ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಸ್ಟ್ರೇಲಿಯದ ಒಳನಾಡಿನಲ್ಲಿ ಯೋಗ್ಯ ವ್ಯಕ್ತಿಗಳನ್ನು ಹುಡುಕುವುದು

ಆಸ್ಟ್ರೇಲಿಯದ ಒಳನಾಡಿನಲ್ಲಿ ಯೋಗ್ಯ ವ್ಯಕ್ತಿಗಳನ್ನು ಹುಡುಕುವುದು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಆಸ್ಟ್ರೇಲಿಯದ ಒಳನಾಡಿನಲ್ಲಿ ಯೋಗ್ಯ ವ್ಯಕ್ತಿಗಳನ್ನು ಹುಡುಕುವುದು

ಆಸ್ಟ್ರೇಲಿಯದ ಕೆಲವು ಒಳನಾಡುಗಳನ್ನು ಯೆಹೋವನ ಸಾಕ್ಷಿಗಳು 12 ವರುಷಗಳಿಂದ ಭೇಟಿಮಾಡಿರಲಿಲ್ಲ. ಆದುದರಿಂದ ನಾರ್ದರ್ನ್‌ ಕ್ಷೇತ್ರದ ರಾಜಧಾನಿಯಾದ ಡಾರ್ವಿನ್‌ನಲ್ಲಿನ ಯೆಹೋವನ ಸಾಕ್ಷಿಗಳು, ಯೋಗ್ಯ ವ್ಯಕ್ತಿಗಳನ್ನು ಹುಡುಕುವುದಕ್ಕಾಗಿ ಒಂಬತ್ತು ದಿನಗಳ ಸಾರುವ ಕಾರ್ಯಾಚರಣೆಯನ್ನು ವ್ಯವಸ್ಥಾಪಿಸಿದರು.​—⁠ಮತ್ತಾಯ 10:11.

ಈ ಕಾರ್ಯಾಚರಣೆಯು ಆರಂಭಗೊಳ್ಳುವ 12 ತಿಂಗಳುಗಳ ಮುಂಚೆಯೇ ಅದಕ್ಕೆ ಬೇಕಾದ ಜಾಗರೂಕ ಯೋಜನೆಯು ಆರಂಭಗೊಂಡಿತು. ನ್ಯೂ ಸೀಲೆಂಡ್‌ಗಿಂತಲೂ ಮೂರುಪಟ್ಟು ದೊಡ್ಡದಾಗಿರುವ, 8,00,000 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ಈ ಕ್ಷೇತ್ರದ ಭೂಪಟಗಳನ್ನು ತಯಾರಿಸುವ ಕೆಲಸವೂ ಆರಂಭವಾಯಿತು. ಈ ದೂರದಲ್ಲಿರುವ ಪ್ರತ್ಯೇಕ ಕ್ಷೇತ್ರವು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದನ್ನು ಪರಿಗಣಿಸಿರಿ; ಪಶುಪಾಲನಾ ಜಮೀನಿನ (ಜಾನುವಾರುಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕುವ ವಿಶಾಲವಾದ ಹುಲ್ಲುಗಾವಲನ್ನೊಳಗೊಂಡ ಕ್ಷೇತ್ರ) ಮುಂದಿನ ಗೇಟ್‌ನಿಂದ ಅಲ್ಲಿರುವ ಒಂದು ಮನೆಯನ್ನು ತಲಪಲಿಕ್ಕಾಗಿ ಮುಖ್ಯ ರಸ್ತೆಯಿಂದ 30ಕ್ಕಿಂತಲೂ ಹೆಚ್ಚು ಕಿಲೋಮೀಟರ್‌ ಪ್ರಯಾಣಿಸಬೇಕಾಗಿರುತ್ತದೆ! ಅಷ್ಟುಮಾತ್ರವಲ್ಲ, ಕೆಲವು ಪಶುಪಾಲನಾ ಜಮೀನುಗಳಾದರೋ ಒಂದು ಜಮೀನಿನಿಂದ ಇನ್ನೊಂದು ಜಮೀನಿಗೆ ಸುಮಾರು 300 ಅಥವಾ ಅದಕ್ಕಿಂತಲೂ ಹೆಚ್ಚು ಕಿಲೋಮೀಟರ್‌ಗಳ ಅಂತರವಿದೆ.

ಈ ಕಾರ್ಯಾಚರಣೆಯಲ್ಲಿ ಒಟ್ಟು 145 ಮಂದಿ ಸ್ವಯಂಸೇವಕರಾದ ಸಾಕ್ಷಿಗಳು ಭಾಗವಹಿಸಿದರು. ಕೆಲವರು ಟಾಸ್ಮೇನಿಯದಷ್ಟು ದೂರದ ಕ್ಷೇತ್ರದಿಂದ ಬಂದರು. ಕೆಲವರು ಫೋರ್‌ ವೀಲ್‌ ಡ್ರೈವ್‌ ವಾಹನವೊಂದರಲ್ಲಿ ಆಗಮಿಸಿದರು. ಶಿಬಿರಹೂಡಲು ಬೇಕಾಗಿರುವ ಸಲಕರಣೆಗಳು, ವಾಹನಕ್ಕೆ ಬೇಕಾಗಬಹುದಾದ ಸ್ಪೇರ್‌ ಪಾರ್ಟ್ಸ್‌ ಮತ್ತು ಪೆಟ್ರೋಲ್‌ ಅನ್ನು ಸಹ ಅವರು ತಂದರು. ಇನ್ನಿತರರು ತಮ್ಮ ಸಲಕರಣೆಗಳನ್ನು ಟ್ರೈಲರ್‌ಗಳಲ್ಲಿ ತಂದರು. ಇದಕ್ಕೆ ಕೂಡಿಸಿ, ಯಾರ ಬಳಿ ಫೋರ್‌ ವೀಲ್‌ ಡ್ರೈವ್‌ ವಾಹನಗಳಿರಲಿಲ್ಲವೊ ಅವರಿಗಾಗಿ 22 ಸೀಟುಗಳ ಎರಡು ಬಸ್‌ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಯಿತು. ಬಸ್ಸಿನಲ್ಲಿ ಪ್ರಯಾಣಿಸಿದವರು ಮುಖ್ಯವಾಗಿ ಆಯ್ದ ಕ್ಷೇತ್ರದಲ್ಲಿನ ಸಣ್ಣ ಪಟ್ಟಣಗಳಲ್ಲಿರುವ ನಿವಾಸಿಗಳಿಗೆ ಸಾಕ್ಷಿನೀಡಿದರು.

ಪ್ರಯಾಣವನ್ನು ಆರಂಭಿಸುವ ಮುನ್ನ ಈ ಕಾರ್ಯಾಚರಣೆಯನ್ನು ಏರ್ಪಡಿಸಿದ ಸಹೋದರರು, ಭಾಷಣಗಳು ಮತ್ತು ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿದರು. ಇವು, ಈ ಅಸಾಧಾರಣ ಕ್ಷೇತ್ರದಲ್ಲಿ ಸುವಾರ್ತೆಯನ್ನು ಹೇಗೆ ಪ್ರಸ್ತುತಪಡಿಸುವುದು ಎಂಬುದರ ಕುರಿತು ಮಾರ್ಗದರ್ಶನಗಳನ್ನು ಒದಗಿಸಿದವು. ಉದಾಹರಣೆಗೆ, ಮೂಲ ನಿವಾಸಿಗಳ ಸಮುದಾಯಗಳಲ್ಲಿ ಪರಿಣಾಮಕಾರಿಯಾಗಿ ಸಾರಬೇಕಾದರೆ ನಿರ್ದಿಷ್ಟ ರೀತಿಯ ನಡತೆಯನ್ನು ಪಾಲಿಸುವುದು ಮತ್ತು ಮೂಲ ನಿವಾಸಿಗಳ ಸಂಪ್ರದಾಯಗಳನ್ನು ತಿಳಿದಿರುವುದು ಅಗತ್ಯ. ವನ್ಯಜೀವಿಗಳನ್ನು ಸಂರಕ್ಷಿಸಲು ಸಹಾಯಮಾಡುವ ಸಲುವಾಗಿ ಪರಿಸರವನ್ನು ಸ್ವಚ್ಛವಾಗಿಡುವ ವಿಚಾರದ ಬಗ್ಗೆಯೂ ಚರ್ಚಿಸಲಾಯಿತು.

ಅನೇಕ ಗಮನಾರ್ಹ ಅನುಭವಗಳನ್ನು ಪ್ರಚಾರಕರು ಪಡೆದುಕೊಂಡರು. ಉದಾಹರಣೆಗೆ, ಮೂಲ ನಿವಾಸಿಗಳು ವಾಸಿಸುತ್ತಿರುವ ಪ್ರದೇಶವೊಂದರಲ್ಲಿ ಒಂದು ಬೈಬಲ್‌ ಆಧಾರಿತ ಸಾರ್ವಜನಿಕ ಭಾಷಣವನ್ನು ನೀಡಲು ಸಹೋದರರು ಏರ್ಪಾಡನ್ನು ಮಾಡಿದರು. ಆ ಸಮುದಾಯದ ಮುಖ್ಯಸ್ಥೆಯು ವೈಯಕ್ತಿಕವಾಗಿ ಎಲ್ಲರ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದಳು. ಅನಂತರ, ಹಾಜರಿದ್ದ ಜನರಲ್ಲಿ ಕೆಲವರಿಗೆ ಪುಸ್ತಕಗಳು ಮತ್ತು ಬ್ರೋಷರುಗಳನ್ನು ನೀಡಲಾಯಿತು. ಒಟ್ಟು 5 ಪುಸ್ತಕಗಳು ಮತ್ತು 41 ಬ್ರೋಷರುಗಳು ನೀಡಲ್ಪಟ್ಟವು. ಮೂಲ ನಿವಾಸಿಗಳ ಇನ್ನೊಂದು ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಮಾಡಲಾಯಿತು. ಅವನ ಬಳಿ ಅವನ ಸ್ವಂತ ಬೈಬಲ್‌ ಸಹ ಇತ್ತು. ಅದು ಕಿಂಗ್‌ ಜೇಮ್ಸ್‌ ವರ್ಷನ್‌ ಬೈಬಲ್‌ ಆಗಿತ್ತು ಮತ್ತು ತುಂಬ ಹಳೆಯದೂ ಹರಕಲೂ ಆಗಿತ್ತು. ದೇವರ ಹೆಸರು ಗೊತ್ತಿದೆಯೋ ಎಂದು ಕೇಳಲ್ಪಟ್ಟಾಗ ಅವನು ಹೌದೆಂದು ಉತ್ತರಿಸಿ, ತನ್ನ ಜೇಬಿಗೆ ಕೈಹಾಕಿ ಕಾವಲಿನಬುರುಜು ಪತ್ರಿಕೆಯ ಒಂದು ಹಳೇ ಸಂಚಿಕೆಯನ್ನು ಹೊರತೆಗೆದನು. ಅವನು ಪತ್ರಿಕೆಯಿಂದ ಮಾರ್ಕ 12:30ನ್ನು ಓದಿದನು. ಅದು ಹೇಳುವುದು: ‘ನಿನ್ನ ದೇವರಾದ [ಯೆಹೋವನನ್ನು] ಪೂರ್ಣಹೃದಯದಿಂದ ಪ್ರೀತಿಸಬೇಕು.’ ಅವನು ಮುಂದುವರಿಸಿ ಹೇಳಿದ್ದು: “ನನಗೆ ಈ ಶಾಸ್ತ್ರವಚನ ಬಹಳ ಇಷ್ಟ.” ಸವಿಸ್ತಾರವಾದ ಒಂದು ಚರ್ಚೆಯ ನಂತರ ಅವನು ಒಂದು ಹೊಸ ಬೈಬಲನ್ನು ಮತ್ತು ಇತರ ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಸ್ವೀಕರಿಸಿದನು.

ಕಾರ್ಪೆಂಟೆರಿಯಾ ಕೊಲ್ಲಿಯ ಬಳಿ, ಹತ್ತುಲಕ್ಷ ಎಕರೆ ಪಶುಪಾಲನ ಕ್ಷೇತ್ರದ ಮುಖ್ಯಸ್ಥನು ರಾಜ್ಯ ಸಂದೇಶದಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸಿದನು. ಬೈಬಲ್‌ ಕಥೆಗಳ ನನ್ನ ಪುಸ್ತಕ ಮತ್ತು ನಿತ್ಯಜೀವಕ್ಕೆ ನಡೆಸುವ ಜ್ಞಾನ * ಎಂಬ ಪುಸ್ತಕಗಳನ್ನು ಅವನಿಗೆ ತೋರಿಸಿದಾಗ, ಕ್ರಿಯೋಲ್‌ ಭಾಷೆಯಲ್ಲಿ ಯಾವುದೇ ಸಾಹಿತ್ಯವು ಲಭ್ಯವಿದೆಯೊ ಎಂದು ಅವನು ಕೇಳಿದನು. ಇದು ಒಂದು ಅಸಾಧಾರಣ ಸಂಗತಿಯಾಗಿತ್ತು, ಏಕೆಂದರೆ ಅನೇಕ ಮೂಲ ನಿವಾಸಿಗಳು ಕ್ರಿಯೋಲ್‌ ಭಾಷೆಯನ್ನು ಮಾತಾಡುತ್ತಾರಾದರೂ ಆ ಭಾಷೆಯನ್ನು ಓದಲು ಕೇವಲ ಕೊಂಚ ಮಂದಿಗೆ ಮಾತ್ರ ಬರುತ್ತದೆ. ನಂತರ ತಿಳಿದುಬಂದದ್ದೇನೆಂದರೆ, ಅವನ ಪಶುಪಾಲನ ಕ್ಷೇತ್ರದಲ್ಲಿ ಕೆಲಸಮಾಡುವ ಎಲ್ಲಾ 50 ಮಂದಿ ಕೆಲಸಗಾರರಿಗೂ ಕ್ರಿಯೋಲ್‌ ಭಾಷೆ ಓದಲು ಬರುತ್ತಿತ್ತು. ಕ್ರಿಯೋಲ್‌ ಭಾಷೆಯಲ್ಲಿ ಬೈಬಲ್‌ ಸಾಹಿತ್ಯವನ್ನು ಪಡೆದುಕೊಳ್ಳಲು ಆ ಮುಖ್ಯಸ್ಥನು ಬಹಳ ಸಂತೋಷಪಟ್ಟನು ಮತ್ತು ಮುಂದಕ್ಕೆ ತನ್ನನ್ನು ಸಂಪರ್ಕಿಸಸಾಧ್ಯವಾಗುವಂತೆ ಅವನು ಸಂತೋಷದಿಂದ ತನ್ನ ಟೆಲಿಫೋನ್‌ ನಂಬರ್‌ ಅನ್ನು ಸಹ ನೀಡಿದನು.

ಒಂಬತ್ತು ದಿವಸಗಳ ತೀವ್ರವಾದ ಸಾಕ್ಷಿಕಾರ್ಯದ ಸಮಯದಲ್ಲಿ, ಒಟ್ಟು 120 ಬೈಬಲ್‌ಗಳು, 770 ಪುಸ್ತಕಗಳು, 705 ಪತ್ರಿಕೆಗಳು ಮತ್ತು 1,965 ಬ್ರೋಷರ್‌ಗಳು ನೀಡಲ್ಪಟ್ಟವು. ಇದಕ್ಕೆ ಕೂಡಿಕೆಯಾಗಿ, 720 ಪುನರ್ಭೇಟಿಗಳು ಮಾಡಲ್ಪಟ್ಟವು ಮತ್ತು 215 ಬೈಬಲ್‌ ಅಧ್ಯಯನಗಳನ್ನು ಆರಂಭಿಸಲಾಯಿತು.

ಈ ವಿಸ್ತಾರವಾದ ಕ್ಷೇತ್ರದಲ್ಲಿ ಚದರಿರುವ ಅನೇಕ ಯೋಗ್ಯ ವ್ಯಕ್ತಿಗಳ ಆಧ್ಯಾತ್ಮಿಕ ಹಸಿವು ಕೊನೆಗೂ ತಣಿಸಲ್ಪಟ್ಟಿತು.​—⁠ಮತ್ತಾಯ 5:⁠6.

[ಪಾದಟಿಪ್ಪಣಿ]

^ ಪ್ಯಾರ. 8 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.

[ಪುಟ 30ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಆಸ್ಟ್ರೇಲಿಯ

ಉತ್ತರ ಕ್ಷೇತ್ರ

ಡಾರ್ವಿನ್‌

ಕಾರ್ಪೆಂಟೆರಿಯಾ ಕೊಲ್ಲಿ

ಸಿಡ್ನಿ

ಟಾಸ್ಮೇನಿಯ