ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕವ್ಯಾಪಕವಾಗಿ ಯೇಸು ಬೀರಿರುವ ಪ್ರಭಾವ

ಲೋಕವ್ಯಾಪಕವಾಗಿ ಯೇಸು ಬೀರಿರುವ ಪ್ರಭಾವ

ಲೋಕವ್ಯಾಪಕವಾಗಿ ಯೇಸು ಬೀರಿರುವ ಪ್ರಭಾವ

“ಸುವಾರ್ತಾ ಪುಸ್ತಕದಲ್ಲಿ ದಾಖಲಾಗಿರುವ, ಖಾಸಗಿಯಾಗಿಯೂ ಸಾರ್ವಜನಿಕವಾಗಿಯೂ ಯೇಸು ಹೇಳಿದ ಎಲ್ಲಾ ವಿಷಯಗಳನ್ನು ಅವನು ಎರಡು ತಾಸುಗಳಲ್ಲಿ ಹೇಳಸಾಧ್ಯವಿತ್ತು. ಆದರೂ ಇಷ್ಟೊಂದು ಸ್ವಲ್ಪ ಬೋಧನೆಯು ಎಷ್ಟು ಮನಕಲಕಿಸುವಂಥದ್ದು, ಮನಸ್ಪರ್ಶಿಸುವಂಥದ್ದು ಮತ್ತು ಮನಸ್ಸಿಗೆ ನಾಟುವಂಥದ್ದು ಆಗಿದೆಯೆಂದರೆ, ಯೇಸುವಿನಂತೆ ಲೋಕವನ್ನು ಇಷ್ಟರ ಮಟ್ಟಿಗೆ ಪ್ರಭಾವಿಸಿರುವವರು ಇನ್ನೊಬ್ಬರಿಲ್ಲ ಎಂದು ಹೇಳುವುದು ಸೂಕ್ತವಾಗಿದೆ” ಎಂಬುದಾಗಿ ಬೈಬಲ್‌ ಭಾಷಾಂತರಕಾರರಾದ ಎಡ್ಗರ್‌ ಗುಡ್‌ಸ್ಪೀಡ್‌ ಬರೆದಿದ್ದಾರೆ.

ಸಾ.ಶ. 33ರಲ್ಲಿ ಯೇಸು ಕ್ರಿಸ್ತನು ತನ್ನ ಭೂಶುಶ್ರೂಷೆಯನ್ನು ಮುಕ್ತಾಯಗೊಳಿಸಿದಾಗ ಕಡಿಮೆಪಕ್ಷ 120 ಮಂದಿ ಸ್ತ್ರೀಪುರುಷರು ಅವನ ಹಿಂಬಾಲಕರಾಗಿದ್ದರು. (ಅ. ಕೃತ್ಯಗಳು 1:15) ಆದರೆ, ಇಂದು 200 ಕೋಟಿಗಿಂತಲೂ ಹೆಚ್ಚು ಮಂದಿ ತಾವು ಕ್ರೈಸ್ತರೆಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಕೂಡಿಕೆಯಾಗಿ, ನೂರಾರು ಕೋಟಿ ಮಂದಿ ಯೇಸುವನ್ನು ಒಬ್ಬ ಪ್ರವಾದಿಯಾಗಿ ಸ್ವೀಕರಿಸುತ್ತಾರೆ. ನಿಶ್ಚಯವಾಗಿಯೂ ಅವನ ಬೋಧನೆಗಳು ಮಾನವಕುಲದ ಮೇಲೆ ಅಸಾಮಾನ್ಯವಾದ ಪ್ರಭಾವವನ್ನು ಬೀರಿವೆ.

ಲೋಕವ್ಯಾಪಕವಾಗಿ ಯೇಸು ಬೀರಿರುವ ಪ್ರಭಾವವನ್ನು ಕ್ರೈಸ್ತರಲ್ಲದ ಮುಖಂಡರು ಸಹ ಅನುಮೋದಿಸುತ್ತಾರೆ. ಉದಾಹರಣೆಗೆ, ಯೆಹೂದಿ ಧಾರ್ಮಿಕ ಮುಖಂಡರಾದ ಹೈಮನ್‌ ಇನಿಲೋ ಬರೆದದ್ದು: “ಮಾನವಕುಲದ ಧಾರ್ಮಿಕ ಇತಿಹಾಸದಲ್ಲಿ ಯೇಸು ಅತಿ ಜನಪ್ರಿಯನೂ ಜನರಿಂದ ಬಹಳವಾಗಿ ಅಧ್ಯಯನಮಾಡಲ್ಪಟ್ಟವನೂ ಅತಿ ಪ್ರಭಾವಶಾಲಿಯೂ ಆದ ವ್ಯಕ್ತಿಯಾಗಿ ಪರಿಣಮಿಸಿದ್ದಾನೆ.” ಇನಿಲೋ ಕೂಡಿಸಿದ್ದು: “ಮಾನವಕುಲದ ಮೇಲೆ ಯೇಸು ಬೀರಿರುವ ಪ್ರಭಾವವನ್ನು ಸಂಪೂರ್ಣವಾಗಿ ಯಾರು ತಾನೇ ಗ್ರಹಿಸಶಕ್ತರು? ಅವನು ಪ್ರೇರೇಪಿಸಿದ ಪ್ರೀತಿ, ಅವನು ನೀಡಿದ ಸಾಂತ್ವನ, ಅವನಿಂದಾಗಿ ಉಂಟಾಗಿರುವ ಒಳಿತು, ಅವನು ಜನರಲ್ಲಿ ಮೂಡಿಸಿದ ನಿರೀಕ್ಷೆ ಮತ್ತು ಆನಂದ​—⁠ಇವೆಲ್ಲಕ್ಕೂ ಮಾನವ ಇತಿಹಾಸದಲ್ಲಿ ಯಾವುದೇ ಸರಿಸಾಟಿಯಿಲ್ಲ. ಜೀವಿಸಿರುವ ಮಹಾನ್‌ ವ್ಯಕ್ತಿಗಳಲ್ಲಿ ಅಥವಾ ಒಳ್ಳೇ ಮನುಷ್ಯರಲ್ಲಿ ಯೇಸುವಿಗಿರುವಷ್ಟು ಸಾರ್ವತ್ರಿಕ ಆಕರ್ಷಣೆ ಮತ್ತು ಪ್ರಭಾವ ಇನ್ನಾರಿಗೂ ಇಲ್ಲ. ಇತಿಹಾಸದಲ್ಲಿಯೇ ಅವನೊಬ್ಬ ಅತಿ ಸ್ವಾರಸ್ಯಕರ ವ್ಯಕ್ತಿ ಆಗಿದ್ದಾನೆ.” ಹಿಂದೂ ನಾಯಕರಾಗಿದ್ದ ಮೋಹನ್‌ದಾಸ್‌ ಕೆ. ಗಾಂಧಿ ಹೇಳಿದ್ದು: “ಮಾನವಕುಲಕ್ಕಾಗಿ ಯೇಸುವಿನಷ್ಟು ಒಳಿತನ್ನು ಮಾಡಿರುವ ಇನ್ನೊಬ್ಬ ವ್ಯಕ್ತಿಯನ್ನು ನಾನರಿಯೆ. ವಾಸ್ತವದಲ್ಲಿ, ಕ್ರೈಸ್ತತ್ವದಲ್ಲಿ ಯಾವುದೇ ತಪ್ಪಿಲ್ಲ.” ಆದರೆ ಅವರು ಕೂಡಿಸಿದ್ದು: “ಸಮಸ್ಯೆಯಿರುವುದು ಕ್ರೈಸ್ತರಾದ ನಿಮ್ಮಲ್ಲಿ. ನೀವು ಸ್ವಲ್ಪವೂ ನಿಮ್ಮ ಸ್ವಂತ ಬೋಧನೆಗಳಿಗೆ ಅನುಸಾರವಾಗಿ ಜೀವಿಸುವುದಿಲ್ಲ.”

ಕ್ರೈಸ್ತಪ್ರಪಂಚವು ಯೇಸುವಿನ ಬೋಧನೆಗಳಿಗೆ ಅನುಸಾರವಾಗಿ ಜೀವಿಸಲು ತಪ್ಪಿಬಿದ್ದಿದೆ ಎಂಬುದಕ್ಕೆ ದೀರ್ಘಕಾಲದ ಇತಿಹಾಸವೇ ಪುರಾವೆಯನ್ನು ನೀಡುತ್ತದೆ. ಕ್ರೈಸ್ತತ್ವದ ಇತಿಹಾಸಕಾರರಾದ ಸೀಸಲ್‌ ಜಾನ್‌ ಕಾಡೂ ತಿಳಿಸುವುದು: “ಚರ್ಚಿನಾದ್ಯಂತ ಕ್ರಮೇಣವಾಗಿ ಬೆಳೆಯುತ್ತಿದ್ದ ನೈತಿಕ ಅಸಡ್ಡೆಯು, ಕ್ರಿಸ್ತ ಶಕ 140ರಷ್ಟು ಹಿಂದೆಯೇ . . . ಕ್ರೈಸ್ತ ಮುಖಂಡರ ಗಮನಕ್ಕೆ ಬಂತು.” ಅವರು ಮತ್ತೂ ಹೇಳಿದ್ದು: “ಕ್ರೈಸ್ತತ್ವದ ಆರಂಭದಲ್ಲಿ ಇದ್ದ ಕಟ್ಟುನಿಟ್ಟಿನ ನೈತಿಕ ಮಟ್ಟವು ಕೆಳಮುಖವಾಗುತ್ತಾ ಬಂದಂತೆ, ಲೋಕದ ರೀತಿಗಳ ಅನುಕರಣೆಯು ಸ್ವಭಾವಿಕವಾಗಿಯೇ ಹೆಚ್ಚುತ್ತಾ ಬಂತು.”

ಮುಂದಕ್ಕೆ ನಾಲ್ಕನೇ ಶತಮಾನದಲ್ಲಿ ರೋಮನ್‌ ಸಾಮ್ರಾಟನಾದ ಕಾನ್‌ಸ್ಟೆಂಟೀನನು ಕ್ರೈಸ್ತ ಧರ್ಮಕ್ಕೆ ಮತಾಂತರವಾದಾಗ, ಈ ನೈತಿಕ ಅವನತಿಯು ಇನ್ನೂ ರಭಸಗೊಂಡಿತು. “ಕಾನ್‌ಸ್ಟೆಂಟೀನಸ್‌ನೊಂದಿಗಿನ ತನ್ನ ಮಿತ್ರತ್ವದಿಂದಾಗಿ ಚರ್ಚ್‌ ಬಹಳಷ್ಟು ವಿಷಯಗಳನ್ನು ರಾಜಿಮಾಡಿಕೊಂಡಿದೆ ಎಂಬ ಸಂಗತಿ ಇತಿಹಾಸಕಾರರ ಗಮನಕ್ಕೆ ಬಂದಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಅದಕ್ಕಾಗಿ ಅವರು ಪರಿತಪಿಸುತ್ತಾರೆ” ಎಂದು ಕಾಡೂ ಬರೆದಿದ್ದಾರೆ. ಅಂದಿನಿಂದ ಗತಿಸಿರುವ ಶತಮಾನಗಳಲ್ಲಿ, ನಾಮಮಾತ್ರದ ಕ್ರೈಸ್ತರು ಕ್ರಿಸ್ತನ ಹೆಸರಿಗೆ ಕಳಂಕವನ್ನು ತಂದಿರುವ ಅನೇಕ ಕರಾಳ ಕೃತ್ಯಗಳನ್ನು ನಡೆಸಿದ್ದಾರೆ.

ಹಾಗಾದರೆ, ಯೇಸು ನಿಜವಾಗಿಯೂ ಏನನ್ನು ಕಲಿಸಿದನು? ಮತ್ತು ಅವನ ಬೋಧನೆಗಳು ನಮ್ಮ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಬೇಕು? ಎಂಬುದೇ ನಾವು ಚಿಂತಿಸಬೇಕಾದ ಪ್ರಶ್ನೆಗಳಾಗಿವೆ.

[ಪುಟ 3ರಲ್ಲಿರುವ ಚಿತ್ರ]

“ಮಾನವಕುಲಕ್ಕಾಗಿ ಯೇಸುವಿನಷ್ಟು ಒಳಿತನ್ನು ಮಾಡಿರುವ ಇನ್ನೊಬ್ಬ ವ್ಯಕ್ತಿಯನ್ನು ನಾನರಿಯೆ.”​—⁠ಮೋಹನ್‌ದಾಸ್‌ ಕೆ. ಗಾಂಧಿ

[ಪುಟ 3ರಲ್ಲಿರುವ ಚಿತ್ರ]

“ಲೋಕವನ್ನು ಇಷ್ಟರ ಮಟ್ಟಿಗೆ ಪ್ರಭಾವಿಸಿರುವವರು ಇನ್ನೊಬ್ಬರಿಲ್ಲ.”​—⁠ಎಡ್ಗರ್‌ ಗುಡ್‌ಸ್ಪೀಡ್‌

[ಕೃಪೆ]

Culver Pictures