ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಇರುವುದು

ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಇರುವುದು

ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಇರುವುದು

‘ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದಿರುವಂತೆ [ಕ್ರಿಸ್ತನು] ಎಲ್ಲರಿಗೋಸ್ಕರ ಸತ್ತನು.’​—⁠2 ಕೊರಿಂಥ 5:⁠15.

ಅದು, ಯೇಸು ಭೂಮಿಯ ಮೇಲೆ ಕಳೆಯಲಿದ್ದ ಕೊನೆಯ ರಾತ್ರಿಯಾಗಿತ್ತು. ಕೆಲವೇ ತಾಸುಗಳಲ್ಲಿ, ಅವನು ತನ್ನಲ್ಲಿ ನಂಬಿಕೆಯನ್ನು ತೋರಿಸಲಿರುವವರೆಲ್ಲರ ಪರವಾಗಿ ತನ್ನ ಜೀವವನ್ನು ಅರ್ಪಿಸಲಿದ್ದನು. ಆ ರಾತ್ರಿಯಂದು ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ ಅನೇಕ ಪ್ರಾಮುಖ್ಯ ವಿಷಯಗಳನ್ನು ತಿಳಿಸಿದನು. ಅವನು ಅವರಿಗೆ ತಿಳಿಸಿದ ವಿಷಯಗಳಲ್ಲಿ, ತನ್ನ ಹಿಂಬಾಲಕರ ಗುರುತು ಚಿಹ್ನೆಯಾಗಿರಲಿದ್ದ ಒಂದು ಗುಣದ ಕುರಿತಾದ ಆಜ್ಞೆಯೂ ಒಳಗೂಡಿತ್ತು. ಅವನಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”​—⁠ಯೋಹಾನ 13:34, 35.

2 ಸತ್ಯ ಕ್ರೈಸ್ತರು ಪರಸ್ಪರ ಸ್ವತ್ಯಾಗದ ಪ್ರೀತಿಯನ್ನು ತೋರಿಸಬೇಕಾಗಿದೆ ಮತ್ತು ತಮ್ಮ ಸ್ವಂತ ಒಳಿತಿಗಿಂತಲೂ ತಮ್ಮ ಜೊತೆವಿಶ್ವಾಸಿಗಳ ಒಳಿತಿಗೆ ಆದ್ಯತೆ ನೀಡಬೇಕಾಗಿದೆ. ಅವರು ‘ತಮ್ಮ ಸ್ನೇಹಿತರಿಗೋಸ್ಕರ ಪ್ರಾಣವನ್ನು ಕೊಡಲು’ ಸಹ ಹಿಂಜರಿಯಬಾರದು. (ಯೋಹಾನ 15:13) ಆರಂಭದ ಕ್ರೈಸ್ತರು ಈ ಹೊಸ ಆಜ್ಞೆಗೆ ಹೇಗೆ ಪ್ರತಿಕ್ರಿಯಿಸಿದರು? ಎರಡನೆಯ ಶತಮಾನದ ಲೇಖಕನಾದ ಟೆರ್ಟಲ್ಯನನು ಕ್ಷಮಾಯಾಚನೆ (ಇಂಗ್ಲಿಷ್‌) ಎಂಬ ತನ್ನ ಪ್ರಸಿದ್ಧ ಕೃತಿಯಲ್ಲಿ ಕ್ರೈಸ್ತರ ಕುರಿತು ಇತರರು ಹೇಳುತ್ತಿದ್ದ ಈ ಮಾತುಗಳನ್ನು ಉಲ್ಲೇಖಿಸಿದನು: ‘ನೋಡಿ ಅವರು ಹೇಗೆ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ; ಅವರು ಒಬ್ಬರು ಇನ್ನೊಬ್ಬರಿಗಾಗಿ ಪ್ರಾಣವನ್ನೂ ಕೊಡಲು ಸಿದ್ಧರಿದ್ದಾರೆ.’

3 ನಾವು ಸಹ ‘ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಂಡು, ಕ್ರಿಸ್ತನ ನಿಯಮವನ್ನು ನೆರವೇರಿಸಬೇಕು.’ (ಗಲಾತ್ಯ 6:2) ಆದರೆ, ಕ್ರಿಸ್ತನ ನಿಯಮಕ್ಕೆ ವಿಧೇಯರಾಗಿ, ‘ನಮ್ಮ ದೇವರಾಗಿರುವ [ಯೆಹೋವನನ್ನು] ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ ಹಾಗೂ ಪೂರ್ಣಬುದ್ಧಿಯಿಂದ ಪ್ರೀತಿಸಲು ಮತ್ತು ನಮ್ಮ ನೆರೆಯವನನ್ನು ನಮ್ಮಂತೆಯೇ ಪ್ರೀತಿಸಲು’ ಸ್ವಾರ್ಥಭಾವವು ಒಂದು ದೊಡ್ಡ ತಡೆಯಾಗಿದೆ. (ಮತ್ತಾಯ 22:37-39) ನಾವು ಅಪರಿಪೂರ್ಣರಾಗಿರುವುದರಿಂದ ಸ್ವಾರ್ಥಮಗ್ನರಾಗಿರುವ ಪ್ರವೃತ್ತಿ ನಮ್ಮಲ್ಲಿದೆ. ಅಷ್ಟುಮಾತ್ರವಲ್ಲ, ದೈನಂದಿನ ಜೀವಿತದ ಒತ್ತಡ, ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಕಂಡುಬರುವ ಸ್ಪರ್ಧಾತ್ಮಕ ಮನೋಭಾವ ಮತ್ತು ಜೀವನಾವಶ್ಯಕತೆಗಳನ್ನು ಪಡೆದುಕೊಳ್ಳಲಿಕ್ಕಾಗಿರುವ ಹೆಣಗಾಟದ ಫಲಿತಾಂಶವಾಗಿ ಈ ಸಹಜ ಸ್ವಾರ್ಥಭಾವವು ಇನ್ನಷ್ಟು ಅಧಿಕಗೊಳ್ಳುತ್ತದೆ. ಸ್ವಾರ್ಥಭಾವದ ಕಡೆಗಿನ ಈ ಓಲುವಿಕೆಯು ಕಡಿಮೆಯಾಗುತ್ತಿಲ್ಲ. ಅಪೊಸ್ತಲ ಪೌಲನು ಎಚ್ಚರಿಕೆ ನೀಡಿದ್ದು: “ಕಡೇ ದಿವಸಗಳಲ್ಲಿ . . . ಮನುಷ್ಯರು ವಿಪರೀತ ಸ್ವರ್ಥಮಗ್ನರಾಗುವರು.”​—⁠2 ತಿಮೊಥೆಯ 3:​1, 2, ಫಿಲಿಪ್ಸ್‌.

4 ಯೇಸು ತನ್ನ ಭೂಶುಶ್ರೂಷೆಯ ಕೊನೇ ಭಾಗದಲ್ಲಿ ಸ್ವಾರ್ಥಭಾವವನ್ನು ಜಯಿಸುವಂತೆ ತನ್ನ ಶಿಷ್ಯರಿಗೆ ಸಹಾಯಮಾಡಬಲ್ಲ ಮೂರು ಹೆಜ್ಜೆಯ ಕಾರ್ಯಗತಿಯನ್ನು ತಿಳಿಯಪಡಿಸಿದನು. ಅದೇನಾಗಿತ್ತು, ಮತ್ತು ಅವನು ಕೊಟ್ಟ ಸೂಚನೆಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?

ಒಂದು ನಿಶ್ಚಿತ ಮದ್ದು!

5 ಯೇಸು ಉತ್ತರ ಗಲಿಲಾಯದ ಫಿಲಿಪ್ಪನಕೈಸರೈಯದ ಬಳಿ ಸಾರುತ್ತಿದ್ದನು. ಪ್ರಶಾಂತವಾದ ಆ ಸುಂದರ ಕ್ಷೇತ್ರವು, ಸ್ವತ್ಯಾಗದ ಕುರಿತು ಕಲಿಯುವ ಸ್ಥಳವಾಗಿರುವುದಕ್ಕಿಂತಲೂ ಹೆಚ್ಚಾಗಿ ವಿರಾಮಕ್ಕೆ ಸೂಕ್ತವಾದ ಸ್ಥಳವಾಗಿ ಕಂಡುಬಂದಿರಬಹುದು. ಆದರೂ, ಅಲ್ಲಿದ್ದಾಗ ಯೇಸು ತನ್ನ ಶಿಷ್ಯರಿಗೆ, “ತಾನು ಯೆರೂಸಲೇಮಿಗೆ ಹೋಗಿ ಅಲ್ಲಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ” ಎಬ್ಬಿಸಲ್ಪಡುವ ವಿಷಯವನ್ನು ತಿಳಿಸಲಾರಂಭಿಸಿದನು. (ಮತ್ತಾಯ 16:21) ಯೇಸುವಿನ ಶಿಷ್ಯರಿಗೆ ಈ ಹೊಸ ವಿಚಾರವು ಎಷ್ಟು ಆಘಾತಕರವಾಗಿದ್ದಿರಬೇಕು, ಏಕೆಂದರೆ ಅಷ್ಟರ ತನಕ ಅವರು ತಮ್ಮ ಯಜಮಾನನು ಭೂಮಿಯ ಮೇಲೆ ತನ್ನ ರಾಜ್ಯವನ್ನು ಸ್ಥಾಪಿಸುವನೆಂದು ನಿರೀಕ್ಷಿಸಿದ್ದರು!​—⁠ಲೂಕ 19:11; ಅ. ಕೃತ್ಯಗಳು 1:⁠6.

6 ಆ ಕೂಡಲೆ ಪೇತ್ರನು ‘[ಯೇಸುವಿನ] ಕೈ ಹಿಡಿದು​—⁠ಸ್ವಾಮೀ, ದೇವರು ನಿನ್ನನ್ನು ಕಾಯಲಿ [“ನಿನಗೆ ನಿನ್ನ ಬಗ್ಗೆ ಕರುಣೆಯಿರಲಿ,” NW]; ನಿನಗೆ ಹೀಗೆ ಎಂದಿಗೂ ಆಗಬಾರದು ಎಂದು ಆತನನ್ನು ಗದರಿಸುವದಕ್ಕೆ ಪ್ರಾರಂಭಿಸಿದನು.’ ಇದಕ್ಕೆ ಯೇಸು ಹೇಗೆ ಪ್ರತಿಕ್ರಿಯಿಸಿದನು? “ಆತನು ತಿರುಗಿಕೊಂಡು ಪೇತ್ರನಿಗೆ​—⁠ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ ಎಂದು ಹೇಳಿದನು.” ಅವರಿಬ್ಬರ ಮನೋಭಾವಗಳ ನಡುವೆ ಎಂಥ ವ್ಯತ್ಯಾಸವಿತ್ತು! ದೇವರು ತನಗೆ ನೇಮಿಸಿದ್ದ ಸ್ವತ್ಯಾಗದ ಜೀವನಮಾರ್ಗವನ್ನು ಯೇಸು ಸಿದ್ಧಮನಸ್ಸಿನಿಂದ ಅಂಗೀಕರಿಸಿದನು; ಇದು ಕೆಲವೇ ತಿಂಗಳುಗಳಲ್ಲಿ ಅವನನ್ನು ಯಾತನಾ ಕಂಬದ ಮೇಲಿನ ಮರಣಕ್ಕೆ ನಡಿಸಲಿತ್ತು. ಪೇತ್ರನಾದರೋ ಸುಖಕರವಾದ ಜೀವನಮಾರ್ಗವನ್ನು ಶಿಫಾರಸ್ಸುಮಾಡುತ್ತಾ, “ನಿನಗೆ ನಿನ್ನ ಬಗ್ಗೆ ಕರುಣೆಯಿರಲಿ” ಎಂದು ಹೇಳಿದನು. ಹೀಗೆ ಹೇಳುವುದರಲ್ಲಿ ಪೇತ್ರನ ಮನಸ್ಸಿನಲ್ಲಿ ಒಳ್ಳೇ ಉದ್ದೇಶವೇ ಇತ್ತು ಎಂಬುದರಲ್ಲಿ ಸಂಶಯವಿಲ್ಲ. ಆದರೂ, ಯೇಸು ಅವನನ್ನು ಗದರಿಸಿದನು, ಏಕೆಂದರೆ ಆ ಸಂದರ್ಭದಲ್ಲಿ ಪೇತ್ರನು ತನ್ನನ್ನು ಸೈತಾನನಿಂದ ಪ್ರಭಾವಿಸಲ್ಪಡುವಂತೆ ಬಿಟ್ಟುಕೊಟ್ಟಿದ್ದನು. ಪೇತ್ರನು ‘ದೇವರ ಯೋಚನೆಯನ್ನಲ್ಲ, ಬದಲಾಗಿ ಮನುಷ್ಯರ ಯೋಜನೆಯನ್ನು’ ಹೊಂದಿದ್ದನು.​—⁠ಮತ್ತಾಯ 16:22, 23.

7 ಪೇತ್ರನು ಯೇಸುವಿಗೆ ಹೇಳಿದ ಮಾತುಗಳಿಗೆ ಹೋಲುವಂಥ ವಿಚಾರಗಳು ಇಂದು ಕೇಳಿಬರುತ್ತವೆ. ಲೋಕವು ಅನೇಕವೇಳೆ ಒಬ್ಬ ವ್ಯಕ್ತಿಯನ್ನು ‘ನಿನ್ನ ಒಳಿತನ್ನೇ ನೋಡಿಕೊ’ ಅಥವಾ ‘ಅತಿ ಸುಲಭವಾದ ಮಾರ್ಗವನ್ನು ಹಿಡಿ’ ಎಂದು ಉತ್ತೇಜಿಸುತ್ತದೆ. ಆದರೆ, ಯೇಸು ಸಂಪೂರ್ಣವಾಗಿ ಭಿನ್ನವಾದ ಒಂದು ಮನೋಭಾವವನ್ನು ಶಿಫಾರಸ್ಸುಮಾಡಿದನು. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು [“ಯಾತನಾ ಕಂಬವನ್ನು,” NW] ಹೊತ್ತುಕೊಂಡು ನನ್ನ ಹಿಂದೆ ಬರಲಿ [“ಸತತವಾಗಿ ನನ್ನನ್ನು ಹಿಂಬಾಲಿಸಲಿ,” NW].” (ಮತ್ತಾಯ 16:24) ದ ನ್ಯೂ ಇಂಟರ್‌ಪ್ರಿಟರ್ಸ್‌ ಬೈಬಲ್‌ ಹೀಗೆ ಹೇಳುತ್ತದೆ: “ಈ ಮಾತುಗಳು ಇಷ್ಟರ ತನಕ ಶಿಷ್ಯರಾಗಿಲ್ಲದವರಿಗಾಗಿರುವ ಒಂದು ಆಮಂತ್ರಣವಲ್ಲ, ಬದಲಾಗಿ ಕ್ರಿಸ್ತನ ಕರೆಗೆ ಈಗಾಗಲೇ ಪ್ರತಿಕ್ರಿಯಿಸಿರುವಂಥವರು ಶಿಷ್ಯತ್ವದ ಅರ್ಥದ ಕುರಿತು ಧ್ಯಾನಿಸುವಂತೆ ಕೊಡಲ್ಪಟ್ಟ ಒಂದು ಕರೆಯಾಗಿದೆ.” ಆ ಶಾಸ್ತ್ರವಚನದಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು ತಿಳಿಸಿದಂಥ ಮೂರು ಹೆಜ್ಜೆಗಳನ್ನು ವಿಶ್ವಾಸಿಗಳು ಅನುಸರಿಸಬೇಕಾಗಿದೆ. ನಾವೀಗ ಪ್ರತಿಯೊಂದು ಹೆಜ್ಜೆಯನ್ನು ಪ್ರತ್ಯೇಕವಾಗಿ ಪರಿಗಣಿಸೋಣ.

8 ಮೊದಲನೆಯದಾಗಿ, ನಾವು ನಮ್ಮನ್ನು ನಿರಾಕರಿಸಬೇಕು. “ಒಬ್ಬನು ತನ್ನನ್ನು ನಿರಾಕರಿಸುವುದು” ಎಂಬುದಕ್ಕಾಗಿರುವ ಗ್ರೀಕ್‌ ಪದವು, ಸ್ವಾರ್ಥಪರ ಬಯಕೆಗಳನ್ನು ಅಥವಾ ವೈಯಕ್ತಿಕ ಅನುಕೂಲವನ್ನು ಬದಿಗೊತ್ತುವ ಸಿದ್ಧಮನಸ್ಸನ್ನು ಸೂಚಿಸುತ್ತದೆ. ನಮ್ಮನ್ನು ನಿರಾಕರಿಸುವುದರ ಅರ್ಥ ಆಗೊಮ್ಮೆ ಈಗೊಮ್ಮೆ ಮಾತ್ರ ಕೆಲವೊಂದು ಭೋಗಗಳನ್ನು ತ್ಯಾಗಮಾಡುವುದಾಗಿರುವುದಿಲ್ಲ; ಇಲ್ಲವೆ ನಾವು ವೈರಾಗ್ಯವುಳ್ಳವರಾಗಬೇಕು ಅಥವಾ ಆತ್ಮಘಾತುಕರಾಗಬೇಕು ಎಂಬುದೂ ಅದರ ಅರ್ಥವಲ್ಲ. ಬದಲಾಗಿ, ನಮ್ಮ ಇಡೀ ಜೀವಿತವನ್ನು ಮತ್ತು ಅದರಲ್ಲಿ ಒಳಗೂಡಿರುವುದೆಲ್ಲವನ್ನೂ ನಾವು ಯೆಹೋವನಿಗೆ ಸಿದ್ಧಮನಸ್ಸಿನಿಂದ ಒಪ್ಪಿಸಿಕೊಡುವ ಅರ್ಥದಲ್ಲಿ ನಾವು ‘ನಮ್ಮ ಸ್ವಂತ ಸೊತ್ತಾಗಿಲ್ಲ.’ (1 ಕೊರಿಂಥ 6:19, 20) ಮತ್ತು ನಾವು ಸ್ವಾರ್ಥಮಗ್ನರಾಗಿರುವ ಬದಲು ನಮ್ಮ ಜೀವಿತವನ್ನು ದೇವರ ಸೇವೆಯನ್ನು ಮಾಡುವುದರ ಮೇಲೆ ಕೇಂದ್ರೀಕರಿಸುತ್ತೇವೆ. ನಮ್ಮನ್ನು ನಿರಾಕರಿಸುವುದು, ದೇವರ ಚಿತ್ತವನ್ನು ಮಾಡಲು​—⁠ಹೀಗೆ ಮಾಡುವುದು ನಮ್ಮ ಸ್ವಂತ ಅಪರಿಪೂರ್ಣ ಪ್ರವೃತ್ತಿಗಳಿಗೆ ವಿರುದ್ಧವಾಗಿರಬಹುದಾದರೂ​—⁠ನಮಗಿರುವ ದೃಢನಿರ್ಧಾರವನ್ನು ಸೂಚಿಸುತ್ತದೆ. ದೇವರಿಗೆ ನಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಾಗ, ನಾವು ಆತನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡವರಾಗಿದ್ದೇವೆ ಎಂಬುದನ್ನು ತೋರಿಸಿಕೊಡುತ್ತೇವೆ. ಆ ಬಳಿಕ ನಮ್ಮ ಜೀವಿತದ ಉಳಿದ ಸಮಯಾವಧಿಯಲ್ಲೆಲ್ಲಾ ನಾವು ನಮ್ಮ ಸಮರ್ಪಣೆಗನುಸಾರ ಜೀವಿಸಲು ಪ್ರಯತ್ನಿಸುತ್ತೇವೆ.

9 ಎರಡನೆಯ ಹೆಜ್ಜೆ ಯಾವುದೆಂದರೆ, ನಾವು ನಮ್ಮ ಯಾತನಾ ಕಂಬವನ್ನು ಹೊತ್ತುಕೊಳ್ಳಬೇಕು. ಪ್ರಥಮ ಶತಮಾನದಲ್ಲಿ, ಒಂದು ಯಾತನಾ ಕಂಬವು ಕಷ್ಟಾನುಭವ, ಅಪಮಾನ ಮತ್ತು ಮರಣವನ್ನು ಪ್ರತಿನಿಧಿಸುತ್ತಿತ್ತು. ಸಾಮಾನ್ಯವಾಗಿ ಅಪರಾಧಿಗಳನ್ನು ಮಾತ್ರ ಯಾತನಾ ಕಂಬದ ಮೇಲೆ ವಧಿಸಲಾಗುತ್ತಿತ್ತು ಅಥವಾ ಅವರ ದೇಹಗಳನ್ನು ಕಂಬದ ಮೇಲೆ ನೇತುಹಾಕಲಾಗುತ್ತಿತ್ತು. ಈ ಅಭಿವ್ಯಕ್ತಿಯ ಮೂಲಕ ಯೇಸು, ಒಬ್ಬ ಕ್ರೈಸ್ತನು ಲೋಕದ ಭಾಗವಾಗಿಲ್ಲದಿರುವ ಕಾರಣದಿಂದಾಗಿ ಹಿಂಸೆಯನ್ನು, ತಿರಸ್ಕಾರವನ್ನು ಅಥವಾ ಮರಣವನ್ನು ಸಹ ಸ್ವೀಕರಿಸಲು ಸಿದ್ಧನಾಗಿರಬೇಕು ಎಂಬುದನ್ನು ತೋರಿಸಿದನು. (ಯೋಹಾನ 15:18-20) ನಮ್ಮ ಕ್ರೈಸ್ತ ಮಟ್ಟಗಳು ನಮ್ಮನ್ನು ಲೋಕದಿಂದ ಭಿನ್ನವಾಗಿರಿಸುತ್ತವೆ, ಹೀಗಿರುವುದರಿಂದಲೇ ಲೋಕವು ‘ನಮ್ಮನ್ನು ದೂಷಿಸಬಹುದು.’ (1 ಪೇತ್ರ 4:4) ಇದು ಶಾಲೆಯಲ್ಲಿ, ನಮ್ಮ ಕೆಲಸದ ಸ್ಥಳದಲ್ಲಿ ಅಥವಾ ಕುಟುಂಬ ವೃತ್ತದೊಳಗೆ ಸಹ ಸಂಭವಿಸಸಾಧ್ಯವಿದೆ. (ಲೂಕ 9:23) ಆದರೂ, ನಾವು ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಇರುವುದರಿಂದ ನಾವು ಲೋಕದ ತಿರಸ್ಕಾರವನ್ನು ಸಹಿಸಿಕೊಳ್ಳಲು ಸಿದ್ಧರಾಗಿದ್ದೇವೆ. ಯೇಸು ಅಂದದ್ದು: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು.” (ಮತ್ತಾಯ 5:11, 12) ವಾಸ್ತವದಲ್ಲಿ ದೇವರ ಅನುಗ್ರಹವನ್ನು ಪಡೆಯುವುದೇ ಅತಿ ಪ್ರಾಮುಖ್ಯ ಸಂಗತಿಯಾಗಿದೆ.

10 ಮೂರನೆಯದಾಗಿ, ನಾವು ಸತತವಾಗಿ ಅವನನ್ನು ಹಿಂಬಾಲಿಸಬೇಕು ಎಂದು ಯೇಸು ಕ್ರಿಸ್ತನು ಹೇಳಿದನು. ಡಬ್ಲ್ಯೂ. ಇ. ವೈನ್‌ರ ಆ್ಯನ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ಗನುಸಾರ, ಹಿಂಬಾಲಿಸುವುದು ಎಂಬ ಪದವು ಒಬ್ಬ ಒಡನಾಡಿಯಾಗಿರುವುದಕ್ಕೆ, “ಒಂದೇ ಮಾರ್ಗದಲ್ಲಿ ಸಾಗುವವರಾಗಿರುವುದಕ್ಕೆ” ಸೂಚಿತವಾಗಿದೆ. 1 ಯೋಹಾನ 2:6 ಹೀಗೆ ತಿಳಿಸುತ್ತದೆ: “[ದೇವರಲ್ಲಿ] ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ.” ಯೇಸು ಹೇಗೆ ನಡೆದನು? ತನ್ನ ಸ್ವರ್ಗೀಯ ತಂದೆಯ ಕಡೆಗೆ ಮತ್ತು ತನ್ನ ಶಿಷ್ಯರ ಕಡೆಗೆ ಯೇಸುವಿಗಿದ್ದ ಪ್ರೀತಿಯು ಅವನಲ್ಲಿ ಸ್ವಾರ್ಥಭಾವಕ್ಕೆ ಯಾವುದೇ ಆಸ್ಪದವನ್ನು ಕೊಡಲಿಲ್ಲ. “ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ” ಎಂದು ಪೌಲನು ಬರೆದನು. (ರೋಮಾಪುರ 15:3) ಯೇಸು ಆಯಾಸಗೊಂಡಿದ್ದಾಗಲೂ ಹಸಿದಿದ್ದಾಗಲೂ ತನ್ನ ಆವಶ್ಯಕತೆಗಳಿಗಿಂತಲೂ ಹೆಚ್ಚಾಗಿ ಇತರರ ಆವಶ್ಯಕತೆಗಳಿಗೆ ಆದ್ಯತೆ ನೀಡಿದನು. (ಮಾರ್ಕ 6:31-34) ರಾಜ್ಯದ ಕುರಿತು ಸಾರುವ ಹಾಗೂ ಬೋಧಿಸುವ ಕೆಲಸದಲ್ಲಿಯೂ ಯೇಸು ತನ್ನನ್ನು ಹುರುಪಿನಿಂದ ತೊಡಗಿಸಿಕೊಂಡನು. ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿ, ಯೇಸು ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡುವ’ ನಮ್ಮ ನೇಮಕವನ್ನು ನಾವು ಹುರುಪಿನಿಂದ ಪೂರೈಸುವಾಗ ನಾವು ಅವನನ್ನು ಅನುಕರಿಸಬೇಕಲ್ಲವೊ? (ಮತ್ತಾಯ 28:19, 20) ಈ ಎಲ್ಲಾ ವಿಷಯಗಳಲ್ಲಿ ಕ್ರಿಸ್ತನು ನಮಗೋಸ್ಕರ ಒಂದು ಮಾದರಿಯನ್ನಿಟ್ಟನು, ಮತ್ತು ನಾವು ‘ಅವನ ಹೆಜ್ಜೆಜಾಡಿನಲ್ಲಿ ನಡೆಯಬೇಕು.’​—⁠1 ಪೇತ್ರ 2:⁠21.

11 ನಮ್ಮನ್ನು ನಿರಾಕರಿಸುವುದು, ನಮ್ಮ ಯಾತನಾ ಕಂಬವನ್ನು ಹೊತ್ತುಕೊಳ್ಳುವುದು ಮತ್ತು ನಮ್ಮ ಆದರ್ಶಪ್ರಾಯ ವ್ಯಕ್ತಿಯನ್ನು ಸತತವಾಗಿ ಹಿಂಬಾಲಿಸುವುದು ಅತ್ಯಾವಶ್ಯಕವಾದದ್ದಾಗಿದೆ. ಏಕೆಂದರೆ, ಸ್ವತ್ಯಾಗದ ಪ್ರೀತಿಯನ್ನು ತೋರಿಸುವುದರಲ್ಲಿ ಒಂದು ನಿಶ್ಚಿತ ತಡೆಯಾಗಿರುವ ಸ್ವಾರ್ಥಭಾವವನ್ನು ಇದು ಹೊಡೆದೋಡಿಸುತ್ತದೆ. ಅಷ್ಟುಮಾತ್ರವಲ್ಲದೆ ಯೇಸು ಹೇಳಿದ್ದು: “ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಟ್ಟಾನು?”​—⁠ಮತ್ತಾಯ 16:25, 26.

ನಾವು ಇಬ್ಬರು ಯಜಮಾನರಿಗೆ ಸೇವೆಮಾಡಲಾರೆವು

12 ತಮ್ಮನ್ನು ನಿರಾಕರಿಸಿಕೊಳ್ಳುವ ಆವಶ್ಯಕತೆಯನ್ನು ಯೇಸು ತನ್ನ ಶಿಷ್ಯರಿಗೆ ಒತ್ತಿಹೇಳಿ ಕೆಲವು ತಿಂಗಳುಗಳು ಕಳೆದ ಬಳಿಕ, ಐಶ್ವರ್ಯವಂತನಾಗಿದ್ದ ಒಬ್ಬ ಯುವ ಅಧಿಕಾರಿಯು ಅವನ ಬಳಿಗೆ ಬಂದು ಹೇಳಿದ್ದು: “ಬೋಧಕನೇ, ನಾನು ನಿತ್ಯಜೀವವನ್ನು ಪಡೆಯಬೇಕಾದರೆ ಏನು ಒಳ್ಳೇ ಕಾರ್ಯವನ್ನು ಮಾಡಬೇಕು”? ಆಗ ಯೇಸು ಅವನಿಗೆ, “ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೋ” ಎಂದು ಹೇಳಿ, ಆ ಆಜ್ಞೆಗಳಲ್ಲಿ ಕೆಲವನ್ನು ತಿಳಿಸಿದನು. ಅದಕ್ಕೆ ಆ ಯೌವನಸ್ಥನು ಹೇಳಿದ್ದು: “ಇವೆಲ್ಲಕ್ಕೂ ಸರಿಯಾಗಿ ನಡಕೊಂಡಿದ್ದೇನೆ.” ಈ ವ್ಯಕ್ತಿಯು ಯಥಾರ್ಥ ಮನಸ್ಸಿನವನಾಗಿದ್ದನು ಮತ್ತು ಧರ್ಮಶಾಸ್ತ್ರದ ಆಜ್ಞೆಗಳಿಗೆ ವಿಧೇಯನಾಗಲು ತನ್ನಿಂದಾದಷ್ಟು ಮಟ್ಟಿಗೆ ಪ್ರಯತ್ನಿಸಿದ್ದನು ಎಂಬಂತೆ ತೋರುತ್ತದೆ. ಆದುದರಿಂದಲೇ ಅವನು ಕೇಳಿದ್ದು: “ಇನ್ನೇನು ಕಡಿಮೆಯಾಗಿರಬಹುದು?” ಇದಕ್ಕೆ ಉತ್ತರವಾಗಿ ಯೇಸು ಆ ಯೌವನಸ್ಥನಿಗೆ ಒಂದು ಅಪೂರ್ವ ಆಮಂತ್ರಣವನ್ನು ನೀಡುತ್ತಾ ಹೇಳಿದ್ದು: “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು.”​—⁠ಮತ್ತಾಯ 19:16-21.

13 ಆ ಯೌವನಸ್ಥನು ಪೂರ್ಣಪ್ರಾಣದಿಂದ ಯೆಹೋವನ ಸೇವೆಮಾಡಬೇಕಾದರೆ, ತನ್ನ ಜೀವನದಲ್ಲಿನ ದೊಡ್ಡ ಅಪಕರ್ಷಣೆಯನ್ನು ಅಂದರೆ ತನ್ನ ಪ್ರಾಪಂಚಿಕ ಐಶ್ವರ್ಯವನ್ನು ತೊರೆಯುವ ಆವಶ್ಯಕತೆಯಿದೆ ಎಂಬುದನ್ನು ಯೇಸು ಮನಗಂಡನು. ಕ್ರಿಸ್ತನ ನಿಜವಾದ ಶಿಷ್ಯನೊಬ್ಬನು ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಏಕಕಾಲದಲ್ಲಿ ‘ದೇವರನ್ನೂ ಧನವನ್ನೂ ಸೇವಿಸಲಾರನು.’ (ಮತ್ತಾಯ 6:24) ಅವನಿಗೆ ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುವ ಒಂದು ‘ಸರಳವಾದ ಕಣ್ಣು’ (NW) ಆವಶ್ಯಕವಾಗಿದೆ. (ಮತ್ತಾಯ 6:22) ಒಬ್ಬನು ತನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಟ್ಟುಬಿಡುವುದು ಸ್ವತ್ಯಾಗದ ಒಂದು ಕೃತ್ಯವಾಗಿದೆ. ಈ ಪ್ರಾಪಂಚಿಕ ತ್ಯಾಗಕ್ಕೆ ಪ್ರತಿಯಾಗಿ ಯೇಸು ಆ ಯುವ ಅಧಿಕಾರಿಗೆ ಸ್ವರ್ಗದಲ್ಲಿ ಸಂಪತ್ತನ್ನು ಶೇಖರಿಸಿಟ್ಟುಕೊಳ್ಳುವ ಅಮೂಲ್ಯ ಸುಯೋಗವನ್ನು ನೀಡುವ ಪ್ರಸ್ತಾಪ ಮಾಡಿದನು​—⁠ಈ ಸಂಪತ್ತು ಅವನಿಗೆ ನಿತ್ಯಜೀವದ ಅರ್ಥದಲ್ಲಿತ್ತು ಮತ್ತು ಕಾಲಕ್ರಮೇಣ ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಆಳುವ ಪ್ರತೀಕ್ಷೆಗೆ ಮುನ್ನಡಿಸಲಿತ್ತು. ಆದರೆ ಆ ಯೌವನಸ್ಥನು ತನ್ನನ್ನು ನಿರಾಕರಿಸಿಕೊಳ್ಳಲು ಸಿದ್ಧನಿರಲಿಲ್ಲ. ಅವನು “ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು.” (ಮತ್ತಾಯ 19:22) ಯೇಸುವಿನ ಇತರ ಹಿಂಬಾಲಕರಾದರೋ ಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದರು.

14 ಸುಮಾರು ಎರಡು ವರ್ಷಗಳಿಗೆ ಮುಂಚೆ, ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನ ಎಂಬ ನಾಲ್ಕು ಮಂದಿ ಬೆಸ್ತರಿಗೆ ಯೇಸು ತದ್ರೀತಿಯ ಆಮಂತ್ರಣವನ್ನು ನೀಡಿದ್ದನು. ಆ ಸಮಯದಲ್ಲಿ ಅವರಲ್ಲಿ ಇಬ್ಬರು ಮೀನುಗಳನ್ನು ಹಿಡಿಯಲಿಕ್ಕಾಗಿ ಬಲೆಬೀಸುತ್ತಿದ್ದರು ಮತ್ತು ಇನ್ನಿಬ್ಬರು ತಮ್ಮ ಬಲೆಗಳನ್ನು ಸರಿಮಾಡುವುದರಲ್ಲಿ ತಲ್ಲೀನರಾಗಿದ್ದರು. ಯೇಸು ಅವರಿಗೆ ಹೇಳಿದ್ದು: “ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು.” ಆ ನಾಲ್ಕೂ ಮಂದಿ ಅಂತಿಮವಾಗಿ ತಮ್ಮ ಮೀನಿನ ಕಸಬನ್ನು ತೊರೆದು, ತಮ್ಮ ಜೀವನದ ಉಳಿದ ಕಾಲವೆಲ್ಲಾ ಯೇಸುವನ್ನು ಹಿಂಬಾಲಿಸಿದರು.​—⁠ಮತ್ತಾಯ 4:18-22.

15 ಇಂದು ಅನೇಕ ಕ್ರೈಸ್ತರು ಐಶ್ವರ್ಯವಂತನಾಗಿದ್ದ ಆ ಯುವ ಅಧಿಕಾರಿಯ ಮಾದರಿಗೆ ಬದಲಾಗಿ ಆ ನಾಲ್ಕು ಮಂದಿ ಬೆಸ್ತರ ಮಾದರಿಯನ್ನು ಅನುಕರಿಸಿದ್ದಾರೆ. ಯೆಹೋವನ ಸೇವೆಮಾಡಲಿಕ್ಕೋಸ್ಕರ ಅವರು ಈ ಲೋಕದಲ್ಲಿನ ಐಶ್ವರ್ಯ ಹಾಗೂ ಕೀರ್ತಿಯನ್ನು ತ್ಯಾಗಮಾಡಿದ್ದಾರೆ. ಡೆಬ್ರ ತಿಳಿಸುವುದು: “ನಾನು 22 ವರ್ಷದವಳಾಗಿದ್ದಾಗ ಒಂದು ದೊಡ್ಡ ನಿರ್ಣಯವನ್ನು ಮಾಡಬೇಕಾಗಿತ್ತು.” ಅವಳು ವಿವರಿಸುವುದು: “ನಾನು ಸುಮಾರು ಆರು ತಿಂಗಳುಗಳ ವರೆಗೆ ಬೈಬಲ್‌ ಅಧ್ಯಯನ ಮಾಡಿದ್ದೆ, ಮತ್ತು ಯೆಹೋವನಿಗೆ ನನ್ನ ಜೀವನವನ್ನು ಸಮರ್ಪಿಸಲು ಬಯಸಿದೆ. ಆದರೆ ನನ್ನ ಕುಟುಂಬದವರು ಇದನ್ನು ಬಲವಾಗಿ ವಿರೋಧಿಸುತ್ತಿದ್ದರು. ಅವರು ಕೋಟ್ಯಾಧೀಶರಾಗಿದ್ದರು ಮತ್ತು ನಾನು ಒಬ್ಬ ಸಾಕ್ಷಿಯಾಗುವುದು ತಮ್ಮ ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯನ್ನು ತರಬಹುದೆಂದು ಅವರಿಗನಿಸುತ್ತಿತ್ತು. ನನಗೆ ಐಷಾರಾಮದ ಜೀವನ ಬೇಕೊ ಅಥವಾ ಸತ್ಯವು ಬೇಕೊ ಎಂಬುದನ್ನು ನಿರ್ಧರಿಸಲಿಕ್ಕಾಗಿ ಅವರು ನನಗೆ 24 ತಾಸುಗಳ ಕಾಲಾವಧಿಯನ್ನು ಕೊಟ್ಟರು. ಒಂದುವೇಳೆ ನಾನು ಸಾಕ್ಷಿಗಳೊಂದಿಗಿನ ಎಲ್ಲಾ ಸಂಪರ್ಕವನ್ನು ಕಡಿದುಹಾಕದಿರುವಲ್ಲಿ, ನನಗೆ ಆಸ್ತಿಯಲ್ಲಿ ಯಾವುದೇ ಪಾಲನ್ನು ಕೊಡುವುದಿಲ್ಲವೆಂದು ನನ್ನ ಕುಟುಂಬವು ತಿಳಿಸಿತು. ಸರಿಯಾದ ನಿರ್ಣಯವನ್ನು ಮಾಡಲು ಯೆಹೋವನು ನನಗೆ ಸಹಾಯಮಾಡಿದನು ಮತ್ತು ಆ ನಿರ್ಣಯವನ್ನು ಕಾರ್ಯರೂಪಕ್ಕೆ ತರಲಿಕ್ಕಾಗಿ ನನಗೆ ಬಲವನ್ನೂ ದಯಪಾಲಿಸಿದನು. ನಾನು ಕಳೆದ 42 ವರ್ಷಗಳನ್ನು ಪೂರ್ಣ ಸಮಯದ ಸೇವೆಯಲ್ಲಿ ವ್ಯಯಿಸಿದ್ದೇನೆ ಮತ್ತು ಈ ವಿಷಯದಲ್ಲಿ ನನಗೆ ಸ್ವಲ್ಪವೂ ವಿಷಾದವಿಲ್ಲ. ಸ್ವಾರ್ಥಪರ, ಸುಖಭೋಗದ ಜೀವನಶೈಲಿಯನ್ನು ತೊರೆಯುವ ಮೂಲಕ, ನನ್ನ ಕುಟುಂಬ ಸದಸ್ಯರ ನಡುವೆ ನಾನು ನೋಡುವಂಥ ಶೂನ್ಯಭಾವ ಹಾಗೂ ಅಸಂತೋಷದಿಂದ ನಾನು ತಪ್ಪಿಸಿಕೊಂಡಿದ್ದೇನೆ. ನನ್ನ ಗಂಡ ಮತ್ತು ನಾನು, ಸತ್ಯವನ್ನು ಕಲಿಯಲು ನೂರಕ್ಕಿಂತಲೂ ಹೆಚ್ಚು ಜನರಿಗೆ ಸಹಾಯಮಾಡಿದ್ದೇವೆ. ಯಾವುದೇ ಪ್ರಾಪಂಚಿಕ ಐಶ್ವರ್ಯಕ್ಕಿಂತಲೂ ಈ ಆಧ್ಯಾತ್ಮಿಕ ಮಕ್ಕಳು ನನಗೆ ಅತ್ಯಮೂಲ್ಯರಾಗಿದ್ದಾರೆ.” ಯೆಹೋವನ ಇತರ ಲಕ್ಷಾಂತರ ಸಾಕ್ಷಿಗಳಿಗೂ ಇದೇ ರೀತಿಯ ಅನಿಸಿಕೆಗಳಿವೆ. ನಿಮ್ಮ ಕುರಿತಾಗಿ ಏನು?

16 ತಮಗೋಸ್ಕರ ಜೀವಿಸದೆ ಇರುವ ಬಯಕೆಯು, ಸಾವಿರಾರು ಯೆಹೋವನ ಸಾಕ್ಷಿಗಳನ್ನು ಪಯನೀಯರರಾಗಿ ಅಥವಾ ಪೂರ್ಣ ಸಮಯದ ರಾಜ್ಯ ಘೋಷಕರಾಗಿ ಸೇವೆಮಾಡುವಂತೆ ಪ್ರಚೋದಿಸಿದೆ. ಪೂರ್ಣ ಸಮಯದ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಸನ್ನಿವೇಶಗಳು ಅನುಮತಿಸದಿರುವಂಥ ಇತರರು, ಪಯನೀಯರ್‌ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ತಮ್ಮ ಸಾಮರ್ಥ್ಯಕ್ಕನುಸಾರ ತಮ್ಮಿಂದಾದಷ್ಟು ಮಟ್ಟಿಗೆ ರಾಜ್ಯ ಸಾರುವ ಕೆಲಸಕ್ಕೆ ಬೆಂಬಲ ನೀಡುತ್ತಾರೆ. ಹೆತ್ತವರು ತಮ್ಮ ಮಕ್ಕಳಿಗೆ ಆಧ್ಯಾತ್ಮಿಕ ತರಬೇತಿಯನ್ನು ಕೊಡಲಿಕ್ಕಾಗಿ ತಮ್ಮ ಹೆಚ್ಚಿನ ಸಮಯವನ್ನು ವಿನಿಯೋಗಿಸುವಾಗ ಮತ್ತು ವೈಯಕ್ತಿಕ ಅಭಿರುಚಿಗಳನ್ನು ಅವರು ತ್ಯಾಗಮಾಡುವಾಗ, ಅವರು ಸಹ ಇದೇ ರೀತಿಯ ಮನೋಭಾವವನ್ನು ತೋರಿಸುತ್ತಾರೆ. ಒಂದಲ್ಲ ಒಂದು ವಿಧದಲ್ಲಿ, ನಮ್ಮ ಜೀವನದಲ್ಲಿ ರಾಜ್ಯಾಭಿರುಚಿಗಳಿಗೆ ನಾವು ಪ್ರಥಮ ಸ್ಥಾನವನ್ನು ಕೊಡುತ್ತೇವೆ ಎಂಬುದನ್ನು ನಾವೆಲ್ಲರೂ ತೋರಿಸಸಾಧ್ಯವಿದೆ.​—⁠ಮತ್ತಾಯ 6:33.

ಯಾರ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ?

17 ಸ್ವತ್ಯಾಗದ ಪ್ರೀತಿಯನ್ನು ತೋರಿಸುವುದು ಅನುಸರಿಸಲು ಸುಲಭವಾದ ಜೀವನಮಾರ್ಗವೇನಲ್ಲ. ಆದರೆ ಹೀಗೆ ಮಾಡುವಂತೆ ಯಾವುದು ನಮ್ಮನ್ನು ಒತ್ತಾಯಿಸುತ್ತದೆ ಎಂಬುದರ ಕುರಿತು ಆಲೋಚಿಸಿರಿ. ಪೌಲನು ಬರೆದುದು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ . . . ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:14, 15) ಇನ್ನು ಮೇಲೆ ನಾವು ನಮಗೋಸ್ಕರ ಜೀವಿಸದೆ ಇರುವಂತೆ ನಮ್ಮನ್ನು ಒತ್ತಾಯಿಸುವಂಥದ್ದು ಕ್ರಿಸ್ತನ ಪ್ರೀತಿಯೇ ಆಗಿದೆ. ಅದು ಎಷ್ಟು ಪ್ರಬಲವಾದ ಪ್ರಚೋದನೆಯಾಗಿದೆ! ಕ್ರಿಸ್ತನು ನಮಗೋಸ್ಕರ ಸತ್ತದ್ದರಿಂದ, ನಾವು ಅವನಿಗಾಗಿ ಜೀವಿಸಬೇಕೆಂಬ ನೈತಿಕ ಹಂಗನ್ನು ನಾವು ಗ್ರಹಿಸುವುದಿಲ್ಲವೋ? ಏನೇ ಆಗಲಿ, ದೇವರು ಮತ್ತು ಕ್ರಿಸ್ತನು ನಮಗೆ ತೋರಿಸಿರುವ ಗಾಢವಾದ ಪ್ರೀತಿಗಾಗಿರುವ ಕೃತಜ್ಞತೆಯು, ದೇವರಿಗೆ ನಮ್ಮ ಜೀವಿತವನ್ನು ಸಮರ್ಪಿಸಿಕೊಳ್ಳುವಂತೆ ಮತ್ತು ಕ್ರಿಸ್ತನ ಶಿಷ್ಯರಾಗುವಂತೆ ನಮ್ಮನ್ನು ಒತ್ತಾಯಿಸುತ್ತದೆ.​—⁠ಯೋಹಾನ 3:16; 1 ಯೋಹಾನ 4:10, 11.

18 ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಇರುವುದು ಪ್ರಯೋಜನಕಾರಿಯಾಗಿದೆಯೋ? ಐಶ್ವರ್ಯವಂತನಾದ ಯುವ ಅಧಿಕಾರಿಯು ಕ್ರಿಸ್ತನ ಆಮಂತ್ರಣವನ್ನು ತಳ್ಳಿಹಾಕಿ ಅಲ್ಲಿಂದ ಹೊರಟುಹೋದಾಗ, ಪೇತ್ರನು ಯೇಸುವಿಗೆ ಹೇಳಿದ್ದು: “ಇಗೋ, ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ನಮಗೆ ಏನು ದೊರಕುವದು”? (ಮತ್ತಾಯ 19:27) ಪೇತ್ರನು ಹಾಗೂ ಇತರ ಅಪೊಸ್ತಲರು ನಿಜವಾಗಿಯೂ ತಮ್ಮನ್ನು ನಿರಾಕರಿಸಿಕೊಂಡಿದ್ದರು. ಅವರಿಗೆ ಯಾವ ಪ್ರತಿಫಲವು ಸಿಗಲಿತ್ತು? ಯೇಸು ಮೊದಲಾಗಿ ಅವರಿಗೆ ಸ್ವರ್ಗದಲ್ಲಿ ಅವನೊಂದಿಗೆ ಆಳಲಿಕ್ಕಾಗಿ ಸಿಗಲಿರುವ ಸುಯೋಗದ ಕುರಿತು ತಿಳಿಸಿದನು. (ಮತ್ತಾಯ 19:28) ಇದೇ ಸಂದರ್ಭದಲ್ಲಿ ಯೇಸು ತನ್ನ ಹಿಂಬಾಲಕರಲ್ಲಿ ಪ್ರತಿಯೊಬ್ಬರೂ ಪಡೆದುಕೊಳ್ಳಲಿದ್ದ ಆಶೀರ್ವಾದಗಳ ಕುರಿತು ಸೂಚಿಸಿ ಮಾತಾಡಿದನು. ಅವನಂದದ್ದು: “ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ . . . ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.” (ಮಾರ್ಕ 10:29, 30) ನಾವು ಏನನ್ನು ತ್ಯಾಗಮಾಡಿದ್ದೇವೋ ಅದಕ್ಕಿಂತಲೂ ಎಷ್ಟೋ ಹೆಚ್ಚು ನಮಗೆ ದೊರೆಯುತ್ತದೆ. ರಾಜ್ಯದ ನಿಮಿತ್ತ ನಾವು ಬಿಟ್ಟುಬಂದಿರುವ ಯಾವುದೇ ವಿಷಯಕ್ಕಿಂತಲೂ, ನಮ್ಮ ಆಧ್ಯಾತ್ಮಿಕ ತಂದೆತಾಯಂದಿರು, ಅಣ್ಣತಮ್ಮಂದಿರು, ಅಕ್ಕತಂಗಿಯರು ಮತ್ತು ಮಕ್ಕಳು ಅತ್ಯಮೂಲ್ಯರಾಗಿಲ್ಲವೋ? ಅತ್ಯಂತ ಪ್ರತಿಫಲದಾಯಕ ಜೀವನ ಯಾರಿಗಿತ್ತು​—⁠ಪೇತ್ರನಿಗೊ ಅಥವಾ ಐಶ್ವರ್ಯವಂತನಾದ ಆ ಯುವ ಅಧಿಕಾರಿಗೊ?

19 ತನ್ನ ನಡೆನುಡಿಯ ಮೂಲಕ ಯೇಸು, ಸಂತೋಷವು ಕೊಡುವುದರಿಂದ ಮತ್ತು ಸೇವೆಮಾಡುವುದರಿಂದ ಸಿಗುತ್ತದೆಯೇ ಹೊರತು ಸ್ವಾರ್ಥಭಾವದಿಂದಲ್ಲ ಎಂಬುದನ್ನು ತೋರಿಸಿಕೊಟ್ಟನು. (ಮತ್ತಾಯ 20:28; ಅ. ಕೃತ್ಯಗಳು 20:35) ನಾವು ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಕ್ರಿಸ್ತನನ್ನು ಸತತವಾಗಿ ಹಿಂಬಾಲಿಸುವಾಗ, ಸದ್ಯಕ್ಕೆ ಜೀವನದಲ್ಲಿ ಅತ್ಯಧಿಕ ಸಂತೃಪ್ತಿಯನ್ನು ಕಂಡುಕೊಳ್ಳುತ್ತೇವೆ ಮತ್ತು ಭವಿಷ್ಯತ್ತಿನಲ್ಲಿ ಅನಂತ ಜೀವನವನ್ನು ಪಡೆಯುವ ಪ್ರತೀಕ್ಷೆಯನ್ನು ಹೊಂದಿರುತ್ತೇವೆ. ನಾವು ನಮ್ಮನ್ನು ನಿರಾಕರಿಸುವಾಗ, ಯೆಹೋವನು ನಮ್ಮ ಒಡೆಯನಾಗುತ್ತಾನೆ ಎಂಬುದಂತೂ ಸತ್ಯ. ಹೀಗೆ, ನಾವು ದೇವರಿಗೆ ದಾಸರಾಗುತ್ತೇವೆ. ಈ ದಾಸತ್ವವು ಏಕೆ ಪ್ರತಿಫಲದಾಯಕವಾದದ್ದಾಗಿದೆ? ಜೀವನದಲ್ಲಿ ನಾವು ಮಾಡುವ ನಿರ್ಣಯಗಳ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? ಈ ಪ್ರಶ್ನೆಗಳನ್ನು ಮುಂದಿನ ಲೇಖನವು ಚರ್ಚಿಸುವುದು.

ನಿಮಗೆ ನೆನಪಿದೆಯೆ?

• ನಮ್ಮ ಸ್ವಾರ್ಥಪರ ಪ್ರವೃತ್ತಿಗಳನ್ನು ನಾವು ಏಕೆ ಹೊಡೆದೋಡಿಸಬೇಕು?

• ನಮ್ಮನ್ನು ನಿರಾಕರಿಸುವುದು, ಯಾತನಾ ಕಂಬವನ್ನು ಹೊತ್ತುಕೊಳ್ಳುವುದು ಮತ್ತು ಸತತವಾಗಿ ಯೇಸುವನ್ನು ಹಿಂಬಾಲಿಸುವುದರ ಅರ್ಥವೇನು?

• ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಇರುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ?

• ಸ್ವತ್ಯಾಗದ ಜೀವನವನ್ನು ನಡೆಸುವುದು ಏಕೆ ಪ್ರಯೋಜನಕಾರಿಯಾಗಿದೆ?

[ಅಧ್ಯಯನ ಪ್ರಶ್ನೆಗಳು]

1, 2. ಯಾವ ಶಾಸ್ತ್ರೀಯ ಆಜ್ಞೆಯು ಸ್ವಾರ್ಥಭಾವವನ್ನು ಜಯಿಸುವಂತೆ ಯೇಸುವಿನ ಪ್ರಥಮ ಶತಮಾನದ ಹಿಂಬಾಲಕರನ್ನು ಪ್ರಚೋದಿಸಿತು?

3, 4. (ಎ) ನಾವು ಸ್ವಾರ್ಥಭಾವವನ್ನು ಪ್ರತಿರೋಧಿಸಬೇಕು ಏಕೆ? (ಬಿ) ಈ ಲೇಖನದಲ್ಲಿ ನಾವು ಏನನ್ನು ಪರಿಗಣಿಸುವೆವು?

5. ಉತ್ತರ ಗಲಿಲಾಯದಲ್ಲಿ ಸಾರುತ್ತಿದ್ದಾಗ ಯೇಸು ತನ್ನ ಶಿಷ್ಯರಿಗೆ ಯಾವ ವಿಷಯವನ್ನು ತಿಳಿಸಿದನು, ಮತ್ತು ಅದು ಅವರಿಗೆ ಏಕೆ ಆಘಾತಕರವಾದ ಸಂಗತಿಯಾಗಿತ್ತು?

6. ಯೇಸುವು ಪೇತ್ರನನ್ನು ಕಟುವಾಗಿ ಗದರಿಸಿದ್ದೇಕೆ?

7. ಮತ್ತಾಯ 16:24ರಲ್ಲಿ ದಾಖಲಿಸಲ್ಪಟ್ಟಿರುವಂತೆ, ತನ್ನ ಹಿಂಬಾಲಕರು ಅನುಸರಿಸಲಿಕ್ಕಾಗಿ ಯಾವ ಮಾರ್ಗಕ್ರಮವನ್ನು ಯೇಸು ತಿಳಿಯಪಡಿಸಿದನು?

8. ಸ್ವತಃ ನಿಮ್ಮನ್ನು ನಿರಾಕರಿಸುವುದರ ಅರ್ಥವೇನೆಂಬುದನ್ನು ವಿವರಿಸಿರಿ.

9. (ಎ) ಯೇಸು ಭೂಮಿಯ ಮೇಲಿದ್ದ ಸಮಯದಲ್ಲಿ ಯಾತನಾ ಕಂಬವು ಏನನ್ನು ಪ್ರತಿನಿಧಿಸಿತು? (ಬಿ) ಯಾವ ವಿಧದಲ್ಲಿ ನಾವು ನಮ್ಮ ಯಾತನಾ ಕಂಬವನ್ನು ಹೊತ್ತುಕೊಳ್ಳುತ್ತೇವೆ?

10. ಯೇಸುವನ್ನು ಸತತವಾಗಿ ಹಿಂಬಾಲಿಸುವುದರಲ್ಲಿ ಏನು ಒಳಗೂಡಿದೆ?

11. ನಮ್ಮನ್ನು ನಿರಾಕರಿಸುವುದು, ನಮ್ಮ ಯಾತನಾ ಕಂಬವನ್ನು ಹೊತ್ತುಕೊಳ್ಳುವುದು ಮತ್ತು ಯೇಸು ಕ್ರಿಸ್ತನನ್ನು ಸತತವಾಗಿ ಹಿಂಬಾಲಿಸುವುದು ಪ್ರಾಮುಖ್ಯವಾದದ್ದಾಗಿದೆ ಏಕೆ?

12, 13. (ಎ) ಸಲಹೆ ನೀಡುವಂತೆ ಯೇಸುವನ್ನು ಕೇಳಿಕೊಂಡ ಯುವ ಅಧಿಕಾರಿಗೆ ಯಾವುದು ಚಿಂತೆಯ ವಿಷಯವಾಗಿತ್ತು? (ಬಿ) ಆ ಯೌವನಸ್ಥನಿಗೆ ಯೇಸು ಯಾವ ಸಲಹೆಯನ್ನು ನೀಡಿದನು, ಮತ್ತು ಏಕೆ?

14. ತನ್ನನ್ನು ಹಿಂಬಾಲಿಸುವಂತೆ ಯೇಸು ಕೊಟ್ಟ ಆಮಂತ್ರಣಕ್ಕೆ ನಾಲ್ಕು ಮಂದಿ ಬೆಸ್ತರು ಹೇಗೆ ಪ್ರತಿಕ್ರಿಯಿಸಿದರು?

15. ಯೆಹೋವನ ಆಧುನಿಕ ದಿನದ ಒಬ್ಬ ಸಾಕ್ಷಿಯು ಯೇಸುವನ್ನು ಹಿಂಬಾಲಿಸಲು ಹೇಗೆ ತ್ಯಾಗಗಳನ್ನು ಮಾಡಿದಳು?

16. ನಾವು ಇನ್ನು ಮೇಲೆ ನಮಗೋಸ್ಕರ ಜೀವಿಸುವುದಿಲ್ಲ ಎಂಬುದನ್ನು ಹೇಗೆ ತೋರಿಸಸಾಧ್ಯವಿದೆ?

17. ತ್ಯಾಗಗಳನ್ನು ಮಾಡುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ?

18. ಸ್ವತ್ಯಾಗದ ಜೀವನಮಾರ್ಗವು ಏಕೆ ಪ್ರಯೋಜನಕಾರಿಯಾಗಿದೆ?

19. (ಎ) ನಿಜ ಸಂತೋಷವು ಯಾವುದರ ಮೇಲೆ ಅವಲಂಬಿಸಿದೆ? (ಬಿ) ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸುವೆವು?

[ಪುಟ 11ರಲ್ಲಿರುವ ಚಿತ್ರ]

“ಸ್ವಾಮೀ, ನಿನಗೆ ನಿನ್ನ ಬಗ್ಗೆ ಕರುಣೆಯಿರಲಿ”

[ಪುಟ 13ರಲ್ಲಿರುವ ಚಿತ್ರ]

ಯೇಸುವನ್ನು ಹಿಂಬಾಲಿಸುವುದರಿಂದ ಆ ಯುವ ಅಧಿಕಾರಿಯನ್ನು ಯಾವುದು ತಡೆಗಟ್ಟಿತು?

[ಪುಟ 15ರಲ್ಲಿರುವ ಚಿತ್ರಗಳು]

ಪ್ರೀತಿಯು ಹುರುಪಿನ ರಾಜ್ಯ ಘೋಷಕರಾಗಿ ಸೇವೆಮಾಡುವಂತೆ ಯೆಹೋವನ ಸಾಕ್ಷಿಗಳನ್ನು ಪ್ರಚೋದಿಸುತ್ತದೆ