ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರು ಲೋಕಕ್ಕೆ ಆಹಾರವನ್ನು ಒದಗಿಸುವರು?

ಯಾರು ಲೋಕಕ್ಕೆ ಆಹಾರವನ್ನು ಒದಗಿಸುವರು?

ಯಾರು ಲೋಕಕ್ಕೆ ಆಹಾರವನ್ನು ಒದಗಿಸುವರು?

ಆಹಾರದ ಕೊರತೆಯನ್ನು ನೀಗಿಸಲು ಕಾರ್ಯನಡಿಸುವಂಥ ವಿಶ್ವ ಸಂಸ್ಥೆಯ ಒಂದು ನಿಯೋಗವಾಗಿರುವ ಲೋಕ ಆಹಾರ ಕಾರ್ಯಕ್ರಮದ ಅಂದಾಜುಗಳಿಗನುಸಾರ, 80 ಕೋಟಿ ಜನರು​—⁠ಅವರಲ್ಲಿ ಹೆಚ್ಚಿನವರು ಮಕ್ಕಳು​—⁠ಹೊಟ್ಟೆಗಿಲ್ಲದೆ ಕಂಗಾಲಾಗುವ ಸ್ಥಿತಿಯನ್ನು ತಲಪುತ್ತಿದ್ದಾರೆ. ಇತ್ತೀಚೆಗೆ, ಇಂಥ ಸನ್ನಿವೇಶದಲ್ಲಿರುವ ಜನರಿಗೆ ಅನೇಕ ವಿಕಸಿತ ದೇಶಗಳು ನೀಡಬಹುದಾಗಿದ್ದ ಸಂಪನ್ಮೂಲಗಳು ಮತ್ತು ಗಮನಗಳು ಭಯೋತ್ಪಾದನೆಯಂಥ ಇತರ ಸಮಸ್ಯೆಗಳಿಗೆ ಉಪಯೋಗಿಸಲ್ಪಡುತ್ತಿವೆ ಎಂದು ಆ ನಿಯೋಗವು ತಿಳಿಸಿತು. ಸೋಂಕು ರೋಗಗಳ ಹಬ್ಬುವಿಕೆಯು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಏಡ್ಸ್‌ ರೋಗವು ವ್ಯಾಪಕವಾಗಿರುವಂಥ ಆಫ್ರಿಕನ್‌ ದೇಶಗಳ ಕುರಿತು ಆ ನಿಯೋಗದ ಭೌಗೋಳಿಕ ಶಾಲಾ ಆಹಾರ ವರದಿಯು ಹೀಗೆ ತಿಳಿಸಿತು: “ಏಡ್ಸ್‌ನಿಂದಾಗಿ ಹೆತ್ತವರ ಒಂದು ಇಡೀ ಸಂತತಿಯೇ ಅಕಾಲಿಕ ಮರಣವನ್ನು ಅನುಭವಿಸುತ್ತಿದೆ. ಅವರು ಬಿಟ್ಟುಹೋಗುವ ಮಕ್ಕಳು ತಮ್ಮ ಪೋಷಣೆಯನ್ನು ತಾವೇ ಮಾಡಿಕೊಳ್ಳುವ ಸ್ಥಿತಿಯನ್ನು ತಲಪುತ್ತಾರೆ; ಅವರಲ್ಲಿ ಹೆಚ್ಚಿನವರಿಗೆ ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ಲಾಕ್ಷಣಿಕವಾಗಿ ದಾಟಿಸಲ್ಪಡುವ ವ್ಯವಸಾಯದ ಕುರಿತಾದ ಮತ್ತು ದೈನಂದಿನ ಜೀವನದ ಕುರಿತಾದ ಮೂಲಭೂತ ಜ್ಞಾನವೂ ಇರುವುದಿಲ್ಲ.”

ಲೋಕ ಆಹಾರ ಕಾರ್ಯಕ್ರಮವು ಈ ವಿಷಯದಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದೆ; ಇದರ ಗುರಿ ಶಾಲೆಗಳಲ್ಲಿ ಒಂದು ದಿನದಲ್ಲಿ ಕಡಿಮೆಪಕ್ಷ ಒಂದು ಊಟವನ್ನಾದರೂ ಒದಗಿಸುವುದೇ ಆಗಿದೆ. ಇದರ ಉದ್ದೇಶವು ಕೇವಲ ಹಸಿವೆಯನ್ನು ಸ್ವಲ್ಪಮಟ್ಟಿಗೆ ನೀಗಿಸುವುದು ಮಾತ್ರವಲ್ಲ ಯುವಜನರ ನಡುವೆ ಏಚ್‌ಐವಿ/ಏಡ್ಸ್‌ ರೋಗವನ್ನು ತಡೆಗಟ್ಟಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ಇತರ ಕಾರ್ಯಕ್ರಮಗಳನ್ನು ಕ್ರಮವಾದ ಶಿಕ್ಷಣದ ಮೂಲಕ ಕಾರ್ಯರೂಪಕ್ಕೆ ತರುವುದೂ ಆಗಿದೆ.

ಎಲ್ಲಿ ಈ ಆರಂಭದ ಹೆಜ್ಜೆ ಕಾರ್ಯರೂಪಕ್ಕೆ ತರಲ್ಪಟ್ಟಿದೆಯೋ ಅಂಥ ಸ್ಥಳಗಳಲ್ಲಿ ಮಕ್ಕಳು ಆಹಾರವನ್ನು, ವೈಯಕ್ತಿಕ ಆರೋಗ್ಯದ ವಿಷಯದಲ್ಲಿ ತರಬೇತಿಯನ್ನು ಹಾಗೂ ಇನ್ನಿತರ ನೆರವನ್ನು ಪಡೆದುಕೊಂಡಿದ್ದಾರೆ. ಜನರು ತಮ್ಮ ನಡತೆಯನ್ನು ಬದಲಾಯಿಸಿರುವಂಥ ಸ್ಥಳಗಳಲ್ಲಿ ಏಚ್‌ಐವಿ/ಏಡ್ಸ್‌ ರೋಗದ ಸೋಂಕಿನ ಪ್ರಮಾಣಗಳು ಸಹ ಇಳಿಮುಖವಾಗಿವೆ ಎಂಬುದನ್ನೂ ಗಮನಿಸಲಾಗಿದೆ.

ದುಃಖಕರ ವಿಷಯವೇನೆಂದರೆ, ಮಾನವ ಪ್ರಯತ್ನಗಳ ಫಲಿತಾಂಶವು ಅನೇಕವೇಳೆ ಆಂಶಿಕವಾಗಿಯೂ ಅಸ್ಥಿರವಾಗಿಯೂ ಇರುವುದು. ಆದರೆ ಹಸಿವೆಯ ಕುರಿತಾದ ಒಂದು ಶಾಶ್ವತ ಪರಿಹಾರದ ಕುರಿತು ಬೈಬಲ್‌ ಸಾಂತ್ವನದಾಯಕ ವಾಗ್ದಾನವನ್ನು ಮಾಡುತ್ತದೆ. ‘ದೇಶದ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗುವುದು’ ಎಂದು ಕೀರ್ತನೆ 72:16 ಹೇಳುತ್ತದೆ. ದೇವರ ರಾಜ್ಯದ ಕೆಳಗೆ ಜನರು ಯೆಹೋವ ದೇವರ ಕುರಿತು ಹೀಗೆ ಹೇಳಶಕ್ತರಾಗುವರು: “ನೀನು ನಮ್ಮ ದೇಶವನ್ನು ಕಟಾಕ್ಷಿಸಿ ಅದರ ಮೇಲೆ ಮಳೆಸುರಿಸಿ ಚೆನ್ನಾಗಿ ಹದಗೊಳಿಸುತ್ತೀ; . . . ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.”​—⁠ಕೀರ್ತನೆ 65:⁠9.

[ಪುಟ 32ರಲ್ಲಿರುವ ಚಿತ್ರ ಕೃಪೆ]

WFP/Y. Yuge