ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಜ್ಞಾನ ಮತ್ತು ಬೈಬಲ್‌ ಅವು ನಿಜವಾಗಿಯೂ ಒಂದಕ್ಕೊಂದು ವಿರುದ್ಧವಾಗಿವೆಯೊ?

ವಿಜ್ಞಾನ ಮತ್ತು ಬೈಬಲ್‌ ಅವು ನಿಜವಾಗಿಯೂ ಒಂದಕ್ಕೊಂದು ವಿರುದ್ಧವಾಗಿವೆಯೊ?

ವಿಜ್ಞಾನ ಮತ್ತು ಬೈಬಲ್‌ ಅವು ನಿಜವಾಗಿಯೂ ಒಂದಕ್ಕೊಂದು ವಿರುದ್ಧವಾಗಿವೆಯೊ?

ಗೆಲಿಲಿಯೊ ಮತ್ತು ಕ್ಯಾಥೊಲಿಕ್‌ ಚರ್ಚಿನ ಮಧ್ಯೆ ಘರ್ಷಣೆಯ ಬೀಜವು, ಕೊಪರ್ನಿಕಸ್‌ ಮತ್ತು ಗೆಲಿಲಿಯೊ ಹುಟ್ಟುವುದಕ್ಕೆ ಅನೇಕ ಶತಮಾನಗಳ ಮುಂಚೆಯೇ ಬಿತ್ತಲ್ಪಟ್ಟಿತ್ತು. ಭೂಮಿಯು ವಿಶ್ವದ ಕೇಂದ್ರ ಎಂಬ ದೃಷ್ಟಿಕೋನವನ್ನು ಪುರಾತನ ಗ್ರೀಕರು ತಮ್ಮದಾಗಿಸಿಕೊಂಡರು ಮತ್ತು ಅದು ತತ್ತ್ವಜ್ಞಾನಿ ಅರಿಸ್ಟಾಟಲ್‌ (ಸಾ.ಶ.ಪೂ. 384-322) ಹಾಗೂ ಖಗೋಳಶಾಸ್ತ್ರಜ್ಞನೂ ಜೋಯಿಸನೂ ಆದ ಟಾಲೆಮಿಯಿಂದ (ಸಾ.ಶ. ಎರಡನೇ ಶತಮಾನ) ಪ್ರಖ್ಯಾತಗೊಳಿಸಲ್ಪಟ್ಟಿತು. *

ವಿಶ್ವದ ಕುರಿತಾದ ಅರಿಸ್ಟಾಟಲ್‌ನ ಕಲ್ಪನೆಯು, ಗ್ರೀಕ್‌ ಗಣಿತಶಾಸ್ತ್ರಜ್ಞನೂ ತತ್ತ್ವಜ್ಞಾನಿಯೂ ಆದ ಪೈಥಾಗರಸ್‌ನ (ಸಾ.ಶ.ಪೂ. ಆರನೇ ಶತಮಾನ) ಆಲೋಚನಾಧಾಟಿಯಿಂದ ಪ್ರಭಾವಿಸಲ್ಪಟ್ಟಿತ್ತು. ವೃತ್ತ ಮತ್ತು ಗೋಳ ಇವೆರಡೂ ಪರಿಪೂರ್ಣ ಆಕಾರಗಳು ಎಂಬ ಪೈಥಾಗರಸ್‌ನ ದೃಷ್ಟಿಕೋನವನ್ನು ತನ್ನದಾಗಿಸಿಕೊಂಡ ಅರಿಸ್ಟಾಟಲ್‌ ನಂಬಿದ್ದೇನೆಂದರೆ; ಆಕಾಶಗಳು ಈರುಳ್ಳಿಯ ಪದರಗಳಂತೆ ಒಂದು ಗೋಳಕೋಶದೊಳಗೆ ಇನ್ನೊಂದು ಗೋಳಕೋಶದಂತಿವೆ. ಪ್ರತಿಯೊಂದು ಪದರವು ಸ್ಫಟಿಕದಿಂದ ಮಾಡಲ್ಪಟ್ಟಿದೆ ಮತ್ತು ಭೂಮಿಯು ಅವುಗಳ ಮಧ್ಯದಲ್ಲಿದೆ. ನಕ್ಷತ್ರಗಳು ವೃತ್ತಾಕಾರವಾಗಿ ಸುತ್ತುತ್ತವೆ ಮತ್ತು ಇವುಗಳಿಗೆ ಚಲಿಸಲು ಬೇಕಾದ ಸಹಾಯವು ದೈವಿಕ ಶಕ್ತಿಯ ಮೂಲವಾದ ಅತ್ಯಂತ ಹೊರಗಿನ ಗೋಳಕೋಶದಿಂದ ಬರುತ್ತದೆ. ಸೂರ್ಯ ಮತ್ತು ಇತರ ಆಕಾಶಸ್ಥ ಕಾಯಗಳು ಪರಿಪೂರ್ಣವಾಗಿವೆ, ಯಾವುದೇ ಕಲೆ ಅಥವಾ ಕಳಂಕದಿಂದ ಮುಕ್ತವಾಗಿವೆ ಹಾಗೂ ಅವು ಯಾವುದೇ ಬದಲಾವಣೆಗೆ ಒಳಗಾಗುವುದಿಲ್ಲ.

ಅರಿಸ್ಟಾಟಲ್‌ನ ಈ ಮಹಾ ಕಲ್ಪನೆಯು ತತ್ತ್ವಜ್ಞಾನದ ಫಲವಾಗಿತ್ತೇ ಹೊರತು ವಿಜ್ಞಾನದ್ದಲ್ಲ. ಭೂಮಿಯು ಚಲಿಸುತ್ತದೆ ಎಂದು ಹೇಳುವುದು ತರ್ಕಬದ್ಧವಲ್ಲ ಎಂದು ಅವನು ನೆನಸಿದನು. ಅಷ್ಟುಮಾತ್ರವಲ್ಲದೆ, ಭೂಮಿಯು ಚಲಿಸುವುದಾದರೆ ಅದು ತನ್ನ ಸುತ್ತಲಿರುವ ವಸ್ತುಗಳೊಂದಿಗೆ ತಿಕ್ಕಾಟಕ್ಕೆ ಒಳಗಾಗುತ್ತಿತ್ತು ಮತ್ತು ಸತತವಾದ ಒತ್ತಡವು ನೀಡಲ್ಪಡದಿದ್ದರೆ ಅದು ನಿಂತು ಹೋಗುತ್ತಿತ್ತು ಎಂದು ಅವನು ನಂಬುತ್ತಿದ್ದ ಕಾರಣ ಭೂಮಿಯ ಸುತ್ತಲೂ ಶೂನ್ಯ ಸ್ಥಳವಿದೆ ಅಥವಾ ಅಂತರಿಕ್ಷವಿದೆ ಎಂಬ ವಿಚಾರವನ್ನು ಅವನು ತ್ಯಜಿಸಿದನು. ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಜ್ಞಾನಕ್ಕೆ ಹೋಲಿಸುವಾಗ ಅರಿಸ್ಟಾಟಲ್‌ನ ವಿಚಾರವು ತರ್ಕಬದ್ಧವಾಗಿ ಕಂಡಿತು. ಆದುದರಿಂದ ಆ ವಿಚಾರವನ್ನು ಸುಮಾರು 2,000 ವರುಷಗಳ ಕಾಲ ಜನಸಾಮಾನ್ಯರು ಒಪ್ಪಿಕೊಂಡಿದ್ದರು. 16ನೇ ಶತಮಾನದಷ್ಟು ಇತ್ತೀಚಿಗೆ ಫ್ರೆಂಚ್‌ ತತ್ತ್ವಜ್ಞಾನಿಯಾದ ಜೀನ್‌ ಬೊಡನ್‌ ಆ ಜನಪ್ರಿಯ ಅಭಿಪ್ರಾಯವನ್ನು ಹೀಗನ್ನುತ್ತಾ ವ್ಯಕ್ತಪಡಿಸಿದರು: “ಬುದ್ಧಿಯಿರುವ ಅಥವಾ ಭೌತಶಾಸ್ತ್ರದ ಕುರಿತು ತುಸು ಜ್ಞಾನವಿರುವ ಯಾವ ವ್ಯಕ್ತಿಯಾದರೂ, ಅತಿಭಾರವಾದ ಮತ್ತು ಬೃಹತ್‌ ಗಾತ್ರದ ಭೂಮಿಯು ತನ್ನ ಸ್ವಂತ ಅಕ್ಷದ ಮೇಲೆ ಗಿರಿಕಿ ಹೊಡೆಯುತ್ತಾ ಸೂರ್ಯನನ್ನು . . . ಪರಿಭ್ರಮಿಸುತ್ತದೆ ಎಂದು ನಂಬಲಾರನು; ಏಕೆಂದರೆ ಭೂಮಿಯು ಸ್ವಲ್ಪ ಅಲುಗಾಡಿದರೆ ನಗರಗಳು, ಕೋಟೆಗಳು, ಪಟ್ಟಣಗಳು ಮತ್ತು ಬೆಟ್ಟಗಳು ಕುಸಿದುಬೀಳುವವು.”

ಅರಿಸ್ಟಾಟಲ್‌ನ ತತ್ತ್ವವನ್ನು ಚರ್ಚ್‌ ತನ್ನದಾಗಿಸಿಕೊಳ್ಳುತ್ತದೆ

ಗೆಲಿಲಿಯೊ ಮತ್ತು ಚರ್ಚಿನ ನಡುವಿನ ಘರ್ಷಣೆಗೆ ನಡೆಸಿದ ಇನ್ನೊಂದು ಸಂಗತಿಯು 13ನೇ ಶತಮಾನದಲ್ಲಿ ಸಂಭವಿಸಿತು ಮತ್ತು ಇದು, ಕ್ಯಾಥೊಲಿಕ್‌ ಅಧಿಕಾರಿಯಾದ ತಾಮಸ್‌ ಅಕಿನಾಸ್‌ನನ್ನು (1225-74) ಒಳಗೂಡಿತ್ತು. ಅಕಿನಾಸ್‌ ಅರಿಸ್ಟಾಟಲ್‌ನನ್ನು ಬಹಳ ಗೌರವಿಸುತ್ತಿದ್ದನು. ಅವನು ಅರಿಸ್ಟಾಟಲ್‌ನನ್ನು ‘ಮಹಾನ್‌ ತತ್ತ್ವಜ್ಞಾನಿ’ ಎಂದು ಸೂಚಿಸಿ ಮಾತಾಡುತ್ತಿದ್ದನು. ಅರಿಸ್ಟಾಟಲ್‌ನ ತತ್ತ್ವವನ್ನು ಚರ್ಚಿನ ಬೋಧನೆಯೊಂದಿಗೆ ಒಂದುಗೂಡಿಸಲು ಅಕಿನಾಸ್‌ ಸುಮಾರು ಐದು ವರುಷಗಳ ಕಾಲ ಸತತ ಪ್ರಯತ್ನವನ್ನು ಮಾಡಿದನು. ಗೆಲಿಲಿಯೊವಿನ ತಪ್ಪು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ವಾಡ್‌ ರೋಲಂಡ್‌ ಹೇಳುವುದೇನೆಂದರೆ ಗೆಲಿಲಿಯೊವಿನ ಸಮಯದೊಳಗಾಗಿ “ಅಕಿನಾಸ್‌ನ ದೇವತಾಶಾಸ್ತ್ರದಲ್ಲಿ ಕಲಬೆರಕೆಯಾಗಿದ್ದ ಅರಿಸ್ಟಾಟಲ್‌ನ ತತ್ತ್ವಜ್ಞಾನವು ರೋಮಿನ ಚರ್ಚಿನ ಮೂಲಾಧಾರ ಬೋಧನೆಯಾಗಿತ್ತು.” ನೆನಪಿನಲ್ಲಿಡಿರಿ, ಆ ದಿವಸಗಳಲ್ಲಿ ವೈಜ್ಞಾನಿಕ ಸಮುದಾಯ ಎಂಬುದೇನೂ ಇರಲಿಲ್ಲ. ಶಿಕ್ಷಣವು ಮುಖ್ಯವಾಗಿ ಚರ್ಚಿನ ಕೈಯಲ್ಲಿತ್ತು. ಧರ್ಮ ಮತ್ತು ವಿಜ್ಞಾನ, ಇವೆರಡೂ ಸಾಮಾನ್ಯವಾಗಿ ಚರ್ಚಿನ ಅಧಿಕಾರದ ಕೆಳಗಿದ್ದವು.

ಈ ಎಲ್ಲಾ ವಿಚಾರಗಳು ಚರ್ಚ್‌ ಮತ್ತು ಗೆಲಿಲಿಯೊವಿನ ನಡುವಣ ಘರ್ಷಣೆಗೆ ನಡೆಸಿದ ಹಿನ್ನೆಲೆಗಳಾಗಿವೆ. ಖಗೋಳಶಾಸ್ತ್ರದಲ್ಲಿ ಒಳಗೂಡುವ ಮುನ್ನವೇ ಗೆಲಿಲಿಯೊ ಚಲನೆಯ ಕುರಿತಾಗಿ ಒಂದು ಪ್ರಕರಣ ಗ್ರಂಥವನ್ನು ಬರೆದಿದ್ದನು. ಆ ಗ್ರಂಥವು, ಅರಿಸ್ಟಾಟಲ್‌ನನ್ನು ಬಹಳವಾಗಿ ಗೌರವಿಸುವ ಜನರಿಂದ ಮಾಡಲ್ಪಟ್ಟ ಅನೇಕ ಹೇಳಿಕೆಗಳಿಗೆ ಸವಾಲೊಡ್ಡಿತ್ತು. ಆದರೆ, ಸೂರ್ಯನೇ ವಿಶ್ವದ ಕೇಂದ್ರ ಎಂಬ ವಿಚಾರವನ್ನು ಗೆಲಿಲಿಯೊ ಸತತವಾಗಿ ಪ್ರಕಟಪಡಿಸಿದ್ದರಿಂದ ಮತ್ತು ಈ ವಿಚಾರವು ಶಾಸ್ತ್ರಗಳೊಂದಿಗೆ ಹೊಂದಿಕೆಯಲ್ಲಿದೆ ಎಂದು ತಿಳಿಸಿದ್ದರಿಂದ ಅವನು 1633ರಲ್ಲಿ ಪಾಷಂಡಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟನು.

ಗೆಲಿಲಿಯೊ ತನ್ನ ಸಮರ್ಥನೆಯಲ್ಲಿ, ಬೈಬಲ್‌ ದೇವರ ಪ್ರೇರಿತ ವಾಕ್ಯವೆಂದು ತನಗಿರುವ ನಂಬಿಕೆಯನ್ನು ದೃಢೀಕರಿಸಿದನು. ಅಷ್ಟುಮಾತ್ರವಲ್ಲದೆ, ಶಾಸ್ತ್ರವಚನಗಳು ಸಾಧಾರಣ ಮನುಷ್ಯರಿಗಾಗಿ ಬರೆಯಲ್ಪಟ್ಟಿವೆ ಮತ್ತು ಸೂರ್ಯನ ಚಲನೆಯ ಕುರಿತು ಬೈಬಲ್‌ ತಿಳಿಸುವ ವಿಷಯವನ್ನು ಅಕ್ಷರಶಃವಾಗಿ ತೆಗೆದುಕೊಳ್ಳಬಾರದು ಎಂದು ಅವನು ತರ್ಕಿಸಿದನು. ಅವನು ಮಂಡಿಸಿದ ವಾದಗಳು ವ್ಯರ್ಥವಾಗಿ ಹೋದವು. ಗ್ರೀಕ್‌ ತತ್ತ್ವಜ್ಞಾನದ ಆಧಾರದ ಮೇಲೆ ಕೊಡಲ್ಪಟ್ಟ ಅರ್ಥವಿವರಣೆಯೊಂದನ್ನು ಅವನು ನಿರಾಕರಿಸಿದರಿಂದ ಅವನಿಗೆ ದಂಡನೆ ವಿಧಿಸಲಾಯಿತು! ಕ್ಯಾಥೊಲಿಕ್‌ ಚರ್ಚ್‌ ತಾನು ಗೆಲಿಲಿಯೊವಿಗೆ ವಿಧಿಸಿದ ತೀರ್ಪು ತಪ್ಪಾಗಿತ್ತು ಎಂಬುದನ್ನು 1992ರ ತನಕ ಅಧಿಕೃತವಾಗಿ ಒಪ್ಪಲಿಲ್ಲ.

ನಾವು ಕಲಿಯಬಲ್ಲ ಪಾಠಗಳು

ಈ ಘಟನೆಗಳಿಂದ ನಾವೇನನ್ನು ಕಲಿಯಬಲ್ಲೆವು? ಒಂದು ವಿಷಯವೇನೆಂದರೆ, ಗೆಲಿಲಿಯೊವಿಗೆ ಬೈಬಲಿನ ವಿಷಯದಲ್ಲಿ ಯಾವುದೇ ಸಂದೇಹವಿರಲಿಲ್ಲ. ಬದಲಾಗಿ, ಚರ್ಚಿನ ಬೋಧನೆಗಳ ವಿಷಯವಾಗಿ ಅವನು ಪ್ರಶ್ನೆ ಎಬ್ಬಿಸಿದನು. ಒಬ್ಬ ಧಾರ್ಮಿಕ ಬರಹಗಾರರು ಹೇಳಿದ್ದು: “ಗೆಲಿಲಿಯೊವಿನಿಂದ ನಾವು ಕಲಿಯಬಹುದಾದ ವಿಷಯವು, ಬೈಬಲಿನ ಸತ್ಯಗಳಿಗೆ ಚರ್ಚ್‌ ತೀರ ನಿಕಟವಾಗಿ ಅಂಟಿಕೊಂಡಿದೆ ಎಂಬುದನ್ನಲ್ಲ ಬದಲಾಗಿ ಅದು ಸಾಕಷ್ಟು ನಿಕಟವಾಗಿ ಅಂಟಿಕೊಂಡಿಲ್ಲ ಎಂದು ತೋರುತ್ತದೆ ಎಂಬುದನ್ನೇ.” ಗ್ರೀಕ್‌ ತತ್ತ್ವಜ್ಞಾನವು ತನ್ನ ದೇವತಾಶಾಸ್ತ್ರವನ್ನು ಪ್ರಭಾವಿಸುವಂತೆ ಅನುಮತಿಸುವ ಮೂಲಕ ಚರ್ಚ್‌ ಬೈಬಲಿನ ಬೋಧನೆಗಳನ್ನು ಅನುಸರಿಸುವುದಕ್ಕೆ ಬದಲಾಗಿ ಸಂಪ್ರದಾಯಗಳಿಗೆ ತಲೆಬಾಗಿದೆ.

ಈ ಎಲ್ಲಾ ವಿಚಾರಗಳು ಬೈಬಲಿನ ಈ ಎಚ್ಚರಿಕೆಯ ಮಾತನ್ನು ನಮ್ಮ ನೆನಪಿಗೆ ತರುತ್ತವೆ: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.”​—⁠ಕೊಲೊಸ್ಸೆ 2:⁠8.

ಇಂದು ಸಹ ಕ್ರೈಸ್ತಪ್ರಪಂಚದಲ್ಲಿರುವ ಅನೇಕರು, ಬೈಬಲಿಗೆ ವಿರುದ್ಧವಾಗಿರುವ ಅನೇಕ ವಿಚಾರಗಳನ್ನು ಮತ್ತು ತತ್ತ್ವಜ್ಞಾನಗಳನ್ನು ಸ್ವೀಕರಿಸುತ್ತಾರೆ. ಇದಕ್ಕೆ ಒಂದು ಉದಾಹರಣೆಯು, ಡಾರ್ವಿನ್‌ನ ವಿಕಾಸವಾದವೇ ಆಗಿದೆ. ಬೈಬಲಿನ ಆದಿಕಾಂಡ ಪುಸ್ತಕದಲ್ಲಿರುವ ಸೃಷ್ಟಿಯ ವೃತ್ತಾಂತಕ್ಕೆ ಬದಲಾಗಿ ಅವರು ಇದನ್ನು ಸ್ವೀಕರಿಸುತ್ತಾರೆ. ಸೃಷ್ಟಿಗೆ ಬದಲಾಗಿ ವಿಕಾಸವಾದವನ್ನು ನಂಬುವ ಮೂಲಕ ವಾಸ್ತವದಲ್ಲಿ ಚರ್ಚ್‌ಗಳು, ಡಾರ್ವಿನ್‌ನನ್ನು ಆಧುನಿಕ ದಿನದ ಅರಿಸ್ಟಾಟಲ್‌ನನ್ನಾಗಿ ಮತ್ತು ವಿಕಾಸವಾದವನ್ನು ಮೂಲಭೂತ ಧಾರ್ಮಿಕ ನಂಬಿಕೆಯನ್ನಾಗಿ ಮಾಡಿವೆ. *

ನಿಜ ವಿಜ್ಞಾನವು ಬೈಬಲಿನೊಂದಿಗೆ ಹೊಂದಿಕೆಯಲ್ಲಿದೆ

ಈಗಾಗಲೇ ನಾವು ಚರ್ಚಿಸಿದ ವಿಚಾರಗಳು ವಿಜ್ಞಾನದಲ್ಲಿನ ಆಸಕ್ತಿಯನ್ನು ನಿರುತ್ತೇಜಿಸಬಾರದು. ದೇವರ ಸೃಷ್ಟಿಕಾರ್ಯಗಳ ಕುರಿತು ಕಲಿಯುವಂತೆ ಮತ್ತು ನಾವೇನನ್ನು ನೋಡಬಲ್ಲೆವೊ ಅದರ ಮೂಲಕ ದೇವರ ಅದ್ಭುತಕರ ಗುಣಗಳನ್ನು ತಿಳಿದುಕೊಳ್ಳುವಂತೆ ಬೈಬಲ್‌ ಸ್ವತಃ ನಮ್ಮನ್ನು ಉತ್ತೇಜಿಸುತ್ತದೆ. (ಯೆಶಾಯ 40:26; ರೋಮಾಪುರ 1:20) ಬೈಬಲು ವಿಜ್ಞಾನವನ್ನು ಕಲಿಸುವುದಿಲ್ಲ ಎಂಬುದು ನಿಜ. ಅದು ದೇವರ ಮಟ್ಟಗಳ ಕುರಿತು ತಿಳಿಯಪಡಿಸುತ್ತದೆ. ಸೃಷ್ಟಿಯಿಂದ ಮಾತ್ರ ತಿಳಿಯಸಾಧ್ಯವಿರದ ಆತನ ವ್ಯಕ್ತಿತ್ವದ ಅಂಶಗಳ ಕುರಿತು ಮತ್ತು ಮಾನವರಿಗಾಗಿರುವ ಆತನ ಉದ್ದೇಶದ ಕುರಿತು ಅದು ನಮಗೆ ಕಲಿಸುತ್ತದೆ. (ಕೀರ್ತನೆ 19:7-11; 2 ತಿಮೊಥೆಯ 3:16) ಹಾಗಿದ್ದರೂ, ಬೈಬಲ್‌ ನೈಸರ್ಗಿಕ ವಿಷಯಗಳ ಕುರಿತು ತಿಳಿಸುವಾಗ ಅದು ನಿಷ್ಕೃಷ್ಟವಾಗಿದೆ. ಗೆಲಿಲಿಯೊ ಸ್ವತಃ ಹೀಗೆ ಹೇಳಿದನು: “ಪವಿತ್ರ ಶಾಸ್ತ್ರಗಳು ಮತ್ತು ನಿಸರ್ಗ ಇವೆರಡೂ ದೈವಿಕ ಮೂಲದಿಂದ ಉಂಟಾದವು . . . ಎರಡು ಸತ್ಯಗಳು ಒಂದಕ್ಕೊಂದು ಎಂದೂ ತದ್ವಿರುದ್ಧವಾಗಿರಲು ಸಾಧ್ಯವಿಲ್ಲ.” ಈ ಮುಂದಿನ ಉದಾಹರಣೆಗಳನ್ನು ಪರಿಗಣಿಸಿರಿ.

ನಕ್ಷತ್ರ ಮತ್ತು ಗ್ರಹಗಳ ಚಲನೆಗಿಂತಲೂ ಹೆಚ್ಚು ಪ್ರಾಮುಖ್ಯವಾದ ವಿಷಯವು ಯಾವುದೆಂದರೆ, ವಿಶ್ವದಲ್ಲಿರುವ ಎಲ್ಲಾ ಭೌತದ್ರವ್ಯಗಳು ಗುರುತ್ವಾಕರ್ಷಣೆಯಂಥ ನಿಯಮಗಳಿಂದ ನಿಯಂತ್ರಿಸಲ್ಪಟ್ಟಿದೆ ಎಂಬುದೇ. ಬೈಬಲ್‌ ಹೊರತುಪಡಿಸಿ, ಭೌತನಿಯಮಗಳಿಗೆ ಸೂಚಿಸಿದ ಆರಂಭದ ವ್ಯಕ್ತಿ ಪೈಥಾಗರಸ್‌ ಆಗಿದ್ದನು. ವಿಶ್ವವನ್ನು ಗಣಿತದ ಮೂಲಕ ವಿವರಿಸಸಾಧ್ಯವಿದೆ ಎಂದು ಅವನು ನಂಬಿದ್ದನು. ಕೊನೆಗೂ ಎರಡು ಸಾವಿರ ವರುಷಗಳ ನಂತರ, ಭೌತದ್ರವ್ಯಗಳು ತರ್ಕಸಮ್ಮತ ನಿಯಮಗಳಿಂದ ನಿಯಂತ್ರಿಸಲ್ಪಡುತ್ತಿವೆ ಎಂಬುದನ್ನು ಗೆಲಿಲಿಯೊ, ಕೆಪ್ಲರ್‌ ಮತ್ತು ನ್ಯೂಟನ್‌ ರುಜುಪಡಿಸಿದರು.

ಬೈಬಲಿನಲ್ಲಿ ನೈಸರ್ಗಿಕ ನಿಯಮದ ಕುರಿತಾದ ಆರಂಭದ ಉಲ್ಲೇಖವು ಯೋಬ ಪುಸ್ತಕದಲ್ಲಿ ಕಂಡುಬರುತ್ತದೆ. ಸಾ.ಶ.ಪೂ. 1600ರ ಸುಮಾರಿಗೆ ದೇವರು ಯೋಬನನ್ನು ಹೀಗೆ ಕೇಳಿದನು: “ಖಗೋಲದ ಕಟ್ಟಳೆಗಳನ್ನು [ಅಥವಾ, ನಿಯಮಗಳನ್ನು] ತಿಳಿದುಕೊಂಡಿದ್ದೀಯೋ”? (ಯೋಬ 38:33) ಸಾ.ಶ.ಪೂ. ಏಳನೇ ಶತಮಾನದಲ್ಲಿ ದಾಖಲಿಸಲ್ಪಟ್ಟಿರುವ ಯೆರೆಮೀಯನ ಪುಸ್ತಕವು ಯೆಹೋವನನ್ನು “ಚಂದ್ರನಕ್ಷತ್ರಗಳ ಕಟ್ಟಳೆಗಳನ್ನು” ಮತ್ತು “ಭೂಮ್ಯಾಕಾಶಗಳ ಕಟ್ಟಳೆಗಳನ್ನು” ಸೃಷ್ಟಿಸಿದಾತ ಎಂದು ಸೂಚಿಸುತ್ತದೆ. (ಯೆರೆಮೀಯ 31:35; 33:25) ಈ ಹೇಳಿಕೆಗಳನ್ನು ಗಮನದಲ್ಲಿಟ್ಟು ಬೈಬಲ್‌ ವ್ಯಾಖ್ಯಾನಕಾರರಾದ ಜಿ. ರೊಲನ್‌ಸನ್‌ ಹೇಳುವುದು: “ಸಾಮಾನ್ಯವಾಗಿ ಭೌತಿಕ ಜಗತ್ತಿನಲ್ಲಿ ನಿಯಮಗಳು ಚಾಲ್ತಿಯಲ್ಲಿರುವುದನ್ನು ಆಧುನಿಕ ವಿಜ್ಞಾನದಷ್ಟೇ ಬಲವಾಗಿ ಬೈಬಲ್‌ ಬರಹಗಾರರು ದೃಢೀಕರಿಸಿದ್ದಾರೆ.”

ಉದಾಹರಣೆಗೆ ಪೈಥಾಗರಸ್‌ನ ಕುರಿತು ನಾವು ನೋಡುವುದಾದರೆ, ಅವನು ಭೌತನಿಯಮಗಳ ಕುರಿತು ಬರೆಯುವ ಸುಮಾರು ಒಂದು ಸಾವಿರ ವರುಷಗಳ ಮುನ್ನವೇ ಯೋಬ ಪುಸ್ತಕದಲ್ಲಿನ ಆ ಹೇಳಿಕೆಯು ಮಾಡಲ್ಪಟ್ಟಿತ್ತು. ನೆನಪಿನಲ್ಲಿಡಿರಿ, ಭೌತಿಕ ವಾಸ್ತವಾಂಶಗಳ ಕುರಿತು ಜನರಿಗೆ ತಿಳಿಯಪಡಿಸುವುದು ಬೈಬಲಿನ ಮೂಲ ಉದ್ದೇಶವಾಗಿಲ್ಲ ಬದಲಾಗಿ ಅದರ ಪ್ರಾಮುಖ್ಯ ಉದ್ದೇಶವು ಯೆಹೋವನೇ ಎಲ್ಲಾ ವಿಷಯಗಳ ಸೃಷ್ಟಿಕರ್ತನು​—⁠ಭೌತಿಕ ನಿಯಮಗಳನ್ನು ಸೃಷ್ಟಿಸಬಲ್ಲಾತನು​—⁠ಎಂಬುದನ್ನು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಸುವುದೇ ಆಗಿದೆ.​—⁠ಯೋಬ 38:​4, 12; 42:​1, 2.

ನಾವು ಪರಿಗಣಿಸಬಲ್ಲ ಇನ್ನೊಂದು ಉದಾಹರಣೆಯು ಜಲಚಕ್ರ ಎಂದು ಕರೆಯಲ್ಪಡುವ ಭೂಮಿಯ ಮೇಲಿರುವ ನೀರಿನ ಚಕ್ರೀಯ ಚಲನೆಯೇ ಆಗಿದೆ. ಸರಳವಾಗಿ ಹೇಳುವುದಾದರೆ, ಸಮುದ್ರದಲ್ಲಿರುವ ನೀರು ಬಾಷ್ಪವಾಗಿ ಹೋಗಿ ಮೋಡಗಳಾಗುತ್ತದೆ. ನಂತರ ಮಳೆಯಾಗಿ ಪುನಃ ಭೂಮಿಗೆ ಬಿದ್ದು, ಕ್ರಮೇಣ ಸಮುದ್ರಕ್ಕೆ ಹಿಂದಿರುಗುತ್ತದೆ. ಈ ಜಲಚಕ್ರದ ಕುರಿತಾಗಿ ತಿಳಿಸುವಂಥ ಇಂದಿಗೂ ಇರುವ ಅತಿ ಹಳೆಯ ಬೈಬಲೇತರ ಉಲ್ಲೇಖಗಳು, ಸಾ.ಶ.ಪೂ. ನಾಲ್ಕನೇ ಶತಮಾನದಷ್ಟು ಹಿಂದಿನದ್ದಾಗಿವೆ. ಹಾಗಿದ್ದರೂ, ಇದಕ್ಕಿಂತಲೂ ನೂರಾರು ವರುಷಗಳ ಹಿಂದೆಯೇ ಮಾಡಲ್ಪಟ್ಟ ಹೇಳಿಕೆಗಳು ಬೈಬಲಿನಲ್ಲಿವೆ. ಉದಾಹರಣೆಗೆ, ಸಾ.ಶ.ಪೂ. 11ನೇ ಶತಮಾನದಲ್ಲಿ ಇಸ್ರಾಯೇಲಿನ ರಾಜ ಸೊಲೊಮೋನನು ಬರೆದದ್ದು: “ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ, ಆದರೂ ಸಮುದ್ರವು ತುಂಬುವುದಿಲ್ಲ. ನದಿಗಳು ಎಲ್ಲಿಂದ ಬಂದಿವೆಯೋ ಆ ಸ್ಥಳಕ್ಕೆ ಅವು ಹಿಂತಿರುಗುತ್ತವೆ.”​—⁠ಪ್ರಸಂಗಿ 1:⁠7, NIBV.

ಅಂತೆಯೇ, ಯೆಹೋವನು “ಸಾಗರದ ಜಲವನ್ನು ಬರಮಾಡಿಕೊಂಡು ಭೂಮಂಡಲದ ಮೇಲೆ ಸುರಿಯುವಾತ” ಎಂದು ದೀನ ಕುರುಬನೂ ವ್ಯವಸಾಯಗಾರನೂ ಆದ ಪ್ರವಾದಿ ಆಮೋಸನು ಸಾ.ಶ.ಪೂ. 800ರ ಸುಮಾರಿಗೆ ಬರೆದನು. (ಆಮೋಸ 5:⁠8) ಜಟಿಲವಾದ, ತಾಂತ್ರಿಕ ಪದಗಳನ್ನು ಉಪಯೋಗಿಸದೆ ಸೊಲೊಮೋನ ಮತ್ತು ಆಮೋಸ, ಇವರಿಬ್ಬರೂ ಕೊಂಚ ಭಿನ್ನ ರೀತಿಯಲ್ಲಿ ಜಲಚಕ್ರದ ಕುರಿತು ನಿಷ್ಕೃಷ್ಟವಾಗಿ ವರ್ಣಿಸಿದರು.

ದೇವರು “ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ” ಎಂಬುದಾಗಿಯೂ ಬೈಬಲ್‌ ತಿಳಿಸುತ್ತದೆ ಅಥವಾ ದಿ ನ್ಯೂ ಇಂಗ್ಲಿಷ್‌ ಬೈಬಲ್‌ಗನುಸಾರ ಆತನು “ಶೂನ್ಯದಲ್ಲಿ ಭೂಮಿಯನ್ನು ತೂಗಹಾಕಿದ್ದಾನೆ.” (ಯೋಬ 26:⁠7) ಈ ಮಾತುಗಳು ಹೆಚ್ಚುಕಡಿಮೆ ಸಾ.ಶ.ಪೂ. 1600ರಲ್ಲಿ ನುಡಿಯಲ್ಪಟ್ಟಿತು. ಆ ಸಮಯದಲ್ಲಿ ಲಭ್ಯವಿದ್ದ ಜ್ಞಾನವನ್ನು ಗಮನದಲ್ಲಿಡುವಾಗ ಈ ಮಾತುಗಳನ್ನು, ಅಂದರೆ ಒಂದು ಭಾರವಾದ ವಸ್ತು ಯಾವುದೇ ಆಧಾರವಿಲ್ಲದೆ ಅಂತರಿಕ್ಷದಲ್ಲಿ ತೂಗಿಕೊಂಡಿರಸಾಧ್ಯವಿದೆ ಎಂಬುದನ್ನು ಹೇಳಲು ಆ ವ್ಯಕ್ತಿಯು ನಿಜವಾಗಿಯೂ ಗಮನಾರ್ಹನಾಗಿರಬೇಕು. ಏಕೆಂದರೆ ಈಗಾಗಲೇ ತಿಳಿಸಲಾಗಿರುವಂತೆ, ಯೋಬನ ಬಳಿಕ ಸುಮಾರು 1,200 ವರ್ಷಗಳಾನಂತರ ಜೀವಿಸಿದ ಅರಿಸ್ಟಾಟಲನೇ ಭೂಮಿಯು ಶೂನ್ಯದಲ್ಲಿ ತೂಗುಹಾಕಲ್ಪಟ್ಟಿದೆ ಎಂಬ ವಿಚಾರವನ್ನು ತಳ್ಳಿಹಾಕಿದ್ದನು!

ಆ ಸಮಯದಲ್ಲಿದ್ದ ತಪ್ಪಾದ, ಆದರೂ ತರ್ಕಬದ್ಧವಾಗಿ ತೋರುತ್ತಿದ್ದ ವಿಚಾರಗಳ ಎದುರಿನಲ್ಲೂ, ಬೈಬಲ್‌ ಇಷ್ಟೊಂದು ನಿಷ್ಕೃಷ್ಟ ಹೇಳಿಕೆಗಳನ್ನು ಮಾಡಿರುವುದು ನಿಮ್ಮನ್ನು ವಿಸ್ಮಯಗೊಳಿಸುವುದಿಲ್ಲವೇ? ಚಿಂತಕರಿಗೆ, ಬೈಬಲ್‌ ದೇವರ ಪ್ರೇರಣೆಯಿಂದ ಬರೆಯಲ್ಪಟ್ಟದ್ದು ಎಂಬುದಕ್ಕೆ ಇದು ಇನ್ನೊಂದು ಪುರಾವೆಯಾಗಿದೆ. ಆದುದರಿಂದ, ದೇವರ ವಾಕ್ಯಕ್ಕೆ ವಿರುದ್ಧವಾಗಿರುವ ಯಾವುದೇ ಬೋಧನೆ ಅಥವಾ ತತ್ತ್ವದಿಂದ ನಾವು ಸುಲಭವಾಗಿ ಪ್ರಭಾವಿತರಾಗದಿರುವುದು ವಿವೇಕಯುತವಾಗಿದೆ. ಇತಿಹಾಸವು ಪುನಃ ಪುನಃ ತೋರಿಸಿಕೊಟ್ಟಿರುವಂತೆ, ಮಾನವ ತತ್ತ್ವಗಳು ಅತಿ ಜ್ಞಾನವಂತ ವ್ಯಕ್ತಿಗಳದ್ದೇ ಆಗಿದ್ದರೂ, ಒಂದು ನಿರ್ದಿಷ್ಟ ಸಮಯಕ್ಕೆ ಜನಪ್ರಿಯವಾಗಿ ನಂತರ ಇಲ್ಲದೆ ಹೋಗುತ್ತವೆ ಆದರೆ “[ಯೆಹೋವನ] ಮಾತೋ ಸದಾಕಾಲವೂ ಇರು”ತ್ತದೆ.​—⁠1 ಪೇತ್ರ 1:25.

[ಪಾದಟಿಪ್ಪಣಿಗಳು]

^ ಪ್ಯಾರ. 2 ಸಾ.ಶ.ಪೂ. ಮೂರನೇ ಶತಮಾನದಲ್ಲಿ, ಸಾಮೊಸ್‌ನ ಅರಿಸ್ಟಾರ್ಕಸ್‌ ಎಂಬ ಒಬ್ಬ ಗ್ರೀಕನು ಸೂರ್ಯನೇ ವಿಶ್ವದ ಕೇಂದ್ರ ಎಂಬ ತತ್ತ್ವವನ್ನು ಮುಂದಿಟ್ಟನು. ಆದರೆ ಜನರು ಅವನ ಈ ವಿಚಾರವನ್ನು ತಳ್ಳಿಹಾಕಿ, ಅರಿಸ್ಟಾಟಲ್‌ನ ವಿಚಾರವನ್ನೇ ಆರಿಸಿಕೊಂಡರು.

^ ಪ್ಯಾರ. 12 ಈ ವಿಷಯದ ಆಳವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಜೀವ​—⁠ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್‌) ಎಂಬ ಪುಸ್ತಕದ “ಅನೇಕರು ವಿಕಾಸವಾದವನ್ನು ಏಕೆ ಸ್ವೀಕರಿಸುತ್ತಾರೆ?” ಎಂಬ 15ನೇ ಅಧ್ಯಾಯವನ್ನು ನೋಡಿರಿ.

[ಪುಟ 6ರಲ್ಲಿರುವ ಚೌಕ/ಚಿತ್ರಗಳು]

ಪ್ರಾಟೆಸ್ಟೆಂಟರ ಮನೋಭಾವ

ಸೂರ್ಯನೇ ವಿಶ್ವದ ಕೇಂದ್ರ ಎಂಬ ವಿಚಾರವನ್ನು ಪ್ರಾಟೆಸ್ಟೆಂಟ್‌ ಮತಸುಧಾರಣೆಯ ಮುಖಂಡರು ಸಹ ವಿರೋಧಿಸಿದರು. ಇವರಲ್ಲಿ ಕೆಲವರು ಮಾರ್ಟಿನ್‌ ಲೂಥರ್‌ (1483-1546), ಫೀಲಿಪ್‌ ಮೆಲಾಂಕ್‌ಥಾನ್‌ (1497-1560) ಮತ್ತು ಜಾನ್‌ ಕ್ಯಾಲ್ವಿನ್‌ (1509-64) ಆಗಿದ್ದರು. ಕೊಪರ್ನಿಕಸ್‌ನ ಕುರಿತು ಲೂಥರ್‌ ತಿಳಿಸಿದ್ದು: “ಈ ಮೂರ್ಖನು, ಖಗೋಳಶಾಸ್ತ್ರದ ಸಂಪೂರ್ಣ ವಿಜ್ಞಾನವನ್ನೇ ತಲೆಕೆಳಗೆ ಮಾಡಲು ಬಯಸುತ್ತಾನೆ.”

ಈ ಮತಸುಧಾರಕರು ತಮ್ಮ ತರ್ಕವನ್ನು, ಯೆಹೋಶುವ 10ನೇ ಅಧ್ಯಾಯದಲ್ಲಿರುವ ವೃತ್ತಾಂತದಂಥ ಕೆಲವು ಶಾಸ್ತ್ರವಚನಗಳ ಅಕ್ಷರಾರ್ಥದ ಮೇಲೆ ಆಧಾರಿಸಿದರು. ಅಲ್ಲಿ ಸೂರ್ಯ ಮತ್ತು ಚಂದ್ರನು ಅಲುಗಾಡದೇ “ಹಾಗೆಯೇ ನಿಂತರು” ಎಂಬುದಾಗಿ ತಿಳಿಸುತ್ತದೆ. * ಆ ಮತಸುಧಾರಕರು ಈ ನಿಲುವನ್ನು ಏಕೆ ತೆಗೆದುಕೊಂಡರು? ಪ್ರಾಟೆಸ್ಟೆಂಟ್‌ ಮತಸುಧಾರಣೆಯು ರೋಮನ್‌ ಕ್ಯಾಥೊಲಿಕ್‌ ಚರ್ಚಿನೊಂದಿಗಿನ ತನ್ನ ಸಂಬಂಧವನ್ನು ಕಡಿದುಹಾಕಿದರೂ, ಯಾರ ದೃಷ್ಟಿಕೋನವನ್ನು “ಕ್ಯಾಥೊಲಿಕ್‌ ಮತ್ತು ಪ್ರಾಟೆಸ್ಟೆಂಟ್‌ ಧರ್ಮಗಳ ಜನರು ಸಮಾನವಾಗಿ ಸ್ವೀಕರಿಸುತ್ತಿದ್ದರೋ” ಆ ಅರಿಸ್ಟಾಟಲ್‌ ಮತ್ತು ತಾಮಸ್‌ ಅಕಿನಾಸ್‌ನ “ಮೂಲಭೂತ ಅಧಿಕಾರದಿಂದ ತನ್ನನ್ನು ಸ್ವತಂತ್ರಗೊಳಿಸಿಕೊಳ್ಳಲು” ಅದು ತಪ್ಪಿಹೋಯಿತು ಎಂದು ಗೆಲಿಲಿಯೊವಿನ ತಪ್ಪು (ಇಂಗ್ಲಿಷ್‌) ಎಂಬ ಪುಸ್ತಕವು ವಿವರಿಸುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 28 ವೈಜ್ಞಾನಿಕವಾಗಿ ತಿಳಿಸುವುದಾದರೆ, “ಸೂರ್ಯೋದಯ” ಮತ್ತು “ಸೂರ್ಯಾಸ್ತಮಾನ” ಎಂಬುದಾಗಿ ಹೇಳುವುದು ತಪ್ಪಾದ ಪದಪ್ರಯೋಗವಾಗಿದೆ. ಆದರೆ ದಿನನಿತ್ಯದ ಮಾತುಕತೆಯಲ್ಲಿ, ಭೂಕ್ಷೇತ್ರದಿಂದ ನಾವು ನೋಡುವಾಗ ಹೀಗೆ ತೋರುವುದರಿಂದ ಈ ಪದಗಳು ಸ್ವೀಕಾರಾರ್ಹವಾಗಿವೆ ಮತ್ತು ನಿಷ್ಕೃಷ್ಟವಾಗಿವೆ. ಅಂತೆಯೇ, ಯೆಹೋಶುವನು ಸಹ ಖಗೋಳಶಾಸ್ತ್ರದ ಕುರಿತು ತಿಳಿಸುತ್ತಿರಲಿಲ್ಲ; ಅವನು ಕೇವಲ ತಾನೇನನ್ನು ಕಂಡನೋ ಅದನ್ನು ವರದಿಸಿದನು.

[ಚಿತ್ರಗಳು]

ಲೂಥರ್‌

ಕ್ಯಾಲ್ವಿನ್‌

[ಕೃಪೆ]

Servetus and Calvin, 1877 ಎಂಬ ಪುಸ್ತಕದಿಂದ ತೆಗೆಯಲ್ಪಟ್ಟದ್ದು

[ಪುಟ 4ರಲ್ಲಿರುವ ಚಿತ್ರ]

ಅರಿಸ್ಟಾಟಲ್‌

[ಕೃಪೆ]

A General History for Colleges and High Schools, 1900 ಎಂಬ ಪುಸ್ತಕದಿಂದ ತೆಗೆಯಲ್ಪಟ್ಟದ್ದು

[ಪುಟ 5ರಲ್ಲಿರುವ ಚಿತ್ರ]

ತಾಮಸ್‌ ಅಕಿನಾಸ್‌

[ಕೃಪೆ]

From the book Encyclopedia of Religious Knowledge, 1855

[ಪುಟ 6ರಲ್ಲಿರುವ ಚಿತ್ರ]

ಐಸಕ್‌ ನ್ಯೂಟನ್‌

[ಪುಟ 7ರಲ್ಲಿರುವ ಚಿತ್ರ]

ಭೂಮಿಯ ಜಲಚಕ್ರದ ಕುರಿತು ಬೈಬಲ್‌ ಸುಮಾರು 3,000 ವರುಷಗಳ ಹಿಂದೆಯೇ ವರ್ಣಿಸಿತ್ತು