ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇಬ ದ್ವೀಪದ ದ ಬಾಟಮ್‌ ಎಂಬ ಸ್ಥಳಕ್ಕೆ ಹತ್ತುವುದು

ಸೇಬ ದ್ವೀಪದ ದ ಬಾಟಮ್‌ ಎಂಬ ಸ್ಥಳಕ್ಕೆ ಹತ್ತುವುದು

ಸೇಬ ದ್ವೀಪದ ದ ಬಾಟಮ್‌ ಎಂಬ ಸ್ಥಳಕ್ಕೆ ಹತ್ತುವುದು

ಡಚ್‌ ದ್ವೀಪವಾದ ಸೇಬ ಒಂದೊಮ್ಮೆ ಕೊಳ್ಳೆಯನ್ನು ಹುಡುಕುತ್ತಾ ಕ್ಯಾರಿಬೀಯನ್‌ ಸಮುದ್ರವನ್ನು ದಾಟಿಬರುತ್ತಿದ್ದ ಕಡಲುಗಳ್ಳರಿಗೆ ಆಶ್ರಯವಾಗಿತ್ತು. ಪೋರ್ಟರೀಕೊದಿಂದ 240 ಕಿಲೋಮೀಟರ್‌ ಪಶ್ಚಿಮದಲ್ಲಿರುವ ಈ ಚಿಕ್ಕ ದ್ವೀಪವು ಇಂದು ಸುಮಾರು 1,600 ನಿವಾಸಿಗಳ ಬೀಡಾಗಿದೆ. ಇವರಲ್ಲಿ 5 ಮಂದಿ ಯೆಹೋವನ ಸಾಕ್ಷಿಗಳಾಗಿದ್ದಾರೆ. ಈ ಧೀರ ಶುಶ್ರೂಷಕರು ಕೊಳ್ಳೆಗಿಂತಲೂ ಹೆಚ್ಚು ಅಮೂಲ್ಯವಾದ ಏನನ್ನೋ ಹುಡುಕುತ್ತಿದ್ದಾರೆ. ಹೌದು, “ನಿತ್ಯಜೀವಕ್ಕೆ ಯೋಗ್ಯವಾದ ಪ್ರವೃತ್ತಿಯುಳ್ಳವರನ್ನು” ಅವರು ಶ್ರದ್ಧಾಪೂರ್ವಕವಾಗಿ ಹುಡುಕುತ್ತಿದ್ದಾರೆ.​—⁠ಅ. ಕೃತ್ಯಗಳು 13:​48, NW.

ಇಸವಿ 1952ರ ಜೂನ್‌ 22ರಂದು, ಯೆಹೋವನ ಸಾಕ್ಷಿಗಳಿಂದ ಚಲಾಯಿಸಲ್ಪಟ್ಟ ಸಿಬ್‌ಈಯಾ ಎಂಬ 18 ಮೀಟರ್‌ ಉದ್ದದ ಕೂವೆ ಹಡಗು ಸೇಬದ ಸಮುದ್ರ ತೀರವನ್ನು ತಲಪಿದಾಗ ಮೊತ್ತಮೊದಲಾಗಿ ದೇವರ ರಾಜ್ಯದ ಸುವಾರ್ತೆಯು ಈ ದ್ವೀಪವನ್ನು ತಲಪಿತು. (ಮತ್ತಾಯ 24:14) ಮಿಷನೆರಿಗಳಾದ ಗಸ್ಟ್‌ ಮ್ಯಾಕೀ ಮತ್ತು ಸ್ಟ್ಯಾನ್ಲಿ ಕಾರ್ಟರ್‌ರವರು, ದ ಲ್ಯಾಡರ್‌ ಎಂಬ ಹೆಸರಿನ 500ಕ್ಕಿಂತಲೂ ಹೆಚ್ಚಿನ ಕಲ್ಲಿನ ಮೆಟ್ಟಲುಗಳುಳ್ಳ ಹಾದಿಯನ್ನು ಹತ್ತಿ ದ ಬಾಟಮ್‌ ಎಂಬ ಸೇಬದ ರಾಜಧಾನಿಯನ್ನು ತಲಪಿದರು. * ಶತಮಾನಗಳ ವರೆಗೆ ಈ ಕಿರಿದಾದ ಹಾದಿಯು ದ್ವೀಪ ನಿವಾಸಿಗಳನ್ನು ತಲಪಲು ಇದ್ದ ಏಕಮಾತ್ರ ಮಾರ್ಗವಾಗಿತ್ತು.

ಸೇಬದಲ್ಲಿನ ಕ್ರೈಸ್ತ ಸಾಕ್ಷಿಗಳ ಕೆಲಸದ ಕುರಿತಾದ ಮೊದಲ ವರದಿಯನ್ನು 1996ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ದಲ್ಲಿ ನಮ್ಮ ಸಂಘಟನೆಯು ಪ್ರಕಟಿಸಿತು. ಆ ವರದಿಗನುಸಾರ, ದ್ವೀಪದಲ್ಲಿ ಕೇವಲ ಒಬ್ಬ ಕ್ರಿಯಾಶೀಲ ಸಾಕ್ಷಿಯಿದ್ದನು. ಅನಂತರ, ಕೆನಡದಿಂದ ಬಂದ ಒಂದು ಕುಟುಂಬವು ಅಲ್ಲಿ ಕೆಲವು ವರುಷಗಳ ವರೆಗೆ ಸುವಾರ್ತೆ ಸಾರುವ ಕೆಲಸದಲ್ಲಿ ಕಳೆಯಿತು. ಇತ್ತೀಚೆಗೆ, ನಿವೃತ್ತಿಹೊಂದಿದ ಅಮೆರಿಕದ ದಂಪತಿಯರಾದ ರಸೆಲ್‌ ಮತ್ತು ಕ್ಯಾಥೀ ಸೇಬಕ್ಕೆ ಹೋದರು ಮತ್ತು ಅಲ್ಲಿ ಸಾರುವ ಕೆಲಸದಲ್ಲಿ ಭಾಗವಹಿಸಿದರು. ಅವರ ಕಥೆಯನ್ನು ಕೇಳಿ.

ಸೇಬಕ್ಕೆ ಭೇಟಿ

ಇಸವಿ 1990ಗಳಲ್ಲಿ ಆ ದ್ವೀಪದಲ್ಲಿದ್ದ ಏಕಮಾತ್ರ ಸಾಕ್ಷಿಯಾದ ರಾನಲ್ಡರ ಅತಿಥಿಯಾಗಿ ನಾನು ಮತ್ತು ನನ್ನ ಪತ್ನಿ ವಿಮಾನದ ಮೂಲಕ ಅಲ್ಲಿಗೆ ಬಂದು ತಲಪಿದೆವು. ನಮ್ಮ ಆತಿಥೇಯರಾದ ರಾನಲ್ಡರು ನಮಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ನಾವು ಅವರಿಗೆ ಸಣ್ಣ ಪೆಟ್ಟಿಗೆಯಲ್ಲಿ ತರಕಾರಿಗಳನ್ನು ಉಡುಗೊರೆಯಾಗಿ ತಂದಿದ್ದೆವು. ಅದನ್ನು ನೋಡಿ ಅವರಿಗೆ ಬಹಳ ಆನಂದವಾಯಿತು, ಏಕೆಂದರೆ ದ್ವೀಪದಲ್ಲಿ ಯಾವುದೇ ಬೆಳೆಗಳನ್ನು ವ್ಯಾಪಾರಕ್ಕಾಗಿ ಬೆಳೆಸುತ್ತಿರಲಿಲ್ಲ. ಒಂದು ಸಣ್ಣ ಟ್ರಕ್‌ ಅನ್ನು ಏರಿ, ಮೌಂಟ್‌ ಸೀನೆರಿಯದ ಅಂಕುಡೊಂಕಾದ ರಸ್ತೆಯಿಂದ ನಿಧಾನವಾಗಿ ನಾವು ಈ ನಂದಿಹೋದ ಜ್ವಾಲಾಮುಖಿಯ ಶಿಖರಕ್ಕೆ ಹತ್ತಿದೆವು.

ಹೆಲ್ಸ್‌ ಗೇಟ್‌ ಎಂಬ ಹಳ್ಳಿಯಲ್ಲಿ ಟ್ರಕ್‌ ನಿಲ್ಲಿಸಿ, ರಾನಲ್ಡ್‌ ಸಾರ್ವಜನಿಕ ಮಾಹಿತಿ ಫಲಕದಲ್ಲಿ ಭಾನುವಾರದ ಸಾರ್ವಜನಿಕ ಭಾಷಣಕ್ಕಾಗಿ ಆಮಂತ್ರಣವು ಇನ್ನೂ ಅಂಟಿಸಿಡಲ್ಪಟ್ಟಿದೆಯೊ ಎಂಬುದನ್ನು ನೋಡಲು ಹೋದರು. ಆಮಂತ್ರಣವು ಮಾಹಿತಿ ಫಲಕದಲ್ಲಿದೆ ಎಂದು ತಿಳಿದು ನಮ್ಮೆಲ್ಲರಿಗೆ ಸಂತೋಷವಾಯಿತು. ಅವರು ಪುನಃ ಟ್ರಕ್ಕನ್ನೇರಿ ಕುಳಿತರು, ಮತ್ತು ದ್ವೀಪದ ಅತಿ ದೊಡ್ಡ ಊರಾದ ವಿಂಡ್ವರ್ಡ್‌ಸೈಡ್‌ (ಗಾಳಿಗೆ ತೆರೆದ ಪಕ್ಕ)ಗೆ ನಾವು ಹತ್ತುವುದನ್ನು ಮುಂದುವರಿಸಿದೆವು. ಈ ಊರಿನ ಹೆಸರೇ ಸೂಚಿಸುವಂತೆ ಇದು ದ್ವೀಪದ ಗಾಳಿ ಬೀಸುವ ದಿಕ್ಕಿನಲ್ಲಿದೆ ಮತ್ತು ಸಮುದ್ರ ಮಟ್ಟದಿಂದ ಸುಮಾರು 400 ಮೀಟರ್‌ ಎತ್ತರದಲ್ಲಿದೆ. ನಾವು ಗಾಡಿಯನ್ನು ಚಲಾಯಿಸುತ್ತಾ ರಾನಲ್ಡ್‌ರ ಮನೆಯ ಖಾಸಗಿ ದಾರಿಗೆ ಬರುವಾಗ, ಅವರ ಮನೆಯ ಮುಂದೆ ಬಣ್ಣಬಣ್ಣದ ಒಂದು ಸೂಚನ ಫಲಕವನ್ನು ನೋಡುತ್ತೇವೆ. ಅದರಲ್ಲಿ, ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ ಎಂದು ಬರೆದಿತ್ತು.

ಮಧ್ಯಾಹ್ನ ಊಟದ ಸಮಯದಲ್ಲಿ, ಈ ಭೇಟಿಗೆ ನಮ್ಮನ್ನು ಪ್ರೇರೇಪಿಸಿದಂಥ ಒಂದು ಪ್ರಶ್ನೆಯನ್ನು ನಾನು ಕೇಳಿದೆ. “ಸೇಬದಲ್ಲಿ ನೀವೊಬ್ಬ ರಾಜ್ಯ ಘೋಷಕರಾದದ್ದು ಹೇಗೆ?” ಎಂಬುದೇ ಆ ಪ್ರಶ್ನೆ.

ರಾನಲ್ಡ್‌ ತಿಳಿಸುವುದು: “1993ರಲ್ಲಿ ಯೆಹೋವನ ಸಾಕ್ಷಿಗಳ ಪೋರ್ಟರೀಕೊ ಬ್ರಾಂಚ್‌ ಕಟ್ಟಡ ನಿರ್ಮಾಣವು ಪೂರ್ಣಗೊಂಡಾಗ ನಾನು ಮತ್ತು ನನ್ನ ಪತ್ನಿ ಒಂದು ವಿದೇಶೀ ನೇಮಕದಲ್ಲಿಯೇ ಉಳಿಯಲು ಬಯಸಿದೆವು. ಈ ಮುಂಚೆ ನಾವು ಇನ್ನೊಂದು ಪಯನೀಯರ್‌ ದಂಪತಿಯೊಂದಿಗೆ ಸೇಬ ದ್ವೀಪಕ್ಕೆ ಭೇಟಿನೀಡಿದ್ದೆವು ಮತ್ತು ಇಲ್ಲಿ 1,400 ನಿವಾಸಿಗಳಿದ್ದರೂ ಸಾಕ್ಷಿಗಳು ಯಾರೂ ಇರಲ್ಲಿಲ್ಲ ಎಂಬುದನ್ನು ತಿಳಿದಿದ್ದೆವು. ಆದುದರಿಂದ, ಇಲ್ಲಿಗೆ ಬರುವ ನಮ್ಮ ಇಚ್ಛೆಯನ್ನು ನಾವು ಪೋರ್ಟರೀಕೊ ಬ್ರಾಂಚ್‌ ಕಮಿಟಿಗೆ ತಿಳಿಸಿದೆವು.

“ಎಲ್ಲವೂ ಒಳ್ಳೇ ರೀತಿಯಲ್ಲಿ ಮುಂದೆಸಾಗಿ, ಕೊನೆಗೂ ನಮಗೆ ಸ್ಥಳಾಂತರಿಸಲು ಅನುಮತಿ ದೊರಕಿತು. ದುಃಖಕರವಾಗಿ, ಎರಡು ವರುಷಗಳ ಅನಂತರ ನನ್ನ ಪತ್ನಿಯು ಗಂಭೀರವಾಗಿ ಅಸ್ವಸ್ಥಳಾದ ಕಾರಣ ನಾವು ಕ್ಯಾಲಿಫಾರ್ನಿಯಕ್ಕೆ ಹಿಂದಿರುಗಿದೆವು. ಅವಳ ಮರಣದ ತರುವಾಯ, ನಾನು ಪುನಃ ಸೇಬಕ್ಕೆ ಹಿಂದಿರುಗಿದೆ. ಯಾವುದೇ ಒಂದು ಕೆಲಸವನ್ನು ಆರಂಭಿಸಿ ಅದನ್ನು ಅರ್ಧದಲ್ಲಿ ನಿಲ್ಲಿಸಲು ನನಗೆ ಇಷ್ಟವಿಲ್ಲ.”

ಸೇಬದಲ್ಲಿ ಮನೆಮನೆಯಲ್ಲಿ ಸಾಕ್ಷಿನೀಡುವುದು

ರಾನಲ್ಡ್‌ರ ನೂರು ವರುಷ ಹಳೆಯ ಮನೆಯು ರಾಜ್ಯ ಸಭಾಗೃಹವಾಗಿಯೂ ಉಪಯೋಗಿಸಲ್ಪಡುತ್ತದೆ. * ಉಪಹಾರವನ್ನು ಆನಂದಿಸಿ ನಾವು ಶುಶ್ರೂಷೆಗೆ ತಯಾರಾಗುತ್ತಿರುವಾಗ, ದಾಟಿಹೋಗುತ್ತಿದ್ದ ಮೋಡದಿಂದ ಬಿದ್ದ ಮಳೆಯು ತೆರೆದ ಅಡುಗೆ ಮನೆಯನ್ನು ಒದ್ದೆಮಾಡಿತು. ಉಪಹಾರದ ಬಳಿಕ, ಚದರುತ್ತಿರುವ ಮೋಡಗಳ ಕೆಳಗೆ ನಾವು ನಮ್ಮ ಬೆಳಿಗಿನ ಸಮಯವನ್ನು ದ ಬಾಟಮ್‌ನಲ್ಲಿ ಮನೆಮನೆಯ ಸಾಕ್ಷಿಕಾರ್ಯದಲ್ಲಿ ಕಳೆದೆವು. ಪ್ರತಿಯೊಂದು ಮನೆಯಲ್ಲಿ, ರಾನಲ್ಡ್‌ ಮನೆಯವರನ್ನು ಹೆಸರೆತ್ತಿ ವಂದಿಸುತ್ತಾರೆ. ಇತ್ತೀಚಿನ ಸ್ಥಳಿಕ ವಾರ್ತಾ ಘಟನೆಯ ಮೇಲೆ ನಮ್ಮ ಚರ್ಚೆಯು ಕೇಂದ್ರೀಕರಿಸಿತು. ಹೆಚ್ಚಿನ ಜನರಿಗೆ ರಾನಲ್ಡ್‌ ಮತ್ತು ಅವರ ಶುಶ್ರೂಷೆಯ ಕುರಿತು ತಿಳಿದಿತ್ತು. ಅನೇಕರು ಬೈಬಲ್‌ ಸಾಹಿತ್ಯವನ್ನು ಸಹ ಕೂಡಲೆ ಸ್ವೀಕರಿಸಿದರು.

ನಿಮಗೆ ಹಳ್ಳಿಯ ಪರಿಚಯವಿಲ್ಲದಿದ್ದರೆ, ರಾಜ್ಯದ ಸಂದೇಶಕ್ಕೆ ಆಸಕ್ತಿಯನ್ನು ತೋರಿಸಿದವರ ದಾಖಲೆಯನ್ನು ಇಟ್ಟುಕೊಳ್ಳುವುದು ಪಂಥಾಹ್ವಾನದಾಯಕವಾಗಿರುತ್ತದೆ. ಏಕೆ? ಏಕೆಂದರೆ, “ಅಲ್ಲಿರುವ ಎಲ್ಲಾ ಮನೆಗಳಿಗೆ ಒಂದೇ ರೀತಿಯ ಬಣ್ಣವನ್ನು ಬಳಿಯಬೇಕೆಂದು ಅಲ್ಲಿನ ನಿಯಮವು ಕೇಳಿಕೊಳ್ಳುತ್ತದೆ,” ಎಂಬುದಾಗಿ ರಾನಲ್ಡ್‌ ತಿಳಿಸುತ್ತಾರೆ. ಅದು ನಿಜ. ನಾನು ಎಲ್ಲೆಡೆ ನೋಡಿದರೂ ಸೇಬದ ಎಲ್ಲಾ ಮನೆಗಳೂ ಬಿಳಿ ಬಣ್ಣದ್ದಾಗಿದ್ದವು ಮತ್ತು ಕೆಂಪು ಬಣ್ಣದ ಚಾವಣಿಯನ್ನು ಹೊಂದಿದ್ದವು.

ನಮ್ಮ ಬೈಬಲ್‌ ಚರ್ಚೆಯನ್ನು ಮುಕ್ತಾಯಗೊಳಿಸಿದ ಅನಂತರ, ನಾವು ಮನೆಯವರನ್ನು ನಮ್ಮ ರಾಜ್ಯ ಸಭಾಗೃಹದಲ್ಲಿ ಭಾನುವಾರದಂದು ಕೊಡಲ್ಪಡುವ ಸಾರ್ವಜನಿಕ ಬೈಬಲ್‌ ಭಾಷಣಕ್ಕೆ ಹಾಜರಾಗುವಂತೆ ಆಮಂತ್ರಿಸಿದೆವು. ರಾನಲ್ಡ್‌ ದ್ವೀಪದಲ್ಲಿನ ತಮ್ಮ ಮನೆಯಲ್ಲಿರುವಾಗ ಅವರೇ ಪ್ರತಿವಾರ ಸಾರ್ವಜನಿಕ ಭಾಷಣವನ್ನು ನೀಡುತ್ತಾರೆ. ಸದ್ಯಕ್ಕೆ ಸೇಬದಲ್ಲಿ 17 ಬೈಬಲ್‌ ಅಧ್ಯಯನಗಳು ನಡೆಸಲ್ಪಡುತ್ತಿವೆ. 2004ರಲ್ಲಿ ಕರ್ತನ ಜ್ಞಾಪಕಾಚರಣೆಗೆ ಇಪ್ಪತ್ತು ಮಂದಿ ಹಾಜರಾದರು. ಈ ಸಂಖ್ಯೆಯು ಚಿಕ್ಕದಾಗಿ ಕಂಡರೂ, ಇದು ಸೇಬದ ಸಂಪೂರ್ಣ ಜನಸಂಖ್ಯೆಯ 1 ಪ್ರತಿಶತವಾಗಿದೆ!

ದೇವರ ರಕ್ಷಣೆಯ ಸಂದೇಶದೊಂದಿಗೆ ಸಾಧ್ಯವಾದಷ್ಟು ಜನರನ್ನು ತಲಪಲು ಯೆಹೋವನ ಸಾಕ್ಷಿಗಳು ಪ್ರಯತ್ನಿಸುತ್ತಾರೆ ಎಂಬುದು ನಿಶ್ಚಯ. ಅದು ಸೇಬದಂಥ ಪುಟ್ಟ ದ್ವೀಪವಾಗಿರಲಿ ಅಥವಾ ಒಂದು ಸಂಪೂರ್ಣ ಖಂಡವೇ ಆಗಿರಲಿ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಆಜ್ಞೆಯನ್ನು ಯೆಹೋವನ ಸಾಕ್ಷಿಗಳು ನಂಬಿಗಸ್ತಿಕೆಯಿಂದ ನೆರವೇರಿಸುತ್ತಿದ್ದಾರೆ.​—⁠ಮತ್ತಾಯ 28:19.

ದುಃಖಕರವಾಗಿ, ನಮ್ಮ ಭೇಟಿಯು ಅಂತ್ಯಗೊಂಡಿತು. ನಾವು ನಮ್ಮ ವಿಮಾನವನ್ನು ಹತ್ತುತ್ತಿದ್ದಂತೆ ವಿದಾಯ ಹೇಳಿದೆವು. ನಾವು ಸೇಬಕ್ಕೆ ನೀಡಿದ ಭೇಟಿಯನ್ನು ಮತ್ತು ತಳ ಎಂಬ ಅರ್ಥವುಳ್ಳ ದ ಬಾಟಮ್‌ ಎಂಬ ಸ್ಥಳಕ್ಕೆ ಹತ್ತಿದ್ದನ್ನು ಎಂದಿಗೂ ಮರೆಯಲಾರೆವು!

[ಪಾದಟಿಪ್ಪಣಿಗಳು]

^ ಪ್ಯಾರ. 3 ಈ ಸ್ಥಳಕ್ಕೆ ದ ಬಾಟಮ್‌ ಎಂಬ ಹೆಸರನ್ನು ಕಡಲುಗಳ್ಳರು ಇಟ್ಟರು, ಏಕೆಂದರೆ ಈ ಸ್ಥಳವು ಜ್ವಾಲಾಮುಖಿಯ ಕುಳಿಯ ತಳದಲ್ಲಿದೆ ಎಂದು ಅವರು ಭಾವಿಸಿದರು.

^ ಪ್ಯಾರ. 12 ಇಸವಿ 2003ರ ಸೆಪ್ಟೆಂಬರ್‌ 28ರಂದು, ಅಮೆರಿಕದ ಫ್ಲಾರಿಡದಿಂದ ಸ್ವಯಂಸೇವಕರು ಸೇಬ ದ್ವೀಪಕ್ಕೆ ಹೋಗಿ ಅಲ್ಲಿ ಹತ್ತಿರದಲ್ಲಿದ್ದ ಕಟ್ಟಡವೊಂದನ್ನು ನವೀಕರಿಸಿದರು. ಈಗ ಆ ಕಟ್ಟಡವು ರಾಜ್ಯ ಸಭಾಗೃಹವಾಗಿ ಉಪಯೋಗಿಸಲ್ಪಡುತ್ತಿದೆ.

[ಪುಟ 10ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಪೋರ್ಟರೀಕೊ

[ಪುಟ 10ರಲ್ಲಿರುವ ಚಿತ್ರ ಕೃಪೆ]

ಹಿನ್ನೆಲೆ ಚಿತ್ರ: www.sabatourism.com