ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ಸ್ತುತಿಸುವ ಯುವ ಜನರು ತಮ್ಮ ಜೀವನವನ್ನು ಉತ್ತಮಗೊಳಿಸುತ್ತಾರೆ

ಯೆಹೋವನನ್ನು ಸ್ತುತಿಸುವ ಯುವ ಜನರು ತಮ್ಮ ಜೀವನವನ್ನು ಉತ್ತಮಗೊಳಿಸುತ್ತಾರೆ

“ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”

ಯೆಹೋವನನ್ನು ಸ್ತುತಿಸುವ ಯುವ ಜನರು ತಮ್ಮ ಜೀವನವನ್ನು ಉತ್ತಮಗೊಳಿಸುತ್ತಾರೆ

“ಜೀವನದಲ್ಲಿ ಎಲ್ಲಾ ಅತ್ಯುತ್ತಮ ವಸ್ತುಗಳನ್ನು ಹೊಂದಿರಲು ನಾನು ಬಯಸುತ್ತೇನೆ!” ಒಬ್ಬ ಹದಿಹರೆಯದ ಹುಡುಗನು ತನ್ನ ಇಚ್ಛೆಗಳನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದನು. ಆದರೆ ಒಬ್ಬ ಯುವ ವ್ಯಕ್ತಿಯು ಜೀವನದಲ್ಲಿ ಅತ್ಯುತ್ತಮವಾದದ್ದನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ? ಬೈಬಲ್‌ ಇದಕ್ಕೆ ನೇರವಾದ ಉತ್ತರವನ್ನು ಒದಗಿಸುತ್ತದೆ: “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಮನಸ್ಸಿನಲ್ಲಿ ಇಟ್ಟುಕೊ!”​—⁠ಪ್ರಸಂಗಿ 12:​1, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌.

ಯೆಹೋವನನ್ನು ಸ್ತುತಿಸುವುದು ಮತ್ತು ಸೇವಿಸುವುದು ವಯಸ್ಕರಿಗೆ ಮಾತ್ರವೇ ಸೀಮಿತವಾಗಿಲ್ಲ. ಎಲ್ಕಾನ ಮತ್ತು ಹನ್ನಳ ಮಗನಾದ ಸಮುವೇಲನು ದೇವದರ್ಶನಗುಡಾರದಲ್ಲಿ ಯೆಹೋವನಿಗೆ ಸೇವೆಸಲ್ಲಿಸುವಾಗ ಇನ್ನೂ ಒಬ್ಬ ಚಿಕ್ಕ ಹುಡುಗನಾಗಿದ್ದನು. (1 ಸಮುವೇಲ 1:19, 20, 24; 2:11) ಚಿಕ್ಕ ಪ್ರಾಯದ ಇಬ್ರಿಯ ಹುಡುಗಿಯೊಬ್ಬಳು ಸಿರಿಯದ ಸೈನ್ಯಾಧಿಕಾರಿಯಾಗಿದ್ದ ನಾಮಾನನಿಗೆ ಕುಷ್ಠರೋಗದಿಂದ ವಾಸಿಹೊಂದಲು ಪ್ರವಾದಿಯಾದ ಎಲೀಷನ ಬಳಿಗೆ ಹೋಗುವಂತೆ ಹೇಳುವ ಮೂಲಕ ಯೆಹೋವನಲ್ಲಿದ್ದ ತನ್ನ ಅನನ್ಯ ವಿಶ್ವಾಸವನ್ನು ಪ್ರದರ್ಶಿಸಿದಳು. (2 ಅರಸುಗಳು 5:​2, 3) ಕೀರ್ತನೆ 148:​7, 12, 13ರಲ್ಲಿ, ಹುಡುಗರೂ ಹುಡುಗಿಯರೂ ಯೆಹೋವನನ್ನು ಸ್ತುತಿಸುವಂತೆ ಹೇಳಲಾಗಿದೆ. * ಯೇಸು ಕೇವಲ 12 ವರುಷದವನಾಗಿದ್ದಾಗ, ತನ್ನ ತಂದೆಯ ಸೇವೆಯಲ್ಲಿ ಅತ್ಯಾಸಕ್ತಿಯನ್ನು ತೋರಿಸಿದನು. (ಲೂಕ 2:​41-49) ಶಾಸ್ತ್ರವಚನಗಳಿಂದ ತರಬೇತಿಯನ್ನು ಹೊಂದಿದ್ದ ಕಾರಣ ಕೆಲವು ಹುಡುಗರು ಯೇಸುವನ್ನು ದೇವಾಲಯದಲ್ಲಿ ಕಂಡೊಡನೆ ಈ ರೀತಿಯಾಗಿ ಕೂಗಿದರು: “ದಾವೀದನ ಕುಮಾರನಿಗೆ ಜಯಜಯ.”​—⁠ಮತ್ತಾಯ 21:​15, 16.

ಇಂದು ಯೆಹೋವನನ್ನು ಸ್ತುತಿಸುವುದು

ಇಂದು, ಯೆಹೋವನ ಸಾಕ್ಷಿಗಳ ಮಧ್ಯೆಯಿರುವ ಅನೇಕ ಯುವ ಜನರು ತಮ್ಮ ನಂಬಿಕೆಗಳ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ಅದರ ಕುರಿತು ಇತರರೊಂದಿಗೆ ಶಾಲೆಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಧೈರ್ಯದಿಂದ ಮಾತಾಡುತ್ತಾರೆ. ಎರಡು ಉದಾಹರಣೆಗಳನ್ನು ಪರಿಗಣಿಸಿರಿ.

ಬ್ರಿಟನ್‌ನಲ್ಲಿ, 18 ವರುಷದವಳಾದ ಸ್ಟೆಫನೀಯ ತರಗತಿಯಲ್ಲಿ ಗರ್ಭಪಾತ ಮತ್ತು ಇತರ ನೀತಿಶಾಸ್ತ್ರ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿತ್ತು. ಗರ್ಭಪಾತವು ಈಗ ಸಾಮಾನ್ಯವಾಗಿ ಎಲ್ಲರಿಂದ ಸ್ವೀಕೃತವಾಗಿದೆ ಮತ್ತು ಯಾವ ಸ್ತ್ರೀಯಾದರೂ ಈ ಪದ್ಧತಿಯನ್ನು ವಿರೋಧಿಸಲು ಯಾವುದೇ ಕಾರಣವಿಲ್ಲ ಎಂದು ಅಧ್ಯಾಪಕನು ತಿಳಿಸಿದನು. ತರಗತಿಯಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಅಧ್ಯಾಪಕನ ದೃಷ್ಟಿಕೋನದೊಂದಿಗೆ ಸಹಮತದಲ್ಲಿದ್ದರು. ಆದರೆ, ಸ್ಟೆಫನೀಯಳಿಗೆ ತನ್ನ ಬೈಬಲ್‌ ಆಧಾರಿತ ನಿಲುವನ್ನು ತಿಳಿಸಿ ಸಮರ್ಥಿಸಬೇಕೆಂಬ ಬಲವಾದ ಅನಿಸಿಕೆಯಾಯಿತು. ಸ್ಟೆಫನೀ ಅವಳ ಅಭಿಪ್ರಾಯವನ್ನು ತಿಳಿಸುವಂತೆ ಅಧ್ಯಾಪಕರು ಕೇಳಿಕೊಂಡಾಗ ಅವಳಿಗೆ ತನ್ನ ನಂಬಿಕೆಯ ಕುರಿತು ತಿಳಿಸುವ ಒಂದು ಸಂದರ್ಭ ಒದಗಿಬಂತು. ಆರಂಭದಲ್ಲಿ ಅವಳಿಗೆ ಹೆದರಿಕೆಯಾದರೂ, ಶಾಸ್ತ್ರಾಧಾರಿತ ದೃಷ್ಟಿಕೋನವನ್ನು ತಿಳಿಯಪಡಿಸಲು ಅವಳು ಈ ಸಂದರ್ಭವನ್ನು ಸದುಪಯೋಗಿಸಿದಳು. ವಿಮೋಚನಕಾಂಡ 21:​22-24ರಲ್ಲಿರುವ ಮಾತುಗಳ ತಾತ್ಪರ್ಯವನ್ನು ತಿಳಿಸಿ, ಆ ವಚನಕ್ಕನುಸಾರ ಅಜನಿತ ಮಗುವನ್ನು ಹಾನಿಗೊಳಿಸುವುದೇ ತಪ್ಪಾಗಿರುವಲ್ಲಿ, ಗರ್ಭಪಾತಮಾಡುವುದು ಸಹ ದೇವರ ಚಿತ್ತಕ್ಕೆ ವಿರುದ್ಧವಾಗಿದೆ ಎಂದು ವಿವರಿಸಿದಳು.

ಪುರೋಹಿತ ವರ್ಗಕ್ಕೆ ಸೇರಿದವನಾದ ಆ ಅಧ್ಯಾಪಕನು ಹಿಂದೆಂದೂ ಈ ವಚನಗಳನ್ನು ಓದಿರಲಿಲ್ಲ. ಸ್ಟೆಫನೀ ಧೈರ್ಯದಿಂದ ಸಾಕ್ಷಿನೀಡಿದ್ದರಿಂದ, ಅವಳ ಸಹಪಾಠಿಗಳು ಇತರ ಅನೇಕ ವಿಷಯಗಳ ಕುರಿತು ಅವಳೊಂದಿಗೆ ಉತ್ತಮ ಚರ್ಚೆಗಳನ್ನು ನಡೆಸಿದರು. ಅವಳ ತರಗತಿಯ ಒಬ್ಬ ಹುಡುಗಿಯು ಈಗ ಕ್ರಮವಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ಸ್ವೀಕರಿಸುತ್ತಿದ್ದಾಳೆ, ಮತ್ತು ಸ್ಟೆಫನೀ ದೇವರಿಗೆ ತನ್ನನ್ನು ಸಮರ್ಪಿಸಿಕೊಂಡದ್ದರ ಸಂಕೇತವಾಗಿ ದೀಕ್ಷಾಸ್ನಾನಪಡಕೊಳ್ಳುವುದನ್ನು ನೋಡಲು ಇನ್ನಿಬ್ಬರು ಹುಡುಗಿಯರು ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಕ್ಕೆ ಹಾಜರಾದರು.

ಆರು ವರುಷದವಳಾದ ವಾರೇಟ ದಕ್ಷಿಣ ಅಮೆರಿಕನ್‌ ದೇಶವಾದ ಸುರಿನಾಮದಲ್ಲಿ ವಾಸಿಸುತ್ತಿದ್ದಾಳೆ. ಒಮ್ಮೆ ಅವಳ ಅಧ್ಯಾಪಕಿಗೆ ಶಾಸ್ತ್ರವಚನಗಳಿಂದ ಸಾಂತ್ವನದ ಅಗತ್ಯವಿದೆ ಎಂದು ಮನಗಂಡ ವಾರೇಟ, ತನಗೆ ದೊರೆತ ಆ ಸಂದರ್ಭವನ್ನು ಯೆಹೋವನನ್ನು ಸ್ತುತಿಸಲಿಕ್ಕಾಗಿ ಸದುಪಯೋಗಿಸಿಕೊಂಡಳು. ಒಮ್ಮೆ ಅವಳ ಅಧ್ಯಾಪಕಿ ಮೂರು ದಿವಸ ಶಾಲೆಗೆ ರಜೆಹಾಕಿ ಅನಂತರ ಹಿಂದಿರುಗಿದಾಗ, ತಾನೇಕೆ ರಜೆಹಾಕಿದ್ದೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿದಿದೆಯೊ ಎಂದು ಪ್ರಶ್ನಿಸಿದಳು. “ನಿಮಗೆ ಹುಷಾರಿರಲಿಲ್ಲ, ಅಲ್ಲವೇ?” ಎಂದು ವಿದ್ಯಾರ್ಥಿಗಳು ಉತ್ತರಿಸಿದರು. “ಇಲ್ಲ. ನನ್ನ ಅಕ್ಕ ತೀರಿಕೊಂಡಳು. ನನಗೆ ತುಂಬ ದುಃಖವಾಗುತ್ತಿದೆ. ಆದುದರಿಂದ ನೀವೆಲ್ಲರೂ ಮೌನವಾಗಿರಬೇಕು” ಎಂದು ಅಧ್ಯಾಪಕಿ ಉತ್ತರಿಸಿದಳು.

ಆ ದಿನ ಮಧ್ಯಾಹ್ನ ವಾರೇಟಳ ತಾಯಿ ಮಲಗಿದ್ದಾಗ, ವಾರೇಟಳು ಹಳೆಯ ಪತ್ರಿಕೆಗಳನ್ನು ತೆಗೆದು ಅದರ ಶೀರ್ಷಿಕೆಗಳನ್ನು ಓದುತ್ತಿದ್ದಳು. “ಮರಣದ ನಂತರ ಜೀವನ ಇದೆಯೋ?” ಎಂಬ ಶೀರ್ಷಿಕೆಯಿರುವ 2001, ಜುಲೈ 15ರ ಕಾವಲಿನಬುರುಜು ಪತ್ರಿಕೆ ಅವಳಿಗೆ ಸಿಕ್ಕಿತು. ಬಹಳ ಸಂತೋಷದಿಂದ ಅವಳು ತನ್ನ ತಾಯಿಯನ್ನು ಎಬ್ಬಿಸಿ, “ಅಮ್ಮಾ, ಅಮ್ಮಾ, ಇಲ್ಲಿ ನೋಡಿ! ನನ್ನ ಟೀಚರಿಗೆ ಕೊಡಲು, ಮರಣದ ಕುರಿತು ತಿಳಿಸುವ ಒಂದು ಪತ್ರಿಕೆ ನನಗೆ ಸಿಕ್ಕಿತು!” ಈ ಪತ್ರಿಕೆಯನ್ನು ವಾರೇಟಳು ಒಂದು ಪತ್ರದ ಜೊತೆಗೆ ಅಧ್ಯಾಪಕಿಗೆ ಕಳುಹಿಸಿದಳು. ಆ ಪತ್ರದಲ್ಲಿ ಹೀಗೆ ಬರೆಯಲ್ಪಟ್ಟಿತ್ತು: “ಇದನ್ನು ವಿಶೇಷವಾಗಿ ನಿಮಗೆ ಕಳುಹಿಸುತ್ತಿದ್ದೇನೆ. ಪರದೈಸಿನಲ್ಲಿ ನೀವು ನಿಮ್ಮ ಅಕ್ಕನನ್ನು ಪುನಃ ನೋಡಲಿದ್ದೀರಿ, ಏಕೆಂದರೆ ಯೆಹೋವನು ಎಂದೂ ಸುಳ್ಳು ಹೇಳುವುದಿಲ್ಲ. ತಾನು ಪರದೈಸನ್ನು ತರುತ್ತೇನೆಂದು ಆತನು ವಾಗ್ದಾನಮಾಡಿದ್ದಾನೆ. ಸ್ವರ್ಗದಲ್ಲಿ ಅಲ್ಲ, ಈ ಭೂಮಿಯ ಮೇಲೆಯೇ ಆತನು ಅದನ್ನು ತರಲಿದ್ದಾನೆ.” ಈ ಲೇಖನಗಳು ಒದಗಿಸಿದ ಬೈಬಲ್‌ ಆಧಾರಿತ ಸಾಂತ್ವನಕ್ಕಾಗಿ ಅಧ್ಯಾಪಕಿಯು ತನ್ನ ಗಾಢ ಗಣ್ಯತೆಯನ್ನು ವ್ಯಕ್ತಪಡಿಸಿದಳು.

ಭವಿಷ್ಯತ್ತಿಗಾಗಿ ಕಟ್ಟುವುದು

ಯೆಹೋವನು “ಸಂತೋಷಭರಿತ ದೇವರು” ಮತ್ತು ಯುವ ಜನರು ಸಂತೋಷದಿಂದಿರಬೇಕೆಂದು ಆತನು ಬಯಸುತ್ತಾನೆ. (1 ತಿಮೊಥೆಯ 1:​11, NW) ಆತನ ಸ್ವಂತ ವಾಕ್ಯವು ಹೀಗೆ ಹೇಳುತ್ತದೆ: “ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ.” (ಪ್ರಸಂಗಿ 11:​9) ಯೆಹೋವನು ಈ ಕ್ಷಣವನ್ನು ಮಾತ್ರ ನೋಡದೆ ಭವಿಷ್ಯತ್ತನ್ನು ಸಹ ನೋಡುತ್ತಾನೆ. ಒಳ್ಳೇ ಮತ್ತು ಕೆಟ್ಟ ನಡತೆಯಿಂದುಂಟಾಗುವ ಫಲಿತಾಂಶಗಳನ್ನು ಆತನು ಗ್ರಹಿಸುತ್ತಾನೆ. ಆದುದರಿಂದಲೇ ಆತನ ವಾಕ್ಯವು ಯುವ ಜನರಿಗೆ ಸಲಹೆನೀಡುವುದು: “ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ನೀನು ಹೇಳುವ ವರುಷಗಳೂ ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”​—⁠ಪ್ರಸಂಗಿ 12:⁠1.

ಜೀವವೆಂಬ ಅಮೂಲ್ಯವಾದ ಕೊಡುಗೆಯನ್ನು ಯುವ ಜನರು ಸಂಪೂರ್ಣವಾಗಿ ಆನಂದಿಸಬೇಕೆಂದು ಯೆಹೋವನು ಬಯಸುತ್ತಾನೆ. ದೇವರನ್ನು ಸ್ಮರಿಸುವ ಮತ್ತು ಆತನನ್ನು ಸ್ತುತಿಸುವ ಮೂಲಕ, ಯುವ ಜನರು ಒಂದು ಸಂತೃಪ್ತಿಕರವಾದ ಹಾಗೂ ಪ್ರತಿಫಲದಾಯಕವಾದ ಜೀವನವನ್ನು ನಡೆಸಬಲ್ಲರು. ಪಂಥಾಹ್ವಾನಗಳನ್ನು ಎದುರಿಸಬೇಕಾದಾಗಲೂ, ಅವರು ಧೈರ್ಯದಿಂದ ಹೀಗೆ ಹೇಳಬಲ್ಲರು: “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.”​—⁠ಕೀರ್ತನೆ 121:⁠2.

[ಪಾದಟಿಪ್ಪಣಿ]

^ ಪ್ಯಾರ. 4 ಯೆಹೋವನ ಸಾಕ್ಷಿಗಳ 2005ರ ಕ್ಯಾಲೆಂಡರ್‌ನ (ಇಂಗ್ಲಿಷ್‌) ಮಾರ್ಚ್‌/ಏಪ್ರಿಲ್‌ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. . . . [ಯುವ] ಸ್ತ್ರೀಪುರುಷರು . . . ಯೆಹೋವನನ್ನು ಕೊಂಡಾಡಲಿ.”​—⁠ಕೀರ್ತನೆ 148:​7, 12, 13

[ಪುಟ 8ರಲ್ಲಿರುವ ಚೌಕ]

ಯೆಹೋವನು ಯುವ ಜನರನ್ನು ಬೆಂಬಲಿಸುತ್ತಾನೆ

“ಕರ್ತನಾದ ಯೆಹೋವನೇ, ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ?”​—⁠ಕೀರ್ತನೆ 71:⁠5.

“ಶ್ರೇಷ್ಠವರಗಳಿಂದ ನಿನ್ನ ಆಶೆಯನ್ನು ಪೂರ್ತಿಗೊಳಿಸುತ್ತಾನೆ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರಿಗಿ ಬರಮಾಡುತ್ತಾನೆ.” ​—⁠ಕೀರ್ತನೆ 103:⁠5.