ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವಾಹಿತ ದಂಪತಿಗಳಿಗಾಗಿ ವಿವೇಕಭರಿತ ಮಾರ್ಗದರ್ಶನೆ

ವಿವಾಹಿತ ದಂಪತಿಗಳಿಗಾಗಿ ವಿವೇಕಭರಿತ ಮಾರ್ಗದರ್ಶನೆ

ವಿವಾಹಿತ ದಂಪತಿಗಳಿಗಾಗಿ ವಿವೇಕಭರಿತ ಮಾರ್ಗದರ್ಶನೆ

“ಸ್ತ್ರೀಯರೇ, . . . ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಪುರುಷರೇ, . . . ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” ​—⁠ಎಫೆಸ 5:22, 25.

ಒಬ್ಬ ಪುರುಷನನ್ನೂ ಒಬ್ಬ ಸ್ತ್ರೀಯನ್ನೂ ದೇವರು ‘ಒಂದೇ ಶರೀರವಾಗುವಂತೆ’ ಕೂಡಿಸುವುದೇ ವಿವಾಹ ಎಂದು ಯೇಸು ಹೇಳಿದನು. (ಮತ್ತಾಯ 19:​5, 6) ಅದರಲ್ಲಿ, ಎರಡು ಭಿನ್ನ ವ್ಯಕ್ತಿತ್ವಗಳುಳ್ಳ ಇಬ್ಬರು ವ್ಯಕ್ತಿಗಳು ಸಾಮಾನ್ಯವಾದ ಅಭಿರುಚಿಗಳನ್ನು ವಿಕಸಿಸಲು ಕಲಿಯುವುದು ಮತ್ತು ಸಾಮಾನ್ಯವಾದ ಗುರಿಗಳನ್ನು ತಲಪುವ ದಿಕ್ಕಿನಲ್ಲಿ ಜೊತೆಯಾಗಿ ಕೆಲಸಮಾಡುವುದು ಸೇರಿರುತ್ತದೆ. ವಿವಾಹವು ಒಂದು ಜೀವನಪರ್ಯಂತರದ ಬದ್ಧತೆಯಾಗಿದೆಯೇ ಹೊರತು ಸುಲಭವಾಗಿ ಮೂಲೆಗೆಸೆಯಬಲ್ಲ ಒಂದು ತಾತ್ಕಾಲಿಕ ಒಪ್ಪಂದವಲ್ಲ. ಅನೇಕ ದೇಶಗಳಲ್ಲಿ ವಿಚ್ಛೇದವನ್ನು ಪಡೆಯುವುದು ಕಷ್ಟಕರವೇನಲ್ಲ. ಆದರೆ ಕ್ರೈಸ್ತನೊಬ್ಬನ ದೃಷ್ಟಿಯಲ್ಲಿ ವಿವಾಹ ಸಂಬಂಧವು ಪವಿತ್ರವಾಗಿದೆ. ಈ ಸಂಬಂಧವನ್ನು ಅತಿ ಗಂಭೀರವಾದ ಒಂದೇ ಕಾರಣಕ್ಕಾಗಿ ಮಾತ್ರ ಕಡಿದುಹಾಕಬಹುದು.​—⁠ಮತ್ತಾಯ 19:⁠9.

2 ವಿವಾಹದ ಸಲಹೆಗಾರ್ತಿಯೊಬ್ಬಳು ಹೇಳಿದ್ದು: “ಒಂದು ಯಶಸ್ವೀ ವಿವಾಹವು ಸತತವಾದ ಬದಲಾವಣೆಗಳನ್ನು ಮಾಡುವ ಒಂದು ಕಾರ್ಯಗತಿಯಾಗಿದೆ. ಏಕೆಂದರೆ ಅದು ಹೊಸ ಹೊಸ ವಿವಾದಾಂಶಗಳನ್ನು ಎಬ್ಬಿಸುತ್ತದೆ, ಉದಯಿಸುವ ಸಮಸ್ಯೆಗಳನ್ನು ನಿಭಾಯಿಸುತ್ತದೆ ಮತ್ತು ಬದುಕಿನ ಪ್ರತಿಯೊಂದು ಹಂತದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸುತ್ತದೆ.” ಕ್ರೈಸ್ತ ಪತಿಪತ್ನಿಯರಿಗೆ ಇಂಥ ಸಂಪನ್ಮೂಲಗಳು, ಬೈಬಲಿನಿಂದ ಸಿಗುವ ವಿವೇಕಭರಿತ ಸಲಹೆ, ಜೊತೆ ಕ್ರೈಸ್ತರಿಂದ ಸಿಗುವ ಬೆಂಬಲ, ಮತ್ತು ಯೆಹೋವನೊಂದಿಗೆ ಆಪ್ತವಾದ, ಪ್ರಾರ್ಥನಾಪೂರ್ವಕ ಸಂಬಂಧಗಳಾಗಿವೆ. ಯಶಸ್ವೀ ವಿವಾಹವು ಕಷ್ಟಗಳನ್ನು ತಾಳಿಕೊಳ್ಳುತ್ತದೆ ಮತ್ತು ವರ್ಷಗಳು ದಾಟಿದಂತೆ ಅದು ಗಂಡಹೆಂಡತಿಗೆ ಸಂತೋಷ ಹಾಗೂ ಸಂತೃಪ್ತಿಯನ್ನು ತರುತ್ತದೆ. ಇನ್ನೂ ಪ್ರಾಮುಖ್ಯವಾದ ಸಂಗತಿಯೇನೆಂದರೆ, ಅದು ವಿವಾಹದ ಮೂಲನಾಗಿರುವ ಯೆಹೋವ ದೇವರಿಗೆ ಗೌರವವನ್ನು ತರುತ್ತದೆ.​—⁠ಆದಿಕಾಂಡ 2:​18, 21-24; 1 ಕೊರಿಂಥ 10:31; ಎಫೆಸ 3:​15; 1 ಥೆಸಲೊನೀಕ 5:⁠16, 17.

ಯೇಸು ಮತ್ತು ಅವನ ಸಭೆಯನ್ನು ಅನುಕರಿಸಿರಿ

3 ಎರಡು ಸಾವಿರ ವರ್ಷಗಳ ಹಿಂದೆ, ಅಪೊಸ್ತಲ ಪೌಲನು ಕ್ರೈಸ್ತ ದಂಪತಿಗಳಿಗೆ ವಿವೇಕಭರಿತ ಸಲಹೆಯನ್ನು ಕೊಟ್ಟನು. ಅವನು ಬರೆದುದು: “ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು. ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” (ಎಫೆಸ 5:24, 25) ಇಲ್ಲಿ ಎಷ್ಟೊಂದು ಉತ್ತಮವಾದ ಹೋಲಿಕೆಗಳನ್ನು ಕೊಡಲಾಗಿದೆ! ತಮ್ಮ ಗಂಡಂದಿರಿಗೆ ನಮ್ರತೆಯಿಂದ ಅಧೀನರಾಗಿರುವ ಕ್ರೈಸ್ತ ಹೆಂಡತಿಯರು, ತಲೆತನದ ಮೂಲತತ್ತ್ವವನ್ನು ಅಂಗೀಕರಿಸಿ ಪಾಲಿಸುವ ಸಭೆಯನ್ನು ಅನುಕರಿಸುತ್ತಿದ್ದಾರೆ. ತಮ್ಮ ಹೆಂಡತಿಯರನ್ನು, ಕಷ್ಟಸುಖವೆನ್ನದೆ ಎಲ್ಲಾ ಸಮಯಗಳಲ್ಲೂ ಪ್ರೀತಿಸುತ್ತಾ ಮುಂದುವರಿಯುವ ವಿಶ್ವಾಸಿ ಗಂಡಂದಿರು, ಸಭೆಯನ್ನು ಪ್ರೀತಿಸುವ ಮತ್ತು ಅದರ ಆರೈಕೆಮಾಡುವ ಕ್ರಿಸ್ತನ ಮಾದರಿಯನ್ನು ನಿಕಟವಾಗಿ ಅನುಸರಿಸುತ್ತಿದ್ದಾರೆಂಬುದನ್ನು ಪ್ರದರ್ಶಿಸುತ್ತಾರೆ.

4 ಕ್ರೈಸ್ತ ಗಂಡಂದಿರು ತಮ್ಮ ಕುಟುಂಬಗಳ ತಲೆಗಳಾಗಿದ್ದಾರೆ ಆದರೆ ಅವರಿಗೂ ಒಬ್ಬ ತಲೆಯಿದ್ದಾನೆ. ಅವನು ಯೇಸುವೇ. (1 ಕೊರಿಂಥ 11:⁠3) ಆದುದರಿಂದ ಯೇಸು ತನ್ನ ಸಭೆಯನ್ನು ಆರೈಕೆಮಾಡಿದಂತೆಯೇ, ಗಂಡಂದಿರು ಪ್ರೀತಿಯಿಂದ ತಮ್ಮ ಕುಟುಂಬಗಳ ಆಧ್ಯಾತ್ಮಿಕ ಹಾಗೂ ಶಾರೀರಿಕ ಆರೈಕೆಯನ್ನು ಮಾಡುತ್ತಾರೆ. ಇದಕ್ಕಾಗಿ ಅವರು ವೈಯಕ್ತಿಕ ತ್ಯಾಗಗಳನ್ನು ಮಾಡಲೂ ಸಿದ್ಧರಿರುತ್ತಾರೆ. ಅವರು ತಮ್ಮ ಕುಟುಂಬಗಳ ಹಿತವನ್ನು ತಮ್ಮ ಸ್ವಂತ ಆಸೆಗಳು ಹಾಗೂ ಇಷ್ಟಗಳಿಗಿಂತಲೂ ಮುಂದಿಡುತ್ತಾರೆ. ಯೇಸು ಹೇಳಿದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಈ ಮೂಲತತ್ತ್ವವು ವಿಶೇಷವಾಗಿ ವಿವಾಹದಲ್ಲಿ ಅನ್ವಯವಾಗುತ್ತದೆ. ಇದನ್ನು ಪೌಲನು ಹೀಗಂದಾಗ ತೋರಿಸಿದನು: “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. . . . ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.” (ಎಫೆಸ 5:28, 29) ಒಬ್ಬ ಪುರುಷನು ಎಷ್ಟೊಂದು ಶ್ರದ್ಧೆಯಿಂದ ತನ್ನನ್ನು ಪೋಷಿಸಿ ಸಂರಕ್ಷಿಸಿಕೊಳ್ಳುತ್ತಾನೊ, ಅದೇ ರೀತಿಯಲ್ಲಿ ತನ್ನ ಹೆಂಡತಿಯನ್ನು ಪೋಷಿಸಿ ಸಂರಕ್ಷಿಸಬೇಕು.

5 ದೈವಭಕ್ತ ಹೆಂಡತಿಯರು, ಕ್ರೈಸ್ತ ಸಭೆಯನ್ನು ತಮ್ಮ ಮಾದರಿಯಾಗಿಡುತ್ತಾರೆ. ಯೇಸು ಭೂಮಿಯ ಮೇಲಿದ್ದಾಗ, ಅವನ ಹಿಂಬಾಲಕರು ತಮ್ಮ ಹಿಂದಿನ ಕೆಲಸಗಳನ್ನು ಸಂತೋಷದಿಂದ ಬಿಟ್ಟುಬಿಟ್ಟು ಅವನನ್ನು ಹಿಂಬಾಲಿಸಿದರು. ಅವನ ಮರಣಾನಂತರವೂ ಅವರು ಅವನಿಗೆ ಅಧೀನರಾಗಿರುವುದನ್ನು ಮುಂದುವರಿಸಿದರು, ಮತ್ತು ಕಳೆದ ಸುಮಾರು 2,000 ವರ್ಷಗಳಿಂದ ನಿಜ ಕ್ರೈಸ್ತ ಸಭೆಯು ಯೇಸುವಿಗೆ ಅಧೀನವಾಗಿ ಉಳಿದು, ಎಲ್ಲಾ ವಿಷಯಗಳಲ್ಲೂ ಅವನ ನಾಯಕತ್ವವನ್ನು ಹಿಂಬಾಲಿಸಿದೆ. ಕ್ರೈಸ್ತ ಹೆಂಡತಿಯರು ಅದೇ ರೀತಿಯಲ್ಲಿ ತಮ್ಮ ಗಂಡಂದಿರನ್ನು ಧಿಕ್ಕರಿಸುವುದಿಲ್ಲ ಇಲ್ಲವೆ, ವಿವಾಹದಲ್ಲಿ ತಲೆತನದ ಶಾಸ್ತ್ರೀಯ ಏರ್ಪಾಡಿನ ಮಹತ್ವವನ್ನು ಕಡೆಗಣಿಸಲು ಪ್ರಯತ್ನಿಸುವುದಿಲ್ಲ. ಅದರ ಬದಲು, ಅವರು ತಮ್ಮ ಗಂಡಂದಿರಿಗೆ ಬೆಂಬಲವನ್ನಿತ್ತು ಅಧೀನರಾಗಿರುತ್ತಾರೆ, ಅವರೊಂದಿಗೆ ಸಹಕರಿಸುತ್ತಾರೆ ಮತ್ತು ಈ ರೀತಿಯಲ್ಲಿ ಅವರನ್ನು ಉತ್ತೇಜಿಸುತ್ತಾರೆ. ಗಂಡಹೆಂಡತಿಯರಿಬ್ಬರೂ ಹೀಗೆ ಪ್ರೀತಿಯಿಂದ ವರ್ತಿಸುವಾಗ ಅವರ ವಿವಾಹವು ಖಂಡಿತವಾಗಿಯೂ ಯಶಸ್ವಿಯಾಗುವುದು ಮತ್ತು ಇಬ್ಬರೂ ಆ ಸಂಬಂಧದಲ್ಲಿ ಆನಂದವನ್ನು ಕಂಡುಕೊಳ್ಳುವರು.

ಒಗತನವನ್ನು ಮುಂದುವರಿಸಿರಿ

6 ಅಪೊಸ್ತಲ ಪೇತ್ರನು ಸಹ ವಿವಾಹಿತ ದಂಪತಿಗಳಿಗೆ ಸಲಹೆಯನ್ನು ಕೊಟ್ಟನು, ಮತ್ತು ವಿಶೇಷವಾಗಿ ಅವನು ಗಂಡಂದಿರಿಗೆ ಹೇಳಿದ ಮಾತುಗಳು ನೇರವಾಗಿದ್ದವು. ಅವನಂದದ್ದು: “ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.” (1 ಪೇತ್ರ 3:7) ಪೇತ್ರನ ಸಲಹೆಯು ಎಷ್ಟು ಗಂಭೀರವಾದದ್ದೆಂಬುದು ಆ ವಚನದ ಕೊನೆಯ ಮಾತುಗಳಿಂದ ತಿಳಿದುಬರುತ್ತದೆ. ಒಬ್ಬ ಗಂಡನು ತನ್ನ ಹೆಂಡತಿಗೆ ಮಾನವನ್ನು ಸಲ್ಲಿಸದೇ ಹೋದರೆ, ಯೆಹೋವನೊಂದಿಗಿನ ಅವನ ಸಂಬಂಧವು ಬಾಧಿಸಲ್ಪಡುವುದು. ಅವನ ಪ್ರಾರ್ಥನೆಗಳಿಗೆ ಅಡ್ಡಿಯಾಗುವುದು.

7 ಹಾಗಾದರೆ, ಗಂಡಂದಿರು ತಮ್ಮ ಪತ್ನಿಯರಿಗೆ ಹೇಗೆ ಮಾನವನ್ನು ಸಲ್ಲಿಸಬಹುದು? ಹೆಂಡತಿಗೆ ಮಾನವನ್ನು ಸಲ್ಲಿಸುವುದರ ಅರ್ಥ, ಅವಳನ್ನು ಪ್ರೀತಿಯಿಂದ, ಗೌರವ ಘನತೆಯೊಂದಿಗೆ ಉಪಚರಿಸುವುದೇ ಆಗಿದೆ. ಹೆಂಡತಿಯನ್ನು ಆ ರೀತಿಯಲ್ಲಿ ದಯೆಯಿಂದ ಉಪಚರಿಸುವುದು ಆ ಕಾಲದಲ್ಲಿ ಅನೇಕರಿಗೆ ಒಂದು ವಿಚಿತ್ರ ಸಂಗತಿಯಾಗಿ ತೋರಿದ್ದಿರಬಹುದು. ಒಬ್ಬ ಗ್ರೀಕ್‌ ವಿದ್ವಾಂಸನು ಬರೆದುದು: “ರೋಮನ್‌ ಕಾನೂನು ವ್ಯವಸ್ಥೆಯಲ್ಲಿ ಸ್ತ್ರೀಗೆ ಯಾವುದೇ ಹಕ್ಕುಗಳಿರಲಿಲ್ಲ. ಅವಳ ಕಾನೂನುಬದ್ಧ ಹಕ್ಕುಗಳು ಯಾವಾಗಲೂ ಒಂದು ಮಗುವಿಗಿದ್ದಷ್ಟೇ ಆಗಿರುತ್ತಿದ್ದವು. . . . ಅವಳು ಪೂರ್ತಿಯಾಗಿ ತನ್ನ ಗಂಡನ ಹಿಡಿತದಲ್ಲಿರುತ್ತಿದ್ದಳು, ಮತ್ತು ಯಾವುದೇ ರೀತಿಯ ಸಂರಕ್ಷಣೆಯಿಲ್ಲದವಳಾಗಿದ್ದಳು.” ಇದು ಕ್ರೈಸ್ತ ಬೋಧನೆಗಳಿಗೆ ಎಷ್ಟು ತದ್ವಿರುದ್ಧ! ಕ್ರೈಸ್ತ ಗಂಡನಾದರೊ ತನ್ನ ಹೆಂಡತಿಗೆ ಮಾನವನ್ನು ಸಲ್ಲಿಸಬೇಕು. ಅವಳೊಂದಿಗಿನ ಅವನ ವ್ಯವಹಾರಗಳು ಕ್ಷಣಕ್ಷಣಕ್ಕೂ ಬದಲಾಗುವ ಅವನ ಖಯಾಲಿಗಳಿಗನುಸಾರವಲ್ಲ, ಬದಲಿಗೆ ಕ್ರೈಸ್ತ ಮೂಲತತ್ತ್ವಗಳಿಂದ ನಿಯಂತ್ರಿಸಲ್ಪಡಬೇಕು. ಅಷ್ಟುಮಾತ್ರವಲ್ಲದೆ, ಅವಳು ಬಲಹೀನಳೆಂಬುದನ್ನು ಗಣನೆಗೆ ತಂದುಕೊಂಡು ಅವನು ‘ವಿವೇಕಕ್ಕನುಸಾರ’ ಇಲ್ಲವೆ ಜ್ಞಾನಕ್ಕನುಸಾರ ಪರಿಗಣನೆ ತೋರಿಸಬೇಕು.

ಯಾವ ವಿಧದಲ್ಲಿ ‘ಬಲಹೀನಳು’?

8 ಸ್ತ್ರೀಯು ‘ಬಲಹೀನಳು’ ಎಂದು ಪೇತ್ರನು ಹೇಳುವಾಗ, ಸ್ತ್ರೀಯರು ಬುದ್ಧಿವಂತಿಕೆ ಇಲ್ಲವೆ ಆಧ್ಯಾತ್ಮಿಕತೆಯಲ್ಲಿ ಪುರುಷರಿಗಿಂತಲೂ ಬಲಹೀನರೆಂಬುದು ಅವನ ಅರ್ಥವಲ್ಲ. ಇಂದು ಸಭೆಯಲ್ಲಿ ಸ್ತ್ರೀಯರು ನಿರೀಕ್ಷಿಸದಂಥ ಸುಯೋಗಗಳು ಅನೇಕ ಕ್ರೈಸ್ತ ಪುರುಷರಿಗಿದೆ, ಮತ್ತು ಕುಟುಂಬದಲ್ಲಿ ಸ್ತ್ರೀಯರು ತಮ್ಮ ಗಂಡಂದಿರಿಗೆ ಅಧೀನರಾಗಿದ್ದಾರೆಂಬುದು ನಿಜ. (1 ಕೊರಿಂಥ 14:35; 1 ತಿಮೊಥೆಯ 2:12) ಹಾಗಿದ್ದರೂ ಸ್ತ್ರೀಪುರುಷರಿಬ್ಬರಿಂದಲೂ ನಂಬಿಕೆ, ತಾಳ್ಮೆ ಮತ್ತು ಉಚ್ಚ ನೈತಿಕ ಮಟ್ಟಗಳನ್ನು ಅಪೇಕ್ಷಿಸಲಾಗುತ್ತದೆ. ಮತ್ತು ಪೇತ್ರನು ಹೇಳಿದಂತೆ ಗಂಡಹೆಂಡತಿಯರಿಬ್ಬರೂ ‘ಜೀವವರಕ್ಕೆ ಬಾಧ್ಯರಾಗಿದ್ದಾರೆ.’ ರಕ್ಷಣೆಯ ವಿಷಯದಲ್ಲಿ ಅವರಿಗೆ ಯೆಹೋವ ದೇವರ ಮುಂದೆ ಸಮಾನವಾದ ನಿಲುವಿದೆ. (ಗಲಾತ್ಯ 3:28) ಪೇತ್ರನು ಪ್ರಥಮ ಶತಮಾನದ ಅಭಿಷಿಕ್ತ ಕ್ರೈಸ್ತರಿಗೆ ಬರೆಯುತ್ತಿದ್ದನು. ಹೀಗಿರುವುದರಿಂದ ಅವನ ಮಾತುಗಳು ಕ್ರೈಸ್ತ ಗಂಡಂದಿರಿಗೆ, ‘ಕ್ರಿಸ್ತನೊಂದಿಗೆ ಬಾಧ್ಯರಾದ’ ಅವರಿಗೂ ಅವರ ಹೆಂಡತಿಯರಿಗೂ ಒಂದೇ ಸ್ವರ್ಗೀಯ ನಿರೀಕ್ಷೆಯಿದೆಯೆಂಬುದನ್ನು ನೆನಪುಹುಟ್ಟಿಸಿತು. (ರೋಮಾಪುರ 8:17) ಮುಂದೊಂದು ದಿನ ಅವರಿಬ್ಬರೂ ದೇವರ ಸ್ವರ್ಗೀಯ ರಾಜ್ಯದಲ್ಲಿ ರಾಜರೂ ಯಾಜಕರೂ ಆಗಿ ಸೇವೆಸಲ್ಲಿಸಲಿದ್ದರು!​—⁠ಪ್ರಕಟನೆ 5:⁠10.

9 ಅಭಿಷಿಕ್ತ ಕ್ರೈಸ್ತ ಹೆಂಡತಿಯರು ತಮ್ಮ ಅಭಿಷಿಕ್ತ ಕ್ರೈಸ್ತ ಗಂಡಂದಿರಿಗಿಂತ ಯಾವುದೇ ವಿಧದಲ್ಲಿ ಕೆಳಮಟ್ಟದವರಾಗಿರಲಿಲ್ಲ. ಮತ್ತು ತತ್ತ್ವತಃ ಭೂನಿರೀಕ್ಷೆಯಿದ್ದವರ ಕುರಿತಾಗಿಯೂ ಇದು ಸತ್ಯವಾಗಿದೆ. ‘ಮಹಾ ಸಮೂಹದ’ ಪುರುಷರು ಮತ್ತು ಸ್ತ್ರೀಯರೂ ಕುರಿಮರಿಯ ರಕ್ತದಲ್ಲಿ ತಮ್ಮ ಬಟ್ಟೆಗಳನ್ನು ತೊಳೆದು ಶುಭ್ರಮಾಡುತ್ತಾರೆ. ಸ್ತ್ರೀಪುರುಷರೆನ್ನದೆ ಎಲ್ಲರೂ ಲೋಕವ್ಯಾಪಕವಾಗಿ ನಡೆಯುತ್ತಿರುವ ಯೆಹೋವನ ಸ್ತುತಿಘೋಷದಲ್ಲಿ “ಹಗಲಿರುಳು” ಪಾಲ್ಗೊಳ್ಳುತ್ತಾರೆ. (ಪ್ರಕಟನೆ 7:​9, 10, 14, 15) ಪುರುಷರು ಮತ್ತು ಸ್ತ್ರೀಯರು ತಾವು ‘ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯನ್ನು’ ಅನುಭವಿಸಿ ‘ವಾಸ್ತವವಾದ ಜೀವ’ದಲ್ಲಿ ಹರ್ಷಿಸುವದಕ್ಕೆ ಎದುರುನೋಡುತ್ತಾರೆ. (ರೋಮಾಪುರ 8:21; 1 ತಿಮೊಥೆಯ 6:19) ಅಭಿಷಿಕ್ತರಾಗಿರಲಿ ಇಲ್ಲವೆ ಬೇರೆ ಕುರಿಗಳಾಗಿರಲಿ, ಎಲ್ಲಾ ಕ್ರೈಸ್ತರು ಒಟ್ಟಿಗೆ ‘ಒಂದೇ ಹಿಂಡಾಗಿ’ ‘ಒಬ್ಬನೇ ಕುರುಬನ’ ಕೆಳಗೆ ಯೆಹೋವನನ್ನು ಸೇವಿಸುತ್ತಾರೆ. (ಯೋಹಾನ 10:16) ಕ್ರೈಸ್ತ ಪತಿಪತ್ನಿಯರಿಬ್ಬರೂ ಪರಸ್ಪರರಿಗೆ ತಕ್ಕದಾದ ಮಾನವನ್ನು ಸಲ್ಲಿಸಲು ಇದೆಷ್ಟು ಬಲವಂತಪಡಿಸುವ ಕಾರಣವಾಗಿದೆ!

10 ಹಾಗಿರುವಲ್ಲಿ, ಸ್ತ್ರೀಯರು ಯಾವ ವಿಧದಲ್ಲಿ ‘ಬಲಹೀನ’ರಾಗಿದ್ದಾರೆ? ಬಹುಶಃ ಪೇತ್ರನು ಸರಾಸರಿಯಾಗಿ ಸ್ತ್ರೀಯರು ಪುರುಷರಿಗಿಂತಲೂ ಚಿಕ್ಕದೇಹಿಗಳು ಮತ್ತು ಕಡಿಮೆ ಶಾರೀರಿಕ ಬಲವುಳ್ಳವರು ಎಂಬ ವಾಸ್ತವಾಂಶಕ್ಕೆ ಸೂಚಿಸುತ್ತಿದ್ದನು. ಅಷ್ಟುಮಾತ್ರವಲ್ಲದೆ ನಮ್ಮ ಈ ಅಪರಿಪೂರ್ಣ ಸ್ಥಿತಿಯಲ್ಲಿ, ಮಕ್ಕಳನ್ನು ಹೆರುವ ಅದ್ಭುತವಾದ ಸುಯೋಗವು ಸ್ತ್ರೀಯರ ಶಾರೀರಿಕ ಆರೋಗ್ಯವನ್ನು ಬಾಧಿಸುತ್ತದೆ. ಮಕ್ಕಳನ್ನು ಹೆರುವ ಪ್ರಾಯದ ಸ್ತ್ರೀಯರಿಗೆ, ಕ್ರಮವಾಗಿ ಶಾರೀರಿಕ ಅಸೌಖ್ಯಗಳನ್ನು ಅನುಭವಿಸಲಿಕ್ಕಿರುತ್ತದೆ. ಇಂಥ ಅಸೌಖ್ಯಗಳನ್ನು ಇಲ್ಲವೆ ಗರ್ಭಾವಸ್ಥೆ ಮತ್ತು ಹೆರುವಿಕೆಯ ಸಮಯದಲ್ಲಿನ ಶಕ್ತಿಯನ್ನು ಹೀರುವ ಅನುಭವವನ್ನು ಸಹಿಸುತ್ತಿರುವಾಗ ಅವರಿಗೆ ನಿಶ್ಚಯವಾಗಿಯೂ ವಿಶೇಷ ಆರೈಕೆ ಹಾಗೂ ಪರಿಗಣನೆಯ ಅಗತ್ಯವಿರುತ್ತದೆ. ತನ್ನ ಹೆಂಡತಿಗೆ ಬೇಕಾಗಿರುವ ಬೆಂಬಲವನ್ನು ಗ್ರಹಿಸುತ್ತಾ ಅವಳಿಗೆ ಮಾನವನ್ನು ಸಲ್ಲಿಸುವ ಗಂಡನು ವಿವಾಹದ ಯಶಸ್ಸಿಗೆ ಬಹಳಷ್ಟು ನೆರವು ನೀಡುತ್ತಾನೆ.

ಧಾರ್ಮಿಕವಾಗಿ ವಿಭಜಿತಗೊಂಡಿರುವ ಕುಟುಂಬದಲ್ಲಿ

11 ಆದರೆ ಮದುವೆಯ ಸ್ವಲ್ಪ ಸಮಯಾನಂತರ ವಿವಾಹ ಸಂಗಾತಿಗಳಲ್ಲೊಬ್ಬರು ಕ್ರೈಸ್ತ ಸತ್ಯವನ್ನು ಅಂಗೀಕರಿಸಿ ಇನ್ನೊಬ್ಬರು ಅಂಗೀಕರಿಸದಿದ್ದರಿಂದಾಗಿ ಭಿನ್ನ ಧಾರ್ಮಿಕ ದೃಷ್ಟಿಕೋನಗಳಿರುವಲ್ಲಿ ಆಗೇನು? ಅಂಥ ವಿವಾಹವು ಯಶಸ್ವಿಯಾಗಬಲ್ಲದೊ? ಅನೇಕರ ಅನುಭವವು ‘ಹೌದು’ ಎಂದು ಹೇಳುತ್ತದೆ. ಭಿನ್ನವಾದ ಧಾರ್ಮಿಕ ದೃಷ್ಟಿಕೋನಗಳಿದ್ದಾಗ್ಯೂ ಗಂಡಹೆಂಡತಿಯರು ಬಾಳುವಂಥ ಹಾಗೂ ಇಬ್ಬರಿಗೂ ಸಂತೋಷವನ್ನು ತರುವಂಥ ಅರ್ಥದಲ್ಲಿ ಒಂದು ಯಶಸ್ವೀ ವಿವಾಹದಲ್ಲಿ ಆನಂದಿಸಬಲ್ಲರು. ಅಲ್ಲದೆ, ಆ ವಿವಾಹವು ಆಗಲೂ ಯೆಹೋವನ ಮುಂದೆ ಕಾನೂನುಸಮ್ಮತವಾಗಿದೆ; ಅವರಿನ್ನೂ ‘ಒಂದೇ ಶರೀರ’ವಾಗಿದ್ದಾರೆ. ಆದುದರಿಂದ, ಅವಿಶ್ವಾಸಿ ಸಂಗಾತಿಯ ಸಮ್ಮತಿಯಿದ್ದರೆ ಕ್ರೈಸ್ತ ಸಂಗಾತಿಗಳು ಅವರೊಂದಿಗೇ ಉಳಿಯುವಂತೆ ಸಲಹೆಕೊಡಲಾಗಿದೆ. ಮಕ್ಕಳಿರುವಲ್ಲಿ, ಅವರು ಆ ಕ್ರೈಸ್ತ ತಂದೆ/ತಾಯಿಯ ನಂಬಿಗಸ್ತಿಕೆಯಿಂದ ಪ್ರಯೋಜನಪಡೆಯುವರು.​—⁠1 ಕೊರಿಂಥ 7:​12-14.

12 ಧಾರ್ಮಿಕವಾಗಿ ವಿಭಜಿತಗೊಂಡಿರುವ ಕುಟುಂಬಗಳಲ್ಲಿ ಜೀವಿಸುವ ಕ್ರೈಸ್ತ ಸ್ತ್ರೀಯರಿಗೆ ಪೇತ್ರನು ದಯಾಪರ ಮಾತುಗಳಲ್ಲಿ ಸಲಹೆಕೊಡುತ್ತಾನೆ. ಅವನ ಮಾತುಗಳು ತತ್ತ್ವತಃ, ಅದೇ ಸನ್ನಿವೇಶದಲ್ಲಿರುವ ಕ್ರೈಸ್ತ ಗಂಡಂದಿರಿಗೂ ಅನ್ವಯವಾಗಬಲ್ಲದು. ಪೇತ್ರನು ಬರೆದುದು: “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.”​—⁠1 ಪೇತ್ರ 3:1, 2.

13 ಹೆಂಡತಿಯೊಬ್ಬಳು ತನ್ನ ಗಂಡನಿಗೆ ತನ್ನ ಧರ್ಮದ ಕುರಿತಾಗಿ ಜಾಣ್ಮೆಯಿಂದ ವಿವರಿಸಲು ಶಕ್ತಳಾಗಿರುವಲ್ಲಿ ಅದು ಪ್ರಶಂಸಾರ್ಹ. ಆದರೆ ಅವನಿಗೆ ಕಿವಿಗೊಡಲಿಕ್ಕೆ ಮನಸ್ಸೇ ಇಲ್ಲದಿರುವಲ್ಲಿ ಆಗೇನು? ಅದು ಅವನ ಆಯ್ಕೆ. ಆದರೆ ಪರಿಸ್ಥಿತಿಯು ನಿರೀಕ್ಷಾಹೀನವಾಗಿಲ್ಲ. ಏಕೆಂದರೆ ಕ್ರೈಸ್ತ ನಡತೆಯು ಸಹ ಶಕ್ತಿಶಾಲಿಯಾದ ಸಾಕ್ಷಿಯನ್ನು ಕೊಡುತ್ತದೆ. ಆರಂಭದಲ್ಲಿ ಆಸಕ್ತಿಯಿಲ್ಲದಿದ್ದ ಅಥವಾ ತಮ್ಮ ಹೆಂಡತಿಯ ಧರ್ಮವನ್ನು ವಿರೋಧಿಸುತ್ತಲೂ ಇದ್ದ ಅನೇಕಮಂದಿ ಗಂಡಂದಿರು ತಮ್ಮ ಹೆಂಡತಿಯರ ಉತ್ತಮ ನಡತೆಯನ್ನು ನೋಡಿದ ಬಳಿಕ ‘ನಿತ್ಯಜೀವಕ್ಕೆ ಯೋಗ್ಯವಾದ ಪ್ರವೃತ್ತಿಯುಳ್ಳವ’ರಾಗಿದ್ದಾರೆ. (ಅ. ಕೃತ್ಯಗಳು 13:​48, NW) ಗಂಡನು ಕ್ರೈಸ್ತ ಸತ್ಯವನ್ನು ಅಂಗೀಕರಿಸದೆ ಇದ್ದರೂ, ಅವನು ತನ್ನ ಹೆಂಡತಿಯ ನಡತೆಯಿಂದ ಪ್ರಭಾವಿತನಾಗಬಹುದು, ಮತ್ತು ಇದು ವಿವಾಹದ ಬಂಧವನ್ನು ಬಲಪಡಿಸುವುದು. ಒಬ್ಬ ಯೆಹೋವನ ಸಾಕ್ಷಿಯಾಗಿರುವ ಹೆಂಡತಿಯ ಗಂಡನು, ತಾನೆಂದೂ ಅವರ ಉಚ್ಚ ಮಟ್ಟಗಳಿಗನುಸಾರ ಜೀವಿಸಲಾರೆ ಎಂದು ಒಪ್ಪಿಕೊಂಡನು. ಆದರೂ, ಅವನು ತನ್ನನ್ನು “ಮನಮೋಹಕವಾದ ಪತ್ನಿಯ ಸಂತೋಷಿತ ಪತಿ” ಎಂದು ಕರೆದನು ಮತ್ತು ಒಂದು ವಾರ್ತಾಪತ್ರಿಕೆಗೆ ಬರೆದ ಪತ್ರದಲ್ಲಿ ತನ್ನ ಹೆಂಡತಿ ಹಾಗೂ ಅವಳ ಜೊತೆ ಸಾಕ್ಷಿಗಳನ್ನು ಮುಕ್ತಕಂಠದಿಂದ ಹೊಗಳಿದನು.

14 ಪೇತ್ರನ ಮಾತುಗಳ ಮೂಲತತ್ತ್ವಗಳನ್ನು ಅನ್ವಯಿಸಿಕೊಂಡಿರುವ ಕ್ರೈಸ್ತ ಗಂಡಂದಿರು ಸಹ ಅದೇ ರೀತಿಯಲ್ಲಿ ತಮ್ಮ ನಡತೆಯ ಮೂಲಕ ತಮ್ಮ ಹೆಂಡತಿಯರ ಮನಗೆದಿದ್ದಾರೆ. ತಮ್ಮ ಗಂಡನು ಜವಾಬ್ದಾರಿಯ ಪ್ರಜ್ಞೆ ಹೊಂದುವುದನ್ನು, ಧೂಮಪಾನ, ಕುಡಿತ ಮತ್ತು ಜೂಜಾಟದಲ್ಲಿ ಹಣಪೋಲುಮಾಡುವುದನ್ನು ನಿಲ್ಲಿಸಿರುವುದನ್ನು ಹಾಗೂ ಅವಾಚ್ಯ ಮಾತುಗಳ ಬಳಕೆಯನ್ನು ಬಿಟ್ಟುಬಿಟ್ಟಿರುವುದನ್ನು ಅವಿಶ್ವಾಸಿ ಹೆಂಡತಿಯರು ಗಮನಿಸಿದ್ದಾರೆ. ಅಂಥ ಸಂಗಾತಿಗಳಲ್ಲಿ ಕೆಲವರು ಕ್ರೈಸ್ತ ಸಭೆಯ ಇತರ ಸದಸ್ಯರೊಂದಿಗೆ ಪರಿಚಿತರಾಗಿದ್ದಾರೆ. ಪ್ರೀತಿಪರವಾದ ಕ್ರೈಸ್ತ ಸಹೋದರತ್ವದಿಂದ ಅವರು ಪ್ರಭಾವಿತರಾಗಿದ್ದಾರೆ, ಮತ್ತು ಸಹೋದರರ ನಡುವೆ ಅವರೇನನ್ನು ನೋಡಿದ್ದಾರೊ ಅದು ಅವರನ್ನು ಯೆಹೋವನ ಸಮೀಪಕ್ಕೆ ಸೆಳೆದಿದೆ.​—⁠ಯೋಹಾನ 13:​34, 35.

“ಒಳಗಣ ಭೂಷಣ”

15 ಯಾವ ರೀತಿಯ ನಡತೆಯು ಒಬ್ಬ ಗಂಡನ ಮನಸ್ಸನ್ನು ಗೆಲ್ಲಬಹುದು? ಅದು, ಕ್ರೈಸ್ತ ಸ್ತ್ರೀಯರಿಂದ ಸ್ವಾಭಾವಿಕವಾಗಿಯೇ ವಿಕಸಿಸಲ್ಪಡುವಂಥ ನಡತೆಯಾಗಿದೆ. ಪೇತ್ರನು ಹೇಳುವುದು: “ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ವಸ್ತ್ರಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ. ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಭಕ್ತೆಯರಾದ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದು ಯಾವ ಭೀತಿಗೂ ಗಾಬರಿಪಡದೆ ಒಳ್ಳೇದನ್ನೇ ಮಾಡುವವರಾಗಿದ್ದರು. ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು ಎಂದು ಬರೆದದೆ. ನೀವು ಸಾರಳ ಕುಮಾರ್ತೆಗಳಾಗಿದ್ದೀರಲ್ಲಾ.”​—⁠1 ಪೇತ್ರ 3:3-6.

16 ಕ್ರೈಸ್ತ ಸ್ತ್ರೀಯು ತನ್ನ ಬಾಹ್ಯ ರೂಪದ ಮೇಲೆ ಹೊಂದಿಕೊಳ್ಳಬಾರದೆಂದು ಪೇತ್ರನು ಸಲಹೆನೀಡುತ್ತಾನೆ. ಅದರ ಬದಲು, ಅವಳ ಆಂತರಿಕ ವ್ಯಕ್ತಿಯ ಮೇಲೆ ಬೈಬಲ್‌ ಬೋಧನೆಗಳು ಬೀರಿರುವ ಪ್ರಭಾವವನ್ನು ಅವಳ ಗಂಡನು ನೋಡಲಿ. ಅವಳ ಹೊಸ ವ್ಯಕ್ತಿತ್ವವನ್ನು ಅವನು ಕಾರ್ಯರೂಪದಲ್ಲಿ ಗಮನಿಸಲಿ. ಪ್ರಾಯಶಃ ಅವನು ತನ್ನ ಹೆಂಡತಿಗೆ ಹಿಂದೆ ಇದ್ದ ಹಳೇ ವ್ಯಕ್ತಿತ್ವದೊಂದಿಗೆ ಅದನ್ನು ಹೋಲಿಸಿ ನೋಡುವನು. (ಎಫೆಸ 4:​22-24) ಅವಳ “ಸಾತ್ವಿಕವಾದ ಶಾಂತಮನಸ್ಸು” ಖಂಡಿತವಾಗಿಯೂ ಅವನಿಗೆ ಚೇತೋಹಾರಿಯೂ ಆಕರ್ಷಣೀಯವೂ ಆಗಿರುವುದು. ಅಂಥ ಮನೋವೃತ್ತಿಯನ್ನು ಗಂಡನು ಮೆಚ್ಚುವನು ಮಾತ್ರವಲ್ಲ ಅದು ‘ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ.’​—⁠ಕೊಲೊಸ್ಸೆ 3:⁠12.

17 ಸಾರಳನ್ನು ಒಂದು ಮಾದರಿಯಾಗಿ ಸೂಚಿಸಲಾಗಿದೆ. ಮತ್ತು ಅವಳು ಕ್ರೈಸ್ತ ಹೆಂಡತಿಯರಿಗೆ, ಅವರ ಗಂಡಂದಿರು ವಿಶ್ವಾಸಿಗಳಾಗಿರಲಿ ಇಲ್ಲದಿರಲಿ ಒಂದು ಯೋಗ್ಯವಾದ ಮಾದರಿಯಾಗಿದ್ದಾಳೆ. ನಿಸ್ಸಂದೇಹವಾಗಿಯೂ ಸಾರಳು ಅಬ್ರಹಾಮನನ್ನು ತನ್ನ ತಲೆಯಾಗಿ ದೃಷ್ಟಿಸಿದಳು. ಅವಳ ಹೃದಯದಲ್ಲೂ ಅವನನ್ನು ‘ಯಜಮಾನ’ ಎಂದು ಕರೆಯುತ್ತಿದ್ದಳು. (ಆದಿಕಾಂಡ 18:12) ಆದರೆ ಅದರಿಂದ ಅವಳ ಘನತೆಗೆ ಕುಂದು ಬರಲಿಲ್ಲ. ಅವಳು ಯೆಹೋವನಲ್ಲಿ ಸ್ವತಃ ದೃಢವಾದ ನಂಬಿಕೆಯನ್ನಿಟ್ಟಿದ್ದ, ಆಧ್ಯಾತ್ಮಿಕವಾಗಿ ಬಲವಾಗಿದ್ದ ಸ್ತ್ರೀಯಾಗಿದ್ದಳೆಂಬುದು ಸ್ಪಷ್ಟ. ವಾಸ್ತವದಲ್ಲಿ ಅವಳು ‘ಮೇಘದೋಪಾದಿಯಲ್ಲಿರುವ ಸಾಕ್ಷಿಗಳಲ್ಲಿ’ ಒಬ್ಬಳಾಗಿದ್ದಾಳೆ ಮತ್ತು ಅವಳ ನಂಬಿಕೆಯ ಮಾದರಿಯು ನಾವು ‘ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡುವಂತೆ’ ಪ್ರಚೋದಿಸತಕ್ಕದ್ದು. (ಇಬ್ರಿಯ 11:11; 12:⁠2) ಸಾರಳಂತೆ ಇರುವುದು ಒಬ್ಬ ಕ್ರೈಸ್ತ ಹೆಂಡತಿಯನ್ನು ಯಾವುದೇ ರೀತಿಯಲ್ಲಿ ಕೀಳಾಗಿ ಮಾಡುವುದಿಲ್ಲ.

18 ಧಾರ್ಮಿಕವಾಗಿ ವಿಭಾಜಿತವಾಗಿರುವ ಕುಟುಂಬದಲ್ಲೂ ಗಂಡನೇ ತಲೆಯಾಗಿದ್ದಾನೆ. ಗಂಡನು ಒಬ್ಬ ವಿಶ್ವಾಸಿಯಾಗಿರುವಲ್ಲಿ, ತನ್ನ ಹೆಂಡತಿಯ ನಂಬಿಕೆಗಳ ಕುರಿತಾಗಿ ಪರಿಗಣನೆ ತೋರಿಸುವನು ಆದರೆ ಅದೇ ಸಮಯದಲ್ಲಿ ತನ್ನ ಸ್ವಂತ ನಂಬಿಕೆಯನ್ನು ರಾಜಿಮಾಡದಿರುವನು. ಹೆಂಡತಿಯು ವಿಶ್ವಾಸಿಯಾಗಿರುವಲ್ಲಿ, ಅವಳು ಸಹ ತನ್ನ ನಂಬಿಕೆಯನ್ನು ರಾಜಿಮಾಡಿಕೊಳ್ಳದಿರುವಳು. (ಅ. ಕೃತ್ಯಗಳು 5:29) ಆದರೆ ಅವಳು ತನ್ನ ಗಂಡನ ತಲೆತನವನ್ನು ಧಿಕ್ಕರಿಸುವುದಿಲ್ಲ. ಅವಳು ಅವನ ಸ್ಥಾನವನ್ನು ಗೌರವಿಸುವಳು ಮತ್ತು ‘ಗಂಡನ ಹಂಗಿನೊಳಗೆ’ ಇರುವಳು.​—⁠ರೋಮಾಪುರ 7:⁠2.

ಬೈಬಲಿನ ವಿವೇಕಯುತ ಮಾರ್ಗದರ್ಶನೆ

19 ಇಂದು ಅನೇಕ ವಿಷಯಗಳು ವಿವಾಹಬಂಧದ ಮೇಲೆ ಒತ್ತಡವನ್ನು ಹಾಕಬಲ್ಲವು. ಕೆಲವು ಪುರುಷರು ತಮ್ಮ ಜವಾಬ್ದಾರಿಗಳನ್ನು ಹೊರಲು ತಪ್ಪಿಹೋಗುತ್ತಾರೆ. ಕೆಲವು ಸ್ತ್ರೀಯರು ತಮ್ಮ ಗಂಡಂದಿರ ತಲೆತನವನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಕೆಲವು ವಿವಾಹಗಳಲ್ಲಿ, ಗಂಡ ಇಲ್ಲವೆ ಹೆಂಡತಿಯ ಮೇಲೆ ದೌರ್ಜನ್ಯವನ್ನು ನಡೆಸಲಾಗುತ್ತದೆ. ಕ್ರೈಸ್ತರಿಗಾದರೊ, ಆರ್ಥಿಕ ಒತ್ತಡಗಳು, ಮಾನವ ಅಪರಿಪೂರ್ಣತೆ ಮತ್ತು ಅನೈತಿಕತೆ ಹಾಗೂ ಮೌಲ್ಯಗಳ ತಿರುಚಲ್ಪಟ್ಟ ಪ್ರಜ್ಞೆಯಿಂದ ಕೂಡಿರುವ ಲೋಕದ ಆತ್ಮವು ಪರಸ್ಪರರ ಕಡೆಗಿನ ಅವರ ನಿಷ್ಠೆಯನ್ನು ಪರೀಕ್ಷೆಗೊಳಪಡಿಸಬಲ್ಲದು. ವಿವಾಹದಲ್ಲಿ ಕೇವಲ ಒಬ್ಬ ಸಂಗಾತಿಯು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುತ್ತಿರುವುದಾದರೂ, ಇದು ಇಬ್ಬರೂ ಅವುಗಳನ್ನು ಅನ್ವಯಿಸದೆ ಇರುತ್ತಿದ್ದ ಸಂದರ್ಭದಲ್ಲಿ ಇರಬಹುದಾದ ಸ್ಥಿತಿಗಿಂತ ಲೇಸು. ಅಷ್ಟುಮಾತ್ರವಲ್ಲದೆ, ಕಷ್ಟಕರ ಪರಿಸ್ಥಿತಿಗಳಲ್ಲೂ ತಮ್ಮ ವಿವಾಹ ಪ್ರತಿಜ್ಞೆಗಳಿಗೆ ತಕ್ಕಂತೆ ಜೀವಿಸುವ ತನ್ನ ಸೇವಕರನ್ನು ಯೆಹೋವನು ಪ್ರೀತಿಸಿ ಬೆಂಬಲಿಸುತ್ತಾನೆ. ಅವನು ಅವರ ನಿಷ್ಠೆಯನ್ನು ಮರೆಯುವುದಿಲ್ಲ.​—⁠ಕೀರ್ತನೆ 18:25; ಇಬ್ರಿಯ 6:10; 1 ಪೇತ್ರ 3:⁠12.

20 ವಿವಾಹಿತ ಸ್ತ್ರೀಪುರುಷರಿಗೆ ಸಲಹೆನೀಡಿದ ಬಳಿಕ ಅಪೊಸ್ತಲ ಪೇತ್ರನು, ಉತ್ತೇಜನದ ಪ್ರೀತಿಭರಿತ ಮಾತುಗಳಿಂದ ಕೊನೆಗೊಳಿಸುತ್ತಾನೆ. ಅವನು ಹೇಳಿದ್ದು: “ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ. ಅಪಕಾರಕ್ಕೆ ಅಪಕಾರವನ್ನು ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.” (1 ಪೇತ್ರ 3:8, 9) ಇದು ಎಲ್ಲರಿಗೂ, ವಿಶೇಷವಾಗಿ ವಿವಾಹಿತ ದಂಪತಿಗಳಿಗೆ ವಿವೇಕಯುತವಾದ ಸಲಹೆಯೇ ಸರಿ!

ನಿಮಗೆ ಜ್ಞಾಪಕವಿದೆಯೊ?

• ಕ್ರೈಸ್ತ ಗಂಡಂದಿರು ಯೇಸುವನ್ನು ಹೇಗೆ ಅನುಕರಿಸುತ್ತಾರೆ?

• ಕ್ರೈಸ್ತ ಹೆಂಡತಿಯರು ಸಭೆಯನ್ನು ಹೇಗೆ ಅನುಕರಿಸುತ್ತಾರೆ?

• ಗಂಡಂದಿರು ಯಾವ ವಿಧದಲ್ಲಿ ಹೆಂಡತಿಯರಿಗೆ ಮಾನಸಲ್ಲಿಸಬಹುದು?

• ಅವಿಶ್ವಾಸಿ ಗಂಡನಿರುವ ಕ್ರೈಸ್ತ ಹೆಂಡತಿಯು ಅನುಸರಿಸಬಲ್ಲ ಅತ್ಯುತ್ತಮ ಮಾರ್ಗಕ್ರಮ ಯಾವುದು?

[ಅಧ್ಯಯನ ಪ್ರಶ್ನೆಗಳು]

1. ವಿವಾಹದ ಕುರಿತಾದ ಸರಿಯಾದ ದೃಷ್ಟಿಕೋನ ಯಾವುದು?

2. (ಎ) ವಿವಾಹಿತ ದಂಪತಿಗಳಿಗೆ ಯಾವ ಸಹಾಯವು ಲಭ್ಯವಿದೆ? (ಬಿ) ವಿವಾಹವನ್ನು ಯಶಸ್ವಿಗೊಳಿಸಲು ಪ್ರಯತ್ನಮಾಡುವುದು ಏಕೆ ಪ್ರಾಮುಖ್ಯವಾಗಿದೆ?

3. (ಎ) ವಿವಾಹಿತ ದಂಪತಿಗಳಿಗೆ ಪೌಲನು ಕೊಟ್ಟ ಸಲಹೆಯನ್ನು ಸಾರಾಂಶಿಸಿರಿ. (ಬಿ) ಯೇಸು ಯಾವ ಉತ್ತಮ ಮಾದರಿಯನ್ನಿಟ್ಟನು?

4. ಗಂಡಂದಿರು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸಬಲ್ಲರು?

5. ಹೆಂಡತಿಯರು ಕ್ರೈಸ್ತ ಸಭೆಯನ್ನು ಹೇಗೆ ಅನುಕರಿಸಬಲ್ಲರು?

6. ಪೇತ್ರನು ಗಂಡಂದಿರಿಗೆ ಯಾವ ಸಲಹೆಯನ್ನು ಕೊಟ್ಟನು, ಮತ್ತು ಇದೇಕೆ ಪ್ರಾಮುಖ್ಯವಾಗಿದೆ?

7. ಗಂಡನೊಬ್ಬನು ತನ್ನ ಹೆಂಡತಿಗೆ ಹೇಗೆ ಮಾನಸಲ್ಲಿಸಬೇಕು?

8, 9. ಸ್ತ್ರೀಯರು ಯಾವ ವಿಧಗಳಲ್ಲಿ ಪುರುಷರಿಗೆ ಸಮಾನರು?

10. ಯಾವ ಅರ್ಥದಲ್ಲಿ ಸ್ತ್ರೀಯರು ‘ಬಲಹೀನ’ರಾಗಿದ್ದಾರೆ?

11. ಗಂಡ ಮತ್ತು ಹೆಂಡತಿ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರೂ ವಿವಾಹವು ಯಾವ ಅರ್ಥದಲ್ಲಿ ಯಶಸ್ವಿಯಾಗಬಲ್ಲದು?

12, 13. ಪೇತ್ರನ ಸಲಹೆಯನ್ನು ಅನುಸರಿಸುತ್ತಾ ಕ್ರೈಸ್ತ ಹೆಂಡತಿಯರು ಅವಿಶ್ವಾಸಿ ಗಂಡಂದಿರಿಗೆ ಹೇಗೆ ಸಹಾಯಮಾಡಬಲ್ಲರು?

14. ಗಂಡಂದಿರು ಅವಿಶ್ವಾಸಿ ಹೆಂಡತಿಯರಿಗೆ ಹೇಗೆ ಸಹಾಯಮಾಡಬಲ್ಲರು?

15, 16. ಒಬ್ಬ ಕ್ರೈಸ್ತ ಹೆಂಡತಿಯ ಯಾವ ರೀತಿಯ ನಡತೆಯು ಅವಿಶ್ವಾಸಿ ಗಂಡನ ಮನಸ್ಸನ್ನು ಗೆಲ್ಲಬಹುದು?

17. ಸಾರಳು ಕ್ರೈಸ್ತ ಹೆಂಡತಿಯರಿಗೆ ಒಂದು ಉತ್ತಮ ಮಾದರಿಯಾಗಿರುವುದು ಹೇಗೆ?

18. ವಿಭಜಿತ ಕುಟುಂಬವೊಂದರಲ್ಲಿರುವಾಗ ಯಾವ ಮೂಲತತ್ತ್ವಗಳನ್ನು ಮನಸ್ಸಿನಲ್ಲಿಡತಕ್ಕದ್ದು?

19. ವಿವಾಹಬಂಧಗಳನ್ನು ಹಾನಿಗೊಳಿಸಬಲ್ಲ ಕೆಲವೊಂದು ಒತ್ತಡಗಳಾವುವು, ಮತ್ತು ಅಂಥ ಒತ್ತಡಗಳನ್ನು ಹೇಗೆ ಪ್ರತಿರೋಧಿಸಸಾಧ್ಯವಿದೆ?

20. ಪೇತ್ರನು ಕ್ರೈಸ್ತರೆಲ್ಲರಿಗೂ ಯಾವ ಸಲಹೆಯನ್ನು ನೀಡುತ್ತಾನೆ?

[ಪುಟ 16ರಲ್ಲಿರುವ ಚಿತ್ರ]

ಕ್ರೈಸ್ತ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಿ ಪರಾಮರಿಸುತ್ತಾನೆ

ಕ್ರೈಸ್ತ ಹೆಂಡತಿಯು ತನ್ನ ಗಂಡನನ್ನು ಗೌರವಿಸಿ ಅವನಿಗೆ ಮಾನಸಲ್ಲಿಸುತ್ತಾಳೆ

[ಪುಟ 17ರಲ್ಲಿರುವ ಚಿತ್ರ]

ಕ್ರೈಸ್ತ ಬೋಧನೆಗಳು ರೋಮನ್‌ ಕಾನೂನಿನಂತಿರದೇ ಗಂಡನು ತನ್ನ ಹೆಂಡತಿಗೆ ಮಾನಸಲ್ಲಿಸುವುದನ್ನು ಅವಶ್ಯಪಡಿಸಿದವು

[ಪುಟ 18ರಲ್ಲಿರುವ ಚಿತ್ರ]

‘ಮಹಾ ಸಮೂಹದ’ ಪುರುಷರೂ ಸ್ತ್ರೀಯರೂ, ಪರದೈಸಿನಲ್ಲಿ ನಿತ್ಯಜೀವವನ್ನು ಎದುರುನೋಡುತ್ತಾರೆ

[ಪುಟ 20ರಲ್ಲಿರುವ ಚಿತ್ರ]

ಸಾರಳು ಅಬ್ರಹಾಮನನ್ನು ತನ್ನ ಯಜಮಾನನೆಂದು ದೃಷ್ಟಿಸಿದಳು