ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು “ಪಿಮ್‌” ಬೈಬಲಿನ ಐತಿಹಾಸಿಕತೆಗೆ ರುಜುವಾತನ್ನು ನೀಡುತ್ತದೆ

ಒಂದು “ಪಿಮ್‌” ಬೈಬಲಿನ ಐತಿಹಾಸಿಕತೆಗೆ ರುಜುವಾತನ್ನು ನೀಡುತ್ತದೆ

ಒಂದು “ಪಿಮ್‌” ಬೈಬಲಿನ ಐತಿಹಾಸಿಕತೆಗೆ ರುಜುವಾತನ್ನು ನೀಡುತ್ತದೆ

ಬೈಬಲಿನಲ್ಲಿ “ಪಿಮ್‌” ಎಂಬ ಪದವು ಕೇವಲ ಒಂದು ಬಾರಿ ಮಾತ್ರ ಕಾಣಸಿಗುತ್ತದೆ. ರಾಜ ಸೌಲನ ಸಮಯದಲ್ಲಿ ಇಸ್ರಾಯೇಲ್ಯರು ತಮ್ಮ ಲೋಹದ ಉಪಕರಣಗಳನ್ನು ಹರಿತಗೊಳಿಸಲು ಫಿಲಿಷ್ಟಿಯ ಕಮ್ಮಾರರ ಬಳಿಯೇ ಹೋಗಬೇಕಿತ್ತು. “ನೇಗಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹರಿತಗೊಳಿಸಲು ಕೊಡಬೇಕಾದ ಕ್ರಯವು ಒಂದು ಪಿಮ್‌ ಆಗಿತ್ತು” ಎಂಬುದಾಗಿ ಬೈಬಲ್‌ ತಿಳಿಸುತ್ತದೆ.​—⁠1 ಸಮುವೇಲ 13:​21, NW.

ಪಿಮ್‌ ಅಂದರೇನು? ಈ ಪ್ರಶ್ನೆಗಾಗಿನ ಉತ್ತರವು, ಸಾ.ಶ. 1907ರಲ್ಲಿ ಪುರಾತನ ಗೆಜೆರ್‌ ಪಟ್ಟಣದ ಪ್ರಾಕ್ತನಶಾಸ್ತ್ರದ ಕಂಡುಹಿಡಿತಗಳಲ್ಲಿ ಮೊದಲ ಪಿಮ್‌ ತೂಕದ ಕಲ್ಲು ದೊರೆಯುವ ತನಕ ಅಜ್ಞಾತವಾಗಿಯೇ ಉಳಿಯಿತು. ಆರಂಭದ ಸಮಯಗಳಲ್ಲಿ ಬೈಬಲ್‌ ಭಾಷಾಂತರಗಾರರಿಗೆ “ಪಿಮ್‌” ಎಂಬ ಈ ಪದವನ್ನು ಭಾಷಾಂತರಿಸುವುದು ಕಷ್ಟಕರವಾಗಿ ತೋರಿತು. ಉದಾಹರಣೆಗೆ, ನಮ್ಮ ಕನ್ನಡ ಬೈಬಲಿನಲ್ಲಿ 1 ಸಮುವೇಲ 13:21ನ್ನು ಹೀಗೆ ಭಾಷಾಂತರಿಸಲಾಗಿದೆ: “ಗುದ್ದಲಿ, ಸಲಿಕೆ, ತ್ರಿಶೂಲ, ಕೊಡಲಿ, ಮುಳ್ಳುಗೋಲು ಇವುಗಳನ್ನು ಹದಮಾಡುವದಕ್ಕೋಸ್ಕರ ಅವರಲ್ಲಿ ಅರ ಮಾತ್ರ ಇತ್ತು.”

ಪಿಮ್‌ ಎಂಬುದು ಸರಾಸರಿ 7.82 ಗ್ರ್ಯಾಮ್‌ ತೂಕ ಅಳತೆ, ಅಥವಾ ಇಬ್ರಿಯರ ಮೂಲ ತೂಕವಾದ ಶೆಕೆಲ್‌ನ ಹೆಚ್ಚುಕಡಿಮೆ ಮೂರರಲ್ಲಿ ಎರಡಂಶವಾಗಿತ್ತು ಎಂಬುದನ್ನು ವಿದ್ವಾಂಸರು ಇಂದು ತಿಳಿದುಕೊಂಡಿದ್ದಾರೆ. ಇಸ್ರಾಯೇಲ್ಯರು ತಮ್ಮ ಲೋಹದ ಉಪಕರಣಗಳನ್ನು ಹರಿತಗೊಳಿಸಲು ಫಿಲಿಷ್ಟಿಯರಿಗೆ ನೀಡಬೇಕಾದ ಕ್ರಯವು ಒಂದು ಪಿಮ್‌ ತೂಕದಷ್ಟು ಬೆಳ್ಳಿಯ ತುಣುಕುಗಳಾಗಿತ್ತು. ಸಾ.ಶ.ಪೂ. 607ರಲ್ಲಿ ಯೆಹೂದ ರಾಜ್ಯದ ಮತ್ತು ಅದರ ರಾಜಧಾನಿಯಾದ ಯೆರೂಸಲೇಮ್‌ನ ಪತನದೊಂದಿಗೆ ಶೆಕೆಲ್‌ ತೂಕ ಪದ್ಧತಿಯ ಉಪಯೋಗವು ಸಹ ನಿಂತುಹೋಯಿತು. ಹಾಗಾದರೆ, ಪಿಮ್‌ ತೂಕವು ಇಬ್ರಿಯ ಮೂಲಪಾಠದ ಐತಿಹಾಸಿಕತೆಗೆ ಹೇಗೆ ರುಜುವಾತನ್ನು ನೀಡುತ್ತದೆ?

ಒಂದನೇ ಸಮುವೇಲ ಪುಸ್ತಕವನ್ನು ಸೇರಿಸಿ ಹೀಬ್ರು ಶಾಸ್ತ್ರವಚನಗಳ ಮೂಲಪಾಠಗಳು, ಸಾ.ಶ.ಪೂ. ಎರಡರಿಂದ ಒಂದನೇ ಶತಮಾನದಲ್ಲಿ ಅಂದರೆ ಗ್ರೀಕ್‌ ಸಂಸ್ಕೃತಿಯಿದ್ದ ರೋಮನ್‌ ಸಮಯದಷ್ಟು ಇತ್ತೀಚೆಗೆ ಬರೆಯಲ್ಪಟ್ಟವುಗಳಾಗಿವೆ ಎಂದು ಕೆಲವು ವಿದ್ವಾಂಸರು ಪ್ರತಿಪಾದಿಸುತ್ತಾರೆ. ಆದುದರಿಂದ, ಅವು “‘ಐತಿಹಾಸಿಕವಲ್ಲ’ ಮತ್ತು ‘ಬೈಬಲಿನ’ ಅಥವಾ ‘ಪುರಾತನ ಇಸ್ರಾಯೇಲಿನ’ ಕುರಿತು ನಿಜ ಐತಿಹಾಸಿಕ ಮಾಹಿತಿಯನ್ನು ಒದಗಿಸಲು ಸ್ವಲ್ಪವೇ ಮಹತ್ವ ಇಲ್ಲವೆ ಯಾವುದೇ ಮಹತ್ವ ಅವುಗಳಿಗಿಲ್ಲ. ಅವು ಆಧುನಿಕ ಯೆಹೂದ್ಯರ ಮತ್ತು ಕ್ರೈಸ್ತರ ಸಾಹಿತ್ಯದ ಕಲ್ಪಿತ ಕಥೆಗಳಾಗಿವೆ ಅಷ್ಟೇ.”

ಆದರೆ, 1 ಸಮುವೇಲ 13:21ರಲ್ಲಿ ದಾಖಲಿಸಲ್ಪಟ್ಟಿರುವ ಪಿಮ್‌ ತೂಕವನ್ನು ಸೂಚಿಸುತ್ತಾ ‘ಸಮೀಪ ಪೌರಾತ್ಯ’ ಪ್ರಾಕ್ತನಶಾಸ್ತ್ರ ಮತ್ತು ಮಾನವಶಾಸ್ತ್ರದ ಪ್ರೊಫೆಸರರಾದ ವಿಲ್ಯಮ್‌ ಜಿ. ಡೆವರ್‌ ಹೇಳುವುದು: “ಈ ತೂಕವು ಕಣ್ಮರೆಯಾಗಿ ಮರೆತುಹೋಗಿ ಹಲವಾರು ಶತಮಾನಗಳು ಕಳೆದ ಅನಂತರ ಗ್ರೀಕ್‌ ಸಂಸ್ಕೃತಿಯ ರೋಮನ್‌ ಸಮಯದಲ್ಲಿ ಜೀವಿಸಿದ ಬರಹಗಾರರು ಇದರ ಬಗ್ಗೆ ‘ಕಲ್ಪಿಸಿ ಬರೆದಿರಲು’ ಸಾಧ್ಯವೇ ಇಲ್ಲ. ವಾಸ್ತವದಲ್ಲಿ, ಕ್ರಿ. ಶ. 20ನೇ ಶತಮಾನದ ಆರಂಭದಲ್ಲಿ ಪಿಮ್‌ ಎಂಬ ಹೀಬ್ರು ಪದವು ಬರೆಯಲ್ಪಟ್ಟಿದ್ದ ಮೊದಲ ಒಂದು ವಸ್ತು ದೊರಕುವ ತನಕ . . . ಬೈಬಲ್‌ ಗ್ರಂಥಪಾಠದ ಈ ಚಿಕ್ಕ ಭಾಗವನ್ನು ಯಾರೂ ಅರ್ಥಮಾಡಿಕೊಂಡಿರಲಿಲ್ಲ.” ಪ್ರೊಫೆಸರ್‌ ಮುಂದುವರಿಸುವುದು: “ಬೈಬಲಿನಲ್ಲಿರುವ ಎಲ್ಲಾ ಕಥೆಗಳು ಗ್ರೀಕ್‌ ಸಂಸ್ಕೃತಿಯ ರೋಮನ್‌ ಸಮಯಾವಧಿಯಲ್ಲಿ ಬರೆದ ‘ಕಲ್ಪಿತ ಕಥೆಗಳಾಗಿರುವಲ್ಲಿ,’ ಈ ನಿರ್ದಿಷ್ಟ ಕಥೆಯು ಹೀಬ್ರು ಬೈಬಲಿನಲ್ಲಿ ಹೇಗೆ ಕಾಣಿಸಿಕೊಂಡಿತು? ಒಬ್ಬನು ಒಂದುವೇಳೆ, ಪಿಮ್‌ ಪದವನ್ನೊಳಗೊಂಡಿರುವ ಘಟನೆಯು ‘ಕೇವಲ ಒಂದು ಚಿಕ್ಕ ವಿವರ’ ಎಂದು ಹೇಳಬಹುದು. ಅದು ನಿಜ; ಆದರೆ ನಮ್ಮೆಲ್ಲರಿಗೆ ತಿಳಿದಂತೆ ‘ಇತಿಹಾಸವು ಚಿಕ್ಕ ಚಿಕ್ಕ ವಿವರಗಳಿಂದಲೇ ರಚಿತವಾಗಿದೆ.’”

[ಪುಟ 29ರಲ್ಲಿರುವ ಚಿತ್ರ]

ಪಿಮ್‌ ತೂಕವು ಶೆಕೆಲ್‌ನ ಸುಮಾರು ಮೂರರಲ್ಲಿ ಎರಡಂಶವಾಗಿತ್ತು