ಜೋಯಿಸರು ಮತ್ತು ಬೈಬಲ್
ಜೋಯಿಸರು ಮತ್ತು ಬೈಬಲ್
ಬೈಬಲು ಅನೇಕಸಲ ಜೋಯಿಸರ ಚಟುವಟಿಕೆಗೆ ಸೂಚಿಸಿ ಮಾತಾಡುತ್ತದೆ. ಉದಾಹರಣೆಗಾಗಿ ಸಾ.ಶ.ಪೂ. ಎಂಟನೇ ಶತಮಾನದಲ್ಲಿ ಪ್ರವಾದಿಯಾದ ಯೆಶಾಯನು ಬಾಬೆಲಿನ ನಾಶನವನ್ನು ಮುಂತಿಳಿಸುತ್ತಿದ್ದಾಗ ಅದರ ಜ್ಯೋತಿಷಿ ಸಲಹೆಗಾರರಿಗೆ, ನಾಶನದಂಚಿನಲ್ಲಿದ್ದ ಆ ನಗರವನ್ನು ಉಳಿಸುವಂತೆ ಸವಾಲೆಸೆಯುತ್ತಾ ಹೀಗಂದನು: “ಮಂತ್ರಾಲೋಚನೆಗಳನ್ನು ಕೇಳಿ ಕೇಳಿ ನಿನಗೆ [ಬಾಬೆಲಿಗೆ] ಸಾಕಾಯಿತಲ್ಲವೇ; ಖಗೋಲಜ್ಞರು, ಜೋಯಿಸರು, ಪಂಚಾಂಗದವರು, ಇವರೆಲ್ಲರೂ ನಿಂತು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ಉದ್ಧರಿಸಲಿ.”—ಯೆಶಾಯ 47:13.
ಆದರೆ ‘ಜೋಯಿಸ’ ಎಂದು ಭಾಷಾಂತರಿಸಲ್ಪಟ್ಟಿರುವ ಗಜೇರಿನ್ ಎಂಬ ಪದವು ಹೀಬ್ರು ಶಾಸ್ತ್ರಗಳಲ್ಲಿ, ದಾನಿಯೇಲನ ಪುಸ್ತಕದ ಆರಮೇಯಿಕ್ ಭಾಷೆಯಲ್ಲಿ ಬರೆಯಲ್ಪಟ್ಟಿರುವ ಒಂದು ಭಾಗದಲ್ಲಿ ಮಾತ್ರ ತೋರಿಬರುತ್ತದೆ. (ದಾನಿಯೇಲ 2:4ಬಿ-7:28) ಅದಕ್ಕಿರುವ ಮೂಲಾರ್ಥವು, “ಕತ್ತರಿಸಿಹಾಕು” ಎಂದಾಗಿದೆ. ಇದು, ಆಕಾಶವನ್ನು ವಿಭಾಗಿಸಿ ವ್ಯವಸ್ಥಿತ ರೀತಿಯಲ್ಲಿ ಏರ್ಪಡಿಸುವವರಿಗೆ ಸೂಚಿಸಲಿಕ್ಕಾಗಿದೆಯೆಂದು ನೆನಸಲಾಗುತ್ತದೆ. ಈ ಜೋಯಿಸರ ಪಂಥವು, “ಹುಟ್ಟಿದ ಗಳಿಗೆಯಲ್ಲಿ ನಕ್ಷತ್ರಗಳು ಯಾವ ಸ್ಥಾನದಲ್ಲಿರುತ್ತವೋ ಅದರ ಮೇಲಾಧಾರಿಸಿ, ಗಣನೆ ಮತ್ತು ಕಾಲಜ್ಞಾನದ ಮೂಲಕ . . . ಒಬ್ಬೊಬ್ಬ ವ್ಯಕ್ತಿಯ ಅದೃಷ್ಟವೇನಾಗಿರುವುದೆಂದು ನಿರ್ಧರಿಸುವವ”ರಿಂದ ರಚಿಸಲ್ಪಟ್ಟಿತ್ತು. (ಜೆಸೀನ್ಯಸಸ್ ಹೀಬ್ರು ಆ್ಯಂಡ್ ಕ್ಯಾಲ್ಡೀ ಲೆಕ್ಸಿಕನ್, 166, 167) ಜ್ಯೋತಿಶ್ಶಾಸ್ತ್ರವು ಮೂಲಭೂತವಾಗಿ ಬಹು ದೇವತಾ ಸಿದ್ಧಾಂತಕ್ಕೆ ಸಂಬಂಧಪಟ್ಟದ್ದಾಗಿದೆ. ಅದು, ಜಲಪ್ರಳಯದ ಸ್ವಲ್ಪ ಸಮಯಾನಂತರ ಜನರು ಯೆಹೋವನ ಶುದ್ಧಾರಾಧನೆಗೆ ಬೆನ್ನುಹಾಕಿದಷ್ಟು ಹಿಂದಿನ ಕಾಲದಲ್ಲಿ ಇಳಕಲು ಮೆಸೊಪತಾಮ್ಯದ ಕಣಿವೆಯಲ್ಲಿ ಹುಟ್ಟಿಕೊಂಡಿರಬಹುದು. ಕಾಲಾನಂತರ ಕಸ್ದೀಯ ಎಂಬ ಹೆಸರು “ಜೋಯಿಸ” ಎಂಬ ಪದಕ್ಕೆ ಕಾರ್ಯತಃ ಸಮನಾರ್ಥಕ ಪದವಾಯಿತು.
ಜ್ಯೋತಿಶ್ಶಾಸ್ತ್ರದ ಈ ಸುಳ್ಳು ವಿದ್ಯೆಯಲ್ಲಿ, ಆಕಾಶದ ಪ್ರತಿಯೊಂದು ವಿಭಾಗದ ಮೇಲೆ ಬೇರೆ ಬೇರೆ ದೇವತೆಗಳು ಆಳ್ವಿಕೆ ನಡೆಸುತ್ತಾರೆಂದು ನಂಬಲಾಗುತ್ತಿತ್ತು. ಆಕಾಶದಲ್ಲಾಗುತ್ತಿದ್ದ ಪ್ರತಿಯೊಂದು ಚಲನೆ ಮತ್ತು ಘಟನೆಗಳಿಗೆ, ಉದಾಹರಣೆಗೆ ಸೂರ್ಯನ ಉದಯಿಸುವಿಕೆ ಮತ್ತು ಅಸ್ತಮಿಸುವಿಕೆ, ವಿಷುವತ್ತುಗಳು ಹಾಗೂ ಸಂಕ್ರಾಂತಿಗಳು, ಚಂದ್ರನ ಮಜಲುಗಳು, ಗ್ರಹಣಗಳು, ಮತ್ತು ಉಲ್ಕಾಪಾತಗಳಿಗೆ ಈ ದೇವತೆಗಳು ಕಾರಣವಾಗಿವೆಯೆಂದು ನಂಬಲಾಗುತ್ತಿತ್ತು. ಆದುದರಿಂದ ಈ ವಿಶ್ವದಲ್ಲಿನ ಚಲನಗಳನ್ನು ಕ್ರಮವಾಗಿ ಗಮನಿಸಲಾಗುತ್ತಿತ್ತು, ಅವುಗಳು ಸಂಭವಿಸಿದ ಸಮಯಗಳ ಕುರಿತಾದ ಸವಿಸ್ತಾರವಾದ ಚಾರ್ಟುಗಳನ್ನು ಮತ್ತು ಕಾಲತಖ್ತೆಗಳನ್ನು ಮಾಡಲಾಗುತ್ತಿತ್ತು ಹಾಗೂ ಇವುಗಳಿಂದ ಮಾನವ ವ್ಯವಹಾರಗಳನ್ನು ಮತ್ತು ಭೂಮಿಯಾಚೆಯ ಘಟನೆಗಳನ್ನು ಮುಂತಿಳಿಸಲಾಗುತ್ತಿತ್ತು. ಬಹಿರಂಗ ಹಾಗೂ ಖಾಸಗಿಯಾದ ಎಲ್ಲಾ ವಿಷಯಗಳನ್ನು, ಆಕಾಶದ ಈ ದೇವತೆಗಳು ನಿಯಂತ್ರಿಸುತ್ತವೆಂದು ನಂಬಲಾಗುತ್ತಿತ್ತು. ಇದರಿಂದಾಗಿ, ಯಾವುದೇ ರಾಜಕೀಯ ಇಲ್ಲವೆ ಮಿಲಿಟರಿ ನಿರ್ಣಯಗಳನ್ನು ಕೈಗೊಳ್ಳುವ ಮುಂಚೆ, ಮೊದಲು ಜೋಯಿಸರನ್ನು ಕರೆಸಿ ಶಕುನಗಳನ್ನು ಓದಿ ವಿವರಿಸುವಂತೆ, ಮತ್ತು ಅವರು ತಮ್ಮ ಸಲಹೆಸೂಚನೆಯನ್ನು ಕೊಡುವಂತೆ ಮಾಡಲಾಗುತ್ತಿತ್ತು. ಈ ರೀತಿಯಲ್ಲಿ ಪುರೋಹಿತರ ವರ್ಗಕ್ಕೆ ಜನರ ಜೀವಿತಗಳ ಮೇಲಿನ ನಿಯಂತ್ರಣ ಹಾಗೂ ಪ್ರಭಾವವು ಅಧಿಕವಾಗುತ್ತಾ ಹೋಯಿತು. ತಮ್ಮಲ್ಲಿ ಅತಿಲೌಕಿಕ ಶಕ್ತಿ, ಒಳನೋಟ ಹಾಗೂ ಅಪಾರ ವಿವೇಕವಿದೆಯೆಂದು ಅವರು ಹೇಳಿಕೊಳ್ಳುತ್ತಿದ್ದರು. ಬಾಬೆಲಿನವರಲ್ಲಿ ಯಾವುದಾದರೂ ದೊಡ್ಡ ದೇವಾಲಯವು ಕಟ್ಟಲ್ಪಡುತ್ತಿದ್ದರೆ, ಅದಕ್ಕೆ ಖಗೋಳದಲ್ಲಿನ ಘಟನೆಗಳನ್ನು ನೋಡುವ ಸಲುವಾಗಿ ಅದರ ಸ್ವಂತ ವೀಕ್ಷಣಾಗಾರ ಇದ್ದೇ ಇರುತ್ತಿದ್ದನು.
ಇತಿಹಾಸದಲ್ಲಿ ಮುಂದಕ್ಕೆ, ದಾನಿಯೇಲ ಮತ್ತು ಅವನ ಮೂವರು ಸಂಗಡಿಗರು, ಜೋಯಿಸರ ಈ ದೇಶದಲ್ಲಿ ಬಂದಿಗಳಾದರು. ಈ ಹೀಬ್ರು ಯುವಕರು, ತನ್ನ “ಪೂರ್ಣ ರಾಜ್ಯದಲ್ಲಿನ ಎಲ್ಲಾ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ”ರುವುದು ಬಾಬೆಲಿನ ರಾಜನಿಗೆ ಗೊತ್ತಾಯಿತು. (ದಾನಿಯೇಲ 1:20) ತದನಂತರ ದಾನಿಯೇಲನನ್ನು ‘ಜೋಯಿಸರಲ್ಲಿ ಪ್ರಧಾನನು’ ಎಂದು ಕರೆಯಲಾಯಿತು. (ದಾನಿಯೇಲ 4:9) ಆದರೆ ಅವನು ‘ಆಕಾಶಗಳನ್ನು ವಿಭಜಿಸುವ’ ಜೋಯಿಸನಾಗಲಿಕ್ಕಾಗಿ ಎಂದಿಗೂ ಯೆಹೋವನ ಆರಾಧನೆಯನ್ನು ಬಿಟ್ಟುಕೊಡಲಿಲ್ಲ. ಜೋಯಿಸರು ಮತ್ತು ಉಳಿದೆಲ್ಲಾ “ವಿದ್ವಾಂಸರು” ನೆಬೂಕದ್ನೆಚ್ಚರನ ಕನಸು ಏನೆಂದು ಪ್ರಕಟಿಸಲು ಅಶಕ್ತರಾದಾಗ, ದಾನಿಯೇಲನನ್ನು ರಾಜನ ಮುಂದೆ ಕರೆತರಲಾಯಿತು. ಅವನಂದದ್ದು: ‘ರಹಸ್ಯಗಳನ್ನು ವ್ಯಕ್ತಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ; ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನಲ್ಲ.’—ದಾನಿಯೇಲ 2:28, 30.
ಇಸ್ರಾಯೇಲಿನಲ್ಲಿ ಮೋಲೆಕ ಮತ್ತು ಜ್ಯೋತಿಶ್ಶಾಸ್ತ್ರ
ಜ್ಯೋತಿಶ್ಶಾಸ್ತ್ರಕ್ಕೂ ಮೋಲೆಕನ ಆರಾಧನೆಗೂ ನಿಕಟವಾದ ಸಂಬಂಧವಿತ್ತೆಂದು ತೋರಿಸಲು ಪುರಾವೆಯಿದೆ. ಈ ದೇವನನ್ನು ಕೆಲವೊಮ್ಮೆ ಹೋರಿಯ ತಲೆಯುಳ್ಳವನಾಗಿ ಚಿತ್ರಿಸಲಾಗುತ್ತಿತ್ತು. ಬಾಬೆಲಿನವರು, ಕಾನಾನ್ಯರು, ಐಗುಪ್ತದವರು, ಮತ್ತು ಇತರರು ಹೋರಿಯನ್ನು ತಮ್ಮ ದೇವತೆಗಳಾದ, ಮಾರ್ದುಕ್, ಮೋಲೆಕ್, ಬಾಳ ಮುಂತಾದವುಗಳ ಪ್ರತೀಕವಾಗಿ ಆರಾಧಿಸುತ್ತಿದ್ದರು. ಹೋರಿಯು, ರಾಶಿಚಕ್ರದಲ್ಲಿ ಅತಿ ಪ್ರಮುಖವಾಗಿರುವಂಥ ವೃಷಭರಾಶಿಯ ಸಂಕೇತವಾಗಿತ್ತು. ಅನೇಕವೇಳೆ ಸೂರ್ಯದೇವನನ್ನು ಪ್ರತಿನಿಧಿಸಲು ಹೋರಿಗಳನ್ನು ಉಪಯೋಗಿಸಲಾಗುತ್ತಿತ್ತು; ಕೊಂಬುಗಳು ಕಿರಣಗಳನ್ನು ಸೂಚಿಸುತ್ತಿದ್ದವು, ಮತ್ತು ಹೋರಿಗಿರುವ ಬಲವಾದ ಪ್ರಜನನ ಶಕ್ತಿಯು, ‘ಜೀವವನ್ನು ಕೊಡುವ’ ಸೂರ್ಯನ ಶಕ್ತಿಯನ್ನು ಸೂಚಿಸುತ್ತಿತ್ತು. ಇದಕ್ಕೆ ಸಮಾನವಾದ ಸನ್ಮಾನವನ್ನು ಇಷ್ಟಾರ್ ಇಲ್ಲವೆ ಎಸ್ಟಾರ್ಟ್ (ಬೇರೆ ಬೇರೆ ರೀತಿಯಲ್ಲಿ ಕರೆಯಲಾಗುತ್ತಿತ್ತು) ದೇವತೆಯ ಪ್ರತೀಕದೋಪಾದಿ ಹಸುವಿಗೆ ಕೊಡಲಾಗುತ್ತಿತ್ತು. ಆದುದರಿಂದ, ಆರೋನನು ಮತ್ತು ಯಾರೊಬ್ಬಾಮನು ಇಸ್ರಾಯೇಲಿನಲ್ಲಿ ಅಂಥ ಹೋರಿಯ ಆರಾಧನೆ (ಬಸವಾರಾಧನೆ)ಯನ್ನು ಪರಿಚಯಿಸಿದಾಗ, ಅದು ಯೆಹೋವನ ದೃಷ್ಟಿಯಲ್ಲಿ ನಿಶ್ಚಯವಾಗಿಯೂ ವಿಮೋಚನಕಾಂಡ 32:4, 8; ಧರ್ಮೋಪದೇಶಕಾಂಡ 9:16; 1 ಅರಸುಗಳು 12:28-30; 2 ಅರಸುಗಳು 10:29.
ಒಂದು ದೊಡ್ಡ ಪಾಪವಾಗಿತ್ತು.—ಈ ಜೋಯಿಸ ಪಂಥವನ್ನು ಸೇರಿದ್ದಕ್ಕಾಗಿ ಧರ್ಮಭ್ರಷ್ಟ ಹತ್ತು ಕುಲಗಳ ಇಸ್ರಾಯೇಲ್ ರಾಜ್ಯವನ್ನು ಖಂಡಿಸಲಾಯಿತು, ಹಾಗೂ ದಕ್ಷಿಣದಲ್ಲಿದ್ದ ಎರಡು ಕುಲಗಳ ರಾಜ್ಯದಲ್ಲಿ ದುಷ್ಟ ರಾಜ ಆಹಾಜನು ಮತ್ತು ಅವನ ಮೊಮ್ಮಗನಾದ ಮನಸ್ಸೆಯು ನಕ್ಷತ್ರ ದೇವತೆಗಳನ್ನು ಆರಾಧಿಸುವುದರಲ್ಲಿ ನಾಯಕತ್ವ ವಹಿಸಿದರು ಹಾಗೂ ಬಲಿಯೋಪಾದಿ ತಮ್ಮ ಮಕ್ಕಳನ್ನು ಜೀವಂತವಾಗಿ ದಹಿಸುತ್ತಿದ್ದರು. (2 ಅರಸುಗಳು 16:3, 4; 21:3, 6; 2 ಪೂರ್ವಕಾಲವೃತ್ತಾಂತ 28:3, 4; 33:3, 6) ಒಳ್ಳೇ ರಾಜನಾದ ಯೋಷೀಯನಾದರೊ, “ಬಾಳನಿಗೂ ಸೂರ್ಯಚಂದ್ರನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ ಧೂಪಸುಡು”ತ್ತಿದ್ದ “ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.”—2 ಅರಸುಗಳು 23:5, 10, 24.
ಅರಣ್ಯದಲ್ಲಿ ದಂಗೆಯೆದ್ದ ಇಸ್ರಾಯೇಲ್ಯರ ಕುರಿತಾದ ಸ್ತೆಫನನ ವೃತ್ತಾಂತವು ಮೋಲೆಕನ ಆರಾಧನೆ, ಬಸವಾರಾಧನೆ ಮತ್ತು ಜ್ಯೋತಿಶ್ಶಾಸ್ತ್ರದ ನಡುವೆಯಿರುವ ಸಂಬಂಧವನ್ನು ತೋರಿಸುತ್ತದೆ. ಅವರು ಆರೋನನಿಗೆ “ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರುಗಳನ್ನು ನಮಗೆ ಮಾಡಿಕೊಡು” ಎಂದು ಕೂಗಿಕೊಂಡಾಗ, ಯೆಹೋವನು “ಆಕಾಶದ ನಕ್ಷತ್ರ ಗಣವನ್ನು ಪೂಜಿಸುವದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವದೇನಂದರೆ—ಇಸ್ರಾಯೇಲ್ ವಂಶದವರೇ, ನೀವು . . . ನನಗೆ ಯಜ್ಞಗಳನ್ನೂ ಬಲಿಗಳನ್ನೂ ಅರ್ಪಿಸುತ್ತಿದ್ದಿರೋ? ಇಲ್ಲವಲ್ಲಾ; ಅದಕ್ಕೆ ಬದಲಾಗಿ ನೀವು . . . ಮೊಲೋಖನ ಗುಡಾರವನ್ನೂ ರೊಂಫಾ ದೇವತೆಯ ನಕ್ಷತ್ರರೂಪವನ್ನೂ ಹೊತ್ತುಕೊಂಡು ಹೋದಿರಿ.”—ಅ. ಕೃತ್ಯಗಳು 7:40-43.
ಎಳೆಯ ಮಗುವಾಗಿದ್ದ ಯೇಸುವಿಗೆ ಭೇಟಿಕೊಟ್ಟ ಮೇಜೈ
ಎಳೆಯ ಮಗುವಾಗಿದ್ದ ಯೇಸುವಿಗೆ ಜೋಯಿಸರು ಉಡುಗೊರೆಗಳನ್ನು ತಂದುಕೊಟ್ಟರು. ಗ್ರೀಕ್ ಭಾಷೆಯಲ್ಲಿ ಅವರನ್ನು ಮೇಜೊಯಿ ಎಂದು ಕರೆಯಲಾಗುತ್ತಿತ್ತು. (ಮತ್ತಾಯ 2:1) ಈ ಮೇಜೊಯಿ ಯಾರಾಗಿದ್ದರು ಎಂಬುದರ ಕುರಿತು ಹೇಳಿಕೆ ನೀಡುತ್ತಾ ದ ಇಂಪೇರಿಯಲ್ ಬೈಬಲ್ ಡಿಕ್ಷನೆರಿ (ಸಂಪು. II, ಪು. 139) ಹೇಳುವುದು: “ಹೆರೊಡೊಟಸ್‌ಗನುಸಾರ, ಮೇಜೈ ಗುಂಪು ಮೇದ್ಯರ ಒಂದು ಕುಲವಾಗಿತ್ತು. ಅವರು ಕನಸುಗಳ ಅರ್ಥತಿಳಿಸುವವರೆಂದು ಹೇಳಿಕೊಳ್ಳುತ್ತಿದ್ದರು ಮತ್ತು ಪವಿತ್ರ ಸಂಸ್ಕಾರಗಳ ಅಧಿಕೃತ ಅಧಿಕಾರವುಳ್ಳವರಾಗಿದ್ದರು . . . ಚುಟುಕಾಗಿ ಹೇಳುವುದಾದರೆ, ಅವರು ವಿದ್ಯಾವಂತರಾದ ಪುರೋಹಿತ ವರ್ಗದವರಾಗಿದ್ದರು ಮತ್ತು ನೆನಸಲಾಗುತ್ತಿರುವಂತೆ ಪುಸ್ತಕಗಳಿಂದ ಮತ್ತು ನಕ್ಷತ್ರಗಳನ್ನು ವೀಕ್ಷಿಸುವುದರಿಂದಲೂ ಬರಲಿರುವ ಘಟನೆಗಳ ಬಗ್ಗೆ ಅತಿಲೌಕಿಕವಾದ ಒಳನೋಟವನ್ನು ಪಡೆಯುವ ಕೌಶಲವುಳ್ಳವರಾಗಿದ್ದರು . . . ತದನಂತರ ನಡೆಸಲ್ಪಟ್ಟ ಪರಿಶೋಧನೆಗಳಾದರೊ ಮೇದ್ಯ ಮತ್ತು ಪಾರಸಿಯ ದೇಶಗಳ ಬದಲಿಗೆ ಬಾಬೆಲನ್ನು ಪೂರ್ಣ ಪ್ರಮಾಣದ ಮೇಜಿತತ್ತ್ವದ ಕೇಂದ್ರವನ್ನಾಗಿ ಮಾಡುತ್ತವೆ. ‘ಆದರೆ, ಅವರ ಪುರೋಹಿತ ವರ್ಗಕ್ಕೆ ಮೇಜೈ ಎಂಬ ಹೆಸರು ಸಿಕ್ಕಿದ್ದು ಕಸ್ದೀಯರಿಂದಲೇ. ಹೆರೊಡೊಟಸನು ಅದನ್ನು ಒಂದು ಮೇದ್ಯ ಕುಲವಾಗಿ ಕರೆದದ್ದೇಕೆಂಬುದನ್ನು ನಾವು ಈ ರೀತಿಯಲ್ಲಿ ವಿವರಿಸಬಲ್ಲೆವು.’”
ಹಾಗಾದರೆ, ಬಾಲ ಯೇಸುವಿಗೆ ಭೇಟಿಕೊಟ್ಟ ಮೇಜೊಯಿ ಜೋಯಿಸರಾಗಿದ್ದರೆಂಬುದಕ್ಕೆ ಬಲವಾದ ಸಂದರ್ಭ ಸಾಕ್ಷ್ಯಗಳಿವೆ. ಹೀಗಿರಲಾಗಿ ಅವರು ಸುಳ್ಳು ದೇವರುಗಳ ಸೇವಕರಾಗಿದ್ದರು ಮತ್ತು ತಿಳಿದೊ ತಿಳಿಯದೆಯೊ, ಯಾವುದು ಚಲಿಸುತ್ತಿರುವ “ನಕ್ಷತ್ರ”ದಂತೆ ತೋರುತ್ತಿತ್ತೊ ಅದರಿಂದ ಅವರು ಮಾರ್ಗದರ್ಶಿಸಲ್ಪಟ್ಟರು. “ಯೆಹೂದ್ಯರ ಅರಸ”ನು ಹುಟ್ಟಿದ್ದಾನೆಂಬ ವಾಸ್ತವಾಂಶವನ್ನು ಹೆರೋದನ ಗಮನಕ್ಕೆ ತಂದವರು ಅವರೇ, ಮತ್ತು ಆಗ ಹೆರೋದನು ಯೇಸುವನ್ನು ಕೊಲ್ಲಿಸಲು ಪ್ರಯತ್ನಮಾಡಿದನು. ಯೆಹೋವನು, ಆ ಜೋಯಿಸರ ದೆವ್ವ ದೇವರುಗಳಿಗಿಂತ ಶ್ರೇಷ್ಠನಾಗಿ ರುಜುವಾದದ್ದರಿಂದ ಆ ಹಂಚಿಕೆಯು ನೆಲಕಚ್ಚಿತು. ‘ದೇವರು ಕನಸಿನಲ್ಲಿ ಅಪ್ಪಣೆಕೊಟ್ಟದ್ದರಿಂದ’ ಆ ಜೋಯಿಸರು ಹೆರೋದನ ಬಳಿ ವಾಪಸು ಹೋಗುವ ಬದಲಿಗೆ ಬೇರೆ ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.—ಮತ್ತಾಯ 2:2, 12.
ಜ್ಯೋತಿಶ್ಶಾಸ್ತ್ರದ ಕುರಿತಾದ ದೈವಿಕ ಖಂಡನೆ
ಒಂದು ಮಹಾ ಸತ್ಯವನ್ನು ಸರಳವಾಗಿ ತಿಳಿಸಲಾಗಿದೆ: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” ಇದರಲ್ಲಿ ನಮ್ಮ ಸೌರವ್ಯೂಹದಲ್ಲಿರುವ ಗ್ರಹಗಳು ಮತ್ತು ನಕ್ಷತ್ರಪುಂಜಗಳಲ್ಲಿ ಸ್ಥಿರಗೊಳಿಸಲ್ಪಟ್ಟಿರುವ ನಕ್ಷತ್ರಗಳು ಸೇರಿವೆ. (ಆದಿಕಾಂಡ 1:1, 16; ಯೋಬ 9:7-10) ಆದರೆ ಇಂಥ ಭವ್ಯವಾದ ಸೃಷ್ಟಿಯನ್ನು ಮಾಡುವಾಗ, ಮನುಷ್ಯರು ಇವುಗಳನ್ನು ದೇವರುಗಳನ್ನಾಗಿ ಮಾಡುವುದು ಯೆಹೋವನ ಚಿತ್ತವಾಗಿರಲಿಲ್ಲ. ಆದುದರಿಂದಲೇ ತನ್ನ ಜನರು ‘ಆಕಾಶದಲ್ಲಿ ಇರುವ ಯಾವದರ ರೂಪವನ್ನೂ’ ಆರಾಧಿಸುವುದನ್ನು ಆತನು ಕಟ್ಟುನಿಟ್ಟಾಗಿ ನಿಷೇಧಿಸಿದನು. (ವಿಮೋಚನಕಾಂಡ 20:3, 4) ಜ್ಯೋತಿಶ್ಶಾಸ್ತ್ರದ ಪ್ರತಿಯೊಂದು ರೂಪವು ನಿಷೇಧಿತವಾಗಿತ್ತು.—ಧರ್ಮೋಪದೇಶಕಾಂಡ 18:10-12.