ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೂತಳು ಪುಸ್ತಕದ ಮುಖ್ಯಾಂಶಗಳು

ರೂತಳು ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ರೂತಳು ಪುಸ್ತಕದ ಮುಖ್ಯಾಂಶಗಳು

ಅದು ಇಬ್ಬರು ಸ್ತ್ರೀಯರ ನಡುವೆ ಇದ್ದ ನಿಷ್ಠೆಯ ಕುರಿತಾದ ಹೃದಯೋಲ್ಲಾಸಪಡಿಸುವ ನಿಜ ಜೀವನ ಕಥೆಯಾಗಿದೆ. ಅದು ಯೆಹೋವ ದೇವರಿಗಾಗಿ ಗಣ್ಯತೆ ಮತ್ತು ಆತನ ಏರ್ಪಾಡಿನಲ್ಲಿನ ಭರವಸೆಯ ಕುರಿತಾದ ವೃತ್ತಾಂತವಾಗಿದೆ. ಅದು, ಮೆಸ್ಸೀಯನ ವಂಶಾವಳಿಯ ಬಗ್ಗೆ ಯೆಹೋವನಿಗಿದ್ದ ತೀವ್ರಾಸಕ್ತಿಯ ಕಡೆಗೆ ಗಮನಸೆಳೆಯುವ ಕಥೆಯೂ ಹೌದು. ಅದು ಒಂದು ಕುಟುಂಬದಲ್ಲಿನ ಸುಖದುಃಖಗಳ ಕುರಿತಾದ ಹೃದಯಸ್ಪರ್ಶಿ ಕಥನವಾಗಿದೆ. ಅದು ಬೈಬಲಿನ ರೂತಳು ಪುಸ್ತಕವಾಗಿದೆ, ಮತ್ತು ಅದರಲ್ಲಿ ಇವೆಲ್ಲವುಗಳೊಂದಿಗೆ ಇನ್ನೂ ಅನೇಕ ವಿಷಯಗಳಿವೆ.

ರೂತಳ ಪುಸ್ತಕವು, ಇಸ್ರಾಯೇಲಿನಲ್ಲಿ ‘ನ್ಯಾಯಸ್ಥಾಪಕರು ಆಳುತ್ತಿದ್ದ’ ಸಮಯದಲ್ಲಿ ಸುಮಾರು 11 ವರ್ಷಗಳ ಅವಧಿಯನ್ನು ಆವರಿಸುತ್ತದೆ. (ರೂತಳು 1:⁠1) ದಾಖಲಾಗಿರುವ ಘಟನೆಗಳು, ನ್ಯಾಯಸ್ಥಾಪಕರ ಅವಧಿಯ ಆದಿಭಾಗದಲ್ಲಿ ನಡೆದಿರಬೇಕು. ಏಕೆಂದರೆ ಈ ನಿಜ ಜೀವನ ಕಥೆಯಲ್ಲಿನ ಒಬ್ಬ ಪಾತ್ರಧಾರಿಯಾದ ಜಮೀನ್ದಾರ ಬೋವಜನು, ಯೆಹೋಶುವನ ದಿನಗಳಲ್ಲಿದ್ದ ರಾಹಾಬಳ ಪುತ್ರನಾಗಿದ್ದನು. (ಯೆಹೋಶುವ 2:​1, 2; ರೂತಳು 2:1; ಮತ್ತಾಯ 1:⁠5) ಈ ಕಥನವನ್ನು ಬಹುಶಃ ಪ್ರವಾದಿಯಾದ ಸಮುವೇಲನು ಸಾ.ಶ.ಪೂ. 1090ರಲ್ಲಿ ಬರೆದನು. ಬೈಬಲಿನಲ್ಲಿ, ಇಸ್ರಾಯೇಲ್ಯೇತರ ಸ್ತ್ರೀಯೊಬ್ಬಳ ಹೆಸರನ್ನು ಹೊಂದಿರುವ ಏಕೈಕ ಪುಸ್ತಕ ಇದಾಗಿದೆ. ಅದರಲ್ಲಿರುವ ಸಂದೇಶವು ‘ಸಜೀವವಾದದ್ದು ಮತ್ತು ಕಾರ್ಯಸಾಧಕವಾದದ್ದು’ ಆಗಿದೆ.​—⁠ಇಬ್ರಿಯ 4:⁠12.

“ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು”

(ರೂತಳು 1:​1–2:⁠23)

ನೊವೊಮಿ ಮತ್ತು ರೂತಳು ಬೇತ್ಲೆಹೇಮಿಗೆ ಆಗಮಿಸಿದಾಗ, ಅವರು ಎಲ್ಲರ ಗಮನದ ಕೇಂದ್ರಬಿಂದುವಾಗುತ್ತಾರೆ. ಇವರಿಬ್ಬರಲ್ಲಿ ಹಿರಿಯವಳಾದ ನೊವೊಮಿಗೆ ಕೈತೋರಿಸುತ್ತಾ ಆ ಊರಿನ ಸ್ತ್ರೀಯರು: ‘ಈಕೆ ನೊವೊಮಿಯಲ್ಲವೊ?’ ಎಂದು ಕೇಳತೊಡಗುತ್ತಾರೆ. ಅದಕ್ಕೆ ನೊವೊಮಿಯು ಉತ್ತರಿಸಿದ್ದು: “ನನ್ನನ್ನು ನೊವೊಮಿಯೆಂದು ಕರೆಯಬೇಡಿರಿ; ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. ಆದದರಿಂದ ಮಾರಾ ಎಂದು ಕರೆಯಿರಿ. ಭಾಗ್ಯವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಬರಮಾಡಿದನು.”​—⁠ರೂತಳು 1:19-21.

ಇಸ್ರಾಯೇಲಿನಲ್ಲಿನ ಒಂದು ಕ್ಷಾಮದಿಂದಾಗಿ ನೊವೊಮಿಯ ಕುಟುಂಬವು ಬೇತ್ಲೆಹೇಮಿನಿಂದ ಮೋವಾಬ್‌ ದೇಶಕ್ಕೆ ಸ್ಥಳಾಂತರಿಸಬೇಕಾಗುತ್ತದೆ. ಆಗ ಅವಳಿಗೆ ತನ್ನ ಗಂಡ ಮತ್ತು ಇಬ್ಬರು ಪುತ್ರರಿದ್ದುದರಿಂದ ಅವಳು ‘ಭಾಗ್ಯವಂತ’ಳಾಗಿದ್ದಳು. ಆದರೆ ಅವರು ಮೋವಾಬ್‌ ದೇಶದಲ್ಲಿ ನೆಲೆಸಿದ ಸ್ವಲ್ಪ ಸಮಯಾನಂತರ, ಅವಳ ಗಂಡ ಎಲೀಮೆಲೆಕನು ಸಾಯುತ್ತಾನೆ. ಅನಂತರ, ಅವಳ ಇಬ್ಬರು ಪುತ್ರರು ಮೋವಾಬ್ಯ ಸ್ತ್ರೀಯರಾದ ಒರ್ಫಾ ಮತ್ತು ರೂತಳನ್ನು ಮದುವೆಯಾಗುತ್ತಾರೆ. ಸುಮಾರು ಹತ್ತು ವರ್ಷಗಳು ದಾಟಿದ ಬಳಿಕ, ಆ ಇಬ್ಬರೂ ಪುತ್ರರು ಸಂತಾನರಹಿತರಾಗಿ ಸಾಯುತ್ತಾರೆ. ಹೀಗೆ ಆ ಮೂರೂ ಮಂದಿ ಸ್ತ್ರೀಯರು ಒಂಟಿಗರಾಗುತ್ತಾರೆ. ಅತ್ತೆಯಾದ ನೊವೊಮಿಯು ಯೆಹೂದಕ್ಕೆ ಹಿಂದಿರುಗಲು ನಿರ್ಣಯಿಸಿದಾಗ, ವಿಧವೆಯರಾಗಿದ್ದ ಅವಳ ಸೊಸೆಯರೂ ಅವಳೊಂದಿಗೆ ಹೋಗುತ್ತಾರೆ. ಮಾರ್ಗದಲ್ಲಿ ಪ್ರಯಾಣಿಸುತ್ತಿರುವಾಗ, ನೊವೊಮಿಯು ತನ್ನ ಸೊಸೆಯರಿಗೆ ಮೋವಾಬಿಗೆ ಹಿಂದಿರುಗಿ ತಮ್ಮ ಸ್ವಂತ ಜನರ ಮಧ್ಯೆ ಗಂಡಂದಿರನ್ನು ಕಂಡುಕೊಳ್ಳುವಂತೆ ಉತ್ತೇಜಿಸುತ್ತಾಳೆ. ಇದಕ್ಕೆ ಒರ್ಫಳು ಒಪ್ಪಿ ಹೊರಡುತ್ತಾಳೆ. ಆದರೆ ರೂತಳು ನೊವೊಮಿಗೆ ಅಂಟಿಕೊಂಡು, “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು” ಎಂದು ಹೇಳುತ್ತಾಳೆ.​—⁠ರೂತಳು 1:⁠16.

ಆ ಇಬ್ಬರು ವಿಧವೆಯರಾದ ನೊವೊಮಿ ಮತ್ತು ರೂತ್‌, ಬೇತ್ಲೆಹೇಮಿಗೆ ಬಂದು ತಲಪುವಾಗ, ಜವೆಗೋದಿಯ ಕೊಯ್ಲು ಆರಂಭವಾಗಿರುತ್ತದೆ. ದೇವರ ಧರ್ಮಶಾಸ್ತ್ರದಲ್ಲಿರುವ ಒಂದು ಏರ್ಪಾಡನ್ನು ಸದುಪಯೋಗಿಸಿಕೊಳ್ಳುತ್ತಾ ರೂತಳು ಒಂದು ಹೊಲದಲ್ಲಿ ಹಕ್ಕಲಾಯಲಾರಂಭಿಸುತ್ತಾಳೆ. ವಾಸ್ತವದಲ್ಲಿ ಆ ಹೊಲವು ಎಲೀಮೆಲೆಕನ ಸಂಬಂಧಿಕನಾದ ಬೋವಜ ಎಂಬ ವೃದ್ಧ ಯೆಹೂದ್ಯನದ್ದಾಗಿತ್ತು. ರೂತಳು ಬೋವಜನ ಮೆಚ್ಚಿಕೆಗೆ ಪಾತ್ರಳಾಗುತ್ತಾಳೆ ಮತ್ತು “ಜವೆಗೋದಿಯ ಮತ್ತು ಗೋದಿಯ ಸುಗ್ಗಿ ತೀರುವ ವರೆಗೆ” ಅವನ ಹೊಲದಲ್ಲಿ ಹಕ್ಕಲಾಯುವುದನ್ನು ಮುಂದುವರಿಸುತ್ತಾಳೆ.​—⁠ರೂತಳು 2:⁠23.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು

1:​8​—⁠ನೊವೊಮಿಯು ತನ್ನ ಸೊಸೆಯರಿಗೆ, ತಮ್ಮ ತಂದೆಯ ಮನೆಗೆ ಹೋಗುವಂತೆ ಹೇಳುವ ಬದಲು “ನಿಮ್ಮ ನಿಮ್ಮ ತೌರಮನೆಗೆ ಹೋಗಿ” ಇಲ್ಲವೆ ಮೂಲಭಾಷೆಯಲ್ಲಿ ಹೇಳಿರುವಂತೆ “ತಾಯಿ ಮನೆಗೆ” ಹೋಗಿ ಎಂದು ಹೇಳಿದ್ದೇಕೆ? ಆ ಸಮಯದಲ್ಲಿ ಒರ್ಫಾಳ ತಂದೆ ಜೀವದಿಂದಿದ್ದರು ಎಂಬುದು ತಿಳಿಸಲ್ಪಟ್ಟಿಲ್ಲ. ಆದರೆ ರೂತಳ ತಂದೆ ಇನ್ನೂ ಇದ್ದರು. (ರೂತಳು 2:11) ತಾಯಿಯ ಮಾತೆತ್ತುವುದರಿಂದ ಅವರಿಗೆ ಅವರ ಅಮ್ಮನ ಮಮತೆಯಿಂದ ಸಿಗುವ ಸಾಂತ್ವನವು ಮನಸ್ಸಿಗೆ ಬರುವುದೆಂದು ನೆನಸಿ ನೊವೊಮಿಯು ಅವರ ತಾಯಿ ಮನೆಯ ಬಗ್ಗೆ ಮಾತಾಡಿದ್ದಿರಬಹುದು. ಇದು, ತಮ್ಮ ಪ್ರಿಯ ಅತ್ತೆಯಿಂದ ಅಗಲುವ ದುಃಖದಿಂದ ಭಾವೋದ್ವೇಗಕ್ಕೊಳಗಾಗಿದ್ದ ಆ ಪುತ್ರಿಯರಿಗೆ ವಿಶೇಷವಾಗಿ ಶಮನಕಾರಕವಾಗಿರಸಾಧ್ಯವಿತ್ತು. ಈ ಹೇಳಿಕೆಯು, ರೂತ ಹಾಗೂ ಒರ್ಫಳ ತಾಯಂದಿರು ನೊವೊಮಿಯಂತಿರದೆ ಒಳ್ಳೆಯ ಮನೆಗಳನ್ನು ಹೊಂದಿದ್ದರೆಂಬುದನ್ನು ಸಹ ಸೂಚಿಸಬಹುದು.

1:​13, 21​—⁠ಯೆಹೋವನು ನೊವೊಮಿಯ ಜೀವನವನ್ನು ದುಃಖಕ್ಕೊಳಪಡಿಸಿ ಅವಳ ಮೇಲೆ ಬಾಧೆಯನ್ನು ಬರಮಾಡಿದ್ದನೊ? ಇಲ್ಲ. ದೇವರು ತಪ್ಪುಗೈದಿದ್ದಾನೆಂದು ನೊವೊಮಿಯು ಸಹ ಆರೋಪಿಸಲಿಲ್ಲ. ಆದರೆ ಆ ವರೆಗೂ ತನಗೆ ಸಂಭವಿಸಿದಂಥ ಎಲ್ಲಾ ವಿಷಯಗಳ ನೋಟದಲ್ಲಿ, ಯೆಹೋವನು ತನಗೆ ವಿರೋಧವಾಗಿದ್ದಾನೆಂದು ಅವಳು ನೆನಸಿದಳು. ಅವಳಲ್ಲಿ ಕಹಿಭಾವನೆ ಮತ್ತು ನಿರಾಶೆ ಹುಟ್ಟಿತು. ಅದಲ್ಲದೆ ಆ ಸಮಯಗಳಲ್ಲಿ, ಗರ್ಭಫಲವನ್ನು ದೇವರಿಂದ ಬಂದ ಒಂದು ಆಶೀರ್ವಾದವಾಗಿ ಮತ್ತು ಬಂಜೆತನವನ್ನು ಶಾಪವಾಗಿ ಪರಿಗಣಿಸಲಾಗುತ್ತಿತ್ತು. ಯಾವುದೇ ಮೊಮ್ಮಕ್ಕಳಿಲ್ಲದೆ, ಇದ್ದ ಇಬ್ಬರು ಪುತ್ರರನ್ನೂ ಕಳೆದುಕೊಂಡಿದ್ದ ನೊವೊಮಿಗೆ, ಯೆಹೋವನು ತನ್ನನ್ನು ಗತಿಹೀನಳನ್ನಾಗಿ ಮಾಡಿದ್ದಾನೆಂದು ನೆನಸುವುದು ನ್ಯಾಯಸಮ್ಮತವಾಗಿ ತೋರಿದ್ದಿರಬಹುದು.

2:​12​—⁠ರೂತಳು ಯೆಹೋವನಿಂದ ಯಾವ “ಉತ್ತಮವಾದ ಪ್ರತಿಫಲವನ್ನು” ಪಡೆದಳು? ರೂತಳು ಒಂದು ಗಂಡುಮಗುವಿಗೆ ಜನ್ಮಕೊಟ್ಟಳು ಮತ್ತು ಇತಿಹಾಸದ ಅತಿ ಮುಖ್ಯ ವಂಶಾವಳಿಯಲ್ಲಿ, ಹೌದು ಯೇಸು ಕ್ರಿಸ್ತನ ವಂಶಾವಳಿಯಲ್ಲಿ ಒಂದು ಕೊಂಡಿಯಾಗುವ ಸುಯೋಗ ರೂತಳಿಗೆ ಲಭಿಸಿತು.​—⁠ರೂತಳು 4:​13-17; ಮತ್ತಾಯ 1:​5, 16.

ನಮಗಾಗಿರುವ ಪಾಠಗಳು:

1:8; 2:20. ನೊವೊಮಿಯು ದುರಂತಗಳನ್ನು ಅನುಭವಿಸಿದ್ದರೂ ಯೆಹೋವನ ಪ್ರೀತಿಪೂರ್ವಕ ದಯೆಯಲ್ಲಿನ ತನ್ನ ಭರವಸೆಯನ್ನು ಕಾಪಾಡಿಕೊಂಡಳು. ನಾವೂ ಅದನ್ನೇ ಮಾಡಬೇಕು, ಮತ್ತು ವಿಶೇಷವಾಗಿ ತೀವ್ರ ಪರೀಕ್ಷೆಗಳನ್ನು ಎದುರಿಸುವಾಗ ಹಾಗೆ ಮಾಡಬೇಕು.

1:⁠9. ಒಂದು ಮನೆಯು, ಕುಟುಂಬದ ಸದಸ್ಯರು ಕೇವಲ ಉಂಡು ಮಲಗುವ ಸ್ಥಳವಾಗಿರಬಾರದು. ಅದು ವಿಶ್ರಾಂತಿ ಹಾಗೂ ಸಾಂತ್ವನದ ಶಾಂತಿಧಾಮವಾಗಿರಬೇಕು.

1:​14-16. ಒರ್ಫಳು “ತನ್ನ ಜನರ ಬಳಿಗೂ ದೇವತೆಗಳ ಬಳಿಗೂ” ಹಿಂದಿರುಗಿದಳು. ರೂತಳು ಹಾಗೆ ಮಾಡಲಿಲ್ಲ. ಅವಳು ತನ್ನ ಹುಟ್ಟೂರಿನ ಸೌಕರ್ಯ ಹಾಗೂ ಸುರಕ್ಷೆಯನ್ನು ತೊರೆದು, ಯೆಹೋವನಿಗೆ ನಿಷ್ಠಾವಂತಳಾಗಿ ಉಳಿದಳು. ದೇವರಿಗಾಗಿ ನಿಷ್ಠಾವಂತ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಮತ್ತು ಸ್ವತ್ಯಾಗದ ಮನೋಭಾವವನ್ನು ತೋರ್ಪಡಿಸುವುದು, ಸ್ವಾರ್ಥಪರ ಅಭಿಲಾಷೆಗಳಿಗೆ ಮಣಿಯುವುದರಿಂದ ಮತ್ತು ‘ಹಿಂದೆಗೆದವರಾಗಿ ನಾಶವಾಗುವದರಿಂದ’ ನಮ್ಮನ್ನು ಸಂರಕ್ಷಿಸುವುದು.​—⁠ಇಬ್ರಿಯ 10:⁠39.

2:⁠2. ರೂತಳು, ಪರದೇಶಸ್ಥರು ಮತ್ತು ಪೀಡಿತರ ಪ್ರಯೋಜನಾರ್ಥವಾಗಿ ಮಾಡಲ್ಪಟ್ಟಿರುವ ಹಕ್ಕಲಾಯುವಿಕೆಯ ಏರ್ಪಾಡನ್ನು ಸದುಪಯೋಗಿಸಿಕೊಳ್ಳಲು ಬಯಸಿದಳು. ಅವಳು ನಮ್ರ ವ್ಯಕ್ತಿಯಾಗಿದ್ದಳು. ಅಗತ್ಯದಲ್ಲಿರುವ ಒಬ್ಬ ಕ್ರೈಸ್ತನು/ಳು ಜೊತೆ ವಿಶ್ವಾಸಿಗಳ ಪ್ರೀತಿಭರಿತ ಸಹಾಯವನ್ನು ಇಲ್ಲವೆ ಅವನು/ಅವಳು ಪಡೆದುಕೊಳ್ಳಲು ಅರ್ಹರಾಗಿರುವ ಯಾವುದೇ ಸರಕಾರೀ ನೆರವನ್ನು ಸ್ವೀಕರಿಸದಿರುವಷ್ಟು ಅಹಂಭಾವವುಳ್ಳವರು ಆಗಿರಬಾರದು.

2:⁠7. ಹಕ್ಕಲಾಯುವ ಹಕ್ಕು ತನಗಿದ್ದರೂ ರೂತಳು ಅದನ್ನು ಮಾಡುವ ಮುಂಚೆ ಅನುಮತಿ ಕೇಳಿದಳು. (ಯಾಜಕಕಾಂಡ 19:​9, 10) ಇದು ಅವಳಲ್ಲಿದ್ದ ದೀನತೆಯನ್ನು ತೋರಿಸಿತು. ನಾವು ‘ದೈನ್ಯವನ್ನು ಹೊಂದಿಕೊಳ್ಳುವುದು’ ವಿವೇಕದ ಸಂಗತಿಯಾಗಿದೆ, ಏಕೆಂದರೆ “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”​—⁠ಚೆಫನ್ಯ 2:3; ಕೀರ್ತನೆ 37:⁠11.

2:11. ರೂತಳು ನೊವೊಮಿಗೆ ಒಬ್ಬ ಸಂಬಂಧಿಕಳು ಮಾತ್ರವೇ ಆಗಿರಲಿಲ್ಲ. ಅವಳೊಬ್ಬ ನಿಜ ಸ್ನೇಹಿತೆಯಾಗಿದ್ದಳು. (ಜ್ಞಾನೋಕ್ತಿ 17:17) ಅವರ ಸ್ನೇಹವು ಬಲವಾದದ್ದಾಗಿತ್ತು. ಏಕೆಂದರೆ ಅದು ಪ್ರೀತಿ, ನಿಷ್ಠೆ, ಪರಾನುಭೂತಿ, ದಯೆ ಹಾಗೂ ಸ್ವತ್ಯಾಗದ ಮನೋಭಾವದ ಮೇಲೆ ಆಧಾರಿತವಾಗಿತ್ತು. ಇದಕ್ಕಿಂತಲೂ ಮಿಗಿಲಾಗಿ, ಅದು ಅವರ ಆಧ್ಯಾತ್ಮಿಕತೆಯ ಮೇಲೆ, ಅಂದರೆ ಯೆಹೋವನನ್ನು ಸೇವಿಸುವ ಮತ್ತು ಆತನ ಆರಾಧಕರ ಮಧ್ಯೆ ವಾಸಿಸುವ ಅವರ ಆಸೆಯ ಮೇಲೆ ಆಧಾರಿಸಲ್ಪಟ್ಟಿತ್ತು. ಸತ್ಯಾರಾಧಕರೊಂದಿಗೆ ನಿಜ ಸ್ನೇಹವನ್ನು ಬೆಳೆಸಿಕೊಳ್ಳಲು ನಮಗೂ ಅತ್ಯುತ್ತಮ ಅವಕಾಶಗಳಿವೆ.

2:​15-17. ರೂತಳ ಕೆಲಸದ ಹೊರೆಯನ್ನು ಬೋವಜನು ಕಡಿಮೆಗೊಳಿಸಿದರೂ, ಅವಳು ‘ಸಾಯಂಕಾಲದ ವರೆಗೂ ಹಕ್ಕಲಾಯ್ದು ಕೂಡಿಸಿದಳು.’ ರೂತಳು ಶ್ರಮಜೀವಿಯಾಗಿದ್ದಳು. ಒಬ್ಬ ಕ್ರೈಸ್ತನಿಗೂ ‘ಶ್ರಮಜೀವಿ’ ಎಂಬ ಖ್ಯಾತಿ ಇರಬೇಕು.

2:​19-22. ನೊವೊಮಿ ಮತ್ತು ರೂತ್‌, ಸಾಯಂಕಾಲದ ಹೊತ್ತಿನಲ್ಲಿ ಹಿತಕರವಾದ ಸಂಭಾಷಣೆಗಳಲ್ಲಿ ಆನಂದಿಸುತ್ತಿದ್ದರು. ಹಿರಿಯವಳು ಚಿಕ್ಕವಳ ಚಟುವಟಿಕೆಗಳ ಕುರಿತು ಆಸಕ್ತಿಯನ್ನು ತೋರಿಸುತ್ತಿದ್ದಳು ಮತ್ತು ಇಬ್ಬರೂ ತಮ್ಮ ವಿಚಾರಗಳನ್ನೂ ಭಾವನೆಗಳನ್ನೂ ಬಿಚ್ಚುಮನಸ್ಸಿನಿಂದ ವ್ಯಕ್ತಪಡಿಸುತ್ತಿದ್ದರು. ಒಂದು ಕ್ರೈಸ್ತ ಕುಟುಂಬದಲ್ಲೂ ಹೀಗೆಯೇ ಇರಬೇಕಲ್ಲವೊ?

2:​22, 23. ರೂತಳು ಯಾಕೋಬನ ಮಗಳಾದ ದೀನಳಂತಿರದೆ, ಯೆಹೋವನ ಆರಾಧಕರೊಂದಿಗಿನ ಸಹವಾಸವನ್ನು ಆರಿಸಿಕೊಂಡಳು. ನಮಗಾಗಿ ಎಷ್ಟು ಉತ್ತಮ ಮಾದರಿ!​—⁠ಆದಿಕಾಂಡ 34:​1, 2; 1 ಕೊರಿಂಥ 15:⁠33.

ನೊವೊಮಿ ‘ಭಾಗ್ಯವಂತಳಾಗುತ್ತಾಳೆ’

(ರೂತಳು 3:​1–4:22)

ನೊವೊಮಿ ತುಂಬ ವೃದ್ಧಳಾಗಿರುವುದರಿಂದ ಮಕ್ಕಳನ್ನು ಹೆರಲಾರಳು. ಆದುದರಿಂದ, ಪುನಃ ಕೊಂಡುಕೊಳ್ಳುವ ಏರ್ಪಾಡಿನ ಮೂಲಕ ಇಲ್ಲವೆ ಮೈದುನಧರ್ಮದ ವಿವಾಹವನ್ನು ಮಾಡಿಕೊಳ್ಳುವ ಮೂಲಕ, ರೂತಳು ತನ್ನ ಸ್ಥಾನವನ್ನು ತೆಗೆದುಕೊಳ್ಳುವಂತೆ ಅವಳಿಗೆ ಹೇಳುತ್ತಾಳೆ. ನೊವೊಮಿಯ ನಿರ್ದೇಶನದ ಮೇರೆಗೆ, ರೂತಳು ಬೋವಜನಿಗೆ ಪುನಃ ಕೊಂಡುಕೊಳ್ಳುವವನಾಗಿ ಕಾರ್ಯನಡೆಸುವಂತೆ ಕೇಳುತ್ತಾಳೆ. ಬೋವಜನು ಹಾಗೆ ಮಾಡಲು ಸಿದ್ಧನಿದ್ದಾನೆ. ಆದರೆ ಇನ್ನೂ ಹತ್ತಿರದ ಸಂಬಂಧಿಕನಾಗಿರುವ ಇನ್ನೊಬ್ಬನಿಗೆ ಮೊದಲ ಅವಕಾಶವು ಕೊಡಲ್ಪಡಬೇಕು.

ಆ ವಿಷಯವನ್ನು ಇತ್ಯರ್ಥಗೊಳಿಸುವುದರಲ್ಲಿ ಬೋವಜನು ತಡಮಾಡುವುದಿಲ್ಲ. ಮರುದಿನ ಬೆಳಗ್ಗೆಯೇ ಅವನು ಬೇತ್ಲೆಹೇಮಿನ ಹತ್ತು ಮಂದಿ ಹಿರೀಪುರುಷರನ್ನು ಆ ಸಂಬಂಧಿಕನ ಮುಂದೆ ಒಟ್ಟುಗೂಡಿಸಿ, ಅವನು ಪುನಃ ಕೊಂಡುಕೊಳ್ಳುವಿಕೆಯನ್ನು ಮಾಡಲು ಸಿದ್ಧನಿದ್ದಾನೊ ಎಂದು ಕೇಳುತ್ತಾನೆ. ಆ ಮನುಷ್ಯನು ಇಲ್ಲವೆಂದು ಹೇಳುತ್ತಾನೆ. ಹೀಗಿರುವುದರಿಂದ ಬೋವಜನೇ ಪುನಃ ಕೊಂಡುಕೊಳ್ಳುವಿಕೆಯನ್ನು ಮಾಡಿ, ರೂತಳನ್ನು ವಿವಾಹವಾಗುತ್ತಾನೆ. ಅವರ ವಿವಾಹದಿಂದ ಅವರಿಗೆ ಓಬೇದ ಎಂಬ ಮಗನು ಹುಟ್ಟುತ್ತಾನೆ. ಅವನೇ ರಾಜ ದಾವೀದನ ಅಜ್ಜ. ಈಗ ಬೇತ್ಲೆಹೇಮಿನ ಸ್ತ್ರೀಯರು ನೊವೊಮಿಗೆ ಹೀಗನ್ನುತ್ತಾರೆ: “ಯೆಹೋವನಿಗೆ ಸ್ತೋತ್ರವಾಗಲಿ. . . . ಇವನು ನಿನ್ನನ್ನು ಉಜ್ಜೀವಿಸಮಾಡುವನು; ವೃದ್ಧಾಪ್ಯದಲ್ಲಿ ನಿನಗೆ ಸಂರಕ್ಷಕನಾಗಿರುವನು. ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾ ಏಳು ಮಂದಿ ಮಕ್ಕಳಿಗಿಂತ ನಿನಗೆ ಉತ್ತಮಳಾಗಿರುವ ನಿನ್ನ ಸೊಸೆಯು ಇವನನ್ನು ಹೆತ್ತಳಲ್ಲಾ.” (ರೂತಳು 4:14, 15) ಬೇತ್ಲೆಹೇಮಿಗೆ ‘ಗತಿಹೀನಳಾಗಿ’ ಹಿಂದಿರುಗಿದ್ದ ಸ್ತ್ರೀಯು ಈಗ ಪುನಃ ‘ಭಾಗ್ಯವಂತಳಾಗಿದ್ದಾಳೆ.’​—⁠ರೂತಳು 1:⁠21.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು

3:​11​—⁠‘ಗುಣವಂತೆ’ ಎಂಬ ಖ್ಯಾತಿಯು ರೂತಳಿಗೆ ಬಂದದ್ದು ಹೇಗೆ? ಇತರರು ರೂತಳನ್ನು ಮೆಚ್ಚಿಮಾತಾಡುವಂತೆ ಮಾಡಿದಂಥದ್ದು, ಅವಳ ‘ಜಡೆಹೆಣೆದುಕೊಳ್ಳುವಿಕೆ, ಚಿನ್ನದ ಒಡವೆಗಳ ಇಟ್ಟುಕೊಳ್ಳುವಿಕೆ, ವಸ್ತ್ರಗಳ ಧರಿಸುವಿಕೆ’ ಅಲ್ಲ. ಬದಲಾಗಿ ಅದು “ಒಳಗಣ ಭೂಷಣ,” ಅಂದರೆ ಅವಳ ನಿಷ್ಠೆ ಹಾಗೂ ಪ್ರೀತಿ, ಅವಳ ನಮ್ರತೆ ಹಾಗೂ ದೀನತೆ, ಅವಳ ಪರಿಶ್ರಮ ಮತ್ತು ಸ್ವತ್ಯಾಗದ ಆತ್ಮವೇ. ರೂತಳಂಥ ಖ್ಯಾತಿಯನ್ನು ಆಶಿಸುವ ದೇವಭಯವಿರುವ ಯಾವುದೇ ಸ್ತ್ರೀಯು ಈ ಗುಣಗಳನ್ನು ಬೆಳೆಸಿಕೊಳ್ಳಲು ಕಠಿನವಾಗಿ ಪ್ರಯತ್ನಮಾಡಬೇಕು.​—⁠1 ಪೇತ್ರ 3:​3, 4; ಜ್ಞಾನೋಕ್ತಿ 31:​28-31.

3:​14​—⁠ರೂತಳೂ ಬೋವಜನೂ ಕತ್ತಲಿರುವಾಗಲೇ ಎದ್ದದ್ದೇಕೆ? ಇದು, ರಾತ್ರಿ ವೇಳೆಯಲ್ಲಿ ಏನೋ ಅನೈತಿಕ ಕಾರ್ಯವು ನಡೆದು ಅದನ್ನು ಅವರು ಗುಟ್ಟಾಗಿರಿಸಲು ಬಯಸಿದ್ದರ ಕಾರಣದಿಂದಲ್ಲ. ಆ ರಾತ್ರಿ ರೂತಳು ಏನೇನು ಮಾಡಿದಳೊ ಅದು ಮೈದುನಧರ್ಮದ ವಿವಾಹದ ಹಕ್ಕನ್ನು ಕೇಳಿಕೊಳ್ಳುವ ಒಬ್ಬ ಸ್ತ್ರೀಯು ಪದ್ಧತಿಗನುಸಾರ ಮಾಡುತ್ತಿದ್ದ ವಿಷಯಗಳೇ ಆಗಿದ್ದವು. ಅವಳು ನೊವೊಮಿ ಕೊಟ್ಟ ಸೂಚನೆಗಳಿಗನುಸಾರ ನಡೆದಿದ್ದಳು. ಅಲ್ಲದೆ ಬೋವಜನ ಉತ್ತರದಿಂದ, ರೂತಳು ಏನನ್ನು ಮಾಡಿದಳೊ ಅದರಲ್ಲಿ ಅವನು ಯಾವುದೇ ತಪ್ಪನ್ನು ಕಾಣಲಿಲ್ಲವೆಂದು ಸ್ಪಷ್ಟವಾಗಿ ತೋರಿಬರುತ್ತದೆ. (ರೂತಳು 3:​2-13) ಯಾವುದೇ ಗಾಳಿಸುದ್ದಿಗಳಿಗೆ ಅವಕಾಶಕೊಡದಂತೆ ರೂತಳು ಮತ್ತು ಬೋವಜನು ಬೇಗ ಎದ್ದರೆಂಬುದು ಸುವ್ಯಕ್ತ.

3:​15​—⁠ಬೋವಜನು ರೂತಳಿಗೆ ಆರು ಪಡಿ ಜವೆಗೋದಿಯನ್ನು ಕೊಟ್ಟದ್ದರ ಮಹತ್ವವೇನಾಗಿತ್ತು? ಆರು ದಿನಗಳ ಕೆಲಸದ ತರುವಾಯ ವಿಶ್ರಾಮದ ದಿನವು ಬರುವಂತೆಯೇ ರೂತಳ ವಿಶ್ರಾಮದ ದಿನವು ಹತ್ತಿರವಿದೆಯೆಂದು ಬಹುಶಃ ಈ ಕೃತ್ಯವು ಸೂಚಿಸಿರಬಹುದು. ತನ್ನ ಗಂಡನ ಮನೆಯಲ್ಲಿ ಅವಳಿಗೆ “ವಿಶ್ರಾಂತಿ” ದೊರಕುವಂತೆ ಬೋವಜನು ಖಚಿತಪಡಿಸಿಕೊಂಡನು. (ರೂತಳು 1:9; 3:⁠1) ರೂತಳು ತನ್ನ ತಲೆಯ ಮೇಲೆ ಕೇವಲ ಆ ಆರು ಪಡಿ ಜವೆಗೋದಿಯನ್ನು ಮಾತ್ರ ಹೊರಸಾಧ್ಯವಿತ್ತು ಎಂಬ ಕಾರಣವೂ ಇದ್ದಿರಬಹುದು.

3:​16​—⁠ಮೂಲ ಹೀಬ್ರು ಪಾಠಕ್ಕನುಸಾರ, ನೊವೊಮಿಯು ರೂತಳಿಗೆ, “ನನ್ನ ಮಗಳೇ ನೀನು ಯಾರು” ಎಂದು ಕೇಳಿದ್ದೇಕೆ? ಅವಳಿಗೆ ತನ್ನ ಸೊಸೆಯ ಗುರುತು ಸಿಗಲಿಲ್ಲವೊ? ಹೀಗಿರುವ ಸಾಧ್ಯತೆ ಇದೆ, ಏಕೆಂದರೆ ರೂತಳು ನೊವೊಮಿಯ ಬಳಿ ಹಿಂದಿರುಗಿ ಬಂದಾಗ ಇನ್ನೂ ಕತ್ತಲಿದ್ದಿರಬೇಕು. ಆದರೆ ಆ ಪ್ರಶ್ನೆಯು, ರೂತಳ ಪುನಃ ಕೊಂಡುಕೊಳ್ಳುವಿಕೆಯ ಸಂಬಂಧದಲ್ಲಿ ಅವಳ ಸಂಭಾವ್ಯ ಹೊಸ ಗುರುತಿನ ಕುರಿತು ನೊವೊಮಿಯು ವಿಚಾರಿಸುತ್ತಿದ್ದಳೆಂಬ ಅರ್ಥವನ್ನೂ ಕೊಡಬಹುದು.

4:​6​—⁠ಪುನಃ ಕೊಂಡುಕೊಳ್ಳುವ ಮೂಲಕ ಕೊಂಡುಕೊಳ್ಳುವವನು ತನ್ನ ಆಸ್ತಿಯನ್ನು ಯಾವ ವಿಧದಲ್ಲಿ ‘ನಷ್ಟ’ಪಡಿಸಿಕೊಳ್ಳಸಾಧ್ಯವಿತ್ತು? ಮೊದಲಾಗಿ, ಬಡತನಕ್ಕೆ ತುತ್ತಾಗಿರುವ ಒಬ್ಬ ವ್ಯಕ್ತಿಯು ತನ್ನ ಆಸ್ತಿಯಾಗಿರುವ ಜಮೀನನ್ನು ಮಾರಿರುವಲ್ಲಿ, ಅದನ್ನು ಪುನಃ ಕೊಂಡುಕೊಳ್ಳುವವನು ಮುಂದಿನ ಜೂಬಿಲಿ ಸಂವತ್ಸರಕ್ಕಾಗಿ ಉಳಿದಿರುವ ವರ್ಷಗಳ ಸಂಖ್ಯೆಯಿಂದ ನಿರ್ಧರಿತವಾಗಿರುವ ಬೆಲೆಗೆ ಅದನ್ನು ಖರೀದಿಸಬೇಕಾಗಿತ್ತು. (ಯಾಜಕಕಾಂಡ 25:​25-27) ಹಾಗೆ ಮಾಡುವುದರಿಂದ ಅವನ ಸ್ವಂತ ಆಸ್ತಿಯ ಮೌಲ್ಯವು ಕಡಿಮೆಯಾಗುವುದು. ಅಲ್ಲದೆ, ರೂತಳಿಗೆ ಒಬ್ಬ ಮಗನು ಹುಟ್ಟಿದರೆ, ಕೊಂಡುಕೊಳ್ಳುವವನ ಸದ್ಯದ ಯಾವುದೇ ಸಮೀಪಬಂಧುವಿನ ಬದಲು ಈ ಮಗನು ಆ ಖರೀದಿಸಲ್ಪಟ್ಟ ಹೊಲಕ್ಕೆ ವಾರಸುದಾರನಾಗುತ್ತಿದ್ದನು.

ನಮಗಾಗಿರುವ ಪಾಠಗಳು

3:​12; 4:​1-6. ಬೋವಜನು ಚಾಚೂತಪ್ಪದೆ ಯೆಹೋವನ ಏರ್ಪಾಡನ್ನು ಅನುಸರಿಸಿದನು. ದೇವಪ್ರಭುತ್ವಾತ್ಮಕ ಕಾರ್ಯರೀತಿಗಳನ್ನು ನಾವು ನ್ಯಾಯನಿಷ್ಠೆಯಿಂದ ಅನುಸರಿಸುತ್ತೇವೊ?​—⁠1 ಕೊರಿಂಥ 14:⁠40.

3:18. ನೊವೊಮಿಗೆ ಬೋವಜನಲ್ಲಿ ಭರವಸೆಯಿತ್ತು. ನಂಬಿಗಸ್ತರಾದ ಜೊತೆ ವಿಶ್ವಾಸಿಗಳಲ್ಲಿ ನಮಗೂ ಅದೇ ರೀತಿಯ ಭರವಸೆ ಇರಬೇಕಲ್ಲವೊ? ರೂತಳು ತನಗೆ ಸ್ವಲ್ಪವೂ ಪರಿಚಯವಿಲ್ಲದಿದ್ದ, ಬೈಬಲಿನಲ್ಲಿ ಅವನ ಹೆಸರೂ ತಿಳಿಸಲ್ಪಟ್ಟಿರದ ಒಬ್ಬ ಪುರುಷನೊಂದಿಗೆ ಮೈದುನಧರ್ಮದ ವಿವಾಹವನ್ನು ಮಾಡಿಕೊಳ್ಳಲು ಸಿದ್ಧಳಿದ್ದಳು. (ರೂತಳು 4:⁠1) ಏಕೆ? ಏಕೆಂದರೆ ಅವಳಿಗೆ ದೇವರ ಏರ್ಪಾಡಿನಲ್ಲಿ ಭರವಸೆಯಿತ್ತು. ನಮಗೂ ಅದೇ ರೀತಿಯ ಭರವಸೆಯಿದೆಯೊ? ಉದಾಹರಣೆಗಾಗಿ ಒಬ್ಬ ವಿವಾಹ ಸಂಗಾತಿಯನ್ನು ಹುಡುಕುವ ವಿಷಯದಲ್ಲಿ, ‘ಕರ್ತನಲ್ಲಿ ಮಾತ್ರ’ ವಿವಾಹವಾಗಬೇಕು ಎಂಬ ಸಲಹೆಯನ್ನು ನಾವು ಪಾಲಿಸುತ್ತೇವೊ?​—⁠1 ಕೊರಿಂಥ 7:⁠39, NW.

4:​13-16. ರೂತಳು ಹಿಂದೆ ಒಬ್ಬ ಮೋವಾಬ್ಯಳು ಮತ್ತು ಕೆಮೋಷ್‌ ದೇವತೆಯ ಮಾಜಿ ಆರಾಧಕಳಾಗಿದ್ದರೂ, ಅವಳಿಗೆ ಎಂಥ ಸುಯೋಗ ಸಿಕ್ಕಿತು! ಇದು, “ದೇವರ ದಯವು ಮನುಷ್ಯರಿಗೆ ಇಚ್ಛೈಸುವದರಿಂದಾಗಲಿ ಪ್ರಯತ್ನಿಸುವದರಿಂದಾಗಲಿ ದೊರೆಯದೆ ದೇವರು ಕರುಣಿಸುವದರಿಂದಲೇ ದೊರೆಯುತ್ತದೆ” ಎಂಬ ತತ್ತ್ವವನ್ನು ದೃಷ್ಟಾಂತಿಸುತ್ತದೆ.​—⁠ರೋಮಾಪುರ 9:⁠16.

ದೇವರು “ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು”

ರೂತಳ ಪುಸ್ತಕವು ಯೆಹೋವನನ್ನು, ತನ್ನ ನಿಷ್ಠಾವಂತ ಸೇವಕರ ಪರವಾಗಿ ಕಾರ್ಯವೆಸಗುವ ಪ್ರೀತಿಪೂರ್ವಕ ದಯೆಯುಳ್ಳ ದೇವರಾಗಿ ಚಿತ್ರಿಸುತ್ತದೆ. (2 ಪೂರ್ವಕಾಲವೃತ್ತಾಂತ 16:⁠9) ರೂತಳು ಹೇಗೆ ಆಶೀರ್ವದಿಸಲ್ಪಟ್ಟಳು ಎಂಬುದರ ಕುರಿತು ನಾವು ಯೋಚಿಸುವಾಗ, “ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ಪೂರ್ಣವಾಗಿ ನಂಬಿ, ಸಂಶಯರಹಿತ ನಂಬಿಕೆಯೊಂದಿಗೆ ದೇವರಲ್ಲಿ ಭರವಸೆಯಿಡುವ ಮೌಲ್ಯವನ್ನು ಮನಗಾಣುತ್ತೇವೆ.​—⁠ಇಬ್ರಿಯ 11:⁠6.

ರೂತ್‌, ನೊವೊಮಿ ಮತ್ತು ಬೋವಜರು ಯೆಹೋವನ ಏರ್ಪಾಡಿನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟರು, ಮತ್ತು ಇದರಿಂದ ಅವರಿಗೆ ಒಳ್ಳೇ ಪ್ರತಿಫಲಗಳು ಸಿಕ್ಕಿದವು. ಅದೇ ರೀತಿಯಲ್ಲಿ, “ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ.” (ರೋಮಾಪುರ 8:28) ಹೀಗಿರಲಾಗಿ ಅಪೊಸ್ತಲ ಪೇತ್ರನ ಈ ಸಲಹೆಯನ್ನು ನಾವು ಅನ್ವಯಿಸೋಣ: “ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”​—⁠1 ಪೇತ್ರ 5:6, 7.

[ಪುಟ 26ರಲ್ಲಿರುವ ಚಿತ್ರ]

ರೂತಳು ಏಕೆ ನೊವೊಮಿಯ ಕೈಬಿಡಲಿಲ್ಲವೆಂಬುದು ನಿಮಗೆ ಗೊತ್ತೊ?

[ಪುಟ 27ರಲ್ಲಿರುವ ಚಿತ್ರ]

‘ಗುಣವಂತೆ’ ಎಂಬ ಖ್ಯಾತಿ ರೂತಳಿಗೆ ಸಿಕ್ಕಿದ್ದು ಹೇಗೆ?

[ಪುಟ 28ರಲ್ಲಿರುವ ಚಿತ್ರ]

ಯೆಹೋವನಿಂದ ರೂತಳಿಗೆ ಸಿಕ್ಕಿದ “ಉತ್ತಮವಾದ ಪ್ರತಿಫಲ” ಏನಾಗಿತ್ತು?