ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೆರ್ಲಬುರ್ಕ್‌ ಬೈಬಲ್‌

ಬೆರ್ಲಬುರ್ಕ್‌ ಬೈಬಲ್‌

ಬೆರ್ಲಬುರ್ಕ್‌ ಬೈಬಲ್‌

ಜರ್ಮನ್‌ ಲ್ಯೂತರನ್‌ ಚರ್ಚಿನ ಒಳಗೆ 17ನೇ ಮತ್ತು 18ನೇ ಶತಮಾನಗಳಲ್ಲಿ, ಭಕ್ತಿವಾದ (ಪೈಅಟಿಸಮ್‌) ಎಂದು ಕರೆಯಲ್ಪಡುವ ಒಂದು ಧಾರ್ಮಿಕ ಚಳುವಳಿಯು ಆರಂಭಗೊಂಡಿತು. ಈ ಚಳುವಳಿಯ ಕೆಲವು ಹಿಂಬಾಲಕರನ್ನು ಗೇಲಿಮಾಡಲಾಯಿತು ಇಲ್ಲವೆ ಅವರ ನಂಬಿಕೆಗಾಗಿ ಅವರನ್ನು ಹಿಂಸಿಸಲಾಯಿತು ಸಹ. ಅನೇಕಾನೇಕ ಭಕ್ತಿವಾದಿಗಳು, ಮೇನ್‌ ನದೀತೀರದಲ್ಲಿರುವ ಫ್ರಾಂಕ್‌ಫರ್ಟ್‌ಗೆ ಸುಮಾರು 150 ಕಿಲೋಮೀಟರ್‌ ಉತ್ತರದಲ್ಲಿರುವ ಬೆರ್ಲಬುರ್ಕ್‌ನಲ್ಲಿ ಆಶ್ರಯವನ್ನು ಕಂಡುಕೊಂಡರು. ಧರ್ಮಕ್ಕೆ ಬಹಳ ಮಾನ್ಯತೆ ನೀಡುತ್ತಿದ್ದ ಸ್ಥಳಿಕ ಕುಲೀನರಾದ ಕೌಂಟ್‌ ಕಾಸೀಮೀರ್‌ ವಾನ್‌ ವಿಟ್‌ಗನ್‌ಶ್ಟೈನ್‌ ಬೆರ್ಲಬುರ್ಕ್‌ರವರು ಅವರಿಗೆ ಆಶ್ರಯವನ್ನು ನೀಡಿದರು. ಸೌವಾರ್ತಿಕರೂ ವಿದ್ವಾಂಸರೂ ಆದ ಈ ಜನರು ಬೆರ್ಲಬುರ್ಕ್‌ನಲ್ಲಿ ನೆಲೆಸಿದ್ದು ತಾನೇ ಬೈಬಲಿನ ಹೊಸ ಭಾಷಾಂತರಕ್ಕೆ ದಾರಿಮಾಡಿಕೊಟ್ಟಿತು. ಆ ಹೊಸ ಭಾಷಾಂತರವು ಇಂದು ಬೆರ್ಲಬುರ್ಕ್‌ ಬೈಬಲ್‌ ಎಂದು ಪ್ರಸಿದ್ಧವಾಗಿದೆ. ಈ ಭಾಷಾಂತರವು ಹೇಗೆ ಆರಂಭಗೊಂಡಿತು?

ಆಶ್ರಯವನ್ನು ಹುಡುಕಿ ಬಂದವರಲ್ಲಿ ಯೋಹ್ಯಾನ್‌ ಹೌಗ್‌ ಒಬ್ಬರಾಗಿದ್ದರು. ಸ್ಥಳಿಕ ದೇವತಾಶಾಸ್ತ್ರಜ್ಞರ ಅಸಹಿಷ್ಣುತೆಯ ಕಾರಣ ಅವರು ಸ್ಟ್ರಾಸ್‌ಬರ್ಗ್‌ನಲ್ಲಿದ್ದ ತಮ್ಮ ಮನೆಯನ್ನು ಬಿಡಬೇಕಾಯಿತು. ಹೌಗ್‌ರವರು ಉನ್ನತ ಪಾಂಡಿತ್ಯ ಪಡೆದ ವಿದ್ವಾಂಸರಾಗಿದ್ದರು ಮತ್ತು ಪರಭಾಷೆಗಳಲ್ಲಿ ಪಂಡಿತರಾಗಿದ್ದರು. “ಒಂದು ಸಂಪೂರ್ಣವಾದ ಶುದ್ಧ ಬೈಬಲ್‌ ಭಾಷಾಂತರವನ್ನು ಜನರಿಗೆ ಒದಗಿಸುವ, ಲೂಥರ್‌ರವರ ಭಾಷಾಂತರವನ್ನು ತಿದ್ದಿ ಸರಿಪಡಿಸುವ, ದೇವರ ವಾಕ್ಯದ ಪದಗಳಿಗೆ ಮತ್ತು ಅದು ಏನನ್ನು ಹೇಳಬಯಸುತ್ತದೋ ಅದಕ್ಕೆ ಅನುಸಾರವಾಗಿ ಸರಿಯಾದ ಅರ್ಥವನ್ನು ನೀಡುವ ಆಸೆ” ತನಗಿದೆ ಎಂದು ಬೆರ್ಲಬುರ್ಕ್‌ನಲ್ಲಿರುವ ತನ್ನ ಜೊತೆ ವಿದ್ವಾಂಸರಿಗೆ ಹೇಳುವ ಮೂಲಕ ಅವರು ತಮ್ಮ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದರು. (ಡೀ ಗೆಶಿಕ್‌ಟಿ ಡೇರ್‌ ಬೆರ್ಲನ್‌ಬುರ್ಕ್‌ ಬೀಬೆಲ್‌ [ಬೆರ್ಲಬುರ್ಕ್‌ ಬೈಬಲಿನ ಇತಿಹಾಸ]). ವಿವರಣಾತ್ಮಕ ಟಿಪ್ಪಣಿಯನ್ನು ಮತ್ತು ಹೇಳಿಕೆಗಳನ್ನು ಹೊಂದಿರುವ ಹಾಗೂ ಸಾಮಾನ್ಯ ಜನರಿಗೆ ಅರ್ಥವಾಗುವಂಥ ರೀತಿಯ ಒಂದು ಬೈಬಲನ್ನು ತಯಾರಿಸುವುದೇ ಅವರ ಗುರಿಯಾಗಿತ್ತು. ಇತರ ಯುರೋಪಿಯನ್‌ ದೇಶಗಳ ಬೆಂಬಲವನ್ನು ಸಹ ಹೌಗ್‌ರವರು ಕೇಳಿಕೊಂಡರು, ಮತ್ತು ಈ ಯೋಜನೆಯಲ್ಲಿ ಅವರು 20 ವರುಷಗಳ ಕಾಲ ಕೆಲಸಮಾಡಿದರು. 1726ರಲ್ಲಿ ಬೆರ್ಲಬುರ್ಕ್‌ ಬೈಬಲ್‌ ಪ್ರಕಟವಾಗಲು ಆರಂಭಿಸಿತು. ಬಹಳಷ್ಟು ಟಿಪ್ಪಣಿಗಳಿದ್ದ ಕಾರಣ, ಆ ಬೈಬಲ್‌ ಎಂಟು ಸಂಪುಟಗಳನ್ನು ಹೊಂದಿತ್ತು.

ಬೆರ್ಲಬುರ್ಕ್‌ ಬೈಬಲಿನಲ್ಲಿ ಖಂಡಿತವಾಗಿಯೂ ಕೆಲವು ಆಸಕ್ತಿಕರ ಅಂಶಗಳಿವೆ. ಉದಾಹರಣೆಗೆ, ವಿಮೋಚನಕಾಂಡ 6:​2, 3 ಓದುವುದು: “ದೇವರು ಮೋಶೆಯ ಸಂಗಡ ಮಾತಾಡಿ ಹೀಗೆಂದನು: ನಾನು ಕರ್ತನು! ಅಬ್ರಹಾಮನಿಗೆ/ಇಸಾಕನಿಗೆ/ ಮತ್ತು ಯಾಕೋಬನಿಗೆ ನಾನು ಸರ್ವಶಕ್ತನಾದ ದೇವರೆಂದು ಕಾಣಿಸಿಕೊಂಡೆ: ಆದರೆ ಯೆಹೋವ ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ.” ಒಂದು ಟಿಪ್ಪಣಿಯು ವಿವರಿಸುವುದು: “ಯೆಹೋವ ಎಂಬ ಹೆಸರು . . . , ಪ್ರತ್ಯೇಕವಾಗಿ ಇಡಲ್ಪಟ್ಟಿರುವ ಹೆಸರು ಅಥವಾ ಘೋಷಿಸಲ್ಪಟ್ಟಿರುವ ಹೆಸರು.” ಯೆಹೋವ ಎಂಬ ದೇವರ ವೈಯಕ್ತಿಕ ಹೆಸರು, ವಿಮೋಚನಕಾಂಡ 3:15 ಮತ್ತು ವಿಮೋಚನಕಾಂಡ 34:6ರ ಹೇಳಿಕೆಗಳಲ್ಲಿ ಸಹ ಕಂಡುಬರುತ್ತದೆ.

ಹೀಗೆ, ಯೆಹೋವ ಎಂಬ ಹೆಸರನ್ನು ಮುಖ್ಯ ವಚನದಲ್ಲಿ, ಇಲ್ಲವೆ ಪಾದಟಿಪ್ಪಣಿಗಳಲ್ಲಿ, ಇಲ್ಲವೆ ಹೇಳಿಕೆಗಳಲ್ಲಿ ಉಪಯೋಗಿಸುವ ಕೆಲವು ಜರ್ಮನ್‌ ಭಾಷೆಯ ಬೈಬಲ್‌ಗಳಲ್ಲಿ ಬೆರ್ಲಬುರ್ಕ್‌ ಬೈಬಲ್‌ ಒಂದಾಗಿದೆ. ದೇವರ ವೈಯಕ್ತಿಕ ಹೆಸರಿಗೆ ಯೋಗ್ಯ ಗೌರವವನ್ನು ನೀಡುವ ಹೆಚ್ಚು ಆಧುನಿಕ ಬೈಬಲ್‌ಗಳಲ್ಲಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಒಂದಾಗಿದೆ.