ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜಿಮಾಡಿಕೊಳ್ಳುವುದರ ಪ್ರಯೋಜನಗಳು

ರಾಜಿಮಾಡಿಕೊಳ್ಳುವುದರ ಪ್ರಯೋಜನಗಳು

ರಾಜಿಮಾಡಿಕೊಳ್ಳುವುದರ ಪ್ರಯೋಜನಗಳು

ಎಡ್‌ ಎಂಬಾತನು ಮರಣಶಯ್ಯೆಯಲ್ಲಿದ್ದನು, ಮತ್ತು ಬಿಲ್‌ ಅವನನ್ನು ದ್ವೇಷಿಸುತ್ತಿದ್ದನು. ಎರಡು ದಶಕಗಳ ಹಿಂದೆ, ಎಡ್‌ ಮಾಡಿದ ಯಾವುದೋ ಒಂದು ನಿರ್ಣಯದ ಕಾರಣ ಬಿಲ್‌ ತನ್ನ ಉದ್ಯೋಗವನ್ನು ಕಳೆದುಕೊಳ್ಳುವಂತಾಯಿತು. ಒಮ್ಮೆ ಸ್ನೇಹಿತರಾಗಿದ್ದ ಇವರನ್ನು ಈ ಘಟನೆಯು ಪ್ರತ್ಯೇಕಿಸಿತು. ಈಗ ಎಡ್‌ ತಾನು ಸಮಾಧಾನದಿಂದ ಸಾಯಲು ಶಕ್ತನಾಗುವಂತೆ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಲು ಪ್ರಯತ್ನಿಸಿದನು. ಆದರೆ, ಅವನಿಗೆ ಕಿವಿಗೊಡಲು ಬಿಲ್‌ ನಿರಾಕರಿಸಿದನು.

ತಾನೇಕೆ ಕ್ಷಮಿಸಲು ಸಿದ್ಧನಿರಲಿಲ್ಲ ಎಂದು ಸುಮಾರು 30 ವರುಷಗಳ ನಂತರ ಬಿಲ್‌ ತನ್ನ ಮರಣ ಹತ್ತರಿಸಿದಾಗ ತಿಳಿಸುತ್ತಾನೆ: “ಅವನ ಆಪ್ತಮಿತ್ರನಾಗಿದ್ದ ನನಗೆ ಎಡ್‌ ಏನು ಮಾಡಿದನೋ ಅದನ್ನು ಅವನು ಮಾಡಬಾರದಾಗಿತ್ತು. ಆದುದರಿಂದ ಇಪ್ಪತ್ತು ವರುಷಗಳ ಅನಂತರ ನನಗೆ ರಾಜಿಮಾಡಿಕೊಳ್ಳಲು ಇಷ್ಟವಿರಲಿಲ್ಲ. . . . ಒಂದುವೇಳೆ ನಾನು ಮಾಡಿದ್ದು ತಪ್ಪಾಗಿರಬಹುದು, ಆದರೆ ಹಾಗೆಯೇ ಮಾಡುವಂತೆ ನನಗನಿಸಿತು.” *

ವೈಯಕ್ತಿಕ ಭಿನ್ನಾಭಿಪ್ರಾಯಗಳು ಯಾವಾಗಲೂ ಇಂಥ ವಿಪತ್ಕಾರಕ ಫಲಿತಾಂಶವನ್ನು ತರಲಿಕ್ಕಿಲ್ಲ, ಆದರೆ ಅದು ಸಾಮಾನ್ಯವಾಗಿ, ಜನರಲ್ಲಿ ವೇದನಾಮಯ ಅಥವಾ ಕಹಿ ಭಾವನೆಯನ್ನು ಉಳಿಸುತ್ತದೆ. ಎಡ್‌ಗೆ ಹೇಗನಿಸಿತೋ ಅದೇ ರೀತಿ ಅನಿಸುವ ಯಾರಾದರೊಬ್ಬರನ್ನು ಪರಿಗಣಿಸಿರಿ. ಅಂಥ ವ್ಯಕ್ತಿಯೊಬ್ಬನು ತನ್ನ ನಿರ್ಣಯದಿಂದ ಹಾನಿಯುಂಟಾಯಿತೆಂದು ತಿಳಿದು ತಪ್ಪಿತಸ್ಥ ಮನಸ್ಸಾಕ್ಷಿಯೊಂದಿಗೆ ಜೀವಿಸಬಹುದು ಮತ್ತು ಏನನ್ನೋ ಕಳೆದುಕೊಂಡ ಅನಿಸಿಕೆಯನ್ನು ಸಹ ಅನುಭವಿಸಬಹುದು. ಮಾತ್ರವಲ್ಲ, ತನ್ನ ಸ್ನೇಹಿತನು ತಮ್ಮ ಸ್ನೇಹವನ್ನು ಕಸದಂತೆ ಬಿಸಾಡಿಬಿಟ್ಟನೆಂದು ನೆನಸುವಾಗ ಅವನಿಗೆ ನೋವಿನ ಅನಿಸಿಕೆಯಾಗುತ್ತದೆ.

ಇನ್ನೊಂದು ಬದಿಯಲ್ಲಿ ಬಿಲ್‌ನಂಥ ಮನೋಭಾವವನ್ನು ಹೊಂದಿರುವ ವ್ಯಕ್ತಿಯೊಬ್ಬನು ತನ್ನನ್ನು ಮುಗ್ಧ ಬಲಿಪಶುವಾಗಿ ಭಾವಿಸಿ ಅತಿಯಾಗಿ ಕೋಪಿಸಿಕೊಳ್ಳಬಹುದು. ಇಂಥ ವ್ಯಕ್ತಿಯು, ತನ್ನ ಸ್ನೇಹಿತನಿಗೆ ಎಲ್ಲವೂ ತಿಳಿದಿತ್ತು ಅವನು ಬೇಕುಬೇಕೆಂದೇ ತನಗೆ ಹಾನಿಯನ್ನು ಉಂಟುಮಾಡಿರಬೇಕು ಎಂದು ನೆನಸಬಹುದು. ಅನೇಕವೇಳೆ, ಇಬ್ಬರು ವ್ಯಕ್ತಿಗಳ ಮಧ್ಯೆ ಭಿನ್ನಾಭಿಪ್ರಾಯವೇಳುವಾಗ, ತಾನು ಮಾಡಿದ್ದೇ ಸರಿ ಇನ್ನೊಬ್ಬ ವ್ಯಕ್ತಿಯೇ ತಪ್ಪಿತಸ್ಥ ಎಂದು ಇಬ್ಬರೂ ಭಾವಿಸುತ್ತಾರೆ. ಆದುದರಿಂದ, ಒಮ್ಮೆ ಸ್ನೇಹಿತರಾಗಿದ್ದ ಇಬ್ಬರು ವ್ಯಕ್ತಿಗಳು ಈಗ ಕಾದಾಡಲು ಆರಂಭಿಸುತ್ತಾರೆ.

ಅವರು ಮೌನ ಶಸ್ತ್ರದೊಂದಿಗೆ ಹೋರಾಡುತ್ತಾರೆ. ಒಬ್ಬನು ಹತ್ತಿರ ಬರುವಾಗ ಇನ್ನೊಬ್ಬನು ಮುಖ ತಿರುಗಿಸಿಕೊಂಡು ಹೋಗುತ್ತಾನೆ ಮತ್ತು ಜನರ ಒಂದು ಗುಂಪಿನಲ್ಲಿ ಇವರಿಬ್ಬರೂ ಭೇಟಿಯಾಗುವಾಗ, ಒಬ್ಬರು ಇನ್ನೊಬ್ಬರನ್ನು ಕಂಡರೂ ಕಾಣದಂತೆ ಇರುತ್ತಾರೆ. ದೂರದಿಂದ ಒಬ್ಬರು ಇನ್ನೊಬ್ಬರನ್ನು ಕದ್ದುಮುಚ್ಚಿ ನೋಡುತ್ತಾರೆ ಅಥವಾ ಶತ್ರುತ್ವದ ದೃಷ್ಟಿಯಿಂದ ನೋಡುತ್ತಾರೆ. ಒಂದುವೇಳೆ ಅವರು ಮಾತಾಡುವುದಾದರೂ, ಕಟುವಾಗಿ ಅಥವಾ ಕತ್ತಿ ತಿವಿದಂತೆ ಹೀನಾಯವಾಗಿ ಮಾತಾಡುತ್ತಾರೆ.

ಆದರೆ ಅವರು ಒಬ್ಬರಿಗೊಬ್ಬರು ಸಂಪೂರ್ಣವಾಗಿ ವಿರೋಧಿಗಳಾಗಿ ತೋರಿದರೂ ಕೆಲವೊಂದು ವಿಷಯಗಳಲ್ಲಿ ಸಹಮತದಿಂದಿರುತ್ತಾರೆ. ತಮ್ಮಲ್ಲಿ ಗಂಭೀರವಾದ ಸಮಸ್ಯೆಗಳಿವೆ ಮತ್ತು ಆಪ್ತಸ್ನೇಹಿತನೊಂದಿಗಿನ ಸಂಬಂಧವನ್ನು ಮುರಿದುಬಿಡುವುದು ದುಃಖಕರವಾಗಿದೆ ಎಂದು ಅವರಿಬ್ಬರೂ ಗ್ರಹಿಸಿಕೊಳ್ಳಬಹುದು. ಅವರಿಬ್ಬರಿಗೂ ಕೊರೆಯುತ್ತಿರುವ ಗಾಯದ ನೋವಿನ ಅನಿಸಿಕೆಯಾಗಬಹುದು ಮತ್ತು ಈ ಗಾಯವನ್ನು ವಾಸಿಮಾಡಲು ಏನಾದರೂ ಮಾಡಲೇಬೇಕು ಎಂದು ಇಬ್ಬರಿಗೂ ಅನಿಸಬಹುದು. ಆದರೆ ಈ ಮುರಿದ ಸಂಬಂಧವನ್ನು ಬೆಸೆಯಲು ಮತ್ತು ರಾಜಿಮಾಡಿಕೊಳ್ಳಲು ಯಾರು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವರು? ಪ್ರಥಮ ಹೆಜ್ಜೆ ತೆಗೆದುಕೊಳ್ಳಲು ಇಬ್ಬರಿಗೂ ಇಷ್ಟವಿಲ್ಲ.

ಎರಡು ಸಾವಿರ ವರುಷಗಳ ಹಿಂದೆ, ಯೇಸು ಕ್ರಿಸ್ತನ ಅಪೊಸ್ತಲರು ಕೆಲವೊಮ್ಮೆ ಬಿರುಸಿನ ವಾಗ್ವಾದಗಳಲ್ಲಿ ತೊಡಗುತ್ತಿದ್ದರು. (ಮಾರ್ಕ 10:35-41; ಲೂಕ 9:46; 22:24) ಒಮ್ಮೆ ಅವರ ಬಿರುಸಿನ ವಾಗ್ವಾದದ ಬಳಿಕ ಯೇಸು ಅವರಿಗೆ, “ನೀವು ದಾರಿಯಲ್ಲಿ ಏನು ಮಾತಾಡಿಕೊಳ್ಳುತ್ತಿದ್ದಿರಿ [“ವಾಗ್ವಾದಮಾಡಿಕೊಳ್ಳುತ್ತಿದ್ದಿರಿ,” NW]” ಎಂದು ಕೇಳಿದನು. ನಾಚಿಕೆಯಿಂದ ಮೌನರಾಗಿ, ಅವರಲ್ಲಿ ಒಬ್ಬನೂ ಉತ್ತರಿಸಲಿಲ್ಲ. (ಮಾರ್ಕ 9:​33, 34) ಅವರು ತಮ್ಮ ಅಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವಂತೆ ಯೇಸುವಿನ ಬೋಧನೆಗಳು ಅವರಿಗೆ ಸಹಾಯಮಾಡಿದವು. ಅವನ ಮತ್ತು ಅವನ ಕೆಲವು ಶಿಷ್ಯರ ಸಲಹೆಗಳು, ಜಗಳಗಳನ್ನು ಬಗೆಹರಿಸಲು ಹಾಗೂ ಒಡೆದ ಮಿತ್ರತ್ವಗಳನ್ನು ಸರಿಪಡಿಸಲು ಜನರಿಗೆ ಇಂದಿನ ವರೆಗೂ ಸಹಾಯಮಾಡುತ್ತಲೇ ಇವೆ. ಅದು ಹೇಗೆಂಬುದನ್ನು ನೋಡೋಣ.

ರಾಜಿಮಾಡಿಕೊಳ್ಳಲು ಶ್ರಮಿಸಿರಿ

“ನನಗೆ ಅವಳೊಂದಿಗೆ ಮಾತಾಡಲು ಇಷ್ಟವಿಲ್ಲ. ಅವಳನ್ನು ನೋಡಲು ಸಹ ಇಷ್ಟವಿಲ್ಲ.” ಒಂದುವೇಳೆ ಯಾವ ವ್ಯಕ್ತಿಯ ಕುರಿತಾದರೂ ನೀವು ಹೀಗೆ ಮಾತಾಡಿರುವಲ್ಲಿ, ಕೆಳಗೆ ತಿಳಿಸಲ್ಪಟ್ಟಿರುವ ಬೈಬಲ್‌ ವಚನವು ಸೂಚಿಸುವಂತೆ ನೀವು ಕ್ರಿಯೆಗೈಯಬೇಕಾಗಿದೆ.

ಯೇಸು ಕಲಿಸಿದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು.” (ಮತ್ತಾಯ 5:23, 24) ಅವನು ಇದನ್ನೂ ಹೇಳಿದನು: “ನಿನ್ನ ಸಹೋದರನು ತಪ್ಪುಮಾಡಿದರೆ ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು.” (ಮತ್ತಾಯ 18:15) ನೀವು ಇನ್ನೊಬ್ಬರನ್ನು ನೋಯಿಸಿರಲಿ ಅಥವಾ ಇನ್ನೊಬ್ಬರು ನಿಮ್ಮನ್ನು ನೋಯಿಸಿರಲಿ, ನೀವು ಆ ವ್ಯಕ್ತಿಯೊಂದಿಗೆ ತಪ್ಪದೆ ಮಾತಾಡಿ ವಿಷಯವನ್ನು ಸರಿಪಡಿಸುವ ಅಗತ್ಯವಿದೆ ಎಂದು ಯೇಸುವಿನ ಮಾತುಗಳು ಒತ್ತಿಹೇಳುತ್ತವೆ. ನೀವು ಇದನ್ನು “ಶಾಂತಭಾವದಿಂದ” ಮಾಡಬೇಕು. (ಗಲಾತ್ಯ 6:⁠1) ಈ ಸಂಭಾಷಣೆಯ ಉದ್ದೇಶವು, ನಿಮ್ಮ ಬಗ್ಗೆ ಇತರರಿಗಿರುವ ಅಭಿಪ್ರಾಯವನ್ನು ಉಳಿಸಿಕೊಳ್ಳುವುದು ಇಲ್ಲವೆ ನಿಮ್ಮ ಎದುರಾಳಿಯನ್ನು ಕ್ಷಮೆಯಾಚಿಸುವಂತೆ ಮಾಡುವುದು ಆಗಿರುವುದಿಲ್ಲ, ಬದಲಾಗಿ ರಾಜಿಮಾಡಿಕೊಳ್ಳುವುದೇ ಆಗಿದೆ. ಬೈಬಲಿನ ಈ ಸಲಹೆಯು ಕಾರ್ಯಸಾಧಕವಾಗಿದೆಯೋ?

ಅರ್ನೆಸ್ಟ್‌ ಒಂದು ದೊಡ್ಡ ಆಫೀಸಿನಲ್ಲಿ ಸೂಪರ್‌ವೈಸರ್‌ ಹುದ್ದೆಯಲ್ಲಿದ್ದಾನೆ. * ಅನೇಕ ವರುಷಗಳಿಂದ ಅವನ ಕೆಲಸದಲ್ಲಿ ಅವನಿಗೆ ಎಲ್ಲಾ ರೀತಿಯ ಜನರೊಂದಿಗೆ ವ್ಯವಹರಿಸಬೇಕಾಗಿದೆ ಮತ್ತು ಅವರೊಂದಿಗೆ ಅತಿ ಸೂಕ್ಷ್ಮವಾದ ವಿಷಯಗಳನ್ನು ಸಹ ನಿರ್ವಹಿಸಬೇಕಾಗಿದೆ. ಅಷ್ಟುಮಾತ್ರವಲ್ಲದೆ ಎಲ್ಲರೊಂದಿಗೆ ಕೆಲಸದ ಸ್ಥಳದಲ್ಲಿ ಉತ್ತಮ ಸ್ನೇಹಸಂಬಂಧವನ್ನು ಕಾಪಾಡಿಕೊಳ್ಳಬೇಕಾಗಿದೆ. ಇಂಥ ಸನ್ನಿವೇಶದಲ್ಲಿ ಎಷ್ಟು ಸುಲಭವಾಗಿ ವೈಯಕ್ತಿಕ ಜಗಳಗಳು ಬೆಳೆಯಬಲ್ಲವು ಎಂಬುದು ಅವನಿಗೆ ತಿಳಿದಿತ್ತು. ಅವನು ಹೇಳುವುದು: “ಆಗಿಂದಾಗ್ಗೆ ನನಗೆ ಇತರರೊಂದಿಗೆ ಭಿನ್ನಾಭಿಪ್ರಾಯಗಳು ಏಳುತ್ತಿದ್ದವು. ಆದರೆ ಹೀಗಾಗುವಾಗ, ನಾನು ಆ ವ್ಯಕ್ತಿಯೊಂದಿಗೆ ಕುಳಿತು, ಸಮಸ್ಯೆಯನ್ನು ಚರ್ಚಿಸುತ್ತಿದ್ದೆ. ಅದನ್ನು ನೇರವಾಗಿ ಎದುರಿಸುತ್ತಿದ್ದೆ. ರಾಜಿಮಾಡಿಕೊಳ್ಳುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದೆ. ಈ ವಿಧಾನವು ಎಂದಿಗೂ ಸೋತುಹೋಗುವುದಿಲ್ಲ.”

ಆಲೀಸ್ಯಾಳಿಗೆ ಅನೇಕ ರೀತಿಯ ಸಂಸ್ಕೃತಿಗಳಿಂದ ಬಂದ ಸ್ನೇಹಿತರಿದ್ದಾರೆ, ಮತ್ತು ಅವಳು ಹೀಗೆ ಹೇಳುತ್ತಾಳೆ: “ಕೆಲವೊಮ್ಮೆ ನಾನು ಏನಾದರು ಹೇಳಿಬಿಡುತ್ತೇನೆ, ಆದರೆ ಅದರಿಂದ ನನ್ನ ಸ್ನೇಹಿತರಲ್ಲಿ ಯಾರಿಗಾದರೂ ನೋವಾಗಿರಬಹುದು ಎಂದು ಅನಂತರ ನಾನು ಯೋಚಿಸುತ್ತೇನೆ. ನಾನು ಹೋಗಿ ಆ ವ್ಯಕ್ತಿಯ ಬಳಿ ಕ್ಷಮೆಯಾಚಿಸುತ್ತೇನೆ. ಕೆಲವೊಮ್ಮೆ ಇತರ ವ್ಯಕ್ತಿಗೆ ನನ್ನ ಮಾತಿನಿಂದ ಸ್ವಲ್ಪವೂ ನೋವಾಗಿರುವುದಿಲ್ಲ ಆದರೂ ನಾನು ಹೋಗಿ ಕ್ಷಮೆಯಾಚಿಸುತ್ತೇನೆ. ಈ ರೀತಿ ನಾನು ಮಾಡುವುದರಿಂದ, ಇದು ನನ್ನನ್ನು ಅಗತ್ಯಕ್ಕಿಂತ ಹೆಚ್ಚು ಬಾರಿ ಕ್ಷಮೆಯಾಚಿಸುವಂತೆ ನಡೆಸುತ್ತದೆ. ಹಾಗಿದ್ದರೂ ಅದು ನನಗೆ ಹಿತಕರ ಅನಿಸಿಕೆಯನ್ನು ನೀಡುತ್ತದೆ. ಯಾರಲ್ಲಿಯೂ ನನ್ನ ಬಗ್ಗೆ ಯಾವುದೇ ತಪ್ಪಭಿಪ್ರಾಯವಿಲ್ಲ ಎಂದು ನನಗೆ ತಿಳಿಯುತ್ತದೆ.”

ಅಡ್ಡಿಗಳನ್ನು ಎದುರಿಸುವುದು

ಹಾಗಿದ್ದರೂ, ವೈಯಕ್ತಿಕ ಜಗಳಗಳಲ್ಲಿ ರಾಜಿಮಾಡಿಕೊಳ್ಳದಂತೆ ತಡೆಯುವ ಅನೇಕ ಅಡ್ಡಿಗಳಿವೆ. ನೀವೆಂದಾದರೂ ಹೀಗೆ ಹೇಳಿದ್ದೀರೊ: “ಸಮಸ್ಯೆಯನ್ನು ಉಂಟುಮಾಡಿದವನು ಅವನು. ಹಾಗಿರುವಾಗ ರಾಜಿಮಾಡಿಕೊಳ್ಳಲು ನಾನೇಕೆ ಮುಂದೆಹೋಗಬೇಕು?” ಅಥವಾ ನೀವು ಸಮಸ್ಯೆಯನ್ನು ಸರಿಪಡಿಸಲು ಇನ್ನೊಬ್ಬನ ಬಳಿ ಹೋದಾಗ ಆ ವ್ಯಕ್ತಿ: “ನಾನು ಏನು ಹೇಳಲಿ, ನನಗೆ ಏನೂ ಹೇಳಲಿಕ್ಕೆ ಇಲ್ಲ” ಎಂದು ತಿಳಿಸಿದ್ದನ್ನು ಕೇಳಿದ್ದೀರೊ? ತಾವು ಅನುಭವಿಸಿದ ಭಾವನಾತ್ಮಕ ವೇದನೆಯಿಂದಾಗಿ ಕೆಲವು ಜನರು ಈ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ. ಜ್ಞಾನೋಕ್ತಿ 18:19 ಹೇಳುವುದು: “ಅನ್ಯಾಯಹೊಂದಿದ ಸಹೋದರನು ಬಲವಾದ ಪಟ್ಟಣಕ್ಕಿಂತಲೂ ಅಸಾಧ್ಯ; ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ.” ಆದುದರಿಂದ ಇತರ ವ್ಯಕ್ತಿಯ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಿರಿ. ಅವನು ನಿಮ್ಮನ್ನು ತ್ಯಜಿಸುವುದಾದರೆ, ಸ್ವಲ್ಪ ಸಮಯ ಕಾದು ಪುನಃ ಅವನ ಬಳಿಗೆ ಹೋಗಲು ಪ್ರಯತ್ನಿಸಿರಿ. ಆಗ ಒಂದುವೇಳೆ “ಬಲವಾದ ಪಟ್ಟಣ”ವು ತೆರೆದಿರಬಹುದು ಮತ್ತು ರಾಜಿಮಾಡಿಕೊಳ್ಳಲು ಸಾಧ್ಯವಾಗುವಂತೆ ಬಾಗಿಲಿನಿಂದ ‘ಅಗುಳಿಗಳು’ ತೆಗೆಯಲ್ಪಟ್ಟಿರಬಹುದು.

ರಾಜಿಮಾಡಿಕೊಳ್ಳದಂತೆ ತಡೆಯುವ ಇನ್ನೊಂದು ಅಡ್ಡಿಯಲ್ಲಿ ವ್ಯಕ್ತಿಯ ಸ್ವಗೌರವವು ಒಳಗೂಡಿರಬಹುದು. ಕೆಲವು ವ್ಯಕ್ತಿಗಳಿಗೆ, ಕ್ಷಮೆಯಾಚಿಸುವುದು ಇಲ್ಲವೆ ಎದುರಾಳಿಯೊಂದಿಗೆ ಮಾತಾಡುವುದು ಸಹ ಗೌರವ ಹಾನಿಯಂತಿರುತ್ತದೆ. ಸ್ವಗೌರವದ ಕುರಿತಾಗಿ ಚಿಂತಿಸುವುದು ಸೂಕ್ತವಾಗಿದೆ, ಆದರೆ ರಾಜಿಮಾಡಿಕೊಳ್ಳಲು ಒಪ್ಪದಿರುವುದು ವ್ಯಕ್ತಿಯ ಸ್ವಗೌರವವನ್ನು ಹೆಚ್ಚಿಸುತ್ತದೋ ಅಥವಾ ಕಡಿಮೆಗೊಳಿಸುತ್ತದೋ? ಸ್ವಗೌರವದ ಕುರಿತ ಚಿಂತೆ ಎಂಬುದಾಗಿ ನಾವು ನೆನಸುವ ವಿಷಯವು ಒಂದುವೇಳೆ ನಿಜತ್ವದಲ್ಲಿ ನಮ್ಮ ಹೆಮ್ಮೆಯಾಗಿದೆಯೋ?

ಜಗಳವನ್ನು ಉಂಟುಮಾಡುವ ಆತ್ಮ ಮತ್ತು ಹೆಮ್ಮೆಯ ಮಧ್ಯೆ ಸಂಬಂಧವಿದೆ ಎಂದು ಬೈಬಲ್‌ ಬರಹಗಾರನಾದ ಯಾಕೋಬನು ತೋರಿಸಿಕೊಡುತ್ತಾನೆ. ಕೆಲವು ಕ್ರೈಸ್ತರು ತಮ್ಮ ಮಧ್ಯೆ ನಡೆಸುತ್ತಿದ್ದ ‘ಯುದ್ಧಗಳನ್ನು’ ಮತ್ತು ‘ಕಾದಾಟಗಳನ್ನು’ ಬಯಲುಪಡಿಸಿದ ಬಳಿಕ, ಅವನು ಮುಂದುವರಿಸಿ ಹೀಗೆ ಹೇಳಿದನು: “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (ಯಾಕೋಬ 4:​1-3, 6) ಅಹಂಕಾರ, ಅಥವಾ ಹೆಮ್ಮೆಯು ರಾಜಿಮಾಡಿಕೊಳ್ಳುವುದನ್ನು ಹೇಗೆ ತಡೆಯುತ್ತದೆ?

ತಾವು ಇತರರಿಗಿಂತ ಉತ್ತಮರು ಎಂಬುದಾಗಿ ನೆನಸುವಂತೆ ಮಾಡುವುದರ ಮೂಲಕ ಹೆಮ್ಮೆಯು ಜನರನ್ನು ಮೋಸಗೊಳಿಸುತ್ತದೆ. ಅಹಂಕಾರಿಗಳು ತಮಗೆ ತಮ್ಮ ಜೊತೆಮಾನವರ ನೈತಿಕ ಮೌಲ್ಯಗಳ ಕುರಿತು ತೀರ್ಪುಮಾಡುವ ಅಧಿಕಾರವಿದೆ ಎಂದು ಭಾವಿಸುತ್ತಾರೆ. ಯಾವ ರೀತಿಯಲ್ಲಿ? ಭಿನ್ನಾಭಿಪ್ರಾಯಗಳು ಏಳುವಾಗ ಅವರು ಅನೇಕವೇಳೆ ತಮ್ಮ ಪ್ರತಿಕಕ್ಷಿಯ ಕುರಿತು, ಇವನನ್ನು ಬದಲಾಯಿಸಲು ಸಾಧ್ಯವೇ ಇಲ್ಲ, ಇವನನ್ನು ಸುಧಾರಿಸಲು ಯಾವುದೇ ನಿರೀಕ್ಷೆಯಿಲ್ಲ ಎಂಬ ನಿರ್ಣಯಕ್ಕೆ ಬರುತ್ತಾರೆ. ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜನರನ್ನು ಪರಿಗಣನೆಗೆ ಅನರ್ಹರಾದವರು ಎಂದು ನಿರ್ಣಯಿಸುವಂತೆ ಹೆಮ್ಮೆಯು ಕೆಲವು ಜನರನ್ನು ಪ್ರಚೋದಿಸುತ್ತದೆ. ಹೀಗಿರುವಾಗ, ಕ್ಷಮೆಯಾಚಿಸುವುದಂತೂ ದೂರದ ಸಂಗತಿ. ಆದುದರಿಂದ, ಹೆಮ್ಮೆಯಿಂದ ಪ್ರಚೋದಿಸಲ್ಪಟ್ಟವರು ಅನೇಕವೇಳೆ ಜಗಳಗಳನ್ನು ಸರಿಯಾಗಿ ಪರಿಹರಿಸುವ ಬದಲಿಗೆ ಅದನ್ನು ಮುಂದುವರಿಯುವಂತೆ ಬಿಡುತ್ತಾರೆ.

ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸುವ ಅಡ್ಡಗಟ್ಟಿನಂತೆ, ಹೆಮ್ಮೆಯು ಅನೇಕವೇಳೆ ರಾಜಿಮಾಡಿಕೊಳ್ಳುವ ದಿಕ್ಕಿನತ್ತ ಹೆಜ್ಜೆಯಿಡದಂತೆ ತಡೆಯುತ್ತದೆ. ಒಂದುವೇಳೆ ಒಬ್ಬ ವ್ಯಕ್ತಿಯೊಂದಿಗೆ ರಾಜಿಮಾಡಿಕೊಳ್ಳುವ ನಿಮ್ಮ ಪ್ರಯತ್ನಗಳನ್ನು ನೀವೇ ತಡೆಯುತ್ತಿದ್ದೀರೆಂಬುದು ಕಂಡುಬರುವಲ್ಲಿ, ನೀವು ಹೆಮ್ಮೆ ಎಂಬ ಗುಣದೊಂದಿಗೆ ಹೋರಾಡುತ್ತಿರಬಹುದು. ನೀವು ಹೆಮ್ಮೆಯನ್ನು ಹೇಗೆ ಜಯಿಸಬಲ್ಲಿರಿ? ಅದಕ್ಕೆ ವಿರುದ್ಧವಾಗಿರುವ ಗುಣವಾದ ದೀನತೆಯನ್ನು ಬೆಳೆಸಿಕೊಳ್ಳುವ ಮೂಲಕವೇ.

ತದ್ವಿರುದ್ಧವಾದದ್ದನ್ನೇ ಮಾಡಿರಿ

ಬೈಬಲ್‌ ದೀನತೆಯನ್ನು ಹೆಚ್ಚು ಉತ್ತೇಜಿಸುತ್ತದೆ. “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.” (ಜ್ಞಾನೋಕ್ತಿ 22:4) ಕೀರ್ತನೆ 138:6ರಲ್ಲಿ, ದೀನವ್ಯಕ್ತಿಗಳ ಮತ್ತು ಅಹಂಕಾರಿಗಳ ಕಡೆಗಿರುವ ದೇವರ ದೃಷ್ಟಿಕೋನವನ್ನು ನಾವು ಓದುತ್ತೇವೆ: “ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತುಹಿಡಿಯುತ್ತಾನೆ.”

ಅನೇಕ ಜನರು ದೀನತೆಯನ್ನು ಅಪಮಾನಕ್ಕೆ ಸಮಾನವಾಗಿ ಭಾವಿಸುತ್ತಾರೆ. ಲೋಕದ ಅಧಿಕಾರಿಗಳಿಗೆ ಈ ರೀತಿಯ ಅನಿಸಿಕೆಯಿದೆ. ಇಡೀ ಜನಾಂಗವೇ ರಾಜಕೀಯ ಮುಖಂಡರ ಇಚ್ಛೆಗೆ ಅಧೀನವಾಗುತ್ತದಾದರೂ, ತಮ್ಮ ತಪ್ಪುಗಳನ್ನು ದೀನತೆಯಿಂದ ಒಪ್ಪಿಕೊಳ್ಳುವ ಧೈರ್ಯ ಅವರಿಗಿಲ್ಲ. “ತಪ್ಪಾಯಿತು ಕ್ಷಮಿಸಿ” ಎಂದು ಒಬ್ಬ ಅಧಿಕಾರಿಯು ಹೇಳಿಬಿಟ್ಟರೆ ಅದು ಸುದ್ದಿಯೋಗ್ಯ ಸಂಗತಿಯಾಗುವುದಂತೂ ಖಂಡಿತ. ಮಾಜಿ ಸರಕಾರಿ ಅಧಿಕಾರಿಯೊಬ್ಬರು, ಮಾರಕ ವಿಪತ್ತಿನ ಸಮಯದಲ್ಲಿ ತಮ್ಮಿಂದಾದ ತಪ್ಪಿಗಾಗಿ ಇತ್ತೀಚೆಗೆ ಕ್ಷಮೆಯಾಚಿಸಿದಾಗ ಅದು ಮುಖ್ಯ ಸುದ್ದಿಯಾಗಿ ಪರಿಣಮಿಸಿತು.

ದೀನತೆಯನ್ನು ಒಂದು ನಿಘಂಟು ಹೇಗೆ ಅರ್ಥನಿರೂಪಿಸುತ್ತದೆ ಎಂಬುದನ್ನು ಗಮನಿಸಿರಿ: “ದೀನತೆಯು ದೀನರಾಗಿರುವ ಗುಣವಾಗಿದೆ ಅಥವಾ ತಮ್ಮ ಕುರಿತು ವಿನೀತ ಭಾವನೆಯನ್ನು ಹೊಂದಿರುವುದೇ ಆಗಿದೆ. . . . ಇದು ಹೆಮ್ಮೆ ಇಲ್ಲವೆ ಅಹಂಕಾರಕ್ಕೆ ವಿರುದ್ಧವಾಗಿದೆ.” ಹಾಗಾದರೆ, ದೀನತೆ ಎಂಬುದಾಗಿ ಹೇಳುವಾಗ ಒಬ್ಬ ವ್ಯಕ್ತಿಗೆ ಸ್ವತಃ ತನ್ನ ಕುರಿತು ಇರುವ ನೋಟವನ್ನು ಅದು ಸೂಚಿಸುತ್ತದೆಯೇ ಹೊರತು ಅವನ ಕುರಿತು ಇತರರಿಗಿರುವ ನೋಟವನ್ನಲ್ಲ. ದೀನತೆಯಿಂದ ತಪ್ಪೊಪ್ಪಿಕೊಂಡು, ಯಥಾರ್ಥವಾಗಿ ಕ್ಷಮೆಯಾಚಿಸುವುದು ಒಬ್ಬನನ್ನು ಅವಮಾನಗೊಳಿಸುವುದಿಲ್ಲ; ಬದಲಾಗಿ ಅದು ಅವನ ಸತ್ಕೀರ್ತಿಯನ್ನು ಹೆಚ್ಚಿಸುತ್ತದೆ. ಬೈಬಲ್‌ ತಿಳಿಸುವುದು: “ಭಂಗಕ್ಕೆ ಮೊದಲು ಗರ್ವದ ಹೃದಯ; ಮಾನಕ್ಕೆ ಮುಂಚೆ ದೈನ್ಯ.”​—⁠ಜ್ಞಾನೋಕ್ತಿ 18:12.

ತಮ್ಮ ತಪ್ಪುಗಳ ಕುರಿತು ಕ್ಷಮೆಯಾಚಿಸದ ರಾಜಕಾರಣಿಗಳ ಕುರಿತಾಗಿ ಒಬ್ಬ ಪ್ರೇಕ್ಷಕನು ತಿಳಿಸಿದ್ದು: “ದುಃಖಕರವಾದ ವಿಷಯವೇನೆಂದರೆ, ತಪ್ಪನ್ನು ಒಪ್ಪಿಕೊಳ್ಳುವುದು ಒಂದು ಬಲಹೀನತೆಯ ಸೂಚನೆ ಎಂದು ಅವರು ಯೋಚಿಸುತ್ತಾರೆ. ಬಲಹೀನ ವ್ಯಕ್ತಿಗಳು ಮತ್ತು ಅಭದ್ರತೆಯ ಅನಿಸಿಕೆಯಿರುವವರು, ‘ಕ್ಷಮಿಸಿ’ ಎಂಬ ಪದವನ್ನು ಉಪಯೋಗಿಸುವುದು ತೀರ ಅಪರೂಪ. ವಿಶಾಲ ಹೃದಯದ ಮತ್ತು ಧೈರ್ಯಶಾಲಿಗಳಾದ ಜನರು ‘ನನ್ನಿಂದ ತಪ್ಪಾಯಿತು’ ಎಂದು ಹೇಳುತ್ತಾರೆ. ಹೀಗೆ ಹೇಳುವ ಮೂಲಕ ಅವರು ತಮ್ಮ ಸ್ವಗೌರವವನ್ನು ಕಳೆದುಕೊಳ್ಳುವುದಿಲ್ಲ.” ರಾಜಕಾರಣಿಗಳಲ್ಲದವರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ನೀವು ಹೆಮ್ಮೆಯನ್ನು ದೀನತೆ ಎಂಬ ಗುಣದಿಂದ ಸ್ಥಾನಪಲ್ಲಟ ಮಾಡುವುದಾದರೆ, ವೈಯಕ್ತಿಕ ಜಗಳಗಳಲ್ಲಿ ರಾಜಿಮಾಡಿಕೊಳ್ಳುವ ಸಾಧ್ಯತೆಯು ಬಹಳಷ್ಟು ಹೆಚ್ಚಾಗುತ್ತದೆ. ಈ ಸತ್ಯವನ್ನು ಒಂದು ಕುಟುಂಬವು ಹೇಗೆ ಕಂಡುಕೊಂಡಿತೆಂಬುದನ್ನು ಗಮನಿಸಿರಿ.

ಜೂಲೀ ಮತ್ತು ಅವಳ ತಮ್ಮನಾದ ವಿಲ್ಯಮ್‌ನ ನಡುವೆ ಮನಸ್ತಾಪ ಉಂಟಾಯಿತು. ಇದರಿಂದ ವಿಲ್ಯಮ್‌ ಎಷ್ಟು ಸಿಟ್ಟುಗೊಂಡನೆಂದರೆ, ಅವನು ಜೂಲೀ ಹಾಗೂ ಅವಳ ಗಂಡನಾದ ಜೋಸೆಫ್‌ನೊಂದಿಗೆ ಎಲ್ಲಾ ಸಂಬಂಧವನ್ನು ಕಡಿದುಹಾಕಿದನು. ಅಷ್ಟುಮಾತ್ರವಲ್ಲದೆ ಜೂಲೀ ಮತ್ತು ಜೋಸೆಫ್‌ ಈ ಮುಂಚೆ ಅವನಿಗೆ ಕೊಟ್ಟ ಎಲ್ಲ ಉಡುಗೊರೆಗಳನ್ನು ಸಹ ಅವನು ಹಿಂದಿರುಗಿಸಿದನು. ತಿಂಗಳುಗಳು ಗತಿಸಿದಂತೆ, ಈ ಅಕ್ಕತಮ್ಮಂದಿರು ಒಂದೊಮ್ಮೆ ಆನಂದಿಸುತ್ತಿದ್ದಂಥ ಆಪ್ತತೆಯ ಸ್ಥಳದಲ್ಲಿ ಕಹಿಮನೋಭಾವವು ತುಂಬಿಕೊಂಡಿತು.

ಹಾಗಿದ್ದರೂ, ಜೋಸೆಫ್‌ ಮತ್ತಾಯ 5:​23, 24ನ್ನು ಅನ್ವಯಿಸಿಕೊಳ್ಳಲು ನಿರ್ಧರಿಸಿದನು. ಅವನು ಶಾಂತಭಾವದಿಂದ ತನ್ನ ಮೈದುನನನ್ನು ಭೇಟಿಯಾಗಲು ಪ್ರಯತ್ನಿಸಿದನು ಮತ್ತು ಅವನನ್ನು ನೋಯಿಸಿದಕ್ಕಾಗಿ ಕ್ಷಮೆಯಾಚಿಸುತ್ತಾ ಒಂದು ವೈಯಕ್ತಿಕ ಪತ್ರವನ್ನು ಸಹ ಕಳುಹಿಸಿದನು. ತಮ್ಮನನ್ನು ಕ್ಷಮಿಸುವಂತೆ ಜೋಸೆಫ್‌ ತನ್ನ ಪತ್ನಿಯನ್ನೂ ಉತ್ತೇಜಿಸಿದನು. ಸಮಯಾನಂತರ, ಜೂಲೀ ಮತ್ತು ಜೋಸೆಫ್‌ ನಿಜವಾಗಿಯೂ ರಾಜಿಮಾಡಿಕೊಳ್ಳಲು ಬಯಸುತ್ತಾರೆಂದು ವಿಲ್ಯಮ್‌ ಅರಿತುಕೊಂಡನು ಹಾಗೂ ಅವನ ಕೋಪವು ಕಡಿಮೆಯಾಯಿತು. ವಿಲ್ಯಮ್‌ ಮತ್ತು ಅವನ ಪತ್ನಿ ಜೂಲೀಯನ್ನೂ ಜೋಸೆಫನ್ನೂ ಭೇಟಿಯಾದರು; ಅವರೆಲ್ಲರೂ ಕ್ಷಮೆಯಾಚಿಸಿ, ಒಬ್ಬರನ್ನೊಬ್ಬರು ತಬ್ಬಿಕೊಂಡು ತಮ್ಮ ಸ್ನೇಹವನ್ನು ಪುನಸ್ಸ್ಥಾಪಿಸಿದರು.

ಒಂದುವೇಳೆ ಯಾರೊಂದಿಗಾದರೂ ನಿಮಗಿರುವ ವೈಯಕ್ತಿಕ ಜಗಳವನ್ನು ಪರಿಹರಿಸಲು ನೀವು ಬಯಸುವುದಾದರೆ, ತಾಳ್ಮೆಯಿಂದ ಬೈಬಲಿನ ಬೋಧನೆಗಳನ್ನು ಅನ್ವಯಿಸಿರಿ ಮತ್ತು ಆ ವ್ಯಕ್ತಿಯೊಂದಿಗೆ ರಾಜಿಮಾಡಿಕೊಳ್ಳಲು ಪ್ರಯತ್ನಿಸಿರಿ. ಯೆಹೋವನು ಖಂಡಿತವಾಗಿಯೂ ನಿಮಗೆ ಸಹಾಯನೀಡುವನು. ಪುರಾತನ ಇಸ್ರಾಯೇಲ್ಯರಿಗೆ ದೇವರು ಏನು ಹೇಳಿದನೋ ಅದು ನಿಮ್ಮ ವಿಷಯದಲ್ಲಿ ನಿಜವಾಗಲಿದೆ: ‘ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು [“ಶಾಂತಿಯು,” NW] ದೊಡ್ಡ ನದಿಯಂತೆ ಇರುತ್ತಿತ್ತು.’​—⁠ಯೆಶಾಯ 48:18.

[ಪಾದಟಿಪ್ಪಣಿಗಳು]

^ ಪ್ಯಾರ. 3 ಸ್ಟ್ಯಾನ್ಲೀ ಕ್ಲವ್ಡ್‌ ಮತ್ತು ಲಿನ್‌ ಒಲ್‌ಸನ್‌ರ ದ ಮರೊ ಬಾಯ್ಸ್‌​—⁠ಪಯನೀಯರ್‌ ಆನ್‌ ದಿ ಫ್ರನ್ಟ್‌ ಲೈನ್ಸ್‌ ಆಫ್‌ ಬ್ರಾಡ್‌ಕಾಸ್ಟ್‌ ಜರ್ನಲಿಜಮ್‌ನ ಮೇಲಾಧಾರಿತ.

^ ಪ್ಯಾರ. 12 ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 7ರಲ್ಲಿರುವ ಚಿತ್ರಗಳು]

ಕ್ಷಮೆಯಾಚಿಸುವುದು ಅನೇಕವೇಳೆ ಶಾಂತಿಭರಿತ ಸಂಬಂಧಗಳನ್ನು ಪುನಸ್ಸ್ಥಾಪಿಸುತ್ತದೆ