ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಜ್ಞಾನ ಮತ್ತು ಧರ್ಮ ಒಂದು ಘರ್ಷಣೆಯ ಆರಂಭ

ವಿಜ್ಞಾನ ಮತ್ತು ಧರ್ಮ ಒಂದು ಘರ್ಷಣೆಯ ಆರಂಭ

ವಿಜ್ಞಾನ ಮತ್ತು ಧರ್ಮ ಒಂದು ಘರ್ಷಣೆಯ ಆರಂಭ

ಮರಣಶಯ್ಯೆಯಲ್ಲಿದ್ದ ಎಪ್ಪತ್ತು ವರುಷ ಪ್ರಾಯದ ಒಬ್ಬ ಖಗೋಳ ವಿಜ್ಞಾನಿಯು ಓದಲು ಪ್ರಯಾಸಪಡುತ್ತಿದ್ದನು. ಪ್ರಕಟಪಡಿಸಲು ಸಿದ್ಧವಾಗಿದ್ದ ಅವನ ಒಂದು ದಾಖಲೆಯ ಕರಡುಪ್ರತಿಯು ಅವನ ಕೈಯಲ್ಲಿತ್ತು. ಅವನಿಗೆ ತಿಳಿದಿತ್ತೊ ಇಲ್ಲವೊ, ಅವನು ಬರೆದ ಆ ಕೃತಿಯು ವಿಶ್ವದ ಕುರಿತಾದ ಮಾನವಕುಲದ ನೋಟವನ್ನೇ ಬದಲಾಯಿಸಲಿತ್ತು. ಅಷ್ಟುಮಾತ್ರವಲ್ಲದೆ, ಅದು ಕ್ರೈಸ್ತಪ್ರಪಂಚದೊಳಗೆ ಒಂದು ತೀವ್ರ ವಾಗ್ವಾದವನ್ನು ಸಹ ಎಬ್ಬಿಸಲಿತ್ತು ಮತ್ತು ಆ ವಾಗ್ವಾದದ ಪರಿಣಾಮಗಳು ಇಂದಿಗೂ ಅನುಭವಿಸಲ್ಪಡುತ್ತಿವೆ.

ಮರಣಶಯ್ಯೆಯಲ್ಲಿದ್ದ ಆ ವ್ಯಕ್ತಿಯು ನಿಕೊಲಸ್‌ ಕೊಪರ್ನಿಕಸ್‌. ಇವನು ಪೋಲೆಂಡ್‌ನ ಕ್ಯಾಥೊಲಿಕನಾಗಿದ್ದನು ಮತ್ತು ಅದು ಇಸವಿ 1543 ಆಗಿತ್ತು. ಆಕಾಶಸ್ಥಕಾಯಗಳ ಪರಿಭ್ರಮಣೆಯ ಕುರಿತು (ಇಂಗ್ಲಿಷ್‌) ಎಂಬ ಶೀರ್ಷಿಕೆಯಿದ್ದ ಕೊಪರ್ನಿಕಸ್‌ನ ಈ ಪುಸ್ತಕವು, ಸೂರ್ಯನೇ ಸೌರಮಂಡಲದ ಕೇಂದ್ರ ಭೂಮಿಯಲ್ಲ ಎಂದು ತಿಳಿಸಿತು. ಕೇವಲ ಈ ಒಂದೇ ಪುಸ್ತಕದ ಮೂಲಕ ಕೊಪರ್ನಿಕಸನು, ಭೂಮಿಯೇ ಸೌರವ್ಯೂಹದ ಕೇಂದ್ರವಾಗಿದೆ ಎಂಬ ಅತಿ ಜಟಿಲವಾದ ವಿಚಾರವನ್ನು ಸೂರ್ಯನು ಕೇಂದ್ರದಲ್ಲಿದ್ದಾನೆ ಎಂಬ ಸುಂದರವಾದ ಸರಳ ವಿವರಣೆಯಿಂದ ಸ್ಥಾನಪಲ್ಲಟಗೊಳಿಸಿದನು.

ಆರಂಭದಲ್ಲಿ, ಭವಿಷ್ಯತ್ತಿನಲ್ಲಾಗುವ ಘರ್ಷಣೆಯ ಕುರಿತು ಯಾವುದೇ ಸೂಚನೆಯಿರಲಿಲ್ಲ. ಏಕೆಂದರೆ, ಕೊಪರ್ನಿಕಸ್‌ ತನ್ನ ವಿಚಾರಗಳನ್ನು ಬಹಳ ಜಾಣ್ಮೆಯಿಂದಲೂ ಜಾಗರೂಕತೆಯಿಂದಲೂ ತಿಳಿಸಿದನು. ಇದಕ್ಕೆ ಕೂಡಿಕೆಯಾಗಿ, ಭೂಮಿಯೇ ಸೌರವ್ಯೂಹದ ಕೇಂದ್ರ ಎಂಬ ವಿಚಾರವನ್ನು ತನ್ನದಾಗಿಸಿಕೊಂಡಿದ್ದ ಕ್ಯಾಥೊಲಿಕ್‌ ಚರ್ಚ್‌ ಸಹ ಆ ಸಮಯದಲ್ಲಿ ವಿಜ್ಞಾನಿಗಳ ಊಹಾಪೋಹಗಳ ವಿಷಯದಲ್ಲಿ ಹೆಚ್ಚು ಸೈರಣೆಯನ್ನು ತೋರಿಸುತ್ತಿತ್ತು. ಕೊಪರ್ನಿಕಸ್‌ ತನ್ನ ಕೃತಿಯನ್ನು ಪ್ರಕಟಪಡಿಸುವಂತೆ ಸ್ವತಃ ಪೋಪ್‌ ಹೇಳಿದನು. ಆದರೆ ಕೊನೆಗೆ ಕೊಪರ್ನಿಕಸ್‌ ಅದನ್ನು ಪ್ರಕಟಪಡಿಸಿದಾಗ, ಗಾಬರಿಗೊಂಡ ಸಂಪಾದಕನು ತನ್ನ ಮುನ್ನುಡಿಯಲ್ಲಿ, ಸೂರ್ಯನೇ ಸೌರವ್ಯೂಹದ ಕೇಂದ್ರ ಎಂಬ ವಿಚಾರವು ಖಗೋಳವಿಜ್ಞಾನಕ್ಕೆ ಸಂಬಂಧಿಸಿದ ಸತ್ಯವಲ್ಲ, ಬದಲಾಗಿ ಅದೊಂದು ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರ ಅಥವಾ ಆದರ್ಶಧ್ಯೇಯವಾಗಿದೆ ಎಂದು ಬರೆದನು.

ಘರ್ಷಣೆಯು ತೀವ್ರವಾಯಿತು

ನಂತರ ದೃಶ್ಯಕ್ಕೆ ಬಂದವನು, ಇಟಲಿಯ ಗಣಿತಶಾಸ್ತ್ರಜ್ಞನೂ ಖಗೋಳ ಹಾಗೂ ಭೌತ ವಿಜ್ಞಾನಿಯೂ ಆದ ಗೆಲಿಲಿಯೊ (1564-1642). ಇವನು ಸಹ ಒಬ್ಬ ಕ್ಯಾಥೊಲಿಕನಾಗಿದ್ದನು. ತಾನು ನಿರ್ಮಿಸಿದ ದೂರದರ್ಶಕಗಳಿಗೆ ಹೊಸದಾಗಿ ಕಂಡುಹಿಡಿಯಲಾಗಿದ್ದ ಲೆನ್ಸ್‌ಗಳನ್ನು ಜೋಡಿಸಿ, ಅವನು ಅಂತರಿಕ್ಷವನ್ನು ಹಿಂದೆಂದೂ ಯಾರೂ ನೋಡಿರದಷ್ಟು ಸೂಕ್ಷ್ಮವಾಗಿ ನೋಡಿದನು. ಅವನು ಏನನ್ನು ನೋಡಿದನೊ ಅದರಿಂದಾಗಿ ಕೊಪರ್ನಿಕಸ್‌ ಹೇಳಿದ್ದು ಸರಿ ಎಂಬುದು ಅವನಿಗೆ ಮಂದಟ್ಟಾಯಿತು. ಗೆಲಿಲಿಯೊ ಸೂರ್ಯನ ಮೇಲೆ ಕಲೆಗಳನ್ನು ಸಹ ಕಂಡನು. ಇಂದು ಇದನ್ನು ಸೌರ ಕಲೆಗಳು ಎಂದು ಕರೆಯಲಾಗುತ್ತದೆ. ಈ ಆವಿಷ್ಕಾರವು, ಸೂರ್ಯನು ಯಾವುದೇ ಬದಲಾವಣೆಗೆ ಅಥವಾ ಕ್ಷಯಿಸುವಿಕೆಗೆ ಗುರಿಯಾಗುವುದಿಲ್ಲ ಎಂಬ ಇನ್ನೊಂದು ಪ್ರಮುಖ ತತ್ತ್ವಶಾಸ್ತ್ರೀಯ ಮತ್ತು ಧಾರ್ಮಿಕ ನಂಬಿಕೆಯ ಬಗ್ಗೆ ಸವಾಲೆಸೆಯಿತು.

ಕೊಪರ್ನಿಕಸ್‌ಗೆ ಅಸದೃಶವಾಗಿ ಗೆಲಿಲಿಯೊ ತನ್ನ ವಿಚಾರಗಳನ್ನು ಬಹಳ ಧೈರ್ಯದಿಂದಲೂ ಹುರುಪಿನಿಂದಲೂ ಘೋಷಿಸುವವನಾಗಿದ್ದನು. ಮತ್ತು ಅವನಿದನ್ನು ಹಿಂದಿಗಿಂತ ಹೆಚ್ಚು ವೈರತ್ವತುಂಬಿದ ವಾತಾವರಣದಲ್ಲಿ ಮಾಡಿದನು, ಏಕೆಂದರೆ ಆ ಸಮಯದೊಳಗಾಗಿ ಕ್ಯಾಥೊಲಿಕ್‌ ಚರ್ಚ್‌ ಕೊಪರ್ನಿಕಸ್‌ನ ಸಿದ್ಧಾಂತವನ್ನು ಬಹಿರಂಗವಾಗಿ ವಿರೋಧಿಸಲಾರಂಭಿಸಿತ್ತು. ಆದುದರಿಂದ, ಸೂರ್ಯನೇ ಸೌರವ್ಯೂಹದ ಕೇಂದ್ರ ಎಂಬ ವಿಚಾರವು ಸರಿಯಾಗಿದೆ ಮಾತ್ರವಲ್ಲ ಅದು ಶಾಸ್ತ್ರವಚನಗಳಿಗೆ ಸಹ ಹೊಂದಿಕೆಯಲ್ಲಿದೆ ಎಂದು ಗೆಲಿಲಿಯೊ ವಾದಿಸಿದಾಗ ಇದು ಪಾಷಂಡವಾದ ಎಂದು ಚರ್ಚ್‌ ಭಾವಿಸಿತು. *

ತನ್ನನ್ನು ಸಮರ್ಥಿಸಿಕೊಳ್ಳಲು ಗೆಲಿಲಿಯೊ ರೋಮಿಗೆ ಹೋದನಾದರೂ ಅವನಿಗೆ ಯಶಸ್ಸು ಲಭಿಸಲಿಲ್ಲ. 1616ರಲ್ಲಿ, ಕೊಪರ್ನಿಕಸ್‌ನ ವಾದವನ್ನು ಪ್ರಸರಿಸುವುದನ್ನು ನಿಲ್ಲಿಸುವಂತೆ ಚರ್ಚ್‌ ಅವನಿಗೆ ಆದೇಶನೀಡಿತು. ಮತ್ತು ಸ್ವಲ್ಪ ಸಮಯದ ವರೆಗೆ ಗೆಲಿಲಿಯೊವಿನ ಬಾಯಿಮುಚ್ಚಿಸಲಾಯಿತು. ನಂತರ 1632ರಲ್ಲಿ ಅವನು ಕೊಪರ್ನಿಕಸ್‌ನನ್ನು ಬೆಂಬಲಿಸುತ್ತಾ ಇನ್ನೊಂದು ಪುಸ್ತಕವನ್ನು ಬರೆದನು. ಅದರ ನಂತರದ ವರುಷದಲ್ಲೇ ಪಾಷಂಡಿ ನ್ಯಾಯಾಲಯವು, ಗೆಲಿಲಿಯೊಗೆ ಜೀವಾವಧಿಯ ಸೆರೆಮನೆವಾಸದ ಶಿಕ್ಷೆಯನ್ನು ವಿಧಿಸಿತು. ಹಾಗಿದ್ದರೂ, ಅವನ ವಯಸ್ಸಿಗೆ ಪರಿಗಣನೆಯನ್ನು ತೋರಿಸುತ್ತಾ, ಶಿಕ್ಷೆಯನ್ನು ಸೆರೆಮನೆವಾಸಕ್ಕೆ ಬದಲಾಗಿ ಗೃಹಬಂಧನಕ್ಕೆ ಬದಲಾಯಿಸಲಾಯಿತು.

ಚರ್ಚಿನೊಂದಿಗಿನ ಗೆಲಿಲಿಯೊವಿನ ಘರ್ಷಣೆಯು, ಧರ್ಮದ ಮೇಲೆ ವಿಜ್ಞಾನಕ್ಕೆ ಸಿಕ್ಕಿದ ಜಯ ಮತ್ತು ಇದಕ್ಕಿಂತಲೂ ಹೆಚ್ಚಾಗಿ ಬೈಬಲಿನ ಮೇಲೆ ವಿಜ್ಞಾನಕ್ಕೆ ಸಿಕ್ಕಿದ ಜಯ ಎಂಬುದು ಅನೇಕರ ಅಭಿಪ್ರಾಯ. ಆದರೆ, ಈ ಸರಳೀಕೃತ ಸಮಾಪ್ತಿಯು ಅನೇಕ ವಾಸ್ತವಾಂಶಗಳನ್ನು ಅಲಕ್ಷ್ಯಮಾಡುತ್ತದೆ ಎಂಬುದನ್ನು ನಾವು ಮುಂದಿನ ಲೇಖನದಲ್ಲಿ ನೋಡಲಿದ್ದೇವೆ.

[ಪಾದಟಿಪ್ಪಣಿ]

^ ಪ್ಯಾರ. 7 ತನ್ನ ಚತುರೋಕ್ತಿಯ ಮತ್ತು ವ್ಯಂಗ್ಯಾತ್ಮಕವಾದ ಕಟು ಮಾತುಗಳ ಮೂಲಕ ಗೆಲಿಲಿಯೊ ಪ್ರಭಾವಶಾಲಿ ಜನರನ್ನು ಅನಗತ್ಯವಾಗಿ ತನ್ನ ವಿರೋಧಿಗಳನ್ನಾಗಿ ಮಾಡಿಕೊಂಡನು. ಅಷ್ಟುಮಾತ್ರವಲ್ಲದೆ, ಸೂರ್ಯನೇ ಸೌರವ್ಯೂಹದ ಕೇಂದ್ರ ಎಂಬ ವಿಚಾರವು ಶಾಸ್ತ್ರೀಯವಾಗಿದೆ ಎಂದು ವಾದಿಸುವ ಮೂಲಕ ಧರ್ಮದ ಬಗ್ಗೆ ಮಾತಾಡುವ ಅಧಿಕಾರವು ತನಗಿದೆ ಎಂಬಂತೆ ವರ್ತಿಸಿದ ಕಾರಣ, ಚರ್ಚ್‌ ಅವನ ಮೇಲೆ ಮತ್ತಷ್ಟು ಕಿಡಿಕಾರಿತು.

[ಪುಟ 3ರಲ್ಲಿರುವ ಚಿತ್ರ]

ಕೊಪರ್ನಿಕಸ್‌

[ಕೃಪೆ]

Giordano Bruno and Galilei ಯಿಂದ ತೆಗೆಯಲ್ಪಟ್ಟದ್ದು (ಜರ್ಮನ್‌ ಮುದ್ರಣ)

[ಪುಟ 3ರಲ್ಲಿರುವ ಚಿತ್ರ]

ರೋಮಿನ ಪಾಷಂಡಿ ನ್ಯಾಯಾಲಯದ ವಿಚಾರಣೆಗಾರರ ಮುಂದೆ ಗೆಲಿಲಿಯೊ ತನ್ನನ್ನು ಸಮರ್ಥಿಸಿಕೊಳ್ಳುತ್ತಿರುವುದು

[ಕೃಪೆ]

The Historian’s History of the World, Vol. IX, 1904 ಎಂಬ ಪುಸ್ತಕದಿಂದ ತೆಗೆಯಲ್ಪಟ್ಟದ್ದು

[ಪುಟ 3ರಲ್ಲಿರುವ ಚಿತ್ರ ಕೃಪೆ]

ಹಿನ್ನೆಲೆ: Chart depicting Copernicus’ concept of the solar system