ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಮಕ್ಕಳು—ಅಮೂಲ್ಯವಾದ ಸ್ವಾಸ್ತ್ಯ

ನಮ್ಮ ಮಕ್ಕಳು—ಅಮೂಲ್ಯವಾದ ಸ್ವಾಸ್ತ್ಯ

ನಮ್ಮ ಮಕ್ಕಳು—ಅಮೂಲ್ಯವಾದ ಸ್ವಾಸ್ತ್ಯ

“ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ.”​—⁠ಕೀರ್ತನೆ 127:⁠3.

ಪ್ರಥಮ ಸ್ತ್ರೀಪುರುಷರನ್ನು ಯೆಹೋವ ದೇವರು ಸೃಷ್ಟಿಮಾಡಿದ ವಿಧದ ಮೂಲಕ ಆತನು ಸಾಧ್ಯಗೊಳಿಸಿದ ಅದ್ಭುತಕರ ಘಟನೆಗಳನ್ನು ಸ್ವಲ್ಪ ಪರಿಗಣಿಸಿರಿ. ತಂದೆಯಾದ ಆದಾಮನು ಮತ್ತು ತಾಯಿಯಾದ ಹವ್ವ​—⁠ಇವರಿಬ್ಬರೂ ತಮ್ಮ ಸ್ವಶರೀರದಿಂದ ಒಂದು ಭಾಗವನ್ನು ಕೊಟ್ಟರು ಮತ್ತು ಅದು ಹವ್ವಳ ಗರ್ಭದೊಳಗೆ ಪೂರ್ತಿಯಾಗಿ ರೂಪುಗೊಂಡ ಒಂದು ಹೊಸ ವ್ಯಕ್ತಿಯಾಗಿ ಬೆಳೆಯಿತು. ಇದು ಪ್ರಥಮ ಮಾನವ ಶಿಶುವಾಗಿತ್ತು. (ಆದಿಕಾಂಡ 4:⁠1) ಅಂದಿನಿಂದ ಇಂದಿನ ವರೆಗೂ, ಒಂದು ಮಗುವಿನ ಗರ್ಭಧಾರಣೆ ಮತ್ತು ಜನನವು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ ಮತ್ತು ಅನೇಕರು ಇದನ್ನು ಒಂದು ನಿಜವಾದ ಅದ್ಭುತವೆಂದು ವರ್ಣಿಸಿದ್ದಾರೆ.

2 ತಂದೆ ಮತ್ತು ತಾಯಿಯ ಮಿಲನದ ಫಲವಾಗಿ ತಾಯಿಯ ಗರ್ಭದಲ್ಲಿ ಉತ್ಪಾದಿಸಲ್ಪಟ್ಟ ಮೂಲ ಜೀವಕೋಶವು, ಸುಮಾರು 270 ದಿನಗಳೊಳಗೆ ಕೋಟ್ಯಂತರ ಜೀವಕೋಶಗಳುಳ್ಳ ಒಂದು ಶಿಶುವಾಗಿ ಬೆಳೆಯುತ್ತದೆ. ಆ ಮೂಲ ಜೀವಕೋಶದೊಳಗೆ 200ಕ್ಕೂ ಹೆಚ್ಚು ವಿಧದ ಜೀವಕೋಶಗಳನ್ನು ತಯಾರಿಸಲು ಬೇಕಾಗಿರುವ ಮಾಹಿತಿಯು ಅಡಕವಾಗಿರುತ್ತದೆ. ಮಾನವ ಗ್ರಹಿಕೆಯನ್ನು ಮೀರುವ ಆ ಅಪೂರ್ವವಾದ ಮಾಹಿತಿಯನ್ನು ಅನುಸರಿಸಿ, ಅದ್ಭುತಕರವಾದ ಜಟಿಲತೆಯನ್ನು ಒಳಗೊಂಡಿರುವ ಈ ಜೀವಕೋಶಗಳು, ಒಬ್ಬ ಹೊಸ ಜೀವಂತ ವ್ಯಕ್ತಿಯನ್ನು ರಚಿಸಲಿಕ್ಕಾಗಿ ಸರಿಯಾದ ಕ್ರಮದಲ್ಲಿ ಮತ್ತು ರೀತಿಯಲ್ಲಿ ಬೆಳೆಯುತ್ತವೆ!

3 ಹೀಗಿರುವಾಗ, ಆ ಶಿಶುವಿನ ನಿಜ ನಿರ್ಮಾಣಿಕನು ಯಾರೆಂದು ನೀವು ಹೇಳುವಿರಿ? ಮೂಲತಃ ಯಾರು ಜೀವವನ್ನು ಸೃಷ್ಟಿಸಿದನೋ ಆತನೇ ಎಂಬುದಂತೂ ಖಂಡಿತ. ಬೈಬಲ್‌ ಕೀರ್ತನೆಗಾರನು ಹಾಡಿದ್ದು: “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ.” (ಕೀರ್ತನೆ 100:3) ಹೆತ್ತವರೇ, ನಿಮ್ಮಲ್ಲಿರುವಂಥ ಯಾವುದೋ ಅಸಾಧಾರಣ ಸಾಮರ್ಥ್ಯದಿಂದ ನೀವು ಇಂಥ ಒಂದು ಅಮೂಲ್ಯ ಶಿಶುವನ್ನು ಉಂಟುಮಾಡಿಲ್ಲ ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ. ಒಬ್ಬ ಹೊಸ ಜೀವಂತ ಮಾನವನ ಅದ್ಭುತಕರ ರಚನೆಗೆ, ಅಪರಿಮಿತ ವಿವೇಕವಿರುವ ದೇವರು ಮಾತ್ರವೇ ಕಾರಣನಾಗಿರಸಾಧ್ಯವಿದೆ. ಸಾವಿರಾರು ವರ್ಷಗಳಿಂದಲೂ ತರ್ಕಬದ್ಧವಾಗಿ ಆಲೋಚಿಸುವಂಥ ಜನರು, ಒಬ್ಬ ತಾಯಿಯ ಗರ್ಭದೊಳಗೆ ಒಂದು ಮಗುವಿನ ರೂಪುಗೊಳ್ಳುವಿಕೆಗಾಗಿ ಮಹಾನ್‌ ಸೃಷ್ಟಿಕರ್ತನಿಗೆ ಕೀರ್ತಿ ಸಲ್ಲಿಸಿದ್ದಾರೆ. ನೀವೂ ಆತನಿಗೆ ಕೀರ್ತಿ ಸಲ್ಲಿಸುತ್ತೀರೊ?​—⁠ಕೀರ್ತನೆ 139:13-16.

4 ಆದರೂ, ಯೆಹೋವನು ಸ್ತ್ರೀಪುರುಷರು ತಮ್ಮ ಸಂತಾನವನ್ನು ಉತ್ಪಾದಿಸಸಾಧ್ಯವಾಗುವಂತೆ ಒಂದು ಜೀವಶಾಸ್ತ್ರೀಯ ಕಾರ್ಯಗತಿಯನ್ನು ಆರಂಭಿಸಿದಂಥ ಕೇವಲ ಒಬ್ಬ ಭಾವಶೂನ್ಯ ಸೃಷ್ಟಿಕರ್ತನಾಗಿದ್ದಾನೊ? ಕೆಲವು ಮಾನವರು ಭಾವಶೂನ್ಯರಾಗಿರುತ್ತಾರೆ, ಆದರೆ ಯೆಹೋವನು ಎಂದಿಗೂ ಹಾಗಿರುವುದಿಲ್ಲ. (ಕೀರ್ತನೆ 78:38-40) ಕೀರ್ತನೆ 127:3ರಲ್ಲಿ ಬೈಬಲ್‌ ತಿಳಿಸುವುದು: “ಪುತ್ರ [ಮತ್ತು ಪುತ್ರಿಯರ]ಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ.” ಸ್ವಾಸ್ತ್ಯ ಎಂದರೇನು ಮತ್ತು ಅದು ಯಾವುದರ ಪುರಾವೆಯನ್ನು ನೀಡುತ್ತದೆ ಎಂಬುದನ್ನು ನಾವೀಗ ಪರಿಗಣಿಸೋಣ.

ಒಂದು ಸ್ವಾಸ್ತ್ಯ ಮತ್ತು ಒಂದು ಬಹುಮಾನ

5 ಒಂದು ಸ್ವಾಸ್ತ್ಯವು ಒಂದು ಕೊಡುಗೆಯಂತಿದೆ. ಅನೇಕವೇಳೆ ಹೆತ್ತವರು ತಮ್ಮ ಮಕ್ಕಳಿಗೆ ಒಂದು ಸ್ವಾಸ್ತ್ಯವನ್ನು ಬಿಟ್ಟುಹೋಗಲಿಕ್ಕಾಗಿ ಹಗಲೂರಾತ್ರಿ ಕಷ್ಟಪಡುತ್ತಾರೆ. ಈ ಸ್ವಾಸ್ತ್ಯವು ಹಣ, ಆಸ್ತಿ, ಅಥವಾ ಅತಿ ಅಮೂಲ್ಯವಾಗಿರುವ ಒಂದು ವಸ್ತು ಆಗಿರಬಹುದು. ಅದೇನೇ ಆಗಿರಲಿ, ಅದು ಹೆತ್ತವರ ಪ್ರೀತಿಯ ರುಜುವಾತಾಗಿದೆ. ದೇವರು ಹೆತ್ತವರಿಗೆ ಮಕ್ಕಳನ್ನು ಒಂದು ಸ್ವಾಸ್ತ್ಯವಾಗಿ ಕೊಟ್ಟಿದ್ದಾನೆಂದು ಬೈಬಲು ತಿಳಿಸುತ್ತದೆ. ಮಕ್ಕಳು ಆತನಿಂದ ಕೊಡಲ್ಪಟ್ಟಿರುವ ಪ್ರೀತಿಯ ಕೊಡುಗೆಯಾಗಿದ್ದಾರೆ. ಒಂದುವೇಳೆ ನೀವೊಬ್ಬ ಹೆತ್ತವರಾಗಿರುವಲ್ಲಿ, ನೀವು ನಿಮ್ಮ ಪುಟ್ಟ ಮಕ್ಕಳನ್ನು ವಿಶ್ವದ ಸೃಷ್ಟಿಕರ್ತನು ನಿಮ್ಮ ವಶಕ್ಕೆ ಕೊಟ್ಟಿರುವ ಒಂದು ಕೊಡುಗೆಯಾಗಿ ವೀಕ್ಷಿಸುತ್ತೀರೆಂದು ನಿಮ್ಮ ಕ್ರಿಯೆಗಳಿಂದ ತೋರಿಸುತ್ತೀರೊ?

6 ಯೆಹೋವನು ಈ ಉಡುಗೊರೆಯನ್ನು ಒದಗಿಸಿದ ಉದ್ದೇಶವು, ಈ ಭೂಮಿಯು ಆದಾಮಹವ್ವರ ಸಂತತಿಯವರಿಂದ ತುಂಬಿಕೊಳ್ಳಬೇಕು ಎಂಬುದೇ ಆಗಿತ್ತು. (ಆದಿಕಾಂಡ 1:27, 28; ಯೆಶಾಯ 45:18) ಯೆಹೋವನು ಕೋಟಿಗಟ್ಟಲೆ ದೇವದೂತರನ್ನು ವೈಯಕ್ತಿಕವಾಗಿ ಸೃಷ್ಟಿಸಿದಂತೆ ಪ್ರತಿಯೊಬ್ಬ ಮಾನವನನ್ನು ವೈಯಕ್ತಿಕವಾಗಿ ಸೃಷ್ಟಿಸಲಿಲ್ಲ. (ಕೀರ್ತನೆ 104:4; ಪ್ರಕಟನೆ 4:11) ಅದಕ್ಕೆ ಬದಲಾಗಿ, ಹೆತ್ತವರನ್ನು ಹೋಲುವಂಥ ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯದೊಂದಿಗೆ ಮಾನವರನ್ನು ಸೃಷ್ಟಿಸುವ ಆಯ್ಕೆಯನ್ನು ದೇವರು ಮಾಡಿದನು. ಅಂಥ ಹೊಸ ವ್ಯಕ್ತಿಗೆ ಜನ್ಮನೀಡಿ, ಆರೈಕೆಮಾಡುವುದು ತಂದೆತಾಯಿಗಳಿಗೆ ಎಂಥ ಅಪೂರ್ವ ಸುಯೋಗವಾಗಿದೆ! ಹೆತ್ತವರಾಗಿರುವ ನೀವು, ಈ ಅಮೂಲ್ಯ ಸ್ವಾಸ್ತ್ಯದಿಂದ ಆನಂದವನ್ನು ಪಡೆದುಕೊಳ್ಳುವಂತೆ ಸಾಧ್ಯಗೊಳಿಸಿದ್ದಕ್ಕಾಗಿ ಯೆಹೋವನಿಗೆ ಉಪಕಾರ ಹೇಳುತ್ತೀರೋ?

ಯೇಸುವಿನ ಮಾದರಿಯಿಂದ ಪಾಠವನ್ನು ಕಲಿಯಿರಿ

7 ವಿಷಾದಕರ ಸಂಗತಿಯೇನೆಂದರೆ, ಎಲ್ಲಾ ಹೆತ್ತವರು ಮಕ್ಕಳನ್ನು ಒಂದು ಬಹುಮಾನವಾಗಿ ಪರಿಗಣಿಸುವುದಿಲ್ಲ. ಅನೇಕರು ತಮ್ಮ ಮಕ್ಕಳಿಗೆ ಸ್ವಲ್ಪವೂ ಕರುಣೆಯನ್ನು ತೋರಿಸುವುದಿಲ್ಲ. ಅಂಥ ಹೆತ್ತವರು ಯೆಹೋವನ ಅಥವಾ ಆತನ ಮಗನ ಮನೋಭಾವವನ್ನು ಸ್ವಲ್ಪವೂ ಅನುಕರಿಸುವುದಿಲ್ಲ. (ಕೀರ್ತನೆ 27:10; ಯೆಶಾಯ 49:15) ಇಂಥ ಹೆತ್ತವರಿಗೆ ವ್ಯತಿರಿಕ್ತವಾಗಿ, ಯೇಸುವಿಗೆ ಪುಟ್ಟ ಮಕ್ಕಳಲ್ಲಿದ್ದ ಆಸಕ್ತಿಯನ್ನು ಪರಿಗಣಿಸಿರಿ. ಯೇಸು ಒಬ್ಬ ಮಾನವನಾಗಿ ಭೂಮಿಗೆ ಬರುವುದಕ್ಕೂ ಮೊದಲೇ, ಅಂದರೆ ಅವನು ಸ್ವರ್ಗದಲ್ಲಿ ಬಲಿಷ್ಠ ಆತ್ಮ ವ್ಯಕ್ತಿಯಾಗಿದ್ದಾಗಲೇ, “ನರಪುತ್ರರಲ್ಲಿ ಪೂರ್ಣ ಹರ್ಷವನ್ನು ಕಂಡುಕೊಳ್ಳುತ್ತಿದ್ದನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 8:​31, ರಾಥರ್‌ಹ್ಯಾಮ್‌) ಮಾನವರ ಕಡೆಗಿನ ಅವನ ಪ್ರೀತಿಯು ಎಷ್ಟು ಅಪಾರವಾಗಿತ್ತೆಂದರೆ, ನಾವು ನಿತ್ಯಜೀವವನ್ನು ಪಡೆಯಸಾಧ್ಯವಾಗುವಂತೆ ಅವನು ಮನಃಪೂರ್ವಕವಾಗಿ ತನ್ನ ಜೀವವನ್ನು ಒಂದು ವಿಮೋಚನಾ ಮೌಲ್ಯವಾಗಿ ಅರ್ಪಿಸಿದನು.​—⁠ಮತ್ತಾಯ 20:28; ಯೋಹಾನ 10:⁠18.

8 ಯೇಸು ಭೂಮಿಯಲ್ಲಿದ್ದಾಗ, ವಿಶೇಷವಾಗಿ ಹೆತ್ತವರಿಗೆ ಅತ್ಯುತ್ತಮವಾದ ಮಾದರಿಯನ್ನು ಇಟ್ಟನು. ಅವನು ಏನು ಮಾಡಿದನು ಎಂಬುದನ್ನು ಪರಿಗಣಿಸಿರಿ. ಅವನು ತುಂಬ ಕಾರ್ಯನಿರತನಾಗಿದ್ದು ಒತ್ತಡದ ಕೆಳಗಿದ್ದಾಗಲೂ ಮಕ್ಕಳಿಗೋಸ್ಕರ ಸಮಯವನ್ನು ಮಾಡಿಕೊಂಡನು. ಪೇಟೆಯಲ್ಲಿ ಮಕ್ಕಳು ಆಡುತ್ತಿರುವುದನ್ನು ಅವನು ನಿಕಟವಾಗಿ ಗಮನಿಸಿದನು ಮತ್ತು ಅವರ ವರ್ತನೆಯ ಕೆಲವೊಂದು ಅಂಶಗಳನ್ನು ತನ್ನ ಬೋಧನೆಯಲ್ಲಿ ಉಪಯೋಗಿಸಿದನು. (ಮತ್ತಾಯ 11:16, 17) ಯೆರೂಸಲೇಮಿಗೆ ಮಾಡಿದ ಅಂತಿಮ ಪ್ರಯಾಣದ ಸಮಯದಲ್ಲಿ, ತಾನು ಕಷ್ಟಾನುಭವಿಸಿ ಕೊಲ್ಲಲ್ಪಡುವೆ ಎಂಬುದು ಯೇಸುವಿಗೆ ಗೊತ್ತಿತ್ತು. ಆದುದರಿಂದ, ಜನರು ತಮ್ಮ ಮಕ್ಕಳನ್ನು ಯೇಸುವಿನ ಬಳಿಗೆ ಕರೆತಂದಾಗ, ಇನ್ನೂ ಹೆಚ್ಚಿನ ಒತ್ತಡವನ್ನು ಅವನ ಮೇಲೆ ಹಾಕದಿರಲಿಕ್ಕಾಗಿ ಅವನ ಶಿಷ್ಯರು ಮಕ್ಕಳನ್ನು ಹಿಂದೆ ಕಳುಹಿಸಲು ಯತ್ನಿಸಿದರು. ಆದರೆ ಯೇಸು ತನ್ನ ಶಿಷ್ಯರನ್ನು ಗದರಿಸಿದನು. ಪುಟ್ಟ ಮಕ್ಕಳಲ್ಲಿ ತನಗಿರುವ “ಪೂರ್ಣ ಹರ್ಷವನ್ನು” ತೋರಿಸುತ್ತಾ ಅವನಂದದ್ದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ.”​—⁠ಮಾರ್ಕ 10:13, 14.

9 ಯೇಸುವಿನ ಮಾದರಿಯಿಂದ ನಾವು ಪಾಠವನ್ನು ಕಲಿಯಸಾಧ್ಯವಿದೆ. ಎಳೆಯರು ನಮ್ಮ ಬಳಿಗೆ ಬರುವಾಗ, ನಾವು ಕಾರ್ಯನಿರತರಾಗಿರುವುದಾದರೂ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ? ಯೇಸುವಿನಂತೆಯೊ? ಯೇಸು ಮಕ್ಕಳಿಗೆ ಏನು ಅಗತ್ಯವಿದೆಯೋ ಅದನ್ನು, ಅಂದರೆ ಅವನ ಸಮಯ ಮತ್ತು ಗಮನವನ್ನು ಕೊಡಲು ಸಿದ್ಧನಿದ್ದನು. ಮಕ್ಕಳಿಗೆ ವಿಶೇಷವಾಗಿ ಹೆತ್ತವರಿಂದ ಅಗತ್ಯವಿರುವುದು ಇದೇ. “ನಿನ್ನನ್ನು ಪ್ರೀತಿಸುತ್ತೇನೆ” ಎಂಬ ಮಾತುಗಳು ಪ್ರಾಮುಖ್ಯವಾಗಿವೆ ಎಂಬುದು ನಿಜ. ಆದರೂ, ನುಡಿಗಿಂತ ನಡೆಯೇ ಮೇಲಾಗಿದೆ. ನಿಮ್ಮ ಪ್ರೀತಿಯು ನೀವು ಕೇವಲ ಏನು ಹೇಳುತ್ತೀರೋ ಅದರಿಂದ ಮಾತ್ರವಲ್ಲ, ನೀವು ಏನು ಮಾಡುತ್ತೀರೋ ಅದರಿಂದಲೂ ಸುವ್ಯಕ್ತವಾಗುತ್ತದೆ. ನೀವು ನಿಮ್ಮ ಪುಟ್ಟ ಮಕ್ಕಳಿಗೆ ಕೊಡುವ ಸಮಯ, ಗಮನ ಮತ್ತು ಆರೈಕೆಯ ಮೂಲಕ ಇದು ತೋರಿಸಲ್ಪಡುತ್ತದೆ. ಆದರೆ, ಇದೆಲ್ಲವನ್ನೂ ಮಾಡುವುದು ಕಣ್ಣಿಗೆ ಬೀಳುವಂಥ ಫಲಿತಾಂಶಗಳನ್ನು ಉತ್ಪಾದಿಸದಿರಬಹುದು ಮತ್ತು ಅದು ನೀವು ನಿರೀಕ್ಷಿಸುವಷ್ಟು ಬೇಗನೆ ಕಂಡುಬರದಿರಬಹುದು. ಆದುದರಿಂದ ತಾಳ್ಮೆಯು ಆವಶ್ಯಕವಾಗಿದೆ. ಯೇಸು ತನ್ನ ಶಿಷ್ಯರೊಂದಿಗೆ ವ್ಯವಹರಿಸಿದ ವಿಧವನ್ನು ಅನುಕರಿಸುವ ಮೂಲಕ ನಾವು ತಾಳ್ಮೆಯನ್ನು ಕಲಿಯಸಾಧ್ಯವಿದೆ.

ಯೇಸುವಿನ ತಾಳ್ಮೆ ಮತ್ತು ಮಮತೆ

10 ತನ್ನ ಶಿಷ್ಯರ ನಡುವೆ ಯಾವಾಗಲೂ ಕೀರ್ತಿ ಹಾಗೂ ಪ್ರತಿಷ್ಠೆಗಾಗಿ ನಡೆಯುತ್ತಿದ್ದ ಸ್ಪರ್ಧೆಯ ಕುರಿತು ಯೇಸು ತಿಳಿದವನಾಗಿದ್ದನು. ಒಂದು ದಿನ ತನ್ನ ಶಿಷ್ಯರೊಂದಿಗೆ ಕಪೆರ್ನೌಮಿಗೆ ಆಗಮಿಸಿದ ಬಳಿಕ ಅವನು “ನೀವು ದಾರಿಯಲ್ಲಿ ಏನು ಮಾತಾಡಿಕೊಳ್ಳುತ್ತಿದ್ದಿರಿ ಎಂದು ಶಿಷ್ಯರನ್ನು ಕೇಳಲು ಅವರು ಸುಮ್ಮನಿದ್ದರು; ಯಾಕಂದರೆ ಅವರು ದಾರಿಯಲ್ಲಿ ಒಬ್ಬರಕೂಡೊಬ್ಬರು​—⁠[ತಮ್ಮಲ್ಲಿ] ಯಾವನು ಹೆಚ್ಚಿನವನೆಂದು ವಾಗ್ವಾದಮಾಡಿಕೊಂಡಿದ್ದರು.” ಅವರನ್ನು ಕಠೋರವಾಗಿ ಗದರಿಸುವುದಕ್ಕೆ ಬದಲಾಗಿ, ಯೇಸು ಅವರಿಗೆ ದೀನಭಾವವನ್ನು ಕಲಿಸುವ ಪ್ರಯತ್ನದಲ್ಲಿ ಒಂದು ವಸ್ತುಪಾಠವನ್ನು ಒದಗಿಸಿದನು. (ಮಾರ್ಕ 9:33-37) ಇದು ಅಪೇಕ್ಷಿತ ಫಲಿತಾಂಶಗಳನ್ನು ತಂದಿತೊ? ಆ ಕೂಡಲೆ ತರಲಿಲ್ಲ. ಸುಮಾರು ಆರು ತಿಂಗಳುಗಳು ಕಳೆದ ಬಳಿಕ, ಯಾಕೋಬ ಮತ್ತು ಯೋಹಾನರು ರಾಜ್ಯದಲ್ಲಿ ಪ್ರಧಾನ ಸ್ಥಾನಗಳನ್ನು ಕೊಡುವಂತೆ ಯೇಸುವನ್ನು ಕೇಳಿಕೊಳ್ಳಲಿಕ್ಕಾಗಿ ತಮ್ಮ ತಾಯಿಯನ್ನು ಕಳುಹಿಸಿದರು. ಪುನಃ ಒಮ್ಮೆ ಯೇಸು ಅವರ ಆಲೋಚನಾ ರೀತಿಯನ್ನು ತಾಳ್ಮೆಯಿಂದ ತಿದ್ದಿದನು.​—⁠ಮತ್ತಾಯ 20:20-28.

11 ತದನಂತರ ಸ್ವಲ್ಪದರಲ್ಲೇ ಸಾ.ಶ. 33ರ ಪಸ್ಕಹಬ್ಬವು ಆಗಮಿಸಿತು ಮತ್ತು ಇದನ್ನು ಆಚರಿಸಲಿಕ್ಕಾಗಿ ಯೇಸು ತನ್ನ ಅಪೊಸ್ತಲರೊಂದಿಗೆ ಖಾಸಗಿಯಾಗಿ ಕೂಡಿಬಂದನು. ಅವರು ಮೇಲಂತಸ್ತಿನ ಕೋಣೆಗೆ ಬಂದಾಗ, ಇತರರ ಧೂಳುಭರಿತ ಪಾದಗಳನ್ನು ತೊಳೆಯುವ ಸಾಂಪ್ರದಾಯಿಕ ಸೇವೆಯನ್ನು ಮಾಡಲು ಆ 12 ಮಂದಿ ಅಪೊಸ್ತಲರಲ್ಲಿ ಒಬ್ಬರೂ ಮುಂದೆಬರಲಿಲ್ಲ; ಸಾಮಾನ್ಯವಾಗಿ ಇದು ಒಬ್ಬ ಸೇವಕನಿಂದ ಅಥವಾ ಮನೆವಾರ್ತೆಯ ಒಬ್ಬ ಸ್ತ್ರೀಯಿಂದ ನಿರ್ವಹಿಸಲ್ಪಡುತ್ತಿದ್ದ ಕೀಳುಕೆಲಸವಾಗಿತ್ತು. (1 ಸಮುವೇಲ 25:41; 1 ತಿಮೊಥೆಯ 5:10) ಆಗಲೂ ತನ್ನ ಶಿಷ್ಯರು ಸ್ಥಾನಮಾನವನ್ನು ಆಶಿಸುತ್ತಾ ಮುಂದುವರಿಯುತ್ತಿರುವುದನ್ನು ನೋಡಿ ಯೇಸುವಿಗೆಷ್ಟು ದುಃಖವಾಗಿದ್ದಿರಬೇಕು! ಆದುದರಿಂದಲೇ ಯೇಸು ಅವರಲ್ಲಿ ಪ್ರತಿಯೊಬ್ಬರ ಪಾದಗಳನ್ನು ತೊಳೆದನು ಮತ್ತು ಇತರರ ಸೇವೆಮಾಡುವುದರಲ್ಲಿ ತನ್ನ ಮಾದರಿಯನ್ನು ಅನುಸರಿಸುವಂತೆ ಅವರಿಗೆ ಕಳಕಳಿಯಿಂದ ವಿನಂತಿಸಿಕೊಂಡನು. (ಯೋಹಾನ 13:4-17) ಅವರು ಅವನ ಮಾದರಿಯನ್ನು ಅನುಸರಿಸಿದರೋ? ಅದೇ ದಿನ ಸಾಯಂಕಾಲ “ತಮ್ಮಲ್ಲಿ ಯಾವನು ಹೆಚ್ಚಿನವನೆನಿಸಿಕೊಳ್ಳುವವನು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು” ಎಂದು ಬೈಬಲ್‌ ತಿಳಿಸುತ್ತದೆ.​—⁠ಲೂಕ 22:24.

12 ನಿಮ್ಮ ಮಕ್ಕಳು ನಿಮ್ಮ ಸಲಹೆಗನುಸಾರ ಕ್ರಿಯೆಗೈಯದಿರುವಾಗ, ಯೇಸುವಿಗೆ ಆಗ ಹೇಗನಿಸಿದ್ದಿರಬಹುದು ಎಂಬುದನ್ನು ಹೆತ್ತವರಾದ ನೀವು ಅರ್ಥಮಾಡಿಕೊಳ್ಳುತ್ತೀರೋ? ತನ್ನ ಅಪೊಸ್ತಲರು ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವುದರಲ್ಲಿ ತುಂಬ ನಿಧಾನಿಗಳಾಗಿದ್ದರೂ ಅವರಿಗೆ ಸಹಾಯಮಾಡುವ ಪ್ರಯತ್ನವನ್ನು ಯೇಸು ನಿಲ್ಲಿಸಲಿಲ್ಲ ಎಂಬುದನ್ನು ನೆನಪಿನಲ್ಲಿಡಿರಿ. ಅವನ ತಾಳ್ಮೆಯು ಕಾಲಕ್ರಮೇಣ ಒಳ್ಳೇ ಫಲಿತಾಂಶಗಳನ್ನು ತಂದಿತ್ತು. (1 ಯೋಹಾನ 3:14, 18) ಹೆತ್ತವರೇ, ನಿಮ್ಮ ಮಕ್ಕಳಿಗೆ ತರಬೇತಿ ನೀಡುವ ನಿಮ್ಮ ಪ್ರಯತ್ನಗಳನ್ನು ಎಂದಿಗೂ ಕೈಬಿಡದೆ, ಯೇಸುವಿನ ಪ್ರೀತಿ ಮತ್ತು ತಾಳ್ಮೆಯನ್ನು ನೀವು ಚೆನ್ನಾಗಿ ಅನುಕರಿಸಬೇಕು.

13 ಹೆತ್ತವರು ತಮ್ಮನ್ನು ಪ್ರೀತಿಸುತ್ತಾರೆ ಮತ್ತು ತಮ್ಮ ಬಗ್ಗೆ ಅವರಿಗೆ ಕಾಳಜಿಯಿದೆ ಎಂಬುದನ್ನು ಎಳೆಯರು ಅರಿತಿರುವ ಅಗತ್ಯವಿದೆ. ತನ್ನ ಶಿಷ್ಯರು ಏನು ಆಲೋಚಿಸುತ್ತಿದ್ದಾರೆ ಎಂಬುದನ್ನು ಯೇಸು ತಿಳಿದುಕೊಳ್ಳಲು ಬಯಸಿದನು, ಆದುದರಿಂದಲೇ ಅವರಿಗೆ ಪ್ರಶ್ನೆಗಳಿದ್ದಾಗ ಅವನು ಚೆನ್ನಾಗಿ ಕಿವಿಗೊಟ್ಟನು. ಕೆಲವೊಂದು ವಿಷಯಗಳಲ್ಲಿ ಅವನು ಅವರ ಅಭಿಪ್ರಾಯವನ್ನು ಕೇಳಿದನು. (ಮತ್ತಾಯ 17:25-27) ಹೌದು, ಪರಿಣಾಮಕಾರಿಯಾದ ಬೋಧಿಸುವಿಕೆಯಲ್ಲಿ ಗಮನಕೊಟ್ಟು ಆಲಿಸುವುದು ಮತ್ತು ನಿಜವಾದ ಆಸಕ್ತಿಯನ್ನು ತೋರಿಸುವುದೂ ಒಳಗೂಡಿದೆ. ಏನೋ ಪ್ರಶ್ನೆ ಕೇಳುತ್ತಾ ಬರುವ ಮಗುವಿಗೆ, “ಇಲ್ಲಿಂದ ಹೋಗು! ನನಗೆ ತುಂಬ ಕೆಲಸವಿದೆ, ನಿನಗೆ ಕಾಣುವುದಿಲ್ಲವಾ?” ಎಂದು ಒರಟಾಗಿ ಪ್ರತಿಕ್ರಿಯಿಸಿ ಕಳುಹಿಸಿಬಿಡುವ ಪ್ರವೃತ್ತಿಯನ್ನು ಹೆತ್ತವರು ಪ್ರತಿರೋಧಿಸಬೇಕು. ತಂದೆ/ತಾಯಿ ನಿಜವಾಗಿಯೂ ಕಾರ್ಯನಿರತರಾಗಿರುವಲ್ಲಿ, ಆ ವಿಷಯವನ್ನು ಆ ಮೇಲೆ ಚರ್ಚಿಸೋಣ ಎಂದು ಮಗುವಿಗೆ ಹೇಳಬೇಕು. ತದನಂತರ ಈ ವಿಷಯವು ಚರ್ಚಿಸಲ್ಪಡುವುದನ್ನು ಹೆತ್ತವರು ಖಚಿತಪಡಿಸಿಕೊಳ್ಳಬೇಕು. ಈ ರೀತಿಯಲ್ಲಿ, ಹೆತ್ತವರಿಗೆ ತನ್ನಲ್ಲಿ ನಿಜವಾಗಿಯೂ ಕಾಳಜಿಯಿದೆ ಎಂಬುದನ್ನು ಮಗುವು ಗ್ರಹಿಸುತ್ತದೆ ಮತ್ತು ಮನಬಿಚ್ಚಿ ತನ್ನ ಅಂತರಂಗದಲ್ಲಿರುವ ವಿಷಯಗಳನ್ನು ಹೇಳುತ್ತದೆ.

14 ಹೆತ್ತವರು ತಮ್ಮ ಮಕ್ಕಳನ್ನು ತೋಳುಗಳಲ್ಲಿ ಅಪ್ಪಿಕೊಂಡು ವಾತ್ಸಲ್ಯವನ್ನು ತೋರಿಸುವುದು ಸೂಕ್ತವಾದದ್ದಾಗಿದೆಯೋ? ಈ ವಿಷಯದಲ್ಲಿಯೂ ಹೆತ್ತವರು ಯೇಸುವಿನಿಂದ ಪಾಠವನ್ನು ಕಲಿಯಸಾಧ್ಯವಿದೆ. ಅವನು “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು” ಎಂದು ಬೈಬಲ್‌ ಹೇಳುತ್ತದೆ. (ಮಾರ್ಕ 10:16) ಆಗ ಆ ಮಕ್ಕಳು ಹೇಗೆ ಪ್ರತಿಕ್ರಿಯಿಸಿದ್ದಿರಬಹುದು ಎಂದು ನೀವು ನೆನಸುತ್ತೀರಿ? ನಿಶ್ಚಯವಾಗಿಯೂ ಅವರ ಹೃದಯಗಳು ಆದರದಿಂದ ತುಂಬಿದವು ಮತ್ತು ಅವರು ಯೇಸುವಿನ ಕಡೆಗೆ ಸೆಳೆಯಲ್ಪಟ್ಟರು! ಹೆತ್ತವರೇ ನಿಮ್ಮ ಹಾಗೂ ನಿಮ್ಮ ಮಕ್ಕಳ ಮಧ್ಯೆ ನಿಜವಾದ ಪ್ರೀತಿ ಮತ್ತು ಮಮತೆಗಳಿರುವಲ್ಲಿ, ಅವರಿಗೆ ಶಿಸ್ತನ್ನು ನೀಡಲು ಹಾಗೂ ಬೋಧಿಸಲು ನೀವು ಮಾಡುವ ಪ್ರಯತ್ನಗಳಿಗೆ ಅವರು ಹೆಚ್ಚು ಸಿದ್ಧಮನಸ್ಸಿನಿಂದ ಸ್ಪಂದಿಸುವರು.

ಮಕ್ಕಳೊಂದಿಗೆ ಎಷ್ಟು ಸಮಯವನ್ನು ವ್ಯಯಿಸಬೇಕು ಎಂಬ ಪ್ರಶ್ನೆ

15 ಮಕ್ಕಳಿಗೆ ನಿಜವಾಗಿಯೂ ತಮ್ಮ ಹೆತ್ತವರ ಸಮಯ ಹಾಗೂ ಪ್ರೀತಿಪರ ಗಮನದ ಆಗತ್ಯವಿದೆಯೋ ಎಂದು ಕೆಲವರು ಕೇಳಿದ್ದಾರೆ. ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಜಾಣತನದಿಂದ ಹಬ್ಬಿಸಲ್ಪಟ್ಟಿರುವ ಒಂದು ಕಲ್ಪನೆಯು, ಗುಣಮಟ್ಟದ ಸಮಯ ಎಂದು ಕರೆಯಲ್ಪಡುವ ವಿಷಯವಾಗಿದೆ. ಈ ಕಲ್ಪನೆಯ ಸಮರ್ಥಕರಿಗನುಸಾರ, ಮಕ್ಕಳಿಗೆ ಹೆತ್ತವರಿಂದ ತುಂಬ ಹೆಚ್ಚು ಸಮಯದ ಅಗತ್ಯವಿರುವುದಿಲ್ಲ; ಅವರು ಮಕ್ಕಳೊಂದಿಗೆ ಕಳೆಯುವ ಪರಿಮಿತವಾದ ಸಮಯವು ಅರ್ಥಪೂರ್ಣವಾದ, ಸುವ್ಯವಸ್ಥಿತವಾದ ಮತ್ತು ಯೋಜಿಸಲ್ಪಟ್ಟ ರೀತಿಯಲ್ಲಿ ವ್ಯಯಿಸಲ್ಪಡಬೇಕಷ್ಟೆ. ಗುಣಮಟ್ಟದ ಸಮಯದ ಕಲ್ಪನೆಯು ಒಳ್ಳೇದಾಗಿದೆಯೋ, ಅದನ್ನು ಮಕ್ಕಳ ಹಿತಕ್ಷೇಮವನ್ನು ಮನಸ್ಸಿನಲ್ಲಿಟ್ಟು ರಚಿಸಲಾಗಿತ್ತೊ?

16 ಅನೇಕ ಮಕ್ಕಳೊಂದಿಗೆ ಸಂಭಾಷಣೆ ನಡೆಸಿದ್ದ ಒಬ್ಬ ಲೇಖಕನು, “ಹೆಚ್ಚಿನ ಸಂಖ್ಯೆಯ ಮಕ್ಕಳು ತಮಗೆ ಹೆತ್ತವರಿಂದ ಸಂಪೂರ್ಣ ಗಮನದ ಜೊತೆಗೆ ಹೆಚ್ಚು ಮೊತ್ತದ ಸಮಯವೂ ಬೇಕಾಗಿದೆ” ಎಂದು ಸೂಚಿಸಿದರೆಂದು ಹೇಳಿದನು. ಅರ್ಥಗರ್ಭಿತವಾಗಿಯೇ, ಕಾಲೇಜಿನ ಪ್ರೊಫೆಸರನೊಬ್ಬನು ಹೇಳಿದ್ದು: “[ಗುಣಮಟ್ಟದ ಸಮಯ] ಎಂಬ ಪದವು ಹೆತ್ತವರ ಅಪರಾಧ ಪ್ರಜ್ಞೆಯಿಂದ ಹುಟ್ಟಿಕೊಂಡಿದೆ. ಇದು ಜನರು ತಮ್ಮ ಮಕ್ಕಳೊಂದಿಗೆ ಕಡಿಮೆ ಸಮಯವನ್ನು ಕಳೆಯುತ್ತಿರುವುದನ್ನು ಸಮರ್ಥಿಸಲಿಕ್ಕಾಗಿ ರಚಿಸಲ್ಪಟ್ಟಿದೆಯಷ್ಟೆ.” ಹೆತ್ತವರು ತಮ್ಮ ಮಕ್ಕಳೊಂದಿಗೆ ಎಷ್ಟು ಸಮಯವನ್ನು ವ್ಯಯಿಸಬೇಕು?

17 ಬೈಬಲ್‌ ಇದನ್ನು ಹೇಳುವುದಿಲ್ಲ. ಆದರೂ, ಮನೆಯಲ್ಲಿ ಕುಳಿತಿರುವಾಗಲೂ, ದಾರಿಯಲ್ಲಿ ನಡೆಯುವಾಗಲೂ, ಮಲಗುವಾಗಲೂ ಏಳುವಾಗಲೂ ತಮ್ಮ ಮಕ್ಕಳೊಂದಿಗೆ ಮಾತಾಡುವಂತೆ ಇಸ್ರಾಯೇಲ್ಯ ಹೆತ್ತವರನ್ನು ಉತ್ತೇಜಿಸಲಾಗಿತ್ತು. (ಧರ್ಮೋಪದೇಶಕಾಂಡ 6:7) ಹೆತ್ತವರು ಪ್ರತಿ ದಿನ ಮಕ್ಕಳೊಂದಿಗೆ ಸಂವಾದಿಸಬೇಕು ಮತ್ತು ಅವರಿಗೆ ಯಾವಾಗಲೂ ಬೋಧಿಸುತ್ತಿರಬೇಕು ಎಂಬುದು ಇದರ ಸ್ಪಷ್ಟ ಅರ್ಥವಾಗಿದೆ.

18 ಯೇಸು ತನ್ನ ಶಿಷ್ಯರೊಂದಿಗೆ ಊಟಮಾಡುತ್ತಿದ್ದಾಗ, ಪ್ರಯಾಣಿಸುತ್ತಿದ್ದಾಗ ಮತ್ತು ವಿಶ್ರಮಿಸುತ್ತಿದ್ದಾಗ ಅವರಿಗೆ ಯಶಸ್ವಿಕರವಾದ ರೀತಿಯಲ್ಲಿ ತರಬೇತಿಯನ್ನು ನೀಡಿದನು. ಹೀಗೆ ಅವನು ಅವರಿಗೆ ಕಲಿಸಲಿಕ್ಕಾಗಿ ಲಭ್ಯವಿದ್ದ ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿದನು. (ಮಾರ್ಕ 6:31, 32; ಲೂಕ 8:1; 22:14) ತದ್ರೀತಿಯಲ್ಲಿ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳೊಂದಿಗೆ ಒಳ್ಳೇ ಮಾತುಸಂಪರ್ಕವನ್ನು ಸ್ಥಾಪಿಸಲು ಮತ್ತು ಅದನ್ನು ಕಾಪಾಡಿಕೊಳ್ಳಲು ಹಾಗೂ ಯೆಹೋವನ ಮಾರ್ಗಗಳಲ್ಲಿ ಅವರನ್ನು ತರಬೇತುಗೊಳಿಸಲು ಸಿಗುವ ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಲು ಎಚ್ಚರವಾಗಿರಬೇಕು.

ಏನನ್ನು ಕಲಿಸುವುದು ಮತ್ತು ಹೇಗೆ ಕಲಿಸುವುದು?

19 ಆದರೆ ಮಕ್ಕಳನ್ನು ಯಶಸ್ವಿಕರವಾಗಿ ಬೆಳೆಸುವುದರಲ್ಲಿ ಅವರೊಂದಿಗೆ ಸುಮ್ಮನೆ ಸಮಯವನ್ನು ಕಳೆಯುವುದು ಅಥವಾ ಅವರಿಗೆ ಕಲಿಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಏನು ಕಲಿಸಲ್ಪಡುತ್ತದೆ ಎಂಬುದು ಸಹ ಅತಿ ಪ್ರಾಮುಖ್ಯವಾಗಿದೆ. ಕಲಿಸುವಿಕೆಯಲ್ಲಿ ಏನು ಒಳಗೂಡಿರಬೇಕು ಎಂಬುದನ್ನು ಬೈಬಲ್‌ ಹೇಗೆ ಒತ್ತಿಹೇಳುತ್ತದೆ ಎಂದು ಗಮನಿಸಿರಿ. ಅದು ಹೇಳುವುದು: ‘ನಾನು ಈಗ ನಿಮಗೆ ತಿಳಿಸುವ ಮಾತುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಬೇಕು.’ ಮಕ್ಕಳಿಗೆ ಕಲಿಸಬೇಕಾಗಿರುವ ಆ ‘ಮಾತುಗಳು’ ಯಾವುವು? ಇವು ಸ್ವಲ್ಪ ಮುಂಚೆಯಷ್ಟೇ ಉಲ್ಲೇಖಿಸಲ್ಪಟ್ಟ ಮಾತುಗಳಾಗಿದ್ದವು ಎಂಬುದು ಸುವ್ಯಕ್ತ: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಧರ್ಮೋಪದೇಶಕಾಂಡ 6:5-7) ದೇವರ ಸಕಲ ಆಜ್ಞೆಗಳಲ್ಲಿ ಇದು ಅತಿ ಪ್ರಾಮುಖ್ಯವಾದದ್ದು ಎಂದು ಯೇಸು ಹೇಳಿದನು. (ಮಾರ್ಕ 12:28-30) ಹಾಗಾದರೆ ಮೂಲತಃ ಹೆತ್ತವರು, ಯೆಹೋವನ ಬಗ್ಗೆ ಕಲಿಸುತ್ತಾ, ಕೇವಲ ಆತನೊಬ್ಬನೇ ನಮ್ಮ ಪೂರ್ಣಪ್ರಾಣದ ಪ್ರೀತಿಗೆ ಮತ್ತು ಆರಾಧನೆಗೆ ಏಕೆ ಅರ್ಹನಾಗಿದ್ದಾನೆ ಎಂಬುದನ್ನು ವಿವರಿಸುತ್ತಾ ಮಕ್ಕಳಿಗೆ ಬೋಧಿಸುವ ಅಗತ್ಯವಿದೆ.

20 ಆದರೂ, ಹೆತ್ತವರು ತಮ್ಮ ಮಕ್ಕಳಿಗೆ ಕಲಿಸಬೇಕೆಂದು ಪ್ರೋತ್ಸಾಹಿಸಲ್ಪಟ್ಟಿರುವ ಆ ‘ಮಾತುಗಳಲ್ಲಿ,’ ದೇವರನ್ನು ಪ್ರೀತಿಸಬೇಕೆಂಬ ಆಜ್ಞೆಯಲ್ಲದೆ ಬೇರೆ ಆಜ್ಞೆಗಳೂ ಒಳಗೂಡಿವೆ. ಧರ್ಮೋಪದೇಶಕಾಂಡ ಪುಸ್ತಕದ ಹಿಂದಿನ ಅಧ್ಯಾಯದಲ್ಲಿ, ದೇವರು ಕಲ್ಲಿನ ಹಲಗೆಗಳ ಮೇಲೆ ಬರೆದ ನಿಯಮಗಳನ್ನು ಅಂದರೆ ದಶಾಜ್ಞೆಗಳನ್ನು ಮೋಶೆ ಪುನರುಚ್ಚರಿಸಿರುವುದನ್ನು ನೀವು ಗಮನಿಸುವಿರಿ. ಈ ನಿಯಮಗಳಲ್ಲಿ ಸುಳ್ಳು ಹೇಳಬಾರದು, ಕದಿಯಬಾರದು, ನರಹತ್ಯೆಮಾಡಬಾರದು, ವ್ಯಭಿಚಾರಮಾಡಬಾರದು ಎಂಬ ಆಜ್ಞೆಗಳು ಸೇರಿವೆ. (ಧರ್ಮೋಪದೇಶಕಾಂಡ 5:11-22) ಹೀಗೆ, ತಮ್ಮ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವುದರ ಪ್ರಮುಖತೆಯನ್ನು ಪುರಾತನ ಕಾಲದ ಹೆತ್ತವರಿಗೆ ಮನದಟ್ಟುಮಾಡಿಸಲಾಯಿತು. ಇಂದು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಸುಭದ್ರವೂ ಸಂತೋಷಕರವೂ ಆಗಿರುವ ಭವಿಷ್ಯತ್ತನ್ನು ದೊರಕಿಸಲು ಸಹಾಯಮಾಡಬೇಕಾಗಿರುವಲ್ಲಿ ತದ್ರೀತಿಯ ಉಪದೇಶವನ್ನು ನೀಡುವ ಅಗತ್ಯವಿದೆ.

21 ಈ ‘ಮಾತುಗಳನ್ನು’ ಅಥವಾ ಆಜ್ಞೆಗಳನ್ನು ತಮ್ಮ ಮಕ್ಕಳಿಗೆ ಹೇಗೆ ಕಲಿಸಿಕೊಡಬೇಕೆಂದೂ ಹೆತ್ತವರಿಗೆ ತಿಳಿಸಲಾಗಿದೆ ಎಂಬುದನ್ನು ಗಮನಿಸಿರಿ: ಅವರು ‘ಇವುಗಳನ್ನು ತಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಬೇಕು.’ ‘ಅಭ್ಯಾಸಮಾಡಿಸು’ ಎಂಬ ಪದದ ಅರ್ಥ, “ಆಗಿಂದಾಗ್ಗೆ ಪುನರಾವರ್ತಿಸುವ ಮೂಲಕ ಅಥವಾ ಬುದ್ಧಿವಾದಗಳ ಮೂಲಕ ಕಲಿಸುವುದು ಮತ್ತು ಮನಸ್ಸಿಗೆ ನಾಟಿಸುವುದು: ಉತ್ತೇಜಿಸುವುದು ಅಥವಾ ಮನಸ್ಸಿನಲ್ಲಿ ಅಚ್ಚೊತ್ತಿಸುವುದು.” ಹೀಗೆ ಕಾರ್ಯತಃ ದೇವರು ಹೆತ್ತವರಿಗೆ, ಅವರು ತಮ್ಮ ಮಕ್ಕಳ ಮನಸ್ಸಿನಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ಅಚ್ಚೊತ್ತುವ ನಿರ್ದಿಷ್ಟ ಉದ್ದೇಶದಿಂದ ಪೂರ್ವಯೋಜಿತ ಬೈಬಲ್‌ ಶಿಕ್ಷಣದ ಒಂದು ಕಾರ್ಯಕ್ರಮವನ್ನು ಏರ್ಪಡಿಸಬೇಕು ಎಂದು ಹೇಳುತ್ತಿದ್ದಾನೆ.

22 ಇಂಥ ಪೂರ್ವಯೋಜಿತ ಕಾರ್ಯಕ್ರಮವು, ಹೆತ್ತವರು ದೃಢನಿರ್ಧಾರಮಾಡುವುದನ್ನು ಅಗತ್ಯಪಡಿಸುತ್ತದೆ. ಬೈಬಲ್‌ ಹೀಗೆ ತಿಳಿಸುತ್ತದೆ: “ಇವುಗಳನ್ನು [‘ಈ ಮಾತುಗಳನ್ನು,’ ಇಲ್ಲವೆ ದೇವರಾಜ್ಞೆಗಳನ್ನು] ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು. ನಿಮ್ಮ ಮನೆ ಬಾಗಲಿನ ನಿಲುವು ಪಟ್ಟಿಗಳಲ್ಲಿಯೂ ತಲೆಬಾಗಲುಗಳ ಮೇಲೆಯೂ ಇವುಗಳನ್ನು ಬರೆಯಬೇಕು.” (ಧರ್ಮೋಪದೇಶಕಾಂಡ 6:8, 9) ಹೆತ್ತವರು ದೇವರ ನಿಯಮಗಳನ್ನು ಅಕ್ಷರಾರ್ಥವಾಗಿ ಬಾಗಿಲು ಮತ್ತು ದ್ವಾರಗಳ ಮೇಲೆ ಬರೆದಿಡಬೇಕೆಂದೊ, ಅವುಗಳ ಒಂದು ಪ್ರತಿಯನ್ನು ತಮ್ಮ ಮಕ್ಕಳ ಕೈಗೆ ಕಟ್ಟಬೇಕೆಂದೊ ಅಥವಾ ಅವರ ಹಣೆಗೆ ಕಟ್ಟಬೇಕೆಂದೊ ಇದರ ಅರ್ಥವಲ್ಲ. ಬದಲಾಗಿ, ಇದರ ಅರ್ಥವೇನೆಂದರೆ, ಹೆತ್ತವರು ಸತತವಾಗಿ ದೇವರ ಬೋಧನೆಗಳನ್ನು ತಮ್ಮ ಮಕ್ಕಳಿಗೆ ಜ್ಞಾಪಕಹುಟ್ಟಿಸುತ್ತಾ ಇರಬೇಕೆಂಬುದೇ. ತಮ್ಮ ಮಕ್ಕಳಿಗೆ ಬೋಧಿಸುವುದನ್ನು ಎಷ್ಟು ಕ್ರಮವಾಗಿ ಮತ್ತು ಸುಸಂಗತ ರೀತಿಯಲ್ಲಿ ಮಾಡಬೇಕೆಂದರೆ, ಎಲ್ಲಾ ಸಮಯಗಳಲ್ಲಿ ದೇವರ ಬೋಧನೆಗಳು ಮಕ್ಕಳ ಕಣ್ಮುಂದೆಯೇ ಇವೆಯೋ ಎಂಬಂತೆ ಇರಬೇಕು.

23 ಹೆತ್ತವರು ತಮ್ಮ ಮಕ್ಕಳಿಗೆ ಬೋಧಿಸಬೇಕಾಗಿರುವ ಕೆಲವು ಪ್ರಮುಖ ವಿಷಯಗಳು ಯಾವುವು? ಇಂದು ಮಕ್ಕಳು ತಮ್ಮನ್ನು ಸಂರಕ್ಷಿಸಿಕೊಳ್ಳುವಂತೆ ಅವರಿಗೆ ಕಲಿಸುವುದು ಮತ್ತು ತರಬೇತಿ ನೀಡುವುದು ಏಕೆ ಅತ್ಯಾವಶ್ಯಕವಾಗಿದೆ? ಹೆತ್ತವರು ತಮ್ಮ ಮಕ್ಕಳಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ಬೋಧಿಸುವಂತೆ ಸಹಾಯಮಾಡಲಿಕ್ಕಾಗಿ ಅವರಿಗೆ ಈಗ ಯಾವ ಸಹಾಯವು ಲಭ್ಯವಿದೆ? ಅನೇಕ ಹೆತ್ತವರಿಗೆ ಚಿಂತೆಯನ್ನುಂಟುಮಾಡುವ ಈ ಪ್ರಶ್ನೆಗಳು ಹಾಗೂ ಇನ್ನಿತರ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.

ನೀವು ಹೇಗೆ ಉತ್ತರಿಸುವಿರಿ?

• ಹೆತ್ತವರು ತಮ್ಮ ಮಕ್ಕಳನ್ನು ಏಕೆ ಅಮೂಲ್ಯವಾಗಿ ಪರಿಗಣಿಸಬೇಕು?

• ಹೆತ್ತವರು ಹಾಗೂ ಇತರರು ಯೇಸುವಿನಿಂದ ಏನನ್ನು ಕಲಿಯಸಾಧ್ಯವಿದೆ?

• ಹೆತ್ತವರು ತಮ್ಮ ಮಕ್ಕಳಿಗಾಗಿ ಎಷ್ಟು ಸಮಯವನ್ನು ವಿನಿಯೋಗಿಸಬೇಕು?

• ಮಕ್ಕಳಿಗೆ ಏನನ್ನು ಬೋಧಿಸಬೇಕು, ಮತ್ತು ಹೇಗೆ ಬೋಧಿಸಬೇಕು?

[ಅಧ್ಯಯನ ಪ್ರಶ್ನೆಗಳು]

1. ಪ್ರಥಮ ಮಾನವ ಶಿಶುವು ಹೇಗೆ ಜನಿಸಿತು?

2. ಗರ್ಭಿಣಿ ಸ್ತ್ರೀಯ ಗರ್ಭದೊಳಗೆ ಏನು ಸಂಭವಿಸುತ್ತದೋ ಅದು ಒಂದು ಅದ್ಭುತವಾಗಿದೆ ಎಂದು ನೀವು ಏಕೆ ಹೇಳಸಾಧ್ಯವಿದೆ?

3. ತರ್ಕಬದ್ಧವಾಗಿ ಆಲೋಚಿಸುವಂಥ ಅನೇಕ ಜನರು, ಒಂದು ಹೊಸ ಸಜೀವ ಮಾನವನ ಜನನಕ್ಕೆ ದೇವರೇ ಕಾರಣನಾಗಿದ್ದಾನೆಂದು ಏಕೆ ಒಪ್ಪುತ್ತಾರೆ?

4. ಮಾನವನಲ್ಲಿರುವ ಯಾವ ಕೊರತೆಯು ಯೆಹೋವನಿಗಿದೆಯೆಂದು ಎಂದಿಗೂ ಹೇಳಸಾಧ್ಯವಿಲ್ಲ?

5. ಮಕ್ಕಳು ಒಂದು ಸ್ವಾಸ್ತ್ಯವಾಗಿದ್ದಾರೆ ಏಕೆ?

6. ದೇವರು ಮಾನವರಿಗೆ ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನು ಕೊಟ್ಟದ್ದರ ಉದ್ದೇಶವೇನಾಗಿತ್ತು?

7. ಕೆಲವು ಹೆತ್ತವರು ಏನು ಮಾಡುತ್ತಾರೋ ಅದಕ್ಕೆ ವ್ಯತಿರಿಕ್ತವಾಗಿ, ಯೇಸು ಹೇಗೆ “ನರಪುತ್ರರಲ್ಲಿ” ಆಸಕ್ತಿಯನ್ನು ಹಾಗೂ ಕರುಣೆಯನ್ನು ತೋರಿಸಿದನು?

8. ಯಾವ ರೀತಿಯಲ್ಲಿ ಯೇಸು ಹೆತ್ತವರಿಗೋಸ್ಕರ ಒಳ್ಳೇ ಮಾದರಿಯನ್ನು ಇಟ್ಟನು?

9. ನಾವು ಏನು ಹೇಳುತ್ತೇವೋ ಅದಕ್ಕಿಂತಲೂ ನಾವು ಏನು ಮಾಡುತ್ತೇವೋ ಅದು ಹೆಚ್ಚು ಪ್ರಾಮುಖ್ಯವಾಗಿರಬಹುದು ಏಕೆ?

10. ದೀನಭಾವದ ವಿಷಯದಲ್ಲಿ ಯೇಸು ತನ್ನ ಶಿಷ್ಯರಿಗೆ ಹೇಗೆ ಒಂದು ಪಾಠವನ್ನು ಕಲಿಸಿದನು, ಮತ್ತು ಆರಂಭದಲ್ಲಿ ಅವನ ಪ್ರಯತ್ನವು ಸಫಲವಾಯಿತೋ?

11. (ಎ) ಯೇಸುವಿನೊಂದಿಗೆ ಮೇಲಂತಸ್ತಿನ ಕೋಣೆಗೆ ಬಂದ ಬಳಿಕ ಅವನ ಅಪೊಸ್ತಲರು ಯಾವ ಸಾಂಪ್ರದಾಯಿಕ ಕೆಲಸವನ್ನು ನಿರ್ವಹಿಸಲು ತಪ್ಪಿಹೋದರು? (ಬಿ) ಯೇಸು ಏನು ಮಾಡಿದನು, ಮತ್ತು ಆ ಸಮಯದಲ್ಲಿ ಅವನ ಪ್ರಯತ್ನಗಳು ಸಫಲವಾದವೋ?

12. ತಮ್ಮ ಮಕ್ಕಳಿಗೆ ತರಬೇತಿ ನೀಡುವ ಪ್ರಯತ್ನಗಳಲ್ಲಿ ಹೆತ್ತವರು ಯೇಸುವನ್ನು ಹೇಗೆ ಅನುಕರಿಸಬಹುದು?

13. ಒಂದು ಮಗುವು ಏನಾದರೂ ಕೇಳಲು ಬರುವಾಗ ಒಬ್ಬ ಹೆತ್ತವರು ಒರಟಾಗಿ ಪ್ರತಿಕ್ರಿಯಿಸಿ ಕಳುಹಿಸಿಬಿಡಬಾರದೇಕೆ?

14. ತಮ್ಮ ಮಕ್ಕಳಿಗೆ ವಾತ್ಸಲ್ಯವನ್ನು ತೋರಿಸುವ ವಿಷಯದಲ್ಲಿ ಹೆತ್ತವರು ಯೇಸುವಿನಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ?

15, 16. ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಯಾವುದು ತುಂಬ ಜನಪ್ರಿಯವಾದ ಕಲ್ಪನೆಯಾಗಿದೆ, ಮತ್ತು ಯಾವುದು ಇದಕ್ಕೆ ಕಾರಣವಾಗಿದೆ ಎಂಬುದು ಸುವ್ಯಕ್ತ?

17. ಮಕ್ಕಳಿಗೆ ಹೆತ್ತವರಿಂದ ಏನು ಬೇಕಾಗಿದೆ?

18. ತನ್ನ ಶಿಷ್ಯರನ್ನು ತರಬೇತುಗೊಳಿಸಲಿಕ್ಕಾಗಿ ಸಿಕ್ಕಿದ ಸಂದರ್ಭಗಳನ್ನು ಯೇಸು ಹೇಗೆ ಸದುಪಯೋಗಿಸಿದನು, ಮತ್ತು ಇದರಿಂದ ಹೆತ್ತವರು ಏನನ್ನು ಕಲಿಯಸಾಧ್ಯವಿದೆ?

19. (ಎ) ಮಕ್ಕಳೊಂದಿಗೆ ಸಮಯವನ್ನು ಕಳೆಯುವುದು ಮಾತ್ರವಲ್ಲ ಇನ್ನೂ ಯಾವುದರ ಅಗತ್ಯವಿದೆ? (ಬಿ) ಹೆತ್ತವರು ಮಕ್ಕಳಿಗೆ ಮೂಲತಃ ಏನನ್ನು ಬೋಧಿಸುವ ಅಗತ್ಯವಿದೆ?

20. ತಮ್ಮ ಮಕ್ಕಳಿಗೆ ಏನನ್ನು ಕಲಿಸುವಂತೆ ಪುರಾತನ ಕಾಲದ ಹೆತ್ತವರಿಗೆ ದೇವರು ಆಜ್ಞೆಯನ್ನಿತ್ತಿದ್ದನು?

21. ದೇವರ ಮಾತುಗಳನ್ನು ಮಕ್ಕಳಿಗೆ ‘ಅಭ್ಯಾಸಮಾಡಿಸಬೇಕು’ ಎಂಬ ಆಜ್ಞೆಯ ಅರ್ಥವೇನಾಗಿತ್ತು?

22. ತಮ್ಮ ಮಕ್ಕಳಿಗೆ ಬೋಧಿಸಲಿಕ್ಕಾಗಿ ಇಸ್ರಾಯೇಲ್ಯ ಹೆತ್ತವರಿಗೆ ಏನು ಮಾಡುವಂತೆ ತಿಳಿಸಲಾಗಿತ್ತು, ಮತ್ತು ಇದರ ಅರ್ಥವೇನಾಗಿತ್ತು?

23. ಮುಂದಿನ ವಾರದ ಪಾಠದಲ್ಲಿ ಏನನ್ನು ಪರಿಗಣಿಸಲಾಗುವುದು?

[ಪುಟ 10ರಲ್ಲಿರುವ ಚಿತ್ರ]

ಯೇಸುವಿನ ಬೋಧನಾ ರೀತಿಯಿಂದ ಹೆತ್ತವರು ಯಾವ ಪಾಠವನ್ನು ಕಲಿಯಸಾಧ್ಯವಿದೆ?

[ಪುಟ 11ರಲ್ಲಿರುವ ಚಿತ್ರಗಳು]

ಇಸ್ರಾಯೇಲ್ಯ ಹೆತ್ತವರು ಯಾವಾಗ ಮತ್ತು ಹೇಗೆ ತಮ್ಮ ಮಕ್ಕಳಿಗೆ ಕಲಿಸಬೇಕಾಗಿತ್ತು?

[ಪುಟ 12ರಲ್ಲಿರುವ ಚಿತ್ರಗಳು]

ಹೆತ್ತವರು ದೇವರ ಬೋಧನೆಗಳನ್ನು ತಮ್ಮ ಮಕ್ಕಳಿಗೆ ಕಲಿಸಬೇಕು