ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪರೀಕ್ಷೆಗಳ ಕೆಳಗೆ ನಂಬಿಗಸ್ತರು”

“ಪರೀಕ್ಷೆಗಳ ಕೆಳಗೆ ನಂಬಿಗಸ್ತರು”

“ಪರೀಕ್ಷೆಗಳ ಕೆಳಗೆ ನಂಬಿಗಸ್ತರು”

ಇಸವಿ 1951ರ ಏಪ್ರಿಲ್‌ ತಿಂಗಳಿನ ಆರಂಭದಲ್ಲಿ, ಪ್ರಬಲವಾದ ಸೋವಿಯೆಟ್‌ ಸರಕಾರವು ಪಾಶ್ಚಾತ್ಯ ಸೋವಿಯೆಟ್‌ ಯೂನಿಯನ್‌ನಲ್ಲಿದ್ದ ಕ್ರೈಸ್ತರ ಒಂದು ನಿರಪರಾಧಿ ಗುಂಪಾದ ಯೆಹೋವನ ಸಾಕ್ಷಿಗಳ ಮೇಲೆ ದಾಳಿಮಾಡಿತು. ಮಕ್ಕಳು, ಗರ್ಭಿಣಿಯರು, ವೃದ್ಧರನ್ನು ಸೇರಿಸಿ ಸಾವಿರಾರು ಕುಟುಂಬಗಳನ್ನು ಬಾಕ್ಸ್‌ ಕಾರುಗಳಲ್ಲಿ ಹಾಕಿ ಸೈಬೀರಿಯಕ್ಕೆ ಕರೆದೊಯ್ಯಲಾಯಿತು. ಅದು ಶಕ್ತಿಗುಂದಿಸುವ 20 ದಿವಸಗಳ ರೈಲು ಪ್ರಯಾಣವಾಗಿತ್ತು. ಸೈಬೀರಿಯದಲ್ಲಿನ ಕಠಿನವಾದ ಮತ್ತು ಅನಾಗರಿಕ ಪರಿಸ್ಥಿತಿಗಳಲ್ಲಿಯೇ ನಿರಂತರ ಜೀವಿಸುವಂತೆ ಅವರು ಗಡೀಪಾರುಮಾಡಲ್ಪಟ್ಟರು.

ಪೂರ್ವ ಸೋವಿಯೆಟ್‌ ಯೂನಿಯನ್‌ನಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ನಡೆಸಲ್ಪಟ್ಟ 50 ವರುಷಗಳ ಈ ದಬ್ಬಾಳಿಕೆಯನ್ನು ಪ್ರದರ್ಶಿಸುವ ಒಂದು ವಿಡಿಯೋವನ್ನು ಇಸವಿ 2001ರ ಏಪ್ರಿಲ್‌ ತಿಂಗಳಿನಲ್ಲಿ ಮಾಸ್ಕೊವಿನಲ್ಲಿ ಬಿಡುಗಡೆಮಾಡುವ ಮೂಲಕ ಈ ಐತಿಹಾಸಿಕ ಘಟನೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಸಾಕ್ಷ್ಯಚಿತ್ರದಲ್ಲಿ, ಯೆಹೋವನ ಸಾಕ್ಷಿಗಳು ತೀವ್ರವಾದ ಒತ್ತಡದ ಕೆಳಗೆ ಹೇಗೆ ಪಾರಾದರು ಮತ್ತು ಸಂಖ್ಯೆಯಲ್ಲಿಯೂ ವೃದ್ಧಿಯನ್ನು ಕಂಡರು ಎಂಬುದನ್ನು ಇತಿಹಾಸಕಾರರೂ ಪ್ರತ್ಯಕ್ಷ ಸಾಕ್ಷಿಗಳೂ ತಿಳಿಸಿದ್ದಾರೆ.

ಪರೀಕ್ಷೆಗಳ ಕೆಳಗೆ ನಂಬಿಗಸ್ತರು​—⁠ಸೋವಿಯೆಟ್‌ ಯೂನಿಯನ್‌ನಲ್ಲಿ ಯೆಹೋವನ ಸಾಕ್ಷಿಗಳು * ಎಂಬ ಈ ಸಾಕ್ಷ್ಯಚಿತ್ರವನ್ನು ಈಗ ರಷ್ಯಾ ಮತ್ತು ಇನ್ನಿತರ ಸ್ಥಳಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅದು ಜನಸಾಮಾನ್ಯರಿಂದಲೂ ಇತಿಹಾಸಗಾರರಿಂದಲೂ ಬಹಳಷ್ಟು ಪ್ರಶಂಸೆಯನ್ನು ಸಹ ಪಡೆದಿದೆ. ಹೆಚ್ಚಿನ ಯೆಹೋವನ ಸಾಕ್ಷಿಗಳು ಯಾವ ಸ್ಥಳಕ್ಕೆ ಕೊಂಡೊಯ್ಯಲ್ಪಟ್ಟರೋ ಆ ಕ್ಷೇತ್ರದಲ್ಲಿ ವಾಸಿಸುತ್ತಿರುವ ರಷ್ಯಾದ ವಿದ್ವಾಂಸರಿಂದ ಮಾಡಲ್ಪಟ್ಟ ಎರಡು ಹೇಳಿಕೆಗಳು ಹೀಗಿವೆ:

“ಈ ಚಲನಚಿತ್ರವನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ನಿಮ್ಮ ಧರ್ಮದ ಪ್ರತಿನಿಧಿಗಳೆಂದರೆ ನನಗೆ ತುಂಬ ಇಷ್ಟ, ಆದರೆ ಈ ಚಲನಚಿತ್ರವನ್ನು ನೋಡಿದ ಅನಂತರ ನಿಮ್ಮ ಬಗ್ಗೆ ನನಗಿದ್ದ ಒಳ್ಳೇ ಭಾವನೆಯು ಇನ್ನಷ್ಟು ಬಲಗೊಂಡಿದೆ. ಈ ಚಲನಚಿತ್ರವು ಬಹಳ ದಕ್ಷತೆಯಿಂದ ತಯಾರಿಸಲ್ಪಟ್ಟಿದೆ! ಇದರಲ್ಲಿ ಪ್ರತಿಯೊಬ್ಬರನ್ನು ವ್ಯಕ್ತಿಗತವಾಗಿ ಪ್ರಸ್ತುತಪಡಿಸಿದ ರೀತಿಯು ನನಗೆ ನಿರ್ದಿಷ್ಟವಾಗಿ ಇಷ್ಟವಾಯಿತು. ನಾನು ಆರ್ತಡಾಕ್ಸ್‌ ಚರ್ಚ್‌ಗೆ ಸೇರಿದವನೂ ನನ್ನ ಧರ್ಮವನ್ನು ಬದಲಾಯಿಸಲು ಇಷ್ಟವಿಲ್ಲದವನೂ ಆಗಿದ್ದರೂ, ನನಗೆ ಸಾಕ್ಷಿಗಳನ್ನು ಕಂಡರೆ ಸಂತೋಷವಾಗುತ್ತದೆ. ನಮ್ಮ ಶಾಲೆಯು ಈ ಚಲನಚಿತ್ರದ ಒಂದು ಪ್ರತಿಯನ್ನು ಇಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇದನ್ನು ವಿದ್ಯಾರ್ಥಿಗಳಿಗೆ ತೋರಿಸಲು ಮತ್ತು ಶಾಲಾ ವ್ಯಾಸಂಗ ಕ್ರಮದಲ್ಲಿ ಇದನ್ನು ಒಳಗೂಡಿಸಲು ನಾನು ಮತ್ತು ನನ್ನ ಸಹೋದ್ಯೋಗಿಗಳು ನಿರ್ಧರಿಸಿದ್ದೇವೆ.”​—⁠ರಷ್ಯಾದ ಇರ್ಕೂಟ್‌ಸ್ಕ್‌ನ ರಾಷ್ಟ್ರ ಪೆಡಗಾಜಿಕಲ್‌ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೋಫೆಸರ್‌ ಸಿರ್ಗೆ ನಿಕಲಾವಿಚ್‌ ರೂಬ್ಟ್‌ಸೊಫ್‌.

“ಈ ಚಲನಚಿತ್ರವು ದೊರಕಿದೊಡನೆ ನನಗೆ ಸಂತೋಷವಾಯಿತು. ದಬ್ಬಾಳಿಕೆಯ ಕುರಿತು ಒಬ್ಬರು ಚಲನಚಿತ್ರವನ್ನು ಮಾಡುವಾಗ, ಕಥೆಯನ್ನು ತರ್ಕಸಂಗತ ರೀತಿಯಲ್ಲಿ ಬೆಳೆಸಿಕೊಂಡು ಹೋಗುವುದು ಯಾವಾಗಲೂ ಬಹಳ ಕಷ್ಟಕರ. ಆದರೆ ನೀವಿದನ್ನು ತುಂಬ ಒಳ್ಳೇ ರೀತಿಯಲ್ಲಿ ತಯಾರಿಸಿದ್ದೀರಿ. ನಿಮ್ಮ ಇನ್ನೂ ಹೆಚ್ಚಿನ ಚಲನಚಿತ್ರಗಳನ್ನು ನನಗೆ ನೀಡಲು ಹಿಂಜರಿಯಬೇಡಿ.”​—⁠ರಷ್ಯಾದ ಇರ್ಕೂಟ್‌ಸ್ಕ್‌ನ ರಾಷ್ಟ್ರ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೋಫೆಸರ್‌ ಸಿರ್ಗೆ ಇಲ್ಯೀಚ್‌ ಕೂಜ್ನೆಟ್‌ಸೊಫ್‌.

ಸೈಬೀರಿಯದಲ್ಲಿರುವ ಯೆಹೋವನ ಸಾಕ್ಷಿಗಳು ಸಹ ಈ ಸಾಕ್ಷ್ಯಚಿತ್ರಕ್ಕೆ ತಮ್ಮ ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ತೋರಿಸಿದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ನೀವು ಈ ಕೆಳಗೆ ಕಾಣಬಹುದು:

“ಈ ಚಲನಚಿತ್ರದಲ್ಲಿ ತೋರಿಸಲ್ಪಟ್ಟಿರುವ ಘಟನೆಗಳು ನಿಜವಾಗಿ ಸಂಭವಿಸಿದಂಥ ಸಮಯದಲ್ಲಿ ರಷ್ಯಾದಲ್ಲಿ ಅನೇಕರಿಗೆ ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಬಗ್ಗೆ ತಪ್ಪಾದ ಮಾಹಿತಿಯು ಕೊಡಲ್ಪಟ್ಟಿತ್ತು. ಆದರೆ ಅಂಥವರು ಈ ಚಲನಚಿತ್ರವನ್ನು ನೋಡಿದ ಬಳಿಕ, ಅವರು ಹಿಂದೆ ಭಾವಿಸುತ್ತಿದ್ದಂತೆ ನಮ್ಮ ಸಂಘಟನೆಯು ಕೇವಲ ಒಂದು ಧಾರ್ಮಿಕ ಪಂಗಡವಲ್ಲ ಎಂಬುದನ್ನು ಗ್ರಹಿಸಬಲ್ಲರು. ಇತ್ತೀಚೆಗೆ ಸಾಕ್ಷಿಗಳಾದವರು ತಿಳಿಸಿದ್ದು: ‘ಇಷ್ಟೊಂದು ಕಷ್ಟಸಂಕಟಗಳನ್ನು ಸಹಿಸಿಕೊಂಡು ಬಂದಿರುವ ಕ್ರೈಸ್ತ ಸಹೋದರರೊಂದಿಗೆಯೇ ನಾವು ವಾಸಿಸುತ್ತಾ ಕೆಲಸಮಾಡುತ್ತಾ ಇದ್ದೇವೆಂಬುದನ್ನು ನಾವು ಊಹಿಸಿರಲೂ ಇಲ್ಲ!’ ಚಲನಚಿತ್ರವನ್ನು ನೋಡಿದ ಬಳಿಕ, ಒಬ್ಬಾಕೆ ಸಾಕ್ಷಿಯು ತಾನು ಪೂರ್ಣ ಸಮಯದ ಪಯನೀಯರಳಾಗಲು ಬಯಸುತ್ತೇನೆ ಎಂದು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದಳು.”​—⁠ಸೈಬೀರಿಯಕ್ಕೆ ಗಡೀಪಾರುಮಾಡಲ್ಪಟ್ಟಿದ್ದ ಆನ್ನಾ ಓವ್‌ಚೂಕ್‌.

“ಗುಪ್ತ ಪೊಲೀಸರು ಒಬ್ಬ ಸಾಕ್ಷಿಯ ಮನೆಬಾಗಲನ್ನು ತಟ್ಟುವುದನ್ನು ಚಲನಚಿತ್ರದಲ್ಲಿ ತೋರಿಸಿದಾಗ ನಾನು ನಡುಗಿದೆ. ಇದು, ಪೊಲೀಸರು ನಮ್ಮ ಮನೆಬಾಗಲನ್ನು ತಟ್ಟಿದ ವಿಷಯವನ್ನು ಮತ್ತು ಆಗ ನನ್ನ ತಾಯಿ ‘ಎಲ್ಲಿಯೊ ಬೆಂಕಿಬಿದ್ದಿರಬೇಕು’ ಎಂದು ಹೇಳಿದ ವಿಷಯವನ್ನು ನನ್ನ ನೆನಪಿಗೆ ತಂದಿತು. ಆದರೆ, ಮುಖ್ಯವಾಗಿ ಈ ಚಲನಚಿತ್ರವು ಬೇರೆ ಸಾಕ್ಷಿಗಳು ನನಗಿಂತಲೂ ಹೆಚ್ಚಿನ ಹಿಂಸೆಯನ್ನು ಅನುಭವಿಸಿದರು ಎಂಬುದನ್ನು ಸಹ ನೆನಪಿಸಿತು. ಈ ಎಲ್ಲಾ ಮಾಹಿತಿಯು ಯೆಹೋವನಿಗೆ ಸೇವೆಸಲ್ಲಿಸುತ್ತಾ ಮುಂದುವರಿಯಲು ನಮಗೆ ಬೇಕಾಗಿರುವ ಹೆಚ್ಚಿನ ಬಲ ಮತ್ತು ಉತ್ಸಾಹವನ್ನು ನೀಡುತ್ತದೆ.”​—⁠ಸೈಬೀರಿಯಕ್ಕೆ ಗಡೀಪಾರುಮಾಡಲ್ಪಟ್ಟಿದ್ದ ಸ್ಟೀಫನ್‌ ಓವ್‌ಚೂಕ್‌.

“ನಾನು ಗಡೀಪಾರುಮಾಡಲ್ಪಟ್ಟ ಸಾಕ್ಷಿಗಳ ಮಗ. ಆದುದರಿಂದ, ಆ ಸಮಯಗಳ ಬಗ್ಗೆ ಈಗಾಗಲೇ ನನಗೆ ಸಾಕಷ್ಟು ತಿಳಿದಿದೆ ಎಂದು ನಾನು ನೆನಸಿದ್ದೆ. ಆದರೆ ಈ ಚಲನಚಿತ್ರವನ್ನು ನೋಡಿದ ಬಳಿಕ, ನನಗೆ ನಿಜವಾಗಿಯೂ ಏನೂ ತಿಳಿದಿರಲಿಲ್ಲ ಎಂಬುದು ನನಗೆ ಅರಿವಾಯಿತು. ಇಂಟರ್‌ವ್ಯೂಗಳನ್ನು ಆಲಿಸುತ್ತಿದ್ದಾಗ, ನನ್ನ ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ಈ ಎಲ್ಲಾ ಅನುಭವಗಳು ಈಗ ನನಗೆ ಕೇವಲ ಕಥೆಗಳಾಗಿಲ್ಲ, ಬದಲಿಗೆ ನಿಜ ಜೀವನದ ಘಟನೆಗಳಾಗಿವೆ. ಈ ಚಲನಚಿತ್ರವು ದೇವರೊಂದಿಗಿನ ನನ್ನ ಸಂಬಂಧವನ್ನು ಬಲಪಡಿಸಿತು ಮತ್ತು ಮುಂದೆ ಬರಲಿರುವ ಎಲ್ಲಾ ಕಷ್ಟಗಳನ್ನು ತಾಳಿಕೊಳ್ಳಲು ನಾನು ಸನ್ನದ್ಧನಾಗುವಂತೆ ನನಗೆ ಸಹಾಯಮಾಡಿತು.”​—⁠ಇರ್ಕೂಟ್‌ಸ್ಕ್‌ವಿನ ವ್ಲಾಡ್ಯೀಮ್‌ಯಿರ್‌ ಕವಾಶ್‌.

“ನನಗೆ ಈ ಚಲನಚಿತ್ರವು ಯಾವುದೇ ಲಿಖಿತ ವೃತ್ತಾಂತಕ್ಕಿಂತ ಹೆಚ್ಚು ಪ್ರಭಾವಶಾಲಿಯಾಗಿತ್ತು. ಸಹೋದರರೊಂದಿಗಿನ ಇಂಟರ್‌ವ್ಯೂಗಳನ್ನು ನಾನು ನೋಡಿ, ಅವರ ಮಾತುಗಳಿಗೆ ಕಿವಿಗೊಟ್ಟಾಗ ಅವರೊಂದಿಗೆ ನಾನು ಸಹ ಆ ಎಲ್ಲಾ ಕಷ್ಟಾನುಭವಗಳನ್ನು ಅನುಭವಿಸಿದೆನೆಂಬ ಅನಿಸಿಕೆ ನನಗಾಯಿತು. ಸೆರೆಮನೆಯಲ್ಲಿದ್ದ ಸಮಯದಲ್ಲಿ ತನ್ನ ಯುವಪ್ರಾಯದ ಹೆಣ್ಣುಮಕ್ಕಳಿಗಾಗಿ ರಟ್ಟುಕಾಗದದಲ್ಲಿ ಚಿತ್ರಬಿಡಿಸಿ ಕಳುಹಿಸಿದ ಸಹೋದರರ ಮಾದರಿಯು, ಬೈಬಲ್‌ ಸತ್ಯವನ್ನು ನನ್ನ ಮಕ್ಕಳ ಹೃದಯದಲ್ಲಿ ನಾಟಿಸಲು ಪ್ರಯತ್ನಿಸುವಂತೆ ನನ್ನನ್ನು ಪ್ರಚೋದಿಸಿತು. ನಿಮಗೆ ಉಪಕಾರ! ಈ ಚಲನಚಿತ್ರವು ರಷ್ಯಾದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ, ತಾವು ಯೆಹೋವನ ಲೋಕವ್ಯಾಪಕ ಸಂಘಟನೆಯ ಭಾಗವಾಗಿದ್ದೇವೆ ಎಂಬ ಭಾವನೆಯನ್ನು ಇನ್ನಷ್ಟು ಬಲಪಡಿಸಿದೆ.”​—⁠ಇರ್ಕೂಟ್‌ಸ್ಕ್‌ವಿನ ಟಾಟ್ಯಾನ ಕಾಲಿನ.

“‘ನೂರು ಬಾರಿ ಕೇಳುವುದಕ್ಕಿಂತಲೂ ಒಮ್ಮೆ ನೋಡುವುದು ಉತ್ತಮ’ ಎನ್ನುವ ಮಾತು ನಿಜವಾಗಿಯೂ ಈ ಚಲನಚಿತ್ರದ ವಿಷಯದಲ್ಲಿ ಸತ್ಯವಾಗಿದೆ. ಇದು ಬಹಳ ಸ್ಪಷ್ಟವೂ ನೈಜವೂ ಆಗಿದೆ ಮತ್ತು ನಮಗೆ ಸಂಬಂಧಿಸಿದ್ದಾಗಿದೆ. ಇದನ್ನು ನೋಡಿದ ನಂತರ ನನಗೆ ಆಲೋಚಿಸಲು ಬಹಳಷ್ಟು ಸಮಯದ ಅಗತ್ಯವಿತ್ತು. ಗಡೀಪಾರುಮಾಡಲ್ಪಟ್ಟ ಆ ಸಾಕ್ಷಿಗಳ ಜೀವನದ ಕುರಿತು ನಾನು ಆಲೋಚಿಸುವಂತೆ ಈ ಚಲನಚಿತ್ರವು ಮಾಡಿತು. ಈಗ ನಾನು ನನ್ನ ಸನ್ನಿವೇಶವನ್ನು ಅವರ ಸನ್ನಿವೇಶಕ್ಕೆ ಹೋಲಿಸಿನೋಡುವಾಗ, ಇಂದಿನ ನಮ್ಮ ಸಮಸ್ಯೆಗಳನ್ನು ಭಿನ್ನ ದೃಷ್ಟಿಕೋನದಿಂದ ನೋಡುವಂತೆ ನನಗೆ ಸಹಾಯಸಿಕ್ಕಿತು.”​—⁠ಇರ್ಕೂಟ್‌ಸ್ಕ್‌ವಿನ ಲಿಡಿಯಾ ಬೀಯಾಡಾ.

ಪರೀಕ್ಷೆಗಳ ಕೆಳಗೆ ನಂಬಿಗಸ್ತರು ಎಂಬ ವಿಡಿಯೋ ಈ ವರೆಗೆ 25 ಭಾಷೆಗಳಲ್ಲಿ ಬಿಡುಗಡೆಯಾಗಿದೆ ಮತ್ತು ಲೋಕವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. * ಸೆಂಟ್‌ ಪೀಟರ್ಸ್‌ಬರ್ಗ್‌, ಒಮ್‌ಸ್ಕ್‌ ಮತ್ತು ರಷ್ಯಾದ ಇತರ ನಗರಗಳಲ್ಲಿನ ಟೆಲಿವಿಷನ್‌ ಸ್ಟೇಷನ್‌ಗಳು ಈ ಸಾಕ್ಷ್ಯಚಿತ್ರವನ್ನು ಪ್ರಸಾರಮಾಡಿವೆ. ಅಷ್ಟುಮಾತ್ರವಲ್ಲದೆ, ವೀನ್ನೆಟ್ಸ್‌ಯಾ, ಕರ್ಚ್‌, ಮೆಲಿಟೊಪೋಲ್‌ ಈ ಮುಂತಾದ ಯೂಕ್ರೇನ್ಯನ್‌ ನಗರಗಳಲ್ಲಿ ಮತ್ತು ಲವೀಫ್‌ ಪ್ರದೇಶದಲ್ಲಿ ಸಹ ಈ ಚಲನಚಿತ್ರವು ಪ್ರಸಾರಮಾಡಲ್ಪಟ್ಟಿದೆ. ಇದಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪರಿಶೀಲನಾ ಸಮಿತಿಗಳಿಂದ ಪುರಸ್ಕಾರಗಳೂ ದೊರಕಿವೆ.

ಈ ಸಾಕ್ಷ್ಯಚಿತ್ರದಲ್ಲಿರುವ ಸಂದೇಶದ ಶಕ್ತಿಯು, ಅನೇಕ ವರ್ಷಗಳ ಹಿಂಸೆಯ ಸಮಯದಲ್ಲಿ ಅಸಾಧಾರಣವಾದ ಧೈರ್ಯ ಮತ್ತು ಆಧ್ಯಾತ್ಮಿಕ ಬಲವನ್ನು ತೋರಿಸಿದ ಸಾವಿರಾರು ಸಾಮಾನ್ಯ ಜನರ ಮಾದರಿಗಳಲ್ಲಿ ಅಡಕವಾಗಿದೆ. ಸೋವಿಯೆಟ್‌ ಯೂನಿಯನ್‌ನಲ್ಲಿದ್ದ ಯೆಹೋವನ ಸಾಕ್ಷಿಗಳು ಪರೀಕ್ಷೆಗಳ ಕೆಳಗೆ ನಿಜವಾಗಿಯೂ ತಮ್ಮನ್ನು ನಂಬಿಗಸ್ತರನ್ನಾಗಿ ರುಜುಪಡಿಸಿದರು. ನಿಮಗೆ ಈ ಸಾಕ್ಷ್ಯಚಿತ್ರವನ್ನು ನೋಡುವ ಇಚ್ಛೆಯಿರುವುದಾದರೆ, ಅದನ್ನು ನಿಮಗೆ ನೀಡಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು ದಯವಿಟ್ಟು ಸಂಪರ್ಕಿಸಿರಿ.

[ಪಾದಟಿಪ್ಪಣಿಗಳು]

^ ಪ್ಯಾರ. 4 ಕನ್ನಡದಲ್ಲಿ ಲಭ್ಯವಿಲ್ಲ.

^ ಪ್ಯಾರ. 13 ಈ ವಿಡಿಯೋ ಇಂಗ್ಲಿಷ್‌, ಇಂಡೊನಿಷ್ಯನ್‌, ಇಟ್ಯಾಲಿಯನ್‌, ಕಾಂಟನೀಸ್‌, ಕೊರಿಯನ್‌, ಗ್ರೀಕ್‌, ಚೆಕ್‌, ಜರ್ಮನ್‌, ಜ್ಯಾಪನೀಸ್‌, ಡಚ್‌, ಡೇನಿಷ್‌, ನಾರ್ವೀಜಿಯನ್‌, ಪೋಲಿಷ್‌, ಫಿನಿಷ್‌, ಫ್ರೆಂಚ್‌, ಬಲ್ಗೇರಿಯನ್‌, ಮ್ಯಾಂಡರೀನ್‌, ರಷ್ಯನ್‌, ರೊಮೇನ್ಯನ್‌, ಲಿತುಏನ್ಯನ್‌, ಸ್ಪ್ಯಾನಿಷ್‌, ಸ್ವೀಡಿಷ್‌, ಸ್ಲೋವಾಕ್‌, ಸ್ಲೊವೀನ್ಯನ್‌ ಮತ್ತು ಹಂಗೆರಿಯನ್‌ ಭಾಷೆಗಳಲ್ಲಿ ಲಭ್ಯವಿದೆ.

[ಪುಟ 8ರಲ್ಲಿರುವ ಚಿತ್ರ ಕೃಪೆ]

ಸ್ಟ್ಯಾಲಿನ್‌: U.S. Army photo

[ಪುಟ 9ರಲ್ಲಿರುವ ಚಿತ್ರ ಕೃಪೆ]

ಸ್ಟ್ಯಾಲಿನ್‌: U.S. Army photo