ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಬದಲಾಗುತ್ತಿದ್ದ ಪರಿಸ್ಥಿತಿಗಳನ್ನು ದೂರದೂರದ ಸ್ಥಳಗಳಲ್ಲಿ ಸಾಕ್ಷಿನೀಡಲು ಸದುಪಯೋಗಿಸಿದೆವು

ನಮ್ಮ ಬದಲಾಗುತ್ತಿದ್ದ ಪರಿಸ್ಥಿತಿಗಳನ್ನು ದೂರದೂರದ ಸ್ಥಳಗಳಲ್ಲಿ ಸಾಕ್ಷಿನೀಡಲು ಸದುಪಯೋಗಿಸಿದೆವು

ಜೀವನ ಕಥೆ

ನಮ್ಮ ಬದಲಾಗುತ್ತಿದ್ದ ಪರಿಸ್ಥಿತಿಗಳನ್ನು ದೂರದೂರದ ಸ್ಥಳಗಳಲ್ಲಿ ಸಾಕ್ಷಿನೀಡಲು ಸದುಪಯೋಗಿಸಿದೆವು

ರಿಕಾರ್ಡೊ ಮಾಲಿಕ್ಸಿ ಅವರು ಹೇಳಿದಂತೆ

ನನ್ನ ಕ್ರೈಸ್ತ ತಾಟಸ್ಥ್ಯದ ಕಾರಣ ನಾನು ಉದ್ಯೋಗವನ್ನು ಕಳಕೊಂಡಾಗ, ನಮ್ಮ ಭವಿಷ್ಯವನ್ನು ಯೋಜಿಸಲಿಕ್ಕಾಗಿ ಸಹಾಯಮಾಡುವಂತೆ ನಾನೂ ನನ್ನ ಕುಟುಂಬವೂ ಯೆಹೋವನಿಗೆ ಪ್ರಾರ್ಥಿಸಿದೆವು. ಶುಶ್ರೂಷೆಯನ್ನು ವಿಸ್ತರಿಸುವ ನಮ್ಮ ಆಸೆಯನ್ನು ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿದೆವು. ತದನಂತರ ಸ್ವಲ್ಪ ಸಮಯದಲ್ಲೇ ನಾವು, ಎರಡು ಖಂಡಗಳಲ್ಲಿನ ಎಂಟು ದೇಶಗಳಿಗೆ ನಮ್ಮನ್ನು ಕೊಂಡೊಯ್ದ ಅಲೆಮಾರಿಗಳಂಥ ಪ್ರಯಾಣವನ್ನು ಆರಂಭಿಸಿದೆವು. ಫಲಿತಾಂಶವಾಗಿ, ನಾವು ದೂರದೂರದ ಸ್ಥಳಗಳಲ್ಲಿ ನಮ್ಮ ಶುಶ್ರೂಷೆಯನ್ನು ನಡೆಸಲು ಶಕ್ತರಾದೆವು.

ಫಿಲಿಪ್ಪೀನ್‌ ಇಂಡಿಪೆಂಡೆಂಟ್‌ ಚರ್ಚ್‌ನೊಂದಿಗೆ ಸಂಬಂಧವಿದ್ದ ಒಂದು ಕುಟುಂಬದಲ್ಲಿ ನಾನು 1933ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ಜನಿಸಿದೆ. ನಮ್ಮ ಕುಟುಂಬದಲ್ಲಿದ್ದ 14 ಮಂದಿಯಲ್ಲಿ ಎಲ್ಲರೂ ಆ ಚರ್ಚಿಗೆ ಸೇರಿದವರಾಗಿದ್ದೆವು. ನಾನು ಸುಮಾರು 12 ವರ್ಷದವನಾಗಿದ್ದಾಗ, ನನ್ನನ್ನು ನಿಜವಾದ ಧರ್ಮದ ಕಡೆಗೆ ನಡೆಸುವಂತೆ ದೇವರ ಬಳಿ ಪ್ರಾರ್ಥಿಸಿದೆ. ನನ್ನ ಶಿಕ್ಷಕರಲ್ಲೊಬ್ಬರು ನನ್ನನ್ನು ಒಂದು ‘ಧರ್ಮದ ಕ್ಲಾಸ್‌’ಗೆ ಸೇರಿಸಿದರು ಮತ್ತು ನಾನೊಬ್ಬ ಶ್ರದ್ಧಾಭಕ್ತಿಯುಳ್ಳ ಕ್ಯಾಥೊಲಿಕನಾದೆ. ಶನಿವಾರದ ಕನ್‌ಫೆಷನ್‌ ಇಲ್ಲವೆ ಭಾನುವಾರದ ಮಾಸ್‌ ಅನ್ನು ನಾನೆಂದೂ ತಪ್ಪಿಸುತ್ತಿರಲಿಲ್ಲ. ಆದರೆ ಕ್ರಮೇಣವಾಗಿ ನಾನು ಅಸಂತುಷ್ಟನೂ ಸಂದೇಹಪಡುವವನೂ ಆದೆ. ಮರಣಾನಂತರ ಜನರಿಗೆ ಏನಾಗುತ್ತದೆ ಮತ್ತು ನರಕಾಗ್ನಿ ಹಾಗೂ ತ್ರಯೈಕ್ಯದ ಕುರಿತಾದ ಪ್ರಶ್ನೆಗಳು ನನ್ನನ್ನು ಕಾಡಿಸಿದವು. ಧಾರ್ಮಿಕ ಮುಖಂಡರು ಕೊಡುತ್ತಿದ್ದ ಉತ್ತರಗಳು ಟೊಳ್ಳಾಗಿದ್ದವು ಮತ್ತು ನನ್ನನ್ನು ತೃಪ್ತಿಪಡಿಸಲಿಲ್ಲ.

ತೃಪ್ತಿದಾಯಕ ಉತ್ತರಗಳನ್ನು ಪಡೆಯುವುದು

ಕಾಲೇಜಿನಲ್ಲಿ ಓದುತ್ತಿದ್ದಾಗ ನಾನೊಂದು ಗುಂಪನ್ನು ಸೇರಿ, ಅದರೊಂದಿಗೆ ಜಗಳ, ಜೂಜಾಟ, ಧೂಮಪಾನ ಮತ್ತು ಇತರ ಅನಂಗೀಕೃತ ಚಟುವಟಿಕೆಗಳಲ್ಲಿ ಒಳಗೂಡಿದೆ. ಒಂದು ದಿನ ಸಾಯಂಕಾಲ ನನ್ನ ಸಹಪಾಠಿಗಳಲ್ಲೊಬ್ಬನ ತಾಯಿಯೊಂದಿಗೆ ನನ್ನ ಭೇಟಿಯಾಯಿತು. ಅವರು ಯೆಹೋವನ ಸಾಕ್ಷಿಯಾಗಿದ್ದರು. ಧರ್ಮವನ್ನು ಕಲಿಸುತ್ತಿದ್ದ ನನ್ನ ಶಿಕ್ಷಕರಿಗೆ ಕೇಳಿದಂಥ ಪ್ರಶ್ನೆಗಳನ್ನೇ ನಾನವರಿಗೆ ಕೇಳಿದೆ. ನನ್ನ ಎಲ್ಲಾ ಪ್ರಶ್ನೆಗಳಿಗೆ ಅವರು ಬೈಬಲಿನಿಂದ ಉತ್ತರಕೊಟ್ಟರು. ಅವರೇನು ಹೇಳುತ್ತಿದ್ದರೊ ಅದು ಸತ್ಯವೆಂದು ನನಗೆ ಮನದಟ್ಟಾಯಿತು.

ನಾನೊಂದು ಬೈಬಲನ್ನು ಖರೀದಿಸಿ, ಸಾಕ್ಷಿಗಳೊಂದಿಗೆ ಅದನ್ನು ಅಧ್ಯಯನಮಾಡಲಾರಂಭಿಸಿದೆ. ಸ್ವಲ್ಪ ಸಮಯದಲ್ಲೇ ನಾನು ಯೆಹೋವನ ಸಾಕ್ಷಿಗಳ ಎಲ್ಲಾ ಕೂಟಗಳಿಗೂ ಹಾಜರಾಗಲಾರಂಭಿಸಿದೆ. ‘ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ’ ಎಂಬ ಬೈಬಲಿನ ವಿವೇಕಭರಿತ ಸಲಹೆಯನ್ನು ಅನುಸರಿಸುತ್ತಾ ನನ್ನ ಅನೈತಿಕ ಸ್ನೇಹಿತರೊಂದಿಗೆ ಜೊತೆಗೂಡುವುದನ್ನು ನಿಲ್ಲಿಸಿಬಿಟ್ಟೆ. (1 ಕೊರಿಂಥ 15:33) ಇದು ನನ್ನ ಬೈಬಲ್‌ ಅಧ್ಯಯನದಲ್ಲಿ ಪ್ರಗತಿಮಾಡುವಂತೆ ನನಗೆ ಸಹಾಯಮಾಡಿತು ಮತ್ತು ಕೊನೆಗೆ ನನ್ನನ್ನೇ ಯೆಹೋವನಿಗೆ ಸಮರ್ಪಿಸಿಕೊಂಡೆ. 1951ರಲ್ಲಿ ನನ್ನ ದೀಕ್ಷಾಸ್ನಾನವಾದ ಬಳಿಕ, ಸ್ವಲ್ಪ ಸಮಯದ ವರೆಗೆ ನಾನೊಬ್ಬ ಪೂರ್ಣ ಸಮಯದ ಶುಶ್ರೂಷಕ (ಪಯನೀಯರ್‌)ನಾಗಿ ಸೇವೆಸಲ್ಲಿಸಿದೆ. ತದನಂತರ 1953ರ ಡಿಸೆಂಬರ್‌ ತಿಂಗಳಲ್ಲಿ, ನಾನು ಔರೇಅ ಮೆಂಡೊಸಾ ಕ್ರೂಸ್‌ ಎಂಬವಳನ್ನು ಮದುವೆಯಾದೆ. ಅವಳು ನನ್ನ ಬಾಳಸಂಗಾತಿ ಹಾಗೂ ಶುಶ್ರೂಷೆಯಲ್ಲಿನ ನಂಬಿಗಸ್ತ ಜೊತೆಕೆಲಸದವಳಾದಳು.

ನಮ್ಮ ಪ್ರಾರ್ಥನೆಗಳಿಗೆ ಉತ್ತರ

ಪಯನೀಯರರಾಗಿ ಸೇವೆಸಲ್ಲಿಸಬೇಕೆಂಬ ಆಸೆ ನಮಗಿತ್ತು. ಆದರೆ ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸಬೇಕೆಂಬ ನಮ್ಮ ಆಸೆಯು ಆ ಕೂಡಲೇ ಕೈಗೂಡಲಿಲ್ಲ. ಹಾಗಿದ್ದರೂ, ಯೆಹೋವನ ಸೇವೆಯನ್ನು ಮಾಡಲಿಕ್ಕಾಗಿ ಅವಕಾಶಗಳನ್ನು ಮಾಡಿಕೊಡುವಂತೆ ಆತನಿಗೆ ಕೇಳಿಕೊಳ್ಳುವುದನ್ನು ನಾವು ನಿಲ್ಲಿಸಲಿಲ್ಲ. ಆದರೆ ನಮ್ಮ ಜೀವನವು ಕಷ್ಟಕರವಾಗಿತ್ತು. ಹೀಗಿದ್ದರೂ ನಮ್ಮ ಆಧ್ಯಾತ್ಮಿಕ ಗುರಿಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡಿದ್ದೆವು. 25 ವರ್ಷ ಪ್ರಾಯದಲ್ಲಿ ನನ್ನನ್ನು ಸಭಾ ಸೇವಕನಾಗಿ, ಅಂದರೆ ಯೆಹೋವನ ಸಾಕ್ಷಿಗಳ ಒಂದು ಸಭೆಯಲ್ಲಿ ಅಧ್ಯಕ್ಷ ಮೇಲ್ವಿಚಾರಕನಾಗಿ ನೇಮಿಸಲಾಯಿತು.

ನಾನು ಬೈಬಲ್‌ ಜ್ಞಾನದಲ್ಲಿ ಪ್ರಗತಿಮಾಡುತ್ತಾ ಹೋದಂತೆ ಮತ್ತು ಯೆಹೋವನ ಮೂಲತತ್ತ್ವಗಳ ಬಗ್ಗೆ ಹೆಚ್ಚು ತಿಳಿವಳಿಕೆಯನ್ನು ಪಡೆದಂತೆ, ಒಬ್ಬ ತಟಸ್ಥ ಕ್ರೈಸ್ತನಾಗಿ ನನಗಿರುವ ಮನಸ್ಸಾಕ್ಷಿಯ ಮೇಲಾಧಾರಿತ ಸ್ಥಾನವನ್ನು ನನ್ನ ಉದ್ಯೋಗವು ಉಲ್ಲಂಘಿಸುತ್ತದೆಂದು ನಾನು ಗ್ರಹಿಸಿದೆ. (ಯೆಶಾಯ 2:​2-4) ನಾನು ಆ ಕೆಲಸವನ್ನು ಬಿಡಲು ನಿರ್ಧರಿಸಿದೆ. ಇದು ನಮ್ಮ ನಂಬಿಕೆಯ ಪರೀಕ್ಷೆಯಾಗಿತ್ತು. ನನ್ನ ಕುಟುಂಬದ ಅಗತ್ಯಗಳನ್ನು ನಾನು ಹೇಗೆ ಪೂರೈಸುವೆ? ಪುನಃ ನಾವು ಪ್ರಾರ್ಥನೆಯಲ್ಲಿ ಯೆಹೋವ ದೇವರ ಬಳಿ ಹೋದೆವು. (ಕೀರ್ತನೆ 65:⁠2) ನಮ್ಮ ಚಿಂತೆ ಹಾಗೂ ಭಯಗಳ ಬಗ್ಗೆ ಆತನಿಗೆ ಹೇಳಿದೆವು. ಅದೇ ಸಮಯದಲ್ಲಿ, ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ಕ್ಷೇತ್ರದಲ್ಲಿ ಸೇವೆಮಾಡುವ ನಮ್ಮ ಆಸೆಯನ್ನೂ ಆತನ ಮುಂದೆ ವ್ಯಕ್ತಪಡಿಸಿದೆವು. (ಫಿಲಿಪ್ಪಿ 4:​6, 7) ನಮ್ಮ ಮುಂದೆ ವೈವಿಧ್ಯಮಯ ಅವಕಾಶಗಳು ಬರುವವೆಂದು ನಾವಾಗ ಊಹಿಸಿರಲೂ ಇಲ್ಲ!

ನಮ್ಮ ಪ್ರಯಾಣವನ್ನು ಆರಂಭಿಸಿದ್ದು

ಏಪ್ರಿಲ್‌ 1965ರಲ್ಲಿ ನಾನು ಲಾಓಸ್‌ನಲ್ಲಿದ್ದ ವೀಎಂಟ್ಯಾನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಾಪಘಾತ ಬೆಂಕಿ ಹಾಗೂ ರಕ್ಷಣಾಕಾರ್ಯದ ಸೂಪರ್‌ವೈಸರ್‌ ಕೆಲಸವನ್ನು ಸ್ವೀಕರಿಸಿದೆ ಮತ್ತು ನಾವು ಅಲ್ಲಿಗೆ ಸ್ಥಳಾಂತರಿಸಿದೆವು. ವೀಎಂಟ್ಯಾನ್‌ ನಗರದಲ್ಲಿ 24 ಸಾಕ್ಷಿಗಳಿದ್ದರು. ಅಲ್ಲಿದ್ದ ಮಿಷನೆರಿಗಳು ಹಾಗೂ ಕೆಲವು ಸ್ಥಳಿಕ ಸಹೋದರರೊಂದಿಗೆ ನಾವು ಸಾರುವ ಕೆಲಸದಲ್ಲಿ ಆನಂದಿಸಿದೆವು. ತದನಂತರ ನನ್ನನ್ನು, ಥಾಯ್‌ಲೆಂಡ್‌ನ ಉಡಾನ್‌ ಟಾನೀ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಯಿತು. ಉಡಾನ್‌ ಟಾನೀ ಪಟ್ಟಣದಲ್ಲಿ ಬೇರಾವ ಸಾಕ್ಷಿಗಳೂ ಇರಲಿಲ್ಲ. ಕುಟುಂಬವಾಗಿ ನಮ್ಮಷ್ಟಕ್ಕೆ ನಾವು ವಾರದ ಎಲ್ಲಾ ಕೂಟಗಳನ್ನು ನಡೆಸುತ್ತಿದ್ದೆವು, ಮನೆಯಿಂದ ಮನೆಗೆ ಸಾರಿದೆವು, ಪುನರ್ಭೇಟಿಗಳನ್ನು ಮಾಡಿದೆವು ಮತ್ತು ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದೆವು.

‘ಬಹಳ ಫಲಕೊಡಬೇಕು’ ಎಂದು ಯೇಸು ತನ್ನ ಶಿಷ್ಯರಿಗೆ ಕೊಟ್ಟ ಬುದ್ಧಿವಾದವನ್ನು ನೆನಪಿನಲ್ಲಿಟ್ಟುಕೊಂಡೆವು. (ಯೋಹಾನ 15:⁠8) ಆದುದರಿಂದ ನಾವು ಆ ಶಿಷ್ಯರ ಮಾದರಿಯನ್ನು ಅನುಸರಿಸುವ ದೃಢನಿರ್ಧಾರಮಾಡಿ, ಸುವಾರ್ತೆ ಘೋಷಿಸುವುದನ್ನು ಮುಂದುವರಿಸಿದೆವು. ಬೇಗನೆ ನಮಗೆ ಫಲಿತಾಂಶಗಳು ಸಿಕ್ಕಿದವು. ಒಬ್ಬ ಥಾಯ್‌ ಯುವತಿಯು ಸತ್ಯವನ್ನು ಸ್ವೀಕರಿಸಿ ನಮ್ಮ ಆಧ್ಯಾತ್ಮಿಕ ಸಹೋದರಿಯಾದಳು. ಉತ್ತರ ಅಮೆರಿಕದ ಇಬ್ಬರು ವ್ಯಕ್ತಿಗಳು ಸತ್ಯವನ್ನು ಸ್ವೀಕರಿಸಿ, ಕಾಲಾನಂತರ ಕ್ರೈಸ್ತ ಹಿರಿಯರಾದರು. ಉತ್ತರ ಥಾಯ್‌ಲೆಂಡ್‌ನಲ್ಲಿ ನಾವು ಹತ್ತಕ್ಕಿಂತಲೂ ಹೆಚ್ಚು ವರ್ಷ ಸುವಾರ್ತೆಯನ್ನು ಸಾರಿದೆವು. ಈಗ ಉಡಾನ್‌ ಟಾನೀಯಲ್ಲಿ ಒಂದು ಸಭೆಯಿದೆಯೆಂಬುದನ್ನು ತಿಳಿದು ನಮಗೆಷ್ಟು ಸಂತೋಷವಾಗುತ್ತದೆ! ನಾವು ಬಿತ್ತಿದಂಥ ಸತ್ಯದ ಬೀಜಗಳಲ್ಲಿ ಕೆಲವೊಂದು ಈಗಲೂ ಫಲಗಳನ್ನು ಕೊಡುತ್ತಾ ಇವೆ.

ಆದರೆ ದುಃಖಕರವಾಗಿ ನಾವು ಪುನಃ ಸ್ಥಳಾಂತರಿಸಬೇಕಾಯಿತು, ಮತ್ತು ಸಾರುವ ಕೆಲಸದಲ್ಲಿ ಪಾಲನ್ನು ಹೊಂದುವುದನ್ನು ಮುಂದುವರಿಸಲು ಸಹಾಯಮಾಡುವಂತೆ ‘ಬೆಳೆಯ ಯಜಮಾನನಿಗೆ’ ಪ್ರಾರ್ಥಿಸಿದೆವು. (ಮತ್ತಾಯ 9:38) ಈ ಸಲ ನಮ್ಮನ್ನು ಇರಾನ್‌ ದೇಶದ ರಾಜಧಾನಿಯಾದ ತೆಹ್ರಾನ್‌ಗೆ ಸ್ಥಳಾಂತರಿಸಲಾಯಿತು. ಆಗ ಅಲ್ಲಿ ಶಾಹ ಅರಸನ ಆಳ್ವಿಕೆ ನಡೆಯುತ್ತಿತ್ತು.

ಪಂಥಾಹ್ವಾನಕಾರಿ ಟೆರಿಟೊರಿಗಳಲ್ಲಿ ಸಾರುವುದು

ನಾವು ತೆಹ್ರಾನ್‌ಗೆ ಆಗಮಿಸಿದ ಕೂಡಲೇ ನಮ್ಮ ಆಧ್ಯಾತ್ಮಿಕ ಸಹೋದರರನ್ನು ಕಂಡುಕೊಂಡೆವು. 13 ಭಿನ್ನ ಭಿನ್ನ ರಾಷ್ಟ್ರಗಳವರಾಗಿದ್ದ ಸಾಕ್ಷಿಗಳಿಂದ ಕೂಡಿದ ಒಂದು ಚಿಕ್ಕ ಗುಂಪಿನೊಂದಿಗೆ ನಾವು ಸಹವಾಸಮಾಡಿದೆವು. ಇರಾನ್‌ನಲ್ಲಿ ಸುವಾರ್ತೆಯನ್ನು ಸಾರಲಿಕ್ಕಾಗಿ ನಾವು ಹೊಂದಾಣಿಕೆಗಳನ್ನು ಮಾಡಬೇಕಾಯಿತು. ನಮಗೆ ನೇರವಾದ ಯಾವುದೇ ವಿರೋಧ ಇಲ್ಲದಿದ್ದರೂ, ನಾವು ತುಂಬ ಜಾಗರೂಕತೆಯಿಂದ ಕೆಲಸಮಾಡಬೇಕಿತ್ತು.

ಆಸಕ್ತ ವ್ಯಕ್ತಿಗಳ ಕೆಲಸದ ತಖ್ತೆಯಿಂದಾಗಿ ನಾವು ಕೆಲವೊಮ್ಮೆ ಬೈಬಲ್‌ ಅಧ್ಯಯನಗಳನ್ನು ಮಧ್ಯರಾತ್ರಿಗೆ ಇಲ್ಲವೆ ತದನಂತರ ಮುಂಜಾನೆಯ ಹೊತ್ತಿನಲ್ಲಿ ನಡೆಸಬೇಕಾಗುತ್ತಿತ್ತು. ಆದರೆ ಆ ಕಠಿನ ಪರಿಶ್ರಮದ ಫಲವನ್ನು ನೋಡಿ ನಮಗೆಷ್ಟು ಸಂತೋಷವಾಯಿತು! ಹಲವಾರು ಫಿಲಿಪಿನೊ ಹಾಗೂ ಕೊರಿಯನ್‌ ಕುಟುಂಬಗಳು ಕ್ರೈಸ್ತ ಸತ್ಯವನ್ನು ಸ್ವೀಕರಿಸಿ, ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡವು.

ನನ್ನ ಮುಂದಿನ ಕೆಲಸದ ನೇಮಕವು ಬಾಂಗ್ಲಾದೇಶದ ಢಾಕಾ ಆಗಿತ್ತು. ನಾವು ಡಿಸೆಂಬರ್‌ 1977ರಲ್ಲಿ ಅಲ್ಲಿಗೆ ತಲಪಿದೆವು. ನಮ್ಮ ಸಾರುವ ಚಟುವಟಿಕೆಯನ್ನು ನಡೆಸುವುದು ಸುಲಭವಾಗಿರದಿದ್ದ ಇನ್ನೊಂದು ದೇಶ ಇದಾಗಿತ್ತು. ಆದರೆ, ನಾವು ಸಕ್ರಿಯರಾಗಿರಬೇಕು ಎಂಬುದು ಯಾವಾಗಲೂ ನಮ್ಮ ಮನಸ್ಸಿನಲ್ಲಿರುತ್ತಿತ್ತು. ಯೆಹೋವನ ಆತ್ಮದ ಮಾರ್ಗದರ್ಶನೆಯೊಂದಿಗೆ, ನಾವು ಅಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಅನೇಕ ಕುಟುಂಬಗಳನ್ನು ಕಂಡುಕೊಳ್ಳಲು ಶಕ್ತರಾದೆವು. ಅವರಲ್ಲಿ ಕೆಲವರು ಪವಿತ್ರ ಶಾಸ್ತ್ರದಲ್ಲಿರುವ ಸತ್ಯದ ನೀರುಗಳಿಗಾಗಿ ಬಾಯಾರಿದ್ದರು. (ಯೆಶಾಯ 55:⁠1) ಫಲಿತಾಂಶವಾಗಿ ನಾವು ಅನೇಕ ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದೆವು.

‘ಎಲ್ಲಾ [ವಿಧದ] ಮನುಷ್ಯರು ರಕ್ಷಣೆಯನ್ನು ಹೊಂದುವುದು’ ದೇವರ ಚಿತ್ತವಾಗಿದೆ ಎಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಂಡೆವು. (1 ತಿಮೊಥೆಯ 2:⁠4) ಸಂತೋಷಕರವಾಗಿ, ಯಾರೂ ನಮಗೆ ತೊಂದರೆ ಕೊಡಲಿಲ್ಲ. ಯಾವುದೇ ಪೂರ್ವಗ್ರಹವನ್ನು ತೊಡೆದುಹಾಕಲು, ನಾವು ತುಂಬ ಸ್ನೇಹಭಾವದಿಂದ ಮಾತಾಡಲಾರಂಭಿಸಬೇಕೆಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದೆವು. ಅಪೊಸ್ತಲ ಪೌಲನಂತೆ ನಾವು ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗಲು’ ಪ್ರಯತ್ನಿಸಿದೆವು. (1 ಕೊರಿಂಥ 9:22) ನಮ್ಮ ಭೇಟಿಗೆ ಕಾರಣವೇನೆಂದು ನಮಗೆ ಕೇಳಲ್ಪಟ್ಟಾಗ, ನಾವು ದಯಾಭಾವದಿಂದ ವಿವರಿಸುತ್ತಿದ್ದೆವು, ಮತ್ತು ಅವರಲ್ಲಿ ಹೆಚ್ಚಿನವರು ತುಂಬ ಸ್ನೇಹಜೀವಿಗಳೆಂಬುದನ್ನು ನಾವು ಕಂಡುಕೊಂಡೆವು.

ಢಾಕಾದಲ್ಲಿ ನಾವೊಬ್ಬ ಸ್ಥಳಿಕ ಸಾಕ್ಷಿಯನ್ನು ಪತ್ತೆಹಚ್ಚಿದೆವು ಮತ್ತು ಅವಳು ನಮ್ಮೊಂದಿಗೆ ನಮ್ಮ ಕ್ರೈಸ್ತ ಕೂಟಗಳಲ್ಲಿ ಹಾಗೂ ಅನಂತರದ ಸಾರುವ ಕೆಲಸದಲ್ಲಿ ಜೊತೆಗೂಡುವಂತೆ ಉತ್ತೇಜಿಸಿದೆವು. ತರುವಾಯ, ನನ್ನ ಹೆಂಡತಿಯು ಒಂದು ಕುಟುಂಬದೊಂದಿಗೆ ಬೈಬಲ್‌ ಅಧ್ಯಯನಮಾಡಿದಳು ಮತ್ತು ಅವರನ್ನು ನಮ್ಮ ಕೂಟಗಳಿಗೆ ಆಮಂತ್ರಿಸಿದಳು. ಯೆಹೋವನ ಪ್ರೀತಿಪೂರ್ವಕ ದಯೆಯಿಂದಾಗಿ ಆ ಇಡೀ ಕುಟುಂಬವು ಸತ್ಯಕ್ಕೆ ಬಂತು. ತದನಂತರ, ಅವರ ಇಬ್ಬರು ಪುತ್ರಿಯರು ಬೈಬಲ್‌ ಸಾಹಿತ್ಯವನ್ನು ಬಂಗಾಲಿ ಭಾಷೆಗೆ ಭಾಷಾಂತರಿಸುವುದರಲ್ಲಿ ಸಹಾಯಮಾಡಿದರು, ಮತ್ತು ಅವರ ಸಂಬಂಧಿಕರಲ್ಲಿಯೂ ಅನೇಕರು ಯೆಹೋವನ ಕುರಿತು ತಿಳಿದುಕೊಂಡರು. ಅನೇಕ ಇತರ ಬೈಬಲ್‌ ವಿದ್ಯಾರ್ಥಿಗಳು ಸತ್ಯವನ್ನು ಸ್ವೀಕರಿಸಿದರು. ಅವರಲ್ಲಿ ಹೆಚ್ಚಿನವರು ಈಗ ಹಿರಿಯರಾಗಿ ಇಲ್ಲವೆ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಢಾಕಾ ತುಂಬ ಜನಸಂದಣಿಯುಳ್ಳ ನಗರವಾಗಿರುವುದರಿಂದ, ನಮ್ಮ ಕುಟುಂಬ ಸದಸ್ಯರಲ್ಲಿ ಕೆಲವರು ನಮಗೆ ಸಾರುವ ಕೆಲಸದಲ್ಲಿ ಸಹಾಯಮಾಡುವಂತೆ ಅವರನ್ನು ಆಮಂತ್ರಿಸಿದೆವು. ಅನೇಕರು ಓಗೊಡುತ್ತಾ ಬಾಂಗ್ಲಾದೇಶಕ್ಕೆ ಬಂದು ನಮ್ಮೊಂದಿಗೆ ಜೊತೆಗೂಡಿದರು. ಆ ದೇಶದಲ್ಲಿ ಸುವಾರ್ತೆಯನ್ನು ಸಾರುವುದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದಕ್ಕಾಗಿ ನಾವೆಷ್ಟು ಆನಂದಿತರೂ ಯೆಹೋವನಿಗೆ ಎಷ್ಟು ಆಭಾರಿಗಳೂ ಆಗಿದ್ದೇವೆ! ಕೇವಲ ಒಬ್ಬ ವ್ಯಕ್ತಿಯಿದ್ದ ಅತಿ ಚಿಕ್ಕ ಪ್ರಾರಂಭದಿಂದ, ಈಗ ಬಾಂಗ್ಲಾದೇಶದಲ್ಲಿ ಎರಡು ಸಭೆಗಳಿವೆ.

ಇಸವಿ 1982ರ ಜುಲೈ ತಿಂಗಳಲ್ಲಿ, ನಾವು ಬಾಂಗ್ಲಾದೇಶದಿಂದ ಹೊರಡಬೇಕಾಯಿತು. ನಮ್ಮ ಸಹೋದರರನ್ನು ಬಿಟ್ಟುಬರುವಾಗ ನಾವು ಕಂಬನಿ ಮಿಡಿದೆವು. ಸ್ವಲ್ಪ ಸಮಯದೊಳಗೆ ನನಗೆ ಯುಗಾಂಡದಲ್ಲಿನ ಎಂಟೆಬ್ಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಕ್ಕಿತು. ಅಲ್ಲಿ ನಾವು ನಾಲ್ಕು ವರ್ಷ ಏಳು ತಿಂಗಳಿದ್ದೆವು. ಈ ದೇಶದಲ್ಲಿ ಯೆಹೋವನ ಮಹಾನ್‌ ನಾಮವನ್ನು ಸನ್ಮಾನಿಸುವುದರಲ್ಲಿ ನಾವೇನು ಮಾಡಶಕ್ತರಾದೆವು?

ಪೂರ್ವ ಆಫ್ರಿಕದಲ್ಲಿ ಯೆಹೋವನನ್ನು ಸೇವಿಸುವುದು

ಎಂಟೆಬ್ಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾವು ಆಗಮಿಸಿದಾಗ, ಒಬ್ಬ ಕಾರು ಚಾಲಕನು ನನ್ನನ್ನು ಮತ್ತು ನನ್ನ ಹೆಂಡತಿಯನ್ನು ನಮ್ಮ ವಸತಿಗೃಹಕ್ಕೆ ಕೊಂಡೊಯ್ಯಲು ಬಂದನು. ನಾವು ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆಯೇ, ನಾನು ಆ ಚಾಲಕನಿಗೆ ದೇವರ ರಾಜ್ಯದ ಕುರಿತಾಗಿ ಸಾರಲಾರಂಭಿಸಿದೆ. “ನೀವು ಯೆಹೋವನ ಸಾಕ್ಷಿಗಳೊ?” ಎಂದವನು ನನಗೆ ಕೇಳಿದ. ಹೌದೆಂದು ಹೇಳಿದಾಗ ಅವನಂದದ್ದು: “ನಿಮ್ಮ ಸಹೋದರರಲ್ಲೊಬ್ಬರು, ಕಂಟ್ರೋಲ್‌ ಟವರ್‌ನಲ್ಲಿ ಕೆಲಸಮಾಡುತ್ತಾರೆ.” ಆ ಕ್ಷಣವೇ ನನ್ನನ್ನು ಅಲ್ಲಿಗೆ ಕರಕೊಂಡು ಹೋಗುವಂತೆ ಅವನನ್ನು ಕೇಳಿದೆ. ನಮ್ಮನ್ನು ನೋಡಿ ತುಂಬ ಸಂತೋಷಪಟ್ಟ ಆ ಸಹೋದರನನ್ನು ಭೇಟಿಮಾಡಿ ನಾವು ಕೂಟಗಳಿಗಾಗಿ ಮತ್ತು ಕ್ಷೇತ್ರ ಸೇವೆಗಾಗಿ ಏರ್ಪಾಡುಗಳನ್ನು ಮಾಡಿದೆವು.

ಆ ಸಮಯದಲ್ಲಿ ಯುಗಾಂಡದಲ್ಲಿ ಕೇವಲ 228 ಮಂದಿ ರಾಜ್ಯ ಪ್ರಚಾರಕರಿದ್ದರು. ಎಂಟೆಬ್ಬಿಯಲ್ಲಿದ್ದ ಇಬ್ಬರು ಸಹೋದರರೊಂದಿಗೆ ನಾವು ಅಲ್ಲಿದ್ದ ಮೊದಲ ವರ್ಷವನ್ನು ಸತ್ಯದ ಬೀಜಗಳನ್ನು ಬಿತ್ತುವುದರಲ್ಲಿ ಕಳೆದೆವು. ಅಲ್ಲಿನ ಜನರಿಗೆ ಓದುವುದೆಂದರೆ ತುಂಬ ಇಷ್ಟ. ಆದುದರಿಂದ ನಾವು ನೂರಾರು ಪತ್ರಿಕೆಗಳ ಸಮೇತ ಬಹಳಷ್ಟು ಸಾಹಿತ್ಯವನ್ನು ನೀಡಲು ಶಕ್ತರಾಗಿದ್ದೆವು. ವಾರಾಂತ್ಯಗಳಲ್ಲಿ ಬಂದು ಎಂಟೆಬ್ಬಿಯ ಟೆರಿಟೊರಿಯಲ್ಲಿ ಸಾರುವಂತೆ ನಮಗೆ ಸಹಾಯಮಾಡಲು ನಾವು ರಾಜಧಾನಿಯಾದ ಕಾಂಪಾಲಾದಲ್ಲಿದ್ದ ಸಹೋದರರನ್ನು ಆಮಂತ್ರಿಸಿದೆವು. ನನ್ನ ಪ್ರಥಮ ಬಹಿರಂಗ ಭಾಷಣದ ಸಮಯದಲ್ಲಿ, ನನ್ನನ್ನು ಸೇರಿಸಿ ಹಾಜರಿದ್ದವರ ಸಂಖ್ಯೆ​—⁠ಐದು.

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ, ನಾವು ಯಾರಿಗೆ ಸತ್ಯವನ್ನು ಕಲಿಸಿದ್ದೆವೊ ಅವರು ಪ್ರತಿಕ್ರಿಯೆ ತೋರಿಸಿ ಶೀಘ್ರ ಪ್ರಗತಿಯನ್ನು ಮಾಡುವುದನ್ನು ನೋಡುವ ನಮ್ಮ ಜೀವನದ ಅತ್ಯಂತ ಮಧುರ ಕ್ಷಣಗಳಲ್ಲಿ ಆನಂದಿಸಿದೆವು. (3 ಯೋಹಾನ 4) ಒಂದು ಸರ್ಕಿಟ್‌ ಸಮ್ಮೇಳನದಲ್ಲಿ ನಮ್ಮ ಬೈಬಲ್‌ ವಿದ್ಯಾರ್ಥಿಗಳಲ್ಲಿ ಆರು ಮಂದಿ ದೀಕ್ಷಾಸ್ನಾನಪಡೆದರು. ನಮ್ಮ ಬೈಬಲ್‌ ವಿದ್ಯಾರ್ಥಿಗಳಲ್ಲಿ ಅನೇಕರು, ಪೂರ್ಣ ಸಮಯದ ಉದ್ಯೋಗಗಳಿದ್ದರೂ ನಾವು ಪಯನೀಯರರಾಗಿ ಸೇವೆಸಲ್ಲಿಸುವುದನ್ನು ನೋಡಿ ತಾವು ಪೂರ್ಣ ಸಮಯದ ಸೇವೆಯನ್ನು ಬೆನ್ನಟ್ಟಲು ಉತ್ತೇಜಿಸಲ್ಪಟ್ಟೆವೆಂದು ಹೇಳಿದರು.

ನಮ್ಮ ಕೆಲಸದ ಸ್ಥಳವೂ ಫಲಪ್ರದ ಟೆರಿಟೊರಿಯಾಗಿರಬಲ್ಲದೆಂದು ನಾವು ಗ್ರಹಿಸಿದೆವು. ಒಂದು ಸಂದರ್ಭದಲ್ಲಿ, ನಾನೊಬ್ಬ ಏರ್‌ಪೋರ್ಟ್‌ ಫೈಯರ್‌ ಆಫೀಸರರೊಂದಿಗೆ ಮಾತಾಡಿ, ಭೂಪರದೈಸಿನಲ್ಲಿನ ಜೀವನದ ಕುರಿತಾದ ಬೈಬಲಾಧಾರಿತ ನಿರೀಕ್ಷೆಯನ್ನು ಹಂಚಿಕೊಂಡೆ. ವಿಧೇಯ ಮಾನವಕುಲವು ಶಾಂತಿ ಹಾಗೂ ಐಕ್ಯದಲ್ಲಿ ಜೀವಿಸುವುದು, ಮತ್ತು ಮುಂದಕ್ಕೆ ಬಡತನ, ಮನೆಗಳ ಕೊರತೆ, ಯುದ್ಧ, ಕಾಯಿಲೆ ಇಲ್ಲವೆ ಮರಣದಿಂದಾಗಿ ಕಷ್ಟಪಡದೆಂದು ನಾನು ಅವರ ಸ್ವಂತ ಬೈಬಲಿನಿಂದ ಅವರಿಗೆ ತೋರಿಸಿದೆ. (ಕೀರ್ತನೆ 46:9; ಯೆಶಾಯ 33:24; 65:​21, 22; ಪ್ರಕಟನೆ 21:​3, 4) ತಮ್ಮ ಬೈಬಲಿನಲ್ಲೇ ಇದನ್ನು ಓದಿದಾಗ, ಅವರ ಆಸಕ್ತಿಯು ಕೆರಳಿಸಲ್ಪಟ್ಟಿತು. ಅಲ್ಲಿಯೇ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು. ಅವರು ಎಲ್ಲಾ ಕೂಟಗಳಿಗೆ ಹಾಜರಾಗಲಾರಂಭಿಸಿದರು. ಸ್ವಲ್ಪ ಸಮಯದ ನಂತರ ಅವರು ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡರು ಮತ್ತು ದೀಕ್ಷಾಸ್ನಾನಹೊಂದಿದರು. ತದನಂತರ ಅವರು ನಮ್ಮೊಂದಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಜೊತೆಗೂಡಿದರು.

ನಾವು ಯುಗಾಂಡದಲ್ಲಿದ್ದಾಗ ಅಲ್ಲಿ ಎರಡು ಸಲ ಪೌರ ಗಲಭೆಯು ಆರಂಭವಾಯಿತು. ಆದರೆ ಇದರಿಂದ ನಮ್ಮ ಆಧ್ಯಾತ್ಮಿಕ ಚಟುವಟಿಕೆಗಳು ಸ್ಥಗಿತಗೊಳ್ಳಲಿಲ್ಲ. ಅಂತಾರಾಷ್ಟ್ರೀಯ ಏಜೆನ್ಸಿಗಳಿಗಾಗಿ ಕೆಲಸಮಾಡುತ್ತಿದ್ದವರ ಕುಟುಂಬ ಸದಸ್ಯರನ್ನು ಆರು ತಿಂಗಳಿಗಾಗಿ ಕೆನ್ಯದ ನೈರೋಬಿಗೆ ಸ್ಥಳಾಂತರಿಸಲಾಯಿತು. ಯುಗಾಂಡದಲ್ಲಿಯೇ ಉಳಿದ ನಾವು ನಮ್ಮ ಕ್ರೈಸ್ತ ಕೂಟಗಳನ್ನು ಮತ್ತು ಸಾರುವ ಕೆಲಸವನ್ನು ಮುಂದುವರಿಸಿದೆವು. ಆದರೆ ನಾವು ವಿವೇಚನಾಶೀಲರೂ ಜಾಗರೂಕರೂ ಆಗಿರಬೇಕಿತ್ತು.

ಏಪ್ರಿಲ್‌ 1988ರಲ್ಲಿ ನನ್ನ ಉದ್ಯೋಗದ ನೇಮಕವು ಪೂರ್ಣಗೊಂಡು ನಾವು ಪುನಃ ಸ್ಥಳಾಂತರಿಸಿದೆವು. ನಾವು ಎಂಟೆಬ್ಬಿ ಸಭೆಯನ್ನು ಬಿಟ್ಟುಹೊರಡುವಾಗ, ಅಲ್ಲಿನ ಆಧ್ಯಾತ್ಮಿಕ ವಿಕಸನಗಳ ಬಗ್ಗೆ ಗಾಢವಾದ ಸಂತೃಪ್ತ ಭಾವನೆ ನಮಲ್ಲಿತ್ತು. ಜುಲೈ 1997ರಲ್ಲಿ ನಮಗೆ ಪುನಃ ಒಮ್ಮೆ ಎಂಟೆಬ್ಬಿಯನ್ನು ಭೇಟಿಮಾಡುವ ಅವಕಾಶವಿತ್ತು. ಅಷ್ಟರೊಳಗೆ ನಮ್ಮ ಮಾಜಿ ಬೈಬಲ್‌ ವಿದ್ಯಾರ್ಥಿಗಳಲ್ಲಿ ಕೆಲವರು ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದರು. ಸಾರ್ವಜನಿಕ ಕೂಟದಲ್ಲಿ 106 ಮಂದಿ ಹಾಜರಿರುವುದನ್ನು ನೋಡಿ ನಾವೆಷ್ಟು ಪುಳಕಿತರಾದೆವು!

ಎಂದೂ ಸಾರಲ್ಪಟ್ಟಿರದ ಟೆರಿಟೊರಿಗೆ ಹೋಗುವುದು

ನಮಗೆ ಹೊಸ ಅವಕಾಶಗಳು ಸಿಗುವಲ್ಲಿ ಅದನ್ನು ಸ್ವೀಕರಿಸಲು ಶಕ್ತರಾಗುವೆವೊ? ಹೌದು. ನನ್ನ ಮುಂದಿನ ಕೆಲಸವು ಸೋಮಾಲಿಯದ ಮಾಗಡಿಶೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿತ್ತು. ಎಂದೂ ಸಾರಲ್ಪಟ್ಟಿರದಂಥ ಟೆರಿಟೊರಿಯಲ್ಲಿ ಸೇವೆಸಲ್ಲಿಸುವ ಈ ಹೊಸ ಅವಕಾಶವನ್ನು ಸದುಪಯೋಗಿಸಿಕೊಳ್ಳಲು ನಾವು ದೃಢತೀರ್ಮಾನವನ್ನು ಮಾಡಿದೆವು.

ನಮ್ಮ ಸಾರುವ ಚಟುವಟಿಕೆಯು ಹೆಚ್ಚಾಗಿ ರಾಯಭಾರಿ ಕಛೇರಿಯ ಸಿಬ್ಬಂದಿಗೆ, ಫಿಲಿಪಿನೊ ಕಾರ್ಮಿಕರಿಗೆ ಮತ್ತು ಇತರ ವಿದೇಶೀಯರಿಗೆ ನಿರ್ಬಂಧಿಸಲ್ಪಟ್ಟಿತ್ತು. ಹೆಚ್ಚಾಗಿ ನಾವು ಅವರನ್ನು ಮಾರುಕಟ್ಟೆಯಲ್ಲಿ ಭೇಟಿಯಾಗುತ್ತಿದ್ದೆವು. ಅವರ ಮನೆಗಳಿಗೂ ನಾವು ಸ್ನೇಹಭರಿತ ಭೇಟಿಗಳನ್ನು ನೀಡಿದೆವು. ಜಾಣತನ, ಚಾತುರ್ಯ, ಮುಂದಾಲೋಚನೆ ಮತ್ತು ಯೆಹೋವನ ಮೇಲೆ ಸಂಪೂರ್ಣವಾಗಿ ಹೊಂದಿಕೊಳ್ಳುವುದು​—⁠ಇದೆಲ್ಲವನ್ನು ಸೇರಿಸಿ ನಾವು ಇತರರೊಂದಿಗೆ ಬೈಬಲ್‌ ಸತ್ಯಗಳನ್ನು ಹಂಚಲು ಶಕ್ತರಾಗಿದ್ದೆವು, ಮತ್ತು ಇದು ಭಿನ್ನಭಿನ್ನ ರಾಷ್ಟ್ರೀಯತೆಗಳಿಂದ ಬಂದವರ ನಡುವೆ ಫಲವನ್ನು ಉತ್ಪಾದಿಸಿತು. ಎರಡು ವರ್ಷಗಳ ಬಳಿಕ ನಾವು ಮಾಗಡಿಶೂದಿಂದ ಹೊರಟೆವು. ಅನಂತರವೇ ಅಲ್ಲಿ ಯುದ್ಧವು ಸ್ಫೋಟಿಸಿತು.

ಅಂತಾರಾಷ್ಟ್ರೀಯ ಪೌರ ವಿಮಾನಯಾನ ಸಂಘಟನೆಯು ಆಮೇಲೆ ನನ್ನನ್ನು ಮ್ಯಾನ್‌ಮಾರ್‌ನಲ್ಲಿನ ಯಾಂಗೋನ್‌ಗೆ ನೇಮಿಸಿತು. ಪುನಃ, ಪ್ರಾಮಾಣಿಕಹೃದಯದವರು ದೇವರ ಉದ್ದೇಶಗಳ ಕುರಿತು ಕಲಿಯುವಂತೆ ಸಹಾಯಮಾಡಲು ಸದವಕಾಶಗಳು ತೆರೆದವು. ಮ್ಯಾನ್‌ಮಾರ್‌ನ ಬಳಿಕ ನಮ್ಮನ್ನು ಟಾನ್ಸೇನಿಯದ ಡಾರ್‌ ಎಸ್‌ ಸಲಾಮ್‌ಗೆ ನೇಮಿಸಲಾಯಿತು. ಇಲ್ಲಿ ಮನೆಯಿಂದ ಮನೆಗೆ ಸುವಾರ್ತೆ ಸಾರುವುದು ಹೆಚ್ಚು ಸುಲಭವಾಗಿತ್ತು, ಏಕೆಂದರೆ ಅಲ್ಲಿ ಇಂಗ್ಲಿಷ್‌ ಮಾತಾಡುವ ಒಂದು ಸಮುದಾಯವಿತ್ತು.

ನಾವು ಕೆಲಸಮಾಡಿದಂಥ ಎಲ್ಲಾ ದೇಶಗಳಲ್ಲಿ, ನಮ್ಮ ಶುಶ್ರೂಷೆಯನ್ನು ನೆರವೇರಿಸುವುದರಲ್ಲಿ ನಮಗೆ ಅಷ್ಟೇನು ಹೆಚ್ಚು ಸಮಸ್ಯೆಗಳಿರಲಿಲ್ಲ. ಆದರೆ ಅನೇಕ ಕಡೆಗಳಲ್ಲಿ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ಪ್ರತಿಬಂಧಗಳಿದ್ದವು. ನಾನು ಮಾಡುತ್ತಿದ್ದ ಕೆಲಸವು ಸಾಮಾನ್ಯವಾಗಿ ಸರಕಾರ ಇಲ್ಲವೆ ಅಂತಾರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಬಂಧಿಸಿರುತ್ತಿದ್ದದರಿಂದ, ಜನರು ನಮ್ಮ ಚಟುವಟಿಕೆಗಳನ್ನು ಪ್ರಶ್ನಿಸುತ್ತಿರಲಿಲ್ಲ.

ನನ್ನ ಐಹಿಕ ಉದ್ಯೋಗದಿಂದಾಗಿ ನನ್ನ ಹೆಂಡತಿ ಮತ್ತು ನಾನು ಮೂರು ದಶಕಗಳ ಕಾಲ ಅಲೆಮಾರಿಗಳಂತೆ ಜೀವಿಸಬೇಕಾಯಿತು. ಆದರೆ ನಾವು ನನ್ನ ಉದ್ಯೋಗವನ್ನು, ಒಂದು ಗುರಿಯನ್ನು ಸಾಧಿಸಲಿಕ್ಕಾಗಿರುವ ಮಾಧ್ಯಮವಾಗಿ ಮಾತ್ರ ದೃಷ್ಟಿಸಿದೆವು. ನಮ್ಮ ಪ್ರಥಮ ಗುರಿಯು ಯಾವಾಗಲೂ ದೇವರ ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸುವುದು ಆಗಿತ್ತು. ಬದಲಾಗುತ್ತಿದ್ದ ನಮ್ಮ ಪರಿಸ್ಥಿತಿಗಳನ್ನು ಸದುಪಯೋಗಿಸಿಕೊಂಡು, ಸುವಾರ್ತೆಯನ್ನು ದೂರದಲ್ಲೂ ಹತ್ತಿರದಲ್ಲೂ ಹಬ್ಬಿಸುವ ಅದ್ಭುತವಾದ ಸುಯೋಗದಲ್ಲಿ ಆನಂದಿಸಲು ಸಹಾಯಮಾಡಿದ್ದಕ್ಕಾಗಿ ನಾವು ಯೆಹೋವನಿಗೆ ಉಪಕಾರಹೇಳುತ್ತೇವೆ.

ಆರಂಭಿಸಿದ್ದಲ್ಲಿಗೆ ಹಿಂದಿರುಗುವುದು

ನನಗೆ 58 ವರ್ಷ ವಯಸ್ಸಾದಾಗ, ನಾನು ಮುಂಗಡ ನಿವೃತ್ತಿಯನ್ನು ತೆಗೆದುಕೊಂಡು ಫಿಲಿಪ್ಪೀನ್ಸ್‌ಗೆ ಹಿಂದಿರುಗಲು ನಿರ್ಣಯಿಸಿದೆ. ನಾವು ಹಿಂದೆ ಬಂದಾಗ, ಯೆಹೋವನು ನಮ್ಮ ಹೆಜ್ಜೆಗಳನ್ನು ನಿರ್ದೇಶಿಸುವಂತೆ ಆತನಿಗೆ ಪ್ರಾರ್ಥಿಸಿದೆವು. ನಾವು ಕಾವೀಟ್‌ ಪ್ರಾಂತದಲ್ಲಿನ ಟ್ರೀಸೆ ಮಾರ್ಟೀರೇಸ್‌ ನಗರದಲ್ಲಿನ ಒಂದು ಸಭೆಯಲ್ಲಿ ಸೇವೆಸಲ್ಲಿಸಲಾರಂಭಿಸಿದೆವು. ನಾವು ಮೊದಲು ಬಂದಾಗ, ದೇವರ ರಾಜ್ಯದ 19 ಮಂದಿ ಘೋಷಕರು ಮಾತ್ರ ಇಲ್ಲಿದ್ದರು. ದೈನಂದಿನ ಸಾರುವ ಚಟುವಟಿಕೆಗಳನ್ನು ಸಂಘಟಿಸಲಾಯಿತು, ಮತ್ತು ಅನೇಕ ಬೈಬಲ್‌ ಅಧ್ಯಯನಗಳನ್ನು ಆರಂಭಿಸಲಾಯಿತು. ಸಭೆಯು ಬೆಳೆಯಲಾರಂಭಿಸಿತು. ಒಂದು ಸಮಯದಲ್ಲಿ, ನನ್ನ ಹೆಂಡತಿಗೆ 19 ಮನೆ ಬೈಬಲ್‌ ಅಧ್ಯಯನಗಳು ಮತ್ತು ನನಗೆ 14 ಬೈಬಲ್‌ ಅಧ್ಯಯನಗಳು ಇದ್ದವು.

ಬೇಗನೆ ಅಲ್ಲಿನ ರಾಜ್ಯ ಸಭಾಗೃಹವು ನಮಗೆ ಚಿಕ್ಕದಾಯಿತು. ಇದರ ಬಗ್ಗೆ ನಾವು ಯೆಹೋವನಿಗೆ ಪ್ರಾರ್ಥಿಸಿದೆವು. ಒಬ್ಬ ಆಧ್ಯಾತ್ಮಿಕ ಸಹೋದರ ಮತ್ತವನ ಪತ್ನಿಯು ಒಂದು ತುಂಡು ಜಮೀನನ್ನು ದಾನವಾಗಿ ಕೊಡಲು ನಿರ್ಣಯಿಸಿದರು. ಮತ್ತು ಅಲ್ಲೊಂದು ಹೊಸ ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಬ್ರಾಂಚ್‌ ಆಫೀಸು ಸಾಲವನ್ನು ಮಂಜೂರುಮಾಡಿತು. ಈ ಹೊಸ ಕಟ್ಟಡವು ಸಾರುವ ಕೆಲಸದ ಮೇಲೆ ತುಂಬ ಪ್ರಭಾವಬೀರಿತು, ಮತ್ತು ಪ್ರತಿ ವಾರ ಹಾಜರಿಯು ಹೆಚ್ಚುತ್ತಾ ಹೋಯಿತು. ಸದ್ಯದಲ್ಲಿ ನಾವು, 17 ಪ್ರಚಾರಕರುಳ್ಳ ಇನ್ನೊಂದು ಸಭೆಗೆ ನೆರವು ನೀಡಲಿಕ್ಕೋಸ್ಕರ, ಹೋಗಿಬರಲು ಒಂದೊಂದು ತಾಸು ಹಿಡಿಯುವ ಪ್ರಯಾಣಮಾಡುತ್ತೇವೆ.

ಇಷ್ಟೊಂದು ಭಿನ್ನ ದೇಶಗಳಲ್ಲಿ ಸೇವೆಸಲ್ಲಿಸಲು ನಮಗೆ ಸಿಕ್ಕಿದ ಸುಯೋಗವನ್ನು ನಾನೂ ನನ್ನ ಹೆಂಡತಿಯೂ ಬಹುಮೂಲ್ಯವೆಂದೆಣಿಸುತ್ತೇವೆ. ನಮ್ಮ ಅಲೆಮಾರಿ ಜೀವನದ ಕಡೆಗೆ ಹಿನ್ನೋಟ ಬೀರುವಾಗ, ನಾವದನ್ನು ಸಾಧ್ಯವಾದಷ್ಟು ಅತ್ಯುತ್ತಮ ರೀತಿಯಲ್ಲಿ, ಅಂದರೆ ಯೆಹೋವನ ಕುರಿತಾಗಿ ಕಲಿಯಲು ಇತರರಿಗೆ ಸಹಾಯಮಾಡುವುದರಲ್ಲಿ ಉಪಯೋಗಿಸಿದ್ದಕ್ಕಾಗಿ ಗಾಢವಾದ ಸಂತೃಪ್ತ ಭಾವನೆಯನ್ನು ಹೊಂದಿರುತ್ತೇವೆ!

[ಪುಟ 24, 25ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಟಾನ್ಸೇನಿಯ

ಯುಗಾಂಡ

ಸೊಮಾಲಿಯಾ

ಇರಾನ್‌

ಬಾಂಗ್ಲಾದೇಶ್‌

ಮ್ಯಾನ್ಮಾರ್‌

ಲಾಓಸ್‌

ಥಾಯ್‌ಲೆಂಡ್‌

ಫಿಲಿಪ್ಪೀನ್ಸ್‌

[ಪುಟ 23ರಲ್ಲಿರುವ ಚಿತ್ರ]

ನನ್ನ ಹೆಂಡತಿ ಔರೇಅಳೊಂದಿಗೆ