೆ ಯಾವುದೇ ಅವಕಾಶವನ್ನು ನೀಡಬಾರದೆಂಬ ಕಾರಣಕ್ಕಾಗಿ ಒಂದುವೇಳೆ ಸಿಪಾಯಿಗಳಲ್ಲಿ ಒಬ್ಬನು ಅವನ ಪಕ್ಕೆಯನ್ನು ತಿವಿದಿರಬೇಕು.

ಕೆಲವು ಭಾಷಾಂತರಗಳು ಮತ್ತಾಯ 27:​49, 50ರಲ್ಲಿ ಈ ಘಟನೆಯನ್ನು ಭಿನ್ನವಾದ ಅನುಕ್ರಮದಲ್ಲಿ ತಿಳಿಸುತ್ತವೆ. ಅದು ತಿಳಿಸುವುದು: “ಇನ್ನೊಬ್ಬ ಮನುಷ್ಯನು ತನ್ನ ಈಟಿಯಿಂದ ಅವನ ಪಕ್ಕೆಯನ್ನು ತಿವಿದನು; ಆಗ ರಕ್ತವೂ ನೀರೂ ಹೊರಬಂತು. ಯೇಸು ತಿರಿಗಿ ಮಹಾ ಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.” ಆದರೆ ಓರೆ ಅಕ್ಷರದಲ್ಲಿರುವ ಈ ಪದಗಳು ಪುರಾತನ ಕಾಲದ ಎಲ್ಲಾ ಬೈಬಲ್‌ ಹಸ್ತಪ್ರತಿಗಳಲ್ಲಿ ಕಂಡುಬರುವುದಿಲ್ಲ. ಸಮಯಾನಂತರ ಈ ಪದಗಳನ್ನು ಯೋಹಾನನ ಸುವಾರ್ತೆಯಿಂದ ತೆಗೆದು ಸೇರಿಸಲಾಯಿತು, ಆದರೆ ಸೇರಿಸುವಾಗ ತಪ್ಪಾದ ಜಾಗದಲ್ಲಿ ಅದನ್ನು ಹಾಕಲಾಯಿತು ಎಂದು ಅನೇಕ ಅಧಿಕಾರಿಗಳು ನಂಬುತ್ತಾರೆ. ಆದುದರಿಂದ, ಅನೇಕ ಭಾಷಾಂತರಗಳು ಈ ವಾಕ್ಯವನ್ನು ಆವರಣ ಚಿಹ್ನೆಯೊಳಗೆ ಹಾಕಿವೆ, ಅಥವಾ ಒಂದು ಪಾದಟಿಪ್ಪಣಿಯನ್ನು ಕೊಟ್ಟು ವಿವರಿಸಿವೆ, ಇಲ್ಲವೆ ಈ ವಾಕ್ಯವನ್ನೇ ಸಂಪೂರ್ಣವಾಗಿ ತೆಗೆದುಹಾಕಿವೆ.

ವೆಸ್ಕಾಟ್‌ ಮತ್ತು ಹಾರ್ಟ್‌ರವರ ಪ್ರಧಾನ ಗ್ರಂಥಪಾಠವನ್ನು ಮೂಲಭೂತವಾಗಿ ಉಪಯೋಗಿಸಿದ ನೂತನ ಲೋಕ ಭಾಷಾಂತರವು, ಈ ವಾಕ್ಯವನ್ನು ಎರಡು ಆವರಣ ಚಿಹ್ನೆಗಳೊಳಗೆ ಹಾಕಿವೆ. ಅಷ್ಟುಮಾತ್ರವಲ್ಲದೆ, ಆ ಪ್ರಧಾನ ಗ್ರಂಥಪಾಠವು ಒಂದು ಉಲ್ಲೇಖದಲ್ಲಿ ಹೀಗೆ ತಿಳಿಸುತ್ತದೆ: ಈ ವಾಕ್ಯವು “ಶಾಸ್ತ್ರಿಗಳಿಂದ ಒಳಸೇರಿಸಲ್ಪಟ್ಟಿರಬಹುದು ಎಂಬುದಕ್ಕೆ ಬಲವಾದ ಸಂಭಾವ್ಯತೆ ಇದೆ.”

ಆದುದರಿಂದ, ಯೋಹಾನ 19:​33, 34ರಲ್ಲಿ ತಿಳಿಸಿರುವ ವಿಷಯವು ಸತ್ಯವಾಗಿದೆ ಮತ್ತು ರೋಮನ್‌ ಸಿಪಾಯಿಯು ಯೇಸುವನ್ನು ಈಟಿಯಿಂದ ತಿವಿಯುವ ಮುಂಚೆಯೇ ಅವನು ಸತ್ತಿದ್ದನು ಎಂಬುದನ್ನು ವಿಪುಲವಾದ ಸಾಕ್ಷ್ಯಗಳು ರುಜುಪಡಿಸುತ್ತವೆ.

[ಪುಟ 8ರಲ್ಲಿರುವ ಚೌಕ/ಚಿತ್ರ]

ದೇವರ ವಾಕ್ಯದ ಶಕ್ತಿ

ಹದಿವಯಸ್ಕನೂ ವಿಭಾಜಿತ ಕುಟುಂಬದ ಸದಸ್ಯನೂ ಆದ ಡೆಟ್‌ಲೆಫ್‌ * ಮಾದಕ ಪದಾರ್ಥ, ಮದ್ಯಪಾನ ಸೇವನೆ, ಮತ್ತು ಹೆವಿ ಮೆಟಲ್‌ ಸಂಗೀತ ಈ ಮುಂತಾದ ವಿಷಯಗಳಲ್ಲಿ ಒಳಗೂಡಿದನು. ಅವನು ಸ್ಕಿನ್‌ಹೆಡ್‌ (ಮೊಟಕು ತಲೆಗೂದಲಿನ) ತಂಡದ ಸದಸ್ಯನಾದನು ಮತ್ತು ಅವನ ಹಿಂಸಾತ್ಮಕ ವರ್ತನೆಯು ಬೇಗನೆ ಅವನನ್ನು ಪೊಲೀಸರ ಕೈಗೆ ಸಿಕ್ಕುವಂತೆ ಮಾಡಿತು.

ಇಸವಿ 1992ರಲ್ಲಿ, ಸ್ಕಿನ್‌ಹೆಡ್‌ ಗುಂಪಿಗೆ ಸೇರಿದ 60 ಮಂದಿ ಈಶಾನ್ಯ ಜರ್ಮನಿಯಲ್ಲಿನ ಒಂದು ಬಾರ್‌ ಮತ್ತು ರೆಸ್ಟರಾಂಟ್‌ನಲ್ಲಿ 35 ಮಂದಿ ಪಂಕ್‌ರಾಕ್‌ ಸಂಗೀತ ಪುಂಡರೊಂದಿಗೆ ಕಾದಾಟದಲ್ಲಿ ಒಳಗೂಡಿದರು. ಪಂಕ್‌ ತಂಡದ ಥಾಮಸ್‌ ಎಂಬ ಒಬ್ಬ ವ್ಯಕ್ತಿ ಅತಿಯಾದ ಹೊಡೆತಕ್ಕೆ ಗುರಿಯಾದ ಕಾರಣ ಮೃತಪಟ್ಟನು. ಡೆಟ್‌ಲೆಫ್‌ ಮತ್ತು ಆ ಗುಂಪಿನ ಅನೇಕ ನಾಯಕರು ವಿಚಾರಣೆಯ ನಂತರ ಸೆರೆಮನೆಗೆ ಹಾಕಲ್ಪಟ್ಟರು. ಮತ್ತು ಇದು ವಾರ್ತಾ ಮಾಧ್ಯಮಗಳಲ್ಲಿ ಮುಖ್ಯ ಸುದ್ದಿಯಾಯಿತು.

ಡೆಟ್‌ಲೆಫ್‌ ಸೆರೆಮನೆಯಿಂದ ಬಿಡುಗಡೆಹೊಂದಿದ ಸ್ವಲ್ಪ ಸಮಯದ ಅನಂತರ, ಯೆಹೋವನ ಸಾಕ್ಷಿಗಳಿಂದ ಅವನಿಗೆ ಒಂದು ಕರಪತ್ರವು ನೀಡಲ್ಪಟ್ಟಿತು. “ಜೀವನವು ಇಷ್ಟೊಂದು ಸಮಸ್ಯೆಗಳಿಂದ ತುಂಬಿರುವುದೇಕೆ?” ಎಂಬ ಮೇಲ್ಬರಹವಿರುವ ಕರಪತ್ರವು ಅದಾಗಿತ್ತು. ಆ ಕರಪತ್ರದಲ್ಲಿ ಏನು ತಿಳಿಸಲ್ಪಟ್ಟಿತ್ತೊ ಆ ಮಾತುಗಳ ಸತ್ಯತೆಯನ್ನು ಡೆಟ್‌ಲೆಫ್‌ ಕೂಡಲೆ ಅರಿತುಕೊಂಡನು, ಮತ್ತು ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದನು. ಇದು ಅವನ ಜೀವಿತವನ್ನು ಸಂಪೂರ್ಣವಾಗಿ ಬದಲಾಯಿಸಿತು. 1996ರಿಂದ ಅವನೊಬ್ಬ ಯೆಹೋವನ ಹುರುಪಿನ ಸಾಕ್ಷಿಯಾಗಿದ್ದಾನೆ.

ಪಂಕ್‌ ತಂಡದ ಮಾಜಿ ಸದಸ್ಯನಾಗಿದ್ದ ಸೆಕ್‌ಫ್ರೀಟ್‌, ಕಾದಾಟದಲ್ಲಿ ಮೃತಪಟ್ಟ ಥಾಮಸ್‌ನ ಆಪ್ತ ಸ್ನೇಹಿತನಾಗಿದ್ದನು. ಅವನು ಸಹ ತದನಂತರ ಒಬ್ಬ ಯೆಹೋವನ ಸಾಕ್ಷಿಯಾದನು ಮತ್ತು ಈಗ ಅವನು ಸಭೆಯ ಹಿರಿಯನಾಗಿದ್ದಾನೆ. ಸೆಕ್‌ಫ್ರೀಟ್‌ ಒಮ್ಮೆ ಬೈಬಲ್‌ ಭಾಷಣವನ್ನು ನೀಡಲೆಂದು ಡೆಟ್‌ಲೆಫ್‌ನ ಸಭೆಗೆ ಹೋದಾಗ (ಆಶ್ಚರ್ಯಕರವಾಗಿ, ಥಾಮಸ್‌ನ ತಾಯಿ ಸಹ ಅಲ್ಲಿನ ಕೂಟಗಳಿಗೆ ಆಗಿಂದಾಗ್ಗೆ ಹಾಜರಾಗುತ್ತಾಳೆ), ಡೆಟ್‌ಲೆಫ್‌ ಅವನನ್ನು ಊಟಕ್ಕೆ ಆಮಂತ್ರಿಸಿದನು. ಹತ್ತು ವರುಷಗಳ ಹಿಂದೆ ಅವರಿಬ್ಬರಿಗೂ ತಮ್ಮ ಹಗೆತನವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಅವರ ಸಹೋದರ ಪ್ರೀತಿಯು ಎಲ್ಲರಿಗೂ ವ್ಯಕ್ತವಾಗುತ್ತದೆ.

ಭೂಪರದೈಸಿನಲ್ಲಿ ಥಾಮಸ್‌ ಜೀವವನ್ನು ಪುನಃ ಪಡೆಯುವಾಗ ಅವನನ್ನು ಸ್ವಾಗತಿಸಲು ಡೆಟ್‌ಲೆಫ್‌ ಮತ್ತು ಸೆಕ್‌ಫ್ರೀಟ್‌ ಎದುರುನೋಡುತ್ತಿದ್ದಾರೆ. ಡೆಟ್‌ಲೆಫ್‌ ತಿಳಿಸುವುದು: “ಇದರ ಕುರಿತು ಆಲೋಚಿಸುವುದು ತಾನೇ ನನ್ನ ಕಣ್ಣುಗಳಲ್ಲಿ ಕಣ್ಣೀರನ್ನು ಬರಿಸುತ್ತವೆ. ನಾನು ಮಾಡಿರುವುದಕ್ಕಾಗಿ ಅತಿಯಾಗಿ ವಿಷಾದಿಸುತ್ತೇನೆ.” ಅವರಿಬ್ಬರ ಏಕಮಾತ್ರ ಉದ್ದೇಶವು, ಯೆಹೋವನನ್ನು ತಿಳಿಯುವಂತೆ ಮತ್ತು ಬೈಬಲ್‌ ನೀಡುವ ನಿರೀಕ್ಷೆಯಲ್ಲಿ ಆನಂದಿಸುವಂತೆ ಅವರು ಇಂದು ಹೇಗೆ ಇತರರಿಗೆ ಸಹಾಯಮಾಡುತ್ತಿದ್ದಾರೊ ಅದೇ ರೀತಿಯಲ್ಲಿ ಮುಂದೆ ಥಾಮಸ್‌ಗೆ ಸಹಾಯಮಾಡುವುದೇ ಆಗಿದೆ.

ಹೌದು, ದೇವರ ವಾಕ್ಯಕ್ಕೆ ಬಹಳಷ್ಟು ಶಕ್ತಿಯಿದೆ!

[ಪಾದಟಿಪ್ಪಣಿ]

^ ಪ್ಯಾರ. 25 ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 6ರಲ್ಲಿರುವ ಚಿತ್ರ]

ಮಾನವ ಶರೀರವು ಒಂದು ಅದ್ಭುತಕರ ಸೃಷ್ಟಿಯಾಗಿದೆ

[ಕೃಪೆ]

Anatomy Improved and Illustrated, London, 1723, Bernardino Genga