ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಪದ್ಮರಾಗ ಮಣಿಯಂತೆ’

‘ಪದ್ಮರಾಗ ಮಣಿಯಂತೆ’

‘ಪದ್ಮರಾಗ ಮಣಿಯಂತೆ’

ಅಪೊಸ್ತಲ ಯೋಹಾನನು ಸ್ವರ್ಗದಲ್ಲಿನ ಒಂದು ಮಹಿಮಾಭರಿತ ಸಿಂಹಾಸನದ ದರ್ಶನವನ್ನು ಕಂಡನು. ಸಿಂಹಾಸನದಲ್ಲಿ ಕೂತಿದ್ದವನು “ಸೂರ್ಯಕಾಂತ” [ಇಂಗ್ಲಿಷ್‌ನಲ್ಲಿ ಜ್ಯಾಸ್ಪರ್‌] ಮಣಿಯಂತೆ ಕಾಣುತ್ತಿದ್ದನು. ಆತನು ‘ಪದ್ಮರಾಗ ಮಣಿಯಂತೆಯೂ’ ಕಾಣುತ್ತಿದ್ದನು. (ಪ್ರಕಟನೆ 4:​2, 3) ಇವು ಯಾವ ರೀತಿಯ ಮಣಿಗಳು?

ಇವು ಮೇಲ್ಮೈಯಲ್ಲಿ ಹೊಳಪಿರುವ ಅಪಾರದರ್ಶಕ ಮಣಿಗಳಾಗಿರಲ್ಲಿಲ್ಲ. ಪುರಾತನ ಕಾಲಗಳಲ್ಲಿ, “ಸೂರ್ಯಕಾಂತ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಗ್ರೀಕ್‌ ಪದವು ವಿವಿಧ ಬಣ್ಣಗಳ ಮಣಿಗಳನ್ನು ಸೂಚಿಸಲು ಉಪಯೋಗಿಸಲ್ಪಡುತ್ತಿತ್ತು. ಇದರಲ್ಲಿ, ಪಾರದರ್ಶಕವಾದ ಅಮೂಲ್ಯ ರತ್ನಗಳೂ ಸೇರಿದ್ದವು. ಪ್ರಕಟನೆ 4:3ರಲ್ಲಿ ತಿಳಿಸಿರುವ ‘ಸೂರ್ಯಕಾಂತ ಮಣಿಯು’ “ಖಂಡಿತವಾಗಿಯೂ ಇಂದು ಲಭ್ಯವಿರುವ ಕಡಿಮೆ ಬೆಲೆಯ ಸೂರ್ಯಕಾಂತ ಮಣಿಯಲ್ಲ” ಎಂಬುದಾಗಿ ಏ. ಟಿ. ರೋಬರ್ಟ್ಸನ್‌ರವರು ಹೊಸ ಒಡಂಬಡಿಕೆಯಲ್ಲಿ ಶಬ್ದಚಿತ್ರಣಗಳು (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. ಅಷ್ಟುಮಾತ್ರವಲ್ಲದೆ, ಮುಂದಕ್ಕೆ ಪ್ರಕಟನೆ ಪುಸ್ತಕದಲ್ಲಿ ಸ್ವರ್ಗೀಯ ಪಟ್ಟಣವಾದ ಯೆರೂಸಲೇಮನ್ನು ಯೋಹಾನನು ವರ್ಣಿಸುವಾಗ, ಅದರ “ಪ್ರಕಾಶವು ಅಮೂಲ್ಯರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು, ಥಳಥಳಿಸುವ ವಜ್ರವೋ [“ಸೂರ್ಯಕಾಂತ ಮಣಿಯೋ,” NW] ಎಂಬಂತೆ ಕಾಣಿಸಿತು” ಎಂದು ತಿಳಿಸುತ್ತಾನೆ. (ಪ್ರಕಟನೆ 21:​10, 11) ಇಲ್ಲಿ ಯೋಹಾನನು ಸೂಚಿಸಿರುವ ಮಣಿಗಳು, ಬೆಳಕು ಹಾದುಹೋಗುವಂಥ ಪಾರದರ್ಶಕ ಮಣಿಗಳಾಗಿದ್ದವೆಂಬುದು ವ್ಯಕ್ತ.

ಯೋಹಾನನ ದರ್ಶನದಲ್ಲಿ ಸಿಂಹಾಸನಾರೂಢನಾಗಿರುವವನು ಎಂಬುದು ವಿಶ್ವದಲ್ಲಿಯೇ ಅತಿ ಮಹಿಮಾಭರಿತ ವ್ಯಕ್ತಿಯಾದ ಯೆಹೋವ ದೇವರನ್ನು ಸೂಚಿಸುತ್ತದೆ. ಆತನು ಅತ್ಯುನ್ನತ ಮಟ್ಟದಲ್ಲಿ ನಿರ್ಮಲನೂ ಪರಿಶುದ್ಧನೂ ಆಗಿದ್ದಾನೆ. ಇದಕ್ಕೆ ಹೊಂದಿಕೆಯಲ್ಲಿ ಅಪೊಸ್ತಲ ಯೋಹಾನನು ಬರೆದದ್ದು: “ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಎಷ್ಟು ಮಾತ್ರವೂ ಕತ್ತಲೆಯಿಲ್ಲ.” (1 ಯೋಹಾನ 1:⁠5) ಆದುದರಿಂದ, ‘ಯೆಹೋವನು ಶುದ್ಧನಾಗಿರುವಂತೆಯೇ ತಮ್ಮನ್ನು ಶುದ್ಧಮಾಡಿಕೊಳ್ಳುವಂತೆ’ ಯೋಹಾನನು ತನ್ನ ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಿದನು.​—⁠1 ಯೋಹಾನ 3:⁠3, NW.

ದೇವರಿಂದ ನಾವು ಶುದ್ಧರೆಂದು ವೀಕ್ಷಿಸಲ್ಪಡಬೇಕಾದರೆ ಏನು ಮಾಡಬೇಕು? ನಮ್ಮ ಪಾಪಗಳ ಕ್ಷಮೆಗಾಗಿ ಕ್ರಿಸ್ತನು ಸುರಿಸಿದ ರಕ್ತದಲ್ಲಿ ನಂಬಿಕೆಯನ್ನಿಡುವುದು ಖಂಡಿತವಾಗಿಯೂ ಅಗತ್ಯವಾಗಿದೆ. ಅಷ್ಟುಮಾತ್ರವಲ್ಲದೆ, ಕ್ರಮವಾಗಿ ಬೈಬಲನ್ನು ಅಧ್ಯಯನಮಾಡುವ ಮತ್ತು ಅದರ ಬೋಧನೆಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ನಾವು ‘ಬೆಳಕಿನಲ್ಲಿ ನಡೆಯುತ್ತಾ’ ಇರಬೇಕು.​—⁠1 ಯೋಹಾನ 1:⁠7.