ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಕ್ರೈಸ್ತನೊಬ್ಬನು ಸರಕಾರಿ ನೌಕರನಿಗೆ ಹಣವನ್ನು (ಟಿಪ್ಸ್) ಇಲ್ಲವೆ ಉಡುಗೊರೆಯನ್ನು ನೀಡಬಹುದೋ ಅಥವಾ ಇದನ್ನು ಲಂಚಗಾರಿಕೆ ಎಂದು ಪರಿಗಣಿಸಲಾಗುತ್ತದೊ?
ಕ್ರೈಸ್ತರು ತಾವು ಎಲ್ಲಿಯೇ ವಾಸಿಸಲಿ, ಸ್ಥಳಿಕ ಪರಿಸ್ಥಿತಿಗಳೊಂದಿಗೆ ವ್ಯವಹರಿಸುವಾಗ ಪ್ರಾಯೋಗಿಕ ವಿವೇಕವನ್ನು ಉಪಯೋಗಿಸಬೇಕು. ಒಂದು ದೇಶದಲ್ಲಿ ಯಾವುದು ಸ್ವೀಕಾರಾರ್ಹವೂ ಕಾನೂನುಬದ್ಧವೂ ಆಗಿದೆಯೋ ಅದು ಇನ್ನೊಂದು ದೇಶದಲ್ಲಿ ಸಂಪೂರ್ಣವಾಗಿ ಅಸ್ವೀಕಾರ್ಯವೂ ಕಾನೂನು ಬಾಹಿರವೂ ಆಗಿರುತ್ತದೆ ಎಂಬುದನ್ನು ಸಹ ನೆನಪಿನಲ್ಲಿಡಬೇಕು. (ಜ್ಞಾನೋಕ್ತಿ 2:6-9) ಮಾತ್ರವಲ್ಲ, ‘ಯೆಹೋವನ ಗುಡಾರದಲ್ಲಿ ಇಳುಕೊಳ್ಳುವವನು’ ಲಂಚಗಾರಿಕೆಯನ್ನು ತ್ಯಜಿಸಲೇಬೇಕೆಂಬುದನ್ನು ಒಬ್ಬ ಕ್ರೈಸ್ತನು ಯಾವಾಗಲೂ ಮನಸ್ಸಿನಲ್ಲಿಡಬೇಕು.—ಕೀರ್ತನೆ 15:1, 5; ಜ್ಞಾನೋಕ್ತಿ 17:23.
ಲಂಚಗಾರಿಕೆ ಎಂದರೇನು? ದ ವರ್ಲ್ಡ್ ಬುಕ್ ಎನ್‌ಸೈಕ್ಲಪೀಡೀಯಕ್ಕನುಸಾರ, “ಅಧಿಕಾರ ಸ್ಥಾನದಲ್ಲಿರುವ ಒಬ್ಬನು . . . ತನ್ನ ಕರ್ತವ್ಯಕ್ಕೆ ವಿರುದ್ಧವಾಗಿ ಕೆಲಸಮಾಡುವಂತೆ ಇಲ್ಲವೆ ನಿಯಮವನ್ನು ಮುರಿಯುವಂತೆ ಅವನಿಗೆ ಬೆಲೆಬಾಳುವ ಯಾವುದನ್ನಾದರೂ ನೀಡುವುದು ಲಂಚಗಾರಿಕೆಯಾಗಿದೆ.” ಆದುದರಿಂದ ಒಬ್ಬನು ಎಲ್ಲಿಯೇ ವಾಸಿಸುತ್ತಿರಲಿ, ಒಬ್ಬ ನ್ಯಾಯಾಧೀಶನಿಗೆ ಇಲ್ಲವೆ ಪೊಲೀಸ್ ಅಧಿಕಾರಿಗೆ ನ್ಯಾಯವನ್ನು ತಿರುಚುವ ಸಲುವಾಗಿ ಅಥವಾ ಒಬ್ಬ ಇನ್‌ಸ್ಪೆಕ್ಟರ್‌ಗೆ ಅಪರಾಧವನ್ನು ಇಲ್ಲವೆ ಮಾಡಲ್ಪಟ್ಟಿರುವ ನಿಯಮ ಉಲಂಘನೆಯನ್ನು ಕಂಡೂ ಕಾಣದಂತೆ ವರ್ತಿಸುವ ಸಲುವಾಗಿ ಹಣವನ್ನು ನೀಡುವುದು ಲಂಚಗಾರಿಕೆಯಾಗಿದೆ. ಅಷ್ಟುಮಾತ್ರವಲ್ಲದೆ, ಕಾದಿರಿಸಿದ ಪಟ್ಟಿಯಲ್ಲಿ ನಿಮ್ಮ ಹೆಸರು ಮೊದಲು ಬರುವಂತೆ ಮಾಡಲು ಇಲ್ಲವೆ ಸಾಲಿನಲ್ಲಿ ನಿಂತಿರುವ ಇತರರಿಗಿಂತ ಮುಂಚೆ ನಿಮ್ಮನ್ನು ಕರೆಯುವಂತೆ ಮಾಡುವ ಈ ಮುಂತಾದ ವಿಶೇಷ ಉಪಚಾರವನ್ನು ಹೊಂದಲು ಉಡುಗೊರೆಯನ್ನು ನೀಡುವುದು ಸಹ ಲಂಚಗಾರಿಕೆಯಾಗಿದೆ. ಈ ರೀತಿಯಾಗಿ ವ್ಯವಹರಿಸುವುದು ಇತರರ ಕಡೆಗಿರುವ ಪ್ರೀತಿಯ ಕೊರತೆಯನ್ನು ಸಹ ವ್ಯಕ್ತಪಡಿಸುತ್ತದೆ.—ಮತ್ತಾಯ 7:12; 22:39.
ಆದರೆ ಸಾರ್ವಜನಿಕ ಸೇವಕನಿಂದ ನ್ಯಾಯಸಮ್ಮತವಾದ ಸೇವೆಯನ್ನು ಪಡೆದುಕೊಳ್ಳಲು ಅಥವಾ ಅನ್ಯಾಯವಾದ ಉಪಚಾರವನ್ನು ತಪ್ಪಿಸಲು ಉಡುಗೊರೆಯನ್ನು ನೀಡುವುದು ಲಂಚಗಾರಿಕೆಯಾಗಿದೆಯೊ? ಉದಾಹರಣೆಗೆ ಕೆಲವು ದೇಶಗಳಲ್ಲಿ ಹಣವನ್ನು ಪಡೆದುಕೊಳ್ಳದೆ ಅಧಿಕಾರಿಗಳು ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು, ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಇಲ್ಲವೆ ಇಮಿಗ್ರೇಷನ್ (ವಲಸೆಹೋಗುವಿಕೆಯ) ದಾಖಲೆಗಳನ್ನು ಒದಗಿಸಲು ನಿರಾಕರಿಸಬಹುದು. ಅಥವಾ, ಲೈಸನ್ಸ್ ನವೀಕರಣ ಅರ್ಜಿಗಳನ್ನು ಮುಂದಕ್ಕೆ ಕಳುಹಿಸಲು ಅವರು ತಡಮಾಡಬಹುದು.
ಟಿಪ್ಸ್ ನೀಡುವ ಪದ್ಧತಿ ಮತ್ತು ಅದರ ಕಡೆಗೆ ಜನಸಾಮಾನ್ಯರಿಗಿರುವ ಅಭಿಪ್ರಾಯವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರುತ್ತದೆ. ಎಲ್ಲಿ ಅಂಥ ನೀಡುವಿಕೆಯು ಸ್ವೀಕಾರಾರ್ಹವಾಗಿದೆಯೊ ಅಂಥ ಸ್ಥಳದಲ್ಲಿ ಒಬ್ಬ ಅಧಿಕಾರಿಯು ತನ್ನ ಕೆಲಸವನ್ನು ನಿರ್ವಹಿಸಲಿಕ್ಕಾಗಿ ಕಾನೂನನ್ನು ಉಲ್ಲಂಘಿಸದೆ ಅವನಿಗೆ ಟಿಪ್ಸ್ ನೀಡುವುದರಿಂದ ತಾವು ಬೈಬಲಿನ ಮೂಲತತ್ತ್ವಗಳನ್ನು ಉಲ್ಲಂಘಿಸುವುದಿಲ್ಲ ಎಂದು ಕೆಲವು ಕ್ರೈಸ್ತರು ಭಾವಿಸುತ್ತಾರೆ. ಕೆಲವು ದೇಶಗಳಲ್ಲಿರುವ ಜನರು, ಈ ರೀತಿಯಾಗಿ ಹಣವನ್ನು ನೀಡುವುದು ಕಡಿಮೆ ವರಮಾನವಿರುವ ಸಾರ್ವಜನಿಕ ನೌಕರರಿಗೆ ಪೂರಕವಾಗಿ ನೀಡುವ ಉಡುಗೊರೆಯಾಗಿದೆಯೆಂದೂ ನೆನಸುತ್ತಾರೆ. ಆದರೆ ನಾವು ಒಂದು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ, ನ್ಯಾಯಬದ್ಧವಾದ ಸೇವೆಗಾಗಿ ಉಡುಗೊರೆಯನ್ನು ನೀಡುವುದು ಮತ್ತು ಅನ್ಯಾಯವಾದ ಕೆಲಸವನ್ನು ಮಾಡಿಸಿಕೊಳ್ಳಲು ಲಂಚವನ್ನು ನೀಡುವುದರ ಮಧ್ಯೆ ಬಹಳಷ್ಟು ವ್ಯತ್ಯಾಸವಿದೆ.
ಇನ್ನೊಂದು ಬದಿಯಲ್ಲಿ, ಇನ್‌ಸ್ಪೆಕ್ಟರ್, ಕಸ್ಟಮ್ಸ್ ಆಫೀಸರ್ ಅಥವಾ ಇತರ ಅಧಿಕಾರಿಗಳಿಂದ ನ್ಯಾಯಬದ್ಧ ಸೇವೆಯನ್ನು ಪಡೆದುಕೊಳ್ಳುವ ಸಲುವಾಗಿ ಹಣವನ್ನು ನೀಡುವುದನ್ನು ಸಹ—ಎಲ್ಲಿ ಇದು ಸಾಮಾನ್ಯವಾಗಿದೆಯೋ ಅಂಥ ಸ್ಥಳದಲ್ಲಿಯೂ—ಕೆಲವು ಯೆಹೋವನ ಸಾಕ್ಷಿಗಳು ನಿರಾಕರಿಸಿದ್ದಾರೆ. ಸಾಕ್ಷಿಗಳು ತಮ್ಮ ಮನಸ್ಸಾಕ್ಷಿಗೆ ಸಂಬಂಧಿಸಿ ಈ ನಿಲುವನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವರು ಪ್ರಾಮಾಣಿಕರಾಗಿದ್ದಾರೆ ಎಂದು ಸ್ಥಳಿಕವಾಗಿ ತಿಳಿದಿರುವ ಕಾರಣ, ಅನೇಕವೇಳೆ ಕೇವಲ ಹಣನೀಡಿದ ನಂತರವೇ ಹೆಚ್ಚಿನ ಜನರಿಗೆ ದೊರಕುವ ಸೇವೆಯನ್ನು ಅವರು ಹಣನೀಡದೆಯೇ ಪಡೆದುಕೊಳ್ಳುತ್ತಾರೆ.—ಜ್ಞಾನೋಕ್ತಿ 10:9; ಮತ್ತಾಯ 5:16.
ಸಂಕ್ಷಿಪ್ತವಾಗಿ ಹೇಳುವುದಾದರೆ, ನ್ಯಾಯಬದ್ಧವಾದ ಸೇವೆಯನ್ನು ಪಡೆದುಕೊಳ್ಳಲು ಅಥವಾ ಅನ್ಯಾಯವಾದ ಉಪಚಾರವನ್ನು ಹೊಂದದಿರಲು ಹಣವನ್ನು ನೀಡಬೇಕೊ ಬಾರದೊ ಎಂಬುದನ್ನು ಯೆಹೋವನ ಪ್ರತಿಯೊಬ್ಬ ಸೇವಕನು ಸ್ವತಃ ನಿರ್ಧರಿಸಬೇಕು. ಎಲ್ಲದಕ್ಕಿಂತಲೂ ಮಿಗಿಲಾಗಿ, ಒಂದು ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವಂತೆ ಮಾಡುವ, ಯೆಹೋವನ ನಾಮಕ್ಕೆ ಕಳಂಕವನ್ನು ತರದ ಮತ್ತು ಇತರರನ್ನು ಎಡವಿಬೀಳಿಸದಂಥ ರೀತಿಯಲ್ಲಿ ವ್ಯವಹರಿಸುವಂತೆ ಅವನು ನೋಡಿಕೊಳ್ಳಬೇಕು.—ಮತ್ತಾಯ 6:9, 10; 1 ಕೊರಿಂಥ 10:31-33; 2 ಕೊರಿಂಥ 6:3; 1 ತಿಮೊಥೆಯ 1:5.