ತ್ಯಜಿಸಲ್ಪಟ್ಟ ತಬ್ಬಲಿಯೊಬ್ಬನು ಪ್ರೀತಿಭರಿತ ತಂದೆಯನ್ನು ಕಂಡುಕೊಳ್ಳುತ್ತಾನೆ
ಜೀವನ ಕಥೆ
ತ್ಯಜಿಸಲ್ಪಟ್ಟ ತಬ್ಬಲಿಯೊಬ್ಬನು ಪ್ರೀತಿಭರಿತ ತಂದೆಯನ್ನು ಕಂಡುಕೊಳ್ಳುತ್ತಾನೆ
ಡೇಮೇಟ್ರೇಸ್ ಸೇಡೀರೊಪೂಲೊಸ್ ಅವರು ಹೇಳಿದಂತೆ
ಒಂದು ರೈಫಲನ್ನು ನನ್ನ ಮುಂದೆ ತಳ್ಳುತ್ತಾ, “ಹೋಗು, ಈ ಆಯುಧವನ್ನು ತೆಗೆದುಕೊಂಡು ಗುಂಡನ್ನು ಹಾರಿಸು” ಎಂದು ಆಫೀಸರನು ಕೋಪದಿಂದ ಹೇಳಿದನು. ನಾನು ಶಾಂತಭಾವದಿಂದಲೇ ನಿರಾಕರಿಸಿದೆ. ಇದನ್ನೆಲ್ಲಾ ನೋಡುತ್ತಿದ್ದ ಸೈನಿಕರಿಗೆ ನಡುಕ ಹುಟ್ಟಿಸುವಂತೆ, ಆ ಆಫೀಸರನ ಬಂದೂಕಿನಿಂದ ಹೊರಟ ಗುಂಡುಗಳು ನನ್ನ ಭುಜದ ಮೇಲಿನಿಂದ ಹಾದುಹೋದವು. ನನ್ನ ಸಾವು ಸನ್ನಿಹಿತವಾಗಿದೆಯೋ ಎಂಬಂತೆ ತೋರಿತು. ಸಂತೋಷಕರ ಸಂಗತಿಯೇನೆಂದರೆ, ನಾನು ಬದುಕಿ ಉಳಿದೆ. ಆದರೆ ನನ್ನ ಜೀವವು ಅಪಾಯದಲ್ಲಿದ್ದದ್ದು ಇದೇ ಮೊದಲ ಬಾರಿಯಾಗಿರಲಿಲ್ಲ.
ನನ್ನ ಕುಟುಂಬವು, ಟರ್ಕಿಯ ಕಪ್ಪದೋಕ್ಯದಲ್ಲಿರುವ ಕೈಸೆರಿಯಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತರ ಗುಂಪಿಗೆ ಸೇರಿದ್ದಾಗಿತ್ತು. ಸಾ.ಶ. ಒಂದನೆಯ ಶತಮಾನದಲ್ಲಿ ಈ ಕ್ಷೇತ್ರದ ಕೆಲವು ವ್ಯಕ್ತಿಗಳು ಕ್ರೈಸ್ತಧರ್ಮವನ್ನು ಸ್ವೀಕರಿಸಿದರೆಂಬುದು ಸುವ್ಯಕ್ತ. (ಅ. ಕೃತ್ಯಗಳು 2:9) ಆದರೆ 20ನೆಯ ಶತಮಾನದ ಆರಂಭದಷ್ಟಕ್ಕೆ ಕಾಲವು ತೀರ ಬದಲಾಗಿತ್ತು.
ಮೊದಲು ನಿರಾಶ್ರಿತನಾಗಿದ್ದೆ, ಬಳಿಕ ತಬ್ಬಲಿಯಾದೆ
ಇಸವಿ 1922ರಲ್ಲಿ ನಾನು ಹುಟ್ಟಿ ಕೆಲವು ತಿಂಗಳುಗಳು ಕಳೆದ ಬಳಿಕ, ಕೋಮುಗಲಭೆಯ ಕಾರಣದಿಂದಾಗಿ ನನ್ನ ಕುಟುಂಬದವರು ನಿರಾಶ್ರಿತರಾಗಿ ಗ್ರೀಸ್‌ಗೆ ಪಲಾಯನಗೈಯಬೇಕಾಯಿತು. ಭಯಭೀತರಾದ ನನ್ನ ಹೆತ್ತವರು ತಮ್ಮೆಲ್ಲಾ ಸೊತ್ತುಗಳನ್ನೂ ಹಿಂದೆಬಿಟ್ಟು, ಕೆಲವೇ ತಿಂಗಳ ಮಗುವಾಗಿದ್ದ ನನ್ನನ್ನು ಮಾತ್ರ ತಮ್ಮೊಂದಿಗೆ ಕೊಂಡೊಯ್ದರು. ಅತ್ಯಧಿಕ ದುರವಸ್ಥೆಯನ್ನು ಅನುಭವಿಸಿದ ಬಳಿಕ, ಶೋಚನೀಯ ಸ್ಥಿತಿಯಲ್ಲಿ ಅವರು ಉತ್ತರ ಗ್ರೀಸ್‌ನ ಡ್ರಾಮಾ ನಗರದ ಬಳಿಯಿರುವ ಕೇರೇಆ ಹಳ್ಳಿಗೆ ಬಂದು ತಲಪಿದರು.
ನಾನು ನಾಲ್ಕು ವರ್ಷದವನಾಗಿದ್ದಾಗ ಮತ್ತು ನನ್ನ ತಮ್ಮನು ಹುಟ್ಟಿದ ಬಳಿಕ, ನನ್ನ ತಂದೆಯವರು ತೀರಿಹೋದರು. ಆಗ ಅವರಿಗೆ ಕೇವಲ 27 ವರ್ಷವಾಗಿತ್ತಷ್ಟೆ, ಆದರೆ ಆ ಸಂಕಟದಾಯಕ ಸಮಯಗಳ ದುರವಸ್ಥೆಯು ಅವರನ್ನು ತುಂಬ ದುರ್ಬಲಗೊಳಿಸಿತ್ತು. ತಾಯಿಯವರು ಭೀಕರ ಸಂಕಷ್ಟಗಳನ್ನು ಅನುಭವಿಸಿದರು ಮತ್ತು ಸ್ವಲ್ಪ ಸಮಯದಲ್ಲೇ ಅವರೂ ಕೊನೆಯುಸಿರೆಳೆದರು. ನನ್ನ ತಮ್ಮನೂ ನಾನೂ ಸಂಪೂರ್ಣವಾಗಿ ನಿರ್ಗತಿಕರಾದೆವು. ನಾವು ಒಂದು ಅನಾಥಾಶ್ರಮದಿಂದ ಇನ್ನೊಂದು ಅನಾಥಾಶ್ರಮಕ್ಕೆ ಕಳುಹಿಸಲ್ಪಟ್ಟೆವು ಮತ್ತು 12ರ ಪ್ರಾಯದಲ್ಲಿ ನನ್ನನ್ನು ಥೆಸಲೋನಿಕದಲ್ಲಿರುವ ಒಂದು ಅನಾಥಾಶ್ರಮಕ್ಕೆ ಕಳುಹಿಸಲಾಯಿತು. ಅಲ್ಲಿ ನಾನು ಒಬ್ಬ ಮೆಕ್ಯಾನಿಕ್‌ನಾಗಿ ತರಬೇತಿಯನ್ನು ಪಡೆದುಕೊಳ್ಳಲು ಆರಂಭಿಸಿದೆ.
ನಾನು ಅನಾಥಾಶ್ರಮಗಳ ಭಾವಶೂನ್ಯವಾದ ಅನಾದರಣೀಯ ಗೋಡೆಗಳ ಮಧ್ಯೆ ಬೆಳೆಯುತ್ತಿರುವಾಗ, ಕೆಲವರು ಇಷ್ಟೊಂದು ಕಷ್ಟಾನುಭವ ಹಾಗೂ ಅನ್ಯಾಯವನ್ನು ಅನುಭವಿಸಲು ಕಾರಣವೇನಿರಬಹುದು ಎಂದು ನಾನು ಆಲೋಚಿಸುತ್ತಿದ್ದೆ. ಇಂಥ ದುಃಖಕರ ಪರಿಸ್ಥಿತಿಗಳು ಅಸ್ತಿತ್ವದಲ್ಲಿರುವಂತೆ ದೇವರು ಏಕೆ ಅನುಮತಿಸುತ್ತಾನೆ ಎಂದು ನನ್ನಷ್ಟಕ್ಕೇ ಕೇಳಿಕೊಳ್ಳುತ್ತಿದ್ದೆ. ನಮ್ಮ ಧಾರ್ಮಿಕ ಶಿಕ್ಷಣದ ತರಗತಿಗಳಲ್ಲಿ, ದೇವರು ಸರ್ವಶಕ್ತನು ಎಂದು ಕಲಿಸಲಾಗುತ್ತಿತ್ತಾದರೂ, ಕೆಟ್ಟತನದ ಅಸ್ತಿತ್ವ ಹಾಗೂ ವ್ಯಾಪಕತೆಯ ವಿಷಯದಲ್ಲಿ ತರ್ಕಬದ್ಧವಾದ ವಿವರಣೆಯು ಮಾತ್ರ ಕೊಡಲ್ಪಟ್ಟಿರಲಿಲ್ಲ. ಗ್ರೀಕ್ ಆರ್ತಡಾಕ್ಸ್ ಚರ್ಚ್ ತಾನೇ ಅತ್ಯುತ್ತಮ ಧರ್ಮವಾಗಿದೆ ಎಂದು ಒಂದು ಜನಪ್ರಿಯ ಮಂತ್ರದಲ್ಲಿ ತಿಳಿಸಲಾಗುತ್ತಿತ್ತು. ಆದರೆ “ಆರ್ತಡಾಕ್ಸ್ ಧರ್ಮವೇ ಅತ್ಯುತ್ತಮ ಧರ್ಮವಾಗಿರುವಲ್ಲಿ, ಎಲ್ಲರೂ ಏಕೆ ಈ ಧರ್ಮದ ಅನುಯಾಯಿಗಳಾಗಿಲ್ಲ?” ಎಂದು ನಾನು ಕೇಳಿದಾಗ, ನನಗೆ ಸಂತೃಪ್ತಿಕರವಾದ ಉತ್ತರವು ಸಿಗಲೇ ಇಲ್ಲ.
ಆದರೂ, ನಮ್ಮ ಶಿಕ್ಷಕರಿಗೆ ಬೈಬಲಿನ ಬಗ್ಗೆ ತುಂಬ ಗೌರವವಿತ್ತು ಮತ್ತು ಇದು ಒಂದು ಪವಿತ್ರ ಪುಸ್ತಕವಾಗಿದೆ ಎಂಬ ಭಾವನೆಯನ್ನು ಅವರು ನಮ್ಮಲ್ಲಿ ಮೂಡಿಸಿದರು. ಈ ಅನಾಥಾಶ್ರಮದ ನಿರ್ದೇಶಕರು ಸಹ ಇದೇ ಮನೋಭಾವವನ್ನು ತೋರಿಸುತ್ತಿದ್ದರು, ಆದರೆ ಯಾವುದೋ ಅವಿದಿತ ಕಾರಣಕ್ಕಾಗಿ ಅವರು ಧಾರ್ಮಿಕ ಆರಾಧನೆಗಳಲ್ಲಿ ಭಾಗವಹಿಸುವುದರಿಂದ ದೂರವಿರುತ್ತಿದ್ದರು. ನಾನು ಇದರ ಕುರಿತು ವಿಚಾರಿಸಿದಾಗ, ಯಾವುದೋ ಒಂದು ಸಮಯದಲ್ಲಿ ಅವರು ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನಮಾಡಿದ್ದರು ಎಂದು ನನಗೆ ಹೇಳಲಾಯಿತು. ಈ ಧರ್ಮದ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ.
ಥೆಸಲೋನಿಕದ ಅನಾಥಾಶ್ರಮದಲ್ಲಿ ನನ್ನ ಶಿಕ್ಷಣವು ಪೂರ್ಣಗೊಂಡಾಗ ನಾನು 17 ವರ್ಷದವನಾಗಿದ್ದೆ. ಎರಡನೇ ಲೋಕ ಯುದ್ಧವು ಆರಂಭಗೊಂಡಿತ್ತು ಮತ್ತು ಗ್ರೀಸ್ ದೇಶವು ನಾಝಿ ನಿಯಂತ್ರಣದ ಕೆಳಗಿತ್ತು. ಬೀದಿಗಳಲ್ಲಿ ಜನರು ಹಸಿವೆಯಿಂದ ಸಾಯುತ್ತಿದ್ದರು. ಬದುಕಿ ಉಳಿಯಲಿಕ್ಕಾಗಿ ನಾನು ಹಳ್ಳಿಗಾಡಿಗೆ ಪಲಾಯನಗೈದೆ ಮತ್ತು ಹೊಲದಲ್ಲಿ ತೀರ ಕಡಿಮೆ ಕೂಲಿಗೆ ಕೆಲಸಮಾಡತೊಡಗಿದೆ.
ಬೈಬಲ್ ಉತ್ತರಗಳನ್ನು ಒದಗಿಸುತ್ತದೆ
ಇಸವಿ 1945ರ ಏಪ್ರಿಲ್ ತಿಂಗಳಿನಲ್ಲಿ ನಾನು ಥೆಸಲೋನಿಕಕ್ಕೆ ಹಿಂದಿರುಗಿದಾಗ, ವಿವಿಧ ಅನಾಥಾಶ್ರಮಗಳಲ್ಲಿ ನಾನು ಯಾರೊಂದಿಗೆ ತಂಗುತ್ತಿದ್ದೆನೋ ಆ ನನ್ನ ಬಾಲ್ಯ ಸ್ನೇಹಿತನ ಅಕ್ಕ ನನ್ನನ್ನು ಭೇಟಿಯಾದಳು. ತನ್ನ ತಮ್ಮ ಕಾಣೆಯಾಗಿದ್ದಾನೆ ಎಂದು ಪಾಶಾಲೇಆ ನನಗೆ ಹೇಳಿದಳು ಮತ್ತು ಅವನು ಎಲ್ಲಿದ್ದಾನೆಂಬುದು ಗೊತ್ತಿದೆಯೋ ಎಂದು ನನ್ನನ್ನು ಕೇಳಿದಳು. ಸಂಭಾಷಣೆಯ ಮಧ್ಯೆ, ತಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದೇನೆ ಎಂದು ಹೇಳಿದಳು ಮತ್ತು ಮಾನವರಲ್ಲಿ ದೇವರಿಗಿರುವ ಆಸಕ್ತಿಯ ಕುರಿತು ತಿಳಿಸಿದಳು.
ತೀವ್ರ ಅಸಮಾಧಾನದಿಂದ ನಾನು, ಬಾಲ್ಯದಿಂದಲೇ ನಾನು ಏಕೆ ಕಷ್ಟಾನುಭವಿಸುತ್ತಿದ್ದೇನೆ? ನಾನು ಏಕೆ ತಬ್ಬಲಿಯಾಗಿಬಿಟ್ಟೆ? ನಮಗೆ ದೇವರ ಆವಶ್ಯಕತೆ ಅತ್ಯಧಿಕವಾಗಿರುವ ಸಮಯದಲ್ಲಿ ಆತನೆಲ್ಲಿದ್ದಾನೆ? ಎಂಬ ಆಕ್ಷೇಪಣೆಗಳನ್ನು ಮುಂದಿಟ್ಟೆ. ಅವಳು ಉತ್ತರಿಸಿದ್ದು: “ಈ ಪರಿಸ್ಥಿತಿಗಳಿಗೆ ದೇವರೇ ಕಾರಣನೆಂಬುದು ನಿನಗೆ ಖಚಿತವಾಗಿ ಗೊತ್ತಿದೆಯೋ?” ಅವಳು ತನ್ನ ಬೈಬಲನ್ನು ಉಪಯೋಗಿಸಿ, ಜನರು ಕಷ್ಟಾನುಭವಿಸುವಂತೆ ಮಾಡುವಾತನು ದೇವರಲ್ಲ ಎಂಬುದನ್ನು ತೋರಿಸಿದಳು. ಇದು, ಸೃಷ್ಟಿಕರ್ತನು ಮಾನವರನ್ನು ಪ್ರೀತಿಸುತ್ತಾನೆ ಮತ್ತು ಅತಿ ಬೇಗನೆ ವಿಷಯಗಳನ್ನು ಸರಿಪಡಿಸುತ್ತಾನೆ ಎಂಬುದನ್ನು ಮನಗಾಣುವಂತೆ ನನಗೆ ಸಹಾಯಮಾಡಿತು. ಅವಳು ಯೆಶಾಯ 35:5-7 ಮತ್ತು ಪ್ರಕಟನೆ 21:3, 4ರಂಥ ಶಾಸ್ತ್ರವಚನಗಳನ್ನು ಉಪಯೋಗಿಸಿ, ಅತಿ ಬೇಗನೆ ಯುದ್ಧ, ಕಲಹ, ಅಸ್ವಸ್ಥತೆ ಹಾಗೂ ಮರಣವು ತೆಗೆದುಹಾಕಲ್ಪಡುವುದು ಮತ್ತು ನಂಬಿಗಸ್ತ ಜನರು ಭೂಮಿಯ ಮೇಲೆ ಸದಾ ಜೀವಿಸುವರು ಎಂಬುದನ್ನು ನನಗೆ ತೋರಿಸಿದಳು.
ಬೆಂಬಲದಾಯಕ ಕುಟುಂಬವನ್ನು ಕಂಡುಕೊಳ್ಳುವುದು
ಗೆರಿಲ್ಲ ಸೈನ್ಯಗಳೊಂದಿಗಿನ ಕಾದಾಟವೊಂದರಲ್ಲಿ ಪಾಶಾಲೇಆಳ ತಮ್ಮನು ಕೊಲ್ಲಲ್ಪಟ್ಟನು ಎಂಬುದು ನನಗೆ ತಿಳಿದುಬಂತು. ಅವಳ ಕುಟುಂಬದವರನ್ನು ಸಂತೈಸಲಿಕ್ಕಾಗಿ ನಾನು ಅವರ ಬಳಿಗೆ ಹೋದೆನಾದರೂ, ನನ್ನ ಬದಲಿಗೆ ಅವರೇ ನನಗೆ ಶಾಸ್ತ್ರೀಯ ಸಾಂತ್ವನವನ್ನು ನೀಡಿದರು. ಇನ್ನೊಮ್ಮೆ ನಾನು ಬೈಬಲಿನಿಂದ ಇನ್ನೂ ಹೆಚ್ಚಿನ ಸಾಂತ್ವನದಾಯಕ ವಿಚಾರಗಳನ್ನು ತಿಳಿದುಕೊಳ್ಳಲಿಕ್ಕಾಗಿ ಅವರ ಮನೆಗೆ ಹೋದೆ, ಮತ್ತು ಸಮಯಾನಂತರ ಅಧ್ಯಯನಕ್ಕಾಗಿ ಹಾಗೂ ಆರಾಧನೆಗಾಗಿ ರಹಸ್ಯವಾಗಿ ಕೂಡಿಬರುತ್ತಿದ್ದ ಯೆಹೋವನ ಸಾಕ್ಷಿಗಳ ಒಂದು ಚಿಕ್ಕ ಗುಂಪಿನ ಭಾಗವಾಗಿ ಪರಿಣಮಿಸಿದೆ. ಸಾಕ್ಷಿಗಳ ಮೇಲೆ ನಿಷೇಧವು ಒಡ್ಡಲ್ಪಟ್ಟಿದೆ ಎಂಬುದು ನನಗೆ ತಿಳಿದಿತ್ತಾದರೂ, ಅವರೊಂದಿಗೆ ಸಹವಾಸಮಾಡುವುದನ್ನು ಮುಂದುವರಿಸುವ ದೃಢನಿರ್ಧಾರವನ್ನು ಮಾಡಿದೆ.
ನಾನು ಕಳೆದುಕೊಂಡಿದ್ದ ಆದರಣೀಯವಾದ ಪ್ರೀತಿಭರಿತ ಕೌಟುಂಬಿಕ ವಾತಾವರಣವನ್ನು ಆ ದೀನಭಾವದ ಕ್ರೈಸ್ತರ ಗುಂಪಿನಲ್ಲಿ ಕಂಡುಕೊಂಡೆ. ನನಗೆ ಅತ್ಯಗತ್ಯವಾಗಿದ್ದ ಆಧ್ಯಾತ್ಮಿಕ ಬೆಂಬಲ ಹಾಗೂ ಸಹಾಯವನ್ನು ಅವರು ಒದಗಿಸಿದರು. ಅವರ ನಡುವೆ ನಾನು ನಿಸ್ವಾರ್ಥಭಾವದವರೂ ಹಿತಾಸಕ್ತಿಯುಳ್ಳವರೂ ಆದ ಸ್ನೇಹಿತರನ್ನು ಕಂಡುಕೊಂಡೆ. ಅವರು ನನಗೆ ಸಹಾಯಮಾಡಲು ಮತ್ತು ನನ್ನನ್ನು ಸಂತೈಸಲು ಮನಃಪೂರ್ವಕವಾಗಿ ಸಿದ್ಧರಾಗಿದ್ದರು. (2 ಕೊರಿಂಥ 7:5-7) ಎಲ್ಲಕ್ಕಿಂತಲೂ ಮಿಗಿಲಾಗಿ, ನಾನು ಯೆಹೋವನಿಗೆ ಸಮೀಪವಾಗಲು ಸಹಾಯ ಸಿಕ್ಕಿತು ಮತ್ತು ಇಷ್ಟರಲ್ಲಾಗಲೇ ನಾನು ಆತನನ್ನು ನನ್ನ ಪ್ರೀತಿಯ ಸ್ವರ್ಗೀಯ ತಂದೆಯಾಗಿ ಪರಿಗಣಿಸಲಾರಂಭಿಸಿದ್ದೆ. ಆತನ ಪ್ರೀತಿ, ಸಹಾನುಭೂತಿ ಹಾಗೂ ಕಾಳಜಿಯಂಥ ಗುಣಗಳು ನನಗೆ ತುಂಬ ಹಿಡಿಸಿದವು. (ಕೀರ್ತನೆ 23:1-6) ಕೊನೆಗೂ ನಾನು ಒಂದು ಆಧ್ಯಾತ್ಮಿಕ ಕುಟುಂಬವನ್ನು ಮತ್ತು ಒಬ್ಬ ಪ್ರೀತಿಭರಿತ ತಂದೆಯನ್ನು ಕಂಡುಕೊಂಡೆ! ನನ್ನ ಹೃದಯವು ಆಳವಾಗಿ ಸ್ಪರ್ಶಿಸಲ್ಪಟ್ಟಿತು. ಅತಿ ಬೇಗನೆ ನಾನು ಯೆಹೋವನಿಗೆ ನನ್ನ ಜೀವನವನ್ನು ಸಮರ್ಪಿಸಿಕೊಳ್ಳುವಂತೆ ಪ್ರಚೋದಿತನಾದೆ ಮತ್ತು 1945ರ ಸೆಪ್ಟೆಂಬರ್ ತಿಂಗಳಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡೆ.
ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ನನ್ನ ಜ್ಞಾನವನ್ನು ಹೆಚ್ಚಿಸಿತು ಮಾತ್ರವಲ್ಲ, ನನ್ನ ನಂಬಿಕೆಯನ್ನೂ ಆಳಗೊಳಿಸಿತು. ಯಾವುದೇ ರೀತಿಯ ವಾಹನ ಸೌಕರ್ಯ ಇಲ್ಲದಿದ್ದ ಕಾರಣ, ನಮ್ಮಲ್ಲಿ ಅನೇಕರು ಕೆಲವೊಮ್ಮೆ ನಮ್ಮ ಹಳ್ಳಿಯಿಂದ ಕೂಟದ ಸ್ಥಳಕ್ಕೆ ಹೋಗಲಿಕ್ಕಾಗಿ
ಐದು ಕಿಲೊಮೀಟರುಗಳಷ್ಟು ದೂರ ನಡೆಯುತ್ತಿದ್ದೆವು; ಇಂಥ ಸಮಯಗಳಲ್ಲಿ ನಾವು ಅವಿಸ್ಮರಣೀಯವಾದ ಆಧ್ಯಾತ್ಮಿಕ ಚರ್ಚೆಗಳಲ್ಲಿ ಒಳಗೂಡುತ್ತಿದ್ದೆವು. ಇಸವಿ 1945ರ ಕೊನೆಯಲ್ಲಿ, ಪೂರ್ಣ ಸಮಯದ ಸೌವಾರ್ತಿಕ ಕೆಲಸದಲ್ಲಿ ಭಾಗವಹಿಸುವ ಅವಕಾಶದ ಕುರಿತು ನನಗೆ ತಿಳಿದುಬಂದಾಗ ನಾನು ಪಯನೀಯರ್ ಸೇವೆಯನ್ನು ಮಾಡಲಾರಂಭಿಸಿದೆ. ಸ್ವಲ್ಪದರಲ್ಲೇ ನನ್ನ ನಂಬಿಕೆ ಹಾಗೂ ಸಮಗ್ರತೆಯು ಪೂರ್ಣ ರೀತಿಯಲ್ಲಿ ಪರೀಕ್ಷೆಗೆ ಒಳಗಾಗಲಿದ್ದುದರಿಂದ, ಯೆಹೋವನೊಂದಿಗೆ ಒಂದು ಬಲವಾದ ಸಂಬಂಧವು ಅತ್ಯಾವಶ್ಯಕವಾಗಿತ್ತು.ವಿರೋಧವು ವಿರುದ್ಧ ಫಲಿತಾಂಶಗಳನ್ನು ಉಂಟುಮಾಡುತ್ತದೆ
ಅನೇಕವೇಳೆ ಪೊಲೀಸರು ಕೊಲ್ಲುವ ಬೆದರಿಕೆಯೊಂದಿಗೆ ನಮ್ಮ ಕೂಟದ ಸ್ಥಳದ ಮೇಲೆ ದಾಳಿಮಾಡಿದರು. ಗ್ರೀಸ್‌ನಲ್ಲಿ ಆಂತರಿಕ ಯುದ್ಧವು ಪ್ರಬಲವಾಗುತ್ತಾ ಇದ್ದುದರಿಂದ, ಈ ದೇಶವು ಸೈನಿಕಶಾಸನದ ಕೆಳಗಿತ್ತು. ವಿರೋಧಿ ಗುಂಪುಗಳು ಕಡುದ್ವೇಷದಿಂದ ಪರಸ್ಪರ ದಾಳಿಮಾಡಿಕೊಳ್ಳುತ್ತಿದ್ದವು. ಪಾದ್ರಿಗಳು ಈ ಸನ್ನಿವೇಶವನ್ನು ಸದುಪಯೋಗಿಸುತ್ತಾ, ಯೆಹೋವನ ಸಾಕ್ಷಿಗಳಾದ ನಾವು ಕಮ್ಯೂನಿಸ್ಟರಾಗಿದ್ದೇವೆ ಎಂಬುದನ್ನು ನಂಬುವಂತೆ ಮತ್ತು ನಮ್ಮನ್ನು ಕೆಟ್ಟ ರೀತಿಯಲ್ಲಿ ಹಿಂಸಿಸುವಂತೆ ಅಧಿಕಾರಿಗಳನ್ನು ಒಡಂಬಡಿಸಿದರು.
ಎರಡು ವರ್ಷಗಳ ಕಾಲಾವಧಿಯಲ್ಲಿ ನಾವು ಅನೇಕ ಬಾರಿ ಬಂಧಿಸಲ್ಪಟ್ಟೆವು ಮತ್ತು ಆರು ಬಾರಿ ನಾಲ್ಕು ತಿಂಗಳ ವರೆಗಿನ ಸೆರೆವಾಸದ ಶಿಕ್ಷೆಗಳನ್ನು ಪಡೆದೆವು. ಆದರೆ, ಈಗಾಗಲೇ ಸೆರೆಮನೆಗಳು ರಾಜಕೀಯ ಸೆರೆವಾಸಿಗಳಿಂದ ತುಂಬಿಹೋಗಿದ್ದರಿಂದ, ನಮ್ಮನ್ನು ಬಿಟ್ಟುಬಿಡಲಾಯಿತು. ನಮ್ಮ ಅನಿರೀಕ್ಷಿತ ಸ್ವಾತಂತ್ರ್ಯವನ್ನು ನಾವು ಸಾರುವುದನ್ನು ಮುಂದುವರಿಸಲು ಉಪಯೋಗಿಸಿದೆವು, ಆದರೆ ಸ್ವಲ್ಪ ಸಮಯಾನಂತರ ನಮ್ಮನ್ನು ಪುನಃ ಬಂಧಿಸಲಾಯಿತು. ಒಮ್ಮೆಯಂತೂ ಒಂದೇ ವಾರದಲ್ಲಿ ಮೂರು ಸಲ ಬಂಧಿಸಲಾಯಿತು. ನಮ್ಮ ಸಹೋದರರಲ್ಲಿ ಅನೇಕರು ನಿರ್ಜನ ದ್ವೀಪಗಳಿಗೆ ಗಡೀಪಾರುಮಾಡಲ್ಪಟ್ಟಿದ್ದಾರೆ ಎಂಬುದು ನಮಗೆ ತಿಳಿದುಬಂತು. ನನ್ನ ನಂಬಿಕೆಯು ಇಂಥ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುವಷ್ಟು ಬಲವಾದದ್ದಾಗಿರುವುದೊ?
ಶಿಕ್ಷಾವಧಿಯು ಮುಗಿಯುವ ತನಕ ನಾನು ಪ್ರತಿ ದಿನ ಪೊಲೀಸ್ ಠಾಣೆಗೆ ಹಾಜರಾಗಬೇಕಾದ ಸ್ಥಿತಿಯು ಬಂದಾಗ ಪರಿಸ್ಥಿತಿಗಳು ವಿಪರೀತ ಕಷ್ಟಕರವಾದವು. ನನ್ನ ಮೇಲೆ ಕಟ್ಟುನಿಟ್ಟಾಗಿ ನಿಗವಿಡಲಿಕ್ಕೋಸ್ಕರ ಅಧಿಕಾರಿಗಳು ನನ್ನನ್ನು ಥೆಸಲೋನಿಕದ ಬಳಿಯಿದ್ದ ಇವೋಸ್‌ಮೋಸ್ ಹಳ್ಳಿಗೆ ಕಳುಹಿಸಿದರು; ಅಲ್ಲಿ ಒಂದು ಪೊಲೀಸ್ ಠಾಣೆಯಿತ್ತು. ಸಮೀಪದಲ್ಲೇ ಇದ್ದ ಒಂದು ಕೋಣೆಯನ್ನು ನಾನು ಬಾಡಿಗೆಗೆ ಪಡೆದೆ ಮತ್ತು ಹಣವನ್ನು ಸಂಪಾದಿಸಲಿಕ್ಕಾಗಿ ಸಂಚಾರಿ ಕರಕುಶಲಿಗನಾಗಿ ಅಂದರೆ ತಾಮ್ರದ ಪಾತ್ರೆಗಳು ಹಾಗೂ ಬಾಣಲಿಗಳಿಗೆ ಮೆರಗುನೀಡುವವನಾಗಿ ಕೆಲಸಮಾಡಲಾರಂಭಿಸಿದೆ. ನಾನು ಸುತ್ತುಮುತ್ತಲ ಹಳ್ಳಿಗಳಲ್ಲಿ ಪಯನೀಯರ್ ಸೇವೆಮಾಡುವಾಗ, ಪೊಲೀಸರಿಗೆ ಅನುಮಾನ ಬರದಂಥ ರೀತಿಯಲ್ಲಿ ಸುಲಭವಾಗಿ ಮನೆಯಿಂದ ಮನೆಗೆ ಹೋಗುವಂತೆ ಈ ಕೆಲಸವು ಸಹಾಯಮಾಡಿತು. ಇದರ ಫಲಿತಾಂಶವಾಗಿ ಅನೇಕರು ಸುವಾರ್ತೆಯನ್ನು ಕೇಳಿಸಿಕೊಂಡರು ಮತ್ತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಅವರಲ್ಲಿ ಹತ್ತಕ್ಕಿಂತಲೂ ಹೆಚ್ಚು ಮಂದಿ ಕಾಲಕ್ರಮೇಣ ಯೆಹೋವನ ಸಮರ್ಪಿತ ಆರಾಧಕರಾದರು.
ಹತ್ತು ವರ್ಷಗಳು, ಎಂಟು ಸೆರೆಮನೆಗಳು
ಇಸವಿ 1949ರ ಕೊನೆಯ ವರೆಗೆ ನಾನು ಪೊಲೀಸರ ನಿಗಾವಣೆಯ ಕೆಳಗೇ ಇದ್ದೆ. ತದನಂತರ ಪೂರ್ಣ ಸಮಯದ ಶುಶ್ರೂಷೆಯನ್ನು ಮುಂದುವರಿಸಲು ಆತುರನಾಗಿದ್ದ ನಾನು ಥೆಸಲೋನಿಕಕ್ಕೆ ಹಿಂದಿರುಗಿದೆ. ನನ್ನ ಪರೀಕ್ಷೆಗಳು ಕೊನೆಗೊಂಡವು ಎಂದು ನಾನು ಆಲೋಚಿಸುತ್ತಿರುವಾಗ, ಅಂದರೆ 1950ರಲ್ಲಿ ಸೈನ್ಯಕ್ಕೆ ಸೇರುವಂತೆ ನನಗೆ ಅನಿರೀಕ್ಷಿತ ಆಜ್ಞೆಯು ಕೊಡಲ್ಪಟ್ಟಿತು. ನನ್ನ ಕ್ರೈಸ್ತ ತಾಟಸ್ಥ್ಯದ ಕಾರಣ ‘ಯುದ್ಧಾಭ್ಯಾಸವನ್ನು’ ಮಾಡಬಾರದೆಂಬ ದೃಢನಿರ್ಧಾರವನ್ನು ನಾನು ಮಾಡಿದ್ದೆ. (ಯೆಶಾಯ 2:4) ಹೀಗೆ, ಗ್ರೀಸ್‌ನ ಕೆಲವು ಕುಖ್ಯಾತ ಸೆರೆಮನೆಗಳಿಗೆ ನನ್ನನ್ನು ಕರೆದೊಯ್ಯಲಿದ್ದ ದೀರ್ಘವಾದ ಯಾತನಾಮಯ ಪ್ರಯಾಣವು ಆರಂಭಗೊಂಡಿತು.
ಅದೆಲ್ಲವೂ ಡ್ರಾಮಾ ನಗರದಲ್ಲಿ ಆರಂಭಗೊಂಡಿತು. ಅಲ್ಲಿನ ಜೈಲುವಾಸದ ಮೊದಲ ವಾರಗಳಲ್ಲಿ, ಹೊಸದಾಗಿ ಸೈನ್ಯಕ್ಕೆ ಸೇರಿಸಲ್ಪಟ್ಟಿದ್ದ ಸೈನಿಕರು ಗುಂಡುಹಾರಿಸುವ ಕೈಚಳಕವನ್ನು ಅಭ್ಯಾಸಮಾಡಲು ಆರಂಭಿಸಿದ್ದರು. ಒಂದು ದಿನ ನನ್ನನ್ನು ಗುಂಡುಹಾರಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ಯಲಾಯಿತು. ಆಫೀಸರುಗಳಲ್ಲಿ ಒಬ್ಬನು ರೈಫಲನ್ನು ನನ್ನ ಮುಂದೆ ತಳ್ಳುತ್ತಾ ಗುಂಡನ್ನು ಹಾರಿಸುವಂತೆ ಆಜ್ಞೆನೀಡಿದನು. ನಾನು ನಿರಾಕರಿಸಿದಾಗ, ಅವನೇ ನನ್ನ ಕಡೆಗೆ ಗುಂಡುಹಾರಿಸತೊಡಗಿದನು. ನಾನು ರಾಜಿಮಾಡಿಕೊಳ್ಳುವುದಿಲ್ಲ ಎಂಬುದು ಬೇರೆ ಆಫೀಸರುಗಳಿಗೆ ಗೊತ್ತಾದಾಗ, ಅವರು ನನಗೆ ಚೆನ್ನಾಗಿ ಗುದ್ದಲಾರಂಭಿಸಿದರು. ಅವರು ಸಿಗರೇಟುಗಳನ್ನು ಹೊತ್ತಿಸಿ, ನನ್ನ ಅಂಗೈಯಲ್ಲಿ ಚುಚ್ಚುವ ಮೂಲಕ ಅವುಗಳನ್ನು ನಂದಿಸಿದರು. ತದನಂತರ ಅವರು ನನ್ನನ್ನು ಏಕಾಂತ ಸೆರೆಕೋಣೆಯಲ್ಲಿ ಇಟ್ಟರು. ಇದೆಲ್ಲವೂ ಮೂರು ದಿನಗಳ ವರೆಗೆ ಮುಂದುವರಿಯಿತು. ಆ ಸಿಗರೇಟುಗಳ ಸುಡುಗಾಯಗಳಿಂದಾದ ನೋವು ಜೀವಹಿಂಡುವಂಥದ್ದಾಗಿತ್ತು ಮತ್ತು ಅನೇಕ ವರ್ಷಗಳ ವರೆಗೆ ಅದರ ಕಲೆಗಳು ನನ್ನ ಕೈಗಳ ಮೇಲಿದ್ದವು.
ಯೆರೆಮೀಯ 1:19ರ ಮಾತುಗಳು ನನ್ನ ಮನಸ್ಸಿಗೆ ಬಂದವು: “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.” ಆಗ ಹಿತಕರವಾದ “ದೇವಶಾಂತಿಯು,” ನನಗೆ ಪ್ರಶಾಂತಭಾವ ಹಾಗೂ ಸಮಾಧಾನವನ್ನು ನೀಡಿತು. ಯೆಹೋವನಲ್ಲಿ ಸಂಪೂರ್ಣ ಭರವಸೆ ಇಡುವುದರ ಹಿಂದಿರುವ ವಿವೇಕವನ್ನು ನಾನು ಅರ್ಥಮಾಡಿಕೊಂಡೆ.—ಫಿಲಿಪ್ಪಿ 4:6, 7; ಜ್ಞಾನೋಕ್ತಿ 3:5.
ಸೈನಿಕ ನ್ಯಾಯಾಲಯದಲ್ಲಿ ನಾನು ವಿಚಾರಣೆಮಾಡಲ್ಪಡುವ ಮುಂಚೆ, ಕ್ರೇಟ್‌ನ ಇರಾಕ್ಲಿಯನ್‌ನಲ್ಲಿದ್ದ ಒಂದು ಮಿಲಿಟರಿ ಶಿಬಿರಕ್ಕೆ ನನ್ನನ್ನು ವರ್ಗಾಯಿಸಲಾಯಿತು. ಅಲ್ಲಿ ನನ್ನ ಸಮಗ್ರತೆಯನ್ನು ಮುರಿಯುವ ಪ್ರಯತ್ನದಲ್ಲಿ ನನಗೆ ತುಂಬ ಥಳಿಸಲಾಯಿತು. ನಾನು ಎಲ್ಲಿ ರಾಜಿಮಾಡಿಕೊಳ್ಳುವೆನೋ ಏನೋ ಎಂಬ ಭಯದಿಂದ ನಾನು ಎಡೆಬಿಡದೆ ಪ್ರಾರ್ಥಿಸಿದೆ ಮತ್ತು ನನ್ನನ್ನು ಬಲಗೊಳಿಸುವಂತೆ ನನ್ನ ಸ್ವರ್ಗೀಯ ತಂದೆಯ ಬಳಿ ಬೇಡಿಕೊಂಡೆ.ತದನಂತರ ನಡೆದ ವಿಚಾರಣೆಯಲ್ಲಿ ನನಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಯೆಹೋವನ ಸಾಕ್ಷಿಗಳನ್ನು ‘ಸರಕಾರದ ಅತಿ ಕೆಡುಕಿನ ವಿರೋಧಿಗಳಾಗಿ’ ಪರಿಗಣಿಸಲಾಯಿತು. ಕೆನಿಯದ ಹೊರಗಿನ ಈಟ್ಸೇಡೇನ್ ಕ್ರಿಮಿನಲ್ ಸೆರೆಮನೆಯಲ್ಲಿ ಜೀವಾವಧಿ ಶಿಕ್ಷೆಯು ಆರಂಭಗೊಂಡಿತು; ಇಲ್ಲಿ ನನ್ನನ್ನು ಏಕಾಂತ ಸೆರೆವಾಸದಲ್ಲಿಡಲಾಗಿತ್ತು. ಈಟ್ಸೇಡೇನ್ ಒಂದು ಹಳೆಯ ಕೋಟೆಯಾಗಿತ್ತು ಮತ್ತು ನನ್ನ ಸೆರೆಕೋಣೆಯು ಇಲಿಗಳಿಂದ ತುಂಬಿತ್ತು. ಇಲಿಗಳು ನನ್ನ ದೇಹದ ಮೇಲೆಲ್ಲಾ ಹರಿದಾಡುವಾಗ ನನ್ನ ದೇಹದೊಂದಿಗೆ ನೇರವಾದ ಸಂಪರ್ಕವನ್ನು ಹೊಂದದಂತೆ ತಡೆಯಲಿಕ್ಕಾಗಿ, ಹರಿದುಹೋದ ಒಂದು ಹಳೆಯ ಕಂಬಳಿಯನ್ನು ತಲೆಯಿಂದ ಕಾಲಿನ ವರೆಗೆ ಸುತ್ತಿಕೊಳ್ಳುತ್ತಿದ್ದೆ. ನಾನು ನ್ಯುಮೋನಿಯದಿಂದ ತುಂಬ ಅಸ್ವಸ್ಥನಾದೆ. ನಾನು ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು ಎಂದು ವೈದ್ಯರು ಹೇಳಿದರು, ಮತ್ತು ಹೀಗೆ ಅಂಗಳದಲ್ಲಿದ್ದ ಸೆರೆವಾಸಿಗಳಲ್ಲಿ ಅನೇಕರೊಂದಿಗೆ ನಾನು ಚರ್ಚೆಗಳನ್ನು ನಡೆಸಲು ಶಕ್ತನಾದೆ. ಆದರೆ ನನ್ನ ಪರಿಸ್ಥಿತಿಯು ಇನ್ನೂ ಹದಗೆಟ್ಟಿತು ಮತ್ತು ನನ್ನ ಶ್ವಾಸಕೋಶಗಳಲ್ಲಿ ವಿಪರೀತ ರಕ್ತಸ್ರಾವವಾದ ಬಳಿಕ ನನ್ನನ್ನು ಇರಾಕ್ಲಿಯನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಜೊತೆ ಕ್ರೈಸ್ತರಿಂದ ಕೂಡಿದ್ದ ನನ್ನ ಆಧ್ಯಾತ್ಮಿಕ ಕುಟುಂಬದ ಅಗತ್ಯ ನನಗಿದ್ದಾಗ ಅವರು ಪುನಃ ನನಗೆ ಸಹಾಯಮಾಡಲು ಮುಂದೆ ಬಂದರು. (ಕೊಲೊಸ್ಸೆ 4:11) ಇರಾಕ್ಲಿಯನ್‌ನಲ್ಲಿದ್ದ ಸಹೋದರರು ನನ್ನನ್ನು ಕ್ರಮವಾಗಿ ಸಂದರ್ಶಿಸಿ, ಸಾಂತ್ವನ ಮತ್ತು ಉತ್ತೇಜನವನ್ನು ನೀಡಿದರು. ಆಸಕ್ತರಿಗೆ ಸಾಕ್ಷಿ ನೀಡಲಿಕ್ಕಾಗಿ ನನಗೆ ಸಾಹಿತ್ಯವು ಬೇಕಾಗಿದೆ ಎಂದು ಅವರಿಗೆ ಹೇಳಿದೆ. ಅವರು ಹುಸಿತಳವಿರುವ ಒಂದು ಸೂಟ್‌ಕೇಸನ್ನು ತಂದುಕೊಟ್ಟರು; ಅದರಲ್ಲಿ ನಾನು ಸಾಹಿತ್ಯವನ್ನು ಸುರಕ್ಷಿತವಾಗಿ ಬಚ್ಚಿಡಸಾಧ್ಯವಿತ್ತು. ನಾನು ಆ ಸೆರೆಮನೆಗಳಲ್ಲಿ ಉಳಿದುಕೊಂಡಿದ್ದಾಗ, ಕಡಿಮೆಪಕ್ಷ ಆರು ಮಂದಿ ಸೆರೆವಾಸಿಗಳು ನಿಜ ಕ್ರೈಸ್ತರಾಗುವಂತೆ ಸಹಾಯಮಾಡಲು ಶಕ್ತನಾದುದಕ್ಕಾಗಿ ನಾನೆಷ್ಟು ಸಂತೋಷಪಡುತ್ತೇನೆ!
ಈ ಮಧ್ಯೆ ಆಂತರಿಕ ಯುದ್ಧವು ಕೊನೆಗೊಂಡಿತು ಮತ್ತು ನನ್ನ ಸೆರೆಯ ಶಿಕ್ಷಾವಧಿಯು ಹತ್ತು ವರ್ಷಗಳಿಗೆ ಇಳಿಸಲ್ಪಟ್ಟಿತು. ನನ್ನ ಶಿಕ್ಷಾವಧಿಯ ಉಳಿದ ಸಮಯವನ್ನು ರೆಥೇಮ್ನೋ, ಜೆಂಟೀ ಕೂಲ್ ಮತ್ತು ಕಾಸಾಂಡ್ರಾದಲ್ಲಿರುವ ಸೆರೆಮನೆಗಳಲ್ಲಿ ಕಳೆದೆ. ಎಂಟು ಸೆರೆಮನೆಗಳಲ್ಲಿ ಸುಮಾರು ಹತ್ತು ವರ್ಷಗಳನ್ನು ಕಳೆದ ಬಳಿಕ ನನ್ನನ್ನು ಬಿಡುಗಡೆಮಾಡಲಾಯಿತು ಮತ್ತು ನಾನು ಥೆಸಲೋನಿಕಕ್ಕೆ ಹಿಂದಿರುಗಿದೆ. ಅಲ್ಲಿ ನನ್ನ ಪ್ರೀತಿಯ ಕ್ರೈಸ್ತ ಸಹೋದರರು ನನ್ನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಕ್ರೈಸ್ತ ಸಹೋದರರ ಬಳಗದಲ್ಲಿ ಸಮೃದ್ಧಿ ಪಡೆಯುವುದು
ಇಷ್ಟರೊಳಗೆ ಗ್ರೀಸ್‌ನಲ್ಲಿದ್ದ ಸಾಕ್ಷಿಗಳು ಆರಾಧನೆಯ ವಿಷಯದಲ್ಲಿ ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯವನ್ನು ಹೊಂದಿದ್ದರು. ಆ ಕೂಡಲೆ ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಕೀರ್ತನೆ 5:11.
ಮುಂದುವರಿಯುವ ಅವಕಾಶವನ್ನು ಸದುಪಯೋಗಿಸಿಕೊಂಡೆ. ಸ್ವಲ್ಪದರಲ್ಲೇ ಇನ್ನೊಂದು ಆಶೀರ್ವಾದವು ಕೂಡಿಸಲ್ಪಟ್ಟಿತು; ಯೆಹೋವನನ್ನು ಪ್ರೀತಿಸುತ್ತಿದ್ದ ಮತ್ತು ಸಾರುವ ಕೆಲಸದಲ್ಲಿ ತುಂಬ ಕ್ರಿಯಾಶೀಲಳಾಗಿದ್ದ ಕಾಟೇನಾ ಎಂಬ ನಂಬಿಗಸ್ತ ಕ್ರೈಸ್ತ ಸಹೋದರಿಯ ಪರಿಚಯ ನನಗಾಯಿತು. ಇಸವಿ 1959ರ ಅಕ್ಟೋಬರ್ ತಿಂಗಳಿನಲ್ಲಿ ನಾವು ಮದುವೆಯಾದೆವು. ನಮ್ಮ ಮಗಳಾದ ಆಗಾಪೀಯ ಜನನ ಮತ್ತು ನನ್ನದೇ ಆದ ಕ್ರೈಸ್ತ ಕುಟುಂಬವನ್ನು ಹೊಂದಿರುವುದು, ನನ್ನ ತಬ್ಬಲಿತನದ ಗಾಯಗಳನ್ನು ಇನ್ನಷ್ಟು ವಾಸಿಮಾಡಿತು. ಎಲ್ಲಕ್ಕಿಂತಲೂ ಹೆಚ್ಚಾಗಿ, ನಮ್ಮ ಕುಟುಂಬವು, ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಾದ ಯೆಹೋವನ ಸಂರಕ್ಷಣಾತ್ಮಕ ಆರೈಕೆಯ ಕೆಳಗೆ ಸೇವೆಮಾಡುವುದರಲ್ಲಿ ಸಂತೃಪ್ತವಾಗಿತ್ತು.—ಗಂಭೀರವಾದ ಆರ್ಥಿಕ ಪರಿಸ್ಥಿತಿಗಳ ಕಾರಣದಿಂದಾಗಿ ನಾನು ಪಯನೀಯರ್ ಸೇವೆಯನ್ನು ನಿಲ್ಲಿಸಬೇಕಾಯಿತಾದರೂ, ನನ್ನ ಹೆಂಡತಿಯು ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿಯುತ್ತಿರುವಾಗ ನಾನು ಅವಳಿಗೆ ಬೆಂಬಲ ನೀಡಿದೆ. ಇಸವಿ 1969ರಲ್ಲಿ, ಜರ್ಮನಿಯ ನ್ಯೂರಂಬರ್ಗ್‌ನಲ್ಲಿ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನವೊಂದು ನಡೆಸಲ್ಪಟ್ಟಾಗ, ನನ್ನ ಕ್ರೈಸ್ತ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ತಲಪಿದೆ. ನಾನು ಅಲ್ಲಿಗೆ ಪ್ರಯಾಣಿಸಲಿಕ್ಕಾಗಿ ಸಿದ್ಧತೆಯನ್ನು ಮಾಡುತ್ತಾ, ಪಾಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಸಲ್ಲಿಸಿದೆ. ಅರ್ಜಿ ಹಾಕಿ ಎರಡು ತಿಂಗಳುಗಳಿಗಿಂತಲೂ ಹೆಚ್ಚು ಸಮಯ ಕಳೆದರೂ ಇನ್ನೂ ಪಾಸ್‌ಪೋರ್ಟ್ ಏಕೆ ಬಂದಿಲ್ಲ ಎಂಬುದನ್ನು ವಿಚಾರಿಸಲಿಕ್ಕಾಗಿ ನನ್ನ ಹೆಂಡತಿಯು ಪೊಲೀಸ್ ಠಾಣೆಗೆ ಹೋದಾಗ, ಒಬ್ಬ ಆಫೀಸರನು ಮೇಜಿನಿಂದ ಒಂದು ದಪ್ಪವಾದ ಫೈಲನ್ನು ಹೊರತೆಗೆದು ಹೇಳಿದ್ದು: “ಈ ವ್ಯಕ್ತಿಯು ಜರ್ಮನಿಯಲ್ಲಿರುವ ಜನರನ್ನು ಮತಾಂತರಿಸಸಾಧ್ಯವಾಗುವಂತೆ ನೀನು ಅವನ ಪಾಸ್‌ಪೋರ್ಟ್‌ಗಾಗಿ ಕೇಳುತ್ತಿದ್ದೀಯಾ? ಕೊಡಲು ಸಾಧ್ಯವೇ ಇಲ್ಲ! ಅವನೊಬ್ಬ ಅಪಾಯಕಾರಿ ವ್ಯಕ್ತಿ.”
ಯೆಹೋವನ ಸಹಾಯದಿಂದ ಮತ್ತು ಕೆಲವು ಸಹೋದರರ ನೆರವಿನಿಂದ, ಒಂದು ಗ್ರೂಪ್ ಪಾಸ್‌ಪೋರ್ಟಿನಲ್ಲಿ ನನ್ನನ್ನು ಒಳಗೂಡಿಸಲಾಯಿತು ಮತ್ತು ನಾನು ಆ ವಿಸ್ಮಯಕರ ಅಧಿವೇಶನಕ್ಕೆ ಹಾಜರಾಗಲು ಶಕ್ತನಾದೆ. ಅದರ ಹಾಜರಿಯ ಉಚ್ಚಾಂಕವು 1,50,000ಕ್ಕಿಂತಲೂ ಹೆಚ್ಚಾಗಿತ್ತು ಮತ್ತು ಈ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕುಟುಂಬವನ್ನು ನಿರ್ದೇಶಿಸುವುದರಲ್ಲಿ ಮತ್ತು ಐಕ್ಯಗೊಳಿಸುವುದರಲ್ಲಿ ಯೆಹೋವನ ಆತ್ಮವಿರುವುದನ್ನು ನಾನು ಸ್ಪಷ್ಟವಾಗಿ ನೋಡಶಕ್ತನಾದೆ. ಸಮಯಾನಂತರ ಜೀವನದಲ್ಲಿ ಕ್ರೈಸ್ತ ಸಹೋದರರ ಬಳಗದ ಮೌಲ್ಯವು ಇನ್ನಷ್ಟು ಅಮೂಲ್ಯವಾಗಿ ಪರಿಣಮಿಸಲಿತ್ತು.
ನನ್ನ ನಂಬಿಗಸ್ತ ಸಂಗಾತಿಯಾಗಿದ್ದ ನನ್ನ ನೆಚ್ಚಿನ ಮಡದಿಯು 1977ರಲ್ಲಿ ಮೃತಪಟ್ಟಳು. ದೇವರ ಮೂಲತತ್ತ್ವಗಳಿಗನುಸಾರ ನನ್ನ ಮಗಳನ್ನು ಬೆಳೆಸಲು ನಾನು ನನ್ನಿಂದಾದಷ್ಟು ಮಟ್ಟಿಗೆ ಪ್ರಯತ್ನಿಸಿದೆ, ಆದರೆ ನಾನು ಒಂಟಿಯಾಗಿಯೇ ಇದನ್ನು ಮಾಡಲಿಲ್ಲ. ಪುನಃ ಒಮ್ಮೆ ನನ್ನ ಆಧ್ಯಾತ್ಮಿಕ ಕುಟುಂಬವು ಸಹಾಯಕ್ಕೆ ಬಂತು. ಈ ಕಷ್ಟಕರ ಸಮಯಾವಧಿಯಲ್ಲಿ ಸಹೋದರರು ನೀಡಿದ ಬೆಂಬಲಕ್ಕೆ ನಾನು ಚಿರಋಣಿ. ಅವರಲ್ಲಿ ಕೆಲವರು ನನ್ನ ಮಗಳನ್ನು ನೋಡಿಕೊಳ್ಳಲಿಕ್ಕಾಗಿ ಸ್ವಲ್ಪ ಕಾಲಾವಧಿಯ ವರೆಗೆ ನಮ್ಮ ಮನೆಗೂ ಬಂದು ಉಳಿದುಕೊಂಡರು. ಅವರ ಸ್ವತ್ಯಾಗಭರಿತ ಪ್ರೀತಿಯನ್ನು ನಾನೆಂದೂ ಮರೆಯಲಾರೆ.—ಯೋಹಾನ 13:34, 35.
ಆಗಾಪೀ ದೊಡ್ಡವಳಾಗಿ, ಈಲೀಅಸ್ ಎಂಬ ಒಬ್ಬ ಸಹೋದರನನ್ನು ಮದುವೆಯಾದಳು. ಅವರಿಗೆ ನಾಲ್ಕು ಮಂದಿ ಗಂಡುಮಕ್ಕಳಿದ್ದಾರೆ ಮತ್ತು ಅವರೆಲ್ಲರೂ ಸತ್ಯದಲ್ಲಿದ್ದಾರೆ. ಇತ್ತೀಚಿನ ವರುಷಗಳಲ್ಲಿ ನನಗೆ ಅನೇಕ ಬಾರಿ ಲಕ್ವಹೊಡೆಯಿತು ಮತ್ತು ನನ್ನ ಆರೋಗ್ಯವು ತುಂಬ ಕ್ಷೀಣಿಸಿದೆ. ನನ್ನ ಮಗಳೂ ಅವಳ ಕುಟುಂಬದವರೂ ತುಂಬ ಚೆನ್ನಾಗಿ ನನ್ನ ಆರೈಕೆಮಾಡುತ್ತಾರೆ. ನನ್ನ ಆರೋಗ್ಯ ಚೆನ್ನಾಗಿಲ್ಲದಿರುವುದಾದರೂ, ಹರ್ಷಿಸಲು ನನಗೆ ಇನ್ನೂ ಅನೇಕ ಕಾರಣಗಳಿವೆ. ಇಡೀ ಥೆಸಲೋನಿಕದಲ್ಲಿ ಸುಮಾರು ನೂರೇ ಮಂದಿ ಸಹೋದರರಿದ್ದು, ಖಾಸಗಿ ಮನೆಗಳಲ್ಲಿ ರಹಸ್ಯವಾಗಿ ಕೂಡಿಬರುತ್ತಿದ್ದದ್ದು ನನಗೆ ನೆನಪಿದೆ. ಈಗ ಈ ಕ್ಷೇತ್ರದಲ್ಲಿ ಸುಮಾರು ಐದು ಸಾವಿರ ಮಂದಿ ಹುರುಪಿನ ಸಾಕ್ಷಿಗಳಿದ್ದಾರೆ. (ಯೆಶಾಯ 60:22) ಅಧಿವೇಶನಗಳಲ್ಲಿ ಯುವಪ್ರಾಯದ ಸಹೋದರರು ನನ್ನ ಬಳಿಗೆ ಬಂದು, “ನಮ್ಮ ಮನೆಗೆ ನೀವು ಪತ್ರಿಕೆಗಳನ್ನು ತರುತ್ತಿದ್ದದ್ದು ನಿಮಗೆ ನೆನಪಿದೆಯೊ?” ಎಂದು ಕೇಳುತ್ತಾರೆ. ಅವರ ಹೆತ್ತವರು ಆ ಪತ್ರಿಕೆಗಳನ್ನು ಓದುತ್ತಿರಲಿಲ್ಲವಾದರೂ, ಅವರ ಮಕ್ಕಳು ಅವುಗಳನ್ನು ಓದುತ್ತಿದ್ದರು ಮತ್ತು ಅವರು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡಿದರು!
ನಾನು ಯೆಹೋವನ ಸಂಘಟನೆಯ ಅಭಿವೃದ್ಧಿಯನ್ನು ಗಮನಿಸುವಾಗೆಲ್ಲಾ, ನಾನು ಸಹಿಸಿದ ಎಲ್ಲಾ ಪರೀಕ್ಷೆಗಳು ನಿಜವಾಗಿಯೂ ಸಾರ್ಥಕವಾದವು ಎಂದು ನನಗನಿಸುತ್ತದೆ. ನಾನು ಯಾವಾಗಲೂ ನನ್ನ ಮೊಮ್ಮಕ್ಕಳಿಗೆ ಮತ್ತು ಇತರ ಯುವ ಜನರಿಗೆ ಅವರು ತಮ್ಮ ಸ್ವರ್ಗೀಯ ತಂದೆಯನ್ನು ಯೌವನ ಪ್ರಾಯದಲ್ಲೇ ಜ್ಞಾಪಿಸಿಕೊಳ್ಳುವಂತೆಯೂ ಮತ್ತು ಆತನೆಂದೂ ಅವರ ಕೈಬಿಡುವುದಿಲ್ಲವೆಂತಲೂ ಹೇಳುತ್ತೇನೆ. (ಪ್ರಸಂಗಿ 12:1) ಯೆಹೋವನು “ತಂದೆಯಿಲ್ಲದ ಹುಡುಗನಾದ” ನನಗೆ “ತಂದೆಯಾಗಿ” (NW) ಪರಿಣಮಿಸುವ ಮೂಲಕ ತನ್ನ ಮಾತುಗಳಿಗನುಸಾರ ನಡೆದುಕೊಂಡಿದ್ದಾನೆ. (ಕೀರ್ತನೆ 68:5) ಜೀವನದ ಆರಂಭದಲ್ಲಿ ನಾನು ತ್ಯಜಿಸಲ್ಪಟ್ಟ ಒಬ್ಬ ತಬ್ಬಲಿಯಾಗಿದ್ದೆನಾದರೂ, ಸಮಯಾನಂತರ ಕಾಳಜಿವಹಿಸುವಂಥ ಒಬ್ಬ ತಂದೆಯನ್ನು ಕಂಡುಕೊಂಡೆ!
[ಪುಟ 22ರಲ್ಲಿರುವ ಚಿತ್ರ]
ಡ್ರಾಮಾದ ಸೆರೆಮನೆಯಲ್ಲಿ ನಾನು ಅಡುಗೆಭಟ್ಟನಾಗಿ ಕೆಲಸಮಾಡಿದೆ
[ಪುಟ 23ರಲ್ಲಿರುವ ಚಿತ್ರ]
1959ರಲ್ಲಿ ನಮ್ಮ ಮದುವೆಯ ದಿನ ಕಾಟೇನಾಳೊಂದಿಗೆ
[ಪುಟ 23ರಲ್ಲಿರುವ ಚಿತ್ರ]
1960ಗಳ ಕೊನೆಯಲ್ಲಿ, ಥೆಸಲೋನಿಕದ ಸಮೀಪದ ಕಾಡೊಂದರಲ್ಲಿನ ಸಮ್ಮೇಳನ
[ಪುಟ 24ರಲ್ಲಿರುವ ಚಿತ್ರ]
1967, ನಮ್ಮ ಮಗಳೊಂದಿಗೆ