ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಕ್ರಿಸ್ತನು ವೈಯಕ್ತಿಕವಾಗಿ ನಿಮ್ಮ ಮೇಲೆ ಯಾವ ಪ್ರಭಾವವನ್ನು ಬೀರುತ್ತಿದ್ದಾನೆ?

ಯೇಸು ಕ್ರಿಸ್ತನು ವೈಯಕ್ತಿಕವಾಗಿ ನಿಮ್ಮ ಮೇಲೆ ಯಾವ ಪ್ರಭಾವವನ್ನು ಬೀರುತ್ತಿದ್ದಾನೆ?

ಯೇಸು ಕ್ರಿಸ್ತನು ವೈಯಕ್ತಿಕವಾಗಿ ನಿಮ್ಮ ಮೇಲೆ ಯಾವ ಪ್ರಭಾವವನ್ನು ಬೀರುತ್ತಿದ್ದಾನೆ?

ನಾವು ಹಿಂದಿನ ಲೇಖನದಲ್ಲಿ ಪರಿಗಣಿಸಿದ ಮೇರೆಗೆ, ಯೇಸುವಿನ ಬೋಧನೆಗಳು ಲೋಕವ್ಯಾಪಕವಾಗಿ ಗಾಢವಾದ ಪ್ರಭಾವವನ್ನು ಬೀರಿವೆ ಎಂಬುದರಲ್ಲಿ ಯಾವುದೇ ಸಂಶಯ ಇರಸಾಧ್ಯವಿದೆಯೋ? ಆದರೆ ಈಗ ಪ್ರಾಮುಖ್ಯವಾದ ಪ್ರಶ್ನೆಯೇನೆಂದರೆ, “ಯೇಸುವಿನ ಬೋಧನೆಗಳು ವೈಯಕ್ತಿಕವಾಗಿ ನನ್ನ ಮೇಲೆ ಯಾವ ಪ್ರಭಾವವನ್ನು ಬೀರುತ್ತಿವೆ?”

ಯೇಸುವಿನ ಬೋಧನೆಗಳಲ್ಲಿ ವಿವಿಧ ರೀತಿಯ ಅನೇಕ ವಿಷಯಗಳು ಸೇರಿದ್ದವು. ಅವುಗಳಲ್ಲಿ ಕಂಡುಬರುವ ಅಮೂಲ್ಯವಾದ ಪಾಠಗಳು ನಿಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರವನ್ನೂ ಪ್ರಭಾವಿಸಬಲ್ಲವು. ಜೀವಿತದಲ್ಲಿ ಆದ್ಯತೆಗಳನ್ನು ಇಡುವ, ದೇವರೊಂದಿಗೆ ಮಿತ್ರತ್ವವನ್ನು ಬೆಳೆಸಿಕೊಳ್ಳುವ, ಇತರರೊಂದಿಗೆ ಒಳ್ಳೇ ಸಂಬಂಧವನ್ನು ಸ್ಥಾಪಿಸುವ, ಸಮಸ್ಯೆಗಳನ್ನು ಪರಿಹರಿಸುವ, ಮತ್ತು ಹಿಂಸಾತ್ಮಕ ಕೃತ್ಯಗಳಿಂದ ದೂರವಿರುವ ವಿಷಯಗಳ ಕುರಿತು ಯೇಸು ಏನು ಕಲಿಸಿದನೆಂಬುದನ್ನು ನಾವು ನೋಡೋಣ.

ಜೀವಿತದಲ್ಲಿ ಆದ್ಯತೆಗಳನ್ನು ಇಡಿರಿ

ವೇಗಗತಿಯಲ್ಲಿ ಸಾಗುತ್ತಿರುವ ಈ ಲೋಕವು ನಮ್ಮ ಸಮಯ ಮತ್ತು ಶಕ್ತಿಯನ್ನು ಎಷ್ಟರ ಮಟ್ಟಿಗೆ ಕಬಳಿಸಿಬಿಡುತ್ತದೆಂದರೆ ಆಧ್ಯಾತ್ಮಿಕ ವಿಷಯಗಳಿಗಾಗಿ ಅನೇಕವೇಳೆ ಸಮಯವೇ ಉಳಿದಿರುವುದಿಲ್ಲ. ಜೆರೀ ಎಂಬುದಾಗಿ ನಾವು ಕರೆಯುವ ತನ್ನ 20ರ ಪ್ರಾಯದಲ್ಲಿರುವ ಒಬ್ಬ ವ್ಯಕ್ತಿಯನ್ನು ಪರಿಗಣಿಸಿರಿ. ಜೆರೀ, ಆಧ್ಯಾತ್ಮಿಕ ವಿಷಯಗಳ ಕುರಿತು ಚರ್ಚಿಸಲು ಇಷ್ಟಪಡುತ್ತಾನಾದರೂ ಮತ್ತು ಆ ಚರ್ಚೆಯಿಂದ ಅವನೇನನ್ನು ಕಲಿಯುತ್ತಾನೊ ಅದನ್ನು ಗಣ್ಯಮಾಡುತ್ತಾನಾದರೂ ಅವನು ಪ್ರಲಾಪಿಸುವುದು: “ಕ್ರಮವಾಗಿ ಅವುಗಳಲ್ಲಿ ಪಾಲ್ಗೊಳ್ಳಲು ನನಗೆ ಸಮಯವಿಲ್ಲ. ನಾನು ವಾರಕ್ಕೆ ಆರು ದಿವಸ ಕೆಲಸಮಾಡುತ್ತೇನೆ. ಕೇವಲ ಭಾನುವಾರ ನನಗೆ ರಜೆಯಿರುತ್ತದೆ. ಆ ದಿನ ನನಗಿರುವ ಎಲ್ಲಾ ಕೆಲಸಗಳನ್ನು ಮಾಡಿಮುಗಿಸಿದ ಬಳಿಕ ನನಗೆ ತುಂಬ ಸುಸ್ತಾಗುತ್ತದೆ.” ನೀವು ಸಹ ಒಂದುವೇಳೆ ಇದೇ ಪರಿಸ್ಥಿತಿಯಲ್ಲಿರುವುದಾದರೆ, ಪರ್ವತ ಪ್ರಸಂಗದಲ್ಲಿ ಯೇಸು ಏನನ್ನು ಕಲಿಸಿದನೊ ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಬಲ್ಲಿರಿ.

ತನಗೆ ಕಿವಿಗೊಡಲು ಒಟ್ಟುಸೇರಿದ್ದ ಜನರ ಗುಂಪಿಗೆ ಯೇಸು ಹೇಳಿದ್ದು: “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ . . . ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ. ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ? . . . ಹೀಗಿರುವದರಿಂದ​—⁠ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:25-33) ಇದರಿಂದ ನಾವೇನನ್ನು ಕಲಿಯುತ್ತೇವೆ?

ನಾವು ನಮ್ಮ ಮತ್ತು ನಮ್ಮ ಕುಟುಂಬ ಸದಸ್ಯರ ಶಾರೀರಿಕ ಅಗತ್ಯತೆಗಳ ಕಡೆಗೆ ಗಮನಕೊಡುವುದನ್ನು ಅಲಕ್ಷಿಸಬೇಕೆಂದು ಯೇಸು ಇಲ್ಲಿ ತಿಳಿಸುತ್ತಿಲ್ಲ. “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ” ಎಂದು ಬೈಬಲ್‌ ಹೇಳುತ್ತದೆ. (1 ತಿಮೊಥೆಯ 5:8) ಹಾಗಿದ್ದರೂ, ನಾವು ಯೋಗ್ಯ ಆದ್ಯತೆಗಳನ್ನಿಡುತ್ತಾ ಆಧ್ಯಾತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನವನ್ನು ನೀಡುವುದಾದರೆ, ನಮ್ಮ ಇತರ ಅಗತ್ಯತೆಗಳು ಪೂರೈಸಲ್ಪಡುವಂತೆ ದೇವರು ನೋಡಿಕೊಳ್ಳುವನು ಎಂದು ಯೇಸು ವಾಗ್ದಾನಿಸಿದನು. ಇಲ್ಲಿರುವ ಪಾಠವು ಆದ್ಯತೆಗಳನ್ನು ಇಡುವುದರ ಕುರಿತಾಗಿಯೇ ಆಗಿದೆ. ಈ ಬುದ್ಧಿವಾದವನ್ನು ಅನ್ವಯಿಸುವುದು ಸಂತೋಷಕ್ಕೆ ನಡೆಸುತ್ತದೆ. ಏಕೆಂದರೆ, “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”​—⁠ಮತ್ತಾಯ 5:​3, NW.

ದೇವರೊಂದಿಗೆ ಮಿತ್ರತ್ವವನ್ನು ಬೆಳೆಸಿಕೊಳ್ಳಿರಿ

ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು, ದೇವರೊಂದಿಗೆ ಒಳ್ಳೇ ಸಂಬಂಧವನ್ನು ಬೆಳೆಸಿಕೊಳ್ಳುವ ಪ್ರಮುಖತೆಯನ್ನು ಗ್ರಹಿಸುತ್ತಾರೆ. ಒಬ್ಬ ವ್ಯಕ್ತಿಯೊಂದಿಗೆ ನಾವು ಒಳ್ಳೇ ಸಂಬಂಧವನ್ನು ಹೇಗೆ ಸ್ಥಾಪಿಸುತ್ತೇವೆ? ಆ ವ್ಯಕ್ತಿಯನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಪ್ರಯತ್ನಿಸುವ ಮೂಲಕ ಅಲ್ಲವೆ? ಅವನ ದೃಷ್ಟಿಕೋನಗಳು, ಮನೋಭಾವಗಳು, ಸಾಮರ್ಥ್ಯಗಳು, ಸಾಧನೆಗಳು ಮತ್ತು ಇಷ್ಟಾನಿಷ್ಟಗಳ ಕುರಿತು ತಿಳಿದುಕೊಳ್ಳಲು ನಾವು ಸಮಯವನ್ನು ತೆಗೆದುಕೊಳ್ಳುತ್ತೇವೆ. ದೇವರೊಂದಿಗೆ ಮಿತ್ರತ್ವವನ್ನು ಬೆಳೆಸಿಕೊಳ್ಳುವ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಆತನ ಕುರಿತಾದ ನಿಷ್ಕೃಷ್ಟ ಜ್ಞಾನವು ಅಗತ್ಯವಾಗಿದೆ. ಯೇಸು ತನ್ನ ಶಿಷ್ಯರ ಕುರಿತು ದೇವರಿಗೆ ಪ್ರಾರ್ಥಿಸಿದಾಗ ಹೀಗೆ ಹೇಳಿದನು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಹೌದು, ದೇವರೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳಬೇಕಾದರೆ ಆತನ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಆ ಜ್ಞಾನದ ಏಕಮಾತ್ರ ಮೂಲವು ದೇವರ ಪ್ರೇರಿತ ವಾಕ್ಯವಾದ ಬೈಬಲೇ ಆಗಿದೆ. (2 ತಿಮೊಥೆಯ 3:16) ಆದುದರಿಂದ, ಶಾಸ್ತ್ರವಚನಗಳನ್ನು ಅಧ್ಯಯನಮಾಡಲು ನಾವು ಸಮಯವನ್ನು ಬದಿಗಿರಿಸಬೇಕಾಗಿದೆ.

ಆದರೆ, ಕೇವಲ ಜ್ಞಾನವಷ್ಟೇ ಸಾಕಾಗಿರುವುದಿಲ್ಲ. ಅದೇ ಪ್ರಾರ್ಥನೆಯಲ್ಲಿ ಯೇಸು ಹೇಳಿದ್ದು: “ಇವರು [ಅವನ ಶಿಷ್ಯರು] ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ.” (ಯೋಹಾನ 17:⁠6) ನಾವು ಕೇವಲ ದೇವರ ಜ್ಞಾನವನ್ನು ಪಡೆದುಕೊಳ್ಳುವುದು ಮಾತ್ರವಲ್ಲ ಅದಕ್ಕೆ ಹೊಂದಿಕೆಯಲ್ಲಿ ನಡೆಯಬೇಕು. ಇಲ್ಲವಾದರೆ ನಾವು ಹೇಗೆ ದೇವರ ಮಿತ್ರರಾಗಬಲ್ಲೆವು? ಒಬ್ಬ ವ್ಯಕ್ತಿಯ ವಿಚಾರಗಳಿಗೂ ಮೂಲತತ್ತ್ವಗಳಿಗೂ ವಿರುದ್ಧವಾಗಿ ನಾವು ಬೇಕುಬೇಕೆಂದೇ ವರ್ತಿಸುವುದಾದರೆ ಅವನೊಂದಿಗಿರುವ ಮಿತ್ರತ್ವವು ಬೆಳೆಯುವುದೆಂದು ನಿರೀಕ್ಷಿಸಸಾಧ್ಯವೋ? ಹಾಗಾದರೆ, ನಮ್ಮ ಜೀವಿತದ ಪ್ರತಿಯೊಂದು ಹೆಜ್ಜೆಯು ದೇವರ ದೃಷ್ಟಿಕೋನಗಳಿಂದಲೂ ಮೂಲತತ್ತ್ವಗಳಿಂದಲೂ ಮಾರ್ಗದರ್ಶಿಸಲ್ಪಡಬೇಕು. ಆತನ ಎರಡು ಮೂಲತತ್ತ್ವಗಳು, ಇತರ ಮಾನವರೊಂದಿಗಿನ ನಮ್ಮ ಸಂಬಂಧಗಳಲ್ಲಿ ಹೇಗೆ ಅನ್ವಯವಾಗುತ್ತವೆ ಎಂಬುದನ್ನು ಪರಿಗಣಿಸಿರಿ.

ಇತರರೊಂದಿಗೆ ಒಳ್ಳೇ ಸಂಬಂಧವನ್ನು ಸ್ಥಾಪಿಸಿರಿ

ಒಂದು ಸಂದರ್ಭದಲ್ಲಿ ಯೇಸು, ಮಾನವ ಸಂಬಂಧಗಳ ಕುರಿತು ಒಂದು ಅಮೂಲ್ಯವಾದ ಪಾಠವನ್ನು ಕಲಿಸಲು ಒಂದು ಚಿಕ್ಕ ಕಥೆಯನ್ನು ಹೇಳಿದನು. ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನ ಕುರಿತು ಅವನು ತಿಳಿಸಿದನು. ಸೇವಕರಲ್ಲಿ ಒಬ್ಬನು ದೊಡ್ಡ ಮೊತ್ತದ ಸಾಲವನ್ನು ಮಾಡಿದ್ದನು ಮತ್ತು ಅದನ್ನು ತೀರಿಸಲು ಅವನು ಅಶಕ್ತನಾಗಿದ್ದನು. ಈ ಕಾರಣ ಅವನನ್ನೂ ಅವನ ಹೆಂಡತಿಮಕ್ಕಳನ್ನೂ ಮಾರಿ ಸಾಲವನ್ನು ತೀರಿಸಬೇಕೆಂದು ಅರಸನು ಅಪ್ಪಣೆಕೊಟ್ಟನು. ಆ ಸೇವಕನು ಅರಸನ ಕಾಲಿಗೆ ಬಿದ್ದು ಅವನಿಗೆ: “ಒಡೆಯನೇ, ಸ್ವಲ್ಪ ತಾಳಿಕೋ, ನಿನ್ನದೆಲ್ಲಾ ನಾನು ಕೊಟ್ಟು ತೀರಿಸುತ್ತೇನೆ” ಎಂದನು. ಒಡೆಯನು ಕನಿಕರಪಟ್ಟು ಅವನ ಸಾಲವನ್ನೆಲ್ಲಾ ಬಿಟ್ಟುಬಿಟ್ಟನು. ಆದರೆ ಆ ಸೇವಕನು ಹೊರಕ್ಕೆ ಹೋಗಿ ತನಗೆ ಸ್ವಲ್ಪ ಹಣವನ್ನು ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು, ಕೂಡಲೇ ಸಾಲ ತೀರಿಸುವಂತೆ ಅವನಿಗೆ ತಗಾದೆಮಾಡಿದನು. ಈ ಜೊತೆ ಸೇವಕನು ಕಾಲಿಗೆ ಬಿದ್ದು ಬೇಡಿದರೂ, ಆ ಮೊದಲನೇ ಸೇವಕನು ಅವನನ್ನು ಸಾಲ ತೀರಿಸುವ ತನಕ ಸೆರೆಮನೆಯಲ್ಲಿ ಹಾಕಿಸಿದನು. ಈ ಸುದ್ದಿಯು ಅರಸನ ಕಿವಿಗೆ ಮುಟ್ಟಿದಾಗ ಅವನು ಬಹಳವಾಗಿ ಕೋಪಿಸಿಕೊಂಡನು. “ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇಸೇವಕನನ್ನು ಕರುಣಿಸಬಾರದಾಗಿತ್ತೇ” ಎಂದು ಕೇಳಿದನು. ಮತ್ತು ತನ್ನ ಸಾಲಗಾರನನ್ನು ಕ್ಷಮಿಸದ ಆ ಸೇವಕನನ್ನು ಅವನು ಕೊಡಬೇಕಾದ ಎಲ್ಲಾ ಸಾಲವನ್ನು ತೀರಿಸುವ ತನಕ ಸೆರೆಮನೆಗೆ ಹಾಕಿಸಿದನು. ಈ ಕಥೆಯ ಪಾಠವನ್ನು ಎತ್ತಿತೋರಿಸುತ್ತಾ ಯೇಸು ಹೇಳಿದ್ದು: “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.”​—⁠ಮತ್ತಾಯ 18:​23-35.

ಅಪರಿಪೂರ್ಣ ಮಾನವರಾದ ನಮ್ಮಲ್ಲಿ ಅನೇಕ ಕುಂದುಕೊರತೆಗಳಿವೆ. ದೇವರ ವಿರುದ್ಧ ನಾವು ಮಾಡಿರುವ ತಪ್ಪುಗಳ ಕಾರಣ ನಾವು ಕೂಡಿಸಿಟ್ಟಿರುವ ಸಾಲವನ್ನು ನಾವೆಂದಿಗೂ ತೀರಿಸಲು ಶಕ್ತರಾಗಿರುವುದಿಲ್ಲ. ನಾವು ಮಾಡಬಹುದಾದ ಒಂದೇ ಒಂದು ವಿಷಯವು ಆತನಲ್ಲಿ ಕ್ಷಮೆಯಾಚಿಸುವುದೇ ಆಗಿದೆ. ಯೆಹೋವ ದೇವರು ನಮ್ಮ ಎಲ್ಲಾ ತಪ್ಪುಗಳನ್ನು ಕ್ಷಮಿಸಲು ಸಿದ್ಧನಿದ್ದಾನೆ. ಆದರೆ, ಒಂದು ಷರತ್ತಿನ ಮೇಲೆ, ಅದೇನೆಂದರೆ ನಮ್ಮ ವಿರುದ್ಧವಾಗಿ ನಮ್ಮ ಸಹೋದರರು ಮಾಡಿರುವ ಪಾಪಗಳನ್ನು ನಾವು ಕ್ಷಮಿಸಬೇಕು. ಇದು ಎಂಥ ಒಂದು ಶಕ್ತಿಯುತ ಪಾಠವಾಗಿದೆ! ಯೇಸು ತನ್ನ ಹಿಂಬಾಲಕರಿಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು.”​—⁠ಮತ್ತಾಯ 6:​12.

ಸಮಸ್ಯೆಯನ್ನು ಬುಡದಿಂದಲೇ ಕಿತ್ತುಹಾಕಿರಿ

ಮಾನವ ಸ್ವಭಾವವನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಯೇಸು ಪ್ರವೀಣನಾಗಿದ್ದನು. ಸಮಸ್ಯೆಗಳನ್ನು ಪರಿಹರಿಸುವ ವಿಷಯದಲ್ಲಿ ಅವನು ನೀಡಿದ ಸಲಹೆಯು ಅವುಗಳ ಬುಡವನ್ನು ಸರಿಪಡಿಸುವುದಕ್ಕೆ ಸೂಚಿಸುತ್ತಿತ್ತು. ಮುಂದಿನ ಎರಡು ಉದಾಹರಣೆಗಳನ್ನು ಪರಿಗಣಿಸಿರಿ.

“ನರಹತ್ಯ ಮಾಡಬಾರದು; ನರಹತ್ಯ ಮಾಡುವವನು ನ್ಯಾಯವಿಚಾರಣೆಗೆ ಗುರಿಯಾಗುವನೆಂದು ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಷ್ಟೇ. ಆದರೆ ನಾನು ನಿಮಗೆ ಹೇಳುವದೇನಂದರೆ​—⁠ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ [“ಸಿಟ್ಟುಗೊಂಡವನಾಗಿ ಮುಂದುವರಿಯುವ,” NW] ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು” ಎಂಬುದಾಗಿ ಯೇಸು ಹೇಳಿದನು. (ಮತ್ತಾಯ 5:21, 22) ನರಹತ್ಯೆ ಇಲ್ಲವೆ ಕೊಲೆಮಾಡುವ ಸಮಸ್ಯೆಯ ಮೂಲ ಅಥವಾ ಬುಡ ಎಲ್ಲಿದೆ ಎಂಬುದನ್ನು ಇಲ್ಲಿ ಯೇಸು ತೋರಿಸಿಕೊಟ್ಟನು. ಅದು, ಆ ಹಿಂಸಾತ್ಮಕ ಕೃತ್ಯಗಿಂತಲೂ ಹೆಚ್ಚು ಆಳದಲ್ಲಿದೆ, ಅಂದರೆ ಕೊಲೆಗಾರನ ಹೃದಯದಲ್ಲಿ ಬೆಳೆಯುತ್ತಿರುವ ಮನೋಭಾವದಲ್ಲಿ ಅಡಗಿದೆ ಎಂಬುದನ್ನು ಅವನು ತೋರಿಸಿಕೊಟ್ಟನು. ಜನರು ಒಂದುವೇಳೆ ಅಸಮಾಧಾನ ಅಥವಾ ಕೋಪದ ಭಾವನೆಯನ್ನು ಬೆಳೆಸುತ್ತಾ ಹೋಗದಿದ್ದಲ್ಲಿ, ಮುಂದಾಗಿಯೇ ಯೋಜಿಸಿ ಮಾಡುವ ಹಿಂಸಾಕೃತ್ಯವು ಎಂದೂ ಸಂಭವಿಸುತ್ತಿರಲಿಲ್ಲ. ಜನರು ಈ ಬೋಧನೆಯನ್ನು ಅನ್ವಯಿಸುತ್ತಿದ್ದಲ್ಲಿ ಎಷ್ಟೊಂದು ರಕ್ತದೋಕುಳಿಯನ್ನು ತಡೆಗಟ್ಟಬಹುದಿತ್ತು!

ಬಹಳಷ್ಟು ಮನೋವೇದನೆಯನ್ನು ಉಂಟುಮಾಡುತ್ತಿರುವ ಇನ್ನೊಂದು ಸಮಸ್ಯೆಯ ಬುಡವನ್ನು ಯೇಸು ಹೇಗೆ ಗುರುತಿಸಿದನು ಎಂಬುದನ್ನು ಗಮನಿಸಿರಿ. ಅವನು ಜನರ ಗುಂಪಿಗೆ ಹೇಳಿದ್ದು: “ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ​—⁠ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು. ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಟುಬಿಡು.” (ಮತ್ತಾಯ 5:27-29) ಸಮಸ್ಯೆಯು ಆ ಅನೈತಿಕ ವರ್ತನೆಗಿಂತಲೂ ಹೆಚ್ಚು ಆಳದಲ್ಲಿದೆ ಎಂಬುದನ್ನು ಯೇಸು ಕಲಿಸಿದನು. ಆ ವರ್ತನೆಗೆ ಮುಂಚೆ ಮನಸ್ಸಿನಲ್ಲಿ ಬರುವ ಅನೈತಿಕ ಆಸೆಗಳೇ ಆ ಸಮಸ್ಯೆಯನ್ನು ಉಂಟುಮಾಡುತ್ತವೆ. ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಏಳುವ ಅಯೋಗ್ಯವಾದ ಬಯಕೆಗಳ ಕುರಿತಾಗಿಯೇ ಯೋಚಿಸುತ್ತಾ ಇರಲು ನಿರಾಕರಿಸಿ, ಅವುಗಳನ್ನು ತನ್ನ ಮನಸ್ಸಿನಿಂದ ‘ಕಿತ್ತು ಬಿಸಾಡಿದರೆ’ ಆಗ ಅವನು ಮುಂದಕ್ಕೆ ಸಂಭವಿಸಬಹುದಾದ ಅನೈತಿಕ ವರ್ತನೆಯನ್ನು ತಡೆಗಟ್ಟಬಲ್ಲನು.

“ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು”

ಯೇಸುವನ್ನು ಹಿಡಿದುಕೊಟ್ಟ ಮತ್ತು ಕೈದುಮಾಡಿದ ರಾತ್ರಿಯಂದು, ಅವನನ್ನು ರಕ್ಷಿಸಲು ಅವನ ಶಿಷ್ಯರಲ್ಲೊಬ್ಬನು ತನ್ನ ಕತ್ತಿಯನ್ನು ಹಿರಿದನು. ಯೇಸು ಅವನಿಗೆ ಆಜ್ಞಾಪಿಸಿದ್ದು: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಮತ್ತಾಯ 26:52) ಮರುದಿನ ಬೆಳಿಗ್ಗೆ ಪೊಂತ್ಯ ಪಿಲಾತನಿಗೆ ಯೇಸು ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 18:36) ಈ ಬೋಧನೆಯು ಅಪ್ರಾಯೋಗಿಕವೊ?

ಹಿಂಸಾತ್ಮಕ ಮಾರ್ಗವನ್ನು ಉಪಯೋಗಿಸಬಾರದೆಂಬ ಯೇಸುವಿನ ಬೋಧನೆಯ ಕಡೆಗೆ ಆದಿಕ್ರೈಸ್ತರಿಗಿದ್ದ ಮನೋಭಾವವು ಏನಾಗಿತ್ತು? ಯುದ್ಧದ ಕಡೆಗೆ ಆರಂಭದ ಕ್ರೈಸ್ತರ ಮನೋಭಾವ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಇತರರ ವಿರುದ್ಧ ಹಿಂಸಾಚಾರ ಮತ್ತು ಹಾನಿಯನ್ನು ಮಾಡುವುದನ್ನು ಅವು [ಯೇಸುವಿನ ಬೋಧನೆಗಳು] ನಿಷೇಧಿಸಿದ್ದರಿಂದ, ಯುದ್ಧದಲ್ಲಿ ಭಾಗವಹಿಸುವುದು ಸಹ ಅನುಚಿತ ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ. . . . ಆದಿ ಕ್ರೈಸ್ತರು ಯೇಸುವಿನ ಮಾತುಗಳನ್ನು ಚಾಚೂತಪ್ಪದೆ ಅನುಸರಿಸಿದರು, ಮತ್ತು ಕೋಮಲತೆ ಹಾಗೂ ಪ್ರತಿರೋಧಿಸದಿರುವುದರ ಕುರಿತಾದ ಅವನ ಬೋಧನೆಗಳನ್ನು ತಾವು ಅಕ್ಷರಾರ್ಥವಾಗಿ ಪಾಲಿಸಬೇಕೆಂಬುದನ್ನು ಅವರು ಅರ್ಥಮಾಡಿಕೊಂಡರು. ಅವರು ತಮ್ಮ ಧರ್ಮವನ್ನು ಶಾಂತಿಯೊಂದಿಗೆ ಗುರುತಿಸಿದರು; ಯುದ್ಧಗಳಲ್ಲಿ ರಕ್ತಸುರಿಸುವಿಕೆಯು ಒಳಗೂಡಿರುವುದರಿಂದ ಅದನ್ನು ಅವರು ಬಲವಾಗಿ ಖಂಡಿಸಿದರು.” ಕ್ರೈಸ್ತರೆಂದು ಹೇಳಿಕೊಳ್ಳುವ ಎಲ್ಲರೂ ಈ ಬೋಧನೆಯನ್ನು ನಿಜವಾಗಿಯೂ ಅನುಕರಿಸಿರುತ್ತಿದ್ದಲ್ಲಿ ಇತಿಹಾಸವು ಎಷ್ಟೊಂದು ಭಿನ್ನವಾಗಿರುತ್ತಿತ್ತು!

ಯೇಸುವಿನ ಎಲ್ಲಾ ಬೋಧನೆಗಳಿಂದ ನೀವು ಪ್ರಯೋಜನಪಡೆಯಬಲ್ಲಿರಿ

ನಾವು ಈಗಾಗಲೇ ಪರಿಗಣಿಸಿದ ಯೇಸುವಿನ ಬೋಧನೆಗಳು ಸುಂದರವೂ ಸರಳವೂ ಶಕ್ತಿಶಾಲಿಯೂ ಆಗಿವೆ. ಅವನ ಬೋಧನೆಗಳನ್ನು ತಿಳಿದುಕೊಳ್ಳುವ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಮಾನವಕುಲವು ಪ್ರಯೋಜನವನ್ನು ಪಡೆಯಬಲ್ಲದು. *

ಯಾವುದೇ ಮಾನವನಿಂದ ಕಲಿಸಲ್ಪಟ್ಟಿರುವವುಗಳಲ್ಲೇ ಅತ್ಯಂತ ವಿವೇಕಯುತವಾದ ಬೋಧನೆಗಳಿಂದ ನೀವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಲ್ಲಿರಿ ಎಂಬುದನ್ನು ತಿಳಿದುಕೊಳ್ಳುವಂತೆ ನಿಮಗೆ ಸಹಾಯಮಾಡಲಿಕ್ಕಾಗಿ ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ. ಅವರನ್ನು ಸಂಪರ್ಕಿಸಲು ಅಥವಾ ಈ ಪತ್ರಿಕೆಯ 2ನೇ ಪುಟದಲ್ಲಿರುವ ವಿಳಾಸಕ್ಕೆ ಬರೆಯಲು ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತೇವೆ.

[ಪಾದಟಿಪ್ಪಣಿ]

^ ಪ್ಯಾರ. 22 ಯೇಸುವಿನ ಬೋಧನೆಗಳ ಕ್ರಮಬದ್ಧವಾದ ಪರಿಗಣನೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕವನ್ನು ನೋಡಿರಿ.

[ಪುಟ 5ರಲ್ಲಿರುವ ಚಿತ್ರ]

“ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ”

[ಪುಟ 7ರಲ್ಲಿರುವ ಚಿತ್ರ]

ಯೇಸುವಿನ ಬೋಧನೆಗಳು ನಿಮ್ಮ ಜೀವಿತದಲ್ಲಿ ಪ್ರಯೋಜನದಾಯಕವಾದ ಪ್ರಭಾವವನ್ನು ಬೀರಬಲ್ಲವು